ಬೆಳಕಿನ ಬೆಳಗುಗಳು—ದೊಡ್ಡವೂ ಚಿಕ್ಕವೂ—ಭಾಗ ಒಂದು
“ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.”—ಜ್ಞಾನೋಕ್ತಿ 4:18.
1. ಸತ್ಯವು ಕ್ರಮೇಣವಾಗಿ ಪ್ರಕಟಿಸಲ್ಪಟ್ಟಿದೆ ಏಕೆ?
ಜ್ಞಾನೋಕ್ತಿ 4:18ಕ್ಕೆ ಅನುಗುಣವಾಗಿ, ಬೆಳಕಿನ ಬೆಳಗುಗಳ ಮೂಲಕ ಆತ್ಮಿಕ ಸತ್ಯಗಳ ಪ್ರಕಟಪಡಿಸುವಿಕೆಯು ಕ್ರಮೇಣವಾಗಿ ಸಂಭವಿಸಿದೆ ಎಂಬುದು ದೈವಿಕ ವಿವೇಕದ ಪ್ರಮಾಣವಾಗಿದೆ. ಹಿಂದಿನ ಲೇಖನದಲ್ಲಿ, ಈ ವಚನವು ಅಪೊಸ್ತಲ ಸಂಬಂಧಿತ ಸಮಯಗಳಲ್ಲಿ ಹೇಗೆ ನೆರವೇರಿತೆಂದು ನಾವು ನೋಡಿದೆವು. ಶಾಸ್ತ್ರೀಯ ಸತ್ಯದ ಸಮಷ್ಟಿಯು ಒಮ್ಮೆಗೇ ಪ್ರಕಟಿಸಲ್ಪಟ್ಟಿದ್ದರೆ, ಒಂದು ಕತ್ತಲ ಗವಿಯಿಂದ ಉಜ್ವಲವಾದ ಸೂರ್ಯನ ಬೆಳಕಿನಲ್ಲಿ ಬರುವ ಪರಿಣಾಮದಂತೆ, ಅದು ದಿಗ್ಭಮ್ರೆ ಮತ್ತು ಗಲಿಬಿಲಿಗೊಳಿಸುವಂತಹದ್ದಾಗಿರುತ್ತಿತ್ತು. ಅಲ್ಲದೆ, ಕ್ರಮೇಣವಾಗಿ ಪ್ರಕಟಿಸಲ್ಪಟ್ಟ ಸತ್ಯವು ಕ್ರೈಸ್ತರ ನಂಬಿಕೆಯನ್ನು ನಿರಂತರವಾದ ಒಂದು ವಿಧದಲ್ಲಿ ಬಲಪಡಿಸುತ್ತದೆ. ಅವರ ನಿರೀಕ್ಷೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಉಜ್ವಲವಾಗಿಯೂ ಅವರು ನಡೆಯಬೇಕಾದ ಕಾಲುದಾರಿಯನ್ನು ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿಗಿಯೂ ಅದು ಮಾಡುತ್ತದೆ.
“ನಂಬಿಗಸ್ತನೂ ವಿವೇಕಿಯೂ ಆದಂಥ ಆಳು”
2. ತನ್ನ ಹಿಂಬಾಲಕರಿಗೆ ಆತ್ಮಿಕ ಬೆಳಕನ್ನು ತರಲಿಕ್ಕಾಗಿ ಯಾರನ್ನು ತಾನು ಉಪಯೋಗಿಸುವೆನೆಂದು ಯೇಸು ಸೂಚಿಸಿದನು, ಮತ್ತು ಆ ಸಾಧನತೆಯು ಯಾರನ್ನು ಒಳಗೊಂಡಿತ್ತು?
2 ಅಪೊಸ್ತಲ ಸಂಬಂಧಿತ ಸಮಯಗಳಲ್ಲಿ, ಬೆಳಕಿನ ಅತಿ ಆರಂಭದ ಬೆಳಗುಗಳನ್ನು ತನ್ನ ಹಿಂಬಾಲಕರಿಗೆ ನೀಡಲು ಯೇಸು ಕ್ರಿಸ್ತನು ಅಲೌಕಿಕ ವಿಧಾನಗಳನ್ನು ಬಳಸಲು ಆರಿಸಿದನು. ಇದರ ಎರಡು ಉದಾಹರಣೆಗಳು ನಮ್ಮಲ್ಲಿವೆ: ಸಾ.ಶ. 33ರ ಪಂಚಾಶತ್ತಮ ಮತ್ತು ಸಾ.ಶ. 36 ರಲ್ಲಿ ಕೊರ್ನೇಲ್ಯನ ಪರಿವರ್ತನೆ. ತರುವಾಯ, ಕ್ರಿಸ್ತನು ಮುಂತಿಳಿಸಿದಂತೆಯೇ ಒಂದು ಮಾನವ ನಿಯೋಗವನ್ನು ಬಳಸಲು ಅವನು ಆರಿಸಿದನು: “ಹಾಗಾದರೆ ಯಜಮಾನನು ತನ್ನ ಮನೆಯವರಿಗೆ ಹೊತ್ತುಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು? ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು. ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.” (ಮತ್ತಾಯ 24:45-47) ಈ ಆಳು ಕೇವಲ ಒಬ್ಬ ವ್ಯಕ್ತಿಯಾಗಿರಲು ಸಾಧ್ಯವಿರಲಿಲ್ಲ ಯಾಕೆಂದರೆ ಅವನು ಪಂಚಾಶತ್ತಮದಲ್ಲಿ ಕ್ರೈಸ್ತ ಸಭೆಯು ಆರಂಭವಾದ ಸಮಯದಿಂದ ಲೆಕ್ಕಾಚಾರ ಕೇಳಲು ಯಜಮಾನನಾದ, ಯೇಸು ಕ್ರಿಸ್ತನು, ಬರುವ ತನಕ ಆತ್ಮಿಕಾಹಾರವನ್ನು ಒದಗಿಸಬೇಕಿತ್ತು. ನಿಜತ್ವಗಳು ಸೂಚಿಸುವುದೇನೆಂದರೆ, ಈ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು, ಒಂದು ಗುಂಪಿನೋಪಾದಿ ಭೂಮಿಯ ಮೇಲೆ ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿರುವ ಎಲ್ಲ ಅಭಿಷಿಕ್ತ ಕ್ರೈಸ್ತರನ್ನು ಒಳಕೊಳ್ಳುತ್ತದೆ.
3. ಆಳು ವರ್ಗದ ಪ್ರಥಮ ಸದಸ್ಯರ ನಡುವೆ ಯಾರು ಒಳಗೂಡಿಸಲ್ಪಟ್ಟಿದ್ದರು?
3 ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಪ್ರಥಮ ಸದಸ್ಯರಲ್ಲಿ ಯಾರು ಒಳಗೊಂಡಿದ್ದರು? “ನನ್ನ ಕುರಿಗಳನ್ನು ಮೇಯಿಸು” ಎಂಬ ಯೇಸುವಿನ ಆಜೆಗ್ಞೆ ಕಿವಿಗೊಟ್ಟ ಅಪೊಸ್ತಲ ಪೇತ್ರನು ಒಬ್ಬನಾಗಿದ್ದನು. (ಯೋಹಾನ 21:17) ಆಳು ವರ್ಗದ ಇತರ ಆದಿ ಸದಸ್ಯರಲ್ಲಿ, ತನ್ನ ಹೆಸರಿನ ಸುವಾರ್ತೆಯನ್ನು ಬರೆದ ಮತ್ತಾಯನು ಮತ್ತು ಪ್ರೇರಿತ ಪತ್ರಗಳನ್ನು ಬರೆದ ಪೌಲ, ಯಾಕೋಬ, ಮತ್ತು ಯೂದರು ಸೇರಿದ್ದರು. ಪ್ರಕಟನೆಯ ಪುಸ್ತಕವನ್ನು, ತನ್ನ ಸುವಾರ್ತೆಯನ್ನು, ಮತ್ತು ತನ್ನ ಪತ್ರಗಳನ್ನು ದಾಖಲಿಸಿದ ಅಪೊಸ್ತಲ ಯೋಹಾನನು ಸಹ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಒಬ್ಬ ಸದಸ್ಯನಾಗಿದ್ದನು. ಯೇಸುವಿನ ಆದೇಶಕ್ಕನುಗುಣವಾಗಿ ಈ ಪುರುಷರು ಬರೆದರು.
4. “ಮನೆಯವರು” ಯಾರಾಗಿದ್ದಾರೆ?
4 ಒಂದು ಗುಂಪಿನೋಪಾದಿ ಎಲ್ಲ ಅಭಿಷಿಕ್ತರು, ಭೂಮಿಯ ಮೇಲೆ ಅವರು ಎಲ್ಲಿಯೇ ಜೀವಿಸಲಿ, ಆಳು ವರ್ಗದ ಸದಸ್ಯರಾಗಿರುವಲ್ಲಿ, “ಮನೆಯವರು” ಯಾರಾಗಿದ್ದಾರೆ? ಅವರು ಅದೇ ಅಭಿಷಿಕ್ತರಾಗಿದ್ದಾರೆ, ಆದರೆ ಭಿನ್ನವಾದೊಂದು ದೃಷ್ಟಿಕೋನದಿಂದ—ವ್ಯಕ್ತಿಗಳೋಪಾದಿ—ಪರಿಗಣಿಸಲ್ಪಟ್ಟವರಾಗಿದ್ದಾರೆ. ಹೌದು, ಅವರು ಆತ್ಮಿಕಾಹಾರವನ್ನು ತಯಾರಿಸಿ ಕೊಡುತ್ತಿದ್ದರೊ ಅಥವಾ ಅದರಲ್ಲಿ ಭಾಗವಹಿಸುತ್ತಿದ್ದರೊ ಎಂಬುದರ ಮೇಲೆ ಅವಲಂಬಿಸುತ್ತಾ, ಅವರು ವ್ಯಕ್ತಿಗಳೋಪಾದಿ “ಆಳು” ವರ್ಗದವರು ಇಲ್ಲವೆ “ಮನೆಯವರು” ಆಗಿರಲಿದ್ದರು. ದೃಷ್ಟಾಂತಿಸಲು: 2 ಪೇತ್ರ 3:15, 16 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅಪೊಸ್ತಲ ಪೇತ್ರನು ಪೌಲನ ಪತ್ರಗಳ ಉಲ್ಲೇಖ ಮಾಡುತ್ತಾನೆ. ಅವುಗಳನ್ನು ಓದುವಾಗ ಪೇತ್ರನು, ಆಳು ವರ್ಗದ ಒಬ್ಬ ಪ್ರತಿನಿಧಿಯೋಪಾದಿ ಪೌಲನಿಂದ ಒದಗಿಸಲ್ಪಟ್ಟ ಆತ್ಮಿಕಾಹಾರವನ್ನು ತೆಗೆದುಕೊಳ್ಳುತ್ತಿರುವ ಮನೆಯವರಲ್ಲಿ ಒಬ್ಬನಂತಿರುವನು.
5. (ಎ) ಅಪೊಸ್ತಲರ ಬಳಿಕದ ಶತಮಾನಗಳಲ್ಲಿ ಆಳಿಗೆ ಏನು ಸಂಭವಿಸಿತು? (ಬಿ) 19 ನೆಯ ಶತಮಾನದ ಕೊನೆಯ ಭಾಗದಲ್ಲಿ ಯಾವ ವಿಕಸನಗಳು ಸಂಭವಿಸಿದವು?
5 ಈ ಸಂಬಂಧದಲ್ಲಿ ಸಹಸ್ರ ವರ್ಷಗಳ ದೇವರ ರಾಜ್ಯವು ಸಮೀಪಿಸಿದೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳಿದ್ದು: “‘ನಂಬಿಗಸ್ತನೂ ವಿವೇಕಿಯೂ ಆದ ಆಳು’ ವರ್ಗವು ಯಜಮಾನನಾದ ಯೇಸು ಕ್ರಿಸ್ತನ ಅಪೊಸ್ತಲರ ಮರಣದ ತರುವಾಯದ ಶತಮಾನಗಳಲ್ಲೆಲ್ಲಾ ಹೇಗೆ ಅಸ್ತಿತ್ವದಲ್ಲಿತ್ತು ಮತ್ತು ಸೇವೆ ಮಾಡಿತು ಎಂಬುದರ ಕುರಿತು ನಮ್ಮಲ್ಲಿ ಸ್ಪಷ್ಟವಾಗಿದ ಐತಿಹಾಸಿಕ ದಾಖಲೆಯಿಲ್ಲ. ‘ಆಳು’ ವರ್ಗದ ಒಂದು ಸಂತತಿಯು ಅದರ ಮುಂದಿನ ಸಂತತಿಯನ್ನು ಪೋಷಿಸಿತು ಎಂಬುದು ಸುವ್ಯಕ್ತ. (2 ತಿಮೊಥೆಯ 2:2) ಆದರೆ ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಪವಿತ್ರ ಬೈಬಲಿನ ಆತ್ಮಿಕಾಹಾರವನ್ನು ಪ್ರೀತಿಸಿದ ಮತ್ತು ಅದನ್ನು ಸೇವಿಸಲು ಬಯಸಿದ ದೇವ ಭಯವುಳ್ಳ ಜನರಿದ್ದರು . . . ಬೈಬಲ್ ಅಧ್ಯಯನದ ವರ್ಗಗಳು . . . ರಚಿಸಲ್ಪಟ್ಟವು ಮತ್ತು ಪವಿತ್ರ ಶಾಸ್ತ್ರಗಳ ಮೂಲಭೂತ ಸತ್ಯಗಳ ತಿಳಿವಳಿಕೆಯಲ್ಲಿ ಪ್ರಗತಿ ಮಾಡಿದವು. ಈ ಬೈಬಲ್ ವಿದ್ಯಾರ್ಥಿಗಳಲ್ಲಿ ಯಥಾರ್ಥರಾದ ನಿಸ್ವಾರ್ಥರು, ಆತ್ಮಿಕಾಹಾರದ ಈ ಜೀವದಾಯಕ ಭಾಗಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಆತುರರಾಗಿದ್ದರು. ‘ಮನೆಯವರಿಗೆ’ ಬೇಕಾದ ಆತ್ಮಿಕ ‘ಆಹಾರವನ್ನು ಸರಿಯಾದ ಸಮಯಕ್ಕೆ’ ಕೊಡಲು ನೇಮಿಸಲ್ಪಟ್ಟ ‘ಆಳಿನ’ ನಂಬಿಗಸ್ತ ಆತ್ಮವು ಅವರಲ್ಲಿತ್ತು. ಆಗಿನ ಸಮಯವು ಸರಿಯಾದ ಹಾಗೂ ಯೋಗ್ಯವಾದ ಸಮಯವೆಂದು ಮತ್ತು ಆಹಾರವನ್ನು ಬಡಿಸುವ ಅತ್ಯುತ್ತಮ ವಿಧಾನಗಳು ಯಾವುವೆಂದು ವಿವೇಚಿಸುವುದರಲ್ಲಿ ಅವರು ‘ವಿವೇಕಿ’ ಗಳಾಗಿದ್ದರು. ಅದನ್ನು ಬಡಿಸಲು ಅವರು ಪ್ರಯತ್ನಿಸಿದರು.”—ಪುಟಗಳು 344-5.a
ಆಧುನಿಕ ಸಮಯಗಳಲ್ಲಿ ಬೆಳಕಿನ ಆರಂಭದ ಬೆಳಗುಗಳು
6. ಸತ್ಯದ ಕ್ರಮೇಣವಾದ ಪ್ರಕಟಪಡಿಸುವಿಕೆಯ ಸಂಬಂಧದಲ್ಲಿ ಯಾವ ವಾಸ್ತವಾಂಶವು ಪ್ರಧಾನವಾಗಿ ಎದ್ದುಕಾಣುತ್ತದೆ?
6 ಆತ್ಮಿಕ ಬೆಳಕಿನ ಈ ಕ್ರಮೇಣವಾದ ಹೆಚ್ಚಿಕೆಯನ್ನು ತರಲು ಯೆಹೋವನು ಬಳಸಿದವರ ಸಂಬಂಧದಲ್ಲಿ ಪ್ರಧಾನವಾಗಿ ಎದ್ದುಕಾಣುವ ಒಂದು ವಿಷಯವು ಯಾವುದೆಂದರೆ, ಅವರು ಸ್ವತಃ ಯಾವ ಪ್ರಶಂಸೆಯನ್ನೂ ತೆಗೆದುಕೊಳ್ಳಲಿಲ್ಲ. ವಾಚ್ ಟವರ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಸಿ. ಟಿ. ರಸ್ಸಲ್ರ ಮನೋಭಾವವು, ಕರ್ತನು ತಮ್ಮ ದೀನ ನೈಪುಣ್ಯಗಳನ್ನು ಉಪಯೋಗಿಸಲು ಸಂತೋಷಿಸಿದನು ಎಂದಾಗಿತ್ತು. ಅವರ ವೈರಿಗಳಿಗೆ ಯಾವುದನ್ನು ಬಳಸುವ ವೃತ್ತಿಯಿತ್ತೋ ಆ ಬಿರುದುಗಳ ಸಂಬಂಧದಲ್ಲಿ, ತಾವು ಒಬ್ಬ “ರಸ್ಸಲ್ವಾದಿ” [ರಸಲೈಟ್] ಯನ್ನು ಎಂದೂ ಭೇಟಿಯಾಗಿರಲಿಲ್ಲವೆಂದು ಮತ್ತು “ರಸ್ಸಲ್ವಾದ” [ರಸಲಿಸಮ್] ಎಂಬ ವಿಷಯವೇ ಇರಲಿಲ್ಲವೆಂದು ಸಹೋದರ ರಸ್ಸಲ್ ಬಲವಾಗಿ ತಿಳಿಯುವಂತೆ ಮಾಡಿದರು. ಎಲ್ಲಾ ಪ್ರಶಂಸೆಯು ದೇವರಿಗೆ ಸಂದಿತು.
7. ಅವರು ನಿಜವಾಗಿಯೂ ನಂಬಿಗಸ್ತನೂ ವಿವೇಕಿಯೂ ಆದ ಆಳಿನೊಂದಿಗೆ ಸೇರಿಕೊಂಡಿದ್ದರು ಎಂಬುದಕ್ಕೆ, ಸಹೋದರ ರಸ್ಸಲ್ ಮತ್ತು ಅವರ ಸಹಚರರು ಯಾವ ರುಜುವಾತನ್ನು ಕೊಟ್ಟರು?
7 ಫಲಿತಾಂಶಗಳ ಮೂಲಕ ತೀರ್ಮಾನಿಸುವುದಾದರೆ, ಸಹೋದರ ರಸ್ಸಲ್ ಮತ್ತು ಅವರೊಂದಿಗೆ ಸೇರಿಬರುತ್ತಿದ್ದವರ ಪ್ರಯತ್ನಗಳನ್ನು ಯೆಹೋವನ ಪವಿತ್ರಾತ್ಮವು ನಿರ್ದೇಶಿಸುತ್ತಾ ಇತ್ತೆಂಬುದರಲ್ಲಿ ಯಾವ ಸಂದೇಹವೂ ಇರಸಾಧ್ಯವಿಲ್ಲ. ನಂಬಿಗಸ್ತನೂ ವಿವೇಕಿಯೂ ಆದ ಆಳಿನೊಂದಿಗೆ ಸೇರಿಕೊಂಡಿರುವ ರುಜುವಾತನ್ನು ಅವರು ಕೊಟ್ಟರು. ಆ ಸಮಯದ ಅನೇಕ ಪಾದ್ರಿಗಳು ಬೈಬಲ್ ದೇವರ ಪ್ರೇರಿತ ವಾಕ್ಯವೆಂದು ಮತ್ತು ಯೇಸುವನ್ನು ದೇವರ ಮಗನೆಂದು ತಾವು ನಂಬುವುದಾಗಿ ಹೇಳಿಕೊಂಡರೂ, ತ್ರಯೈಕ್ಯ, ಮಾನವ ಆತ್ಮದ ಅಮರತ್ವ, ಮತ್ತು ಅನಂತ ಯಾತನೆಯಂತಹ ಬಾಬೆಲಿನ ಸುಳ್ಳು ತತ್ವಗಳನ್ನು ಅನುಮೋದಿಸಿದರು. ಯೇಸುವಿನ ವಾಗ್ದಾನಕ್ಕನುಗುಣವಾಗಿ, ಸಹೋದರ ರಸ್ಸಲ್ ಮತ್ತು ಅವರ ಸಹವಾಸಿಗಳ ದೀನ ಪ್ರಯತ್ನಗಳು ಸತ್ಯವನ್ನು ಹಿಂದೆಂದಿಗಿಂತಲೂ ಈಗ ಪ್ರಕಾಶಿಸುವಂತೆ ಮಾಡಿದ್ದು ನಿಜವಾಗಿಯೂ ಪವಿತ್ರಾತ್ಮದ ಕಾರಣವೇ ಆಗಿತ್ತು. (ಯೋಹಾನ 16:13) ಯಾರ ನಿಯೋಗವು ಯಜಮಾನನ ಮನೆಯವರಿಗೆ ಆತ್ಮಿಕಾಹಾರವನ್ನು ಒದಗಿಸುವುದಾಗಿತ್ತೊ, ಆ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದ ಭಾಗವಾಗಿ ಅವರು ಖಂಡಿತವಾಗಿಯೂ ಇದ್ದರೆಂಬ ರುಜುವಾತನ್ನು ಆ ಅಭಿಷಿಕ್ತ ಬೈಬಲ್ ವಿದ್ಯಾರ್ಥಿಗಳು ಕೊಟ್ಟರು. ಅಭಿಷಿಕ್ತರ ಒಟ್ಟುಗೂಡಿಸುವಿಕೆಯಲ್ಲಿ ಅವರ ಪ್ರಯತ್ನಗಳು ಮಹತ್ತಾದ ಸಹಾಯಕಗಳಾಗಿದ್ದವು.
8. ಯೆಹೋವ, ಬೈಬಲ್, ಯೇಸು ಕ್ರಿಸ್ತ, ಮತ್ತು ಪವಿತ್ರಾತ್ಮದ ಕುರಿತಾದ ಯಾವ ಮೂಲಭೂತ ವಾಸ್ತವಾಂಶಗಳನ್ನು ಬೈಬಲ್ ವಿದ್ಯಾರ್ಥಿಗಳು ಸ್ಪಷ್ಟವಾಗಿಗಿ ಅರ್ಥಮಾಡಿಕೊಂಡರು?
8 ಬೆಳಕಿನ ಬೆಳಗುಗಳೊಂದಿಗೆ ಆರಂಭದ ಈ ಬೈಬಲ್ ವಿದ್ಯಾರ್ಥಿಗಳನ್ನು, ಪವಿತ್ರಾತ್ಮದ ಮೂಲಕವಾಗಿ ಯೆಹೋವನು ಎಷ್ಟು ಮಹತ್ತರವಾಗಿ ಅನುಗ್ರಹ ಪಾತ್ರರನ್ನಾಗಿ ಮಾಡಿದನೆಂಬುದನ್ನು ಅವಲೋಕಿಸುವುದು ಗಮನಾರ್ಹವಾಗಿದೆ. ಮೊಟ್ಟಮೊದಲಾಗಿ, ಸೃಷ್ಟಿಕರ್ತನು ಅಸ್ತಿತ್ವದಲ್ಲಿದ್ದಾನೆ ಮತ್ತು ಯೆಹೋವ ಎಂಬ ಅಪೂರ್ವವಾದ ಹೆಸರು ಆತನಿಗಿದೆ ಎಂಬುದನ್ನು ಅವರು ದೃಢವಾಗಿ ರುಜುಪಡಿಸಿದರು. (ಕೀರ್ತನೆ 83:18; ರೋಮಾಪುರ 1:20) ಶಕ್ತಿ, ನ್ಯಾಯ, ವಿವೇಕ, ಮತ್ತು ಪ್ರೀತಿ ಎಂಬ ನಾಲ್ಕು ಪ್ರಮುಖ ಗುಣಗಳು ಯೆಹೋವನಿಗಿವೆ ಎಂಬುದನ್ನು ಅವರು ತಿಳಿದುಕೊಂಡರು. (ಆದಿಕಾಂಡ 17:1; ಧರ್ಮೋಪದೇಶಕಾಂಡ 32:4; ರೋಮಾಪುರ 11:33; 1 ಯೋಹಾನ 4:8) ಬೈಬಲು ದೇವರ ಪ್ರೇರಿತ ವಾಕ್ಯವಾಗಿದೆ ಮತ್ತು ಸತ್ಯವಾಗಿದೆ ಎಂಬುದನ್ನು ಈ ಅಭಿಷಿಕ್ತ ಕ್ರೈಸ್ತರು ಸ್ಪಷ್ಟವಾಗಿಗಿ ರುಜುಪಡಿಸಿದರು. (ಯೋಹಾನ 17:17; 2 ತಿಮೊಥೆಯ 3:16, 17) ಇನ್ನೂ ಹೆಚ್ಚಾಗಿ, ದೇವರ ಪುತ್ರನಾದ ಯೇಸು ಕ್ರಿಸ್ತನು ಸೃಷ್ಟಿಮಾಡಲ್ಪಟ್ಟನು ಮತ್ತು ಎಲ್ಲ ಮಾನವಕುಲಕ್ಕೋಸ್ಕರವಾಗಿ ತನ್ನ ಜೀವವನ್ನು ಒಂದು ಪ್ರಾಯಶ್ಚಿತದ್ತೋಪಾದಿ ಕೊಟ್ಟನೆಂಬ ವಿಷಯವನ್ನು ಅವರು ಎತ್ತಿಹಿಡಿದರು. (ಮತ್ತಾಯ 20:28; ಕೊಲೊಸ್ಸೆ 1:15) ಒಂದು ತ್ರಯೈಕ್ಯದ ಮೂರನೆಯ ವ್ಯಕ್ತಿಯಾಗಿರುವುದಕ್ಕೆ ಬದಲಾಗಿ, ಪವಿತ್ರಾತ್ಮವು ದೇವರ ಕಾರ್ಯಕಾರಿ ಶಕ್ತಿಯಾಗಿದೆಯೆಂದು ತಿಳಿಯಲಾಯಿತು.—ಅ. ಕೃತ್ಯಗಳು 2:17.
9. (ಎ) ಮನುಷ್ಯನ ಸ್ವಭಾವ ಮತ್ತು ಬೈಬಲಿನಲ್ಲಿ ಕೊಡಲ್ಪಟ್ಟಿರುವ ಗಮ್ಯ ಸ್ಥಾನಗಳ ಕುರಿತಾದ ಯಾವ ಸತ್ಯತೆಗಳನ್ನು ಬೈಬಲ್ ವಿದ್ಯಾರ್ಥಿಗಳು ಸ್ಫುಟವಾಗಿ ತಿಳಿದುಕೊಂಡರು? (ಬಿ) ಯಾವ ಇತರ ಸತ್ಯತೆಗಳನ್ನು ಯೆಹೋವನ ಸೇವಕರು ಸ್ಪಷ್ಟವಾಗಿಗಿ ಅವಲೋಕಿಸಿದರು?
9 ಮನುಷ್ಯನಿಗೆ ಅಮರವಾದ ಆತ್ಮವಿಲ್ಲ, ಬದಲಾಗಿ ಒಬ್ಬ ಮರ್ತ್ಯ ಆತ್ಮವಾಗಿದ್ದಾನೆ ಎಂಬುದನ್ನು ಬೈಬಲ್ ವಿದ್ಯಾರ್ಥಿಗಳು ಸ್ಪಷ್ಟವಾಗಿಗಿ ಕಂಡುಕೊಂಡರು. “ಪಾಪವು ಕೊಡುವ ಸಂಬಳ ಮರಣ” ವಾಗಿದೆ, ನಿತ್ಯ ಯಾತನೆಯಲ್ಲ; ಉರಿಯುತ್ತಿರುವ ನರಕದಂತಹ ಯಾವ ಸ್ಥಳವೂ ಇರುವುದಿಲ್ಲ ಎಂದು ಅವರು ಗ್ರಹಿಸಿದರು. (ರೋಮಾಪುರ 5:12; 6:23; ಆದಿಕಾಂಡ 2:7; ಯೆಹೆಜ್ಕೇಲ 18:4) ಅದೂ ಅಲ್ಲದೆ, ವಿಕಾಸವಾದದ ಕಲ್ಪನೆಯು ಅಶಾಸ್ತ್ರೀಯವಾಗಿದೆ ಮಾತ್ರವಲ್ಲ, ಸಂಪೂರ್ಣವಾಗಿ ವಾಸ್ತವಿಕ ಆಧಾರವಿಲ್ಲದ್ದಾಗಿದೆಯೆಂದು ಅವರು ಸ್ಫುಟವಾಗಿ ತಿಳಿದುಕೊಂಡರು. (ಆದಿಕಾಂಡ, ಅಧ್ಯಾಯಗಳು 1 ಮತ್ತು 2) ಬೈಬಲು, ಕ್ರಿಸ್ತನ ಹೆಜ್ಜೆಜಾಡಿನ ಹಿಂಬಾಲಕರಾದ 144,000 ಅಭಿಷಿಕ್ತರಿಗಾಗಿ ಒಂದು ಸ್ವರ್ಗೀಯ ಸ್ಥಾನ ಮತ್ತು “ಬೇರೆ ಕುರಿಗಳ” ಅಸಂಖ್ಯಾತ “ಮಹಾ ಸಮೂಹ” ಕ್ಕಾಗಿ ಒಂದು ಪ್ರಮೋದವನ ಭೂಮಿಯಂತಹ ಎರಡು ಗಮ್ಯ ಸ್ಥಾನಗಳನ್ನು ಮುಂದಿಡುತ್ತದೆ ಎಂಬುದನ್ನು ಸಹ ಅವರು ಅರಿತುಕೊಂಡರು. (ಪ್ರಕಟನೆ 7:9; 14:1; ಯೋಹಾನ 10:16) ಭೂಮಿಯು ಶಾಶ್ವತವಾಗಿರುವುದು ಮತ್ತು ಅನೇಕ ಧರ್ಮಗಳಿಂದ ಕಲಿಸಲ್ಪಟ್ಟಂತೆ ಅದು ಸುಡಲ್ಪಡುವುದಿಲ್ಲ ಎಂಬುದನ್ನು ಆ ಆರಂಭದ ಬೈಬಲ್ ವಿದ್ಯಾರ್ಥಿಗಳು ಗ್ರಹಿಸಿದರು. (ಪ್ರಸಂಗಿ 1:4; ಲೂಕ 23:43) ಕ್ರಿಸ್ತನ ಹಿಂದಿರುಗುವಿಕೆಯು ಅದೃಶ್ಯವಾಗಿರುವುದು ಮತ್ತು ತದನಂತರ ಆತನು ಜನಾಂಗಗಳ ಮೇಲೆ ನ್ಯಾಯತೀರ್ಪನ್ನು ವಿಧಿಸುವನು ಹಾಗೂ ಭೂ ಪ್ರಮೋದವನವೊಂದನ್ನು ಒಳತರುವನು ಎಂದು ಸಹ ಅವರು ಕಲಿತರು.—ಅ. ಕೃತ್ಯಗಳು 10:42; ರೋಮಾಪುರ 8:19-21; 1 ಪೇತ್ರ 3:18.
10. ದೀಕ್ಷಾಸ್ನಾನ, ಪುರೋಹಿತ-ಲೌಕಿಕ ವ್ಯತ್ಯಾಸ, ಮತ್ತು ಕ್ರಿಸ್ತನ ಮರಣದ ಜ್ಞಾಪಕದ ಕುರಿತಾದ ಯಾವ ಸತ್ಯತೆಗಳನ್ನು ಬೈಬಲ್ ವಿದ್ಯಾರ್ಥಿಗಳು ಕಲಿತುಕೊಂಡರು?
10 ಶಾಸ್ತ್ರೀಯ ದೀಕ್ಷಾಸ್ನಾನವು ಶಿಶುಗಳಿಗೆ ನೀರನ್ನು ಚಿಮುಕಿಸುವ ಒಂದು ವಿಷಯವಾಗಿರುವುದಿಲ್ಲ, ಬದಲಾಗಿ ಮತ್ತಾಯ 28:19, 20 ರಲ್ಲಿನ ಯೇಸುವಿನ ಆಜೆಗ್ಞೆ ಅನುಸಾರವಾಗಿ ಅದು, ಯಾರು ಕಲಿಸಲ್ಪಟ್ಟಿದ್ದಾರೋ ಆ ವಿಶ್ವಾಸಿಗಳ ನಿಮಜ್ಜನವಾಗಿದೆಯೆಂದು ಬೈಬಲ್ ವಿದ್ಯಾರ್ಥಿಗಳು ಕಲಿತರು. ಪುರೋಹಿತ-ಲೌಕಿಕ ವ್ಯತ್ಯಾಸಕ್ಕೆ ಯಾವುದೇ ಶಾಸ್ತ್ರೀಯ ಆಧಾರವಿಲ್ಲ ಎಂಬುದನ್ನು ಅವರು ಅವಲೋಕಿಸಿದರು. (ಮತ್ತಾಯ 23:8-10) ಅದಕ್ಕೆ ಪ್ರತಿಯಾಗಿ, ಎಲ್ಲಾ ಕ್ರೈಸ್ತರು ಸುವಾರ್ತೆಯ ಪ್ರಚಾರಕರಾಗಿರತಕ್ಕದ್ದು. (ಅ. ಕೃತ್ಯಗಳು 1:8) ಪ್ರತಿ ವರ್ಷಕ್ಕೆ ಕೇವಲ ಒಮ್ಮೆ, ನೈಸಾನ್ 14 ರಂದು ಕ್ರಿಸ್ತನ ಮರಣದ ಜ್ಞಾಪಕವು ಆಚರಿಸಲ್ಪಡಬೇಕೆಂಬುದನ್ನು ಬೈಬಲ್ ವಿದ್ಯಾರ್ಥಿಗಳು ಗಣ್ಯಮಾಡಿದರು. ಇದಲ್ಲದೆ, ಈಸ್ಟರ್ ಒಂದು ವಿಧರ್ಮಿ ರಜಾದಿನವಾಗಿದೆಯೆಂದು ಅವರು ಅವಲೋಕಿಸಿದರು. ಇದಕ್ಕೆ ಕೂಡಿಸಿ, ತಮ್ಮ ಕೆಲಸವನ್ನು ದೇವರು ಬೆಂಬಲಿಸುತ್ತಿದ್ದಾನೆಂದು ಆ ಅಭಿಷಿಕ್ತರು ಎಷ್ಟು ದೃಢಭರವಸವುಳ್ಳವರಾಗಿದ್ದರೆಂದರೆ, ಅವರು ಎಂದೂ ವಂತಿಗೆಗಳನ್ನು ಒಟ್ಟುಗೂಡಿಸಲಿಲ್ಲ. (ಮತ್ತಾಯ 10:8) ಬಹಳ ಹಿಂದಿನ ಸಮಯಗಳಿಂದಲೂ, ದೇವರ ಪವಿತ್ರಾತ್ಮದ ಫಲಗಳನ್ನು ಬೆಳೆಸಿಕೊಳ್ಳುವುದನ್ನು ಒಳಗೊಳ್ಳುವ ಬೈಬಲ್ ಮೂಲತತ್ವಗಳಿಗನುಸಾರ ಕ್ರೈಸ್ತರು ಜೀವಿಸಬೇಕೆಂದು ಅವರು ಅರ್ಥಮಾಡಿಕೊಂಡರು.—ಗಲಾತ್ಯ 5:22, 23.
ಹೆಚ್ಚಾಗುತ್ತಿರುವ ಬೆಳಕಿನ ಬೆಳಗುಗಳು
11. ಕ್ರೈಸ್ತರಿಗಾಗಿರುವ ಆದೇಶ ಹಾಗೂ ಕುರಿಗಳು ಮತ್ತು ಆಡುಗಳ ಕುರಿತಾದ ಯೇಸುವಿನ ಸಾಮ್ಯದ ಮೇಲೆ ಯಾವ ಬೆಳಕು ಕಂಗೊಳಿಸಿತು?
11 ವಿಶೇಷವಾಗಿ 1919 ರಿಂದ ಯೆಹೋವನ ಸೇವಕರು, ಹೆಚ್ಚಾಗುತ್ತಿರುವ ಬೆಳಕಿನ ಬೆಳಗುಗಳಿಂದ ಆಶೀರ್ವದಿಸಲ್ಪಟ್ಟಿದ್ದಾರೆ. 1922ರ ಸೀಡರ್ ಪಾಯಿಂಟ್ ಅಧಿವೇಶನದಲ್ಲಿ, ಯೆಹೋವನ ಸಾಕ್ಷಿಗಳ ಮುಖ್ಯ ಹಂಗು “ರಾಜನನ್ನೂ ಆತನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ” ಎಂಬುದಾಗಿದೆ, ಎಂದು ವಾಚ್ ಟವರ್ ಸೊಸೈಟಿಯ ಎರಡನೆಯ ಅಧ್ಯಕ್ಷರಾದ ಜೆ. ಎಫ್. ರಥರ್ಫರ್ಡರು ಬಲವಾಗಿ ಒತ್ತಿಹೇಳಿದಾಗ, ಬೆಳಕಿನ ಎಂತಹ ಪ್ರಕಾಶಮಾನವಾದ ಬೆಳಗು ಕಂಗೊಳಿಸಿತು! ಅದರ ಮುಂದಿನ ವರ್ಷದಲ್ಲೇ, ಕುರಿಗಳು ಮತ್ತು ಆಡುಗಳ ಕುರಿತಾದ ಸಾಮ್ಯದ ಮೇಲೆ ಪ್ರಕಾಶಮಾನವಾದ ಬೆಳಕು ಕಂಗೊಳಿಸಿತು. ಈ ಹಿಂದೆ ಯೋಚಿಸಲ್ಪಟ್ಟಂತೆ, ಈ ಪ್ರವಾದನೆಯು ಭವಿಷ್ಯತ್ತಿನಲ್ಲಿ ಸಹಸ್ರ ವರ್ಷಗಳ ಸಮಯದಲ್ಲಲ್ಲ, ಬದಲಾಗಿ ಪ್ರಸ್ತುತವಾಗಿ ಕರ್ತನ ದಿನದಲ್ಲಿ ನೆರವೇರಲ್ಪಡತಕ್ಕದ್ದೆಂದು ತಿಳಿಯಲಾಯಿತು. ಸಹಸ್ರ ವರ್ಷಗಳ ಸಮಯದಲ್ಲಿ, ಕ್ರಿಸ್ತನ ಸಹೋದರರು ಅಸ್ವಸ್ಥರಾಗುವುದಿಲ್ಲ, ಅಥವಾ ಅವರು ಬಂಧನದಲಿಡ್ಲಲ್ಪಡುವುದಿಲ್ಲ. ಅಲ್ಲದೆ, ಸಹಸ್ರ ವರ್ಷಗಳ ಅಂತ್ಯದಲ್ಲಿ, ಯೇಸು ಕ್ರಿಸ್ತನಲ್ಲ, ಬದಲಾಗಿ ಯೆಹೋವ ದೇವರು ನ್ಯಾಯತೀರ್ಪನ್ನು ಮಾಡುವನು.—ಮತ್ತಾಯ 25:31-46.
12. ಅರ್ಮಗೆದೋನ್ನ ಕುರಿತು ಬೆಳಕಿನ ಯಾವ ಬೆಳಗು ಇತ್ತು?
12 ಒಂದು ಕಾಲದಲ್ಲಿ ಬೈಬಲ್ ವಿದ್ಯಾರ್ಥಿಗಳು ಯೋಚಿಸಿದ್ದಂತೆ, ಅರ್ಮಗೆದೋನ್ ಯುದ್ಧವು ಒಂದು ಸಾಮಾಜಿಕ ಕ್ರಾಂತಿಯಾಗಿರುವುದಿಲ್ಲವೆಂಬುದನ್ನು, 1926 ರಲ್ಲಿ ಬೆಳಕಿನ ಇನ್ನೊಂದು ಉಜ್ವಲವಾದ ಬೆಳಗು ಪ್ರಕಟಪಡಿಸಿತು. ಅದಕ್ಕೆ ಬದಲಾಗಿ, ಇದು ಆತನು ದೇವರಾಗಿದ್ದಾನೆಂದು ಎಲ್ಲಾ ಜನರು ಮನಗಾಣಿಸಲ್ಪಡುವಷ್ಟು ಸ್ಪಷ್ಟವಾಗಿಗಿ ತನ್ನ ಶಕ್ತಿಯನ್ನು ಯೆಹೋವನು ಪ್ರದರ್ಶಿಸುವಂತಹ ಒಂದು ಯುದ್ಧವಾಗಿರುವುದು.—ಪ್ರಕಟನೆ 16:14-16; 19:17-21.
ಕ್ರಿಸ್ಮಸ್—ಒಂದು ವಿಧರ್ಮಿ ರಜಾದಿನ
13. (ಎ) ಕ್ರಿಸ್ಮಸ್ ಆಚರಣೆಗಳ ಮೇಲೆ ಯಾವ ಬೆಳಕು ಬೀರಲ್ಪಟ್ಟಿತು? (ಬಿ) ಜನ್ಮದಿನಗಳು ಇನ್ನೆಂದಿಗೂ ಆಚರಿಸಲ್ಪಡಲಿಲ್ಲವೇಕೆ? (ಪಾದಟಿಪ್ಪಣಿಯನ್ನು ಒಳಗೂಡಿಸಿರಿ.)
13 ಸ್ವಲ್ಪ ಸಮಯದ ತರುವಾಯ, ಬೆಳಕಿನ ಒಂದು ಬೆಳಗು, ಬೈಬಲ್ ವಿದ್ಯಾರ್ಥಿಗಳು ಕ್ರಿಸ್ಮಸ್ ಆಚರಿಸುವುದನ್ನು ನಿಲ್ಲಿಸುವಂತೆ ಮಾಡಿತು. ಆ ಸಮಯಕ್ಕೆ ಮುಂಚೆ ಲೋಕವ್ಯಾಪಕವಾಗಿ ಬೈಬಲ್ ವಿದ್ಯಾರ್ಥಿಗಳಿಂದ ಕ್ರಿಸ್ಮಸ್ ಯಾವಾಗಲೂ ಆಚರಿಸಲ್ಪಡುತ್ತಿತ್ತು, ಮತ್ತು ಬ್ರೂಕ್ಲಿನ್ ಮುಖ್ಯಕಾರ್ಯಾಲಯದಲ್ಲಿ ಇದರ ಆಚರಣೆಯು ಬಹಳ ಉತ್ಸವದ ಒಂದು ಸಂದರ್ಭವಾಗಿರುತ್ತಿತ್ತು. ಆದರೆ ದಶಂಬರ 25ರ ಆಚರಣೆಯು ನಿಜಕ್ಕೂ ವಿಧರ್ಮಿಯಾಗಿತ್ತು ಮತ್ತು ವಿಧರ್ಮಿಗಳನ್ನು ಮತಾಂತರಿಸುವುದನ್ನು ಹೆಚ್ಚು ಸುಲಭವಾಗಿ ಮಾಡಲಿಕ್ಕಾಗಿ ಧರ್ಮಭ್ರಷ್ಟ ಕ್ರೈಸ್ತಪ್ರಪಂಚದಿಂದ ಆರಿಸಲ್ಪಟ್ಟಿತ್ತೆಂದು ತದನಂತರ ಅರಿಯಲಾಯಿತು. ಇದಲ್ಲದೆ, ಯೇಸುವಿನ ಜನನದ ಸಮಯದಲ್ಲಿ, ಕುರುಬರು ತಮ್ಮ ಮಂದೆಗಳನ್ನು ಹೊಲಗಳಲ್ಲಿ ಮೇಯಿಸುತ್ತಿದ್ದುದರಿಂದ—ದಶಂಬರದ ಕೊನೆ ಭಾಗದ ರಾತ್ರಿಯಲ್ಲಿ ಅವರು ಮಾಡುತ್ತಿರಸಾಧ್ಯವಿಲ್ಲದ ಒಂದು ಕೆಲಸ—ಯೇಸು ಚಳಿಗಾಲದಲ್ಲಿ ಜನಿಸಲ್ಪಟ್ಟಿರಲಿಕ್ಕಿಲ್ಲವೆಂದು ಕಂಡುಕೊಳ್ಳಲಾಯಿತು. (ಲೂಕ 2:8) ಅದಕ್ಕೆ ಬದಲಾಗಿ, ಯೇಸು ಸುಮಾರು ಅಕ್ಟೋಬರ್ 1ಕ್ಕೆ ಜನಿಸಿದನೆಂದು ಶಾಸ್ತ್ರಗಳು ಸೂಚಿಸುತ್ತವೆ. ಯೇಸುವಿನ ಜನನದ ಸುಮಾರು ಎರಡು ವರ್ಷಗಳ ಬಳಿಕ ಆತನನ್ನು ಭೇಟಿಮಾಡಿದ, ಜ್ಞಾನಿಗಳೆಂದು ಕರೆಯಲ್ಪಟ್ಟಿರುವ ಪುರುಷರು ವಿಧರ್ಮಿ ಮೇಜೈ (ಜ್ಞಾನಿಗಳು) ಗಳಾಗಿದ್ದರೆಂಬುದನ್ನು ಸಹ ಬೈಬಲ್ ವಿದ್ಯಾರ್ಥಿಗಳು ಗ್ರಹಿಸಿದರು.b
ಒಂದು ಹೊಸ ಹೆಸರು
14. ಬೈಬಲ್ ವಿದ್ಯಾರ್ಥಿಗಳೆಂಬ ಹೆಸರು ಯೆಹೋವನ ಜನರನ್ನು ಸಮರ್ಪಕವಾಗಿ ಪ್ರತಿನಿಧಿಸಲಿಲ್ಲವೇಕೆ?
14 1931 ರಲ್ಲಿ, ಸತ್ಯದ ಪ್ರಕಾಶಮಾನವಾದ ಒಂದು ಬೆಳಗು, ಆ ಬೈಬಲ್ ವಿದ್ಯಾರ್ಥಿಗಳಿಗೆ ಸರಿಹೊಂದುವ ಒಂದು ಶಾಸ್ತ್ರೀಯ ಹೆಸರನ್ನು ಪ್ರಕಟಪಡಿಸಿತು. ಇತರರು ತಮಗೆ ಕೊಟ್ಟಿರುವ ರಸೆಲೈಟ್ಸ್, ಮಿಲೆನಿಯಲ್ ಡಾನಿಸ್ಟ್ಸ್, ಮತ್ತು “ನೋ ಹೆಲರ್ಸ್” ಗಳಂತಹ ಯಾವುದೇ ಅಡ್ಡ ಹೆಸರುಗಳನ್ನು ಅಂಗೀಕರಿಸಸಾಧ್ಯವಿಲ್ಲವೆಂದು ಯೆಹೋವನ ಸಾಕ್ಷಿಗಳು ತಿಳಿದುಕೊಂಡಿದ್ದರು.c ಆದರೆ ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿಗಳೆಂದು ಅವರು ಸ್ವತಃ ಪಡೆದುಕೊಂಡಿದ್ದ ಹೆಸರು, ತಮ್ಮನ್ನು ಸಮರ್ಪಕವಾಗಿ ಪ್ರತಿನಿಧಿಸಲಿಲ್ಲವೆಂಬುದನ್ನೂ ಅವರು ಅರಿಯಲಾರಂಭಿಸಿದರು. ಅವರು ಕೇವಲ ಬೈಬಲ್ ವಿದ್ಯಾರ್ಥಿಗಳಾಗಿರುವುದಕ್ಕಿಂತಲೂ ಬಹಳ ಹೆಚ್ಚಿನವರಾಗಿದ್ದರು. ಅಲ್ಲದೆ, ಬೈಬಲಿನ ವಿದ್ಯಾರ್ಥಿಗಳಾಗಿದ್ದ ಎಷ್ಟೋ ಇತರ ಅನೇಕ ಮಂದಿ ಇದ್ದರೂ, ಅವರು ಸ್ವಲ್ಪವಾದರೂ ಬೈಬಲ್ ವಿದ್ಯಾರ್ಥಿಗಳಿಗೆ ಸದೃಶರಾಗಿರಲಿಲ್ಲ.
15. 1931 ರಲ್ಲಿ ಬೈಬಲ್ ವಿದ್ಯಾರ್ಥಿಗಳು ಯಾವ ಹೆಸರನ್ನು ಪರಿಗ್ರಹಿಸಿದರು, ಮತ್ತು ಅದು ಯೋಗ್ಯವಾಗಿದೆ ಏಕೆ?
15 ಬೈಬಲ್ ವಿದ್ಯಾರ್ಥಿಗಳು ಒಂದು ಹೊಸ ಹೆಸರನ್ನು ಹೇಗೆ ಪಡೆದುಕೊಂಡರು? ಅನೇಕ ವರ್ಷಗಳಿಂದ ಕಾವಲಿನಬುರುಜು ಯೆಹೋವನ ಹೆಸರು ಪ್ರಖ್ಯಾತವಾಗುವಂತೆ ಮಾಡುತ್ತಾ ಇತ್ತು. ಆದುದರಿಂದ, “ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; ನೀವು ನನ್ನನ್ನು ತಿಳಿದು ನಂಬಿ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ [ಇದನ್ನು ನಡಿಸಿದೆನು]; ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವದಿಲ್ಲ,” ಎಂದು ಯೆಶಾಯ 43:10 ರಲ್ಲಿ ಕಂಡುಬರುವ ಹೆಸರನ್ನು ಬೈಬಲ್ ವಿದ್ಯಾರ್ಥಿಗಳು ಪರಿಗ್ರಹಿಸಬೇಕಾದದ್ದು ಅತ್ಯಂತ ಯೋಗ್ಯವಾಗಿತ್ತು.
ನಿರ್ದೋಷೀಕರಣ ಮತ್ತು “ಮಹಾ ಸಮೂಹ”
16. ಪ್ಯಾಲೆಸ್ತೀನ್ಗೆ ಹಿಂದಿರುಗಿದ ಪ್ರಾಕೃತಿಕ ಯೆಹೂದ್ಯರಿಗೆ, ಪುನಃಸ್ಥಾಪನೆಯ ಪ್ರವಾದನೆಗಳು ಅನ್ವಯವಾಗಲಾರವು ಏಕೆ, ಆದರೆ ಅವು ಯಾರಿಗೆ ಅನ್ವಯಿಸುತ್ತವೆ?
16 1932 ರಲ್ಲಿ ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ವಿಂಡಿಕೇಷನ್ ಪುಸ್ತಕದ ಎರಡನೆಯ ಸಂಪುಟದಲ್ಲಿ, ಯೆಶಾಯ, ಯೆರೆಮೀಯ, ಯೆಹೆಜ್ಕೇಲ, ಮತ್ತು ಇತರ ಪ್ರವಾದಿಗಳಿಂದ ದಾಖಲಿಸಲ್ಪಟ್ಟ ಪುನಃಸ್ಥಾಪನೆಯ ಪ್ರವಾದನೆಗಳು, ಅವಿಶ್ವಾಸ ಮತ್ತು ರಾಜಕೀಯ ಪ್ರಧಾನೋದ್ದೇಶಗಳೊಂದಿಗೆ ಪ್ಯಾಲೆಸ್ತೀನ್ಗೆ ಹಿಂದಿರುಗುತ್ತಿದ್ದ ಮಾಂಸಿಕ ಯೆಹೂದ್ಯರಿಗೆ ಅನ್ವಯಿಸಲಿಲವ್ಲೆಂಬುದನ್ನು (ಹಿಂದೆ ಭಾವಿಸಿದಂತೆ) ಬೆಳಕಿನ ಒಂದು ಬೆಳಗು ಪ್ರಕಟಪಡಿಸಿತು. ಅದಕ್ಕೆ ಬದಲಾಗಿ, ಸಾ.ಶ.ಪೂ. 537 ರಲ್ಲಿ ಯೆಹೂದ್ಯರು ಬಾಬೆಲಿನಲ್ಲಿನ ಬಂದಿವಾಸದಿಂದ ಹಿಂದಿರುಗಿದಾಗ ಅಪ್ರಧಾನವಾದ ಒಂದು ನೆರವೇರಿಕೆಯನ್ನು ಪಡೆದಿದ್ದ ಈ ಪುನಃಸ್ಥಾಪನೆಯ ಪ್ರವಾದನೆಗಳು, 1919 ರಲ್ಲಿ ಆರಂಭವಾದ ಆತ್ಮಿಕ ಇಸ್ರಾಯೇಲಿನ ಬಿಡುಗಡೆ ಮತ್ತು ಪುನಃಸ್ಥಾಪನೆಯಲ್ಲಿ, ಹಾಗೂ ಇಂದು ಯೆಹೋವನ ನಿಜ ಸೇವಕರಿಂದ ಅನುಭೋಗಿಸಲ್ಪಡುವ ಆತ್ಮಿಕ ಪ್ರಮೋದವನದಲ್ಲಿ ಪರಿಣಾಮ ರೂಪವಾದ ಸಮೃದ್ಧಿಯಲ್ಲಿ, ಅವುಗಳ ಪ್ರಧಾನ ನೆರವೇರಿಕೆಯನ್ನು ಪಡೆದುಕೊಂಡವು.
17, 18. (ಎ) ಸಕಾಲದಲ್ಲಿ, ಬೆಳಕಿನ ಒಂದು ಬೆಳಗಿನ ಮೂಲಕ, ಯೆಹೋವನ ಮುಖ್ಯ ಉದ್ದೇಶವು ಯಾವುದೆಂದು ತೋರಿಸಲ್ಪಟ್ಟಿತು? (ಬಿ) ಪ್ರಕಟನೆ 7:9-17ರ ಕುರಿತಾದ ಬೆಳಕಿನ ಯಾವ ಬೆಳಗು 1935 ರಲ್ಲಿ ಸಂಭವಿಸಿತು?
17 ಸಕಾಲದಲ್ಲಿ, ಯೆಹೋವನ ಮುಖ್ಯ ಉದ್ದೇಶವು ಮಾನವರ ಸಂರಕ್ಷಣೆಯಾಗಿರಲಿಲ್ಲ, ಬದಲಾಗಿ ಆತನ ಸಾರ್ವಭೌಮತೆಯ ನಿರ್ದೋಷೀಕರಣವಾಗಿತ್ತು ಎಂಬುದನ್ನು ಬೆಳಕಿನ ಬೆಳಗುಗಳು ಹೊರಪಡಿಸಿದವು. ಬೈಬಲಿನ ಅತ್ಯಂತ ಪ್ರಾಮುಖ್ಯವಾದ ವಿಷಯವು, ಪ್ರಾಯಶ್ಚಿತವ್ತಲ್ಲ, ಬದಲಾಗಿ ರಾಜ್ಯವಾಗಿತ್ತೆಂದು ಅವಲೋಕಿಸಲಾಯಿತು, ಏಕೆಂದರೆ ಅದು ಯೆಹೋವನ ಸಾರ್ವಭೌಮತೆಯನ್ನು ನಿರ್ದೋಷೀಕರಿಸಲಿರುವುದು. ಅದು ಬೆಳಕಿನ ಎಂತಹ ಒಂದು ಬೆಳಗಾಗಿತ್ತು! ಸಮರ್ಪಿತ ಕ್ರೈಸ್ತರು ತಾವು ಪರಲೋಕಕ್ಕೆ ಹೋಗುವುದರ ಕುರಿತು ಇನ್ನೆಂದಿಗೂ ಪ್ರಧಾನವಾಗಿ ಆಸಕ್ತಿಯುಳ್ಳವರಾಗಿರಲಿಲ್ಲ.
18 1935 ರಲ್ಲಿ, ಪ್ರಕಟನೆ 7:9-17 ರಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಮಹಾ ಸಮೂಹವು ಎರಡನೆಯ ಸ್ವರ್ಗೀಯ ವರ್ಗವಾಗಿಲ್ಲ ಎಂಬ ವಿಷಯವನ್ನು, ಬೆಳಕಿನ ಒಂದು ಪ್ರಕಾಶಮಾನವಾದ ಬೆಳಗು ಪ್ರಕಟಿಸಿತು. ಆ ವಚನಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವವರು, ಸಂಪೂರ್ಣವಾಗಿ ನಂಬಿಗಸ್ತರಾಗಿರದ ಅಭಿಷಿಕ್ತರಲ್ಲಿ ಕೆಲವರಾಗಿದ್ದು, ಸಿಂಹಾಸನದಲ್ಲಿ ಕುಳಿತುಕೊಂಡು ಯೇಸು ಕ್ರಿಸ್ತನೊಂದಿಗೆ ರಾಜರೂ ಯಾಜಕರೂ ಆಗಿ ಆಳಿಕ್ವೆ ನಡಿಸುವುದರ ಬದಲು ಸಿಂಹಾಸನದ ಮುಂದೆ ನಿಂತಿದ್ದರೆಂದು ಭಾವಿಸಲ್ಪಟ್ಟಿತ್ತು. ಆದರೆ ಭಾಗಶಃ ನಂಬಿಗಸ್ತರಾಗಿರುವ ಕಲ್ಪನೆಯು ವಾಸ್ತವವಾಗಿ ಅಸ್ತಿತ್ವದಲ್ಲಿಲ್ಲ. ಒಬ್ಬನು ನಂಬಿಗಸ್ತನಾಗಿರಬೇಕು ಅಥವಾ ಅಪನಂಬಿಗಸ್ತನಾಗಿರಬೇಕು. ಆದುದರಿಂದ, ಎಲ್ಲಾ ಜನಾಂಗಗಳಿಂದ ಈಗ ಒಟ್ಟುಗೂಡಿಸಲ್ಪಡುತ್ತಿರುವ ಮತ್ತು ಯಾರ ನಿರೀಕ್ಷೆಗಳು ಐಹಿಕವಾಗಿವೆಯೋ ಆ ಅಸಂಖ್ಯಾತ ಮಹಾ ಸಮೂಹಕ್ಕೆ, ಈ ಪ್ರವಾದನೆಯು ಸೂಚಕವಾಗುತ್ತದೆಂದು ಅವಲೋಕಿಸಲ್ಪಟ್ಟಿತು. ಮತ್ತಾಯ 25:31-46ರ “ಕುರಿಗಳು” ಮತ್ತು ಯೋಹಾನ 10:16ರ “ಬೇರೆ ಕುರಿಗಳು” ಅವರಾಗಿದ್ದಾರೆ.
ಶಿಲುಬೆ—ಕ್ರೈಸ್ತೋಚಿತವಾದ ಒಂದು ಸಂಕೇತವಲ್ಲ
19, 20. ಶಿಲುಬೆಯು ನಿಜ ಕ್ರೈಸ್ತೋಚಿತವಾದ ಸಂಕೇತವಾಗಿರಸಾಧ್ಯವಿಲ್ಲವೇಕೆ?
19 ಅನೇಕ ವರ್ಷಗಳ ವರೆಗೆ ಬೈಬಲ್ ವಿದ್ಯಾರ್ಥಿಗಳು ಶಿಲುಬೆಯನ್ನು ಕ್ರೈಸ್ತತ್ವದ ಒಂದು ಪ್ರಮುಖ ಸಂಕೇತವಾಗಿ ಪ್ರಖ್ಯಾತಗೊಳಿಸಿದರು. “ಕ್ರಾಸ್ ಆ್ಯಂಡ್ ಕ್ರೌನ್” ಪಿನ್ ಸಹ ಅವರಲ್ಲಿತ್ತು. ಕಿಂಗ್ ಜೇಮ್ಸ್ ವರ್ಷನ್ ಗನುಸಾರ, ಯೇಸು ತನ್ನ ಹಿಂಬಾಲಕರಿಗೆ ತಮ್ಮ “ಶಿಲುಬೆ” ಯನ್ನು ಹೊತ್ತುಕೊಳ್ಳುವಂತೆ ಕೇಳಿಕೊಂಡನು, ಮತ್ತು ಆತನು ಶಿಲುಬೆಯೊಂದರ ಮೇಲೆ ವಧಿಸಲ್ಪಟ್ಟನೆಂದು ಅನೇಕರು ನಂಬಿದರು. (ಮತ್ತಾಯ 16:24; 27:32) ದಶಮಾನಗಳ ವರೆಗೆ ಈ ಸಂಕೇತವು ವಾಚ್ ಟವರ್ ಪತ್ರಿಕೆಯ ಮುಖಪುಟದ ಮೇಲೆ ಸಹ ಕಂಡುಬಂತು.
20 1936 ರಲ್ಲಿ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ರಿಚಸ್ ಎಂಬ ಪುಸ್ತಕವು, ಯೇಸು ಕ್ರಿಸ್ತನು ಒಂದು ಶಿಲುಬೆಯ ಮೇಲಲ್ಲ, ಬದಲಾಗಿ ನೆಟ್ಟನೆಯ ನಿಲುಗಂಬ, ಅಥವಾ ಕಂಬದ ಮೇಲೆ ವಧಿಸಲ್ಪಟ್ಟನೆಂದು ಸ್ಪಷ್ಟಪಡಿಸಿತು. ಒಂದು ಸಾಕ್ಷ್ಯಕ್ಕನುಸಾರ, ಕಿಂಗ್ ಜೇಮ್ಸ್ ವರ್ಷನ್ ನಲ್ಲಿ “ಶಿಲುಬೆ” ಎಂದು ನಿರೂಪಿಸಲ್ಪಟ್ಟಿರುವ (ಸ್ಟಾರೋಸ್) ಗ್ರೀಕ್ ಪದವು, “ಪ್ರಧಾನವಾಗಿ, ಒಂದು ನೆಟ್ಟನೆಯ ಮರಗೋಲು ಅಥವಾ ಕಂಬವನ್ನು ಸೂಚಿಸುತ್ತದೆ. [ಇದು] ಎರಡು ಅಡತ್ಡೊಲೆಯ ಶಿಲುಬೆಯ ಕ್ರೈಸ್ತ ಮಠೀಯ ರೂಪದಿಂದ . . . . ಎರಡನೆಯದ್ದು ಪುರಾತನ ಕಾಲಿಯ್ಡದಲ್ಲಿ ಆರಂಭಗೊಂಡಿತು, ಮತ್ತು ತಮ್ಮೂಸ್ ದೇವನ ಸಂಕೇತವಾಗಿ ಉಪಯೋಗಿಸಲ್ಪಟ್ಟಿತು.” ಮೂರ್ತಿಪೂಜಾ ನಿಷ್ಠವಾಗಿ ಪರಿಗಣಿಸುವುದಕ್ಕೆ ಬದಲಾಗಿ, ಯಾವುದರ ಮೇಲೆ ಯೇಸು ಶೂಲಕ್ಕೇರಿಸಲ್ಪಟ್ಟನೋ ಆ ಸಾಧನವನ್ನು ಹೇವರಿಕೆಯಿಂದ ವೀಕ್ಷಿಸತಕ್ಕದ್ದು.
21. ಮುಂದಿನ ಲೇಖನದಲ್ಲಿ ಯಾವುದು ಪರಿಗಣಿಸಲ್ಪಡುವುದು?
21 ಬೆಳಕಿನ ಪ್ರಧಾನವಾದ ಬೆಳಗುಗಳು ಮತ್ತು ಅಲ್ಪವಾದವುಗಳೆಂದು ಪರಿಗಣಿಸಲ್ಪಡುವ ಬೆಳಗುಗಳು, ಎರಡರ ಕುರಿತಾಗಿ ಇನ್ನೂ ಹೆಚ್ಚಿನ ಉದಾಹರಣೆಗಳಿವೆ. ಇವುಗಳ ಕುರಿತಾದ ಒಂದು ಚರ್ಚೆಗಾಗಿ, ದಯಮಾಡಿ ಮುಂದಿನ ಲೇಖನವನ್ನು ನೋಡಿರಿ.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇನ್ಕ್. ಮೂಲಕ ಪ್ರಕಾಶಿಸಲ್ಪಟ್ಟದ್ದು.
b ಸಕಾಲದಲ್ಲಿ, ಸಂಭವಿಸಿರುವವುಗಳಲ್ಲಿ ಅತ್ಯಂತ ಪ್ರಾಮುಖ್ಯವಾದ ಜನನವನ್ನು ಆಚರಿಸಸಾಧ್ಯವಿಲ್ಲದಿರುವಾಗ, ನಾವು ಯಾವುದೇ ಜನ್ಮದಿನವನ್ನು ಆಚರಿಸಬಾರದೆಂದು ಕಂಡುಕೊಳ್ಳಲಾಯಿತು. ಅಲ್ಲದೆ, ಇಸ್ರಾಯೇಲ್ಯರಾಗಲಿ ಆರಂಭದ ಕ್ರೈಸ್ತರಾಗಲಿ ಜನ್ಮದಿನಗಳನ್ನು ಆಚರಿಸಲಿಲ್ಲ. ಬೈಬಲು ಕೇವಲ ಎರಡು ಜನ್ಮದಿನಾಚರಣೆಗಳ ಕುರಿತು ಪ್ರಸ್ತಾಪಿಸುತ್ತದೆ; ಒಂದು ಫರೋಹನದ್ದು ಮತ್ತು ಇನ್ನೊಂದು ಹೆರೋದ ಅಂತಿಪ್ಪನದ್ದು. ಪ್ರತಿಯೊಂದು ಆಚರಣೆಯು ಒಂದು ಶಿರಶ್ಛೇದನದಿಂದ ಭಂಗಪಡಿಸಲ್ಪಟ್ಟಿತು. ಈ ಆಚರಣೆಗಳಿಗೆ ವಿಧರ್ಮಿ ಮೂಲಾರಂಭಗಳಿವೆ ಮತ್ತು ಜನ್ಮದಿನವೊಂದನ್ನು ಆಚರಿಸುತ್ತಿರುವವರನ್ನು ಮೇಲೇರಿಸುವ ಪ್ರವೃತ್ತಿಯುಳ್ಳವುಗಳಾಗಿರುವುದರಿಂದ ಜನ್ಮದಿನಗಳನ್ನು ಯೆಹೋವನ ಸಾಕ್ಷಿಗಳು ಆಚರಿಸುವುದಿಲ್ಲ.—ಆದಿಕಾಂಡ 40:20-22; ಮಾರ್ಕ 6:21-28.
c ಇದು ಕ್ರೈಸ್ತಪ್ರಪಂಚದ ಅನೇಕ ಪಂಗಡಗಳಿಂದ ಮಾಡಲ್ಪಟ್ಟಂತಹ ಒಂದು ತಪ್ಪಾಗಿತ್ತು. ಮಾರ್ಟಿನ್ ಲ್ಯೂತರ್ನ ಹಿಂಬಾಲಕರಿಗೆ ಅವನ ವೈರಿಗಳು ಕೊಟ್ಟ ಮತ್ತು ಅವರು ಅನಂತರ ಪರಿಗ್ರಹಿಸಿದ ಅಡ್ಡ ಹೆಸರು ಲ್ಯೂತರನರೆಂದಾಗಿತ್ತು. ತದ್ರೀತಿಯಲ್ಲಿ, ಬ್ಯಾಪ್ಟಿಸ್ಟರು ನಿಮಜ್ಜನ ದೀಕ್ಷಾಸ್ನಾನದ ಕುರಿತಾಗಿ ಸಾರಿದರ್ದಿಂದ ಅವರಿಗೆ ಹೊರಗಿನವರು ಕೊಟ್ಟಿದ್ದ ಅಡ್ಡ ಹೆಸರನ್ನು ಅವರು ಪರಿಗ್ರಹಿಸಿದರು. ಸುಮಾರಾಗಿ ತದ್ರೀತಿಯಲ್ಲಿ, ಮೆತೊಡಿಸ್ಟ್ ಅಲ್ಲದ ಒಬ್ಬ ವ್ಯಕ್ತಿಯಿಂದ ಅವರಿಗೆ ಕೊಡಲ್ಪಟ್ಟ ಹೆಸರನ್ನು ಮೆತೊಡಿಸ್ಟ್ಗಳು ಪರಿಗ್ರಹಿಸಿದರು. ಸೊಸೈಟಿ ಆಫ್ ಫ್ರೆಂಡ್ಸ್, ಕ್ವೇಕರ್ಸ್ ಎಂದು ಕರೆಯಲ್ಪಟ್ಟದ್ದು ಹೇಗೆ ಎಂಬುದರ ಕುರಿತು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಕ್ವೇಕರ್ ಎಂಬ ಶಬ್ದವು ಮೂಲತಃ, ಫಾಕ್ಸ್ [ಅದರ ಸ್ಥಾಪಕ]ನಿಗೆ ಮುಖಭಂಗದೋಪಾದಿ ಅರ್ಥೈಸಿದ್ದು, ಅವನು ಇಂಗ್ಲಿಷ್ ನ್ಯಾಯಾಧೀಶನೊಬ್ಬನಿಗೆ ‘ಕರ್ತನ ವಾಕ್ಯಕ್ಕೆ ಕಂಪಿಸು’ ವಂತೆ ಹೇಳಿದ್ದನು. ನ್ಯಾಯಾಧೀಶನು ಫಾಕ್ಸ್ನನ್ನು ಒಬ್ಬ ‘ಕ್ವೇಕರ್’ (ಕಂಪಿಸುವವನು) ಎಂದು ಕರೆದನು.”
ನೀವು ನೆನಪಿಸಿಕೊಳ್ಳುತ್ತೀರೊ?
◻ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯಾರು, ಮತ್ತು “ಮನೆಯವರು” ಯಾರಾಗಿದ್ದಾರೆ?
◻ ಆಧುನಿಕ ಸಮಯಗಳಲ್ಲಿ ಆರಂಭದ ಬೆಳಕಿನ ಬೆಳಗುಗಳಲ್ಲಿ ಕೆಲವು ಯಾವುವಾಗಿದ್ದವು?
◻ ಯೆಹೋವನ ಸಾಕ್ಷಿಗಳು ಎಂಬ ಹೊಸ ಹೆಸರು ಯೋಗ್ಯವಾಗಿತ್ತೇಕೆ?
◻ ಯಾವ ಆಶ್ಚರ್ಯಕರವಾದ ಸತ್ಯತೆಗಳು 1935 ರಲ್ಲಿ ಪ್ರಕಟಿಸಲ್ಪಟ್ಟವು?
[ಪುಟ 17 ರಲ್ಲಿರುವ ಚಿತ್ರ]
ಸಿ. ಟಿ. ರಸ್ಸಲ್ ಮತ್ತು ಅವರ ಸಹವಾಸಿಗಳು ಆತ್ಮಿಕ ಬೆಳಕನ್ನು ಹಬ್ಬಿಸಿದರು, ಆದರೆ ಎಲ್ಲ ಪ್ರಶಂಸೆಯು ಯೆಹೋವನಿಗೆ ಸಂದಿತು