“ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?”
‘ತನ್ನ ಮನೆಯವರ ಮೇಲೆ ಯಜಮಾನನು ನೇಮಿಸಿದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?’—ಮತ್ತಾ. 24:45.
1, 2. (1) ಯಾವ ಮಾಧ್ಯಮವನ್ನು ಬಳಸಿ ಯೇಸು ನಮ್ಮನ್ನು ಉಣಿಸುತ್ತಿದ್ದಾನೆ? (2) ಅದನ್ನು ಕಂಡುಹಿಡಿಯುವುದು ಯಾಕೆ ಪ್ರಾಮುಖ್ಯ?
ಒಬ್ಬ ಸಹೋದರಿ ಮುಖ್ಯ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಹೋದರರಿಗೆ ಶ್ಲಾಘಿಸುತ್ತಾ ಪತ್ರ ಬರೆದದ್ದು: “ಸಹೋದರರೇ, ಎಷ್ಟೋ ಬಾರಿ ನನಗೆ ತುಂಬ ಅವಶ್ಯವಿದ್ದ ಮಾಹಿತಿಯನ್ನೇ ಸರಿಯಾದ ಸಮಯಕ್ಕೆ ಸಾಹಿತ್ಯದಲ್ಲಿ ಒದಗಿಸಿದ್ದೀರಿ!” ನಿಮಗೂ ಹೀಗೇ ಅನಿಸುತ್ತಾ? ಹೌದು, ನಮಗೂ ಅನೇಕ ಬಾರಿ ಹೀಗನಿಸುತ್ತೆ. ಆದರೆ ಇದು ಆಶ್ಚರ್ಯದ ವಿಷಯವಲ್ಲ. ಯಾಕೆ?
2 ಯಾಕೆಂದರೆ, ನಾವು ತಕ್ಕ ಸಮಯದಲ್ಲಿ ಪಡೆಯುತ್ತಿರುವ ಆಧ್ಯಾತ್ಮಿಕ ಆಹಾರ, ಸಭೆಯ ಶಿರಸ್ಸಾಗಿರುವ ಯೇಸು ನಮಗೆ ಉಣಿಸುವೆನೆಂದು ಕೊಟ್ಟಿರುವ ಮಾತನ್ನು ನೆರವೇರಿಸುತ್ತಿದ್ದಾನೆ ಎಂಬುದಕ್ಕೆ ಸಾಕ್ಷ್ಯ. ಹೀಗೆ ಉಣಿಸಲು ಆತನು ಯಾರನ್ನು ಬಳಸುತ್ತಿದ್ದಾನೆ? ಯೇಸು ತನ್ನ ಸಾನ್ನಿಧ್ಯದ ಕುರಿತಾಗಿ ಸೂಚನೆಗಳನ್ನು ನೀಡುವಾಗ, “ತನ್ನ ಮನೆಯವರಿಗೆ ತಕ್ಕ ಸಮಯಕ್ಕೆ ಆಹಾರವನ್ನು” ಕೊಡಲು “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳ”ನ್ನು ಬಳಸುವೆನೆಂದು ಹೇಳಿದ್ದನು.a (ಮತ್ತಾಯ 24:45-47 ಓದಿ.) ಈ ಕಡೇ ದಿವಸಗಳಲ್ಲಿ ಆ ನಂಬಿಗಸ್ತ ಆಳನ್ನು ಮಾಧ್ಯಮವಾಗಿ ಬಳಸಿ ಯೇಸು ತನ್ನ ನಿಜ ಹಿಂಬಾಲಕರಿಗೆ ಆಹಾರ ಉಣಿಸುತ್ತಿದ್ದಾನೆ. ಹಾಗಾಗಿ ನಾವು ಆ ನಂಬಿಗಸ್ತ ಆಳು ಯಾರೆಂದು ಕಂಡುಹಿಡಿಯಬೇಕು. ಅದು ತುಂಬ ಪ್ರಾಮುಖ್ಯ. ಯಾಕೆಂದರೆ ನಮ್ಮ ಆಧ್ಯಾತ್ಮಿಕ ಆರೋಗ್ಯ ಹಾಗೂ ದೇವರೊಂದಿಗಿನ ಸಂಬಂಧ ಅದೇ ಮಾಧ್ಯಮದ ಮೇಲೆ ಹೊಂದಿಕೊಂಡಿದೆ.—ಮತ್ತಾಯ 4:4; ಯೋಹಾನ 17:3.
3. ನಂಬಿಗಸ್ತ ಆಳಿನ ಬಗ್ಗೆ ನಮ್ಮ ಪ್ರಕಾಶನಗಳು ಯಾವ ವಿವರಣೆ ಕೊಟ್ಟಿದ್ದವು?
3 ನಂಬಿಗಸ್ತ ಆಳಿನ ಬಗ್ಗೆ ಯೇಸು ಹೇಳಿದ ದೃಷ್ಟಾಂತವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ಈ ಮುಂಚೆ ನಮ್ಮ ಪ್ರಕಾಶನಗಳಲ್ಲಿ ಹೀಗೆ ಹೇಳಲಾಗಿತ್ತು: ಕ್ರಿ.ಶ. 33ರ ಪಂಚಾಶತ್ತಮದಂದು ಯೇಸು ತನ್ನ ಮನೆಯವರ ಮೇಲೆ ನಂಬಿಗಸ್ತ ಆಳನ್ನು ನೇಮಿಸಿದನು. ಆವತ್ತಿನಿಂದ ಹಿಡಿದು, ‘ಒಂದು ನಿರ್ದಿಷ್ಟ ಸಮಯದಲ್ಲಿ ಭೂಮಿಯ ಮೇಲೆ ಬದುಕಿರುವ ಎಲ್ಲ ಅಭಿಷಿಕ್ತ ಕ್ರೈಸ್ತರು ಒಂದು ಗುಂಪಾಗಿ’ ಆಳು ಆಗಿದ್ದಾರೆ. ಮನೆಯವರು ಅಂದರೆ ಕೂಡ ಅದೇ ಗುಂಪಿನ ಸದಸ್ಯರನ್ನು ಸೂಚಿಸುತ್ತದೆ. ಆದರೆ ಗುಂಪಾಗಿ ಅಲ್ಲ, ಒಬ್ಬೊಬ್ಬರನ್ನಾಗಿ. 1919ರಲ್ಲಿ ಯೇಸು ಈ ನಂಬಿಗಸ್ತ ಆಳನ್ನು “ತನ್ನ ಎಲ್ಲ ಆಸ್ತಿಯ ಮೇಲೆ” ಅಂದರೆ ಭೂಮಿಯಲ್ಲಿರುವ ರಾಜ್ಯಕ್ಕೆ ಸಂಬಂಧಪಟ್ಟ ಎಲ್ಲದರ ಮೇಲೆ ನೇಮಿಸಿದನು. ಆದರೆ, ಶ್ರದ್ಧಾಪೂರ್ವಕ ಅಧ್ಯಯನ ಮತ್ತು ಪ್ರಾರ್ಥನಾಪೂರ್ವಕ ಧ್ಯಾನದಿಂದ, ಯೇಸು ಹೇಳಿದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ ದೃಷ್ಟಾಂತದ ಬಗ್ಗೆ ನಮಗಿದ್ದ ತಿಳಿವಳಿಕೆಯನ್ನು ತಿದ್ದಬೇಕೆಂದು ಗೊತ್ತಾಗಿದೆ. (ಜ್ಞಾನೋ. 4:18) ಆ ದೃಷ್ಟಾಂತವನ್ನು ಕೂಲಂಕಷವಾಗಿ ಅಧ್ಯಯನ ಮಾಡೋಣ. ಮತ್ತು ನಮಗೆ ಭೂನಿರೀಕ್ಷೆಯಿರಲಿ, ಸ್ವರ್ಗೀಯ ನಿರೀಕ್ಷೆಯಿರಲಿ, ನಾವು ಹೇಗೆ ಆ ದೃಷ್ಟಾಂತದ ಭಾಗವಾಗಿದ್ದೇವೆ ಎಂದು ನೋಡೋಣ.
ಈ ದೃಷ್ಟಾಂತ ಯಾವಾಗ ನೆರವೇರಿತು?
4-6. ನಂಬಿಗಸ್ತ ಆಳಿನ ಕುರಿತಾದ ಯೇಸುವಿನ ದೃಷ್ಟಾಂತ 1914ರ ನಂತರವೇ ನೆರವೇರಲಿತ್ತು ಎಂದು ನಮಗೆ ಹೇಗೆ ಗೊತ್ತು?
4 ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ ದೃಷ್ಟಾಂತದ ಪೂರ್ವಾಪರ ಗಮನಿಸುವುದಾದರೆ ಅದರ ನೆರವೇರಿಕೆ ಕ್ರಿ.ಶ. 33ರ ಪಂಚಾಶತ್ತಮದಂದಲ್ಲ, ಈ ಕಡೇ ದಿವಸಗಳಲ್ಲಿ ಆಗುತ್ತಿದೆಯೆಂದು ಗೊತ್ತಾಗುತ್ತೆ. ಈ ರೀತಿ ಹೇಳಲು ಬೈಬಲಿನಿಂದ ಕೆಲವು ಆಧಾರಗಳನ್ನು ಗಮನಿಸೋಣ.
5 ನಂಬಿಗಸ್ತ ಆಳಿನ ಕುರಿತಾದ ದೃಷ್ಟಾಂತ ಯೇಸು ‘ತನ್ನ ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆಯ’ ಬಗ್ಗೆ ಹೇಳಿದ ಪ್ರವಾದನೆಯ ಭಾಗವಾಗಿದೆ. (ಮತ್ತಾ. 24:3) ಮತ್ತಾಯ 24:4-22 ರಲ್ಲಿ ದಾಖಲಾಗಿರುವ ಆ ಪ್ರವಾದನೆಯ ಮೊದಲ ಭಾಗಕ್ಕೆ ಎರಡು ನೆರವೇರಿಕೆಗಳಿವೆ. ಮೊದಲನೆಯದು, ಕ್ರಿ.ಶ. 33ರಿಂದ ಕ್ರಿ.ಶ. 70ರಲ್ಲಿ. ಎರಡನೆಯದು, ಮಹತ್ತರ ನೆರವೇರಿಕೆ ನಮ್ಮ ದಿನಗಳಲ್ಲಿ. ಹಾಗಂತ ನಂಬಿಗಸ್ತ ಆಳಿನ ಕುರಿತಾಗಿ ಯೇಸು ಆಡಿದ ಮಾತುಗಳಿಗೆ ಸಹ ಎರಡು ನೆರವೇರಿಕೆಗಳಿವೆ ಎಂದಾ? ಇಲ್ಲ.
6 ಮತ್ತಾಯ 24:29ರಿಂದ ಆರಂಭಿಸಿ ಯೇಸು ಪ್ರಮುಖವಾಗಿ ನಮ್ಮ ದಿನಗಳಲ್ಲಿ ಆಗಲಿದ್ದ ಘಟನೆಗಳ ಕುರಿತು ಹೇಳುತ್ತಿದ್ದನು. (ಮತ್ತಾಯ 24:30, 42, 44 ಓದಿ.) ಮಹಾ ಸಂಕಟದ ಸಮಯದಲ್ಲಿ ಏನಾಗಲಿದೆ ಎಂದು ತಿಳಿಸುತ್ತಾ ಆತನು ಹೇಳಿದ್ದು: ‘ಮನುಷ್ಯಕುಮಾರನು ಆಕಾಶದ ಮೇಘಗಳ ಮೇಲೆ ಬರುವುದನ್ನು’ ಜನರು ಕಾಣುವರು. ನಂತರ ಆತನು, ಕಡೇ ದಿವಸಗಳಲ್ಲಿ ಜೀವಿಸುತ್ತಿರುವವರು ಎಚ್ಚರವಾಗಿರಬೇಕೆಂದು ಹೇಳಿದನು. ಆತನು ಹೇಳಿದ್ದು: “ಕರ್ತನು ಯಾವ ದಿನದಲ್ಲಿ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲ” ಮತ್ತು “ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”b ಹೀಗೆ ಕಡೇ ದಿವಸಗಳಲ್ಲಿ ಜರುಗಲಿರುವ ಘಟನೆಗಳ ಕುರಿತು ಮಾತಾಡುತ್ತಿದ್ದಾಗ ಯೇಸು ನಂಬಿಗಸ್ತ ಆಳಿನ ಕುರಿತಾದ ದೃಷ್ಟಾಂತ ಹೇಳುತ್ತಾನೆ. ಹಾಗಾಗಿ ನಂಬಿಗಸ್ತ ಆಳಿನ ಬಗ್ಗೆ ಆತನಾಡಿದ ಮಾತುಗಳು ಕಡೇ ದಿವಸಗಳು ಆರಂಭವಾದ ನಂತರ ಅಂದರೆ 1914ರ ನಂತರ ನೆರವೇರಲಿದ್ದವು ಎಂಬ ನಿರ್ಧಾರಕ್ಕೆ ನಾವು ಬರಬಹುದು. ಇದು ಒಪ್ಪತಕ್ಕ ನಿರ್ಧಾರ. ಯಾಕೆ?
7. (1) ಕೊಯ್ಲಿನ ಕಾಲ ಆರಂಭವಾದಂತೆ ಯಾವ ಪ್ರಾಮುಖ್ಯ ಪ್ರಶ್ನೆ ಎದ್ದಿತು? (2) ಏಕೆ?
7 ಒಂದು ಕ್ಷಣ ಈ ಪ್ರಶ್ನೆಯ ಕುರಿತು ಯೋಚಿಸಿ: “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?” ಒಂದನೇ ಶತಮಾನದಲ್ಲಿ ಈ ಪ್ರಶ್ನೆ ಏಳುವ ಸಾಧ್ಯತೆಯಿರಲಿಲ್ಲ. ಏಕೆಂದರೆ, ಹಿಂದಿನ ಲೇಖನದಲ್ಲಿ ನೋಡಿದಂತೆ ಅಪೊಸ್ತಲರು ಅದ್ಭುತಕಾರ್ಯಗಳನ್ನು ಮಾಡುತ್ತಿದ್ದರು. ಇತರರಿಗೂ ಅದ್ಭುತ ವರಗಳನ್ನು ಕೊಟ್ಟರು. ಇದು, ಅವರಿಗೆ ದೈವಿಕ ಸಹಾಯವಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿತ್ತು. (ಅ. ಕಾ. 5:12) ಹಾಗಾಗಿ ಕ್ರಿಸ್ತನು ಉಸ್ತುವಾರಿ ಮಾಡಲು ಯಾರನ್ನು ನೇಮಿಸಿದ್ದಾನೆ ಎಂಬ ಪ್ರಶ್ನೆ ಬರುವ ಪ್ರಮೇಯವೇ ಇರಲಿಲ್ಲ. ಆದರೆ 1914ರಲ್ಲಿ ಸನ್ನಿವೇಶ ಬದಲಾಗಿತ್ತು. ಆ ವರ್ಷ ಕೊಯ್ಲಿನ ಕಾಲ ಆರಂಭವಾಯಿತು. ಕಳೆಗಳನ್ನು ಗೋದಿಯಿಂದ ಬೇರ್ಪಡಿಸುವ ಸಮಯವು ಕೊನೆಗೂ ಬಂತು. (ಮತ್ತಾ. 13:36-43) ಈ ಕೊಯ್ಲಿನ ಕಾಲ ಆರಂಭವಾದಂತೆ ಎದ್ದಂಥ ಪ್ರಾಮುಖ್ಯ ಪ್ರಶ್ನೆಯೇನೆಂದರೆ, ಇಷ್ಟು ಜನ ನಕಲಿ ಕ್ರೈಸ್ತರು ತಾವು ಕ್ರಿಸ್ತನ ನಿಜ ಹಿಂಬಾಲಕರು ಎಂದು ಹೇಳಿಕೊಳ್ಳುತ್ತಿರುವಾಗ ಗೋದಿಯಂತಿರುವ ಅಭಿಷಿಕ್ತ ಕ್ರೈಸ್ತರು ಯಾರೆಂದು ಕಂಡುಹಿಡಿಯುವುದಾದರೂ ಹೇಗೆ? ನಂಬಿಗಸ್ತ ಆಳಿನ ದೃಷ್ಟಾಂತ ಇದಕ್ಕೆ ಉತ್ತರವನ್ನು ಕೊಡುತ್ತೆ. ಯಾರಿಗೆ ಸಮೃದ್ಧ ಆಧ್ಯಾತ್ಮಿಕ ಆಹಾರ ಸಿಗುತ್ತಿರುತ್ತೋ ಅವರೇ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರು.
ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಯಾರು?
8. ನಂಬಿಗಸ್ತ ಆಳು ಅಭಿಷಿಕ್ತ ಕ್ರೈಸ್ತರಿಂದ ಕೂಡಿದೆಯೆಂದು ನಾವು ಹೇಗೆ ಹೇಳಬಹುದು?
8 ನಂಬಿಗಸ್ತ ಆಳು, ಅಭಿಷಿಕ್ತ ಕ್ರೈಸ್ತರಿಂದ ರಚಿತವಾಗಿರಲೇಬೇಕು. ಅವರನ್ನು ‘ರಾಜವಂಶಸ್ಥರಾದ ಯಾಜಕರು’ ಎಂದು ಕರೆಯಲಾಗಿದೆ. ಇವರು ತಮ್ಮನ್ನು “ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವುದಕ್ಕಾಗಿ” ನೇಮಿಸಲ್ಪಟ್ಟಿರುತ್ತಾರೆ. (1 ಪೇತ್ರ 2:9) ಹಾಗಾಗಿ ‘ರಾಜವಂಶಸ್ಥರಾದ ಯಾಜಕರಲ್ಲಿ’ ಸೇರಿರುವವರೇ ತಮ್ಮ ಜೊತೆವಿಶ್ವಾಸಿಗಳಿಗೆ ಸತ್ಯವನ್ನು ಬೋಧಿಸುವ ಕೆಲಸದಲ್ಲಿ ನೇರವಾಗಿ ಪಾಲು ತಕ್ಕೊಳ್ಳುತ್ತಾರೆ.—ಮಲಾ. 2:7; ಪ್ರಕ. 12:17.
9. ಎಲ್ಲ ಅಭಿಷಿಕ್ತ ಕ್ರೈಸ್ತರು ನಂಬಿಗಸ್ತ ಆಳಿನ ಭಾಗವಾಗಿದ್ದಾರಾ? ವಿವರಿಸಿ.
9 ಭೂಮಿಯಲ್ಲಿರುವ ಎಲ್ಲ ಅಭಿಷಿಕ್ತ ಕ್ರೈಸ್ತರು ನಂಬಿಗಸ್ತ ಆಳಿನ ಭಾಗವಾಗಿದ್ದಾರಾ? ಇಲ್ಲ. ಯಾಕೆಂದರೆ ಭೂಮಿಯಾದ್ಯಂತ ಇರುವ ಜೊತೆ ಆರಾಧಕರಿಗೆ ಆಧ್ಯಾತ್ಮಿಕ ಆಹಾರವನ್ನು ಸರಬರಾಯಿ ಮಾಡುವುದರಲ್ಲಿ ಎಲ್ಲ ಅಭಿಷಿಕ್ತರು ಪಾಲು ತೆಗೆದುಕೊಳ್ಳುತ್ತಿಲ್ಲ. ಗೋದಿಯಂತಿರುವ ಅಭಿಷಿಕ್ತ ಕ್ರೈಸ್ತರಲ್ಲಿ ಕೆಲವರು ತಮ್ಮ ತಮ್ಮ ಸಭೆಗಳಲ್ಲಿ ಶುಶ್ರೂಷಾ ಸೇವಕರಾಗಿ, ಕೆಲವರು ಹಿರಿಯರಾಗಿ ಸೇವೆ ಸಲ್ಲಿಸುತ್ತಿರಬಹುದು. ಅವರು ಮನೆಯಿಂದ-ಮನೆ ಸೇವೆಯಲ್ಲಿ, ಸಭೆಗಳಲ್ಲಿ ಬೋಧಿಸುತ್ತಾರೆ. ಮುಖ್ಯ ಕಾರ್ಯಾಲಯದಿಂದ ಬರುವ ನಿರ್ದೇಶನಗಳಿಗೆ ನಿಷ್ಠೆಯಿಂದ ಬೆಂಬಲ ನೀಡುತ್ತಾರೆ. ಆದರೆ ಲೋಕವ್ಯಾಪಕ ಸಹೋದರರಿಗೆ ಹಂಚಲಾಗುತ್ತಿರುವ ಆಧ್ಯಾತ್ಮಿಕ ಆಹಾರದ ತಯಾರಿಯಲ್ಲಿ ಅವರು ಭಾಗಿಗಳಾಗಿಲ್ಲ. ಅದಲ್ಲದೆ ಅಭಿಷಿಕ್ತರಲ್ಲಿ ಸ್ತ್ರೀಯರು ಸಹ ಇದ್ದಾರೆ. ದೀನ ಸಹೋದರಿಯರಾದ ಇವರು ಯಾವತ್ತೂ ಸಭೆಯಲ್ಲಿ ಬೋಧಕರಾಗಬೇಕೆಂದು ಬಯಸುವುದಿಲ್ಲ.—1 ಕೊರಿಂ. 11:3; 14:34.
10. ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಯಾರು?
10 ಹಾಗಾದರೆ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಯಾರು? ಕೆಲವೇ ಕೈಗಳಿಂದ ಸಾವಿರಾರು ಜನರಿಗೆ ಆಹಾರ ಹಂಚುವ ಯೇಸುವಿನ ಮಾದರಿಯನ್ನು ಮನಸ್ಸಿನಲ್ಲಿಟ್ಟ ಜನರು ಇವರಾಗಿದ್ದಾರೆ. ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಆಧ್ಯಾತ್ಮಿಕ ಆಹಾರವನ್ನು ತಯಾರಿಸಿ, ಹಂಚುವುದರಲ್ಲಿ ನೇರವಾಗಿ ಪಾಲಿಗರಾಗಿರುವ ಅಭಿಷಿಕ್ತ ಕ್ರೈಸ್ತರ ಚಿಕ್ಕ ಗುಂಪೇ ಈ ಆಳು. ಕಡೇ ದಿವಸಗಳ ಆರಂಭದಿಂದ ಇಂದಿನವರೆಗೂ ನಂಬಿಗಸ್ತ ಆಳಿನ ಭಾಗವಾಗಿರುವ ಅಭಿಷಿಕ್ತ ಕ್ರೈಸ್ತರು ಒಟ್ಟಾಗಿ ಮುಖ್ಯ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಲವು ದಶಕಗಳ ಹಿಂದೆ ಆ ಚಿಕ್ಕ ಗುಂಪನ್ನು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಎಂದು ಕರೆಯಲಾಯಿತು. ಈ ಆಳಿನಲ್ಲಿ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳಿರುವುದಾದರೂ ಯೇಸು ತನ್ನ ದೃಷ್ಟಾಂತದಲ್ಲಿ ‘ಆಳು’ ಎಂದು ಏಕವಚನದಲ್ಲಿ ಕರೆದಿದ್ದಾನೆ. ಹಾಗಾಗಿ ಆಡಳಿತ ಮಂಡಲಿ ನಿರ್ಣಯಗಳನ್ನು ಮಾಡುವಾಗ ಕೂಡಿ ಮಾಡುತ್ತದೆ.
‘ಮನೆಯವರು’ ಅಂದರೆ ಯಾರು?
11, 12. (1) ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ಯಾವ ಎರಡು ನೇಮಕಗಳನ್ನು ಪಡೆಯಲಿತ್ತು? (2) ಯೇಸು ನಂಬಿಗಸ್ತ ಆಳನ್ನು ಮನೆಯವರ ಮೇಲೆ ಯಾವಾಗ ನೇಮಿಸಿದನು? (3) ನಂಬಿಗಸ್ತ ಆಳನ್ನಾಗಿ ಯೇಸು ಯಾರನ್ನು ಆರಿಸಿಕೊಂಡನು?
11 ಯೇಸು ಹೇಳಿದ ದೃಷ್ಟಾಂತದಲ್ಲಿ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ ಎರಡು ಬೇರೆಬೇರೆ ನೇಮಕ ಕೊಡಲಾಯಿತು. ಒಂದನೇದಾಗಿ ಮನೆಯವರ ಮೇಲೆ ನೇಮಕ, ಎರಡನೇದಾಗಿ ಯಜಮಾನನ ಎಲ್ಲ ಆಸ್ತಿಯ ಮೇಲೆ ನೇಮಕ. ಈ ದೃಷ್ಟಾಂತದ ನೆರವೇರಿಕೆ ಕಡೇ ದಿವಸಗಳಲ್ಲೇ ಆಗುವುದರಿಂದ, ಆಳು ಈ ಎರಡೂ ನೇಮಕಗಳನ್ನು ಯೇಸುವಿನ ಸಾನ್ನಿಧ್ಯದ ನಂತರ ಅಂದರೆ ಆತನು 1914ರಲ್ಲಿ ರಾಜನಾದ ನಂತರವೇ ಪಡೆಯಬೇಕು.
12 ಯೇಸು ನಂಬಿಗಸ್ತ ಆಳನ್ನು ಮನೆಯವರ ಮೇಲೆ ಯಾವಾಗ ನೇಮಿಸಿದನು? ಈ ಪ್ರಶ್ನೆಗೆ ಉತ್ತರ ಪಡೆಯಲು ನಾವು 1914ನೇ ವರ್ಷಕ್ಕೆ ಹೋಗೋಣ. ಕೊಯ್ಲಿನ ಕಾಲದ ಆರಂಭ ಅದಾಗಿತ್ತು. ನಾವು ಈಗಾಗಲೇ ಕಲಿತಂತೆ ಆಗ ಅನೇಕ ಗುಂಪಿನವರು ತಾವು ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದರು. ಹಾಗಾದರೆ ಯೇಸು ಯಾವ ಗುಂಪಿನಿಂದ ನಂಬಿಗಸ್ತ ಆಳನ್ನು ಆರಿಸಲಿದ್ದನು? ಈ ಪ್ರಶ್ನೆಗೆ ಉತ್ತರ, ಯೇಸು ತನ್ನ ತಂದೆಯೊಂದಿಗೆ ಆಲಯವನ್ನು ಅಂದರೆ ಆರಾಧನೆಗಾಗಿ ಇದ್ದ ಆಧ್ಯಾತ್ಮಿಕ ಏರ್ಪಾಡನ್ನು ಪರೀಕ್ಷಿಸಿದ ನಂತರ ಸಿಗಲಿತ್ತು. ಈ ಪರೀಕ್ಷೆ 1914ರಿಂದ 1919ರ ಆರಂಭದ ವರೆಗೆ ನಡೆಯಿತು.c (ಮಲಾ. 3:1) ಆಗ ಅವರಿಗೆ ಒಂದು ಚಿಕ್ಕ ಗುಂಪನ್ನು ನೋಡಿ ತುಂಬ ಖುಷಿಯಾಯಿತು. ಅವರೇ ನಿಷ್ಠಾವಂತ ‘ಬೈಬಲ್ ವಿದ್ಯಾರ್ಥಿಗಳು.’ ಅವರು ಯೆಹೋವ ದೇವರಿಗೆ ಮತ್ತು ಆತನ ವಾಕ್ಯಕ್ಕೆ ಹೃತ್ಪೂರ್ವಕವಾಗಿ ಅಂಟಿಕೊಂಡಿದ್ದರು. ಹಾಗಿದ್ದರೂ ಅವರನ್ನು ಸ್ವಲ್ಪಮಟ್ಟಿಗೆ ಶುದ್ಧೀಕರಿಸುವ ಜರೂರಿಯಿತ್ತು. ಆ ಪರೀಕ್ಷೆಗೆ ಮತ್ತು ಶುದ್ಧೀಕರಣಕ್ಕೆ ಅವರು ದೀನತೆಯಿಂದ ಪ್ರತಿಕ್ರಿಯಿಸಿದರು. (ಮಲಾ. 3:2-4) ಈ ನಂಬಿಗಸ್ತ ಬೈಬಲ್ ವಿದ್ಯಾರ್ಥಿಗಳೇ ಗೋದಿಯಂತಿದ್ದ ಸತ್ಯ ಕ್ರೈಸ್ತರಾಗಿದ್ದರು. 1919ರಲ್ಲಿ ಆಧ್ಯಾತ್ಮಿಕ ಪುನಃಸ್ಥಾಪನೆಯ ಸಮಯದಲ್ಲಿ ಯೇಸು ಅವರಲ್ಲಿಯೇ ಕೆಲವು ಸಮರ್ಥ ಅಭಿಷಿಕ್ತ ಸಹೋದರರನ್ನು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಾಗಿ ಆರಿಸಿಕೊಂಡನು. ಅವರನ್ನು ತನ್ನ ಮನೆಯವರ ಮೇಲೆ ನೇಮಿಸಿದನು.
13. ಮನೆಯವರಲ್ಲಿ ಯಾರೆಲ್ಲ ಸೇರಿದ್ದಾರೆ? ಮತ್ತು ಯಾಕೆ?
13 ಮನೆಯವರು ಅಂದರೆ ಯಾರು? ಚುಟುಕಾಗಿ ಹೇಳುವುದಾದರೆ, ಯಾರು ಆಹಾರವನ್ನು ಪಡೆಯುತ್ತಾರೋ ಅವರು. ಕಡೇ ದಿವಸಗಳ ಆರಂಭವಾದಾಗ ‘ಮನೆಯವರೆಲ್ಲರೂ’ ಅಭಿಷಿಕ್ತರಾಗಿದ್ದರು. ನಂತರ ಮನೆಯವರಲ್ಲಿ ಬೇರೆ ಕುರಿಗಳಾಗಿರುವ ಮಹಾ ಸಮೂಹದವರು ಕೂಡ ಸೇರಿದರು. ಈಗ ಕ್ರಿಸ್ತನ ನಾಯಕತ್ವದ ಕೆಳಗಿರುವ ‘ಒಂದೇ ಹಿಂಡಿನಲ್ಲಿ’ ಬೇರೆ ಕುರಿಗಳೇ ಹೆಚ್ಚಿನವರಾಗಿದ್ದಾರೆ. (ಯೋಹಾ. 10:16) ತಕ್ಕ ಸಮಯದಲ್ಲಿ ನಂಬಿಗಸ್ತ ಆಳಿನಿಂದ ಒದಗಿಬರುವ ಅದೇ ಆಧ್ಯಾತ್ಮಿಕ ಆಹಾರದಿಂದ ಎರಡೂ ಗುಂಪುಗಳು ಪ್ರಯೋಜನ ಪಡೆಯುತ್ತವೆ. ನಂಬಿಗಸ್ತ ಆಳಾಗಿರುವ ಆಡಳಿತ ಮಂಡಲಿಯ ಬಗ್ಗೆ ಏನು? ಆ ಸಹೋದರರಿಗೆ ಸಹ ಆಧ್ಯಾತ್ಮಿಕ ಆಹಾರ ಬೇಕು. ಹಾಗಾಗಿ ಅವರು, ತಾವು ಸಹ ವೈಯಕ್ತಿಕವಾಗಿ ಯೇಸುವಿನ ಇತರ ಹಿಂಬಾಲಕರಂತೆಯೇ ‘ಮನೆಯವರಾಗಿದ್ದೇವೆ’ ಎಂದು ದೀನತೆಯಿಂದ ಒಪ್ಪಿಕೊಳ್ಳುತ್ತಾರೆ.
14. (1) ನಂಬಿಗಸ್ತ ಆಳಿಗೆ ಯಾವ ಉಸ್ತುವಾರಿ ವಹಿಸಲಾಗಿದೆ? (2) ಇದರಲ್ಲಿ ಏನೆಲ್ಲ ಸೇರಿದೆ? (3) ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ ಯೇಸು ಏನೆಂದು ಎಚ್ಚರಿಸಿದನು? (“ಆದರೆ ಆ ಕೆಟ್ಟ ಆಳು ಎಂದಾದರೂ . . . ” ಎಂಬ ಚೌಕ ನೋಡಿ.)
14 ಯೇಸು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ ಭಾರಿ ಜವಾಬ್ದಾರಿಯನ್ನು ಕೊಟ್ಟನು. ಬೈಬಲಿನ ಸಮಯಗಳಲ್ಲಿ, ಒಬ್ಬ ಭರವಸಾರ್ಹ ಆಳು ಅಥವಾ ಮನೆವಾರ್ತೆಯವನಿಗೆ ಇಡೀ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿಯಿತ್ತು. (ಲೂಕ 12:42) ಹಾಗಾಗಿ ಭೂಮಿಯ ಮೇಲೆ ಕ್ರಿಸ್ತನಿಗೆ ಸೇರಿರುವ ಎಲ್ಲದರ ಉಸ್ತುವಾರಿ ಮಾಡುವ ಜವಾಬ್ದಾರಿಯನ್ನು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿಗೆ ಕೊಡಲಾಗಿದೆ. ಈ ಜವಾಬ್ದಾರಿಯಲ್ಲಿ ಸೊತ್ತುಗಳು, ಸುವಾರ್ತಾ ಚಟುವಟಿಕೆ, ಸಮ್ಮೇಳನ-ಅಧಿವೇಶನ ಕಾರ್ಯಕ್ರಮಗಳು ಮತ್ತು ಸುವಾರ್ತೆಯಲ್ಲಿ ಬಳಸಲು, ವೈಯಕ್ತಿಕವಾಗಿ ಹಾಗೂ ಸಭೆಯಲ್ಲಿ ಅಧ್ಯಯನ ಮಾಡಲು ಬೇಕಾಗುವ ಬೈಬಲ್ ಸಾಹಿತ್ಯವನ್ನು ತಯಾರಿಸುವುದು ಸೇರಿದೆ. ಮನೆಯವರು ಆಧ್ಯಾತ್ಮಿಕ ಆಹಾರಕ್ಕಾಗಿ ಈ ಸಂಘಟಿತ ಗುಂಪಿನ ಮೇಲೆಯೇ ಆತುಕೊಂಡಿದ್ದಾರೆ.
ಯಜಮಾನನ ಎಲ್ಲ ಆಸ್ತಿಯ ಮೇಲೆ ಆಳಿನ ನೇಮಕ ಯಾವಾಗ?
15, 16. ಯೇಸು ನಂಬಿಗಸ್ತ ಆಳನ್ನು ತನ್ನ ಎಲ್ಲ ಆಸ್ತಿಯ ಮೇಲೆ ಯಾವಾಗ ನೇಮಿಸುವನು?
15 ಯೇಸು ಎರಡನೇ ನೇಮಕವನ್ನು ಕೊಟ್ಟದ್ದು ಅಂದರೆ ಆಳನ್ನು “ತನ್ನ ಎಲ್ಲ ಆಸ್ತಿಯ ಮೇಲೆ” ನೇಮಿಸಿದ್ದು ಯಾವಾಗ? ಅವನು ಹೇಳಿದ್ದು: “ಯಜಮಾನನು ಬಂದಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಸಂತೋಷಿತನು! ಅವನು ಆ ಆಳನ್ನು ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.” (ಮತ್ತಾ. 24:46, 47) ಹಾಗಾಗಿ ಯೇಸು ‘ಬಂದಾಗ’ ಮತ್ತು ಆಳು “ಹೀಗೆ ಮಾಡುತ್ತಿರುವುದನ್ನು” ಅಂದರೆ ಆಧ್ಯಾತ್ಮಿಕ ಆಹಾರವನ್ನು ಹಂಚುತ್ತಿರುವುದನ್ನು ಕಾಣುವಾಗ ಈ ಎರಡನೇ ನೇಮಕವನ್ನು ಮಾಡಲಿದ್ದನು. ಹಾಗಾದರೆ ಎರಡೂ ನೇಮಕಗಳ ಮಧ್ಯೆ ಅಂತರವಿತ್ತು. ಯೇಸು ಆಳನ್ನು ತನ್ನ ಎಲ್ಲ ಆಸ್ತಿಯ ಮೇಲೆ ಯಾವಾಗ ಮತ್ತು ಹೇಗೆ ನೇಮಿಸುವನು ಎಂದು ತಿಳಿಯಲು, ಎರಡು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಒಂದು, ಆತನು ಬರುವುದು ಯಾವಾಗ? ಇನ್ನೊಂದು, ಆತನ ಆಸ್ತಿಯಲ್ಲಿ ಏನೆಲ್ಲ ಒಳಗೂಡಿದೆ?
16 ಯೇಸು ಯಾವಾಗ ಬಂದನು? ಇದಕ್ಕೆ ಅದೇ ವೃತ್ತಾಂತದಲ್ಲಿ ಉತ್ತರವಿದೆ. ಆಳಿನ ದೃಷ್ಟಾಂತದ ಹಿಂದಿನ ವಚನಗಳಲ್ಲಿ ಯೇಸು ‘ಬರುವುದರ’ ಕುರಿತು ಪ್ರಸ್ತಾಪಿಸಿರುವುದು, ನ್ಯಾಯತೀರ್ಪನ್ನು ವಿಧಿಸಿ, ಜಾರಿಗೊಳಿಸಲು ಬರುವ ಸಮಯವನ್ನು ಸೂಚಿಸುತ್ತದೆ. ಇದು ವ್ಯವಸ್ಥೆಯ ಅಂತ್ಯದ ಸಮಯದಲ್ಲಿ ಆಗಲಿದೆ.d (ಮತ್ತಾ. 24:30, 42, 44) ಹಾಗಾಗಿ ದೃಷ್ಟಾಂತದಲ್ಲಿ ಹೇಳಿರುವಂತೆ ಯೇಸು ‘ಬರುವುದು’ ಮಹಾ ಸಂಕಟದ ಸಮಯದಲ್ಲಿ.
17. ಯೇಸುವಿನ ಆಸ್ತಿಯಲ್ಲಿ ಏನೆಲ್ಲ ಸೇರಿದೆ?
17 “[ಯೇಸುವಿನ] ಎಲ್ಲ ಆಸ್ತಿ”ಯಲ್ಲಿ ಏನೆಲ್ಲ ಒಳಗೂಡಿದೆ? ಯೇಸು “ಎಲ್ಲ” ಆಸ್ತಿಯ ಮೇಲೆ ಎಂದು ಹೇಳುವಾಗ ಕೇವಲ ಭೂಮಿಯ ಮೇಲಿರುವ ವಿಷಯಗಳಿಗೆ ಸೀಮಿತಗೊಳಿಸಿ ಹೇಳಲಿಲ್ಲ. ಯೇಸುವಿಗೆ ಬೃಹತ್ತಾದ ಸ್ವರ್ಗೀಯ ಅಧಿಕಾರವಿದೆ. “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ಎಂದು ಆತನು ಹೇಳಿದನು. (ಮತ್ತಾ. 28:18; ಎಫೆ. 1:20-23) ಆತನ ಆಸ್ತಿಯಲ್ಲಿ ಈಗ ಮೆಸ್ಸೀಯ ರಾಜ್ಯ ಕೂಡ ಸೇರಿದೆ. 1914ರಿಂದ ತನ್ನ ಆಸ್ತಿಯಲ್ಲಿ ಸೇರಿರುವ ಈ ರಾಜ್ಯವನ್ನು ಆಳುವುದರಲ್ಲಿ ತನ್ನ ಅಭಿಷಿಕ್ತ ಹಿಂಬಾಲಕರು ತನ್ನೊಂದಿಗೆ ಜೊತೆಗೂಡುವಂತೆ ಅನುಮತಿಸುವನು.—ಪ್ರಕ. 11:15.
18. ಆಳನ್ನು ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸುವುದರಲ್ಲಿ ಯೇಸುವಿಗೆ ಯಾಕೆ ಸಂತೋಷ?
18 ಇಲ್ಲಿಯವರೆಗೆ ಕಲಿತದ್ದನ್ನು ಮನಸ್ಸಿನಲ್ಲಿಟ್ಟು ನಾವು ಯಾವ ಸಮಾಪ್ತಿಗೆ ಬರಬಹುದು? ಯೇಸು ಮಹಾ ಸಂಕಟದ ಸಮಯದಲ್ಲಿ ನ್ಯಾಯತೀರ್ಪು ವಿಧಿಸಲು ಬರುವಾಗ ನಂಬಿಗಸ್ತ ಆಳು ಆಧ್ಯಾತ್ಮಿಕ ಆಹಾರವನ್ನು ನಿಷ್ಠೆಯಿಂದ ಸಮಯಕ್ಕೆ ಸರಿಯಾಗಿ ಮನೆಯವರಿಗೆ ಹಂಚುವುದನ್ನು ಕಾಣುತ್ತಾನೆ. ಹಾಗಾಗಿ ಯೇಸು ಸಂತೋಷದಿಂದ ಎರಡನೇ ನೇಮಕವನ್ನು ಮಾಡುತ್ತಾನೆ ಅಂದರೆ ತನ್ನ ಎಲ್ಲ ಆಸ್ತಿಯ ಮೇಲೆ ಆ ಆಳನ್ನು ನೇಮಿಸುತ್ತಾನೆ. ನಂಬಿಗಸ್ತ ಆಳಿನ ಸದಸ್ಯರು ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಸಹರಾಜರಾಗಿ ಆಳುವ ಬಹುಮಾನ ಪಡೆದಾಗ ಈ ನೇಮಕವನ್ನು ಪಡೆಯುತ್ತಾರೆ.
19. ಇತರ ಅಭಿಷಿಕ್ತರಿಗಿಂತ ನಂಬಿಗಸ್ತ ಆಳು ಹೆಚ್ಚಿನ ಬಹುಮಾನವನ್ನು ಪಡೆಯಲಿದೆಯಾ? ವಿವರಿಸಿ.
19 ನಂಬಿಗಸ್ತ ಆಳಿನ ಸದಸ್ಯರು ಇತರ ಅಭಿಷಿಕ್ತರಿಗಿಂತ ಹೆಚ್ಚಿನ ಬಹುಮಾನವನ್ನು ಸ್ವರ್ಗದಲ್ಲಿ ಪಡೆಯುತ್ತಾರಾ? ಇಲ್ಲ. ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಚಿಕ್ಕ ಗುಂಪಿಗೆ ವಾಗ್ದಾನಿಸಿರುವ ಬಹುಮಾನವನ್ನು ನಂತರ ಇತರರು ಕೂಡ ಹಂಚಿಕೊಳ್ಳಬಹುದು. ಉದಾಹರಣೆಗೆ, ಯೇಸು ತನ್ನ ಸಾವಿನ ಹಿಂದಿನ ರಾತ್ರಿ 11 ಅಪೊಸ್ತಲರಿಗೆ ಏನೆಂದನು ಗಮನಿಸಿ. (ಲೂಕ 22:28-30 ಓದಿ.) ಯೇಸು ಆ ಚಿಕ್ಕ ಗುಂಪಿಗೆ ನಂಬಿಗಸ್ತಿಕೆಯ ಕಾರಣ ಕಾದಿರಿಸಲಾದ ಬಹುಮಾನದ ಕುರಿತು ತಿಳಿಸಿದನು. ಅವರು ಆತನೊಂದಿಗೆ ರಾಜ್ಯಾಧಿಕಾರವನ್ನು ಹಂಚಿಕೊಳ್ಳಲಿದ್ದರು. ಆದರೆ ವರ್ಷಗಳ ನಂತರ, ಎಲ್ಲಾ 1,44,000 ಅಭಿಷಿಕ್ತರು ತನ್ನೊಂದಿಗೆ ಸಿಂಹಾಸನದ ಮೇಲೆ ಕೂತು ರಾಜ್ಯಾಡಳಿತವನ್ನು ಹಂಚಿಕೊಳ್ಳುವರು ಎಂದು ಯೇಸು ಹೇಳಿದನು. (ಪ್ರಕ. 1:1; 3:21) ಇದೇ ತತ್ವ ಮತ್ತಾಯ 24:47ರಲ್ಲಿರುವ ಯೇಸುವಿನ ಮಾತಿಗೆ ಅನ್ವಯ. ಯೇಸು ನಂಬಿಗಸ್ತ ಆಳನ್ನು ಅಂದರೆ ಅಭಿಷಿಕ್ತ ಪುರುಷರ ಚಿಕ್ಕ ಗುಂಪನ್ನು ತನ್ನ ಎಲ್ಲ ಆಸ್ತಿಯ ಮೇಲೆ ನೇಮಿಸುತ್ತೇನೆ ಎಂದು ಮಾತಿತ್ತನು. ಆದರೆ ಆತನೊಂದಿಗೆ ಎಲ್ಲ 1,44,000 ಅಭಿಷಿಕ್ತರೂ ಸ್ವರ್ಗೀಯ ಅಧಿಕಾರವನ್ನು ಹಂಚಿಕೊಳ್ಳಲಿದ್ದಾರೆ.—ಪ್ರಕ. 20:4, 6.
20. (1) ಯೇಸು ನಂಬಿಗಸ್ತ ಆಳನ್ನು ಯಾಕೆ ನೇಮಿಸಿದನು? (2) ನಿಮ್ಮ ದೃಢನಿರ್ಧಾರ ಏನಾಗಿದೆ?
20 ಯೇಸು ಒಂದನೇ ಶತಮಾನದಲ್ಲಿ ಇಟ್ಟ ಮಾದರಿಯನ್ನು ಇಂದು ಕೂಡ ಅನುಸರಿಸುತ್ತಿದ್ದಾನೆ. ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ ಮೂಲಕ ಕೆಲವೇ ಕೈಗಳಿಂದ ಅನೇಕರಿಗೆ ಉಣಿಸುತ್ತಿದ್ದಾನೆ. ಈ ಕಡೇ ದಿವಸಗಳಾದ್ಯಂತ ತನ್ನ ಅಭಿಷಿಕ್ತ ಮತ್ತು ಬೇರೆ ಕುರಿ ಹಿಂಬಾಲಕರಿಗೆ ನಿರಂತರ ಆಧ್ಯಾತ್ಮಿಕ ಆಹಾರ ಸಿಗುತ್ತಿದೆ ಎನ್ನುವುದನ್ನು ಖಾತರಿ ಮಾಡಿಕೊಳ್ಳಲು ಯೇಸು ನಂಬಿಗಸ್ತ ಆಳನ್ನು ನೇಮಿಸಿದ್ದಾನೆ. ಈ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ ಭಾಗವಾಗಿರುವ ಅಭಿಷಿಕ್ತ ಸಹೋದರರಿಗೆ ನಿಷ್ಠೆಯಿಂದ ಬೆಂಬಲ ಕೊಡುತ್ತಾ ನಮ್ಮ ಗಣ್ಯತೆಯನ್ನು ತೋರಿಸೋಣ.—ಇಬ್ರಿ. 13:7, 17.
a ಪ್ಯಾರ 2: [1] ಯೇಸು ಇದಕ್ಕಿಂತ ಮುಂಚೆ ಇಂಥದ್ದೇ ಒಂದು ದೃಷ್ಟಾಂತದಲ್ಲಿ ‘ಆಳನ್ನು’ “ಮನೆವಾರ್ತೆಯವನು” ಎಂದೂ ‘ಮನೆಯವರನ್ನು’ ‘ಸೇವಕರ ಗುಂಪು’ ಎಂದೂ ಸಂಬೋಧಿಸಿ ಮಾತಾಡಿದ್ದನು.—ಲೂಕ 12:42-44.
b ಪ್ಯಾರ 6: [2] ಕ್ರಿಸ್ತನು ‘ಬರುವುದು’ (ಗ್ರೀಕ್ ಪದ, ಎರ್ಖೊಮಾಯ್) ಮತ್ತು ಆತನ “ಸಾನ್ನಿಧ್ಯ” (ಪರೂಸೀಯಾ) ಇವೆರಡೂ ಬೇರೆ ಬೇರೆ ವಿಷಯಗಳು. ಆತನ ಅಗೋಚರ ಸಾನ್ನಿಧ್ಯವು ಆತನು ನ್ಯಾಯತೀರ್ಪು ಮಾಡಲು ಬರುವ ಮುಂಚೆ ಆರಂಭವಾಗುವುದು.
c ಪ್ಯಾರ 12: [3] ಇದೇ ಪತ್ರಿಕೆಯಲ್ಲಿರುವ ‘ನೋಡಿರಿ, ನಾನು ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ’ ಎಂಬ ಲೇಖನದ ಪುಟ 10-12, ಪ್ಯಾರ 5-8 ನೋಡಿ.
d ಪ್ಯಾರ 16: [4] ಇದೇ ಪತ್ರಿಕೆಯಲ್ಲಿರುವ “ಈ ಸಂಗತಿಗಳು ಯಾವಾಗ ಸಂಭವಿಸುವವು?” ಎಂಬ ಲೇಖನದ ಪುಟ 7-8, ಪ್ಯಾರ 14-18 ನೋಡಿ.