ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w00 11/15 ಪು. 21-23
  • ಮನಃಪೂರ್ವಕವಾಗಿ ದೇವರ ಸೇವೆಮಾಡಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮನಃಪೂರ್ವಕವಾಗಿ ದೇವರ ಸೇವೆಮಾಡಿರಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅವರು ದೇವರ ಸೇವೆಮಾಡಲು ನಿರಾಕರಿಸುತ್ತಾರೆ
  • ಮನಃಪೂರ್ವಕವಾದ ಸೇವೆಯು ಅತ್ಯಾವಶ್ಯಕ
  • ಮನಸ್ಸಿಲ್ಲದೆ ಮಾಡುವ ಸೇವೆಯ ಕುರಿತಾಗಿ ಏನು?
  • ದೇವರ ಚಿತ್ತವನ್ನು ಮಾಡುವುದರಲ್ಲಿನ ಆನಂದ
  • ‘ಮನಸ್ಸು ಸಿದ್ಧವಾಗಿದೆ, ಆದರೆ ದೇಹಕ್ಕೆ ಬಲ ಸಾಲದು’
  • ಯೇಸುವಿನ ಪ್ರೀತಿಗೆ ನೀವು ಪ್ರತಿಕ್ರಿಯಿಸುವಿರೋ?
    ಕಾವಲಿನಬುರುಜು—1992
  • ನಿತ್ಯಜೀವಕ್ಕಾಗಿ ನೀವೆಷ್ಟು ತ್ಯಾಗಮಾಡಲು ಸಿದ್ಧರಿದ್ದೀರಿ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • “ಉಚಿತವಾಗಿ ಹೊಂದಿದ್ದೀರಿ ಉಚಿತವಾಗಿ ಕೊಡಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ದೇವರ ಪ್ರೀತಿಯಿಂದ ನಮ್ಮನ್ನು ಅಗಲಿಸುವವರಾರು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
w00 11/15 ಪು. 21-23

ಮನಃಪೂರ್ವಕವಾಗಿ ದೇವರ ಸೇವೆಮಾಡಿರಿ

“ನಾನಂತೂ ನನಗಿರುವದನ್ನು ನಿಮ್ಮ ಆತ್ಮಸಂರಕ್ಷಣೆಗೋಸ್ಕರ ಅತಿಸಂತೋಷದಿಂದ ವೆಚ್ಚಮಾಡುತ್ತೇನೆ” ಎಂದು ಅಪೊಸ್ತಲ ಪೌಲನು ಬರೆದನು. (2 ಕೊರಿಂಥ 12:15) ಇಂದು ಯೆಹೋವನ ಸೇವಕರು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕಾದ ಹೊರನೋಟ ಹಾಗೂ ಮನೋಭಾವದ ಕುರಿತು ಈ ಮಾತುಗಳು ಏನು ಹೇಳುತ್ತವೆ? ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದ ಈ ಮಾತುಗಳ ಅರ್ಥವನ್ನು, ಒಬ್ಬ ಬೈಬಲ್‌ ವಿದ್ವಾಂಸನು ಹೀಗೆ ವಿವರಿಸುತ್ತಾನೆ: “ತನ್ನ ಮಕ್ಕಳಿಗೋಸ್ಕರ ಒಬ್ಬ ತಂದೆಯು ಮಾಡುವಂತೆಯೇ, ನಾನು ಸಹ ನನ್ನ ಶಕ್ತಿ, ಸಮಯ, ಜೀವನವನ್ನು ಹಾಗೂ ನನ್ನ ಹತ್ತಿರ ಇರುವುದೆಲ್ಲವನ್ನೂ ನಿಮ್ಮ ಹಿತಕ್ಷೇಮಕ್ಕಾಗಿ ಉಪಯೋಗಿಸಲು ಮನಃಪೂರ್ವಕವಾಗಿ ಸಿದ್ಧನಿದ್ದೇನೆ.” ಹೀಗೆ, ಒಂದುವೇಳೆ ಅಗತ್ಯಬೀಳುವಲ್ಲಿ ತನ್ನ ಕ್ರೈಸ್ತ ಶುಶ್ರೂಷೆಯನ್ನು ಪೂರೈಸಲಿಕ್ಕಾಗಿ, ‘ತನಗಿರುವುದನ್ನೆಲ್ಲಾ ವೆಚ್ಚಮಾಡಲು’ ಅಥವಾ ‘ತನ್ನನ್ನು ದಣಿಸಿಕೊಳ್ಳಲು ಮತ್ತು ತನ್ನ ಜೀವವನ್ನೇ ತೇಯಲು’ ಪೌಲನು ಸಿದ್ಧನಿದ್ದನು.

ಅಷ್ಟುಮಾತ್ರವಲ್ಲ, ಇದೆಲ್ಲವನ್ನೂ ಪೌಲನು “ಅತಿಸಂತೋಷದಿಂದ” ಮಾಡಿದನು. ಹೀಗೆ ಮಾಡಲು ಅವನು “ಮನಃಪೂರ್ವಕವಾಗಿ ಸಿದ್ಧನಿದ್ದನು” ಎಂದು ದ ಜೆರೂಸಲೆಮ್‌ ಬೈಬಲ್‌ ಹೇಳುತ್ತದೆ. ನಿಮ್ಮ ಕುರಿತಾಗಿ ಏನು? ನೀವು ಸಹ ನಿಮ್ಮ ಸಮಯ, ಶಕ್ತಿ, ಕೌಶಲಗಳು, ಮತ್ತು ಸಂಪನ್ಮೂಲಗಳನ್ನು ಯೆಹೋವ ದೇವರ ಸೇವೆಮಾಡುವುದರಲ್ಲಿ ಹಾಗೂ ಇತರರ ಅಭಿರುಚಿಗಳನ್ನು ಪೂರೈಸುವುದರಲ್ಲಿ ವಿನಿಯೋಗಿಸಲು ಸಿದ್ಧರಿದ್ದೀರೋ? ಹೀಗೆ ಮಾಡುವಾಗ, ಕೆಲವೊಮ್ಮೆ ‘ನಿಮ್ಮನ್ನು ದಣಿಸಿಕೊಳ್ಳಲು ಮತ್ತು ನಿಮ್ಮ ಜೀವವನ್ನೇ ತೇಯಲು’ ತಯಾರಿದ್ದೀರೋ? ಮತ್ತು ನೀವು ಇದನ್ನು “ಅತಿಸಂತೋಷದಿಂದ” ಮಾಡಬಲ್ಲಿರೋ?

ಅವರು ದೇವರ ಸೇವೆಮಾಡಲು ನಿರಾಕರಿಸುತ್ತಾರೆ

ಅನೇಕರು ದೇವರ ಸೇವೆಯನ್ನು ಮಾಡಲು ಹಿಂಜರಿಯುತ್ತಾರೆ ಮಾತ್ರವಲ್ಲ, ಹಾಗೆ ಮಾಡಲು ನಿಸ್ಸಂಕೋಚವಾಗಿ ನಿರಾಕರಿಸುತ್ತಾರೆ. ಅವರಲ್ಲಿ ಕೃತಘ್ನತೆ, ಸ್ವಾರ್ಥಪರ ಸ್ವಾತಂತ್ರ್ಯ, ಹಾಗೂ ದಂಗೆಕೋರ ಮನೋಭಾವವೂ ಇದೆ. ಆದಾಮಹವ್ವರು ಸಹ ಅದೇ ರೀತಿಯ ಆಲೋಚನೆಗೆ ಒಳಗಾಗುವಂತೆ ಸೈತಾನನೇ ಪ್ರಚೋದಿಸಿದ್ದನು. “ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ,” ಅಂದರೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಸ್ವತಃ ನೀವೇ ನಿರ್ಧರಿಸಲು ಶಕ್ತರಾಗುವಿರಿ ಎಂದು ಅವನು ಸುಳ್ಳು ಹೇಳಿದನು. (ಆದಿಕಾಂಡ 3:​1-5) ಇಂದು ಅದೇ ರೀತಿಯ ಮನೋಭಾವವಿರುವ ಕೆಲವರು, ತಮಗೆ ಏನು ಇಷ್ಟವೋ ಅದನ್ನೇ ಮಾಡುವ ಸ್ವಾತಂತ್ರ್ಯ ತಮಗಿರಬೇಕು ಎಂದು ನೆನಸುತ್ತಾರೆ. ದೇವರ ವಿಷಯದಲ್ಲಿ ತಮಗೆ ಯಾವ ಹಂಗೂ ಇರಬಾರದು ಮತ್ತು ಆತನು ನಮ್ಮ ವಿಷಯದಲ್ಲಿ ತಲೆಹಾಕಬಾರದು ಎಂಬುದು ಅವರ ಅಭಿಪ್ರಾಯ. (ಕೀರ್ತನೆ 81:​11, 12) ಅವರು ತಮ್ಮ ಬಳಿ ಇರುವುದೆಲ್ಲವನ್ನು, ತಮ್ಮ ವೈಯಕ್ತಿಕ ಅಭಿರುಚಿಗಳನ್ನು ಈಡೇರಿಸಲಿಕ್ಕಾಗಿ ಉಪಯೋಗಿಸಲು ಬಯಸುತ್ತಾರೆ.​—⁠ಜ್ಞಾನೋಕ್ತಿ 18:⁠1.

ಇಂತಹ ವಿಪರೀತ ದೃಷ್ಟಿಕೋನವು ನಿಮಗಿಲ್ಲದಿರಬಹುದು. ನೀವು ಈಗ ಆನಂದಿಸುತ್ತಿರುವ ಜೀವದ ವರದಾನವನ್ನು ಹಾಗೂ ಭವಿಷ್ಯತ್ತಿನಲ್ಲಿ ಭೂಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಅದ್ಭುತಕರ ಪ್ರತೀಕ್ಷೆಯನ್ನೂ ನೀವು ನಿಜವಾಗಿಯೂ ಗಣ್ಯಮಾಡುತ್ತಿರಬಹುದು. (ಕೀರ್ತನೆ 37:​10, 11; ಪ್ರಕಟನೆ 21:​1-4) ಯೆಹೋವನು ನಿಮಗೋಸ್ಕರ ಮಾಡಿರುವ ಎಲ್ಲ ಒಳ್ಳೇ ಕಾರ್ಯಗಳಿಗಾಗಿ ನೀವು ತುಂಬ ಕೃತಜ್ಞರಾಗಿರಬಹುದು. ಆದರೆ, ನಮ್ಮ ಸೇವೆಯು ದೇವರಿಗೆ ಅಸ್ವೀಕರಣೀಯವಾಗಿ ಪರಿಣಮಿಸುವಂತಹ ರೀತಿಯಲ್ಲಿ ಸೈತಾನನು ನಮ್ಮ ಆಲೋಚನಾ ರೀತಿಯನ್ನು ಬದಲಾಯಿಸಬಲ್ಲನು ಎಂಬ ಅಪಾಯದ ವಿಷಯದಲ್ಲಿ ನಾವೆಲ್ಲರೂ ಎಚ್ಚರಿಕೆಯಿಂದಿರುವ ಅಗತ್ಯವಿದೆ. (2 ಕೊರಿಂಥ 11:⁠3) ಇದು ಹೇಗೆ ಸಂಭವಿಸಬಹುದು?

ಮನಃಪೂರ್ವಕವಾದ ಸೇವೆಯು ಅತ್ಯಾವಶ್ಯಕ

ಯೆಹೋವನು ಮನಃಪೂರ್ವಕವಾದ, ಅಂದರೆ ಪೂರ್ಣ ಮನಸ್ಸಿನ ಸೇವೆಯನ್ನು ನಮ್ಮಿಂದ ಬಯಸುತ್ತಾನೆ. ತನ್ನ ಚಿತ್ತವನ್ನು ಮಾಡಲು ಆತನೆಂದೂ ನಮ್ಮನ್ನು ಒತ್ತಾಯಿಸುವುದಿಲ್ಲ. ಆದರೆ ಸೈತಾನನು ತನ್ನ ಚಿತ್ತವನ್ನು ಮಾಡುವಂತೆ ಜನರನ್ನು ಒತ್ತಾಯಿಸಲು ಅಥವಾ ಜನರನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಏನನ್ನು ಬೇಕಾದರೂ ಮಾಡಲು ಸಿದ್ಧನಿದ್ದಾನೆ. ದೇವರ ಸೇವೆಮಾಡುವ ವಿಷಯದಲ್ಲಿ ಬೈಬಲು ಕರ್ತವ್ಯಗಳನ್ನು ಪಾಲಿಸಬೇಕು, ಆಜ್ಞೆಗಳನ್ನು ಅನುಸರಿಸಬೇಕು, ಆವಶ್ಯಕತೆಗಳನ್ನು ಪೂರೈಸಬೇಕು ಎಂದು ಹೇಳುತ್ತದೆ ನಿಜ. (ಪ್ರಸಂಗಿ 12:13; ಲೂಕ 1:⁠6) ಆದರೂ, ನಮಗೆ ದೇವರ ಮೇಲೆ ತುಂಬ ಪ್ರೀತಿಯಿರುವುದರಿಂದಲೇ ನಾವು ಆತನ ಸೇವೆಮಾಡುತ್ತೇವೆ.​—⁠ವಿಮೋಚನಕಾಂಡ 35:21; ಧರ್ಮೋಪದೇಶಕಾಂಡ 11:⁠1.

ದೇವರ ಸೇವೆಯಲ್ಲಿ ಪೌಲನು ತನ್ನನ್ನು ಸಂಪೂರ್ಣವಾಗಿ ವಿನಿಯೋಗಿಸಿಕೊಂಡನು. ಆದರೆ, ಒಂದುವೇಳೆ ‘ತನ್ನಲ್ಲಿ ಪ್ರೀತಿಯಿಲ್ಲವಾದರೆ’ ಆ ಸೇವೆಯು ಸಂಪೂರ್ಣವಾಗಿ ವ್ಯರ್ಥವಾಗಿದೆ ಎಂಬುದು ಅವನಿಗೆ ಗೊತ್ತಿತ್ತು. (1 ಕೊರಿಂಥ 13:​1-3) ಬೈಬಲ್‌ ಲೇಖಕರು ಕ್ರೈಸ್ತರನ್ನು ದೇವರ ದಾಸರು ಎಂದು ಸಂಬೋಧಿಸಿರುವುದು, ದಬ್ಬಾಳಿಕೆಯ ಕೆಳಗಿನ ತುಚ್ಛ ಗುಲಾಮಗಿರಿಯನ್ನು ಸೂಚಿಸಲಿಕ್ಕಾಗಿ ಅಲ್ಲ. (ರೋಮಾಪುರ 12:11; ಕೊಲೊಸ್ಸೆ 3:24) ಅದರ ಅರ್ಥವೇನೆಂದರೆ, ದೇವರ ಹಾಗೂ ಆತನ ಮಗನಾದ ಯೇಸು ಕ್ರಿಸ್ತನ ಕಡೆಗಿರುವ ಆಳವಾದ, ಹೃತ್ಪೂರ್ವಕ ಪ್ರೀತಿಯ ಮೇಲಾಧಾರಿತವಾದ ಮನಃಪೂರ್ವಕ ಅಧೀನತೆಯೇ ಆಗಿದೆ.​—⁠ಮತ್ತಾಯ 22:37; 2 ಕೊರಿಂಥ 5:14; 1 ಯೋಹಾನ 4:​10, 11.

ದೇವರಿಗೆ ನಾವು ಮಾಡುವ ಸೇವೆಯು, ಜನರ ಕಡೆಗೂ ಆಳವಾದ ಪ್ರೀತಿಯನ್ನು ತೋರಿಸುವಂತಿರಬೇಕು. ಆದುದರಿಂದಲೇ ಪೌಲನು ಥೆಸಲೊನೀಕದ ಸಭೆಗೆ ಹೀಗೆ ಬರೆದನು: “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು.” (1 ಥೆಸಲೊನೀಕ 2:⁠7) ಅನೇಕ ದೇಶಗಳಲ್ಲಿ ಇಂದು, ತಮ್ಮ ಮಕ್ಕಳ ಆರೈಕೆಮಾಡುವುದು ತಾಯಂದಿರ ಕಾನೂನುಬದ್ಧ ಕರ್ತವ್ಯವಾಗಿದೆ. ಆದರೆ, ಕೇವಲ ಕಾನುನುಬದ್ಧ ಕರ್ತವ್ಯವನ್ನು ಪೂರೈಸುವ ಏಕಮಾತ್ರ ಉದ್ದೇಶದಿಂದ ತಾಯಂದಿರು ಮಕ್ಕಳ ಆರೈಕೆಮಾಡುತ್ತಾರೋ? ಖಂಡಿತವಾಗಿಯೂ ಇಲ್ಲ. ಏಕೆಂದರೆ, ತಮ್ಮ ಮಕ್ಕಳ ಮೇಲೆ ತುಂಬ ವಾತ್ಸಲ್ಯವಿರುವುದರಿಂದಲೇ ಅವರು ಹಾಗೆ ಮಾಡುತ್ತಾರೆ. ಅಷ್ಟೇಕೆ, ತನ್ನ ಮಕ್ಕಳ ಆರೈಕೆಮಾಡುವ ಒಬ್ಬ ತಾಯಿಯು, ಅವರಿಗೋಸ್ಕರ ದೊಡ್ಡ ದೊಡ್ಡ ತ್ಯಾಗಗಳನ್ನು ಮಾಡುತ್ತಾಳೆ. ಪೌಲನು ಯಾರ ಸೇವೆಯನ್ನು ಮಾಡುತ್ತಿದ್ದನೋ ಅವರ ವಿಷಯದಲ್ಲಿ ಅವನಿಗೆ ತದ್ರೀತಿಯ “ಮಮತೆ”ಯಿತ್ತು. ಆದುದರಿಂದಲೇ, ಅವರಿಗೆ ಸಹಾಯಮಾಡುವುದರಲ್ಲಿ ತನ್ನ ಇಡೀ ಜೀವಿತವನ್ನು ಉಪಯೋಗಿಸಲು ಅವನು ‘ತುಂಬ ಸಂತೋಷಿತನಾಗಿದ್ದನು.’ (“ಸಿದ್ಧಮನಸ್ಕನಾಗಿದ್ದನು,” ಕಿಂಗ್‌ ಜೇಮ್ಸ್‌ ವರ್ಷನ್‌; “ಹರ್ಷಚಿತ್ತನಾಗಿದ್ದನು,” ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) (1 ಥೆಸಲೊನೀಕ 2:⁠8) ಪ್ರೀತಿಯು, ಪೌಲನ ಮಾದರಿಯನ್ನು ಅನುಸರಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ.​—⁠ಮತ್ತಾಯ 22:⁠39.

ಮನಸ್ಸಿಲ್ಲದೆ ಮಾಡುವ ಸೇವೆಯ ಕುರಿತಾಗಿ ಏನು?

ನಮಗಿಂತಲೂ ಹೆಚ್ಚಾಗಿ ನಾವು ದೇವರನ್ನು ಹಾಗೂ ಜನರನ್ನು ಪ್ರೀತಿಸಬೇಕು ಎಂಬುದು ಖಂಡಿತ. ಇಲ್ಲದಿದ್ದರೆ, ನಾವು ಅರೆಮನಸ್ಸಿನ ಅಥವಾ ಅಪೂರ್ಣ ಮನಸ್ಸಿನಿಂದ ದೇವರ ಸೇವೆಮಾಡಬಹುದು. ಇದು ನಿಜವಾಗಿಯೂ ಅಪಾಯಕರವಾದದ್ದಾಗಿದೆ. ಅಷ್ಟುಮಾತ್ರವಲ್ಲ, ನಮ್ಮ ಬಯಕೆಗಳಿಗನುಸಾರ ನಾವು ಜೀವಿಸಲು ಸಾಧ್ಯವೇ ಇಲ್ಲ ಎಂದು ಬೇಸರಿಸುತ್ತಾ, ನಾವು ಅಸಮಾಧಾನವನ್ನು ಸಹ ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಕೆಲವು ಇಸ್ರಾಯೇಲ್ಯರ ಜೀವನದಲ್ಲಿ ಇದು ಸಂಭವಿಸಿತು. ಅಂದರೆ, ಅವರಲ್ಲಿ ಕೆಲವರಿಗೆ ದೇವರ ಬಗ್ಗೆ ಪ್ರೀತಿಯು ಇರಲಿಲ್ಲವಾದರೂ, ಕರ್ತವ್ಯಪ್ರಜ್ಞೆಯಿಂದ ಅವರು ಆತನ ಸೇವೆಯನ್ನು ಮಾಡಿದರು. ಇದರ ಫಲಿತಾಂಶವೇನಾಗಿತ್ತು? ದೇವರ ಸೇವೆಮಾಡುವುದು ಅವರಿಗೆ ‘ಬೇಸರಕರವಾಗಿ’ ಪರಿಣಮಿಸಿತು.​—⁠ಮಲಾಕಿಯ 1:⁠13.

ದೇವರಿಗೆ ಅರ್ಪಿಸಲ್ಪಡುತ್ತಿದ್ದ ಯಜ್ಞಗಳು ಯಾವಾಗಲೂ “ಪೂರ್ಣಾಂಗ”ವುಳ್ಳವುಗಳು, ಅಂದರೆ ಕುಂದುಕೊರತೆ ಇಲ್ಲದವುಗಳು ಮತ್ತು ಲಭ್ಯವಿರುವುದರಲ್ಲೇ ‘ಉತ್ಕೃಷ್ಟವಾದವುಗಳು’ ಆಗಿರಬೇಕಿತ್ತು. (ಯಾಜಕಕಾಂಡ 22:​17-20; ವಿಮೋಚನಕಾಂಡ 23:19) ಆದರೂ, ಮಲಾಕಿಯನ ದಿನದಲ್ಲಿದ್ದ ಜನರು ತಮ್ಮ ಪ್ರಾಣಿಗಳಲ್ಲೇ ಉತ್ಕೃಷ್ಟವಾದವುಗಳನ್ನು ಯೆಹೋವನಿಗೆ ಅರ್ಪಿಸುವುದಕ್ಕೆ ಬದಲಾಗಿ, ನಿಜವಾಗಿಯೂ ತಮಗೆ ಬೇಕಿಲ್ಲದಂತಹ ಪ್ರಾಣಿಗಳನ್ನು ಅರ್ಪಿಸಲು ಆರಂಭಿಸಿದರು. ಇದಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ಅವನು ಯಾಜಕರಿಗೆ ಹೇಳಿದ್ದು: “ಕುರುಡಾದ ಪಶುವನ್ನು ಯಜ್ಞಕ್ಕೆ ಒಪ್ಪಿಸುವದು ದೋಷವಲ್ಲವೆಂದು ನೆನಸುತ್ತೀರೋ? ಕುಂಟಾದದ್ದನ್ನೂ ರೋಗದ ಪಶುವನ್ನು ಅರ್ಪಿಸುವದು ದೋಷವಲ್ಲವೆಂದು ನಂಬುತ್ತೀರೋ? . . . ಇಂಥದನ್ನು ನಿನ್ನ ದೇಶಾಧಿಪತಿಗೆ ಒಪ್ಪಿಸು; . . . ಅಯ್ಯೋ, [ಈ ಸೇವೆಯು] ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ಛೀಗುಟ್ಟುತ್ತೀರಿ; ಕಳವಿನ ಪಶುವನ್ನೂ ಕುಂಟಾದದ್ದನ್ನೂ ರೋಗಿಯಾದದ್ದನ್ನೂ ತಂದೊಪ್ಪಿಸುತ್ತೀರಿ; ಇಂಥ ನೈವೇದ್ಯವನ್ನು ತಂದೊಪ್ಪಿಸುತ್ತಿರುವಲ್ಲಿ ನಾನು ಅದನ್ನು ನಿಮ್ಮ ಕೈಯಿಂದ ಸ್ವೀಕರಿಸಲೋ”?​—⁠ಮಲಾಕಿಯ 1:​8, 13.

ನಮ್ಮಲ್ಲಿ ಯಾರಿಗಾದರೂ ಇದು ಹೇಗೆ ಸಂಭವಿಸಬಹುದು? ಒಂದುವೇಳೆ ನಮಗೆ ಸಿದ್ಧಮನಸ್ಸು ಹಾಗೂ ಒಳ್ಳೆಯ ಮನೋಭಾವವು ಇಲ್ಲದಿರುವಲ್ಲಿ, ನಮ್ಮ ಯಜ್ಞಗಳು ಸಹ ‘ಬೇಸರಕರವಾಗಿ’ ಪರಿಣಮಿಸಬಹುದು. (ವಿಮೋಚನಕಾಂಡ 35:​5, 21, 22; ಯಾಜಕಕಾಂಡ 1:3; ಕೀರ್ತನೆ 54:7; ಇಬ್ರಿಯ 13:​15, 16) ಉದಾಹರಣೆಗೆ, ನಮ್ಮ ವೈಯಕ್ತಿಕ ಕೆಲಸಗಳಿಗಾಗಿ ಹೆಚ್ಚಿನ ಸಮಯವನ್ನು ಉಪಯೋಗಿಸಿ, ಉಳಿದ ಸಮಯವನ್ನು ಯೆಹೋವನ ಸೇವೆಗಾಗಿ ನಾವು ವಿನಿಯೋಗಿಸುತ್ತೇವೋ?

ಈ ವಿಷಯದ ಕುರಿತು ನೀವು ಗಂಭೀರವಾಗಿ ಆಲೋಚಿಸಿರಿ: ಸದುದ್ದೇಶವುಳ್ಳ ಒಬ್ಬ ಕುಟುಂಬ ಸದಸ್ಯನು ಅಥವಾ ತುಂಬ ಹುರುಪುಳ್ಳ ಒಬ್ಬ ಲೇವಿಯನು, ಉತ್ಕೃಷ್ಟವಾದ ಪ್ರಾಣಿಯನ್ನು ಯಜ್ಞವಾಗಿ ಅರ್ಪಿಸುವಂತೆ ಒಬ್ಬ ಇಸ್ರಾಯೇಲ್ಯನಿಗೆ ಒತ್ತಾಯಿಸುತ್ತಿದ್ದಲ್ಲಿ, ಮತ್ತು ಅಂತಹ ಪ್ರಾಣಿಯನ್ನು ಮನಃಪೂರ್ವಕವಾಗಿ ಅರ್ಪಿಸಲು ಆ ಇಸ್ರಾಯೇಲ್ಯನಿಗೆ ಇಷ್ಟವಿಲ್ಲದಿರುತ್ತಿದ್ದಲ್ಲಿ, ಆ ಒತ್ತಾಯಪೂರ್ವಕ ಯಜ್ಞವನ್ನು ದೇವರು ಅಂಗೀಕರಿಸುತ್ತಿದ್ದನೋ? (ಯೆಶಾಯ 29:13; ಮತ್ತಾಯ 15:​7, 8) ಯೆಹೋವನು ಅಂತಹ ಯಜ್ಞಗಳನ್ನು ಹಾಗೂ ಅವುಗಳನ್ನು ಅರ್ಪಿಸಿದ ಜನರನ್ನು ಸಂಪೂರ್ಣವಾಗಿ ತಿರಸ್ಕರಿಸಿದನು.​—⁠ಹೋಶೇಯ 4:6; ಮತ್ತಾಯ 21:⁠43.

ದೇವರ ಚಿತ್ತವನ್ನು ಮಾಡುವುದರಲ್ಲಿನ ಆನಂದ

ದೇವರು ಅಂಗೀಕರಿಸುವಂತಹ ರೀತಿಯಲ್ಲಿ ಆತನ ಸೇವೆಯನ್ನು ಮಾಡಬೇಕಾದರೆ, ಯೇಸು ಕ್ರಿಸ್ತನ ಮಾದರಿಯನ್ನು ನಾವು ಅನುಸರಿಸಬೇಕು. ‘ಸ್ವಂತ ಚಿತ್ತ ನೆರವೇರಬೇಕೆಂದು ನಾನು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುತ್ತೇನೆ’ ಎಂದು ಅವನು ಹೇಳಿದನು. (ಯೋಹಾನ 5:30) ಮನಃಪೂರ್ವಕವಾಗಿ ದೇವರ ಸೇವೆಯನ್ನು ಮಾಡುವುದರಲ್ಲಿ ಯೇಸು ಬಹಳಷ್ಟು ಆನಂದವನ್ನು ಕಂಡುಕೊಂಡನು. ದಾವೀದನ ಪ್ರವಾದನಾ ಮಾತುಗಳನ್ನು ಯೇಸು ಪೂರೈಸಿದನು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು.”​—⁠ಕೀರ್ತನೆ 40:⁠8.

ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಯೇಸು ಸಂತೋಷವನ್ನು ಕಂಡುಕೊಂಡನಾದರೂ, ಇದು ಯಾವಾಗಲೂ ಸುಲಭವಾಗಿರಲಿಲ್ಲ. ಅವನನ್ನು ಹಿಡಿದು ವಿಚಾರಣೆಗೆ ಒಪ್ಪಿಸಿ, ವಧಿಸುವುದಕ್ಕೆ ತುಸು ಮೊದಲು ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಗೆತ್ಸೇಮನೆ ತೋಟದಲ್ಲಿದ್ದಾಗ ಯೇಸು “ಸಾಯುವಷ್ಟು ದುಃಖಕ್ಕೆ ಒಳಗಾಗಿ”ದ್ದನು. ಅವನ ಭಾವನಾತ್ಮಕ ಒತ್ತಡವು ಎಷ್ಟು ತೀವ್ರವಾಗಿತ್ತೆಂದರೆ, ಅವನು ಪ್ರಾರ್ಥಿಸುತ್ತಿದ್ದಾಗ “ಆತನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.”​—⁠ಮತ್ತಾಯ 26:38; ಲೂಕ 22:⁠44.

ಯೇಸು ಏಕೆ ಅಂತಹ ಮನೋಯಾತನೆಯನ್ನು ಅನುಭವಿಸಿದನು? ತನ್ನ ಸ್ವಾರ್ಥಪರ ಅಭಿರುಚಿಯಿಂದ ಅಥವಾ ದೇವರ ಚಿತ್ತವನ್ನು ಮಾಡಲು ಮನಸ್ಸಿಲ್ಲ ಎಂಬ ಕಾರಣಕ್ಕಂತೂ ಅಲ್ಲ. ಅವನು ಸಾಯಲು ಸಿದ್ಧನಾಗಿದ್ದನು. ಏಕೆಂದರೆ, “ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು” ಎಂಬ ಪೇತ್ರನ ಮಾತುಗಳಿಗೆ ಅವನು ತುಂಬ ಕೋಪಗೊಂಡು ಅವನನ್ನು ಗದರಿಸಿದನು. (ಮತ್ತಾಯ 16:​21-23) ಒಬ್ಬ ತುಚ್ಛ ಅಪರಾಧಿಯೋಪಾದಿ ತಾನು ಸಾಯಲಿರುವುದರಿಂದ, ತನ್ನ ಮರಣವು ಯೆಹೋವನ ಮೇಲೆ ಹಾಗೂ ಆತನ ಪವಿತ್ರ ಹೆಸರಿನ ಮೇಲೆ ಯಾವ ಪರಿಣಾಮವನ್ನು ಬೀರಲಿತ್ತು ಎಂಬ ವಿಷಯದಲ್ಲಿ ಯೇಸುವಿಗೆ ಚಿಂತೆಯಿತ್ತು. ತನ್ನ ಪ್ರೀತಿಯ ಮಗನು ಇಷ್ಟೊಂದು ಒರಟು ರೀತಿಯಲ್ಲಿ ಉಪಚರಿಸಲ್ಪಡುತ್ತಿರುವುದನ್ನು ನೋಡಿ ತಂದೆಗೆ ವಿಪರೀತ ನೋವಾಗುತ್ತದೆ ಎಂಬುದು ಯೇಸುವಿಗೆ ಗೊತ್ತಿತ್ತು.

ಯೆಹೋವನ ಉದ್ದೇಶವನ್ನು ಪೂರೈಸುವುದರಲ್ಲಿ ಒಂದು ನಿರ್ಣಾಯಕ ಸಮಯಕ್ಕೆ ತಾನು ಬಂದು ಮುಟ್ಟಿದ್ದೇನೆ ಎಂಬುದನ್ನು ಸಹ ಯೇಸು ಅರ್ಥಮಾಡಿಕೊಂಡನು. ಅವನು ದೇವರ ನಿಯಮಗಳನ್ನು ನಂಬಿಗಸ್ತಿಕೆಯಿಂದ ಪಾಲಿಸುವುದು, ಖಂಡಿತವಾಗಿಯೂ ಆದಾಮನು ಸಹ ಇದೇ ರೀತಿಯ ಆಯ್ಕೆಯನ್ನು ಮಾಡಸಾಧ್ಯವಿತ್ತು ಎಂಬುದನ್ನು ರುಜುಪಡಿಸಲಿತ್ತು. ಯೇಸುವಿನ ನಂಬಿಗಸ್ತಿಕೆಯು, ಪರೀಕ್ಷೆಯ ಕೆಳಗಿರುವಾಗ ಮಾನವರು ಮನಃಪೂರ್ವಕವಾಗಿ ಮತ್ತು ಪೂರ್ಣ ವಿಶ್ವಾಸದಿಂದ ದೇವರ ಸೇವೆಮಾಡುವುದಿಲ್ಲ ಎಂಬ ಸೈತಾನನ ಸುಳ್ಳು ಹೇಳಿಕೆಯನ್ನು ತಪ್ಪೆಂದು ತೋರ್ಪಡಿಸಲಿತ್ತು. ಕಟ್ಟಕಡೆಗೆ ಯೇಸುವಿನ ಮೂಲಕ ಯೆಹೋವನು ಸೈತಾನನನ್ನು ಸದೆಬಡಿದು, ಅವನ ದಂಗೆಯ ಪರಿಣಾಮಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಿದ್ದನು.​—⁠ಆದಿಕಾಂಡ 3:⁠15.

ಆ ಸಮಯದಲ್ಲಿ ಯೇಸುವಿನ ಮೇಲೆ ಎಷ್ಟು ದೊಡ್ಡ ಜವಾಬ್ದಾರಿಯು ಹೊರಿಸಲ್ಪಟ್ಟಿತ್ತು! ಅವನ ತಂದೆಯ ಹೆಸರು, ವಿಶ್ವವ್ಯಾಪಕ ಶಾಂತಿ, ಮತ್ತು ಮಾನವ ಕುಟುಂಬಕ್ಕೆ ರಕ್ಷಣೆ​—⁠ಇದೆಲ್ಲವೂ ಯೇಸುವಿನ ನಂಬಿಗಸ್ತಿಕೆಯ ಮೇಲೆ ಅವಲಂಬಿಸಿತ್ತು. ಇದನ್ನು ಗ್ರಹಿಸಿದ ಆತನು ಹೀಗೆ ಪ್ರಾರ್ಥಿಸಿದನು: “ನನ್ನ ತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.” (ಮತ್ತಾಯ 26:39) ತುಂಬ ಒತ್ತಡಭರಿತ ಸನ್ನಿವೇಶದಲ್ಲೂ ಯೇಸು ತನ್ನ ತಂದೆಯ ಚಿತ್ತವನ್ನು ಮನಃಪೂರ್ವಕವಾಗಿ ಮಾಡುವ ತನ್ನ ದೃಢನಿರ್ಧಾರವನ್ನು ಬದಲಾಯಿಸಲಿಲ್ಲ.

‘ಮನಸ್ಸು ಸಿದ್ಧವಾಗಿದೆ, ಆದರೆ ದೇಹಕ್ಕೆ ಬಲ ಸಾಲದು’

ಯೆಹೋವನ ಸೇವೆಮಾಡುವಾಗ ಯೇಸು ಹೇಗೆ ತೀವ್ರವಾದ ಭಾವನಾತ್ಮಕ ಒತ್ತಡವನ್ನು ಅನುಭವಿಸಿದನೋ ಅದೇ ರೀತಿಯಲ್ಲಿ, ದೇವರ ಸೇವಕರಾದ ನಾವು ಸಹ ಸೈತಾನನಿಂದ ಒತ್ತಡವನ್ನು ನಿರೀಕ್ಷಿಸಸಾಧ್ಯವಿದೆ. (ಯೋಹಾನ 15:20; 1 ಪೇತ್ರ 5:⁠8) ಅಷ್ಟುಮಾತ್ರವಲ್ಲ, ನಾವು ಅಪರಿಪೂರ್ಣರಾಗಿದ್ದೇವೆ. ಆದುದರಿಂದ, ನಾವು ಮನಃಪೂರ್ವಕವಾಗಿ ದೇವರ ಸೇವೆಯನ್ನು ಮಾಡಲು ಪ್ರಯತ್ನಿಸುವುದಾದರೂ, ಹಾಗೆ ಮಾಡುವುದು ಸುಲಭವಾಗಿರುವುದಿಲ್ಲ. ತನ್ನ ಅಪೊಸ್ತಲರಿಗೆ ತಾನು ನೇಮಿಸಿದ ಕೆಲಸಗಳನ್ನು ಮಾಡಲು ಅವರು ಎಷ್ಟೊಂದು ಹೆಣಗಾಡುತ್ತಿದ್ದರು ಎಂಬುದನ್ನು ಯೇಸು ಕಣ್ಣಾರೆ ನೋಡಿದ್ದನು. ಆದುದರಿಂದಲೇ ಅವನು ಹೇಳಿದ್ದು: “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.” (ಮತ್ತಾಯ 26:41) ಹೀಗೆ ಹೇಳಿದಾಗ, ಅವನ ಪರಿಪೂರ್ಣ ಮಾನವ ದೇಹದಲ್ಲಿ ಯಾವುದೇ ದೌರ್ಬಲ್ಯವಿರಲಿಲ್ಲ. ಆದರೂ, ತನ್ನ ಶಿಷ್ಯರಲ್ಲಿದ್ದ ಬಲಹೀನತೆಗಳನ್ನು, ಅಂದರೆ ಅಪರಿಪೂರ್ಣನಾಗಿದ್ದ ಆದಾಮನಿಂದ ಬಾಧ್ಯತೆಯಾಗಿ ಪಡೆದ ಅಪರಿಪೂರ್ಣತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವನು ಹೀಗೆ ಹೇಳಿದ್ದನು. ಆದಾಮನಿಂದ ಬಂದ ಅಪರಿಪೂರ್ಣತೆಯಿಂದ ಮತ್ತು ಇದರ ಫಲಿತಾಂಶವಾಗಿ ಬಂದ ಮಾನವ ಕೊರತೆಗಳ ಕಾರಣದಿಂದ, ಯೆಹೋವನ ಸೇವೆಯಲ್ಲಿ ತಾವು ಮಾಡಲು ಬಯಸುವಂತಹ ಕೆಲಸವನ್ನು ಪೂರೈಸಲು ಅವರು ತುಂಬ ಹೆಣಗಾಡಬೇಕಾಗುತ್ತದೆ ಎಂಬುದು ಯೇಸುವಿಗೆ ಗೊತ್ತಿತ್ತು.

ಆದುದರಿಂದ, ಅಪೊಸ್ತಲ ಪೌಲನಿಗಾದ ಅನಿಸಿಕೆ ನಮಗೂ ಆಗಬಹುದು. ಪೂರ್ಣ ರೀತಿಯಲ್ಲಿ ದೇವರ ಸೇವೆಯನ್ನು ಮಾಡುವ ಅವನ ಸಾಮರ್ಥ್ಯಕ್ಕೆ ಅಪರಿಪೂರ್ಣತೆಯು ತೊಂದರೆಯನ್ನೊಡ್ಡಿದಾಗ, ಅವನು ತುಂಬ ಬೇಸರಗೊಂಡನು. ಈ ವಿಷಯದಲ್ಲಿ ಪೌಲನು ಬರೆದುದು: “ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು.” (ರೋಮಾಪುರ 7:18) ನಾವು ಮಾಡಲು ಬಯಸುವಂತಹ ಎಲ್ಲ ಒಳ್ಳೇ ವಿಷಯಗಳನ್ನು ಸಂಪೂರ್ಣವಾಗಿ ಮಾಡಿಮುಗಿಸಲು ನಾವು ಅಸಮರ್ಥರಾಗಿದ್ದೇವೆ ಎಂದು ನಮಗೂ ಕೆಲವೊಮ್ಮೆ ಅನಿಸುತ್ತದೆ. (ರೋಮಾಪುರ 7:19) ಆದರೆ, ನಮಗೆ ಮನಸ್ಸಿಲ್ಲ ಎಂಬ ಕಾರಣದಿಂದ ಹೀಗಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ನಮ್ಮ ಶಾರೀರಿಕ ಬಲಹೀನತೆಯು ನಮ್ಮ ಅತ್ಯುತ್ತಮ ಪ್ರಯತ್ನಗಳಿಗೂ ತಡೆಯೊಡ್ಡುತ್ತದೆ.

ಆದರೂ ನಾವು ಹತಾಶರಾಗದಿರೋಣ. ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡಲು ನಾವು ಮನಃಪೂರ್ವಕವಾಗಿ ಸಿದ್ಧರಿರುವಲ್ಲಿ, ದೇವರು ಖಂಡಿತವಾಗಿಯೂ ನಮ್ಮ ಸೇವೆಯನ್ನು ಅಂಗೀಕರಿಸುವನು. (2 ಕೊರಿಂಥ 8:12) ದೇವರ ಚಿತ್ತಕ್ಕೆ ಸಂಪೂರ್ಣ ಅಧೀನತೆಯನ್ನು ತೋರಿಸಿದ ಕ್ರಿಸ್ತನ ಮನೋಭಾವವನ್ನೇ ಅನುಕರಿಸಲು ನಾವು ‘ಪ್ರಯಾಸಪಡೋಣ.’ (2 ತಿಮೊಥೆಯ 2:15; ಫಿಲಿಪ್ಪಿ 2:​5-7; 1 ಪೇತ್ರ 4:​1, 2) ಅಂತಹ ಮನಃಪೂರ್ವಕ ಮನೋಭಾವಕ್ಕೆ ಯೆಹೋವನು ಪ್ರತಿಫಲ ನೀಡುವನು ಮತ್ತು ಅದನ್ನು ಬೆಂಬಲಿಸುವನು. ನಮ್ಮ ಬಲಹೀನತೆಗಳನ್ನು ಸರಿದೂಗಿಸಲಿಕ್ಕಾಗಿ ಆತನು ನಮಗೆ “ಬಲಾಧಿಕ್ಯವನ್ನು” ಕೊಡುವನು. (2 ಕೊರಿಂಥ 4:​7-10) ಯೆಹೋವನ ಸಹಾಯದಿಂದ, ನಾವು ಸಹ ಪೌಲನಂತೆ ದೇವರ ಅಮೂಲ್ಯ ಸೇವೆಯಲ್ಲಿ ‘ಆತ್ಮಸಂರಕ್ಷಣೆಗೋಸ್ಕರ ಅತಿಸಂತೋಷದಿಂದ ವೆಚ್ಚಮಾಡಲು’ ಶಕ್ತರಾಗುವೆವು.

[ಪುಟ 21ರಲ್ಲಿರುವ ಚಿತ್ರ]

ತನ್ನ ಪೂರ್ಣ ಸಾಮರ್ಥ್ಯವನ್ನು ಉಪಯೋಗಿಸಿ ಪೌಲನು ಮನಃಪೂರ್ವಕವಾಗಿ ದೇವರ ಸೇವೆಮಾಡಿದನು

[ಪುಟ 23ರಲ್ಲಿರುವ ಚಿತ್ರ]

ತೀವ್ರವಾದ ಒತ್ತಡದ ಕೆಳಗೂ ಯೇಸು ತನ್ನ ತಂದೆಯ ಚಿತ್ತವನ್ನು ಮಾಡಿದನು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ