ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 5/15 ಪು. 21-23
  • “ಸುಮ್ಮನಿರುವ ಸಮಯ, ಮಾತಾಡುವ ಸಮಯ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಸುಮ್ಮನಿರುವ ಸಮಯ, ಮಾತಾಡುವ ಸಮಯ”
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಾಲಗೆಯನ್ನು ಪಳಗಿಸುವ ವಿಧಾನಗಳು
  • ಕೋಪಗೊಂಡಾಗ ನಾಲಗೆಯನ್ನು ನಿಯಂತ್ರಿಸುವುದು
  • ಮೌನವು ಒಂದು ಪರಿಹಾರವಾಗಿರದ ಸಮಯವಾಗಿರುವಾಗ
  • ದೇವರ ರಾಜ್ಯದ ಕುರಿತಾಗಿ “ಮಾತಾಡುವ ಸಮಯ”
  • ನಿಮ್ಮ ನಾಲಿಗೆಯನ್ನು ಒಳ್ಳೇದಕ್ಕೆ ಬಳಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ನಾನ್ಯಾಕೆ ಯಾವಾಗಲೂ ಹಿಂದೆ-ಮುಂದೆ ಯೋಚಿಸದೆ ಮಾತಾಡ್ತೀನಿ?
    ಯುವಜನರ ಪ್ರಶ್ನೆಗಳು
  • ನಾಲಗೆಯನ್ನು ನಿಯಂತ್ರಿಸುವ ಮೂಲಕ ಪ್ರೀತಿಗೌರವ ತೋರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಸೌಜನ್ಯಭರಿತ ಮಾತು ಸುಸಂಬಂಧಗಳನ್ನು ಪ್ರವರ್ಧಿಸುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಇನ್ನಷ್ಟು
ಕಾವಲಿನಬುರುಜು—1996
w96 5/15 ಪು. 21-23

“ಸುಮ್ಮನಿರುವ ಸಮಯ, ಮಾತಾಡುವ ಸಮಯ”

“ನಾನು ಆ ಮಾತುಗಳನ್ನು ಹೇಳಬಾರದಾಗಿತ್ತು” ಎಂಬುದಾಗಿ ನೀವು ಎಷ್ಟು ಬಾರಿ ಪ್ರಲಾಪಿಸಿದ್ದೀರಿ? ಆದರೂ, ನೀವು ಸ್ಪಷ್ಟವಾಗಿ ಮಾತಾಡಲು ತಪ್ಪಿಹೋದ ಇತರ ಸಂದರ್ಭಗಳನ್ನು ನೀವು ಜ್ಞಾಪಿಸಿಕೊಳ್ಳಬಹುದು. ಹಿನ್ನೋಟಬೀರುವಲ್ಲಿ, ‘ನಾನು ಏನನ್ನಾದರೂ ಹೇಳಬೇಕಾಗಿತ್ತು’ ಎಂಬುದಾಗಿ ನೀವು ಆಲೋಚಿಸಿದ್ದಿರಬಹುದು.

“ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆಯೆಂದು ಬೈಬಲು ಹೇಳುತ್ತದೆ. (ಪ್ರಸಂಗಿ 3:7) ಹಾಗಾದರೆ, ಯಾವಾಗ ಮಾತಾಡಬೇಕು ಮತ್ತು ಯಾವಾಗ ಸುಮ್ಮನಿರಬೇಕು ಎಂಬುದನ್ನು ನಿರ್ಧರಿಸುವುದರಲ್ಲಿಯೇ ಸಮಸ್ಯೆಯು ಅಡಗಿದೆ. ಅಸಂಗತವಾದ ಸಮಯದಲ್ಲಿ ವಿಷಯಗಳನ್ನು ಮಾಡುವಂತೆ ಮತ್ತು ಹೇಳುವಂತೆ ನಮ್ಮ ಅಪರಿಪೂರ್ಣ ಮಾನವ ಸ್ವಭಾವವು ನಮ್ಮನ್ನು ಅನೇಕಾವರ್ತಿ ಪ್ರಚೋದಿಸುತ್ತದೆ. (ರೋಮಾಪುರ 7:19) ನಮ್ಮ ಸ್ವಚ್ಛಂದವಾದ ನಾಲಗೆಯನ್ನು ನಾವು ಹೇಗೆ ನಿಯಂತ್ರಿಸಬಲ್ಲೆವು?—ಯಾಕೋಬ 3:2.

ನಾಲಗೆಯನ್ನು ಪಳಗಿಸುವ ವಿಧಾನಗಳು

ಯಾವಾಗ ಮಾತಾಡಬೇಕು ಮತ್ತು ಯಾವಾಗ ಮೌನವಾಗಿರಬೇಕೆಂಬುದನ್ನು ನಿರ್ಧರಿಸುವಂತೆ ನಮಗೆ ಸಹಾಯ ಮಾಡಲು, ಸಾಧ್ಯವಿರುವ ಪ್ರತಿಯೊಂದು ಸನ್ನಿವೇಶವನ್ನು ಆವರಿಸಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ನಿಯಮಗಳ ಒಂದು ಉದ್ದವಾದ ಪಟ್ಟಿಯು ನಮಗೆ ಅಗತ್ಯವಿಲ್ಲ. ಬದಲಾಗಿ, ಕ್ರೈಸ್ತ ವ್ಯಕ್ತಿತ್ವದ ಒಂದು ವಾಸ್ತವಿಕ ಭಾಗವಾಗಿರುವ ಗುಣಗಳಿಂದ ನಾವು ಮಾರ್ಗದರ್ಶಿಸಲ್ಪಡಬೇಕಾದ ಅಗತ್ಯವಿದೆ. ಈ ಗುಣಗಳು ಯಾವುವು?

ತನ್ನ ಶಿಷ್ಯರನ್ನು ಪ್ರೇರಿಸುವ ಪ್ರಮುಖ ಗುಣವು ಪ್ರೀತಿಯಾಗಿದೆ ಎಂದು ಯೇಸು ಕ್ರಿಸ್ತನು ವಿವರಿಸಿದನು. “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂದು ಅವನು ಹೇಳಿದನು. (ಯೋಹಾನ 13:35) ಅಂತಹ ಸಹೋದರ ಪ್ರೀತಿಯನ್ನು ನಾವು ಹೆಚ್ಚು ಪ್ರದರ್ಶಿಸಿದಷ್ಟು, ನಾವು ನಮ್ಮ ನಾಲಗೆಯನ್ನು ಹೆಚ್ಚು ಉತ್ತಮವಾಗಿ ನಿಯಂತ್ರಿಸುವೆವು.

ಸಂಬಂಧಿತವಾದ ಎರಡು ಗುಣಗಳು ಸಹ ನಮಗೆ ಮಹತ್ತರವಾಗಿ ಸಹಾಯ ಮಾಡುವವು. ಇವುಗಳಲ್ಲಿ ಒಂದು ದೈನ್ಯವಾಗಿದೆ. ಇದು ನಮ್ಮನ್ನು, ‘ಇತರರು ನಮಗಿಂತಲೂ ಶ್ರೇಷ್ಠರೆಂದು ಎಣಿ’ಸಲು ಶಕ್ತರನ್ನಾಗಿಮಾಡುತ್ತದೆ (ಫಿಲಿಪ್ಪಿ 2:3) ಇನ್ನೊಂದು ಗುಣವು ಶಾಂತಭಾವವಾಗಿದೆ; ಇದು ನಮ್ಮನ್ನು “ಕೇಡನ್ನು ಸಹಿಸಿಕೊಳ್ಳು”ವಂತೆ ಮಾಡುತ್ತದೆ. (2 ತಿಮೊಥೆಯ 2:24, 25) ಈ ಗುಣಗಳನ್ನು ನಾವು ಹೇಗೆ ಅಭ್ಯಾಸಿಸಬೇಕು ಎಂಬುದರ ಕುರಿತಾದ ಪರಿಪೂರ್ಣ ಮಾದರಿಯು ಯೇಸು ಕ್ರಿಸ್ತನಲ್ಲಿದೆ.

ನಾವು ಒತ್ತಡದ ಕೆಳಗಿರುವಾಗ, ನಮ್ಮ ನಾಲಗೆಯನ್ನು ನಿಯಂತ್ರಿಸಿಕೊಳ್ಳುವುದು ಹೆಚ್ಚು ಕಷ್ಟಕರವಾಗಿರುವುದರಿಂದ, ಯೇಸುವಿನ ಮರಣಕ್ಕೆ ಮುಂಚಿನ ರಾತ್ರಿಯನ್ನು, ಅವನು “ಸಂಪೂರ್ಣವಾಗಿ ತೊಂದರೆಗೊಳಿಸ”ಲ್ಪಟ್ಟಿದ್ದಾಗಿನ ಒಂದು ಸಮಯವನ್ನು ನಾವು ಪರಿಗಣಿಸೋಣ. (ಮತ್ತಾಯ 26:37, 38, NW) ಸಕಲ ಮಾನವ ಕುಲದ ಶಾಶ್ವತವಾದ ಭವಿಷ್ಯತ್ತು, ಯೇಸುವು ದೇವರಿಗೆ ನಂಬಿಗಸ್ತನಾಗಿ ಉಳಿಯುವುದರ ಮೇಲೆ ಆಧಾರಿಸಿದ್ದುದರಿಂದ, ಅವನಿಗೆ ಈ ರೀತಿ ಅನಿಸಿದ್ದು ಆಶ್ಚರ್ಯಕರವೇನಲ್ಲ.—ರೋಮಾಪುರ 5:19-21.

ಇದು ಯೇಸುವಿಗೆ, ತನ್ನ ಸ್ವರ್ಗೀಯ ತಂದೆಯೊಂದಿಗೆ ಮಾತಾಡಲಿಕ್ಕಾಗಿದ್ದ ಒಂದು ಸಮಯವಾಗಿತ್ತೆಂಬುದು ನಿಶ್ಚಯ. ಆದುದರಿಂದಲೇ ತನ್ನ ಶಿಷ್ಯರಲ್ಲಿ ಮೂವರಿಗೆ ಎಚ್ಚರವಾಗಿರುತ್ತಾ ಇರುವಂತೆ ಕೇಳಿಕೊಳ್ಳುತ್ತಾ, ಅವನು ಪ್ರಾರ್ಥನೆಮಾಡುವುದಕ್ಕಾಗಿ ಹೊರಟುಹೋದನು. ಸ್ವಲ್ಪ ಸಮಯದ ಬಳಿಕ ಅವನು ಹಿಂದಿರುಗಿಬಂದು, ಅವರು ನಿದ್ರೆ ಮಾಡುತ್ತಿರುವುದನ್ನು ಕಂಡನು. ಆಗ ಅವನು ಪೇತ್ರನಿಗೆ ಹೇಳಿದ್ದು: “ಹೀಗೋ? ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ?” ಪ್ರೀತಿಪೂರ್ವಕವಾದ ಈ ಗದರಿಕೆಯು, ಅವರ ಬಲಹೀನತೆಯ ಗ್ರಹಿಸುವಿಕೆಯನ್ನು ತೋರಿಸಿದ ಮಾತುಗಳಿಂದ ಜೊತೆಗೂಡಿತ್ತು. ಅವನು ಹೇಳಿದ್ದು: “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.” ತದನಂತರ, ಯೇಸು ಪುನಃ ಹಿಂದಿರುಗಿ ಬಂದು ಶಿಷ್ಯರು ನಿದ್ರಿಸಿರುವುದನ್ನು ಕಂಡನು. ಅವನು ಅವರೊಂದಿಗೆ ಕರುಣಾಭರಿತನಾಗಿ ಮಾತಾಡಿದನು ಮತ್ತು “ಅವರನ್ನು ಬಿಟ್ಟುಹೋಗಿ . . . ಮೂರನೆಯ ಸಾರಿ ಪ್ರಾರ್ಥಿಸಿದನು.”—ಮತ್ತಾಯ 26:36-44.

ಯೇಸು, ಮೂರನೆಯ ಬಾರಿ ಶಿಷ್ಯರು ನಿದ್ರಿಸುತ್ತಿರುವುದನ್ನು ಕಂಡಾಗ, ಅವನು ನಿರ್ದಯನಾಗಲಿಲ್ಲ, ಬದಲಿಗೆ ಅಂದದ್ದು: “ನೀವು ಇನ್ನೂ ನಿದ್ದೆಮಾಡಿ ದಣುವಾರಿಸಿಕೊಳ್ಳಿರಿ; ಇಗೋ, ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ದುರ್ಜನರ ಕೈಗೆ ಒಪ್ಪಿಸಲ್ಪಡುತ್ತಾನೆ.” (ಮತ್ತಾಯ 26:45) ಒಂದು ಪ್ರೀತಿಭರಿತವಾದ ಹೃದಯವಿರುವ, ನಿಜವಾಗಿ ಶಾಂತಿಭರಿತವಾದ ಹಾಗೂ ದೀನ ಪ್ರವೃತ್ತಿಯಿರುವ ಯಾರಾದರೊಬ್ಬರು ಮಾತ್ರವೇ, ಅಂತಹ ಕಷ್ಟಕರವಾದ ಒಂದು ಸಮಯದಲ್ಲಿ ನಾಲಗೆಯನ್ನು ಆ ರೀತಿಯಲ್ಲಿ ಉಪಯೋಗಿಸಿದ್ದಿರಸಾಧ್ಯವಿತ್ತು.—ಮತ್ತಾಯ 11:29; ಯೋಹಾನ 13:1.

ತದನಂತರ ಕೂಡಲೆ, ಯೇಸು ಸೆರೆಹಿಡಿಯಲ್ಪಟ್ಟು ವಿಚಾರಣೆಗೆ ಒಳಪಡಿಸಲ್ಪಟ್ಟನು. ಅನೇಕವೇಳೆ, ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ಒಳಗೂಡುತ್ತಿರುವಾಗಲೂ, ಸುಮ್ಮನಿರುವುದು ಅತ್ಯುತ್ತಮವಾದುದಾಗಿದೆ ಎಂಬುದನ್ನು ನಾವು ಇಲ್ಲಿ ಕಲಿಯುತ್ತೇವೆ. ಯೇಸುವನ್ನು ದೋಷಾರೋಪಣೆಗೆ ಸಿಕ್ಕಿಸುವ ಉದ್ದೇಶದಿಂದ, ಮಹಾಯಾಜಕರಿಗೆ ಸತ್ಯವನ್ನು ತಿಳಿದುಕೊಳ್ಳುವುದರಲ್ಲಿ ಹೇಗೂ ಆಸಕ್ತಿಯಿರಲಿಲ್ಲ. ಆದುದರಿಂದ ಈ ಸ್ಫೋಟಕ ವಾತಾವರಣದಲ್ಲಿ ಯೇಸು ಮೌನಿಯಾಗುಳಿದನು.—ಹೋಲಿಸಿರಿ ಮತ್ತಾಯ 7:6.

ಹಾಗಿದ್ದರೂ, ಮಹಾಯಾಜಕನು ಹೀಗೆ ತಗಾದೆಮಾಡಿದಾಗ ಯೇಸು ಮೌನಿಯಾಗುಳಿಯಲಿಲ್ಲ: “ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು.” (ಮತ್ತಾಯ 26:63) ಯೇಸುವು ಆಣೆಯ ಕೆಳಗೆ ಇಡಲ್ಪಟ್ಟದ್ದರಿಂದ, ಇದು ಅವನಿಗೆ ಮಾತಾಡುವ ಸಮಯವಾಗಿತ್ತು. ಆದುದರಿಂದ ಅವನು ಉತ್ತರಿಸಿದ್ದು: “ನೀನೇ ಹೇಳಿದ್ದೀ; ಇದಲ್ಲದೆ ಇನ್ನುಮೇಲೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳ ಮೇಲೆ ಕುಳಿತು ಬರುವದನ್ನೂ ಕಾಣುವಿರಿ ಎಂದು ನಿಮಗೆ ಹೇಳುತ್ತೇನೆ.”—ಮತ್ತಾಯ 26:64.

ಬಹು ಮುಖ್ಯವಾದ ಆ ದಿನದಲ್ಲಿ, ಯೇಸು ತನ್ನ ನಾಲಗೆಯ ಪರಿಪೂರ್ಣ ನಿಯಂತ್ರಣವನ್ನು ಅಭ್ಯಾಸಿಸಿದನು. ಅವನ ವಿದ್ಯಮಾನದಲ್ಲಿ, ಪ್ರೀತಿ, ಶಾಂತಭಾವ, ಮತ್ತು ದೈನ್ಯಗಳು, ಅವನ ವ್ಯಕ್ತಿತ್ವದ ಸ್ವಭಾವಸಿದ್ಧ ಭಾಗಗಳಾಗಿದ್ದವು. ನಾವು ಒತ್ತಡದ ಕೆಳಗಿರುವಾಗ, ನಮ್ಮ ನಾಲಗೆಯನ್ನು ನಿಯಂತ್ರಿಸಲಿಕ್ಕಾಗಿ ನಾವು ಈ ಗುಣಗಳನ್ನು ಹೇಗೆ ಉಪಯೋಗಿಸಬಲ್ಲೆವು?

ಕೋಪಗೊಂಡಾಗ ನಾಲಗೆಯನ್ನು ನಿಯಂತ್ರಿಸುವುದು

ನಾವು ಕೋಪಗೊಳ್ಳುವಾಗ, ಅನೇಕವೇಳೆ ನಾವು ನಮ್ಮ ನಾಲಗೆಯ ನಿಯಂತ್ರಣವನ್ನು ಕಳೆದುಕೊಳ್ಳುತ್ತೇವೆ. ಉದಾಹರಣೆಗಾಗಿ, ಪೌಲ ಮತ್ತು ಬಾರ್ನಬರಿಗೆ ಒಮ್ಮೆ ಭಿನ್ನಾಭಿಪ್ರಾಯಗಳಿದ್ದವು. “ಬಾರ್ನಬನು ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ತಮ್ಮ ಸಂಗಡ ಕರೆದುಕೊಂಡುಹೋಗಬೇಕೆಂದಿದ್ದಾಗ ಪೌಲನು—ನಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಲ್ಲಿ ನಮ್ಮನ್ನು ಬಿಟ್ಟವನನ್ನು ಕರೆದುಕೊಂಡು ಹೋಗುವದು ತಕ್ಕದಲ್ಲವೆಂದು ನೆನಸಿದನು. ಈ ವಿಷಯದಲ್ಲಿ ತೀಕ್ಷ್ಣ ವಾಗ್ವಾದವುಂಟಾಗಿ ಅವರು ಒಬ್ಬರನ್ನೊಬ್ಬರು ಅಗಲಿದರು.”—ಅ. ಕೃತ್ಯಗಳು 15:37-39.

ಕೆಲವು ವರ್ಷಗಳ ವರೆಗೆ ನಿರ್ಮಾಣ ಕಾರ್ಯಯೋಜನೆಗಳಲ್ಲಿ ಕೆಲಸ ಮಾಡಿರುವ ಮೈಕೆಲ್‌a ಹೇಳುವುದು: “ಕಟ್ಟಡ ನಿವೇಶನದಲ್ಲಿ, ನನಗೆ ಚಿರಪರಿಚಿತನಾಗಿದ್ದ ಮತ್ತು ನಾನು ಗೌರವಿಸಿದ ಒಬ್ಬ ವ್ಯಕ್ತಿಯಿದ್ದನು. ಆದರೆ ಅವನು ನನ್ನ ಕೆಲಸದಲ್ಲಿ ಸತತವಾಗಿ ತಪ್ಪುಗಳನ್ನು ಕಂಡುಹಿಡಿಯುವವನೋಪಾದಿ ಕಂಡುಬಂದನು. ನನಗೆ ನೋವಾಯಿತು, ಸಿಟ್ಟುಬಂತು, ಆದರೆ ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಲಿಲ್ಲ. ಒಂದು ದಿನ, ನಾನು ಆಗತಾನೇ ಮಾಡಿಮುಗಿಸಿದ್ದ ಕೆಲಸವೊಂದನ್ನು ಅವನು ಟೀಕಿಸಿದಾಗ, ವಿಷಯಗಳು ಉತ್ಕಟ ಸ್ಥಿತಿಗೆ ತಲಪಿದವು.

“ತಡೆದಿಡಲ್ಪಟ್ಟಿದ್ದ ನನ್ನ ಎಲ್ಲಾ ಭಾವನೆಗಳನ್ನು ನಾನು ಸ್ವತಂತ್ರವಾಗಿ ವ್ಯಕ್ತಪಡಿಸಿದೆ. ಆ ಕ್ಷಣದ ಆವೇಗದಲ್ಲಿ, ನನ್ನ ಸುತ್ತಲೂ ಇದ್ದವರೆಲ್ಲರ ಮೇಲೆ ಇದು ಉಂಟುಮಾಡಿದ್ದಿರಬಹುದಾದ ಕೆಟ್ಟ ಅಭಿಪ್ರಾಯವನ್ನು ನಾನು ಗಣನೆಗೆ ತೆಗೆದುಕೊಳ್ಳಲಾರದವನಾಗಿದ್ದೆ. ಆ ದಿನದ ಉಳಿದ ಸಮಯವೆಲ್ಲಾ ನಾನು ಅವನ ಬಳಿ ಮಾತಾಡಲು ಅಥವಾ ಅವನನ್ನು ನೋಡಲೂ ಬಯಸಲಿಲ್ಲ. ನಾನು ಆ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸಲಿಲ್ಲವೆಂಬುದನ್ನು ಈಗ ನಾನು ಗ್ರಹಿಸುತ್ತೇನೆ. ಸುಮ್ಮನಿದ್ದು, ನಾನು ಶಾಂತನಾದ ಮೇಲೆ ಮಾತಾಡಿದ್ದಿದ್ದರೆ, ಅದು ಹೆಚ್ಚು ಉತ್ತಮವಾಗಿರುತ್ತಿತ್ತು.”

ಸಂತೋಷಕರವಾಗಿ, ಈ ಇಬ್ಬರು ವ್ಯಕ್ತಿಗಳು ತಮ್ಮ ಭಿನ್ನತೆಗಳನ್ನು ಪರಿಹರಿಸಿಕೊಳ್ಳುವಂತೆ ಕ್ರೈಸ್ತ ಪ್ರೀತಿಯು ಅವರನ್ನು ಪ್ರೇರಿಸಿತು. ಮೈಕೆಲ್‌ ವಿವರಿಸುವುದು: “ಸ್ವಲ್ಪ ಬಿಚ್ಚುಮನಸ್ಸಿನ ಸಂವಾದದ ಬಳಿಕ, ನಾವು ಒಬ್ಬರನ್ನೊಬ್ಬರು ಉತ್ತಮವಾಗಿ ಅರ್ಥಮಾಡಿಕೊಂಡೆವು, ಮತ್ತು ಈಗ ನಮ್ಮಲ್ಲಿ ಒಂದು ಪ್ರಬಲವಾದ ಗೆಳೆತನವಿದೆ.”

ಮೈಕೆಲ್‌ ಕಲಿತಂತೆ, ನಾವು ಸ್ವತಃ ಕೋಪಗೊಂಡಿರುವುದನ್ನು ಕಂಡುಕೊಳ್ಳುವುದಾದರೆ, ಕೆಲವೊಮ್ಮೆ ಸುಮ್ಮನಿರುವುದು ವಿವೇಕಯುತವಾದದ್ದಾಗಿದೆ. “ವಿವೇಚನಾಶಕ್ತಿಯುಳ್ಳ ಒಬ್ಬ ವ್ಯಕ್ತಿಯು, ಶಾಂತಭಾವದವನಾಗಿದ್ದಾನೆ” ಎಂಬುದಾಗಿ ಜ್ಞಾನೋಕ್ತಿ 17:27 (NW) ಹೇಳುತ್ತದೆ. ವಿವೇಚನಾಶಕ್ತಿ ಮತ್ತು ಸಹೋದರ ಪ್ರೀತಿಯು, ಯಾವುದು ಹಾನಿಕಾರಕವಾಗಿದೆಯೋ ಅದನ್ನು ಥಟ್ಟನೆ ಹೇಳಿಬಿಡುವ ನಮ್ಮ ಪ್ರಚೋದನೆಯನ್ನು ನಿಯಂತ್ರಿಸಲಿಕ್ಕಾಗಿ ನಮಗೆ ಸಹಾಯ ಮಾಡುವುದು. ನಮ್ಮ ಮನಸ್ಸು ನೋಯಿಸಲ್ಪಟ್ಟಿರುವುದಾದರೆ, ಶಾಂತಿಯನ್ನು ಪುನಃಸ್ಥಾಪಿಸುವ ದೃಷ್ಟಿಯೊಂದಿಗೆ, ಇತರ ವ್ಯಕ್ತಿಯು ಒಬ್ಬನೇ ಇರುವಾಗ, ಅವನೊಂದಿಗೆ ಶಾಂತ ಮತ್ತು ದೀನಭಾವದಿಂದ ನಾವು ಮಾತಾಡೋಣ. ಈಗಾಗಲೇ ಕೋಪದ ಕೆರಳುವಿಕೆಯು ಸಂಭವಿಸಿರುವಲ್ಲಿ ಆಗೇನು? ಆಗ ಪ್ರೀತಿಯು, ನಮ್ಮ ಅಹಂಕಾರವನ್ನು ನಿಗ್ರಹಿಸುವಂತೆ ಹಾಗೂ ದೈನ್ಯದಿಂದ ಕ್ಷಮಾಪಣೆ ಕೇಳಿಕೊಳ್ಳಲು ಪ್ರಯತ್ನಿಸುವಂತೆ ನಮ್ಮನ್ನು ಪ್ರಚೋದಿಸುವುದು. ಪ್ರಾಮಾಣಿಕವಾದ ಸಂವಾದದ ಮೂಲಕ, ಮಾತಾಡುವ, ವಿಷಾದವನ್ನು ವ್ಯಕ್ತಪಡಿಸುವ, ಮತ್ತು ನೋವಿನ ಅನಿಸಿಕೆಗಳನ್ನು ವಾಸಿಮಾಡುವ ಸಮಯವು ಇದಾಗಿದೆ.—ಮತ್ತಾಯ 5:23, 24.

ಮೌನವು ಒಂದು ಪರಿಹಾರವಾಗಿರದ ಸಮಯವಾಗಿರುವಾಗ

ಕೋಪ ಅಥವಾ ಕೆರಳಿಕೆಯು, ನಮ್ಮನ್ನು ರೇಗಿಸುವ ವ್ಯಕ್ತಿಗೆ ನಾವು ಮೌನ ಚಿಕಿತ್ಸೆಯನ್ನು ಕೊಡುವಂತೆ ನಮ್ಮನ್ನು ಪ್ರಚೋದಿಸಬಲ್ಲದು. ಇದು ತೀರ ಹಾನಿಕರವಾಗಿರಸಾಧ್ಯವಿದೆ. “ನಮ್ಮ ವಿವಾಹದ ಪ್ರಥಮ ವರ್ಷದಲ್ಲಿ, ಒಮ್ಮೆಲೆ ನಾನು ಅನೇಕ ದಿವಸಗಳ ವರೆಗೆ ನನ್ನ ಗಂಡನೊಂದಿಗೆ ಮಾತಾಡದಿದ್ದಂತಹ ಸಂದರ್ಭಗಳಿದ್ದವು” ಎಂದು ಮಾರಿಯb ಒಪ್ಪಿಕೊಳ್ಳುತ್ತಾಳೆ. “ಸಾಮಾನ್ಯವಾಗಿ, ಇದು ದೊಡ್ಡ ಸಮಸ್ಯೆಗಳ ಕಾರಣದಿಂದಾಗಿ ಅಲ್ಲ, ಬದಲಾಗಿ ಸಣ್ಣಪುಟ್ಟ ಸಿಟ್ಟುಗೊಳ್ಳುವಿಕೆಗಳ ಸೇರಿಕೆಯಿಂದಾಗಿಯೇ. ಅವು ಪರ್ವತದಂತಹ ವಿಘ್ನವಾಗಿ ಪರಿಣಮಿಸುವ ವರೆಗೆ, ಈ ಎಲ್ಲಾ ರೇಗಿಸುವಿಕೆಗಳ ಕುರಿತಾಗಿ ನಾನು ಕೊರಗುತ್ತಾ ಇದ್ದೆ. ತದನಂತರ ಇನ್ನುಮುಂದೆ ನಾನು ಅದನ್ನು ತಾಳಿಕೊಳ್ಳಲಸಾಧ್ಯವಾದ ಕ್ಷಣವು ಬಂತು, ಮತ್ತು ನನ್ನ ಆಶಾಭಂಗವು ಕೊನೆಗೊಳ್ಳುವ ತನಕ ನಾನು ನನ್ನ ಗಂಡನೊಂದಿಗೆ ಮಾತಾಡುವುದನ್ನೇ ನಿಲ್ಲಿಸಿದೆ.”

ಮಾರಿಯ ಕೂಡಿಸುವುದು: “ಒಂದು ನಿರ್ದಿಷ್ಟವಾದ ಬೈಬಲ್‌ ವಚನವು—‘ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ,’—ನನ್ನ ಆಲೋಚನೆಯನ್ನು ಪುನಃ ಸರಿಪಡಿಸಿಕೊಳ್ಳುವಂತೆ ನನಗೆ ಸಹಾಯ ಮಾಡಿತು. ಸಮಸ್ಯೆಗಳು ಏಳದಂತೆ ಮಾಡಲಿಕ್ಕಾಗಿ, ನನ್ನ ಗಂಡನು ಹಾಗೂ ನಾನು, ಸಂವಾದವನ್ನು ಉತ್ತಮಗೊಳಿಸುವುದರಲ್ಲಿ ಕಷ್ಟಪಟ್ಟು ಕೆಲಸಮಾಡಿದೆವು. ಅದು ಸುಲಭವಾಗಿರಲಿಲ್ಲವಾದರೂ, ವೈವಾಹಿಕ ಜೀವನದ ಹತ್ತು ವರ್ಷಗಳ ಬಳಿಕ, ಪೂರ್ತಿ ಮೌನದ ಈ ಕಾಲಾವಧಿಗಳು ಹೆಚ್ಚು ವಿರಳವಾಗಿವೆ ಎಂಬುದನ್ನು ಹೇಳಲು ನಾನು ಸಂತೋಷಿಸುತ್ತೇನೆ. ಆದರೂ, ಈ ಪ್ರವೃತ್ತಿಯನ್ನು ನಿಯಂತ್ರಿಸಲಿಕ್ಕಾಗಿ ನಾನು ಇನ್ನೂ ಕಾರ್ಯನಡಿಸುತ್ತಿದ್ದೇನೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.”—ಎಫೆಸ 4:26.

ಮಾರಿಯ ಕಂಡುಕೊಂಡಂತೆ, ಇಬ್ಬರು ವ್ಯಕ್ತಿಗಳ ಮಧ್ಯೆ ಒತ್ತಡಗಳು ಅಸ್ತಿತ್ವದಲ್ಲಿರುವಾಗ, ಸಂವಾದದಲ್ಲಿನ ಕುಸಿತವು ಒಂದು ಪರಿಹಾರವಾಗಿರುವುದಿಲ್ಲ. ಆ ಪರಿಸ್ಥಿತಿಗಳ ಕೆಳಗೆ, ಅಸಮಾಧಾನವು ಬೆಳೆಯುವುದು ಸಂಭವನೀಯ, ಮತ್ತು ಸಂಬಂಧವು ಹಾನಿಗೊಳಿಸಲ್ಪಡಬಹುದು. ನಾವು ‘ಬೇಗ ಸಮಾಧಾನ ಮಾಡಿ’ಕೊಳ್ಳುವವರಾಗಿರಬೇಕು ಎಂದು ಯೇಸು ಹೇಳಿದನು. (ಮತ್ತಾಯ 5:25) “ಸಮಯೋಚಿತವಾದ ಮಾತುಗಳು” ‘ಶಾಂತಿಯನ್ನು ಬೆನ್ನಟ್ಟಲು’ ನಮಗೆ ಸಹಾಯ ಮಾಡಬಲ್ಲವು.—ಜ್ಞಾನೋಕ್ತಿ 25:11; 1 ಪೇತ್ರ 3:11, NW.

ನಮಗೆ ಸಹಾಯದ ಅಗತ್ಯವಿರುವಾಗ ಸಹ, ನಾವು ಮಾತಾಡುವ ಅಗತ್ಯವಿದೆ. ಸ್ವಲ್ಪ ಆತ್ಮಿಕ ಸಮಸ್ಯೆಯ ಕಾರಣದಿಂದ ನಾವು ಕಷ್ಟಾನುಭವಿಸುತ್ತಿರುವುದಾದರೆ, ಇತರರ ಮೇಲೆ ಹೊರೆಹೊರಿಸಲು ನಿಮಗೆ ಮನಸ್ಸಿಲ್ಲದ ಅನಿಸಿಕೆಯಾಗಬಹುದು. ಆದರೆ ನಾವು ಸುಮ್ಮನಾಗುವುದಾದರೆ, ಸಮಸ್ಯೆಯು ಇನ್ನೂ ಕೆಟ್ಟದ್ದಾಗಿ ಪರಿಣಮಿಸಬಹುದು. ನೇಮಿತ ಕ್ರೈಸ್ತ ಹಿರಿಯರು ನಮಗಾಗಿ ಕಾಳಜಿವಹಿಸುತ್ತಾರೆ, ಮತ್ತು ಅವರು ನಮಗೆ ಸಹಾಯ ಮಾಡುವಂತೆ ನಾವು ಅನುಮತಿಸುವಲ್ಲಿ, ಅವರು ನಿಸ್ಸಂದೇಹವಾಗಿ ಸಹಾಯ ಮಾಡಲು ಆತುರಪಡುವರು. ಇದು ನಾವು ಮಾತಾಡಬೇಕಾಗಿರುವ ಒಂದು ಸಮಯವಾಗಿದೆ.—ಯಾಕೋಬ 5:13-16.

ಎಲ್ಲಕ್ಕಿಂತಲೂ ಹೆಚ್ಚಾಗಿ, ಯೇಸು ಮಾಡಿದಂತೆ ನಾವು ಹೃತ್ಪೂರ್ವಕವಾದ ಪ್ರಾರ್ಥನೆಯಲ್ಲಿ ಕ್ರಮವಾಗಿ ಯೆಹೋವನೊಂದಿಗೆ ಮಾತಾಡಬೇಕು. ವಾಸ್ತವವಾಗಿ, ನಾವು ನಮ್ಮ ಸ್ವರ್ಗೀಯ ತಂದೆಯೊಂದಿಗೆ ‘ನಮ್ಮ ಹೃದಯವನ್ನು ತೋಡಿ’ಕೊಳ್ಳೋಣ.—ಕೀರ್ತನೆ 62:8, NW; ಹೋಲಿಸಿರಿ ಇಬ್ರಿಯ 5:7.

ದೇವರ ರಾಜ್ಯದ ಕುರಿತಾಗಿ “ಮಾತಾಡುವ ಸಮಯ”

ಕ್ರೈಸ್ತ ಶುಶ್ರೂಷೆಯು, ಅಂತ್ಯವು ಬರುವುದಕ್ಕೆ ಮೊದಲು ನೆರವೇರಿಸಲ್ಪಡಬೇಕಾದ ಒಂದು ದೈವಿಕ ನೇಮಕವಾಗಿದೆ. ಆದುದರಿಂದಲೇ ಹಿಂದೆಂದೂ ಇರದಷ್ಟು ಅತ್ಯಾವಶ್ಯಕವಾಗಿ, ಯೆಹೋವನ ಸೇವಕರು ಆ ರಾಜ್ಯದ ಸುವಾರ್ತೆಯನ್ನು ಪ್ರಕಟಿಸಬೇಕಾಗಿದೆ. (ಮಾರ್ಕ 13:10) ಅಪೊಸ್ತಲರಂತೆ, ನಿಜ ಕ್ರೈಸ್ತರು, ‘ತಾವು ಕಂಡಿರುವ ಮತ್ತು ಕೇಳಿರುವ ವಿಷಯಗಳ ಕುರಿತಾಗಿ ಮಾತಾಡುವುದನ್ನು ನಿಲ್ಲಿಸಲಾರರು.’—ಅ. ಕೃತ್ಯಗಳು 4:20.

ಪ್ರತಿಯೊಬ್ಬರೂ ಸುವಾರ್ತೆಯನ್ನು ಕೇಳಲು ಬಯಸುವುದಿಲ್ಲವೆಂಬುದು ನಿಶ್ಚಯ. ವಾಸ್ತವದಲ್ಲಿ, ತನ್ನ ಶಿಷ್ಯರನ್ನು ಸಾರುವುದಕ್ಕೆ ಕಳುಹಿಸುತ್ತಿರುವಾಗ, ‘ಯೋಗ್ಯರಾಗಿದ್ದವರನ್ನು ಹುಡುಕಿರಿ’ ಎಂಬುದಾಗಿ ಯೇಸು ಅವರಿಗೆ ಬುದ್ಧಿಹೇಳಿದನು. ತನ್ನನ್ನು ಆರಾಧಿಸುವಂತೆ ಯೆಹೋವನು ಯಾರನ್ನೂ ಒತ್ತಾಯಿಸದ ಕಾರಣದಿಂದ, ರಾಜ್ಯ ಸಂದೇಶವನ್ನು ಕಠಿನವಾಗಿ ತಿರಸ್ಕರಿಸುವ ಯಾರೊಂದಿಗಾದರೂ ನಾವು ಹಟಮಾರಿತನದಿಂದ ಮಾತಾಡುತ್ತಾ ಇರಬಾರದು. (ಮತ್ತಾಯ 10:11-14) ಆದರೆ “ನಿತ್ಯಜೀವಕ್ಕೆ ನೇಮಿಸಲ್ಪಟ್ಟವ”ರೊಂದಿಗೆ, ಯೆಹೋವನ ರಾಜತ್ವದ ಕುರಿತಾಗಿ ಮಾತಾಡಲು ನಾವು ಹರ್ಷಗೊಳ್ಳುತ್ತೇವೆ.—ಅ. ಕೃತ್ಯಗಳು 13:48; ಕೀರ್ತನೆ 145:10-13.

ಪ್ರೀತಿ, ಶಾಂತಭಾವ, ಮತ್ತು ದೈನ್ಯಗಳು, ಬಿರುಸಾಗಿ ಮಾತಾಡುವ ಅಥವಾ ದೀರ್ಘವಾದ ಮೌನದೊಳಗೆ ಸರಿಯುವ ನಮ್ಮ ಅಪರಿಪೂರ್ಣ ಪ್ರವೃತ್ತಿಯನ್ನು ನಿಯಂತ್ರಿಸಲು ನಮಗೆ ಸಹಾಯ ಮಾಡಬಲ್ಲ ಗುಣಗಳಾಗಿವೆ. ಈ ಗುಣಗಳಲ್ಲಿ ನಾವು ಬೆಳೆದಂತೆ, ಮಾತಾಡಲಿಕ್ಕಾಗಿರುವ ಉಪಯುಕ್ತ ಸಮಯ ಮತ್ತು ಅನುಪಯುಕ್ತ ಸಮಯದ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಹೆಚ್ಚು ಉತ್ತಮವಾಗಿ ಸನ್ನದ್ಧರಾಗಿರುವೆವು.

[ಅಧ್ಯಯನ ಪ್ರಶ್ನೆಗಳು]

a  ಅವನ ನಿಜವಾದ ಹೆಸರಲ್ಲ.

b  ಅವಳ ನಿಜವಾದ ಹೆಸರಲ್ಲ.

[ಪುಟ 23 ರಲ್ಲಿರುವ ಚಿತ್ರ]

ಒಳ್ಳೆಯ ಸಂವಾದದ ಮುಖಾಂತರ ಸಮಸ್ಯೆಗಳನ್ನು ಪರಿಹರಿಸಸಾಧ್ಯವಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ