“ಉಪ್ಪು ಸಪ್ಪಗಾದರೆ”
ಅದಕ್ಕಾಗಿ ಯುದ್ಧಗಳು ಸಹ ನಡೆದಿವೆ. ಅದನ್ನು ವಿನಿಮಯ ಮಾಧ್ಯಮವಾಗಿ ಉಪಯೋಗಿಸಲಾಗಿದೆ. ಪ್ರಾಚೀನ ಕಾಲದ ಚೀನಾದಲ್ಲಿ ಅದು ಮೌಲ್ಯದಲ್ಲಿ ಬಂಗಾರದ ನಂತರ ಎರಡನೆಯ ಸ್ಥಾನವನ್ನು ಪಡೆದಿತ್ತು. ಹೌದು, ಉಪ್ಪು ಬಹಳ ಸಮಯದಿಂದಲೂ ಮಾನವರಿಂದ ಬಹಳ ಅಮೂಲ್ಯವಾದ ವಸ್ತುವಾಗಿ ಪರಿಗಣಿಸಲ್ಪಟ್ಟಿದೆ. ಇಂದಿಗೂ ಸಹ, ಉಪ್ಪಿಗೆ ವಾಸಿಮಾಡುವ ಮತ್ತು ರೋಗಾಣುಗಳನ್ನು ನಾಶಮಾಡುವ ಶಕ್ತಿಯಿರುವುದಾಗಿ ಒಪ್ಪಲಾಗುತ್ತಿದೆ, ಮತ್ತು ಲೋಕದ ಸುತ್ತಲೂ ಉಪ್ಪನ್ನು ರುಚಿ ಹೆಚ್ಚಿಸುವ ಮತ್ತು ವಸ್ತುಗಳು ಹಾಳಾಗದಂತೆ ಕಾಪಾಡುವ ಸಂರಕ್ಷಕ ಪದಾರ್ಥವನ್ನಾಗಿಯೂ ಉಪಯೋಗಿಸಲಾಗುತ್ತಿದೆ.
ಉಪ್ಪಿಗೆ ಅನೇಕ ಅಪೇಕ್ಷಣೀಯ ಗುಣಗಳು ಮತ್ತು ಉಪಯೋಗಗಳು ಇರುವುದರಿಂದ, ಬೈಬಲಿನಲ್ಲಿ ಅದನ್ನು ಸಾಂಕೇತಿಕವಾಗಿ ಬಳಸಲಾಗಿರುವುದು ಆಶ್ಚರ್ಯಕರವಾದ ಸಂಗತಿಯೇನಲ್ಲ. ಉದಾಹರಣೆಗೆ ಮೋಶೆಯ ನಿಯಮಶಾಸ್ತ್ರದಲ್ಲಿ, ಯೆಹೋವನಿಗೆ ಬಲಿಪೀಠದ ಮೇಲೆ ಅರ್ಪಿಸಲಾಗುತ್ತಿದ್ದ ಯಾವುದೇ ಪದಾರ್ಥವನ್ನು ಉಪ್ಪು ಹಾಕಿಯೇ ಸಮರ್ಪಿಸಬೇಕಾಗುತ್ತಿತ್ತು. (ಯಾಜಕಕಾಂಡ 2:13) ಯಜ್ಞಗಳ ರುಚಿಯನ್ನು ಹೆಚ್ಚಿಸುವುದಕ್ಕಾಗಿ ಉಪ್ಪನ್ನು ಹಾಕುತ್ತಿರಲಿಲ್ಲ, ಬದಲಿಗೆ ಕೊಳೆಯುವಿಕೆಯಿಂದ ಅಥವಾ ಕೆಡುವಿಕೆಯಿಂದ ಮುಕ್ತವಾಗಿರುವುದನ್ನು ಉಪ್ಪು ಸೂಚಿಸುತ್ತಿದ್ದುದ್ದರಿಂದ ಅದನ್ನು ಹಾಕುತ್ತಿದ್ದರು.
ಯೇಸು ಕ್ರಿಸ್ತನು ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ ತನ್ನ ಹಿಂಬಾಲಕರಿಗೆ ಹೀಗಂದನು: “ನೀವು ಭೂಮಿಗೆ ಉಪ್ಪಾಗಿದ್ದೀರಿ.” (ಮತ್ತಾಯ 5:13) ಹೀಗೆ ಹೇಳಿದಾಗ, ಅವರು ಇತರರಿಗೆ ದೇವರ ರಾಜ್ಯವನ್ನು ಸಾರುವ ಮೂಲಕ ತಮ್ಮ ಕೇಳುಗರ ಮೇಲೆ ಸಂರಕ್ಷಕ, ಅಥವಾ ಜೀವರಕ್ಷಕ ಪ್ರಭಾವವನ್ನು ಬೀರುವರೆಂಬುದನ್ನು ಯೇಸು ಅರ್ಥೈಸಿದನು. ನಿಜ, ಯೇಸುವಿನ ಮಾತುಗಳನ್ನು ಅನ್ವಯಿಸಿಕೊಂಡವರು ತಾವು ವಾಸಿಸುತ್ತಿದ್ದ ಹಾಗೂ ಕೆಲಸ ಮಾಡುತ್ತಿದ್ದ ಸಮಾಜಗಳಲ್ಲಿ ನೈತಿಕ ಹಾಗೂ ಆತ್ಮಿಕ ರೀತಿಯಲ್ಲಿ ಕ್ಷಯಿಸಿಹೋಗುವಿಕೆಯಿಂದ ಸಂರಕ್ಷಿಸಲ್ಪಡಲಿದ್ದರು.—1 ಪೇತ್ರ 4:1-3.
ಆದಾಗ್ಯೂ, ಯೇಸುವು ಎಚ್ಚರಿಕೆಯನ್ನು ಕೊಡುತ್ತಾ ಮುಂದುವರಿಸಿದ್ದು: “ಉಪ್ಪು ಸಪ್ಪಗಾದರೆ . . . ಜನರು ಅದನ್ನು ಹೊರಗೆಹಾಕಿ ತುಳಿಯುವದಕ್ಕೆ ಅದು ಯೋಗ್ಯವೇ ಹೊರತು ಮತ್ತಾವ ಕೆಲಸಕ್ಕೂ ಬಾರದು.” ಇದರ ಕುರಿತಾಗಿ ಹೇಳಿಕೆಯನ್ನು ನೀಡುತ್ತಾ, ಬೈಬಲ್ ವಿದ್ವಾಂಸನಾದ ಆ್ಯಲ್ಬರ್ಟ್ ಬಾರ್ನ್ಸ್ ಹೇಳಿದ್ದೇನೆಂದರೆ, ಯೇಸುವಿಗೆ ಮತ್ತು ಅವನ ಅಪೊಸ್ತಲರಿಗೆ ಪರಿಚಯವಿದ್ದ ಉಪ್ಪು “ಅಶುದ್ಧವಾಗಿದ್ದ, ಸಸ್ಯಗಳಿಂದ ಮತ್ತು ಮಣ್ಣಿನ ಪದಾರ್ಥಗಳಿಂದ ಮಿಶ್ರಿತವಾಗಿದ್ದ ಉಪ್ಪಾಗಿತ್ತು.” ಹೀಗೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, “ದೊಡ್ಡ ಪ್ರಮಾಣದಲ್ಲಿ ಮಣ್ಣಿನಂತಹ ಪದಾರ್ಥವು” ಮಾತ್ರ ಉಳಿದೀತು. “ಅದು ಹಾದಿ ಅಥವಾ ಕಾಲುದಾರಿಗಳಲ್ಲಿ ನಾವು ಹಾಕುವ ಹೊಯ್ಗೆಯ ಉಪಯೋಗಕ್ಕೇ ಹೊರತು . . . ಇನ್ನಾವ ಕೆಲಸಕ್ಕೂ ಬಾರದ್ದಾಗಿತ್ತು,” ಎಂದು ಬಾರ್ನ್ಸ್ ಗಮನಿಸಿದರು.
ಈ ಎಚ್ಚರಿಕೆಯನ್ನು ಪಾಲಿಸುತ್ತಾ, ಕ್ರೈಸ್ತರು ತಮ್ಮ ಬಹಿರಂಗ ಸಾಕ್ಷಿಕಾರ್ಯವನ್ನು ನಿಲ್ಲಿಸದಿರುವಂತೆ ಅಥವಾ ಭಕ್ತಿಹೀನ ನಡತೆಯ ನಮೂನೆಗಳಿಗೆ ಪುನಃ ಹಿಂದಿರುಗಿ ಹೋಗದಿರುವಂತೆ ಜಾಗ್ರತೆ ವಹಿಸಬೇಕು. ಇಲ್ಲವಾದರೆ ಅವರು ಆತ್ಮಿಕವಾಗಿ ಕುಂದಿಹೋಗಿ ‘ಉಪ್ಪಿನಂತೆ ಸಪ್ಪಗಾಗಿ’ ಉಪಯೋಗಕ್ಕೆ ಬಾರದವರಾಗಸಾಧ್ಯವಿದೆ.