ಹೆತ್ತವರು ಮತ್ತು ಮಕ್ಕಳು: ದೇವರಿಗೆ ಪ್ರಥಮ ಸ್ಥಾನವನ್ನು ಕೊಡಿರಿ!
“ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು.”—ಪ್ರಸಂಗಿ 12:13.
1. ಯಾವ ಭಯವನ್ನು ಹೆತ್ತವರೂ ಮಕ್ಕಳೂ ಬೆಳೆಸಿಕೊಳ್ಳುವುದು ಅಗತ್ಯ, ಮತ್ತು ಅದು ಅವರಿಗೆ ಏನನ್ನು ತರುವುದು?
“ಯೆಹೋವನ ಭಯವು ಅವನಿಗೆ ಪರಿಮಳಿಸುವದು” ಎಂದು ಯೇಸು ಕ್ರಿಸ್ತನ ಕುರಿತಾಗಿ ಒಂದು ಪ್ರವಾದನೆಯು ಹೇಳಿತು. (ಯೆಶಾಯ 11:3) ಆತನ ಭಯವು ಅಗತ್ಯವಾಗಿ ಒಂದು ಅಗಾಧವಾದ ಪೂಜ್ಯಭಾವನೆ ಹಾಗೂ ದೇವರ ಭಯಭಕ್ತಿ, ತಾನು ದೇವರನ್ನು ಪ್ರೀತಿಸಿದರ್ದಿಂದ ಆತನನ್ನು ಅಸಂತೋಷಪಡಿಸುವ ಭಯವಾಗಿತ್ತು. ದೇವರ ಕುರಿತ ಕ್ರಿಸ್ತನಂತಹ ಭಯವನ್ನು ಹೆತ್ತವರು ಮತ್ತು ಮಕ್ಕಳು ಬೆಳೆಸಿಕೊಳ್ಳುವ ಅಗತ್ಯವಿದೆ, ಅದು ಯೇಸುವಿಗೆ ಆನಂದವನ್ನು ತಂದಂತೆ ಅವರಿಗೂ ಆನಂದವನ್ನು ತರುವುದು. ಆತನ ಆಜೆಗ್ಞಳಿಗೆ ವಿಧೇಯರಾಗುವ ಮೂಲಕ ಅವರು ತಮ್ಮ ಜೀವಿತಗಳಲ್ಲಿ ದೇವರಿಗೆ ಪ್ರಥಮ ಸ್ಥಾನವನ್ನು ಕೊಡುವ ಅಗತ್ಯವಿದೆ. ಒಬ್ಬ ಬೈಬಲ್ ಬರಹಗಾರನಿಗನುಸಾರ, “ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.
2. ಧರ್ಮಶಾಸ್ತ್ರದ ಅತಿ ಪ್ರಾಮುಖ್ಯ ಆಜ್ಞೆ ಯಾವುದಾಗಿತ್ತು, ಮತ್ತು ಅದನ್ನು ಪ್ರಧಾನವಾಗಿ ಯಾರಿಗೆ ಕೊಡಲಾಗಿತ್ತು?
2 ಧರ್ಮಶಾಸ್ತ್ರದ ಅತ್ಯಂತ ಪ್ರಾಮುಖ್ಯವಾದ ಆಜ್ಞೆಯು, ನಾವು ‘ಯೆಹೋವನನ್ನು ನಮ್ಮ ಪೂರ್ಣ ಹೃದಯ, ಪ್ರಾಣ, ಮತ್ತು ಜೀವಶಕ್ತಿಯಿಂದ ಪ್ರೀತಿಸ’ ಬೇಕು ಎಂಬುದಾಗಿದ್ದು, ಪ್ರಧಾನವಾಗಿ ಹೆತ್ತವರಿಗೆ ಅದು ಕೊಡಲ್ಪಟ್ಟಿತ್ತು. ಧರ್ಮಶಾಸ್ತ್ರದ ಇನ್ನೂ ಹೆಚ್ಚಿನ ಮಾತುಗಳಿಂದ ಇದು ತೋರಿಸಲ್ಪಟ್ಟಿದೆ: “ಇವುಗಳನ್ನು [ಪ್ರೀತಿಪೂರ್ಣನಾದ ಯೆಹೋವನ ಕುರಿತಾದ ಈ ಮಾತುಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:4-7; ಮಾರ್ಕ 12:28-30) ಹೀಗೆ ತಾವು ಸ್ವತಃ ಆತನನ್ನು ಪ್ರೀತಿಸುವ ಮೂಲಕ ಮತ್ತು ಅದನ್ನೇ ಮಾಡುವಂತೆ ತಮ್ಮ ಮಕ್ಕಳಿಗೆ ಬೋಧಿಸುವ ಮೂಲಕ, ದೇವರಿಗೆ ಪ್ರಥಮ ಸ್ಥಾನವನ್ನು ಕೊಡುವಂತೆ ಹೆತ್ತವರು ಆಜ್ಞಾಪಿಸಲ್ಪಟ್ಟಿದ್ದರು.
ಒಂದು ಕ್ರೈಸ್ತ ಜವಾಬ್ದಾರಿ
3. ಮಕ್ಕಳಿಗೆ ಗಮನ ಕೊಡುವ ಪ್ರಾಮುಖ್ಯವನ್ನು ಯೇಸು ಹೇಗೆ ತೋರಿಸಿದನು?
3 ಎಳೆಯ ಮಕ್ಕಳ ಕಡೆಗೆ ಸಹ ಗಮನವನ್ನು ಕೊಡುವುದರ ಪ್ರಮುಖತೆಯನ್ನು ಯೇಸು ಪ್ರದರ್ಶಿಸಿದನು. ಯೇಸುವಿನ ಭೂಶುಶ್ರೂಷೆಯ ಕೊನೆಯಲ್ಲಿ, ಒಂದು ಸಂದರ್ಭದಲ್ಲಿ ಜನರು ತಮ್ಮ ಶಿಶುಗಳನ್ನು ಆತನ ಬಳಿಗೆ ಕರೆತರಲಾರಂಭಿಸಿದರು. ತೊಂದರೆಪಡಿಸಲು ಯೇಸು ತೀರ ಕಾರ್ಯಮಗ್ನನಿದ್ದನೆಂದು ಭಾವಿಸುತ್ತಾ, ಶಿಷ್ಯರು ಜನರನ್ನು ತಡೆಯಲು ಪ್ರಯತ್ನಿಸಿದರೆಂಬುದು ಸ್ಪಷ್ಟ. ಆದರೆ ಯೇಸು ತನ್ನ ಶಿಷ್ಯರನ್ನು ಖಂಡಿಸಿದ್ದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡಿಮ್ಡಾಡಬೇಡಿರಿ.” ಯೇಸುವು “ಅವುಗಳನ್ನು [“ಮಕ್ಕಳನ್ನು,” NW] ಅಪ್ಪಿಕೊಂಡ”ನು ಸಹ. ಹೀಗೆ ಎಳೆಯರಿಗೆ ಗಮನವನ್ನು ಕೊಡುವುದರ ಪ್ರಮುಖತೆಯನ್ನು ಸ್ಪರ್ಶಿಸುವ ರೀತಿಯಲ್ಲಿ ತೋರಿಸಿದನು.—ಲೂಕ 18:15-17; ಮಾರ್ಕ 10:13-16.
4. “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ,” ಎಂಬ ಆಜ್ಞೆಯು ಯಾರಿಗೆ ಕೊಡಲ್ಪಟ್ಟಿತ್ತು, ಮತ್ತು ಅವರು ಏನು ಮಾಡುವಂತೆ ಇದು ಕೇಳಿಕೊಂಡಿತು?
4 ತನ್ನ ಹಿಂಬಾಲಕರು ತಮ್ಮ ಸ್ವಂತ ಮಕ್ಕಳ ಹೊರತಾಗಿ ಇತರರಿಗೆ ಬೋಧಿಸುವ ಜವಾಬ್ದಾರಿಯನ್ನು ಹೊಂದಿದ್ದರು ಎಂಬುದನ್ನು ಸಹ ಯೇಸು ಸ್ಪಷ್ಟಪಡಿಸಿದನು. ತನ್ನ ಮರಣ ಮತ್ತು ಪುನರುತ್ಥಾನದ ಬಳಿಕ ಯೇಸು, ಕೆಲವು ಹೆತ್ತವರನ್ನು ಒಳಗೊಂಡು “ಒಂದೇ ಸಮಯದಲ್ಲಿ ಐನೂರು ಮಂದಿಗಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು.” (1 ಕೊರಿಂಥ 15:6) ಎಲ್ಲಿ ತನ್ನ 11 ಮಂದಿ ಅಪೊಸ್ತಲರು ಸಹ ಒಟ್ಟುಗೂಡಿಸಲ್ಪಟ್ಟಿದ್ದರೊ, ಆ ಗಲಿಲಾಯದಲ್ಲಿನ ಪರ್ವತದಲ್ಲಿ ಇದು ಸಂಭವಿಸಿತೆಂಬುದು ಸುವ್ಯಕ್ತ. ಅಲ್ಲಿ ಯೇಸು ಅವರೆಲ್ಲರಿಗೆ ಪ್ರೋತ್ಸಾಹಿಸಿದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ.” (ಮತ್ತಾಯ 28:16-20, ಓರೆಅಕ್ಷರಗಳು ನಮ್ಮವು.) ಯಾವ ಕ್ರೈಸ್ತನೂ ಈ ಆಜ್ಞೆಯನ್ನು ನೇರವಾಗಿ ಅಲಕ್ಷಿಸಲಾರನು! ತಂದೆತಾಯಂದಿರು ಇದನ್ನು ಕಾರ್ಯರೂಪಕ್ಕೆ ತರಲಿಕ್ಕಾಗಿ, ಅವರು ತಮ್ಮ ಮಕ್ಕಳನ್ನು ಪರಾಮರಿಸುವುದು ಹಾಗೂ ಸಾರ್ವಜನಿಕವಾಗಿ ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಪಾಲು ತೆಗೆದುಕೊಳ್ಳುವುದನ್ನು ಇದು ಅಗತ್ಯಪಡಿಸುತ್ತದೆ.
5. (ಎ) ಅಪೊಸ್ತಲರಲ್ಲಿ ಎಲ್ಲರೂ ಅಲ್ಲದಿದ್ದರೂ ಹೆಚ್ಚಿನವರು ವಿವಾಹಿತರಾಗಿದ್ದು, ಹೀಗೆ ಮಕ್ಕಳಿದ್ದವರಾಗಿದ್ದಿರಬಹುದೆಂದು ಯಾವುದು ತೋರಿಸುತ್ತದೆ? (ಬಿ) ಕುಟುಂಬ ತಲೆಗಳು ಯಾವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿದೆ?
5 ಅಪೊಸ್ತಲರು ಸಹ, ತಮ್ಮ ಕುಟುಂಬ ಜವಾಬ್ದಾರಿಗಳನ್ನು, ಸಾರುವ ಹಾಗೂ ದೇವರ ಮಂದೆಯನ್ನು ಪರಿಪಾಲಿಸುವ ಹಂಗಿನೊಂದಿಗೆ ಸಮತೂಕವಾಗಿರಿಸಬೇಕಿತ್ತೆಂಬುದು ಗಮನಾರ್ಹ. (ಯೋಹಾನ 21:1-3, 15-17; ಅ. ಕೃತ್ಯಗಳು 1:8) ಇದು ಏಕೆಂದರೆ, ಅವರಲ್ಲಿ ಎಲ್ಲರೂ ಅಲ್ಲದಿದ್ದರೂ, ಅಧಿಕಾಂಶ ಮಂದಿ ವಿವಾಹಿತರಾಗಿದ್ದರು. ಹೀಗೆ ಅಪೊಸ್ತಲ ಪೌಲನು ವಿವರಿಸಿದ್ದು: “ಕ್ರೈಸ್ತ ಸಹೋದರಿಯಾಗಿರುವ ಹೆಂಡತಿಯನ್ನು ಕರಕೊಂಡು ಸಂಚರಿಸುವದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ ಕರ್ತನ ತಮ್ಮಂದಿರಂತೆಯೂ ಕೇಫನಂತೆಯೂ ನಮಗೆ ಹಕ್ಕಿಲ್ಲವೇ.” (1 ಕೊರಿಂಥ 9:5, ಓರೆಅಕ್ಷರಗಳು ನಮ್ಮವು; ಮತ್ತಾಯ 8:14) ಕೆಲವು ಅಪೊಸ್ತಲರಿಗೆ ಮಕ್ಕಳೂ ಇದ್ದಿರಬಹುದು. ಪೇತ್ರನಿಗೆ ಮಕ್ಕಳಿದ್ದರೆಂದು, ಯೂಸೀಬಿಯಸ್ನಂತಹ ಆದಿಕಾಲದ ಇತಿಹಾಸಕಾರರು ಹೇಳುತ್ತಾರೆ. ಆದಿಕ್ರೈಸ್ತ ಹೆತ್ತವರೆಲ್ಲರೂ ಶಾಸ್ತ್ರೀಯ ಸಲಹೆಗೆ ಲಕ್ಷ್ಯಕೊಡುವ ಅಗತ್ಯವಿತ್ತು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”—1 ತಿಮೊಥೆಯ 5:8.
ಮುಖ್ಯವಾದ ಜವಾಬ್ದಾರಿ
6. (ಎ) ಕುಟುಂಬಗಳಿರುವ ಕ್ರೈಸ್ತ ಹಿರಿಯರಿಗೆ ಯಾವ ಪಂಥಾಹ್ವಾನವಿದೆ? (ಬಿ) ಹಿರಿಯನೊಬ್ಬನ ಪ್ರಧಾನ ಜವಾಬ್ದಾರಿ ಏನಾಗಿದೆ?
6 ಇಂದು ಕುಟುಂಬಗಳಿರುವ ಕ್ರೈಸ್ತ ಹಿರಿಯರು, ಅಪೊಸ್ತಲರ ಸನ್ನಿವೇಶಕ್ಕೆ ಸದೃಶವಾದ ಒಂದು ಸನ್ನಿವೇಶದಲ್ಲಿದ್ದಾರೆ. ಸಾರ್ವಜನಿಕವಾಗಿ ಸಾರುವ ಮತ್ತು ದೇವರ ಮಂದೆಯನ್ನು ಪರಿಪಾಲಿಸುವ ತಮ್ಮ ಹಂಗಿನೊಂದಿಗೆ, ಅವರು ತಮ್ಮ ಕುಟುಂಬಗಳ ಆತ್ಮಿಕ ಹಾಗೂ ಶಾರೀರಿಕ ಆವಶ್ಯಕತೆಗಳನ್ನು ಪರಾಮರಿಸುವ ಜವಾಬ್ದಾರಿಯನ್ನು ಸಮತೂಕವಾಗಿರಿಸಬೇಕು. ಯಾವ ಚಟುವಟಿಕೆಯು ಪ್ರಾಧಾನ್ಯವನ್ನು ತೆಗೆದುಕೊಳ್ಳಬೇಕು? 1964, ಮಾರ್ಚ್ 15ರ ಕಾವಲಿನಬುರುಜು (ಇಂಗ್ಲಿಷ್), ಗಮನಿಸಿದ್ದು: “[ತಂದೆಯ] ಪ್ರಥಮ ಹಂಗು ತನ್ನ ಕುಟುಂಬಕ್ಕಾಗಿದೆ, ಮತ್ತು ವಾಸ್ತವವಾಗಿ ಅವನು ಈ ಹಂಗಿನ ಪರಾಮರಿಕೆಯನ್ನು ತೆಗೆದುಕೊಳ್ಳುವುದಿಲ್ಲವಾದರೆ, ಸಭೆಯಲ್ಲಿ ಹಿರಿಯನೋಪಾದಿ ಅವನು ಸರಿಯಾಗಿ ಕಾರ್ಯನಡಿಸಲು ಸಾಧ್ಯವಿಲ್ಲ.”
7. ಕ್ರೈಸ್ತ ತಂದೆಗಳು ದೇವರಿಗೆ ಪ್ರಥಮ ಸ್ಥಾನವನ್ನು ಹೇಗೆ ಕೊಡುತ್ತಾರೆ?
7 ಆದುದರಿಂದ ತಂದೆಗಳು, ‘ಯೆಹೋವನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಕೊಡುತ್ತಾ ತಮ್ಮ ಮಕ್ಕಳನ್ನು ಸಾಕಿಸಲಹುವ’ ಆಜೆಗ್ಞೆ ಲಕ್ಷ್ಯಕೊಡುವ ಮೂಲಕ, ದೇವರಿಗೆ ಪ್ರಥಮ ಸ್ಥಾನವನ್ನು ಕೊಡಬೇಕು. (ಎಫೆಸ 6:4, NW) ಒಬ್ಬ ತಂದೆಗೆ ಕ್ರೈಸ್ತ ಸಭೆಯಲ್ಲಿನ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆ ಮಾಡುವ ನೇಮಕವಿರಬಹುದಾದರೂ, ಆ ಜವಾಬ್ದಾರಿಯನ್ನು ಬೇರೆ ಯಾರಿಗಾದರೂ ಒಪ್ಪಿಸಲು ಸಾಧ್ಯವಿಲ್ಲ. ಅಂತಹ ತಂದೆಗಳು, ಕುಟುಂಬ ಸದಸ್ಯರಿಗೆ ಶಾರೀರಿಕವಾಗಿ, ಆತ್ಮಿಕವಾಗಿ, ಮತ್ತು ಭಾವನಾತ್ಮಕವಾಗಿ ಒದಗಿಸುವ ತಮ್ಮ ಜವಾಬ್ದಾರಿಗಳನ್ನು ಪರಾಮರಿಸಲು ಮತ್ತು ಅದೇ ಸಮಯದಲ್ಲಿ, ಸಭೆಯಲ್ಲಿ ಅಧ್ಯಕ್ಷತೆ ವಹಿಸಲು ಹಾಗೂ ಮೇಲ್ವಿಚಾರಣೆಯನ್ನು ಒದಗಿಸಲು ಹೇಗೆ ಸಾಧ್ಯವಿದೆ?
ಅಗತ್ಯವಿರುವ ಬೆಂಬಲವನ್ನು ಒದಗಿಸುವುದು
8. ಹಿರಿಯನೊಬ್ಬನ ಹೆಂಡತಿಯು ಅವನನ್ನು ಹೇಗೆ ಬೆಂಬಲಿಸಬಲ್ಲಳು?
8 ಸ್ಪಷ್ಟವಾಗಿಗಿ, ಕುಟುಂಬ ಜವಾಬ್ದಾರಿಗಳಿರುವ ಹಿರಿಯರು ಬೆಂಬಲದಿಂದ ಪ್ರಯೋಜನ ಪಡೆದುಕೊಳ್ಳಬಲ್ಲರು. ಒಬ್ಬ ಕ್ರೈಸ್ತ ಹೆಂಡತಿಯು ತನ್ನ ಗಂಡನಿಗೆ ಬೆಂಬಲಿಗಳಾಗಿರಸಾಧ್ಯವಿದೆ ಎಂದು ಮೇಲೆ ಉದ್ಧರಿಸಲ್ಪಟ್ಟ ಕಾವಲಿನಬುರುಜು ಗಮನಿಸಿತು. ಅದು ಹೇಳಿದ್ದು: “ಅವನ ವಿವಿಧ ನೇಮಕಗಳನ್ನು ತಯಾರಿಸಲಿಕ್ಕಾಗಿ, ಮತ್ತು ಮನೆಯಲ್ಲಿ ಒಂದು ಒಳ್ಳೆಯ ಅಭ್ಯಾಸ ಕಾರ್ಯತಖ್ತೆಯನ್ನು ಹೊಂದಿರುವ ಮೂಲಕ ಅವನಿಗಾಗಿ ಮತ್ತು ಸ್ವತಃ ತನಗಾಗಿ ಅಮೂಲ್ಯವಾದ ಸಮಯವನ್ನು ಉಳಿಸುವಂತೆ ಸಹಾಯ ಮಾಡಲಿಕ್ಕಾಗಿ, ಸಮಯಕ್ಕೆ ಸರಿಯಾಗಿ ಊಟಗಳನ್ನು ಸಿದ್ಧಗೊಳಿಸಲಿಕ್ಕಾಗಿ, ಸಭಾ ಕೂಟಗಳಿಗೆ ತಡಮಾಡದೇ ಹೋಗಲಿಕ್ಕಾಗಿ ತಯಾರಿರುವ ಮೂಲಕ, ಅವಳು ಅವನಿಗಾಗಿ ಸಾಧ್ಯವಿರುವಷ್ಟು ಅನುಕೂಲಕರವಾಗಿ ಅದನ್ನು ಮಾಡಬಲ್ಲಳು. . . . ತನ್ನ ಗಂಡನ ಮಾರ್ಗದರ್ಶನದ ಕೆಳಗೆ, ಮಕ್ಕಳು ಯೆಹೋವನನ್ನು ಸಂತೋಷಪಡಿಸುವಂತಹ ಒಂದು ಮಾರ್ಗದಲ್ಲಿ ಹೋಗುವಂತೆ ಅವರನ್ನು ತರಬೇತು ಮಾಡಲು ಕ್ರೈಸ್ತ ಹೆಂಡತಿಯು ಹೆಚ್ಚನ್ನು ಮಾಡಬಲ್ಲಳು.” (ಜ್ಞಾನೋಕ್ತಿ 22:6) ಹೌದು, ಹೆಂಡತಿಯು “ಸಹಕಾರಿ” ಯಾಗಿರಲು ಸೃಷ್ಟಿಸಲ್ಪಟ್ಟಳು, ಮತ್ತು ಅವಳ ಗಂಡನು ಅವಳ ಸಹಾಯವನ್ನು ವಿವೇಕಯುತವಾಗಿ ಸ್ವಾಗತಿಸುವನು. (ಆದಿಕಾಂಡ 2:18) ಅವಳ ಬೆಂಬಲವು, ಅವನು ತನ್ನ ಕುಟುಂಬ ಮತ್ತು ತನ್ನ ಸಭೆಯ ಜವಾಬ್ದಾರಿಗಳು—ಎರಡನ್ನೂ ಹೆಚ್ಚು ಪರಿಣಾಮಕಾರಿಯಾಗಿ ಪರಾಮರಿಸಲು ಶಕ್ತನನ್ನಾಗಿ ಮಾಡಬಲ್ಲದು.
9. ಥೆಸಲೊನೀಕ ಸಭೆಯಲ್ಲಿದ್ದ ಯಾರು ಸಭೆಯ ಇತರ ಸದಸ್ಯರಿಗೆ ಸಹಾಯ ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟರು?
9 ಹಾಗಿದ್ದರೂ, “ದೇವರ ಮಂದೆಯನ್ನು ಪರಿಪಾಲಿಸುವ” ಮತ್ತು ತನ್ನ ಸ್ವಂತ ಮನೆವಾರ್ತೆಯನ್ನು ಪರಾಮರಿಸುವ ಒಬ್ಬ ಮೇಲ್ವಿಚಾರಕನಿಗೆ, ಬೆಂಬಲ ಕೊಡುವ ಕಾರ್ಯಚಟುವಟಿಕೆಯಲ್ಲಿ ಪಾಲಿಗರಾಗಬಲ್ಲವರು ಕ್ರೈಸ್ತ ಹಿರಿಯರ ಹೆಂಡತಿಯರು ಮಾತ್ರವೇ ಆಗಿರುವುದಿಲ್ಲ. (1 ಪೇತ್ರ 5:2, NW) ಇನ್ನಾರು ಪಾಲಿಗರಾಗಬಲ್ಲರು? ಅವರ “ಮುಖ್ಯಸ್ಥರಾಗಿ” ರುವವರಿಗಾಗಿ ಗಣ್ಯತೆಯನ್ನು ತೋರಿಸುವಂತೆ ಪೌಲನು ಥೆಸಲೊನೀಕದಲ್ಲಿರುವ ಸಹೋದರರಿಗೆ ಪ್ರಚೋದಿಸಿದನು. ಆದರೂ, ಮುಂದುವರಿಸುತ್ತಾ, ಅದೇ ಸಹೋದರರಿಗೆ, ನಿರ್ದಿಷ್ಟವಾಗಿ ಮೇಲ್ವಿಚಾರಣೆ ಮಾಡುತ್ತಿರದಿದ್ದವರಿಗೆ ಸಂಬೋಧಿಸುತ್ತಾ ಪೌಲನು ಬರೆದುದು: “ಸಹೋದರರೇ, ಅಕ್ರಮವಾಗಿ ನಡೆಯುವವರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.”—1 ಥೆಸಲೊನೀಕ 5:12-14.
10. ಎಲ್ಲ ಸಹೋದರರ ಪ್ರೀತಿಯ ಸಹಾಯವು ಸಭೆಯ ಮೇಲೆ ಯಾವ ಉತ್ತಮ ಪರಿಣಾಮವನ್ನು ಬೀರುತ್ತದೆ?
10 ಒಂದು ಸಭೆಯಲ್ಲಿರುವ ಸಹೋದರರು, ಮನಗುಂದಿದವರನ್ನು ಸಾಂತ್ವನಗೊಳಿಸಲು, ಬಲಹೀನರಿಗೆ ಆಧಾರಕೊಡಲು, ಅಕ್ರಮವಾಗಿ ನಡೆಯುವವರಿಗೆ ಬುದ್ಧಿಹೇಳಲು, ಮತ್ತು ಎಲ್ಲರ ಕಡೆಗೆ ದೀರ್ಘಶಾಂತರಾಗಿರಲು ತಮ್ಮನ್ನು ಪ್ರಚೋದಿಸುವಂತಹ ಪ್ರೀತಿಯನ್ನು ಹೊಂದಿರುವಾಗ ಎಷ್ಟು ಉತ್ತಮವಾಗಿರುತ್ತದೆ! ಮಹಾ ಸಂಕಟವನ್ನು ಅನುಭವಿಸಿದರೂ ಇತ್ತೀಚೆಗೆ ಸತ್ಯವನ್ನು ಸ್ವೀಕರಿಸಿದ್ದ ಥೆಸಲೊನೀಕದ ಸಹೋದರರು, ಇದನ್ನು ಮಾಡುವಂತೆ ಹೇಳಿದ ಪೌಲನ ಬುದ್ಧಿವಾದವನ್ನು ಅನ್ವಯಿಸಿದರು. (ಅ. ಕೃತ್ಯಗಳು 17:1-9; 1 ಥೆಸಲೊನೀಕ 1:6; 2:14; 5:11) ಅವರ ಪ್ರೀತಿಯ ಸಹಕಾರವು ಇಡೀ ಸಭೆಯನ್ನು ಬಲಪಡಿಸಿ ಏಕೀಕರಿಸುವುದರಲ್ಲಿ ಬೀರಿದ ಉತ್ತಮ ಪ್ರಭಾವದ ಕುರಿತಾಗಿ ಯೋಚಿಸಿ! ತತ್ಸಮಾನವಾಗಿ, ಸಹೋದರರು ಇಂದು ಒಬ್ಬರನ್ನೊಬ್ಬರು ಸಮಾಧಾನಪಡಿಸಿ, ಬೆಂಬಲಿಸಿ, ಬುದ್ಧಿಹೇಳುವಲ್ಲಿ, ಇದು ಅನೇಕವೇಳೆ ಪರಾಮರಿಸಲಿಕ್ಕಾಗಿ ಕುಟುಂಬಗಳಿರುವ ಹಿರಿಯರು ಪರಿಪಾಲಿಸುವ ಜವಾಬ್ದಾರಿಗಳನ್ನು ನಿರ್ವಹಿಸುವುದನ್ನು ಹೆಚ್ಚು ಸುಲಭಮಾಡುವುದು.
11. (ಎ) “ಸಹೋದರರೇ” ಎಂಬ ಪದದಲ್ಲಿ ಸ್ತ್ರೀಯರೂ ಸೇರಿಸಲ್ಪಟ್ಟಿದ್ದರೆಂದು ತೀರ್ಮಾನಿಸುವುದು ಏಕೆ ಸಮಂಜಸವಾಗಿದೆ? (ಬಿ) ಇಂದು ಒಬ್ಬ ಪ್ರೌಢ ಕ್ರೈಸ್ತ ಸ್ತ್ರೀಯು ಎಳೆಯ ಸ್ತ್ರೀಯರಿಗೆ ಯಾವ ಸಹಾಯವನ್ನು ನೀಡಬಲ್ಲಳು?
11 ಪೌಲನು ಸಂಬೋಧಿಸಿದ “ಸಹೋದರ” ರಲ್ಲಿ ಸ್ತ್ರೀಯರನ್ನೂ ಸೇರಿಸಲಾಗಿತ್ತೊ? ಹೌದು, ಅನೇಕ ಸ್ತ್ರೀಯರೂ ವಿಶ್ವಾಸಿಗಳಾದುದರಿಂದ ಅವರನ್ನು ಸೇರಿಸಲಾಗಿತ್ತು. (ಅ. ಕೃತ್ಯಗಳು 17:1, 4; 1 ಪೇತ್ರ 2:17; 5:9) ಇಂತಹ ಸ್ತ್ರೀಯರು ಯಾವ ರೀತಿಯ ಸಹಾಯವನ್ನು ಕೊಡಬಲ್ಲವರಾಗಿದ್ದರು? ಸಭೆಗಳಲ್ಲಿ “ಮದಿಸಿ” ನಿಯಂತ್ರಣದ ಸಮಸ್ಯೆಯಿದ್ದ ಅಥವಾ “ಮನಗುಂದಿದವರು” ಆಗಿ ಪರಿಣಮಿಸಿದ ಎಳೆಯ ಪ್ರಾಯದ ಸ್ತ್ರೀಯರಿದ್ದರು. (1 ತಿಮೊಥೆಯ 5:11-13) ಇಂದು ಕೆಲವು ಸ್ತ್ರೀಯರಿಗೆ ತದ್ರೀತಿಯ ಸಮಸ್ಯೆಗಳಿವೆ. ಅವರಿಗೆ ಅತ್ಯಗತ್ಯವಿರುವ ವಿಷಯವು ಕೇವಲ ಒಂದು ಆಲಿಸುವ ಕಿವಿಯಾಗಿರಬಹುದು ಅಥವಾ ಒರಗಿ ಅಳಲಿಕ್ಕಾಗಿರುವ ಒಂದು ಭುಜವಾಗಿರಬಹುದು. ಅನೇಕವೇಳೆ ಒಬ್ಬ ಪ್ರೌಢ ಕ್ರೈಸ್ತ ಸ್ತ್ರೀಯು ಅಂತಹ ಸಹಾಯವನ್ನು ಒದಗಿಸಲು ಅತ್ಯುತ್ತಮ ವ್ಯಕ್ತಿಯಾಗಿದ್ದಾಳೆ. ಉದಾಹರಣೆಗೆ, ಒಬ್ಬ ಕ್ರೈಸ್ತ ಪುರುಷನು ತಾನೇ ಯೋಗ್ಯವಾಗಿ ನಿರ್ವಹಿಸಲಾರದ ವೈಯಕ್ತಿಕ ಸಮಸ್ಯೆಗಳನ್ನು ಆಕೆ ಇನ್ನೊಬ್ಬ ಸ್ತ್ರೀಯೊಂದಿಗೆ ಚರ್ಚಿಸಬಲ್ಲಳು. ಅಂತಹ ಸಹಾಯವನ್ನು ಒದಗಿಸುವ ಅಮೂಲ್ಯತೆಯನ್ನು ಎತ್ತಿತೋರಿಸುತ್ತಾ ಪೌಲನು ಬರೆದುದು: “ಹಾಗೆಯೇ ವೃದ್ಧಸ್ತ್ರೀಯರು . . . ಸದ್ಬೋಧನೆ ಹೇಳುವವರೂ . . . ಅವರು ಪ್ರಾಯದ ಸ್ತ್ರೀಯರಿಗೆ—ನಿಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನೀವು ಗಂಡಂದಿರನ್ನೂ ಮಕ್ಕಳನ್ನೂ ಪ್ರೀತಿಸುವವರೂ ದಮೆಯುಳ್ಳವರೂ ಪತಿವ್ರತೆಯರೂ ಮನೆಯಲ್ಲೀ ಕೆಲಸಮಾಡುವವರೂ ಸುಶೀಲೆಯರೂ ನಿಮ್ಮ ಗಂಡಂದಿರಿಗೆ ಅಧೀನರೂ ಆಗಿರಬೇಕೆಂದು ಬುದ್ಧಿಕಲಿಸುವ ಹಾಗೆ ಬೋಧಿಸು.”—ತೀತ 2:3-5.
12. ಸಭೆಯಲ್ಲಿರುವ ಸಕಲರೂ ಯಾರ ನಿರ್ದೇಶನವನ್ನು ಅನುಸರಿಸುವುದು ಮಹತ್ವದ್ದಾಗಿದೆ?
12 ನಮ್ರರಾದ ಸಹೋದರಿಯರು ತಮ್ಮ ಗಂಡಂದಿರನ್ನೂ ಹಿರಿಯರನ್ನೂ ಸಹಕಾರಭಾವದಿಂದ ಬೆಂಬಲಿಸುವಲ್ಲಿ, ಅವರು ಸಭೆಗೆ ಎಂತಹ ಆಶೀರ್ವಾದಪ್ರದರಾಗುತ್ತಾರೆ! (1 ತಿಮೊಥೆಯ 2:11, 12; ಇಬ್ರಿಯ 13:17) ಎಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡುವ ಸಲುವಾಗಿ, ಪ್ರೀತಿಯ ಆತ್ಮದಿಂದ ಸಹಾಯ ನೀಡುವಾಗ ಮತ್ತು ನೇಮಿತ ಕುರಿಪಾಲಕರ ನಿರ್ದೇಶನಕ್ಕೆ ಎಲ್ಲರೂ ಅಧೀನರಾಗುವಾಗ, ಕುಟುಂಬ ಜವಾಬ್ದಾರಿಗಳಿರುವ ಹಿರಿಯರು ವಿಶೇಷವಾಗಿ ಪ್ರಯೋಜನಹೊಂದುತ್ತಾರೆ.—1 ಪೇತ್ರ 5:1, 2.
ಹೆತ್ತವರೇ, ನೀವು ಯಾವುದಕ್ಕೆ ಪ್ರಥಮ ಸ್ಥಾನವನ್ನು ಕೊಡುತ್ತೀರಿ?
13. ಅನೇಕ ತಂದೆಗಳು ತಮ್ಮ ಕುಟುಂಬಗಳನ್ನು ವಿಫಲಗೊಳಿಸುವುದು ಹೇಗೆ?
13 ವರುಷಗಳ ಹಿಂದೆ, ಒಬ್ಬ ಪ್ರಸಿದ್ಧ ಮನೋರಂಜಕನು ಅವಲೋಕಿಸಿದ್ದು: “ನೂರಾರು ಜನರಿರುವ ಕಂಪನಿಗಳನ್ನು ನಡಿಸುವ ಜಯಪ್ರದರಾದ ಜನರನ್ನು ನಾನು ನೋಡುತ್ತೇನೆ; ಪ್ರತಿಯೊಂದು ಸಂದರ್ಭವನ್ನು ಹೇಗೆ ನಿಭಾಯಿಸುವುದು, ವಾಣಿಜ್ಯ ಜಗತ್ತಿನಲ್ಲಿ ಹೇಗೆ ಶಿಸ್ತುಗೊಳಿಸುವುದು ಮತ್ತು ಹೇಗೆ ಪ್ರತಿಫಲಕೊಡುವುದು ಎಂಬುದು ಅವರಿಗೆ ಗೊತ್ತಿದೆ. ಆದರೆ ಅವರು ನಡೆಸುತ್ತಿರುವ ಅತಿ ದೊಡ್ಡ ವ್ಯಾಪಾರವು ಅವರ ಕುಟುಂಬವಾಗಿದೆ ಮತ್ತು ಅದರಲ್ಲಿ ಅವರು ವಿಫಲಗೊಳ್ಳುತ್ತಾರೆ.” ಏಕೆ? ಅವರು ತಮ್ಮ ವ್ಯಾಪಾರ ಮತ್ತು ಇತರ ಅಭಿರುಚಿಗಳನ್ನು ಒಂದನೆಯ ಸ್ಥಾನದಲ್ಲಿ ಹಾಕಿ, ದೇವರ ಸಲಹೆಯನ್ನು ಅಸಡ್ಡೆಮಾಡುವುದರಿಂದಲವ್ಲೊ? ಆತನ ವಾಕ್ಯವು ಹೇಳುವುದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು . . . ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ” ಮಾಡಿಸಬೇಕು. ಮತ್ತು ಇದನ್ನು ದಿನಾಲೂ ಮಾಡತಕ್ಕದ್ದು. ಹೆತ್ತವರು ತಮ್ಮ ಸಮಯ, ಮತ್ತು ವಿಶೇಷವಾಗಿ ತಮ್ಮ ಪ್ರೀತಿ ಮತ್ತು ಅಳವಾದ ಚಿಂತೆಯಿಂದ ಧಾರಾಳವಾಗಿ ಕೊಡಬೇಕಾದ ಅಗತ್ಯವಿದೆ.—ಧರ್ಮೋಪದೇಶಕಾಂಡ 6:6-9.
14. (ಎ) ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಪರಾಮರಿಸಬೇಕು? (ಬಿ) ಮಕ್ಕಳ ಯೋಗ್ಯ ತರಬೇತಿಯಲ್ಲಿ ಏನು ಸೇರಿರುತ್ತದೆ?
14 ಮಕ್ಕಳು ಯೆಹೋವನಿಂದ ಬಂದ ಸ್ವಾಸ್ತ್ಯವಾಗಿದ್ದಾರೆಂದು ಬೈಬಲು ನಮಗೆ ಜ್ಞಾಪಕ ಹುಟ್ಟಿಸುತ್ತದೆ. (ಕೀರ್ತನೆ 127:3) ನೀವು ನಿಮ್ಮ ಮಕ್ಕಳನ್ನು, ದೇವರ ಸ್ವತ್ತಿನೋಪಾದಿ, ಆತನು ನಿಮ್ಮ ವಶಕ್ಕೆ ಕೊಟ್ಟಿರುವ ಕೊಡುಗೆಯೋಪಾದಿ ಪರಾಮರಿಸುತ್ತೀರೊ? ನೀವು ನಿಮ್ಮ ಮಗುವನ್ನು ತೋಳುಗಳಲ್ಲಿ ಎತ್ತಿಕೊಂಡು, ಹೀಗೆ ನಿಮ್ಮ ಪ್ರೀತಿಯ ಆರೈಕೆ ಮತ್ತು ಗಮನವನ್ನು ತೋರಿಸುವಲ್ಲಿ, ಅವನು ಅಥವಾ ಅವಳು ಪ್ರತಿವರ್ತನೆ ತೋರಿಸುವುದು ಸಂಭವನೀಯ. (ಮಾರ್ಕ 10:16) ಆದರೆ, ‘ಮಗುವನ್ನು ತಕ್ಕದಾದ್ದ ರೀತಿಯಲ್ಲಿ ತರಬೇತುಗೊಳಿಸುವುದು,’ ಕೇವಲ ಅಪ್ಪುಗೆಗಳು ಮತ್ತು ಮುತ್ತುಗಳಿಗಿಂತ ಹೆಚ್ಚಿನದ್ದನ್ನು ಕೇಳಿಕೊಳ್ಳುತ್ತದೆ. ಜೀವನದ ಅಪಾಯಗಳನ್ನು ತಪ್ಪಿಸಲು ವಿವೇಕದಿಂದ ಸಜ್ಜಾಗಿರುವಂತೆ, ಒಂದು ಮಗುವಿಗೆ ಶಿಸ್ತಿನ ಆವಶ್ಯಕತೆ ಕೂಡ ಇದೆ. ಒಬ್ಬ ಹೆತ್ತವನು ‘ತನ್ನ ಮಗುವನ್ನು ಶಿಕ್ಷಿಸುವ’ ಮೂಲಕ ನಿಜ ಪ್ರೀತಿಯನ್ನು ತೋರಿಸುತ್ತಾನೆ.—ಜ್ಞಾನೋಕ್ತಿ 13:1, 24; 22:6.
15. ಹೆತ್ತವರ ಶಿಸ್ತಿನ ಅಗತ್ಯತೆಯನ್ನು ಯಾವುದು ತೋರಿಸುತ್ತದೆ?
15 ಹೆತ್ತವರ ಶಿಸ್ತಿನ ಆವಶ್ಯಕತೆಯನ್ನು, ತನ್ನ ಆಫೀಸಿಗೆ ಬರುವ ಮಕ್ಕಳ ಕುರಿತಾಗಿ, ಒಬ್ಬ ಶಾಲಾ ಸಲಹೆಗಾರ್ತಿಯು ಕೊಡುವ ವರ್ಣನೆಯಿಂದ ನೋಡಸಾಧ್ಯವಿದೆ: “ಅವರು ಶೋಚನೀಯರು, ಖಿನ್ನರು, ದಿಗ್ಭ್ರಾಂತರು. ವಿಷಯಗಳು ನಿಜವಾಗಿಯೂ ಹೇಗಿವೆಯೆಂದು ವಿವರಿಸುವಾಗ ಅವರು ಅಳುತ್ತಿರುತ್ತಾರೆ. ಅನೇಕರು—ಒಬ್ಬನು ಯೋಚಿಸಬಹುದಾಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಜನರು—ಆತ್ಮಹತ್ಯೆಯನ್ನು ಪ್ರಯತ್ನಿಸಿದ್ದಾರೆ, ತಮಗಾಗಿದ್ದ ಅತ್ಯಾನಂದವನ್ನು ತಾಳಲಾರದೆ ಅಲ್ಲ; ಅಷ್ಟು ಚಿಕ್ಕ ಪ್ರಾಯದಲ್ಲಿ ಅವರು ‘ಅಧಿಕಾರದಲ್ಲಿದ್ದು’ ಅದು ನಿರ್ವಹಿಸಲಸಾಧ್ಯವಾದ ಸಂಗತಿಯಾಗಿರುವ ಕಾರಣ ತೀರ ಅಸಂತುಷ್ಟರು, ಉಪೇಕ್ಷಿತರು ಮತ್ತು ಒತ್ತಡಕ್ಕೊಳಗಾದವರು ಆಗಿರುವುದರಿಂದಲೇ.” ಅವರು ಕೂಡಿಸಿದ್ದು: “ಒಬ್ಬ ಎಳೆಯ ವ್ಯಕ್ತಿಗೆ ತಾನು ಅಧಿಕಾರ ನಡೆಸುತ್ತಿದ್ದೇನೆಂದು ತಿಳಿಯುವುದು ಗಾಬರಿಗೊಳಿಸುವ ವಿಷಯ.” ಮಕ್ಕಳು ಶಿಸ್ತನ್ನು ಅಲಕ್ಷ್ಯಮಾಡಬಹುದೆಂಬುದು ನಿಜವಾದರೂ, ಅವರು ವಾಸ್ತವವಾಗಿ ಹೆತ್ತವರ ಮಾರ್ಗದರ್ಶನಗಳನ್ನು ಮತ್ತು ಪ್ರತಿಬಂಧಗಳನ್ನು ಅವರು ಮಾನ್ಯಮಾಡುತ್ತಾರೆ. ತಮ್ಮ ಹೆತ್ತವರು ತಮಗೆ ನಿರ್ಬಂಧಗಳನ್ನು ಹಾಕುವಷ್ಟರ ಮಟ್ಟಿಗಾದರೂ ತಮ್ಮನ್ನು ಪ್ರೀತಿಸುತ್ತಾರೆಂದು ಅವರು ಸಂತೋಷಿಸುತ್ತಾರೆ. ಯಾರ ಹೆತ್ತವರು ನಿರ್ಬಂಧಗಳನ್ನು ಹಾಕಿದ್ದರೋ, ಅಂತಹ ಒಬ್ಬ ಹದಿಹರೆಯದವನು ಹೇಳಿದ್ದು: “ನನ್ನ ಮನಸ್ಸಿನಿಂದ ಅತಿ ದೊಡ್ಡ ಹೊರೆಯೊಂದನ್ನು ಅದು ತೆಗೆದುಬಿಟ್ಟಿದೆ.”
16. (ಎ) ಕ್ರೈಸ್ತ ಮನೆಗಳಲ್ಲಿ ಬೆಳೆಸಲ್ಪಟ್ಟ ಕೆಲವು ಮಕ್ಕಳಿಗೆ ಏನು ಸಂಭವಿಸುತ್ತದೆ? (ಬಿ) ಒಂದು ಮಗುವಿನ ಮೊಂಡು ಮಾರ್ಗವು, ಹೆತ್ತವರಿಂದ ಕೊಡಲ್ಪಟ್ಟ ತರಬೇತು ಒಳ್ಳೆಯದಾಗಿರಲಿಲ್ಲವೆಂದು ಅರ್ಥೈಸಬೇಕೆಂದಿಲ್ಲ ಏಕೆ?
16 ಆದರೂ, ಪ್ರೀತಿಸುವ ಮತ್ತು ಉತ್ತಮ ತರಬೇತನ್ನು ಒದಗಿಸುವ ಹೆತ್ತವರ ಹೊರತಾಗಿಯೂ, ಕೆಲವು ಯುವ ಜನರು, ಯೇಸುವಿನ ದೃಷ್ಟಾಂತದ ದುಂದುಗಾರ ಮಗನಂತೆ, ಹೆತ್ತವರ ಮಾರ್ಗದರ್ಶನವನ್ನು ತಿರಸ್ಕರಿಸಿ ದಾರಿತಪ್ಪಿಹೋಗುತ್ತಾರೆ. (ಲೂಕ 15:11-16) ಆದರೂ ಅದು ತಾನೇ, ಹೆತ್ತವರು ತಮ್ಮ ಮಗುವನ್ನು, ಜ್ಞಾನೋಕ್ತಿ 22:6 ನಿರ್ದೇಶಿಸುವಂತೆ ತರಬೇತುಗೊಳಿಸುವ ಜವಾಬ್ದಾರಿಯನ್ನು ನೆರವೇರಿಸಲಿಲ್ಲವೆಂಬ ಅರ್ಥವನ್ನು ಕೊಡಲಿಕ್ಕಿಲ್ಲ. ‘ನಡೆಯಬೇಕಾದ ಮಾರ್ಗಕ್ಕೆ ತಕ್ಕ ಹಾಗೆ ಹುಡುಗನನ್ನು ತರಬೇತುಗೊಳಿಸು, ಅವನು ಅದರಿಂದ ತೊಲಗನು,’ ಎಂಬ ಹೇಳಿಕೆಯನ್ನು ಒಂದು ಸಾಮಾನ್ಯ ನಿಯಮವಾಗಿ ಕೊಡಲಾಗಿತ್ತು. ದುಃಖಕರವಾಗಿ, ಆ ದುಂದುಗಾರ ಮಗನಂತೆ, ಕೆಲವು ಮಕ್ಕಳು, ‘ಹೆತ್ತವರಿಗೆ ವಿಧೇಯತೆಯನ್ನು ತೋರಿಸಲು ಧಿಕ್ಕರಿಸುವರು.’—ಜ್ಞಾನೋಕ್ತಿ 30:17.
17. ಮೊಂಡರಾದ ಮಕ್ಕಳ ಹೆತ್ತವರು ಯಾವುದರಿಂದ ಸಾಂತ್ವನವನ್ನು ಪಡೆಯಬಲ್ಲರು?
17 ಒಬ್ಬ ಮೊಂಡನಾದ ಮಗನ ತಂದೆಯು ಪ್ರಲಾಪಿಸಿದ್ದು: “ನಾನು ಅವನ ಹೃದಯವನ್ನು ತಲಪಲು ಪದೇಪದೇ ಪ್ರಯತ್ನಿಸಿದ್ದೇನೆ. ನಾನು ಅನೇಕ ಸಂಗತಿಗಳನ್ನು ಪ್ರಯೋಗಿಸಿ ನೋಡಿರುವುದರಿಂದ ಏನು ಮಾಡಬೇಕೆಂಬುದು ನನಗೆ ಗೊತ್ತಿಲ್ಲ. ಯಾವುದೂ ಕಾರ್ಯನಡೆಸಿಲ್ಲ.” ಆಶಾಜನಕವಾಗಿ, ಇಂತಹ ಮೊಂಡರಾದ ಮಕ್ಕಳು ಸಕಾಲದಲ್ಲಿ ತಾವು ಪಡೆದ ಪ್ರೀತಿಯ ತರಬೇತನ್ನು ಜ್ಞಾಪಿಸಿಕೊಂಡು, ಆ ದುಂದುಗಾರ ಪುತ್ರನಂತೆ ಹಿಂದಿರುಗುವರು. ಆದರೂ, ಕೆಲವು ಮಕ್ಕಳು ತಮ್ಮ ಹೆತ್ತವರಿಗೆ ಮಹಾ ವೇದನೆಯನ್ನುಂಟುಮಾಡುತ್ತಾ, ದಂಗೆಯೆದ್ದು ಅನೈತಿಕ ವಿಚಾರಗಳನ್ನು ಮಾಡುತ್ತಾರೆ. ಭೂಮಿಯ ಮೇಲೆ ಜೀವಿಸಿದ್ದವರಲ್ಲಿ ಅತ್ಯಂತ ಮಹಾನ್ ಬೋಧಕನು ಸಹ ತನ್ನ ದೀರ್ಘಕಾಲದ ವಿದ್ಯಾರ್ಥಿ, ಇಸ್ಕರಿಯೋತ ಯೂದನು ತನಗೆ ದ್ರೋಹಬಗೆದುದನ್ನು ನೋಡಿದನು ಎಂಬುದರಿಂದ ಹೆತ್ತವರು ನೆಮ್ಮದಿಯನ್ನು ಪಡೆದುಕೊಳ್ಳಬಹುದು. ಮತ್ತು ತನ್ನ ಸ್ವಂತ ಆತ್ಮಪುತ್ರರೇ ತನ್ನ ವತಿಯಿಂದ ಯಾವ ತಪ್ಪೂ ಇಲ್ಲದೆ ತನ್ನ ಬುದ್ಧಿವಾದವನ್ನು ತಿರಸ್ಕರಿಸಿ ದಂಗೆಕೋರರಾಗಿ ಪರಿಣಮಿಸಿದಾಗ, ಯೆಹೋವನು ತಾನೇ ದುಃಖಿತನಾದನೆಂಬುದರಲ್ಲಿ ಸಂದೇಹವಿಲ್ಲ.—ಲೂಕ 22:47, 48; ಪ್ರಕಟನೆ 12:9.
ಮಕ್ಕಳೇ—ನೀವು ಯಾರನ್ನು ಸಂತೋಷಪಡಿಸುವಿರಿ?
18. ತಾವು ದೇವರಿಗೆ ಪ್ರಥಮ ಸ್ಥಾನವನ್ನು ಕೊಡುತ್ತೇವೆಂದು ಮಕ್ಕಳು ಹೇಗೆ ತೋರಿಸಬಲ್ಲರು?
18 ಎಳೆಯರಾದ ನಿಮ್ಮನ್ನು ಯೆಹೋವನು ಪ್ರೋತ್ಸಾಹಿಸುವುದು: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು.” (ಎಫೆಸ 6:1) ಇದನ್ನು ಮಾಡುವ ಮೂಲಕ ಎಳೆಯರು ದೇವರಿಗೆ ಪ್ರಥಮ ಸ್ಥಾನವನ್ನು ಕೊಡುತ್ತಾರೆ. ಮೂರ್ಖರಾಗಿರಬೇಡಿ! “ಮೂರ್ಖನು ತಂದೆಯ ಶಿಕ್ಷೆಯನ್ನು ತಿರಸ್ಕರಿಸುವನು,” ಎನ್ನುತ್ತದೆ ದೇವರ ವಾಕ್ಯ. ಶಿಸ್ತಿಲ್ಲದೆ ನೀವು ಮುಂದೆಸಾಗಬಲ್ಲಿರೆಂದೂ ನೀವು ಅಹಂಕಾರದಿಂದ ಎಣಿಸಬಾರದು. ವಾಸ್ತವವೇನಂದರೆ, “ತಮ್ಮ ಕೊಳೆಯನ್ನು ತೊಳಕೊಳ್ಳದೆ ತಾವೇ ಶುದ್ಧರೆಂದು ಎಣಿಸಿಕೊಳ್ಳುವ ಬೇರೊಂದು ತರದವರುಂಟು.” (ಜ್ಞಾನೋಕ್ತಿ 15:5; 30:12) ಆದುದರಿಂದ ದೈವಿಕ ನಿರ್ದೇಶನಕ್ಕೆ ಲಕ್ಷ್ಯಕೊಡಿರಿ—ಹೆತ್ತವರ ಆಜ್ಞೆಗಳನ್ನೂ ಶಿಕ್ಷೆಯನ್ನೂ “ಕೇಳು,” “ನಿಧಿಯಂತೆ ಕಾಪಾಡಿಕೋ,” “ಮರೆಯಬೇಡ,” “ಕಿವಿಗೊಡಿರಿ,” “ಕೈಕೊಳ್ಳು,” ಮತ್ತು “ಬಿಡಬೇಡ.”—ಜ್ಞಾನೋಕ್ತಿ 1:8; 2:1; 3:1; 4:1; 6:20.
19. (ಎ) ಯೆಹೋವನಿಗೆ ವಿಧೇಯರಾಗಲು ಮಕ್ಕಳಿಗೆ ಯಾವ ಬಲವಾದ ಕಾರಣಗಳಿವೆ? (ಬಿ) ತಾವು ದೇವರಿಗೆ ಕೃತಜ್ಞರಾಗಿದ್ದೇವೆಂದು ಎಳೆಯರು ಹೇಗೆ ತೋರಿಸಬಲ್ಲರು?
19 ಯೆಹೋವನಿಗೆ ವಿಧೇಯರಾಗಲು ನಿಮಗೆ ಬಲವಾದ ಕಾರಣಗಳಿವೆ. ಆತನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮನ್ನು ಸಂರಕ್ಷಿಸಲಿಕ್ಕಾಗಿ ಮತ್ತು ಸಂತೋಷದ ಜೀವನವನ್ನು ಅನುಭವಿಸುವಂತೆ ನಿಮಗೆ ಸಹಾಯ ಮಾಡಲಿಕ್ಕಾಗಿ ಆತನು, ತಮ್ಮ ಹೆತ್ತವರಿಗೆ ವಿಧೇಯರಾಗುವಂತೆ ಮಕ್ಕಳಿಗಾಗಿ ಕೊಡಲ್ಪಟ್ಟಿರುವ ನಿಯಮವನ್ನೊಳಗೊಂಡಿರುವ ತನ್ನ ನಿಯಮಗಳನ್ನು ಕೊಟ್ಟಿದ್ದಾನೆ. (ಯೆಶಾಯ 48:17) ನೀವು ಪಾಪ ಮತ್ತು ಮರಣದಿಂದ ರಕ್ಷಿಸಲ್ಪಟ್ಟು ನಿತ್ಯಜೀವವನ್ನು ಅನುಭವಿಸುವಂತೆ, ನಿಮಗಾಗಿ ಸಾಯಲು ಆತನು ತನ್ನ ಪುತ್ರನನ್ನೂ ಕೊಟ್ಟಿದ್ದಾನೆ. (ಯೋಹಾನ 3:16) ನೀವು ಕೃತಜ್ಞರಾಗಿದ್ದೀರೊ? ನೀವು ನಿಜವಾಗಿಯೂ ಆತನನ್ನು ಪ್ರೀತಿಸಿ ಆತನ ಒದಗಿಸುವಿಕೆಗಳನ್ನು ಮಾನ್ಯಮಾಡುತ್ತೀರೊ ಎಂದು ನಿಮ್ಮ ಹೃದಯವನ್ನು ಪರೀಕ್ಷಿಸುತ್ತಾ ಸ್ವರ್ಗದಿಂದ ದೇವರು ನಿಮ್ಮನ್ನು ಗಮನಿಸುತ್ತಿದ್ದಾನೆ. (ಕೀರ್ತನೆ 14:2) ಸೈತಾನನು ಸಹ ನಿಮ್ಮನ್ನು ಗಮನಿಸುತ್ತಿದ್ದಾನೆ, ಮತ್ತು ನೀವು ದೇವರಿಗೆ ವಿಧೇಯರಾಗುವುದಿಲ್ಲವೆಂದು ವಾದಿಸುತ್ತಾ ಅವನು ದೇವರನ್ನು ಮೂದಲಿಸುತ್ತಿದ್ದಾನೆ. ದೇವರಿಗೆ ಅವಿಧೇಯರಾಗುವಾಗ ನೀವು ಸೈತಾನನನ್ನು ಸಂತೋಷಪಡಿಸಿ ಯೆಹೋವನನ್ನು ‘ನೋಯಿಸುತ್ತೀರಿ.’ (ಕೀರ್ತನೆ 78:40, 41) ಯೆಹೋವನು ನಿಮ್ಮನ್ನು ವಿನಂತಿಸಿಕೊಳ್ಳುವುದು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು [ನನಗೆ ವಿಧೇಯನಾಗಿರುವ ಮೂಲಕ] ಸಂತೋಷಪಡಿಸು; ಹಾಗಾದರೆ ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು.” (ಜ್ಞಾನೋಕ್ತಿ 27:11) ಹೌದು, ನೀವು ಯಾರನ್ನು ಸಂತೋಷಪಡಿಸುವಿರಿ, ಸೈತಾನನನ್ನೊ, ಯೆಹೋವನನ್ನೊ ಎಂಬುದು ಪ್ರಶ್ನೆಯಾಗಿದೆ?
20. ತಾನು ಗಾಬರಿಪಡುವಾಗಲೂ ಯೆಹೋವನನ್ನು ಸೇವಿಸಲಿಕ್ಕಾಗಿ ಒಬ್ಬ ಯುವತಿಯು ಧೈರ್ಯವನ್ನು ಹೇಗೆ ಕಾಪಾಡಿಕೊಂಡಿದ್ದಾಳೆ?
20 ಸೈತಾನನೂ ಆತನ ಲೋಕವೂ ನಿಮ್ಮ ಮೇಲೆ ತರುವ ಒತ್ತಡಗಳ ಎದುರಿನಲ್ಲಿ ದೇವರ ಇಷ್ಟವನ್ನು ಮಾಡುವುದು ಸುಲಭವಾಗಿರುವುದಿಲ್ಲ. ಅದು ಗಾಬರಿಗೊಳಿಸುವಂತಹದ್ದಾಗಿರಸಾಧ್ಯವಿದೆ. ಒಬ್ಬ ಯುವತಿ ಹೇಳಿದ್ದು: “ಗಾಬರಿಗೊಳ್ಳುವುದು ಚಳಿಯಾಗುವಂತಿರುತ್ತದೆ. ನೀವು ಅದರ ಕುರಿತು ಏನನ್ನಾದರೂ ಮಾಡಬಲ್ಲಿರಿ.” ಆಕೆ ವಿವರಿಸುವುದು: “ನಿಮಗೆ ಚಳಿಯಾಗುವಾಗ ನೀವು ಸೆಟ್ವರನ್ನು ಧರಿಸುತ್ತೀರಿ. ಇನ್ನೂ ಚಳಿಯಾದರೆ ಇನ್ನೊಂದನ್ನು ಧರಿಸುತ್ತೀರಿ. ಚಳಿಯು ಹೋಗುವ ತನಕ ಮತ್ತು ಮುಂದೆ ಚಳಿಯಾಗದಿರುವ ತನಕ ನೀವು ಯಾವುದನ್ನಾದರೂ ಧರಿಸುತ್ತಾ ಇರುತ್ತೀರಿ. ಹೀಗೆ, ನಿಮಗೆ ಗಾಬರಿಯಾದಾಗ ಯೆಹೋವನಿಗೆ ಪ್ರಾರ್ಥಿಸುವುದು, ಚಳಿಯಾದಾಗ ಸೆಟ್ವರ್ ಧರಿಸಿದಂತಿರುತ್ತದೆ. ಒಂದು ಪ್ರಾರ್ಥನೆಯ ಬಳಿಕ ನಾನು ಇನ್ನೂ ಗಾಬರಿಗೊಂಡಿರುವಲ್ಲಿ, ನಾನು ಮತ್ತೆ ಮತ್ತೆ, ಮುಂದೆ ಗಾಬರಿಗೊಳ್ಳದಿರುವ ತನಕ ಪ್ರಾರ್ಥಿಸುತ್ತೇನೆ. ಮತ್ತು ಅದು ಕಾರ್ಯಸಾಧಕವಾಗಿದೆ. ಅದು ನನ್ನನ್ನು ತೊಂದರೆಗೊಳಗಾಗುವುದರಿಂದ ತಪ್ಪಿಸಿದೆ!”
21. ನಾವು ನಮ್ಮ ಜೀವಿತಗಳಲ್ಲಿ ಯೆಹೋವನಿಗೆ ಪ್ರಥಮ ಸ್ಥಾನವನ್ನು ಕೊಡಲು ನಿಜವಾಗಿಯೂ ಪ್ರಯತ್ನಿಸುವಲ್ಲಿ, ಆತನು ನಮ್ಮನ್ನು ಹೇಗೆ ಬೆಂಬಲಿಸುವನು?
21 ನಾವು ನಮ್ಮ ಜೀವಿತಗಳಲ್ಲಿ ದೇವರಿಗೆ ಪ್ರಥಮ ಸ್ಥಾನವನ್ನು ಕೊಡಲು ನಿಜವಾಗಿಯೂ ಪ್ರಯತ್ನಿಸುವಲ್ಲಿ, ಯೆಹೋವನು ನಮ್ಮನ್ನು ಬೆಂಬಲಿಸುವನು. ಆತನು ಅಗತ್ಯವಿರುವಲ್ಲಿ, ತನ್ನ ಪುತ್ರನಿಗೆ ಮಾಡಿದಂತೆಯೇ ದೇವದೂತ ಸಹಾಯವನ್ನು ಒದಗಿಸಿ ನಮ್ಮನ್ನು ಬಲಪಡಿಸುವನು. (ಮತ್ತಾಯ 18:10; ಲೂಕ 22:43) ಸಕಲ ಹೆತ್ತವರೇ, ಮಕ್ಕಳೇ, ಧೈರ್ಯದಿಂದಿರಿ. ಕ್ರಿಸ್ತಸದೃಶ ಭಯವುಳ್ಳವರಾಗಿರಿ, ಅದು ನಿಮಗೆ ಸುಖಾನುಭವವನ್ನು ತರುವುದು. (ಯೆಶಾಯ 11:3) ಹೌದು, “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”—ಪ್ರಸಂಗಿ 12:13.
ನೀವು ಉತ್ತರಿಸಬಲ್ಲಿರೊ?
◻ ಯೇಸುವಿನ ಆದಿ ಹಿಂಬಾಲಕರು ಯಾವ ಜವಾಬ್ದಾರಿಗಳನ್ನು ಸಮತೂಕದಲ್ಲಿ ಇಡಬೇಕಿತ್ತು?
◻ ಕ್ರೈಸ್ತ ಹೆತ್ತವರು ಯಾವ ಜವಾಬ್ದಾರಿಗಳನ್ನು ನೆರವೇರಿಸಬೇಕು?
◻ ಕುಟುಂಬಗಳಿರುವ ಕ್ರೈಸ್ತ ಹಿರಿಯರಿಗೆ ಯಾವ ಸಹಾಯವು ಲಭ್ಯವಿದೆ?
◻ ಸಭೆಯೊಳಗೆ ಸಹೋದರಿಯರು ಯಾವ ಅಮೂಲ್ಯ ಸೇವೆಯನ್ನು ಮಾಡಬಹುದು?
◻ ಮಕ್ಕಳು ಯಾವ ಸಲಹೆ ಮತ್ತು ನಿರ್ದೇಶನಕ್ಕೆ ಲಕ್ಷ್ಯಕೊಡುವುದು ಮಹತ್ವದ್ದಾಗಿರುವುದು?
[ಪುಟ 15 ರಲ್ಲಿರುವ ಚಿತ್ರ]
ಒಬ್ಬ ಪ್ರೌಢ ಕ್ರೈಸ್ತ ಸ್ತ್ರೀಯು ಅನೇಕವೇಳೆ ಎಳೆಯ ಸ್ತ್ರೀಯೊಬ್ಬಳಿಗೆ ಅಗತ್ಯವಿರುವ ಸಹಾಯವನ್ನು ಒದಗಿಸಬಲ್ಲಳು
[ಪುಟ 17 ರಲ್ಲಿರುವ ಚಿತ್ರ]
ಮೊಂಡರಾದ ಮಕ್ಕಳಿರುವ ಹೆತ್ತವರು ಶಾಸ್ತ್ರದಿಂದ ಯಾವ ಸಾಂತ್ವನವನ್ನು ಪಡೆಯಬಲ್ಲರು?