-
ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 21
ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?
ಯೆಹೋವನು ತನ್ನ ಆಳ್ವಿಕೆಯ ಮೂಲಕ ನಮಗಿರುವ ಎಲ್ಲಾ ಸಮಸ್ಯೆಗಳನ್ನ ಬೇಗನೆ ತೆಗೆದುಹಾಕ್ತಾನೆ. ಇಂಥ ಒಳ್ಳೇ ಸಿಹಿಸುದ್ದಿಯನ್ನ ಬೇರೆಯವರೂ ತಿಳಿದುಕೊಳ್ಳಬೇಕಲ್ವಾ? ತನ್ನ ಶಿಷ್ಯರೂ ಸಿಹಿಸುದ್ದಿಯನ್ನ ಬೇರೆಯವರಿಗೆ ತಿಳಿಸಬೇಕಂತ ಯೇಸು ಆಜ್ಞೆ ಕೊಟ್ಟಿದ್ದಾನೆ. (ಮತ್ತಾಯ 28:19, 20) ಯೇಸು ಕೊಟ್ಟ ಈ ಆಜ್ಞೆಯನ್ನ ಯೆಹೋವನ ಸಾಕ್ಷಿಗಳು ಹೇಗೆ ಪಾಲಿಸುತ್ತಿದ್ದಾರೆ?
1. ಮತ್ತಾಯ 24:14ರಲ್ಲಿರುವ ಮಾತು ಈಗ ಹೇಗೆ ನೆರವೇರುತ್ತಿದೆ?
‘ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾರಲಾಗುತ್ತೆ’ ಅಂತ ಯೇಸು ಮುಂಚೆನೇ ಹೇಳಿದನು. (ಮತ್ತಾಯ 24:14) ಈ ಸಿಹಿಸುದ್ದಿಯನ್ನ ಯೆಹೋವನ ಸಾಕ್ಷಿಗಳಾದ ನಾವು ತುಂಬ ಖುಷಿಯಿಂದ ಸಾರುತ್ತಿದ್ದೇವೆ. ಭೂಮಿಯ ಎಲ್ಲಾ ಕಡೆ ಸುಮಾರು 1000ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಈ ಸಿಹಿಸುದ್ದಿಯನ್ನ ಸಾರುತ್ತಾ ಇದ್ದೇವೆ! ಇದೊಂದು ದೊಡ್ಡ ಕೆಲಸ. ಇದನ್ನ ವ್ಯವಸ್ಥಿತವಾಗಿ ಮಾಡೋಕೆ ತುಂಬ ಪ್ರಯತ್ನ ಹಾಕಬೇಕು. ಯೆಹೋವ ದೇವರ ಸಹಾಯವಿಲ್ಲದೆ ಈ ಕೆಲಸವನ್ನ ಮಾಡೋಕೆ ಸಾಧ್ಯಾನೇ ಇಲ್ಲ!
2. ಎಲ್ಲಾ ಜನರಿಗೆ ಸಿಹಿಸುದ್ದಿ ಸಾರಲು ನಾವೇನು ಮಾಡುತ್ತೇವೆ?
ಜನ ಎಲ್ಲೆಲ್ಲಿ ಸಿಗ್ತಾರೋ ಅಲ್ಲೆಲ್ಲಾ ಸಾರುತ್ತೇವೆ. ಒಂದನೇ ಶತಮಾನದ ಕ್ರೈಸ್ತರಂತೆ ನಾವು “ಮನೆಮನೆಗೆ ಹೋಗಿ” ಸಾರುತ್ತೇವೆ. (ಅಪೊಸ್ತಲರ ಕಾರ್ಯ 5:42) ಈ ರೀತಿ ಮಾಡೋದ್ರಿಂದ ಪ್ರತಿ ವರ್ಷ ಲಕ್ಷಾಂತರ ಜನರಿಗೆ ಸಾರೋಕೆ ಆಗ್ತಿದೆ. ಕೆಲವೊಮ್ಮೆ ಜನರು ಮನೆಯಲ್ಲಿ ಸಿಗದೇ ಇರೋದ್ರಿಂದ ನಾವು ಸಾರ್ವಜನಿಕ ಸ್ಥಳಗಳಲ್ಲೂ ಸಾರುತ್ತೇವೆ. ಯೆಹೋವನ ಬಗ್ಗೆ ಮತ್ತು ಆತನ ಆಳ್ವಿಕೆಯ ಬಗ್ಗೆ ಜನರಿಗೆ ತಿಳಿಸೋಕೆ ಸಿಗುವ ಎಲ್ಲಾ ಅವಕಾಶಗಳನ್ನ ಚೆನ್ನಾಗಿ ಬಳಸುತ್ತೇವೆ.
3. ಸಿಹಿಸುದ್ದಿಯನ್ನ ಯಾರು ಸಾರಬೇಕು?
ಪ್ರತಿಯೊಬ್ಬ ನಿಜ ಕ್ರೈಸ್ತನು ಸಿಹಿಸುದ್ದಿಯನ್ನ ಸಾರಲೇ ಬೇಕು. ಸಾರುವ ಕೆಲಸವನ್ನ ನಾವು ತುಂಬ ಗಂಭೀರವಾಗಿ ನೋಡುತ್ತೇವೆ. ಜನರ ಜೀವ ಅಪಾಯದಲ್ಲಿ ಇರೋದ್ರಿಂದ ನಮ್ಮ ಕೈಲಾದಷ್ಟು ಹೆಚ್ಚು ಜನರಿಗೆ ಸಿಹಿಸುದ್ದಿಯನ್ನ ಸಾರುತ್ತೇವೆ. (1 ತಿಮೊತಿ 4:16 ಓದಿ.) ಈ ಕೆಲಸವನ್ನ ನಾವು ಹಣಕ್ಕಾಗಿ ಮಾಡಲ್ಲ. ಯಾಕೆಂದರೆ “ನಿಮಗೆ ಉಚಿತವಾಗಿ ಸಿಕ್ಕಿದೆ, ಉಚಿತವಾಗಿ ಕೊಡಿ” ಅಂತ ಬೈಬಲ್ ಹೇಳುತ್ತೆ. (ಮತ್ತಾಯ 10:7, 8) ನಾವು ಸಿಹಿಸುದ್ದಿಯನ್ನ ಸಾರೋದ್ರಿಂದ ಯೆಹೋವನ ಮಾತನ್ನ ಕೇಳುತ್ತೇವೆ ಮತ್ತು ಆತನನ್ನ ಖುಷಿಪಡಿಸ್ತೇವೆ. ಹಾಗಾಗಿ ನಾವು ಹೇಳೋದನ್ನ ಕೆಲವರು ಕೇಳದಿದ್ರೂ ಜನರಿಗೆ ಸಾರೋದನ್ನ ಮುಂದುವರಿಸುತ್ತೇವೆ.
ಹೆಚ್ಚನ್ನ ತಿಳಿಯೋಣ
ಯೆಹೋವನ ಸಾಕ್ಷಿಗಳು ಭೂಮಿಯ ಎಲ್ಲಾ ಕಡೆ ಸಾರಲು ಮಾಡುತ್ತಿರುವ ಪ್ರಯತ್ನದ ಬಗ್ಗೆ ಕಲಿಯಿರಿ ಮತ್ತು ಈ ಕೆಲಸಕ್ಕೆ ಯೆಹೋವನು ಹೇಗೆ ಸಹಾಯ ಮಾಡ್ತಿದ್ದಾನೆ ಅಂತ ತಿಳಿಯಿರಿ.
ಭೂಮಿಯ ಎಲ್ಲೆಡೆ ಸಿಹಿಸುದ್ದಿ: (A) ಕೋಸ್ಟಾರಿಕ, (B) ಅಮೆರಿಕ, (C) ಬೆನಿನ್, (D) ಥಾಯ್‌ಲೆಂಡ್, (E) ಯಾಪ್, (F) ಸ್ವೀಡನ್
4. ಎಲ್ಲರಿಗೂ ಸಿಹಿಸುದ್ದಿ ಸಾರೋದೇ ನಮ್ಮ ಮುಖ್ಯ ಗುರಿ
ಭೂಮಿಯ ಎಲ್ಲಾ ಕಡೆ ಸಿಹಿಸುದ್ದಿಯನ್ನ ಸಾರೋಕೆ ಯೆಹೋವನ ಸಾಕ್ಷಿಗಳು ತುಂಬ ಪ್ರಯತ್ನ ಮಾಡ್ತಾರೆ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ಸಿಹಿಸುದ್ದಿ ಸಾರೋಕೆ ಯೆಹೋವನ ಸಾಕ್ಷಿಗಳು ಮಾಡುತ್ತಿರುವ ಯಾವ ಪ್ರಯತ್ನ ನಿಮಗೆ ಇಷ್ಟ ಆಯಿತು?
ಮತ್ತಾಯ 22:39 ಮತ್ತು ರೋಮನ್ನರಿಗೆ 10:13-15 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನಾವು ಜನರನ್ನ ತುಂಬ ಪ್ರೀತಿಸ್ತೇವೆ ಅಂತ ನಾವು ಮಾಡುವ ಸೇವೆ ಹೇಗೆ ತೋರಿಸುತ್ತೆ?
ಸಿಹಿಸುದ್ದಿ ಸಾರುವವರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?—ವಚನ 15 ನೋಡಿ.
5. ನಾವು ದೇವರ ಜೊತೆ ಕೆಲಸ ಮಾಡುವವರು
ಯೆಹೋವನು ನಮ್ಮ ಕೆಲಸವನ್ನ ಮಾರ್ಗದರ್ಶಿಸ್ತಿದ್ದಾನೆ ಅಂತ ಅನೇಕ ಅನುಭವಗಳು ತೋರಿಸುತ್ತೆ. ನ್ಯೂಜ಼ಿಲೆಂಡಿನಲ್ಲಿರುವ ಸಹೋದರ ಪೌಲ್ ಉದಾಹರಣೆ ನೋಡಿ. ಒಂದು ಮಧ್ಯಾಹ್ನ ಮನೆಮನೆ ಸೇವೆ ಮಾಡುತ್ತಿರುವಾಗ ಅವರು ಒಬ್ಬ ಸ್ತ್ರೀಯನ್ನ ಭೇಟಿ ಮಾಡಿದರು. ಆ ಸ್ತ್ರೀ, ಅವತ್ತು ಬೆಳಗ್ಗೆಯಷ್ಟೇ ಯೆಹೋವನ ಹೆಸರು ಹೇಳಿ, ‘ನಾನು ನಿನ್ನ ಬಗ್ಗೆ ಕಲಿಯಬೇಕು, ಅದಕ್ಕಾಗಿ ಯಾರನ್ನಾದ್ರೂ ಕಳುಹಿಸು’ ಅಂತ ಪ್ರಾರ್ಥನೆ ಮಾಡಿದ್ದರು. ಇದಾಗಿ “ಮೂರು ತಾಸು ಆದಮೇಲೆ ನಾನು ಅವರ ಮನೆ ಮುಂದೆ ಇದ್ದೆ” ಅಂತ ಸಹೋದರ ಪೌಲ್ ಹೇಳಿದರು.
1 ಕೊರಿಂಥ 3:9 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಇಂಥ ಅನುಭವಗಳಿಂದ ಯೆಹೋವನು ನಮ್ಮ ಸಾರುವ ಕೆಲಸವನ್ನ ಮಾರ್ಗದರ್ಶಿಸ್ತಿದ್ದಾನೆ ಅಂತ ಹೇಗೆ ಹೇಳಬಹುದು?
ಅಪೊಸ್ತಲರ ಕಾರ್ಯ 1:8 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಸೇವೆಯನ್ನ ಚೆನ್ನಾಗಿ ಮಾಡೋಕೆ ಯೆಹೋವನ ಸಹಾಯ ನಮಗೆ ಯಾಕೆ ಬೇಕು?
ನಿಮಗೆ ಗೊತ್ತಿತ್ತಾ?
ಪ್ರತಿವಾರ ನಡೆಯುವ ವಾರಮಧ್ಯದ ಮೀಟಿಂಗ್‌ನಲ್ಲಿ ಜನರಿಗೆ ಸಿಹಿಸುದ್ದಿಯನ್ನ ಸಾರೋದು ಹೇಗೆ ಅಂತ ನಾವು ಕಲಿಯುತ್ತೇವೆ. ಒಂದುವೇಳೆ ನೀವು ಅಂಥ ಮೀಟಿಂಗ್‌ಗೆ ಹಾಜರಾಗಿದ್ದರೆ ಅಲ್ಲಿ ಕೊಡುವ ತರಬೇತಿಯ ಬಗ್ಗೆ ನಿಮಗೆ ಹೇಗನಿಸುತ್ತೆ?
6. ಸಾರಬೇಕು ಅಂತ ದೇವರು ಕೊಟ್ಟಿರೋ ಆಜ್ಞೆಯನ್ನ ಪಾಲಿಸ್ತೇವೆ
ಒಂದನೇ ಶತಮಾನದಲ್ಲಿ, ಯೇಸುವಿನ ಶಿಷ್ಯರು ಸಿಹಿಸುದ್ದಿಯನ್ನ ಸಾರದಂತೆ ಕೆಲವು ವಿರೋಧಿಗಳು ತಡೆದರು. ಆದರೆ ಅವರು ‘ಸಿಹಿಸುದ್ದಿ ಸಾರೋಕೆ’ ತಮಗಿದ್ದ ‘ಕಾನೂನುಬದ್ಧ ಹಕ್ಕನ್ನ’ ಪಡೆಯೋಕೆ ಪ್ರಯತ್ನಿಸಿದರು. (ಫಿಲಿಪ್ಪಿ 1:7) ಇವತ್ತು ಯೆಹೋವನ ಸಾಕ್ಷಿಗಳು ಹಾಗೇ ಮಾಡ್ತಾರೆ.a
ಅಪೊಸ್ತಲರ ಕಾರ್ಯ 5:27-42 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ನಾವು ಸಾರೋ ಕೆಲಸವನ್ನ ಯಾಕೆ ನಿಲ್ಲಿಸಲ್ಲ?—ವಚನ 29, 38, ಮತ್ತು 39 ನೋಡಿ.
ಕೆಲವರು ಹೀಗೆ ಕೇಳಬಹುದು: “ಯೆಹೋವನ ಸಾಕ್ಷಿಗಳು ಯಾಕೆ ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಾರೆ?”
ನೀವೇನು ಉತ್ತರ ಕೊಡ್ತೀರಾ?
ನಾವೇನು ಕಲಿತ್ವಿ
ಎಲ್ಲಾ ಜನರಿಗೆ ಸಿಹಿಸುದ್ದಿಯನ್ನ ಸಾರಬೇಕು ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. ಈ ಕೆಲಸ ಮಾಡೋದಕ್ಕೆ ಯೆಹೋವನು ಸಹಾಯ ಮಾಡ್ತಿದ್ದಾನೆ.
ನೆನಪಿದೆಯಾ
ಭೂಮಿಯ ಎಲ್ಲಾ ಕಡೆ ಸಿಹಿಸುದ್ದಿಯನ್ನ ಹೇಗೆ ಸಾರಲಾಗುತ್ತಿದೆ?
ಜನರನ್ನ ಪ್ರೀತಿಸುತ್ತೇವೆ ಅಂತ ನಾವು ಸೇವೆ ಮಾಡುವ ಮೂಲಕ ಹೇಗೆ ತೋರಿಸಿ ಕೊಡುತ್ತೇವೆ?
ಸಿಹಿಸುದ್ದಿ ಸಾರೋದ್ರಿಂದ ನಮಗೆ ಖುಷಿ ಸಿಗುತ್ತಾ? ಹೇಗೆ?
ಇದನ್ನೂ ನೋಡಿ
ದೊಡ್ಡ ದೊಡ್ಡ ಪಟ್ಟಣಗಳಲ್ಲಿರುವ ಜನರಿಗೆ ಯೆಹೋವನ ಸಾಕ್ಷಿಗಳು ಹೇಗೆ ಸಾರುತ್ತಿದ್ದಾರೆ ಅಂತ ನೋಡಿ.
ಯೆಹೋವನ ಸಾಕ್ಷಿಗಳು ನಿರಾಶ್ರಿತರಿಗೆ ಹೇಗೆ ಸಾರುತ್ತಿದ್ದಾರೆ?
ಪೂರ್ಣ ಸಮಯದ ಸೇವೆ ಮಾಡಿದ್ದರಿಂದ ಜೀವನ ಹೇಗೆ ಖುಷಿ ಖುಷಿಯಾಗಿದೆ ಅಂತ ಒಬ್ಬ ಸಹೋದರಿಯ ಅನುಭವದಿಂದ ತಿಳಿಯಿರಿ.
ಕೆಲವು ಪ್ರಾಮುಖ್ಯ ಕೇಸುಗಳಲ್ಲಿ ನಮಗೆ ಜಯ ಸಿಕ್ಕಿದ್ದರಿಂದ ಸಿಹಿಸುದ್ದಿಯನ್ನ ಇನ್ನೂ ಚೆನ್ನಾಗಿ ಸಾರೋಕೆ ಹೇಗೆ ಆಗುತ್ತಿದೆ ಅಂತ ತಿಳಿಯಿರಿ.
a ಸಿಹಿಸುದ್ದಿಯನ್ನ ಸಾರಬೇಕು ಅಂತ ಹೇಳಿರೋದು ಯೆಹೋವ ದೇವರು. ಹಾಗಾಗಿ ಸಿಹಿಸುದ್ದಿಯನ್ನ ಸಾರಲು ಯೆಹೋವನ ಸಾಕ್ಷಿಗಳಿಗೆ ಯಾವ ಮಾನವ ಅಧಿಕಾರಿಗಳ ಅನುಮತಿ ಬೇಕಾಗಿಲ್ಲ.
-
-
ದೀಕ್ಷಾಸ್ನಾನ: ಒಂದು ಒಳ್ಳೇ ಗುರಿ!ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
ಪಾಠ 23
ದೀಕ್ಷಾಸ್ನಾನ: ಒಂದು ಒಳ್ಳೇ ಗುರಿ!
ಒಬ್ಬ ವ್ಯಕ್ತಿ ಕ್ರೈಸ್ತನಾಗಬೇಕಾದ್ರೆ ದೀಕ್ಷಾಸ್ನಾನ ಪಡೆದುಕೊಳ್ಳಬೇಕು ಅಂತ ಯೇಸು ಹೇಳಿದನು. (ಮತ್ತಾಯ 28:19, 20 ಓದಿ.) ದೀಕ್ಷಾಸ್ನಾನ ಅಂದರೆ ಏನು? ಒಬ್ಬ ವ್ಯಕ್ತಿಗೆ ದೀಕ್ಷಾಸ್ನಾನ ಆಗಬೇಕಂದ್ರೆ ಏನೆಲ್ಲಾ ಮಾಡಬೇಕು?
1. ದೀಕ್ಷಾಸ್ನಾನ ಅಂದರೆ ಏನು?
“ದೀಕ್ಷಾಸ್ನಾನ” ಅನ್ನೋ ಪದ ನೀರಿನಲ್ಲಿ “ಮುಳುಗುವುದು” ಅನ್ನೋ ಅರ್ಥವಿರುವ ಗ್ರೀಕ್ ಪದದಿಂದ ಬಂದಿದೆ. ಯೋರ್ದನ್ ನದಿಯಲ್ಲಿ ಯೋಹಾನ ಯೇಸುವನ್ನ ದೀಕ್ಷಾಸ್ನಾನ ಮಾಡಿಸಿದಾಗ ಆತನನ್ನ ನೀರಿನಲ್ಲಿ ಮುಳುಗಿಸಿದ. ಆಮೇಲೆ ‘ಯೇಸು ನೀರಿಂದ ಮೇಲೆ ಬಂದನು.’ (ಮಾರ್ಕ 1:9, 10) ನಿಜ ಕ್ರೈಸ್ತರನ್ನ ಸಹ ದೀಕ್ಷಾಸ್ನಾನದ ಸಮಯದಲ್ಲಿ ನೀರಿನಲ್ಲಿ ಪೂರ್ತಿ ಮುಳುಗಿಸಿ ಎಬ್ಬಿಸಲಾಗುತ್ತೆ.
2. ದೀಕ್ಷಾಸ್ನಾನ ಪಡೆದುಕೊಳ್ಳುವುದು ಏನನ್ನ ಸೂಚಿಸುತ್ತೆ?
ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆದುಕೊಳ್ಳುವಾಗ ಯೆಹೋವ ದೇವರಿಗೆ ಸಮರ್ಪಿಸಿಕೊಂಡಿದ್ದಾನೆ ಅಂತ ಎಲ್ಲರಿಗೆ ತೋರಿಸಿಕೊಡ್ತಾನೆ. ಹಾಗಾಗಿ ಅವನು ದೀಕ್ಷಾಸ್ನಾನ ಪಡೆದುಕೊಳ್ಳೋ ಮುಂಚೆನೇ ಸಮರ್ಪಣೆ ಮಾಡಿಕೊಂಡಿರಬೇಕು. ಸಮರ್ಪಣೆ ಅಂದ್ರೆ ಏನು? ‘ಯೆಹೋವನೇ, ಯಾವಾಗಲೂ ನಿನ್ನನ್ನ ಮಾತ್ರ ಆರಾಧಿಸುತ್ತೇನೆ, ನಿನ್ನ ಸೇವೆ ಮಾಡುತ್ತೇನೆ, ಜೀವನದಲ್ಲಿ ಬೇರೆ ಎಲ್ಲದಕ್ಕಿಂತ ಮುಖ್ಯವಾಗಿ ನಿನ್ನ ಇಷ್ಟದ ಪ್ರಕಾರ ನಡೆಯುತ್ತೇನೆ’ ಅಂತ ಆತನಿಗೆ ಪ್ರಾರ್ಥನೆಯಲ್ಲಿ ಮಾತು ಕೊಡೋದೇ ಸಮರ್ಪಣೆ. ಅಷ್ಟೇ ಅಲ್ಲ ಅವನು ‘ತನಗೋಸ್ಕರ ಜೀವಿಸದೆ’ ಯೇಸುವಿನ ಬೋಧನೆಯನ್ನ, ಮಾದರಿಯನ್ನ ಅನುಕರಿಸುತ್ತಾ ಇರೋಕೆ ನಿರ್ಣಯಿಸ್ತಾನೆ. (ಮತ್ತಾಯ 16:24) ಸಮರ್ಪಣೆ ಮತ್ತು ದೀಕ್ಷಾಸ್ನಾನ ಯೆಹೋವನ ಜೊತೆ ಮತ್ತು ಸಹೋದರ ಸಹೋದರಿಯರ ಜೊತೆ ಆಪ್ತ ಸ್ನೇಹವನ್ನ ಬೆಳೆಸಿಕೊಳ್ಳೋಕೆ ಸಹಾಯ ಮಾಡುತ್ತೆ.
3. ದೀಕ್ಷಾಸ್ನಾನ ಪಡೆದುಕೊಳ್ಳಬೇಕಾದ್ರೆ ನಾವೇನು ಮಾಡಬೇಕು?
ಯೆಹೋವ ದೇವರ ಬಗ್ಗೆ ಕಲಿಯಬೇಕು ಮತ್ತು ಆತನ ಮೇಲೆ ನಂಬಿಕೆಯನ್ನ ಬೆಳೆಸಿಕೊಳ್ಳಬೇಕು. (ಇಬ್ರಿಯ 11:6 ಓದಿ.) ನೀವು ಎಷ್ಟು ಹೆಚ್ಚು ಯೆಹೋವ ದೇವರ ಬಗ್ಗೆ ಕಲಿಯುತ್ತೀರೋ ಅಷ್ಟು ಹೆಚ್ಚು ಆತನನ್ನ ಪ್ರೀತಿಸ್ತೀರ. ಅಷ್ಟೇ ಅಲ್ಲ, ನೀವು ಕಲಿತ ವಿಷಯಗಳ ಬಗ್ಗೆ ಬೇರೆಯವರ ಹತ್ತಿರ ಹೇಳುತ್ತೀರ ಮತ್ತು ಕಲಿತ ವಿಷಯಗಳ ಪ್ರಕಾರ ಜೀವನ ಮಾಡುತ್ತೀರ. (2 ತಿಮೊತಿ 4:2; 1 ಯೋಹಾನ 5:3) ಒಬ್ಬ ವ್ಯಕ್ತಿ ಯೆಹೋವನಿಗೆ ಇಷ್ಟ ಆಗೋ ತರ ಮತ್ತು ‘ಆತನನ್ನು ಖುಷಿಪಡಿಸುವ ತರ’ ನಡೆದುಕೊಳ್ಳುತ್ತಾ ಇದ್ದರೆ ಅವನು ತನ್ನ ಜೀವನವನ್ನ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಳ್ಳುವ ನಿರ್ಧಾರ ಮಾಡಬಹುದು.—ಕೊಲೊಸ್ಸೆ 1:9, 10.a
ಹೆಚ್ಚನ್ನ ತಿಳಿಯೋಣ
ಯೇಸುವಿನ ದೀಕ್ಷಾಸ್ನಾನದಿಂದ ನಾವೇನು ಕಲಿಯಬಹುದು ಮತ್ತು ಒಬ್ಬ ವ್ಯಕ್ತಿ ಈ ಮುಖ್ಯ ಹೆಜ್ಜೆಯನ್ನ ತಗೊಳೋಕೆ ಏನೆಲ್ಲಾ ಮಾಡಬೇಕು ಅಂತ ಕಲಿಯಿರಿ.
4. ಯೇಸುವಿನ ದೀಕ್ಷಾಸ್ನಾನದಿಂದ ಕಲಿಯಿರಿ
ಯೇಸುವಿನ ದೀಕ್ಷಾಸ್ನಾನದ ಬಗ್ಗೆ ಹೆಚ್ಚನ್ನ ಕಲಿಯಲು ಮತ್ತಾಯ 3:13-17 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ದೀಕ್ಷಾಸ್ನಾನ ಆದಾಗ ಯೇಸು ಪುಟ್ಟ ಮಗುವಾಗಿದ್ದನಾ?
ಆತನು ಹೇಗೆ ದೀಕ್ಷಾಸ್ನಾನ ಪಡೆದುಕೊಂಡನು? ಆತನ ತಲೆ ಮೇಲೆ ಕೇವಲ ನೀರನ್ನ ಚಿಮುಕಿಸಲಾಯ್ತಾ? ನಿಮಗೇನು ಅನಿಸುತ್ತೆ?
ಯೇಸು ದೀಕ್ಷಾಸ್ನಾನ ಪಡೆದುಕೊಂಡ ನಂತರ ಯೆಹೋವ ದೇವರು ಕೊಟ್ಟ ಕೆಲಸವನ್ನ ಮಾಡೋಕೆ ಶುರು ಮಾಡಿದನು. ಲೂಕ 3:21-23 ಮತ್ತು ಯೋಹಾನ 6:38 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ದೀಕ್ಷಾಸ್ನಾನ ಆದಮೇಲೆ ಯೇಸು ಯಾವ ಕೆಲಸಕ್ಕೆ ತುಂಬ ಪ್ರಾಮುಖ್ಯತೆ ಕೊಟ್ಟನು?
5. ನೀವೂ ದೀಕ್ಷಾಸ್ನಾನ ಪಡೆದುಕೊಳ್ಳಬಹುದು
‘ಸಮರ್ಪಣೆ, ದೀಕ್ಷಾಸ್ನಾನ ಇದೆಲ್ಲಾ ನನ್ನಿಂದ ಆಗಲ್ಲ’ ಅಂತ ಮೊದಮೊದಲು ನಿಮಗೆ ಅನಿಸಬಹುದು. ಆದ್ರೆ ನೀವು ಯೆಹೋವ ದೇವರ ಬಗ್ಗೆ ಹೆಚ್ಚನ್ನ ತಿಳಿದುಕೊಳ್ಳುತ್ತಾ ಹೋದಂತೆ ಈ ನಿರ್ಣಯ ಮಾಡೋಕೆ ಸುಲಭ ಆಗುತ್ತೆ. ಈ ರೀತಿ ಮಾಡಿರೋ ಕೆಲವರ ಬಗ್ಗೆ ತಿಳಿಯಲು ವಿಡಿಯೋ ನೋಡಿ.
ಯೋಹಾನ 17:3 ಮತ್ತು ಯಾಕೋಬ 1:5 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆದುಕೊಳ್ಳುವ ಮುಂಚೆ ಏನೆಲ್ಲಾ ಮಾಡಬೇಕು?
‘ಯಾವಾಗಲೂ ನಿನ್ನ ಸೇವೆ ಮಾಡ್ತೇನೆ’ ಅಂತ ಯೆಹೋವನಿಗೆ ಮಾತು ಕೊಡುವುದೇ ಸಮರ್ಪಣೆಯಾಗಿದೆ
ದೀಕ್ಷಾಸ್ನಾನ ಪಡೆದುಕೊಳ್ಳುವ ಮೂಲಕ ನಮ್ಮನ್ನ ಯೆಹೋವನಿಗೆ ಸಮರ್ಪಿಸಿಕೊಂಡಿದ್ದೇವೆ ಅಂತ ಎಲ್ಲರಿಗೆ ತೋರಿಸಿಕೊಡುತ್ತೇವೆ
6. ದೀಕ್ಷಾಸ್ನಾನ ಪಡೆದುಕೊಂಡಾಗ ನಾವು ಯೆಹೋವನ ಕುಟುಂಬದ ಭಾಗ ಆಗುತ್ತೇವೆ
ನಾವು ದೀಕ್ಷಾಸ್ನಾನ ಪಡೆದುಕೊಂಡಾಗ ಲೋಕವ್ಯಾಪಕವಾಗಿರುವ ಯೆಹೋವನ ಕುಟುಂಬದಲ್ಲಿ ಒಬ್ಬರಾಗುತ್ತೇವೆ. ನಮ್ಮ ಮಧ್ಯ ಪ್ರೀತಿ, ಐಕ್ಯತೆ ಇದೆ. ಬೇರೆಬೇರೆ ಕಡೆಗಳಿಂದ, ಹಿನ್ನೆಲೆಯಿಂದ ಬಂದಿದ್ರೂ ನಮ್ಮ ನಂಬಿಕೆ ಒಂದೇ ಆಗಿರುತ್ತೆ ಮತ್ತು ನಾವೆಲ್ಲರೂ ಬೈಬಲಿನಲ್ಲಿರುವ ನೀತಿನಿಯಮಗಳ ಪ್ರಕಾರ ನಡೆಯುತ್ತೇವೆ. ಕೀರ್ತನೆ 25:14 ಮತ್ತು 1 ಪೇತ್ರ 2:17 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ದೀಕ್ಷಾಸ್ನಾನ ಪಡೆದುಕೊಳ್ಳೋದ್ರಿಂದ ಯೆಹೋವನ ಜೊತೆ ಮತ್ತು ಸಹೋದರ ಸಹೋದರಿಯರ ಜೊತೆ ನಮ್ಮ ಸಂಬಂಧ ಹೇಗಿರುತ್ತೆ?
ಕೆಲವರು ಹೀಗಂತಾರೆ: “ನಾನು ದೀಕ್ಷಾಸ್ನಾನ ಪಡೆದುಕೊಳ್ಳೋಕೆ ರೆಡಿ ಇಲ್ಲ.”
ನಿಮಗೂ ಹಾಗೆ ಅನಿಸಿದ್ರೆ ದೀಕ್ಷಾಸ್ನಾನವನ್ನ ಒಂದು ಗುರಿಯಾಗಿ ಇಟ್ಟುಕೊಳ್ಳೋದು ಯಾಕೆ ಒಳ್ಳೇದು?
ನಾವೇನು ಕಲಿತ್ವಿ
ಕ್ರೈಸ್ತರೆಲ್ಲರೂ ದೀಕ್ಷಾಸ್ನಾನ ಪಡೆದುಕೊಳ್ಳಬೇಕು ಅಂತ ಯೇಸು ಹೇಳಿದನು. ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆದುಕೊಳ್ಳಬೇಕಾದ್ರೆ ಯೆಹೋವನ ಮೇಲೆ ಬಲವಾದ ನಂಬಿಕೆಯನ್ನ ಬೆಳೆಸಿಕೊಳ್ಳಬೇಕು ಮತ್ತು ಆತನ ನೀತಿನಿಯಮಗಳ ಪ್ರಕಾರ ಜೀವನ ಮಾಡಬೇಕು. ಅಷ್ಟೇ ಅಲ್ಲ, ಆತನಿಗೆ ಸಮರ್ಪಣೆ ಮಾಡಿಕೊಳ್ಳಬೇಕು.
ನೆನಪಿದೆಯಾ
ದೀಕ್ಷಾಸ್ನಾನ ಅಂದರೆ ಏನು? ಅದು ಯಾಕೆ ತುಂಬ ಮುಖ್ಯ?
ದೀಕ್ಷಾಸ್ನಾನಕ್ಕೆ ಮುಂಚೆ ಯಾಕೆ ಸಮರ್ಪಣೆ ಮಾಡಿಕೊಳ್ಳಬೇಕು?
ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ಮುಂಚೆ ಏನೆಲ್ಲಾ ಮಾಡಬೇಕು?
ಇದನ್ನೂ ನೋಡಿ
ದೀಕ್ಷಾಸ್ನಾನ ಅಂದರೆ ಏನು ಮತ್ತು ಏನಲ್ಲ ಅಂತ ತಿಳಿಯಿರಿ.
ದೀಕ್ಷಾಸ್ನಾನಕ್ಕೆ ತಯಾರಾಗಲು ಏನೆಲ್ಲಾ ಮಾಡಬೇಕು ಅಂತ ತಿಳಿಯಿರಿ.
“ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಿ, ದೀಕ್ಷಾಸ್ನಾನ ಪಡ್ಕೊಳ್ಳಿ” (ಕಾವಲಿನಬುರುಜು, ಮಾರ್ಚ್ 2020)
ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಒಬ್ಬ ವ್ಯಕ್ತಿಗೆ ಯಾವುದು ಸಹಾಯ ಮಾಡಿತು ಅಂತ ತಿಳಿಯಿರಿ.
“ಸತ್ಯ ಏನಂತ ನಾನೇ ಕಂಡುಹಿಡಿಯೋಕೆ ಅವರು ಪ್ರೋತ್ಸಾಹ ಮಾಡಿದರು” (ಕಾವಲಿನಬುರುಜು ಲೇಖನ)
ದೀಕ್ಷಾಸ್ನಾನ ಒಂದು ಒಳ್ಳೇ ಗುರಿಯಾಗಿದೆ ಯಾಕೆ, ಮತ್ತು ಅದಕ್ಕಾಗಿ ಹೇಗೆ ತಯಾರಿ ಮಾಡಬಹುದು ಅಂತ ತಿಳಿಯಿರಿ.
a ಒಬ್ಬ ವ್ಯಕ್ತಿ ಬೇರೆ ಧರ್ಮದಲ್ಲಿ ದೀಕ್ಷಾಸ್ನಾನ ಪಡೆದಿದ್ರೂ ಅವನು ಮತ್ತೆ ದೀಕ್ಷಾಸ್ನಾನ ಪಡೆದುಕೊಳ್ಳಬೇಕು. ಯಾಕಂದ್ರೆ ಆ ಧರ್ಮಗಳು ಬೈಬಲಿನಲ್ಲಿರುವ ಸತ್ಯಗಳನ್ನ ಕಲಿಸಿರಲ್ಲ.—ಅಪೊಸ್ತಲರ ಕಾರ್ಯ 19:1-5 ಮತ್ತು ಪಾಠ 13 ನೋಡಿ.
-