ಒಳ್ಳೆಯ ಕ್ರಿಯೆಗಳಿಂದ ಯೆಹೋವನನ್ನು ಕೊಂಡಾಡಿರಿ
1 ನೀವು ಒಂದು ಪ್ರಚಂಡವಾದ ಚಂಡಮಾರುತದಲ್ಲಿ ಸಿಕ್ಕಿಕೊಂಡಿರುವಾಗ, ಆಶ್ರಯದಾಣವನ್ನು ಕಂಡುಕೊಳ್ಳುವುದು ಎಂತಹ ಅವರ್ಣನೀಯ ಸಂತೋಷವನ್ನು ತರುವುದು! ಆ ಸ್ಥಳವು ಬೆಚ್ಚಗೂ ಭದ್ರವೂ ಆಗಿದ್ದು, ಮನೆಯವರು ಅಪರಿಚಿತರನ್ನು ಉಪಚರಿಸುವ ಸ್ವಭಾವವುಳ್ಳವರಾಗಿದ್ದರೆ, ನೀವು ಅಲ್ಲಿ ಉಳಿಯಲು ಸಂತೋಷಪಡುವಿರಿ. ರಾಜ್ಯದ ಕುರಿತಾದ ಸಾರುವ ಕೆಲಸವು ಕೂಡ ಜನರನ್ನು ಸೈತಾನನ ವ್ಯವಸ್ಥೆಯಿಂದ ಅಂಥ ಆಶ್ರಯದಾಣದೆಡೆಗೆ ನಡೆಸುತ್ತದೆ. ಈ ಭದ್ರವಾದ ಆಶ್ರಯಸ್ಥಾನವು ಎಷ್ಟು ಆಕರ್ಷಕವಾಗಿದೆ ಎಂಬುದನ್ನು ಇತರರು ನೋಡಲು ನಮ್ಮ ದೈನಂದಿನ ನಡವಳಿಕೆಯು ಸಹಾಯಮಾಡಬಲ್ಲದೋ? ಖಂಡಿತವಾಗಿಯೂ. ಏಕೆಂದರೆ ಯೇಸು ಹೇಳಿದ ಪ್ರಕಾರ, ಜನರು ‘ನಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಮ್ಮ ತಂದೆಯನ್ನು ಕೊಂಡಾಡುವರು.’—ಮತ್ತಾ. 5:16.
2 ಇತರರು ಯೆಹೋವನೆಡೆಗೆ ಮತ್ತು ಆತನ ಸಂಸ್ಥೆಯೆಡೆಗೆ ಆಕರ್ಷಿಸಲ್ಪಡುವಂತಹ ರೀತಿಯಲ್ಲಿ ನಾವು ಹೇಗೆ ನಡೆದುಕೊಳ್ಳಸಾಧ್ಯವಿದೆ? ಲೂಕ 6:31 ಮತ್ತು 10:27ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು ಪ್ರತಿದಿನವೂ ನಮ್ಮ ಜೀವನವನ್ನು ರೂಪಿಸುವಂತೆ ಬಿಡುವುದರ ಮೂಲಕವೇ. ಇದು, ನಾವು ನಮ್ಮ ಜೊತೆ ಮಾನವರ ಕಡೆಗೆ ಪ್ರೀತಿಯಿಂದ ಕೂಡಿದ ಕಾಳಜಿಯನ್ನು ತೋರಿಸುವಂತೆ ಪ್ರೇರೇಪಿಸುವುದು. ಇದು ನಮ್ಮನ್ನು, ಈ ತಣ್ಣಗಾದ ಮತ್ತು ನಿರ್ದಯಿ ಲೋಕದಿಂದ ಭಿನ್ನವಾಗಿರಿಸುವುದು.
3 ಸಮುದ್ರಯಾನಕ್ಕಾಗಿರುವ ಒಂದು ದೋಣಿಯಲ್ಲಿದ್ದ ಒಬ್ಬ ಸಹೋದರಿಯು ತನ್ನೊಂದಿಗೆ ಪ್ರಯಾಣ ಮಾಡುತ್ತಿದ್ದ ಒಬ್ಬ ಯುವ ಹೆಂಗಸನ್ನು ನೋಡಿದಳು. ಅವಳಿಗೆ ಸಮುದ್ರಪಿತ್ತವಾದದ್ದರಿಂದ ತನ್ನ ಚಿಕ್ಕ ಮಗುವನ್ನು ನೋಡಿಕೊಳ್ಳಲು ಅಶಕ್ತಳಾಗಿದ್ದಳು. ಆದುದರಿಂದ ಸಹೋದರಿಯು ಆ ಮಗುವನ್ನು ನೋಡಿಕೊಂಡಳು. ಅದಕ್ಕೆ ಆ ಹೆಂಗಸು, ತಾನು ಹೇಗೆ ಕೃತಜ್ಞತೆಯನ್ನು ತೋರಿಸಬಲ್ಲೆ ಎಂದು ಕೇಳಿದಾಗ, ಸಹೋದರಿಯು ಉತ್ತರಿಸಿದ್ದು: ‘ಯೆಹೋವನ ಸಾಕ್ಷಿಗಳು ಮುಂದಿನ ಬಾರಿ ಭೇಟಿ ನೀಡಿದಾಗ ದಯವಿಟ್ಟು ಅವರಿಗೆ ಕಿವಿಗೊಡಿ.’ ಆ ಹೆಂಗಸು ಹಾಗೆಯೇ ಮಾಡಿದಳು ಮತ್ತು ಈಗ ಅವಳು ಹಾಗೂ ಅವಳ ಗಂಡ, ಇಬ್ಬರೂ ಸಾಕ್ಷಿಗಳಾಗಿದ್ದಾರೆ. ಹೀಗೆ, ಒಳ್ಳೆಯ ಕ್ರಿಯೆಗಳು ಅವರು ರಾಜ್ಯದ ಸಂದೇಶಕ್ಕೆ ತೋರಿಸಿದ ಪ್ರತಿಕ್ರಿಯೆಯ ಮೇಲೆ ಪ್ರಭಾವವನ್ನು ಬೀರಿತು.
4 ನಮ್ಮ ಇಡೀ ಜೀವನ ಒಳಗೂಡಿದೆ: ನೆರೆಹೊರೆಯಲ್ಲಿ, ಕೆಲಸ ಮಾಡುವ ಸ್ಥಳದಲ್ಲಿ, ಶಾಲೆಯಲ್ಲಿ ಮತ್ತು ಮನೋರಂಜನೆಗಾಗಿ ನಾವು ಕಳೆಯುವಂಥ ಸಮಯಗಳಲ್ಲಿನ ನಮ್ಮ ನಡವಳಿಕೆಯು, ನಮ್ಮ ಕುರಿತಾಗಿ ಹಾಗೂ ನಮ್ಮ ಧರ್ಮದ ಕುರಿತಾಗಿ ಬೇರೆಯವರ ಮನಸ್ಸಿನಲ್ಲಿ ಒಂದು ಅಭಿಪ್ರಾಯವನ್ನು ಮೂಡಿಸುತ್ತದೆ. ಆದುದರಿಂದ, ನಮ್ಮನ್ನು ನಾವೇ ಹೀಗೆ ಕೇಳಿಕೊಳ್ಳಬೇಕು: ‘ಪ್ರೇಕ್ಷಕರು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಹೇಗೆ ವೀಕ್ಷಿಸುತ್ತಾರೆ? ನೆರೆಯವರು ನಮ್ಮ ಮನೆ ಹಾಗೂ ಅಂಗಳ ಶುಚಿಯಾಗಿದೆ ಮತ್ತು ಸುಸ್ಥಿತಿಯಲ್ಲಿದೆ ಎಂದು ಪರಿಗಣಿಸುತ್ತಾರೋ? ನಾವು ಕಾಲನಿಷ್ಠೆಯುಳ್ಳವರೂ, ಶ್ರದ್ಧೆಯುಳ್ಳವರೂ ಆಗಿದ್ದೇವೆಂಬ ಅಭಿಪ್ರಾಯ ನಮ್ಮ ಜೊತೆಗೆಲಸಗಾರರು ಮತ್ತು ಶಾಲಾಸಹಪಾಠಿಗಳಿಗಿದೆಯೊ? ನಮ್ಮ ತೋರಿಕೆಯು ನಮ್ರವಾದದ್ದೂ ಗೌರವವುಳ್ಳದ್ದೂ ಆಗಿದೆ ಎಂದು ಬೇರೆಯವರು ಕಂಡುಕೊಳ್ಳುವರೋ?’ ನಮ್ಮ ಒಳ್ಳೆಯ ಕ್ರಿಯೆಗಳು ಯೆಹೋವನ ಆರಾಧನೆಯನ್ನು ಇತರರಿಗೆ ಹೆಚ್ಚು ಆಕರ್ಷಣೀಯವನ್ನಾಗಿ ಮಾಡುವುದು.
5 ಕ್ರೈಸ್ತರು ಅಪಹಾಸ್ಯಕ್ಕೆ ಒಳಗಾಗುವರು ಎಂದು ಪೇತ್ರನು ಎಚ್ಚರಿಸಿದನು. (1 ಪೇತ್ರ 4:4) ನಮ್ಮ ನಡವಳಿಕೆಯು ನಕಾರಾತ್ಮಕ ಮಾತಿಗೆ ಕಾರಣವಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು. (1 ಪೇತ್ರ 2:12) ನಮ್ಮ ದೈನಂದಿನ ಕ್ರಿಯೆಗಳು ನಾವು ಆರಾಧಿಸುವಂಥ ದೇವರನ್ನು ಕೊಂಡಾಡುವ ರೀತಿಯಲ್ಲಿರುವುದಾದರೆ, ಆಗ ನಾವು ಉನ್ನತ ಸ್ಥಾನದಲ್ಲಿಡಲ್ಪಟ್ಟ ದೀಪಗಳಂತೆ ಯೆಹೋವನು ಒದಗಿಸುವ ಭದ್ರವಾದ ಆಶ್ರಯಸ್ಥಾನಕ್ಕೆ ಬೇರೆಯವರನ್ನು ಮಾತಿಲ್ಲದೆ ಕರೆ ನೀಡುವವರಾಗಿರುವೆವು.—ಮತ್ತಾ. 5:14-16.