ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 4/1 ಪು. 27-29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1997
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯೇ?
    ಕಾವಲಿನಬುರುಜು—1997
  • ಜಗತ್ತನ್ನು ಗಮನಿಸುವುದು
    ಎಚ್ಚರ!—1996
  • ಲೈಂಗಿಕ ಕಿರುಕುಳ ಒಂದು ಭೌಗೋಲಿಕ ಸಮಸ್ಯೆ
    ಎಚ್ಚರ!—1996
  • ಕೈಸರನ ವಿಷಯಗಳನ್ನು ಕೈಸರನಿಗೆ ಹಿಂದಿರುಗಿಸುವುದು
    ಕಾವಲಿನಬುರುಜು—1996
ಕಾವಲಿನಬುರುಜು—1997
w97 4/1 ಪು. 27-29

ವಾಚಕರಿಂದ ಪ್ರಶ್ನೆಗಳು

ಒಬ್ಬ ಕ್ರೈಸ್ತನು ನ್ಯಾಯದರ್ಶಿ ಕರ್ತವ್ಯ (ಜೂರಿ ಡ್ಯೂಟಿ) ವಹಿಸಲು ಕರೆಯಲ್ಪಡುವಾಗ ಏನು ಮಾಡಬೇಕು?

ಕೆಲವು ದೇಶಗಳ ನ್ಯಾಯ ಪದ್ಧತಿಯು ಪೌರರಿಂದ ಆರಿಸಿಕೊಳ್ಳಲ್ಪಟ್ಟ ಜೂರಿಗಳನ್ನು ಬಳಸುತ್ತದೆ. ಈ ಪದ್ಧತಿಯಿರುವಲ್ಲಿ, ಜೂರಿ ಡ್ಯೂಟಿಗೆ ಸೇರಬೇಕೆಂದು ನಿರ್ದೇಶಿಸಲ್ಪಡುವಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂದು ಒಬ್ಬ ಕ್ರೈಸ್ತನು ನಿರ್ಣಯಿಸತಕ್ಕದ್ದು. ಅನೇಕ ಕ್ರೈಸ್ತರು ಒಳ್ಳೆಯ ಮನಸ್ಸಾಕ್ಷಿಯಿಂದ, ಹಾಗೆ ಸೇರುವುದನ್ನು ಬೈಬಲ್‌ ಮೂಲತತ್ವಗಳು ನಿಷೇಧಿಸುವುದಿಲ್ಲವೆಂದು ತೀರ್ಮಾನಿಸುತ್ತಾರೆ. ದೂರಾ ಬಯಲಿನಲ್ಲಿ ಕಾಣಿಸಿಕೊಳ್ಳಬೇಕೆಂಬ ಬಾಬೆಲ್‌ ಸರಕಾರದ ಆದೇಶವನ್ನು ಶದ್ರಕ್‌, ಮೇಶಕ್‌ ಮತ್ತು ಅಬೇದ್‌ನೆಗೋ ಅನುಸರಿಸಿದಂತೆ, ಮತ್ತು ರೋಮನ್‌ ಸರಕಾರದ ನಿರ್ದೇಶದ ಮೇರೆಗೆ ಯೋಸೇಫನೂ ಮರಿಯಳೂ ಬೆತ್ಲೆಹೇಮಿಗೆ ಹೋದಂತೆ ಇದೂ ಇದೆ ಎನ್ನುತ್ತಾರೆ ಅವರು. (ದಾನಿಯೇಲ 3:1-12; ಲೂಕ 2:1-4) ಆದರೂ ಯಥಾರ್ಥ ಕ್ರೈಸ್ತರು ಪರಿಗಣಿಸಸಾಧ್ಯವಿರುವ ಕೆಲವು ವಿಷಯಗಳಿವೆ.

ಜೂರಿಗಳ ಬಳಕೆ ಸಾರ್ವತ್ರಿಕವಲ್ಲ. ಕೆಲವು ದೇಶಗಳಲ್ಲಿ, ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆಗಳನ್ನು ಒಬ್ಬ ವೃತ್ತಿಪರ ನ್ಯಾಯಾಧೀಶನು ಅಥವಾ ನ್ಯಾಯಾಧೀಶರುಗಳ ಒಂದು ಮಂಡಳಿಯು ನಿರ್ಣಯಿಸುತ್ತವೆ. ಇತರ ಕಡೆಗಳಲ್ಲಿ ಸಂಪ್ರದಾಯ ನ್ಯಾಯವೆಂದು ಕರೆಯಲ್ಪಡುವ ನ್ಯಾಯ ಅಸ್ತಿತ್ವದಲ್ಲಿದೆ ಮತ್ತು ಜೂರಿಗಳು ನ್ಯಾಯ ಕಾರ್ಯಗತಿಯ ಭಾಗವಾಗಿದ್ದಾರೆ. ಆದರೂ, ಜೂರಿಗಳು ಹೇಗೆ ಆರಿಸಲ್ಪಡುತ್ತಾರೆ ಮತ್ತು ಅವರು ಏನು ಮಾಡುತ್ತಾರೆ ಎಂಬ ವಿಷಯದಲ್ಲಿ ಹೆಚ್ಚಿನ ಜನರಿಗೆ ಕೇವಲ ಅಸ್ಪಷ್ಟವಾದ ಕಲ್ಪನೆಯೇ ಇದೆ. ಆದಕಾರಣ, ನಿಮಗೆ ಜೂರಿ ಡ್ಯೂಟಿ ಇರಲಿ, ಇಲ್ಲದಿರಲಿ, ಅದರ ಕುರಿತು ಒಂದು ಮೇಲ್ನೋಟವನ್ನು ಪಡೆಯುವುದು ಸಹಾಯಕರ.

ದೇವಜನರು ಯೆಹೋವನನ್ನು ಪರಮ ನ್ಯಾಯಾಧೀಶನೆಂದು ಅಂಗೀಕರಿಸುತ್ತಾರೆ. (ಯೆಶಾಯ 33:22) ಪುರಾತನ ಇಸ್ರಾಯೇಲಿನಲ್ಲಿ, ವಿವಾದಗಳನ್ನು ಪರಿಹರಿಸಿ, ನ್ಯಾಯಸಂಬಂಧವಾದ ಪ್ರಶ್ನೆಗಳನ್ನು ನಿರ್ಣಯಿಸಲು ಪ್ರಾಮಾಣಿಕರೂ ನಿಷ್ಪಕ್ಷಪಾತಿಗಳೂ ಆದ ಅನುಭವಿ ಪುರುಷರು ನ್ಯಾಯಾಧೀಶರಾಗಿ ಸೇವೆಮಾಡಿದರು. (ವಿಮೋಚನಕಾಂಡ 18:13-22; ಯಾಜಕಕಾಂಡ 19:15; ಧರ್ಮೋಪದೇಶಕಾಂಡ 21:18-21) ಯೇಸು ಭೂಮಿಗೆ ಬರುವುದರೊಳಗೆ, ಯೆಹೂದಿ ಉಚ್ಚ ನ್ಯಾಯಾಲಯವಾಗಿದ್ದ ಸ್ಯಾನ್ಹೆಡ್ರಿನ್‌ ನ್ಯಾಯಕಾರ್ಯಗಳನ್ನು ನಿರ್ವಹಿಸುತ್ತಿತ್ತು. (ಮಾರ್ಕ 15:1; ಅ. ಕೃತ್ಯಗಳು 5:27-34) ಸಾಮಾನ್ಯ ಯೆಹೂದ್ಯನೊಬ್ಬನು ಸಿವಿಲ್‌ ಜ್ಯೂರಿಯಲ್ಲಿರುವ ಯಾವ ಏರ್ಪಾಡೂ ಇರಲಿಲ್ಲ.

ಇತರ ದೇಶಗಳು ಪೌರರಿಂದ ರಚಿತವಾಗಿದ್ದ ಜೂರಿಗಳನ್ನು ಬಳಸಿದವು. ಸಾಕ್ರೆಟೀಸನು 501 ಜೂರಿ ಪಂಚಾಯಿತರಿಂದ ವಿಚಾರಣೆಗೊಳಗಾದನು. ಸಮ್ರಾಟರಿಂದ ಜೂರಿ ಪದ್ಧತಿಯು ರದ್ದುಮಾಡಲ್ಪಟ್ಟರೂ, ರೋಮನ್‌ ಗಣರಾಜ್ಯದಲ್ಲಿಯೂ ಜೂರಿಯಿಂದ ವಿಚಾರಣೆಯು ಅಸ್ತಿತ್ವದಲ್ಲಿತ್ತು. ಅನಂತರ, ಇಂಗ್ಲೆಂಡಿನ ರಾಜನಾದ IIIನೆಯ ಹೆನ್ರಿ, ಆಪಾದಿತನು ಅವನ ನೆರೆಯವರಿಂದ ವಿಚಾರಣೆಗೊಳಗಾಗುವಂತೆ ಏರ್ಪಡಿಸಿದನು. ಅವರಿಗೆ ಆಪಾದಿತನ ಪರಿಚಯವಿದ್ದುದರಿಂದ, ಅವನು ಕಾಳಗದಿಂದ ಅಥವಾ ಯಾವುದೊ ಉಗ್ರಪರೀಕ್ಷೆಯಿಂದ ತನ್ನ ನಿರಪರಾಧವನ್ನು ರುಜುಪಡಿಸಲು ಪ್ರಯತ್ನಿಸುವುದಕ್ಕಿಂತ ಅವರ ತೀರ್ಪು ಹೆಚ್ಚು ನಿಷ್ಪಕ್ಷಪಾತದ್ದಾಗಿದ್ದೀತೆಂದು ಎಣಿಸಲಾಗುತ್ತಿತ್ತು. ಸಮಯ ದಾಟಿದಂತೆ, ಜೂರಿ ಪದ್ಧತಿಯು, ಪೌರರ ಒಂದು ಗುಂಪು, ಮೊಕದ್ದಮೆಯನ್ನು ಕೇಳಿ, ದೊರೆತ ಸಾಕ್ಷ್ಯದ ಮೇಲೆ ಒಂದು ತೀರ್ಮಾನಕ್ಕೆ ಬರುವ ಏರ್ಪಾಡಿಗೆ ಬದಲಾಯಿತು. ವೃತ್ತಿಪರ ನ್ಯಾಯಾಧೀಶನೊಬ್ಬನು ಸಾಕ್ಷ್ಯಗಳ ವಿಚಾರದಲ್ಲಿ ಅವರನ್ನು ಮಾರ್ಗದರ್ಶಿಸಿದನು.

ಜೂರಿಗಳ ಮಾದರಿಯಲ್ಲಿ, ಜೂರಿ ಪಂಚಾಯಿತರ ಸಂಖ್ಯೆಯಲ್ಲಿ ಮತ್ತು ಒಂದು ತೀರ್ಮಾನಕ್ಕೆ ತಲಪುವುದರಲ್ಲಿ ಏನೆಲ್ಲ ಒಳಗೂಡಿದೆಯೊ ಅದರಲ್ಲಿ ವೈವಿಧ್ಯವಿದೆ. ಉದಾಹರಣೆಗೆ, ಅಮೆರಿಕದಲ್ಲಿ, 12ರಿಂದ 23 ಮಂದಿ ನ್ಯಾಯದರ್ಶಿ ಸದಸ್ಯರು (ಗ್ರ್ಯಾಂಡ್‌ ಜೂರಿ), ಒಬ್ಬ ವ್ಯಕ್ತಿಯ ಮೇಲೆ ಕ್ರಿಮಿನಲ್‌ ತಪ್ಪನ್ನು ಹೊರಿಸಲು ಸಾಕಷ್ಟು ಸಾಕ್ಷ್ಯವಿದೆಯೊ ಎಂದು ನಿರ್ಣಯಿಸುತ್ತಾರೆ; ಆದರೆ ಅದು ಅಪರಾಧ ಅಥವಾ ನಿರಪರಾಧವನ್ನು ನಿರ್ಧರಿಸುವುದಿಲ್ಲ. ತದ್ರೀತಿ, ದುರ್ಮರಣ ವಿಚಾರಣಾಧಿಕಾರಿ (ಕಾರೊನರ್‌)ಯ ಜೂರಿ(ಪಂಚನಾಮೆಯ ಜೂರಿ)ಯಲ್ಲಿ, ಜೂರಿ ಪಂಚಾಯಿತರು, ಒಂದು ಪಾತಕವು ನಡೆದಿದೆಯೆ ಎಂಬುದಕ್ಕಿರುವ ಸಾಕ್ಷ್ಯವನ್ನು ತೂಗಿನೋಡುತ್ತಾರೆ.

ಒಂದು ಜೂರಿಯ ವಿಷಯದಲ್ಲಿ ಹೆಚ್ಚಿನ ಜನರು ಯೋಚಿಸುವಾಗ, ಅದು ಸಿವಿಲ್‌ ವಿವಾದವಾಗಿರಲಿ, ಕ್ರಿಮಿನಲ್‌ ಮೊಕದ್ದಮೆಯಾಗಿರಲಿ, ಅಪರಾಧ ಅಥವಾ ನಿರಪರಾಧವನ್ನು ಸ್ಥಾಪಿಸಲಿಕ್ಕಾಗಿ ವಿಚಾರಣೆಯಲ್ಲಿ ಸಾಕ್ಷಿಯನ್ನು ಕೇಳುವ 12 ಮಂದಿ ಪೌರರ ಒಂದು ಮಂಡಲಿಯು ಅವರ ಮನಸ್ಸಿನಲ್ಲಿರುತ್ತದೆ. ಇದು ಗ್ರ್ಯಾಂಡ್‌ ಜೂರಿಗೆ ವೈದೃಶ್ಯವಾಗಿರುವ ಪೆಟೀ (ಚಿಕ್ಕ) ಜೂರಿ. ಸಾಮಾನ್ಯವಾಗಿ, ಮತದಾರರು, ಲೈಸನ್ಸ್‌ ಇರುವ ಡ್ರೈವರರು, ಇಂತಹವರ ಪಟ್ಟಿಗಳಿಂದ ಕೋರ್ಟು ವ್ಯಕ್ತಿಗಳನ್ನು ಆರಿಸಿ, ಅವರು ಜೂರಿ ಡ್ಯೂಟಿಗೆ ಹಾಜರಾಗುವಂತೆ ಅವರಿಗೆ ನೋಟೀಸುಗಳನ್ನು ಕಳುಹಿಸುತ್ತದೆ. ದಂಡಿಸಲ್ಪಟ್ಟಿರುವ ಘೋರಾಪರಾಧಿಗಳು ಮತ್ತು ಮಾನಸಿಕವಾಗಿ ಅಸಮರ್ಥರು ಸ್ವಯಂಚಾಲಕವಾಗಿ ಅನರ್ಹರಾಗಬಹುದು. ಸ್ಥಳಿಕ ನಿಯಮಾನುಸಾರ, ಡಾಕ್ಟರರು, ಪಾದ್ರಿಗಳು, ವಕೀಲರು ಅಥವಾ ಸಣ್ಣಪುಟ್ಟ ವ್ಯಾಪಾರಗಳ ಧಣಿಗಳು ವಿನಾಯಿತಿ ಪಡೆಯಬಹುದು. (ಕೆಲವರಿಗೆ ಜೂರಿ ಸೇವೆಯ ಕುರಿತು ಬಲವಾದ ವೈಯಕ್ತಿಕ, ಆತ್ಮಸಾಕ್ಷಿಕ ವಿರೋಧಗಳಿರುವ ಕಾರಣ ವಿನಾಯಿತಿ ಪಡೆಯಬಹುದು.) ಆದರೂ, ಎಲ್ಲರೂ ಜೂರಿ ಡ್ಯೂಟಿಗೆ, ಪ್ರಾಯಶಃ ಅನೇಕ ವರ್ಷಗಳಲ್ಲಿ ಪದೇಪದೇ ಹಾಜರಾಗಲು ನಿರ್ಬಂಧಿತರಾಗುವಂತೆ, ಅಧಿಕಾರಿಗಳು ವಿನಾಯಿತಿಗಳನ್ನು ಹೆಚ್ಚೆಚ್ಚಾಗಿ ಇಲ್ಲವಾಗಿಸುತ್ತಿದ್ದಾರೆ.

ಜೂರಿ ಡ್ಯೂಟಿಗೆ ಹಾಜರಾಗುವ ಸಕಲರೂ ಒಂದು ನ್ಯಾಯವಿಚಾರಣೆಯಲ್ಲಿ ಪಂಚಾಯಿತರಾಗಿ ಕುಳಿತುಕೊಳ್ಳುವುದಿಲ್ಲ. ಜೂರಿ ಡ್ಯೂಟಿಗೆ ಕರೆಯಲ್ಪಡುವ ವ್ಯಕ್ತಿಗಳ ಪಟ್ಟಿಯಿಂದ ಒಂದು ನಿರ್ದಿಷ್ಟ ಕೇಸಿಗೆ ಭಾವೀ ಪಂಚಾಯಿತರನ್ನು ಮನಸ್ವೀ ಆರಿಸಲಾಗುತ್ತದೆ. ಬಳಿಕ ನ್ಯಾಯಾಧೀಶರು ವಾದಿ ಪ್ರತಿವಾದಿಗಳನ್ನೂ ಅವರ ವಕೀಲರನ್ನೂ ಗುರುತಿಸಿ ಆ ಮೊಕದ್ದಮೆಯ ಸ್ವರೂಪ ಲಕ್ಷಣಗಳನ್ನು ವರ್ಣಿಸುತ್ತಾರೆ. ಅವರೂ ವಕೀಲರೂ ಪ್ರತಿಯೊಬ್ಬ ಭಾವೀ ಪಂಚಾಯಿತನನ್ನು ಪರೀಕ್ಷಿಸುತ್ತಾರೆ. ಆ ಮೊಕದ್ದಮೆಯ ಸ್ವರೂಪಲಕ್ಷಣದ ಕಾರಣದಿಂದ, ಒಬ್ಬನಿಗೆ ಅದರಲ್ಲಿ ಸೇವೆ ಮಾಡದಿರಲು ಆತ್ಮಸಾಕ್ಷಿಕ ಕಾರಣಗಳಿರುವಲ್ಲಿ, ಇದು ಅವನು ಕಾರಣವನ್ನು ಎತ್ತಿಹೇಳುವ ಸಮಯವಾಗಿದೆ.

ಆ ಗುಂಪನ್ನು ಆ ಮೊಕದ್ದಮೆಯ ವಿಚಾರಣೆಯಲ್ಲಿ ವಾಸ್ತವವಾಗಿ ಕುಳಿತುಕೊಳ್ಳುವವರ ಸಂಖ್ಯೆಗೆ ಕಮ್ಮಿಮಾಡುವುದು ಅಗತ್ಯ. ಆ ಮೊಕದ್ದಮೆಯಲ್ಲಿ ಅಭಿರುಚಿಯ ಸಾಧ್ಯತೆಯಿರುವ ಕಾರಣ ನಿಷ್ಪಕ್ಷಪಾತವು ಸಂದೇಹಕ್ಕೊಳಗಾಗಿರುವ ಯಾವನನ್ನೂ ನ್ಯಾಯಾಧೀಶರು ವಜಾಮಾಡುವರು. ಅಲ್ಲದೆ ಪ್ರತಿ ಪಕ್ಷದ ವಕೀಲರಿಗೂ ಕೆಲವು ಪಂಚಾಯಿತರನ್ನು ವಜಾಮಾಡುವ ಹಕ್ಕಿದೆ. ಆ ಜೂರಿ ಮಂಡಲಿಯಿಂದ ವಜಾಮಾಡಲ್ಪಡುವವರು ಜೂರಿ ಪಟ್ಟಿಗೆ ಹಿಂದಿರುಗಿ ಬೇರೆ ಮೊಕದ್ದಮೆಗಳಿಗೆ ಗೊತ್ತುಗುರಿಯಿಲ್ಲದೆ ಆರಿಸಲ್ಪಡಲು ಕಾಯುವರು. ಈ ಸನ್ನಿವೇಶದಲ್ಲಿದ್ದ ಕೆಲವು ಮಂದಿ ಕ್ರೈಸ್ತರು ಆ ಸಮಯವನ್ನು ಅನೌಪಚಾರಿಕ ಸಾಕ್ಷಿಸೇವೆಯಲ್ಲಿ ಉಪಯೋಗಿಸಿದ್ದಾರೆ. ಅನೇಕ ದಿನಗಳ ತರುವಾಯ, ಒಬ್ಬನು ಜೂರಿ ಪಂಚಾಯಿತನಾಗಿ ಕುಳಿತುಕೊಳ್ಳಲಿ, ಕುಳಿತುಕೊಳ್ಳದಿರಲಿ, ಅವನ ಜೂರಿ ಡ್ಯೂಟಿಯು ಮುಗಿಯುತ್ತದೆ.

ಕ್ರೈಸ್ತರು “ಸ್ವಂತ ಕಾರ್ಯವನ್ನೇ ನಡಿಸಿಕೊಂಡು,” ‘ಮತ್ತೊಬ್ಬರ ಕಾರ್ಯದಲ್ಲಿ ಕೈಹಾಕದೆ’ ಇರಲು ಪ್ರಯತ್ನಿಸುತ್ತಾರೆ. (1 ಥೆಸಲೊನೀಕ 4:11; 1 ಪೇತ್ರ 4:15) ಒಬ್ಬ ಯೆಹೂದ್ಯನು, ಪಿತ್ರಾರ್ಜಿತ ಆಸ್ತಿಯ ಕುರಿತ ಒಂದು ವಿಷಯವನ್ನು ನ್ಯಾಯತೀರಿಸಲು ಯೇಸುವನ್ನು ಕೇಳಿಕೊಂಡಾಗ ಅವನು ಉತ್ತರ ಕೊಟ್ಟದ್ದು: “ಎಲಾ ಮನುಷ್ಯ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು”? (ಲೂಕ 12:13, 14) ಯೇಸು ಬಂದದ್ದು ಶಾಸನಸಂಬಂಧವಾದ ವಿಷಯಗಳನ್ನು ತೀರ್ಮಾನಿಸಲಿಕ್ಕಲ್ಲ, ಸುವಾರ್ತೆಯನ್ನು ಸಾರಲಿಕ್ಕಾಗಿಯೇ. (ಲೂಕ 4:18, 43) ಯೇಸುವಿನ ಪ್ರತ್ಯುತ್ತರವು ಆ ಮನುಷ್ಯನನ್ನು, ವಿವಾದಗಳನ್ನು ತೀರ್ಮಾನಿಸಲು ಅವನು ದೇವರ ಧರ್ಮಶಾಸ್ತ್ರದಲ್ಲಿ ಕೊಡಲ್ಪಟ್ಟ ವಿಧಾನವನ್ನು ಉಪಯೋಗಿಸುವಂತೆ ಪ್ರಚೋದಿಸಿದ್ದಿರಬಹುದು. (ಧರ್ಮೋಪದೇಶಕಾಂಡ 1:16, 17) ಈ ವಿಷಯಗಳು ಸಮಂಜಸವಾಗಿದ್ದರೂ, ಜೂರಿ ಡ್ಯೂಟಿಗಾಗಿರುವ ನಿರ್ದೇಶನಕ್ಕೆ ಓಗೊಡುವುದು, ಇತರರ ವ್ಯವಹಾರಗಳಲ್ಲಿ ನಿಮ್ಮನ್ನು ತೊಡರಿಸಿಕೊಳ್ಳುವುದಕ್ಕಿಂತ ಭಿನ್ನವಾಗಿದೆ. ಅದು ದಾನಿಯೇಲನ ಮೂವರು ಸಂಗಾತಿಗಳ ಸನ್ನಿವೇಶಕ್ಕೆ ಹೆಚ್ಚು ನಿಕಟವಾಗಿದೆ. ಬಾಬೆಲ್‌ ಸರಕಾರವು ಅವರನ್ನು ದೂರಾ ಬಯಲಿನಲ್ಲಿ ಹಾಜರಾಗುವಂತೆ ಆಜ್ಞಾಪಿಸಿತು, ಮತ್ತು ಅವರು ಹಾಜರಾದದ್ದು ದೇವರ ನಿಯಮವನ್ನು ಉಲ್ಲಂಘಿಸಲಿಲ್ಲ. ಅವರು ಆಮೇಲೆ ಏನು ಮಾಡಿದರೊ ಅದು, ಬೈಬಲು ತೋರಿಸುವಂತೆ ಭಿನ್ನ ವಿಷಯವಾಗಿತ್ತು.—ದಾನಿಯೇಲ 3:16-18.

ದೇವರ ಸೇವಕರು ಮೋಶೆಯ ಧರ್ಮಶಾಸ್ತ್ರದ ಅಧೀನದಲ್ಲಿರುವುದು ಸ್ಥಗಿತಗೊಂಡಾಗ, ಅವರು ವಿವಿಧ ದೇಶಗಳ ಐಹಿಕ ಕೋರ್ಟುಗಳೊಂದಿಗೆ ವ್ಯವಹರಿಸಬೇಕಾಯಿತು. ಕೊರಿಂಥದ “ದೇವಜನರು” ವಿವಾದಗಳನ್ನು ಸಭೆಯೊಳಗೆ ತೀರ್ಮಾನಿಸುವಂತೆ ಪೌಲನು ಉತ್ತೇಜಿಸಿದನು. ಐಹಿಕ ಕೋರ್ಟುಗಳ ನ್ಯಾಯದ ಇಲಾಖೆಯನ್ನು “ಅನ್ಯಜನರು” ಎಂದು ಸೂಚಿಸಿದಾಗ, ಐಹಿಕ ವಿಚಾರಗಳನ್ನು ನಿರ್ವಹಿಸಲು ಅವುಗಳಿಗಿರುವ ಸ್ಥಾನವನ್ನು ಪೌಲನು ಅಲ್ಲಗಳೆಯಲಿಲ್ಲ. (1 ಕೊರಿಂಥ 6:1) ಅವನು ರೋಮನ್‌ ನ್ಯಾಯ ವ್ಯವಸ್ಥೆಯಲ್ಲಿ ತನ್ನ ಪರವಾಗಿ ವಾದಿಸಿ, ತನ್ನ ಮೊಕದ್ದಮೆಯ ಕುರಿತು ಕೈಸರನಿಗೂ ಅಪ್ಪೀಲ್‌ ಮಾಡಿದನು. ಐಹಿಕ ಕೋರ್ಟುಗಳು ಮೂಲಭೂತವಾಗಿ ತಪ್ಪಾಗಿವೆ ಎಂದೇನೂ ಅಲ್ಲ.—ಅ. ಕೃತ್ಯಗಳು 24:10; 25:10, 11.

ಐಹಿಕ ಕೋರ್ಟುಗಳು “ಮೇಲಧಿಕಾರಿಗಳ” (NW) ಕಾರ್ಯಸ್ಥಾನಗಳಾಗಿವೆ. ಅವು “ದೇವರಿಂದ ನೇಮಿಸಲ್ಪಟ್ಟಿದ್ದು,” ಕಾನೂನುಗಳನ್ನು ಮಾಡಿ ಅವನ್ನು ಜಾರಿಗೆ ತರುತ್ತವೆ. ಪೌಲನು ಬರೆದುದು: “ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ, ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು; ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ.” ಅಧಿಕಾರವು ಅಂತಹ ಕಾರ್ಯಕಲಾಪಗಳನ್ನು ನಡೆಸುವುದರಿಂದ, ಕ್ರೈಸ್ತರು ‘ಆ ಅಧಿಕಾರವನ್ನು ವಿರೋಧಿ’ಸುವುದಿಲ್ಲ. ಏಕೆಂದರೆ ಅವರು ‘ಅದರ ವಿರುದ್ಧವಾದ ನಿಲುವನ್ನು ತೆಗೆದು’ಕೊಳ್ಳಲು ಹಾಗೂ ನ್ಯಾಯತೀರ್ಪನ್ನು ಪಡೆದುಕೊಳ್ಳಲು ಬಯಸುವುದಿಲ್ಲ.—ರೋಮಾಪುರ 13:1-4; ತೀತ 3:1.

ವಿಷಯಗಳನ್ನು ಸರಿದೂಗುವಾಗ, ಕೈಸರನು ಮಾಡುವ ಕೆಲವು ಹಕ್ಕುಕೇಳಿಕೆಗಳಿಗೆ ತಾವು ಅಧೀನರಾಗಬಲ್ಲೆವೊ ಇಲ್ಲವೊ ಎಂಬುದನ್ನು ಕ್ರೈಸ್ತರು ಪರಿಗಣಿಸಬೇಕು. ಪೌಲನು ಬುದ್ಧಿಹೇಳಿದ್ದು: “ಅವರವರಿಗೆ [ಮೇಲಿರುವ ಅಧಿಕಾರಿಗಳಿಗೆ] ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ಭಯವೋ ಅವರಿಗೆ ಭಯವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸಿರಿ.” (ರೋಮಾಪುರ 13:7) ಇದು ಹಣಕಾಸಿನ ತೆರಿಗೆಯ ವಿಷಯದಲ್ಲಿ ನೇರವಾದ ಮಾಹಿತಿಯಾಗಿದೆ. (ಮತ್ತಾಯ 22:17-21) ಕೈಸರನ ಕಾರ್ಯಗಳಲ್ಲಿ ಕೆಲವಾದ, ರಸ್ತೆಗಳನ್ನು ಶುಚಿಮಾಡಲು ಅಥವಾ ಬೇರೆ ಕೆಲಸಗಳನ್ನು ಮಾಡಲು ನಾಗರಿಕರು ತಮ್ಮ ಸಮಯವನ್ನು ಮತ್ತು ಪ್ರಯತ್ನಗಳನ್ನು ಕೊಡಬೇಕೆಂದು ಕೈಸರನು ಹೇಳುವುದಾದರೆ, ಅದಕ್ಕೆ ಅಧೀನನಾಗಬೇಕೊ ಬಾರದೊ ಎಂಬುದನ್ನು ಪ್ರತಿಯೊಬ್ಬ ಕ್ರೈಸ್ತನು ನಿರ್ಣಯಿಸಬೇಕು.—ಮತ್ತಾಯ 5:41.

ಜೂರಿ ಸೇವೆಯು, ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೆ ಕೊಡುವ ವಿಷಯವಾಗಿದೆಯೆಂದು ಕೆಲವು ಮಂದಿ ಕ್ರೈಸ್ತರು ವೀಕ್ಷಿಸಿದ್ದಾರೆ. (ಲೂಕ 20:25) ಜೂರಿ ಡ್ಯೂಟಿಯಲ್ಲಿನ ಕಾರ್ಯಭಾರವು, ಸಾಕ್ಷ್ಯವನ್ನು ಕೇಳಿ, ವಾಸ್ತವ ವಿಷಯಗಳ ಅಥವಾ ಕಾನೂನಿನ ವಿಷಯವಾಗಿ ಪ್ರಾಮಾಣಿಕ ಅಭಿಪ್ರಾಯವನ್ನು ಕೊಡುವುದೇ. ಉದಾಹರಣೆಗೆ, ಗ್ರ್ಯಾಂಡ್‌ ಜೂರಿಯಲ್ಲಿ, ಸಾಕ್ಷ್ಯವು ಯಾರನ್ನಾದರೂ ನ್ಯಾಯವಿಚಾರಣೆಗೆ ಬರಮಾಡುವ ವಿಷಯದಲ್ಲಿ ಖಾತರಿಯನ್ನು ಕೊಡುತ್ತದೊ ಎಂಬುದನ್ನು ಜೂರಿ ಪಂಚಾಯಿತರು ನಿರ್ಣಯಿಸುತ್ತಾರೆ; ಅವರು ಅಪರಾಧವನ್ನು ನಿರ್ಧರಿಸುವುದಿಲ್ಲ. ಹಾಗಾದರೆ ಒಂದು ಸಾಮಾನ್ಯ ನ್ಯಾಯವಿಚಾರಣೆಯ ಕುರಿತೇನು? ಒಂದು ಸಿವಿಲ್‌ ಕೇಸಿನಲ್ಲಿ, ಜೂರಿ ಪಂಚಾಯಿತರು ದಂಡವನ್ನು ಅಥವಾ ನಷ್ಟಪರಿಹಾರವನ್ನು ಕೊಡಬೇಕೆಂದು ನಿರ್ಣಯಿಸಬಹುದು. ಒಂದು ಕ್ರಿಮಿನಲ್‌ ಕೇಸಿನಲ್ಲಿ, ಸಾಕ್ಷ್ಯವು ಅಪರಾಧ ನಿರ್ಣಯವನ್ನು ಬೆಂಬಲಿಸುತ್ತದೊ ಎಂಬುದನ್ನು ಅವರು ನಿಶ್ಚಯಿಸಬೇಕು. ಕೆಲವು ವೇಳೆ, ಕಾನೂನು ವಿಧಿಸುವ ಯಾವ ಶಿಕ್ಷೆಯನ್ನು ಅನ್ವಯಿಸಬೇಕೆಂದು ಅವರು ಶಿಫಾರಸ್ಸು ಮಾಡುತ್ತಾರೆ. ಬಳಿಕ, “ಕೆಟ್ಟದ್ದನ್ನು ನಡಿಸುವವನಿಗೆ ದೇವರ ದಂಡನೆಯನ್ನು” ವಿಧಿಸಲು ಅಥವಾ “ಕೆಟ್ಟ ನಡತೆಯುಳ್ಳವರನ್ನು ದಂಡಿಸುವದಕ್ಕೆ” ಸರಕಾರವು ತನ್ನ ಅಧಿಕಾರವನ್ನು ಉಪಯೋಗಿಸುತ್ತದೆ.—1 ಪೇತ್ರ 2:14.

ಒಂದು ನಿರ್ದಿಷ್ಟ ಜೂರಿಯಲ್ಲಿ ಸೇವೆಮಾಡಲು ತನ್ನ ಮನಸ್ಸಾಕ್ಷಿ ಅನುಮತಿಸುವುದಿಲ್ಲವೆಂದು ಒಬ್ಬ ಕ್ರೈಸ್ತನಿಗನಿಸಿದರೆ ಆಗೇನು? ಬೈಬಲು ಜೂರಿ ಡ್ಯೂಟಿಯ ಕುರಿತು ಹೇಳದೆ ಇರುವುದರಿಂದ, ‘ಯಾವುದೇ ಜೂರಿಯಲ್ಲಿ ಸೇವೆಮಾಡುವುದು ನನ್ನ ಧರ್ಮಕ್ಕೆ ವಿರೋಧವಾಗಿದೆ,’ ಎಂದು ಅವನು ಹೇಳಸಾಧ್ಯವಿಲ್ಲ. ಮೊಕದ್ದಮೆಯ ಮೇಲೆ ಹೊಂದಿಕೊಂಡು, ಒಂದು ನಿರ್ದಿಷ್ಟ ಕೇಸಿನ ಜೂರಿಯಾಗಿ ಸೇವೆಮಾಡುವುದು ತನ್ನ ಮನಸ್ಸಾಕ್ಷಿಗೆ ವಿರುದ್ಧ ಎಂದು ಅವನು ಹೇಳಬಹುದು. ಒಂದು ಮೊಕದ್ದಮೆಯು, ಅವನ ಯೋಚನೆಯು ಬೈಬಲ್‌ ಜ್ಞಾನದಿಂದ—ಕೇವಲ ಐಹಿಕ ನಿಯಮಗಳಿಂದಲ್ಲ—ರೂಪಿತವಾಗಿರುವ ವಿಷಯಗಳಾದ ಲೈಂಗಿಕ ದುರಾಚಾರ, ಗರ್ಭಪಾತ, ನರಹತ್ಯ ಅಥವಾ ಇತರ ವಿವಾದಾಂಶವನ್ನು ಒಳಗೊಂಡಿರುವುದಾದರೆ ಅವನು ಹಾಗೆ ಹೇಳಬಹುದು. ಆದರೆ ವಾಸ್ತವ್ಯದಲ್ಲಿ, ಅವನು ಯಾವುದಕ್ಕೆ ನೇಮಿಸಲ್ಪಟ್ಟಿದ್ದಾನೊ ಆ ವಿಚಾರಣೆಯು ಇಂತಹ ವಿವಾದಾಂಶಗಳನ್ನು ಒಳಗೊಳ್ಳದಿರುವ ಸಾಧ್ಯತೆಯಿದೆ.

ನ್ಯಾಯಾಧೀಶರುಗಳು ವಿಧಿಸುವ ತೀರ್ಪಿಗೆ ತಾನು ಯಾವ ಜವಾಬ್ದಾರಿಯಲ್ಲಾದರೂ ಭಾಗಿಯಾದೇನೊ ಎಂಬುದರ ಕುರಿತೂ ಒಬ್ಬ ಪರಿಪಕ್ವತೆಯ ಕ್ರೈಸ್ತನು ಯೋಚಿಸುವನು. (ಹೋಲಿಸಿ ಆದಿಕಾಂಡ 39:17-20; 1 ತಿಮೊಥೆಯ 5:22.) ದೋಷಿ ತೀರ್ಮಾನವು ತಪ್ಪಾಗಿದ್ದು ಮರಣಶಿಕ್ಷೆಯು ಕೊಡಲ್ಪಡುವಲ್ಲಿ, ಜೂರಿಯಲ್ಲಿರುವ ಕ್ರೈಸ್ತನು ರಕ್ತಾಪರಾಧದಲ್ಲಿ ಪಾಲಿಗನಾದಾನೊ? (ವಿಮೋಚನಕಾಂಡ 22:2; ಧರ್ಮೋಪದೇಶಕಾಂಡ 21:8; 22:8; ಯೆರೆಮೀಯ 2:34; ಮತ್ತಾಯ 23:35; ಅ. ಕೃತ್ಯಗಳು 18:6) ಯೇಸುವಿನ ನ್ಯಾಯವಿಚಾರಣೆಯಲ್ಲಿ ಪಿಲಾತನು, “ಈ ಪುರುಷನನ್ನು ಕೊಲ್ಲಿಸಿದ್ದಕ್ಕೆ [ತಾನು] ಸೇರಿದವನಲ್ಲ”ವಾಗಿರಲು ಬಯಸಿದನು. ಆದರೆ ಯೆಹೂದ್ಯರು ಸಿದ್ಧಮನಸ್ಸಿನಿಂದ, “ಅವನನ್ನು ಕೊಲ್ಲಿಸಿದ್ದಕ್ಕೆ ನಾವೂ ನಮ್ಮ ಮಕ್ಕಳೂ ಉತ್ತರಕೊಡುತ್ತೇವೆ” ಅಂದರು.—ಮತ್ತಾಯ 27:24, 25.

ಸರಕಾರವು ನಿರ್ದೇಶಿಸಿದಂತೆ ಒಬ್ಬ ಕ್ರೈಸ್ತನು ಜೂರಿ ಡ್ಯೂಟಿಗೆ ಹಾಜರಾದರೂ, ತನ್ನ ವೈಯಕ್ತಿಕ ಮನಸ್ಸಾಕ್ಷಿಯ ಕಾರಣ, ನ್ಯಾಯಾಧೀಶರ ಒತ್ತಾಯದ ಹೊರತೂ ಒಂದು ನಿರ್ದಿಷ್ಟ ಮೊಕದ್ದಮೆಯಲ್ಲಿ ಭಾಗವಹಿಸಲು ಒಪ್ಪದಿರುವಲ್ಲಿ, ಆ ಕ್ರೈಸ್ತನು ಬರುವ ಪರಿಣಾಮಗಳನ್ನು—ದಂಡವಾಗಿರಲಿ ಸೆರೆಮನೆಯಾಗಿರಲಿ—ಅನುಭವಿಸಲು ಸಿದ್ಧನಾಗಿರಬೇಕು.—1 ಪೇತ್ರ 2:19.

ಕೊನೆಯ ವಿಶ್ಲೇಷಣೆಯಲ್ಲಿ, ಜೂರಿ ಡ್ಯೂಟಿಯಿಂದ ಎದುರಿಸಲ್ಪಡುವ ಪ್ರತಿಯೊಬ್ಬ ಕ್ರೈಸ್ತನು, ತನ್ನ ಬೈಬಲ್‌ ತಿಳಿವಳಿಕೆಯ ಮತ್ತು ತನ್ನ ಸ್ವಂತ ಮನಸ್ಸಾಕ್ಷಿಯ ಆಧಾರದ ಮೇರೆಗೆ, ಯಾವ ಮಾರ್ಗವನ್ನು ಅನುಸರಿಸಬೇಕೆಂದು ನಿರ್ಣಯಿಸಬೇಕು. ಕೆಲವು ಕ್ರೈಸ್ತರು ಜೂರಿ ಡ್ಯೂಟಿಗೆ ಹಾಜರಾಗಿ, ನಿರ್ದಿಷ್ಟ ಜೂರಿಗಳಲ್ಲಿ ಭಾಗವಹಿಸಿದ್ದಾರೆ. ಇತರರು ಶಿಕ್ಷೆಯ ಎದುರಿನಲ್ಲಿಯೂ ಅದನ್ನು ನಿರಾಕರಿಸುವ ನಿರ್ಬಂಧ ತಮಗಿದೆಯೆಂದೆಣಿಸುತ್ತಾರೆ. ತಾನೇನು ಮಾಡುವುದೆಂಬುದನ್ನು ಪ್ರತಿಯೊಬ್ಬ ಕ್ರೈಸ್ತನು ನಿರ್ಣಯಿಸಬೇಕು ಮತ್ತು ಇತರರು ಅವನ ನಿರ್ಣಯವನ್ನು ಟೀಕಿಸಬಾರದು.—ಗಲಾತ್ಯ 6:5.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ