ಒಂದು “ಕೆಟ್ಟ ಸಂತತಿ”ಯಿಂದ ರಕ್ಷಿಸಲ್ಪಡುವುದು
“ಎಲಾ, ನಂಬಿಕೆಯಿಲ್ಲದಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ?”—ಲೂಕ 9:41.
1. (ಎ) ನಮ್ಮ ವಿಪತ್ಕಾರಕ ಸಮಯವು ಏನನ್ನು ಮುನ್ಸೂಚಿಸುತ್ತದೆ? (ಬಿ) ಪಾರಾಗಿ ಉಳಿಯುವವರ ಕುರಿತು ಶಾಸ್ತ್ರಗಳು ಏನು ಹೇಳುತ್ತವೆ?
ನಾವು ಒಂದು ವಿಪತ್ಕಾರಕ ಸಮಯದಲ್ಲಿ ಜೀವಿಸುತ್ತೇವೆ. ಭೂಕಂಪಗಳು, ನೆರೆಗಳು, ಕ್ಷಾಮಗಳು, ರೋಗ, ನಿಯಮರಾಹಿತ್ಯ, ಬಾಂಬ್ ಎಸೆತಗಳು, ಭೀಕರವಾದ ಕಾಳಗ—ಇವು ಮತ್ತು ಹೆಚ್ಚು ಸಂಗತಿಗಳು ನಮ್ಮ 20ನೆಯ ಶತಮಾನದ ಸಮಯದಲ್ಲಿ ಮಾನವ ಕುಲವನ್ನು ಮುಳುಗಿಸಿಬಿಟ್ಟಿವೆ. ಆದರೂ, ಎಲ್ಲದಕ್ಕಿಂತಲೂ ಮಹತ್ತರವಾದ ವಿಪತ್ತು ಭವಿಷ್ಯದಲ್ಲಿ ಬೇಗನೆ ಬರುವ ಬೆದರಿಕೆ ಹಾಕುತ್ತದೆ. ಅದು ಯಾವುದು? “ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ.” (ಮತ್ತಾಯ 24:21) ಆದರೂ, ನಮ್ಮಲ್ಲಿ ಹೆಚ್ಚಿನವರು ಒಂದು ಹರ್ಷಭರಿತ ಭವಿಷ್ಯತ್ತಿಗಾಗಿ ಮುನ್ನೋಡಬಹುದು! ಯಾಕೆ? ಯಾಕೆಂದರೆ ದೇವರ ಸ್ವಂತ ವಾಕ್ಯವು, “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು . . . ಸಕಲ ಜನಾಂಗ ಕುಲ ಪ್ರಜೆ ಭಾಷೆಗಳಿಂದ” ಬರುವುದನ್ನು ವರ್ಣಿಸುತ್ತದೆ. “ಇವರು ಮಹಾ ಹಿಂಸೆಯನ್ನು [“ಸಂಕಟವನ್ನು,” NW] ಅನುಭವಿಸಿ ಬಂದವರು. . . . ಅವರಿಗೆ ಹಸಿವೆ ಇಲ್ಲ, ಬಾಯಾರಿಕೆ ಇಲ್ಲ . . . ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.”—ಪ್ರಕಟನೆ 7:1, 9, 14-17.
2. ಮತ್ತಾಯ 24, ಮಾರ್ಕ 13, ಮತ್ತು ಲೂಕ 21ರ ಆರಂಭದ ವಚನಗಳಿಗೆ ಯಾವ ಆರಂಭಿಕ ಪ್ರವಾದನಾ ನೆರವೇರಿಕೆಯಿತ್ತು?
2 ಮತ್ತಾಯ 24:3-22, ಮಾರ್ಕ 13:3-20, ಮತ್ತು ಲೂಕ 21:7-24ರ ಪ್ರೇರಿತ ದಾಖಲೆಯು “ವಿಷಯಗಳ ವ್ಯವಸ್ಥೆಯ ಸಮಾಪ್ತಿ” (NW)ಯ ಕುರಿತ ಯೇಸುವಿನ ಪ್ರವಾದನಾ ವರ್ಣನೆಯನ್ನು ಪರಿಚಯಪಡಿಸುತ್ತದೆ.a ಈ ಪ್ರವಾದನೆಯ ಒಂದು ಆರಂಭಿಕ ನೆರವೇರಿಕೆಯು ನಮ್ಮ ಸಾಮಾನ್ಯ ಶಕದ ಮೊದಲನೆಯ ಶತಮಾನದಲ್ಲಿನ ಭ್ರಷ್ಟ ಯೆಹೂದಿ ವಿಷಯಗಳ ವ್ಯವಸ್ಥೆಯ ಮೇಲೆ ಆಗಿದ್ದು, ಯೆಹೂದ್ಯರ ಮೇಲೆ ಒಂದು ಅಭೂತಪೂರ್ವ “ಮಹಾ ಸಂಕಟ”ದಲ್ಲಿ ಕೊನೆಗೊಂಡಿತ್ತು. ಯೆರೂಸಲೇಮಿನ ದೇವಾಲಯದಲ್ಲಿ ಕೇಂದ್ರೀಕೃತವಾಗಿದ್ದ ಯೆಹೂದಿ ವ್ಯವಸ್ಥೆಯ ಇಡೀ ಧಾರ್ಮಿಕ ಮತ್ತು ರಾಜಕೀಯ ರಚನೆಯು, ಎಂದೂ ಪುನಸ್ಸಾಪ್ಥಿಸಲ್ಪಡದ ರೀತಿಯಲ್ಲಿ ನಾಶಮಾಡಲ್ಪಟ್ಟಿತು.
3. ಯೇಸುವಿನ ಮಾತುಗಳನ್ನು ನಾವು ಇಂದು ಪಾಲಿಸುವುದು ಏಕೆ ಜರೂರಿಯದ್ದಾಗಿದೆ?
3 ನಾವೀಗ ಯೇಸುವಿನ ಪ್ರವಾದನೆಯ ಮೊದಲನೆಯ ನೆರವೇರಿಕೆಯನ್ನು ಸುತ್ತುವರಿದಿದ್ದ ಪರಿಸ್ಥಿತಿಗಳನ್ನು ಗಮನಿಸೋಣ. ಇದು ನಮಗೆ ಇಂದಿನ ಸಮಾಂತರವಾದ ನೆರವೇರಿಕೆಯನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚಿನ ಸಹಾಯವನ್ನು ಕೊಡುವುದು. ಮಾನವ ಕುಲದ ಎಲ್ಲರನ್ನು ಬೆದರಿಸುವ ಈ ಅತ್ಯಂತ ಮಹಾನ್ ಸಂಕಟವನ್ನು ಪಾರಾಗುವುದಕ್ಕೆ ಸಕಾರಾತ್ಮಕ ಕ್ರಿಯೆಯನ್ನು ಈಗಲೇ ಗೈಯುವುದು ಎಷ್ಟು ಜರೂರಿಯದ್ದೆಂದು ಅದು ನಮಗೆ ತೋರಿಸುವುದು.—ರೋಮಾಪುರ 10:9-13; 15:4; 1 ಕೊರಿಂಥ 10:11; 15:58.
“ಅಂತ್ಯ”—ಯಾವಾಗ?
4, 5. (ಎ) ಸಾ.ಶ. ಒಂದನೆಯ ಶತಮಾನದ ದೈವಭಕ್ತ ಯೆಹೂದ್ಯರು ದಾನಿಯೇಲ 9:24-27ರ ಪ್ರವಾದನೆಯಲ್ಲಿ ಏಕೆ ಅಸಕ್ತರಾಗಿದ್ದರು? (ಬಿ) ಈ ಪ್ರವಾದನೆಯು ಹೇಗೆ ನೆರವೇರಿಕೆಯನ್ನು ಪಡೆಯಿತು?
4 ಸುಮಾರು ಸಾ.ಶ.ಪೂ. 539ರಲ್ಲಿ, ದೇವರ ಪ್ರವಾದಿಯಾದ ದಾನಿಯೇಲನಿಗೆ, ವರ್ಷಗಳ “ಎಪ್ಪತ್ತು ವಾರಗಳ” ಒಂದು ಕಾಲಾವಧಿಯ ಕೊನೆಯ “ವಾರ”ದ ಸಮಯದಲ್ಲಿ ನಡೆಯುವ ಘಟನೆಗಳ ಒಂದು ದರ್ಶನವನ್ನು ಕೊಡಲಾಯಿತು. (ದಾನಿಯೇಲ 9:24-27) ಈ “ವಾರಗಳು” ಸಾ.ಶ.ಪೂ. 455ರಲ್ಲಿ, ಪಾರಸಿಯ ಅರಸನಾದ ಅರ್ತಷಸನ್ತು ಯೆರೂಸಲೇಮ್ ಪಟ್ಟಣದ ಪುನಃ ಕಟ್ಟುವಿಕೆಗೆ ಅಪ್ಪಣೆಯನ್ನು ಕೊಟ್ಟಾಗ ಆರಂಭಿಸಿದವು. ಕೊನೆಯ “ವಾರ”ವು ಮೆಸ್ಸೀಯನಾದ ಯೇಸು ಕ್ರಿಸ್ತನ ಆಗಮನದಲ್ಲಿ, ಅಂದರೆ, ಸಾ.ಶ. 29ರಲ್ಲಿ ಅವನ ದೀಕ್ಷಾಸ್ನಾನ ಮತ್ತು ಅಭಿಷೇಕದಲ್ಲಿ ಪ್ರಾರಂಭಿಸಿತು.b ಸಾ.ಶ. ಒಂದನೆಯ ಶತಕದ ದೈವಭಕ್ತ ಯೆಹೂದ್ಯರಿಗೆ ದಾನಿಯೇಲನ ಪ್ರವಾದನೆಯ ಈ ಕಾಲ ವೈಶಿಷ್ಟ್ಯದ ಸುಪರಿಚಯವಿತ್ತು. ದೃಷ್ಟಾಂತಕ್ಕಾಗಿ, ಸಾ.ಶ. 29ರಲ್ಲಿ ಸ್ನಾನಿಕನಾದ ಯೋಹಾನನ ಸಾರುವಿಕೆಯನ್ನು ಕೇಳಲು ನೆರೆದಿದ್ದ ಜನರ ಗುಂಪುಗಳ ಕುರಿತು, ಲೂಕ 3:15 ಹೇಳುವುದು: “ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರುನೋಡುವವರಾಗಿದದ್ದರಿಂದ ಅವರೆಲ್ಲರು ಯೋಹಾನನ ವಿಷಯವಾಗಿ—ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳು”ತ್ತಿದ್ದರು.
5 ಆ 70ನೆಯ “ವಾರ”ವು ಯೆಹೂದ್ಯರಿಗಾಗಿ ವಿಸ್ತರಿಸಲ್ಪಟ್ಟ ವಿಶೇಷ ಅನುಗ್ರಹದ ಏಳು ವರ್ಷಗಳಾಗಿರಲಿದ್ದವು. ಸಾ.ಶ. 29ರಲ್ಲಿ ಆರಂಭಿಸಿದ ಅದು, ಯೇಸುವಿನ ದೀಕ್ಷಾಸ್ನಾನ ಮತ್ತು ಶುಶ್ರೂಷೆ, “ಅರ್ಧವಾರ”ದಲ್ಲಿ ಅಂದರೆ ಸಾ.ಶ. 33ರಲ್ಲಿ ಆತನ ಯಜ್ಞಾರ್ಪಣೆಯ ಮರಣ, ಮತ್ತು ಸಾ.ಶ. 36ರ ವರೆಗಿನ ಇನ್ನೊಂದು ‘ಅರ್ಧವಾರ’ವನ್ನು ಒಳಗೂಡಿತ್ತು. ಈ “ವಾರ”ದಲ್ಲಿ, ಯೇಸುವಿನ ಅಭಿಷಿಕ್ತ ಶಿಷ್ಯರಾಗುವ ಅವಕಾಶವು ಪ್ರತ್ಯೇಕವಾಗಿ ದೈವಭಕ್ತ ಯೆಹೂದ್ಯರಿಗೆ ಮತ್ತು ಯೆಹೂದಿ ಮತಾವಲಂಬಿಗಳಿಗೆ ನೀಡಲ್ಪಟ್ಟಿತು. ಅನಂತರ, ಸಾ.ಶ. 70ರಲ್ಲಿ, ಮುಂದಾಗಿ ತಿಳಿಯದೆ ಇದ್ದ ಒಂದು ದಿನಾಂಕದಲ್ಲಿ, ಟೈಟಸ್ನ ಕೆಳಗಿನ ರೋಮನ್ ಸೇನೆಗಳು ಧರ್ಮಭ್ರಷ್ಟ ಯೆಹೂದಿ ವ್ಯವಸ್ಥೆಯನ್ನು ನಿರ್ಮೂಲಗೊಳಿಸಿದವು.—ದಾನಿಯೇಲ 9:26, 27.
6. ಸಾ.ಶ. 66ರಲ್ಲಿ “ಅಸಹ್ಯವಸ್ತು” ಹೇಗೆ ಕಾರ್ಯಕ್ಕಿಳಿಯಿತು, ಮತ್ತು ಕ್ರೈಸ್ತರು ಹೇಗೆ ಪ್ರತಿಕ್ರಿಯಿಸಿದರು?
6 ಹೀಗೆ ಯೆರೂಸಲೇಮ್ ದೇವಾಲಯವನ್ನು ಹೊಲೆಮಾಡಿದ್ದ ಮತ್ತು ದೇವರ ಸ್ವಂತ ಕುಮಾರನ ಕೊಲೆಗಾಗಿ ಹೂಟನಡಿಸಿದ್ದ ಯೆಹೂದಿ ಯಾಜಕತ್ವವು ನಿರ್ಮೂಲವಾಯಿತು. ರಾಷ್ಟ್ರೀಯ ಮತ್ತು ಗೋತ್ರ ಸಂಬಂಧಿತ ದಾಖಲೆಗಳೂ ನಷ್ಟವಾಗಿ ಹೋದವು. ತದನಂತರ, ಯಾವನೇ ಯೆಹೂದ್ಯನು ಯಾಜಕತ್ವದ ಮತ್ತು ರಾಜತ್ವದ ಹಕ್ಕುಬಾಧ್ಯತೆಯನ್ನು ನ್ಯಾಯಬದ್ಧವಾಗಿ ತನ್ನದೆಂದು ಹೇಳಶಕ್ತನಾಗಲಿಲ್ಲ. ಆದರೂ ಸಂತೋಷಕರವಾಗಿಯೇ, ಅಭಿಷಿಕ್ತ ಆತ್ಮಿಕ ಯೆಹೂದ್ಯರು ರಾಜವಂಶಸ್ಥರಾದ ಯಾಜಕರೋಪಾದಿ, ಯೆಹೋವ ದೇವರ “ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ” ಪ್ರತ್ಯೇಕಿಸಲ್ಪಟ್ಟಿದ್ದರು. (1 ಪೇತ್ರ 2:9) ಸಾ.ಶ. 66ರಲ್ಲಿ ರೋಮನ್ ಸೇನೆಯು ಮೊತ್ತಮೊದಲಾಗಿ ಯೆರೂಸಲೇಮಿಗೆ ಮುತ್ತಿಗೆ ಹಾಕಿದಾಗ ಮತ್ತು ಆಲಯದ ಕ್ಷೇತ್ರವನ್ನು ಸಹ ನಿರ್ಬಲಗೊಳಿಸಿದಾಗ, ಆ ಮಿಲಿಟರಿ ಸೇನೆಯನ್ನು, “ಪ್ರವಾದಿಯಾದ ದಾನಿಯೇಲನು ಹೇಳಿದಂಥ [ಪವಿತ್ರಸ್ಥಾನದಲ್ಲಿ ನಿಂತಿರುವ] ಹಾಳುಮಾಡುವ ಅಸಹ್ಯವಸ್ತು”ವಾಗಿ ಕ್ರೈಸ್ತರು ಗುರುತಿಸಿದರು. ಯೇಸುವಿನ ಪ್ರವಾದನಾ ಆಜೆಗ್ಞೆ ವಿಧೇಯತೆಯಲ್ಲಿ, ಯೆರೂಸಲೇಮ್ ಮತ್ತು ಯೂದಾಯದಲ್ಲಿದ್ದ ಕ್ರೈಸ್ತರು ಭದ್ರತೆಗಾಗಿ ಪರ್ವತಮಯ ಪ್ರದೇಶಗಳಿಗೆ ಪಲಾಯನಗೈದರು.—ಮತ್ತಾಯ 24:15, 16; ಲೂಕ 21:20, 21.
7, 8. ಕ್ರೈಸ್ತರು ಯಾವ “ಸೂಚನೆ”ಯನ್ನು ವೀಕ್ಷಿಸಿದರು, ಆದರೆ ಅವರಿಗೆ ಏನು ತಿಳಿದಿರಲಿಲ್ಲ?
7 ಆ ನಂಬಿಗಸ್ತ ಯೆಹೂದಿ ಕ್ರೈಸ್ತರು ದಾನಿಯೇಲನ ಪ್ರವಾದನೆಯ ನೆರವೇರಿಕೆಯನ್ನು ಕಂಡರು ಮತ್ತು ಯೇಸು ಮುಂತಿಳಿಸಿದ್ದ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆಯ” ಭಾಗವಾದ ಆ ದುರಂತಮಯ ಯುದ್ಧಗಳು, ಕ್ಷಾಮಗಳು, ಸೋಂಕುರೋಗಗಳು, ಭೂಕಂಪಗಳು, ಮತ್ತು ನಿಯಮರಾಹಿತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಗಳಾದರು. (ಮತ್ತಾಯ 24:3, NW) ಆದರೆ ಆ ಭ್ರಷ್ಟ ವ್ಯವಸ್ಥೆಯ ಮೇಲೆ ಯೆಹೋವನು ಕಾರ್ಯತಃ ಯಾವಾಗ ತೀರ್ಪನ್ನು ನಿರ್ವಹಿಸುವನೆಂದು ಯೇಸು ಅವರಿಗೆ ಹೇಳಿದ್ದನೋ? ಇಲ್ಲ. ತನ್ನ ಭವಿಷ್ಯತ್ತಿನ ರಾಜ್ಯಯೋಗ್ಯ ಸಾನ್ನಿಧ್ಯದ ಪರಮಾವಧಿಯ ಕುರಿತು ಆತನು ಏನನ್ನು ಮುಂತಿಳಿಸಿದನೋ ಅದು ಒಂದನೆಯ ಶತಮಾನದ “ಮಹಾ ಸಂಕಟ”ಕ್ಕೆ ಸಹ ಖಂಡಿತವಾಗಿಯೂ ಅನ್ವಯಿಸಿತು: “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.”—ಮತ್ತಾಯ 24:36.
8 ದಾನಿಯೇಲನ ಪ್ರವಾದನೆಯಿಂದ, ಯೇಸು ಮೆಸ್ಸೀಯನಾಗಿ ಗೋಚರಿಸುವ ಸಮಯವನ್ನು ಯೆಹೂದ್ಯರು ಲೆಕ್ಕಮಾಡಲು ಸಾಧ್ಯವಿತ್ತು. (ದಾನಿಯೇಲ 9:25) ಆದರೂ ಕಟ್ಟಕಡೆಗೆ ಧರ್ಮಭ್ರಷ್ಟ ಯೆಹೂದಿ ವಿಷಯಗಳ ವ್ಯವಸ್ಥೆಯನ್ನು ನಿರ್ಜನತೆಗೆ ನಡಿಸಿದ ಆ “ಮಹಾ ಸಂಕಟ”ಕ್ಕಾಗಿ ಯಾವ ತಾರೀಖೂ ಅವರಿಗೆ ಕೊಡಲ್ಪಟ್ಟಿರಲಿಲ್ಲ. ಯೆರೂಸಲೇಮಿನ ಮತ್ತು ಅದರ ಆಲಯದ ನಾಶನದ ಬಳಿಕ ಮಾತ್ರವೇ ಆ ತಾರೀಖು ಸಾ.ಶ. 70 ಆಗಿತ್ತೆಂದು ಅವರು ಗ್ರಹಿಸಿಕೊಂಡರು. ಆದರೂ, ಯೇಸುವಿನ ಪ್ರವಾದನಾ ಮಾತುಗಳ ಅರಿವು ಅವರಿಗಿತ್ತು: “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲ.” (ಮತ್ತಾಯ 24:34) ಇಲ್ಲಿರುವ “ಸಂತತಿ”ಯ ಅನ್ವಯವು, ಪ್ರಸಂಗಿ 1:4ರಲ್ಲಿ ಹೇಳಲ್ಪಟ್ಟಿರುವ—ಒಂದು ಕಾಲಾವಧಿಯಲ್ಲಿ ಬರುತ್ತಾ ಹೋಗುತ್ತಾ ಇರುವ ಅನುಕ್ರಮವಾದ ಸಂತತಿಗಳಿಗಿಂತ ಬೇರೆಯಾಗಿದೆಯೆಂಬುದು ವ್ಯಕ್ತ.
“ಈ ಸಂತತಿ”—ಅದ್ಯಾವುದು?
9. ಗ್ರೀಕ್ ಪದವಾದ ಜೆನೀಯವನ್ನು ಶಬ್ದಕೋಶಗಳು ಹೇಗೆ ಭಾಷಾಂತರಿಸುತ್ತವೆ?
9 ಎಣ್ಣೇಮರಗಳ (ಆಲಿವ್) ಬೆಟ್ಟದಲ್ಲಿ ಯೇಸುವಿನೊಂದಿಗೆ ಕೂತಿದ್ದ ನಾಲ್ವರು ಅಪೊಸ್ತಲರು “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಕುರಿತ ಆತನ ಪ್ರವಾದನೆಯನ್ನು ಕೇಳಿದಾಗ, “ಈ ಸಂತತಿ” ಎಂಬ ಅಭಿವ್ಯಕ್ತಿಯನ್ನು ಅವರು ಹೇಗೆ ಅರ್ಥೈಸಿದ್ದಿರಬೇಕು? ಸುವಾರ್ತೆಗಳಲ್ಲಿ “ಸಂತತಿ” ಎಂಬ ಪದವು ಗ್ರೀಕ್ ಶಬ್ದವಾದ ಜೆನೀಯದಿಂದ ಭಾಷಾಂತರವಾಗಿದೆ, ಅದನ್ನು ಸದ್ಯದ ಶಬ್ದಕೋಶಗಳು ಈ ಮಾತುಗಳಲ್ಲಿ ಅರ್ಥವಿವರಿಸುತ್ತವೆ: “ಅಕ್ಷರಶಃ ಒಬ್ಬ ಸಾಮಾನ್ಯ ಪೂರ್ವಜನಿಂದ ಇಳಿದುಬಂದವುಗಳು.” (ವಾಲರ್ಟ್ ಬಾವರ್ ಇವರ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್ ಆಫ್ ದ ನ್ಯೂ ಟೆಸ್ಟಮೆಂಟ್) “ಯಾವುದು ಜನಿಸಲ್ಪಟ್ಟಿತೋ ಅದು, ಒಂದು ಕುಟುಂಬ; . . . ಒಂದು ವಂಶಾವಳಿಯ ಅನುಕ್ರಮ ಸದಸ್ಯರು . . . ಅಥವಾ ಜನರ ಒಂದು ಕುಲ . . . ಒಂದೇ ಕಾಲದಲ್ಲಿ ಜೀವಿಸುತ್ತಿರುವ ಮನುಷ್ಯರ ಒಂದು ಇಡೀ ಸಮುದಾಯ, ಮತ್ತಾ. 24:34; ಮಾರ್ಕ 13:30; ಲೂಕ 1:48; 21:32; ಫಿಲಿ. 2:15, ಮತ್ತು ವಿಶೇಷವಾಗಿ ಅದೇ ಕಾಲಾವಧಿಯಲ್ಲಿ ಜೀವಿಸುತ್ತಿದ್ದ ಯೆಹೂದ್ಯ ಕುಲದವರದ್ದು.” (ಡಬ್ಲ್ಯೂ. ಇ. ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನರಿ ಅಫ್ ನ್ಯೂ ಟೆಸ್ಟಮೆಂಟ್ ವರ್ಡ್ಸ್) “ಯಾವುದು ಹುಟ್ಟಿಸಲ್ಪಟ್ಟಿತೋ ಅದು, ಒಂದೇ ಬುಡಕಟ್ಟಿನ ಮನುಷ್ಯರು, ಒಂದು ಕುಟುಂಬ; . . . ಒಂದೇ ಕಾಲದಲ್ಲಿ ಜೀವಿಸುತ್ತಿರುವ ಮನುಷ್ಯರ ಇಡೀ ಸಮುದಾಯ: ಮತ್ತಾ. xxiv. 34; ಮಾರ್ಕ xiii. 30; ಲೂಕ i. 48 . . . ಒಂದೇ ಮತ್ತು ಅದೇ ಕಾಲಾವಧಿಯಲ್ಲಿ ಜೀವಿಸುತ್ತಿರುವ ಯೆಹೂದಿ ಕುಲಕ್ಕೆ ವಿಶೇಷವಾಗಿ ಬಳಸಲ್ಪಟ್ಟಿದೆ.”—ಜೆ. ಎಚ್ ಥೇಯರ್ಸ್ ಗ್ರೀಕ್-ಇಂಗ್ಲಿಷ್ ಲೆಕ್ಸಿಕನ್ ಆಫ್ ದ ನ್ಯೂ ಟೆಸ್ಟಮೆಂಟ್.
10. (ಎ) ಮತ್ತಾಯ 24:34ನ್ನು ಉದಾಹರಿಸುವಲ್ಲಿ, ಯಾವ ಏಕರೂಪದ ಅರ್ಥವಿವರಣೆಯನ್ನು ಇಬ್ಬರು ಅಧಿಕೃತ ವ್ಯಕ್ತಿಗಳು ಕೊಡುತ್ತಾರೆ? (ಬಿ) ಈ ಅರ್ಥಗಳನ್ನು ಒಂದು ವೇದಶಾಸ್ತ್ರದ ನಿಘಂಟು ಮತ್ತು ಕೆಲವು ಬೈಬಲ್ ತರ್ಜುಮೆಗಳು ಹೇಗೆ ಬೆಂಬಲಿಸುತ್ತವೆ?
10 ಹೀಗೆ ವೈನ್ ಮತ್ತು ಥೇಯರ್ ಇಬ್ಬರೂ “ಈ ಸಂತತಿ” (ಹೆ ಜೆನೀಯ ಓಟ್) ಇದನ್ನು “ಒಂದೇ ಕಾಲದಲ್ಲಿ ಜೀವಿಸುವ ಮನುಷ್ಯರ ಇಡೀ ಸಮುದಾಯ”ವಾಗಿ ಅರ್ಥ ವಿವರಿಸುವುದರಲ್ಲಿ ಮತ್ತಾಯ 24:34ನ್ನು ಉದಾಹರಿಸುತ್ತಾರೆ. ತಿಯೊಲಾಜಿಕಲ್ ಡಿಕ್ಷನರಿ ಆಫ್ ದ ನ್ಯೂ ಟೆಸ್ಟಮೆಂಟ್ (1964) ಈ ಅರ್ಥನಿರೂಪಣೆಗೆ ಬೆಂಬಲವನ್ನು ಕೊಡುತ್ತಾ, ಹೇಳುವುದು: “ಯೇಸುವಿನಿಂದ ಬಳಸಲ್ಪಟ್ಟ ‘ಸಂತತಿ’ ಅವನ ವ್ಯಾಪಕ ಉದ್ದೇಶವನ್ನು ವ್ಯಕ್ತಪಡಿಸುತ್ತದೆ: ಅವನ ಗುರಿ ಇಡೀ ಜನತೆಯ ಮೇಲಿದೆ ಮತ್ತು ಪಾಪದಲ್ಲಿ ಅವರ ಒಕ್ಕಟ್ಟನ್ನು ಆತನು ಬಲ್ಲನು.” ನಿಜವಾಗಿ, “ಪಾಪದಲ್ಲಿ ಒಕ್ಕಟ್ಟು” ಇಂದಿನ ಲೋಕ ವ್ಯವಸ್ಥೆಯನ್ನು ಗುರುತಿಸುವಂತೆಯೇ, ಯೇಸು ಭೂಮಿಯಲ್ಲಿದ್ದಾಗ ಯೆಹೂದಿ ಜನಾಂಗದಲ್ಲೂ ವ್ಯಕ್ತವಾಗಿತ್ತು.c
11. (ಎ) ಹೆ ಜೆನೀಯ ಓಟ್ ಅನ್ನು ಹೇಗೆ ಅನ್ವಯಿಸುವುದೆಂದು ನಿರ್ಣಯಿಸುವಲ್ಲಿ ಯಾವ ಅಧಿಕಾರಿಯು ಮುಖ್ಯವಾಗಿ ನಮ್ಮನ್ನು ಮಾರ್ಗದರ್ಶಿಸಬೇಕು? (ಬಿ) ಈ ಅಧಿಕಾರಿಯು ಆ ಪರಿಭಾಷೆಯನ್ನು ಹೇಗೆ ಉಪಯೋಗಿಸಿದನು?
11 ನಿಶ್ಚಯವಾಗಿ, ಈ ವಿಷಯವನ್ನು ಅಭ್ಯಸಿಸುವ ಕ್ರೈಸ್ತರು, ಯೇಸುವಿನ ಮಾತುಗಳನ್ನು ವರದಿಸುವುದರಲ್ಲಿ, ಹೆ ಜೆನೀಯ ಓಟ್ ಅಥವಾ “ಈ ಸಂತತಿ” ಎಂಬ ಆ ಗ್ರೀಕ್ ಅಭಿವ್ಯಕ್ತಿಯನ್ನು ಪ್ರೇರಿತ ಸುವಾರ್ತಾ ಬರಹಗಾರರು ಮುಖ್ಯವಾಗಿ ಹೇಗೆ ಬಳಸಿದರು ಎಂಬುದರಿಂದ ತಮ್ಮ ಯೋಚನೆಯನ್ನು ಮಾರ್ಗದರ್ಶಿಸುತ್ತಾರೆ. ಆ ಅಭಿವ್ಯಕ್ತಿಯು ಏಕರೂಪವಾಗಿ ಒಂದು ನಕಾರಾತ್ಮಕ ರೀತಿಯಲ್ಲಿ ಉಪಯೋಗಿಸಲ್ಪಟ್ಟಿತು. ಹೀಗೆ, ಅವನು ಯೆಹೂದಿ ಧಾರ್ಮಿಕ ಮುಖಂಡರನ್ನು “ಹಾವುಗಳೇ, ಸರ್ಪಜಾತಿಯವರೇ” ಎಂದು ಕರೆಯುತ್ತಾ, “ಈ ಸಂತತಿ”ಯ ಮೇಲೆ ಗೆಹೆನದ ತೀರ್ಪು ನಿರ್ವಹಿಸಲ್ಪಡುವುದೆಂದು ಮುಂದುವರಿಸಿ ಅಂದನು. (ಮತ್ತಾಯ 23:33, 36) ಆದರೂ, ಈ ತೀರ್ಪು ಕಪಟಿಗಳಾದ ವೈದಿಕರಿಗೆ ಸೀಮಿತವಾಗಿತ್ತೋ? ಇಲ್ಲವೇ ಇಲ್ಲ. ಹಲವಾರು ಸಂದರ್ಭಗಳಲ್ಲಿ ಯೇಸು “ಈ ಸಂತತಿ”ಯ ಕುರಿತು ಮಾತಾಡುತ್ತಾ, ಈ ಪರಿಭಾಷೆಯನ್ನು ಏಕರೂಪವಾಗಿ ಎಷ್ಟೋ ವಿಸ್ತಾರವಾದ ಅರ್ಥದಲ್ಲಿ ಅನ್ವಯಿಸುವುದನ್ನು ಅವನ ಶಿಷ್ಯರು ಕೇಳಿದ್ದರು. ಅದು ಯಾವುದು?
“ಈ ಕೆಟ್ಟ ಸಂತತಿ”
12. ಶಿಷ್ಯರು ಆಲಿಸುತ್ತಾ ಇದ್ದಂತೆ, ಯೇಸು “ಜನರ ಗುಂಪು”ಗಳನ್ನು “ಈ ಸಂತತಿ”ಯೊಂದಿಗೆ ಹೇಗೆ ಜೋಡಿಸಿದನು?
12 ಸಾ.ಶ. 31ರಲ್ಲಿ, ಯೇಸುವಿನ ಮಹಾ ಗಲಿಲಾಯ ಶುಶ್ರೂಷೆಯಲ್ಲಿ ಮತ್ತು ಪಸ್ಕದ ಬಳಿಕ ಸ್ವಲ್ಪ ಸಮಯದಲ್ಲಿ, ಅವನು “ಜನರ ಗುಂಪುಗಳಿಗೆ” ಹೀಗನ್ನುವುದನ್ನು ಅವನ ಶಿಷ್ಯರು ಕೇಳಿದರು: “ಆದರೆ ಈ ಸಂತತಿಯನ್ನು ಯಾರಿಗೆ ಹೋಲಿಸಲಿ? ಪೇಟೆಗಳಲ್ಲಿ ಕೂತುಕೊಂಡು ತಮ್ಮ ಗೆಳೆಯರಿಗೆ—ನಿಮಗೋಸ್ಕರ ಕೊಳಲೂದಿದೆವು. ನೀವು ಕುಣಿಯಲಿಲ್ಲ, ಗೋಳಾಡಿದೆವು, ನೀವು ಎದೆಬಡಕೊಳ್ಳಲಿಲ್ಲ ಎಂದು ಕೂಗಿಹೇಳುವಂಥ ಹುಡುಗರನ್ನು ಹೋಲುತ್ತದೆ. ಹೇಗಂದರೆ [ಸ್ನಾನಿಕ] ಯೋಹಾನನು ಬಂದನು, ಅವನು ಅನ್ನಪಾನಗಳನ್ನು ತೆಗೆದುಕೊಳ್ಳದವನಾಗಿದ್ದನು; ಅವರು ಅವನಿಗೆ—ದೆವ್ವಹಿಡಿದದೆ ಅನ್ನುತ್ತಾರೆ. ಮನುಷ್ಯಕುಮಾರನು [ಯೇಸು] ಬಂದನು. ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವನಾಗಿದ್ದಾನೆ; ಅವರು ಇಗೋ, ಇವನು ಹೊಟ್ಟೆಬಾಕನು, ಕುಡುಕನು, ಭ್ರಷ್ಟರ ಮತ್ತು ಪಾಪಿಗಳ ಗೆಳೆಯನು ಅನ್ನುತ್ತಾರೆ.” ನೀತಿ ನಿಯಮಗಳಿಲ್ಲದ ಆ “ಜನರ ಗುಂಪು”ಗಳನ್ನು ಒಲಿಸಿಕೊಳ್ಳುವ ದಾರಿಯೇ ಇರಲಿಲ್ಲ!—ಮತ್ತಾಯ 11:7, 16-19.
13. ತನ್ನ ಶಿಷ್ಯರ ಸಮ್ಮುಖದಲ್ಲಿ, ಯಾರನ್ನು ಯೇಸು “ಈ ಕೆಟ್ಟ ಸಂತತಿ” ಎಂಬುದಾಗಿ ಗುರುತಿಸಿದನು ಮತ್ತು ಖಂಡಿಸಿದನು?
13 ತದನಂತರ ಸಾ.ಶ. 31ರಲ್ಲಿ, ಯೇಸು ಮತ್ತು ಅವನ ಶಿಷ್ಯರು ಗಲಿಲಾಯದ ಎರಡನೆಯ ಸಾರುವ ಸಂಚಾರವನ್ನು ಕೈಕೊಂಡಾಗ, “ಶಾಸ್ತ್ರಿಗಳಲ್ಲಿಯೂ ಫರಿಸಾಯರಲ್ಲಿಯೂ ಕೆಲವರು” ಯೇಸುವಿನೊಂದಿಗೆ ಒಂದು ಸೂಚಕಕಾರ್ಯಕ್ಕಾಗಿ ಕೇಳಿದರು. ಅವನು ಅವರಿಗೆ ಮತ್ತು ಅಲ್ಲಿ ನೆರೆದಿದ್ದ “ಜನರ ಗುಂಪುಗಳಿಗೆ” ಹೇಳಿದ್ದು: “ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವದೂ ಇದಕ್ಕೆ ಸಿಕ್ಕುವದಿಲ್ಲ. ಅಂದರೆ ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು. . . . ಇದರಂತೆಯೇ ಈ ಕೆಟ್ಟ ಸಂತತಿಗೆ ಆಗುವದು.” (ಮತ್ತಾಯ 12:38-46) ಸ್ಪಷ್ಟವಾಗಿಗಿ, ಯೇಸುವಿನ ಮರಣ ಮತ್ತು ಪುನರುತ್ಥಾನದಲ್ಲಿ ನೆರವೇರಿದ ಆ ಸೂಚಕಕಾರ್ಯವನ್ನು ಎಂದೂ ತಿಳಿದುಕೊಳ್ಳದೆ ಹೋದ ಆ “ಕೆಟ್ಟ ಸಂತತಿ”ಯಲ್ಲಿ ಧಾರ್ಮಿಕ ಮುಖಂಡರು ಮತ್ತು “ಜನರ ಗುಂಪು”ಗಳು ಇವರಿಬ್ಬರೂ ಸೇರಿದ್ದರು.d
14. ಸದ್ದುಕಾಯರ ಮತ್ತು ಫರಿಸಾಯರ ಯಾವ ಖಂಡನೆಯನ್ನು ಯೇಸು ಮಾಡುತ್ತಿದ್ದುದನ್ನು ಆತನ ಶಿಷ್ಯರು ಕೇಳಿದರು?
14 ಸಾ.ಶ. 32ರ ಪಸ್ಕದ ಅನಂತರ, ಯೇಸು ಮತ್ತು ಅವನ ಶಿಷ್ಯರು ಗಲಿಲಾಯದ ಮಗದಾನ ಸೀಮೆಗೆ ಬಂದಾಗ, ಸದ್ದುಕಾಯರು ಮತ್ತು ಫರಿಸಾಯರು ಪುನಃ ಒಂದು ಸೂಚಕಕಾರ್ಯಕ್ಕಾಗಿ ಯೇಸುವನ್ನು ಕೇಳಿಕೊಂಡರು. ಅವನು ಅವರಿಗೆ ಪುನಃ ಹೇಳಿದ್ದು: “ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ; ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವುದೂ ಇದಕ್ಕೆ ಸಿಕ್ಕುವದಿಲ್ಲ.” (ಮತ್ತಾಯ 16:1-4) “ಈ ಕೆಟ್ಟ ಸಂತತಿ” ಎಂದು ಯಾರನ್ನು ಯೇಸು ಖಂಡಿಸಿದನೋ ಆ ನಂಬಿಕೆಯಿಲ್ಲದಂಥ ‘ಜನರ ಗುಂಪಿನಲ್ಲಿ’ ನಾಯಕರೋಪಾದಿ ಆ ಧಾರ್ಮಿಕ ಕಪಟಿಗಳು ಅತ್ಯಂತ ದೂಷಣೀಯರಾಗಿದ್ದರು, ನಿಶ್ಚಯ.
15. ರೂಪಾಂತರಕ್ಕೆ ಸ್ವಲ್ಪ ಮುಂಚೆ ಮತ್ತು ಆ ಬಳಿಕ ಪುನಃ ಕೂಡಲೆ, ಯೇಸು ಮತ್ತು ಆತನ ಶಿಷ್ಯರಿಗೆ “ಈ ಸಂತತಿ”ಯೊಂದಿಗೆ ಯಾವ ಸಂಧಿಸುವಿಕೆಯಾಗಿತ್ತು?
15 ಆತನ ಗಲಿಲಾಯ ಶುಶ್ರೂಷೆಯ ಅಂತ್ಯದ ಸುಮಾರಿಗೆ, ಯೇಸು ಜನರ ಗುಂಪನ್ನು ಮತ್ತು ತನ್ನ ಶಿಷ್ಯರನ್ನು ತನ್ನ ಬಳಿಗೆ ಕರೆದು ಅಂದದ್ದು: “ವ್ಯಭಿಚಾರಿಣಿಯಂತಿರುವ ಈ ಪಾಷ್ಠಿ ಸಂತತಿಯಲ್ಲಿ ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯಕುಮಾರನು . . . ನಾಚಿಕೊಳ್ಳುವನು.” (ಮಾರ್ಕ 8:34, 38) ಹೀಗೆ ಪಶ್ಚಾತ್ತಾಪಪಡದ ಆ ದಿನಗಳ ಯೆಹೂದಿ ಜನಸಮುದಾಯಗಳು “ವ್ಯಭಿಚಾರಿಣಿಯಂತಿರುವ ಈ ಪಾಷ್ಠಿ ಸಂತತಿಯಲ್ಲಿ” ಸಂಯೋಜಿತರಾಗಿದ್ದರೆಂಬುದು ವ್ಯಕ್ತ. ಕೆಲವು ದಿನಗಳ ತರುವಾಯ, ಯೇಸುವಿನ ರೂಪಾಂತರದ ಬಳಿಕ, ಯೇಸು ಮತ್ತು ಅವನ ಶಿಷ್ಯರು “ಜನರ ಗುಂಪಿನ ಬಳಿಗೆ ಬಂದಾಗ,” ಒಬ್ಬ ಮನುಷ್ಯನು ತನ್ನ ಮಗನನ್ನು ವಾಸಿಮಾಡುವಂತೆ ಆತನನ್ನು ಕೇಳಿಕೊಂಡನು. ಯೇಸು ಹೇಳಿದ್ದು: “ಎಲಾ, ನಂಬಿಕೆಯಿಲ್ಲದಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ?”—ಮತ್ತಾಯ 17:14-17; ಲೂಕ 9:37-41.
16. (ಎ)“ಜನರ ಗುಂಪುಗಳ” ಯಾವ ಖಂಡನೆಯನ್ನು ಯೇಸು ಯೂದಾಯದಲ್ಲಿ ಪುನಃ ಮಾಡಿದನು? (ಬಿ) “ಈ ಸಂತತಿ” ಪಾತಕಗಳಲ್ಲಿ ಅತ್ಯಂತ ಕೆಟ್ಟದ್ದನ್ನು ಗೈಯುವಂತಾದದ್ದು ಹೇಗೆ?
16 ಸಂಭವನೀಯವಾಗಿ ಯೂದಾಯದಲ್ಲಿ, ಸಾ.ಶ. 32ರ ಪರ್ಣಶಾಲೆಗಳ ಹಬ್ಬದ ಬಳಿಕ, ಯೇಸುವಿನ ಸುತ್ತಲೂ “ಜನರು ಗುಂಪುಗುಂಪಾಗಿ ಕೂಡಿಬರುತ್ತಿರುವಾಗ,” ಅವನು ತನ್ನ ಖಂಡನೆಯ ಮಾತುಗಳನ್ನು ಅವರಿಗೆ ಪುನರುಚ್ಚರಿಸುತ್ತಾ ಅಂದದ್ದು: “ಈ ಸಂತತಿ ಕೆಟ್ಟ ಸಂತತಿಯೇ; ಇದು ಸೂಚಕಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವದೂ ಇದಕ್ಕೆ ಸಿಕ್ಕುವದಿಲ್ಲ.” (ಲೂಕ 11:29) ಕೊನೆಗೆ, ಧಾರ್ಮಿಕ ಮುಖಂಡರು ಯೇಸುವನ್ನು ವಿಚಾರಣೆಗಾಗಿ ಕರೆತಂದಾಗ, ಪಿಲಾತನು ಅವನನ್ನು ಬಿಟ್ಟುಕೊಡಲು ಸಿದ್ಧನಾದನು. ದಾಖಲೆಯು ಅನ್ನುವುದು: “ಅತಲ್ತಾಗಿ ಮಹಾಯಾಜಕರೂ ಹಿರಿಯರೂ ಬರಬ್ಬನನ್ನು ಬಿಟ್ಟುಕೊಡಬೇಕೆಂದು ಬೇಡಿಕೊಳ್ಳುವ ಹಾಗೂ ಯೇಸುವನ್ನು ನಾಶಗೊಳಿಸುವ ಹಾಗೂ ಜನರನ್ನು ಒಡಂಬಡಿಸಿದರು. . . . ಪಿಲಾತನು ಅವರನ್ನು—ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ ಎಂದು ಕೇಳಲು ಎಲ್ಲರೂ—ಅವನನ್ನು ಶಿಲುಬೆಗೆ ಹಾಕಿಸು ಅಂದರು. ಅದಕ್ಕವನು—ಯಾಕೆ? ಕೆಟ್ಟದ್ದೇನು ಮಾಡಿದನು? ಅಂದನು. ಆದರೆ ಅವರು—ಅವನನ್ನು ಶಿಲುಬೆಗೆ ಹಾಕಿಸು ಎಂದು ಬಹಳವಾಗಿ ಆರ್ಭಟಿಸಿದರು.” ಆ “ಕೆಟ್ಟ ಸಂತತಿಯು” ಯೇಸುವು ಕೊಲ್ಲಲ್ಪಡುವಂತೆ ಒತ್ತಯಾ ಮಾಡುತ್ತಿತ್ತು!—ಮತ್ತಾಯ 27:20-25.
17. “ವಕ್ರಬುದ್ಧಿಯುಳ್ಳ ಈ ಸಂತತಿ”ಯ ಕೆಲವರು ಪಂಚಾಶತ್ತಮದಲ್ಲಿ ಪೇತ್ರನ ಸಾರುವಿಕೆಗೆ ಪ್ರತಿಕ್ರಿಯಿಸಿದುದು ಹೇಗೆ?
17 ಒಂದು “ನಂಬಿಕೆಯಿಲ್ಲದಂಥ ಮೂರ್ಖಸಂತಾನ”ವು, ತನ್ನ ಧಾರ್ಮಿಕ ಮುಖಂಡರಿಂದ ಹುರಿದುಂಬಿಸಲ್ಪಟ್ಟು, ಹೀಗೆ, ಕರ್ತನಾದ ಯೇಸು ಕ್ರಿಸ್ತನಿಗೆ ಮರಣವನ್ನು ತರುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿತು. ಐವತ್ತು ದಿನಗಳ ತರುವಾಯ, ಸಾ.ಶ. 33ರ ಪಂಚಾಶತ್ತಮ ದಿನದಲ್ಲಿ, ಶಿಷ್ಯರು ಪವಿತ್ರಾತ್ಮವನ್ನು ಪಡೆದವರಾಗಿ ವಿವಿಧ ಭಾಷೆಗಳಲ್ಲಿ ಮಾತಾಡಲು ತೊಡಗಿದರು. ಆ ಶಬ್ದವನ್ನು ಕೇಳಿದಾಗ, “ಜನರು ಗುಂಪುಗುಂಪಾಗಿ ಕೂಡಿ” ಬಂದರು ಮತ್ತು ಅಪೊಸ್ತಲ ಪೇತ್ರನು ಅವರನ್ನು “ಯೆಹೂದ್ಯರೇ, ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಜನರೇ,” ಎಂಬುದಾಗಿ ಸಂಬೋಧಿಸುತ್ತಾ ಅಂದದ್ದು: “ನೀವು ಅನ್ಯಜನರ ಕೈಯಿಂದ ಆತನನ್ನು [ಯೇಸುವನ್ನು] ಶಿಲುಬೆಗೆ ಹಾಕಿಸಿ ಕೊಂದಿರಿ.” ಆ ಕೇಳುಗರಲ್ಲಿ ಕೆಲವರು ಹೇಗೆ ಪ್ರತಿವರ್ತಿಸಿದರು? “ಇದನ್ನು ಅವರು ಕೇಳಿ ಹೃದಯದಲ್ಲಿ ಅಲಗು ನೆಟ್ಟಂತಾ”ದರು. ಆಮೇಲೆ ಪೇತ್ರನು ಅವರು ಪಶ್ಚಾತ್ತಾಪ ಪಡುವಂತೆ ಕರೆಕೊಟ್ಟನು. ಅವನು “ಬೇರೆ ಅನೇಕವಾದ ಮಾತುಗಳಿಂದ ಅವನು ಖಂಡಿತವಾಗಿ ಸಾಕ್ಷಿನುಡಿದು—ವಕ್ರಬುದ್ಧಿಯುಳ್ಳ ಈ ಸಂತತಿಯವರಿಂದ ತಪ್ಪಿಸಿಕೊಳ್ಳಿರಿ ಎಂದು ಅವರನ್ನು ಎಚ್ಚರಿಸಿದನು.” ಪ್ರತಿಕ್ರಿಯೆ ತೋರಿಸುತ್ತಾ, ಸುಮಾರು ಮೂರು ಸಾವಿರ ಮಂದಿ “ಅವನ ಮಾತಿಗೆ ಒಪ್ಪಿಕೊಂಡು . . . ದೀಕ್ಷಾಸ್ನಾನ ಮಾಡಿಸಿಕೊಂಡರು.”—ಅ. ಕೃತ್ಯಗಳು 2:6, 14, 23, 37, 40, 41.
“ಈ ಸಂತತಿ” ಗುರುತಿಸಲ್ಪಟ್ಟದ್ದು
18. “ಈ ಸಂತತಿ” ಎಂಬ ಪರಿಭಾಷೆಯ ಯೇಸುವಿನ ಉಪಯೋಗವು ಹೊಂದಿಕೆಯಾಗಿ ಯಾವುದಕ್ಕೆ ನಿರ್ದೇಶಿಸುತ್ತದೆ?
18 ಹೀಗಿರಲಾಗಿ, ಯೇಸುವಿನಿಂದ ತನ್ನ ಶಿಷ್ಯರ ಸಮ್ಮುಖದಲ್ಲಿ ಅಷ್ಟು ಅಡಿಗಡಿಗೆ ನಿರ್ದೇಶಿಸಲ್ಪಟ್ಟ “ಸಂತತಿ” ಅಂದರೆ ಏನು? “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲ,” ಎಂಬ ಆತನ ಮಾತುಗಳಿಂದ ಅವರು ಏನು ತಿಳಿದುಕೊಂಡರು? ನಿಶ್ಚಯವಾಗಿ, “ಈ ಸಂತತಿ” ಎಂಬ ಪರಿಭಾಷೆಯ ತನ್ನ ರೂಢಿಯಾದ ಬಳಕೆಯಿಂದ ಯೇಸು ಅಗಲಿರಲಿಲ್ಲ, ಅವನದನ್ನು ಹೊಂದಿಕೆಯುಳ್ಳದ್ದಾಗಿ, ಯಾರು ತಮ್ಮ “ಕುರುಡ ಮಾರ್ಗದರ್ಶಿ”ಗಳೊಂದಿಗೆ ಕೂಡಿ ಯೆಹೂದಿ ಜನಾಂಗವಾಗಿ ಸಂಯೋಜಿತರಾಗಿದ್ದರೋ ಆ ಸಮಕಾಲೀನ ಜನ ಸಮುದಾಯಕ್ಕೆ ಅನ್ವಯಿಸಿದ್ದನು. (ಮತ್ತಾಯ 15:14, NW) “ಈ ಸಂತತಿಯು” ಯೇಸು ಮುಂತಿಳಿಸಿದ್ದ ಎಲ್ಲ ಸಂಕಷ್ಟಗಳನ್ನು ಅನುಭವಿಸಿತು, ಮತ್ತು ಬಳಿಕ ಯೆರೂಸಲೇಮಿನ ಮೇಲೆ ಬಂದ ಅದ್ವಿತೀಯ “ಮಹಾ ಸಂಕಟ”ದಲ್ಲಿ ಅಳಿದುಹೋಯಿತು.—ಮತ್ತಾಯ 24:21, 34.
19. ಯೆಹೂದಿ ವ್ಯವಸ್ಥೆಯ “ಭೂಮ್ಯಾಕಾಶಗಳು” ಅಳಿದುಹೋದದ್ದು ಯಾವಾಗ ಮತ್ತು ಹೇಗೆ?
19 ಒಂದನೆಯ ಶತಮಾನದಲ್ಲಿ, ಯೆಹೋವನು ಯೆಹೂದಿ ಜನರ ನ್ಯಾಯತೀರಿಸುತ್ತಿದ್ದನು. ಕ್ರಿಸ್ತನ ಮೂಲಕ ಯೆಹೋವನ ಕರುಣಾಭರಿತ ಒದಗಿಸುವಿಕೆಯಲ್ಲಿ ನಂಬಿಕೆಯಿಟ್ಟ ಪಶ್ಚಾತ್ತಾಪಿಗಳಾದ ಜನರು ಆ “ಮಹಾ ಸಂಕಟ”ದಿಂದ ಪಾರಾದರು. ಯೇಸು ಮುಂತಿಳಿಸಿದುದಕ್ಕೆ ಸರಿಯಾಗಿಯೇ, ಪ್ರವಾದಿಸಿದ ಎಲ್ಲ ಸಂಗತಿಗಳು ಸಂಭವಿಸಿದವು, ಮತ್ತು ಅನಂತರ, ಯೆಹೂದಿ ವಿಷಯಗಳ ವ್ಯವಸ್ಥೆಯ “ಭೂಮ್ಯಾಕಾಶಗಳು”—ಇಡೀ ಜನಾಂಗವು, ಅದರ ಧಾರ್ಮಿಕ ಮುಖಂಡರೊಂದಿಗೆ ಮತ್ತು ಜನರ ದುಷ್ಟ ಸಮಾಜದೊಂದಿಗೆ—ಅಳಿದುಹೋದವು. ಯೆಹೋವನು ನ್ಯಾಯತೀರ್ಪನ್ನು ನಿರ್ವಹಿಸಿದ್ದನು!—ಮತ್ತಾಯ 24:35; ಹೋಲಿಸಿ 2 ಪೇತ್ರ 3:7.
20. ಯಾವ ಸಮಯೋಚಿತ ಬುದ್ಧಿವಾದವು ಕ್ರೈಸ್ತರೆಲ್ಲರಿಗೆ ಜರೂರಿಯಾಗಿ ಅನ್ವಯಿಸುತ್ತದೆ?
20 ಯೇಸುವಿನ ಪ್ರವಾದನಾ ಮಾತುಗಳಿಗೆ ಲಕ್ಷ್ಯಕೊಟ್ಟಿದ್ದ ಆ ಯೆಹೂದ್ಯರು, ಒಂದು “ಸಂತತಿ”ಯ ಉದ್ದವನ್ನು ಅಥವಾ “ಕಾಲಗಳ . . . ಸಮಯಗಳ” ಕೆಲವು ತಾರೀಖುಗಳನ್ನು ಲೆಕ್ಕಮಾಡಲು ಪ್ರಯತ್ನಿಸುವುದರಲ್ಲಿ ತಮ್ಮ ರಕ್ಷಣೆಯು ಇಲ್ಲ, ಬದಲಾಗಿ ಸಮಕಾಲೀನವಾದ ಕೆಟ್ಟ ಸಂತತಿಯಿಂದ ತಪ್ಪಿಸಿಕೊಂಡು ಪ್ರತ್ಯೇಕವಾಗಿ ಉಳಿಯುವುದರ ಮೇಲೆ ಮತ್ತು ದೇವರ ಚಿತ್ತವನ್ನು ಹುರುಪಿನಿಂದ ಮಾಡುವುದರ ಮೇಲೆ ತಮ್ಮ ರಕ್ಷಣೆಯು ಅವಲಂಬಿಸಿತ್ತೆಂದು ಗ್ರಹಿಸಿಕೊಂಡರು. ಯೇಸುವಿನ ಪ್ರವಾದನೆಯ ಕೊನೆಯ ಮಾತುಗಳು ನಮ್ಮ ದಿನದ ದೊಡ್ಡ ನೆರವೇರಿಕೆಗೆ ಅನ್ವಯಿಸುತ್ತವಾದರೂ, ಒಂದನೆಯ ಶತಮಾನದ ಯೆಹೂದಿ ಕ್ರೈಸ್ತರಿಗೆ ಸಹ ಈ ಬುದ್ಧಿವಾದಕ್ಕೆ ಕಿವಿಗೊಡಲಿಕ್ಕಿತ್ತು: “ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.”—ಲೂಕ 21:32-36; ಅ. ಕೃತ್ಯಗಳು 1:6-8.
21. ಭವಿಷ್ಯತ್ತಿನಲ್ಲಿ ಬೇಗನೆ ಯಾವ ಹಠಾತ್ತಾದ ವಿಕಸನವನ್ನು ನಾವು ನಿರೀಕ್ಷಿಸಬಹುದು?
21 ಇಂದು, “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತರ್ವೆಯಾಗಿ ಬರುತ್ತಿದೆ.” (ಚೆಫನ್ಯ 1:14-18; ಯೆಶಾಯ 13:9, 13) ಥಟ್ಟನೆ, ಯೆಹೋವನು ತಾನೇ ಮೊದಲೇ ನಿರ್ಣಯಿಸಿದ ‘ದಿನ ಮತ್ತು ಗಳಿಗೆಯಲ್ಲಿ,’ ಜಗತ್ತಿನ ಧಾರ್ಮಿಕ, ರಾಜಕೀಯ, ಮತ್ತು ವಾಣಿಜ್ಯ ಘಟಕಗಳ ಮೇಲೆ ಹಾಗೂ ಸಮಕಾಲೀನವಾದ “ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿ”ಯನ್ನು ರಚಿಸುವ ವಕ್ರ ಜನತೆಯ ಮೇಲೆ ತನ್ನ ಕ್ರೋಧವನ್ನು ಹೊಯ್ಯುವನು. (ಮತ್ತಾಯ 12:39; 24:36; ಪ್ರಕಟನೆ 7:1-3, 9, 14) “ಮಹಾ ಸಂಕಟದಿಂದ” ನೀವು ಹೇಗೆ ತಪ್ಪಿಸಿಕೊಳ್ಳಬಹುದು? ನಮ್ಮ ಮುಂದಿನ ಲೇಖನವು ಅದನ್ನು ಉತ್ತರಿಸಿ, ಭವಿಷ್ಯತ್ತಿಗಾಗಿರುವ ಮಹಾ ನಿರೀಕ್ಷೆಯ ಕುರಿತು ತಿಳಿಸುವುದು.
[ಅಧ್ಯಯನ ಪ್ರಶ್ನೆಗಳು]
a ಈ ಪ್ರವಾದನೆಯ ಸವಿಸ್ತಾರವಾದ ಹೊರಮೇರೆಗಾಗಿ, ಫೆಬ್ರವರಿ 15, 1994 ರ ಕಾವಲಿನಬುರುಜು, ಪುಟ 14, 15 ರ ತಖ್ತೆಯನ್ನು ದಯವಿಟ್ಟು ನೋಡಿ.
b ವರ್ಷಗಳ “ವಾರಗಳ” ಕುರಿತ ಅಧಿಕ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ನಿಂದ ಪ್ರಕಾಶಿತವಾದ ಬೈಬಲು—ದೇವರ ವಾಕ್ಯವೊ ಅಥವಾ ಮಾನವನದ್ದೊ? (ಇಂಗ್ಲಿಷ್) ಎಂಬ ಪುಸ್ತಕದ ಪುಟಗಳು 130-2ನ್ನು ನೋಡಿ.
c ನಿರ್ದಿಷ್ಟ ಬೈಬಲುಗಳು ಮತ್ತಾಯ 24:34ರ ಹೆ ಜೆನೀಯ ಓಟ್ ಅನ್ನು ಈ ರೀತಿ ತರ್ಜುಮೆ ಮಾಡಿವೆ: “ಈ ಜನರು” (ದಿ ಹೋಲಿ ಬೈಬಲ್ ಇನ್ ದ ಲಾಂಗೆಜ್ವ್ ಆಫ್ ಟುಡೇ [1976], ಡಬ್ಲ್ಯೂ. ಎಫ್. ಬೆಕ್ ಇವರಿಂದ); “ಈ ಜನಾಂಗ” (ದ ನ್ಯೂ ಟೆಸ್ಟಮೆಂಟ್—ಆ್ಯನ್ ಎಕ್ಸ್ಪ್ಯಾಂಡೆಡ್ ಟ್ರಾನ್ಸ್ಲೇಶನ್ [1961], ಕೆ. ಎಸ್. ವ್ಯೂಸ್ಟ್ ಇವರಿಂದ); “ಈ ಜನತೆ” (ಜ್ಯೂವಿಷ್ ನ್ಯೂ ಟೆಸ್ಟಮೆಂಟ್ [1979], ಡಿ. ಏಚ್. ಸರ್ನ್ಟ್ ಇವರಿಂದ).
d ಈ ನಂಬಿಕೆಯಿಲ್ಲದಂಥ “ಜನರ ಗುಂಪು”ಗಳನ್ನು, ಯಾರೊಂದಿಗೆ ಗರ್ವಿಷ್ಟ ಧಾರ್ಮಿಕ ಮುಖಂಡರು ಸಹವಾಸಿಸಲು ನಿರಾಕರಿಸಿದರೋ ಮತ್ತು ಯೇಸು ಯಾರಿಗಾಗಿ “ಕನಿಕರಪಟ್ಟನೋ” ಆ ಎಮ್-ಹಾ-ಎರೆಟ್ಸ್, ಅಥವಾ “ಭೂಮಿಯ ಜನ”ರೊಂದಿಗೆ ಸರಿಗಟ್ಟಬಾರದು.—ಮತ್ತಾಯ 9:36; ಯೋಹಾನ 7:49.
ನೀವು ಹೇಗೆ ಉತ್ತರಿಸುವಿರಿ?
◻ ದಾನಿಯೇಲ 9:24-27ರ ನೆರವೇರಿಕೆಯಿಂದ ನಾವೇನು ಕಲಿಯುತ್ತೇವೆ?
◻ ಬೈಬಲಿನಲ್ಲಿ ಬಳಸಲ್ಪಟ್ಟಂತೆ, “ಈ ಸಂತತಿ”ಯ ಅರ್ಥವನ್ನು ಸದ್ಯದ ಶಬ್ದಕೋಶಗಳು ಹೇಗೆ ವಿವರಿಸುತ್ತವೆ?
◻ “ಸಂತತಿ” ಎಂಬ ಪರಿಭಾಷೆಯನ್ನು ಯೇಸು ಏಕರೂಪವಾಗಿ ಉಪಯೋಗಿಸಿದ್ದು ಹೇಗೆ?
◻ ಒಂದನೆಯ ಶತಮಾನದಲ್ಲಿ ಮತ್ತಾಯ 24:34, 35 ಹೇಗೆ ನೆರವೇರಿತು?
[ಪುಟ 12 ರಲ್ಲಿರುವ ಚಿತ್ರ]
ಯೇಸು “ಈ ಸಂತತಿ”ಯನ್ನು ಪುಂಡಾಟದ ಮಕ್ಕಳ ಗುಂಪುಗಳಿಗೆ ಹೋಲಿಸಿದನು
[ಪುಟ 15 ರಲ್ಲಿರುವ ಚಿತ್ರ]
ಕೆಟ್ಟ ಯೆಹೂದಿ ವ್ಯವಸ್ಥೆಯ ಮೇಲೆ ತೀರ್ಪನ್ನು ನಿರ್ವಹಿಸುವ ಗಳಿಗೆಯನ್ನು ಯೆಹೋವನು ಮಾತ್ರ ಮುಂದಾಗಿ ತಿಳಿದಿದ್ದನು