ದೇವರೊಂದಿಗೆ ನಡೆಯುವುದು—ಆರಂಭದ ಹೆಜ್ಜೆಗಳು
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋಬ 4:8.
1, 2. ಯೆಹೋವನಿಗೆ ಸೇವೆಸಲ್ಲಿಸುವುದು ಅತ್ಯಮೂಲ್ಯವಾದ ಸುಯೋಗವೆಂದು ನೀವು ಏಕೆ ಹೇಳಬಲ್ಲಿರಿ?
ಆ ಮನುಷ್ಯನು ಅನೇಕ ವರ್ಷಗಳಿಂದ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದನು. ಆದರೆ, ಒಂದು ದಿನ ಅವನನ್ನು ಆ ದೇಶದ ಸಮ್ರಾಟನ ಮುಂದೆ ಕರೆತರಲಾಯಿತು. ಮುಂದಿನ ಸನ್ನಿವೇಶಗಳು ಮಿಂಚಿನ ವೇಗದಲ್ಲಿ ಬದಲಾದವು. ಇದ್ದಕ್ಕಿದ್ದಂತೆ ಆ ಸೆರೆಯಾಳು, ಆಗಿನ ಲೋಕದ ಅತ್ಯಂತ ಶಕ್ತಿಶಾಲಿ ಸಮ್ರಾಟನಿಗೆ ಸೇವೆಮಾಡುವ ಸುಯೋಗವನ್ನು ಪಡೆದುಕೊಂಡನು. ಈ ಸಾಮಾನ್ಯ ಸೆರೆಯಾಳು, ಅತ್ಯುನ್ನತ ಸ್ಥಾನಮಾನಗಳನ್ನು ಪಡೆದು, ಉಚ್ಚ ಪದವಿಯಲ್ಲಿ ಇರಿಸಲ್ಪಟ್ಟನು. ಈ ಹಿಂದೆ ಸೆರೆಯಾಳಾಗಿದ್ದು, ಬೇಡಿಗಳಿಂದ ಬಿಗಿಯಲ್ಪಟ್ಟಿದ್ದ ಯೋಸೇಫನು, ಈಗ ಒಬ್ಬ ಮಹಾನ್ ಸಮ್ರಾಟನೊಂದಿಗೆ ನಡೆದನು!—ಆದಿಕಾಂಡ 41:14, 39-43; ಕೀರ್ತನೆ 105:17, 18.
2 ಆದರೆ ಇಂದು, ಐಗುಪ್ತದ ಫರೋಹನಿಗೆ ಯಾವುದೇ ರೀತಿಯಲ್ಲಿ ಹೋಲಿಕೆಯಾಗದ ಸರ್ವಶ್ರೇಷ್ಠನಾಗಿರುವ ಯೆಹೋವನಿಗೆ ಸೇವೆಸಲ್ಲಿಸುವ ಅವಕಾಶ ಮಾನವರಿಗಿದೆ. ಈ ಇಡೀ ವಿಶ್ವಕ್ಕೆ ಪರಮಾಧಿಕಾರಿಯಾದ ಯೆಹೋವನು ತನಗೆ ಸೇವೆಸಲ್ಲಿಸುವಂತೆ ನಮ್ಮೆಲ್ಲರನ್ನು ಆಮಂತ್ರಿಸುತ್ತಾನೆ ಎಂಬುದನ್ನು ಸ್ವಲ್ಪ ಕಲ್ಪನೆ ಮಾಡಿನೋಡಿ. ಈ ಸರ್ವಶಕ್ತ ದೇವರಿಗೆ ಸೇವೆಸಲ್ಲಿಸುವುದು ಮತ್ತು ಆತನೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದು ಎಂತಹ ಅತ್ಯಮೂಲ್ಯವಾದ ಸುಯೋಗವಾಗಿದೆ! ಶಾಸ್ತ್ರವಚನಗಳಲ್ಲಿ, ಆತನನ್ನು ಮಹೋನ್ನತ ಶಕ್ತಿ, ತೇಜೋಮಯವಾದ ವೈಭವ, ಪ್ರಸನ್ನಚಿತ್ತ, ಸೌಂದರ್ಯ, ಮತ್ತು ಸ್ನೇಹಪರ ಗುಣಗಳೊಂದಿಗೆ ಸಂಬಂಧಿಸಲಾಗಿದೆ. (ಯೆಹೆಜ್ಕೇಲ 1:26-28; ಪ್ರಕಟನೆ 4:1-3) ಆತನ ಎಲ್ಲ ವ್ಯವಹಾರಗಳಲ್ಲಿ ಪ್ರೀತಿಯು ಪ್ರಧಾನವಾಗಿ ಕಂಡುಬರುತ್ತದೆ. (1 ಯೋಹಾನ 4:8) ಯೆಹೋವನೆಂದಿಗೂ ಸುಳ್ಳಾಡುವುದಿಲ್ಲ. (ಅರಣ್ಯಕಾಂಡ 23:19) ಮತ್ತು ಆತನಿಗೆ ನಿಷ್ಠಾವಂತರಾಗಿರುವವರನ್ನು ಎಂದೂ ನಿರಾಶೆಗೊಳಿಸುವುದಿಲ್ಲ. (ಕೀರ್ತನೆ 18:25) ಯೆಹೋವನ ನೀತಿಯ ಆಜ್ಞೆಗಳಿಗನುಸಾರ ನಾವು ನಡೆದುಕೊಳ್ಳುವಲ್ಲಿ, ಈಗಲೂ ಸಂತೋಷಕರ ಹಾಗೂ ಅರ್ಥಭರಿತ ಜೀವಿತಗಳನ್ನು ನಾವು ಅನುಭವಿಸಬಲ್ಲೆವು ಮತ್ತು ಭವಿಷ್ಯತ್ತಿಗಾಗಿ ನಿತ್ಯಜೀವದ ಪ್ರತೀಕ್ಷೆಯು ನಮಗಿರುವುದು. (ಯೋಹಾನ 17:3) ಇಂತಹ ಆಶೀರ್ವಾದಗಳು ಮತ್ತು ಸುಯೋಗಗಳಿಗೆ ಹೋಲುವ ಯಾವುದನ್ನೂ ಯಾವ ಮಾನವ ಅರಸನೂ ನೀಡಸಾಧ್ಯವಿಲ್ಲ.
3. ಯಾವ ವಿಧದಲ್ಲಿ ನೋಹನು ‘ಸತ್ಯ ದೇವರೊಂದಿಗೆ ನಡೆದನು’?
3 ಬಹಳ ಸಮಯದ ಹಿಂದೆ, ಪೂರ್ವಜನಾದ ನೋಹನು ದೇವರ ಚಿತ್ತ ಹಾಗೂ ಉದ್ದೇಶಕ್ಕನುಸಾರವಾಗಿ ಜೀವಿಸಲು ದೃಢವಾಗಿ ನಿಶ್ಚಯಿಸಿಕೊಂಡಿದ್ದನು. ಅವನ ಕುರಿತು, ಬೈಬಲು ಹೇಳುವುದು: “ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.” (ಆದಿಕಾಂಡ 6:9) ಇದರ ಅರ್ಥ, ನೋಹನು ಯೆಹೋವನೊಂದಿಗೆ ಅಕ್ಷರಶಃ ನಡೆದನು ಎಂಬುದಲ್ಲ, ಏಕೆಂದರೆ ಯಾವ ಮನುಷ್ಯನೂ “ದೇವರನ್ನು . . . ಎಂದೂ ಕಂಡಿಲ್ಲ.” (ಯೋಹಾನ 1:18) ಬದಲಿಗೆ, ದೇವರು ಅವನಿಗೆ ಏನನ್ನು ಮಾಡುವಂತೆ ಆಜ್ಞಾಪಿಸಿದನೊ, ಅದನ್ನು ಪೂರ್ಣವಾಗಿ ಮಾಡುವ ಅರ್ಥದಲ್ಲಿ ನೋಹನು ದೇವರೊಂದಿಗೆ ನಡೆದನು. ಯೆಹೋವನ ಚಿತ್ತವನ್ನು ನೆರವೇರಿಸಲಿಕ್ಕಾಗಿ ನೋಹನು ತನ್ನ ಜೀವಿತವನ್ನು ಸಮರ್ಪಿಸಿಕೊಂಡಿದ್ದ ಕಾರಣ, ಅವನು ಸರ್ವಶಕ್ತ ದೇವರೊಂದಿಗೆ ಹಾರ್ದಿಕಭಾವದ ಹಾಗೂ ಅನ್ಯೋನ್ಯ ಸಂಬಂಧವನ್ನು ಅನುಭವಿಸಿದನು. ನೋಹನಂತೆ ಇಂದು ಲಕ್ಷಾಂತರ ಜನರು, ಯೆಹೋವನ ಸಲಹೆ ಮತ್ತು ಉಪದೇಶಕ್ಕನುಸಾರ ಜೀವಿಸುವ ಮೂಲಕ, ‘ದೇವರೊಂದಿಗೆ ನಡೆಯುತ್ತಿದ್ದಾರೆ.’ ಅಂತಹ ಒಂದು ಮಾರ್ಗಕ್ರಮವನ್ನು ವ್ಯಕ್ತಿಯೊಬ್ಬನು ಹೇಗೆ ಆರಂಭಿಸಸಾಧ್ಯವಿದೆ?
ಯಥಾರ್ಥ ಜ್ಞಾನವು ಅತ್ಯಾವಶ್ಯಕವಾಗಿದೆ
4. ಯೆಹೋವನು ತನ್ನ ಜನರಿಗೆ ಹೇಗೆ ಉಪದೇಶ ನೀಡುತ್ತಾನೆ?
4 ಯೆಹೋವನೊಂದಿಗೆ ನಡೆಯಲಿಕ್ಕಾಗಿ, ನಾವು ಮೊದಲು ಆತನ ಕುರಿತು ತಿಳಿದುಕೊಳ್ಳಬೇಕು. ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.” (ಯೆಶಾಯ 2:2, 3) ಹೌದು, ತನ್ನ ಮಾರ್ಗಗಳಲ್ಲಿ ನಡೆಯಲು ಪ್ರಯತ್ನಿಸುವವರೆಲ್ಲರಿಗೂ, ಯೆಹೋವನು ಉಪದೇಶಿಸುವನೆಂಬ ಭರವಸೆ ನಮಗಿರಸಾಧ್ಯವಿದೆ. ಆತನು ತನ್ನ ವಾಕ್ಯವಾದ ಬೈಬಲನ್ನು ಒದಗಿಸಿದ್ದಾನೆ ಮತ್ತು ಅದನ್ನು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯ ಮಾಡಲು ಆತನು ಬಳಸುವ ಒಂದು ಮಾಧ್ಯಮವು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವೇ ಆಗಿದೆ. (ಮತ್ತಾಯ 24:45-47) ಯೆಹೋವನು ಈ ‘ನಂಬಿಗಸ್ತ ಆಳನ್ನು,’ ಬೈಬಲಾಧಾರಿತ ಪ್ರಕಾಶನಗಳು, ಕ್ರೈಸ್ತ ಕೂಟಗಳು, ಮತ್ತು ಉಚಿತ ಮನೆ ಬೈಬಲ್ ಅಧ್ಯಯನದ ಏರ್ಪಾಡಿನ ಮೂಲಕ, ಆತ್ಮಿಕ ಉಪದೇಶವನ್ನು ಒದಗಿಸಲಿಕ್ಕಾಗಿ ಉಪಯೋಗಿಸುತ್ತಾನೆ. ಮತ್ತು ಪವಿತ್ರಾತ್ಮದ ಮೂಲಕವೂ ತನ್ನ ವಾಕ್ಯವನ್ನು ಅರ್ಥಮಾಡಿಕೊಳ್ಳುವಂತೆ ದೇವರು ತನ್ನ ಜನರಿಗೆ ಸಹಾಯ ಮಾಡುತ್ತಾನೆ.—1 ಕೊರಿಂಥ 2:10-16.
5. ಶಾಸ್ತ್ರೀಯ ಸತ್ಯವು ಏಕೆ ಅಷ್ಟೊಂದು ಅಮೂಲ್ಯವಾಗಿದೆ?
5 ಬೈಬಲ್ ಸತ್ಯಕ್ಕಾಗಿ ನಾವು ಹಣ ತೆರದಿದ್ದರೂ, ಅದು ಅಮೂಲ್ಯವಾಗಿದೆ. ನಾವು ದೇವರ ವಾಕ್ಯವನ್ನು ಅಭ್ಯಾಸಿಸಿದಂತೆ, ಆತನ ಹೆಸರು, ವ್ಯಕ್ತಿತ್ವ, ಉದ್ದೇಶ, ಮತ್ತು ಮಾನವರೊಂದಿಗೆ ಆತನು ವ್ಯವಹರಿಸುವ ರೀತಿಯ ಕುರಿತು ಕಲಿಯುತ್ತೇವೆ. ಮತ್ತು ಈ ಕೆಳಗೆ ಕಂಡುಬರುವ, ಜೀವಿತದ ಮೂಲಭೂತ ಪ್ರಶ್ನೆಗಳಿಗೆ ನಾವು ಸ್ಪಷ್ಟವಾದ ಉತ್ತರಗಳನ್ನೂ ಕಂಡುಕೊಳ್ಳುತ್ತೇವೆ: ನಾವು ಏಕೆ ಇಲ್ಲಿದ್ದೇವೆ? ದೇವರು ಕಷ್ಟಾನುಭವಕ್ಕೆ ಏಕೆ ಅನುಮತಿ ನೀಡುತ್ತಾನೆ? ಭವಿಷ್ಯತ್ತಿನಲ್ಲಿ ಏನು ಕಾದಿದೆ? ನಾವು ಏಕೆ ವೃದ್ಧರಾಗಿ ಸಾಯುತ್ತೇವೆ? ಮರಣಾನಂತರದ ಜೀವಿತವಿದೆಯೊ? ಅಲ್ಲದೆ, ನಮ್ಮ ವಿಷಯದಲ್ಲಿ ದೇವರ ಚಿತ್ತವು ಏನಾಗಿದೆ, ಅಂದರೆ ಆತನನ್ನು ಸಂಪೂರ್ಣವಾಗಿ ಮೆಚ್ಚಿಸಲು ನಾವು ಹೇಗೆ ನಡೆಯಬೇಕೆಂಬುದನ್ನೂ ಕಲಿಯುತ್ತೇವೆ. ಆತನ ಕಟ್ಟಳೆಗಳು ನ್ಯಾಯಸಮ್ಮತವೂ, ಅವುಗಳಿಗನುಸಾರ ನಾವು ಜೀವಿಸುವಲ್ಲಿ ಅವು ಹೆಚ್ಚು ಪ್ರಯೋಜನಕರವೂ ಆಗಿವೆಯೆಂದು ನಾವು ಕಲಿಯುತ್ತೇವೆ. ದೇವರ ಉಪದೇಶವಿಲ್ಲದೆ, ನಾವು ಇಂತಹ ವಿಷಯಗಳನ್ನು ಎಂದಿಗೂ ತಿಳಿದುಕೊಳ್ಳಸಾಧ್ಯವಿರುತ್ತಿರಲಿಲ್ಲ.
6. ಬೈಬಲಿನ ಯಥಾರ್ಥ ಜ್ಞಾನವು ಯಾವ ಬದಲಾವಣೆಗಳನ್ನು ಮಾಡುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ?
6 ಬೈಬಲ್ ಸತ್ಯವು ಶಕ್ತಿಶಾಲಿಯಾಗಿದ್ದು, ನಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ನಮ್ಮನ್ನು ಪ್ರೇರಿಸುತ್ತದೆ. (ಇಬ್ರಿಯ 4:12) ಶಾಸ್ತ್ರಗಳ ಜ್ಞಾನವನ್ನು ಪಡೆದುಕೊಳ್ಳುವ ಮುಂಚೆ, ನಾವು “ಇಹಲೋಕಾಚಾರಕ್ಕೆ ಅನುಸಾರವಾಗಿ” ಮಾತ್ರ ಜೀವಿಸಸಾಧ್ಯವಿತ್ತು. (ಎಫೆಸ 2:2) ಆದರೆ ದೇವರ ವಾಕ್ಯದ ಯಥಾರ್ಥ ಜ್ಞಾನವು, ನಮಗಾಗಿ ಒಂದು ಭಿನ್ನವಾದ ಜೀವನಕ್ರಮವನ್ನು ರೂಪಿಸುತ್ತದೆ. ಇದರಿಂದಾಗಿ ನಾವು, “ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸ”ಸಾಧ್ಯವಿದೆ. (ಕೊಲೊಸ್ಸೆ 1:10) ಆದುದರಿಂದ, ಇಡೀ ವಿಶ್ವದಲ್ಲೇ ಅತ್ಯಂತ ಮಹೋನ್ನತ ವ್ಯಕ್ತಿಯಾದ ಯೆಹೋವನೊಂದಿಗೆ ಆರಂಭದ ಹೆಜ್ಜೆಗಳನ್ನು ಹಾಕುತ್ತಾ ನಡೆಯುವುದು ಎಂತಹ ಆನಂದವಾಗಿದೆ!—ಲೂಕ 11:28.
ಎರಡು ಪ್ರಮುಖ ಹೆಜ್ಜೆಗಳು—ಸಮರ್ಪಣೆ ಮತ್ತು ದೀಕ್ಷಾಸ್ನಾನ
7. ನಾವು ದೇವರ ವಾಕ್ಯವನ್ನು ಅಭ್ಯಾಸಿಸಿದಂತೆ, ಮಾನವ ನಾಯಕತ್ವದ ಕುರಿತು ಯಾವ ಸತ್ಯವು ಸ್ಪಷ್ಟವಾಗುತ್ತದೆ?
7 ಬೈಬಲಿನ ತಿಳುವಳಿಕೆ ನಮ್ಮಲ್ಲಿ ಹೆಚ್ಚಾದಂತೆ, ನಾವು ಮಾನವ ಕಾರ್ಯಗಳನ್ನು ಮತ್ತು ನಮ್ಮ ಸ್ವಂತ ಜೀವಿತಗಳನ್ನು, ದೇವರ ವಾಕ್ಯದ ಆತ್ಮಿಕ ಬೆಳಕಿನಲ್ಲಿ ಪರಿಶೀಲಿಸತೊಡಗುತ್ತೇವೆ. ಒಂದು ಪ್ರಾಮುಖ್ಯವಾದ ಸತ್ಯವು ಆಗ ಸ್ಪಷ್ಟವಾಗುತ್ತದೆ. ಆ ಸತ್ಯವು, ಬಹಳ ಕಾಲದ ಹಿಂದೆಯೇ ಪ್ರವಾದಿಯಾದ ಯೆರೆಮೀಯನಿಂದ ವ್ಯಕ್ತಗೊಳಿಸಲ್ಪಟ್ಟಿತು. ಅವನು ಬರೆದುದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಮಾನವರಾದ ನಮ್ಮೆಲ್ಲರಿಗೂ ದೇವರ ಮಾರ್ಗದರ್ಶನದ ಅಗತ್ಯವಿದೆ.
8. (ಎ) ದೇವರಿಗೆ ಸಮರ್ಪಣೆಯನ್ನು ಮಾಡಿಕೊಳ್ಳುವಂತೆ ಯಾವುದು ಜನರನ್ನು ಪ್ರೇರಿಸುತ್ತದೆ? (ಬಿ) ಕ್ರೈಸ್ತ ಸಮರ್ಪಣೆಯು ಏನಾಗಿದೆ?
8 ಈ ಮೂಲಭೂತ ಸತ್ಯವನ್ನು ನಾವು ಗ್ರಹಿಸಿಕೊಂಡಾಗ, ಅದು ಯೆಹೋವನಿಂದ ಮಾರ್ಗದರ್ಶನವನ್ನು ಕೋರುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಮತ್ತು ದೇವರಿಗಾಗಿರುವ ನಮ್ಮ ಪ್ರೀತಿಯು, ನಮ್ಮ ಜೀವಿತವನ್ನು ಆತನಿಗೆ ಸಮರ್ಪಿಸುವಂತೆ ನಮ್ಮನ್ನು ಹುರಿದುಂಬಿಸುವುದು. ದೇವರಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದೆಂದರೆ, ಪ್ರಾರ್ಥನೆಯಲ್ಲಿ ಆತನನ್ನು ಸಮೀಪಿಸಿ, ನಮ್ಮ ಜೀವಿತವನ್ನು ಆತನ ಸೇವೆಗಾಗಿ ಮತ್ತು ಆತನ ಮಾರ್ಗಗಳಲ್ಲಿ ನಂಬಿಗಸ್ತರಾಗಿ ನಡೆಯಲು ವಿನಿಯೋಗಿಸುವೆವು ಎಂದು ಗಂಭೀರವಾಗಿ ಪ್ರತಿಜ್ಞೆಮಾಡುವುದೇ ಆಗಿದೆ. ಹೀಗೆ ಮಾಡುವಾಗ ನಾವು ಯೇಸುವಿನ ಉದಾಹರಣೆಯನ್ನು ಅನುಕರಿಸುತ್ತೇವೆ. ಅವನು ದೃಢಸಂಕಲ್ಪದಿಂದ ದೈವಿಕ ಚಿತ್ತವನ್ನು ನೆರವೇರಿಸಲು, ತನ್ನನ್ನು ಯೆಹೋವನಿಗೆ ಅರ್ಪಿಸಿಕೊಂಡನು.—ಇಬ್ರಿಯ 10:7.
9. ಜನರು ಏಕೆ ತಮ್ಮ ಜೀವಿತವನ್ನು ಯೆಹೋವನಿಗೆ ಸಮರ್ಪಿಸುತ್ತಾರೆ?
9 ಯೆಹೋವ ದೇವರು ತನಗೆ ಸಮರ್ಪಣೆಯನ್ನು ಮಾಡುವಂತೆ ಯಾರನ್ನೂ ಒತ್ತಾಯಿಸುವುದಿಲ್ಲ ಅಥವಾ ನಿರ್ಬಂಧಪಡಿಸುವುದಿಲ್ಲ. (ಹೋಲಿಸಿ 2 ಕೊರಿಂಥ 9:7.) ಅಲ್ಲದೆ, ಯಾವುದೊ ಒಂದು ರೀತಿಯ ತಾತ್ಕಾಲಿಕ ಭಾವಪರವಶಕ್ಕೊಳಗಾಗಿ, ವ್ಯಕ್ತಿಯೊಬ್ಬನು ತನ್ನ ಜೀವಿತವನ್ನು ತನಗೆ ಸಮರ್ಪಿಸುವಂತೆ ದೇವರು ಅಪೇಕ್ಷಿಸುವುದಿಲ್ಲ. ದೀಕ್ಷಾಸ್ನಾನ ಹೊಂದುವ ಮುಂಚೆ, ವ್ಯಕ್ತಿಯೊಬ್ಬನು ಈಗಾಗಲೇ ಒಬ್ಬ ಶಿಷ್ಯನಾಗಿರಬೇಕು. ಮತ್ತು ಅದಕ್ಕಾಗಿ ಜ್ಞಾನವನ್ನು ಪಡೆದುಕೊಳ್ಳಲು ಶ್ರದ್ಧಾಪೂರ್ವಕ ಪ್ರಯತ್ನದ ಅಗತ್ಯವಿದೆ. (ಮತ್ತಾಯ 28:19, 20) ಈಗಾಗಲೇ ದೀಕ್ಷಾಸ್ನಾನ ಪಡೆದುಕೊಂಡಿರುವವರು, ‘ತಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿ, ವಿವೇಕಪೂರ್ವಕವಾದ ಆರಾಧನೆಯನ್ನು’ ಸಲ್ಲಿಸುವಂತೆ ಪೌಲನು ಉತ್ತೇಜಿಸಿದನು. (ರೋಮಾಪುರ 12:1) ಅದೇ ರೀತಿಯಲ್ಲಿ ನಮ್ಮ ವಿವೇಚನಾಶಕ್ತಿಯನ್ನು ಉಪಯೋಗಿಸುತ್ತಾ, ನಾವು ಯೆಹೋವ ದೇವರಿಗೆ ಸಮರ್ಪಣೆಯನ್ನು ಮಾಡುತ್ತೇವೆ. ಇದರಲ್ಲಿ ಏನು ಒಳಗೂಡಿದೆ ಎಂಬುದನ್ನು ತಿಳಿದುಕೊಂಡು, ಆ ವಿಷಯದಲ್ಲಿ ಜಾಗರೂಕವಾಗಿ ವಿವೇಚಿಸಿದ ಬಳಿಕ, ನಾವು ನಮ್ಮ ಜೀವಿತವನ್ನು ದೇವರಿಗೆ ಸ್ವಇಚ್ಛೆಯಿಂದ ಮತ್ತು ಸಂತೋಷದಿಂದ ಸಮರ್ಪಿಸಿಕೊಳ್ಳುತ್ತೇವೆ.—ಕೀರ್ತನೆ 110:3.
10. ಸರ್ಮಪಣೆ ಮತ್ತು ದೀಕ್ಷಾಸ್ನಾನಕ್ಕಿರುವ ಸಂಬಂಧವೇನು?
10 ಆತನ ಮಾರ್ಗಗಳಲ್ಲಿ ನಡೆಯುವ ನಮ್ಮ ದೃಢಸಂಕಲ್ಪವನ್ನು ವೈಯಕ್ತಿಕವಾಗಿ ಪ್ರಾರ್ಥನೆಯಲ್ಲಿ ದೇವರಿಗೆ ತಿಳಿಯಪಡಿಸಿದ ಬಳಿಕ, ಮುಂದಿನ ಹೆಜ್ಜೆಯನ್ನು ತೆಗೆದುಕೊಳ್ಳುತ್ತೇವೆ. ನೀರಿನ ದೀಕ್ಷಾಸ್ನಾನದ ಮೂಲಕ ನಾವು ನಮ್ಮ ಸಮರ್ಪಣೆಯನ್ನು ಬಹಿರಂಗಗೊಳಿಸುತ್ತೇವೆ. ದೇವರ ಚಿತ್ತವನ್ನು ಮಾಡಲು ನಾವು ವಚನಬದ್ಧರಾಗಿದ್ದೇವೆ ಎಂಬುದನ್ನು ಇದು ಬಹಿರಂಗವಾಗಿ ಪ್ರಕಟಪಡಿಸುತ್ತದೆ. ತನ್ನ ಭೂಶುಶ್ರೂಷೆಯ ಆರಂಭದಲ್ಲಿ, ಯೇಸು ಯೋಹಾನನಿಂದ ದೀಕ್ಷಾಸ್ನಾನವನ್ನು ಮಾಡಿಸಿಕೊಳ್ಳುವ ಮೂಲಕ ನಮಗೆ ಒಂದು ಮಾದರಿಯನ್ನಿಟ್ಟನು. (ಮತ್ತಾಯ 3:13-17) ತದನಂತರ, ಶಿಷ್ಯರನ್ನು ಮಾಡಿ ಅವರಿಗೆ ದೀಕ್ಷಾಸ್ನಾನ ನೀಡುವಂತೆ ಯೇಸು ತನ್ನ ಹಿಂಬಾಲಕರಿಗೆ ಆದೇಶವನ್ನಿತ್ತನು. ಆದುದರಿಂದ, ಯೆಹೋವನೊಂದಿಗೆ ನಡೆಯಲು ಇಚ್ಛಿಸುವ ಯಾವನೇ ವ್ಯಕ್ತಿಗೆ, ಸಮರ್ಪಣೆ ಮತ್ತು ದೀಕ್ಷಾಸ್ನಾನ ಅತ್ಯಾವಶ್ಯಕ ಹೆಜ್ಜೆಗಳಾಗಿವೆ.
11, 12. (ಎ) ದೀಕ್ಷಾಸ್ನಾನವನ್ನು ಹೇಗೆ ವಿವಾಹಕ್ಕೆ ಹೋಲಿಸಸಾಧ್ಯವಿದೆ? (ಬಿ) ಯೆಹೋವನೊಂದಿಗಿನ ನಮ್ಮ ಸಂಬಂಧ ಹಾಗೂ ಪತಿಪತ್ನಿಯರಲ್ಲಿರುವ ಸಂಬಂಧದ ವಿಷಯದಲ್ಲಿ ಯಾವ ಹೋಲಿಕೆಯನ್ನು ಗುರುತಿಸಸಾಧ್ಯವಿದೆ?
11 ಯೇಸು ಕ್ರಿಸ್ತನ ಸಮರ್ಪಿತ ಹಾಗೂ ದೀಕ್ಷಾಸ್ನಾನ ಪಡೆದುಕೊಂಡ ಶಿಷ್ಯರಾಗುವುದು, ವಿವಾಹವಾಗುವುದಕ್ಕೆ ಸಮಾನವಾಗಿದೆ. ಅನೇಕ ದೇಶಗಳಲ್ಲಿ, ವಿವಾಹದಿನದ ಮೊದಲು ಅನೇಕ ವಿಷಯಗಳು ಸಂಭವಿಸುತ್ತವೆ. ಒಬ್ಬ ಪುರುಷ ಮತ್ತು ಸ್ತ್ರೀಯು ಸಂಧಿಸುತ್ತಾರೆ, ಒಬ್ಬರನ್ನೊಬ್ಬರು ತಿಳಿದುಕೊಳ್ಳುತ್ತಾರೆ ಮತ್ತು ಪ್ರೀತಿಸುತ್ತಾರೆ. ನಂತರ ವಿವಾಹ ನಿಶ್ಚಯವಾಗುತ್ತದೆ. ದಾಂಪತ್ಯವನ್ನು ಪ್ರವೇಶಿಸಿ, ಪತಿಪತ್ನಿಯರೋಪಾದಿ ಒಟ್ಟಿಗೆ ಜೀವಿಸಬೇಕೆಂದು ವೈಯಕ್ತಿಕವಾಗಿ ನಿರ್ಧರಿಸಲ್ಪಟ್ಟ ಸಂಗತಿಯನ್ನು ವಿವಾಹವು ಬಹಿರಂಗಗೊಳಿಸುತ್ತದೆ. ಆ ವಿಶೇಷ ಸಂಬಂಧದ ಆರಂಭವನ್ನು ವಿವಾಹವು ಬಹಿರಂಗವಾಗಿ ಗುರುತಿಸುತ್ತದೆ. ಆ ದಿನಾಂಕವು ವಿವಾಹದ ಆರಂಭವನ್ನು ಪ್ರಕಟಪಡಿಸುತ್ತದೆ. ಅದೇ ರೀತಿಯಲ್ಲಿ, ಯೆಹೋವನೊಂದಿಗೆ ಸಮರ್ಪಿತ ಸಂಬಂಧದಲ್ಲಿ ನಡೆಯಲಿಕ್ಕಾಗಿ ಮೀಸಲಾಗಿಟ್ಟ ಜೀವಿತದ ಆರಂಭವನ್ನು ದೀಕ್ಷಾಸ್ನಾನವು ಗುರುತಿಸುತ್ತದೆ.
12 ಮತ್ತೊಂದು ಹೋಲಿಕೆಯನ್ನು ಪರಿಗಣಿಸಿರಿ. ತಮ್ಮ ವಿವಾಹದ ತರುವಾಯ, ಪತಿಪತ್ನಿಯರಲ್ಲಿರುವ ಪ್ರೀತಿಯು ಗಾಢವೂ ಪರಿಪಕ್ವವೂ ಆಗಬೇಕು. ವಿವಾಹ ಸಂಗಾತಿಗಳಿಬ್ಬರೂ ಪರಸ್ಪರ ನಿಕಟರಾಗಲಿಕ್ಕಾಗಿ, ತಮ್ಮ ವೈವಾಹಿಕ ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಮತ್ತು ಬಲಪಡಿಸಲು ನಿಸ್ವಾರ್ಥ ಮನೋಭಾವದಿಂದ ಪ್ರಯಾಸಪಡಬೇಕು. ನಾವು ದೇವರೊಂದಿಗೆ ಒಂದು ವಿವಾಹ ಸಂಬಂಧದಲ್ಲಿ ಒಳಗೊಳ್ಳದಿದ್ದರೂ, ನಮ್ಮ ದೀಕ್ಷಾಸ್ನಾನದ ಬಳಿಕ ಯೆಹೋವನೊಂದಿಗೆ ಒಂದು ನಿಕಟ ಸಂಬಂಧವನ್ನು ಕಾಪಾಡಿಕೊಳ್ಳಲು ಪರಿಶ್ರಮಪಡಬೇಕು. ಆತನ ಚಿತ್ತವನ್ನು ಮಾಡಲು ನಾವು ಪಡುವ ಪರಿಶ್ರಮವನ್ನು ಆತನು ಗಮನಿಸುತ್ತಾನೆ ಮತ್ತು ಗಣ್ಯಮಾಡುತ್ತಾನೆ ಹಾಗೂ ನಮ್ಮ ಸಮೀಪಕ್ಕೆ ಬರುತ್ತಾನೆ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಶಿಷ್ಯನಾದ ಯಾಕೋಬನು ಬರೆದನು.—ಯಾಕೋಬ 4:8.
ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವುದು
13. ದೇವರೊಂದಿಗೆ ನಡೆಯುವ ವಿಷಯದಲ್ಲಿ, ನಾವು ಯಾರ ಮಾದರಿಯನ್ನು ಅನುಸರಿಸಬೇಕು?
13 ಯೆಹೋವನೊಂದಿಗೆ ನಡೆಯಲು, ನಾವು ಯೇಸು ಕ್ರಿಸ್ತನು ಇಟ್ಟ ಮಾದರಿಯನ್ನು ಅನುಸರಿಸಬೇಕು. ಅಪೊಸ್ತಲ ಪೇತ್ರನು ಬರೆದುದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಯೇಸು ಪರಿಪೂರ್ಣನಾಗಿದ್ದನು, ಆದರೆ ನಾವು ಅಪರಿಪೂರ್ಣರಾಗಿರುವುದರಿಂದ, ಅವನು ಇಟ್ಟ ಮಾದರಿಯನ್ನು ನಾವು ಪರಿಪೂರ್ಣವಾಗಿ ಅನುಕರಿಸಸಾಧ್ಯವಿಲ್ಲ. ಆದರೂ, ನಮ್ಮಿಂದ ಸಾಧ್ಯವಾದಷ್ಟನ್ನು ನಾವು ಮಾಡುವಂತೆ ಯೆಹೋವನು ನಿರೀಕ್ಷಿಸುತ್ತಾನೆ. ಸಮರ್ಪಿತ ಕ್ರೈಸ್ತರು ಅನುಕರಿಸಲು ಶ್ರಮಿಸಬೇಕಾದ ಯೇಸುವಿನ ಜೀವಿತ ಹಾಗೂ ಶುಶ್ರೂಷೆಯ ಐದು ವೈಶಿಷ್ಟ್ಯಗಳನ್ನು ನಾವು ಪರಿಗಣಿಸೋಣ.
14. ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಏನು ಒಳಗೂಡಿದೆ?
14 ಯೇಸುವಿಗೆ ದೇವರ ವಾಕ್ಯದ ಯಥಾರ್ಥ ಹಾಗೂ ಸಂಪೂರ್ಣ ಜ್ಞಾನವಿತ್ತು. ತನ್ನ ಶುಶ್ರೂಷೆಯ ಸಮಯದಲ್ಲಿ ಯೇಸು, ಪದೇ ಪದೇ ಹೀಬ್ರು ಶಾಸ್ತ್ರಗಳಿಂದ ಉಲ್ಲೇಖಿಸಿ ಮಾತನಾಡಿದನು. (ಲೂಕ 4:4, 8) ಆ ದಿನದ ದುಷ್ಟ ಧಾರ್ಮಿಕ ನಾಯಕರೂ ಶಾಸ್ತ್ರಗಳಿಂದ ಉಲ್ಲೇಖಿಸಿ ಮಾತನಾಡಿದರು. (ಮತ್ತಾಯ 22:23, 24) ಆದರೆ ವ್ಯತ್ಯಾಸವು ಏನಾಗಿತ್ತೆಂದರೆ, ಯೇಸು ಶಾಸ್ತ್ರಗಳ ಅರ್ಥವನ್ನು ಗ್ರಹಿಸಿ, ಅವುಗಳನ್ನು ತನ್ನ ಜೀವಿತದಲ್ಲಿ ಅನ್ವಯಿಸಿಕೊಂಡನು. ಅವನಿಗೆ ಧರ್ಮಶಾಸ್ತ್ರದ ನಿಯಮಗಳು ಮಾತ್ರವಲ್ಲ, ಅವುಗಳ ನಿಜಾರ್ಥದ ಜ್ಞಾನವೂ ಇತ್ತು. ನಾವು ಕ್ರಿಸ್ತನ ಉದಾಹರಣೆಯನ್ನು ಅನುಸರಿಸಿದಂತೆ, ದೇವರ ವಾಕ್ಯದ ನಿಜಾರ್ಥವನ್ನು ಗ್ರಹಿಸಿಕೊಳ್ಳುತ್ತಾ, ಅದನ್ನು ಅರ್ಥಮಾಡಿಕೊಳ್ಳಲು ಪ್ರಯಾಸಪಡಬೇಕು. ಹೀಗೆ ಮಾಡುವ ಮೂಲಕ, ನಾವು ‘ಸತ್ಯವಾಕ್ಯವನ್ನು ಸರಿಯಾಗಿ ನಿರ್ವಹಿಸಲು’ ಶಕ್ತರಾಗಿರುವ ಮತ್ತು ದೇವರ ಸಮ್ಮತಿಯನ್ನು ಹೊಂದಿರುವ ಸೇವಕರಾಗಬಹುದು.—2 ತಿಮೊಥೆಯ 2:15.
15. ದೇವರ ಕುರಿತು ಮಾತಾಡುವುದರಲ್ಲಿ ಯೇಸು ಯಾವ ರೀತಿಯ ಮಾದರಿಯನ್ನಿಟ್ಟನು?
15 ಯೇಸು ಕ್ರಿಸ್ತನು ತನ್ನ ಸ್ವರ್ಗೀಯ ತಂದೆಯ ಕುರಿತು ಇತರರಿಗೆ ತಿಳಿಯಪಡಿಸಿದನು. ದೇವರ ವಾಕ್ಯದ ಕುರಿತಾದ ಜ್ಞಾನವನ್ನು ಯೇಸು ತನ್ನಲ್ಲಿಯೇ ಇಟ್ಟುಕೊಳ್ಳಲಿಲ್ಲ. ಅವನ ವೈರಿಗಳೂ ಅವನನ್ನು “ಬೋಧಕನೇ” ಎಂಬುದಾಗಿ ಸಂಬೋಧಿಸಿದರು. ಏಕೆಂದರೆ, ಅವನು ಹೋದಲ್ಲೆಲ್ಲಾ ಯೆಹೋವನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ಇತರರೊಂದಿಗೆ ಮಾತಾಡಿದನು. (ಮತ್ತಾಯ 12:38) ಯೇಸು ಬಹಿರಂಗವಾಗಿ ದೇವಾಲಯದಲ್ಲಿ, ಸಭಾಮಂದಿರಗಳಲ್ಲಿ, ಪಟ್ಟಣಗಳಲ್ಲಿ, ಮತ್ತು ಹಳ್ಳಿಗಳಲ್ಲಿ ಪ್ರಚಾರಮಾಡಿದನು. (ಮಾರ್ಕ 1:39; ಲೂಕ 8:1; ಯೋಹಾನ 18:20) ಅವನು ಸಹಾನುಭೂತಿ ಮತ್ತು ದಯೆಯಿಂದ ಕಲಿಸಿ, ತಾನು ಯಾರಿಗೆ ಸಹಾಯ ಮಾಡಿದನೊ ಅವರಿಗೆ ಪ್ರೀತಿಯನ್ನು ತೋರಿಸಿದನು. (ಮತ್ತಾಯ 4:23) ಯೇಸುವಿನ ಉದಾಹರಣೆಯನ್ನು ಅನುಸರಿಸುವವರು ಕೂಡ, ಯೆಹೋವ ದೇವರ ಮತ್ತು ಆತನ ಅದ್ಭುತಕರ ಉದ್ದೇಶಗಳ ಕುರಿತು ಇತರರಿಗೆ ಕಲಿಸಲು ಅನೇಕ ಸ್ಥಳಗಳನ್ನು ಮತ್ತು ವಿಧಗಳನ್ನು ಕಂಡುಕೊಳ್ಳುತ್ತಾರೆ.
16. ಯೆಹೋವನ ಜೊತೆ ಆರಾಧಕರೊಂದಿಗೆ ಯೇಸುವಿನ ಸಂಬಂಧವು ಎಷ್ಟು ನಿಕಟವಾಗಿತ್ತು?
16 ಯೆಹೋವನನ್ನು ಆರಾಧಿಸಿದ ಇತರರೊಂದಿಗೆ ಯೇಸುವಿಗೆ ನಿಕಟವಾದ ಸಂಬಂಧವಿತ್ತು. ಒಂದು ಸಂದರ್ಭದಲ್ಲಿ ಯೇಸು ಜನರ ಸಮೂಹಗಳೊಂದಿಗೆ ಮಾತಾಡುತ್ತಿದ್ದಾಗ, ಅವನ ತಾಯಿ ಮತ್ತು ಅವಿಶ್ವಾಸಿ ತಮ್ಮಂದಿರು ಅವನೊಂದಿಗೆ ಮಾತಾಡಲು ಬಂದರು. ಬೈಬಲ್ ವೃತ್ತಾಂತವು ಹೀಗೆ ಹೇಳುತ್ತದೆ: “ಆಗ ಒಬ್ಬನು—ಇಗೋ, ನಿನ್ನ ತಾಯಿಯೂ ನಿನ್ನ ತಮ್ಮಂದಿರೂ ನಿನ್ನನ್ನು ಮಾತಾಡಿಸಬೇಕೆಂದು ಹೊರಗೆ ನಿಂತಿರುತ್ತಾರೆ ಅಂದನು. ಅದಕ್ಕಾತನು ಆ ಮಾತು ಹೇಳಿದವನಿಗೆ—ನನಗೆ ತಾಯಿ ಯಾರು? ನನಗೆ ಅಣ್ಣತಮ್ಮಂದಿರು ಯಾರು? ಎಂದು ಹೇಳಿ, ಶಿಷ್ಯರ ಕಡೆಗೆ ಕೈ ತೋರಿಸಿ—ಇಗೋ, ನನ್ನ ತಾಯಿ, ನನ್ನ ಅಣ್ಣತಮ್ಮಂದಿರು. ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು.” (ಮತ್ತಾಯ 12:47-50) ಯೇಸು ತನ್ನ ಕುಟುಂಬವನ್ನು ಅಲಕ್ಷಿಸಿದನೆಂಬುದನ್ನು ಇದು ಅರ್ಥೈಸುವುದಿಲ್ಲ, ಏಕೆಂದರೆ ಮುಂದಿನ ಘಟನೆಗಳು ಅದನ್ನು ಅಲ್ಲಗಳೆಯುತ್ತವೆ. (ಯೋಹಾನ 19:25-27) ಆದರೂ, ಜೊತೆ ವಿಶ್ವಾಸಿಗಳಿಗಾಗಿ ಯೇಸುವಿಗಿದ್ದ ಪ್ರೀತಿಯನ್ನು ಈ ವೃತ್ತಾಂತವು ಎತ್ತಿತೋರಿಸುತ್ತದೆ. ತದ್ರೀತಿಯಲ್ಲಿ ಇಂದು, ದೇವರೊಂದಿಗೆ ನಡೆಯುವವರು ಯೆಹೋವನ ಇತರ ಸೇವಕರ ಸಹವಾಸವನ್ನು ಬಯಸುತ್ತಾರೆ ಮತ್ತು ಅವರನ್ನು ಬಹಳವಾಗಿ ಪ್ರೀತಿಸುತ್ತಾರೆ.—1 ಪೇತ್ರ 4:8.
17. ತನ್ನ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡುವುದರ ಬಗ್ಗೆ ಯೇಸುವಿಗೆ ಹೇಗನಿಸಿತು, ಮತ್ತು ಅದು ನಮ್ಮನ್ನು ಹೇಗೆ ಪ್ರಭಾವಿಸಬೇಕು?
17 ದೈವಿಕ ಚಿತ್ತವನ್ನು ಮಾಡುವ ಮೂಲಕ, ಯೇಸು ತನ್ನ ಸ್ವರ್ಗೀಯ ತಂದೆಗಾಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದನು. ಸಕಲ ವಿಷಯಗಳಲ್ಲೂ ಯೇಸು ಯೆಹೋವನಿಗೆ ವಿಧೇಯನಾದನು. ಅವನು ಹೇಳಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ಕ್ರಿಸ್ತನು ಹೀಗೂ ಹೇಳಿದನು: “ನಾನು [ದೇವರಿಗೆ] ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡು”ತ್ತೇನೆ. (ಯೋಹಾನ 8:29) ಯೇಸು ತನ್ನ ಸ್ವರ್ಗೀಯ ತಂದೆಯನ್ನು ಎಷ್ಟು ಗಾಢವಾಗಿ ಪ್ರೀತಿಸಿದನೆಂದರೆ, “ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:8) ಇದರ ಪರಿಣಾಮವಾಗಿ, ಯೆಹೋವನು ಯೇಸುವನ್ನು ಹೇರಳವಾಗಿ ಆಶೀರ್ವದಿಸಿ, ಅಧಿಕಾರ ಮತ್ತು ಗೌರವದ ಸಂಬಂಧದಲ್ಲಿ ಅವನಿಗೆ ವಿಶ್ವದಲ್ಲೇ ದ್ವಿತೀಯ ಸ್ಥಾನವನ್ನು ನೀಡಿದನು. (ಫಿಲಿಪ್ಪಿ 2:9-11) ಯೇಸುವಿನಂತೆ, ನಾವು ದೇವರ ಆಜ್ಞೆಗಳನ್ನು ಕೈಕೊಂಡು, ಆತನ ಚಿತ್ತವನ್ನು ಮಾಡುವ ಮೂಲಕ, ಆತನಿಗಾಗಿರುವ ನಮ್ಮ ಪ್ರೀತಿಯನ್ನು ತೋರಿಸುತ್ತೇವೆ.—1 ಯೋಹಾನ 5:3.
18. ಪ್ರಾರ್ಥನೆಯ ವಿಷಯದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು?
18 ಯೇಸು ಪ್ರಾರ್ಥನಾಪರ ವ್ಯಕ್ತಿಯಾಗಿದ್ದನು. ತನ್ನ ದೀಕ್ಷಾಸ್ನಾನದ ಸಮಯದಲ್ಲಿ ಅವನು ಪ್ರಾರ್ಥಿಸಿದನು. (ಲೂಕ 3:21) ತನ್ನ 12 ಮಂದಿ ಅಪೊಸ್ತಲರ ಆಯ್ಕೆಮಾಡುವ ಮುಂಚೆ, ಅವನು ಇಡೀ ರಾತ್ರಿ ಪ್ರಾರ್ಥನೆಯಲ್ಲಿ ಕಳೆದನು. (ಲೂಕ 6:12, 13) ಹೇಗೆ ಪ್ರಾರ್ಥಿಸಬೇಕೆಂಬುದನ್ನು ಯೇಸು ತನ್ನ ಶಿಷ್ಯರಿಗೆ ಕಲಿಸಿದನು. (ಲೂಕ 11:1-4) ತನ್ನ ಮರಣದ ಹಿಂದಿನ ರಾತ್ರಿಯಂದು, ಅವನು ತನ್ನ ಶಿಷ್ಯರಿಗಾಗಿ ಮತ್ತು ಶಿಷ್ಯರೊಂದಿಗೆ ಪ್ರಾರ್ಥಿಸಿದನು. (ಯೋಹಾನ 17:1-26) ಪ್ರಾರ್ಥನೆ ಯೇಸುವಿನ ಜೀವಿತದ ಅವಿಭಾಜ್ಯ ಅಂಗವಾಗಿತ್ತು. ಮತ್ತು ನಾವು ಅವನ ಹಿಂಬಾಲಕರಾಗಿರುವುದರಿಂದ, ಅದು ನಮ್ಮ ಜೀವಿತಗಳಲ್ಲಿಯೂ ಅತಿಮುಖ್ಯವಾದ ಪಾತ್ರವನ್ನು ವಹಿಸಬೇಕು. ಸ್ವಲ್ಪ ಯೋಚಿಸಿ, ವಿಶ್ವದ ಪರಮಾಧಿಕಾರಿಯೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡುವುದು ಎಂತಹ ಒಂದು ಸುಯೋಗವಾಗಿದೆ! ಅಲ್ಲದೆ, ಯೆಹೋವನು ಅಂತಹ ಪ್ರಾರ್ಥನೆಗಳಿಗೆ ಉತ್ತರವನ್ನೂ ನೀಡುತ್ತಾನೆ. ಯೋಹಾನನು ಬರೆದುದು: “ಮತ್ತು ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು. ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಬೇಡಿದವುಗಳು ಆತನಿಂದ ನಮಗೆ ದೊರೆತವೆಂಬುದೂ ನಮಗೆ ಗೊತ್ತಾಗಿದೆ.”—1 ಯೋಹಾನ 5:14, 15.
19. (ಎ) ಯೇಸುವಿನ ಯಾವ ಗುಣಗಳನ್ನು ನಾವು ಅನುಕರಿಸಬೇಕು? (ಬಿ) ಯೇಸುವಿನ ಜೀವಿತ ಹಾಗೂ ಶುಶ್ರೂಷೆಯನ್ನು ಅಭ್ಯಾಸಿಸುವುದರಿಂದ, ನಮಗೆ ಯಾವ ರೀತಿಯ ಪ್ರಯೋಜನವಾಗುತ್ತದೆ?
19 ಯೇಸು ಕ್ರಿಸ್ತನ ಭೂಜೀವನ ಹಾಗೂ ಶುಶ್ರೂಷೆಯನ್ನು ನಿಕಟವಾಗಿ ಪರಿಶೀಲಿಸುವುದರಿಂದ, ನಾವು ನಿಜವಾಗಿಯೂ ಬಹಳಷ್ಟನ್ನು ಕಲಿಯಸಾಧ್ಯವಿದೆ. ಅವನು ಪ್ರದರ್ಶಿಸಿದಂತಹ ಗುಣಗಳಾದ, ಪ್ರೀತಿ, ದಯೆ, ಸಹಾನುಭೂತಿ, ಶಕ್ತಿ, ಧೈರ್ಯ, ಸಮತೂಕಭಾವ, ನ್ಯಾಯಪರತೆ, ದೀನಭಾವ ಮತ್ತು ನಿಸ್ವಾರ್ಥಭಾವದ ಕುರಿತು ಪರ್ಯಾಲೋಚಿಸಿರಿ. ನಾವು ಯೇಸುವಿನ ಕುರಿತು ಹೆಚ್ಚಿನ ವಿಷಯಗಳನ್ನು ಕಲಿತಂತೆ, ಅವನ ನಂಬಿಗಸ್ತ ಹಿಂಬಾಲಕರಾಗುವ ನಮ್ಮ ಅಪೇಕ್ಷೆಯು ಇನ್ನಷ್ಟು ಬಲವಾಗುತ್ತದೆ. ಯೇಸುವಿನ ಜ್ಞಾನವು ನಮ್ಮನ್ನು ಯೆಹೋವನ ಸಮೀಪಕ್ಕೂ ಸೆಳೆಯುತ್ತದೆ. ಎಷ್ಟೇ ಆದರೂ, ಯೇಸು ತನ್ನ ಸ್ವರ್ಗೀಯ ತಂದೆಯ ಪರಿಪೂರ್ಣ ಪ್ರತಿಬಿಂಬವಾಗಿದ್ದನು. ಅವನು ಯೆಹೋವನಿಗೆ ಎಷ್ಟು ನಿಕಟನಾಗಿದ್ದನೆಂದರೆ, “ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ” ಎಂದು ಅವನು ಹೇಳಸಾಧ್ಯವಿತ್ತು.—ಯೋಹಾನ 14:9.
ದೇವರು ನಿಮ್ಮನ್ನು ಬಲಪಡಿಸುವನೆಂಬ ಭರವಸೆ ನಿಮಗಿರಲಿ
20. ಯೆಹೋವನೊಂದಿಗೆ ನಡೆಯುವ ಸಂಬಂಧದಲ್ಲಿ ನಾವು ಭರವಸೆಯನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ?
20 ಮಕ್ಕಳು ನಡೆಯಲು ಕಲಿತುಕೊಳ್ಳುತ್ತಿರುವಾಗ, ಅವರ ಹೆಜ್ಜೆಗಳು ಸ್ಥಿರವಾಗಿರುವುದಿಲ್ಲ. ಅವರು ಭರವಸೆಯಿಂದ ನಡೆಯಲು ಹೇಗೆ ಕಲಿತುಕೊಳ್ಳುತ್ತಾರೆ? ಕೇವಲ ರೂಢಿ ಮತ್ತು ಪಟ್ಟುಹಿಡಿಯುವಿಕೆಯಿಂದಲೇ. ಹಾಗೆಯೇ, ಯೆಹೋವನೊಂದಿಗೆ ನಡೆಯುತ್ತಿರುವವರು ಭರವಸೆಯಿಂದ, ಸ್ಥಿರವಾದ ಹೆಜ್ಜೆಯನ್ನಿಡುತ್ತಾ ನಡೆಯಲು ಪ್ರಯಾಸಪಡುತ್ತಾರೆ. ಇದಕ್ಕೂ ಸಮಯ ಮತ್ತು ಪಟ್ಟುಹಿಡಿಯುವಿಕೆಯ ಅಗತ್ಯವಿದೆ. ದೇವರೊಂದಿಗೆ ನಡೆಯುವಾಗ ಪಟ್ಟುಹಿಡಿಯುವಿಕೆಯ ಮಹತ್ವವನ್ನು ಸೂಚಿಸುತ್ತಾ, ಪೌಲನು ಬರೆದುದು: “ಕಡೇ ಮಾತೇನಂದರೆ, ಸಹೋದರರೇ, . . . ನೀವು ಹೇಗೆ ನಡೆದು ದೇವರನ್ನು ಮೆಚ್ಚಿಸಬೇಕೋ ಅದನ್ನು ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದೀರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಬೇಡಿಕೊಂಡು ಯೇಸು ಕರ್ತನಲ್ಲಿ ಪ್ರಬೋಧಿಸುತ್ತೇವೆ.”—1 ಥೆಸಲೊನೀಕ 4:1, 2.
21. ನಾವು ಯೆಹೋವನೊಂದಿಗೆ ನಡೆದಂತೆ, ಯಾವ ಆಶೀರ್ವಾದಗಳಲ್ಲಿ ಆನಂದಿಸಸಾಧ್ಯವಿದೆ?
21 ನಾವು ದೇವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವಲ್ಲಿ, ನಾವು ಆತನೊಂದಿಗೆ ನಡೆಯುತ್ತಾ ಇರಲು ಆತನು ನಮಗೆ ಸಹಾಯ ಮಾಡುವನು. (ಯೆಶಾಯ 40:29-31) ಲೋಕವು ನೀಡುವ ಯಾವುದಕ್ಕೂ ಹೋಲಿಸಲಸಾಧ್ಯವಾದ ಆಶೀರ್ವಾದಗಳನ್ನು ಆತನು ತನ್ನ ಮಾರ್ಗದಲ್ಲಿ ನಡೆಯುತ್ತಿರುವವರಿಗೆ ದಯಪಾಲಿಸುತ್ತಾನೆ. ಯೆಹೋವನು ‘ನಮಗೆ ವೃದ್ಧಿಮಾರ್ಗವನ್ನು ಬೋಧಿಸಿ ನಾವು ನಡೆಯಬೇಕಾದ ದಾರಿಯಲ್ಲಿ ನಮ್ಮನ್ನು ನಡೆಯಿಸುವವನಾಗಿದ್ದಾನೆ. ನಾವು ಆತನ ಆಜ್ಞೆಗಳನ್ನು ಕೇಳುವುದಾದರೆ ಎಷ್ಟೋ ಚೆನ್ನಾಗಿರುತ್ತದೆ! ನಮ್ಮ ಸುಖವು ದೊಡ್ಡ ನದಿಯಂತೆಯೂ ನಮ್ಮ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಆಗುವವು.’ (ಯೆಶಾಯ 48:17, 18) ದೇವರೊಂದಿಗೆ ನಡೆಯಲಿಕ್ಕಾಗಿರುವ ಆಮಂತ್ರಣವನ್ನು ಸ್ವೀಕರಿಸುವ ಮೂಲಕ ಮತ್ತು ನಂಬಿಗಸ್ತಿಕೆಯಿಂದ ಹಾಗೆ ಮುಂದುವರಿಯುವ ಮೂಲಕ, ನಾವು ಸದಾಕಾಲ ಆತನೊಂದಿಗೆ ಶಾಂತಿಯ ಸಂಬಂಧದಲ್ಲಿ ಆನಂದಿಸಸಾಧ್ಯವಿದೆ.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
◻ ಸತ್ಯ ದೇವರೊಂದಿಗೆ ನಡೆಯುವುದು ಏಕೆ ಒಂದು ಸುಯೋಗವಾಗಿದೆ?
◻ ಯೆಹೋವನೊಂದಿಗೆ ನಡೆಯಲು, ವೈಯಕ್ತಿಕ ಅಧ್ಯಯನ, ಸಮರ್ಪಣೆ, ಮತ್ತು ದೀಕ್ಷಾಸ್ನಾನ ಏಕೆ ಅತ್ಯಾವಶ್ಯಕ ಹೆಜ್ಜೆಗಳಾಗಿವೆ?
◻ ನಾವು ಯೇಸುವಿನ ಹೆಜ್ಜೆಜಾಡಿನಲ್ಲಿ ಹೇಗೆ ನಡೆಯಬಲ್ಲೆವು?
◻ ನಾವು ಯೆಹೋವನೊಂದಿಗೆ ನಡೆದಂತೆ ಆತನು ನಮ್ಮನ್ನು ಬಲಪಡಿಸುವನೆಂದು ನಮಗೆ ಹೇಗೆ ಗೊತ್ತು?
[ಪುಟ 13 ರಲ್ಲಿರುವ ಚಿತ್ರ]
ದೇವರೊಂದಿಗೆ ನಡೆಯಲು, ವೈಯಕ್ತಿಕ ಅಧ್ಯಯನ, ಸಮರ್ಪಣೆ, ಮತ್ತು ದೀಕ್ಷಾಸ್ನಾನಗಳು ಆರಂಭದ ಹೆಜ್ಜೆಗಳಾಗಿವೆ