ನೀತಿಯ ಹೊಸ ಲೋಕದೊಳಗೆ ಬಿಡುಗಡೆ
“ಶಾಂತಿಯ ಸಮೃದ್ಧಿಯಲ್ಲಿ ಅವರು ನಿಶ್ಚಯವಾಗಿಯೂ ತಮ್ಮ ಪರಮ ಹರ್ಷವನ್ನು ಕಂಡುಕೊಳ್ಳುವರು.”—ಕೀರ್ತನೆ 37:11, NW.
1, 2. (ಎ) ನಮ್ಮ ಸಮಯದಲ್ಲಿನ ಯೆಹೋವನ ಬಿಡುಗಡೆಯು ಪ್ರಾಚೀನ ಸಮಯಗಳಲ್ಲಿನ ಬಿಡುಗಡೆಗಳಿಂದ ಹೇಗೆ ಭಿನ್ನವಾಗಿರುವುದು? (ಬಿ) ಯಾವ ರೀತಿಯ ಲೋಕದೊಳಗೆ ಯೆಹೋವನು ತನ್ನ ಜನರನ್ನು ಬರಮಾಡುವನು?
ಯೆಹೋವನು ಬಿಡುಗಡೆಯ ದೇವರು. ಪ್ರಾಚೀನ ಸಮಯಗಳಲ್ಲಿ, ಆತನು ತನ್ನ ಜನರನ್ನು ಅನೇಕ ಸಂದರ್ಭಗಳಲ್ಲಿ ಬಿಡುಗಡೆಗೊಳಿಸಿದನು. ಆ ಬಿಡುಗಡೆಗಳು ತಾತ್ಕಾಲಿಕವಾಗಿದ್ದವು, ಏಕೆಂದರೆ ಆ ಯಾವುದೇ ಸಂದರ್ಭಗಳಲ್ಲಿ ಯೆಹೋವನು ಸೈತಾನನ ಇಡೀ ಲೋಕದ ವಿರುದ್ಧ ತನ್ನ ತೀರ್ಪುಗಳನ್ನು ಶಾಶ್ವತವಾಗಿ ಜಾರಿಗೆ ತರಲಿಲ್ಲ. ಆದರೆ ನಮ್ಮ ದಿನದಲ್ಲಿ, ಯೆಹೋವನು ತನ್ನ ಸೇವಕರಿಗಾಗಿ ಅತ್ಯಂತ ಮಹತ್ತರವಾದ ಬಿಡುಗಡೆಯನ್ನು ಬೇಗನೆ ನಿರ್ವಹಿಸುವನು. ಈ ಸಲ ಆತನು ಭೂವ್ಯಾಪಕವಾಗಿರುವ ಸೈತಾನನ ವ್ಯವಸ್ಥೆಯ ಪ್ರತಿಯೊಂದು ಸುಳಿವನ್ನು ನಾಶಮಾಡಿ, ತನ್ನ ಸೇವಕರನ್ನು ಶಾಶ್ವತವಾದೊಂದು ನೀತಿಯ ಹೊಸ ಲೋಕದೊಳಗೆ ಬರಮಾಡುವನು.—2 ಪೇತ್ರ 2:9; 3:10-13.
2 ಯೆಹೋವನು ವಾಗ್ದಾನಿಸುವುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಮತ್ತು ಶಾಂತಿಯ ಸಮೃದ್ಧಿಯಲ್ಲಿ ಅವರು ನಿಶ್ಚಯವಾಗಿಯೂ ತಮ್ಮ ಪರಮ ಹರ್ಷವನ್ನು ಕಂಡುಕೊಳ್ಳುವರು.” (ಕೀರ್ತನೆ 37:10, 11, NW) ಎಷ್ಟು ಸಮಯದ ವರೆಗೆ? “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29; ಮತ್ತಾಯ 5:5) ಹಾಗಿದ್ದರೂ, ಅದು ಸಂಭವಿಸುವ ಮೊದಲು, ಈ ಲೋಕವು ಹಿಂದೆಂದೂ ಜ್ಞಾತವಾಗಿರದ ತೊಂದರೆಯ ಮಹತ್ತಾದ ಸಮಯವನ್ನು ಅನುಭವಿಸುವುದು.
“ಮಹಾ ಸಂಕಟ”
3. ಯೇಸು “ಮಹಾ ಸಂಕಟ”ವನ್ನು ಹೇಗೆ ವರ್ಣಿಸಿದನು?
3 1914ರಲ್ಲಿ ಈ ಲೋಕವು ತನ್ನ ‘ಕಡೇ ದಿವಸಗಳನ್ನು’ ಪ್ರವೇಶಿಸಿತು. (2 ತಿಮೊಥೆಯ 3:1-5, 13) ಅಂದಿನಿಂದ 83 ವರ್ಷಗಳು ಗತಿಸಿವೆ ಮತ್ತು ನಾವು ಅದರ ಅಂತ್ಯವನ್ನು ಸಮೀಪಿಸುತ್ತಿದ್ದೇವೆ. ಆ ಸಮಯದಲ್ಲಿ ಯೇಸು ಮುಂತಿಳಿಸಿದಂತೆ, ಈ ಮುಂದಿನ ವಿಷಯವು ಸಂಭವಿಸುವುದು: “ಅಂಥ ಸಂಕಟವು [“ಮಹಾ ಸಂಕಟ,” NW] ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ.” (ಮತ್ತಾಯ 24:21) ಹೌದು, ಸುಮಾರು ಐದು ಕೋಟಿ ಜೀವಗಳನ್ನು ಬಲಿತೆಗೆದುಕೊಂಡ IIನೆಯ ಜಾಗತಿಕ ಯುದ್ಧಕ್ಕಿಂತಲೂ ಅದು ಹೆಚ್ಚು ಕೆಟ್ಟದ್ದಾಗಿರುವುದು. ಲೋಕವನ್ನು ನಡುಗಿಸುವ ಎಂತಹ ಒಂದು ಸಮಯವು ವೇಗವಾಗಿ ಸಮೀಪಿಸುತ್ತಿದೆ!
4. ದೇವರ ತೀರ್ಪು ‘ಮಹಾ ಬಾಬೆಲಿನ’ ಮೇಲೆ ಏಕೆ ಬರುತ್ತದೆ?
4 ಆ “ಮಹಾ ಸಂಕಟ”ವು ಆಶ್ಚರ್ಯಕರ ತೀವ್ರತೆಯಿಂದ, “ಒಂದೇ ಗಳಿಗೆಯಲ್ಲಿ” ಬರುವುದು. (ಪ್ರಕಟನೆ 18:10) ಅದರ ಆರಂಭವು, ಯಾವುದನ್ನು ದೇವರ ವಾಕ್ಯವು “ಮಹಾ ಬಾಬೆಲ್” ಎಂಬುದಾಗಿ ಕರೆಯುತ್ತದೊ, ಆ ಎಲ್ಲ ಸುಳ್ಳು ಧರ್ಮದ ಮೇಲೆ ದೇವರ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯಿಂದ ಗುರುತಿಸಲ್ಪಡುವುದು. (ಪ್ರಕಟನೆ 17:1-6, 15) ಪ್ರಾಚೀನ ಬಾಬೆಲಿನ ಪ್ರಧಾನ ವೈಶಿಷ್ಟ್ಯವು ಸುಳ್ಳು ಧರ್ಮವಾಗಿತ್ತು. ಆಧುನಿಕ ಬಾಬೆಲು ತನ್ನ ಪ್ರಾಚೀನ ಪಡಿರೂಪದಂತಿದೆ ಮತ್ತು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನು ಪ್ರತಿನಿಧಿಸುತ್ತದೆ. ರಾಜಕೀಯ ಘಟಕಾಂಶಗಳೊಂದಿಗೆ ಒಪ್ಪಂದಮಾಡಿಕೊಳ್ಳುವ ಮೂಲಕ ಆಕೆ ಜಾರಸ್ತ್ರೀಯ ಪಾತ್ರವಹಿಸಿದ್ದಾಳೆ. ಆಕೆ ಅವುಗಳ ಯುದ್ಧಗಳನ್ನು ಬೆಂಬಲಿಸಿ, ವಿರುದ್ಧ ಪಕ್ಷಗಳ ಸೇನೆಗಳನ್ನು ಆಶೀರ್ವದಿಸಿದ್ದಾಳೆ. ಇದರಿಂದ ಒಂದೇ ಧರ್ಮದ ಜನರು ಒಬ್ಬರನ್ನೊಬ್ಬರು ಸಂಹರಿಸಿದ್ದಾರೆ. (ಮತ್ತಾಯ 26:51, 52; 1 ಯೋಹಾನ 4:20, 21) ಆಕೆ ತನ್ನ ಅನುಯಾಯಿಗಳ ಭ್ರಷ್ಟ ಆಚರಣೆಗಳನ್ನು ಅಲಕ್ಷಿಸಿ, ನಿಜ ಕ್ರೈಸ್ತರನ್ನು ಹಿಂಸಿಸಿದ್ದಾಳೆ.—ಪ್ರಕಟನೆ 18:5, 24.
5. “ಮಹಾ ಸಂಕಟ”ವು ಹೇಗೆ ಆರಂಭವಾಗುತ್ತದೆ?
5 ರಾಜಕೀಯ ಘಟಕಾಂಶಗಳು ‘ಮಹಾ ಬಾಬೆಲಿನ’ ಮೇಲೆ ಹಠಾತ್ತನೆ ಆಕ್ರಮಣ ಮಾಡುವಾಗ “ಮಹಾ ಸಂಕಟ”ವು ಆರಂಭವಾಗುತ್ತದೆ. ಅವರು “ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಧ್ವಂಸಗೊಳಿಸಿ, ನಗ್ನಳಾಗಿ ಮಾಡಿ, ಆಕೆಯ ಮಾಂಸಲ ಭಾಗಗಳನ್ನು ತಿಂದು ಬಿಟ್ಟು ಆಕೆಯನ್ನು ಬೆಂಕಿಯಿಂದ ಪೂರ್ತಿ ಸುಟ್ಟುಬಿಡುವರು.” (ಪ್ರಕಟನೆ 17:16, NW) ಇದಾದ ಮೇಲೆ, ಆಕೆಯ ಮಾಜಿ ಬೆಂಬಲಿಗರು “ಅವಳ ವಿಷಯದಲ್ಲಿ ಅತ್ತು ಎದೆಬಡಿದುಕೊಳ್ಳುವರು.” (ಪ್ರಕಟನೆ 18:9-19, NW) ಆದರೆ ಯೆಹೋವನ ಸೇವಕರು ಇದನ್ನು ದೀರ್ಘಸಮಯದಿಂದ ನಿರೀಕ್ಷಿಸಿದ್ದಾರೆ, ಮತ್ತು ಅವರು ಹೀಗೆ ಘೋಷಿಸುವರು: “‘ಹಲ್ಲೆಲೂಯಾ! . . . ಯಾಕೆಂದರೆ ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸಿದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯ ತೀರಿಸಿದ್ದಾನೆ, ಮತ್ತು ಅವಳ ಕೈಯಲ್ಲಿ ಆತನ ಸೇವಕರ ರಕ್ತಕ್ಕಾಗಿ ಅವನು ಪ್ರತಿದಂಡನೆಯನ್ನು ಮಾಡಿದ್ದಾನೆ.’”—ಪ್ರಕಟನೆ 19:1, 2, NW.
ದೇವರ ಸೇವಕರ ಮೇಲೆ ಆಕ್ರಮಣ ಮಾಡಲ್ಪಟ್ಟದ್ದು
6, 7. “ಮಹಾ ಸಂಕಟ”ದ ಸಮಯದಲ್ಲಿ ಆಕ್ರಮಿಸಲ್ಪಟ್ಟಾಗ, ಯೆಹೋವನ ಸೇವಕರು ಏಕೆ ಭರವಸೆಯಿಂದಿರಬಲ್ಲರು?
6 ಸುಳ್ಳು ಧರ್ಮವನ್ನು ನಾಶಮಾಡಿದ ನಂತರ, ರಾಜಕೀಯ ಘಟಕಾಂಶಗಳು ಯೆಹೋವನ ಸೇವಕರ ಕಡೆಗೆ ತಿರುಗುತ್ತವೆ. ಪ್ರವಾದನೆಯಲ್ಲಿ “ಮಾಗೋಗ್ ದೇಶದ . . . ಗೋಗ”ನಾದ ಸೈತಾನನು ಹೇಳುವುದು: “ನಾನು . . . ನೆಮ್ಮದಿಯಿಂದ ನಿರ್ಭಯವಾಗಿರುವವರ ಮೇಲೆ ಬೀಳುವೆನು.” ಅವರು ಸುಲಭವಾದ ಬಲಿಯೆಂದು ಆಲೋಚಿಸುತ್ತಾ, ಅವನು ‘ಮಹಾಸೈನ್ಯದೊಂದಿಗೆ . . . ಕಾರ್ಮುಗಿಲಿನೋಪಾದಿಯಲ್ಲಿ ದೇಶವನ್ನು ಮುಚ್ಚಿಬಿಡು’ತ್ತಾ, ಅವರ ಮೇಲೆ ಆಕ್ರಮಣ ಮಾಡುತ್ತಾನೆ. (ಯೆಹೆಜ್ಕೇಲ 38:2, 10-16) ಈ ಆಕ್ರಮಣವು ವಿಫಲಗೊಳ್ಳುವುದೆಂದು ಯೆಹೋವನ ಜನರಿಗೆ ತಿಳಿದಿದೆ ಏಕೆಂದರೆ ಅವರು ಯೆಹೋವನಲ್ಲಿ ಭರವಸವಿಡುತ್ತಾರೆ.
7 ತಾವು ದೇವರ ಸೇವಕರನ್ನು ಕೆಂಪು ಸಮುದ್ರದಲ್ಲಿ ಸಿಲುಕಿಹಾಕಿದ್ದೇವೆಂದು ಫರೋಹ ಮತ್ತು ಅವನ ಸೇನೆಗಳಿಗೆ ಅನಿಸಿದಾಗ, ಯೆಹೋವನು ಅದ್ಭುತಕರವಾಗಿ ತನ್ನ ಜನರನ್ನು ಬಿಡುಗಡೆಗೊಳಿಸಿದನು ಮತ್ತು ಐಗುಪ್ತದ ಸೇನೆಗಳನ್ನು ನಾಶಗೊಳಿಸಿದನು. (ವಿಮೋಚನಕಾಂಡ 14:26-28) “ಮಹಾ ಸಂಕಟ”ದ ಸಮಯದಲ್ಲಿ, ತಾವು ಯೆಹೋವನ ಜನರನ್ನು ಸಿಲುಕಿಹಾಕಿದ್ದೇವೆಂದು ರಾಷ್ಟ್ರಗಳಿಗೆ ಅನಿಸುವಾಗ, ಆತನು ಪುನಃ ಅದ್ಭುತಕರವಾಗಿ ಅವರ ನೆರವಿಗೆ ಬರುತ್ತಾನೆ: ಆ “ದಿನದಲ್ಲಿ ನಾನು ಸಿಟ್ಟಿನಿಂದ ಬುಸುಗುಟ್ಟುವೆನು. ನಾನು ರೋಷಾವಿಷ್ಟನಾಗಿ ಕೋಪದಿಂದುರಿಯುತ್ತಾ . . . ನುಡಿ”ಯುವೆನು. (ಯೆಹೆಜ್ಕೇಲ 38:18, 19) “ಮಹಾ ಸಂಕಟ”ದ ಪರಮಾವಧಿಯು ಆಗ ಸನ್ನಿಹಿತವಾಗಿರುವುದು!
8. ಯೆಹೋವನು ದುಷ್ಟರನ್ನು ನಾಶಗೊಳಿಸುವ ಮೊದಲು ಯಾವ ಅತಿಲೌಕಿಕ ಘಟನೆಗಳು ಸಂಭವಿಸುತ್ತವೆ, ಮತ್ತು ಯಾವ ಪರಿಣಾಮದೊಂದಿಗೆ?
8 “ಮಹಾ ಸಂಕಟವು” ಆರಂಭವಾದ ಬಳಿಕ ಒಂದು ನಿರ್ದಿಷ್ಟ ಹಂತದಲ್ಲಿ, ಆದರೆ ಯೆಹೋವನು ಈ ಲೋಕದ ಉಳಿದ ವಿಷಯಗಳ ಮೇಲೆ ತನ್ನ ತೀರ್ಪನ್ನು ಜಾರಿಗೊಳಿಸುವ ಮೊದಲು, ಅತಿಲೌಕಿಕ ಘಟನೆಗಳು ಸಂಭವಿಸುವವು. ಅವುಗಳು ಬೀರುವ ಪರಿಣಾಮವನ್ನು ಗಮನಿಸಿರಿ. “ಆಗ ಮನುಷ್ಯ ಕುಮಾರ [ಕ್ರಿಸ್ತ]ನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವುದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು.” (ಮತ್ತಾಯ 24:29, 30) “ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. . . . ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು.”—ಲೂಕ 21:25, 26.
“ನಿಮ್ಮ ಬಿಡುಗಡೆಯು ಸಮೀಪವಾಗಿದೆ”
9. ಅತಿಲೌಕಿಕ ಘಟನೆಗಳು ಸಂಭವಿಸುವಾಗ, ಯೆಹೋವನ ಸೇವಕರು ಏಕೆ ‘ತಮ್ಮ ತಲೆಗಳನ್ನು ಮೇಲೆತ್ತ’ಬಲ್ಲರು?
9 ಆ ನಿರ್ದಿಷ್ಟ ಸಮಯದಲ್ಲಿ, ಲೂಕ 21:28ರ ಪ್ರವಾದನೆಯು ಅನ್ವಯವಾಗುತ್ತದೆ. ಯೇಸು ಹೇಳಿದ್ದು: “ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.” ದೇವರ ವೈರಿಗಳು ಭಯದಿಂದ ನಡುಗುತ್ತಿರುವರು ಏಕೆಂದರೆ, ಸಂಭವಿಸುತ್ತಿರುವ ಅತಿಲೌಕಿಕ ಘಟನೆಗಳು ಯೆಹೋವನಿಂದ ಆಗುತ್ತಿವೆ ಎಂಬುದನ್ನು ಅವರು ತಿಳಿದುಕೊಳ್ಳುವರು. ಆದರೆ ಯೆಹೋವನ ಸೇವಕರು ಹರ್ಷಿಸುವರು ಏಕೆಂದರೆ, ತಮ್ಮ ಬಿಡುಗಡೆಯು ಸಮೀಪಿಸುತ್ತಿದೆ ಎಂದು ಅವರಿಗೆ ಗೊತ್ತಾಗುವುದು.
10. “ಮಹಾ ಸಂಕಟ”ದ ಪರಮಾವಧಿಯನ್ನು ದೇವರ ವಾಕ್ಯವು ಹೇಗೆ ವರ್ಣಿಸುತ್ತದೆ?
10 ಅನಂತರ ಯೆಹೋವನು ಸೈತಾನನ ವ್ಯವಸ್ಥೆಗೆ ಸಾವೇಟನ್ನು ತಾಕಿಸುತ್ತಾನೆ: “ನಾನು ಗೋಗನ ಸಂಗಡ ವ್ಯಾಜ್ಯವಾಡುತ್ತಾ ಅವನನ್ನು ವ್ಯಾಧಿಗೂ ವಧೆಗೂ ಗುರಿಮಾಡಿ ಅವನ ಮೇಲೂ . . . ಅವನೊಂದಿಗಿರುವ ಬಹು ಜನಾಂಗಗಳ ಮೇಲೂ ವಿಪರೀತ ಮಳೆ, ದೊಡ್ಡ ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು. . . . ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತನಾಗುವೆನು.” (ಯೆಹೆಜ್ಕೇಲ 38:22, 23) ಸೈತಾನನ ವ್ಯವಸ್ಥೆಯ ಎಲ್ಲ ಅವಶೇಷಗಳು ನಾಶಗೊಳಿಸಲ್ಪಡುತ್ತವೆ. ದೇವರನ್ನು ಕಡೆಗಣಿಸುವ ಇಡೀ ಮಾನವ ಸಮಾಜವು ನಿರ್ಮೂಲಗೊಳಿಸಲ್ಪಡುತ್ತದೆ. ಅದು ತಾನೇ “ಮಹಾ ಸಂಕಟ”ದ ಅರ್ಮಗೆದೋನ್ ಪರಮಾವಧಿಯಾಗಿದೆ.—ಯೆರೆಮೀಯ 25:31-33; 2 ಥೆಸಲೊನೀಕ 1:6-8; ಪ್ರಕಟನೆ 16:14, 16; 19:11-21.
11. “ಮಹಾ ಸಂಕಟ”ದಿಂದ ಯೆಹೋವನ ಸೇವಕರು ಏಕೆ ಬಿಡುಗಡೆಗೊಳಿಸಲ್ಪಡುತ್ತಾರೆ?
11 “ಮಹಾ ಸಂಕಟ”ದಿಂದ ಬಿಡುಗಡೆಗೊಳಿಸಲ್ಪಟ್ಟವರು, ಭೂವ್ಯಾಪಕವಾಗಿರುವ ಲಕ್ಷಾಂತರ ಯೆಹೋವನ ಆರಾಧಕರಾಗಿರುವರು. ಇವರು “ಸಕಲ ಜನಾಂಗ, ಕುಲ, ಪ್ರಜೆಗಳವರಿಂದ ಮತ್ತು ಭಾಷೆಗಳಿಂದ ಹೊರ” ಬಂದಿರುವ “ಮಹಾ ಸಮೂಹ”ವನ್ನು ರಚಿಸುತ್ತಾರೆ. ಅವರು ಇಂತಹ ಭಯ ಹುಟ್ಟಿಸುವ ವಿಧದಲ್ಲಿ ಬಿಡುಗಡೆಗೊಳಿಸಲ್ಪಟ್ಟಿರುವುದು ಏಕೆ? ಏಕೆಂದರೆ ಅವರು ಯೆಹೋವನಿಗೆ “ಹಗಲಿರುಳು . . . ಪವಿತ್ರ ಸೇವೆಯನ್ನು” ಸಲ್ಲಿಸುತ್ತಾರೆ. ಆದುದರಿಂದ ಅವರು ಈ ಲೋಕದ ಅಂತ್ಯವನ್ನು ಪಾರಾಗಿ, ನೀತಿಯ ಹೊಸ ಲೋಕದೊಳಗೆ ಬರಮಾಡಿಕೊಳ್ಳಲ್ಪಡುತ್ತಾರೆ. (ಪ್ರಕಟನೆ 7:9-15, NW) ಹೀಗೆ, ಅವರು ಯೆಹೋವನ ವಾಗ್ದಾನದ ನೆರವೇರಿಕೆಯನ್ನು ಪ್ರತ್ಯಕ್ಷವಾಗಿ ನೋಡುತ್ತಾರೆ: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು; ದುಷ್ಟರು ತೆಗೆದುಹಾಕಲ್ಪಡುವದನ್ನು ನೀನು ನೋಡುವಿ.”—ಕೀರ್ತನೆ 37:34.
ಹೊಸ ಲೋಕ
12. ಅರ್ಮಗೆದೋನ್‌ನಿಂದ ಪಾರಾದವರು ಯಾವ ವಿಷಯಕ್ಕಾಗಿ ಎದುರುನೋಡಬಲ್ಲರು?
12 ಅದು ಎಂತಹ ರೋಮಾಂಚಕ ಸಮಯವಾಗಿರುವುದು—ದುಷ್ಟತನದ ನಿರ್ಮೂಲನೆ ಮತ್ತು ಎಲ್ಲ ಮಾನವ ಇತಿಹಾಸದಲ್ಲೇ ಅತ್ಯಂತ ಮಹಿಮಾಭರಿತವಾದ ಶಕದ ಉದಯ! (ಪ್ರಕಟನೆ 20:1-4) ಒಂದು ಪ್ರಮೋದವನವಾಗಿ ರೂಪಾಂತರಿಸಲ್ಪಡಲಿರುವ ಭೂಮಿಯ ಮೇಲೆ, ಒಂದು ಉಜ್ವಲವಾದ, ದೇವರ ರಚನೆಯ ಶುದ್ಧ ನಾಗರಿಕತೆಯನ್ನು, ಒಂದು ಹೊಸ ಲೋಕವನ್ನು ಪ್ರವೇಶಿಸಿರುವುದಕ್ಕಾಗಿ, ಅರ್ಮಗೆದೋನ್‌ನಿಂದ ಪಾರಾದವರು ಯೆಹೋವನಿಗೆ ಎಷ್ಟು ಕೃತಜ್ಞರಾಗಿರುವರು! (ಲೂಕ 23:43) ಮತ್ತು ಅವರಿಗೆ ಎಂದೂ ಸಾಯುವ ಅಗತ್ಯವಿರುವುದಿಲ್ಲ! (ಯೋಹಾನ 11:26) ನಿಶ್ಚಯವಾಗಿಯೂ ಆ ಸಮಯದಿಂದ, ಯೆಹೋವನು ಜೀವಿಸುವಷ್ಟು ಸಮಯದ ವರೆಗೆ ಜೀವಿಸುವ ಆಶ್ಚರ್ಯಕರವೂ ಅದ್ಭುತಕರವೂ ಆದ ಪ್ರತೀಕ್ಷೆ ಅವರಿಗಿರುವುದು!
13. ಯೇಸು ಭೂಮಿಯ ಮೇಲೆ ಆರಂಭಿಸಿದ ಗುಣಪಡಿಸುವ ಕೆಲಸವನ್ನು ಪುನಃ ಆರಂಭಿಸುವುದು ಹೇಗೆ?
13 ಯಾರನ್ನು ಯೆಹೋವನು ಸ್ವರ್ಗೀಯ ರಾಜನಾಗಿ ನೇಮಿಸಿರುವನೊ ಆ ಯೇಸುವು, ಬಿಡುಗಡೆಗೊಳಿಸಲ್ಪಟ್ಟವರು ಅನುಭವಿಸುವ ಅದ್ಭುತಕರ ಆಶೀರ್ವಾದಗಳ ಮೇಲ್ವಿಚಾರಣೆ ಮಾಡುವನು. ಭೂಮಿಯ ಮೇಲಿದ್ದಾಗ, ಅವನು ಕುರುಡಾದ ಕಣ್ಣುಗಳನ್ನು ಮತ್ತು ಕಿವುಡಾದ ಕಿವಿಗಳನ್ನು ತೆರೆದನು ಹಾಗೂ “ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ” ವಾಸಿಮಾಡಿದನು. (ಮತ್ತಾಯ 9:35; 15:30, 31) ಹೊಸ ಲೋಕದಲ್ಲಿ, ಮಹತ್ತರವಾದ ಆ ಗುಣಪಡಿಸುವ ಕೆಲಸವನ್ನು ಅವನು ಪುನಃ ಆರಂಭಿಸುವನು, ಆದರೆ ಒಂದು ಭೌಗೋಲಿಕ ಪ್ರಮಾಣದಲ್ಲಿ. ದೇವರ ನಿಯೋಗಿಯಂತೆ, ಅವನು ಈ ವಾಗ್ದಾನವನ್ನು ನೆರವೇರಿಸುವನು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು, ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) ಇನ್ನೆಂದಿಗೂ ವೈದ್ಯರ ಇಲ್ಲವೆ ಶವಸಂಸ್ಕಾರ ನಿರ್ವಾಹಕರ ಅಗತ್ಯವಿರದು!—ಯೆಶಾಯ 25:8; 33:24.
14. ಈಗಾಗಲೇ ಸತ್ತುಹೋಗಿರುವ ಯೆಹೋವನ ಸೇವಕರಿಗೆ ಯಾವ ಬಿಡುಗಡೆಯು ಬರುವುದು?
14 ಬಿಡುಗಡೆಗೊಳಿಸಲ್ಪಟ್ಟವರಲ್ಲಿ, ಗತಸಮಯದಲ್ಲಿ ಸತ್ತುಹೋಗಿರುವ ದೇವರ ಆ ಎಲ್ಲ ನಂಬಿಗಸ್ತ ಸೇವಕರೂ ಇರುವರು. ಹೊಸ ಲೋಕದಲ್ಲಿ, ಅವರು ಸಮಾಧಿಯ ಬಿಗಿಹಿಡಿತದಿಂದ ಪಾರುಗೊಳಿಸಲ್ಪಡುವರು. ಯೆಹೋವನು ಖಾತರಿನೀಡುವುದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗು”ವದು. (ಅ. ಕೃತ್ಯಗಳು 24:15) ಬಹುಶಃ, “ನೀತಿವಂತ”ರು ಮುಂಚಿತವಾಗಿ ಪುನರುತ್ಥಾನಗೊಳಿಸಲ್ಪಟ್ಟು, ವಿಸ್ತರಿಸುತ್ತಿರುವ ಪ್ರಮೋದವನಕ್ಕೆ ನೆರವು ನೀಡುವರು. ಬಹಳ ಸಮಯದ ಹಿಂದೆ ಸತ್ತುಹೋದ, ಆದರೆ ಈಗ ಜೀವಕ್ಕೆ ಹಿಂದಿರುಗಿರುವ ಆ ನಂಬಿಗಸ್ತರ ಅನುಭವಗಳನ್ನು ಕೇಳುವುದು, ಅರ್ಮಗೆದೋನ್‌ನಿಂದ ಪಾರಾಗುವವರಿಗೆ ಎಷ್ಟು ಮೋಹಕವಾಗಿರುವುದು!—ಯೋಹಾನ 5:28, 29.
15. ಹೊಸ ಲೋಕದಲ್ಲಿ ಅನುಭವಿಸಲ್ಪಡಲಿರುವ ಪರಿಸ್ಥಿತಿಗಳಲ್ಲಿ ಕೆಲವನ್ನು ವರ್ಣಿಸಿರಿ.
15 ಆಗ ಜೀವಿಸುತ್ತಿರುವವರೆಲ್ಲರೂ, ಕೀರ್ತನೆಗಾರನು ಯೆಹೋವನ ಕುರಿತಾಗಿ ಹೇಳಿದ ವಿಷಯವನ್ನು ಅನುಭವಿಸುವರು: “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” (ಕೀರ್ತನೆ 145:16) ಇನ್ನು ಮುಂದೆ ಹಸಿವಿಲ್ಲ: ಭೂಮಿಯು ಜೀವಿ ಪರಿಸ್ಥಿತಿಯ ಸಮತೆಗೆ ಪುನಸ್ಸ್ಥಾಪಿಸಲ್ಪಟ್ಟು, ಹೇರಳವಾಗಿ ಉತ್ಪಾದಿಸುವುದು. (ಕೀರ್ತನೆ 72:16) ಇನ್ನು ಮುಂದೆ ನಿರ್ಗತಿಕ ಜನರಿರುವುದಿಲ್ಲ: “ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು” ಮತ್ತು ಪ್ರತಿಯೊಬ್ಬನು “ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.” (ಯೆಶಾಯ 65:21, 22; ಮೀಕ 4:4) ಇನ್ನು ಮುಂದೆ ಭಯವಿಲ್ಲ: ಯುದ್ಧವಾಗಲಿ, ಹಿಂಸಾಚಾರವಾಗಲಿ, ಅಪರಾಧವಾಗಲಿ ಇನ್ನಿರದು. (ಕೀರ್ತನೆ 46:8, 9; ಜ್ಞಾನೋಕ್ತಿ 2:22) “ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, ಹರ್ಷಧ್ವನಿಗೈಯುತ್ತಾರೆ.”—ಯೆಶಾಯ 14:7.
16. ಹೊಸ ಲೋಕದಲ್ಲಿ ನೀತಿಯು ಏಕೆ ವ್ಯಾಪಕವಾಗಿರುವುದು?
16 ಹೊಸ ಲೋಕದಲ್ಲಿ, ಸೈತಾನನ ಪ್ರಚಾರ ಮಾಧ್ಯಮವು ತೆಗೆದುಹಾಕಲ್ಪಟ್ಟಿರುವುದು. ಬದಲಿಗೆ, “ಭೂನಿವಾಸಿಗಳು ಧರ್ಮಜ್ಞಾನವನ್ನು ಪಡೆದುಕೊಳ್ಳುವರು.” (ಯೆಶಾಯ 26:9; 54:13) ಕ್ರಮವಾಗಿ ಪ್ರತಿ ವರ್ಷ, ಹಿತಕರವಾದ ಆತ್ಮಿಕ ಉಪದೇಶದೊಂದಿಗೆ, “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ಭಕ್ತಿವೃದ್ಧಿಮಾಡುವ ಆಲೋಚನೆಗಳು ಹಾಗೂ ಕ್ರಿಯೆಗಳು ಮಾನವಜಾತಿಯಲ್ಲಿ ವ್ಯಾಪಿಸುವವು. (ಫಿಲಿಪ್ಪಿ 4:8) ಅಪರಾಧ, ಆತ್ಮದುರಭಿಮಾನ, ಹೊಟ್ಟೆಕಿಚ್ಚುಗಳಿಂದ ಮುಕ್ತವಾದ ಜನರ ಒಂದು ಲೋಕವ್ಯಾಪಕ ಸಮಾಜವನ್ನು ಊಹಿಸಿಕೊಳ್ಳಿರಿ. ಅದು ಎಲ್ಲಿ, ಸಕಲರಿಂದ ದೇವರ ಆತ್ಮದ ಫಲವು ಉತ್ಪಾದಿಸಲ್ಪಡುವುದೊ ಆ ಅಂತಾರಾಷ್ಟ್ರೀಯ ಸಹೋದರತ್ವವಾಗಿರುವುದು. ನಿಶ್ಚಯವಾಗಿ, ಈಗಲೂ ಅಂತಹ ಗುಣಗಳು ಮಹಾ ಸಮೂಹದಿಂದ ಬೆಳೆಸಿಕೊಳ್ಳಲ್ಪಡುತ್ತಿವೆ.—ಗಲಾತ್ಯ 5:22, 23.
ಯೆಹೋವನು ಇಷ್ಟರ ವರೆಗೆ ಕಾದದ್ದು ಏಕೆ?
17. ದುಷ್ಟತನವನ್ನು ಅಂತ್ಯಗೊಳಿಸುವ ಮೊದಲು, ಯೆಹೋವನು ಏಕೆ ಇಷ್ಟು ಸಮಯದ ವರೆಗೆ ಕಾದಿದ್ದಾನೆ?
17 ಹಾಗಿದ್ದರೂ, ಯೆಹೋವನು ದುಷ್ಟತನವನ್ನು ತೆಗೆದುಹಾಕಲು ಮತ್ತು ತನ್ನ ಜನರನ್ನು ಹೊಸ ಲೋಕದೊಳಗೆ ಬಿಡುಗಡೆಗೊಳಿಸಲು ಇಷ್ಟರ ವರೆಗೆ ಏಕೆ ಕಾದಿದ್ದಾನೆ? ಸಾಧಿಸಲ್ಪಡಬೇಕಾಗಿದ್ದ ವಿಷಯವನ್ನು ಪರಿಗಣಿಸಿರಿ. ಅತ್ಯಂತ ಪ್ರಾಮುಖ್ಯವಾದದ್ದು, ಯೆಹೋವನ ಪರಮಾಧಿಕಾರದ, ಆತನ ಆಳುವ ಹಕ್ಕಿನ ನಿರ್ದೋಷೀಕರಣವಾಗಿದೆ. ಗತಿಸಿಹೋಗಲು ಸಾಕಷ್ಟು ಸಮಯವನ್ನು ಅನುಮತಿಸುವ ಮೂಲಕ, ತನ್ನ ಪರಮಾಧಿಕಾರದ ಹೊರಗಿರುವ ಮಾನವ ಆಳ್ವಿಕೆಯು ಒಂದು ಮಹಾ ಅಪಜಯವಾಗಿ ಪರಿಣಮಿಸಿದೆ ಎಂಬುದನ್ನು ಆತನು ಯಾವ ಸಂದೇಹವೂ ಇಲ್ಲದೆ ಪ್ರದರ್ಶಿಸಿದ್ದಾನೆ. (ಯೆರೆಮೀಯ 10:23) ಆದುದರಿಂದ ಈಗ, ಮಾನವ ಆಳ್ವಿಕೆಯನ್ನು ಕ್ರಿಸ್ತನ ಅಧೀನದಲ್ಲಿರುವ ತನ್ನ ಸ್ವರ್ಗೀಯ ರಾಜ್ಯದ ಆಳ್ವಿಕೆಯಿಂದ ಸ್ಥಾನಭರ್ತಿಮಾಡುವುದರಲ್ಲಿ ಯೆಹೋವನು ಸಂಪೂರ್ಣವಾಗಿ ನ್ಯಾಯವಂತನೆಂದು ಸಮರ್ಥಿಸಲ್ಪಟ್ಟಿದ್ದಾನೆ.—ದಾನಿಯೇಲ 2:44; ಮತ್ತಾಯ 6:9, 10.
18. ಅಬ್ರಹಾಮನ ವಂಶಸ್ಥರು ಕಾನಾನ್ ದೇಶವನ್ನು ಯಾವಾಗ ಪಡೆದುಕೊಳ್ಳಲಿದ್ದರು?
18 ಈ ಎಲ್ಲ ಶತಮಾನಗಳಲ್ಲಿ ಸಂಭವಿಸಿರುವ ವಿಷಯವು, ಅಬ್ರಹಾಮನ ಸಮಯದಲ್ಲಿ ಸಂಭವಿಸಿದ ವಿಷಯಕ್ಕೆ ಸದೃಶವಾಗಿದೆ. ಅಬ್ರಹಾಮನ ವಂಶಸ್ಥರು ಕಾನಾನ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವರೆಂದು ಯೆಹೋವನು ಅವನಿಗೆ ಹೇಳಿದನು, ಆದರೆ ಅವರು ನಾನೂರು ವರ್ಷಗಳ ವರೆಗೆ ಕಾಯಬೇಕಿತ್ತು, ಏಕೆಂದರೆ “ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ.” (ಆದಿಕಾಂಡ 12:1-5; 15:13-16) “ಅಮೋರಿಯರು” (ಒಂದು ಪ್ರಖ್ಯಾತ ಜಾತಿ) ಎಂಬ ಪದವು ಇಲ್ಲಿ ಬಹುಶಃ ಒಟ್ಟಾಗಿ ಕಾನಾನ್ ದೇಶದ ಜನರನ್ನು ಪ್ರತಿನಿಧಿಸುತ್ತದೆ. ಆದುದರಿಂದ ಕಾನಾನ್ ದೇಶವನ್ನು ತನ್ನ ಜನರು ಸ್ವಾಧೀನಪಡಿಸಿಕೊಳ್ಳಲು ಶಕ್ತರಾಗುವಂತೆ ಯೆಹೋವನು ಮಾಡುವ ಮೊದಲು, ಸುಮಾರು ನಾಲ್ಕು ಶತಮಾನಗಳು ಗತಿಸಲಿದ್ದವು. ಈ ಮಧ್ಯೆ ಕಾನಾನ್ ದೇಶದಲ್ಲಿನ ರಾಷ್ಟ್ರಗಳು ತಮ್ಮ ಸಮಾಜಗಳನ್ನು ವಿಕಸಿಸಿಕೊಳ್ಳುವಂತೆ ಯೆಹೋವನು ಅನುಮತಿಸಿದನು. ಯಾವ ಫಲಿತಾಂಶದೊಂದಿಗೆ?
19, 20. ಯಾವ ರೀತಿಯ ಸಮಾಜಗಳನ್ನು ಕಾನಾನ್ಯರು ವಿಕಸಿಸಿಕೊಂಡರು?
19 ಹೆನ್ರಿ ಏಚ್. ಹೇಲಿಯವರಿಂದ ಬರೆಯಲ್ಪಟ್ಟ ಬೈಬಲ್ ಹ್ಯಾಂಡ್‌ಬುಕ್ ಎಂಬ ಪುಸ್ತಕವು ಗಮನಿಸುವುದೇನೆಂದರೆ, ಮೆಗಿದ್ದೊ ಪ್ರದೇಶದಲ್ಲಿ, ಬಾಳನ ದೇವತೆ-ಪತ್ನಿಯಾದ ಅಷ್ಟೋರೆತ್‌ಳ ದೇವಾಲಯದ ಅವಶೇಷಗಳನ್ನು ಅಗೆತಶಾಸ್ತ್ರಜ್ಞರು ಕಂಡುಕೊಂಡರು. ಅವರು ಬರೆಯುವುದು: “ಈ ದೇವಾಲಯದಿಂದ ಒಂದಿಷ್ಟು ಹೆಜ್ಜೆಗಳ ಅಂತರದಲ್ಲಿ ಒಂದು ಸ್ಮಶಾನವಿತ್ತು. ಅಲ್ಲಿ, ಈ ದೇವಾಲಯದಲ್ಲಿ ಬಲಿಯರ್ಪಿಸಲ್ಪಟ್ಟಿದ್ದ ಶಿಶುಗಳ ಕಳೇಬರಗಳುಳ್ಳ ಅನೇಕ ಪಾತ್ರೆಗಳು ಕಂಡುಕೊಳ್ಳಲ್ಪಟ್ಟವು . . . ಬಾಳನ ಮತ್ತು ಅಷ್ಟೋರೆತ್‌ಳ ಪ್ರವಾದಿಗಳು, ಚಿಕ್ಕ ಮಕ್ಕಳ ಅಧಿಕೃತ ಕೊಲೆಗಾರರಾಗಿದ್ದರು.” “ಮತ್ತೊಂದು ಭಯಂಕರ ಆಚರಣೆಯು, ಅವರು [ಯಾವುದನ್ನು] ‘ಅಸ್ತಿವಾರ ಯಜ್ಞಗಳು’ ಎಂದು ಕರೆದರೊ ಅದಾಗಿತ್ತು. ಮನೆಯೊಂದು ಕಟ್ಟಲ್ಪಡಬೇಕಾಗಿದ್ದಾಗ, ಮಗುವೊಂದು ಬಲಿಯಾಗಿ ಅರ್ಪಿಸಲ್ಪಡುತ್ತಿತ್ತು ಮತ್ತು ಅದರ ಹೆಣವನ್ನು ಗೋಡೆಯೊಳಗಿಟ್ಟು ಕಟ್ಟಲಾಗುತ್ತಿತ್ತು.”
20 ಹೇಲಿ ಹೇಳುವುದು: “ಬಾಳನ, ಅಷ್ಟೋರೆತ್‌ಳ, ಮತ್ತು ಇತರ ಕಾನಾನ್ಯ ದೇವರುಗಳ ಆರಾಧನೆಯಲ್ಲಿ ಅತಿಯಾದ ಕಾಮಕೇಳಿ ಸೇರಿತ್ತು; ಅವರ ದೇವಾಲಯಗಳು ದುಷ್ಟತನದ ಕೇಂದ್ರಗಳಾಗಿದ್ದವು. . . . ಕಾನಾನ್ಯರು ಅನೈತಿಕ ಸ್ವೇಚ್ಛಾಚಾರದಿಂದ, . . . ಮತ್ತು ಅನಂತರ ಅದೇ ದೇವರುಗಳಿಗೆ ಒಂದು ಯಜ್ಞದೋಪಾದಿ ತಮ್ಮ ಜ್ಯೇಷ್ಠ ಮಕ್ಕಳನ್ನು ಕೊಲ್ಲುವ ಮೂಲಕ ಆರಾಧಿಸಿದರು. ದೊಡ್ಡ ಪ್ರಮಾಣದಲ್ಲಿ, ಕಾನಾನ್ ದೇಶವು ರಾಷ್ಟ್ರೀಯ ಮಟ್ಟದಲ್ಲಿ ಒಂದು ಬಗೆಯ ಸೊದೋಮ್ ಗೊಮೋರ ಪಟ್ಟಣಗಳಂತೆ ಆಗಿತ್ತೆಂದು ತೋರುತ್ತದೆ. . . . ಇಂತಹ ಅಸಹ್ಯಕರ ಹೊಲಸು ಹಾಗೂ ಕ್ರೂರತೆಯ ಒಂದು ನಾಗರಿಕತೆಗೆ ಇನ್ನಷ್ಟು ಕಾಲ ಅಸ್ತಿತ್ವದಲ್ಲಿರುವ ಯಾವ ಹಕ್ಕಾದರೂ ಇತ್ತೊ? . . . ಕಾನಾನ್ಯ ನಗರಗಳ ಅವಶೇಷಗಳನ್ನು ಅಗೆಯುವ ಅಗೆತಶಾಸ್ತ್ರಜ್ಞರು, ದೇವರು ಆ ಪಟ್ಟಣಗಳನ್ನು ಸರಿಯಾದ ಸಮಯದಲ್ಲೆ ನಾಶಗೊಳಿಸಿದನೆಂಬ ವಿಷಯವನ್ನು ತಿಳಿದು ಬೆರಗಾಗುತ್ತಾರೆ.”—1 ಅರಸುಗಳು 21:25, 26ನ್ನು ಹೋಲಿಸಿರಿ.
21. ಕಾನಾನ್ಯರ ಹಾಗೂ ನಮ್ಮ ದಿನದ ಸನ್ನಿವೇಶದ ನಡುವೆ ಯಾವ ಹೋಲಿಕೆಯಿದೆ?
21 ಅಮೋರಿಯರ ದುಷ್ಟತನವು “ಪೂರ್ಣ ಸ್ಥಿತಿಗೆ” ಬಂದಿತ್ತು. ಆದುದರಿಂದ ಅವರನ್ನು ನಿರ್ಮೂಲಮಾಡುವುದರಲ್ಲಿ ಯೆಹೋವನು ಈಗ ಪೂರ್ಣವಾಗಿ ನ್ಯಾಯವಂತನೆಂದು ಸಮರ್ಥಿಸಲ್ಪಟ್ಟನು. ಅದೇ ವಿಷಯವು ಇಂದು ಸತ್ಯವಾಗಿದೆ. ಈ ಲೋಕವು ಹಿಂಸಾಚಾರ, ಅನೈತಿಕತೆ, ಮತ್ತು ದೇವರ ನಿಯಮಗಳಿಗೆ ತಾತ್ಸಾರಭಾವನೆಯಿಂದ ತುಂಬಿದೆ. ಮತ್ತು ಪ್ರಾಚೀನ ಕಾನಾನ್ ದೇಶದಲ್ಲಾದ ಘೋರ ಶಿಶು ಯಜ್ಞಗಳಿಂದ ನಾವು ಯೋಗ್ಯವಾಗಿಯೇ ಎದೆಗುಂದಿಸಲ್ಪಡುವುದರಿಂದ—ಕಾನಾನ್ ದೇಶದಲ್ಲಾದ ಯಾವುದೇ ವಿಷಯಕ್ಕಿಂತಲೂ ಹೆಚ್ಚು ಕೆಟ್ಟದ್ದಾಗಿರುವ—ಈ ಲೋಕದ ಯುದ್ಧಗಳಲ್ಲಿ ಅರ್ಪಿಸಲ್ಪಡುವ ಕೋಟ್ಯಂತರ ಯುವ ಜನರ ಯಜ್ಞದ ಕುರಿತೇನು? ಖಂಡಿತವಾಗಿ, ಈ ದುಷ್ಟ ವ್ಯವಸ್ಥೆಗೆ ಅಂತ್ಯವನ್ನು ತರುವುದರಲ್ಲಿ ಯೆಹೋವನು ಈಗ ಪೂರ್ಣವಾಗಿ ನ್ಯಾಯವಂತನೆಂದು ಸಮರ್ಥಿಸಲ್ಪಟ್ಟಿದ್ದಾನೆ.
ಬೇರೆ ಏನನ್ನೊ ಸಾಧಿಸುವುದು
22. ನಮ್ಮ ಸಮಯದಲ್ಲಿ ಯೆಹೋವನ ತಾಳ್ಮೆಯಿಂದ ಯಾವ ವಿಷಯವು ಸಾಧಿಸಲ್ಪಡುತ್ತಿದೆ?
22 ಈ ಕಡೇ ದಿವಸಗಳಲ್ಲಿ ಯೆಹೋವನ ತಾಳ್ಮೆಯು ಬೇರೆ ಏನನ್ನೊ ಸಾಧಿಸುತ್ತಿದೆ. ಈಗಾಗಲೇ ಐವತ್ತು ಲಕ್ಷಕ್ಕಿಂತಲೂ ಹೆಚ್ಚಾಗಿರುವ ಮಹಾ ಸಮೂಹವನ್ನು ಒಟ್ಟುಗೂಡಿಸಲು ಮತ್ತು ಬೋಧಿಸಲು ಆತನು ಸಮಯವನ್ನು ನೀಡುತ್ತಿದ್ದಾನೆ. ಯೆಹೋವನ ನಿರ್ದೇಶನದ ಕೆಳಗೆ, ಅವರೊಂದು ಪ್ರಗತಿಪರ ಸಂಸ್ಥೆಯಾಗಿ ರಚಿಸಲ್ಪಟ್ಟಿದ್ದಾರೆ. ಪುರುಷರು, ಸ್ತ್ರೀಯರು, ಮತ್ತು ಯುವ ಜನರು ಇತರರಿಗೆ ಬೈಬಲ್ ಸತ್ಯಗಳನ್ನು ಕಲಿಸುವಂತೆ ತರಬೇತುಗೊಳಿಸಲ್ಪಡುತ್ತಾರೆ. ತಮ್ಮ ಕೂಟಗಳು ಹಾಗೂ ಬೈಬಲ್ ಪ್ರಕಾಶನಗಳ ಮೂಲಕ, ಅವರು ದೇವರ ಪ್ರೀತಿಪರ ಮಾರ್ಗಗಳ ಕುರಿತು ಕಲಿಯುತ್ತಾರೆ. (ಯೋಹಾನ 13:34, 35; ಕೊಲೊಸ್ಸೆ 3:14; ಇಬ್ರಿಯ 10:24, 25) ಇದಕ್ಕೆ ಕೂಡಿಸಿ, “ಸುವಾರ್ತೆ”ಯ ಸಾರುವಿಕೆಯನ್ನು ಬೆಂಬಲಿಸುವ ಸಲುವಾಗಿ ಅವರು ನಿರ್ಮಾಣ, ಇಲೆಕ್ಟ್ರಾನಿಕ್ಸ್, ಮುದ್ರಣ, ಮತ್ತು ಇತರ ಕ್ಷೇತ್ರಗಳಲ್ಲಿ ಕೌಶಲಗಳನ್ನು ವಿಕಸಿಸಿಕೊಳ್ಳುತ್ತಿದ್ದಾರೆ. (ಮತ್ತಾಯ 24:14) ಬಹುಶಃ ಇಂತಹ ಕಲಿಕೆಯ ಹಾಗೂ ಕಟ್ಟುವಿಕೆಯ ಕೌಶಲಗಳನ್ನು ಹೊಸ ಲೋಕದಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುವುದು.
23. ಈ ಸಮಯದಲ್ಲಿ ಜೀವಂತರಾಗಿರುವುದು ಒಂದು ಸುಯೋಗವಾಗಿದೆ ಏಕೆ?
23 ಹೌದು, ಇಂದು ಯೆಹೋವನು ತನ್ನ ಸೇವಕರನ್ನು “ಮಹಾ ಸಂಕಟ”ದಿಂದ ಪಾರಾಗಿ, ನೀತಿಯ ಹೊಸ ಲೋಕದೊಳಗೆ ಸೇರುವಂತೆ ಸಿದ್ಧಪಡಿಸುತ್ತಿದ್ದಾನೆ. ಆಗ ಹೆಣಗಾಡಲು ಸೈತಾನನಾಗಲಿ ಅವನ ದುಷ್ಟ ಲೋಕವಾಗಲಿ ಇರದು, ರೋಗ, ದುಃಖ, ಮತ್ತು ಮರಣವಿರದು. ಮಹಾ ಉತ್ಸಾಹ ಹಾಗೂ ಆನಂದದೊಂದಿಗೆ ದೇವರ ಜನರು, ಒಂದು ಪ್ರಮೋದವನವನ್ನು ಕಟ್ಟುವ ಸಂತೋಷಕರ ಕೆಲಸದೊಂದಿಗೆ ಮುಂದುವರಿಯುವರು. ಅಲ್ಲಿ ಪ್ರತಿಯೊಂದು ದಿನವು “ಪರಮ ಹರ್ಷ”ವುಳ್ಳದ್ದಾಗಿರುವುದು. ಯುಗಗಳ ಈ ಪರಮಾವಧಿಯಲ್ಲಿ ಜೀವಿಸಲು, ಯೆಹೋವನನ್ನು ಅರಿತುಕೊಳ್ಳಲು ಮತ್ತು ಸೇವಿಸಲು, ಮತ್ತು ‘ನಮ್ಮ ಬಿಡುಗಡೆಯು ಸಮೀಪಿಸುತ್ತಿರುವುದರಿಂದ ನಮ್ಮ ತಲೆಗಳನ್ನು’ ನಾವು ಬಹಳ ಬೇಗನೆ ‘ಎತ್ತು’ವೆವು ಎಂಬುದನ್ನು ಗ್ರಹಿಸಲು ನಾವು ಎಷ್ಟೊಂದು ಸುಯೋಗವುಳ್ಳವರು!—ಲೂಕ 21:28; ಕೀರ್ತನೆ 146:5.
ಪುನರ್ವಿಮರ್ಶಾ ಪ್ರಶ್ನೆಗಳು
◻ “ಮಹಾ ಸಂಕಟ” ಎಂದರೇನು, ಮತ್ತು ಅದು ಹೇಗೆ ಆರಂಭವಾಗುತ್ತದೆ?
◻ ಯೆಹೋವನ ಸೇವಕರ ಮೇಲೆ ಗೋಗನ ಆಕ್ರಮಣವು ಏಕೆ ವಿಫಲಗೊಳ್ಳುವುದು?
◻ “ಮಹಾ ಸಂಕಟ”ವು ಹೇಗೆ ಕೊನೆಗೊಳ್ಳುತ್ತದೆ?
◻ ಯಾವ ಅದ್ಭುತಕರ ಪ್ರಯೋಜನಗಳನ್ನು ಹೊಸ ಲೋಕವು ಒದಗಿಸುವುದು?
◻ ಈ ವ್ಯವಸ್ಥೆಯ ಅಂತ್ಯವನ್ನು ತರುವ ಮೊದಲು, ಯೆಹೋವನು ಏಕೆ ಇಷ್ಟು ಸಮಯದ ವರೆಗೆ ಕಾದಿದ್ದಾನೆ?
[ಪುಟ 16 ರಲ್ಲಿರುವ ಚಿತ್ರ]
ಇಡೀ ಭೂಮಿಯು ಒಂದು ಪ್ರಮೋದವನವಾಗಿ ರೂಪಾಂತರಿಸಲ್ಪಡುವುದು