ವಾಚಕರಿಂದ ಪ್ರಶ್ನೆಗಳು
ಯೇಸುವಿನ ತಾಯಿಯಾದ ಮರಿಯಳು, ತನ್ನ ಸಂಬಂಧಿಕಳಾದ ಎಲಿಸಬೇತಳನ್ನು ಸಂದರ್ಶಿಸಲು ಹೋದಾಗ, ಆ ಮೊದಲೆ ಗರ್ಭಿಣಿಯಾಗಿದ್ದಳೊ?
ಹೌದು, ಸುವ್ಯಕ್ತವಾಗಿ ಅವಳು ಗರ್ಭಿಣಿಯಾಗಿದ್ದಳು.
ಲೂಕ 1 ನೆಯ ಅಧ್ಯಾಯದಲ್ಲಿ, (ಸ್ನಾನಿಕನಾದ) ಯೋಹಾನನನ್ನು ಹಡೆದ ಯಾಜಕ ಜಕರೀಯನ ಪತ್ನಿ ಎಲಿಸಬೇತಳ ಗರ್ಭಧಾರಣೆಯ ಕುರಿತು ನಾವು ಮೊದಲಾಗಿ ಓದುತ್ತೇವೆ. ಎಲಿಸಬೇತಳು ‘ಆರನೆಯ ತಿಂಗಳಲ್ಲಿದ್ದಾಗ ದೂತ ಗಬ್ರಿಯೇಲನು’ ಮರಿಯಳನ್ನು ಸಂದರ್ಶಿಸಿ, ಅವಳು ಗರ್ಭಿಣಿಯಾಗುವಳೆಂದೂ, “ಪರಾತ್ಪರನ ಕುಮಾರನೆನಿಸಿಕೊಳ್ಳುವ” ವನನ್ನು ಹಡೆಯುವಳೆಂದೂ ಹೇಳಿದನು. (ಲೂಕ 1:26, 30-33) ಆದರೆ ಮರಿಯಳು ಗರ್ಭಿಣಿಯಾದದ್ದು ಯಾವಾಗ?
ಆ ಮೇಲೆ ಮರಿಯಳು ಗರ್ಭಿಣಿಯಾಗಿದ್ದ ತನ್ನ ಸಂಬಂಧಿಕಳಾದ ಎಲಿಸಬೇತಳನ್ನು ಸಂದರ್ಶಿಸಲು ಯೆಹೂದಕ್ಕೆ ಹೊರಟುಹೋದಳೆಂದು ಲೂಕನ ದಾಖಲೆಯು ಮುಂದುವರಿಸುತ್ತಾ ತಿಳಿಸುತ್ತದೆ. ಇಬ್ಬರು ಸ್ತ್ರೀಯರು ಒಬ್ಬರನ್ನೊಬ್ಬರು ಭೇಟಿಯಾದಾಗ, ಎಲಿಸಬೇತಳ ಗರ್ಭದಲ್ಲಿದ್ದ ಕೂಸು (ಯೋಹಾನ) ಹಾರಾಡಿತು. ಎಲಿಸಬೇತಳು ಮರಿಯಳ ‘ಗರ್ಭದ ಫಲ’ಕ್ಕೆ ಸೂಚಿಸಿ, ಮರಿಯಳನ್ನು “ನನ್ನ ಸ್ವಾಮಿಯ ತಾಯಿ” ಎಂದು ಕರೆದಳು. (ಲೂಕ 1:39-44) ಆದುದರಿಂದ ನ್ಯಾಯಸಮ್ಮತ ತೀರ್ಮಾನವೇನಂದರೆ ಮರಿಯಳು ಆ ಮೊದಲೆ ಗರ್ಭಧರಿಸಿದ್ದಳು, ಎಲಿಸಬೇತಳನ್ನು ಸಂದರ್ಶಿಸಲು ಹೋದಾಗ ಆಕೆ ಗರ್ಭಿಣಿಯಾಗಿದ್ದಳು.
ಲೂಕ 1:56 ಓದುವುದು: “ಮರಿಯಳು ಹೆಚ್ಚುಕಡಿಮೆ ಮೂರು ತಿಂಗಳು ಎಲಿಸಬೇತಳ ಬಳಿಯಲ್ಲಿದ್ದು ತನ್ನ ಮನೆಗೆ ಹಿಂತಿರುಗಿ ಹೋದಳು.” ಈ ವಚನವು ಸರಿಯಾದ ಕ್ಯಾಲೆಂಡರ್ ದಿನದ ತನಕ ಎಣಿಕೆಮಾಡಲು ಒಂದು ಗೊತ್ತಾದ ತಾರೀಖನ್ನು ಕೊಡುವುದಿಲ್ಲ. “ಹೆಚ್ಚುಕಡಿಮೆ ಮೂರು ತಿಂಗಳು” ಎಂದು ಅದು ಹೇಳುತ್ತದೆ, ಇದು ಎಲಿಸಬೇತಳನ್ನು ಒಂಬತ್ತು ತಿಂಗಳ ಗರ್ಭಿಣಿಯಾಗಿ ತೋರಿಸುವುದು.
ಎಲಿಸಬೇತಳಿಗೆ ಅವಳ ಬಸುರಿನ ಕೊನೆಯ ಭಾಗದಲ್ಲಿ ಸಹಾಯ ನೀಡಿದ ಬಳಿಕ, ಮರಿಯಳು ನಜರೇತಿನ ತನ್ನ ಮನೆಗೆ ಹೊರಟುಹೋದಳು. ಒಮ್ಮೆ ಎಲಿಸಬೇತಳು (ಯೋಹಾನನನ್ನು) ಹಡೆದಳೆಂದರೆ, ಅನೇಕ ಭೇಟಿಗಾರರು, ಅವರಲ್ಲಿ ಸಂಬಂಧಿಕರಾಗಿರುವ ಕೆಲವರು ಸಹ ಬಂದಾರೆಂದು ಮರಿಯಳು ಗ್ರಹಿಸಿದಳು. ಅದು ಸ್ವತಃ ಗರ್ಭಿಣಿಯಾಗಿರುವ ಅವಿವಾಹಿತ ಯುವ ಸ್ತ್ರೀಗೆ ಸಂಕೋಚಕರ ಮತ್ತು ಪೇಚಾಟದ ವಿಷಯವಾಗಿರಸಾಧ್ಯವಿತ್ತು. ನಜರೇತಿಗೆ ಹೊರಟು ಬಂದಾಗ ಮರಿಯಳು ಎಷ್ಟು ತಿಂಗಳ ಗರ್ಭಿಣಿಯಾಗಿದ್ದಳು? ಅವಳು ಎಲಿಸಬೇತಳೊಂದಿಗೆ “ಹೆಚ್ಚುಕಡಿಮೆ ಮೂರು ತಿಂಗಳು” ಇದುದ್ದರಿಂದ ಅವಳು ನಜರೇತಿಗೆ ಹಿಂದಿರುಗಿದಾಗ, ಮರಿಯಳಿಗೆ ಬಹುಶಃ ಮೂರು ತಿಂಗಳು ತುಂಬಿದ್ದಿರಬಹುದು ಇಲ್ಲವೆ ನಾಲ್ಕನೆಯ ತಿಂಗಳ ಆರಂಭವಾಗಿದ್ದಿರಬಹುದು.