-
ಆಕೆ ‘ಆ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟು ಯೋಚಿಸುತ್ತಿದ್ದಳು’ಕಾವಲಿನಬುರುಜು—2009 | ಜನವರಿ 1
-
-
ಆ ಹಳ್ಳಿಯಲ್ಲಿ ಕಿಕ್ಕಿರಿದ ಜನಸಂದಣಿಯಿತ್ತು. ಇತರರು ತಮ್ಮ ಹೆಸರು ಬರೆಯಿಸಿಕೊಳ್ಳಲು ಮೊದಲೇ ಬಂದಿದ್ದುದರಿಂದ ಛತ್ರದಲ್ಲಿ ಯೋಸೇಫ ಮರಿಯಳಿಗೆ ಸ್ಥಳವಿರಲಿಲ್ಲ.b ಆ ರಾತ್ರಿ ತಂಗಲು ಒಂದು ಗೋದಲಿಯಲ್ಲದೆ ಇನ್ನಾವ ಆಯ್ಕೆಯೂ ಇರಲಿಲ್ಲ. ಮರಿಯಳು ಪ್ರಥಮ ಬಾರಿ ತೀವ್ರ ನೋವನ್ನು ಅನುಭವಿಸುವುದನ್ನೂ ಅದು ಹೆಚ್ಚಾಗುತ್ತಾ ಬರುವುದನ್ನೂ ಕಂಡಾಗ ಯೋಸೇಫನಿಗಾದ ಕಳವಳವನ್ನು ನಾವು ಊಹಿಸಬಹುದು. ಅನನುಕೂಲ ಸ್ಥಳವಾದ ಈ ಗೋದಲಿಯಲ್ಲಿಯೇ ಅವಳಿಗೆ ಪ್ರಸವವೇದನೆ ಆರಂಭವಾಗಿತ್ತು.
ಮರಿಯಳು ಅನುಭವಿಸಿದ ಸ್ಥಿತಿಗಾಗಿ ಎಲ್ಲೆಲ್ಲಿಯೂ ಇರುವ ಸ್ತ್ರೀಯರು ಅನುಭೂತಿ ತೋರಿಸಬಲ್ಲರು. ಬಾಧ್ಯತೆಯಾಗಿ ಬಂದ ಪಾಪದ ಕಾರಣ ಸ್ತ್ರೀಯರು ಮಕ್ಕಳನ್ನು ಹೆರುವಾಗ ತೀವ್ರನೋವನ್ನು ಅನುಭವಿಸುವರೆಂದು ಸುಮಾರು 4,000 ವರುಷಗಳ ಹಿಂದೆಯೇ ಯೆಹೋವ ದೇವರು ಮುಂತಿಳಿಸಿದ್ದನು. (ಆದಿಕಾಂಡ 3:16) ಮರಿಯಳಿಗೆ ಸಹ ಈ ನೋವಿನಿಂದ ವಿನಾಯಿತಿ ಇರಲಿಲ್ಲ. ಲೂಕನ ವೃತ್ತಾಂತ ಈ ದೃಶ್ಯದ ಹಿಂದಿರುವ ಯಾವುದೇ ವಿಷಯವನ್ನು ತಿಳಿಸದೆ “ಆಕೆಯು ತನ್ನ ಚೊಚ್ಚಲುಮಗನನ್ನು” ಹೆತ್ತಳೆಂದು ಮಾತ್ರ ಹೇಳುತ್ತದೆ. (ಲೂಕ 2:7) ನಿಜ, ಮರಿಯಳ “ಚೊಚ್ಚಲುಮಗನು” ಹುಟ್ಟಿದ್ದನು. ಕಡಿಮೆಪಕ್ಷ ಅವಳ ಏಳು ಮಂದಿ ಮಕ್ಕಳಲ್ಲಿ ಜ್ಯೇಷ್ಠನ ಜನನವಾಗಿತ್ತು. (ಮಾರ್ಕ 6:3) ಈ ಮಗನು ಸದಾ ವಿಶಿಷ್ಟ ಪುತ್ರನಾಗಿರಲಿದ್ದನು. ಏಕೆಂದರೆ ಇವನು ಮರಿಯಳ ಜ್ಯೇಷ್ಠಪುತ್ರನಷ್ಟೇ ಅಲ್ಲ, ಯೆಹೋವ ದೇವರ ‘ಜ್ಯೇಷ್ಠಪುತ್ರನೂ’ ಏಕಜಾತ ಕುಮಾರನೂ ಆಗಿದ್ದನು.—ಕೊಲೊಸ್ಸೆ 1:15.
ಈ ಹಂತದಲ್ಲಿ, ಲೂಕನ ವೃತ್ತಾಂತವು ಒಂದು ಜನಪ್ರಿಯ ವಿವರಣೆಯನ್ನು ಸೇರಿಸುತ್ತದೆ: “ಆಕೆ . . . ಮಗನನ್ನು ಹೆತ್ತು ಬಟ್ಟೆಯಲ್ಲಿ ಸುತ್ತಿ . . . ಗೋದಲಿಯಲ್ಲಿ ಮಲಗಿಸಿದಳು.” (ಲೂಕ 2:7) ಯೇಸುವಿನ ಜನನದ ಕುರಿತ ನಾಟಕಗಳು, ಕಲಾಕೃತಿಗಳು ಮತ್ತು ಭೂಮಿಯಾದ್ಯಂತದ ದೃಶ್ಯಗಳು ಈ ಸಂದರ್ಭವನ್ನು ಭಾವುಕವಾಗಿಸುತ್ತವೆ. ಆದರೆ ನಿಜಸಂಗತಿಯೇನೆಂದು ನೋಡಿ. ಗೋದಲಿಯು ಮೇವು ಹಾಕುವ ಸ್ಥಳ. ಬೇಸಾಯದ ಪ್ರಾಣಿಗಳು ಆ ಬಾನೆಯಲ್ಲಿ ತಿನ್ನುತ್ತವೆ. ಈ ಕುಟುಂಬ ಶುದ್ಧಗಾಳಿಯಿರದ ಅಂಥ ಒಂದು ಹಟ್ಟಿಯಲ್ಲಿ ತಂಗಿತ್ತು. ಆರೋಗ್ಯದ ದೃಷ್ಟಿಯಲ್ಲಿ ಆ ಸ್ಥಳವು ಅಂದೂ ಇಂದೂ ಒಂದು ಒಳ್ಳೆಯ ಸ್ಥಳವಲ್ಲ. ಒಂದುವೇಳೆ ಬೇರೆ ಸ್ಥಳ ಲಭ್ಯವಿರುತ್ತಿದ್ದರೆ, ಇಂಥ ಸ್ಥಳವನ್ನು ಯಾವ ಹೆತ್ತವರಾದರೂ ಆರಿಸಿಕೊಳ್ಳುತ್ತಿದ್ದರೋ? ಹೆತ್ತವರಲ್ಲಿ ಹೆಚ್ಚಿನವರು ತಮ್ಮ ಮಕ್ಕಳಿಗೆ ಅತ್ಯುತ್ತಮವಾದುದನ್ನೇ ಬಯಸುತ್ತಾರಲ್ಲಾ. ಹೀಗಿರುವಾಗ, ಮರಿಯ ಯೋಸೇಫರು ದೇವಪುತ್ರನ ಜನನಕ್ಕೆ ಎಷ್ಟು ಉತ್ತಮ ಸ್ಥಳವನ್ನು ಆರಿಸಿಕೊಳ್ಳಲು ಬಯಸಿದ್ದಿರಬೇಕು!
ಆದರೂ, ತಮ್ಮ ಅನನುಕೂಲತೆಗಳಿಂದಾಗಿ ಅವರು ಕಹಿಮನಸ್ಕರಾಗಲಿಲ್ಲ. ತಮಲ್ಲಿ ಏನು ಇತ್ತೋ ಅದನ್ನು ಅತ್ಯುತ್ತಮವಾಗಿ ಬಳಸಿಕೊಂಡರು. ಉದಾಹರಣೆಗೆ, ಮರಿಯಳು ತಾನೇ ಕೂಸನ್ನು ನೋಡಿಕೊಂಡಳು. ಅದನ್ನು ಬಟ್ಟೆಯಿಂದ ಮೃದುವಾಗಿ ಬಿಗಿದು ಬೆಚ್ಚಗಾಗಿಯೂ ಸುಖವಾಗಿಯೂ ನಿದ್ದೆಹೋಗುವಂತೆ ಮೆಲ್ಲನೆ ಗೋದಲಿಯಲ್ಲಿ ಮಲಗಿಸಿದಳು. ಮರಿಯಳು ತನ್ನ ಸದ್ಯದ ಪರಿಸ್ಥಿತಿಗಳ ಕುರಿತು ಚಿಂತೆಯನ್ನು ಮಾಡದೆ, ಮಗುವಿಗೆ ಯಾವುದು ಉತ್ತಮವೋ ಅದನ್ನು ಮಾಡುವುದರಲ್ಲಿ ನಿರತಳಾದಳು. ಈ ಮಗುವನ್ನು ಆಧ್ಯಾತ್ಮಿಕವಾಗಿ ಪರಿಪಾಲಿಸುವುದೇ ಅತಿ ಪ್ರಾಮುಖ್ಯ ಕೆಲಸವಾಗಿದೆ ಎಂದು ಮರಿಯ ಯೋಸೇಫರಿಬ್ಬರೂ ಅರಿತಿದ್ದರು. (ಧರ್ಮೋಪದೇಶಕಾಂಡ 6:6-8) ಆಧ್ಯಾತ್ಮಿಕ ಕೊರತೆಯುಳ್ಳ ಲೋಕದಲ್ಲಿ ಇಂದು ತಮ್ಮ ಮಕ್ಕಳನ್ನು ಪರಿಪಾಲಿಸುವಾಗ ವಿವೇಚನೆಯುಳ್ಳ ಹೆತ್ತವರು ಇದೇ ರೀತಿಯ ಆದ್ಯತೆಗಳನ್ನು ಬೆಳೆಸಿಕೊಳ್ಳುತ್ತಾರೆ.
-
-
ಆಕೆ ‘ಆ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟು ಯೋಚಿಸುತ್ತಿದ್ದಳು’ಕಾವಲಿನಬುರುಜು—2009 | ಜನವರಿ 1
-
-
b ಆ ದಿನಗಳಲ್ಲಿ ಯಾತ್ರಿಕರಿಗೂ ವರ್ತಕರ ತಂಡಗಳಿಗೂ ತಂಗಲಿಕ್ಕಾಗಿ ಛತ್ರಗಳಲ್ಲಿ ಸ್ಥಳ ಒದಗಿಸುವ ವಾಡಿಕೆಯಿತ್ತು.
-