ಸಕಲ ಮಾನವ ಕುಲಕ್ಕೆ ಸುವಾರ್ತೆ!
“ಮತ್ತೊಬ್ಬ ದೇವದೂತನು ಆಕಾಶ ಮಧ್ಯದಲ್ಲಿ ಹಾರಿಹೋಗುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿ ಹೇಳುವುದಕ್ಕೆ ನಿತ್ಯವಾದ ಶುಭವರ್ತಮಾನ ಅವನಲ್ಲಿತ್ತು.” (ಪ್ರಕಟನೆ 14:6) ಈ ಮಾತುಗಳೊಂದಿಗೆ ವೃದ್ಧ ಅಪೋಸ್ತಲ ಯೋಹಾನನು ತನ್ನ ಪ್ರವಾದನಾ ದರ್ಶನವನ್ನು, ನಮ್ಮ ಸ್ವಂತ ದಿನಗಳಲ್ಲಿ ನೆರವೇರುತ್ತಿರುವ ದರ್ಶನವನ್ನು ವರ್ಣಿಸುತ್ತಾನೆ. ತಕ್ಷೀರುಗಳು, ಮಾಲಿನ್ಯ, ಭಯವಾದ, ಯುದ್ಧಗಳು ವೃದ್ಧಿಯಾಗುತ್ತಿರುವ ಮತ್ತು ವ್ಯಾಪಕ ಆರ್ಥಿಕ ಅಸ್ಥಿರತೆಯ ಈ ಯುಗದಲ್ಲಿ ಸುವಾರ್ತೆಯೊಂದಿದೆ ಎಂದು ತಿಳಿಯುವದೆಷ್ಟು ಆದರಣೆ! ಒಬ್ಬ ದೇವದೂತನು ಪ್ರಕಟಿಸಬೇಕಾದ ಅಷ್ಟೊಂದು ಶುಭವಾರ್ತೆ ಅದ್ಯಾವುದು? ಸಕಲ ಜನಾಂಗ, ಕುಲ, ಭಾಷೆ ಮತ್ತು ಪ್ರಜೆಗಳವರಿಗೆ ಸಾರುವ ಅಗತ್ಯವಿರುವಷ್ಟು ಸಂತೋಷಕರ ವಾರ್ತೆ ಅದ್ಯಾವುದು?
ಸ್ವತಹಾ ದೇವದೂತನು ಸುವಾರ್ತೆಯನ್ನು ಪ್ರಕಟಿಸಿದ ಇನ್ನೊಂದು ಸಂದರ್ಭವನ್ನು ನಾವು ಹಿನ್ನೋಡುವಾಗ ಅದಕ್ಕೆ ನಾವು ಉತ್ತರವನ್ನೀಯಬಲ್ಲೆವು. ಇದು ಯೋಹಾನನು ತನ್ನ ದರ್ಶನವನ್ನು ಕಂಡ ಸುಮಾರು ನೂರು ವರ್ಷ ಮೊದಲು ಅಂದರೆ ಸಾ.ಶ.ಪೂ. ಒಂದನೇ ಶತಕವು ಅಂತ್ಯವಾಗುತ್ತಿದ್ದ ಸಮಯದಲ್ಲಿ. ಬೆತ್ಲೆಹೇಮಿನ ಸಮೀಪದ ಹೊಲದಲ್ಲಿ ಕುರುಬರು ತಮ್ಮ ಕುರೀ ಹಿಂಡುಗಳೊಂದಿಗೆ ಇದ್ದಾಗ, ದೇವದೂತನೊಬ್ಬನು ಕಾಣಿಸಿಕೊಂಡು ಯೇಸುವಿನ ಜನನವನ್ನು ಪ್ರಕಟಿಸುತ್ತಾ ಅಂದದ್ದು: “ಹೆದರಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ, ಆತನು ಕರ್ತನಾಗಿರುವ ಕ್ರಿಸ್ತನೇ.”—ಲೂಕ 2:10, 11.
ಯೇಸುವಿನ ಜನನವು ನಿಜವಾಗಿಯೂ “ಮಹಾ ಸಂತೋಷವನ್ನುಂಟುಮಾಡುವ ಶುಭಸಮಾಚಾರ”ವಾಗಿತ್ತು. ಅವನು ವಾಗ್ದಾನಿಸಿದ ಕ್ರಿಸ್ತನೂ ರಕ್ಷಕನೂ ಆಗಿ ಬೆಳೆದು, ಸುಹೃದಯಿಗಳಾದ ವಿಶ್ವಾಸಿಗಳು ಜೀವ ಪಡೆಯುವಂತೆ ತನ್ನ ಪರಿಪೂರ್ಣ ಮಾನವ ಜೀವವನ್ನು ತೆತ್ತವನು. ಅದಲ್ಲದೆ, ದೇವರ ರಾಜ್ಯದ ರಾಜನೂ “ಶಾಂತಿಯ ಪ್ರಭುವೂ” ಆದ ಆತನ ಆಳಿಕೆಯಲ್ಲಿ ಕೊನೆಗೂ ಮಾನವರಿಗೆ ಶಾಂತಿ ಮತ್ತು ನ್ಯಾಯವು ಸಿಗಲಿಕ್ಕಿತ್ತು. (ಯೆಶಾಯ 9:6; ಲೂಕ 1:33) ನಿಜವಾಗಿ ಅವನ ಜನನವು ದೇವದೂತನಿಂದ ಪ್ರಕಟಿಸಲು ಅರ್ಹವಾದ ಸುವಾರ್ತೆಯಾಗಿತ್ತು!
ಯೇಸು ಅರಸನಾಗಿದ್ದಾನೆ
ಮೊದಲನೆ ಶತಮಾನದಲ್ಲಿ ಯೇಸು ತನಗಾಗಿರುವ ದೇವರ ಉದ್ದೇಶಗಳಲ್ಲಿ ಅನೇಕವನ್ನು ನೆರವೇರಿಸಿದರೂ ದೇವರ ರಾಜ್ಯದ ರಾಜನಾಗಿ ಆಗ ಸಿಂಹಾಸನಾರೂಢನಾಗಲಿಲ್ಲ. ಈ ಪತ್ರಿಕೆಯು ಅನೇಕ ಬಾರಿ ತೋರಿಸಿದಂತೆ, ಇದು 1914 ರ ವರೆಗೆ ಸಂಭವಿಸಲಿಲ್ಲ. ಪ್ರವಾದನೆಯ ನೆರವೇರಿಕೆಯು ಸ್ಪಷ್ಟವಾಗಿ ತೋರಿಸುವಂತೆ ಆ ವರ್ಷದಲ್ಲಿ ದೇವರ ರಾಜ್ಯವು ಪರಲೋಕದಲ್ಲಿ ಸ್ಥಾಪನೆಯಾಯಿತು. (ಪ್ರಕಟನೆ 12:10, 12) 1914ರಲ್ಲಿ ಅತಿ ಕೆಟ್ಟ ವಾರ್ತೆ ಅಲ್ಲಿದದ್ದಾದರೂ—ಒಂದನೇ ಲೋಕಯುದ್ಧಾರಂಭ—ದೇವರ ರಾಜ್ಯದ ಜನನವು ವಾರ್ತೆಗಳಲ್ಲಿ ಅತ್ಯುತ್ತಮವಾಗಿತ್ತು. ಆದ್ದರಿಂದಲೇ ನಮ್ಮೀ ದಿನಗಳಿಗಾಗಿ ಯೇಸು ಪ್ರವಾದಿಸಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆ ಸರ್ವ ಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.”—ಮತ್ತಾಯ 24:14.
ಯೇಸುವಿನ ಪ್ರವಾದನೆಯು ನೆರವೇರಿದೆಯೋ? ಉತ್ತರವು ಹೌದೆಂದೇ! ಮತ್ತು ಯೋಹಾನನ ಪ್ರವಾದನಾ ದರ್ಶನವೂ ನೆರವೇರಿದೆ. ಯೋಹಾನನು ಕಂಡ ಆ ಅದೃಶ್ಯ ದೇವದೂತನನ್ನು ನಾವು ಕಾಣಲಾರೆವು ನಿಜ. ಆದರೆ “ಎಲ್ಲಾ ಜನಾಂಗ, ಕುಲ, ಭಾಷೆ ಮತ್ತು ಪ್ರಜೆಗಳಿಗೆ” ದೇವದೂತನ ಸುವಾರ್ತೆಯನ್ನು ಸಾರುವ ಯೆಹೋವನ ಸಾಕ್ಷಿಗಳಾದರೋ ಅತಿ ದೃಶ್ಯರು. 212 ದೇಶ ಮತ್ತು ಸಮುದ್ರ ದ್ವೀಪಗಳಲ್ಲಿ ಅವರ ದ್ವನಿಯು ಕೇಳಿಸುತ್ತಲಿದೆ. ಜನಸಮೂಹಗಳು ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. ಅವರ ಕೆಲವು ಅನುಭವಗಳು ದೇವರ ರಾಜ್ಯದ ಸುವಾರ್ತೆಯು ನಿಜವಾಗಿಯೂ ಎಷ್ಟು ಉತ್ತಮವೆಂಬದನ್ನು ತೋರಿಸುತ್ತವೆ. (w90 1/1)