ದೇವರ ದೃಷ್ಟಿಯಲ್ಲಿ ನೀವು ಅಮೂಲ್ಯರಾಗಿದ್ದೀರಿ!
“ನಾನು ನಿನ್ನನ್ನು ಪ್ರೀತಿಸಿರುವದು ಶಾಶ್ವತ ಪ್ರೇಮದಿಂದಲೇ; ಆದಕಾರಣ ನಿನ್ನನ್ನು ಮಮತೆ (“ಪ್ರೀತಿಪೂರ್ವಕವಾದ ದಯೆ,” NW) ಯಿಂದ ಸೆಳೆದುಕೊಂಡಿದ್ದೇನೆ.”—ಯೆರೆಮೀಯ 31:3.
1. ಯೇಸುವಿನ ದಿನದ ಸಾಮಾನ್ಯ ಜನರ ಕಡೆಗಿನ ಆತನ ಮನೋಭಾವವು ಫರಿಸಾಯರ ಮನೋಭಾವಕ್ಕಿಂತ ಹೇಗೆ ಭಿನ್ನವಾಗಿತ್ತು?
ಆತನ ಕಣ್ಣುಗಳಲ್ಲಿ ಪ್ರೀತಿಯ ಚಿಂತೆಯನ್ನು ಅವರು ಕಾಣಬಹುದಿತ್ತು. ಈ ಮನುಷ್ಯನು, ಯೇಸು, ಅವರ ಧಾರ್ಮಿಕ ಮುಖಂಡರಂತಿರಲಿಲ್ಲ; ಆತನು ಕಾಳಜಿವಹಿಸಿದನು. ಅವರು “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿ”ದ್ದ ಕಾರಣದಿಂದ ಈ ಜನರಿಗಾಗಿ ಆತನು ಕನಿಕರಪಟ್ಟನು. (ಮತ್ತಾಯ 9:36) ಅವರ ಧಾರ್ಮಿಕ ಮುಖಂಡರು, ಒಬ್ಬ ಪ್ರೀತಿಯ, ದಯಾಳು ದೇವರನ್ನು ಪ್ರತಿನಿಧಿಸುತ್ತಾ ಪ್ರೀತಿಯ ಕುರುಬರಾಗಿರಬೇಕಿತ್ತು. ಅದಕ್ಕೆ ಬದಲಾಗಿ, ಅವರು ಸಾಮಾನ್ಯ ಜನರನ್ನು ಕೇವಲ ಅಲ್ಪರು ಮತ್ತು ಶಾಪಗ್ರಸ್ತರೋಪಾದಿ ಕಂಡರು!a (ಯೋಹಾನ 7:47-49; ಹೋಲಿಸಿ ಯೆಹೆಜ್ಕೇಲ 34:4.) ಸ್ಪಷ್ಟವಾಗಿಗಿಯೇ, ಅಂತಹ ಒಂದು ವಕ್ರವಾದ, ಅಶಾಸ್ತ್ರೀಯ ಮನೋಭಾವವು, ತನ್ನ ಜನರ ಕುರಿತಾದ ಯೆಹೋವನ ವೀಕ್ಷಣಕ್ಕಿಂತ ಬಹಳ ಭಿನ್ನವಾಗಿತ್ತು. “ನಾನು ನಿನ್ನನ್ನು ಪ್ರೀತಿಸಿರುವದು ಶಾಶ್ವತ ಪ್ರೇಮದಿಂದಲೇ” ಎಂದು ತನ್ನ ಜನಾಂಗವಾದ ಇಸ್ರಾಯೇಲಿಗೆ ಆತನು ಹೇಳಿದ್ದನು.—ಯೆರೆಮೀಯ 31:3.
2. ಯೋಬನು ದೇವರ ದೃಷ್ಟಿಯಲ್ಲಿ ಅಯೋಗ್ಯನಾಗಿದ್ದನೆಂದು ಅವನ ಮೂವರು ಸಂಗಾತಿಗಳು ಅವನಿಗೆ ಮನಗಾಣಿಸಲು ಹೇಗೆ ಪ್ರಯತ್ನಿಸಿದರು?
2 ಆದರೂ, ಯೆಹೋವನ ಪ್ರೀತಿಯ ಕುರಿಗಳು ಅಯೋಗ್ಯವಾಗಿದ್ದವು ಎಂದು ಮನಗಾಣಿಸಲು ಪ್ರಯತ್ನಿಸಿದವರಲ್ಲಿ ಫರಿಸಾಯರು ನಿಶ್ಚಯವಾಗಿಯೂ ಮೊದಲಿಗರಾಗಿರಲಿಲ್ಲ. ಯೋಬನ ಉದಾಹರಣೆಯನ್ನು ಪರಿಗಣಿಸಿರಿ. ಯೆಹೋವನ ದೃಷ್ಟಿಯಲ್ಲಿ ಅವನು ನೀತಿವಂತನೂ, ನಿರ್ದೋಷಿಯೂ ಆಗಿದ್ದನು, ಆದರೆ ಯೋಬನು ಒಬ್ಬ ಅನೈತಿಕನಾದ, ದುಷ್ಟ ಧರ್ಮಭ್ರಷ್ಟನಾಗಿದ್ದು, ತನ್ನ ಅಸ್ತಿತ್ವದ ಕುರಿತಾದ ಯಾವುದೇ ಪುರಾವೆಯನ್ನು ಉಳಿಸದೆ ಸಾಯುವನೆಂದು ಮೂವರು “ಸಾಂತ್ವನಕಾರರು” ವ್ಯಂಗ್ಯವಾಗಿ ಹೇಳಿದರು. ದೇವರು ತನ್ನ ಸ್ವಂತ ದೇವದೂತರನ್ನೂ ನಂಬದ ಕಾರಣ ಮತ್ತು ಸ್ವತಃ ಪರಲೋಕವನ್ನೇ ಅಶುದ್ಧವಾಗಿ ದೃಷ್ಟಿಸುವುದರಿಂದ, ಯೋಬನ ವಿಷಯದಲ್ಲಿ ದೇವರು ಯಾವುದೇ ನೀತಿಯನ್ನು ಬೆಲೆಯುಳ್ಳದ್ದೆಂದು ಎಣಿಸಲಾರನೆಂದು ಅವರು ಒತ್ತಿಹೇಳಿದರು!—ಯೋಬ 1:8; 4:18; 15:15, 16; 18:17-19; 22:3.
3. ಅವರು ಅಯೋಗ್ಯರು ಮತ್ತು ಪ್ರೀತಿಸಲ್ಪಡದವರು ಆಗಿದ್ದಾರೆಂದು ಜನರನ್ನು ಮನಗಾಣಿಸಲು ಇಂದು ಸೈತಾನನು ಯಾವ ಸಾಧನವನ್ನು ಉಪಯೋಗಿಸುತ್ತಾನೆ?
3 ಇಂದು, ಅವರು ಪ್ರೀತಿಸಲ್ಪಡದವರೂ, ಅಯೋಗ್ಯರೂ ಆಗಿದ್ದಾರೆಂದು ಜನರಿಗೆ ಮನಗಾಣಿಸಲು ಪ್ರಯತ್ನಿಸುವ ಈ ‘ಕುಟಿಲ ಕೃತ್ಯ’ ವನ್ನು ಸೈತಾನನು ಇನ್ನೂ ಉಪಯೋಗಿಸುತ್ತಿದ್ದಾನೆ. (ಎಫೆಸ 6:11, ಪಾದಟಿಪ್ಪಣಿ) ಅವನು ಅನೇಕವೇಳೆ ಜನರ ಅಹಂಕಾರಕ್ಕೆ ಹಿಡಿಸುವ ವಿಷಯಗಳ ಮೂಲಕ ಅವರನ್ನು ಮೋಸಗೊಳಿಸುತ್ತಾನೆ ಎಂಬುದು ಸತ್ಯ. (2 ಕೊರಿಂಥ 11:3) ಆದರೆ ಆಕ್ರಮಣಸಾಧ್ಯವಿರುವವರ ಆತ್ಮಗೌರವವನ್ನು ನಿಗ್ರಹಿಸುವುದರಲ್ಲಿ ಸಹ ಅವನು ಸಂತೋಷಿಸುತ್ತಾನೆ. ನಿರ್ದಿಷ್ಟವಾಗಿ ಈ ಕಠಿನವಾದ “ಕಡೇ ದಿವಸಗಳ”ಲ್ಲಿ ಇದು ಹಾಗಿರುತ್ತದೆ. ಇಂದು ಅನೇಕರು “ಮಮತೆಯಿಲ್ಲದ” ಕುಟುಂಬಗಳಲ್ಲಿ ಬೆಳೆಯುತ್ತಾರೆ; ಅನೇಕರು ಉಗ್ರತೆಯುಳ್ಳವರೂ, ಸ್ವಾರ್ಥಿಗಳೂ, ಮತ್ತು ಅತಿ ಹಠಮಾರಿಗಳೂ ಆಗಿರುವವರನ್ನು ದಿನನಿತ್ಯವೂ ನಿಭಾಯಿಸಬೇಕಾಗಿದೆ. (2 ತಿಮೊಥೆಯ 3:1-5) ಅನೇಕ ವರ್ಷಗಳ ಹಿಂಸೆ, ಕುಲವಾದ, ದ್ವೇಷ, ಅಥವಾ ದುರುಪಯೋಗವು, ಅಂಥವರನ್ನು ತಾವು ಅಯೋಗ್ಯರು ಮತ್ತು ಪ್ರೀತಿಸಸಾಧ್ಯವಿಲ್ಲದವರು ಆಗಿದ್ದೇವೆಂದು ನಂಬುವಂತೆ ಮನಗಾಣಿಸಿರಬಹುದು. ಒಬ್ಬ ಮನುಷ್ಯನು ಬರೆದದ್ದು: “ನನಗೆ ಇನ್ನಾರ ಮೇಲೆ ಪ್ರೀತಿಯ ಅನಿಸಿಕೆಯಾಗುವುದೂ ಇಲ್ಲ, ಯಾರಾಗಲಿ ನನ್ನನ್ನು ಪ್ರೀತಿಸುತ್ತಾರೆಂಬ ಅನಿಸಿಕೆಯೂ ಇಲ್ಲ. ದೇವರು ನನ್ನ ಕುರಿತು ಸ್ವಲ್ಪವಾದರೂ ಚಿಂತಿಸುತ್ತಾನೆಂದು ನಂಬುವುದನ್ನು ನಾನು ಬಹಳ ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತೇನೆ.”
4, 5. (ಎ) ವೈಯಕ್ತಿಕ ನಿಷ್ಪಯ್ರೋಜಕತೆಯ ಕಲ್ಪನೆಯು ಶಾಸ್ತ್ರವಚನಗಳಿಗೆ ವ್ಯತಿರಿಕ್ತವಾಗಿದೆ ಏಕೆ? (ಬಿ) ನಮ್ಮ ಯಾವ ಪ್ರಯತ್ನಗಳೂ ಯಾವುದಕ್ಕೂ ಅರ್ಹವಿಲ್ಲವೆಂದು ನಾವು ನಂಬುವುದರ ಕುರಿತಾದ ಒಂದು ಅಪಾಯಕರ ಪರಿಣಾಮವೇನು?
4 ವೈಯಕ್ತಿಕ ನಿಷ್ಪಯ್ರೋಜಕತೆಯ ಕಲ್ಪನೆಯು, ದೇವರ ವಾಕ್ಯದ ಸತ್ಯದ ಸಾರವಾದ, ಪ್ರಾಯಶ್ಚಿತದ್ತ ಬೋಧನೆ ಘಾತಮಾಡುತ್ತದೆ. (ಯೋಹನಾ 3:16) ನಾವು ಸದಾ ಜೀವಿಸುವಂತೆ ಒಂದು ಅವಕಾಶವನ್ನು ಕೊಂಡುಕೊಳ್ಳಲಿಕ್ಕಾಗಿ ದೇವರು ಅಷ್ಟು ಉನ್ನತವಾದ ಒಂದು ಬೆಲೆಯನ್ನು, ತನ್ನ ಸ್ವಂತ ಪುತ್ರನ ಅಮೂಲ್ಯವಾದ ಜೀವವನ್ನು ತೆರಸಾಧ್ಯವಿರುವಲ್ಲಿ, ಖಂಡಿತವಾಗಿ ಆತನು ನಮ್ಮನ್ನು ಪ್ರೀತಿಸಬೇಕು; ಖಂಡಿತವಾಗಿ ಆತನು ನಮ್ಮನ್ನು ಅಮೂಲ್ಯರನ್ನಾಗಿ ಪರಿಗಣಿಸುತ್ತಾನೆ!
5 ಇದಲ್ಲದೆ, ನಾವು ದೇವರನ್ನು ಅಸಂತೋಷಗೊಳಿಸುತ್ತಿದ್ದೇವೆ, ನಮ್ಮ ಯಾವ ಪ್ರಯತ್ನಗಳೂ ಯಾವುದಕ್ಕೂ ಅರ್ಹವಲ್ಲ ಎಂದು ಭಾವಿಸುವುದು ಎಷ್ಟು ನಿರುತ್ಸಾಹಗೊಳಿಸುವಂತಹದ್ದಾಗಿರಸಾಧ್ಯವಿದೆ! (ಹೋಲಿಸಿ ಜ್ಞಾನೋಕ್ತಿ 24:10.) ನಕಾರಾತ್ಮಕವಾದ ಈ ದೃಷ್ಟಿಕೋನದಿಂದ, ಸಾಧ್ಯವಿರುವಲ್ಲೆಲ್ಲಾ ದೇವರಿಗೆ ನಮ್ಮ ಸೇವೆಯನ್ನು ಅಭಿವೃದ್ಧಿಗೊಳಿಸುವಂತೆ ನಮಗೆ ಸಹಾಯ ಮಾಡಲು ಯೋಜಿಸಲ್ಪಟ್ಟ ಸದುದ್ದೇಶದ ಉತ್ತೇಜನವು ಸಹ, ಕೆಲವರಿಗೆ ಖಂಡನೆಯಾಗಿ ಧ್ವನಿಸಬಹುದು. ನಾವು ಏನನ್ನೇ ಮಾಡಲಿ ಅದು ಸಾಕಾಗಿರುವುದಿಲ್ಲ ಎಂಬ ನಮ್ಮ ಸ್ವಂತ ಆಂತರಿಕ ಮನವರಿಕೆಯನ್ನು ಪ್ರತಿಧ್ವನಿಸುವಂತೆ ಅದು ತೋರಬಹುದು.
6. ನಮ್ಮ ಕುರಿತು ವಿಪರೀತ ನಕಾರಾತ್ಮಕವಾದ ಭಾವನೆಗಳಿಗೆ ಯಾವುದು ಅತ್ಯುತ್ತಮವಾದ ಪರಿಹಾರವಾಗಿದೆ?
6 ನಿಮ್ಮಲ್ಲೀ ಅಂತಹ ನಕಾರಾತ್ಮಕವಾದ ಭಾವನೆಗಳನ್ನು ನೀವು ಗ್ರಹಿಸುವಲ್ಲಿ, ನಿರಾಶರಾಗಬೇಡಿರಿ. ಆಗಾಗ್ಗೆ ನಮ್ಮಲ್ಲಿ ಅನೇಕರು ಅನಾಯ್ಯವಾಗಿ ನಮ್ಮನ್ನು ಕಟುವಾಗಿ ಟೀಕಿಸಿಕೊಳ್ಳುತ್ತೇವೆ. ಮತ್ತು ದೇವರ ವಾಕ್ಯವು “ವಿಷಯಗಳನ್ನು ಸರಿಪಡಿಸ” ಲಿಕ್ಕಾಗಿ ಹಾಗೂ “ಬಲವಾಗಿ ಬೇರೂರಿರುವ ವಿಷಯಗಳನ್ನು ಕೆಡವಿಹಾಕು” ವುದಕ್ಕಾಗಿ ಯೋಜಿಸಲ್ಪಟ್ಟಿದೆ ಎಂಬುದನ್ನು ಜ್ಞಾಪಕದಲ್ಲಿಡಿ. (2 ತಿಮೊಥೆಯ 3:16, NW; 2 ಕೊರಿಂಥ 10:4, NW) ಅಪೊಸ್ತಲ ಯೋಹಾನನು ಬರೆದದ್ದು: “ನಾವು ಸತ್ಯಕ್ಕೆ ಸೇರಿದವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ. ಮತ್ತು ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು ನಾವು ತಿಳಿದು ದೇವರ ಸಮಕ್ಷಮದಲ್ಲಿ ನಮ್ಮ ಹೃದಯವನ್ನು ಸಮಾಧಾನಪಡಿಸುವೆವು.” (1 ಯೋಹಾನ 3:19, 20) ಹಾಗಾದರೆ, ನಾವು ಯೆಹೋವನಿಗೆ ಅಮೂಲ್ಯರಾಗಿದ್ದೇವೆಂದು ನಮಗೆ ಬೈಬಲ್ ಕಲಿಸುವ ಮೂರು ವಿಧಗಳನ್ನು ನಾವು ಪರಿಗಣಿಸೋಣ.
ಯೆಹೋವನು ನಿಮ್ಮನ್ನು ಅಮೂಲ್ಯರೆಂದೆಣಿಸುತ್ತಾನೆ
7. ದೇವರ ದೃಷ್ಟಿಯಲ್ಲಿ ತಮ್ಮ ಮೌಲ್ಯದ ಕುರಿತಾಗಿ ಎಲ್ಲ ಕ್ರೈಸ್ತರಿಗೆ ಯೇಸು ಹೇಗೆ ಕಲಿಸಿದನು?
7 ಪ್ರಥಮವಾಗಿ, ದೇವರ ದೃಷ್ಟಿಯಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರಿಗೆ ವೈಯಕ್ತಿಕ ಮೌಲ್ಯವಿದೆ ಎಂದು ಬೈಬಲು ನೇರವಾಗಿ ಕಲಿಸುತ್ತದೆ. ಯೇಸು ಹೇಳಿದ್ದು: “ಐದು ಗುಬ್ಬಿಗಳನ್ನು ಎರಡು ದುಡ್ಡಿಗೆ ಮಾರುತ್ತಾರಲ್ಲಾ? ಆದಾಗ್ಯೂ ಅವುಗಳಲ್ಲಿ ಒಂದಾದರೂ ದೇವರಿಗೆ ಮರೆತುಹೋಗುವದಿಲ್ಲ. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಲೂಕ 12:6, 7) ಆ ದಿನಗಳಲ್ಲಿ, ಆಹಾರಕ್ಕಾಗಿ ಮಾರಲ್ಪಡುತ್ತಿದ್ದ ಪಕ್ಷಿಗಳಲ್ಲಿ ಗುಬ್ಬಿಯು ಅತ್ಯಂತ ಅಗದ್ಗ ಪಕ್ಷಿಯಾಗಿತ್ತು, ಆದರೂ ಅದರ ಸೃಷ್ಟಿಕರ್ತನಿಂದ ಅವುಗಳಲ್ಲಿ ಒಂದೂ ಅಲಕ್ಷಿಸಲ್ಪಡಲಿಲ್ಲ. ಹೀಗೆ ಮೈಮರಸುವ ಒಂದು ವೈದೃಶ್ಯಕ್ಕಾಗಿ ತಳಪಾಯವು ಸ್ಥಾಪಿಸಲ್ಪಡುತ್ತದೆ: ಎಷ್ಟೋ ಅತ್ಯಧಿಕವಾಗಿ ಅಮೂಲ್ಯರಾಗಿರುವ ಮಾನವರ ಸಂಬಂಧದಲ್ಲಿ, ದೇವರು ಪ್ರತಿಯೊಂದು ವಿವರವನ್ನೂ ತಿಳಿದಿದ್ದಾನೆ. ನಮ್ಮ ತಲೆಗಳ ಎಲ್ಲ ಕೂದಲುಗಳು ಒಂದೊಂದಾಗಿ ಎಣಿಸಲ್ಪಟ್ಟಿವೆಯೋ ಎಂಬಂತೆ ಅದು ಇದೆ!
8. ಯೆಹೋವನು ನಮ್ಮ ಕೂದಲುಗಳನ್ನು ಎಣಿಸಶಕ್ತನು ಎಂಬುದನ್ನು ಆಲೋಚಿಸುವುದು ವಾಸ್ತವವಾದದ್ದಾಗಿದೆ ಏಕೆ?
8 ಕೂದಲುಗಳು ಎಣಿಸಲ್ಪಡುವುದೊ? ಯೇಸುವಿನ ದೃಷ್ಟಾಂತದ ಈ ಅಂಶವು ಅವಾಸ್ತವಿಕವಾದದ್ದೆಂದು ನೀವು ಸಂದೇಹಿಸುವುದಾದರೆ, ಪರಿಗಣಿಸಿರಿ: ದೇವರು ತನ್ನ ನಂಬಿಗಸ್ತ ಸೇವಕರನ್ನು ಎಷ್ಟು ಸಂಪೂರ್ಣವಾಗಿ ಜ್ಞಾಪಿಸಿಕೊಳ್ಳುತ್ತಾನೆಂದರೆ, ಅವರ ಸಂಕೀರ್ಣವಾದ ತಳಿಶಾಸ್ತ್ರದ ನಿಯಮಾವಳಿಗಳು ಮತ್ತು ಅನೇಕ ವರ್ಷಗಳ ಅವರ ಎಲ್ಲ ನೆನಪುಗಳು ಹಾಗೂ ಅನುಭವಗಳನ್ನು ಒಳಗೊಂಡು, ಪ್ರತಿಯೊಂದು ವಿವರದಲ್ಲಿ ಅವರನ್ನು ಮತ್ತೆ ಸೃಷ್ಟಿಸಿ, ಅವರನ್ನು ಪುನರುತ್ಥಾನಗೊಳಿಸಲು ಶಕ್ತನಾಗಿದ್ದಾನೆ. ನಮ್ಮ ಕೂದಲು (ಸರಾಸರಿ ತಲೆಯು ಸುಮಾರು 100,000 ಕೂದಲುಗಳನ್ನು ಹುಟ್ಟಿಸುತ್ತದೆ) ಗಳನ್ನು ಎಣಿಸುವುದು ಹೋಲಿಕೆಯಲ್ಲಿ ಒಂದು ಸರಳವಾದ ಅದ್ಭುತಕಾರ್ಯವಾಗಿರಸಾಧ್ಯವಿದೆ!—ಲೂಕ 20:37, 38.
ಯೆಹೋವನ ದೃಷ್ಟಿಯಲ್ಲಿ ನಮಗೆ ಯಾವ ಮೌಲ್ಯವಿದೆ?
9. (ಎ) ಯೆಹೋವನು ಅಮೂಲ್ಯವೆಂದೆಣಿಸುವ ಕೆಲವು ಗುಣಗಳು ಯಾವುವು? (ಬಿ) ಅಂತಹ ಗುಣಗಳು ಆತನಿಗೆ ಅಮೂಲ್ಯವಾದವುಗಳಾಗಿವೆ ಎಂದು ನೀವು ಏಕೆ ಯೋಚಿಸುತ್ತೀರಿ?
9 ಎರಡನೆಯದಾಗಿ, ನಮ್ಮಲ್ಲಿ ಯಾವುದನ್ನು ಯೆಹೋವನು ಅಮೂಲ್ಯವೆಂದೆಣಿಸುತ್ತಾನೆಂದು ಬೈಬಲ್ ನಮಗೆ ಕಲಿಸುತ್ತದೆ. ಸುಲಭವಾಗಿ ಹೇಳುವುದಾದರೆ, ನಮ್ಮ ಸಕಾರಾತ್ಮಕವಾದ ಗುಣಗಳಲ್ಲಿ ಮತ್ತು ನಮ್ಮ ಪ್ರಯತ್ನಗಳಲ್ಲಿ ಆತನು ಸಂತೋಷಿಸುತ್ತಾನೆ. ರಾಜ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ಹೇಳಿದ್ದು: “ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ.” (1 ಪೂರ್ವಕಾಲವೃತ್ತಾಂತ 28:9) ಈ ಹಿಂಸಾತ್ಮಕ, ದ್ವೇಷಭರಿತ ಲೋಕದಲ್ಲಿ, ದೇವರು ನೂರಾರು ಕೋಟಿ ಮಾನವ ಹೃದಯಗಳನ್ನು ಪರೀಕ್ಷಿಸುವಾಗ, ಶಾಂತಿ, ಸತ್ಯ ಮತ್ತು ನೀತಿಯನ್ನು ಪ್ರೀತಿಸುವ ಒಂದು ಹೃದಯವನ್ನು ಆತನು ಕಂಡುಕೊಳ್ಳುವಾಗ, ಆತನೆಷ್ಟು ಸಂತೋಷಗೊಳ್ಳಬೇಕು! (ಹೋಲಿಸಿ ಯೋಹಾನ 1:47; 1 ಪೇತ್ರ 3:4.) ಆತನೆಡೆಗೆ ಪ್ರೀತಿಯಿಂದ ಉಕ್ಕುವ, ಆತನ ಕುರಿತಾಗಿ ಕಲಿಯಲು ಮತ್ತು ಅಂತಹ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ಹುಡುಕುವ ಒಂದು ಹೃದಯವನ್ನು ದೇವರು ಕಂಡುಕೊಳ್ಳುವಾಗ ಏನು ಸಂಭವಿಸುತ್ತದೆ? ತನ್ನ ಕುರಿತು ಇತರರೊಂದಿಗೆ ಮಾತಾಡುವವರಿಗೆ ತಾನು ಕಿವಿಗೊಡುತ್ತೇನೆಂದು ಮತ್ತು ‘ಭಯಭಕ್ತಿಯಿಂದ ಯೆಹೋವನಿಗೆ ನಾಮಸ್ಮರಣೆಮಾಡುವ’ ವರೆಲ್ಲರಿಗಾಗಿ “ಜ್ಞಾಪಕದ ಪುಸ್ತಕ”ವು ಇದೆಯೆಂದೂ, ಮಲಾಕಿಯ 3:16 ರಲ್ಲಿ ಯೆಹೋವನು ನಮಗೆ ಹೇಳುತ್ತಾನೆ. ಅಂತಹ ಗುಣಗಳು ಆತನಿಗೆ ಅಮೂಲ್ಯವಾಗಿವೆ!
10, 11. (ಎ) ಯೆಹೋವನು ಅವರ ಒಳ್ಳೆಯ ಗುಣಗಳನ್ನು ಅಮೂಲ್ಯವೆಂದೆಣಿಸುತ್ತಾನೆ ಎಂಬ ಪುರಾವೆಯನ್ನು ಹೇಗೆ ಕೆಲವರು ಕಡೆಗಣಿಸುವ ಪ್ರವೃತ್ತಿಯವರಾಗಿರಬಹುದು? (ಬಿ) ಯಾವುದೇ ಪ್ರಮಾಣದಲ್ಲಿರುವ ಒಳ್ಳೆಯ ಗುಣಗಳನ್ನು ಯೆಹೋವನು ಅಮೂಲ್ಯವೆಂದೆಣಿಸುತ್ತಾನೆ ಎಂಬುದನ್ನು ಅಬೀಯನ ಉದಾಹರಣೆಯು ಹೇಗೆ ತೋರಿಸುತ್ತದೆ?
10 ಆದರೂ, ಆತ್ಮದೂಷಿತ ಹೃದಯವು, ಯೆಹೋವನ ದೃಷ್ಟಿಯಲ್ಲಿರುವ ನಮ್ಮ ಮೌಲ್ಯದ ಅಂತಹ ಪುರಾವೆಗಳನ್ನು ನಿರೋಧಿಸಬಹುದು. ‘ಆದರೆ ಅಂತಹ ಗುಣಗಳಲ್ಲಿ ನನಗಿಂತಲೂ ಹೆಚ್ಚು ಆದರ್ಶಪ್ರಾಯರಾಗಿರುವ ಇತರರು ಅನೇಕರಿದ್ದಾರೆ. ಯೆಹೋವನು ನನ್ನನ್ನು ಅವರೊಂದಿಗೆ ಹೋಲಿಸುವಾಗ ಆತನೆಷ್ಟು ನಿರಾಶೆಗೊಂಡಿರಬೇಕು!’ ಎಂದು ಆತ್ಮದೂಷಿತ ಹೃದಯವೊಂದು ಒತ್ತಯಾಪೂರ್ವಕವಾಗಿ ಪಿಸುಗುಟ್ಟಬಹುದು. ಯೆಹೋವನು ಹೋಲಿಕೆಯನ್ನು ಮಾಡುವುದಿಲ್ಲ, ಅಥವಾ ಕಟ್ಟುನಿಟ್ಟಿನ ಮಟ್ಟಗಳು ಆತನಲ್ಲಿಲ್ಲ. (ಗಲಾತ್ಯ 6:4) ಬಹಳ ಸೂಕ್ಷ್ಮತೆಯಿಂದ ಆತನು ಹೃದಯಗಳನ್ನು ಓದುತ್ತಾನೆ ಮತ್ತು ಎಲ್ಲ ಪ್ರಮಾಣಗಳಲ್ಲಿರುವ ಒಳ್ಳೆಯ ಗುಣಗಳನ್ನು ಆತನು ಅಮೂಲ್ಯವೆಂದೆಣಿಸುತ್ತಾನೆ.
11 ಉದಾಹರಣೆಗೆ, ಅರಸನಾದ ಯಾರೊಬ್ಬಾಮನ ಇಡೀ ಧರ್ಮಭ್ರಷ್ಟ ಸಂತತಿಯು ಸಂಹರಿಸಲ್ಪಟ್ಟು, “ಕಸ” ದಂತೆ ತೆಗೆದುಹಾಕಲ್ಪಡಬೇಕೆಂದು ಯೆಹೋವನು ಆಜ್ಞಾಪಿಸಿದಾಗ, ಅರಸನ ಕುಮಾರರಲ್ಲಿ ಒಬ್ಬನಾದ ಅಬೀಯನು ಮಾತ್ರ ಯೋಗ್ಯವಾಗಿ ಹೂಳಲ್ಪಡುವಂತೆ ದೇವರು ಅಪ್ಪಣೆಕೊಟ್ಟನು. ಏಕೆ? “ಇಸ್ರಾಯೇಲ್ ದೇವರಾದ ಯೆಹೋವನ ಕಡೆಗೆ ಯಾವುದೊ ಒಳ್ಳೆಯ ವಿಷಯವು ಅವನಲ್ಲಿ ಕಂಡುಕೊಳ್ಳಲ್ಪಟ್ಟಿತು.” (1 ಅರಸು 14:10, 13, NW) ಅಬೀಯನು ಯೆಹೋವನ ಒಬ್ಬ ನಂಬಿಗಸ್ತ ಆರಾಧಕನಾಗಿದ್ದನು ಎಂದು ಇದು ಅರ್ಥೈಸುತ್ತದೊ? ನಿಶ್ಚಯವಾಗಿ ಇಲ್ಲ, ಏಕೆಂದರೆ ಅವನು ತನ್ನ ದುಷ್ಟ ಕುಟುಂಬದ ಉಳಿದವರು ಮರಣಪಟ್ಟಂತೆ ಮರಣಪಟ್ಟನು. (ಧರ್ಮೋಪದೇಶಕಾಂಡ 24:16) ಆದರೂ, ಯೆಹೋವನು ಅಬೀಯನ ಹೃದಯದಲ್ಲಿ ತಾನು ಕಂಡಿದ್ದ “ಯಾವುದೊ ಒಳ್ಳೆಯ ವಿಷಯ”ಕ್ಕೆ ಬೆಲೆಕೊಟ್ಟನು ಮತ್ತು ಅದಕ್ಕನುಗುಣವಾಗಿ ಕಾರ್ಯನಡಿಸಿದನು. ಮ್ಯಾಥ್ಯೂ ಹೆನ್ರಿಸ್ ಕಾಮೆಂಟರಿ ಆನ್ ದ ಹೋಲ್ ಬೈಬಲ್ ದಾಖಲಿಸುವುದು: “ಆ ವಿಧದ ತುಸು ಒಳ್ಳೆಯ ಸಂಗತಿಯು ಎಲ್ಲಿದೆಯೊ, ಅದು ಕಂಡುಕೊಳ್ಳಲ್ಪಡುವುದು: ಒಳ್ಳೆಯ ಗುಣಗಳನ್ನು ಹುಡುಕುವ ದೇವರು ಅಂಥವುಗಳನ್ನು, ಒಂದು ಅಲ್ಪ ಪ್ರಮಾಣದ ಒಳ್ಳೆಯದನ್ನೂ ಗ್ರಹಿಸುತ್ತಾನೆ ಮತ್ತು ಅದರಿಂದ ಸಂತೋಷಪಡುತ್ತಾನೆ.” ಮತ್ತು ದೇವರು ನಿಮ್ಮಲ್ಲಿ ಒಂದು ಅಲ್ಪ ಪ್ರಮಾಣದ ಯಾವುದೊ ಒಳ್ಳೆಯ ಗುಣವನ್ನು ಕಂಡುಕೊಳ್ಳುವುದಾದಲ್ಲಿ, ನೀವು ಆತನನ್ನು ನಂಬಿಗಸ್ತಿಕೆಯಿಂದ ಸೇವಿಸಲು ಪ್ರಯತ್ನಿಸುವ ವರೆಗೆ ಅದನ್ನು ಬೆಳೆಯುವಂತೆ ಆತನು ಮಾಡಬಲ್ಲನೆಂಬುದನ್ನು ಮರೆಯದಿರಿ.
12, 13. (ಎ) ಯೆಹೋವನು ನಮ್ಮ ಪ್ರಯತ್ನಗಳನ್ನು ಅಮೂಲ್ಯವೆಂದೆಣಿಸುತ್ತಾನೆ ಎಂದು ಕೀರ್ತನೆ 139:3 ಹೇಗೆ ತೋರಿಸುತ್ತದೆ? (ಬಿ) ಯೆಹೋವನು ನಮ್ಮ ಚಟುವಟಿಕೆಗಳನ್ನು ಶೋಧಿಸುತ್ತಾನೆ ಎಂಬುದನ್ನು ಯಾವ ಅರ್ಥದಲ್ಲಿ ಹೇಳಲಾಗಿರಬಹುದು?
12 ತದ್ರೀತಿಯಲ್ಲಿ ಯೆಹೋವನು ನಮ್ಮ ಪ್ರಯತ್ನಗಳನ್ನು ಅಮೂಲ್ಯವೆಂದೆಣಿಸುತ್ತಾನೆ. ಕೀರ್ತನೆ 139:1-3 ರಲ್ಲಿ ನಾವು ಓದುವುದು: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ; ನಾನು ನಡೆಯುವದನ್ನೂ ಮಲಗುವದನ್ನೂ ಶೋಧಿಸಿ ಗ್ರಹಿಸಿಕೊಳ್ಳುತ್ತೀ; ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ.” ಆದುದರಿಂದ ಯೆಹೋವನು ನಮ್ಮ ಎಲ್ಲ ಚಟುವಟಿಕೆಗಳ ಅರಿವುಳ್ಳವನಾಗಿದ್ದಾನೆ. ಆದರೆ ಯೆಹೋವನ ಅರಿವು ಕೇವಲ ಜ್ಞಾನವನ್ನು ಮೀರಿ ಹೋಗುತ್ತದೆ. ಹೀಬ್ರು ಭಾಷೆಯಲ್ಲಿ “ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ” ಎಂಬ ವಾಕ್ಸರಣಿಯು “ನನ್ನ ಎಲ್ಲ ನಡತೆಗಳನ್ನು ನೀನು ಶೇಖರಿಸುತ್ತೀ” ಅಥವಾ “ನನ್ನ ಎಲ್ಲ ನಡತೆಗಳನ್ನು ನೀನು ಮಾನ್ಯ ಮಾಡುತ್ತೀ” ಎಂಬರ್ಥವನ್ನೂ ಹೊಂದಿರಬಹುದು. (ಹೋಲಿಸಿ ಮತ್ತಾಯ 6:19, 20.) ಆದರೆ, ನಾವು ಇಷ್ಟು ಅಪರಿಪೂರ್ಣರು ಮತ್ತು ಪಾಪಭರಿತರಾಗಿರುವುದಾದರೂ ಯೆಹೋವನು ನಮ್ಮ ನಡತೆಗಳನ್ನು ಹೇಗೆ ಮಾನ್ಯ ಮಾಡುತ್ತಾನೆ?
13 ಆಸಕ್ತಿಭರಿತವಾಗಿಯೇ, ಕೆಲವು ಪಂಡಿತರಿಗನುಸಾರ, ಯೆಹೋವನು ತನ್ನ ಪ್ರಯಾಣಗಳನ್ನು ಮತ್ತು ವಿಶ್ರಾಂತಿಯ ಕಾಲಾವಧಿಗಳನ್ನು “ಶೋಧಿಸಿ ಗ್ರಹಿಸಿ” ಕೊಂಡಿದ್ದಾನೆ ಎಂದು ದಾವೀದನು ಬರೆದಾಗ, ಹೀಬ್ರುವಿನಲ್ಲಿ “ಶೋಧಿಸು” ವುದು ಅಥವಾ “ಸೋಸು” ವುದು ಇದರ ಅಕ್ಷರಶಃ ಅರ್ಥವಾಗಿತ್ತು. ಆಧಾರ ಗ್ರಂಥವೊಂದು ಅವಲೋಕಿಸಿದ್ದು: “ಅದರ ಅರ್ಥ . . . ಎಲ್ಲ ಜಳ್ಳನ್ನು ಪ್ರತ್ಯೇಕಿಸುವುದು, ಮತ್ತು ಎಲ್ಲ ಧಾನ್ಯವನ್ನು ಉಳಿಸುವುದು—ಬೆಲೆಬಾಳುವಂಥದ್ದನ್ನೆಲ್ಲಾ ಸಂರಕ್ಷಿಸುವುದು. ಆದುದರಿಂದ ಇಲ್ಲಿ ದೇವರು, ಸಾಂಕೇತಿಕವಾಗಿ, ಅವನನ್ನು ಶೋಧಿಸಿದನು ಎಂದು ಇದರ ಅರ್ಥವಾಗಿದೆ. . . . ಜಳ್ಳಾಗಿದ್ದದ್ದೆಲ್ಲವನ್ನು ಅಥವಾ ಬೆಲೆಯಿಲ್ಲದ್ದೆಲ್ಲವನ್ನು ಆತನು ಬಿಸಾಡಿದನು, ಮತ್ತು ಉಳಿದದ್ದನ್ನು ನೈಜವಾದದ್ದೂ ಸತ್ವವುಳ್ಳದ್ದೂ ಆದದ್ದಾಗಿ ಕಂಡುಕೊಂಡನು.” ನಮ್ಮ ಗತ ತಪ್ಪುಗಳನ್ನು ಉತ್ಕಟವಾಗಿ ಖಂಡಿಸುವ ಮೂಲಕ ಮತ್ತು ನಮ್ಮ ಒಳ್ಳೆಯ ಕೆಲಸಗಳನ್ನು ಗಣನೆಗೆ ತಾರದೆ ತಳ್ಳಿಹಾಕುವ ಮೂಲಕ, ಆತ್ಮದೂಷಿತ ಹೃದಯವು ವಿರುದ್ಧ ರೀತಿಯಲ್ಲಿ ನಮ್ಮ ಕಾರ್ಯಗಳನ್ನು ಶೋಧಿಸಬಹುದು. ಆದರೆ ನಾವು ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುವುದಾದರೆ ಮತ್ತು ನಮ್ಮ ತಪ್ಪುಗಳನ್ನು ಪುನರಾವೃತ್ತಿಸದಿರಲು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡುವುದಾದರೆ ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. (ಕೀರ್ತನೆ 103:10-14; ಅ. ಕೃತ್ಯಗಳು 3:19) ಆತನು ಸೂಕ್ಷ್ಮವಾಗಿ ಪರಿಶೀಲಿಸುತ್ತಾನೆ ಮತ್ತು ನಮ್ಮ ಒಳ್ಳೆಯ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುತ್ತಾನೆ. ವಾಸ್ತವವಾಗಿ, ನಾವು ಆತನಿಗೆ ನಂಬಿಗಸ್ತರಾಗಿ ಉಳಿಯುವ ವರೆಗೂ ಸದಾ ಆತನು ಅವುಗಳನ್ನು ಜ್ಞಾಪಿಸಿಕೊಳ್ಳುತ್ತಾನೆ. ಇವುಗಳನ್ನು ಮರೆಯುವುದನ್ನು ಅನ್ಯಾಯದೋಪಾದಿ ಆತನು ವೀಕ್ಷಿಸುವನು, ಮತ್ತು ಆತನು ಎಂದಿಗೂ ಅನ್ಯಾಯಸ್ಥನಲ್ಲ!—ಇಬ್ರಿಯ 6:10.
14. ಕ್ರೈಸ್ತ ಶುಶ್ರೂಷೆಯಲ್ಲಿ ನಮ್ಮ ಚಟುವಟಿಕೆಯನ್ನು ಯೆಹೋವನು ಅಮೂಲ್ಯವೆಂದೆಣಿಸುತ್ತಾನೆಂದು ಯಾವುದು ತೋರಿಸುತ್ತದೆ?
14 ದೇವರು ಅಮೂಲ್ಯವೆಂದೆಣಿಸುವ ಒಳ್ಳೆಯ ಕೆಲಸಗಳಲ್ಲಿ ಕೆಲವು ಯಾವುವು? ಕಾರ್ಯತಃ ಆತನ ಪುತ್ರನಾದ ಯೇಸು ಕ್ರಿಸ್ತನ ಅನುಕರಣೆಯಲ್ಲಿ ನಾವು ಏನನ್ನೇ ಮಾಡಲಿ ಅದನ್ನು ಅಮೂಲ್ಯವೆಂದೆಣಿಸುತ್ತಾನೆ. (1 ಪೇತ್ರ 2:21) ಆದುದರಿಂದ, ನಿಸ್ಸಂದೇಹವಾಗಿ ದೇವರ ರಾಜ್ಯದ ಸುವಾರ್ತೆಯನ್ನು ಹರಡಿಸುವ ಕೆಲಸವು ಬಹಳ ಪ್ರಾಮುಖ್ಯವಾದ ಒಂದು ಕೆಲಸವಾಗಿದೆ. ರೋಮಾಪುರ 10:15 ರಲ್ಲಿ ನಾವು ಓದುವುದು: “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ.” ನಮ್ಮ ಸಾಮಾನ್ಯ ಪಾದಗಳನ್ನು “ಅಂದ” ವೆಂದು ನಾವು ಸಹಜವಾಗಿ ಪರಿಗಣಿಸದಿರಬಹುದಾದರೂ, ಗ್ರೀಕ್ ಸೆಪ್ಟ್ಯುಅಜಿಂಟ್ ವರ್ಷನ್ನಲ್ಲಿ ರೆಬೆಕ್ಕ, ರಾಹೇಲ್ ಮತ್ತು ಯೋಸೇಫ—ಈ ಮೂವರೂ ತಮ್ಮ ಸೌಂದರ್ಯಕ್ಕೆ ಪ್ರಸಿದ್ಧರಾಗಿದ್ದರು—ರನ್ನು ವರ್ಣಿಸಲು ಉಪಯೋಗಿಸಿದ ತದ್ರೀತಿಯ ಶಬ್ದವನ್ನೇ ಪೌಲನು ಇಲ್ಲಿ ಉಪಯೋಗಿಸಿದನು. (ಆದಿಕಾಂಡ 26:7; 29:17; 39:6) ಆದುದರಿಂದ ನಮ್ಮ ದೇವರಾದ ಯೆಹೋವನ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು, ಆತನ ದೃಷ್ಟಿಯಲ್ಲಿ ಬಹಳ ಸುಂದರವೂ ಅಮೂಲ್ಯವಾದದ್ದೂ ಆಗಿದೆ.—ಮತ್ತಾಯ 24:14; 28:19, 20.
15, 16. ಯೆಹೋವನು ನಮ್ಮ ತಾಳ್ಮೆಯನ್ನು ಏಕೆ ಅಮೂಲ್ಯವೆಂದೆಣಿಸುತ್ತಾನೆ, ಮತ್ತು ಕೀರ್ತನೆ 56:8 ರಲ್ಲಿನ ಅರಸನಾದ ದಾವೀದನ ಮಾತುಗಳು ಈ ಸಂಗತಿಯನ್ನು ಹೇಗೆ ಒತ್ತಿಹೇಳುತ್ತವೆ?
15 ದೇವರು ಅಮೂಲ್ಯವೆಂದೆಣಿಸುವ ಇನ್ನೊಂದು ಗುಣವು ನಮ್ಮ ತಾಳ್ಮೆಯಾಗಿದೆ. (ಮತ್ತಾಯ 24:13) ನೀವು ಯೆಹೋವನನ್ನು ತೊರೆಯುವಂತೆ ಸೈತಾನನು ಬಯಸುತ್ತಾನೆ ಎಂಬುದನ್ನು ಜ್ಞಾಪಕದಲ್ಲಿಡಿರಿ. ಯೆಹೋವನಿಗೆ ನೀವು ನಿಷ್ಠೆಯಿಂದ ಉಳಿಯುವ ಪ್ರತಿಯೊಂದು ದಿನವೂ ನೀವು ಸೈತಾನನ ಮೂದಲಿಕೆಗಳಿಗೆ ಒಂದು ಪ್ರತ್ಯುತ್ತರವನ್ನು ಒದಗಿಸುವಂತೆ ಸಹಾಯಮಾಡಿರುವ ಇನ್ನೊಂದು ದಿನವಾಗಿದೆ. (ಜ್ಞಾನೋಕ್ತಿ 27:11) ಕೆಲವೊಮ್ಮೆ ತಾಳ್ಮೆಯು ಸುಲಭದ ವಿಷಯವಾಗಿರುವುದಿಲ್ಲ. ಆರೋಗ್ಯದ ಸಮಸ್ಯೆಗಳು, ಹಣಕಾಸಿನ ವಿಪತ್ತುಗಳು, ಭಾವನಾತ್ಮಕ ವೇದನೆ, ಮತ್ತು ಇತರ ವಿಘ್ನಗಳು ಗತಿಸುತ್ತಿರುವ ಪ್ರತಿಯೊಂದು ದಿನವನ್ನು ಒಂದು ಪರೀಕೆಯ್ಷಾಗಿ ಮಾಡಬಲ್ಲವು. ಅಂತಹ ಪರೀಕ್ಷೆಗಳ ಎದುರಿನಲ್ಲಿ ತಾಳ್ಮೆಯು ಯೆಹೋವನಿಗೆ ವಿಶೇಷವಾಗಿ ಅಮೂಲ್ಯವಾದದ್ದಾಗಿದೆ. ಆದುದರಿಂದಲೇ, “ಅದರ ವಿಷಯ ನಿನ್ನ ಪುಸ್ತಕದಲ್ಲಿ ಬರೆದದೆಯಲ್ಲಾ” ಎಂದು ಭರವಸೆಯಿಂದ ಕೇಳುತ್ತಾ, ಅರಸನಾದ ದಾವೀದನು ತನ್ನ ಕಣ್ಣೀರನ್ನು ಒಂದು ಸಾಂಕೇತಿಕವಾದ “ಬುದ್ದಲಿ” ಯಲ್ಲಿ ಶೇಖರಿಸಿಡುವಂತೆ ಯೆಹೋವನನ್ನು ಕೇಳಿಕೊಂಡನು. (ಕೀರ್ತನೆ 56:8) ಹೌದು, ಆತನಿಗೆ ನಮ್ಮ ನಿಷ್ಠೆಯನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ತಾಳಿಕೊಂಡ ಎಲ್ಲಾ ಕಣ್ಣೀರು ಮತ್ತು ಕಷ್ಟಾನುಭವವನ್ನು ಯೆಹೋವನು ಜ್ಞಾಪಿಸಿಕೊಳ್ಳುತ್ತಾನೆ ಮತ್ತು ಅಮೂಲ್ಯವಾದದ್ದಾಗಿ ಪರಿಗಣಿಸುತ್ತಾನೆ. ಕಣ್ಣೀರು ಮತ್ತು ಕಷ್ಟಾನುಭವವು ಸಹ ಆತನ ದೃಷ್ಟಿಯಲ್ಲಿ ಅಮೂಲ್ಯವಾಗಿದೆ.
16 ನಮ್ಮ ಹೆಚ್ಚು ಒಳ್ಳೆಯ ಗುಣಗಳು ಮತ್ತು ನಮ್ಮ ಪ್ರಯತ್ನಗಳ ದೃಷ್ಟಿಯಿಂದ, ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ಅಮೂಲ್ಯವೆಂದೆಣಿಸಲು ಯೆಹೋವನು ಅಧಿಕವಾದುದನ್ನು ಕಂಡುಕೊಳ್ಳುತ್ತಾನೆಂಬುದು ಎಷ್ಟು ಸ್ಪಷ್ಟವಾಗಿಗಿದೆ! ಸೈತಾನನ ಲೋಕವು ನಮ್ಮೊಂದಿಗೆ ಹೇಗೆಯೇ ವರ್ತಿಸಿರಲಿ, ಯೆಹೋವನು ನಮ್ಮನ್ನು ಅಮೂಲ್ಯರಾಗಿ ಮತ್ತು “ಸಮಸ್ತಜನಾಂಗಗಳ ಇಷ್ಟವಸ್ತು” ಗಳ ಒಂದು ಭಾಗದೋಪಾದಿ ವೀಕ್ಷಿಸುತ್ತಾನೆ.—ಹಗ್ಗಾಯ 2:7.
ತನ್ನ ಪ್ರೀತಿಯನ್ನು ಪ್ರದರ್ಶಿಸಲಿಕ್ಕಾಗಿ ಯೆಹೋವನು ಮಾಡಿರುವ ಕಾರ್ಯ
17. ಯೆಹೋವನು ಮತ್ತು ಯೇಸು ನಮ್ಮನ್ನು ವೈಯಕ್ತಿಕವಾಗಿ ಪ್ರೀತಿಸುತ್ತಾರೆ ಎಂಬುದನ್ನು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ನಮಗೆ ಏಕೆ ಮನಗಾಣಿಸಬೇಕು?
17 ಮೂರನೆಯದಾಗಿ, ನಮ್ಮ ಕಡೆಗಿರುವ ತನ್ನ ಪ್ರೀತಿಯನ್ನು ದೃಢಪಡಿಸಲಿಕ್ಕಾಗಿ ಯೆಹೋವನು ಹೆಚ್ಚನ್ನು ಮಾಡುತ್ತಾನೆ. ನಿಶ್ಚಯವಾಗಿ, ನಾವು ಬೆಲೆಯಿಲ್ಲದವರು ಮತ್ತು ಪ್ರೀತಿಗೆ ಅಯೋಗ್ಯರಾಗಿದ್ದೇವೆ ಎಂಬ ಸೈತಾನ ಸಂಬಂಧಿತ ಸುಳ್ಳಿಗೆ, ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಅತ್ಯಂತ ಸಮಂಜಸವಾದ ಉತ್ತರವಾಗಿದೆ. ಹಿಂಸೆಯ ಕಂಬದ ಮೇಲೆ ಯೇಸು ಅನುಭವಿಸಿದ ಅಪಾರ ಯಾತನೆಯ ಮರಣ ಮತ್ತು ತನ್ನ ಪ್ರಿಯ ಪುತ್ರನ ಮರಣವನ್ನು ವೀಕ್ಷಿಸುವುದರಲ್ಲಿ ಇದಕ್ಕಿಂತಲೂ ಹೆಚ್ಚು ಮಹತ್ತಾದ ತೀವ್ರ ಯಾತನೆಯನ್ನು ಯೆಹೋವನು ತಾಳಿಕೊಂಡದ್ದು, ನಮಗಾಗಿ ಅವರು ತೋರಿಸಿದ ಪ್ರೀತಿಯ ರುಜುವಾತುಗಳಾಗಿದ್ದವು ಎಂಬುದನ್ನು ನಾವೆಂದಿಗೂ ಮರೆಯದಿರೋಣ. ಅಲ್ಲದೆ, ಆ ಪ್ರೀತಿಯು ನಮಗೆ ವೈಯಕ್ತಿಕವಾಗಿ ಅನ್ವಯಿಸುತ್ತದೆ. ಅಪೊಸ್ತಲ ಪೌಲನು ಅದನ್ನು ತದ್ರೀತಿಯಲ್ಲಿ ವೀಕ್ಷಿಸಿದನು, ಆದುದರಿಂದ ಅವನು ಬರೆದದ್ದು: “ದೇವಕುಮಾರನು . . . ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.”—ಗಲಾತ್ಯ 2:20.
18. ಯಾವ ರೀತಿಯಲ್ಲಿ ಯೆಹೋವನು ನಮ್ಮನ್ನು ಕ್ರಿಸ್ತನೆಡೆಗೆ ಸೆಳೆಯುತ್ತಾನೆ?
18 ಕ್ರಿಸ್ತನ ಯಜ್ಞದ ಪ್ರಯೋಜನಗಳನ್ನು ಉಪಯೋಗಿಸಿಕೊಳ್ಳುವಂತೆ ನಮಗೆ ವೈಯಕ್ತಿಕವಾಗಿ ಸಹಾಯ ಮಾಡುವ ಮೂಲಕ ಯೆಹೋವನು ನಮ್ಮ ಕಡೆಗಿರುವ ತನ್ನ ಪ್ರೀತಿಯನ್ನು ದೃಢಪಡಿಸಿದ್ದಾನೆ. ಯೋಹಾನ 6:44 ರಲ್ಲಿ ಯೇಸು ಹೇಳಿದ್ದು: “ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು.” ನಮಗೆ ವೈಯಕ್ತಿಕವಾಗಿ ತಲಪುವ ಸಾರುವ ಕೆಲಸದ ಮೂಲಕ, ಮತ್ತು ನಮ್ಮ ದೌರ್ಬಲ್ಯಗಳು ಮತ್ತು ಅಪರಿಪೂರ್ಣತೆಗಳ ಹೊರತಾಗಿಯೂ ಆತ್ಮಿಕ ಸತ್ಯತೆಗಳನ್ನು ತಿಳಿದುಕೊಳ್ಳಲು ಹಾಗೂ ಅನ್ವಯಿಸಿಕೊಳ್ಳಲು ನಮಗೆ ಸಹಾಯಮಾಡಲಿಕ್ಕಾಗಿ ಯೆಹೋವನು ಉಪಯೋಗಿಸುವ ಆತನ ಪವಿತ್ರಾತ್ಮದ ಮೂಲಕ, ಯೆಹೋವನು ನಮ್ಮನ್ನು ತನ್ನ ಪುತ್ರನ ಕಡೆಗೆ ಮತ್ತು ನಿತ್ಯ ಜೀವದ ನಿರೀಕ್ಷೆಯ ಕಡೆಗೆ ವೈಯಕ್ತಿಕವಾಗಿ ಸೆಳೆಯುತ್ತಾನೆ. ಆದುದರಿಂದ ಇಸ್ರಾಯೇಲ್ನ ಕುರಿತು ಯೆಹೋವನು ಹೇಳಿದಂತೆಯೇ ನಮ್ಮ ಕುರಿತಾಗಿಯೂ ಆತನು ಹೇಳಶಕ್ತನು: “ನಾನು ನಿನ್ನನ್ನು ಪ್ರೀತಿಸಿರುವದು ಶಾಶ್ವತ ಪ್ರೇಮದಿಂದಲೇ; ಆದಕಾರಣ ನಿನ್ನನ್ನು ಮಮತೆ [“ಪ್ರೀತಿಪೂರ್ವಕವಾದ ದಯೆ,” NW] ಯಿಂದ ಸೆಳೆದುಕೊಂಡಿದ್ದೇನೆ.”—ಯೆರೆಮೀಯ 31:3.
19. ನಮ್ಮ ಕಡೆಗಿರುವ ಯೆಹೋವನ ವೈಯಕ್ತಿಕ ಪ್ರೀತಿಯನ್ನು ಪ್ರಾರ್ಥನೆಯ ಸುಯೋಗವು ನಮಗೆ ಏಕೆ ಮನಗಾಣಿಸಬೇಕು?
19 ಆದರೂ, ಬಹುಶಃ ಪ್ರಾರ್ಥನೆಯ ಸುಯೋಗದ ಮೂಲಕವಾಗಿ ನಾವು ಯೆಹೋವನ ಪ್ರೀತಿಯನ್ನು ಅತ್ಯಂತ ಆಪ್ತ ರೀತಿಯಲ್ಲಿ ಅನುಭವಿಸುತ್ತೇವೆ. ತನಗೆ “ಎಡೆಬಿಡದೆ ಪ್ರಾರ್ಥನೆಮಾಡಿರಿ” ಎಂದು ಆತನು ನಮ್ಮಲ್ಲಿ ಪ್ರತಿಯೊಬ್ಬರಿಗೆ ಆಮಂತ್ರಣಕೊಡುತ್ತಾನೆ. (1 ಥೆಸಲೊನೀಕ 5:17) ಆತನು ಕಿವಿಗೊಡುತ್ತಾನೆ! ‘ಪ್ರಾರ್ಥನೆಯನ್ನು ಆಲಿಸುವವನು’ ಎಂದೂ ಆತನು ಕರೆಯಲ್ಪಡುತ್ತಾನೆ. (ಕೀರ್ತನೆ 65:2) ಈ ಅಧಿಕಾರವನ್ನು ಆತನು ಇತರ ಯಾವುದೇ ವ್ಯಕ್ತಿಗೆ ನಿಯೋಜಿಸಿಲ್ಲ, ತನ್ನ ಸ್ವಂತ ಪುತ್ರನಿಗೆ ಸಹ. ಸ್ವಲ್ಪ ಆಲೋಚಿಸಿರಿ: ಆತನನ್ನು ವಾಕ್ ಸರಳತೆಯಿಂದ, ಪ್ರಾರ್ಥನೆಯಲ್ಲಿ ಸಮೀಪಿಸುವಂತೆ ವಿಶ್ವದ ಸೃಷ್ಟಿಕರ್ತನು ನಮ್ಮನ್ನು ಪ್ರೇರೇಪಿಸುತ್ತಾನೆ. ನಮ್ಮ ವಿಜ್ಞಾಪನೆಗಳು, ಪರಿಸ್ಥಿತಿಯು ಬೇರೆಯಾಗಿದ್ದರೆ ಯೆಹೋವನು ಮಾಡಿರದಿರಬಹುದಾದ ವಿಷಯಗಳನ್ನು ಮಾಡುವಂತೆ ಸಹ ಆತನನ್ನು ಪ್ರಚೋದಿಸಬಹುದು.—ಇಬ್ರಿಯ 4:16; ಯಾಕೋಬ 5:16; ನೋಡಿರಿ ಯೆಶಾಯ 38:1-16.
20. ನಮ್ಮ ಕಡೆಗಿರುವ ದೇವರ ಪ್ರೀತಿಯು, ನಮ್ಮಿಂದ ಸ್ವಪ್ರಮುಖತೆ ಅಥವಾ ಸ್ವಾರ್ಥಕ್ಕಾಗಿ ಏಕೆ ನೆವವಾಗಿರುವುದಿಲ್ಲ?
20 ಸಮತೆಯುಳ್ಳ ಯಾವ ಕ್ರೈಸ್ತನೂ ದೇವರ ಪ್ರೀತಿ ಮತ್ತು ಗಣ್ಯತೆಯ ಅಂತಹ ಪುರಾವೆಯನ್ನು, ತಾನು ನಿಜವಾಗಿಯೂ ಏನಾಗಿದಾನ್ದೋ ಅದಕ್ಕಿಂತ ಹೆಚ್ಚು ಪ್ರಾಮುಖ್ಯವಾಗಿ ತನ್ನನ್ನು ಭಾವಿಸಿಕೊಳ್ಳಲು ಒಂದು ನೆವವಾಗಿ ತೆಗೆದುಕೊಳ್ಳಲಾರನು. ಪೌಲನು ಬರೆದದ್ದು: “ದೇವರು ನನಗೆ ಕೃಪೆಮಾಡಿದ ಸೇವೆಯನ್ನು ನಡಿಸಿ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.” (ರೋಮಾಪುರ 12:3) ಆದುದರಿಂದ ನಮ್ಮ ಸ್ವರ್ಗೀಯ ಪಿತನ ಪ್ರೀತಿಯ ಆದರಣೆಯಲ್ಲಿ ನಾವು ಹಿತವನ್ನು ಅನುಭವಿಸುವಾಗ, ನಾವು ಸ್ವಸ್ಥಚಿತ್ತರಾಗಿರೋಣ ಮತ್ತು ದೇವರ ಪ್ರೀತಿಪೂರ್ವಕವಾದ ದಯೆಯು ಅಪಾತ್ರವಾಗಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳೋಣ.—ಹೋಲಿಸಿ ಲೂಕ 17:10.
21. ಸೈತಾನ ಸಂಬಂಧವಾದ ಯಾವ ಸುಳ್ಳನ್ನು ನಾವು ಸತತವಾಗಿ ಪ್ರತಿರೋಧಿಸಬೇಕು, ಮತ್ತು ಯಾವ ದೈವಿಕ ಸತ್ಯವನ್ನು ನಾವು ಯಾವಾಗಲೂ ಪರ್ಯಾಲೋಚಿಸುತ್ತಿರಬೇಕು?
21 ಅಳಿಯುತ್ತಿರುವ ಈ ಹಳೆಯ ಲೋಕದಲ್ಲಿ ಸೈತಾನನು ಪ್ರವರ್ಧಿಸುವ ಎಲ್ಲ ಕಲ್ಪನೆಗಳನ್ನು ನಿರೋಧಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಸಾಧ್ಯವಿರುವ ಪ್ರತಿಯೊಂದು ಪ್ರಯತ್ನವನ್ನು ಮಾಡೋಣ. ನಾವು ಅಯೋಗ್ಯರು ಮತ್ತು ಪ್ರೀತಿಸಲ್ಪಡದವರಾಗಿದ್ದೇವೆಂಬ ಅಭಿಪ್ರಾಯವನ್ನು ತ್ಯಜಿಸುವುದು ಅದರಲ್ಲಿ ಒಳಗೂಡಿದೆ. ಈ ವ್ಯವಸ್ಥೆಯಲ್ಲಿ ಜೀವಿತವು ನಿಮಗೆ, ದೇವರ ಅಪಾರ ಪ್ರೀತಿಗೂ ಜಯಿಸಲಾಗದ ಬಹಳ ಎದೆಗುಂದಿಸುತ್ತಿರುವ ಒಂದು ವಿಘ್ನದೋಪಾದಿ ನಿಮ್ಮನ್ನು ನೋಡುವಂತೆ, ಅಥವಾ ಎಲ್ಲವನ್ನು ನೋಡುವ ಆತನ ಕಣ್ಣುಗಳಿಗೂ ನಿಮ್ಮ ಒಳ್ಳೆಯ ಕೆಲಸಗಳು ಗಮನಿಸಲು ತೀರ ಕ್ಷುಲ್ಲಕವೆಂದು, ಅಥವಾ ನಿಮ್ಮ ಪಾಪಗಳು ಆತನ ಅಮೂಲ್ಯವಾದ ಪುತ್ರನ ಮರಣದಿಂದಲೂ ಪರಿಹರಿಸಲಾರದಷ್ಟು ವಿಸ್ತಾರವಾಗಿವೆಯೆಂದು ಕಲಿಸಿರುವಲ್ಲಿ, ನಿಮಗೆ ಒಂದು ಸುಳ್ಳು ಕಲಿಸಲ್ಪಟ್ಟಿದೆ. ಅವುಗಳಿಗೆ ಅರ್ಹವಾಗಿರುವ ಎಲ್ಲ ತಾತ್ಸಾರಭಾವದೊಂದಿಗೆ ಅಂತಹ ಸುಳ್ಳುಗಳನ್ನು ತಿರಸ್ಕರಿಸಿರಿ! ರೋಮಾಪುರ 8:38, 39 ರಲ್ಲಿರುವ ಅಪೊಸ್ತಲ ಪೌಲನ ಮಾತುಗಳನ್ನು ನಾವು ಮನಸ್ಸಿನಲ್ಲಿಡೋಣ: “ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.”
[ಅಧ್ಯಯನ ಪ್ರಶ್ನೆಗಳು]
a ವಾಸ್ತವವಾಗಿ, ಅವರು “ಆಮ್ ಹಾ-‘ಆ‘ರೆಟ್ಸ್” ಅಥವಾ “ದೇಶದ [ಭೂಮಿಯ] ಜನರು” ಎಂಬ ತುಚ್ಛೀಕರಿಸುವ ಪದದಿಂದ ಬಡವರನ್ನು ತಳ್ಳಿಹಾಕಿದರು. ಒಬ್ಬ ಪಂಡಿತನಿಗನುಸಾರ, ಒಬ್ಬನು ಬಡವರನ್ನು ಬೆಲೆಯುಳ್ಳ ವಸ್ತುಗಳನ್ನು ಕೊಟ್ಟು ನಂಬುವುದಾಗಲಿ, ಅವರ ಸಾಕ್ಷ್ಯವನ್ನು ನಂಬುವುದಾಗಲಿ, ಅವರನ್ನು ಅತಿಥಿಗಳನ್ನಾಗಿ ಸತ್ಕರಿಸುವುದಾಗಲಿ, ಅವರ ಅತಿಥಿಗಳಾಗಿರುವುದಾಗಲಿ, ಅವರಿಗಾಗಿ ಖರೀದಿಸುವುದಾಗಲಿ ಮಾಡಬಾರದು ಎಂದು ಫರಿಸಾಯರು ಕಲಿಸಿದರು. ಈ ಜನರಲ್ಲಿ ಒಬ್ಬನಿಗೆ ತನ್ನ ಮಗಳನ್ನು ಮದುವೆಮಾಡಿಸುವುದು, ರಕ್ಷಣೆಯಿಲ್ಲದ ಒಬ್ಬ ವ್ಯಕ್ತಿಯನ್ನು ಒಂದು ಮೃಗಕ್ಕೆ ಒಪ್ಪಿಸುವಂತಿರುವುದು ಎಂದು ಧಾರ್ಮಿಕ ಮುಖಂಡರು ಹೇಳಿದರು.
ನಿಮ್ಮ ಅಭಿಪ್ರಾಯವೇನು?
▫ ನಾವು ಅಯೋಗ್ಯರು ಮತ್ತು ಪ್ರೀತಿಸಲ್ಪಡದವರು ಆಗಿದ್ದೇವೆಂದು ನಮಗೆ ಮನಗಾಣಿಸಲಿಕ್ಕಾಗಿ ಸೈತಾನನು ಏಕೆ ಪ್ರಯತ್ನಿಸುತ್ತಾನೆ?
▫ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರನ್ನು ಅಮೂಲ್ಯರೆಂದೆಣಿಸುತ್ತಾನೆ ಎಂದು ಯೇಸು ಹೇಗೆ ಕಲಿಸಿದನು?
▫ ಯೆಹೋವನು ನಮ್ಮ ಒಳ್ಳೆಯ ಗುಣಗಳನ್ನು ಬೆಲೆಯುಳ್ಳದ್ದೆಂದು ಭಾವಿಸುತ್ತಾನೆಂದು ನಾವು ಹೇಗೆ ತಿಳಿದಿದ್ದೇವೆ?
▫ ಯೆಹೋವನು ನಮ್ಮ ಪ್ರಯತ್ನಗಳನ್ನು ಅಮೂಲ್ಯವೆಂದೆಣಿಸುತ್ತಾನೆಂದು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?
▫ ಯೆಹೋವನು ತನ್ನ ಪ್ರೀತಿಯನ್ನು ವೈಯಕ್ತಿಕವಾಗಿ ನಮಗೆ ಹೇಗೆ ದೃಢಪಡಿಸಿದ್ದಾನೆ?
[ಪುಟ 13 ರಲ್ಲಿರುವ ಚಿತ್ರ]
ಆತನ ನಾಮಸ್ಮರಣೆ ಮಾಡುವವರೆಲ್ಲರನ್ನು ಯೆಹೋವನು ಗಮನಿಸುತ್ತಾನೆ ಮತ್ತು ಜ್ಞಾಪಿಸಿಕೊಳ್ಳುತ್ತಾನೆ