ಬೈಬಲಿನ ದೃಷ್ಟಿಕೋನ
ಸ್ವರ್ಗಕ್ಕೆ ಯಾರು ಹೋಗುತ್ತಾರೆ?
ಭಯೋತ್ಪಾದಕ ಬಾಂಬೊಂದು ಹಾರಾಟದಲ್ಲಿದ್ದ ಯಾನ ವಿಮಾನವೊಂದನ್ನು ಚೂರುಚೂರು ಮಾಡಿ, ಅದರೊಳಗಿದ್ದ ಎಲ್ಲರನ್ನು ಕೊಂದಿತು. ಅವರ ಅಕಾಲಿಕ ಮತ್ತು ಹಿಂಸಾತ್ಮಕ ಮರಣಕ್ಕಾಗಿ ಪರಿಹಾರವೋ ಎಂಬಂತೆ, ಅವರ ಪ್ರಿಯರು ಈಗ ಸ್ವರ್ಗದಲ್ಲಿದ್ದಾರೆಂದು ಬಲಿಯಾದವರ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಹೇಳಲಾಯಿತು.
ಒಬ್ಬ ಜನಪ್ರಿಯ ಸಂಗೀತಗಾರನು ಸಾಯುತ್ತಾನೆ ಮತ್ತು ಅವನು ‘ದೇವದೂತರುಗಳೊಂದಿಗೆ ಸ್ವರ್ಗದಲ್ಲಿ ತುತೂರಿ ಊದುತ್ತಿದ್ದಾನೆ’ ಎಂದು ಹೇಳಲಾಗುತ್ತದೆ.
ರೋಗ, ಕ್ಷಾಮ, ಅಥವಾ ಅಪಘಾತಗಳು ಹಸುಳೆಗಳ ಸಂಪೂರ್ಣವಾದ ಜೀವಿತವೊಂದನ್ನು ಕಸಿದುಕೊಳ್ಳುತ್ತವೆ, ಮತ್ತು ಈಗ ಹಸುಳೆಗಳು ಸ್ವರ್ಗೀಯ ಪರಮಾನಂದವನ್ನು, ಪ್ರಾಯಶಃ ದೇವದೂತರುಗಳೋಪಾದಿ ಆನಂದಿಸುತ್ತಿದ್ದಾರೆಂದು ವೈದಿಕರು ಹೇಳುತ್ತಾರೆ!
ಅಂಥವರನ್ನು ದೇವರು ತನ್ನೆಡೆಗೆ ಸ್ವರ್ಗೀಯ ಶಾಂತಿಯಲ್ಲಿ ಕೊಂಡೊಯ್ಯುವ ಮೂಲಕ ಎಳೆಯರಿಗೆ ಮತ್ತು ವೃದ್ಧರಿಗೆ ಆದ ಅನ್ಯಾಯವನ್ನು ಸರಿಪಡಿಸುತ್ತಿದ್ದಾನೋ? ಸ್ವರ್ಗದೊಳಗೆ ಪ್ರವೇಶವು ಕೇವಲ ಮಾನವಕುಲದಲ್ಲಿನ ಪ್ರಶಂಸನೀಯವಾಗಿರುವ ಮತ್ತು ಒಳ್ಳೆಯದಾಗಿರುವ ಎಲ್ಲವನ್ನು ಸುರಕ್ಷಿತವಾಗಿಡುವ ದೇವರ ವಿಧಾನವಾಗಿದೆಯೋ? ಬೈಬಲಿನ ದೃಷ್ಟಿಕೋನವೇನು?
ಸ್ವರ್ಗದಲ್ಲಿಲ್ಲದವರು
ಬೈಬಲಿನ ಹೇಳಿಕೆಯು ಸ್ಫುಟವಾಗಿದೆ: “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ?” (1 ಕೊರಿಂಥ 6:9) ಹಾಗಿದ್ದರೂ, ಸ್ವರ್ಗಕ್ಕೆ ಬಾಧ್ಯರಾಗದ, ನೀತಿವಂತರಾದ ಅನೇಕರ ಕುರಿತೂ ಅನ್ಯಾಯಕ್ಕೆ ಬಲಿಯಾದವರ ಕುರಿತೂ ಬೈಬಲ್ ಮಾತಾಡುತ್ತದೆ.
ಬೇಗನೆ ಧರ್ಮಬಲಿಯಾಗಲಿದ್ದ ಸ್ನಾನಿಕನಾದ ಯೋಹಾನನ ಕುರಿತು ಸ್ವತಃ ಯೇಸು ಹೇಳಿದ್ದು: “ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ. ಆದರೂ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 11:11) ಮಗುವಾದ ಯೇಸುವನ್ನು ನಾಶಮಾಡುವ ತನ್ನ ಯತ್ನದಲ್ಲಿದ್ದ ದುಷ್ಟ ಅರಸನಾದ ಹೆರೋದನ ಮೂಲಕ, ಬೇತ್ಲೆಹೇಮಿನಲ್ಲಿ ಮತ್ತು ಅದರ ನೆರೆಹೊರೆಯ ಹಳ್ಳಿಗಳಲ್ಲಿದ್ದ ಎರಡು ವರುಷದೊಳಗಿನ ಎಲ್ಲಾ ಗಂಡುಮಕ್ಕಳು ನಿರ್ದಯೆಯಿಂದ ಹತಿಸಲ್ಪಟ್ಟರು. (ಮತ್ತಾಯ 2:16) ಆದರೂ, ಯೇಸು ಹೇಳಿದ್ದು: “ಅಲ್ಲದೆ, ಸ್ವರ್ಗದಿಂದ ಇಳಿದು ಬಂದವನಾದ ಮನುಷ್ಯಕುಮಾರನೇ [ಯೇಸು] ಹೊರತು ಇನ್ನಾವ ಪುರುಷನೂ [ಅಥವಾ ಸ್ತ್ರೀ ಅಥವಾ ಮಗು] ಸ್ವರ್ಗಕ್ಕೆ ಏರಿ ಹೋಗಿರುವುದಿಲ್ಲ.” (ಯೋಹಾನ 3:13, NW) ಅನ್ಯಾಯದ ಈ ಬಲಿಗಳು ಸ್ವರ್ಗದಲ್ಲಿರುವವರೋಪಾದಿ ಯೇಸು ಮಾತಾಡಲಿಲ್ಲವೇಕೆ?
ಯೇಸು ಮಾರ್ಗವನ್ನು ತೆರೆದನು
ಯೇಸು ತನ್ನನ್ನು “ಮಾರ್ಗವೂ ಸತ್ಯವೂ ಜೀವವೂ” ಎಂಬುದಾಗಿ ಕರೆದುಕೊಂಡನು ಮತ್ತು ಅಪೊಸ್ತಲ ಪೌಲನು ಅವನನ್ನು ಸೂಚಿಸಿ “ನಿದ್ರೆಹೋದವರಲ್ಲಿ ಪ್ರಥಮಫಲ” ಎಂದು ಹೇಳಿದನು. (ಯೋಹಾನ 14:6; 1 ಕೊರಿಂಥ 15:20) ಆದಕಾರಣ, ಯಾರೊಬ್ಬರೂ ಆತನಿಗಿಂತ ಮುಂಚೆ ಸ್ವರ್ಗಕ್ಕೆ ಏರಿಹೋಗಸಾಧ್ಯವಿರಲಿಲ್ಲ. ಆದರೆ ಯೇಸು ತನ್ನ ಪುನರುತ್ಥಾನದ ಸುಮಾರು 40 ದಿವಸಗಳ ಅನಂತರ ಸ್ವರ್ಗಕ್ಕೆ ಏರಿಹೋದಾಗ, ಮೊದಲೇ ತೀರಿಹೋಗಿದ್ದ ನಂಬಿಗಸ್ತ ಅರ್ಹರಾದ ಪುರುಷರು ಅವನನ್ನು ಹಿಂಬಾಲಿಸಿ ಹೋದರೋ? ಸುಮಾರು ಹತ್ತು ದಿವಸಗಳ ಅನಂತರ, ಅರಸನಾದ ದಾವೀದನ ಸಂಬಂಧದಲ್ಲಿ ಅಪೊಸ್ತಲ ಪೇತ್ರನು ಹೇಳಿದ್ದು “ಅವನು ತೀರಿಹೋಗಿ ಹೂಣಲ್ಪಟ್ಟನು; ಅವನ ಸಮಾಧಿ ಈ ದಿನದ ವರೆಗೂ ನಮ್ಮಲ್ಲಿ ಅದೆ. . . . ದಾವೀದನು ಆಕಾಶಕ್ಕೆ ಏರಿಹೋಗಲಿಲ್ಲವಲ್ಲಾ.”—ಅ. ಕೃತ್ಯಗಳು 2:29, 34.
ಹೀಗೆ, ಸ್ವರ್ಗಕ್ಕೆ ಪ್ರವೇಶ ಪಡೆಯುವುದು ಅನ್ಯಾಯಗಳಿಗೆ ಗುರಿಯಾದವರಿಗಾಗಿರುವ ಪರಿಹಾರ ಅಥವಾ ವೈಯಕ್ತಿಕ ನಂಬಿಗಸ್ತಿಕೆಗೆ ಸಿಗುವ ಪ್ರತಿಫಲಕ್ಕಿಂತ ಹೆಚ್ಚಿನದನ್ನು ಒಳಗೊಂಡಿದೆ. ಬದಲಾಗಿ, ಇದು ಕ್ರಿಸ್ತನ ಮಾರ್ಗದರ್ಶನದಲ್ಲಿ, ಪವಿತ್ರಾತ್ಮಾಭಿಷಿಕ್ತರಾದ ಮಾನವರ ಒಂದು ಪ್ರತಿನಿಧಿ ಸ್ವರೂಪ ಸಂಖ್ಯೆಯನ್ನು ಕೂಡಿರುವ ಸ್ವರ್ಗಾಧಾರಿತ ಪ್ರಭುಗಳ ಮಂಡಲಿಯ ರಚನೆಗೆ ಅವಕಾಶವನ್ನು ಒದಗಿಸುತ್ತದೆ.—ರೋಮಾಪುರ 8:15-17; ಪ್ರಕಟನೆ 14:1-3.
ಒಂದು ಸ್ವರ್ಗೀಯ ರಾಜ್ಯ
ಯೇಸು ಈ ಆಳ್ವಿಕೆಯನ್ನು, ಅಥವಾ ಸರಕಾರವನ್ನು, ‘ಸ್ವರ್ಗೀಯ ರಾಜ್ಯ’ ಅಥವಾ “ದೇವರ ರಾಜ್ಯ” ಎಂದು ಸೂಚಿಸಿದನು. (ಮತ್ತಾಯ 5:3, 20; ಲೂಕ 7:28) ಈ ಆಡಳಿತ ಮಂಡಲಿಯಲ್ಲಿ ಮಾನವಕುಲದ ಮಹಾ ಗುಂಪುಗಳು ಸೇರಿಸಲ್ಪಡುವದೆಂದು ಉದ್ದೇಶಿಸಲ್ಪಟ್ಟಿರಲಿಲ್ಲ. ಆದುದರಿಂದ, ಯೇಸು ಅದನ್ನು ಒಂದು “ಚಿಕ್ಕ ಹಿಂಡು” ಎಂದು ಸೂಚಿಸಿ ಹೇಳಿದನು. (ಲೂಕ 12:32) ಬೈಬಲಿನ ಈ ಭಾಗದಲ್ಲಿ ಬಳಸಲಾದ ಮೂಲ ಭಾಷೆಯಲ್ಲಿ, “ಚಿಕ್ಕ” (ಮೈಕ್ರೋಸ್) ಅನ್ನುವ ಶಬ್ದವು ದೊಡ್ಡ (ಮೆಗಾಸ್) ಅನ್ನುವದಕ್ಕೆ ವಿರುದ್ಧವಾಗಿದೆ, ಮತ್ತು ಲೂಕ 12:32ರಲ್ಲಿ ಇದರ ಬಳಕೆಯು ಮೊತ್ತದಲ್ಲಿ ಅಥವಾ ಸಂಖ್ಯೆಯಲ್ಲಿ ಕಡಮೆಯನ್ನು ನಿರೂಪಿಸುತ್ತದೆ. ಆದುದರಿಂದ, ‘ಸ್ವರ್ಗೀಯ ರಾಜ್ಯ’ದಲ್ಲಿನ ಸದಸ್ಯತ್ವವು ಒಂದು ಅಪರಿಮಿತ ಸಂಖ್ಯೆಗೆ ಅನುಮತಿ ನೀಡುವುದಿಲ್ಲ. ದೃಷ್ಟಾಂತಕ್ಕೆ: ಒಂದು ಲೋಟದೊಳಗೆ ಸ್ವಲ್ಪ ನೀರನ್ನು ಹಾಕುವಂತೆ ನಿಮ್ಮನ್ನು ಕೇಳಿಕೊಳ್ಳುವುದಾದರೆ, ಅದು ತುಂಬಿ ಹರಿಯದಂತೆ ನೀವು ಖಚಿತ ಪಡಿಸಿಕೊಳ್ಳುವಿರಿ. ಹೀಗೆಯೇ, “ಚಿಕ್ಕ ಹಿಂಡು” ಜನರ ತುಂಬಿ ಹರಿಯುವ ಸಂಖ್ಯೆಗಳಿಂದ ಕೂಡಿರಸಾಧ್ಯವಿಲ್ಲ. ದೇವರ ರಾಜ್ಯವು ಕ್ರಿಸ್ತನೊಂದಿಗೆ ಸಹಬಾಧ್ಯಸ್ಥರಾಗುವ ಒಂದು ಗೊತ್ತು ಮಾಡಿದ (“ಚಿಕ್ಕ”) ಸಂಖ್ಯೆಯನ್ನು ಹೊಂದಿದೆ.
ಅಪೊಸ್ತಲ ಯೋಹಾನನಿಗೆ ಈ ಆಳುವವರ ನಿಖರ ಸಂಖ್ಯೆ—1,44,000—ಪ್ರಕಟಪಡಿಸಲ್ಪಟ್ಟಿತ್ತು. (ಪ್ರಕಟನೆ 14:1, 4) ಪ್ರಕಟನೆಯಲ್ಲಿ ಮೊದಲು ಇದೇ ಜನರನ್ನು ‘ದೇವರಿಗೆ ರಾಜ್ಯವೂ ಯಾಜಕರೂ ಆಗಲಿಕ್ಕಾಗಿ ಸಕಲ ಕುಲ ಭಾಷೆ ಪ್ರಜೆ ಜನಾಂಗದಿಂದ’ ಬಂದವರೆಂದು ಹೇಳಲಾಗುತ್ತದೆ ಮತ್ತು ಅವರು ಅರಸರೋಪಾದಿ ಭೂಮಿಯ ಮೇಲೆ ಸ್ವರ್ಗದಿಂದ ಆಳ್ವಿಕೆ ಮಾಡುವರು. (ಪ್ರಕಟನೆ 5:9, 10) ಯೇಸು ಕ್ರಿಸ್ತನೊಂದಿಗೆ ಜೊತೆಗಾರಿಕೆಯಲ್ಲಿರುವ ಈ ಆಡಳಿತ ಮಂಡಲಿಯೇ, ಯಾವುದಕ್ಕಾಗಿ ಅವನು ತನ್ನ ಹಿಂಬಾಲಕರು ಪ್ರಾರ್ಥಿಸುವಂತೆ ಕಲಿಸಿದನೋ ಆ ರಾಜ್ಯವಾಗಿದೆ. ಇದು ಈ ಭೂಮಿಯ ಅವ್ಯವಸ್ಥಿತ ರಾಜ್ಯಭಾರವನ್ನು ಕೊನೆಗಾಣಿಸಲಿಕ್ಕಿರುವ—ಹೀಗೆ ಮಾನವನ ಮನೆಯಾಗಿರುವ, ಭೂಮಿಗೆ, ನ್ಯಾಯ ಮತ್ತು ಶಾಂತಿಯನ್ನು ಪುನಃಸ್ಥಾಪಿಸುವ, ಹಾಗೂ ಅದರ ನಿವಾಸಿಗಳಿಗೆ ಸದಾಕಾಲದ ಜೀವ ಚೈತನ್ಯ ಕೊಡುವ—ಮಾಧ್ಯಮ ಸಹ ಆಗಿದೆ.—ಕೀರ್ತನೆ 37:29; ಮತ್ತಾಯ 6:9, 10.
ಆಯ್ದು ತೆಗೆದ ಪ್ರಭುಗಳ ಒಂದು ಮಂಡಲಿ
ರಾಜ್ಯವು ಸ್ಥಾನಭರ್ತಿ ಮಾಡಲಿರುವ ಈ ಮಾನವ ಆಳಿಕೆಗಳು ಎಷ್ಟೋ ಭ್ರಷ್ಟಾಚಾರದಿಂದ ತುಂಬಿರುವುದರಿಂದ, ಆ ಸ್ವರ್ಗೀಯ ಸರಕಾರದಲ್ಲಿ ಒಳಗೂಡಿರುವವರು ದೇವರ ಮೂಲಕ ಏಕೆ ಜಾಗರೂಕತೆಯಿಂದ ಆರಿಸಲ್ಪಡಬೇಕು ಮತ್ತು ಪರೀಕ್ಷೆಗೊಳಪಡಬೇಕೆಂದು ನಾವು ನೋಡಸಾಧ್ಯವಿಲ್ಲವೋ? ಮಾನವ ಕುಲದ ಇಂದಿನ ಪರಿಸ್ಥಿತಿಯನ್ನು, ಪ್ರತಿಕೂಲ ಹವಾಮಾನದಲ್ಲಿ ಹಾನಿಗೊಂಡ ಜೆಟ್ ವಿಮಾನವೊಂದರಲ್ಲಿರುವ ನೂರಾರು ಪ್ರಯಾಣಿಕರ ಪರಿಸ್ಥಿತಿಗೆ ಹೋಲಿಸಬಹುದು. ಅಂಥ ಒಂದು ವಿಷಮಾವಸ್ಥೆಯಲ್ಲಿ, ಯುವ ಮತ್ತು ಅನನುಭವಿ ವಿಮಾನ ಸಿಬ್ಬಂದಿ ವರ್ಗವನ್ನು ನೀವು ಬಯಸುವಿರೋ? ಅಸಂಭವ! ಕಟ್ಟುನಿಟ್ಟಿನ ಅರ್ಹತೆಗಳಿಗನುಸಾರ ಜಾಗರೂಕವಾಗಿ ಆರಿಸಲ್ಪಟ್ಟ ಒಂದು ಸಿಬ್ಬಂದಿ ವರ್ಗವನ್ನು ಆ ಪರಿಸ್ಥಿತಿಯು ಕೇಳಿಕೊಳ್ಳುವುದು.
ಸ್ವರ್ಗದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಯಾರು ಸೇವೆ ಸಲ್ಲಿಸುವರೋ ಅವರ ಸಂಬಂಧದಲ್ಲಿ, “ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ,” ಎಂಬುದನ್ನು ತಿಳಿಯುವುದು ನಮಗೆ ನೆಮ್ಮದಿಯನ್ನುಂಟುಮಾಡುತ್ತದೆ. (1 ಕೊರಿಂಥ 12:18) ರಾಜ್ಯದಲ್ಲಿ ಸ್ಥಾನವೊಂದಕ್ಕಾಗಿ ಇರುವ ವೈಯಕ್ತಿಕ ಅಭಿಲಾಷೆ ಅಥವಾ ಮಹಾಕಾಂಕ್ಷೆಯು ನಿಷ್ಕರ್ಷಿಸುವ ವಿಷಯವಾಗಿರುವುದಿಲ್ಲ. (ಮತ್ತಾಯ 20:20-23) ಅನರ್ಹರಾಗಿರುವವರ ಪ್ರವೇಶವನ್ನು ನಿರ್ಬಂಧಿಸಲಿಕ್ಕಾಗಿ ದೇವರ ಮೂಲಕ ನಂಬಿಕೆಯ ಮತ್ತು ನಡವಳಿಕೆಯ ನಿರ್ದಿಷ್ಟ ಮಟ್ಟಗಳು ಸ್ಥಾಪಿಸಲ್ಪಟ್ಟಿವೆ. (ಯೋಹಾನ 6:44; ಎಫೆಸ 5:5) ಕ್ರಿಸ್ತನೊಂದಿಗಿರುವ ಸಹಬಾಧ್ಯಸ್ಥರು ಆತ್ಮಿಕ-ಮನಸ್ಸುಳ್ಳವರು, ಶಾಂತರು, ನೀತಿಯನ್ನು ಪ್ರೀತಿಸುವವರು, ಕರುಣೆಯುಳ್ಳವರು, ನಿರ್ಮಲಚಿತ್ತರು, ಮತ್ತು ಸಮಾಧಾನದವರಾಗಿ ಪರಿಣಮಿಸಬೇಕೆಂದು ಯೇಸುವಿನ ಪರ್ವತ ಪ್ರಸಂಗದ ಆರಂಭದ ಮಾತುಗಳು ತೋರಿಸುತ್ತವೆ.—ಮತ್ತಾಯ 5:3-9; ನೋಡಿ ಪ್ರಕಟನೆ 2:10 ಸಹ.
ಸಂತೋಷಕರವಾಗಿ, ಈ ಪ್ರತಿನಿಧಿ ಸ್ವರೂಪದ ಪ್ರಭುಗಳ ಸ್ವರ್ಗೀಯ ಮಂಡಲಿಯಲ್ಲಿರಲು ಮಾನವ ಸಂತತಿಯ ಅಧಿಕಾಂಶ ಜನರು ಆರಿಸಲ್ಪಡದೆ ಇರುವುದಾದರೂ, ನಿರೀಕ್ಷಾರಹಿತವಾಗಿ ಬಿಟ್ಟಿರುವುದಿಲ್ಲ. ಅವರು ಸುಂದರವಾದ ಈ ಭೂಮಿಯಲ್ಲಿ ವಾಸಿಸುವರು ಮತ್ತು ಆತನ ದೈವಿಕ ಆಳ್ವಿಕೆಯ ಪ್ರಯೋಜನಗಳನ್ನು ಆನಂದಿಸುವರು. ಬಹಳ ಹಿಂದೆಯೇ ಮೃತರಾಗಿರುವ ಗತ ಅನ್ಯಾಯಗಳ ಬಲಿಗಳು, ದೇವರ ರಾಜ್ಯವು ಸಂಪೂರ್ಣಾರ್ಥದಲ್ಲಿ ‘ಬರುವುದನ್ನು’ ನೋಡಲು ಬದುಕಿ ಉಳಿಯುವವರ ಜೊತೆಯಲ್ಲಿ ಜೀವಿಸಲು ಜೀವಕ್ಕೆ ಪುನಃಸ್ಥಾಪಿಸಲ್ಪಡುವರು. “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು,” ಎನ್ನುವ ವಾಗ್ದಾನವು ನಡೆಸಲ್ಪಡುವುದು.—ಮತ್ತಾಯ 6:9, 10; ಜ್ಞಾನೋಕ್ತಿ 2:21; ಅ. ಕೃತ್ಯಗಳು 24:15.