ಶೆಕೆಮ್ ಕಣಿವೆಯಲ್ಲಿನ ನಗರ
ದೇವರು ತನ್ನ ಜನರಿಗಾಗಿ ಆರಿಸಿಕೊಂಡ ದೇಶದ ಮಧ್ಯದಲ್ಲಿ, ಏಬಾಲ್ ಬೆಟ್ಟ ಮತ್ತು ಗೆರಿಜ್ಜೀಮ್ ಬೆಟ್ಟದ ನಡುವೆ ಶೆಕೆಮ್ ನಗರವಿದೆ. ಸುಮಾರು ನಾಲ್ಕು ಸಾವಿರ ವರುಷಗಳ ಹಿಂದೆ ಯೆಹೋವನು ಅಬ್ರಹಾಮನಿಗೆ, “ನಾನು ಈ ದೇಶವನ್ನು ನಿನ್ನ ಸಂತಾನಕ್ಕೆ ಕೊಡುವೆನು,” ಎಂದು ವಾಗ್ದಾನಿಸಿದ್ದು ಈ ಸ್ಥಳದಲ್ಲಿಯೇ.—ಆದಿಕಾಂಡ 12:6, 7.
ಈ ವಾಗ್ದಾನಕ್ಕೆ ಹೊಂದಿಕೆಯಾಗಿ, ಅಬ್ರಹಾಮನ ಮೊಮ್ಮಗನಾದ ಯಾಕೋಬನು ಶೆಕೆಮಿನಲ್ಲಿ ಬೀಡುಬಿಟ್ಟು, “ದೇವರೇ ಇಸ್ರಾಯೇಲನ ದೇವರು” ಎಂದು ತಾನು ಕರೆದ ಯಜ್ಞವೇದಿಯನ್ನು ಕಟ್ಟಿದನು. ಈ ಪ್ರದೇಶದಲ್ಲಿ, ತನ್ನ ಕುಟುಂಬ ಮತ್ತು ಜಾನುವಾರುಗಳಿಗೆ ನೀರಿನ ಸರಬರಾಯಿ ಮಾಡಲು ಯಾಕೋಬನು ಪ್ರಾಯಶಃ ಒಂದು ಬಾವಿಯನ್ನು ತೋಡಿದನು. ಆ ಬಾವಿ, ಶತಮಾನಗಳ ಬಳಿಕ, “ಯಾಕೋಬನು ತೆಗೆಸಿದ ಬಾವಿ” ಎಂದು ಪ್ರಸಿದ್ಧವಾಗಲಿತ್ತು.—ಆದಿಕಾಂಡ 33:18-20; ಯೋಹಾನ 4:5, 6, 12.
ಹಾಗಿದ್ದರೂ, ಯಾಕೋಬನ ಕುಟುಂಬದ ಸರ್ವ ಸದಸ್ಯರೂ ಸತ್ಯಾರಾಧನೆಗೆ ಹುರುಪನ್ನು ತೋರಿಸಲಿಲ್ಲ. ಅವನ ಪುತ್ರಿಯಾದ ದೀನಳು ಶೆಕೆಮಿನ ಕಾನಾನ್ಯ ಹುಡುಗಿಯರೊಂದಿಗೆ ಸಖ್ಯವನ್ನು ಬೆಳೆಸಿದಳು. ಆಗ ಇನ್ನೂ ಚಿಕ್ಕವಳಾಗಿದ್ದ ದೀನ, ತನ್ನ ಕುಟುಂಬದ ಡೇರೆಗಳ ಸುರಕ್ಷಿತತೆಯನ್ನು ಬಿಟ್ಟು, ಹತ್ತಿರದ ನಗರವನ್ನು ಸಂದರ್ಶಿಸಲಾರಂಭಿಸಿ, ಅಲ್ಲಿ ಸ್ನೇಹಿತೆಯರನ್ನು ಮಾಡಿಕೊಂಡಳು.
ತಮ್ಮ ನಗರಕ್ಕೆ ಕ್ರಮವಾಗಿ ಭೇಟಿಕೊಡುವ—ಯಾರೂ ಜೊತೆಗಾರರಿಲ್ಲದೆ—ಈ ಎಳೆಯ ಕನ್ಯೆಯನ್ನು, ಆ ನಗರದ ಯುವಕರು ಹೇಗೆ ವೀಕ್ಷಿಸಿದರು? ಒಬ್ಬ ಅಧಿಪತಿಯ ಮಗನು, “ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಕೂಡಿ ಮಾನಭಂಗಪಡಿಸಿದನು.” ದೀನಳು ಆ ದುರಾಚಾರದ ಕಾನಾನ್ಯರೊಂದಿಗೆ ಒಡನಾಟಮಾಡಿ ಅಪಾಯವನ್ನು ಆಮಂತ್ರಿಸಿದ್ದೇಕೆ? ತನ್ನ ಸಮಪ್ರಾಯದ ಹುಡುಗಿಯರ ಒಡನಾಟ ತನಗೆ ಅವಶ್ಯವೆಂದು ಅವಳು ನೆನಸಿದ್ದರಿಂದಲೊ? ತನ್ನ ಸಹೋದರರಲ್ಲಿ ಕೆಲವರಂತೆ ಆಕೆ ಹಟಮಾರಿಯೂ ಸ್ವತಂತ್ರಳೂ ಆಗಿದ್ದಳೊ? ಆದಿಕಾಂಡದ ವೃತ್ತಾಂತವನ್ನು ಓದಿ, ಯಾಕೋಬನೂ ಲೇಯಳೂ, ತಮ್ಮ ಪುತ್ರಿ ಶೆಕೆಮಿಗೆ ಭೇಟಿಕೊಟ್ಟದ್ದರ ದುರಂತಕರ ಪರಿಣಾಮಗಳ ಕಾರಣ ಎಷ್ಟು ಬೇಗುದಿ ಮತ್ತು ನಾಚಿಕೆಗೊಳಗಾಗಿದ್ದಿರಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ.—ಆದಿಕಾಂಡ 34:1-31; 49:5-7; ಜೂನ್ 15, 1985ರ, ದ ವಾಚ್‌ಟವರ್‌ನ 31ನೆಯ ಪುಟವನ್ನೂ ನೋಡಿರಿ.
ಸುಮಾರು 300 ವರುಷಗಳ ತರುವಾಯ, ದೇವಪ್ರಭುತ್ವ ಮಾರ್ಗದರ್ಶನವನ್ನು ಅಲಕ್ಷಿಸಿದ ಫಲಿತಾಂಶಗಳು ಪುನಃ ಎದ್ದುಬಂದವು. ಶೆಕೆಮಿನಲ್ಲಿ, ಯೆಹೋಶುವನು ಇಸ್ರಾಯೇಲ್ಯ ಇತಿಹಾಸದಲ್ಲಿನ ಸಮ್ಮೇಳನಗಳಲ್ಲಿ ಅತಿ ಸ್ಮರಣೀಯವಾದುದನ್ನು ಸಂಘಟಿಸಿದನು. ಆ ಕಣಿವೆಯಲ್ಲಿನ ದೃಶ್ಯವನ್ನು ಕಲ್ಪಿಸಿಕೊಳ್ಳಿರಿ. ಇಸ್ರಾಯೇಲಿನ ಆರು ಕುಲಗಳಿಗೆ ಸೇರಿದ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಸ್ತ್ರೀ, ಪುರುಷರು ಮತ್ತು ಮಕ್ಕಳು ಗೆರಿಜ್ಜೀಮ್ ಬೆಟ್ಟದ ಮುಂದೆ ನಿಂತಿದ್ದಾರೆ. ಕಣಿವೆಯ ಆ ಪಕ್ಕದಲ್ಲಿ ಉಳಿದ ಆರು ಕುಲಗಳ ಸುಮಾರು ಅದೇ ಸಂಖ್ಯೆ ಏಬಾಲ್ ಬೆಟ್ಟದ ಮುಂದೆ ನಿಂತಿದೆ.a ಮತ್ತು ಅಗೋ ಅಲ್ಲಿ ಕೆಳಗೆ, ಒಡಂಬಡಿಕೆಯ ಪೆಟ್ಟಿಗೆಯ ಪಕ್ಕದಲ್ಲಿ ಮತ್ತು ಇಸ್ರಾಯೇಲ್ಯರ ಎರಡು ಗುಂಪುಗಳ ಮಧ್ಯೆ ಯಾಜಕರೂ ಯೆಹೋಶುವನೂ ನಿಂತಿದ್ದಾರೆ. ಎಂತಹ ಒಂದು ದೃಶ್ಯ!—ಯೆಹೋಶುವ 8:30-33.
ಈ ಮಹಾ ಸಮೂಹದ ಮುಂದೆ ಮೇಲೇರಿ ನಿಂತ ಆ ಎರಡು ಬೆಟ್ಟಗಳು ಸೌಂದರ್ಯ ಮತ್ತು ಬಂಜರುಭೂಮಿಯ ಪೂರ್ತಿ ವೈದೃಶ್ಯವನ್ನು ನೀಡುತ್ತವೆ. ಗೆರಿಜ್ಜೀಮಿನ ಮೇಲ್ಭಾಗದ ಇಳಿಜಾರುಗಳು ಹಸುರಾಗಿಯೂ ಫಲವತ್ತಾಗಿಯೂ ಕಾಣುವಾಗ ಏಬಾಲಿನ ಬೆಟ್ಟಗಳು ಪ್ರಧಾನವಾಗಿ ಬೂದು ಬಣ್ಣದವುಗಳೂ ಬೋಳಾದವುಗಳೂ ಆಗಿವೆ. ಯೆಹೋಶುವನು ಮಾತನಾಡಲಿದ್ದ ಸಮಯಕ್ಕಾಗಿ ಇಸ್ರಾಯೇಲ್ಯರು ಕಾಯುತ್ತಿದ್ದಾಗ, ಅಲ್ಲಿದ್ದ ಸಡಗರದ ಝೇಂಕಾರವನ್ನು ನೀವು ಅನುಭವಿಸಬಲ್ಲಿರೊ? ಈ ನೈಸರ್ಗಿಕ ಸಭಾಂಗಣದಲ್ಲಿ ಪ್ರತಿಯೊಂದು ಧ್ವನಿಯೂ ಪ್ರತಿಧ್ವನಿಸುತ್ತದೆ.
‘ಮೋಶೆಯ ಧರ್ಮಶಾಸ್ತ್ರ’ವನ್ನು ಓದಲು ಯೆಹೋಶುವನಿಗೆ ಹಿಡಿದ ನಾಲ್ಕರಿಂದ ಆರು ತಾಸುಗಳಲ್ಲಿ, ಜನರೂ ಭಾಗವಹಿಸುತ್ತಾರೆ. (ಯೆಹೋಶುವ 8:34, 35) ಗೆರಿಜ್ಜೀಮಿನ ಮುಂದಿದ್ದ ಇಸ್ರಾಯೇಲ್ಯರು ಆಶೀರ್ವಾದಗಳಲ್ಲಿ ಪ್ರತಿಯೊಂದರ ಬಳಿಕ ಆಮೆನ್! ಎಂದು ಹೇಳುತ್ತಾರೆಂಬುದೂ ಏಬಾಲಿನ ಮುಂದಿರುವವರು ಪ್ರತಿಯೊಂದು ಶಾಪದ ಬಳಿಕ ಆಮೆನ್! ಎನ್ನುತ್ತಾರೆಂಬುದೂ ವ್ಯಕ್ತ. ಪ್ರಾಯಶಃ ಏಬಾಲ್ ಬೆಟ್ಟದ ಬೋಳು ತೋರಿಕೆಯು ಅವಿಧೇಯತೆಯ ವಿಪತ್ಕಾರಕ ಪರಿಣಾಮವನ್ನು ಜನರಿಗೆ ಜ್ಞಾಪಕ ಹುಟ್ಟಿಸುತ್ತದೆ.
“ತಂದೆತಾಯಿಗಳನ್ನು ಅವಮಾನ ಪಡಿಸಿದವನು ಶಾಪಗ್ರಸ್ತ,” ಎಂದು ಯೆಹೋಶುವನು ಎಚ್ಚರಿಸುತ್ತಾನೆ. ಆಗ ಹತ್ತು ಲಕ್ಷಕ್ಕೂ ಹೆಚ್ಚು ಧ್ವನಿಗಳು ಶ್ರುತಿಗೂಡಿ “ಆಮೆನ್!” ಎಂದು ಪ್ರತ್ಯುತ್ತರಿಸುತ್ತವೆ. ಮುಂದುವರಿಸುವ ಮೊದಲು ಈ ಗುಡುಗುಸದೃಶ ಉತ್ತರವು ಶಾಂತವಾಗುವಂತೆ ಯೆಹೋಶುವನು ಕಾಯುತ್ತ ಹೇಳುವುದು: “ಮತ್ತೊಬ್ಬನ ಮೇರೆಯನ್ನು ಸರಿಸಿದವನು ಶಾಪಗ್ರಸ್ತ.” ಆರು ಕುಲಗಳು ಪುನಃ, ಅನೇಕ ವಿದೇಶೀ ನಿವಾಸಿಗಳೊಂದಿಗೆ, “ಆಮೆನ್!” ಎಂದು ಆರ್ಭಟಿಸುತ್ತವೆ. (ಧರ್ಮೋಪದೇಶಕಾಂಡ 27:16, 17) ನೀವು ಅಲ್ಲಿರುತ್ತಿದ್ದಲ್ಲಿ, ಆ ಬೆಟ್ಟಗಳ ಮಧ್ಯೆ ನಡೆದ ಆ ಕೂಟವನ್ನು ನೀವು ಎಂದಾದರೂ ಮರೆಯುತ್ತಿದ್ದಿರೊ? ವಿಧೇಯತೆಯ ಅಗತ್ಯವು ನಿಮ್ಮ ಮನದಲ್ಲಿ ಅಳಿಸಲಾಗದಂತೆ ಮುದ್ರಿಸಲ್ಪಡುತ್ತಿರಲಿಲ್ಲವೊ?
ಸುಮಾರು 20 ವರುಷಗಳ ನಂತರ, ತಾನು ಸಾಯುವುದಕ್ಕೆ ತುಸು ಮುಂಚಿತವಾಗಿ, ಯೆಹೋಶುವನು ಪುನಃ ಆ ಜನಾಂಗವನ್ನು, ಅವರು ತಮ್ಮ ನಿರ್ಧಾರವನ್ನು ಬಲಪಡಿಸಿಕೊಳ್ಳಲಿಕ್ಕಾಗಿ, ಶೆಕೆಮಿನಲ್ಲಿ ಸೇರಿಬರುವಂತೆ ಕರೆಕೊಟ್ಟನು. ಪ್ರತಿಯೊಬ್ಬನು ಮಾಡಲೇಬೇಕಾದ ಆಯ್ಕೆಯನ್ನು ಅವನು ಅವರ ಮುಂದಿಟ್ಟನು. “ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ,” ಎಂದನವನು. “ನನ್ನ ಹಾಗೂ ನನ್ನ ಮನೆವಾರ್ತೆಯ ವಿಷಯದಲ್ಲಿಯಾದರೋ, ನಾವು ಯೆಹೋವನನ್ನೇ ಸೇವಿಸುವೆವು” (NW). (ಯೆಹೋಶುವ 24:1, 15) ಶೆಕೆಮಿನಲ್ಲಿ ನಡೆದ ಈ ನಂಬಿಕೆಯನ್ನು ಹುರಿದುಂಬಿಸುವ ಸಮ್ಮೇಳನಗಳು ಅವರನ್ನು ಪ್ರಭಾವಿಸಿದವೆಂಬುದು ಸ್ಪಷ್ಟ. ಯೆಹೋಶುವನ ಮರಣಾನಂತರ, ಅನೇಕ ವರ್ಷಗಳ ವರೆಗೆ ಇಸ್ರಾಯೇಲ್ಯರು ಅವನ ನಂಬಿಗಸ್ತ ಮಾದರಿಯನ್ನು ಅನುಕರಿಸಿದರು.—ಯೆಹೋಶುವ 24:31.
ಸುಮಾರು 15 ಶತಮಾನಗಳ ಬಳಿಕ ಯೇಸು ಗೆರಿಜ್ಜೀಮ್ ಬೆಟ್ಟದ ಮರೆಯಲ್ಲಿ ದಣಿವಾರಿಸಿಕೊಳ್ಳುತ್ತಿದ್ದಾಗ, ಒಂದು ಹೃದಯೋಲ್ಲಾಸಕರವಾದ ಸಂಭಾಷಣೆಯು ನಡೆಯಿತು. ದೂರ ಪ್ರಯಾಣದಿಂದಾಗಿ ಬಳಲಿದ್ದ ಯೇಸು, ಯಾಕೋಬನ ಬಾವಿಯ ಬಳಿ ಕುಳಿತುಕೊಂಡಿದ್ದಾಗ, ಸಮಾರ್ಯದ ಒಬ್ಬ ಸ್ತ್ರೀ ನೀರಿನ ಪಾತ್ರೆಯೊಂದಿಗೆ ಸಮೀಪಿಸಿದಳು. ಯೆಹೂದ್ಯರು ಸಮಾರ್ಯದವರ ಪಾತ್ರೆಗಳಿಂದ ನೀರನ್ನು ಕುಡಿಯುವುದಂತೂ ಇರಲಿ, ಅವರೊಂದಿಗೆ ಮಾತಾಡುತ್ತಲೇ ಇರದಿದ್ದ ಕಾರಣ, ಯೇಸು ಆಕೆಯೊಂದಿಗೆ ಕುಡಿಯಲಿಕ್ಕಾಗಿ ನೀರನ್ನು ಕೇಳಿದಾಗ, ಆಕೆ ಅತ್ಯಾಶ್ಚರ್ಯಪಟ್ಟಳು. (ಯೋಹಾನ 4:5-9) ಯೇಸುವಿನ ಮುಂದಿನ ಮಾತುಗಳು ಆಕೆಯನ್ನು ಇನ್ನೂ ಹೆಚ್ಚು ಆಶ್ಚರ್ಯಗೊಳಿಸಿದವು.
“ಈ ನೀರನ್ನು ಕುಡಿಯುವವರೆಲ್ಲರಿಗೆ ತಿರಿಗಿ ನೀರಡಿಕೆಯಾಗುವದು; ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವದು.” (ಯೋಹಾನ 4:13, 14) ಆ ವಾಗ್ದಾನದಲ್ಲಿ ಆ ಸ್ತ್ರೀಗೆ ಇದ್ದ ಆಸಕ್ತಿಯನ್ನು ಕಲ್ಪಿಸಿಕೊಳ್ಳಿರಿ, ಏಕೆಂದರೆ ಆಳವಾದ ಈ ಬಾವಿಯಿಂದ ನೀರು ತರುವುದು ಕಷ್ಟಕರವಾದ ಕೆಲಸವಾಗಿತ್ತು. ಯೇಸು ಇನ್ನೂ ವಿವರಿಸಿದ್ದೇನಂದರೆ, ಯೆರೂಸಲೇಮ್ ಮತ್ತು ಗೆರಿಜ್ಜೀಮ್ ಬೆಟ್ಟಗಳ ಐತಿಹಾಸಿಕ ಪ್ರಾಮುಖ್ಯಗಳ ಹೊರತೂ, ದೇವರನ್ನು ಸಮೀಪಿಸಲು ಅವೆರಡೂ ಅವಶ್ಯವಾದ ಧಾರ್ಮಿಕ ನಿವೇಶನಗಳಲ್ಲ. ಪ್ರಾಮುಖ್ಯವಾದ ಸಂಗತಿಯು, ಸ್ಥಳವಲ್ಲ, ಬದಲಾಗಿ ಹೃದಯ ಮನೋಭಾವ ಮತ್ತು ನಡತೆಯೇ. “ಸತ್ಯಾರಾಧಕರು, ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವರು” ಎಂದು ಅವನು ಹೇಳಿದನು. “ನಿಜವಾಗಿಯೂ, ಅಂತಹ ಜನರು ತನ್ನನ್ನು ಆರಾಧಿಸುವಂತೆ ತಂದೆಯು ಎದುರುನೋಡುತ್ತಿದ್ದಾನೆ.” (ಯೋಹಾನ 4:23, NW) ಅವೆಷ್ಟು ಸಾಂತ್ವನದಾಯಕ ಮಾತುಗಳಾಗಿದ್ದಿರಬೇಕು! ಈ ಕಣಿವೆಯು, ಪುನಃ ಒಮ್ಮೆ ಯೆಹೋವನನ್ನು ಆರಾಧಿಸುವಂತೆ ಜನರು ಪ್ರೋತ್ಸಾಹಿಸಲ್ಪಟ್ಟ ಸ್ಥಳವಾಗಿ ಪರಿಣಮಿಸಿತು.
ಇಂದು, ಹಳೆಯ ಶೆಕೆಮಿನ ಅವಶೇಷಗಳ ಪಕ್ಕದಲ್ಲಿ ನ್ಯಾಬ್ಲಸ್ ನಗರವಿದೆ. ಆ ಕಣಿವೆಯಲ್ಲಿ ಗೆರಿಜ್ಜೀಮ್ ಮತ್ತು ಏಬಾಲ್ ಬೆಟ್ಟಗಳು ಈಗಲೂ ಎದ್ದು ಕಾಣುತ್ತಿದ್ದು, ಗತಸಂಭವಗಳಿಗೆ ಮೂಕಸಾಕ್ಷಿಗಳಾಗಿ ನಿಂತಿವೆ. ಈ ಬೆಟ್ಟಗಳ ಬುಡದಲ್ಲಿರುವ ಯಾಕೋಬನ ಬಾವಿಯನ್ನು ಈಗಲೂ ಸಂದರ್ಶಿಸಬಹುದು. ಅಲ್ಲಿ ನಡೆದ ಘಟನೆಗಳನ್ನು ನಾವು ಮನನ ಮಾಡುವಾಗ, ಯೆಹೋಶುವನು ಮತ್ತು ಯೇಸು ನಮಗೆ ಮಾಡಲು ಕಲಿಸಿರುವಂತೆ, ಸತ್ಯಾರಾಧನೆಯನ್ನು ಎತ್ತಿಹಿಡಿಯುವ ಪ್ರಮುಖತೆಯ ಕುರಿತು ನಾವು ಜ್ಞಾಪಿಸಲ್ಪಡುತ್ತೇವೆ.—ಹೋಲಿಸಿ ಯೆಶಾಯ 2:2, 3.
[ಅಧ್ಯಯನ ಪ್ರಶ್ನೆಗಳು]
a ಗೆರಿಜ್ಜೀಮ್ ಬೆಟ್ಟದ ಮುಂದಿದ್ದ ಆರು ಕುಲಗಳು, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್ ಮತ್ತು ಬೆನ್ಯಾಮೀನ್. ಏಬಾಲ್ ಬೆಟ್ಟದ ಮುಂದಿದ್ದ ಆರು ಕುಲಗಳು, ರೂಬೇನ್, ಗಾದ್, ಆಶೇರ್, ಜೆಬುಲೂನ್, ದಾನ್ ಮತ್ತು ನಫ್ತಾಲಿ.—ಧರ್ಮೋಪದೇಶಕಾಂಡ 27:12, 13.
[ಪುಟ 31 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.