ವಾಗ್ದಾನ ದೇಶದಿಂದ ದೃಶ್ಯಗಳು
ಗೆರಿಜ್ಜೀಮ್—‘ಈ ಬೆಟ್ಟದ ಮೇಲೆ ನಾವು ಆರಾಧಿಸಿದೆವು’
ಸಮಾರ್ಯದ ಹೆಂಗಸು ಬಾವಿಯ ಬಳಿಯಲ್ಲಿದ್ದಾಳೆ. ಈ ವಾಕ್ಸರಣಿಯು, ಸಮಾರ್ಯ ಸೀಮೆಯ ಸುಖರ್ನಲ್ಲಿ ಇದ್ದ “ಯಾಕೋಬನು ತೆಗೆಸಿದ ಬಾವಿ [ಬುಗ್ಗೆ, NW]”ಯ ಬಳಿಯಲ್ಲಿ ಸ್ತ್ರೀಯೊಬ್ಬಳಿಗೆ ಯೇಸುವು ಅವಿಧಿಯಾಗಿ ಸಾಕ್ಷಿ ನೀಡುವ ಹೃದಯಸ್ಪರ್ಶಿ ದಾಖಲೆಯನ್ನು ನಿಮ್ಮ ಮನಸ್ಸಿಗೆ ತರುವುದಿಲವ್ಲೆ? ಆ ಅರ್ಥಭರಿತ ಘಟನೆಯ ನಿಮ್ಮ ನೋಟವನ್ನು ಹರಿತಗೊಳಿಸಲು ನೀವು ಬಯಸುವಿರೋ?—ಯೋಹಾನ 4:5-7.
ಮೇಲಿನ ಎರಡು ಬೆಟ್ಟಗಳನ್ನು ಗಮನಿಸಿರಿ, ಇವು ಯೆರೂಸಲೇಮಿನ ಉತ್ತರಕ್ಕೆ ಸುಮಾರು 50 ಕಿಲೊಮೀಟರುಗಳಷ್ಟು ದೂರದಲ್ಲಿವೆ.a ಎಡಪಕ್ಕದಲ್ಲಿ (ದಕ್ಷಿಣಕ್ಕೆ) ಮರಗಳಿಂದಾವೃತವಾದ ಗೆರಿಜ್ಜೀಮ್ ಇದೆ; ವಿಪುಲವಾದ ಬುಗ್ಗೆಗಳು ಅದರ ಫಲವತ್ತಾಗಿರುವಿಕೆಗೆ ಮತ್ತು ಸೊಬಗಿಗೆ ನೆರವಾಗುತ್ತದೆ. ಬಲಪಕ್ಕದಲ್ಲಿ (ಉತ್ತರಕ್ಕೆ) ಏಬಾಲ್ ಇದೆ, ಕೊಂಚ ಎತ್ತರವಾಗಿದೆ, ಆದರೆ ಕಲ್ಲುಬಂಡೆಗಳ ಮತ್ತು ಬಂಜರು ಭೂಮಿಯಾಗಿದೆ.
ಇವುಗಳ ನಡುವೆ ಶೆಕೆಮಿನ ಫಲವತ್ತಾದ ಕಣಿವೆ ಇದೆ. ನೆನಪಿಸಿರಿ, ದೇವರ ಸ್ನೇಹಿತ, ಅಬ್ರಾಮ (ತದನಂತರ ಅಬ್ರಹಾಮನೆಂದು ಕರೆಯಲ್ಪಟ್ಟನು) ವಾಗ್ದಾನ ದೇಶದ ಮೂಲಕ ಪ್ರಯಾಣಿಸುತ್ತಿರುವಾಗ, ಶೆಕೆಮಿನಲ್ಲಿ ಸ್ವಲ್ಪ ಸಮಯ ಉಳಿದನು. ಇಲ್ಲಿ ಅವನಿಗೆ ದರ್ಶನವನ್ನಿತ್ತು, ಅವನ ಸಂತಾನಕ್ಕೆ ಈ ದೇಶವನ್ನು ವಾಗ್ದಾನಿಸಿದ ಯೆಹೋವನಿಗೆ ಒಂದು ಯಜ್ಞವೇದಿಯನ್ನು ಆತನು ಕಟ್ಟಿದನು. (ಆದಿಕಾಂಡ 12:5-7) ವಾಗ್ದಾನಿಸಲ್ಪಟ್ಟ ಆ ದೇಶದಲ್ಲಿ, ಅಂತಹ ಒಂದು ವಾಗ್ದಾನ ಮಾಡಲು ಅದು ಎಷ್ಟೊಂದು ತಕ್ಕ ಸ್ಥಳವಾಗಿತ್ತು! ಗೆರಿಜ್ಜೀಮ್ ಯಾ ಏಬಾಲಿನ ಶಿಖರದಿಂದ, ಮೂಲಪಿತೃವು ವಾಗ್ದತ್ತ ದೇಶದ ಬಹುದೊಡ್ಡ ಭಾಗಗಳನ್ನು ನೋಡಶಕ್ತನಾಗಿದ್ದನು. ಶೆಕೆಮ್ ಪಟ್ಟಣವು (ಆಧುನಿಕ ನಬ್ಲಸ್) ಚಟುವಟಿಕೆಗಳ ಒಂದು ಪ್ರಾಮುಖ್ಯ ಕೇಂದ್ರವಾಗಿದ್ದು, ಕರಾವಳಿ ತೀರ ಮತ್ತು ಯೊರ್ದನ್ ಕಣಿವೆಯ ನಡುವಣ ಪೂರ್ವ-ಪಶ್ಚಿಮ ರಸ್ತೆಗೆ ಸಮೀಪದ ಉತ್ತರ-ದಕ್ಷಿಣ ಪರ್ವತ ಮಾರ್ಗದಲ್ಲಿತ್ತು.
ಅಬ್ರಹಾಮನ ಯಜ್ಞವೇದಿಯು ಇಲ್ಲಿನ ಒಂದೇ ಗಮನಾರ್ಹ ಧಾರ್ಮಿಕ ಬೆಳವಣಿಗೆಯಾಗಿತ್ತು. ನಂತರ, ಈ ಪ್ರದೇಶವನ್ನು ಯಾಕೋಬನು ಖರೀದಿಸಿ, ಸತ್ಯಾರಾಧನೆಯನ್ನು ಮುಂದರಿಸಿದನು. ಗೆರಿಜ್ಜೀಮ್ನ ತಳಭಾಗಕ್ಕೆ ಸಮೀಪದಲ್ಲಿ ಅವನು ಒಂದು ಆಳವಾದ ಬಾವಿಯನ್ನು ತೋಡಿದನು ಯಾ ತೋಡಲು ಹಣವನ್ನು ತೆತ್ತನು. ಶತಮಾನಗಳ ನಂತರ, ಸಮಾರ್ಯದ ಹೆಂಗಸು ಯೇಸುವಿಗೆ ಅಂದದ್ದು: “ನಮ್ಮ ಹಿರಿಯನಾದ ಯಾಕೋಬನು . . . ಇವನು ಈ ಬಾವಿಯನ್ನು ನಮಗೆ ಕೊಟ್ಟವನು, . . . ಇದೇ ಬಾವಿಯಿಂದ ನೀರು ಕುಡಿದರು.” ಇದರ ನೀರಿನ ಮೂಲವು ಒಂದು ಬುಗ್ಗೆಯಾಗಿದ್ದಿರಬಹುದು, ಹೀಗೆ ಅಪೊಸ್ತಲ ಯೋಹಾನನು ಅದನ್ನು “ಯಾಕೋಬನ ಬುಗ್ಗೆ” [NW]ಯೆಂದು ಕರೆಯಲು ಕಾರಣವೇನೆಂದು ವಿವರಿಸುತ್ತದೆ.
ಗೆರಿಜ್ಜೀಮ್ ಮತ್ತು ಏಬಾಲಿನ ಸಂಬಂಧದಲ್ಲಿ ಸತ್ಯಾರಾಧನೆಯ ಉಲ್ಲೇಖವು, ಮೋಶೆಯು ನಿರ್ದೇಶಿಸಿದಂತೆ ಇಸ್ರಾಯೇಲನ್ನು ಯೆಹೋಶುವನು ಇಲ್ಲಿಗೆ ತಂದದ್ದನ್ನು ಕೂಡ ನಿಮ್ಮ ಮನಸ್ಸಿಗೆ ತರಬಲ್ಲದು. ಏಬಾಲಿನ ಮೇಲೆ ಯೆಹೋಶುವನು ಒಂದು ಯಜ್ಞವೇದಿಯನ್ನು ಕಟ್ಟಿದನು. ಯೆಹೋಶುವನು “ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದಶಾಪವಾಕ್ಯಗಳನ್ನು” ಓದುವಾಗ, ಅರ್ಧಾಂಶ ಜನರು ಗೆರಿಜ್ಜೀಮ್ನ ಮುಂಭಾಗದಲ್ಲೂ, ಉಳಿದವರು ಏಬಾಲಿನ ಮುಂದೆಯೂ ಇರುವುದನ್ನು ಊಹಿಸಿರಿ. (ಯೆಹೋಶುವ 8:30-35; ಧರ್ಮೋಪದೇಶಕಾಂಡ 11:29) ವರುಷಗಳ ನಂತರ, ಯೆಹೋಶುವನು ಹಿಂದಿರುಗುತ್ತಾನೆ ಮತ್ತು ಕೊನೆಯ ಪ್ರಬೋಧನೆಯಲ್ಲಿ ಹೇಳಿದ್ದು: “ನಾನು ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.” ಜನರು ಅದನ್ನೇ ಮಾಡುವಂತೆ ಒಡಂಬಟ್ಟರು. (ಯೆಹೋಶುವ 24:1, 15-18, 25) ಆದರೆ ನಿಜವಾಗಿ ಹಾಗೆ ಮಾಡುವರೋ?
ಉತ್ತರವು ಸಮಾರ್ಯದ ಸ್ತ್ರೀಯೊಂದಿಗಿನ ಯೇಸುವಿನ ಸಂಭಾಷಣೆಯನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡಬಹುದು. ಅಬ್ರಹಾಮ, ಯಾಕೋಬ, ಮತ್ತು ಯೆಹೋಶುವರಿಂದ ಅನುಸರಿಸಲ್ಪಟ್ಟ ಸತ್ಯಾರಾಧನೆಯು ಇಲ್ಲಿ, ಸಮಾರ್ಯದಲ್ಲಿ ಮುಂದುವರಿಯಲಿಲ್ಲ ಎಂಬುದನ್ನು ನೀವು ನೋಡುತ್ತೀರಿ.
ಉತ್ತರದ ಹತ್ತು ಕುಲಗಳು ಪ್ರತ್ಯೇಕಿಸಿಕೊಂಡಾದ ನಂತರ, ಅವರು ಬಸವಾರಾಧನೆಗೆ ಹಿಂತೆರಳಿದರು. ಆದುದರಿಂದ ಈ ಪ್ರದೇಶವನ್ನು ಸಾ. ಶ. ಪೂ. 740 ರಲ್ಲಿ ಅಶ್ಶೂರ್ಯರು ವಶಪಡಿಸಿಕೊಳ್ಳುವಂತೆ ಯೆಹೋವನು ಅನುಮತಿಸಿದನು. ಜನಸಂಖ್ಯೆಯಲ್ಲಿ ಅಧಿಕಾಂಶರನ್ನು ಅವರು ಸೆರೆ ಒಯ್ದರು, ಅಪರಿಚಿತ ದೇವರುಗಳನ್ನು ಆರಾಧಿಸುತ್ತಿದ್ದ ಅಶ್ಶೂರ್ಯ ಸಾಮ್ರಾಜ್ಯದ ಇನ್ನಿತರ ಕಡೆಗಳಿಂದ ವಿದೇಶಿಯರನ್ನು ಇಲ್ಲಿಗೆ ಸ್ಥಾನಾಂತರಿಗಳಾಗಿ ತಂದರು. ಪ್ರಾಯಶಃ ಆ ವಿಧರ್ಮಿಗಳಲ್ಲಿ ಕೆಲವರು ಇಸ್ರಾಯೇಲ್ಯರೊಂದಿಗೆ ಅಂತರ್ವಿವಾಹ ಮಾಡಿಕೊಂಡಿರಬಹುದು ಮತ್ತು ಸತ್ಯಾರಾಧನೆಯ ಸುನ್ನತಿಯಂತಹ ಕೆಲವು ಬೋಧನೆಗಳನ್ನು ಕಲಿತಿರಬಹುದು. ಆದರೆ ಫಲಿತಾಂಶವಾಗಿ ಸಮಾರ್ಯದ ಆರಾಧನಾ ಪದ್ಧತಿಯು ಖಂಡಿತವಾಗಿಯೂ ದೇವರಿಗೆ ಪೂರ್ಣವಾಗಿ ಮೆಚ್ಚಿಕೆಯದ್ದಾಗಿರಲಿಲ್ಲ.—2 ಅರಸುಗಳು 17:7-33.
ಅವರ ಮಿಶ್ರಾರಾಧನೆಯಲ್ಲಿ, ಮೋಶೆಯ ಮೊದಲ ಐದು ಪುಸ್ತಕಗಳಾದ ಪೆಂಟಟ್ಯೂಕ್ನ್ನು ಮಾತ್ರ ಶಾಸ್ತ್ರಗ್ರಂಥದೋಪಾದಿ ಸಮಾರ್ಯದವರು ಅಂಗೀಕರಿಸಿದರು. ಸುಮಾರು ಸಾ. ಶ. ಪೂ. ನಾಲ್ಕನೆಯ ಶತಮಾನದಲ್ಲಿ, ಯೆರೂಸಲೇಮಿನ ದೇವರ ಆಲಯದೊಂದಿಗೆ ಸ್ಪರ್ಧಾತ್ಮಕವಾಗಿ ಗೆರಿಜ್ಜೀಮ್ ಬೆಟ್ಟದಲ್ಲಿ ಒಂದು ದೇವಾಲಯವನ್ನು ಅವರು ನಿರ್ಮಿಸಿದರು. ಸಮಯಾನಂತರ, ಗೆರಿಜ್ಜೀಮ್ ದೇವಾಲಯವು ಜ್ಯೂಸ್ (ಯಾ, ಜ್ಯೂಪಿಟರ್) ನಿಗೆ ಸಮರ್ಪಿಸಲ್ಪಟ್ಟಿತು ಮತ್ತು ಕಟ್ಟಕಡೆಗೆ ನಾಶಗೈಯಲ್ಪಟ್ಟಿತು. ಆದರೂ, ಸಮಾರ್ಯದವರ ಆರಾಧನೆಯು ಗೆರಿಜ್ಜೀಮ್ನ ಮೇಲೆ ಕೇಂದ್ರೀಕೃತವಾಗಿರುವುದು ಮುಂದರಿಯಿತು.
ಇಂದಿನ ತನಕ, ಗೆರಿಜ್ಜೀಮ್ನಲ್ಲಿ ಸಮಾರ್ಯದವರು ವಾರ್ಷಿಕ ಪಸ್ಕದ ಆಚರಣೆಯನ್ನು ಜರುಗಿಸುತ್ತಾರೆ. ಅನೇಕ ಸಂಖ್ಯೆಯಲ್ಲಿ ಕುರಿಗಳು ವಧಿಸಲ್ಪಡುತ್ತವೆ. ಅವುಗಳ ದೇಹಗಳನ್ನು ಕುದಿಯುತ್ತಿರುವ ನೀರಿನ ಹಂಡೆಗಳಲ್ಲಿ ಮುಳುಗಿಸುವದರಿಂದ, ಉಣ್ಣೆಯನ್ನು ಕೀಳಸಾಧ್ಯವಿದೆ, ಮತ್ತು ಅನಂತರ, ಮಾಂಸವು ಅನೇಕ ತಾಸುಗಳ ತನಕ ಗುಂಡಿಯಲ್ಲಿ ಬೇಯಿಸಲ್ಪಡುತ್ತದೆ. ಮಧ್ಯ ರಾತ್ರಿಯಲ್ಲಿ ನೂರಾರು ಸಮಾರ್ಯದವರು, ಅನೇಕರು ಯೆರೂಸಲೇಮಿನಿಂದ ಬಂದವರು, ಅವರ ಪಸ್ಕದೂಟವನ್ನು ಮಾಡುತ್ತಿದ್ದರು. ಎಡಪಕ್ಕದಲ್ಲಿ, ತನ್ನ ತಲೆಗೆ ಹೊದಿಕೆ ಹಾಕಿಕೊಂಡಿರುವ ಸಮಾರ್ಯದ ಮಹಾ ಯಾಜಕನು, ಗೆರಿಜ್ಜೀಮ್ ಬೆಟ್ಟದ ಮೇಲೆ ಫಸ್ಕಹಬ್ಬದಾಚರಣೆಯೊಂದರಲ್ಲಿ ಪೌರೋಹಿತ್ಯವನ್ನು ನಡಿಸುವುದನ್ನು ನೀವು ಕಾಣಸಾಧ್ಯವಿದೆ.
ಸಮಾರ್ಯದ ಹೆಂಗಸು ಯೇಸುವಿಗೆ ಅಂದದ್ದನ್ನು ನೆನಪಿಸಿಕೊಳ್ಳಿರಿ: “ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆಮಾಡುತ್ತಿದ್ದರು.” ಯೇಸು ಅವಳಿಗೂ, ಹಾಗೂ ನಮಗೂ ಸರಿಯಾದ ಒಂದು ವಿವರಣೆಯನ್ನು ಕೊಟ್ಟನು: “ಒಂದು ಕಾಲ ಬರುತ್ತದೆ. ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇಮಿಗೂ ಹೋಗುವದಿಲ್ಲ. . . . ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.”—ಯೋಹಾನ 4:20-24.
[ಅಧ್ಯಯನ ಪ್ರಶ್ನೆಗಳು]
a ಈ ಛಾಯಾಚಿತ್ರದ ದೊಡ್ಡ ಆಕಾರವನ್ನು, 1993 ಕ್ಯಾಲಂಡರ್ ಆಫ್ ಜೆಹೊವಾಸ್ ವಿಟ್ನೆಸಸ್ನಲ್ಲಿ ನೀವು ಪರೀಕ್ಷಿಸಬಹುದು.
[ಪುಟ 24 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 25 ರಲ್ಲಿರುವ ಚಿತ್ರ ಕೃಪೆ]
Garo Nalbandian
Garo Nalbandian