ನಿಮ್ಮನ್ನು ಸಂತೋಷ ಪಡಿಸಬಲ್ಲ ಕೆಲಸವು
“ಛಾಪಕನಾದ ನನ್ನ ಕೆಲಸದಲ್ಲಿ ನಾನು ನಿಜವಾಗಿ ಆನಂದಿಸಿದ್ದೆ” ಅನ್ನುತ್ತಾನೆ ಇಟೆಲಿಯ ಜಿನೋವದ ಎಂಟೊನಿಯೊ. “ಒಳ್ಳೇ ಸಂಬಳವಿತ್ತು, ಇದರಿಂದಾಗಿ ಅನೇಕ ತಾಸುಗಳ ಓವರ್ಟೈಮನ್ನೂ ಮಾಡುತ್ತಿದ್ದೆ. ಕೆಲವೇ ವರ್ಷಗಳಲ್ಲಿ, ನನ್ನ ಯುವ ಪ್ರಾಯದಲ್ಲಿಯೇ, ನಾನು ನನ್ನ ಮಾಲಕನ ಬಲಗೈಯಂಥಾದೆ.” ಅನೇಕರನ್ನು ಕಷ್ಟದ ಕೆಲಸಕ್ಕೆ ನಡಿಸುವ ಧ್ಯೇಯಗಳನ್ನು—ಐಶ್ವರ್ಯ, ಪ್ರತಿಷ್ಟೆಯನ್ನು ಎಂಟೊನಿಯೊ ಗಳಿಸಿದ್ದಂತೆ ತೋರಿತ್ತು, ಮತ್ತು ತಲ್ಲೀನತೆಯ ಆನಂದವಿದ್ದ ಕೆಲಸ ಅವನಿಗಿತ್ತು.
ಎಂಟೊನಿಯೊ ‘ಅವನೆಲ್ಲಾ ಪ್ರಯಾಸದ ಕೆಲಸಗಳಲ್ಲಿ ಸುಖವನ್ನು ಕಂಡು’ ಕೊಂಡನೋ? (ಪ್ರಸಂಗಿ 3:13) ಮತ್ತು ಅಂತಹ ಕೆಲಸವು ಅವನನ್ನು ನಿಜವಾಗಿ ಸಂತೋಷ ಪಡಿಸಿತ್ತೋ? “ನಮ್ಮ ಮೈಮರೆತ ಜೀವನಕ್ರಮದಿಂದ ಉಂಟಾದ ಬಿಗಿತವು, ಕುಟುಂಬದಲ್ಲಿ ಸಮಸ್ಯೆಗಳನ್ನು ಆರಂಭಿಸಿತು. ಇದು ನಮ್ಮನ್ನು ಅಸಂತೋಷಗೊಳಿಸಿತು” ಎಂದನವನು. ಅವರಿಗೆ ತೃಪ್ತಿಕರ ಉದ್ಯೋಗಗಳು ಇದ್ದಾಗ್ಯೂ ಎಂಟೊನಿಯೊ ಅಥವಾ ಅವನ ಪತ್ನಿಗೆ ಸಂತೋಷವಿರಲಿಲ್ಲ. ನಿಮ್ಮ ಕುರಿತೇನು? ‘ನಿಮ್ಮೆಲ್ಲಾ ಪ್ರಯಾಸದ ಕೆಲಸದಲ್ಲಿ ನೀವು ಸುಖವನ್ನು ಕಾಣುತ್ತೀರೋ?’ ನಿಮ್ಮ ಕೆಲಸವು ನಿಜವಾಗಿ ನಿಮ್ಮನ್ನು ಸಂತೋಷಗೊಳಿಸುತ್ತದೋ?
ಸಮಂಜಸ ಹೇತುಗಳೋ?
ಕಷ್ಟದ ಕೆಲಸಕ್ಕೆ ಒಂದು ಮುಖ್ಯ ಕಾರಣವು ಜೀವನೋಪಾಯವೇ. ಕೆಲವು ದೇಶಗಳಲ್ಲಿ ಹೆಚ್ಚು ತಾಸುಗಳ ಕೆಲಸವನ್ನು ಮಾಡಿಯೇ ದಿನದೂಡಬೇಕು. ತಮ್ಮ ಮಕ್ಕಳಿಗೆ ಒಳ್ಳೇ ಜೀವನವನ್ನು ಕೊಡಲಿಕ್ಕಾಗಿ ಕೆಲವರು ಹಗಲಿರುಳು ಗುಲಾಮಚಾಕರಿ ಮಾಡುತ್ತಾರೆ. ಇನ್ನು ಕೆಲವರು ಧನಸಂಚಯ ಮಾಡಲು ಒತ್ತಾಯದ ದುಡಿಮೆ ನಡಿಸುತ್ತಾರೆ.
ಫಿಲಿಫೈನ್ಸ್ನ ಲಿಯೊನಿಡಗೆ ಎರಡು ಕೆಲಸಗಳಿದ್ದವು. ದಿನದಲ್ಲಿ ಅವಳು ಬ್ಯಾಂಕಿನಲ್ಲಿ ಕೆಲಸಮಾಡುತ್ತಿದ್ದಳು, ಸಂಜೆಗೆ ಕಾಲೇಜಲ್ಲಿ 3-4 ತಾಸು ಕಲಿಸುತ್ತಿದ್ದಳು. ಆ ಹೆಚ್ಚು ಹಣವು ಅದಕ್ಕೆ ಅರ್ಹವಾಗಿತ್ತೋ? “ನಾನು ಯಾವಾಗಲೂ ಗಂಟೆ ನೋಡುತ್ತಾ ಇರುತ್ತೇನೆ” ಎಂದಾಕೆ ವಿವರಿಸುತ್ತಾಳೆ. “ಬೇಸರ ಹಿಡಿಸುತ್ತದೆ. ಯಾವ ತೃಪ್ತಿಯೂ ಇಲ್ಲದೆ ನಾನದನ್ನು ಮಾಡುತ್ತಿದ್ದೇನೆ.”
ಇಲ್ಲ, ಕೇವಲ ಹಣಕ್ಕಾಗಿ ದುಡಿಯುವದು ನಿಜ ಸಂತೃಪ್ತಿ ಮತ್ತು ಸಂತೋಷವನ್ನು ಕೊಡಲಾರದು. “ದುಡ್ಡಿನಾಸೆಯಿಂದ ದುಡಿಯಬೇಡ” ಎಂದು ಜ್ಞಾನಿ ರಾಜ ಸೊಲೊಮೋನನು ಸೂಚಿಸಿದ್ದಾನೆ, “ಯಾಕಂದರೆ ಧನವು ಅಷ್ಟರೊಳಗೆ ಮಾಯವಾಗುವುದು; ಆಕಾಶದ ಕಡೆಗೆ ಹಾರುವ ಹದ್ದಿನಂತೆ ಅದು ರೆಕ್ಕೆಯನ್ನು ಕಟ್ಟಿಕೊಂಡಿದೆ.” (ಜ್ಞಾನೋಕ್ತಿ 23:4, 5) ಕೆಲವು ಹದ್ದುಗಳು ತಾಸಿಗೆ 80 ಮೈಲುಗಳ ವೇಗದಲ್ಲಿ ಹಾರುತ್ತವೆಯಂತೆ. ಕಷ್ಟದಿಂದ ದುಡಿದ ಹಣವು ಎಷ್ಟು ವೇಗವಾಗಿ ಮಾಯವಾಗಬಹುದೆಂದು ಇದು ತೋರಿಸುತ್ತದೆ. ಒಬ್ಬನು ಐಶ್ವರ್ಯವನ್ನು ಕೂಡಿಸಿಟ್ಟರೂ ಕೂಡಾ ಅವನು ಸತ್ತಾಗ, ತನ್ನೊಂದಿಗೆ ಏನನ್ನೂ ಒಯ್ಯಲಾರನು.— ಪ್ರಸಂಗಿ 5:15; ಲೂಕ 12:13-21.
ಜೀವನೋಪಾಯವನ್ನು ನಡಿಸುವದರಲ್ಲಿ ತಲ್ಲೀನರಾಗಿರುವುದು ಕೆಲವು ಸಲ ಗಂಭೀರ ಅಪಾಯಗಳನ್ನು ತರುತ್ತದೆ. ಅದು ಹಣದಾಶೆಗೆ ನಡಿಸಬಲ್ಲದು. ಒಂದನೇ ಶತಕದಲ್ಲಿ, ಫರಿಸಾಯರೆಂದು ಕರೆಯಲ್ಪಡುತ್ತಿದ್ದ ಧರ್ಮ ಗುಂಪಿನವರಿದ್ದರು, ಅವರು ಹಣದಾಸೆಗೆ ಹೆಸರಾದವರು. (ಲೂಕ 16:14) ಮಾಜಿ ಫರಿಸಾಯನಾಗಿದ್ದ ಅಪೊಸ್ತಲ ಪೌಲನಿಗೆ ಅವರ ಜೀವನ ಕ್ರಮವು ಪೂರ್ಣವಾಗಿ ತಿಳಿದಿತ್ತು. (ಫಿಲಿಪ್ಪಿ 3:5) “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು” ಪೌಲನು ಎಚ್ಚರಿಸುವುದು, “ದುಷ್ಪ್ರೇರಣೆ ಎಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಕೆಲವರು ಅದಕ್ಕಾಗಿ ಆತುರಪಟ್ಟು . . . ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” (1 ತಿಮೊಥಿ 6:9, 10) ಹೌದು, “ಹಣದಾಶೆಯು”, ಅದಕ್ಕಾಗಿ ಯಾವದನ್ನೇ ಅಥವಾ ಏನನ್ನಾದರೂ ಮಾಡಲು ತಯಾರಿರುವುದು, ಒಬ್ಬನ ಜೀವವನ್ನೇ ಧ್ವಂಸಗೊಳಿಸಬಲ್ಲದು. ಅಂತಹ ಮಾರ್ಗವು ಸಂತೋಷವನ್ನು ತರಲಾರದು.
ಇನ್ನು ಕೆಲವರು ತಮ್ಮನ್ನು ಪರಿಶ್ರಮಪಟ್ಟು ದುಡಿಸುವುದು ಲೋಕದಲ್ಲಿ ಮೇಲೆಬರಬೇಕು ಎಂಬ ಹೇತುವಿನಿಂದಲೇ. ಆದಾಗ್ಯೂ, ಕಟ್ಟಕಡೆಗೆ ಅವರು ಒಂದು ವಾಸ್ತವಿಕತೆಯನ್ನು ಎದುರಿಸುತ್ತಾರೆ. ಫಾರ್ಚುನ್ ಪತ್ರಿಕೆಯು ಹೇಳುವುದು: “ತಮ್ಮ 20 ರ ಮತ್ತು 30 ರ ದಶಕದ ಆರಂಭದ ವಯಸ್ಸಲ್ಲೀ ವ್ಯವಸ್ಥಾಪಕ ಸ್ಧಾವನ್ನೇರಲು ತ್ಯಾಗಗಳನ್ನು ಮಾಡಿದ ಎಳೆಯ-ಉತ್ಕರ್ಷಕರಿಗೆ, ಬಲು ಪರಿಶ್ರಮದ ಕೆಲಸ ಮಾಡಿದಾಗ್ಯೂ, ತುದಿಯ ಸ್ಥಾನಕ್ಕೇರಲು ಎಲ್ಲರಿಗೆ ಸಾಧ್ಯವಿಲ್ಲವೆಂಬ ಬಲಗುಂದಿಸುವ ಆದರೆ ಅಪರಿಹಾರ್ಯ ಅರಿವು ಸಿಕ್ಕಿರುತ್ತದೆ. ಪರಿಶ್ರಮದಿಂದ ಬಳಲಿಹೋಗಿ, ಇದೆಲ್ಲಾ ಏನು ಎಂದು ಕೇಳಲು ಅವರು ಯತ್ನೈಸುತ್ತಾರೆ. ಯಾಕೆಲ್ಲಾ ಇಷ್ಟು ಹೋರಾಟ? ಯಾರು ಲಕ್ಷ್ಯಮಾಡುತ್ತಾರೆ?”
ಅಂಥ ಒಬ್ಬ ಮನುಷ್ಯನಾದ ಮಿಝಮೊರಿ, ಲೋಕದ ನಿಚ್ಚಣಿಗೆಯಲ್ಲಿ ಮೇಲೇರಲು ತನ್ನನ್ನು ಕೇಂದ್ರೀಕರಿಸಿಕೊಂಡನು. ಜಪಾನಿನ ಒಂದು ದೊಡ್ಡ ಬ್ಯಾಂಕಲ್ಲಿ ವ್ಯವಸ್ಥಾಪಕ ಸ್ಥಾನವನ್ನು ಪಡೆಯಲು ಬೆನ್ನಟ್ಟಿದನು, ಕುಟುಂಬಕ್ಕಾಗಿ ಅವನಿಗೆ ಸಮಯವಿರಲಿಲ್ಲ. 30 ಕ್ಕಿಂತಲೂ ಹೆಚ್ಚು ವರ್ಷ ಕಷ್ಟಪಟ್ಟು ಕೆಲಸ ಮಾಡಿದನಂತರ, ಅವನ ಆರೋಗ್ಯ ಕೆಟ್ಟಿತು, ಮತ್ತು ಅವನು ನಿಶ್ಚಯವಾಗಿಯೂ ಸಂತೋಷಿತನಿರಲಿಲ್ಲ. ಅವನಂದದ್ದು: “ಪ್ರಮುಖರಾಗಿ ನಿಲ್ಲಲು ಪ್ರಯತ್ನಿಸುವ ಜನರ ನಡುವೆ ಉಚ್ಛಸ್ಥಾನಗಳಿಗಾಗಿ ಸಂಘರ್ಷಣೆಯು, ‘ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ’ ಎಂಬ ಮನವರಿಕೆ ನನಗಾಗಿದೆ.”—ಪ್ರಸಂಗಿ 4:4.
ಆದರೆ ತಮ್ಮ ಕೆಲಸವನ್ನು ಆನಂದಿಸುವ ಎಂಟೊನಿಯೊ ಅಂಥವರ ಕುರಿತೇನು? ತನ್ನ ಕೆಲಸದಲ್ಲಿ ಚಿತ್ತಾಕರ್ಷಣೆಗೊಂಡ ಎಂಟೊನಿಯೊ, ಕೆಲಸವೆಂಬ ಬಲಿಪೀಠದ ಮೇಲೆ ತನ್ನ ಕುಟುಂಬವನ್ನು ಬಲಿಕೊಟ್ಟನು. ಇತರರು, ಹಲವಾರು ಪ್ರಮುಖರಾದ ಹಾಗೂ ಮಿತಿಮೀರಿ ಕೆಲಸ ಮಾಡಿದ ಜಪಾನಿ ವ್ಯವಸ್ಥಾಪಕ ಅಧಿಕಾರಿಗಳ ದಿಢೀರ್ ಮರಣವು ಸೂಚಿಸುವಂತೆ, ತಮ್ಮ ಸ್ವಾಸ್ಥ್ಯವನ್ನು ಮತ್ತು ತಮ್ಮ ಜೀವವನ್ನೂ ಬಲಿಕೊಡುತ್ತಾರೆ. ಅಂತಹ ಸಾವಿನಿಂದ ತಬ್ಬಲಿಯಾದವರಿಗಾಗಿ ಸಲಹೆ ನೀಡುವ ಸಂಘವೊಂದಕ್ಕೆ ಒಂದೇ ದಿನದಲ್ಲಿ ಅಚ್ಚರಿಯ 135 ಕರೆಗಳು ಬಂದವು.
ಕೆಲವರು ಇತರರಿಗೆ ಸಹಾಯ ಮಾಡಲು ತಮ್ಮ ಜೀವವನ್ನು ಮೀಸಲಾಗಿಡುತ್ತಾರೆ. ಯೇಸು ಇಂತಹ ಆತ್ಮವನ್ನು ಪ್ರೋತ್ಸಾಹಿಸಿದನು. (ಮತ್ತಾಯ 7:12; ಯೋಹಾನ 15:13) ಇತರರಿಗೆ ಸಹಾಯ ಮಾಡುವ ಸ್ತುತ್ಯಾರ್ಹ ಕೆಲಸದಲ್ಲಿ ಮಗ್ನರಾಗಿರುವುದು ನಿಜವಾಗಿಯೂ ಸಂತೋಷವನ್ನು ತರುತ್ತದೆ.—ಜ್ಞಾನೋಕ್ತಿ 11:25.
ಆದರೂ, ಅಂಥ ಉದಾತ್ತ ಮನದ ಕಾರ್ಯವು ಸಹಾ ಅಪಾಯಗಳಿಂದ ಹೊರತಿಲ್ಲ. ಯೆಹೂದದ ರಾಜ ಉಜ್ಜೀಯನು ಅರಣ್ಯಗಳಲ್ಲಿ ಬಾವಿ ತೋಡಿಸುವ ಒಂದು ಮಹಾ ಪ್ರಜೆಗಳ ಹಿತ ಕಾರ್ಯದಲ್ಲಿ ತೊಡಗಿದ್ದನು. ಉಜ್ಜೀಯನು ಆ ಸಮಯದಲ್ಲಿ “ಯೆಹೋವನನ್ನು ಅವಲಂಬಿಸಿ” ಇದುದ್ದರಿಂದ ಮತ್ತು ಅರಸರು ನಿಸ್ವಾರ್ಥಿಗಳಾಗಿ ಇರಬೇಕೆಂಬ ದೈವಿಕ ವಿಧಿಯನ್ನು ಪಾಲಿಸುತ್ತಿದ್ದನು, ಆದುದರಿಂದ, ತನ್ನ ಪ್ರಜೆಗಳ ಹಿತವು ಅವನ ಮನಸ್ಸನಲ್ಲಿ ಇದ್ದಿರ ಬೇಕು. (2 ಪೂರ್ವಕಾಲ 26:5, 10; ಧರ್ಮೋಪದೇಶಕಾಂಡ 17:14-20) ಇದು ಅವನ ಮಿಲಿಟರಿ ಯಶಸ್ಸನ್ನು ಹೆಚ್ಚಿಸಿತು ಮತ್ತು “ಅವನ ಕೀರ್ತಿಯು ದೂರದ ವರೆಗೆ ಹಬ್ಬಿತು.” ಆದರೆ ಬಲಾಢ್ಯನಾದಷ್ಟಕ್ಕೆ ಅವನ ಗರ್ವ ಹೆಚ್ಚಿತು, ಅದೇ ಅವನ ಪತನಕ್ಕೆ ಕಾರಣವಾಯಿತು. (2 ಪೂರ್ವಕಾಲ 26:15-20; ಜ್ಞಾನೋಕ್ತಿ 16:18) ಒಬ್ಬನು ಇತರರಿಗೆ ಸಹಾಯ ಮಾಡಲು ಮೀಸಲಾದರೂ, ಸ್ವಪ್ರತಿಷ್ಟೆ ಮತ್ತು ಗರ್ವದಿಂದ ಪ್ರೇರಿತನಾದಲ್ಲಿ, ಅವನ ಅಂತ್ಯವೂ ಪತನವೇ. ಹೀಗಿರಲಾಗಿ, ಯಾವನಾದರೂ ಏತಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಬೇಕು?
ಮನುಷ್ಯನು ಕೆಲಸಕ್ಕಾಗಿ ಮಾಡಲ್ಪಟ್ಟನು
ಭೂಮಿಯಲ್ಲಿ ಎಂದೂ ಜೀವಿಸಿದ ಯಾವನೇ ಮಾನವನಿಗಿಂತ ಎಷ್ಟೋ ಮಹತ್ತಾದ ಒಳ್ಳಿತನ್ನು ಪೂರೈಸಿದ ಒಬ್ಬಾತನಿಂದ, ಕೆಲಸದ ಕುರಿತು ನಾವು ಹೆಚ್ಚನ್ನು ಕಲಿಯಬಹುದು. ಅವನೇ ಯೇಸು ಕ್ರಿಸ್ತನು. (ಮತ್ತಾಯ 20:28; ಯೋಹಾನ 21:25) ಯಾತನೆಯ ಕಂಭದಲ್ಲಿ ಆತನು ಸತ್ತಾಗ, ಆತನು ಉದ್ಗರಿಸಿದ್ದು, “ಅದು ತೀರಿತು!” (ಯೋಹಾನ 19:30) ಮೂವತ್ತಮೂರುವರೆ ವರ್ಷಗಳ ಅವನ ಜೀವಿತವು ಸಂತೃಪ್ತಿಯದ್ದಾಗಿತ್ತು.
ಯೇಸುವಿನ ಜೀವನವು, “ಯಾವ ಕೆಲಸವು ನಿಮ್ಮನ್ನು ಸಂತೋಷ ಪಡಿಸಬಲ್ಲದು?” ಎಂಬ ಪ್ರಶ್ನೆಯನ್ನು ಉತ್ತರಿಸಲು ಸಹಾಯ ಮಾಡುತ್ತದೆ. ಅವನಿಗೆ ಅಪ್ರತಿಮ ಸಂತೋಷವನ್ನು ತಂದ ಕೆಲಸವು ತನ್ನ ಸ್ವರ್ಗೀಯ ತಂದೆಯ ಚಿತ್ತವನ್ನು ಮಾಡಿ ಮುಗಿಸುವುದೇ ಆಗಿತ್ತು. ತದ್ರೀತಿ, ನಮ್ಮ ನಿರ್ಮಾಣಿಕನ ಚಿತ್ತವನ್ನು ಮಾಡುವುದು ನಮಗೆ ಪೂರೈಕೆಯ ಭಾವವನ್ನು ಕೊಟ್ಟು, ನಮ್ಮನ್ನು ಸಂತೋಷ ಪಡಿಸಬಲ್ಲದು. ಏಕೆ? ಏಕೆಂದರೆ, ನಮ್ಮ ರಚನೆಯನ್ನು ಮತ್ತು ಅಗತ್ಯತೆಗಳನ್ನು ನಮಗಿಂತಲೂ ಹೆಚ್ಚಾಗಿ ಆತನು ತಿಳಿದಿದ್ದಾನೆ.
ದೇವರು ಮೊದಲನೆಯ ಮನುಷ್ಯ ಆದಾಮನನ್ನು ನಿರ್ಮಿಸಿದಾಗ, ಕೈಕೆಲಸ ಹಾಗೂ ಮಾನಸಿಕ ಕೆಲಸ ಎರಡನ್ನೂ ಅವನಿಗೆ ಕೊಟ್ಟನು. (ಆದಿಕಾಂಡ 2:15, 19) ಬೇರೆಲ್ಲಾ ಭೂಜೀವಿಗಳ ಮೇಲೆ ‘ದೊರೆತನ ಮಾಡುವದ’ರಲ್ಲಿ ಆದಾಮನಿಗೆ ವ್ಯವಸ್ಥಾಪಕ ಕೆಲಸವನ್ನೂ ಮಾಡಲಿಕ್ಕಿತ್ತೆಂಬದು ವ್ಯಕ್ತ . (ಆದಿಕಾಂಡ 1:28) ಎಷ್ಟರ ತನಕ ಆದಾಮನು ಈ ಏರ್ಪಾಡಿಗೆ ಹೊಂದಿಕೆಯಲ್ಲಿದ್ದನೋ ಆ ತನಕ ಅವನ ಕೆಲಸವು ಅರ್ಥಪೂರ್ಣವಾಗಿತ್ತು, ಲಾಭಕರವಾಗಿತ್ತು. ಪ್ರತಿಯೊಂದು ಚಿಕ್ಕ ಕೆಲಸದ ನೇಮಕವು ಮಹೋನ್ನತನನ್ನು ಮೆಚ್ಚಿಸುವ ಇನ್ನೊಂದು ಸಂದರ್ಭದಂತಿತ್ತು.
ಆದರೂ, ಆದಾಮನ ವಿಷಯದಲ್ಲಿ ಅದು ಸದಾ ಮುಂದುವರಿಯಲಿಲ್ಲ. ದೇವರ ಏರ್ಪಾಡಿನಿಂದ ಹೊರ ಬರಲು ಅವನು ನಿರ್ಧರಿಸಿದನು. ದೇವರ ಚಿತ್ತವನ್ನು ಮಾಡುವುದರಲ್ಲಿ ಆದಾಮನು ಇನ್ನು ಮುಂದೆ ಸಂತೋಷಿಸದೆ, ತನ್ನಿಷ್ಟದ ಪ್ರಕಾರ ನಡೆಯಲು ಬಯಸಿದನು. ನಿರ್ಮಾಣಿಕನ ವಿರುದ್ಧವಾಗಿ ಪಾಪ ಮಾಡಿದನು. ಫಲಿತಾಂಶವಾಗಿ ಅವನು, ಅವನ ಪತ್ನಿ ಮತ್ತು ಅವನ ಸಂತತಿಯೆಲ್ಲವೂ “ವ್ಯರ್ಥತ್ವಕ್ಕೆ ಒಳಗಾಯಿತು.” (ರೋಮಾಪುರ 5:12; 8:20) ಕೆಲಸವು, ಸಂತೋಷವನ್ನು ತರುವ ಬದಲು ಗುಲಾಮಚಾಕರಿಯಾಯಿತು. ಆದಾಮನ ವಿರುದ್ಧ ದೇವರ ಶಿಕ್ಷೆಯಲ್ಲಿ ಈ ಮಾತುಗಳು ಕೂಡಿದ್ದವು: “ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು. ಆ ಭೂಮಿಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಹುಟ್ಟುವವು. ಹೊಲದ ಬೆಳೆಯನ್ನು ನೀನು ಅನುಭವಿಸುವಿ. ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು.” (ಆದಿಕಾಂಡ 3:17-19) ಮನುಷ್ಯನ ನಿರ್ಮಾಣಿಕನನ್ನು ಮೆಚ್ಚಿಸುವ ಅಂತಿಮ ಗುರಿಯಿದ್ದ ಆ ಘನತೆಯ ಕೆಲಸವು ಈಗ ಕೇವಲ ಆಹಾರ ಸಂಪಾದನೆಯ ಕಷ್ಟದ ದುಡಿಮೆಯಾಗಿ ಪರಿಣಮಿಸಿತು.
ಈ ನಿಜತ್ವಗಳಿಂದ ನಾವು ಯಾವ ತೀರ್ಮಾನಕ್ಕೆ ಬರಬಹುದು? ಇದು: ಕಷ್ಟದ ಕೆಲಸವು ಬಾಳುವ ತೃಪ್ತಿ ಮತ್ತು ಸಂತೋಷವನ್ನು, ದೈವಿಕ ಚಿತ್ತವನ್ನು ಮಾಡುವ ಸುತ್ತಲೂ ನಮ್ಮ ಜೀವನವನ್ನು ಕೇಂದ್ರೀಕರಿಸುವಾಗ ಮಾತ್ರವೇ ಲಭಿಸುವುದು.
ದೇವರ ಚಿತ್ತವನ್ನು ಮಾಡುವದರಲ್ಲಿ ‘ಸುಖವನ್ನು ಕಾಣುವುದು’
ದೇವರ ಚಿತ್ತವನ್ನು ಮಾಡುವುದು ಯೇಸುವಿಗೆ ಆಹಾರದಂತಿತ್ತು—ಆನಂದಿಸ ಶಕ್ತವಾದ ಮತ್ತು ಅವನ ಆತ್ಮಿಕ ಜೀವವನ್ನು ಪೋಷಿಸಿದ ವಿಷಯವಾಗಿತ್ತು. (ಯೋಹಾನ 4:34) ಅಂಥ ಕೆಲಸದಾನಂದವು ಹೇಗೆ ನಿಮ್ಮದಾಗಬಲ್ಲದು?
“ಯೆಹೋವನ ಚಿತ್ತವು ನಿಮಗಾಗಿ ಏನು” ಎಂಬದನ್ನು ನೀವು ತಿಳುಕೊಳ್ಳುವ ಅಗತ್ಯವಿದೆ. (ಎಫೆಸ 5:17) ಆತನ ಚಿತ್ತವು, ಮನುಷ್ಯಕುಲವು “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವಂತೆ” ಪುನಃಸ್ಥಾಪಿಸುವುದೇ ಅಗಿದೆ. (ರೋಮಾಪುರ 8:21; 2 ಪೇತ್ರ 3:9) ಇದನ್ನು ಪೂರೈಸಲು ಈಗ ಒಂದು ಭೂವ್ಯಾಪಕ ಒಟ್ಟುಗೂಡಿಸುವ ಕೆಲಸವು ನಡಿಯುತ್ತಲಿದೆ. ಈ ಅತ್ಯಂತ ತೃಪ್ತಿಕೊಡುವ ಕೆಲಸದಲ್ಲಿ ನೀವೂ ಪಾಲಿಗರಾಗಬಹುದು. ಅಂತಹ ಕೆಲಸವು ಖಂಡಿತವಾಗಿಯೂ ನಿಮ್ಮನ್ನು ಸಂತೋಷ ಪಡಿಸಬಲ್ಲದು.
ಆರಂಭದಲ್ಲಿ ತಿಳಿಸಿದ ಎಂಟೊನಿಯೊ ಅನಂತರ, ಸಂತೃಪ್ತಿಯನ್ನೂ ಸಂತೋಷವನ್ನೂ ಕಂಡುಕೊಂಡನು. ಅವನು ಮತ್ತು ಅವನ ಪತ್ನಿ ತಮ್ಮ “ವ್ಯರ್ಥತೆಯ” ಐಹಿಕ ಉದ್ಯೋಗವನ್ನು ಜೀವಿತದಲ್ಲಿ ಪ್ರಥಮವಾಗಿಟ್ಟಾಗ ಮತ್ತು ಅದರಲ್ಲಿ ಆಳವಾಗಿ ಒಳಗೊಂಡಿದ್ದಾಗ, ಅವರ ಆತ್ಮಿಕ ಜೀವಿತವು ಬಾಧೆಗೊಳಗಾಯಿತು. ಸಂಸಾರದ ಸಮಸ್ಯೆಗಳು ಅವರಿಗುಂಟಾದದ್ದು ಆಗಲೇ. ಪರಿಸ್ಥಿತಿಯನ್ನು ಅರಿತುಕೊಂಡು ಅವನ ಪತ್ನಿಯು ತನ್ನ ಕೆಲಸವನ್ನು ಬಿಟ್ಟುಬಿಡಲು ನಿರ್ಧರಿಸಿದಳು ಮತ್ತು “ಪರಿಶ್ರಮದಿಂದ ಹೆಣಗಾಡಿ” ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಪೂರ್ಣ ಸಮಯದ ಕೆಲಸ ಮಾಡಲು ಆರಂಭಿಸಿದಳು.—ಲೂಕ 13:24.
“ಆ ಕೂಡಲೇ”, ಎಂಟೊನಿಯೊ ಹೇಳುವುದು, “ಒಂದು ಮಹಾ ಬದಲಾವಣೆಯನ್ನು ನಾವು ಗಮನಿಸಿದೆವು. ಸದಾ ಜಗಳಾಡುವಿಕೆ ನಿಂತಿತು. ನಮ್ಮ ಕುಟುಂಬಕ್ಕೆ ಸಮಾಧಾನ ಹಿಂತಿರುಗಿತು.” ಅವನ ಪತ್ನಿ, ಇತರರನ್ನು “ನಿತ್ಯಜೀವಕ್ಕೆ” ನಡಿಸುವ ಜ್ಞಾನವನ್ನು ಪಡೆಯಲು ಸಹಾಯ ಮಾಡುವ ಸಂತೋಷವನ್ನು ಕೊಯ್ದಳು. (ಯೋಹಾನ 17:3) ಅವಳ ಸಂತೋಷವು ಎಂಟೊನಿಯೊವನ್ನು, ಯಾವುದು ನಿಜವಾಗಿಯೂ ಲಾಭಕರವೆಂದು ತೂಗಿನೋಡುವಂತೆ ನಡಿಸಿತು. ಪೂರ್ಣಾತ್ಮದಿಂದ ದೇವರನ್ನು ಸೇವಿಸುವ ಅವನ ಅಪೇಕ್ಷೆಯು ಜಯಗಳಿಸಿತು. ಕೆಲಸದಲ್ಲಿ ಬಡತಿಯ ನೀಡಿಕೆಯನ್ನು ಅವನು ನಿರಾಕರಿಸಿದನು ಮತ್ತು ತನ್ನ ಐಹಿಕ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟನು. ಈ ಬದಲಾವಣೆಯು ಒಂದು ಅಲ್ಪ ಕೆಲಸವನ್ನು ತಕ್ಕೊಳ್ಳುವ ಅರ್ಥದಲ್ಲಿದ್ದರೂ, ಎಂಟೊನಿಯೊ ಮತ್ತು ಪತ್ನಿ ಇಬ್ಬರೂ, ದೇವರ ಚಿತ್ತವನ್ನು ಮಾಡುವ ಕ್ರೈಸ್ತ ಶುಶ್ರೂಷೆಯಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುವುದರಲ್ಲಿ ಸಂತೋಷ ಪಡುತ್ತಾರೆ.
ಆದರೆ, ಎಲ್ಲರೂ ಅಂತಹ ದೊಡ್ಡ ಬದಲಾವಣೆಗಳನ್ನು ಮಾಡಶಕ್ತರಲ್ಲ ನಿಶ್ಚಯ. ಮಿಝಮೊರಿ, ಆರಂಭದಲ್ಲಿ ನಾವು ತಿಳಿಸಿದ ಬ್ಯಾಂಕರ್, ಕ್ರೈಸ್ತ ಸಭೆಯೊಂದರಲ್ಲಿ ಹಿರಿಯನಾಗಿ ತನ್ನ ಶುಶ್ರೂಷೆಯಲ್ಲಿ ಆನಂದಿಸುತ್ತಾನೆ ಮತ್ತು ತನ್ನ ಮ್ಯಾನೇಜರ್ ಕೆಲಸದಿಂದ ಕುಟುಂಬದ ಪೋಷಣೆಯನ್ನೂ ಮಾಡುತ್ತಾನೆ. ಆದರೂ, ಅವನ ಜೀವಿತವು ಇನ್ನು ಮುಂದೆ ಐಹಿಕ ಉದ್ಯೋಗದ ಸುತ್ತಲೂ ಕೇಂದ್ರೀತವಾಗಿರದೆ, ದೇವರ ಚಿತ್ತವನ್ನು ಮಾಡುವುದರ ಸುತ್ತಲೂ ಆವರ್ತಿಸುತ್ತದೆ. ಅವನ ಐಹಿಕ ಉದ್ಯೋಗವು, ಆ ಧ್ಯೇಯವನ್ನು ಪೂರೈಸಲು ಅವನನ್ನು ಪೋಷಿಸುತ್ತದೆ ಮತ್ತು ಆಧಾರ ಕೊಡುತ್ತದೆ. ಈಗ ಐಹಿಕವಾಗಿ ಕೆಲಸ ಮಾಡುವದು ಸಹಾ ಅರ್ಥಭರಿತವಾಗಿದೆ.
ನಿಮ್ಮ ಕೆಲಸದೆಡೆಗೆ ನೀವೀ ನೋಟವನ್ನು ಬೆಳೆಸುವುದಾದರೆ ನೀವು ನಿಸ್ಸಂದೇಹವಾಗಿಯೂ, “ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೆ ಯೆಹೋವನಿಗೆ ಭಯಪಡುವವರಾಗಿ ಸರಳ ಮನಸ್ಸಿನಿಂದ ಕೆಲಸ” ಮಾಡಲು ಪ್ರಯಾಸ ಪಡುವಿರಿ. (ಕೊಲೊಸ್ಸೆ 3:22) ಅಂತಹ ಪ್ರಾಮಾಣಿಕತೆಯು ಈ ಪೈಪೋಟಿಯ ಸಮಾಜದಲ್ಲಿ ಬಹಳ ದೂರ ಹೋಗುವಂತೆ ಕಾಣುವುದಿಲ್ಲ. ಆದರೆ, ಮಿಝಮೊರಿಯು ಒಪ್ಪುವಂತೆ, ಅಂಥ ತತ್ವಗಳನ್ನು ಅನ್ವಯಿಸುವ ಮೂಲಕ, ನೀವು ವಿಶ್ವಾಸಾರ್ಹರೂ ಗಣ್ಯರೂ ಆಗಿ ತೋರಿಬರುವಿರಿ. ಅವನು ಬಡತಿಗಾಗಿ ಕೆಲಸಮಾಡುವದನ್ನು ನಿಲ್ಲಿಸಿದರೂ, ಅದು ಅವನಿಗೆ ಸಿಕ್ಕಿತ್ತು.—ಜ್ಞಾನೋಕ್ತಿ 22:29.
ಹೌದು, ದೇವರ ಚಿತ್ತವನ್ನು ಮಾಡುವುದರ ಸುತ್ತಲೂ ನಿಮ್ಮ ಜೀವನವನ್ನು ಕೇಂದ್ರೀಕರಿಸುವದು, ಕಷ್ಟದ ಕೆಲಸದಲ್ಲಿ ಸಂತೋಷವನ್ನು ಕಂಡುಕೊಳ್ಳುವ ಕೀಲಿಕೈ. ಆದುದರಿಂದಲೇ, ಜ್ಞಾನಿ ರಾಜ ಸೊಲೊಮೋನನು ತೀರ್ಮಾನಿಸಿದ್ದು: “ಮನುಷ್ಯರು ತಮ್ಮ ಜೀವಮಾನದಲ್ಲಿಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸುತ್ತೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನು ಅನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.”—ಪ್ರಸಂಗಿ 3:12, 13. (w89 7/15)
[ಪುಟ 7 ರಲ್ಲಿರುವ ಚಿತ್ರ]
ನಿಮ್ಮ ಕುಟುಂಬ ಜೀವನವನ್ನು ಬೈಬಲ್ ಅಧ್ಯಯನ ಮತ್ತು ದೇವರ ಚಿತ್ತ ಮಾಡುವದರ ಸುತ್ತಲೂ ಕೇಂದ್ರೀಕರಿಸುವುದು ಕಷ್ಟ ಕೆಲಸದ ಫಲವನ್ನು ಆನಂದಿಸುವ ಕೀಲಿಕೈ