ಸತ್ಯ ಆರಾಧಕರ ಒಂದು ಮಹಾ ಸಮೂಹ—ಅವರು ಎಲ್ಲಿಂದ ಬಂದಿದ್ದಾರೆ?
“ಇಗೋ, . . . ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು.”—ಪ್ರಕಟನೆ 7:9.
1. ಪ್ರಕಟನೆಯಲ್ಲಿರುವ ಪ್ರವಾದನಾತ್ಮಕ ದರ್ಶನಗಳು ಇಂದು ನಮಗೆ ಏಕೆ ಮಹಾ ಆಸಕ್ತಿಯ ವಿಷಯಗಳಾಗಿವೆ?
ಸಾ.ಶ. ಮೊದಲನೆಯ ಶತಮಾನದ ಅಂತ್ಯದಲ್ಲಿ, ಯೆಹೋವನ ಉದ್ದೇಶದ ಸಂಬಂಧದಲ್ಲಿ ಅದ್ಭುತಕರವಾದ ಘಟನೆಗಳ ದರ್ಶನಗಳನ್ನು ಅಪೊಸ್ತಲ ಯೋಹಾನನು ಕಂಡನು. ದರ್ಶನದಲ್ಲಿ ಅವನು ಕಂಡಂತಹ ಕೆಲವೊಂದು ವಿಷಯಗಳು ಈಗಲೇ ನೆರವೇರುತ್ತಿವೆ. ಇತರ ವಿಷಯಗಳು ಅತಿ ಸಮೀಪ ಭವಿಷ್ಯತ್ತಿನಲ್ಲಿ ನೆರವೇರಬೇಕಾಗಿವೆ. ಇವೆಲ್ಲವು, ಸಕಲ ಸೃಷ್ಟಿಯ ಮುಂದೆ ತನ್ನ ಹೆಸರನ್ನು ಪವಿತ್ರೀಕರಿಸಲಿಕ್ಕಿರುವ ಯೆಹೋವನ ಮಹಾ ಉದ್ದೇಶದ ನಾಟಕೀಯ ಪರಾಕಾಷ್ಠೆಯ ಸುತ್ತಲೂ ತಿರುಗುತ್ತವೆ. (ಯೆಹೆಜ್ಕೇಲ 38:23; ಪ್ರಕಟನೆ 4:11; 5:13) ಅಲ್ಲದೆ, ನಮ್ಮಲ್ಲಿ ಪ್ರತಿಯೊಬ್ಬರ ಜೀವನ ಪ್ರತೀಕ್ಷೆಗಳನ್ನು ಅವು ಒಳಗೊಳ್ಳುತ್ತವೆ. ಅದು ಹೇಗೆ?
2. (ಎ) ಅಪೊಸ್ತಲ ಯೋಹಾನನು ತನ್ನ ನಾಲ್ಕನೆಯ ದರ್ಶನದಲ್ಲಿ ಏನನ್ನು ಕಂಡನು? (ಬಿ) ಈ ದರ್ಶನದ ಸಂಬಂಧದಲ್ಲಿ ಯಾವ ಪ್ರಶ್ನೆಗಳನ್ನು ನಾವು ಪರಿಗಣಿಸಲಿದ್ದೇವೆ?
2 ಪ್ರಕಟನೆಯ ದರ್ಶನಗಳ ಸರಣಿಯ ನಾಲ್ಕನೆಯ ದರ್ಶನದಲ್ಲಿ, ‘ನಮ್ಮ ದೇವರ ದಾಸರು’ ತಮ್ಮ ಹಣೆಗಳಲ್ಲಿ ಮುದ್ರಿಸಲ್ಪಡುವ ತನಕ, ನಾಶನದ ಗಾಳಿಗಳನ್ನು ದೂತರು ಹಿಡಿದಿಡುವುದನ್ನು ಯೋಹಾನನು ಕಂಡನು. ತದನಂತರ ಒಂದು ಅತ್ಯಂತ ಉದ್ವೇಗಕರವಾದ ವಿಕಸನೆಯನ್ನು ಅವನು ಕಂಡನು—“ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ,” ಯೆಹೋವನನ್ನು ಆರಾಧಿಸುವುದರಲ್ಲಿ ಮತ್ತು ಆತನ ಮಗನನ್ನು ಘನಪಡಿಸುವುದರಲ್ಲಿ ಐಕ್ಯರಾಗಿದ್ದರು. ಇವರು ಮಹಾ ಸಂಕಟದಿಂದ ಹೊರಬರುವ ಜನರಾಗಿದ್ದರೆಂದು ಯೋಹಾನನಿಗೆ ಹೇಳಲಾಯಿತು. (ಪ್ರಕಟನೆ 7:1-17) ‘ನಮ್ಮ ದೇವರ ದಾಸರು’ ಎಂದು ವರ್ಣಿಸಲ್ಪಟ್ಟವರು ಯಾರು? ಮತ್ತು ಸಂಕಟವನ್ನು ಪಾರಾಗುವ “ಮಹಾ ಸಮೂಹ” ದವರ ಗುಂಪಿನಲ್ಲಿ ಯಾರಿರುವರು? ಅವರಲ್ಲಿ ನೀವು ಒಬ್ಬರಾಗಿರುವಿರೊ?
‘ನಮ್ಮ ದೇವರ ದಾಸರು’ ಯಾರಾಗಿದ್ದಾರೆ?
3. (ಎ) ಯೋಹಾನ 10:1-18 ರಲ್ಲಿ, ಯೇಸು ತನ್ನ ಹಿಂಬಾಲಕರೊಂದಿಗೆ ತನ್ನ ಸಂಬಂಧವನ್ನು ಹೇಗೆ ದೃಷ್ಟಾಂತಿಸಿದನು? (ಬಿ) ಯೇಸು ತನ್ನ ಯಜ್ಞಾರ್ಪಿತ ಮರಣದಿಂದ ತನ್ನ ಕುರಿಗಳಿಗಾಗಿ ಏನನ್ನು ಸಾಧ್ಯಗೊಳಿಸಿದನು?
3 ತನ್ನ ಮರಣದ ಸುಮಾರು ನಾಲ್ಕು ತಿಂಗಳುಗಳ ಮೊದಲು, ಯೇಸು ತನ್ನ ಕುರಿತು “ಒಳ್ಳೆಯ ಕುರುಬನು” ಎಂಬುದಾಗಿ ಮತ್ತು ಯಾರಿಗಾಗಿ ಅವನು ತನ್ನ ಜೀವವನ್ನು ನೀಡಲಿದನ್ದೊ ಆ ತನ್ನ ಹಿಂಬಾಲಕರ ಕುರಿತು “ಕುರಿಗಳು” ಎಂಬುದಾಗಿ ಮಾತಾಡಿದನು. ಒಂದು ಸಾಂಕೇತಿಕ ಕುರಿಹಟ್ಟಿಯೊಳಗೆ ತನ್ನಿಂದ ಕಂಡುಕೊಳ್ಳಲ್ಪಟ್ಟ ಮತ್ತು ತದನಂತರ ತನ್ನ ಮೂಲಕ ವಿಶೇಷವಾದ ಪರಾಮರಿಕೆ ನೀಡಲ್ಪಟ್ಟ ಕುರಿಗಳ ವಿಶೇಷ ಉಲ್ಲೇಖವನ್ನು ಅವನು ಮಾಡಿದನು. (ಯೋಹಾನ 10:1-18)a ಪ್ರೀತಿಯಿಂದ, ಪಾಪ ಮತ್ತು ಮರಣದಿಂದ ಮುಕ್ತರಾಗಲು ಅವರಿಗೆ ಬೇಕಾಗಿದ್ದ ಪ್ರಾಯಶ್ಚಿತ್ತ ಮೌಲ್ಯವನ್ನು ಒದಗಿಸುತ್ತಾ, ಯೇಸು ತನ್ನ ಕುರಿಗಳ ಪರವಾಗಿ ತನ್ನ ಪ್ರಾಣವನ್ನು ಬಿಟ್ಟುಕೊಟ್ಟನು.
4. ಯೇಸು ಇಲ್ಲಿ ಹೇಳಿದ ವಿಷಯಕ್ಕನುಗುಣವಾಗಿ, ಕುರಿಗಳೋಪಾದಿ ಒಟ್ಟುಗೂಡಿಸಲ್ಪಡುವ ಪ್ರಥಮ ವ್ಯಕ್ತಿಗಳು ಯಾರು?
4 ಆದರೆ, ಅದನ್ನು ಮಾಡುವ ಮೊದಲು, ಒಳ್ಳೆಯ ಕುರುಬನೋಪಾದಿ ಯೇಸು ವೈಯಕ್ತಿಕವಾಗಿ ಶಿಷ್ಯರನ್ನು ಒಟ್ಟುಗೂಡಿಸಿದನು. ಮೊದಲ ಶಿಷ್ಯರು ಅವನಿಗೆ ಸ್ನಾನಿಕನಾದ ಯೋಹಾನನಿಂದ, ಯೇಸುವಿನ ದೃಷ್ಟಾಂತದ “ಬಾಗಲು ಕಾಯುವವ” ನಿಂದ ಪರಿಚಯಿಸಲ್ಪಟ್ಟರು. ಸಂಘಟಿತ ‘ಅಬ್ರಹಾಮನ ಸಂತತಿ’ಯ ಭಾಗವಾಗಲಿಕ್ಕಾಗಿದ್ದ ಅವಕಾಶಕ್ಕೆ ಅನುಕೂಲಕರವಾಗಿ ಪ್ರತಿಕ್ರಿಯಿಸುವ ಜನರಿಗಾಗಿ ಯೇಸು ಹುಡುಕುತ್ತಿದ್ದನು. (ಆದಿಕಾಂಡ 22:18; ಗಲಾತ್ಯ 3:16, 29) ಅವರ ಹೃದಯಗಳಲ್ಲಿ ಪರಲೋಕದ ರಾಜ್ಯಕ್ಕಾಗಿ ಗಣ್ಯತೆಯನ್ನು ಅವನು ಬೆಳೆಸಿದನು, ಮತ್ತು ತನ್ನ ಸ್ವರ್ಗೀಯ ತಂದೆಯ ಮನೆಯಲ್ಲಿ ಅವರಿಗಾಗಿ ಒಂದು ಸ್ಥಳವನ್ನು ಸಿದ್ಧಮಾಡಲು ತಾನು ಹೋಗುತ್ತಿದ್ದೇನೆಂಬ ಆಶ್ವಾಸನೆಯನ್ನು ಅವರಿಗೆ ನೀಡಿದನು. (ಮತ್ತಾಯ 13:44-46; ಯೋಹಾನ 14:2, 3) ಉಚಿತವಾಗಿಯೆ ಅವನಂದದ್ದು: “ಇದಲ್ಲದೆ ಸ್ನಾನಿಕನಾದ ಯೋಹಾನನ ಕಾಲದಿಂದ ಈ ವರೆಗೂ ಪರಲೋಕರಾಜ್ಯವು ಬಲಾತ್ಕಾರಕ್ಕೆ ಗುರಿಯಾಗಿರುತ್ತದೆ; ಬಲಾತ್ಕಾರಿಗಳು ನುಗ್ಗಿ ಅದನ್ನು ಸ್ವಾಧೀನಮಾಡಿಕೊಳ್ಳುತ್ತಾರೆ.” (ಮತ್ತಾಯ 11:12) ಆ ಗುರಿಯನ್ನು ಪಡೆಯುವ ಉದ್ದೇಶದಿಂದ ಅವನನ್ನು ಹಿಂಬಾಲಿಸಿದವರು, ಯೇಸು ಮಾತಾಡಿದ ಕುರಿಹಟ್ಟಿಯೊಳಗೆ ಇರುವವರಾಗಿ ಪರಿಣಮಿಸಿದರು.
5. (ಎ) ಪ್ರಕಟನೆ 7:3-8 ರಲ್ಲಿ ಸೂಚಿಸಿ ಹೇಳಲ್ಪಟ್ಟ ‘ನಮ್ಮ ದೇವರ ದಾಸರು’ ಯಾರಾಗಿದ್ದಾರೆ? (ಬಿ) ಆತ್ಮಿಕ ಇಸ್ರಾಯೇಲ್ಯರೊಂದಿಗೆ ಆರಾಧನೆಯಲ್ಲಿ ಇನ್ನೂ ಹೆಚ್ಚಿನವರು ಸೇರುವರೆಂದು ಯಾವುದು ತೋರಿಸುತ್ತದೆ?
5 ಪ್ರಕಟನೆ 7:3-8 ರಲ್ಲಿ, ಆ ಸ್ವರ್ಗೀಯ ಗುರಿಯ ಕಡೆಗೆ ಯಶಸ್ವಿಯಾಗಿ ಮುನ್ನುಗ್ಗುವವರು ಕೂಡ ‘ನಮ್ಮ ದೇವರ ದಾಸರು’ ಎಂಬುದಾಗಿ ಸೂಚಿಸಲ್ಪಟ್ಟಿದ್ದಾರೆ. (ನೋಡಿ 1 ಪೇತ್ರ 2:9, 16.) ಅಲ್ಲಿ ಉಲ್ಲೇಖಿಸಲ್ಪಟ್ಟ 1,44,000 ಜನರು ಪ್ರಾಕೃತ ಯೆಹೂದ್ಯರು ಮಾತ್ರವೊ? ಯೇಸುವಿನ ದೃಷ್ಟಾಂತದ ಸಾಂಕೇತಿಕ ಕುರುಹಟ್ಟಿಯೊಳಗಿರುವವರು ಯೆಹೂದ್ಯರು ಮಾತ್ರವೊ? ನಿಶ್ಚಯವಾಗಿಯೂ ಅಲ್ಲ; ಅವರು ದೇವರ ಆತ್ಮಿಕ ಇಸ್ರಾಯೇಲಿನ ಸದಸ್ಯರಾಗಿದ್ದಾರೆ, ಎಲ್ಲರು ಅಬ್ರಹಾಮನ ಆತ್ಮಿಕ ಸಂತತಿಯಲ್ಲಿ ಕ್ರಿಸ್ತನೊಂದಿಗೆ ಸಹವಾಸಿಗಳಾಗಿದ್ದಾರೆ. (ಗಲಾತ್ಯ 3:28, 29; 6:16; ಪ್ರಕಟನೆ 14:1, 3) ಆ ನಿರ್ದಿಷ್ಟ ಸಂಖ್ಯೆಯು ತುಂಬಲ್ಪಡುವ ಸಮಯವು ಕಟ್ಟಕಡೆಗೆ ಬರುವುದೆಂಬುದು ನಿಶ್ಚಯ. ಆಮೇಲೆ ಏನು ಸಂಭವಿಸುವುದು? ಬೈಬಲು ಮುಂತಿಳಿಸಿದಂತೆ, ಒಂದು ಮಹಾ ಸಮೂಹದವರಾಗುವ ಇತರರು ಯೆಹೋವನನ್ನು ಆರಾಧಿಸುವುದರಲ್ಲಿ ಈ ಆತ್ಮಿಕ ಇಸ್ರಾಯೇಲ್ಯರನ್ನು ಸೇರಿಕೊಳ್ಳುವರು.—ಜೆಕರ್ಯ 8:23.
“ಬೇರೆ ಕುರಿಗಳು”—ಅವರು ಯೆಹೂದ್ಯೇತರರೊ?
6. ಯಾವ ವಿಕಸನಕ್ಕೆ ಯೋಹಾನ 10:16 ಸೂಚಿಸುತ್ತದೆ?
6 ಯೋಹಾನ 10:7-15 ರಲ್ಲಿ ಒಂದು ಕುರಿಹಟ್ಟಿಯ ಕುರಿತು ಉಲ್ಲೇಖಿಸಿದ ಬಳಿಕ, ಹೀಗೆ ಹೇಳುತ್ತಾ, ಇನ್ನೊಂದು ಗುಂಪನ್ನು ಯೇಸು ಚಿತ್ರದೊಳಗೆ ತಂದನು: “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸರ್ವಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.” (ಯೋಹಾನ 10:16) ಆ “ಬೇರೆ ಕುರಿಗಳು” ಯಾರು?
7, 8. (ಎ) ಬೇರೆ ಕುರಿಗಳು ಯೆಹೂದ್ಯೇತರ ಕ್ರೈಸ್ತರೆಂಬ ವಿಚಾರವು, ತಪ್ಪಾದ ಹೇಳಿಕೆಯ ಮೇಲೆ ಆಧರಿಸಿದೆ ಏಕೆ? (ಬಿ) ಬೇರೆ ಕುರಿಗಳು ಯಾರಾಗಿದ್ದಾರೆಂಬ ನಮ್ಮ ತಿಳಿವಳಿಕೆಯ ಮೇಲೆ, ಭೂಮಿಗಾಗಿ ದೇವರ ಉದ್ದೇಶದ ಕುರಿತಾದ ಯಾವ ಸತ್ಯಾಂಶಗಳು ಪ್ರಭಾವವನ್ನು ಬೀರತಕ್ಕದ್ದು?
7 ಈ ಬೇರೆ ಕುರಿಗಳು ಯೆಹೂದ್ಯೇತರರೆಂದು ಮತ್ತು ಈ ಮೊದಲು ಸೂಚಿಸಿ ಹೇಳಲ್ಪಟ್ಟ ಕುರಿಹಟ್ಟಿಯಲ್ಲಿರುವವರು ನಿಯಮದ ಒಡಂಬಡಿಕೆಯ ಕೆಳಗಿರುವ ಯೆಹೂದ್ಯರೆಂದು, ಮತ್ತು ಈ ಎರಡೂ ಗುಂಪುಗಳು ಸ್ವರ್ಗಕ್ಕೆ ಹೋಗುತ್ತವೆ ಎಂಬ ದೃಷ್ಟಿಕೋನವನ್ನು ಕ್ರೈಸ್ತಪ್ರಪಂಚದ ವ್ಯಾಖ್ಯಾನಕಾರರು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಯೇಸು ಒಬ್ಬ ಯೆಹೂದ್ಯನಾಗಿ ಹುಟ್ಟಿದ್ದನು ಮತ್ತು ಜನ್ಮತಃ ನಿಯಮದ ಒಡಂಬಡಿಕೆಯ ಕೆಳಗಿದ್ದನು. (ಗಲಾತ್ಯ 4:4) ಇನ್ನೂ ಹೆಚ್ಚಾಗಿ, ಬೇರೆ ಕುರಿಗಳನ್ನು ಸ್ವರ್ಗೀಯ ಜೀವನದ ಪ್ರತಿಫಲವನ್ನು ಪಡೆಯುವ ಯೆಹೂದ್ಯೇತರರೆಂದು ವೀಕ್ಷಿಸುವವರು, ದೇವರ ಉದ್ದೇಶದ ಒಂದು ಪ್ರಾಮುಖ್ಯ ಅಂಶವನ್ನು ಗಣನೆಗೆ ತೆಗೆದುಕೊಳ್ಳಲು ತಪ್ಪುತ್ತಿದ್ದಾರೆ. ಯೆಹೋವನು ಪ್ರಥಮ ಮಾನವರನ್ನು ಸೃಷ್ಟಿಸಿ, ಅವರನ್ನು ಏದೆನ್ ತೋಟದಲ್ಲಿ ಇರಿಸಿದಾಗ, ಭೂಮಿಯು ಜನರಿಂದ ತುಂಬಲ್ಪಡಬೇಕೆಂದು, ಇಡೀ ಭೂಮಿಯು ಒಂದು ಪ್ರಮೋದವನವಾಗಿರಬೇಕೆಂದು, ಮತ್ತು ಅದರ ಮಾನವ ಕಾವಲುಗಾರರು, ತಮ್ಮ ಸೃಷ್ಟಿಕರ್ತನನ್ನು ಗೌರವಿಸಿ, ಆತನಿಗೆ ವಿಧೇಯರಾಗುವ ಕರಾರಿನ ಮೇಲೆ ಎಂದೆಂದಿಗೂ ಜೀವವನ್ನು ಆನಂದಿಸಬೇಕೆಂಬ ಉದ್ದೇಶವು ಆತನದ್ದಾಗಿತ್ತು ಎಂಬುದನ್ನು ಆತನು ಸೃಷ್ಟಗೊಳಿಸಿದನು.—ಆದಿಕಾಂಡ 1:26-28; 2:15-17; ಯೆಶಾಯ 45:18.
8 ಆದಾಮನು ಪಾಪಗೈದಾಗ, ಯೆಹೋವನ ಉದ್ದೇಶವು ಭಂಗಗೊಳ್ಳಲಿಲ್ಲ. ಯಾವುದನ್ನು ಗಣ್ಯಮಾಡಲು ಆದಾಮನು ತಪ್ಪಿಹೋಗಿದ್ದನೊ ಅದನ್ನು ಅನುಭವಿಸುವ ಅವಕಾಶವನ್ನು ಆದಾಮನ ಸಂತಾನವು ಪಡೆಯಬೇಕೆಂದು ದೇವರು ಪ್ರೀತಿಯಿಂದ ಒದಗಿಸುವಿಕೆಯನ್ನು ಮಾಡಿದನು. ಯಾರ ಮುಖಾಂತರ ಎಲ್ಲ ಜನಾಂಗಗಳಿಗೆ ಆಶೀರ್ವಾದಗಳು ಲಭ್ಯವಾಗುವವೊ ಅಂತಹ ಒಬ್ಬ ರಕ್ಷಕನನ್ನು, ಒಂದು ಸಂತತಿಯನ್ನು ಎಬ್ಬಿಸುವೆನೆಂದು ಯೆಹೋವನು ಮುಂತಿಳಿಸಿದನು. (ಆದಿಕಾಂಡ 3:15; 22:18) ಆ ವಾಗ್ದಾನವು, ಭೂಮಿಯಲ್ಲಿರುವ ಎಲ್ಲ ಒಳ್ಳೆಯ ಜನರು ಪರಲೋಕಕ್ಕೆ ಒಯ್ಯಲ್ಪಡುವರೆಂಬ ಅರ್ಥವನ್ನು ನೀಡಲಿಲ್ಲ. ಯೇಸು ತನ್ನ ಹಿಂಬಾಲಕರಿಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:9, 10) ಯೋಹಾನ 10:1-16 ರಲ್ಲಿ ದಾಖಲಿಸಲ್ಪಟ್ಟಿರುವ ದೃಷ್ಟಾಂತವನ್ನು ಹೇಳುವ ಸ್ವಲ್ಪ ಸಮಯದ ಮುಂಚೆ, ಸ್ವರ್ಗೀಯ ರಾಜ್ಯವನ್ನು ‘ಚಿಕ್ಕ ಹಿಂಡಿ’ಗೆ ಮಾತ್ರ ಕೊಡಲು ತನ್ನ ತಂದೆ ಸಮ್ಮತಿಸಿದ್ದನೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದನು. (ಲೂಕ 12:32, 33) ಆದುದರಿಂದ, ತನ್ನ ಕುರಿಗಳ ಪರವಾಗಿ ತನ್ನ ಪ್ರಾಣವನ್ನು ಬಿಟ್ಟುಕೊಡುವ ಒಳ್ಳೆಯ ಕುರುಬನೋಪಾದಿ, ತನ್ನ ಕುರಿತಾಗಿರುವ ಯೇಸುವಿನ ದೃಷ್ಟಾಂತವನ್ನು ನಾವು ಓದುವಾಗ, ಯೇಸು ತನ್ನ ಪ್ರೀತಿಯ ಪರಾಮರಿಕೆಯ ಕೆಳಗೆ ತರುವ ಹೆಚ್ಚಿನವರನ್ನು, ತನ್ನ ಸ್ವರ್ಗೀಯ ರಾಜ್ಯದ ಭೂ ಪ್ರಜೆಗಳಾಗುವವರನ್ನು ಆ ಚಿತ್ರದಿಂದ ಹೊರಗಿಡುವುದು ತಪ್ಪಾಗಿರುವುದು.—ಯೋಹಾನ 3:16.
9. 1884 ರಷ್ಟು ಆರಂಭದಲ್ಲೇ, ಬೇರೆ ಕುರಿಗಳ ಗುರುತು ಏನಾಗಿತ್ತೆಂದು ಬೈಬಲ್ ವಿದ್ಯಾರ್ಥಿಗಳು ತಿಳಿದುಕೊಂಡರು?
9 1884 ರಷ್ಟು ಆರಂಭದಲ್ಲೇ, ಬೇರೆ ಕುರಿಗಳನ್ನು ವಾಚ್ ಟವರ್ ಪತ್ರಿಕೆಯು, ದೇವರ ಮೂಲಭೂತ ಉದ್ದೇಶವನ್ನು ನೆರವೇರಿಸುವ ಪರಿಸ್ಥಿತಿಗಳಲ್ಲಿ ಈ ಭೂಮಿಯ ಮೇಲೆ ಜೀವಿಸುವ ಅವಕಾಶ ಕೊಡಲ್ಪಡುವ ಜನರೋಪಾದಿ ಗುರುತಿಸಿತು. ಈ ಬೇರೆ ಕುರಿಗಳಲ್ಲಿ ಕೆಲವರು, ಯೇಸುವಿನ ಭೂ ಶುಶ್ರೂಷೆಯ ಮೊದಲು ಜೀವಿಸಿ ಸತ್ತಿದ್ದ ಜನರಾಗಿರುವರೆಂದು, ಆ ಆರಂಭಿಕ ಬೈಬಲ್ ವಿದ್ಯಾರ್ಥಿಗಳು ಗ್ರಹಿಸಿದರು. ಹಾಗಿದ್ದರೂ, ಅವರಿಗೆ ಸರಿಯಾಗಿ ಅರ್ಥವಾಗದಿದ್ದ ಕೆಲವು ವಿವರಗಳಿದ್ದವು. ಉದಾಹರಣೆಗೆ, ಎಲ್ಲ ಅಭಿಷಿಕ್ತ ಕ್ರೈಸ್ತರು ತಮ್ಮ ಸ್ವರ್ಗೀಯ ಪ್ರತಿಫಲವನ್ನು ಪಡೆದಾದನಂತರ, ಬೇರೆ ಕುರಿಗಳ ಒಟ್ಟುಗೂಡಿಸುವಿಕೆಯು ಸಂಭವಿಸುವುದೆಂದು ಅವರು ನೆನಸಿದರು. ಆದರೂ, ಬೇರೆ ಕುರಿಗಳು ಕೇವಲ ಯೆಹೂದ್ಯೇತರರಾಗಿರಲಿಲ್ಲವೆಂಬುದನ್ನು ಅವರು ನಿಶ್ಚಯವಾಗಿ ಗ್ರಹಿಸಿದ್ದರು. ಬೇರೆ ಕುರಿಗಳಲ್ಲಿ ಒಬ್ಬರಾಗುವ ಅವಕಾಶವು ಇಬ್ಬರಿಗೂ—ಯೆಹೂದ್ಯರಿಗೆ ಮತ್ತು ಯೆಹೂದ್ಯೇತರರಿಗೆ, ಹೀಗೆ, ಎಲ್ಲ ರಾಷ್ಟ್ರಗಳ ಮತ್ತು ಕುಲಗಳ ಜನರಿಗೆ ತೆರೆದಿದೆ.—ಹೋಲಿಸಿ ಅ. ಕೃತ್ಯಗಳು 10:34, 35.
10. ಯೇಸು ನಿಜವಾಗಿಯೂ ತನ್ನ ಬೇರೆ ಕುರಿಗಳೆಂದು ವೀಕ್ಷಿಸುವವರಾಗಿ ನಾವು ಇರಬೇಕಾದಲ್ಲಿ, ನಮ್ಮ ಕುರಿತು ಯಾವುದು ಸತ್ಯವಾಗಿರಬೇಕು?
10 ಯೇಸುವಿನ ಮೂಲಕ ಕೊಡಲ್ಪಟ್ಟ ವಿವರಣೆಗೆ ಹೊಂದಿಕೊಳ್ಳಲು, ಬೇರೆ ಕುರಿವರ್ಗದವರು, ಅವರ ಜನಾಂಗದ ಯಾ ಕುಲದ ಹಿನ್ನೆಲೆಯು ಏನೇ ಆಗಿರಲಿ, ಯೇಸು ಕ್ರಿಸ್ತನನ್ನು ಒಳ್ಳೆಯ ಕುರುಬನೋಪಾದಿ ಗುರುತಿಸುವ ಜನರಾಗಿರಬೇಕು. ಅದು ಏನನ್ನು ಒಳಗೊಳ್ಳುತ್ತದೆ? ಅವರು ನಮ್ರತೆಯನ್ನು ಮತ್ತು ನಡೆಸಲ್ಪಡಲಿಕ್ಕಾಗಿ ಮನಃಪೂರ್ವಕತೆಯನ್ನು ಪ್ರದರ್ಶಿಸಬೇಕು, ಈ ಗುಣಗಳು ಕುರಿಗಳ ವೈಶಿಷ್ಟ್ಯಗಳಾಗಿವೆ. (ಕೀರ್ತನೆ 37:11) ಚಿಕ್ಕ ಹಿಂಡಿನ ವಿಷಯದಲ್ಲಿ ಸತ್ಯವಾಗಿರುವಂತೆಯೇ, ಅವರು “[ಒಳ್ಳೆಯ ಕುರುಬನ] ಸರ್ವವನ್ನು ತಿಳು” ಕೊಳ್ಳಬೇಕು ಮತ್ತು ಅವರನ್ನು ಪ್ರಭಾವಿಸಲು ಪ್ರಯತ್ನಿಸುವ ಇತರರಿಂದ ತಪ್ಪುದಾರಿಗೆ ಎಳೆಯಲ್ಪಡುವಂತೆ ಅವಕಾಶವನ್ನು ಕೊಡಬಾರದು. (ಯೋಹಾನ 10:4; 2 ಯೋಹಾನ 9, 10) ತನ್ನ ಕುರಿಗಳ ಪರವಾಗಿ ತನ್ನ ಪ್ರಾಣವನ್ನು ನೀಡಿರುವುದರಲ್ಲಿ ಯೇಸು ಏನನ್ನು ಮಾಡಿದನೊ ಅದರ ಪ್ರಮುಖತೆಯನ್ನು ಅವರು ಗಣ್ಯಮಾಡಬೇಕು ಮತ್ತು ಆ ಒದಗಿಸುವಿಕೆಯಲ್ಲಿ ಪೂರ್ಣ ನಂಬಿಕೆಯನ್ನು ಇಡಬೇಕು. (ಅ. ಕೃತ್ಯಗಳು 4:12) ಯೆಹೋವನಿಗೆ ಮಾತ್ರ ಪವಿತ್ರ ಸೇವೆಯನ್ನು ಸಲ್ಲಿಸಬೇಕೆಂದು, ಪ್ರಥಮವಾಗಿ ರಾಜ್ಯವನ್ನು ಹುಡುಕುತ್ತಿರಬೇಕೆಂದು, ಲೋಕದಿಂದ ಬೇರೆಯಾಗಿ ಇರಬೇಕೆಂದು, ಮತ್ತು ಒಬ್ಬರು ಇನ್ನೊಬ್ಬರಿಗಾಗಿ ಸ್ವತ್ಯಾಗದ ಪ್ರೀತಿಯನ್ನು ತೋರಿಸಬೇಕೆಂದು ಒಳ್ಳೆಯ ಕುರುಬನು ಅವರನ್ನು ಪ್ರೇರೇಪಿಸುವಾಗ, ಅವನ ಸರ್ವಕ್ಕೆ ಅವರು “ಕಿವಿಗೊಡ” ಬೇಕು. (ಮತ್ತಾಯ 4:10; 6:31-33; ಯೋಹಾನ 15:12, 13, 19) ತನ್ನ ಬೇರೆ ಕುರಿಗಳೆಂದು ಯೇಸು ವೀಕ್ಷಿಸುವವರ ವರ್ಣನೆಯನ್ನು ನೀವು ಹೋಲುತ್ತೀರೊ? ಹಾಗೆ ಹೋಲಬೇಕೆಂದು ನೀವು ಬಯಸುತ್ತೀರೊ? ನಿಜವಾಗಿಯೂ ಯೇಸುವಿನ ಬೇರೆ ಕುರಿಗಳಾಗುವ ಎಲ್ಲರಿಗೆ ಎಂತಹ ಅಮೂಲ್ಯವಾದ ಸಂಬಂಧವು ತೆರೆಯುತ್ತದೆ!
ರಾಜ್ಯದ ಅಧಿಕಾರಕ್ಕಾಗಿ ಗೌರವ
11. (ಎ) ತನ್ನ ಸಾನ್ನಿಧ್ಯದ ಸೂಚನೆಯಲ್ಲಿ, ಯೇಸು ಕುರಿಗಳ ಮತ್ತು ಆಡುಗಳ ಕುರಿತು ಏನು ಹೇಳಿದನು? (ಬಿ) ಯೇಸು ಸೂಚಿಸಿ ಮಾತಾಡುವ ಸಹೋದರರು ಯಾರು?
11 ಮೇಲಿನ ದೃಷ್ಟಾಂತವನ್ನು ಅವನು ಕೊಟ್ಟ ಹಲವಾರು ತಿಂಗಳುಗಳ ಬಳಿಕ, ಯೇಸು ಪುನಃ ಯೆರೂಸಲೇಮಿನಲ್ಲಿದ್ದನು. ಮಂದಿರದ ಕ್ಷೇತ್ರವನ್ನು ಮೇಲಿನಿಂದ ನೋಡುತ್ತಾ, ಎಣ್ಣೆಮರಗಳ ಗುಡ್ಡದ ಮೇಲೆ ಕುಳಿತಿದ್ದಾಗ, ‘ತನ್ನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ಸೂಚನೆಯ’ ವಿವರಗಳನ್ನು ತನ್ನ ಶಿಷ್ಯರಿಗೆ ಅವನು ಒದಗಿಸಿದನು. (ಮತ್ತಾಯ 24:3) ಅವನು ಪುನಃ ಕುರಿಗಳ ಒಟ್ಟುಗೂಡಿಸುವಿಕೆಯ ಕುರಿತು ಮಾತಾಡಿದನು. ಇತರ ವಿಷಯಗಳೊಂದಿಗೆ, ಅವನಂದದ್ದು: “ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ ಕುರಿಗಳನ್ನು ತನ್ನ ಬಲಗಡೆಯಲ್ಲಿ ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು.” ಈ ಸಾಮ್ಯದಲ್ಲಿ, ರಾಜನಿಂದ ಗಮನಿಸಲ್ಪಡುವವರು ತನ್ನ “ಸಹೋದರ” ರೊಂದಿಗೆ ಹೇಗೆ ವರ್ತಿಸುವರೊ ಅದರ ಆಧಾರದ ಮೇಲೆ ವಿಚಾರಣೆಮಾಡಲ್ಪಡುವರೆಂದು ಯೇಸು ತೋರಿಸಿದನು. (ಮತ್ತಾಯ 25:31-46) ಈ ಸಹೋದರರು ಯಾರು? ಇವರು ಆತ್ಮಜಾತ ಕ್ರೈಸ್ತರಾಗಿದ್ದು, ಹೀಗೆ “ದೇವರ ಮಕ್ಕಳು” ಆಗಿದ್ದಾರೆ. ಯೇಸು ದೇವರ ಜೇಷ್ಠ ಪುತ್ರನಾಗಿದ್ದಾನೆ. ಆದಕಾರಣ, ಅವರು ಕ್ರಿಸ್ತನ ಸಹೋದರರಾಗಿದ್ದಾರೆ. ಅವರು ಪ್ರಕಟನೆ 7:3 ರಲ್ಲಿ ಉಲ್ಲೇಖಿಸಲ್ಪಟ್ಟ “ದೇವರ ದಾಸರು” ಆಗಿದ್ದು, ಕ್ರಿಸ್ತನೊಂದಿಗೆ ಅವನ ಸ್ವರ್ಗೀಯ ರಾಜ್ಯದಲ್ಲಿ ಪಾಲ್ಗೊಳ್ಳಲು ಮಾನವಕುಲದೊಳಗಿಂದ ಆರಿಸಲ್ಪಟ್ಟವರಾಗಿದ್ದಾರೆ.—ರೋಮಾಪುರ 8:14-17.
12. ಜನರು ಕ್ರಿಸ್ತನ ಸಹೋದರರೊಂದಿಗೆ ವರ್ತಿಸುವ ವಿಧವು ಮಹಾ ಪ್ರಮುಖತೆಯ ವಿಷಯವಾಗಿದೆ ಏಕೆ?
12 ಇತರ ಮಾನವರು ರಾಜ್ಯದ ಈ ಬಾಧ್ಯಸ್ತರೊಂದಿಗೆ ವರ್ತಿಸುವ ರೀತಿಯು ಬಹಳ ಪ್ರಾಮುಖ್ಯವಾದದ್ದಾಗಿದೆ. ನೀವು ಅವರನ್ನು ಯೇಸು ಕ್ರಿಸ್ತನು ಹಾಗೂ ಯೆಹೋವನು ವೀಕ್ಷಿಸುವಂತೆ ವೀಕ್ಷಿಸುತ್ತೀರೊ? (ಮತ್ತಾಯ 24:45-47; 2 ಥೆಸಲೊನೀಕ 2:13) ಈ ಅಭಿಷಿಕ್ತ ಜನರ ಕಡೆಗಿರುವ ಒಬ್ಬ ವ್ಯಕ್ತಿಯ ಮನೋಭಾವವು, ಸ್ವತಃ ಯೇಸು ಕ್ರಿಸ್ತನ ಕಡೆಗೆ ಮತ್ತು ವಿಶ್ವದ ಸಾರ್ವಭೌಮನಾದ ಅವನ ತಂದೆಯ ಕಡೆಗಿರುವ ಅವನ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.—ಮತ್ತಾಯ 10:40; 25:34-46.
13. 1884 ರಲ್ಲಿ ಎಷ್ಟರ ಮಟ್ಟಿಗೆ ಬೈಬಲ್ ವಿದ್ಯಾರ್ಥಿಗಳು ಕುರಿಗಳ ಮತ್ತು ಆಡುಗಳ ಸಾಮ್ಯವನ್ನು ಅರ್ಥಮಾಡಿಕೊಂಡರು?
13 ಆಗಸ್ಟ್ 1884ರ ಅದರ ಸಂಚಿಕೆಯಲ್ಲಿ, ವಾಚ್ ಟವರ್ ಪತ್ರಿಕೆಯು ಸರಿಯಾಗಿ ಸೂಚಿಸಿ ಹೇಳಿದ್ದೇನೆಂದರೆ, ಈ ಸಾಮ್ಯದಲ್ಲಿನ “ಕುರಿಗಳು” ಭೂಮಿಯ ಮೇಲೆ ಪರಿಪೂರ್ಣ ಜೀವಿತದ ಪ್ರತೀಕ್ಷೆಯನ್ನು ಇರಿಸಿಕೊಂಡಿರುವ ಜನರಾಗಿದ್ದಾರೆ. ಕ್ರಿಸ್ತನು ತನ್ನ ಮಹಿಮಾಭರಿತ ಸ್ವರ್ಗೀಯ ಸಿಂಹಾಸನದಿಂದ ಆಳುತ್ತಿರುವಾಗ ಈ ಸಾಮ್ಯದ ಅನ್ವಯ ಇರಬೇಕೆಂದು ಸಹ ತಿಳಿದುಕೊಳ್ಳಲಾಯಿತು. ಆದರೂ, ಅಲ್ಲಿ ವರ್ಣಿಸಲಾದ ಬೇರ್ಪಡಿಸುವ ಕೆಲಸವನ್ನು ಅವನು ಯಾವಾಗ ಆರಂಭಿಸುವನೆಂದು ಅಥವಾ ಅದು ಎಷ್ಟು ಸಮಯದ ವರೆಗೆ ಮುಂದುವರಿಯುವುದೆಂದು, ಆ ಸಮಯದಲ್ಲಿ ಅವರು ಸ್ಪಷ್ಟವಾಗಿಗಿ ಅರಿತುಕೊಳ್ಳಲಿಲ್ಲ.
14. ಯೇಸುವಿನ ಪ್ರವಾದನಾತ್ಮಕ ಸಾಮ್ಯವು ಯಾವಾಗ ನೆರವೇರಲಿರುವುದು ಎಂಬುದನ್ನು ಗಣ್ಯಮಾಡಲು, 1923 ರಲ್ಲಿ ನೀಡಲ್ಪಟ್ಟ ಅಧಿವೇಶನದ ಭಾಷಣವೊಂದು ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಿತು?
14 ಹಾಗಿದ್ದರೂ, 1923 ರಲ್ಲಿ, ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಜೆ. ಎಫ್. ರಥರ್ಫರ್ಡ್, ಅಧಿವೇಶನದ ಒಂದು ಭಾಷಣದಲ್ಲಿ, ಕುರಿಗಳ ಮತ್ತು ಆಡುಗಳ ಸಾಮ್ಯದ ನೆರವೇರಿಕೆಗಾಗಿದ್ದ ಸಮಯವನ್ನು ಸೃಷ್ಟಗೊಳಿಸಿದರು. ಏಕೆ? ಕೊಂಚ ಮಟ್ಟಿಗೆ ಏಕೆಂದರೆ, ರಾಜನ ಸಹೋದರರು—ಅವರಲ್ಲಿ ಕೆಲವರಾದರೂ—ಇನ್ನೂ ಭೂಮಿಯಲ್ಲಿರುವರೆಂದು ಸಾಮ್ಯವು ತೋರಿಸುತ್ತದೆ. ಮಾನವರಲ್ಲಿ, ಅವನ ಆತ್ಮಜಾತ ಹಿಂಬಾಲಕರು ಮಾತ್ರ ನಿಜವಾಗಿಯೂ ಅವನ ಸಹೋದರರೆಂದು ಕರೆಯಲ್ಪಡಬಹುದಿತ್ತು. (ಇಬ್ರಿಯ 2:10-12) ಯೇಸು ವರ್ಣಿಸಿದ ವಿಧಗಳಲ್ಲಿ ಅವರಿಗೆ ಜನರು ಒಳಿತನ್ನು ಮಾಡಲು ಅವಕಾಶಗಳನ್ನು ಒದಗಿಸುತ್ತಾ, ಸಹಸ್ರ ವರ್ಷಗಳ ಉದ್ದಕ್ಕೂ ಅವರು ಭೂಮಿಯಲ್ಲಿರುವುದಿಲ್ಲ.—ಪ್ರಕಟನೆ 20:6.
15. (ಎ) ಯೇಸುವಿನ ಸಾಮ್ಯದ ಕುರಿಗಳನ್ನು ಸರಿಯಾಗಿ ಗುರುತಿಸಲು ಬೈಬಲ್ ವಿದ್ಯಾರ್ಥಿಗಳಿಗೆ ಯಾವ ಹೆಚ್ಚಿನ ವಿಕಸನಗಳು ಸಹಾಯ ಮಾಡಿದವು? (ಬಿ) ರಾಜ್ಯಕ್ಕಾಗಿ ತಮ್ಮ ಗಣ್ಯತೆಯ ಪ್ರಮಾಣವನ್ನು ಕುರಿ ವರ್ಗದವರು ಹೇಗೆ ನೀಡಿದ್ದಾರೆ?
15 1923 ರಲ್ಲಿ ನೀಡಲ್ಪಟ್ಟ ಆ ಭಾಷಣದಲ್ಲಿ, ಕುರಿಗಳ ಮತ್ತು ಆಡುಗಳ ಕುರಿತಾದ ಕರ್ತನ ವಿವರಣೆಯನ್ನು ಹೋಲುವವರನ್ನು ಗುರುತಿಸುವ ಪ್ರಯತ್ನವನ್ನು ಮಾಡಲಾಯಿತು, ಆದರೆ ಸಾಮ್ಯದ ಪೂರ್ಣ ಅರ್ಥವು ಸ್ಪಷ್ಟವಾಗಿಗುವ ಮೊದಲು ಇತರ ವಿಷಯಗಳು ಅರ್ಥವಾಗಬೇಕಿತ್ತು. ಹಿಂಬಾಲಿಸಿ ಬಂದ ವರ್ಷಗಳಲ್ಲಿ, ಯೆಹೋವನು ಪ್ರಗತಿಪರವಾಗಿ ಈ ಪ್ರಾಮುಖ್ಯ ವಿವರಗಳನ್ನು ತನ್ನ ಸೇವಕರ ಗಮನಕ್ಕೆ ತಂದನು. ಇವು, 1927 ರಲ್ಲಿ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಭೂಮಿಯಲ್ಲಿರುವ ಆತ್ಮ ಅಭಿಷಿಕ್ತ ಕ್ರೈಸ್ತರ ಇಡೀ ಮಂಡಲಿಯಾಗಿದೆ ಎಂಬುದನ್ನು ಸ್ಪಷ್ಟವಾಗಿಗಿ ತಿಳಿದುಕೊಳ್ಳುವುದನ್ನು; 1932 ರಲ್ಲಿ, ಯೆಹೋವನ ಅಭಿಷಿಕ್ತ ಸೇವಕರೊಂದಿಗೆ, ಯೆಹೋನಾದಾಬನು ಯೇಹುವಿನೊಂದಿಗೆ ಮಾಡಿದಂತೆ, ಅಧೈರ್ಯಪಡದೆ ತನ್ನನ್ನು ಗುರುತಿಸಿಕೊಳ್ಳುವ ಅಗತ್ಯವನ್ನು ಕೂಡ ಗಣ್ಯಮಾಡುವುದನ್ನು ಒಳಗೊಂಡವು. (ಮತ್ತಾಯ 24:45; 2 ಅರಸು 10:15) ಆ ಸಮಯದಲ್ಲಿ, ಪ್ರಕಟನೆ 22:17ರ ಆಧಾರದ ಮೇಲೆ, ಕುರಿಗಳಂಥ ಈ ಜನರು ಇತರರಿಗೆ ರಾಜ್ಯದ ಸಂದೇಶವನ್ನು ನೀಡುವುದರಲ್ಲಿ ಭಾಗವಹಿಸುವಂತೆ ನಿರ್ದಿಷ್ಟವಾಗಿ ಉತ್ತೇಜಿಸಲ್ಪಟ್ಟರು. ಮೆಸ್ಸೀಯನ ರಾಜ್ಯಕ್ಕಾಗಿರುವ ಅವರ ಗಣ್ಯತೆಯು, ಕರ್ತನ ಅಭಿಷಿಕ್ತರಿಗೆ ಮಾನವೀಯ ದಯೆಯನ್ನು ನೀಡುವಂತೆ ಮಾತ್ರವಲ್ಲ, ಕ್ರಿಸ್ತನ ಮುಖಾಂತರ ಯೆಹೋವನಿಗೆ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಳ್ಳುವಂತೆ ಮತ್ತು ಅಭಿಷಿಕ್ತರು ಮಾಡುತ್ತಿರುವ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುತ್ತಾ, ಅವರೊಂದಿಗೆ ನಿಕಟವಾಗಿ ಸೇರುವಂತೆ ಅವರನ್ನು ಪ್ರೇರೇಪಿಸಲಿತ್ತು. ನೀವು ಅದನ್ನು ಮಾಡುತ್ತಿದ್ದೀರೊ? ಹಾಗೆ ಮಾಡುವವರಿಗೆ, ರಾಜನು ಹೀಗೆ ಹೇಳುವನು: “ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ.” ಅವರ ಮುಂದೆ ರಾಜ್ಯದ ಭೂಕ್ಷೇತ್ರದಲ್ಲಿ, ಪರಿಪೂರ್ಣತೆಯಲ್ಲಿ ನಿತ್ಯಜೀವದ ಮಹಾ ಪ್ರತೀಕ್ಷೆಯು ಇರುವುದು.—ಮತ್ತಾಯ 25:34, 46.
“ಮಹಾ ಸಮೂಹ” ದವರು—ಅವರು ಎಲ್ಲಿಗೆ ಹೋಗುತ್ತಿದ್ದಾರೆ?
16. (ಎ) ಪ್ರಕಟನೆ 7:9ರ ಮಹಾ ಜನಸ್ತೋಮ ಅಥವಾ ಮಹಾ ಸಮೂಹದ ಗುರುತಿನ ಸಂಬಂಧದಲ್ಲಿ ಯಾವ ತಪ್ಪು ಅಭಿಪ್ರಾಯಗಳು ಆದಿ ಬೈಬಲ್ ವಿದ್ಯಾರ್ಥಿಗಳಲ್ಲಿದ್ದವು? (ಬಿ) ಯಾವಾಗ ಮತ್ತು ಯಾವ ಆಧಾರದ ಮೇಲೆ ಅವರ ದೃಷ್ಟಿಕೋನವನ್ನು ತಿದ್ದಲಾಯಿತು?
16 ಪ್ರಕಟನೆ 7:9, 10ರ ಮಹಾ ಜನಸ್ತೋಮವು (ಯಾ, ಮಹಾ ಸಮೂಹವು) ಯೋಹಾನ 10:16ರ ಬೇರೆ ಕುರಿಗಳು ಮತ್ತು ಮತ್ತಾಯ 25:33ರ ಕುರಿಗಳಿಂದ ಬೇರೆಯಾಗಿತ್ತೆಂದು ಯೆಹೋವನ ಸೇವಕರು ಸ್ವಲ್ಪ ಸಮಯಕ್ಕಾಗಿ ನಂಬಿದ್ದರು. ಅವರು “ಸಿಂಹಾಸನದ ಮುಂದೆ ನಿಂತಿದ್ದಾರೆ” ಎಂದು ಬೈಬಲ್ ಹೇಳುವುದರಿಂದ, ಅವರು ಪರಲೋಕದಲ್ಲಿ ಇರುವರೆಂದು ಆದರೆ ಸಿಂಹಾಸನಗಳ ಮೇಲೆ ಕ್ರಿಸ್ತನ ಸಹ ಬಾಧ್ಯಸ್ಥರೋಪಾದಿ ಆಳುತ್ತಿರುವುದಿಲ್ಲವೆಂದು, ಆದರೆ ಸಿಂಹಾಸನದ ಮುಂದೆ ಎರಡನೆಯ ಸ್ಥಾನದಲ್ಲಿರುವರೆಂದು ನೆನಸಲಾಗಿತ್ತು. ಅವರು ಕಡಿಮೆ ನಂಬಿಗಸ್ತ ಕ್ರೈಸ್ತರೆಂದು, ನಿಜವಾದ ಸ್ವತ್ಯಾಗದ ಆತ್ಮವನ್ನು ತೋರಿಸದವರೆಂದು ವೀಕ್ಷಿಸಲ್ಪಟ್ಟರು. 1935 ರಲ್ಲಿ ಆ ವೀಕ್ಷಣೆಯನ್ನು ತಿದ್ದಲಾಯಿತು.b ಮತ್ತಾಯ 25:31, 32 ರಂತಹ ವಚನಗಳ ಬೆಳಕಿನಲ್ಲಿ ಪ್ರಕಟನೆ 7:9ರ ಪರಿಶೀಲನೆಯು, ಭೂಮಿಯಲ್ಲಿರುವ ಜನರು “ಸಿಂಹಾಸನದ ಮುಂದೆ” ಇರಬಹುದಿತ್ತು ಎಂಬುದನ್ನು ಸ್ಪಷ್ಟಮಾಡಿತು. ದೇವರಿಗೆ ನಂಬಿಗಸ್ತಿಕೆಯ ಎರಡು ಮಟ್ಟಗಳು ಇರುವುದಿಲ್ಲ ಎಂಬುದನ್ನು ಕೂಡ ಸೂಚಿಸಿ ಹೇಳಲಾಯಿತು. ಆತನ ಮೆಚ್ಚಿಗೆಯನ್ನು ಪಡೆಯುವವರೆಲ್ಲರೂ ಆತನ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕು.—ಮತ್ತಾಯ 22:37, 38; ಲೂಕ 16:10.
17, 18. (ಎ) 1935 ರಿಂದ, ಭೂಮಿಯ ಮೇಲೆ ಅನಂತ ಜೀವನಕ್ಕೆ ಎದುರು ನೋಡುತ್ತಿರುವವರ ಸಂಖ್ಯೆಯಲ್ಲಿ ಮಹಾ ಅಭಿವೃದ್ಧಿಗೆ ಯಾವುದು ಕಾರಣವಾಗಿತ್ತು? (ಬಿ) ಯಾವ ಪ್ರಮುಖ ಕೆಲಸದಲ್ಲಿ ಮಹಾ ಸಮೂಹದವರು ಹುರುಪಿನಿಂದ ಭಾಗವಹಿಸುತ್ತಿದ್ದಾರೆ?
17 ಭೂಮಿಯ ಸಂಬಂಧದಲ್ಲಿ ದೇವರ ವಾಗ್ದಾನಗಳ ಕುರಿತು, ಅನೇಕ ವರ್ಷಗಳಿಂದ ಯೆಹೋವನ ಜನರು ಮಾತಾಡಿದ್ದರು. ಯಾವ ಸಂಗತಿಯು 1920ರ ಕಾಲದಲ್ಲಿ ಸಂಭವಿಸುವುದೆಂದು ಅವರು ನಿರೀಕ್ಷಿಸಿದರೊ ಅದರಿಂದ, “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಸಾಯುವುದೇ ಇಲ್ಲ” ಎಂದು ಅವರು ಘೋಷಿಸಿದರು. ಆದರೆ ಆ ಸಮಯದಲ್ಲಿ ಜೀವಿತಕ್ಕಾಗಿದ್ದ ದೇವರ ಒದಗಿಸುವಿಕೆಗಳನ್ನು ಸ್ವೀಕರಿಸಿದವರಲ್ಲಿ ಲಕ್ಷಾಂತರ ಜನರು ಇರಲಿಲ್ಲ. ಸತ್ಯವನ್ನು ಸ್ವೀಕರಿಸಿದ ಹೆಚ್ಚಿನವರಲ್ಲಿ, ಪವಿತ್ರಾತ್ಮವು ಸ್ವರ್ಗೀಯ ಜೀವಿತದ ನಿರೀಕ್ಷೆಯನ್ನು ಹುಟ್ಟಿಸಿತು. ಆದರೂ ವಿಶೇಷವಾಗಿ 1935ರ ಬಳಿಕ, ಒಂದು ಗುರುತರವಾದ ಬದಲಾವಣೆಯಾಯಿತು. ದ ವಾಚ್ಟವರ್ ಪತ್ರಿಕೆಯು, ಭೂಮಿಯ ಮೇಲೆ ಅನಂತ ಜೀವನದ ನಿರೀಕ್ಷೆಯನ್ನು ಕಡೆಗಣಿಸಿತ್ತು ಎಂದೇನೂ ಅಲ್ಲ. ದಶಕಗಳಿಂದ ಯೆಹೋವನ ಸೇವಕರು ಇದರ ಕುರಿತು ಮಾತಾಡಿದ್ದರು ಮತ್ತು ಬೈಬಲಿನ ವರ್ಣನೆಯನ್ನು ಹೋಲುವವರಿಗಾಗಿ ಹುಡುಕುತ್ತಿದ್ದರು. ಆದರೆ ಯೆಹೋವನ ತಕ್ಕ ಸಮಯದಲ್ಲಿ, ಇವರು ತಮ್ಮನ್ನು ಪ್ರಕಟಿಸಿಕೊಳ್ಳುವಂತೆ ಆತನು ವಿಷಯಗಳನ್ನು ನಿರ್ದೇಶಿಸಿದನು.
18 ಲಭ್ಯವಿರುವ ದಾಖಲೆಗಳು ತೋರಿಸುವುದೇನೆಂದರೆ, ಅನೇಕ ವರ್ಷಗಳ ವರೆಗೆ, ಜ್ಞಾಪಕಾಚರಣೆಗೆ ಹಾಜರಾಗುವವರಲ್ಲಿ ಹೆಚ್ಚಿನವರು ಸಂಕೇತಗಳಲ್ಲಿ ಪಾಲ್ಗೊಂಡರು. ಆದರೆ 1935ರ ಬಳಿಕ, 25 ವರ್ಷಗಳೊಳಗೆ, ಕ್ರಿಸ್ತನ ಮರಣದ ವಾರ್ಷಿಕ ಜ್ಞಾಪಕಾಚರಣೆಯ ಹಾಜರಿಯು, ಪಾಲ್ಗೊಳ್ಳುತ್ತಿದ್ದವರ ಸಂಖ್ಯೆಯ ನೂರಕ್ಕಿಂತಲೂ ಹೆಚ್ಚು ಪಾಲು ಏರಿತ್ತು. ಈ ಇತರರು ಯಾರಾಗಿದ್ದರು? ಮಹಾ ಸಮೂಹದ ಭಾವೀ ಸದಸ್ಯರು. ಸ್ಪಷ್ಟವಾಗಿಗಿ, ಅವರನ್ನು ಒಟ್ಟುಗೂಡಿಸುವ ಮತ್ತು ಮುಂದಿರುವ ಮಹಾ ಸಂಕಟವನ್ನು ಪಾರಾಗಲಿಕ್ಕಾಗಿ ಅವರನ್ನು ಸಿದ್ಧಪಡಿಸುವ ಯೆಹೋವನ ಸಮಯವು ಬಂದಿತ್ತು. ಮುಂತಿಳಿಸಿದಂತೆ, ಅವರು ‘ಸಕಲ ಜನಾಂಗ, ಕುಲ, ಪ್ರಜೆ, ಭಾಷೆ’ ಗಳಿಂದ ಹೊರಬಂದಿದ್ದಾರೆ. (ಪ್ರಕಟನೆ 7:9) ಯೇಸು ಮುಂತಿಳಿಸಿದ ಕೆಲಸದಲ್ಲಿ ಅವರು ಹುರುಪಿನಿಂದ ಭಾಗವಹಿಸುತ್ತಿದ್ದಾರೆ. ಅವನಂದದ್ದು: “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:14.
[ಅಧ್ಯಯನ ಪ್ರಶ್ನೆಗಳು]
a ಯೋಹಾನ 10 ನೆಯ ಅಧ್ಯಾಯದ ಕುರಿಹಟ್ಟಿಗಳ ಒಂದು ಸವಿವರವಾದ, ಸದ್ಯೋಚಿತ ಚರ್ಚೆಗಾಗಿ, ಫೆಬ್ರವರಿ 15, 1984ರ ದ ವಾಚ್ಟವರ್, ಪುಟಗಳು 10-20, 31 ನೋಡಿರಿ.
b ದ ವಾಚ್ಟವರ್, ಆಗಸ್ಟ್ 1 ಮತ್ತು 15, 1935.
ನಿಮ್ಮ ಹೇಳಿಕೆಯು ಏನಾಗಿದೆ?
▫ ಪ್ರಕಟನೆ 7 ನೆಯ ಅಧ್ಯಾಯದಲ್ಲಿರುವ ದರ್ಶನವು ಏಕೆ ವಿಶೇಷ ಆಸಕ್ತಿಯದ್ದಾಗಿದೆ?
▫ ಯೋಹಾನ 10:16ರ ಬೇರೆ ಕುರಿಗಳು ಯೆಹೂದ್ಯೇತರ ಕ್ರೈಸ್ತರಿಗೆ ಸೀಮಿತವಾಗಿಲ್ಲ ಏಕೆ?
▫ ಬೇರೆ ಕುರಿಗಳ ಕುರಿತಾದ ಬೈಬಲ್ ವರ್ಣನೆಗೆ ಹೊಂದಿಕೊಳ್ಳುವವರ ಕುರಿತು ಯಾವ ವಿಷಯವು ಸತ್ಯವಾಗಿರಬೇಕು?
▫ ಕುರಿಗಳ ಮತ್ತು ಆಡುಗಳ ಸಾಮ್ಯವು ರಾಜ್ಯ ಅಧಿಕಾರಕ್ಕಾಗಿ ಗೌರವವನ್ನು ಹೇಗೆ ಅತ್ಯುಜಲ್ವಪಡಿಸುತ್ತದೆ?
▫ ಪ್ರಕಟನೆ 7:9ರ ಮಹಾ ಸಮೂಹವನ್ನು ಒಟ್ಟುಗೂಡಿಸುವ ಯೆಹೋವನ ಸಮಯವು ಯಾವಾಗ ಬಂದಿತೆಂದು ಯಾವುದು ತೋರಿಸುತ್ತದೆ?