ಜೀವಿಸಿರುವವರಲ್ಲಿ ಅತ್ಯಂತ ವಹಾನ್ ಪುರುಷ
“ನೀನು ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು.”—ಮತ್ತಾಯ 16:16.
1, 2. (ಎ) ಒಬ್ಬ ಮನುಷ್ಯನ ದೊಡ್ಡತನವು ಹೇಗೆ ನಿರ್ಧರಿಸಲ್ಪಡಬಹುದು? (ಬಿ) ಇತಿಹಾಸದಲ್ಲಿ ಯಾವ ಪುರುಷರನ್ನು ಮಹಾನ್ ಎಂದು ಕರೆಯಲಾಗಿದೆ ಮತ್ತು ಏಕೆ?
ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನು ಯಾರೆಂದು ನೀವೇಣಿಸುತ್ತೀರಿ? ಮನುಷ್ಯನೊಬ್ಬನ ದೊಡ್ಡತನವನ್ನು ನೀವು ಹೇಗೆ ಅಳೆಯಬಲ್ಲಿರಿ? ಅವನ ಮಿಲಿಟರಿ ಪ್ರತಿಭೆಯಿಂದಲೇ? ಅವನ ಶ್ರೇಷ್ಠ ಮಾನಸಿಕ ಸಾಮರ್ಥ್ಯಗಳಿಂದಲೇ? ಆತನ ದೈಹಿಕ ಬಲದಿಂದಲೇ?
2 ಮಹಾ ಕೋರೆಷ, ಮಹಾ ಅಲೆಗ್ಸಾಂಡರ್ ಮತ್ತು ತನ್ನ ಸ್ವಂತ ಜೀವಮಾನದಲ್ಲೇ “ಮಹಾನ್” ಎಂದು ಕರೆಯಲ್ಪಟ್ಟಿದ್ದ ಷಾರ್ಲ್ಮೆನ್ ಮುಂತಾದ ಹಲವಾರು ಅಧಿಪತಿಗಳು ಮಹಾನ್ ವ್ಯಕ್ತಿಗಳಾಗಿ ಕರೆಯಲ್ಪಟ್ಟಿದ್ದಾರೆ. ಅವರ ದಿಗಿಲುಗೊಳಿಸುವ ಸಾನಿಧ್ಯದಿಂದಾಗಿ ಇಂಥ ಪುರುಷರು ತಾವು ಯಾರ ಮೇಲೆ ದೊರೆತನ ನಡಿಸಿದ್ದರೋ ಅವರ ಮೇಲೆ ಮಹಾ ಪ್ರಭಾವವನ್ನು ಬೀರಿದ್ದರು.
3. (ಎ) ಒಬ್ಬ ಮನುಷ್ಯನ ದೊಡ್ಡತನವನ್ನು ಅಳೆಯುವ ಪರೀಕ್ಷಾ ಪ್ರಯೋಗ ಯಾವುದು? (ಬಿ) ಅಂಥ ಪರೀಕ್ಷಾ ಪ್ರಯೋಗದಲ್ಲಿ, ಜೀವಿಸಿರುವವರಲ್ಲಿ ಅತ್ಯಂತ ಮಹಾ ಪುರುಷನು ಯಾರು?
3 ರಸಕರವಾಗಿ ಇತಿಹಾಸಕಾರ ಎಚ್.ಜಿ. ವೆಲ್ಸ್, ಒಬ್ಬ ಮನುಷ್ಯನ ದೊಡ್ಡತನವನ್ನು ಅಳೆಯುವ ತನ್ನ ಪರೀಕ್ಷಾ ಪ್ರಮಾಣವನ್ನು ವಿವರಿಸಿದ್ದಾರೆ. ಸುಮಾರು 50 ವರ್ಷಗಳಿಗೆ ಮುಂಚಿತವಾಗಿ ಅವರು ಬರೆದದ್ದು: “ಒಬ್ಬ ವ್ಯಕ್ತಿಯ ದೊಡ್ಡತನಕ್ಕೆ ಚರಿತ್ರೆಗಾರನ ಪರೀಕ್ಷಾ ಪ್ರಮಾಣವು, ‘ಅವನು ಏನನ್ನು ಬೆಳೆಯುವಂತೆ ಬಿಟ್ಟುಹೋಗುತ್ತಾನೆ? ಅವನ ನಂತರವೂ ಪಟ್ಟು ಹಿಡಿದ ಹುರುಪಿನಿಂದ ಆ ಹೊಸ ಧಾರೆಯಲ್ಲಿ ಆಲೋಚಿಸುವಂತೆ ಅವನು ಮನುಷ್ಯರನ್ನು ತೊಡಗಿಸಿದ್ದಾನೊ?’ ಈ ಪರೀಕ್ಷೆಯಲ್ಲಿ,” ವೆಲ್ಸ್ ಕೊನೆಗೊಳಿಸಿದ್ದು, “ಯೇಸು ಮೊದಲಿಗನಾಗಿ ನಿಲ್ಲುತ್ತಾನೆ.” ನೆಪೋಲಿಯನ್ ಬೋನಪಾರ್ಟ್ ಸಹಾ ಗಮನಿಸಿದ್ದು: “ಅವನ ಶಾರೀರಿಕ ದೃಶ್ಯ ಹಾಜರಿ ಇಲ್ಲದೇ, ಯೇಸು ಕ್ರಿಸ್ತನು ಅವನ ಪ್ರಜೆಗಳ ಮೇಲೆ ಪ್ರಭಾವ ಬೀರಿದ್ದನು ಮತ್ತು ಆಧಿಪತ್ಯ ನಡಿಸಿದ್ದನು.”
4. (ಎ) ಯೇಸುವಿನ ಕುರಿತು ಯಾವ ಪರಸ್ಪರ ಭಿನ್ನ ವೀಕ್ಷಣೆಗಳು ಅಸ್ತಿತ್ವದಲ್ಲಿವೆ? (ಬಿ) ಒಬ್ಬ ಅಕ್ರೈಸ್ತ ಇತಿಹಾಸಗಾರನು ಯೇಸುವಿಗೆ ಇತಿಹಾಸದಲ್ಲಿ ಯಾವ ಸ್ಥಾನವನ್ನು ಕೊಡುತ್ತಾನೆ?
4 ಆದರೂ, ಯೇಸು ಒಬ್ಬ ಚಾರಿತ್ರಿಕ ವ್ಯಕ್ತಿಯಲ್ಲ, ಕಲ್ಪನಾ ವ್ಯಕ್ತಿಯೆಂದು ಕೆಲವರು ಆಕ್ಷೇಪವೆತ್ತಿರುತ್ತಾರೆ. ಬೇರೊಂದು ಅತಿರೇಕದಲ್ಲಿ, ದೇವರು ಯೇಸುವಾಗಿ ಭೂಮಿಗೆ ಬಂದನು ಎಂದು ಹೇಳುತ್ತಾ ಅನೇಕರು ಯೇಸುವನ್ನು ದೇವರಾಗಿ ಪೂಜಿಸಿದ್ದಾರೆ. ಆದರೂ, ತನ್ನ ತೀರ್ಮಾನಗಳನ್ನು ಯೇಸುವಿನ ಮಾನವ ಅಸ್ತಿತ್ವದ ಕುರಿತಾದ ಚಾರಿತ್ರಿಕ ರುಜುವಾತಿನ ಮೇಲೆ ಮಾತ್ರವೇ ಆಧಾರಿಸಿ, ವೆಲ್ಸ್ ಬರೆದದ್ದು: “ಯಾವುದೇ ದೇವತಾಶಾಸ್ತ್ರ ದುರುಭಿಮಾನಗಳಿಲ್ಲದ ಒಬ್ಬ ಇತಿಹಾಸಕಾರನು, ನಜರೇತಿನ ಬಡ ಶಿಕ್ಷಕನೊಬ್ಬನಿಗೆ ಮುಖ್ಯ ಸ್ಥಾನವನ್ನು ಕೊಡದ ಹೊರತು ಮಾನವ ಪ್ರಗತಿಯನ್ನು ಪ್ರಾಮಾಣಿಕತೆಯಿಂದ ತಾನು ಚಿತ್ರಿಸಲಾರೆನೆಂದು ಕಂಡದ್ದು ರಸಕರವೂ ಗಮನಾರ್ಹವೂ ಆಗಿದೆ. . . . ತನ್ನನ್ನು ಕ್ರೈಸ್ತನೆಂದು ಸಹಾ ಕರೆಸಿಕೊಳ್ಳದ ನನ್ನಂಥ ಒಬ್ಬ ಇತಿಹಾಸಕಾರನು, ಮಾನವ ಪ್ರಗತಿಯ ಕುರಿತಾದ ಚಿತ್ರವು ಈ ಅತ್ಯಂತ ಗಮನಾರ್ಹ ಪುರುಷನ ಜೀವನ ಮತ್ತು ಗುಣಲಕ್ಷಣಗಳ ಸುತ್ತಲೂ ತಡೆಯಲಾಗದ ರೀತಿಯಲ್ಲಿ ಕೇಂದ್ರೀಕರಿಸಿರುವುದಾಗಿ ಕಾಣುತ್ತಾನೆ.”
ಯೇಸು ನಿಜವಾಗಿ ಜೀವಿಸಿದ್ದನೋ?
5, 6. ಚರಿತ್ರೆಗಾರರಾದ ಎಚ್.ಜಿ. ವೆಲ್ಸ್ ಮತ್ತು ವಿಲ್ ಡುರಾಂಟ್ ಯೇಸುವಿನ ಐತಿಹಾಸಿಕತ್ವದ ಕುರಿತು ಏನು ಹೇಳಿದ್ದಾರೆ?
5 ಆದರೆ, ಯೇಸು ನಿಜವಾಗಿ ಜೀವಿಸಿರಲಿಲ್ಲ, ಅವನು ವಾಸ್ತವವಾಗಿ ಒಬ್ಬ ಕಲ್ಪನಾ ವ್ಯಕ್ತಿ, ಪ್ರಥಮ-ಶತಕದ ಮನುಷ್ಯರ ಒಂದು ಕಲ್ಪಿತ ಕಥೆ ಎಂದು ಯಾರಾದರೂ ನಿಮಗೆ ಹೇಳಿದರೆ ಆಗೇನು? ಈ ಆರೋಪವನ್ನು ನೀವು ಹೇಗೆ ಉತ್ತರಿಸುವಿರಿ? “[ಯೇಸುವಿನ] ಕುರಿತು ನಾವು ತಿಳಿಯಬಯಸುವಷ್ಟು ವಿಷಯವು ನಮಗೆ ಗೊತ್ತಿಲ್ಲ” ಎಂದು ವೆಲ್ಸ್ ಅಂಗೀಕರಿಸುವುದಾದರೂ, ಅವರು ಅವಲೋಕಿಸಿದ್ದು: “ನಾಲ್ಕು ಸುವಾರ್ತೆಗಳು . . . ಒಂದು ಅತ್ಯಂತ ನಿಶ್ಚಿತ ವ್ಯಕ್ತಿತ್ವ ಚಿತ್ರವನ್ನು ನಮಗೆ ಕೊಡುವುದರಲ್ಲಿ ಸಹಮತದಿಂದಿವೆ; ಅವು ಒಂದು ವಾಸ್ತವಿಕತೆಯ ನಿಶ್ಚಿತಾಭಿಪ್ರಾಯವನ್ನು ಕೊಡುತ್ತವೆ. ಸುವಾರ್ತೆಯ ಕಥೆಗಳ ಸಾರಾಂಶವನ್ನು ನಿಜತ್ವಗಳೆಂದು ಸ್ವೀಕರಿಸುವುದಕ್ಕಿಂತ—ಅವನು ಜೀವಿಸಲೇ ಇಲ್ಲ, ಅವನ ಜೀವನ ವೃತ್ತಾಂತಗಳು ಕಲ್ಪಿತ ಕಥೆಗಳು ಎಂದು ನೆನಸುವುದು ಇತಿಹಾಸಕಾರರಿಗೆ ಹೆಚ್ಚು ಕಷ್ಟ ಮತ್ತು ಎಷ್ಟೋ ಹೆಚ್ಚು ಸಮಸ್ಯೆಗಳನ್ನು ಎಬ್ಬಿಸುತ್ತವೆ.”
6 ಮಾನ್ಯ ಚರಿತ್ರೆಗಾರ ವಿಲ್ ಡುರಾಂಟ್ ಇದೇ ರೀತಿಯಲ್ಲಿ ವಿವೇಚನೆ ಮಾಡುತ್ತಾ ವಿವರಿಸಿದ್ದು: “ಅಷ್ಟು ಬಲಶಾಲಿ ಮತ್ತು ಚಿತ್ತಾಕರ್ಷಕ ವ್ಯಕ್ತಿತ್ವವನ್ನು, ನೈತಿಕತೆಯಲ್ಲಿ ಅಷ್ಟು ಉನ್ನತವಾದ ಮತ್ತು ಮಾನವ ಸಹೋದರತ್ವದ ಅಷ್ಟೊಂದು ಪ್ರೇರಕ ನೋಟವನ್ನು ಒಂದು ಸಂತತಿಯಲ್ಲಿ [ತಮ್ಮನ್ನು ಕ್ರೈಸ್ತರೆಂದು ಕರೆದುಕೊಂಡ] ಕೇವಲ ಕೆಲವೇ ಸಾಮಾನ್ಯ ಜನರು ರಚಿಸುವುದು ತಾನೇ, ಸುವಾರ್ತೆಗಳಲ್ಲಿ ದಾಖಲೆಯಾದ ಯಾವುದೇ ಅದ್ಭುತಕ್ಕಿಂತ ಒಂದು ನಂಬಲಸಾಧ್ಯವಾದ ಅದ್ಭುತವಾಗುವುದು.”
7, 8. ಯೇಸು ಎಷ್ಟು ಮಹತ್ತಾಗಿ ಮಾನವ ಇತಿಹಾಸದ ಮೇಲೆ ಪ್ರಭಾವ ಬೀರಿದನು?
7 ಹೀಗೆ, ಅಂಥ ಒಬ್ಬ ಸಂದೇಹವಾದಿಯೊಂದಿಗೆ ನೀವು ಈ ರೀತಿ ವಿವೇಚಿಸ ಸಾಧ್ಯವಿದೆ: ಒಬ್ಬ ಕಾಲ್ಪನಿಕ ವ್ಯಕ್ತಿ—ನಿಜವಾಗಿ ಎಂದೂ ಜೀವಿಸದ ವ್ಯಕ್ತಿಯು—ಮಾನವ ಇತಿಹಾಸವನ್ನು ಅಷ್ಟು ಗಮನಾರ್ಹವಾಗಿ ಪ್ರಭಾವಿಸುವುದು ಹೇಗೆ ಸಾಧ್ಯ? ಸಂಶೋಧನೆಯ ಕೃತಿಯಾದ ದ ಹಿಸ್ಟೊರಿಯನ್ಸ್ ಹಿಸ್ಟರಿ ಆಫ್ ದ ವರ್ಲ್ಡ್ ಅವಲೋಕಿಸಿದ್ದು: “ಯೇಸುವಿನ ಚಟುವಟಿಕೆಗಳ ಚಾರಿತ್ರಿಕ ಫಲಿತಾಂಶವು, ಕಟ್ಟುನಿಟ್ಟಾದ ಐಹಿಕ ದೃಷ್ಟಿಕೋನದಲ್ಲಿ ಕೂಡ, ಇತಿಹಾಸದ ಬೇರೆ ಯಾವುದೇ ವ್ಯಕ್ತಿಯ ಕೃತ್ಯಗಳಿಗಿಂತ ಹೆಚ್ಚು ಪರಿಣಾಮಕಾರಿ. ಲೋಕದ ಪ್ರಮುಖ ನಾಗರಿಕತೆಗಳಿಂದ ಅಂಗೀಕೃತವಾಗಿರುವಂತೆ, ಒಂದು ಹೊಸ ಶಕವು ಅವನ ಜನನದಿಂದ ಆರಂಭಗೊಂಡಿತು. ಅದರ ಕುರಿತು ಯೋಚಿಸಿರಿ. ಇಂದು ಸಹಾ ಕೆಲವು ಕ್ಯಾಲೆಂಡರುಗಳು ಯೇಸು ಹುಟ್ಟಿದ್ದನೆಂದು ನೆನಸುವ ವರ್ಷದ ಮೇಲೆ ಆಧಾರಿತವಾಗಿವೆ. “ಕ್ರಿ.ಪೂ. (B.C) ಅಥವಾ ಕ್ರಿಸ್ತ ಪೂರ್ವ ಎಂದು ಆ ವರ್ಷಕ್ಕಿಂತ ಮೊದಲಿನ ತಾರೀಕುಗಳು ಪಟ್ಟಿಮಾಡಲ್ಪಟ್ಟಿವೆ” ಎಂದು ದ ವರ್ಲ್ಡ್ ಎನ್ಸೈಕ್ಲೊಪೀಡಿಯ ವಿವರಿಸುತ್ತದೆ. “ಆ ವರ್ಷದ ಅನಂತರದ ತಾರೀಕುಗಳು ಕ್ರಿ.ಶ. ಅಥವಾ ಆ್ಯನೊ ಡಾಮಿನೈ (ನಮ್ಮ ಸ್ವಾಮಿಯ ವರ್ಷದಲ್ಲಿ) ಎಂದು ಪಟ್ಟಿಮಾಡಲ್ಪಟ್ಟಿವೆ.”
8 ಆತನ ಕ್ರಿಯಾತ್ಮಕ ಬೋಧನೆಗಳಿಂದ ಮತ್ತು ಅವುಗಳ ಹೊಂದಿಕೆಯಲ್ಲಿ ಅವನು ತನ್ನ ಜೀವಿತವನ್ನು ಜೀವಿಸಿದ್ದ ರೀತಿಯಿಂದ, ಯೇಸು ಸುಮಾರು ಎರಡು ಸಾವಿರ ವರ್ಷಗಳಿಂದ ಅಗಣಿತ ಜನಸಮೂಹಗಳ ಜೀವಿತಗಳನ್ನು ಪ್ರಬಲವಾಗಿ ಪ್ರಭಾವಿಸಿರುತ್ತಾನೆ. ಒಬ್ಬ ಲೇಖಕನು ಅದನ್ನು ಸರಿಯಾಗಿ ವ್ಯಕ್ತಪಡಿಸಿದ್ದು: “ಪಥಚಲನೆಮಾಡಿದ ಎಲ್ಲಾ ಸೇನೆಗಳು, ಮತ್ತು ಕಟ್ಟಲ್ಪಟ್ಟ ಎಲ್ಲಾ ನೌಕಾಶಕ್ತಿಗಳು ಮತ್ತು ಆಸೀನವಾದ ಎಲ್ಲಾ ಪಾರ್ಲಿಮೆಂಟುಗಳು, ಮತ್ತು ಆಳಿದ ಎಲ್ಲಾ ಅರಸರುಗಳು, ಇವೆಲ್ಲವುಗಳನ್ನು ಒಟ್ಟಿಗೆ ಕೂಡಿಸಿದರೆ, ಈ ಭೂಮಿಯ ಮೇಲೆ ಇದ್ದ ಮನುಷ್ಯನ ಜೀವಿತವನ್ನು ಅಷ್ಟೊಂದು ಬಲವತ್ತಾಗಿ ಪ್ರಭಾವಿಸಿರುವುದಿಲ್ಲ.” ಆದರೆ ಠೀಕಾಕಾರರು ಹೇಳುವುದು: ‘ಯೇಸುವಿನ ಕುರಿತು ನಮಗೆ ನಿಜವಾಗಿ ತಿಳಿದಿರುವದೆಲ್ಲವೂ ಬೈಬಲಿನಲ್ಲಿ ಹೇಳಲ್ಪಟ್ಟದ್ದಾಗಿರುತ್ತದೆ. ಅವನ ಕುರಿತು ಬೇರೆ ಯಾವುವೇ ಸಮಕಾಲೀನ ದಾಖಲೆಗಳು ಅಸ್ತಿತ್ವದಲ್ಲಿಲ್ಲ.’ ಆದರೂ, ಇದು ಸತ್ಯವೋ?
9, 10. (ಎ) ಆರಂಭದ ಐಹಿಕ ಇತಿಹಾಸಗಾರರು ಮತ್ತು ಲೇಖಕರು ಯೇಸುವಿನ ಕುರಿತು ಹೇಳಿದ್ದೇನು? (ಬಿ) ಆರಂಭದ ಇತಿಹಾಸಗಾರರ ಸಾಕ್ಷಿಯಲ್ಲಿ ಆಧಾರಿಸಿ ಒಂದು ಮಾನ್ಯ ಎನ್ಸೈಕ್ಲೊಪೀಡಿಯ ತೀರ್ಮಾನಿಸಿದ್ದೇನು?
9 ಆರಂಭದ ಐಹಿಕ ಇತಿಹಾಸಕಾರರಿಂದ ಯೇಸು ಕ್ರಿಸ್ತನ ಕುರಿತಾದ ಪರಾಮರ್ಶೆಗಳು ಕೊಂಚವೇ ಇದ್ದರೂ, ಅಂಥ ಪರಾಮರ್ಶೆಗಳು ಅಸ್ತಿತ್ವದಲ್ಲಿವೆ ಎಂಬುದು ನಿಜ. ಕೊರ್ನೇಲಿಯಸ್ ಟೆಸಿಟಸ್, ಒಬ್ಬ ಮೊದಲ ಶತಕದ ಗೌರವಾನಿತ್ವ ರೋಮನ್ ಇತಿಹಾಸಕಾರನು ಬರೆದದ್ದೇನಂದರೆ ರೋಮನ್ ಸಾಮ್ರಾಟ ನೀರೋ, ‘ರೋಮನ್ನು ಸುಟ್ಟು ಹಾಕಿದ ಅಪರಾಧವನ್ನು ಕ್ರೈಸ್ತರ ಮೇಲೆ ಹೊರಿಸಿದ್ದನು’ ಎಂದು ಬರೆದಿದ್ದಾನೆ, ಅನಂತರ ಟೆಸಿಟಸ್ ವಿವರಿಸಿದ್ದು: “ಆ ಹೆಸರು [ಕ್ರೈಸ್ತರು] ಕ್ರಿಸ್ತನು ಎಂಬುದರಿಂದ ಬಂದಿರುತ್ತದೆ, ಇವನನ್ನು ತಿಬೇರಿಯನ ಆಳಿಕ್ವೆಯ ಸಮಯದಲ್ಲಿ ದೇಶಾಧಿಪತಿಯಾಗಿದ್ದ ಪೊಂತ್ಯ ಪಿಲಾತನು ಕೊಲ್ಲಿಸಿದ್ದನು.” ಸ್ಯೂಟೋನಿಯಸ್ ಮತ್ತು ಪಿನ್ಲೀ ದ ಯಂಗರ್, ಆ ಸಮಯದ ಇತರ ರೋಮನ್ ಲೇಖಕರು ಕೂಡಾ ಕ್ರಿಸ್ತನ ಕುರಿತು ಉಲ್ಲೇಖಿಸಿರುತ್ತಾರೆ. ಇದಕ್ಕೆ ಕೂಡಿಸಿ, ಮೊದಲನೆಯ ಶತಕದ ಯೆಹೂದಿ ಇತಿಹಾಸಕಾರನಾದ ಫೆವ್ಲಿಯಸ್ ಜೊಸೀಫಸ್ ಎಂಟಿಕಿಟ್ವಿಸ್ ಆಫ್ ಜ್ಯೂಸ್ನಲ್ಲಿ ಕ್ರೈಸ್ತ ಶಿಷ್ಯನಾದ ಯಾಕೋಬನ ಮರಣದ ಕುರಿತು ಬರೆದನು. ಯಾಕೋಬನು “ಕ್ರಿಸ್ತನೆಂದು ಕರೆಯಲ್ಪಡುತ್ತಿದ್ದ ಯೇಸುವಿನ ಸಹೋದರನು” ಎಂದು ಜೊಸೀಫಸನು ವಿವರಣೆಯಲ್ಲಿ ಹೇಳಿದ್ದಾನೆ.
10 ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕ ಈ ರೀತಿ ಕೊನೆಗೊಳಿಸುತ್ತದೆ: “ಯೇಸುವಿನ ಐತಿಹಾಸಿಕತ್ವದ ಕುರಿತು ಕ್ರೈಸ್ತತ್ವದ ವಿರೋಧಿಗಳು ಕೂಡ ಪ್ರಾಚೀನ ಕಾಲಗಳಲ್ಲಿ ಎಂದೂ ಸಂದೇಹ ಪಟ್ಟಿರಲಿಲ್ಲ ಎಂದು ಈ ಸ್ವತಂತ್ರವಾದ ದಾಖಲೆಗಳು ರುಜುಪಡಿಸುತ್ತವೆ. 18 ನೆಯ ಶತಮಾನದ ಅಂತಿಮ ಭಾಗದಲ್ಲಿ, 19ನೆಯ ಶತಮಾನದಲ್ಲಿ ಮತ್ತು 20ನೆಯ ಶತಕದ ಆರಂಭದಲ್ಲಿ, ಮೊದಲ ಬಾರಿ ಮತ್ತು ಸಾಕಷ್ಟು ನೆಲೆಯಿಲ್ಲದ ಆಧಾರದ ಮೇಲೆ ಇದನ್ನು ವಾದಿಸಲಾಯಿತು.”
ಯೇಸು ನಿಜವಾಗಿ ಯಾರಾಗಿದ್ದನು?
11. (ಎ) ಮೂಲತಃ ಯೇಸುವಿನ ಕುರಿತಾದ ಐತಿಹಾಸಿಕ ಸಮಾಚಾರದ ಒಂದೇ ಮೂಲವು ಯಾವುದು? (ಬಿ) ಆತನ ಪರಿಚಯದ ಕುರಿತು ಯೇಸುವಿನ ಸ್ವಂತ ಹಿಂಬಾಲಕರಿಗೆ ಯಾವ ಪ್ರಶ್ನೆಗಳಿದ್ದವು?
11 ಆದಾಗ್ಯೂ, ಮೂಲತಃ, ಯೇಸುವಿನ ಕುರಿತಾಗಿ ಪ್ರಸ್ತುತ ತಿಳಿದಿರುವುದೆಲ್ಲವೂ ಆತನ ಮೊದಲನೆಯ-ಶತಕದ ಹಿಂಬಾಲಕರಿಂದ ದಾಖಲೆ ಮಾಡಲ್ಪಟ್ಟಿತ್ತು. ಅವರ ವರದಿಗಳು ಸುವಾರ್ತೆಗಳಲ್ಲಿ—ಅವನ ಇಬ್ಬರು ಅಪೊಸ್ತಲರಾದ ಮತ್ತಾಯ ಮತ್ತು ಯೋಹಾನನಿಂದ ಮತ್ತು ಅವನ ಇಬ್ಬರು ಶಿಷ್ಯರಾದ ಮಾರ್ಕ ಮತ್ತು ಲೂಕರಿಂದ ಬರೆಯಲ್ಪಟ್ಟ ಬೈಬಲ್ ಪುಸ್ತಕಗಳು—ಸಂರಕ್ಷಿಸಲ್ಪಟ್ಟಿವೆ. ಯೇಸುವಿನ ಪರಿಚಯದ ಕುರಿತು ಈ ದಾಖಲೆಗಳು ಏನನ್ನು ಹೇಳುತ್ತವೆ? ಅವನು ನಿಜವಾಗಿಯೂ ಯಾರಾಗಿದ್ದನು? ಯೇಸುವಿನ ಮೊದಲನೆಯ ಶತಕದ ಸಹವಾಸಿಗಳು ಈ ಪ್ರಶ್ನೆಯ ಮೇಲೆ ಚಿಂತನೆ ಮಾಡಿದ್ದರು. ಬಿರುಗಾಳಿ ಎದ್ದು ಅಲ್ಲೋಲಕಲ್ಲೋಲಗೊಂಡ ಸಮುದ್ರವನ್ನು ಯೇಸು ಗದರಿಸಿದ ಮೂಲಕ ಅದ್ಭುತಕರವಾಗಿ ಶಾಂತಗೊಳಿಸಿದ್ದನ್ನು ಅವರು ನೋಡಿದಾಗ, ಅವರು ಆಶ್ಚರ್ಯಚಕಿತರಾದರು: “ಈತನು ಯಾರಿರಬಹುದು?” ಎಂದರು. ಅನಂತರ, ಇನ್ನೊಂದು ಸಂದರ್ಭದಲ್ಲಿ, ಯೇಸು ತನ್ನ ಅಪೊಸ್ತಲರಿಗೆ ಕೇಳಿದ್ದು: “ಆದರೆ ನೀವು ನನ್ನನ್ನು ಯಾರನ್ನುತ್ತೀರಿ?”—ಮಾರ್ಕ 4:41; ಮತ್ತಾಯ 16:15.
12. ಯೇಸು ದೇವರಲ್ಲ ಎಂದು ನಮಗೆ ತಿಳಿದಿರುವುದು ಹೇಗೆ?
12 ನಿಮಗೆ ಆ ಪ್ರಶ್ನೆಯನ್ನು ಕೇಳಿದ್ದಾದರೆ, ನೀವು ಹೇಗೆ ಉತ್ತರಿಸುವಿರಿ? ಯೇಸು ನಿಜವಾಗಿಯೂ ಯಾರಾಗಿದ್ದನು? ಅವನು ಮನುಷ್ಯ ರೂಪಧಾರಿಯಾಗಿದ್ದ ಸರ್ವಶಕ್ತನಾದ ದೇವರು, ದೇವರ ವ್ಯಕ್ತೀಕರಣ ಎಂದು ಕ್ರೈಸ್ತ ಪ್ರಪಂಚದ ಅನೇಕರು ಹೇಳುವರು ಎಂಬುದು ನಿಶ್ಚಯ. ಆದರೂ, ಆತನ ವೈಯಕ್ತಿಕ ಸಹವಾಸಿಗಳು ಯೇಸುವನ್ನು ದೇವರೆಂದು ಎಂದೂ ನಂಬಿರಲಿಲ್ಲ. ಅಪೊಸ್ತಲ ಪೇತ್ರನು ಅವನನ್ನು “ನೀನು ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು” ಎಂದು ಕರೆದನು. (ಮತ್ತಾಯ 16:16) ಮತ್ತು ನೀವೆಷ್ಟೇ ಹುಡುಕಿರಿ, ಯೇಸು ತನ್ನನ್ನು ದೇವರೆಂದು ವಾದಿಸಿದ್ದನ್ನು ನೀವೆಲ್ಲಿಯೂ ಓದಲಾರಿರಿ. ಬದಲಾಗಿ ಅವನು ಯೆಹೂದ್ಯರಿಗೆ, ತಾನು “ದೇವರ ಮಗನ,” ದೇವರು ಅಲ್ಲ ಎಂದು ತಿಳಿಸಿದ್ದನು.—ಯೋಹಾನ 10:36.
13. ಯೇಸು ಬೇರೆ ಎಲ್ಲಾ ಮನುಷ್ಯರಿಗಿಂತ ಬೇರೆಯಾಗಿದ್ದದ್ದು ಹೇಗೆ?
13 ಯೇಸು ಬಿರುಗಾಳಿಯಲ್ಲಿ ಸಮುದ್ರದ ಮೇಲೆ ನಡೆದಾಗ, ಅವನು ಬೇರೆ ಯಾವನೇ ಒಬ್ಬ ಮನುಷ್ಯನಂಥ ಒಬ್ಬ ಮನುಷ್ಯನಲ್ಲವೆಂಬ ನಿಜತ್ವದಿಂದ ಪ್ರಭಾವಿತರಾದರು. (ಯೋಹಾನ 6:18-21) ಅವನು ಒಬ್ಬ ಅತಿ ವಿಶೇಷ ವ್ಯಕ್ತಿಯಾಗಿದ್ದನು. ಇದು ಯಾಕಂದರೆ ಅವನು ಮುಂಚೆ ಪರಲೋಕದಲ್ಲಿ ದೇವರೊಂದಿಗೆ ಒಬ್ಬ ಆತ್ಮ ವ್ಯಕ್ತಿಯಾಗಿ ಜೀವಿಸಿದ್ದ ಕಾರಣದಿಂದಲೇ, ಹೌದು, ಬೈಬಲ್ನಲ್ಲಿ ಪ್ರಧಾನ ದೇವದೂತನಾಗಿ ಗುರುತಿಸಲ್ಪಟ್ಟ ಒಬ್ಬ ದೂತನು ಅವನಾಗಿದ್ದನು. (1 ಥೆಸಲೊನೀಕ 4:16; ಯೂದ 9) ದೇವರು ಅವನನ್ನು ಬೇರೆಲ್ಲಾ ವಿಷಯಗಳನ್ನು ನಿರ್ಮಿಸುವ ಮುಂಚೆ ಸೃಷ್ಟಿಸಿದ್ದನು. (ಕೊಲೊಸ್ಸೆ 1:15) ಹೀಗೆ ಅಗಣಿತ ಕಾಲದ ತನಕ, ಭೌತಿಕ ವಿಶ್ವವು ಸಹ ಸೃಷ್ಟಿಸಲ್ಪಡುವ ಮುಂಚೆ, ಯೇಸು ಮಹಾ ನಿರ್ಮಾಣಿಕನಾದ ತನ್ನ ತಂದೆ ಯೆಹೋವ ದೇವರೊಂದಿಗೆ ಅತ್ಯಾಪ್ತ ಸಹವಾಸದಲ್ಲಿ ಆನಂದಿಸಿದ್ದನು.—ಜ್ಞಾನೋಕ್ತಿ 8:22, 27-31: ಪ್ರಸಂಗಿ 12:1.
14. ಯೇಸು ಮನುಷ್ಯನಾಗಿ ಪರಿಣಮಿಸಿದ್ದು ಹೇಗೆ?
14 ಅನಂತರ, ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ದೇವರು ತನ್ನ ಮಗನ ಜೀವವನ್ನು ಒಬ್ಬಾಕೆ ಸ್ತ್ರೀಯ ಗರ್ಭಕ್ಕೆ ಸ್ಥಳಾಂತರ ಮಾಡಿದನು. ಹೀಗೆ ಸ್ತ್ರೀಯ ಮೂಲಕ ಸಾಮಾನ್ಯ ರೀತಿಯಲ್ಲಿ ಜನಿಸಲ್ಪಟ್ಟ ಯೇಸುವು ದೇವರ ಮಾನವ ಪುತ್ರನಾದನು. (ಗಲಾತ್ಯ 4:4) ಗರ್ಭದಲ್ಲಿ ಯೇಸು ರೂಪುಗೊಳ್ಳುತ್ತಿದ್ದಾಗ ಮತ್ತು ಬಾಲಕನೋಪಾದಿ ಬೆಳೆಯುತ್ತಿದ್ದಾಗ, ಅವನ ಐಹಿಕ ಹೆತ್ತವರಾಗಿರಲು ಯಾರನ್ನು ದೇವರು ಆರಿಸಿದ್ದನೋ ಅವರ ಮೇಲೆ ಆತನು ಆತುಕೊಂಡಿದ್ದನು. ಕ್ರಮೇಣ, ಅವನು ಯೌವನಕ್ಕೆ ಕಾಲಿಟ್ಟನು ಮತ್ತು ಪರಲೋಕದಲ್ಲಿ ದೇವರೊಂದಿಗೆ ಅವನ ಮೊದಲಿನ ಸಹವಾಸದ ಪೂರ್ಣ ನೆನಪು ಅವನಿಗೆ ಕೊಡಲ್ಪಟ್ಟಿತ್ತು. ಅವನ ದೀಕ್ಷಾಸ್ನಾನದ ಸಮಯ ‘ಆತನಿಗೆ ಆಕಾಶವು ತೆರೆದಾಗ’ ಇದು ಸಂಭವಿಸಿತ್ತು.—ಮತ್ತಾಯ 3:16; ಯೋಹಾನ 8:23; 17:5.
15. ಭೂಮಿಯಲ್ಲಿ ಜೀವಿಸಿದ್ದಾಗ ಯೇಸು ಪೂರ್ಣ ಮನುಷ್ಯನಾಗಿದ್ದನೆಂದು ನಮಗೆ ತಿಳಿದಿರುವುದು ಹೇಗೆ?
15 ಯೇಸು ನಿಜವಾಗಿಯೂ ಒಬ್ಬ ಅಸದೃಶ್ಯ ಪುರುಷನು. ಅದರೂ ಅವನು, ದೇವರು ಮೂಲದಲ್ಲಿ ಉಂಟುಮಾಡಿದ ಮತ್ತು ಏದೆನ್ ತೋಟದಲ್ಲಿ ಇಟ್ಟ ಆದಾಮನಿಗೆ ಸರಿಸಮಾನನಾಗಿದ್ದನು. ಅಪೊಸ್ತಲ ಪೌಲನು ವಿವರಿಸಿದ್ದು: ‘ಮೊದಲನೆಯ ಮನುಷ್ಯ ಆದಾಮನು ಬದುಕುವ ಪ್ರಾಣಿಯಾದನು. ಕಡೇ ಆದಾಮನೋ ಬದುಕಿಸುವ ಆತ್ಮನು.” ಯೇಸು “ಕಡೇ ಆದಾಮನು” ಎಂದು ಕರೆಯಲ್ಪಟ್ಟಿದ್ದಾನೆ. ಯಾಕಂದರೆ ಮೂಲದ ಆದಾಮನಂತೆ ಅವನು ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದನು. ಆದರೆ ಯೇಸು ಸತ್ತ ಬಳಿಕ, ಅವನನ್ನು ಪುನರುತ್ಥಾನಗೊಳಿಸಲಾಯಿತು ಮತ್ತು ಅವನು ಆತ್ಮ ವ್ಯಕ್ತಿಯಾಗಿ ಪರಲೋಕದಲ್ಲಿ ತನ್ನ ತಂದೆಯ ಬಳಿಗೆ ಪುನಃ ಹಿಂದಿರುಗಿದನು.—1 ಕೊರಿಂಥ 15:45.
ದೇವರ ಕುರಿತು ಕಲಿಯುವುದಕ್ಕೆ ಎಷ್ಟು ಉತ್ತಮ
16. (ಎ) ಯೇಸುವಿನೊಂದಿಗಿನ ಸಹವಾಸವನ್ನು ಅಷ್ಟೊಂದು ಸುಯೋಗವಾಗಿ ಮಾಡಿದ್ದು ಯಾವುದು? (ಬಿ) ಯೇಸುವನ್ನು ನೋಡಿದ್ದು ದೇವರನ್ನು ನೋಡಿದ ಹಾಗೆಂದು ಏಕೆ ಹೇಳ ಸಾಧ್ಯವಿತ್ತು?
16 ಯೇಸು ಭೂಮಿಯಲ್ಲಿದ್ದಾಗ ಆತನ ವೈಯಕ್ತಿಕ ಸಹವಾಸಿಗಳಾಗಿ ಕೆಲವರು ಆನಂದಿಸಿದ ಆ ಆಶ್ಚರ್ಯಕರವಾದ ಸುಯೋಗವನ್ನು ತುಸು ಯೋಚಿಸಿರಿ! ಪರಲೋಕದಲ್ಲಿ ಯೆಹೋವ ದೇವರೊಂದಿಗೆ ಆಪ್ತ ಸಂಗಡಿಗನಾಗಿ ಪ್ರಾಯಶಃ ಕೋಟ್ಯಾಂತರ ವರ್ಷಗಳನ್ನು ಕಳೆದ ಒಬ್ಬಾತನಿಗೆ ಕಿವಿಗೊಡುವ, ಅವನೊಂದಿಗೆ ಮಾತಾಡುವ, ಅವನನ್ನು ವೀಕ್ಷಿಸುವ ಮತ್ತು ಅವನ ಜತೆಯಲ್ಲಿ ಕೆಲಸಮಾಡುವ ಕುರಿತೂ ಊಹಿಸಿರಿ! ನಂಬಿಗಸ್ತನಾದ ಪುತ್ರನೋಪಾದಿ, ಯೇಸು ತಾನು ಮಾಡಿದ ಪ್ರತಿಯೊಂದರಲ್ಲಿ ತನ್ನ ಸ್ವರ್ಗೀಯ ತಂದೆಯನ್ನು ಅನುಕರಿಸಿದ್ದನು. ವಾಸ್ತವದಲ್ಲಿ ಯೇಸು ತನ್ನ ತಂದೆಯನ್ನು ಎಷ್ಟು ಪರಿಪೂರ್ಣವಾಗಿ ಅನುಕರಿಸಿದ್ದನೆಂದರೆ ಅವನು ಕೊಲ್ಲಲ್ಪಡುವ ಸ್ವಲ್ಪ ಮುಂಚಿತವಾಗಿ ಅವನು ತನ್ನ ಅಪೊಸ್ತಲರಿಗೆ ಹೀಗನ್ನ ಶಕ್ತನಾದನು: “ನನ್ನನ್ನು ನೋಡಿದವನು ನನ್ನ ತಂದೆಯನ್ನು ಸಹ ನೋಡಿದ್ದಾನೆ.” (ಯೋಹಾನ 14:9, 10) ಹೌದು, ಇಲ್ಲಿ ಭೂಮಿಯಲ್ಲಿ ಅವನಿಗೆ ಎದುರಾದ ಪ್ರತಿಯೊಂದು ಸಂದರ್ಭದಲ್ಲಿ, ಸರ್ವಶಕ್ತ ದೇವರಾದ ಅವನ ತಂದೆಯು ಒಂದುವೇಳೆ ಇಲ್ಲಿರುತ್ತಿದ್ದರೆ ಅದನ್ನು ಮಾಡುತ್ತಿದ್ದ ರೀತಿಯಲ್ಲೇ ಮಾಡಿದ್ದನು. ಹೀಗೆ, ಯೇಸು ಕ್ರಿಸ್ತನ ಜೀವಿತ ಮತ್ತು ಶುಶ್ರೂಷೆಯನ್ನು ನಾವು ಅಧ್ಯಯನ ಮಾಡುವಾಗ, ಕಾರ್ಯತಃ, ದೇವರು ಯಾವ ರೀತಿಯ ವ್ಯಕ್ತಿ ಎಂಬದನ್ನೇ ನಾವು ಕಲಿಯುವವರಾಗಿದ್ದೇವೆ.
17. “ಯೇಸುವಿನ ಜೀವನ ಮತ್ತು ಶುಶ್ರೂಷೆ” ಎಂಬ ವಾಚ್ಟವರ್ ಲೇಖನಮಾಲೆಯಿಂದ ಯಾವ ಉತ್ತಮ ಉದ್ದೇಶವು ಪೂರೈಸಲ್ಪಟ್ಟಿತು?
17 ಆದುದರಿಂದ, ವಾಚ್ಟವರ್ನಲ್ಲಿ ಏಪ್ರಿಲ್ 1985 ರಿಂದ ಜೂನ್ 1991 ರ ತನಕ ಅನುಕ್ರಮ ಸಂಚಿಕೆಗಳಲ್ಲಿ ಪ್ರಕಟವಾದ “ಯೇಸುವಿನ ಜೀವನ ಮತ್ತು ಶುಶ್ರೂಷೆ” ಲೇಖನಮಾಲೆಯು, ಮನುಷ್ಯ ಯೇಸುವಿನ ಒಂದು ಉತ್ತಮ ವರ್ಣನೆಯನ್ನು ಕೊಟ್ಟಿತ್ತು ಮಾತ್ರವಲ್ಲ, ಅವನ ಸ್ವರ್ಗೀಯ ತಂದೆಯಾದ ಯೆಹೋವ ದೇವರ ಕುರಿತಾಗಿಯೂ ಬಹಳಷ್ಟನ್ನು ಕಲಿಸಿತ್ತು. ಅದರ ಮೊದಲನೆಯ ಎರಡು ಭಾಗಗಳ ಅನಂತರ, ಒಬ್ಬ ಪಯನೀಯರ ಶುಶ್ರೂಷಕನು ಗಣ್ಯತೆಯಲ್ಲಿ ವಾಚ್ಟವರ್ ಸೊಸೈಟಿಗೆ ಬರೆದದ್ದು: “ತಂದೆಗೆ ಹತ್ತಿರವಾಗಿ ಎಳೆಯಲ್ಪಡಲು ಮಗನನ್ನು ತಿಳಿಯುವುದಕ್ಕಿಂತ ಹೆಚ್ಚು ಉತ್ತಮವಾದ ಮಾರ್ಗ ಬೇರೆ ಯಾವುದಿದೆ!” ಅದೆಷ್ಟು ಸತ್ಯ! ಜನರ ಕಡೆಗೆ ಆ ತಂದೆಯ ಕೋಮಲ ಪರಾಮರಿಕೆ ಮತ್ತು ಹೃದಯ ವೈಶಾಲ್ಯತೆಗಳು ಮಗನ ಜೀವಿತದಲ್ಲಿ ಉತ್ಪ್ರೇಕ್ಷಿಸಲ್ಪಟ್ಟಿವೆ!
18. ರಾಜ್ಯ ಸಂದೇಶದ ಜನಕನು ಯಾರು, ಮತ್ತು ಯೇಸು ಇದನ್ನು ಅಂಗೀಕರಿಸಿದ್ದು ಹೇಗೆ?
18 ತನ್ನ ತಂದೆಯ ಚಿತ್ತಕ್ಕೆ ಪೂರ್ಣ ಅಧೀನತೆಯಲ್ಲಿ ತೋರಿಬಂದ ತಂದೆಯ ಕಡೆಗಿನ ಯೇಸುವಿನ ಪ್ರೀತಿಯು, ಅವಲೋಕಿಸಲು ನಿಶ್ಚಯವಾಗಿ ಅದೆಷ್ಟು ಚೆಂದ! “ನನ್ನಷ್ಟಕ್ಕೆ ನಾನೇ ಏನೂ ಮಾಡದೆ,” ಯೇಸು ತನ್ನನ್ನು ಕೊಲ್ಲಲು ಹುಡುಕುತ್ತಿದ್ದ ಯೆಹೂದ್ಯರಿಗೆ ಹೇಳಿದ್ದು, “ತಂದೆಯು ನನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದೆನು.” (ಯೋಹಾನ 8:28) ಹೀಗಿರಲಾಗಿ, ಆತನು ಸಾರಿದ ರಾಜ್ಯ ಸಂದೇಶದ ಜನಕನು ಯೇಸುವಲ್ಲ. ಯೆಹೋವ ದೇವರೇ ಆಗಿದ್ದನು! ಮತ್ತು ಯೇಸು ಪದೇ ಪದೇ ತಂದೆಗೆ ಆ ಕೀರ್ತಿಯನ್ನು ಕೊಟ್ಟನು. “ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ,” ಎಂದು ಅವನಂದನು, “ನನ್ನನ್ನು ಕಳುಹಿಸಿದ ತಂದೆಯೇ—ನೀನು ಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆ ಆಜ್ಞೆ ಕೊಟ್ಟಿದ್ದಾನೆ. . . . ಆದದರಿಂದ ನಾನು ಮಾತಾಡುವುದನ್ನೆಲ್ಲಾ ತಂದೆಯು ನನಗೆ ಹೇಳಿದ ಮೇರೆಗೆ ಮಾತಾಡುತ್ತೇನೆ.”—ಯೋಹಾನ 12:49, 50.
19. (ಎ) ಯೇಸು ಯೆಹೋವನು ಕಲಿಸುವ ರೀತಿಯಲ್ಲಿ ಕಲಿಸಿದನೆಂದು ನಮಗೆ ತಿಳಿದಿರುವುದು ಹೇಗೆ? (ಬಿ) ಯೇಸು ಜೀವಿಸಿರುವವರಲ್ಲಿ ಅತ್ಯಂತ ಮಹಾ ಪುರುಷನು ಏಕೆ?
19 ಆದರೂ ಯೇಸು ಕೇವಲ ತಂದೆಯು ತನಗೆ ಹೇಳಿದ್ದನ್ನು ಮಾತ್ರವೇ ತಿಳಿಸಲಿಲ್ಲ ಅಥವಾ ಕಲಿಸಲಿಲ್ಲ. ಅವನು ಅದಕ್ಕಿಂತಲೂ ಹೆಚ್ಚನ್ನು ಮಾಡಿದನು. ಅವನು ಅದನ್ನು ತಂದೆಯು ಮಾಡುತ್ತಿರುತ್ತಿದ್ದ ಅಥವಾ ಕಲಿಸುತ್ತಿರುತ್ತಿದ್ದ ರೀತಿಯಲ್ಲಿ ಮಾತಾಡಿದನು ಮತ್ತು ಕಲಿಸಿದನು. ಅದಲ್ಲದೆ, ಅವನ ಎಲ್ಲಾ ಚಟುವಟಿಕೆಗಳಲ್ಲಿ ಮತ್ತು ಸಂಬಂಧಗಳಲ್ಲಿ, ತನ್ನ ತಂದೆಯು ಅವೇ ಪರಿಸ್ಥಿತಿಗಳಲ್ಲಿ ಹೇಗೆ ವರ್ತಿಸುತ್ತಿದ್ದನೋ ಮತ್ತು ಕ್ರಿಯೆನಡಿಸುತ್ತಿದ್ದನೋ ಹಾಗೆಯೇ ಅವನೂ ವರ್ತಿಸಿದನು ಮತ್ತು ಕ್ರಿಯೆ ನಡಿಸಿದನು. ಯೇಸು ವಿವರಿಸಿದ್ದು: “ತಂದೆಯು ಮಾಡುವುದನ್ನು ಮಗನು ಮಾಡುತ್ತಾನೆಯೇ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಆತನು ಮಾಡುವುದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ.” (ಯೋಹಾನ 5:19) ಪ್ರತಿಯೊಂದು ವಿಷಯದಲ್ಲಿ ಯೇಸು ತನ್ನ ತಂದೆಯಾದ ಯೆಹೋವ ದೇವರ ಒಂದು ಪರಿಪೂರ್ಣ ಪ್ರತಿಬಿಂಬವಾಗಿದ್ದಾನೆ. ಆದ್ದರಿಂದ ಯೇಸು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನಾಗಿದ್ದನೆಂಬುದಕ್ಕೆ ಯಾವ ಆಶ್ಚರ್ಯವೂ ಇಲ್ಲ! ಹೀಗಿರಲಾಗಿ, ಈ ಅತ್ಯಂತ ಗಮನಾರ್ಹನಾದ ಮನುಷ್ಯನನ್ನು ನಾವು ನಿಕಟವಾಗಿ ಲಕ್ಷಿಸುವುದು ಅತಿ ಮಹತ್ವವುಳ್ಳದ್ದಾಗಿದೆ, ನಿಶ್ಚಯ!
ದೇವರ ಪ್ರೀತಿ ಯೇಸುವಿನಲ್ಲಿ ಕಂಡುಬಂದಿದೆ
20. “ದೇವರು ಪ್ರೀತಿಸ್ವರೂಪಿಯು” ಎಂದು ಅಪೊಸ್ತಲ ಯೋಹಾನನಿಗೆ ತಿಳಿಯ ಸಾಧ್ಯವಿತ್ತು ಹೇಗೆ?
20 ಯೇಸುವಿನ ಜೀವನ ಮತ್ತು ಶುಶ್ರೂಷೆಯ ಆಳವಾದ, ಜಾಗರೂಕತೆಯ ಅಧ್ಯಯನವನ್ನು ಮಾಡುವುದರಿಂದ ವಿಶೇಷವಾಗಿ ನಾವೇನನ್ನು ಕಲಿಯುತ್ತೇವೆ? ಒಳ್ಳೇದು, ಅಪೊಸ್ತಲ ಯೋಹಾನನು “ದೇವರನ್ನು ಯಾರೂ ಎಂದೂ ಕಂಡಿಲ್ಲ” ಎಂಬದನ್ನು ಅಂಗೀಕರಿಸಿದ್ದನು. (ಯೋಹಾನ 1:18) ಆದರೂ, 1 ಯೋಹಾನ 4:8 ರಲ್ಲಿ ಪೂರ್ಣ ಆತ್ಮ ವಿಶ್ವಾಸದಿಂದ “ದೇವರು ಪ್ರೀತಿಸ್ವರೂಪಿಯು” ಎಂದು ಬರೆದಿದ್ದಾನೆ. ಯೋಹಾನನು ಇದನ್ನು ಹೇಳಶಕ್ತನಾದನು ಯಾಕಂದರೆ ಕ್ರಿಸ್ತನಲ್ಲಿ ಅವನು ಏನನ್ನು ಕಂಡನೋ ಅದರ ಮೂಲಕ ದೇವರ ಪ್ರೀತಿಯನ್ನು ಅವನು ತಿಳಿದನು.
21. ಯೇಸುವನ್ನು ಜೀವಿಸಿರುವವರಲ್ಲಿ ಅತ್ಯಂತ ಮಹಾ ಪುರುಷನನ್ನಾಗಿ ಮಾಡಿದ್ದು ಯಾವುದು?
21 ತಂದೆಯಂತೆ ಯೇಸುವು ಕನಿಕರ, ದಯೆ, ದೀನತೆ ಮತ್ತು ಗೋಚರಣೀಯ ವ್ಯಕ್ತಿಯಾಗಿದ್ದನು. ಅವನೊಂದಿಗೆ ನಿರ್ಬಲರೂ, ದಬ್ಬಲ್ಪಟ್ಟವರೂ, ತದ್ರೀತಿಯಲ್ಲಿ ಎಲ್ಲಾ ವಿಧದ ಜನರೂ—ಪುರುಷರು, ಸ್ತ್ರೀಯರು, ಮಕ್ಕಳು, ಐಶ್ವರ್ಯವಂತರು, ಬಡವರು, ಬಲಶಾಲಿಗಳು, ಘೋರ ಪಾಪಿಗಳು ಸಹಾ—ನೆಮ್ಮದಿ ಪಡೆಯುತ್ತಿದ್ದರು. ಯೇಸುವನ್ನು ಜೀವಿಸಿರುವವರಲ್ಲಿ ಅತ್ಯಂತ ಮಹಾ ಪುರುಷನನ್ನಾಗಿ ಮಾಡಿದ್ದು, ವಿಶೇಷವಾಗಿ ತಂದೆಯ ಅನುಕರಣೆಯಲ್ಲಿ ಅವನು ತೋರಿಸಿದ್ದ ಪ್ರೀತಿಯ ಅತಿಶ್ರೇಷ್ಠ ಮಾದರಿಯೇ. ನೆಪೋಲಿಯನ್ ಬೋನಪಾರ್ಟನು ಸಹ ಹೀಗಂದಿದ್ದನೆಂದು ವರದಿಯಾಗಿದೆ: “ಅಲೆಗ್ಸಾಂಡರ್, ಕೈಸರ, ಷಾರ್ಲ್ಮೆನ್, ಮತ್ತು ನಾನು ಸಾಮ್ರಾಜ್ಯಗಳನ್ನು ಸ್ಥಾಪಿಸಿದೆವು, ಆದರೆ ಯಾವುದರ ಮೇಲೆ ನಾವು ನಮ್ಮ ಸಾಹಸದ ನಿರ್ಮಿತಿಗಳನ್ನು ಆಧಾರಿಸಿದೆವು? ಸೇನಾಬಲದ ಮೇಲೆ. ತನ್ನ ರಾಜ್ಯವನ್ನು ಪ್ರೀತಿಯ ಮೇಲೆ ಕಟ್ಟಿದವನು ಯೇಸು ಕ್ರಿಸ್ತನು ಒಬ್ಬನೇ, ಮತ್ತು ಈ ದಿನದ ತನಕವೂ ಆತನಿಗಾಗಿ ಸಾಯುವ ಲಕ್ಷಾಂತರ ಜನರು ಇದ್ದಾರೆ.”
22. ಯೇಸುವಿನ ಬೋಧನೆಗಳು ಮೂಲತಃ ಪ್ರತ್ಯೇಕತರದ್ದು ಹೇಗೆ?
22 ಯೇಸುವಿನ ಬೋಧನೆಗಳು ಮೂಲತಃ ಪ್ರತ್ಯೇಕತರದ್ದು. “ಕೆಡುಕನನ್ನು ಎದುರಿಸಬೇಡ,” ಎಂದು ಪ್ರೇರೇಪಿಸಿದನು ಯೇಸು, “ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು.” “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ.” ‘ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.’ (ಮತ್ತಾಯ 5:39, 44; 7:12) ಪ್ರತಿಯೊಬ್ಬನು ಈ ಶ್ರೇಷ್ಠ ಬೋಧನೆಗಳನ್ನು ಅನ್ವಯಿಸಿದ್ದಾದರೆ ಲೋಕವು ಎಷ್ಟೊಂದು ಬೇರೆಯಾಗಿರುತ್ತಿತ್ತು!
23. ಒಳ್ಳೇದನ್ನು ಮಾಡುವಂತೆ ಜನರ ಹೃದಯಗಳನ್ನು ಸ್ಪರ್ಶಿಸಲು ಮತ್ತು ಪ್ರೇರೇಪಿಸಲು ಯೇಸು ಮಾಡಿದ್ದೇನು?
23 ಯೇಸುವಿನ ಸಾಮ್ಯಗಳು ಅಥವಾ ದೃಷ್ಟಾಂತಗಳು ಹೃದಯಗಳನ್ನು ಸ್ಪರ್ಶಿಸಿದವು, ಜನರು ಒಳ್ಳೇದನ್ನು ಮಾಡುವಂತೆ ಮತ್ತು ಕೆಟ್ಟದ್ದನ್ನು ವರ್ಜಿಸುವಂತೆ ಪ್ರೇರೇಪಿಸಿದವು. ಹೇಸಲ್ಪಟ್ಟ ಸಮಾರ್ಯದವನೊಬ್ಬನು ಗಾಯಗೊಂಡಿದ್ದ ಇನ್ನೊಂದು ಜಾತಿಯ ಒಬ್ಬ ಮನುಷ್ಯನಿಗೆ ಸಹಾಯ ಮಾಡಿದಾಗ ಅವನ ಸ್ವಂತ ಕುಲದ ಧಾರ್ಮಿಕ ಜನರಾದರೋ ಮಾಡದೆ ಇದ್ದ ಆತನ ಆ ಪ್ರಖ್ಯಾತ ಕಥೆಯನ್ನು ನೀವು ನೆನಪಿಗೆ ತರಬಹುದು. ಅಥವಾ ಕನಿಕರವುಳ್ಳವನೂ ಕ್ಷಮಿಸುವವನೂ ಆದ ತಂದೆ ಮತ್ತು ಅವನ ತಪ್ಪಿಹೋದ ಮಗನ ಕಥೆಯನ್ನು ನೆನಪಿಸಬಹುದು. ಮತ್ತು ಒಬ್ಬ ಅರಸನು ಒಬ್ಬ ಆಳಿಗೆ 6 ಕೋಟಿ ದಿನಾರಿಗಳ ಸಾಲವನ್ನು ಕ್ಷಮಿಸಿಬಿಟ್ಟರೂ ಆ ಅಳು ಹೋಗಿ ಕೇವಲ 100 ದಿನಾರಿ ಸಾಲವನ್ನು ಸಲ್ಲಿಸಲು ಅಶಕ್ತನಾಗಿದ್ದ ತನ್ನ ಜತೆ ಆಳನ್ನು ಸೆರೆಮನೆಗೆ ಹಾಕಿಸಿದ್ದ ಕುರಿತೇನು? ಸರಳವಾದ ದೃಷ್ಟಾಂತಗಳ ಮೂಲಕ, ಯೇಸು ಸ್ವಾರ್ಥ ಮತ್ತು ಲೋಭಗಳನ್ನು ಹೇಸತಕ್ಕವುಗಳಾಗಿಯೂ ಮತ್ತು ಪ್ರೀತಿ ಮತ್ತು ದಯೆಯನ್ನು ಇಷ್ಟಕರವಾದ ಕೃತ್ಯಗಳಾಗಿಯೂ ಮಾಡಿದನು!—ಮತ್ತಾಯ 18:23-35; ಲೂಕ 10:30-37; 15:11-32.
24. ನಿಸ್ಸಂಶಯವಾಗಿ ಯೇಸು ಜೀವಿಸಿರುವವರಲ್ಲಿ ಅತ್ಯಂತ ಮಹಾ ಪುರುಷನೆಂದು ನಾವೇಕೆ ಹೇಳಬಲ್ಲೆವು?
24 ಆದರೂ ಜನರನ್ನು ಯೇಸುವಿನ ಕಡೆಗೆ ವಿಶೇಷವಾಗಿ ಆಕರ್ಷಿಸಿದ್ದ ಮತ್ತು ಒಳ್ಳೆಯದಕ್ಕಾಗಿ ಪ್ರಭಾವಿಸಿದ್ದ ವಿಷಯವು ಯಾವುದೆಂದರೆ ಅವನು ಏನನ್ನು ಸಾರಿದ್ದನೋ ಅದಕ್ಕೆ ಅವನ ಸ್ವಂತ ಜೀವನವು ಪರಿಪೂರ್ಣ ಹೊಂದಿಕೆಯಲ್ಲಿದ್ದದ್ದೇ. ಅವನು ಏನನ್ನು ಸಾರಿದನೋ ಅದಕ್ಕನುಸಾರ ನಡೆದನು. ಇತರರ ಕುಂದುಕೊರತೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡನು. ತಮ್ಮಲ್ಲಿ ಯಾರು ದೊಡ್ಡವರು ಎಂಬ ವಾಗ್ವಾದವನ್ನು ಅವನ ಶಿಷ್ಯರು ಮಾಡಿದಾಗ, ಅವರನ್ನು ಕಟುವಾಗಿ ಗದರಿಸುವ ಬದಲಾಗಿ ದಯೆಯಿಂದ ತಿದ್ದದನು. ಅವರ ಅಗತ್ಯತೆಗಳಿಗನುಸಾರ ದೀನತೆಯಿಂದ ಅವರ ಶುಶ್ರೂಷೆ ಮಾಡಿದನು, ಅವರ ಕಾಲುಗಳನ್ನೂ ತೊಳೆದನು. (ಮಾರ್ಕ 9:30-37; 10:35-45; ಲೂಕ 22:24-27; ಯೋಹಾನ 13:5) ಕೊನೆಗೆ, ಒಂದು ವೇದನಾಮಯ ಮರಣವನ್ನು ಸಿದ್ಧಮನಸ್ಸಿನಿಂದ ಅನುಭವಿಸಿದನು, ಕೇವಲ ಅವರಿಗಾಗಿ ಮಾತ್ರವೇ ಅಲ್ಲ, ಮಾನವ ಕುಲದವರೆಲ್ಲರ ಪರವಾಗಿಯೂ! ನಿಸ್ಸಂಶಯವಾಗಿ, ಯೇಸು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನು. (w92 2/15)
ನೀವು ಹೇಗೆ ಉತ್ತರಿಸುವಿರಿ?
▫ ಯೇಸು ನಿಜವಾಗಿ ಒಬ್ಬ ಐತಿಹಾಸಿಕ ವ್ಯಕ್ತಿ ಎಂಬುದಕ್ಕೆ ಯಾವ ರುಜುವಾತು ಇದೆ?
▫ ಯೇಸು ಒಬ್ಬ ಮನುಷ್ಯನಾಗಿದ್ದನೆಂದು ನಮಗೆ ತಿಳಿದಿರುವುದು ಹೇಗೆ, ಆದರೂ ಅವನು ಬೇರೆಲ್ಲಾ ಮನುಷ್ಯರಿಗಿಂತ ಬೇರೆಯಾಗಿದ್ದದ್ದು ಹೇಗೆ?
▫ ಯೇಸುವಿನ ಜೀವನವನ್ನು ಅಧ್ಯಯನಿಸುವುದು ದೇವರ ಕುರಿತು ಕಲಿಯಲಿಕ್ಕೆ ಉತ್ತಮ ಮಾರ್ಗವೇಕೆ?
▫ ಯೇಸುವಿನ ಕುರಿತು ಅಧ್ಯಯನಿಸುವ ಮೂಲಕ ದೇವರ ಪ್ರೀತಿಯ ಕುರಿತು ನಾವೇನು ಕಲಿಯಬಲ್ಲೆವು?
[ಪುಟ 10 ರಲ್ಲಿರುವ ಚಿತ್ರ]
ಯೇಸುವಿನ ಅಪೊಸ್ತಲರು ಆಶ್ಚರ್ಯಚಕಿತರಾಗಿ ಅಂದದ್ದು: “ಇವನು ಯಾರಾಗಿರಬಹುದು?”