ಯೆಹೋವನ ಆತ್ಮವು ಆತನ ಜನರನ್ನು ನಡಿಸುತ್ತದೆ
“ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಮಟ್ಟನೆಲದಲ್ಲಿ ನಡಿಸಲಿ.”—ಕೀರ್ತನೆ 143:10.
1, 2. ಯೆಹೋವನ ಕರ್ತವ್ಯನಿಷ್ಠ ಸೇವಕರಿಗೆ ಯಾವುದು ಮನೋವ್ಯಥೆಯನ್ನುಂಟುಮಾಡಬಹುದು?
‘ಎಷ್ಟೋ ಕುಗ್ಗಿಹೋದ ಅನಿಸಿಕೆ ನನಗಾಗುತ್ತದೆ! ತುಸು ಸಾಂತ್ವನಕ್ಕಾಗಿ ನಾನೆಲ್ಲಿಗೆ ಹೋಗಲಿ? ದೇವರು ನನ್ನನ್ನು ತ್ಯಜಿಸಿಬಿಟ್ಟಿದ್ದಾನೋ?’ ನಿಮಗೆಂದಾದರೂ ಆ ರೀತಿಯ ಅನಿಸಿಕೆ ಆಗುತ್ತದೋ? ಆಗುತ್ತದ್ದಾದರೆ, ಹಾಗಿರುವವರು ನೀವೊಬ್ಬರೇ ಅಲ್ಲ. ಯೆಹೋವನ ಕರ್ತವ್ಯನಿಷ್ಠ ಸೇವಕರು ಸಮೃದ್ಧಿಯಾಗುತ್ತಿರುವ ಆತ್ಮಿಕ ಪರದೈಸದಲ್ಲಿ ವಾಸಿಸುತ್ತಾರಾದರೂ, ಅವರು ಕೆಲವು ಸಾರಿ ಮಾನವಕುಲಕ್ಕೆ ಸಾಮಾನ್ಯವಾದ ಮನೋವ್ಯಥೆಯ ಸಮಸ್ಯೆಗಳನ್ನು, ಸಂಕಷ್ಟಗಳನ್ನು, ಮತ್ತು ಶೋಧನೆಗಳನ್ನು ಎದುರಿಸುತ್ತಾರೆ.—1 ಕೊರಿಂಥ 10:13.
2 ಪ್ರಾಯಶಃ ಯಾವುದೋ ದೀರ್ಘ-ಕಾಲದ ಸಂಕಷ್ಟದಿಂದ ಅಥವಾ ಮಹಾ ಒತ್ತಡದ ಮೂಲದಿಂದ ನೀವು ಮುತ್ತಿರಬಹುದು. ಪ್ರಿಯ ಜನರೊಬ್ಬರ ಮರಣಕ್ಕಾಗಿ ನೀವು ಶೋಕಿಸುತ್ತಿರಬಹುದು ಮತ್ತು ತೀರಾ ಒಂಟಿಗರಾಗಿರುವ ಅನಿಸಿಕೆ ಆಗಬಹುದು. ಅಥವಾ ಪ್ರಿಯ ಮಿತ್ರರೊಬ್ಬರ ಅನಾರೋಗ್ಯದಿಂದ ನಿಮ್ಮ ಹೃದಯವು ತೊಂದರೆಗೀಡಾಗಿರಬಹುದು. ಅಂಥ ಪರಿಸ್ಥಿತಿಗಳು ನಿಮ್ಮ ಸಂತೋಷ ಮತ್ತು ಶಾಂತಿಯನ್ನು ಅಪಹರಿಸುತ್ತಿರಬಹುದು ಮತ್ತು ನಿಮ್ಮ ನಂಬಿಕೆಯನ್ನು ಕೂಡ ಬೆದರಿಸುತ್ತಿರಬಹುದು. ನೀವೇನು ಮಾಡಬೇಕು?
ಆತನ ಆತ್ಮಕ್ಕಾಗಿ ದೇವರನ್ನು ಬೇಡಿಕೊಳ್ಳಿರಿ
3. ನಿಮ್ಮಿಂದ ಶಾಂತಿ ಮತ್ತು ಸಂತೋಷ ಎಂಬಂಥ ಗುಣಗಳನ್ನು ಯಾವುದೋ ಅಪಹರಿಸುತ್ತಿದೆಯಾದರೆ, ಏನು ಮಾಡುವುದು ವಿವೇಕಪ್ರದವು?
3 ಯಾವುದಾದರೂ ನಿಮ್ಮಿಂದ ಶಾಂತಿ, ಸಂತೋಷ, ಅಥವಾ ಇನ್ನಿತರ ದೈವಿಕ ಗುಣವನ್ನು ಅಪಹರಿಸುತ್ತಿದೆಯಾದರೆ, ದೇವರ ಪವಿತ್ರಾತ್ಮಕ್ಕಾಗಿ, ಅಥವಾ ಕಾರ್ಯಕಾರಿ ಶಕಿಗ್ತಾಗಿ ಪ್ರಾರ್ಥಿಸುವುದು ವಿವೇಕಪ್ರದವು. ಯಾಕೆ? ಯಾಕಂದರೆ ಯೆಹೋವನ ಆತ್ಮವು ಕ್ರೈಸ್ತನೊಬ್ಬನಿಗೆ ಸಮಸ್ಯೆಗಳನ್ನು, ಸಂಕಷ್ಟಗಳನ್ನು ಮತ್ತು ಶೋಧನೆಗಳನ್ನು ಎದುರಿಸಲು ಸಹಾಯಕಾರಿಯಾದ ಸುಫಲವನ್ನು ಉತ್ಪಾದಿಸುತ್ತದೆ. “ಶರೀರಭಾವದ ಕರ್ಮಗಳ” ವಿರುದ್ಧವಾಗಿ ಎಚ್ಚರಿಸಿದ ಅನಂತರ, ಅಪೊಸ್ತಲ ಪೌಲನು ಬರೆದದ್ದು: “ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ [ಸೌಮ್ಯತೆ, NW] ಶಮೆದಮೆ ಇಂಥವುಗಳೇ. ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ.”—ಗಲಾತ್ಯ 5:19-23.
4. ಯಾವುದೇ ಸಂಕಷ್ಟ ಅಥವಾ ಶೋಧನೆಯಿಂದ ಎದುರಿಸಲ್ಪಟ್ಟಾಗ, ಅದನ್ನು ಒಬ್ಬನ ಪ್ರಾರ್ಥನೆಯಲ್ಲಿ ಸ್ಪಷ್ಟವಾಗಿಗಿ ಹೆಸರಿಸುವುದು ಏಕೆ ಯುಕ್ತವಾಗಿರಬಹುದು?
4 ನೀವು ಎದುರಿಸುತ್ತಿರುವ ಸಂಕಷ್ಟದ ರೀತಿಯ ಕಾರಣ, ನೀವು ನಿಮ್ಮ ಸೌಮ್ಯತೆ ಅಥವಾ ಸಾಧು ಸ್ವಭಾವವನ್ನು ಕಳಕೊಳ್ಳುವ ಅಪಾಯದಲಿದ್ಲೀರ್ದೆಂದು ನೀವು ಅರಿತುಕೊಳ್ಳಬಹುದು. ಆಗ ಆತ್ಮದ ಫಲವಾದ ಸೌಮ್ಯತೆಗಾಗಿ ಯೆಹೋವ ದೇವರಿಗೆ ಪ್ರಾರ್ಥನೆ ಮಾಡುವ ಮೂಲಕ ಅದನ್ನು ಸ್ಪಷ್ಟವಾಗಿಗಿ ಹೆಸರಿಸಿರಿ. ಯಾವುದೋ ಶೋಧನೆಯನ್ನು ನೀವು ಎದುರಿಸಿದ್ದಾದರೆ, ಆಗ ನಿಮಗೆ ವಿಶೇಷವಾಗಿ ಬೇಕಾದದ್ದು ಆತ್ಮಸಂಯಮದ ಫಲವು. ನಿಶ್ಚಯವಾಗಿ, ಶೋಧನೆಯನ್ನು ಎದುರಿಸುವುದರಲ್ಲಿ, ಸೈತಾನನಿಂದ ಮುಕ್ತತೆ ಹೊಂದುವಂತೆ, ಮತ್ತು ಪರೀಕ್ಷೆಯನ್ನು ತಾಳಿಕೊಳ್ಳುವದಕ್ಕೆ ಬೇಕಾದ ವಿವೇಕಕ್ಕಾಗಿ, ದೈವಿಕ ಸಹಾಯಕ್ಕಾಗಿ ಪ್ರಾರ್ಥಿಸುವುದು ಸಹ ಯುಕ್ತವಾಗಿರುವುದು.—ಮತ್ತಾಯ 6:13; ಯಾಕೋಬ 1:5, 6.
5. ಆತ್ಮದ ಯಾವ ಫಲಕ್ಕಾಗಿ ಬೇಡಬೇಕೆಂದು ನಿಮಗೆ ತಿಳಿಯದೆ ಇರುವಷ್ಟರ ಮಟ್ಟಿಗೆ ಪರಿಸ್ಥಿತಿಗಳು ಸಂಕಟಕರವಾಗಿದ್ದರೆ, ಏನು ಮಾಡ ಸಾಧ್ಯವಿದೆ?
5 ಆದರೂ ಕೆಲವೊಮ್ಮೆ, ಪರಿಸ್ಥಿತಿಗಳು ಎಷ್ಟು ಸಂಕಟಕರ ಅಥವಾ ಕಂಗೆಡಿಸುವುವುಗಳಾಗಿ ಇರಬಹುದೆಂದರೆ ಆತ್ಮದ ಯಾವ ಫಲವು ನಿಮಗೆ ಬೇಕು ಎಂಬದೇ ನಿಮಗೆ ತಿಳಿಯುವುದಿಲ್ಲ. ವಾಸ್ತವದಲ್ಲಿ, ಸಂತೋಷ, ಶಾಂತಿ, ಸೌಮ್ಯತೆ, ಮತ್ತು ಇತರ ದೈವಿಕ ಗುಣಗಳು ಎಲ್ಲವೂ ಅಪಾಯಕ್ಕೆ ಗುರಿಯಾಗಿರಬಹುದು. ಆಗೇನು? ಸ್ವತಃ ಪವಿತ್ರಾತ್ಮಕ್ಕಾಗಿಯೇ ದೇವರನ್ನು ಯಾಕೆ ಕೇಳಬಾರದು ಮತ್ತು ನಿಮ್ಮ ಪರಿಸ್ಥಿತಿಯಲ್ಲಿ ಬೇಕಾದ ಫಲಗಳನ್ನು ಅದು ತಾನೇ ವೃದ್ಧಿಸುವಂತೆ ಏಕೆ ಬಿಡಬಾರದು? ಆವಶ್ಯವಾಗಿ ಬೇಕಾದ ಫಲಗಳು, ಪ್ರೀತಿ ಅಥವಾ ಸಂತೋಷ ಅಥವಾ ಆತ್ಮದ ಫಲಗಳ ಒಂದು ಸಂಯೋಗವು ಆಗಿರಬಹುದು. ಹಾಗೂ ಆತನ ಆತ್ಮದ ಮಾರ್ಗದರ್ಶನೆಗೆ ನೀವು ಮಣಿಯುವಂತೆ ದೇವರು ಸಹಾಯಮಾಡುವಂತೆಯೂ ಪ್ರಾರ್ಥಿಸಿರಿ, ಯಾಕಂದರೆ ತನ್ನ ಜನರನ್ನು ನಡಿಸುವುದಕ್ಕೆ ಆತನು ಅದನ್ನು ಉಪಯೋಗಿಸುತ್ತಾನೆ.
ಸಹಾಯ ಮಾಡಲು ಯೆಹೋವನಿಗೆ ಮನಸ್ಸಿದೆ
6. ಎಡೆಬಿಡದೆ ಪ್ರಾರ್ಥನೆ ಮಾಡುವ ಅಗತ್ಯದೊಂದಿಗೆ ಯೇಸು ತನ್ನ ಹಿಂಬಾಲಕರನ್ನು ಪ್ರಭಾವಿಸಿದ್ದು ಹೇಗೆ?
6 ಪ್ರಾರ್ಥನೆಯ ಮೇಲೆ ಉಪದೇಶವನ್ನು ಯೇಸು ಕ್ರಿಸ್ತನ ಶಿಷ್ಯರು ಕೋರಿದಾಗ, ದೇವರ ಆತ್ಮಕ್ಕಾಗಿ ಬೇಡಿಕೊಳ್ಳುವಂತೆ ಆತನು ಅಂಶಿಕವಾಗಿ ಅವರನ್ನು ಪ್ರೇರೇಪಿಸಿದನು. ಎಡೆಬಿಡದೆ ಬೇಡಿಕೊಳ್ಳುವಂತೆ ಅವರನ್ನು ಪ್ರೇರೇಪಿಸಲು ರಚಿಸಲಾದ ಒಂದು ಸಾಮ್ಯವನ್ನು ಯೇಸು ಮೊದಲು ಉಪಯೋಗಿಸಿದನು. ಅವನಂದದ್ದು: “ನಿಮ್ಮಲ್ಲಿ ಒಬ್ಬನಿಗೆ ಸ್ನೇಹಿತನಿದ್ದಾನೆ ಎಂದು ಹೇಳೋಣ. ಅವನು ಸರು ಹೊತ್ತಿನಲ್ಲಿ ಆ ಸ್ನೇಹಿತನ ಬಳಿಗೆ ಹೋಗಿ—ಸ್ನೇಹಿತನೇ, ನನಗೆ ಮೂರು ರೊಟ್ಟಿಗಳನ್ಮು ಕಡವಾಗಿ ಕೊಡು. ನನ್ನ ಸ್ನೇಹಿತರಲ್ಲಿ ಒಬ್ಬನು ಎಲ್ಲಿಗೋ ಪ್ರಯಾಣವಾಗಿ ನನ್ನ ಬಳಿಗೆ ಬಂದಿದ್ದಾನೆ; ಅವನಿಗೆ ಊಟಮಾಡಿಸುವದಕ್ಕೆ ನನ್ನಲ್ಲಿ ಏನೂ ಇಲ್ಲ ಎಂದು ಕೇಳಲು ಆ ಸ್ನೇಹಿತನು—ನನಗೆ ತೊಂದರೆ ಕೊಡಬೇಡ; ಈಗ ಕದಾಹಾಕಿ ಅದೆ; ನನ್ನ ಚಿಕ್ಕ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ನಿನಗೆ ಕೊಡುವದಕ್ಕಾಗುವದಿಲ್ಲ ಎಂದು ಒಳಗಿನಿಂದ ಉತ್ತರಕೊಟ್ಟರೂ ಕೊಡಬಹುದು. ಆದರೆ ಸ್ನೇಹದ ನಿಮಿತ್ತವಾಗಿ ಎದ್ದು ಕೊಡದೆ ಇದ್ದರೂ ಅವನ ಕಾಟದ ದೆಸೆಯಿಂದ [ಬಿಡದ ಪಟ್ಟುಹಿಡಿಯುವಿಕೆಯಿಂದ, NW] ಎದ್ದು ಬಂದು ಕೇಳಿದಷ್ಟು ಅವನಿಗೆ ಕೊಡುವನೆಂದು ನಿಮಗೆ ಹೇಳುತ್ತೇನೆ.”—ಲೂಕ 11:5-8.
7. ಲೂಕ 11:11-13 ರ ಯೇಸುವಿನ ಮಾತುಗಳ ಸಾರಾಂಶವೇನು, ಮತ್ತು ದೇವರು ಮತ್ತು ಆತನ ಆತ್ಮದ ಕುರಿತು ಯಾವ ಆಶ್ವಾಸನೆಯನ್ನು ಅವು ನಮಗೆ ಕೊಡುತ್ತವೆ?
7 ತನ್ನ ನಂಬಿಗಸ್ತ ಸಮರ್ಪಿತ ಸೇವಕರಲ್ಲಿ ಪ್ರತಿಯೊಬ್ಬನಿಗೆ ಸಹಾಯ ಮಾಡಲು ಯೆಹೋವನಿಗೆ ಮನಸ್ಸಿದೆ, ಮತ್ತು ಆತನು ಅವರ ವಿನಂತಿಗಳಿಗೆ ಕಿವಿಗೊಡುತ್ತಾನೆ. ಆದರೆ ಯೇಸು ಪ್ರೇರೇಪಿಸಿದಂತೆ, ಅಂಥ ವ್ಯಕ್ತಿಯು ‘ಬೇಡಿಕೊಳ್ಳುತ್ತಾ’ ಇರುವುದಾದರೆ, ಇದು ಹೃತ್ಪೂರ್ವಕ ಅಪೇಕ್ಷೆಯನ್ನು ಸೂಚಿಸುತ್ತದೆ ಮತ್ತು ನಂಬಿಕೆಯ ಒಂದು ತೋರಿಕೆಯಾಗಿದೆ. (ಲೂಕ 11:9, 10) ಕ್ರಿಸ್ತನು ಕೂಡಿಸಿದ್ದು: “ನಿಮ್ಮಲ್ಲಿ ತಂದೆಯಾದವನು ಮೀನನ್ನು ಕೇಳುವ ಮಗನಿಗೆ ಮೀನು ಕೊಡದೆ ಹಾವನ್ನು ಕೊಡುವನೇ? ಅಥವಾ ತತ್ತಿಯನ್ನು ಕೇಳಿದರೆ ಚೇಳನ್ನು ಕೊಡುವನೇ? ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಲೂಕ 11:11-13) ಒಬ್ಬ ಐಹಿಕ ತಂದೆಯು, ಬಾಧ್ಯವಾಗಿ ಬಂದ ಪಾಪಪೂರ್ಣತೆಯ ಕಾರಣ ಹೆಚ್ಚು-ಕಡಿಮೆ ಕೆಟ್ಟವನಾಗಿದ್ದರೂ, ತನ್ನ ಮಗನಿಗೆ ಒಳ್ಳೇ ವಸ್ತುಗಳನ್ನು ಕೊಡುತ್ತಾನಾದರೆ, ನಿಶ್ಚಯವಾಗಿಯೂ ನಮ್ಮ ಪರಲೋಕದ ತಂದೆಯು ತನ್ನ ಪವಿತ್ರಾತ್ಮವನ್ನು, ಯಾರು ಅದಕ್ಕಾಗಿ ದೀನತೆಯಿಂದ ಕೇಳಿಕೊಳ್ಳುತ್ತಾರೋ ಆ ತನ್ನ ಕರ್ತವ್ಯನಿಷ್ಠ ಸೇವಕರಲ್ಲಿ ಯಾರಿಗಾದರೂ ಕೊಡುವುದನ್ನು ಮುಂದರಿಸುತ್ತಾ ಇರುವನು.
8. ಕೀರ್ತನೆ 143:10 ದಾವೀದನಿಗೆ, ಯೇಸುವಿಗೆ, ಮತ್ತು ದೇವರ ಆಧುನಿಕ-ದಿನದ ಸೇವಕರಿಗೆ ಹೇಗೆ ಅನ್ವಯಿಸುತ್ತದೆ?
8 ದೇವರ ಆತ್ಮದಿಂದ ಪ್ರಯೋಜನ ಹೊಂದಲು, ದಾವೀದನಿಗೆ ಅದರ ಮಾರ್ಗದರ್ಶನವನ್ನು ಅನುಸರಿಸಲು ಎಷ್ಟು ಮನಸ್ಸಿತ್ತೋ ಅಷ್ಟು ನಮಗೂ ಇರಲೇಬೇಕು. ಅವನು ಪ್ರಾರ್ಥಿಸಿದ್ದು: “ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಮಟ್ಟನೆಲದಲ್ಲಿ ನಡಿಸಲಿ.” (ಕೀರ್ತನೆ 143:10) ಇಸ್ರಾಯೇಲ್ಯ ಅರಸನಾದ ಸೌಲನಿಂದ ದೇಶಭ್ರಷ್ಟನಾಗಿ ಮಾಡಲ್ಪಟ್ಟ ದಾವೀದನು ದೇವರಾತ್ಮವು ತನ್ನನ್ನು ನಡಿಸುವಂತೆ ಬಯಸಿದ್ದನು ಯಾಕಂದರೆ ತನ್ನ ಮಾರ್ಗವು ಉದಾತ್ತವೆಂಬ ನಿಶ್ಚಯತೆಯನ್ನು ಪಡೆಯುವುದಕ್ಕಾಗಿಯೇ. ತಕ್ಕ ಸಮಯದಲ್ಲಿ ಎಬ್ಯಾತಾರನು, ದೇವರ ಚಿತ್ತವನ್ನು ವಿಚಾರಿಸುವಲ್ಲಿ ಉಪಯೋಗಿಸುವ ಒಂದು ಯಾಜಕನ ಏಫೋದಿನೊಂದಿಗೆ ಬಂದನು. ದೇವರ ಯಾಜಕತ್ವದ ಪ್ರತಿನಿಧಿಯೋಪಾದಿ ಎಬ್ಯಾತಾರನು, ಯೆಹೋವನನ್ನು ಮೆಚ್ಚಿಸುವುದಕ್ಕಾಗಿ ದಾವೀದನು ಹೋಗಬೇಕಾದ ಮಾರ್ಗದ ಸಂಬಂಧದಲ್ಲಿ ಬೋಧಿಸಿದನು. (1 ಸಮುವೇಲ 22:17–23:12; 30:6-8) ದಾವೀದನಂತೆ ಯೇಸುವು ಯೆಹೋವನ ಆತ್ಮದಿಂದ ನಡಿಸಲ್ಪಟ್ಟನು. ಮತ್ತು ಒಂದು ವರ್ಗದೋಪಾದಿ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರ ವಿಷಯದಲ್ಲಿಯೂ, ಇದು ಸತ್ಯವಾಗಿದೆ. ಅವರು 1918-19 ರಲ್ಲಿ, ಮಾನವ ಸಮಾಜದ ಮುಂದೆ ಜಾತಿಭ್ರಷ್ಟರಾಗಿ ಪರಿಗಣಿಸಲ್ಪಟ್ಟಿದ್ದರು, ಮತ್ತು ಅವರನ್ನು ತಾವು ನಾಶಗೊಳಿಸ ಶಕ್ತರು ಎಂದು ಅವರ ಧಾರ್ಮಿಕ ಶತ್ರುಗಳು ನೆನಸಿದ್ದರು. ಅಭಿಷಿಕ್ತರು ತಮ್ಮ ನಿಷ್ಕ್ರಿಯ ಸ್ಥಿತಿಯಿಂದ ಹೊರಬರುವ ಮಾರ್ಗಕ್ಕಾಗಿ ಪ್ರಾರ್ಥಿಸಿದರು, ಹೀಗೆ 1919 ರಲ್ಲಿ ದೇವರು ಅವರ ಪ್ರಾರ್ಥನೆಗಳಿಗೆ ಉತ್ತರಕೊಟ್ಟು, ಅವರನ್ನು ಬಿಡುಗಡೆ ಮಾಡಿದನು ಮತ್ತು ತನ್ನ ಸೇವೆಯಲ್ಲಿ ಪುನಃ ಸಕ್ರಿಯಗೊಳಿಸಿದನು. (ಕೀರ್ತನೆ 143:7-9) ನಿಶ್ಚಯವಾಗಿಯೂ ಯೆಹೋವನ ಆತ್ಮವು, ಈ ದಿನಗಳ ತನಕವೂ ಮಾಡುವಂತೆ, ಆಗಲೂ ಸಹಾಯ ಮಾಡುತ್ತಿತ್ತು ಮತ್ತು ಆತನ ಜನರನ್ನು ನಡಿಸುತ್ತಿತ್ತು.
ಆತ್ಮವು ಸಹಾಯ ಮಾಡುವ ವಿಧ
9. (ಎ) ಪವಿತ್ರಾತ್ಮವು ಒಬ್ಬ “ಸಹಾಯಕನ” ಹಾಗೆ ಕಾರ್ಯನಡಿಸುವುದು ಹೇಗೆ? (ಬಿ) ಪವಿತ್ರಾತ್ಮವು ಒಬ್ಬ ವ್ಯಕ್ತಿಯಲ್ಲವೆಂದು ನಮಗೆ ತಿಳಿದದೆ ಹೇಗೆ? (ಪಾದಟಿಪ್ಪಣಿ ನೋಡಿರಿ.)
9 ಯೇಸು ಕ್ರಿಸ್ತನು ಪವಿತ್ರ ಆತ್ಮವನ್ನು ಒಬ್ಬ “ಸಹಾಯಕನು” ಎಂದು ಕರೆದನು. ದೃಷ್ಟಾಂತಕ್ಕಾಗಿ, ಅವನು ತನ್ನ ಹಿಂಬಾಲಕರಿಗೆ ಹೇಳಿದ್ದು: “ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ ತಿಳಿಯದೆಯೂ ಇರುವದರಿಂದ ಆತನನ್ನು ಹೊಂದಲಾರದು. ನೀವು ಆತನನ್ನು ಬಲ್ಲಿರಿ; ಹೇಗಂದರೆ ನಿಮ್ಮ ಬಳಿಯಲ್ಲಿ ವಾಸಮಾಡುತ್ತಾನೆ, ಮತ್ತು ನಿಮ್ಮೊಳಗೆ ಇರುವನು.” ಬೇರೆ ವಿಷಯಗಳೊಂದಿಗೆ, ಆ “ಸಹಾಯಕನು” ಒಬ್ಬ ಉಪದೇಶಕನೂ ಆಗಿರುವನು, ಯಾಕಂದರೆ ಕ್ರಿಸ್ತನು ವಾಗ್ದಾನಿಸಿದ್ದು: “ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.” ಆ ಆತ್ಮವು ಕ್ರಿಸ್ತನ ಕುರಿತಾಗಿ ಸಾಕ್ಷಿಯನ್ನು ಸಹ ಕೊಡುವುದು, ಮತ್ತು ಆತನು ತನ್ನ ಶಿಷ್ಯರಿಗೆ ಆಶ್ವಾಸನೆಯನ್ನು ಕೊಟ್ಟದ್ದು: “ನಾನು ಹೋಗುವದು ನಿಮಗೆ ಹಿತಕರವಾಗಿದೆ. ಹೇಗಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ.”—ಯೋಹಾನ 14:16, 17, 26; 15:26; 16:7.a
10. ಯಾವ ವಿಧಗಳಲ್ಲಿ ಪವಿತ್ರಾತ್ಮವು ಒಬ್ಬ ಸಹಾಯಕನಾಗಿ ರುಜುವಾಗಿದೆ?
10 ವಾಗ್ದತ್ತ ಪವಿತ್ರಾತ್ಮವನ್ನು ಸಾ.ಶ. 33 ರಲ್ಲಿ ಪಂಚಾಶತ್ತಮ ದಿನದಂದು ಯೇಸು ಪರಲೋಕದಿಂದ ತನ್ನ ಹಿಂಬಾಲಕರ ಮೇಲೆ ಸುರಿಸಿದನು. (ಅ. ಕೃತ್ಯಗಳು 1:4, 5; 2:1-11) ಒಬ್ಬ ಸಹಾಯಕನೋಪಾದಿ, ಆದು ಅವರಿಗೆ ದೇವರ ಚಿತ್ತದ ಮತ್ತು ಉದ್ದೇಶದ ಅಧಿಕ ತಿಳಿವಳಿಕೆಯನ್ನು ಕೊಟ್ಟಿತು ಮತ್ತು ಆತನ ಪ್ರವಾದನಾ ವಾಕ್ಯವನ್ನು ಅವರಿಗೆ ಪ್ರಕಟಪಡಿಸಿತು. (1 ಕೊರಿಂಥ 2:10-16; ಕೊಲೊಸ್ಸೆ 1:9, 10; ಇಬ್ರಿಯ 9:8-10) ಆ ಸಹಾಯಕನು ಯೇಸುವಿನ ಶಿಷ್ಯರಿಗೆ ಭೂಮಿಯಲ್ಲೆಲ್ಲಾ ಸಾಕ್ಷಿಗಳಾಗಿರುವಂತೆಯೂ ಸಹಾಯಮಾಡಿದನು. (ಲೂಕ 24:49; ಅ. ಕೃತ್ಯಗಳು 1:8; ಎಫೆಸ 3:5, 6) ಇಂದು ಪವಿತ್ರಾತ್ಮವು ಒಬ್ಬ ಸಮರ್ಪಿತ ಕ್ರೈಸ್ತನಿಗೆ, ಅವನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕವಾಗಿ ದೇವರಿಂದ ಮಾಡಲ್ಪಡುವ ಆತ್ಮಿಕ ಒದಗಿಸುವಿಕೆಗಳನ್ನು ಉಪಯೋಗಪಡಿಸಿಕೊಂಡರೆ, ಜ್ಞಾನದಲ್ಲಿ ಬೆಳೆಯುವಂತೆಯೂ ಸಹಾಯಮಾಡಬಲ್ಲದು. (ಮತ್ತಾಯ 24:45-47) ಯೆಹೋವನ ಸೇವಕರಲ್ಲಿ ಒಬ್ಬರೋಪಾದಿ ಸಾಕ್ಷಿನೀಡಲು ಬೇಕಾದ ಧೈರ್ಯ ಮತ್ತು ಬಲವನ್ನು ಒದಗಿಸುವ ಮೂಲಕ ದೇವರ ಪವಿತ್ರಾತ್ಮವು ಸಹಾಯ ಕೊಡಬಲ್ಲದು. (ಮತ್ತಾಯ 10:19, 20; ಅ. ಕೃತ್ಯಗಳು 4:29-31) ಆದರೆ ಬೇರೆ ರೀತಿಗಳಲ್ಲೂ ದೇವರ ಪವಿತ್ರಾತ್ಮವು ಸಹಾಯಮಾಡುತ್ತದೆ.
“ಮಾತಿಲ್ಲದಂಥ ನರಳಾಟದಿಂದ”
11. ಒಂದು ಸಂಕಷ್ಟವು ತಡೆಯಲಸಾಧ್ಯವೆಂದು ತೋರಿದರೆ, ಒಬ್ಬ ಕ್ರೈಸ್ತನೇನು ಮಾಡಬೇಕು?
11 ತಡೆಯಲಸಾಧ್ಯವೆಂದು ತೋರುವ ಒಂದು ಸಂಕಷ್ಟದಿಂದ ಕ್ರೈಸ್ತನೊಬ್ಬನು ಮುತ್ತಲ್ಪಟ್ಟವನಾದರೆ, ಅವನೇನು ಮಾಡಬೇಕು? ಪವಿತ್ರಾತ್ಮಕ್ಕಾಗಿ ಅವನು ಬೇಡಿಕೊಳ್ಳಬೇಕು ಮತ್ತು ಅದು ತನ್ನ ಕಾರ್ಯವನ್ನು ಮಾಡುವಂತೆ ಬಿಟ್ಟುಕೊಡಬೇಕು! “ಪವಿತ್ರಾತ್ಮನು ಸಹ ನಮ್ಮ ಅಶಕ್ತಿಯನ್ನು ನೋಡಿ ಸಹಾಯಮಾಡುತ್ತಾನೆ,” ಎಂದನು ಪೌಲನು, “ಹೇಗಂದರೆ ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲದರ್ದಿಂದ ಪವಿತ್ರಾತ್ಮನು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ. ಆದರೆ ಹೃದಯಗಳನ್ನು ಶೋಧಿಸಿ ನೋಡುವಾತನಿಗೆ ಪವಿತ್ರಾತ್ಮನ ಮನೋಭಾವವು ಏನೆಂದು ತಿಳಿದದೆ; ಆ ಆತ್ಮನು ದೇವರ ಚಿತ್ತಾನುಸಾರವಾಗಿ ದೇವಜನರಿಗೋಸ್ಕರ ಬೇಡಿಕೊಳ್ಳುವನೆಂದು ಆತನು ಬಲ್ಲನು.”—ರೋಮಾಪುರ 8:26, 27.
12, 13. (ಎ) ವಿಶೇಷ ಕಷ್ಟಕರ ಪರಿಸ್ಥಿತಿಗಳಲ್ಲಿ ಮಾಡಲ್ಪಡುವ ಪ್ರಾರ್ಥನೆಗಳಿಗೆ ರೋಮಾಪುರ 8:26, 27 ಹೇಗೆ ಅನ್ವಯಿಸುತ್ತದೆ? (ಬಿ) ಪೌಲನು ಮತ್ತು ಅವನ ಸಹವಾಸಿಗಳು ಆಸ್ಯ ಸೀಮೆಯಲ್ಲಿ ಅತಿರೇಕ ಒತ್ತಡದ ಕೆಳಗಿದ್ದಾಗ ಏನು ಮಾಡಿದರು?
12 ಯಾರಿಗಾಗಿ ದೇವರಾತ್ಮನು ಬೇಡಿಕೊಳ್ಳುತ್ತಾನೋ ಆ ದೇವಜನರು ಒಂದು ಸ್ವರ್ಗೀಯ ನಿರೀಕ್ಷೆಯುಳ್ಳವರಾದ, ಯೇಸುವಿನ ಅಭಿಷಿಕ್ತ ಹಿಂಬಾಲಕರಾಗಿದ್ದಾರೆ. ಆದರೆ ನಿಮಗೆ ಒಂದು ಸ್ವರ್ಗೀಯ ಕರೆಯಿರಲಿ, ಅಥವಾ ಐಹಿಕ ನಿರೀಕ್ಷೆಯಿರಲಿ, ಒಬ್ಬ ಕ್ರೈಸ್ತನೋಪಾದಿ ನೀವು ದೇವರ ಪವಿತ್ರಾತ್ಮದ ಸಹಾಯವನ್ನು ಪಡೆಯಬಲ್ಲಿರಿ. ಯೆಹೋವನು ಕೆಲವು ಸಾರಿ ಒಂದು ವಿಶಿಷ್ಟ ಪ್ರಾರ್ಥನೆಗೆ ನೇರವಾದ ಉತ್ತರವನ್ನು ಕೊಡುತ್ತಾನೆ. ಆದರೂ, ಕೆಲವೊಮ್ಮೆ ನೀವೆಷ್ಟು ಸಂಕಟಕ್ಕೆ ಗುರಿಯಾಗಿರಬಹುದೆಂದರೆ, ನಿಮ್ಮ ಅನಿಸಿಕೆಗಳನ್ನು ಮಾತುಗಳಲ್ಲಿ ಹೇಳಲು ಅಶಕ್ತರಾಗುತ್ತೀರಿ ಮತ್ತು ಮಾತಿಲ್ಲದಂಥ ನರಳಾಟದೊಂದಿಗೆ ಮಾತ್ರವೇ ಯೆಹೋವನಿಗೆ ಮೊರೆಯಿಡಲು ಶಕ್ತರಾಗಬಹುದು. ವಾಸ್ತವದಲ್ಲಿ, ನಿಮಗೆ ಯಾವುದು ಒಳ್ಳೆಯದು ಎಂದು ನಿಮಗೆ ತಿಳಿಯದಿರಬಹುದು ಮತ್ತು ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳದ ಹೊರತು ನೀವು ಕೆಟ್ಟ ವಿಷಯಗಳಿಗಾಗಿ ಕೂಡ ಕೇಳಲೂಬಹುದು. ಆತನ ಚಿತ್ತವು ನೆರವೇರುವಂತೆ ನೀವು ಬಯಸುತ್ತೀರೆಂದು ದೇವರಿಗೆ ತಿಳಿದದೆ, ಮತ್ತು ನಿಮಗೆ ನಿಜವಾಗಿ ಏನು ಬೇಕೆಂದು ಅವನು ಅರಿತವನಾಗಿದ್ದಾನೆ. ಅದಲ್ಲದೆ, ತನ್ನ ಪವಿತ್ರಾತ್ಮನ ಮೂಲಕವಾಗಿ ತನ್ನ ವಾಕ್ಯದಲ್ಲಿ ಅನೇಕ ಪ್ರಾರ್ಥನೆಗಳು ದಾಖಲೆಮಾಡಲ್ಪಡುವಂತೆ ಆತನು ಮಾಡಿದ್ದಾನೆ, ಮತ್ತು ಇವು ಸಂಕಟಕರ ಪರಿಸ್ಥಿತಿಗಳೊಂದಿಗೆ ವ್ಯವಹರಿಸುತ್ತವೆ. (2 ತಿಮೊಥೆಯ 3:16, 17; 2 ಪೇತ್ರ 1:21) ಆದಕಾರಣ, ಯೆಹೋವನು ಅಂಥ ಪ್ರೇರಿತ ಪ್ರಾರ್ಥನೆಗಳಲ್ಲಿ ವ್ಯಕ್ತಪಡಿಸಲ್ಪಟ್ಟ ನಿಶ್ಚಿತ ಮನೋಭಾವನೆಗಳನ್ನು, ಆತನ ಸೇವಕರಲ್ಲೊಬ್ಬರಾದ ನೀವು ಹೇಳಲಿಚ್ಚಿಸುವ ಹೇಳಿಕೆಗಳಾಗಿ ದೃಷ್ಟಿಸ ಸಾಧ್ಯವಿದೆ, ಮತ್ತು ಅವನ್ನು ನಿಮ್ಮ ಪರವಾಗಿ ಆತನು ಉತ್ತರಿಸಬಲ್ಲನು.
13 ಆಸ್ಯ ಸೀಮೆಯಲ್ಲಿ ಸಂಕಟವನ್ನು ಅನುಭವಿಸಿದಾಗ ಪೌಲ ಮತ್ತು ಅವನ ಸಹವಾಸಿಗಳಿಗೆ ಏನು ಪ್ರಾರ್ಥಿಸಬೇಕೆಂದು ತಿಳಿಯದೆ ಇದ್ದಿರಬಹುದು. ಅವರು ‘ಬಲವನ್ನು ಮೀರಿದಂಥ ಅತ್ಯಧಿಕವಾದ ಭಾರದಿಂದ ಕುಗ್ಗಿಹೋಗಿದ್ದರಿಂದ ಮರಣವಾಗುತ್ತದೆಂಬ ನಿಶ್ಚಯವು ಅವರೊಳಗೆ ಉಂಟಾಯಿತು.’ ಆದರೆ ಅವರು ಇತರರ ವಿಜ್ಞಾಪನೆಗಳಿಗಾಗಿ ಕೋರಿದರು ಮತ್ತು ಸತ್ತವರನ್ನು ಎಬ್ಬಿಸ ಶಕ್ತನಾದ ದೇವರ ಮೇಲೆ ಭರವಸವಿಟ್ಟರು, ಮತ್ತು ಆತನು ಅವರನ್ನು ರಕ್ಷಿಸಿದನು. (2 ಕೊರಿಂಥ 1:8-11) ತನ್ನ ನಂಬಿಗಸ್ತ ಸೇವಕರ ಪ್ರಾರ್ಥನೆಗಳನ್ನು ಯೆಹೋವ ದೇವರು ಕೇಳುತ್ತಾನೆ ಮತ್ತು ಅವುಗಳ ಮೇಲೆ ಕ್ರಿಯೆಗೈಯುತ್ತಾನೆ ಎಂಬದು ಎಷ್ಟು ಸಾಂತ್ವನಕರವು!
14. ಒಂದು ಸಂಕಷ್ಟವನ್ನು ಕೆಲವು ಸಮಯದ ತನಕ ಮುಂದರಿಯುವಂತೆ ಯೆಹೋವನು ಅನುಮತಿಸುವುದಾದರೆ, ಯಾವ ಒಳ್ಳಿತು ಲಭಿಸಬಹುದು?
14 ದೇವಜನರು ಒಂದು ಸಂಸ್ಥೆಯೋಪಾದಿ ಆಗಿಂದಾಗ್ಯೆ ಸಂಕಷ್ಟಗಳಿಂದ ಮುತ್ತಲ್ಪಡುತ್ತಾರೆ. ಪ್ರಾರಂಭದಲ್ಲಿ ಗಮನಿಸಲ್ಪಟ್ಟ ಪ್ರಕಾರ, ಅವರು ಒಂದನೆಯ ಲೋಕ ಯುದ್ಧದ ಸಮಯದಲ್ಲಿ ಹಿಂಸಿಸಲ್ಪಟ್ಟರು. ಆಗ ಅವರಿಗೆ ತಮ್ಮ ನಿಲುವಿನ ಸ್ಪಷ್ಟವಾಗಿದ ತಿಳುವಳಿಕೆಯು ಇರದಿದ್ದರೂ ಮತ್ತು ಹೀಗೆ ಯಾವುದಕ್ಕಾಗಿ ಪ್ರಾರ್ಥಿಸಬೇಕೆಂದು ಸರಿಯಾಗಿ ತಿಳಿಯದೆ ಇದ್ದರೂ, ಆತನು ಅವರ ಪರವಾಗಿ ಉತ್ತರಿಸಿದ ಪ್ರವಾದನಾ ಪ್ರಾರ್ಥನೆಗಳು ಯೆಹೋವನ ವಾಕ್ಯದಲ್ಲಿ ಅಡಕವಾಗಿವೆ. (ಕೀರ್ತನೆ 69, 102, 126; ಯೆಶಾಯ, ಅಧ್ಯಾಯ 12) ಆದರೆ ಯೆಹೋವನು ಒಂದು ಸಂಕಷ್ಟವನ್ನು ಕೆಲವು ಸಮಯದ ತನಕ ಮುಂದರಿಯುವಂತೆ ಅನುಮತಿಸಿದರೆ ಆಗೇನು? ಇದು ಒಂದು ಸಾಕ್ಷಿಯಾಗಿ ಪರಿಣಮಿಸಬಹುದು, ಕೆಲವರು ಸತ್ಯವನ್ನು ಸ್ವೀಕರಿಸುವಂತೆ ಪ್ರೇರೇಪಿಸಬಹುದು, ಅಥವಾ ಕಷ್ಟಾನುಭವಿಸುತ್ತಿರುವ ಜೊತೆ ವಿಶ್ವಾಸಿಗಳಿಗಾಗಿ ಪ್ರಾರ್ಥಿಸುವ ಮೂಲಕ ಇಲ್ಲವೇ ಸಹಾಯ ಮಾಡುವ ಮೂಲಕ ಸಹೋದರ ಪ್ರೀತಿಯನ್ನು ತೋರಿಸುವ ಸಂದರ್ಭವನ್ನು ಕ್ರೈಸ್ತರಿಗೆ ಕೊಡಬಹುದು. (ಯೋಹಾನ 13:34, 35; 2 ಕೊರಿಂಥ 1:11) ಯೆಹೋವನು ತನ್ನ ಜನರನ್ನು ತನ್ನ ಪವಿತ್ರಾತ್ಮದ ಮೂಲಕ ನಡಿಸುತ್ತಾನೆ, ಅವರಿಗೆ ಯಾವುದು ಒಳ್ಳೆಯದೋ ಅದನ್ನು ಮಾಡುತ್ತಾನೆ, ಮತ್ತು ಯಾವಾಗಲೂ ವಿಷಯಗಳನ್ನು ತನ್ನ ಪವಿತ್ರ ನಾಮವನ್ನು ಗೌರವಿಸುವ ಮತ್ತು ಮಹಿಮೆಪಡಿಸುವ ರೀತಿಯಲ್ಲಿ ನಡಿಸುತ್ತಾನೆಂಬದನ್ನು ನೆನಪಿನಲ್ಲಿಡಿರಿ.—ವಿಮೋಚನಕಾಂಡ 9:16; ಮತ್ತಾಯ 6:9.
ಪವಿತ್ರಾತ್ಮವನ್ನೆಂದೂ ದುಃಖಪಡಿಸಬೇಡಿರಿ
15. ತಮ್ಮ ಪರವಾಗಿ ಏನು ಮಾಡುವಂತೆ ಕ್ರೈಸ್ತರು ಯೆಹೋವನ ಆತ್ಮದ ಮೇಲೆ ಆತುಕೊಳ್ಳಬಲ್ಲರು?
15 ಆದುದರಿಂದ, ನೀವು ಯೆಹೋವನ ಒಬ್ಬ ಸೇವಕರು ಆಗಿದ್ದರೆ, ಸಂಕಷ್ಟಗಳ ಸಮಯದಲ್ಲಿ ಮತ್ತು ಬೇರೆ ಸಮಯಗಳಲ್ಲಿ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳಿರಿ. ಅನಂತರ ಅದರ ಮಾರ್ಗದರ್ಶನೆಯನ್ನು ಅನುಸರಿಸಲು ನಿಶ್ಚಯತೆಯಿಂದಿರ್ರಿ, ಯಾಕಂದರೆ ಪೌಲನು ಬರೆದದ್ದು: “ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆಹೊಂದಿದೀರ್ದಲ್ಲಾ.” (ಎಫೆಸ 4:30) ದೇವರ ಆತ್ಮವು ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿಗಾಗಿ—ಒಂದು ಮುದ್ರೆ ಆಗಿತ್ತು ಮತ್ತು ಆಗಿದೆ, ಅಥವಾ ‘ಸಂಚಕಾರದ ಗುರುತು’ ಆಗಿದೆ—ಅಂದರೆ, ಅಮರ ಸ್ವರ್ಗೀಯ ಜೀವನ. (2 ಕೊರಿಂಥ 1:22; ರೋಮಾಪುರ 8:15; 1 ಕೊರಿಂಥ 15:50-57; ಪ್ರಕಟನೆ 2:10) ಅಭಿಷಿಕ್ತ ಕ್ರೈಸ್ತರು ಮತ್ತು ಭೂನಿರೀಕ್ಷೆ ಉಳ್ಳವರು ಇಬ್ಬರೂ ಯೆಹೋವನ ಆತ್ಮದಲ್ಲಿ, ತಮ್ಮ ಪರವಾಗಿ ಹೆಚ್ಚನ್ನು ಮಾಡುವಂತೆ ಆತುಕೊಳ್ಳ ಸಾಧ್ಯವಿದೆ. ಅದು ಅವರನ್ನು ಒಂದು ನಂಬಿಗಸ್ತಿಕೆಯ ಜೀವನದಲ್ಲಿ ಮಾರ್ಗದರ್ಶಿಸಬಲ್ಲದು ಮತ್ತು ದೇವರ ಅಪ್ರಸನ್ನತೆಗೆ, ಆತನ ಪವಿತ್ರಾತ್ಮದ ಕಳಕೊಳ್ಳುವಿಕೆಗೆ, ಮತ್ತು ನಿತ್ಯಜೀವ ಪಡೆಯಲು ತಪ್ಪುವುದಕ್ಕೆ ನಡಿಸುವ ಪಾಪಮಯ ಕೃತ್ಯಗಳನ್ನು ವರ್ಜಿಸಲು ಸಹಾಯ ಮಾಡುತ್ತದೆ.—ಗಲಾತ್ಯ 5:19-21.
16, 17. ಒಬ್ಬ ಕ್ರೈಸ್ತನು ಪವಿತ್ರಾತ್ಮವನ್ನು ಹೇಗೆ ದುಃಖಪಡಿಸಬಹುದು?
16 ಒಬ್ಬ ಕ್ರೈಸ್ತನು ತಿಳಿದೂ ಅಥವಾ ತಿಳಿಯದೆ ಪವಿತ್ರಾತ್ಮವನ್ನು ಹೇಗೆ ದುಃಖಪಡಿಸಬಹುದು? ಒಳ್ಳೇದು, ಐಕ್ಯತೆಯನ್ನು ಪ್ರವರ್ಧಿಸುವುದಕ್ಕಾಗಿ ಮತ್ತು ಸಭೆಯಲ್ಲಿ ಜವಾಬ್ದಾರಿ ಪುರುಷರನ್ನು ನೇಮಿಸುವುದಕ್ಕಾಗಿ ಯೆಹೋವನು ತನ್ನ ಆತ್ಮವನ್ನು ಉಪಯೋಗಿಸುತ್ತಾನೆ. ಆದುದರಿಂದ, ಸಭೆಯ ಸದಸ್ಯನೊಬ್ಬನು ನೇಮಿತ ಹಿರಿಯರ ವಿರುದ್ಧವಾಗಿ ಗುಣುಗುಟ್ಟುವುದಾದರೆ, ಮಿಥ್ಯಾಪವಾದದ ಹರಟೆಯೇ ಮುಂತಾದವುಗಳನ್ನು ಹಬ್ಬಿಸುವುದಾದರೆ, ಅವನು ಶಾಂತಿ ಮತ್ತು ಐಕ್ಯತೆಯ ಕಡೆಗೆ ದೇವರಾತ್ಮದ ನಡಿಸುವಿಕೆಗಳನ್ನು ಅನುಸರಿಸುವವನಾಗಿರುವುದಿಲ್ಲ. ಸಾಮಾನ್ಯವಾಗಿ, ಅವನು ಪವಿತ್ರಾತ್ಮವನ್ನು ದುಃಖಪಡಿಸುವವನಾಗಿರುವನು.—1 ಕೊರಿಂಥ 1:10; 3:1-4, 16, 17; 1 ಥೆಸಲೊನೀಕ 5:12, 13; ಯೂದ 16.
17 ಎಫೆಸದ ಕ್ರೈಸ್ತರಿಗೆ ಬರೆಯುವಲ್ಲಿ ಪೌಲನು, ಸುಳ್ಳು, ದೀರ್ಘಾವಧಿಯ ಕ್ರೋಧ, ಕಳ್ಳತನ, ಅಯುಕ್ತ ಮಾತು, ಹಾದರದಲ್ಲಿ ವಿಕಾರವಾದ ಬಯಕೆ, ಲಜ್ಜಾಸ್ಪದವಾದ ನಡತೆ, ಮತ್ತು ಕುಚೋದ್ಯಗಳೆಡೆಗಿನ ಪ್ರವೃತ್ತಿಗಳ ವಿರುದ್ಧವಾಗಿ ಎಚ್ಚರಿಸಿದನು. ಒಬ್ಬ ಕ್ರೈಸ್ತನು ಅಂಥ ವಿಷಯಗಳ ಕಡೆಗೆ ಓಲುವಂತೆ ತನ್ನನ್ನು ಬಿಟ್ಟುಕೊಡುವುದಾದರೆ, ಅವನು ಬೈಬಲಿನ ಆತ್ಮ-ಪ್ರೇರಿತ ಬುದ್ಧಿವಾದಕ್ಕೆ ವಿರುದ್ಧವಾಗಿ ಹೋಗುವವನಾಗಿರುವನು. (ಎಫೆಸ 4:17-29; 5:1-5) ಹೌದು, ಮತ್ತು ಒಂದು ಮಟ್ಟದ ತನಕ ಅವನು ಹೀಗೆ ದೇವರ ಆತ್ಮವನ್ನು ದುಃಖಪಡಿಸುವವನಾಗಿರುವನು.
18. ದೇವರ ಆತ್ಮ-ಪ್ರೇರಿತ ವಾಕ್ಯದ ಬುದ್ಧಿವಾದವನ್ನು ಅಲಕ್ಷಿಸಲಾರಂಭಿಸುವ ಯಾವನೇ ಕ್ರೈಸ್ತನಿಗೆ ಏನು ಸಂಭವಿಸಬಹುದು?
18 ಕಾರ್ಯತಃ ಯಾವನೇ ಕ್ರೈಸ್ತನು ಯೆಹೋವನ ಆತ್ಮ-ಪ್ರೇರಿತ ವಾಕ್ಯದ ಬುದ್ಧಿವಾದವನ್ನು ಅಲಕ್ಷಿಸಲಾರಂಭಿಸಿದರೆ, ಬುದ್ಧಿಪೂರ್ವಕ ಪಾಪದಲ್ಲಿ ಮತ್ತು ದೈವಿಕ ಮೆಚ್ಚಿಕೆಯನ್ನು ಕಳಕೊಳ್ಳುವಿಕೆಯಲ್ಲಿ ಪರ್ಯಾವಸಾನಗೊಳ್ಳ ಶಕ್ತನಾದ ಮನೋಭಾವನೆಗಳನ್ನು ಅಥವಾ ಪ್ರವೃತ್ತಿಗಳನ್ನು ವಿಕಾಸಿಸಲು ತೊಡಗಬಹುದು. ಅವನು ಆಗ ಪಾಪವನ್ನು ಮಾಡುತ್ತಿರಲಿಕ್ಕಿಲ್ಲವಾದರೂ, ಆ ದಿಕ್ಕಿನಲ್ಲಿ ಅವನು ಮುಂದರಿಯುತ್ತಿರಲು ಸಾಧ್ಯವಿದೆ. ಆತ್ಮದ ಮಾರ್ಗದರ್ಶನಕ್ಕೆ ವಿರುದ್ಧವಾಗಿ ಹೋಗುವ ಅಂಥ ಒಬ್ಬ ಕ್ರೈಸ್ತನು ಅದನ್ನು ದುಃಖಪಡಿಸುವವನಾಗಿರುವನು. ಹೀಗೆ ಅವನು ಪವಿತ್ರಾತ್ಮದ ಮೂಲನಾದ ಯೆಹೋವನನ್ನು ಸಹ ಎದುರಿಸುವವನು ಮತ್ತು ದುಃಖಪಡಿಸುವವನು ಆಗಿರುವನು. ದೇವ ಪ್ರೇಮಿಯೊಬ್ಬನು ಅದನ್ನೆಂದೂ ಮಾಡ ಬಯಸನು!
ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುತ್ತಾ ಇರ್ರಿ
19. ಯೆಹೋವನ ಜನರಿಗೆ ಇಂದು ಆತನ ಆತ್ಮವು ವಿಶೇಷವಾಗಿ ಆವಶ್ಯಕವೇಕೆ?
19 ನೀವೊಬ್ಬ ಯೆಹೋವನ ಸೇವಕರಾಗಿದ್ದರೆ, ಆತನ ಪವಿತ್ರಾತ್ಮಕ್ಕಾಗಿ ಬೇಡುವುದನ್ನು ಮುಂದುವರಿಸಿರಿ. ವಿಶೇಷವಾಗಿ ವ್ಯವಹರಿಸಲು ಬಹು ಕಷ್ಟವಾದ ಕಠಿಣಕಾಲದ ಈ “ಕಡೇ ದಿನಗಳಲ್ಲಿ,” ದೇವರ ಆತ್ಮದ ಸಹಾಯವು ಕ್ರೈಸ್ತರಿಗೆ ಆವಶ್ಯಕವಾಗಿದೆ. (2 ತಿಮೊಥೆಯ 3:1-5) ಪರಲೋಕದಿಂದ ದೊಬ್ಬಲ್ಪಟ್ಟು ಈಗ ಭೂಮಿಯ ಸಾಮೀಪ್ಯದಲ್ಲಿರುವ ಪಿಶಾಚನು ಮತ್ತು ಅವನ ದೆವ್ವಗಳು, ಯೆಹೋವನ ಸಂಸ್ಥೆಯ ವಿರುದ್ಧ ಕೋಪಾವೇಶದಿಂದ ಎರಗಿದ್ದಾರೆ. ಆದುದರಿಂದ, ಇಂದು ಎಂದಿಗಿಂತಲೂ ಹೆಚ್ಚಾಗಿ, ದೇವಜನರಿಗೆ ಅವರನ್ನು ನಡಿಸಲು ಅಥವಾ ಮಾರ್ಗದರ್ಶಿಸಲು ಮತ್ತು ಕಷ್ಟಗಳನ್ನು ಮತ್ತು ಹಿಂಸೆಯನ್ನು ತಾಳುವಂತೆ ಶಕ್ತರಾಗಿ ಮಾಡಲು ದೇವರ ಪವಿತ್ರಾತ್ಮದ ಆವಶ್ಯಕತೆ ಇದೆ.—ಪ್ರಕಟನೆ 12:7-12.
20, 21. ಯೆಹೋವನ ವಾಕ್ಯದ, ಆತ್ಮದ, ಮತ್ತು ಸಂಸ್ಥೆಯ ಮಾರ್ಗದರ್ಶನವನ್ನು ಏಕೆ ಅನುಸರಿಸಬೇಕು?
20 ಯೆಹೋವ ದೇವರು ತನ್ನ ಪವಿತ್ರಾತ್ಮದ ಮೂಲಕ ಒದಗಿಸುವ ಸಹಾಯಕ್ಕಾಗಿ ಯಾವಾಗಲೂ ಗಣ್ಯತೆ ತೋರಿಸಿರಿ. ಆತನ ಆತ್ಮ-ಪ್ರೇರಿತ ವಾಕ್ಯವಾದ ಬೈಬಲಿನ ಮಾರ್ಗದರ್ಶನವನ್ನು ಹಿಂಬಾಲಿಸಿರಿ. ದೇವರ ಆತ್ಮದಿಂದ ನಡಿಸಲ್ಪಡುವ ಐಹಿಕ ಸಂಸ್ಥೆಯೊಂದಿಗೆ ಪೂರ್ಣವಾಗಿ ಸಹಕರಿಸಿರಿ. ಪವಿತ್ರಾತ್ಮವನ್ನು ದುಃಖಪಡಿಸುವದಕ್ಕೆ ಸಮಾನವಾಗುವ ಒಂದು ಅಶಾಸ್ತ್ರೀಯ ಮಾರ್ಗಕ್ಕೆ ತಿರುಗುವಂತೆ ನಿಮ್ಮನ್ನೆಂದೂ ಬಿಟ್ಟುಕೊಡಬೇಡಿರಿ, ಯಾಕಂದರೆ ಇದು ಕಟ್ಟಕಡೆಗೆ ಅದರ ಹಿಂತೆಗೆಯುವಿಕೆಗೆ ಮತ್ತು ಹೀಗೆ ಆತ್ಮಿಕ ವಿನಾಶಕ್ಕೆ ನಡಿಸಬಹುದು.—ಕೀರ್ತನೆ 51:11.
21 ಯೆಹೋವನ ಆತ್ಮದಿಂದ ನಡಿಸಲ್ಪಡುವುದು ಆತನನ್ನು ಮೆಚ್ಚಿಸುವ ಮತ್ತು ಒಂದು ಶಾಂತಿಭರಿತ, ಸಂತೋಷಯುಕ್ತ ಜೀವಿತದ ಏಕಮಾತ್ರ ಮಾರ್ಗವಾಗಿದೆ. ಯೇಸು ಆ ಪವಿತ್ರಾತ್ಮವನ್ನು ಒಬ್ಬ “ಸಹಾಯಕನು” ಅಥವಾ “ಸಂತೈಸುವವನು” ಎಂದು ಕರೆದಿದ್ದಾನೆ ಎಂದೂ ಜ್ಞಾಪಕದಲ್ಲಿಡಿರಿ. (ಯೋಹಾನ 14:16, NW, ಪಾದಟಿಪ್ಪಣಿ) ಅದರ ಮೂಲಕವಾಗಿ ದೇವರು ಕ್ರೈಸ್ತರನ್ನು ಸಂತೈಸುತ್ತಾನೆ ಮತ್ತು ಅವರ ಸಂಕಷ್ಟಗಳನ್ನು ಎದುರಿಸಲು ಅವರನ್ನು ಬಲಗೊಳಿಸುತ್ತಾನೆ. (2 ಕೊರಿಂಥ 1:3, 4) ಆತ್ಮವು ಯೆಹೋವನ ಜನರಿಗೆ ಸುವಾರ್ತೆಯನ್ನು ಸಾರಲು ಶಕಿಕ್ತೊಡುತ್ತದೆ ಮತ್ತು ಒಂದು ಒಳ್ಳೇ ಸಾಕ್ಷಿಯನ್ನು ಕೊಡುವುದಕ್ಕೆ ಬೇಕಾದ ಶಾಸ್ತ್ರೀಯ ವಿಷಯಗಳನ್ನು ನೆನಪಿಗೆ ತರಲು ಅವರಿಗೆ ಸಹಾಯಮಾಡುತ್ತದೆ. (ಲೂಕ 12:11, 12; ಯೋಹಾನ 14:25, 26; ಅ. ಕೃತ್ಯಗಳು 1:4-8; 5:32) ಪ್ರಾರ್ಥನೆ ಮತ್ತು ಆತ್ಮದ ಮಾರ್ಗದರ್ಶನದ ಮೂಲಕ, ಕ್ರೈಸ್ತರು ನಂಬಿಕೆಯ ಪರೀಕ್ಷೆಗಳನ್ನು ದೈವಿಕ ವಿವೇಕದಿಂದ ಎದುರಿಸಬಲ್ಲರು. ಆದುದರಿಂದ, ಜೀವಿತದ ಎಲ್ಲಾ ಪರಿಸ್ಥಿತಿಗಳಲ್ಲಿ ಅವರು ದೇವರ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುತ್ತಾ ಇರುತ್ತಾರೆ. ಫಲಿತಾಂಶವಾಗಿ, ಯೆಹೋವನ ಆತ್ಮವು ಆತನ ಜನರನ್ನು ನಡಿಸುತ್ತದೆ. (w92 9/15)
[ಅಧ್ಯಯನ ಪ್ರಶ್ನೆಗಳು]
a ಒಬ್ಬ “ಸಹಾಯಕನು” ಎಂದು ವ್ಯಕ್ತೀಕರಿಸಲ್ಪಟ್ಟರೂ, ಪವಿತ್ರಾತ್ಮವು ಒಬ್ಬ ವ್ಯಕ್ತಿಯಲ್ಲ, ಯಾಕಂದರೆ (“ಅದು” ಎಂದು ತರ್ಜುಮೆಯಾದ) ಒಂದು ಗ್ರೀಕ್ ನಪುಂಸಕ ಸರ್ವನಾಮವು ಆ ಆತ್ಮಕ್ಕೆ ಅನ್ವಯಿಸಲ್ಪಟ್ಟಿದೆ. ಅದೇ ರೀತಿ ಹೀಬ್ರು ಸ್ತ್ರೀಲಿಂಗ ಸರ್ವನಾಮಗಳು ಜ್ಞಾನವನ್ನು ವ್ಯಕ್ತೀಕರಿಸಲಿಕ್ಕೆ ಅನ್ವಯಿಸಲ್ಪಟ್ಟಿವೆ. (ಜ್ಞಾನೋಕ್ತಿ 1:20-33; 8:1-36) ಅದಲ್ಲದೆ, ಪವಿತ್ರಾತ್ಮವು “ಸುರಿಸ” ಲ್ಪಟ್ಟಿತ್ತು, ಇದನ್ನು ವ್ಯಕ್ತಿಯ ಸಂಬಂಧದಲ್ಲಿ ಮಾಡಸಾಧ್ಯವಿಲ್ಲ.—ಅ. ಕೃತ್ಯಗಳು 2:33.
ನಿಮ್ಮ ಉತ್ತರಗಳೇನು?
▫ ಯೆಹೋವನ ಪವಿತ್ರಾತ್ಮಕ್ಕಾಗಿ ಏಕೆ ಬೇಡಿಕೊಳ್ಳಬೇಕು?
▫ ಪವಿತ್ರಾತ್ಮವು ಹೇಗೆ ಒಬ್ಬ ಸಹಾಯಕನಾಗಿದೆ?
▫ ಪವಿತ್ರಾತ್ಮವನ್ನು ದುಃಖಪಡಿಸುವದು ಎಂದರೇನು, ಮತ್ತು ಹಾಗೆ ಮಾಡುವುದನ್ನು ನಾವು ಹೇಗೆ ವರ್ಜಿಸಬಲ್ಲೆವು?
▫ ಪವಿತ್ರಾತ್ಮಕ್ಕಾಗಿ ಬೇಡಿಕೊಳ್ಳುತ್ತಾ ಮತ್ತು ಅದರ ಮಾರ್ಗದರ್ಶನವನ್ನು ಅನುಸರಿಸುತ್ತಾ ಇರಬೇಕೇಕೆ?
[ಪುಟ 15 ರಲ್ಲಿರುವ ಚಿತ್ರ]
ಒಬ್ಬ ಪ್ರೀತಿಯುಳ್ಳ ತಂದೆಯು ತನ್ನ ಮಗನಿಗೆ ಒಳ್ಳೆಯ ವಸ್ತುಗಳನ್ನು ಕೊಡುವಂತೆಯೇ, ಅದಕ್ಕಾಗಿ ಬೇಡಿಕೊಳ್ಳುವ ತನ್ನ ಸೇವಕರಿಗೆ ಯೆಹೋವನು ಪವಿತ್ರಾತ್ಮವನ್ನು ಕೊಡುತ್ತಾನೆ
[ಪುಟ 17 ರಲ್ಲಿರುವ ಚಿತ್ರ]
ಪ್ರಾರ್ಥನಾಸಕ್ತ ಕ್ರೈಸ್ತರಿಗಾಗಿ ದೇವರ ಆತ್ಮವು ಹೇಗೆ ವಿನಂತಿಸುತ್ತದೆಂದು ನಿಮಗೆ ಗೊತ್ತೋ?