ಪ್ರೀತಿಯ ಉತ್ಕೃಷ್ಟ ಮಾರ್ಗ
(This article has been taken from Insight book - Love)
ದೇವರಂತಹ ಪ್ರೀತಿಯು, ಎಷ್ಟು ಅದ್ಭುತಕರವಾಗಿದೆಯೆಂದರೆ, ಅದರ ಅರ್ಥನಿರೂಪಿಸುವುದು ಕಷ್ಟ. ಅದು ಹೇಗೆ ಕ್ರಿಯೆಗೈಯುತ್ತದೆಂಬುದನ್ನು ಹೇಳುವುದು ಹೆಚ್ಚು ಸುಲಭ. ಈ ವಿಷಯದ ಕುರಿತಾಗಿ ಬರೆಯುತ್ತಾ ಅಪೊಸ್ತಲ ಪೌಲನು, ಇದು ಒಬ್ಬ ಕ್ರೈಸ್ತ ವಿಶ್ವಾಸಿಗೆ ಎಷ್ಟು ಅತ್ಯಾವಶ್ಯಕವೆಂಬುದನ್ನು ಪ್ರಥಮವಾಗಿ ಒತ್ತಿಹೇಳಿ, ಅದು ನಿಸ್ವಾರ್ಥವಾಗಿ ಕ್ರಿಯೆಗೈಯುವ ವಿಧವನ್ನು ಅನಂತರ ವಿವರಿಸುತ್ತಾ ಹೇಳುವುದು: “ಪ್ರೀತಿಯು ದೀರ್ಘಸೈರಣೆ ಮತ್ತು ದಯೆಯುಳ್ಳದ್ದು. ಪ್ರೀತಿಯು ಈರ್ಷ್ಯೆಪಡುವುದಿಲ್ಲ, ಅದು ಬಡಾಯಿಕೊಚ್ಚುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಅಸಭ್ಯವಾಗಿ ವರ್ತಿಸುವುದಿಲ್ಲ, ಸ್ವಂತ ಅಭಿರುಚಿಗಳನ್ನು ಹುಡುಕುವುದಿಲ್ಲ, ಕೆರಳಿಸಲ್ಪಟ್ಟದ್ದಾಗುವುದಿಲ್ಲ. ಅದು ಕೇಡಿನ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ. ಅನೀತಿಯ ವಿಷಯದಲ್ಲಿ ಹರ್ಷಿಸದೆ, ಸತ್ಯದೊಂದಿಗೆ ಹರ್ಷಿಸುತ್ತದೆ. ಅದು ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ.”—1 ಕೊರಿಂಥ 13:4-7, NW.
ದೈವಿಕ ಪ್ರೀತಿಯು ಕ್ರಿಯೆಗೈಯುವ ವಿಧ
“ಪ್ರೀತಿಯು ದೀರ್ಘಸೈರಣೆ ಮತ್ತು ದಯೆಯುಳ್ಳದ್ದು.” ಅದು ಅನನುಕೂಲ ಪರಿಸ್ಥಿತಿಗಳನ್ನು ಮತ್ತು ಇತರರ ತಪ್ಪು ಕೃತ್ಯಗಳನ್ನು ಸಹಿಸಿಕೊಳ್ಳುತ್ತದೆ. ತಪ್ಪನ್ನು ಮಾಡುತ್ತಿರುವವರು ಮತ್ತು ಪರಿಸ್ಥಿತಿಗಳಲ್ಲಿ ಒಳಗೂಡಿರುವ ಇನ್ನಿತರರು, ಅಂತ್ಯದಲ್ಲಿ ರಕ್ಷಿಸಲ್ಪಡುವುದೇ ಇದರ ಉದ್ದೇಶ. ದೇವರ ಹೆಸರಿಗೆ ಗೌರವ ಮತ್ತು ನಿರ್ದೋಷೀಕರಣವನ್ನು ತರುವ ಕೊನೆಯ ಉದ್ದೇಶವೂ ಇದಕ್ಕಿದೆ. (2 ಪೇತ್ರ 3:15) ಕೆರಳಿಸುವಂತಹ ವಿಷಯವು ಏನೇ ಆಗಿರಲಿ, ಪ್ರೀತಿಯು ದಯೆಯುಳ್ಳದ್ದಾಗಿದೆ. ಇತರರ ಕಡೆಗೆ ಒಬ್ಬ ಕ್ರೈಸ್ತನು ತೋರಿಸುವ ಒರಟುತನ ಅಥವಾ ನಿಷ್ಠುರತೆಯು ಯಾವುದೇ ಒಳಿತನ್ನು ಸಾಧಿಸದು. ಆದರೆ, ಪ್ರೀತಿಯು ನೀತಿಯ ಪರವಾಗಿ ದೃಢವಾಗಿದ್ದು, ನ್ಯಾಯದಿಂದ ಕ್ರಿಯೆಗೈಯಬಲ್ಲದು. ಅಧಿಕಾರವಿರುವವರು ತಪ್ಪಿತಸ್ಥರನ್ನು ಶಿಸ್ತಿಗೊಳಪಡಿಸಬಹುದು, ಆದರೆ ಆಗಲೂ ಅವರು ದಯೆಯನ್ನು ಉಪಯೋಗಿಸಬೇಕು. ನಿರ್ದಯತೆಯು, ಆ ನಿರ್ದಯಿ ಸಲಹೆಗಾರನಿಗೂ, ಅನೀತಿಯನ್ನು ಮಾಡುವವನಿಗೂ ಪ್ರಯೋಜನವನ್ನು ತರದು, ಬದಲಾಗಿ ಅದು ಆ ವ್ಯಕ್ತಿಯನ್ನು, ಪಶ್ಚಾತ್ತಾಪ ಮತ್ತು ಸತ್ಕಾರ್ಯಗಳಿಂದ ಇನ್ನೂ ಹೆಚ್ಚು ದೂರ ಸರಿಸಬಲ್ಲದು.—ರೋಮಾಪುರ 2:4.
“ಪ್ರೀತಿಯು ಈರ್ಷ್ಯೆಪಡುವುದಿಲ್ಲ.” ಇತರರಿಗೆ ಬರುವಂತಹ ಒಳ್ಳೇ ವಿಷಯಗಳ ಕುರಿತಾಗಿ ಅದು ಅಸೂಯೆಪಡುವುದಿಲ್ಲ. ಒಬ್ಬ ಜೊತೆಮಾನವನು, ಹೆಚ್ಚಿನ ಜವಾಬ್ದಾರಿಯ ಒಂದು ಸ್ಥಾನವನ್ನು ಪಡೆದುಕೊಳ್ಳುವುದನ್ನು ನೋಡುವಾಗ ಅದು ಹರ್ಷಿಸುತ್ತದೆ. ಒಬ್ಬನ ಶತ್ರುಗಳು ಕೂಡ ಒಳ್ಳೇ ವಿಷಯಗಳನ್ನು ಪಡೆಯುವಾಗ ಅದು ಅಸಮಾಧಾನಪಡುವುದಿಲ್ಲ.
ಪ್ರೀತಿಯು “ಬಡಾಯಿಕೊಚ್ಚುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ.” ಅದು ಸೃಷ್ಟಿಜೀವಿಗಳ ಹೊಗಳಿಕೆ ಮತ್ತು ಶ್ಲಾಘನೆಯನ್ನು ಪಡೆಯಲು ಪ್ರಯತ್ನಿಸುವುದಿಲ್ಲ. (ಯೂದ 16) ಪ್ರೀತಿಯುಳ್ಳ ವ್ಯಕ್ತಿಯು, ತನ್ನನ್ನು ಬಹಳ ಗಣ್ಯ ವ್ಯಕ್ತಿಯಾಗಿ ತೋರಿಸಿಕೊಳ್ಳಲಿಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಕೆಳಕ್ಕೆ ದೂಡುವುದಿಲ್ಲ. ಬದಲಿಗೆ, ಅವನು ದೇವರನ್ನು ಉನ್ನತಕ್ಕೇರಿಸುವನು ಮತ್ತು ಇತರ ವ್ಯಕ್ತಿಗಳನ್ನು ಯಥಾರ್ಥವಾಗಿ ಉತ್ತೇಜಿಸಿ, ಭಕ್ತಿವೃದ್ಧಿಮಾಡುವನು. (ಕೊಲೊಸ್ಸೆ 1:3-5) ಇನ್ನೊಬ್ಬ ಕ್ರೈಸ್ತನು ಅಭಿವೃದ್ಧಿ ಮಾಡುವುದನ್ನು ನೋಡಲು ಅವನು ಸಂತೋಷಿಸುವನು. ಮತ್ತು ತಾನು ಏನನ್ನು ಮಾಡಲಿರುವನೊ ಅದರ ಕುರಿತಾಗಿ ಅವನು ಜಂಬಕೊಚ್ಚಿಕೊಳ್ಳುವುದಿಲ್ಲ. (ಜ್ಞಾನೋಕ್ತಿ 27:1) ಅವನು ಮಾಡುವಂಥದ್ದೆಲ್ಲವೂ, ಯೆಹೋವನಿಂದ ಬರುವ ಬಲದ ಕಾರಣದಿಂದಲೇ ಎಂಬುದನ್ನು ಅವನು ಗ್ರಹಿಸುವನು.—ಕೀರ್ತನೆ 34:2.
ಪ್ರೀತಿಯು “ಅಸಭ್ಯವಾಗಿ ವರ್ತಿಸುವುದಿಲ್ಲ.” ಅದು ಒರಟು ನಡತೆಯುಳ್ಳದ್ದಲ್ಲ. ಅದು ಲೈಂಗಿಕ ದುರಾಚಾರಗಳು ಅಥವಾ ದಂಗುಬಡಿಸುವ ನಡತೆಯಂತಹ, ಅಸಭ್ಯವಾದ ವರ್ತನೆಯಲ್ಲಿ ಒಳಗೊಳ್ಳುವುದಿಲ್ಲ. ಅದು ಯಾರಿಗೂ ಒರಟಾದದ್ದೂ, ಅಸಂಸ್ಕೃತವೂ, ವಿನಯವಿಲ್ಲದ್ದೂ, ದುರಹಂಕಾರದ್ದೂ, ಲಾಲಿತ್ಯವಿಲ್ಲದ್ದೂ ಅಥವಾ ಅವಮರ್ಯಾದೆಯದ್ದೂ ಆಗಿರುವುದಿಲ್ಲ. ಪ್ರೀತಿಯುಳ್ಳ ಒಬ್ಬ ವ್ಯಕ್ತಿಯು, ತೋರಿಕೆಯಲ್ಲಿ ಅಥವಾ ಕೃತ್ಯಗಳಲ್ಲಿ ತನ್ನ ಕ್ರೈಸ್ತ ಸಹೋದರರಿಗೆ ಕ್ಷೋಭೆಯನ್ನು ಉಂಟುಮಾಡುವ ಯಾವುದೇ ವಿಷಯಗಳನ್ನು ಮಾಡುವುದರಿಂದ ದೂರವಿರುವನು. ಕ್ರೈಸ್ತ ವಿಶ್ವಾಸಿಗಳಾಗಿರದ ಇತರರ ದೃಷ್ಟಿಯಲ್ಲಿ ಗೌರವದಿಂದ ನಡೆದುಕೊಳ್ಳುವಂತೆಯೂ ಅದು ಒಬ್ಬನನ್ನು ಪ್ರಚೋದಿಸುವುದು.—ರೋಮಾಪುರ 13:13.
ಪ್ರೀತಿಯು “ಸ್ವಂತ ಅಭಿರುಚಿಗಳನ್ನು ಹುಡುಕುವುದಿಲ್ಲ.” ಅದು ಈ ಮೂಲತತ್ತ್ವವನ್ನು ಅನುಸರಿಸುತ್ತದೆ: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.” (1 ಕೊರಿಂಥ 10:24) ಇತರರ ನಿತ್ಯ ಹಿತಕ್ಕಾಗಿ ಚಿಂತೆಯು ತನ್ನನ್ನು ವ್ಯಕ್ತಪಡಿಸಿಕೊಳ್ಳುವುದು ಇಲ್ಲೇ. ಇತರರಿಗಾಗಿರುವ ಈ ಯಥಾರ್ಥ ಚಿಂತೆಯು, ಪ್ರೀತಿಯಲ್ಲಿನ ಅತ್ಯಂತ ಬಲವಾದ ಪ್ರಚೋದಕ ಶಕ್ತಿಗಳಲ್ಲಿ ಒಂದಾಗಿದೆ, ಹಾಗೂ ಅದರ ಫಲಿತಾಂಶಗಳಲ್ಲಿ ಅತಿ ಪರಿಣಾಮಕಾರಿ ಮತ್ತು ಉಪಯುಕ್ತವಾದ ಒಂದು ಫಲಿತಾಂಶವಾಗಿದೆ. ಪ್ರೀತಿಯನ್ನು ಹೊಂದಿರುವವನು, ಎಲ್ಲಾ ವಿಷಯಗಳೂ ತನ್ನ ರೀತಿಯಲ್ಲೇ ಮಾಡಲ್ಪಡಬೇಕೆಂದು ತಗಾದೆಮಾಡುವುದಿಲ್ಲ. ಪ್ರೀತಿಯು ತನ್ನ “ಹಕ್ಕುಗಳ” ತಗಾದೆಯನ್ನೂ ಮಾಡುವುದಿಲ್ಲ; ಅದು ಇನ್ನೊಬ್ಬ ವ್ಯಕ್ತಿಯ ಆತ್ಮಿಕ ಕ್ಷೇಮದ ಕುರಿತಾಗಿ ಹೆಚ್ಚು ಚಿಂತೆಯುಳ್ಳದ್ದಾಗಿರುತ್ತದೆ.—ರೋಮಾಪುರ 14:13, 15.
ಪ್ರೀತಿಯು “ಕೆರಳಿಸಲ್ಪಟ್ಟದ್ದಾಗುವುದಿಲ್ಲ.” ಅದು ಕೆರಳಲಿಕ್ಕಾಗಿ ಒಂದು ಸಂದರ್ಭ ಅಥವಾ ಕಾರಣವನ್ನು ಹುಡುಕುವುದಿಲ್ಲ. ಅದು, ಶರೀರದ ಒಂದು ಕರ್ಮವಾಗಿರುವ ಕೋಪದ ಉದ್ರೇಕಗಳಿಗೆ ಪ್ರಚೋದಿಸಲ್ಪಡುವುದಿಲ್ಲ. (ಗಲಾತ್ಯ 5:19, 20) ಪ್ರೀತಿಯಿರುವವನೊಬ್ಬನು, ಇತರರು ಏನು ಹೇಳುತ್ತಾರೋ ಅಥವಾ ಮಾಡುತ್ತಾರೊ ಅದರಿಂದ ಸುಲಭವಾಗಿ ಮನಸ್ಸನ್ನು ನೋಯಿಸಿಕೊಳ್ಳುವುದಿಲ್ಲ.
ಪ್ರೀತಿಯು “ಕೇಡಿನ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ.” ತನಗೆ ಕೇಡಾಗಿದೆ ಮತ್ತು ಹೀಗಿರುವುದರಿಂದ ಆ ಕೇಡನ್ನು—ತಕ್ಕ ಸಮಯದಲ್ಲಿ ತೀರಿಸಲು ಅಥವಾ ಸಲ್ಲಿಸಲು, ‘ಲೆಕ್ಕದ ಪುಸ್ತಕದಲ್ಲಿ’ ಇಡಲಾಗಿರುವ ವಿಷಯದಂತೆ ನೋಡಿ, ಈ ಮಧ್ಯೆ ಕೇಡಾದವನ ಮತ್ತು ಕೇಡು ಮಾಡಿದವನ ನಡುವೆ ಯಾವ ಸಂಬಂಧವನ್ನೂ ಅನುಮತಿಸದ್ದಾಗಿ ಅದು ಇರುವುದಿಲ್ಲ. ಹಾಗೆ ಮಾಡುವುದು, ಬೈಬಲಿನಲ್ಲಿ ಖಂಡಿಸಲ್ಪಟ್ಟಿರುವ ಒಂದು ಪ್ರತೀಕಾರದ ಆತ್ಮವಾಗಿರುವುದು. (ರೋಮಾಪುರ 12:19) ಪ್ರೀತಿಯು ಇನ್ನೊಬ್ಬ ವ್ಯಕ್ತಿಯ ಮೇಲೆ ದುಷ್ಟ ಹೇತುಗಳನ್ನು ಹೊರಿಸದು, ಬದಲಾಗಿ ಇತರರನ್ನು ಸಂದೇಹಿಸದೇ ಅವರಿಗೆ ಅವಕಾಶಗಳನ್ನು ಕೊಡುವ ಪ್ರವೃತ್ತಿಯುಳ್ಳದ್ದಾಗಿರುವುದು.—ರೋಮಾಪುರ 14:1, 5.
ಪ್ರೀತಿಯು “ಅನೀತಿಯ ವಿಷಯದಲ್ಲಿ ಹರ್ಷಿಸದೆ, ಸತ್ಯದೊಂದಿಗೆ ಹರ್ಷಿಸುತ್ತದೆ.” ಸತ್ಯವು, ಹಿಂದೆ ನಂಬಲಾದಂತಹ ವಿಷಯಗಳನ್ನು ಅಥವಾ ನುಡಿಯಲಾದಂತಹ ಹೇಳಿಕೆಗಳನ್ನು ಬುಡಮೇಲು ಮಾಡುವುದಾದರೂ, ಪ್ರೀತಿಯು ಅದರೊಂದಿಗೆ ಹರ್ಷಿಸುತ್ತದೆ. ಅದು ದೇವರ ಸತ್ಯ ವಾಕ್ಯದೊಂದಿಗೆ ಅಂಟಿಕೊಳ್ಳುತ್ತದೆ. ಅದು ಯಾವಾಗಲೂ ಸರಿಯಾಗಿರುವ ವಿಷಯದ ಪಕ್ಷವಹಿಸುತ್ತಾ, ತಪ್ಪು, ಸುಳ್ಳುಗಳು, ಅಥವಾ ಯಾವುದೇ ವಿಧದ ಅನ್ಯಾಯದಲ್ಲಿ—ಇದಕ್ಕೆ ಬಲಿಯಾದವನು ಯಾರೇ ಆಗಿರಲಿ, ಅವನು ಒಬ್ಬ ಶತ್ರುವೇ ಆಗಿರಲಿ—ಆನಂದವನ್ನು ಕಂಡುಕೊಳ್ಳುವುದಿಲ್ಲ. ಆದಾಗಲೂ, ಒಂದು ವಿಷಯವು ತಪ್ಪಾಗಿದ್ದಲ್ಲಿ ಅಥವಾ ದಾರಿತಪ್ಪಿಸುವಂತಹದ್ದಾಗಿರುವಲ್ಲಿ, ಪ್ರೀತಿಯು ಸತ್ಯ ಮತ್ತು ಇತರರ ಹಿತಾಸಕ್ತಿಯ ಪರವಾಗಿ ಮಾತಾಡಲು ಭಯಪಡುವುದಿಲ್ಲ. (ಗಲಾತ್ಯ 2:11-14) ಅಲ್ಲದೆ, ಅದು ವಿಷಯವನ್ನು ಸರಿಪಡಿಸುವ ಪ್ರಯತ್ನದಲ್ಲಿ ಮತ್ತೊಂದು ತಪ್ಪನ್ನು ಮಾಡುವ ಬದಲಿಗೆ, ಅನ್ಯಾಯವನ್ನು ಸಹಿಸಿಕೊಳ್ಳಲು ಇಷ್ಟಪಡುತ್ತದೆ.—ರೋಮಾಪುರ 12:17, 20.
ಪ್ರೀತಿಯು “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.” ಅದು ತಾಳಿಕೊಳ್ಳಲು, ನೀತಿಗೋಸ್ಕರ ಕಷ್ಟಾನುಭವಿಸಲು ಸಿದ್ಧವಾಗಿದೆ. ಪ್ರೀತಿಯಿರುವ ಒಬ್ಬ ವ್ಯಕ್ತಿಯು, ತನಗೆ ತಪ್ಪುಗೈದಿರುವ ವ್ಯಕ್ತಿಯನ್ನು ಇತರರ ಮುಂದೆ ಬಹಿರಂಗಪಡಿಸಲು ನಿಧಾನಿಯಾಗಿರುವನು. ತಪ್ಪು ಅಷ್ಟು ಗಂಭೀರವಾಗಿರದಿದ್ದಲ್ಲಿ, ಅವನು ಅದನ್ನು ಅಲಕ್ಷಿಸುವನು. ಇಲ್ಲದಿದ್ದಲ್ಲಿ, ಮತ್ತಾಯ 18:15-17ರಲ್ಲಿ ಯೇಸುವಿನಿಂದ ಶಿಫಾರಸ್ಸು ಮಾಡಲ್ಪಟ್ಟಿರುವ ಮಾರ್ಗಕ್ರಮವು ಅನ್ವಯವಾಗುವಾಗ, ಅವನದನ್ನು ಅನುಸರಿಸುವನು.
ಪ್ರೀತಿಯು “ಎಲ್ಲವನ್ನೂ ನಂಬುತ್ತದೆ.” ಹೊರಗಿನ ತೋರಿಕೆಗಳು, ದೇವರು ತನ್ನ ಸತ್ಯ ವಾಕ್ಯದಲ್ಲಿ ಹೇಳಿರುವ ವಿಷಯಗಳಿಗೆ ವಿರುದ್ಧವಾಗಿರುವುದಾದರೂ ಮತ್ತು ಅವಿಶ್ವಾಸಿ ಲೋಕವು ಅದನ್ನು ಹೀಯಾಳಿಸಿದರೂ, ಪ್ರೀತಿಗೆ ಆ ವಿಷಯಗಳಲ್ಲಿ ನಂಬಿಕೆಯಿದೆ. ಈ ಪ್ರೀತಿಯು, ವಿಶೇಷವಾಗಿ ದೇವರ ಕಡೆಗಿನ ಪ್ರೀತಿಯು, ನಂಬಿಗಸ್ತಿಕೆ ಮತ್ತು ವಿಶ್ವಾಸಾರ್ಹತೆಯ ಆತನ ದಾಖಲೆಯ ಮೇಲೆ ಆಧಾರಿತವಾದ ಆತನ ಸತ್ಯತೆಯ ಒಂದು ಅಂಗೀಕಾರವಾಗಿದೆ. ನಾವು ಒಬ್ಬ ನಿಜ ನಂಬಿಗಸ್ತ ಮಿತ್ರನನ್ನು ತಿಳಿದಿದ್ದು, ಪ್ರೀತಿಸಿ, ಯಾವುದಕ್ಕಾಗಿ ನಮ್ಮಲ್ಲಿ ರುಜುವಾತು ಇಲ್ಲದಿರಬಹುದೊ ಅಂತಹ ಯಾವುದೊ ವಿಷಯವನ್ನು ಅವನು ನಮಗೆ ಹೇಳುವಾಗ ನಾವು ಹೇಗೆ ಸಂದೇಹಿಸದಿರುವೆವೊ, ಅದರಂತೆಯೇ ಇದಿರುತ್ತದೆ. (ಯೆಹೋಶುವ 23:14) ಪ್ರೀತಿಯು ಒಬ್ಬನ ವಿಶ್ವಾಸಿ ಕ್ರೈಸ್ತ ಸಹೋದರರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ; ಅವರು ತಪ್ಪುಮಾಡಿದ್ದಾರೆಂಬುದಕ್ಕೆ ಖಂಡಿತವಾದ ರುಜುವಾತು ದೊರೆತ ಹೊರತು, ಕ್ರೈಸ್ತನೊಬ್ಬನು ಅವರನ್ನು ಸಂದೇಹಿಸುವುದಿಲ್ಲ ಅಥವಾ ಅವರ ಮೇಲೆ ಅವಿಶ್ವಾಸವಿಡುವುದಿಲ್ಲ.—ಗಲಾತ್ಯ 5:10; ಫಿಲೆಮೋನ 21.
ಪ್ರೀತಿಯು “ಎಲ್ಲವನ್ನೂ ನಿರೀಕ್ಷಿಸುತ್ತದೆ.” ಯೆಹೋವನು ವಾಗ್ದಾನಿಸಿರುವ ಎಲ್ಲಾ ವಿಷಯಗಳಲ್ಲಿ ಅದಕ್ಕೆ ನಿರೀಕ್ಷೆಯಿದೆ. (ರೋಮಾಪುರ 12:12) ಅದು ಕೆಲಸಮಾಡುವುದನ್ನು ಮುಂದುವರಿಸುತ್ತಾ, ಫಲವನ್ನು ಉಂಟುಮಾಡಲು, ವಿಷಯಗಳನ್ನು ಬೆಳೆಸಲಿಕ್ಕಾಗಿ ಯೆಹೋವನ ಮೇಲೆ ತಾಳ್ಮೆಯಿಂದ ಆತುಕೊಳ್ಳುತ್ತದೆ. (1 ಕೊರಿಂಥ 3:7) ಪ್ರೀತಿಯಿರುವ ಒಬ್ಬ ವ್ಯಕ್ತಿಯು, ತನ್ನ ಕ್ರೈಸ್ತ ಸಹೋದರರು ಯಾವುದೇ ಪರಿಸ್ಥಿತಿಗಳಲ್ಲಿರಲಿ—ಕೆಲವರು ನಂಬಿಕೆಯಲ್ಲಿ ದುರ್ಬಲರಾಗಿದ್ದರೂ—ಅವರಿಗಾಗಿ ಅತ್ಯುತ್ತಮವಾದುದನ್ನು ನಿರೀಕ್ಷಿಸುವನು. ಯೆಹೋವನು ಅಂತಹ ದುರ್ಬಲ ವ್ಯಕ್ತಿಗಳೊಂದಿಗೆ ತಾಳ್ಮೆಯಿಂದಿರುವುದಾದರೆ, ನಿಶ್ಚಯವಾಗಿ ತಾನೂ ಅದೇ ರೀತಿಯ ಮನೋಭಾವವನ್ನು ತಾಳಬೇಕೆಂಬುದನ್ನು ಅವನು ಗ್ರಹಿಸುವನು.—2 ಪೇತ್ರ 3:15.
ಪ್ರೀತಿಯು “ಎಲ್ಲವನ್ನೂ ತಾಳಿಕೊಳ್ಳುತ್ತದೆ.” ಯೆಹೋವ ದೇವರ ಕಡೆಗೆ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಕ್ರೈಸ್ತನಿಗೆ ಪ್ರೀತಿಯು ಅವಶ್ಯ. ದೇವರಿಗಾಗಿರುವ ಕ್ರೈಸ್ತನೊಬ್ಬನ ಭಕ್ತಿ ಮತ್ತು ನಂಬಿಗಸ್ತಿಕೆಯ ದೃಢತೆಯನ್ನು ಪರೀಕ್ಷಿಸಲು ಪಿಶಾಚನು ಏನನ್ನೇ ಮಾಡಬಹುದಾದರೂ, ಆ ಕ್ರೈಸ್ತನು ದೇವರಿಗೆ ನಿಷ್ಠನಾಗಿರುವಂತಹ ಒಂದು ವಿಧದಲ್ಲಿ ಪ್ರೀತಿಯು ತಾಳಿಕೊಳ್ಳುವುದು.—ರೋಮಾಪುರ 5:3-5.
“ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ.” ಅದು ಎಂದಿಗೂ ಅಂತ್ಯಗೊಳ್ಳದು ಅಥವಾ ಇಲ್ಲದೇಹೋಗದು. ನಾವು ಒಂದು ಕಾಲದಲ್ಲಿ ನಂಬಿದ್ದಂತಹ ವಿಷಯಗಳನ್ನು ಹೊಸ ಜ್ಞಾನ ಮತ್ತು ತಿಳಿವಳಿಕೆಯು ತಿದ್ದಬಹುದು; ನಿರೀಕ್ಷಿಸಿದ್ದಂತಹ ವಿಷಯಗಳು ಈಡೇರಿದಾಗ ಮತ್ತು ಹೊಸ ವಿಷಯಗಳು ನಿರೀಕ್ಷಿಸಲ್ಪಡುವಾಗ, ನಿರೀಕ್ಷೆಯು ಬದಲಾಗುತ್ತದೆ, ಆದರೆ ಪ್ರೀತಿಯು ಯಾವಾಗಲೂ ತನ್ನ ಪೂರ್ಣತೆಯಲ್ಲಿ ಉಳಿಯುತ್ತದೆ ಮತ್ತು ಹೆಚ್ಚೆಚ್ಚು ಬಲವಾಗಿ ಕಟ್ಟಲ್ಪಡುತ್ತಾ ಮುಂದುವರಿಯುತ್ತದೆ. ನಿಜವಾಗಿಯೂ, ಈ ಎಲ್ಲಾ ವಿಷಯಗಳು, ದೈವಿಕ ಪ್ರೀತಿಯನ್ನು, ನಾವು ನಮ್ಮ ವೈಯಕ್ತಿಕ ಜೀವನಗಳಲ್ಲಿ ವಿಕಸಿಸಿಕೊಳ್ಳಲು ಶ್ರಮಿಸಬೇಕಾದ ಒಂದು ಉತ್ಕೃಷ್ಟ ಗುಣವಾಗಿ ಶಿಫಾರಸ್ಸು ಮಾಡುತ್ತವೆ.—1 ಕೊರಿಂಥ 13:8-13.