ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bt ಅಧ್ಯಾ. 3 ಪು. 20-27
  • “ಪವಿತ್ರಶಕ್ತಿ ಸಿಕ್ತು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಪವಿತ್ರಶಕ್ತಿ ಸಿಕ್ತು”
  • ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಶಿಷ್ಯರೆಲ್ಲ ಒಂದೇ ಮನೆಯಲ್ಲಿ ಸೇರಿಬಂದಿದ್ರು” (ಅ. ಕಾ. 2:1-4)
  • ‘ತಮ್ಮ ತಮ್ಮ ಮಾತೃಭಾಷೆಯಲ್ಲಿ ಮಾತಾಡೋದನ್ನ ಕೇಳಿಸ್ಕೊಂಡ್ರು’ (ಅ. ಕಾ. 2:5-13)
  • “ಪೇತ್ರ ಜೋರಾಗಿ ಹೀಗಂದ” (ಅ. ಕಾ. 2:14-37)
  • “ದೀಕ್ಷಾಸ್ನಾನ ತಗೊಳ್ಳಿ” (ಅ. ಕಾ. 2:38-47)
  • ಪಂಚಾಶತ್ತಮದಂದು ಪೇತ್ರನು ಸಾರುತ್ತಾನೆ
    ಕಾವಲಿನಬುರುಜು—1996
  • ಪ್ರಥಮ ಶತಮಾನದ ಯೆಹೂದ್ಯರ ಮಧ್ಯೆ ಕ್ರೈಸ್ತತ್ವವು ಹಬ್ಬುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • “ವಿವಿಧಭಾಷೆಗಳ” ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
bt ಅಧ್ಯಾ. 3 ಪು. 20-27

ಅಧ್ಯಾಯ 3

“ಪವಿತ್ರಶಕ್ತಿ ಸಿಕ್ತು”

ಐವತ್ತನೇ ದಿನದ ಹಬ್ಬದಲ್ಲಿ ಪವಿತ್ರಶಕ್ತಿ ಸಿಕ್ಕಿದಾಗ ನಡೆದ ಘಟನೆಗಳು

ಆಧಾರ: ಅಪೊಸ್ತಲರ ಕಾರ್ಯ 2:1-47

1. ಐವತ್ತನೇ ದಿನದ ಹಬ್ಬದ ವಾತಾವರಣವನ್ನ ವರ್ಣಿಸಿ.

ಯೆರೂಸಲೇಮಿನ ಬೀದಿಗಳಲ್ಲಿ ಸಡಗರಸಂಭ್ರಮದ ವಾತಾವರಣ ಇತ್ತು.a ದೇವಾಲಯದ ಯಜ್ಞವೇದಿ ಮೇಲೆ ಅರ್ಪಿಸ್ತಿದ್ದ ಬಲಿಗಳಿಂದ ಹೊಗೆ ಮೇಲೇರುತ್ತಿತ್ತು. ಲೇವಿಯರು ಹಾಲೆಲ್‌ ಕೀರ್ತನೆಗಳನ್ನ (ಕೀರ್ತನೆ 113 ರಿಂದ 118) ಹಾಡ್ತಿದ್ರು. ಇದನ್ನ ಬಹುಶಃ ಸಂವಾದಗೀತೆ ಶೈಲಿ ಅಂದ್ರೆ ಉತ್ತರ ಪ್ರತ್ಯುತ್ತರ ರೀತಿಯಲ್ಲಿ ಹಾಡ್ತಿದ್ರು. ಬೀದಿಗಳು ಸಂದರ್ಶಕರಿಂದ ಕಿಕ್ಕಿರಿದಿತ್ತು. ಅವರು ದೂರದಿಂದ ಅಂದ್ರೆ ಏಲಾಮ್‌, ಮೆಸಪಟೇಮ್ಯ, ಕಪದೋಷಿಯ, ಪೊಂತ, ಈಜಿಪ್ಟ್‌, ರೋಮ್‌ನಂಥ ಬೇರೆಬೇರೆ ಸ್ಥಳಗಳಿಂದ ಬಂದಿದ್ರು.b ಯಾಕೆ? ಅದು ಐವತ್ತನೇ ದಿನದ ಹಬ್ಬ ಅಂದ್ರೆ “ಮೊದಲ ಫಸಲಿನ ದಿನ” ಆಗಿತ್ತು. (ಅರ. 28:26) ಈ ವಾರ್ಷಿಕ ಹಬ್ಬ ಜವೆಗೋದಿಯ ಕೊಯ್ಲು ಮುಗಿದು ಗೋದಿಯ ಕೊಯ್ಲು ಆರಂಭ ಆದಾಗ ನಡೀತಿತ್ತು. ಇದೊಂದು ಸಂಭ್ರಮದ ದಿನ ಆಗಿರ್ತಿತ್ತು!

ಕ್ರಿಸ್ತ ಶಕ 33ರಲ್ಲಿ ಐವತ್ತನೇ ದಿನದ ಹಬ್ಬಕ್ಕೆ ಎಲ್ಲಿಂದ ಬಂದವ್ರೆಲ್ಲ ಸಿಹಿಸುದ್ದಿ ಕೇಳಿಸ್ಕೊಂಡ್ರು ಅಂತ ಮ್ಯಾಪ್‌ ತೋರಿಸುತ್ತೆ. 1. ಜಾಗಗಳು: ಲಿಬ್ಯ, ಈಜಿಪ್ಟ್‌, ಇಥಿಯೋಪ್ಯ, ಬಿಥೂನ್ಯ, ಪೊಂತ, ಕಪದೋಷೀಯ, ಯೂದಾಯ, ಮೆಸಪಟೇಮ್ಯ, ಬ್ಯಾಬಿಲೋನ್ಯ, ಏಲಾಮ್‌, ಮೇದ್ಯ, ಪಾರ್ಥ್ಯ. 2. ಪಟ್ಟಣಗಳು: ರೋಮ್‌, ಅಲೆಕ್ಸಾಂದ್ರಿಯ, ಮೆಂಫಿಸ್‌, (ಸಿರಿಯದ) ಅಂತಿಯೋಕ್ಯ, ಯೆರೂಸಲೇಮ್‌ ಮತ್ತು ಬ್ಯಾಬಿಲೋನ್‌. 3. ಸಮುದ್ರಗಳು: ಮೆಡಿಟರೇನಿಯನ್‌ ಸಮುದ್ರ, ಕಪ್ಪು ಸಮುದ್ರ, ಕೆಂಪು ಸಮುದ್ರ, ಕ್ಯಾಸ್ಪಿಯನ್‌ ಸಮುದ್ರ ಮತ್ತು ಪರ್ಷಿಯದ ಕೊಲ್ಲಿ.

ಯೆರೂಸಲೇಮ್‌—ಯೆಹೂದಿಮತದ ಕೇಂದ್ರ

ಅಪೊಸ್ತಲರ ಕಾರ್ಯ ಪುಸ್ತಕದ ಆರಂಭದ ಅಧ್ಯಾಯಗಳಲ್ಲಿ ತಿಳಿಸಿರೋ ಹೆಚ್ಚಿನ ಘಟನೆಗಳು ಯೆರೂಸಲೇಮಿನಲ್ಲಿ ನಡೀತು. ಈ ನಗರ ಯೂದಾಯದ ಮಧ್ಯಭಾಗದ ಪರ್ವತ ಶ್ರೇಣಿಯ ಗುಡ್ಡಗಳಲ್ಲಿ ಒಂದರ ಮೇಲಿದೆ. ಇದು ಮೆಡಿಟರೇನಿಯನ್‌ ಸಮುದ್ರದ ಪೂರ್ವದಿಕ್ಕಿನಿಂದ 55 ಕಿ.ಮೀ. ದೂರದಲ್ಲಿದೆ. ಇಲ್ಲಿರೋ ಚೀಯೋನ್‌ ಬೆಟ್ಟದ ಮೇಲಿನ ಕೋಟೆಯನ್ನೇ ರಾಜ ದಾವೀದ ಕ್ರಿ.ಪೂ. 1070ರಲ್ಲಿ ವಶಪಡಿಸ್ಕೊಂಡ. ಆಮೇಲೆ ಇದರ ಸುತ್ತ ಬೆಳೆದ ನಗರವೇ ಪ್ರಾಚೀನ ಇಸ್ರಾಯೇಲ್‌ ಜನಾಂಗದ ರಾಜಧಾನಿ ಆಯ್ತು.

ಚೀಯೋನ್‌ ಬೆಟ್ಟದ ಹತ್ರಾನೇ ಮೊರೀಯ ಬೆಟ್ಟನೂ ಇದೆ. ಪ್ರಾಚೀನ ಯೆಹೂದಿ ಪರಂಪರೆಯ ಕಥೆ ಪ್ರಕಾರ, ಅಬ್ರಹಾಮ ಇಸಾಕನನ್ನ ಬಲಿ ಕೊಡೋಕೆ ಬಂದದ್ದು ಇಲ್ಲಿಗೇ. ಇದು ನಡೆದಿದ್ದು, ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ವರ್ಣಿಸಲಾದ ಘಟನೆಗಳು ನಡೆಯೋದಕ್ಕಿಂತ 1,900 ವರ್ಷಗಳ ಹಿಂದೆ! ಮೊರೀಯ ಬೆಟ್ಟದ ಮೇಲೆ ಸೊಲೊಮೋನ ಯೆಹೋವನಿಗಾಗಿ ಮೊದಲ ಆಲಯ ಕಟ್ಟಿದಾಗ ಇದು ಯೆರೂಸಲೇಮ್‌ ನಗರದ ಭಾಗವಾಯ್ತು. ಈ ಆಲಯ ಯೆಹೂದ್ಯರ ಜೀವನ ಮತ್ತು ಆರಾಧನೆಯ ಮುಖ್ಯ ಕೇಂದ್ರವಾಗಿತ್ತು.

ಭೂಮಿಯ ಎಲ್ಲಾ ಕಡೆಯಿಂದಲೂ ದೇವಭಕ್ತ ಯೆಹೂದ್ಯರು ಬಲಿ ಅರ್ಪಿಸೋಕೆ, ಆರಾಧಿಸೋಕೆ ಮತ್ತು ವಾರ್ಷಿಕ ಹಬ್ಬಗಳನ್ನ ಆಚರಿಸೋಕೆ ಯಾವಾಗ್ಲೂ ಯೆಹೋವನ ಈ ಆಲಯಕ್ಕೇ ಬರ್ತಿದ್ರು. “ವರ್ಷದಲ್ಲಿ ಮೂರು ಸಲ . . . ನಿಮ್ಮಲ್ಲಿರೋ ಗಂಡಸ್ರೆಲ್ಲ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ಆತನ ಮುಂದೆ ಬರಬೇಕು” ಅಂತ ದೇವರು ಕೊಟ್ಟ ಆಜ್ಞೆ ಪಾಲಿಸೋಕೆ ಅವರು ಆಲಯಕ್ಕೆ ಬರ್ತಿದ್ರು. (ಧರ್ಮೋ. 16:16) ಯೆರೂಸಲೇಮಿನಲ್ಲಿ ಹಿರೀಸಭೆ ಸಹ ಇತ್ತು. ಇದು ಯೆಹೂದ್ಯರ ಉಚ್ಚ ನ್ಯಾಯಾಲಯ. ಈ ನ್ಯಾಯಾಲಯಕ್ಕೆ ಸಮಾಜ, ಸರ್ಕಾರ ಮತ್ತು ಧರ್ಮದ ಮೇಲೆ ಅಧಿಕಾರ ಇತ್ತು.

2. ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ ಯಾವ ವಿಸ್ಮಯಕಾರಿ ಘಟನೆಗಳು ನಡೀತು?

2 ಅದು ಕ್ರಿ.ಶ. 33ರ ವಸಂತಕಾಲ. ಬೆಳಗ್ಗೆ ಸುಮಾರು ಒಂಭತ್ತು ಗಂಟೆ. ಆಗ ಒಂದು ಘಟನೆ ನಡೀತು, ಜನರು ಅದನ್ನ ಶತಮಾನಗಳ ತನಕ ಮರೆಯೋ ಹಾಗಿರಲಿಲ್ಲ. ಅಂಥದ್ದು ಏನಾಯ್ತು? “ಇದ್ದಕ್ಕಿದ್ದಂತೆ ಆಕಾಶದಿಂದ ಒಂದು ಶಬ್ದ, ಜೋರಾಗಿ ಗಾಳಿ ಬೀಸಿದ ಹಾಗೆ” ಕೇಳಿಸ್ತು. ಅದು ದೊಡ್ಡ “ಬಿರುಗಾಳಿ” ತರ ಇತ್ತು. (ಅ. ಕಾ. 2:2, ಸತ್ಯವೇದವು) ಈ ಗಟ್ಟಿಯಾದ ಶಬ್ದ ಯೇಸುವಿನ 120 ಶಿಷ್ಯರು ಸೇರಿಬಂದಿದ್ದ ಸ್ಥಳದಲ್ಲಿ ಕೇಳಿಸ್ತು. ಆಮೇಲೆ ಅಲ್ಲಿ ಒಂದು ವಿಸ್ಮಯಕಾರಿ ವಿಷ್ಯ ನಡೀತು. ನಾಲಿಗೆ ಆಕಾರದ ಬೆಂಕಿ ಜ್ವಾಲೆ ಕಾಣಿಸ್ಕೊಂಡು ಒಬ್ಬೊಬ್ಬ ಶಿಷ್ಯರ ತಲೆ ಮೇಲೆ ಕೂತವು.c ಆಗ ಶಿಷ್ಯರಿಗೆ “ಪವಿತ್ರಶಕ್ತಿ ಸಿಕ್ತು. ಇದ್ರಿಂದ ಅವರು ಬೇರೆಬೇರೆ ಭಾಷೆ ಮಾತಾಡೋಕೆ ಶುರುಮಾಡಿದ್ರು.” ಶಿಷ್ಯರು ಆ ಮನೆಯಿಂದ ಹೊರಗೆ ಬಂದು ಯೆರೂಸಲೇಮಿನ ಬೀದಿಗಳಲ್ಲಿ ವಿದೇಶಿಯರ ಜೊತೆ ಮಾತಾಡಿದಾಗ ಅವ್ರಿಗೆ ಆಶ್ಚರ್ಯ ಆಯ್ತು. ಯಾಕಂದ್ರೆ ಶಿಷ್ಯರು ಪ್ರತಿಯೊಬ್ಬರ ಜೊತೆ ಅವರವರ ‘ಮಾತೃಭಾಷೆಯಲ್ಲಿ ಮಾತಾಡ್ತಿದ್ರು.’—ಅ. ಕಾ. 2:1-6.

3. (ಎ) ಕ್ರಿ.ಶ. 33ರ ಐವತ್ತನೇ ದಿನದ ಹಬ್ಬವನ್ನ ಸತ್ಯಾರಾಧನೆಯ ಇತಿಹಾಸದಲ್ಲೇ ಮೈಲಿಗಲ್ಲು ಅಂತ ಯಾಕೆ ಹೇಳಬಹುದು? (ಬಿ) ಪೇತ್ರನ ಭಾಷಣಕ್ಕೂ, ‘ಸ್ವರ್ಗದ ಆಳ್ವಿಕೆಯ ಬೀಗದ ಕೈಗಳನ್ನ’ ಬಳಸೋದಕ್ಕೂ ಏನು ಸಂಬಂಧ ಇತ್ತು?

3 ಈ ರೋಮಾಂಚಕಾರಿ ಘಟನೆ ಸತ್ಯಾರಾಧನೆಯ ಒಂದು ಮೈಲಿಗಲ್ಲಿನ ಬಗ್ಗೆ ವರ್ಣಿಸುತ್ತೆ. ಅಂದ್ರೆ ಆಧ್ಯಾತ್ಮಿಕ ಇಸ್ರಾಯೇಲ್‌ ಜನಾಂಗವಾದ, ಅಭಿಷಿಕ್ತ ಕ್ರೈಸ್ತ ಸಭೆಯ ಸ್ಥಾಪನೆ ಬಗ್ಗೆ ವಿವರಿಸುತ್ತೆ. (ಗಲಾ. 6:16) ಆದ್ರೆ ಈ ಘಟನೆಯಿಂದ ಇನ್ನೂ ಜಾಸ್ತಿ ವಿಷ್ಯ ತಿಳ್ಕೊಬಹುದು. ಆ ದಿನ ಪೇತ್ರ, ಜನರ ಗುಂಪಿನ ಹತ್ರ ಮಾತಾಡ್ತಿದ್ದಾಗ ‘ಸ್ವರ್ಗದ ಆಳ್ವಿಕೆಯ ಬೀಗದ ಕೈಗಳಲ್ಲಿ’ ಮೊದಲನೇ ಬೀಗದ ಕೈಯನ್ನ ಬಳಸಿದ. ಆ ಮೂರು ಬೀಗದ ಕೈಗಳಲ್ಲಿ ಪ್ರತಿಯೊಂದು ಬೇರೆಬೇರೆ ಗುಂಪಿನವರಿಗೆ ವಿಶೇಷ ಸುಯೋಗಗಳನ್ನ ಆನಂದಿಸೋಕೆ ದಾರಿ ತೆರಿತಿತ್ತು. (ಮತ್ತಾ. 16:18, 19) ಮೊದಲನೇ ಬೀಗದ ಕೈ, ಯೆಹೂದ್ಯರು ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರು ಸಿಹಿಸುದ್ದಿ ಕೇಳಿಸ್ಕೊಳ್ಳೋಕೆ ಮತ್ತು ಪವಿತ್ರಶಕ್ತಿಯಿಂದ ಅಭಿಷಿಕ್ತರಾಗೋಕೆ ಅವಕಾಶ ಮಾಡ್ಕೊಡ್ತು.d ಇದ್ರಿಂದ ಅವರು ಆಧ್ಯಾತ್ಮಿಕ ಇಸ್ರಾಯೇಲಿನ ಭಾಗವಾಗಿ ಮೆಸ್ಸೀಯನ ಆಳ್ವಿಕೆಯಲ್ಲಿ ರಾಜರಾಗಿ ಪುರೋಹಿತರಾಗಿ ಆಳೋ ನಿರೀಕ್ಷೆ ಪಡ್ಕೊಬಹುದಿತ್ತು. (ಪ್ರಕ. 5:9, 10) ಆಮೇಲೆ ಈ ಸುಯೋಗ ಸಮಾರ್ಯದವರಿಗೆ ನಂತರ ಬೇರೆ ಜನಾಂಗಗಳಿಗೂ ಸಿಗ್ತಿತ್ತು. ಕ್ರಿ.ಶ. 33ರಲ್ಲಿ ನಡೆದ ವಿಶೇಷ ಘಟನೆಗಳಿಂದ ಇವತ್ತು ಕ್ರೈಸ್ತರು ಏನು ಕಲೀಬಹುದು?

“ಶಿಷ್ಯರೆಲ್ಲ ಒಂದೇ ಮನೆಯಲ್ಲಿ ಸೇರಿಬಂದಿದ್ರು” (ಅ. ಕಾ. 2:1-4)

4. ಕ್ರಿ.ಶ. 33ರಲ್ಲಿ ಶುರುವಾದ ಸಭೆಗೂ ಆಧುನಿಕ ದಿನದ ಕ್ರೈಸ್ತ ಸಭೆಗೂ ಇರೋ ಸಂಬಂಧವೇನು?

4 ಕ್ರೈಸ್ತ ಸಭೆ ಆರಂಭ ಆದಾಗ 120 ಶಿಷ್ಯರು ಮಾತ್ರ ಇದ್ರು. ಆಗ ಅವರೆಲ್ಲರೂ “ಒಂದೇ ಮನೆಯಲ್ಲಿ” ಅಂದ್ರೆ ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದಿದ್ರು. ಇವರು ಪವಿತ್ರಶಕ್ತಿಯಿಂದ ಅಭಿಷಿಕ್ತರಾಗಿದ್ರು. (ಅ. ಕಾ. 2:1) ಆ ದಿನದ ಕೊನೆಯಷ್ಟಕ್ಕೆ ಆ ಸಭೆಯಲ್ಲಿ ದೀಕ್ಷಾಸ್ನಾನ ಪಡೆದವ್ರ ಸಂಖ್ಯೆ ಸಾವಿರಾರು ಆಯ್ತು. ಅವತ್ತು ಗಿಡದ ತರ ಚಿಗುರಿದ ಕ್ರೈಸ್ತ ಸಭೆ ಇವತ್ತು ಹೆಮ್ಮರದ ತರ ದೊಡ್ಡ ಸಂಘಟನೆಯಾಗಿ ಬೆಳೀತಾ ಇದೆ. ಈ ಸಂಘಟನೆಯಲ್ಲಿ ಅಂದ್ರೆ ಆಧುನಿಕ ದಿನದ ಕ್ರೈಸ್ತ ಸಭೆಯಲ್ಲಿ ದೇವಭಯ ಇರೋ ಸ್ತ್ರೀಪುರುಷರಿದ್ದಾರೆ. ಇವರೇ ‘ದೇವರ ಆಳ್ವಿಕೆಯ ಸಿಹಿಸುದ್ದಿನಾ’ ಅಂತ್ಯ ಬರೋ ಮುಂಚೆ ‘ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರ್ತಾರೆ.’—ಮತ್ತಾ. 24:14.

5. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಸಿಕ್ಕಿದ ತರ ಇವತ್ತಿರೋ ಕ್ರೈಸ್ತರಿಗೆ ಒಟ್ಟಿಗೆ ಸೇರಿ ಬರೋದ್ರಿಂದ ಯಾವೆಲ್ಲಾ ಪ್ರಯೋಜನ ಸಿಗ್ತಿದೆ?

5 ಈಗಷ್ಟೇ ಶುರುವಾದ ಕ್ರೈಸ್ತ ಸಭೆ ಅದರ ಸದಸ್ಯರಿಗೆ ಅಂದ್ರೆ ಅಭಿಷಿಕ್ತರಿಗೆ ಮತ್ತು ಮುಂದೆ ‘ಬೇರೆ ಕುರಿಗಳಿಗೆ’ ಪ್ರೋತ್ಸಾಹ ಕೊಡ್ತಿತ್ತು. (ಯೋಹಾ. 10:16) ಈ ಪ್ರೋತ್ಸಾಹ ಎಷ್ಟು ಪ್ರಾಮುಖ್ಯ ಅಂತ ಪೌಲ ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಬರೆದ ಈ ಮಾತುಗಳಿಂದ ಗೊತ್ತಾಗುತ್ತೆ. ಅವನು ಹೇಳಿದ್ದು, “ಆದಷ್ಟು ಬೇಗ ನಿಮ್ಮನ್ನ ನೋಡಬೇಕು, ದೇವರ ಉಡುಗೊರೆಯನ್ನ ಕೊಟ್ಟು ನಿಮ್ಮ ನಂಬಿಕೆ ಬಲಪಡಿಸಬೇಕು ಅಂತ ಕಾತುರದಿಂದ ಕಾಯ್ತಾ ಇದ್ದೀನಿ. ಅಂದ್ರೆ, ನಿಮ್ಮ ನಂಬಿಕೆಯಿಂದ ನಾನು, ನನ್ನ ನಂಬಿಕೆಯಿಂದ ನೀವು ಪ್ರೋತ್ಸಾಹ ಪಡಿಬೇಕು ಅನ್ನೋದೇ ನನ್ನಾಸೆ.”—ರೋಮ. 1:11, 12.

ರೋಮ್‌—ಒಂದು ಸಾಮ್ರಾಜ್ಯದ ರಾಜಧಾನಿ

ಅಪೊಸ್ತಲರ ಕಾರ್ಯ ಪುಸ್ತಕದಲ್ಲಿ ಬರೆದಿರೋ ವಿಷ್ಯಗಳು ನಡೆದ ಕಾಲಾವಧಿಯಲ್ಲಿ ರೋಮ್‌ ಒಂದು ಮುಖ್ಯ ನಗರವಾಗಿತ್ತು. ಆ ಕಾಲದಲ್ಲಿ ಜನ್ರಿಗೆ ಗೊತ್ತಿದ್ದ ದೇಶಗಳಲ್ಲಿ ಇದೇ ಅತೀ ದೊಡ್ಡದಾದ ಮತ್ತು ರಾಜಕೀಯವಾಗಿ ತುಂಬ ಮಹತ್ವ ಪಡ್ಕೊಂಡಿದ್ದ ನಗರ ಆಗಿತ್ತು. ಇದು ರೋಮನ್‌ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಈ ಸಾಮ್ರಾಜ್ಯ ಬ್ರಿಟನ್‌ನಿಂದ ಉತ್ತರ ಆಫ್ರಿಕದ ತನಕ, ಅಟ್ಲಾಂಟಿಕ್‌ ಸಾಗರದಿಂದ ಪರ್ಷಿಯನ್‌ ಕೊಲ್ಲಿ ತನಕ (ಪರ್ಷಿಯನ್‌ ಗಲ್ಫ್‌) ಹರಡ್ಕೊಂಡಿದ್ದ ದೇಶಗಳ ಮೇಲೆ ರಾಜ್ಯಭಾರ ಮಾಡ್ತಿತ್ತು.

ರೋಮ್‌ ನಗರದಲ್ಲಿ ಬೇರೆಬೇರೆ ಸಂಸ್ಕೃತಿ, ಜಾತಿ, ಭಾಷೆಯ ಜನರಿದ್ರು ಮತ್ತು ಅವ್ರಲ್ಲಿ ತುಂಬಾ ಮೂಢನಂಬಿಕೆಗಳಿತ್ತು. ಒಳ್ಳೇ ರಸ್ತೆಗಳಿದ್ದ ಕಾರಣ ರೋಮನ್‌ ಸಾಮ್ರಾಜ್ಯದ ಮೂಲೆಮೂಲೆಯಿಂದನೂ ರೋಮ್‌ಗೆ ಪ್ರಯಾಣಿಕರು ಬರ್ತಿದ್ರು, ಅಷ್ಟೇ ಅಲ್ಲ ಸರಕುಸಾಮಗ್ರಿಗಳನ್ನೂ ಸಾಗಿಸ್ತಿದ್ರು. ಈ ನಗರದ ಹತ್ರದಲ್ಲೇ ಆಸ್ಟಿಯಾ ಅನ್ನೋ ಬಂದರಿತ್ತು. ವ್ಯಾಪಾರಕ್ಕಾಗಿ ಹಾದುಹೋಗ್ತಿದ್ದ ಹಡಗುಗಳು ರೋಮ್‌ ನಗರಕ್ಕಾಗಿ ಆಹಾರದ ವಸ್ತುಗಳನ್ನ, ಬೆಲೆಬಾಳುವ ಸಾಮಾನುಗಳನ್ನ ಇಲ್ಲಿಗೆ ತಲಪಿಸ್ತಿದ್ವು.

ಕ್ರಿ.ಶ. ಒಂದನೇ ಶತಮಾನದಷ್ಟಕ್ಕೆ ರೋಮ್‌ನಲ್ಲಿ 10 ಲಕ್ಷಕ್ಕೂ ಜಾಸ್ತಿ ಜನ ವಾಸಮಾಡ್ತಿದ್ರು. ಇದ್ರಲ್ಲಿ ಬಹುಶಃ ಅರ್ಧದಷ್ಟು ಜನ ಗುಲಾಮರಾಗಿದ್ರು. ಇವ್ರಲ್ಲಿ ಶಿಕ್ಷೆ ಪಡೆದಿರೋ ಅಪರಾಧಿಗಳು, ಹೆತ್ತವರು ಮಾರಿದ ಅಥವಾ ಬಿಟ್ಟುಬಿಟ್ಟಿದ್ದ ಮಕ್ಕಳು ಮತ್ತು ರೋಮನ್‌ ಸೈನಿಕರು ನಡೆಸಿದ ದಂಡಯಾತ್ರೆಗಳ ಸಮಯದಲ್ಲಿ ಸೆರೆಹಿಡಿದವರೂ ಇದ್ರು. ಇವ್ರಲ್ಲಿ, ಯೆರೂಸಲೇಮಿನಿಂದ ಗುಲಾಮರಾಗಿ ತರಲಾದ ಯೆಹೂದ್ಯರೂ ಇದ್ರು. ಇವ್ರನ್ನ ರೋಮನ್‌ ಸೇನಾಪತಿ ಪಾಂಪೇ ಕ್ರಿ.ಪೂ. 63ರಲ್ಲಿ ಯೆರೂಸಲೇಮನ್ನ ವಶ ಮಾಡ್ಕೊಂಡಾಗ ಇಲ್ಲಿಗೆ ತಂದಿದ್ದ.

ರೋಮ್‌ನಲ್ಲಿದ್ದ ಜಾಸ್ತಿ ಜನ ತುಂಬಾ ಬಡವರಾಗಿದ್ರು ಮತ್ತು ಕಿಕ್ಕಿರಿದ ಬಹು ಮಹಡಿ ಕಟ್ಟಡಗಳಲ್ಲಿ ವಾಸ ಮಾಡ್ತಿದ್ರು. ಅವರು ಸರ್ಕಾರ ಕೊಡೋ ಸಹಾಯಧನದ (ಸಬ್ಸಿಡಿ) ಮೇಲೆ ಹೊಂದ್ಕೊಂಡು ಬದುಕ್ತಿದ್ರು. ಪರಿಸ್ಥಿತಿ ಹೀಗಿದ್ರೂ ಆ ಸಾಮ್ರಾಜ್ಯದ ಚಕ್ರವರ್ತಿಗಳು, ಸಾರ್ವಜನಿಕರಿಗೆ ಅಂತಾನೇ ಯಾವತ್ತೂ ಯಾರೂ ಕಟ್ಟಿರದಷ್ಟು ವೈಭವವಾದ ಕಟ್ಟಡಗಳನ್ನ ತಮ್ಮ ರಾಜಧಾನಿಗಳಲ್ಲಿ ಕಟ್ಟಿಸಿದ್ರು. ನಾಟಕಮಂದಿರಗಳನ್ನ, ದೊಡ್ಡದಾದ ಸ್ಟೇಡಿಯಮ್‌ಗಳನ್ನ ಕಟ್ಟಿಸಿದ್ರು. ಇವುಗಳಲ್ಲಿ ನಾಟಕ ಪ್ರದರ್ಶನಗಳು, ಕತ್ತಿಮಲ್ಲರ ಸ್ಪರ್ಧೆಗಳು, ರಥಗಳ ಓಟ ನಡೀತಿತ್ತು. ಈ ಎಲ್ಲಾ ಮನೋರಂಜನೆ ಜನಸಾಮಾನ್ಯರಿಗೆ ಉಚಿತವಾಗಿತ್ತು.

6, 7. ಎಲ್ಲಾ ದೇಶಗಳಿಗೆ ಸಾರಬೇಕು ಅಂತ ಯೇಸು ಕೊಟ್ಟ ಕೆಲಸವನ್ನ ಇವತ್ತು ಕ್ರೈಸ್ತ ಸಭೆ ಹೇಗೆ ಮಾಡ್ತಿದೆ?

6 ಒಂದನೇ ಶತಮಾನದ ಕ್ರೈಸ್ತ ಸಭೆಗಿದ್ದ ಗುರಿಗಳೇ ಇವತ್ತಿರೋ ಕ್ರೈಸ್ತ ಸಭೆಗೂ ಇವೆ. ಯೇಸು ತನ್ನ ಶಿಷ್ಯರಿಗೆ ಒಂದು ಆಸಕ್ತಿಕರ ಕೆಲ್ಸ ಕೊಟ್ಟನು, ಅದ್ರಲ್ಲಿ ಅಡ್ಡಿತಡೆಗಳು ಇದ್ವು. ಆತನು ಹೇಳಿದ್ದು: “ನೀವು ಹೋಗಿ ಎಲ್ಲಾ ದೇಶದ ಜನ್ರಿಗೆ ನನ್ನ ಶಿಷ್ಯರಾಗೋಕೆ ಕಲಿಸಿ. ಅವ್ರಿಗೆ ತಂದೆ ಹೆಸ್ರಲ್ಲಿ, ಮಗನ ಹೆಸ್ರಲ್ಲಿ ಮತ್ತು ಪವಿತ್ರಶಕ್ತಿಯ ಹೆಸ್ರಲ್ಲಿ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಹೇಳಿಕೊಟ್ಟ ಎಲ್ಲ ವಿಷ್ಯಗಳ ಪ್ರಕಾರ ನಡೆಯೋಕೆ ಅವ್ರಿಗೆ ಕಲಿಸಿ.”—ಮತ್ತಾ. 28:19, 20.

7 ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯ ಮೂಲಕವೇ ಈ ಕೆಲಸ ನಡೀತಾ ಇದೆ. ಬೇರೆಬೇರೆ ಭಾಷೆಯವರಿಗೆ ಸಿಹಿಸುದ್ದಿ ಸಾರೋದು ಅಷ್ಟು ಸುಲಭ ಅಲ್ಲ. ಆದ್ರೂ ಯೆಹೋವನ ಸಾಕ್ಷಿಗಳು ಬೈಬಲ್‌ ಆಧರಿತ ಪ್ರಕಾಶನಗಳನ್ನ 1,000ಕ್ಕಿಂತ ಜಾಸ್ತಿ ಭಾಷೆಗಳಲ್ಲಿ ತಯಾರಿಸಿದ್ದಾರೆ. ಒಂದುವೇಳೆ ನೀವು ತಪ್ಪದೇ ಕೂಟಗಳಿಗೆ ಹಾಜರಾಗ್ತಿದ್ರೆ ಮತ್ತು ಸಾರುವ ಹಾಗೂ ಕಲಿಸೋ ಕೆಲಸದಲ್ಲಿ ಭಾಗವಹಿಸ್ತಿದ್ರೆ ನೀವು ಸಂತೋಷ ಪಡೋಕೆ ಒಂದು ಕಾರಣ ಇದೆ. ಅದೇನಂದ್ರೆ ಇಡೀ ಭೂಮಿ ಮೇಲೆ ಯೆಹೋವನ ಹೆಸರಿನ ಬಗ್ಗೆ ಸಾಕ್ಷಿ ನೀಡೋ ಸುಯೋಗ ಕೆಲವರಿಗೆ ಮಾತ್ರ ಇದೆ. ಅವ್ರಲ್ಲಿ ನೀವೂ ಒಬ್ಬರು!

8. ಸಭೆಯಲ್ಲಿ ಪ್ರತಿಯೊಬ್ಬರಿಗೆ ಯಾವ ಆಶೀರ್ವಾದ ಸಿಗುತ್ತೆ?

8 ಪರಿಸ್ಥಿತಿ ತುಂಬಾ ಹದಗೆಟ್ಟಿರೋ ಈ ಕಾಲದಲ್ಲಿ ಸಂತೋಷದಿಂದ ತಾಳ್ಕೊಳ್ಳೋಕೆ ಯೆಹೋವ ದೇವರು ಲೋಕವ್ಯಾಪಕ ಸಹೋದರ ಬಳಗ ಕೊಟ್ಟಿದ್ದಾನೆ. ಅದಕ್ಕೆ ಪೌಲ ಇಬ್ರಿಯ ಕ್ರೈಸ್ತರಿಗೆ ಹೀಗೆ ಬರೆದ: “ನಾವು ಒಬ್ರು ಇನ್ನೊಬ್ರ ಬಗ್ಗೆ ತುಂಬ ಆಸಕ್ತಿ ತೋರಿಸೋಣ. ಆಗ ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ ಬೇರೆಯವ್ರಿಗೆ ಪ್ರೋತ್ಸಾಹ ಕೊಡಬಹುದು. ಒಟ್ಟಾಗಿ ಸಭೆ ಸೇರೋದನ್ನ ಬಿಡೋದು ಬೇಡ. ಸ್ವಲ್ಪ ಜನ ಸಭೆಗೆ ಬರೋದನ್ನ ಬಿಟ್ಟುಬಿಟ್ಟಿದ್ದಾರೆ. ಅದು ಅವ್ರಿಗೆ ರೂಢಿ ಆಗಿಬಿಟ್ಟಿದೆ. ಆದ್ರೆ ನಾವು ಹಾಗೆ ಮಾಡದೆ ಒಬ್ರು ಇನ್ನೊಬ್ರನ್ನ ಪ್ರೋತ್ಸಾಹಿಸ್ತಾ ಇರೋಣ. ದೇವರ ದಿನ ಹತ್ರ ಬರ್ತಾ ಇರೋದ್ರಿಂದ ನಾವು ಇದನ್ನ ಇನ್ನೂ ಜಾಸ್ತಿ ಮಾಡೋಣ.” (ಇಬ್ರಿ. 10:24, 25) ಕ್ರೈಸ್ತ ಸಭೆ ಯೆಹೋವ ಕೊಟ್ಟಿರೋ ಉಡುಗೊರೆ. ಇಲ್ಲಿ ನೀವು ಬೇರೆಯವರಿಗೆ ಪ್ರೋತ್ಸಾಹ ಕೊಡಬಹುದು, ಅವರು ನಿಮಗೆ ಪ್ರೋತ್ಸಾಹ ಕೊಡಬಹುದು. ಹಾಗಾಗಿ ನಿಮ್ಮ ಸಹೋದರ ಸಹೋದರಿಯರಿಗೆ ಹತ್ರ ಆಗಿ. ಕೂಟಗಳಿಗೆ ಬರೋದನ್ನ ಯಾವತ್ತೂ ಬಿಟ್ಟುಬಿಡಬೇಡಿ!

‘ತಮ್ಮ ತಮ್ಮ ಮಾತೃಭಾಷೆಯಲ್ಲಿ ಮಾತಾಡೋದನ್ನ ಕೇಳಿಸ್ಕೊಂಡ್ರು’ (ಅ. ಕಾ. 2:5-13)

ಜನ್ರು ತುಂಬಿರೋ ಒಂದು ಜಾಗದಲ್ಲಿ ಯೇಸುವಿನ ಶಿಷ್ಯರು ಯೆಹೂದ್ಯರಿಗೆ ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರಿಗೆ ಸಾರ್ತಿದ್ದಾರೆ.

“ದೇವರ ಅದ್ಭುತ ಕೆಲಸಗಳ ಬಗ್ಗೆ ನಮ್ಮನಮ್ಮ ಭಾಷೆಯಲ್ಲಿ ಕೇಳ್ತಾ ಇದ್ದೀವಿ. ಅದು ಹೇಗೆ ಸಾಧ್ಯ!”—ಅಪೊಸ್ತಲರ ಕಾರ್ಯ 2:11

9, 10. ಬೇರೆ ಭಾಷೆ ಮಾತಾಡೋರಿಗೆ ಸಿಹಿಸುದ್ದಿ ಸಾರೋಕೆ ತುಂಬಾ ಸಾಕ್ಷಿಗಳು ಏನು ಮಾಡಿದ್ದಾರೆ?

9 ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ, ಅಲ್ಲಿದ್ದ ಯೆಹೂದ್ಯರು ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರ ಸಂತೋಷವನ್ನ ಊಹಿಸಿ ನೋಡಿ. ಅಲ್ಲಿದ್ದ ತುಂಬಾ ಜನ ಅಲ್ಲಿ ಎಲ್ರಿಗೂ ಗೊತ್ತಿದ್ದ ಹೀಬ್ರು ಅಥವಾ ಗ್ರೀಕ್‌ನಲ್ಲಿ ಮಾತಾಡ್ತಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ‘ಶಿಷ್ಯರು ಅಲ್ಲಿದ್ದ ಪ್ರತಿಯೊಬ್ಬರ ಮಾತೃಭಾಷೆಯಲ್ಲಿ ಮಾತಾಡೋಕೆ ಶುರುಮಾಡಿದ್ರು.’ (ಅ. ಕಾ. 2:6) ಜನರು ತಮ್ಮ ಮಾತೃಭಾಷೆಯಲ್ಲೇ ಸಿಹಿಸುದ್ದಿಯನ್ನ ಕೇಳಿಸ್ಕೊಂಡಾಗ ಅವ್ರಿಗೆ ಎಷ್ಟು ಖುಷಿ ಆಗಿರುತ್ತಲ್ವಾ? ಇವತ್ತಿರೋ ಕ್ರೈಸ್ತರಿಗೆ ಅದ್ಭುತವಾಗಿ ಬೇರೆಬೇರೆ ಭಾಷೆಗಳಲ್ಲಿ ಮಾತಾಡೋ ವರ ಇಲ್ಲ. ಹಾಗಿದ್ರೂ ಬೇರೆ ದೇಶಗಳ ಜನ್ರಿಗೆ ಸಾರೋಕೆ ತುಂಬಾ ಸಹೋದರ ಸಹೋದರಿಯರು ಮುಂದೆ ಬಂದಿದ್ದಾರೆ. ಅದಕ್ಕೋಸ್ಕರ ಅವರು ಬೇರೆ ಭಾಷೆ ಕಲಿತು ತಮಗೆ ಹತ್ರದಲ್ಲಿರೋ ಸಭೆಗೆ ಅಥ್ವಾ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡ್ತಿದ್ದಾರೆ. ಅವ್ರ ಈ ಪ್ರಯತ್ನ ನೋಡಿ ಆ ಭಾಷೆ ಮಾತಾಡೋ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

10 ಕ್ರಿಸ್ಟೀನ್‌ ಅನ್ನೋ ಸಹೋದರಿಯ ಅನುಭವ ನೋಡಿ. ಅವರು ಬೇರೆ ಏಳು ಸಾಕ್ಷಿಗಳ ಜೊತೆ ಗುಜರಾತಿ ಭಾಷೆ ಕಲಿಯೋ ಕ್ಲಾಸ್‌ಗೆ ಸೇರಿದ್ರು. ಒಂದು ಸಲ ಅವ್ರಿಗೆ ತಮ್ಮ ಜೊತೆ ಕೆಲಸ ಮಾಡ್ತಿದ್ದ ಗುಜರಾತಿ ಯುವತಿ ಸಿಕ್ಕಿದಳು. ಆಗ ಕ್ರಿಸ್ಟೀನ್‌ ಅವಳನ್ನ ಗುಜರಾತಿಯಲ್ಲೇ ವಂದಿಸಿದಾಗ ಅವಳಿಗೆ ತುಂಬಾ ಖುಷಿ ಆಯ್ತು. ‘ಈ ಭಾಷೆ ಯಾಕೆ ಕಲೀತಾ ಇದ್ದೀರಾ’ ಅಂತ ಅವಳು ಕೇಳಿದಳು. ಈ ಅವಕಾಶ ಬಳಸಿ ಕ್ರಿಸ್ಟೀನ್‌ ಅವಳಿಗೆ ಸಿಹಿಸುದ್ದಿ ಸಾರಿದಳು. ಆಗ ಆ ಯುವತಿ ಕ್ರಿಸ್ಟೀನ್‌ಗೆ ಹೇಳಿದ್ದು: “ಯಾವ ಧರ್ಮನೂ ಅದರ ಸದಸ್ಯರಿಗೆ ಇಷ್ಟೊಂದು ಕಷ್ಟದ ಭಾಷೆಯನ್ನ ಕಲಿಯೋಕೆ ಪ್ರೋತ್ಸಾಹಿಸಲ್ಲ. ಆದ್ರೆ ನೀವು ಮಾಡ್ತಿರೋ ಪ್ರಯತ್ನ ನೋಡಿದ್ರೆ ತುಂಬಾ ಮುಖ್ಯವಾಗಿರೋ ಏನೋ ಒಂದು ವಿಷ್ಯ ನಿಮಗೆ ಹೇಳಕ್ಕಿದೆ ಅಂತ ಗೊತ್ತಾಗುತ್ತೆ.”

11. ಬೇರೆ ಭಾಷೆ ಮಾತಾಡೋ ಜನ್ರಿಗೆ ಸಿಹಿಸುದ್ದಿ ಸಾರೋಕೆ ನಾವು ಹೇಗೆ ಸಿದ್ಧರಾಗಿರಬಹುದು?

11 ನಿಜ, ನಮಗೆಲ್ಲರಿಗೂ ಬೇರೆ ಭಾಷೆ ಕಲಿಯೋಕೆ ಆಗದೇ ಇರಬಹುದು. ಆದ್ರೂ ಬೇರೆ ಭಾಷೆ ಮಾತಾಡೋ ಜನ್ರಿಗೆ ಸಿಹಿಸುದ್ದಿ ಸಾರಬಹುದು. ಅದು ಹೇಗೆ? ಒಂದು ವಿಧ, JW ಭಾಷೆ ಆ್ಯಪ್‌ ಬಳಸೋ ಮೂಲಕ. ನೀವಿರೋ ಪ್ರದೇಶದಲ್ಲಿ ಜನ ಸಾಮಾನ್ಯವಾಗಿ ಮಾತಾಡೋ ಭಾಷೆಯಲ್ಲಿ ಹೇಗೆ ವಂದಿಸೋದು ಅಂತ ಕಲಿರಿ. ಅಷ್ಟೇ ಅಲ್ಲ, ಆ ಭಾಷೆಯ ಜನರ ಆಸಕ್ತಿಯನ್ನ ಹೆಚ್ಚಿಸೋಕೆ ಕೆಲವು ವಾಕ್ಯಗಳನ್ನೂ ಕಲಿರಿ. ಆಮೇಲೆ jw.org ವೆಬ್‌ಸೈಟಿಗೆ ಹೋಗಿ ಅವರ ಭಾಷೆಯಲ್ಲೇ ಇರೋ ವಿಡಿಯೋ ಮತ್ತು ಪ್ರಕಾಶನಗಳನ್ನ ತೋರಿಸಿ. ಈ ರೀತಿ ಸಾಧನಗಳನ್ನ ಸೇವೆಯಲ್ಲಿ ಬಳಸೋವಾಗ ತುಂಬ ಖುಷಿಯಾಗುತ್ತೆ. ಒಂದನೇ ಶತಮಾನದ ಕ್ರೈಸ್ತರು ಕೂಡ “ಪ್ರತಿಯೊಬ್ಬರ ಮಾತೃಭಾಷೆಯಲ್ಲಿ” ಸಿಹಿಸುದ್ದಿಯನ್ನ ಹೇಳಿದಾಗ ಬೇರೆ ದೇಶದಿಂದ ಬಂದವರು ತುಂಬ ಆಶ್ಚರ್ಯಪಟ್ರು. ಇದನ್ನ ನೋಡಿ ಆ ಕ್ರೈಸ್ತರಿಗೂ ತುಂಬ ಖುಷಿಯಾಯ್ತು.

ಮೆಸಪಟೇಮ್ಯ ಮತ್ತು ಈಜಿಪ್ಟಲ್ಲಿ ಯೆಹೂದ್ಯರು

ದ ಹಿಸ್ಟರಿ ಆಫ್‌ ದ ಜ್ಯೂವಿಶ್‌ ಪೀಪಲ್‌ ಇನ್‌ ದ ಏಜ್‌ ಆಫ್‌ ಜೀಸಸ್‌ ಕ್ರೈಸ್ಟ್‌ (ಕ್ರಿ.ಪೂ. 175–ಕ್ರಿ.ಶ. 135) ಅನ್ನೋ ಪುಸ್ತಕ ಹೀಗೆ ಹೇಳುತ್ತೆ: “ಅಶ್ಶೂರ್ಯರು ಮತ್ತು ಬಾಬೆಲಿನವರು ಮುಂಚೆ ಸೆರೆ ಹಿಡ್ಕೊಂಡು ಹೋಗಿದ್ದ ಹತ್ತು ಕುಲಗಳ [ಇಸ್ರಾಯೇಲ್‌] ರಾಜ್ಯದವರ ಮತ್ತು ಯೆಹೂದ ರಾಜ್ಯದವರ ವಂಶದವರು ಮೆಸಪಟೇಮ್ಯ, ಮೇದ್ಯ ಮತ್ತು ಬ್ಯಾಬಿಲೋನಿಯದಲ್ಲಿ ವಾಸವಾಗಿದ್ರು.” ಎಜ್ರ 2:64 ಹೇಳೋ ತರ, ಬರೀ 42,360 ಇಸ್ರಾಯೇಲ್ಯರು ಮಾತ್ರ ಬಾಬೆಲಿಂದ ಯೆರೂಸಲೇಮಿಗೆ ವಾಪಸ್‌ ಬಂದ್ರು. ಇದು ಕ್ರಿ.ಪೂ. 537ರಲ್ಲಿ ನಡೀತು. ಕ್ರಿ.ಶ. ಒಂದನೇ ಶತಮಾನದಲ್ಲಿ ಸಾವಿರಾರು ಯೆಹೂದ್ಯರು “ಬ್ಯಾಬಿಲೋನಿಯದ ಸುತ್ತಮುತ್ತ ವಾಸವಾಗಿದ್ರು” ಅಂತ ಫ್ಲೇವಿಯಸ್‌ ಜೋಸೀಫಸ್‌ ಹೇಳಿದ್ದಾನೆ. ಕ್ರಿ.ಶ. 3ರಿಂದ 5ನೇ ಶತಮಾನದಲ್ಲಿ ಈ ಸಮುದಾಯಗಳವರು ‘ಬ್ಯಾಬಿಲೋನಿಯನ್‌ ಟ್ಯಾಲ್ಮುಡ್‌’ ಅನ್ನು ರಚಿಸಿದ್ರು. ಇದು ರಬ್ಬಿಗಳು ಹೇಳ್ತಿದ್ದ ನಿಯಮಗಳ ವಿವರಣೆಗಳಿರೋ ಪುಸ್ತಕಗಳ ಸಂಗ್ರಹವಾಗಿತ್ತು.

ಯೆಹೂದ್ಯರು ಈಜಿಪ್ಟಲ್ಲಿ ಇದ್ರು ಅಂತ ಹೇಳೋಕೆ ಕ್ರಿ.ಪೂ. 6ನೇ ಶತಮಾನದಷ್ಟು ಹಿಂದಿನ ದಾಖಲೆಗಳಲ್ಲಿ ಆಧಾರಗಳಿವೆ. ಆ ಸಮಯದಲ್ಲಿ ಯೆರೆಮೀಯ ನೋಫನ್ನೂg ಸೇರಿಸಿ ಈಜಿಪ್ಟಿನ ಅನೇಕ ಸ್ಥಳಗಳಲ್ಲಿ ವಾಸವಾಗಿದ್ದ ಯೆಹೂದ್ಯರಿಗೆ ಒಂದು ಸಂದೇಶ ಹೇಳಿದ. (ಯೆರೆ. 44:1, ಪಾದಟಿಪ್ಪಣಿ) ಗ್ರೀಕ್‌ ಸಂಸ್ಕೃತಿ ಬೇರೆ ದೇಶಗಳಲ್ಲಿ ಹರಡ್ತಿದ್ದ ಸಮಯದಲ್ಲಿ ತುಂಬಾ ಯೆಹೂದ್ಯರು ಈಜಿಪ್ಟಿಗೆ ವಲಸೆಹೋಗಿರಬೇಕು. ಮೊದಮೊದಲು ಅಲೆಕ್ಸಾಂದ್ರಿಯಕ್ಕೆ ಹೋಗಿ ನೆಲೆಸಿದವರಲ್ಲಿ ಯೆಹೂದ್ಯರೂ ಇದ್ರು ಅಂತ ಜೋಸೀಫಸ್‌ ಹೇಳಿದ್ದಾನೆ. ಆಮೇಲೆ, ಅಲೆಕ್ಸಾಂದ್ರಿಯ ನಗರದ ಒಂದು ಇಡೀ ಭಾಗವನ್ನೇ ಅವ್ರಿಗೆ ಕೊಡಲಾಯ್ತು. ತನ್ನ ದೇಶದ ಲಕ್ಷಾಂತರ ಜನ್ರು “ಲಿಬ್ಯದ ಗಡಿಯಿಂದ ಇಥಿಯೋಪಿಯದ ಗಡಿಯವರೆಗೆ” ಹೀಗೆ ಇಡೀ ಈಜಿಪ್ಟಲ್ಲಿ ವಾಸವಾಗಿದ್ರು ಅಂತ ಕ್ರಿ.ಶ. ಒಂದನೇ ಶತಮಾನದಲ್ಲಿ ಯೆಹೂದಿ ಬರಹಗಾರ ಫೀಲೊ ಹೇಳಿದ್ದಾನೆ.

g ಈ ಪಟ್ಟಣದ ಇನ್ನೊಂದು ಹೆಸ್ರು ಮೋಫ್‌ (ಮೆಂಫಿಸ್‌).

“ಪೇತ್ರ ಜೋರಾಗಿ ಹೀಗಂದ” (ಅ. ಕಾ. 2:14-37)

12. (ಎ) ಕ್ರಿ.ಶ. 33ರಲ್ಲಿ ಐವತ್ತನೇ ದಿನದ ಹಬ್ಬದಲ್ಲಿ ನಡೆದ ಅದ್ಭುತದ ಬಗ್ಗೆ ಪ್ರವಾದಿ ಯೋವೇಲ ಏನಂತ ಭವಿಷ್ಯವಾಣಿ ಹೇಳಿದ್ದ? (ಬಿ) ಯೋವೇಲನ ಭವಿಷ್ಯವಾಣಿ ಒಂದನೇ ಶತಮಾನದಲ್ಲಿ ನಿಜ ಆಯ್ತು ಅನ್ನೋದಕ್ಕೆ ಕಾರಣ ಏನು?

12 ಅಲ್ಲಿ ಸೇರಿದ್ದ ಬೇರೆ ಬೇರೆ ದೇಶಗಳ ಜನರ ಜೊತೆ ಪೇತ್ರ ಮಾತಾಡಿದ. (ಅ. ಕಾ. 2:14) ಅವನು ಅಲ್ಲಿದ್ದ ಜನ್ರಿಗೆ ದೇವರು ಶಿಷ್ಯರಿಗೆ ಬೇರೆಬೇರೆ ಭಾಷೆಗಳಲ್ಲಿ ಮಾತಾಡೋ ವರವನ್ನ ಕೊಟ್ಟನು ಮತ್ತು ದೇವರು ಯೋವೇಲನ ಮೂಲಕ ಹೇಳಿದ ಭವಿಷ್ಯವಾಣಿ ಹೀಗೆ ನಿಜ ಆಯ್ತು ಅಂತ ವಿವರಿಸಿದ. ದೇವರು ಯೋವೇಲನ ಮೂಲಕ ಹೀಗೆ ಹೇಳಿದ್ದನು, “ನಾನು ಎಲ್ಲ ರೀತಿಯ ಜನ್ರ ಮೇಲೆ ನನ್ನ ಪವಿತ್ರಶಕ್ತಿ ಸುರಿಸ್ತೀನಿ.” (ಯೋವೇ. 2:28) ಯೇಸು ಸ್ವರ್ಗಕ್ಕೆ ಹೋಗೋ ಮುಂಚೆ ತನ್ನ ಶಿಷ್ಯರಿಗೆ, “[ನಿಮಗೆ] ಇನ್ನೊಬ್ಬ ಸಹಾಯಕನನ್ನ ಕಳಿಸು ಅಂತ ಅಪ್ಪನ ಹತ್ರ ಬೇಡ್ತೀನಿ. ಆತನು ಕಳಿಸ್ತಾನೆ” ಅಂತ ಹೇಳಿದ್ದನು. ಆ ಸಹಾಯಕ “ಪವಿತ್ರಶಕ್ತಿನೇ” ಅಂತ ಆತನು ಹೇಳಿದ್ದನು.—ಯೋಹಾ. 14:16, 17.

13, 14. (ಎ) ಪೇತ್ರ ಜನರ ಮನಸ್ಸು ಮುಟ್ಟೋಕೆ ಏನು ಮಾಡಿದ? (ಬಿ) ಅವನಿಂದ ನಮಗೇನು ಪಾಠ?

13 ಕೊನೆಯಲ್ಲಿ ಪೇತ್ರ ಜನರ ಗುಂಪಿಗೆ ದೃಢವಾಗಿ ಹೀಗೆ ಹೇಳಿದ: “ನೀವು ಕಂಬಕ್ಕೆ ಜಡಿದ ಈ ಯೇಸುವನ್ನೇ ದೇವರು ಪ್ರಭುವಾಗಿ ಮತ್ತು ಕ್ರಿಸ್ತನಾಗಿ ಮಾಡಿದ್ದಾನೆ ಅಂತ ಇಸ್ರಾಯೇಲ್‌ ಜನ್ರಿಗೆಲ್ಲ ಚೆನ್ನಾಗಿ ಅರ್ಥ ಆಗಬೇಕು.” (ಅ. ಕಾ. 2:36) ಪೇತ್ರನ ಮಾತುಗಳನ್ನ ಕೇಳ್ತಿದ್ದವರಲ್ಲಿ ಅನೇಕರು ಯೇಸುನ ಕಂಬದ ಮೇಲೆ ಜಡಿದಾಗ ಅಲ್ಲಿ ಇರಲಿಲ್ಲ ನಿಜ. ಆದ್ರೂ ಅದಕ್ಕೆ ಇಡೀ ಜನಾಂಗದವರು ಹೊಣೆ ಆಗಿದ್ರು. ಇಲ್ಲಿ ಗಮನಿಸಬೇಕಾದ ವಿಷ್ಯ ಏನಂದ್ರೆ, ಪೇತ್ರ ತನ್ನ ಜನಾಂಗದವರಾದ ಯೆಹೂದ್ಯರ ಜೊತೆ ಗೌರವದಿಂದ, ಮನಸ್ಸು ಮುಟ್ಟೋ ತರ ಮಾತಾಡಿದ. ಅವನ ಉದ್ದೇಶ ಜನರು ಪಶ್ಚಾತ್ತಾಪಪಡಬೇಕು ಅನ್ನೋದಾಗಿತ್ತೇ ಹೊರತು ಅವರನ್ನ ಖಂಡಿಸೋದಾಗಿರಲಿಲ್ಲ. ಅವನ ಮಾತು ಕೇಳಿಸ್ಕೊಂಡ ಜನರ ಗುಂಪು ಅವನ ಮೇಲೆ ಕೋಪ ಮಾಡ್ಕೊಳ್ತಾ? ಇಲ್ಲ. ಬದಲಿಗೆ ಅವರ “ಮನಸ್ಸು ಚುಚ್ಚಿತು.” ಅದಕ್ಕೇ ಅವರು, “ನಾವೇನು ಮಾಡಬೇಕು?” ಅಂತ ಕೇಳಿದ್ರು. ಪೇತ್ರ ಗೌರವದಿಂದ ಮಾತಾಡಿದ್ರಿಂದಾನೇ ಅನೇಕರ ಮನಸ್ಸು ಮುಟ್ಟೋಕಾಯ್ತು ಮತ್ತು ಅವರು ಪಶ್ಚಾತ್ತಾಪಪಟ್ರು.—ಅ. ಕಾ. 2:37.

14 ಪೇತ್ರನ ತರ ನಾವೂ ಜನರ ಮನಸ್ಸು ಮುಟ್ಟೋ ತರ ಮಾತಾಡಬೇಕು. ನಾವು ಸಾಕ್ಷಿಕೊಡುವಾಗ ಮನೆಯವನು ಬೈಬಲಿಗೆ ವಿರುದ್ಧವಾಗಿ ಹೇಳಿದ್ದನ್ನೆಲ್ಲ ಚರ್ಚಿಸಬೇಕಂತಿಲ್ಲ. ಬದಲಿಗೆ ಮನೆಯವನೂ ನಾವೂ ಇಬ್ಬರೂ ಒಪ್ಪೋ ವಿಷ್ಯಗಳ ಬಗ್ಗೆ ಮಾತಾಡಬಹುದು. ಮೊದಲು ಇದನ್ನ ಮಾಡಿದ್ರೆ ಆಮೇಲೆ ಜಾಣ್ಮೆಯಿಂದ ದೇವರ ವಾಕ್ಯವನ್ನ ಬಳಸಿ ಚರ್ಚೆ ಮಾಡಬಹುದು. ಈ ತರ ಬೈಬಲ್‌ ಸತ್ಯಗಳನ್ನ ಜನರ ಹತ್ರ ಮಾತಾಡೋವಾಗ ಒಳ್ಳೇ ಹೃದಯದ ಜನ ಒಳ್ಳೇ ಪ್ರತಿಕ್ರಿಯೆ ತೋರಿಸಬಹುದು.

ಪೊಂತದಲ್ಲಿ ಕ್ರೈಸ್ತಧರ್ಮ

ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ ಪೇತ್ರ ಕೊಟ್ಟ ಭಾಷಣ ಕೇಳಿದವ್ರಲ್ಲಿ ಪೊಂತದ ಯೆಹೂದ್ಯರೂ ಇದ್ರು. ಪೊಂತ, ಉತ್ತರ ಏಷ್ಯಾ ಮೈನರ್‌ ಪ್ರಾಂತದಲ್ಲಿನ ಒಂದು ಜಿಲ್ಲೆಯಾಗಿತ್ತು. (ಅ. ಕಾ. 2:9) ಆ ಯೆಹೂದ್ಯರಲ್ಲಿ ಕೆಲವರು ಸಿಹಿಸುದ್ದಿ ಕೇಳಿ ಕ್ರೈಸ್ತರಾಗಿ ಸ್ವದೇಶಕ್ಕೆ ವಾಪಸ್‌ ಹೋಗಿರಬೇಕು. ಅದಕ್ಕೇ ಪೇತ್ರ ತನ್ನ ಮೊದಲ ಪತ್ರವನ್ನ ಪೊಂತ ಮತ್ತು ಬೇರೆ ಸ್ಥಳಗಳಲ್ಲಿ “ಚೆಲ್ಲಾಪಿಲ್ಲಿ ಆಗಿ ವಾಸ ಮಾಡ್ತಿರುವ” ಕ್ರೈಸ್ತರಿಗೆ ಬರೆದ.h (1 ಪೇತ್ರ 1:1) ಈ ಕ್ರೈಸ್ತರು ನಂಬಿಕೆಗೋಸ್ಕರ “ಬೇರೆಬೇರೆ ತರದ ಕಷ್ಟಗಳನ್ನ” ಅನುಭವಿಸ್ತಿದ್ರು ಅಂತ ಆ ಪತ್ರದಿಂದ ಗೊತ್ತಾಗುತ್ತೆ. (1 ಪೇತ್ರ 1:6) ಈ ಪರೀಕ್ಷೆಗಳಲ್ಲಿ ವಿರೋಧ, ಹಿಂಸೆನೂ ಸೇರಿರಬಹುದು.

ಪೊಂತದಲ್ಲಿನ ಕ್ರೈಸ್ತರು ಎದುರಿಸಿದ ಇನ್ನೂ ಕಠಿಣವಾದ ಪರೀಕ್ಷೆಗಳ ಬಗ್ಗೆ ರೋಮನ್‌ ಪ್ರಾಂತವಾಗಿದ್ದ ಬಿಥೂನ್ಯ-ಪೊಂತದ ರಾಜ್ಯಪಾಲನಾಗಿದ್ದ ‘ಪ್ಲಿನಿ ದ ಯಂಗರ್‌’ ಮತ್ತು ಚಕ್ರವರ್ತಿ ಟ್ರೇಜನ್‌ನ ಮಧ್ಯೆ ನಡೆದ ಪತ್ರವ್ಯವಹಾರದಿಂದ ಗೊತ್ತಾಗುತ್ತೆ. ಪ್ಲಿನಿ ಕ್ರಿ.ಶ. 112ರಷ್ಟಕ್ಕೆ ಪೊಂತದಿಂದ ಬರೆದ ಪತ್ರದಲ್ಲಿ, ಕ್ರೈಸ್ತಧರ್ಮ ಅನ್ನೋ “ಅಂಟುರೋಗ” ಗಂಡು-ಹೆಣ್ಣು, ಚಿಕ್ಕವರು-ದೊಡ್ಡವರು, ಶ್ರೀಮಂತರು-ಬಡವರು ಯಾವುದನ್ನೂ ಲೆಕ್ಕಿಸದೆ ಎಲ್ಲ ತರದ ಜನ್ರಿಗೂ ಹರಡ್ತಿದೆ ಅಂತ ಹೇಳಿದ. ಕ್ರೈಸ್ತರು ಅನ್ನೋ ಆರೋಪ ಯಾರ ಮೇಲೆ ಇತ್ತೋ ಅವ್ರಿಗೆ ಕ್ರೈಸ್ತ ಧರ್ಮನ ಬಿಟ್ಟುಬಿಡೋಕೆ ಒಂದು ಅವಕಾಶ ಕೊಡ್ತಿದ್ದ. ಬಿಡದಿದ್ರೆ ಅವ್ರನ್ನ ಕೊಂದು ಬಿಡ್ತಿದ್ದ. ಆದ್ರೆ ಅವ್ರಲ್ಲಿ ಯಾರಾದ್ರೂ ಕ್ರಿಸ್ತನನ್ನ ಶಪಿಸಿದ್ರೆ, ರೋಮನ್‌ ದೇವರುಗಳಿಗೆ ಅಥವಾ ಟ್ರೇಜನ್‌ನ ಮೂರ್ತಿಗೆ ಒಂದು ಪ್ರಾರ್ಥನೆ ಮಾಡಿದ್ರೆ ಅವ್ರನ್ನ ಬಿಟ್ಟು ಬಿಡ್ತಿದ್ದ. ಆದ್ರೆ ಈ ಕೆಲಸಗಳನ್ನ “ಸತ್ಯ ಕ್ರೈಸ್ತರಿಂದ ಮಾಡಿಸೋಕೆ ಆಗ್ತಿರಲಿಲ್ಲ” ಅಂತ ಪ್ಲಿನಿ ತನ್ನ ಪತ್ರದಲ್ಲಿ ಒಪ್ಕೊಂಡಿದ್ದಾನೆ.

h “ಚೆಲ್ಲಾಪಿಲ್ಲಿ ಆಗಿ” ಅಂತ ಭಾಷಾಂತರ ಆಗಿರೋ ಪದ, ಪ್ಯಾಲೆಸ್ತೀನ್‌ನ ಹೊರಗಿದ್ದ ಯೆಹೂದಿ ಸಮುದಾಯಗಳಿಗೆ ಸೂಚಿಸೋ ಪದದಿಂದ ಬಂದಿದೆ. ಇದು, ಮೊದಮೊದಲು ಕ್ರೈಸ್ತಧರ್ಮವನ್ನ ಸ್ವೀಕರಿಸಿದವರಲ್ಲಿ ತುಂಬ ಯೆಹೂದಿಗಳೂ ಇದ್ರು ಅಂತ ಸೂಚಿಸುತ್ತೆ.

“ದೀಕ್ಷಾಸ್ನಾನ ತಗೊಳ್ಳಿ” (ಅ. ಕಾ. 2:38-47)

15. (ಎ) ಪೇತ್ರ ಏನಂತ ಹೇಳಿದ? (ಬಿ) ಅದಕ್ಕೆ ಸಿಕ್ಕಿದ ಪ್ರತಿಕ್ರಿಯೆ ಏನಾಗಿತ್ತು? (ಸಿ) ಐವತ್ತನೇ ದಿನದ ಹಬ್ಬದಲ್ಲಿ ಸಿಹಿಸುದ್ದಿ ಕೇಳಿಸ್ಕೊಂಡ ಸಾವಿರಾರು ಜನ ಅದೇ ದಿನದಲ್ಲಿ ದೀಕ್ಷಾಸ್ನಾನ ಪಡ್ಕೊಳ್ಳೋಕೆ ಯಾಕೆ ಅರ್ಹರಾಗಿದ್ರು?

15 ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ ಪ್ರತಿಕ್ರಿಯೆ ತೋರಿಸಿದ ಯೆಹೂದ್ಯರಿಗೆ ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರಿಗೆ ಪೇತ್ರ, ‘ಪಶ್ಚಾತ್ತಾಪಪಡಿ, ದೀಕ್ಷಾಸ್ನಾನ ತಗೊಳ್ಳಿ’ ಅಂದ. (ಅ. ಕಾ. 2:38) ಇದ್ರಿಂದಾಗಿ ಸುಮಾರು 3,000 ಜನ ಯೆರೂಸಲೇಮಿನಲ್ಲಿ ಅಥವಾ ಅದರ ಹತ್ರ ಇದ್ದ ಕೊಳಗಳಲ್ಲಿ ದೀಕ್ಷಾಸ್ನಾನ ಪಡ್ಕೊಂಡ್ರು.e ಇದು ಅವರು ಹಿಂದೆಮುಂದೆ ಯೋಚ್ನೆ ಮಾಡದೇ ತಗೊಂಡ ಹೆಜ್ಜೆ ಆಗಿತ್ತಾ? ಇದರರ್ಥ ಬೈಬಲ್‌ ವಿದ್ಯಾರ್ಥಿಗಳು ಮತ್ತು ಸತ್ಯದಲ್ಲಿರುವವರ ಮಕ್ಕಳು ದೀಕ್ಷಾಸ್ನಾನಕ್ಕೆ ಅರ್ಹರಾಗಿಲ್ಲ ಅಂದ್ರೂ ತಗೋಬಹುದಾ? ಖಂಡಿತ ಇಲ್ಲ. ಯಾಕಂದ್ರೆ ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದ ಆ ದಿನ ದೀಕ್ಷಾಸ್ನಾನ ಪಡ್ಕೊಂಡ ಯೆಹೂದ್ಯರು ಮತ್ತು ಯೆಹೂದಿ ಮತಕ್ಕೆ ಮತಾಂತರ ಆದವರು ಈಗಾಗಲೇ ದೇವರ ವಾಕ್ಯದ ಬಗ್ಗೆ ಆಸಕ್ತಿಯಿಂದ ಕಲೀತಿದ್ರು. ಅಷ್ಟೇ ಅಲ್ಲ ಅವರು ಯೆಹೋವನಿಗೆ ಸಮರ್ಪಿಸಿಕೊಂಡಿದ್ದ ಜನಾಂಗದ ಭಾಗ ಆಗಿದ್ರು. ಅವ್ರಿಗೆ ಈಗಾಗಲೇ ತುಂಬಾ ಹುರುಪು ಇದ್ದಿದ್ರಿಂದನೇ ಈ ವಾರ್ಷಿಕ ಹಬ್ಬಕ್ಕೆ ಬಂದಿದ್ರು. ಕೆಲವರಂತೂ ತುಂಬ ದೂರದಿಂದ ಬಂದಿದ್ರು. ಅವರು, ದೇವರ ಉದ್ದೇಶ ಪೂರೈಸೋದರಲ್ಲಿ ಯೇಸು ಕ್ರಿಸ್ತನಿಗೆ ಇರೋ ಪಾತ್ರದ ಬಗ್ಗೆ ಪ್ರಾಮುಖ್ಯ ಸತ್ಯಗಳನ್ನ ಈಗ ಒಪ್ಕೊಂಡಿದ್ರು. ಅದಕ್ಕೆ ಅವರು ದೀಕ್ಷಾಸ್ನಾನ ಪಡ್ಕೊಳ್ಳೋಕೆ ಅರ್ಹರಾಗಿದ್ರು, ಹೀಗೆ ಕ್ರಿಸ್ತನ ಹಿಂಬಾಲಕರಾದ್ರು.

ಯೆಹೂದ್ಯರಾಗಿ ಮತಾಂತರ ಆದವ್ರು ಯಾರು?

ಕ್ರಿ.ಶ. 33ರಲ್ಲಿ ಐವತ್ತನೇ ದಿನದ ಹಬ್ಬದ ಸಮಯದಲ್ಲಿ ಪೇತ್ರ ಸಾರಿದ್ದನ್ನ “ಯೆಹೂದ್ಯರು, ಯೆಹೂದ್ಯರಾಗಿ ಮತಾಂತರ ಆದವ್ರೂ” ಕೇಳಿಸ್ಕೊಂಡ್ರು.—ಅ. ಕಾ. 2:10.

ಪ್ರತಿದಿನ “ಆಹಾರ ಹಂಚೋ ಕೆಲಸವನ್ನ” ನೋಡ್ಕೊಳ್ಳೋಕೆ ನೇಮಿಸಲಾಗಿದ್ದ ಅರ್ಹ ಸಹೋದರರಲ್ಲಿ ನಿಕೊಲಾಯ ಒಬ್ಬನಾಗಿದ್ದ. ಅವನು “ಯೆಹೂದಿಯಾಗಿ ಮತಾಂತರ ಆಗಿದ್ದ.” (ಅ. ಕಾ. 6:3-5) ಯೆಹೂದ್ಯರಾಗಿ ಮತಾಂತರ ಆದವರು ಬೇರೆ ಜನಾಂಗಕ್ಕೆ ಸೇರಿದವರಾಗಿದ್ರು. ಅವರು ಬೇರೆಲ್ಲಾ ದೇವರುಗಳನ್ನ ಬಿಟ್ಟು ಇಸ್ರಾಯೇಲ್ಯರ ದೇವರನ್ನ ಮತ್ತು ನಿಯಮ ಪುಸ್ತಕವನ್ನ ಸ್ವೀಕರಿಸಿ, ಸುನ್ನತಿ ಮಾಡಿಸ್ಕೊಂಡು (ಗಂಡಸರಾಗಿದ್ರೆ), ಇಸ್ರಾಯೇಲ್‌ ಜನಾಂಗದ ಭಾಗವಾದ್ರು. ಹಾಗಾಗಿ ಅವ್ರನ್ನ ಯೆಹೂದ್ಯರು ಅಂತಾನೇ ಪರಿಗಣಿಸ್ತಿದ್ರು.

ಕ್ರಿ.ಪೂ. 537ರಲ್ಲಿ ಬಾಬೆಲಿನಿಂದ ಬಿಡುಗಡೆಯಾದ ಯೆಹೂದ್ಯರಲ್ಲಿ ತುಂಬ ಜನ ಇಸ್ರಾಯೇಲ್‌ ದೇಶದಿಂದ ದೂರದೂರದಲ್ಲಿದ್ದ ಸ್ಥಳಗಳಲ್ಲಿ ವಾಸಿಸಿದ್ರು. ಆದ್ರೆ ಯೆಹೂದಿ ಧರ್ಮವನ್ನ ಬಿಟ್ಟುಬಿಡಲಿಲ್ಲ. ಹೀಗೆ ಯೆಹೂದ್ಯರು ಎಲ್ಲೆಲ್ಲಿ ಹೋದ್ರೊ ಅಲ್ಲೆಲ್ಲ ಜನ್ರಿಗೆ ಯೆಹೂದಿ ಧರ್ಮದ ಪರಿಚಯ ಆಯ್ತು. ಯೆಹೂದ್ಯರಿಗೆ ಮತ್ತು ಅವರ ನಂಬಿಕೆಗಳಿಗೆ ಆಕರ್ಷಿತರಾದ ವಿಭಿನ್ನ ದೇಶಗಳ ಜನರ ಗುಂಪುಗಳು ಯೆಹೂದಿ ಸಮುದಾಯಕ್ಕೆ ಸೇರಿ ಯೆಹೂದ್ಯರಾಗಿ ಮತಾಂತರ ಆದ್ರು ಅಂತ ಹಾರೆಸ್‌ ಮತ್ತು ಸೆನಿಕರಂಥ ಪುರಾತನಕಾಲದ ಬರಹಗಾರರು ಹೇಳ್ತಾರೆ.

16. ಒಂದನೇ ಶತಮಾನದ ಕ್ರೈಸ್ತರು ಹೇಗೆ ಸ್ವತ್ಯಾಗದ ಮನೋಭಾವವನ್ನ ತೋರಿಸಿದ್ರು?

16 ಆ ಗುಂಪಿನ ಮೇಲೆ ಖಂಡಿತವಾಗಿ ಯೆಹೋವನ ಆಶೀರ್ವಾದ ಇತ್ತು. ಅದಕ್ಕೇ, “ಹೊಸ ಶಿಷ್ಯರೆಲ್ಲ ಒಟ್ಟಿಗೆ ಇರ್ತಿದ್ರು ಮತ್ತು ತಮ್ಮ ಹತ್ರ ಇದ್ದ ಎಲ್ಲವನ್ನ ಹಂಚ್ಕೊಳ್ತಿದ್ರು. ತಮ್ಮ ಜಮೀನು, ಆಸ್ತಿಪಾಸ್ತಿ ಮಾರಿ ಬಂದ ಹಣವನ್ನ ಎಲ್ರಿಗೂ ಅವರವ್ರ ಅಗತ್ಯಕ್ಕೆ ತಕ್ಕಂತೆ ಹಂಚ್ಕೊಡ್ತಾ ಇದ್ರು.”f (ಅ. ಕಾ. 2:44, 45) ನಾವು ಕೂಡ ಇಂಥದ್ದೇ ಪ್ರೀತಿ ಮತ್ತು ಸ್ವತ್ಯಾಗದ ಮನೋಭಾವವನ್ನ ತೋರಿಸಬೇಕು.

17. ಒಬ್ಬ ವ್ಯಕ್ತಿ ದೀಕ್ಷಾಸ್ನಾನಕ್ಕೆ ಅರ್ಹನಾಗಬೇಕಾದ್ರೆ ಯಾವೆಲ್ಲಾ ಹೆಜ್ಜೆಗಳನ್ನ ತಗೊಬೇಕು?

17 ಸಮರ್ಪಣೆ ಮತ್ತು ದೀಕ್ಷಾಸ್ನಾನದ ಮುಂಚೆ ಒಬ್ಬ ವ್ಯಕ್ತಿ ಕೆಲವು ಹೆಜ್ಜೆಗಳನ್ನ ತಗೊಬೇಕು. ದೇವರ ವಾಕ್ಯದ ಜ್ಞಾನವನ್ನ ಪಡ್ಕೊಬೇಕು. (ಯೋಹಾ. 17:3) ನಂಬಿಕೆ ತೋರಿಸಬೇಕು ಮತ್ತು ಪಶ್ಚಾತ್ತಾಪಪಡಬೇಕು. ಅಂದ್ರೆ ಸತ್ಯ ಕಲಿಯೋ ಮುಂಚೆ ಮಾಡಿದ ತಪ್ಪಿನ ಬಗ್ಗೆ ಮನಸಾರೆ ದುಃಖ ತೋರಿಸಬೇಕು. (ಅ. ಕಾ. 3:19) ನಂತರ ತಿದ್ದುಕೊಂಡು ಬದಲಾಗಬೇಕು ಮತ್ತು ದೇವರಿಗೆ ಇಷ್ಟವಾದ ಕೆಲಸಗಳನ್ನ ಮಾಡಬೇಕು. (ರೋಮ. 12:2; ಎಫೆ. 4:23, 24) ಈ ಹೆಜ್ಜೆಗಳನ್ನ ತಗೊಂಡ ಮೇಲೆ ಅವನು ಪ್ರಾರ್ಥನೆ ಮಾಡೋವಾಗ ತನ್ನನ್ನ ದೇವರಿಗೆ ಸಮರ್ಪಣೆ ಮಾಡ್ಕೊಬೇಕು, ಆಮೇಲೆ ಅವನು ದೀಕ್ಷಾಸ್ನಾನ ಪಡ್ಕೊಬಹುದು.—ಮತ್ತಾ. 16:24; 1 ಪೇತ್ರ 3:21.

18. ದೀಕ್ಷಾಸ್ನಾನ ಪಡ್ಕೊಂಡು ಕ್ರಿಸ್ತನ ಶಿಷ್ಯರಾದವರಿಗೆ ಯಾವ ಸುಯೋಗ ಇದೆ?

18 ನೀವು ಸಮರ್ಪಣೆ ಮಾಡ್ಕೊಂಡು, ದೀಕ್ಷಾಸ್ನಾನ ಪಡ್ಕೊಂಡು ಯೇಸು ಕ್ರಿಸ್ತನ ಶಿಷ್ಯರಾಗಿದ್ದೀರಾ? ಹಾಗಿದ್ರೆ, ಒಂದನೇ ಶತಮಾನದ ಶಿಷ್ಯರ ತರ ಯೆಹೋವ ದೇವರು ನಿಮಗೂ ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಮತ್ತು ಆತನ ಇಷ್ಟದಂತೆ ನಡೆಯೋಕೆ ಪವಿತ್ರಶಕ್ತಿಯನ್ನ ಕೊಟ್ಟೇ ಕೊಡ್ತಾನೆ! ಶಿಷ್ಯರಾಗಿರೋ ಈ ಸುಯೋಗಕ್ಕೆ ಎಷ್ಟು ಥಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ.

a “ಯೆರೂಸಲೇಮ್‌—ಯೆಹೂದಿಮತದ ಕೇಂದ್ರ” ಅನ್ನೋ ಚೌಕ ನೋಡಿ.

b “ರೋಮ್‌—ಒಂದು ಸಾಮ್ರಾಜ್ಯದ ರಾಜಧಾನಿ,” “ಮೆಸಪಟೇಮ್ಯ ಮತ್ತು ಈಜಿಪ್ಟಲ್ಲಿ ಯೆಹೂದ್ಯರು” ಮತ್ತು “ಪೊಂತದಲ್ಲಿ ಕ್ರೈಸ್ತಧರ್ಮ” ಅನ್ನೋ ಚೌಕಗಳನ್ನ ನೋಡಿ.

c ಆ “ನಾಲಿಗೆ” ನಿಜಕ್ಕೂ ಬೆಂಕಿ ಆಗಿರಲಿಲ್ಲ. ಅದು ಬರೀ “ಆಕಾರ” ಆಗಿತ್ತಷ್ಟೇ. ಪ್ರತಿಯೊಬ್ಬ ಶಿಷ್ಯನ ಮೇಲೆ ಏನು ಕಾಣಿಸ್ತಾ ಇತ್ತೋ ಅದು ನೋಡೋಕೆ ಬೆಂಕಿ ತರ ಇತ್ತು ಮತ್ತು ಜ್ವಾಲೆ ತರ ಪ್ರಜ್ವಲಿಸ್ತಾ ಇತ್ತು.

d “ಯೆಹೂದ್ಯರಾಗಿ ಮತಾಂತರ ಆದವ್ರು ಯಾರು?” ಅನ್ನೋ ಚೌಕ ನೋಡಿ.

e 1993, ಆಗಸ್ಟ್‌ 7ರಂದು ಯುಕ್ರೇನ್‌ನ ಕೀಯೇವ್‌ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನವೊಂದರಲ್ಲಿ ಆರು ಕೊಳಗಳಲ್ಲಿ 7,402 ಜನರು ದೀಕ್ಷಾಸ್ನಾನ ಪಡ್ಕೊಂಡ್ರು. ಇದಕ್ಕೆ ಎರಡು ಗಂಟೆ ಹದಿನೈದು ನಿಮಿಷ ಹಿಡೀತು.

f ಈ ತರ ಬೇರೆವ್ರಿಗೆ ಸಹಾಯ ಮಾಡೋ ಏರ್ಪಾಡು ತಾತ್ಕಾಲಿಕವಾಗಿತ್ತಾದ್ರೂ ಹೊಸ ನಂಬಿಕೆ ಬಗ್ಗೆ ಇನ್ನೂ ಜಾಸ್ತಿ ಕಲಿಯೋಕೆ ಯೆರೂಸಲೇಮಿನಲ್ಲೇ ಉಳ್ಕೊಂಡ ವಿದೇಶಿಯರ ಅಗತ್ಯಗಳನ್ನ ಪೂರೈಸೋಕೆ ಸಹಾಯ ಆಯ್ತು. ಬೇರೆವ್ರ ಒತ್ತಾಯದಿಂದನೋ ಅಥ್ವಾ ಯಾವುದೋ ರಾಜಕೀಯ ಸಿದ್ಧಾಂತದ ಆಧಾರದ ಮೇಲೆನೋ ಈ ರೀತಿ ಸಹಾಯ ಮಾಡಲಿಲ್ಲ. ಬದಲಾಗಿ ಪ್ರೀತಿಯಿಂದ ಹಂಚ್ಕೊಂಡ್ರು.—ಅ. ಕಾ. 5:1-4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ