“ನಿನ್ನ ಮರುಜ್ಞಾಪನಗಳು ನನ್ನ ಆನಂದವು”
“ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು.” —ರೋಮಾಪುರ 15:4.
1. ಯೆಹೋವನು ನಮಗೆ ಮರುಜ್ಞಾಪನಗಳನ್ನು ಹೇಗೆ ಕೊಡುತ್ತಾನೆ, ಮತ್ತು ಅವುಗಳು ನಮಗೆ ಆವಶ್ಯಕವಾಗಿವೆ ಏಕೆ?
ಯೆಹೋವನು ತನ್ನ ಜನರಿಗೆ ಈ ಕಠಿನ ಕಾಲದ ಒತ್ತಡಗಳನ್ನು ನಿಭಾಯಿಸುವಂತೆ ಸಹಾಯ ಮಾಡಲು ಮರುಜ್ಞಾಪನಗಳನ್ನು ಒದಗಿಸುತ್ತಾನೆ. ಇಂತಹ ಮರುಜ್ಞಾಪನಗಳಲ್ಲಿ ಕೆಲವು ನಮ್ಮ ಸ್ವಂತ ಬೈಬಲ್ ವಾಚನದ ಸಮಯದಲ್ಲಿ ಎದ್ದುಕಾಣುವಾಗ, ಇನ್ನು ಕೆಲವು ಕ್ರೈಸ್ತ ಕೂಟಗಳಲ್ಲಿ ಕೊಡಲಾಗುವ ಮಾಹಿತಿ ಅಥವಾ ಹೇಳಿಕೆಗಳ ರೂಪದಲ್ಲಿ ಕೇಳಿಬರುತ್ತವೆ. ಈ ಸಂದರ್ಭಗಳಲ್ಲಿ ನಾವು ಓದುವ ಅಥವಾ ಕೇಳಿಸಿಕೊಳ್ಳುವ ಹೆಚ್ಚಿನ ವಿಚಾರಗಳು ನಮಗೆ ಹೊಸದೇನೂ ಆಗಿರುವುದಿಲ್ಲ. ಅಂತಹ ಮಾಹಿತಿಯನ್ನು ನಾವು ಈ ಮೊದಲೇ ಕೇಳಿದ್ದಿರಬಹುದು. ಆದರೆ ಮರೆತುಬಿಡುವ ಪ್ರವೃತ್ತಿ ನಮಗಿರುವುದರಿಂದ ಯೆಹೋವನ ಉದ್ದೇಶಗಳು, ನಿಯಮಗಳು ಮತ್ತು ಸಲಹೆಗಳ ವಿಷಯದಲ್ಲಿ ನಮ್ಮ ಜ್ಞಾಪಕಶಕ್ತಿಗಳನ್ನು ಸದಾ ಚುರುಕುಗಳಿಸುವುದು ಆವಶ್ಯಕ. ದೇವರ ಮರುಜ್ಞಾಪನಗಳಿಗೆ ನಾವು ಆಭಾರಿಗಳಾಗಿರಬೇಕು. ಏಕೆಂದರೆ ಅವು, ದೈವಿಕ ಜೀವನ ಮಾರ್ಗವನ್ನು ಆಯ್ದುಕೊಳ್ಳುವಂತೆ ನಮ್ಮನ್ನು ಪ್ರಚೋದಿಸಿದ ಕಾರಣಗಳನ್ನು ಯಾವಾಗಲೂ ಗಮನದಲ್ಲಿಡಲು ಸಹಾಯಮಾಡುವ ಮೂಲಕ ನಮ್ಮ ಮನೋಭಾವವನ್ನು ನವೀಕರಿಸುತ್ತವೆ. ಆದುದರಿಂದಲೇ, “ನಿನ್ನ ಕಟ್ಟಳೆಗಳು [“ಮರುಜ್ಞಾಪನಗಳು,” NW] ನನ್ನ ಆನಂದವು” ಎಂದು ಕೀರ್ತನೆಗಾರನು ಯೆಹೋವನಿಗೆ ಹಾಡಿಹೇಳಿದನು.—ಕೀರ್ತನೆ 119:24.
2, 3. (ಎ) ಯೆಹೋವನು ಬೈಬಲ್ ವ್ಯಕ್ತಿಗಳ ಜೀವನಚರಿತ್ರೆಗಳನ್ನು ನಮ್ಮ ದಿನಗಳ ವರೆಗೆ ಏಕೆ ಉಳಿಸಿಟ್ಟಿದ್ದಾನೆ? (ಬಿ) ಶಾಸ್ತ್ರವಚನಗಳಲ್ಲಿರುವ ಯಾವ ವೃತ್ತಾಂತಗಳನ್ನು ಈ ಲೇಖನದಲ್ಲಿ ಪರಿಗಣಿಸಲಾಗುವುದು?
2 ದೇವರ ವಾಕ್ಯವು ಅನೇಕ ಶತಮಾನಗಳ ಹಿಂದೆ ಬರೆಯಲ್ಪಟ್ಟಿರುವುದಾದರೂ ಅದು ಪ್ರಭಾವಶಾಲಿಯಾಗಿದೆ. (ಇಬ್ರಿಯ 4:12) ಬೈಬಲ್ ಪಾತ್ರಧಾರಿಗಳ ನಿಜ ಜೀವನ ವೃತ್ತಾಂತಗಳನ್ನು ಅದು ಪ್ರಸ್ತುತಪಡಿಸುತ್ತದೆ. ಬೈಬಲ್ ಸಮಯದಂದಿನಿಂದ ಪದ್ಧತಿಗಳೂ ದೃಷ್ಟಿಕೋನಗಳೂ ಈಗ ತುಂಬ ಬದಲಾಗಿರುವುದಾದರೂ, ನಾವು ಎದುರಿಸುವ ಸಮಸ್ಯೆಗಳು ಆ ದಿನಗಳಲ್ಲಿ ಜನರು ಎದುರಿಸಿದ ಸಮಸ್ಯೆಗಳನ್ನು ಅನೇಕವೇಳೆ ಹೋಲುತ್ತವೆ. ಬೈಬಲಿನಲ್ಲಿ ನಮ್ಮ ಪ್ರಯೋಜನಕ್ಕಾಗಿ ಉಳಿಸಲ್ಪಟ್ಟಿರುವ ಅನೇಕ ಕಥೆಗಳು, ಯೆಹೋವನನ್ನು ಪ್ರೀತಿಸಿದ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಆತನನ್ನು ನಂಬಿಗಸ್ತರಾಗಿ ಸೇವಿಸಿದ ಜನರ ಮನಸ್ಪರ್ಶಿಸುವ ಮಾದರಿಗಳನ್ನು ಒದಗಿಸುತ್ತವೆ. ಇತರ ವೃತ್ತಾಂತಗಳು ದೇವರು ಯಾವ ರೀತಿಯ ನಡತೆಯನ್ನು ದ್ವೇಷಿಸುತ್ತಾನೊ ಅವುಗಳ ಕಡೆಗೆ ಗಮನ ಸೆಳೆಯುತ್ತವೆ. ಯೆಹೋವನು ಈ ಎಲ್ಲ ಒಳ್ಳೆಯ ಮತ್ತು ಕೆಟ್ಟ ಜನರ ವೈಯಕ್ತಿಕ ಚರಿತ್ರೆಯನ್ನು ನಮಗೆ ಮರುಜ್ಞಾಪನಗಳಾಗಿ ಬೈಬಲಿನಲ್ಲಿ ಸೇರಿಸಿಟ್ಟಿದ್ದಾನೆ. ಇದು ಅಪೊಸ್ತಲ ಪೌಲನು ಬರೆದಂತೆಯೇ ಇದೆ: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.”—ರೋಮಾಪುರ 15:4.
3 ನಾವೀಗ ಶಾಸ್ತ್ರವಚನಗಳಲ್ಲಿರುವ ಮೂರು ವೃತ್ತಾಂತಗಳ ಮೇಲೆ, ಅಂದರೆ ದಾವೀದನು ಸೌಲನೊಂದಿಗೆ ವ್ಯವಹರಿಸಿದ್ದರ ಕುರಿತಾದ, ಅನನೀಯ ಮತ್ತು ಸಫೈರಳ ಕುರಿತಾದ ಮತ್ತು ಪೋಟೀಫರನ ಪತ್ನಿಯೊಂದಿಗೆ ಯೋಸೇಫನು ನಡೆದುಕೊಂಡ ರೀತಿಯ ಕುರಿತಾದ ವೃತ್ತಾಂತದ ಮೇಲೆ ಗಮನವನ್ನು ಕೇಂದ್ರೀಕರಿಸೋಣ. ಇವುಗಳಲ್ಲಿ ಪ್ರತಿಯೊಂದು ನಮಗೆ ಬೆಲೆಬಾಳುವ ಪಾಠಗಳನ್ನು ಕಲಿಸುತ್ತದೆ.
ದೇವರ ಏರ್ಪಾಡುಗಳಿಗೆ ನಿಷ್ಠೆ
4, 5. (ಎ) ಅರಸನಾದ ಸೌಲ ಮತ್ತು ದಾವೀದನ ಮಧ್ಯೆ ಯಾವ ಪರಿಸ್ಥಿತಿ ಅಸ್ತಿತ್ವದಲ್ಲಿತ್ತು? (ಬಿ) ಸೌಲನ ದ್ವೇಷೋದ್ರೇಕಕ್ಕೆ ದಾವೀದನು ಹೇಗೆ ಪ್ರತಿವರ್ತಿಸಿದನು?
4 ಅರಸನಾದ ಸೌಲನು ಯೆಹೋವನಿಗೆ ಅಪನಂಬಿಗಸ್ತನಾಗಿ, ದೇವರ ಜನರನ್ನು ಆಳಲು ಅನರ್ಹನಾದನು. ಆದಕಾರಣ, ದೇವರು ಅವನನ್ನು ತಳ್ಳಿಹಾಕಿ, ಪ್ರವಾದಿ ಸಮುವೇಲನು ದಾವೀದನನ್ನು ಇಸ್ರಾಯೇಲಿನ ಭಾವೀ ಅರಸನಾಗಿ ಅಭಿಷೇಕಿಸುವಂತೆ ನಿರ್ದೇಶಿಸಿದನು. ಆದರೆ, ದಾವೀದನು ರಣವೀರನಾಗಿ ತನ್ನ ಶೌರ್ಯವನ್ನು ತೋರಿಸಿ ಜನರಿಂದ ಮೆಚ್ಚಿಕೆಯನ್ನು ಪಡೆದಾಗ ಸೌಲನು ಅವನನ್ನು ತನ್ನ ಪ್ರತಿಸ್ಪರ್ಧಿಯಂತೆ ಕಾಣತೊಡಗಿದನು. ಸೌಲನು ಪದೇಪದೇ ಅವನನ್ನು ಕೊಲ್ಲಪ್ರಯತ್ನಿಸಿದನು. ಆದರೆ ಯೆಹೋವನು ದಾವೀದನೊಡನೆ ಇದ್ದ ಕಾರಣ ಪ್ರತಿ ಬಾರಿಯೂ ಅವನು ಬದುಕಿ ಉಳಿದನು.—1 ಸಮುವೇಲ 18:6-12, 25; 19:10, 11.
5 ಸೌಲನ ಸಂಚಿನಿಂದಾಗಿ ದಾವೀದನು ಅನೇಕ ವರ್ಷಕಾಲ ಪಲಾಯನಮಾಡುತ್ತಾ ಇರಬೇಕಿತ್ತು. ಈ ಮಧ್ಯೆ ದಾವೀದನಿಗೆ ಸೌಲನನ್ನು ಕೊಲ್ಲಲು ಅವಕಾಶಗಳು ದೊರೆತಾಗ, ದಾವೀದನ ಜೊತೆಯಲ್ಲಿದ್ದವರು ಯೆಹೋವನು ಅವನ ವೈರಿಯನ್ನು ಅವನ ಕೈಗೆ ಒಪ್ಪಿಸಿಕೊಟ್ಟಿದ್ದಾನೆಂದು ಹೇಳಿ ಸೌಲನನ್ನು ಕೊಲ್ಲಲು ಒತ್ತಾಯಮಾಡಿದರು. ಆದರೆ ದಾವೀದನು ಅದಕ್ಕೆ ಒಪ್ಪಲಿಲ್ಲ. ಯೆಹೋವನಿಗಾಗಿ ಅವನಲ್ಲಿದ್ದ ನಿಷ್ಠೆ ಮತ್ತು ದೇವಜನರ ಅಭಿಷಿಕ್ತ ಅರಸನಾಗಿ ಸೌಲನಿಗಿದ್ದ ಸ್ಥಾನಕ್ಕೆ ಗೌರವವು ಅವನು ಹಾಗೆ ನಡೆದುಕೊಳ್ಳುವಂತೆ ಪ್ರಚೋದಿಸಿತು. ಸೌಲನನ್ನು ಇಸ್ರಾಯೇಲಿನ ಅರಸನಾಗಿ ನೇಮಿಸಿದವನು ಯೆಹೋವನಲ್ಲವೇ? ಆದಕಾರಣ, ತಕ್ಕ ಸಮಯದಲ್ಲಿ ಯೆಹೋವನೇ ಅವನನ್ನು ತಳ್ಳಿಬಿಡುವನು. ಅದರ ಮಧ್ಯೆ ತಲೆಹಾಕುವುದು ತನ್ನ ಕೆಲಸವಲ್ಲ ಎಂದು ದಾವೀದನು ತರ್ಕಿಸಿದನು. ಆ ಸನ್ನಿವೇಶಗಳಲ್ಲಿ ಸೌಲನ ದ್ವೇಷೋದ್ರೇಕವನ್ನು ತಣಿಸಲು ಸಾಧ್ಯವಿದ್ದುದ್ದನ್ನೆಲ್ಲ ಮಾಡಿದ ಬಳಿಕ ದಾವೀದನು ಈ ತೀರ್ಮಾನಕ್ಕೆ ಬಂದನು: “ಅವನು ಯೆಹೋವನಿಂದ ಸಾಯುವನು; ಇಲ್ಲವೆ ಕಾಲತುಂಬಿ ಮೃತಿಹೊಂದುವನು; ಅಥವಾ ಯುದ್ಧದಲ್ಲಿ ಮಡಿಯುವನು. ತನ್ನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನ್ನನ್ನು ತಡೆಯಲಿ.”—1 ಸಮುವೇಲ 24:3-15; 26:7-20.
6. ದಾವೀದ ಮತ್ತು ಸೌಲನ ಕಥೆಯನ್ನು ಪರಿಗಣಿಸುವುದು ನಮಗೇಕೆ ಪ್ರಾಮುಖ್ಯವಾಗಿದೆ?
6 ಈ ವೃತ್ತಾಂತದಲ್ಲಿ ಮಹತ್ವವುಳ್ಳ ಪಾಠವೊಂದಿದೆ. ‘ಕ್ರೈಸ್ತ ಸಭೆಯಲ್ಲಿ ಏಕೆ ಇಂಥ ಸಮಸ್ಯೆಗಳು ಏಳುತ್ತವೆ’ ಎಂಬ ಪ್ರಶ್ನೆಯನ್ನು ನೀವೆಂದಾದರೂ ಕೇಳಿದುಂಟೋ? ಪ್ರಾಯಶಃ ಒಬ್ಬನು ವರ್ತಿಸುವ ರೀತಿಯು ಯೋಗ್ಯವಾಗಿರಲಿಕ್ಕಿಲ್ಲ. ಅವನ ನಡತೆ ಗಂಭೀರ ತಪ್ಪಾಗಿರದಿದ್ದರೂ, ಅದು ನಿಮ್ಮನ್ನು ಚಿಂತೆಗೊಳಪಡಿಸುತ್ತದೆ. ಆಗ ನೀವು ಹೇಗೆ ಪ್ರತಿವರ್ತಿಸಬೇಕು? ಆ ಕ್ರೈಸ್ತ ಸಹೋದರನ ಕಡೆಗೆ ನಿಮಗಿರುವ ಚಿಂತೆಯ ಕಾರಣ ಮತ್ತು ನೀವು ಯೆಹೋವನಿಗೆ ನಿಷ್ಠೆ ತೋರಿಸಲು ಬಯಸುವ ಕಾರಣ, ನೀವು ಆ ವ್ಯಕ್ತಿಯನ್ನು ಸಂಪಾದಿಸುವ ಉದ್ದೇಶದಿಂದ ದಯೆಯಿಂದ ಅವನೊಂದಿಗೆ ಮಾತಾಡಲು ಆಯ್ದುಕೊಳ್ಳಬಹುದು. ಆದರೆ ಸಮಸ್ಯೆ ಮುಂದುವರಿಯುವಲ್ಲಿ ಆಗೇನು? ನಿಮಗೆ ನ್ಯಾಯಸಮ್ಮತವಾಗಿ ಮಾಡಸಾಧ್ಯವಿರುವುದನ್ನೆಲ್ಲ ಮಾಡಿದ ಬಳಿಕ, ಅದನ್ನು ಯೆಹೋವನ ಕೈಯಲ್ಲಿ ಬಿಟ್ಟುಬಿಡುವಂತೆ ನೀವು ಬಯಸಬಹುದು. ದಾವೀದನು ಮಾಡಿದ್ದು ಇದನ್ನೇ.
7. ನಾವು ಅನ್ಯಾಯ ಅಥವಾ ಪೂರ್ವಾಗ್ರಹಕ್ಕೆ ಗುರಿಯಾಗುವಲ್ಲಿ, ದಾವೀದನ ಮಾದರಿಯನ್ನು ಅನುಕರಿಸುತ್ತಾ ಹೇಗೆ ಪ್ರತಿವರ್ತಿಸಬೇಕು?
7 ಒಂದುವೇಳೆ, ಸಾಮಾಜಿಕ ಅನ್ಯಾಯ ಇಲ್ಲವೆ ಧಾರ್ಮಿಕ ಪೂರ್ವಾಗ್ರಹದಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸುತ್ತಿರುವಲ್ಲಿ ಆಗೇನು? ಸದ್ಯಕ್ಕೆ ನೀವು ಅವನ್ನು ಸರಿಪಡಿಸಲು ಹೆಚ್ಚೇನನ್ನೂ ಇಲ್ಲವೆ ಏನನ್ನೂ ಮಾಡಲು ಸಾಧ್ಯವಿರಲಿಕ್ಕಿಲ್ಲ. ಇಂಥ ಸನ್ನಿವೇಶವನ್ನು ತಾಳಿಕೊಳ್ಳುವುದು ಅತಿ ಕಷ್ಟಕರವಾಗಿರಬಹುದು, ಆದರೆ ಅನ್ಯಾಯವಾಗಿ ಕಷ್ಟ ಅನುಭವಿಸಿದಾಗ ದಾವೀದನು ತೋರಿಸಿದ ಪ್ರತಿಕ್ರಿಯೆ ನಮಗೊಂದು ಪಾಠವನ್ನು ಕಲಿಸುತ್ತದೆ. ದಾವೀದನು ಬರೆದ ಕೀರ್ತನೆಗಳು, ಸೌಲನಿಂದ ತನ್ನನ್ನು ತಪ್ಪಿಸುವಂತೆ ಅವನು ದೇವರಿಗೆ ಮಾಡಿದ ಹೃತ್ಪೂರ್ವಕ ಪ್ರಾರ್ಥನೆಗಳಷ್ಟೇ ಅಲ್ಲ, ಅವು ಯೆಹೋವನ ಕಡೆಗೆ ಅವನಿಗಿದ್ದ ನಿಷ್ಠೆ ಮತ್ತು ಆತನ ನಾಮದ ಮಹಿಮೆಯ ಬಗ್ಗೆ ಅವನಿಗಿದ್ದ ಚಿಂತೆಯನ್ನು ತೋರಿಸುವ ಹೃದಯಸ್ಪರ್ಶಿ ದಾಖಲೆಗಳೂ ಆಗಿವೆ. (ಕೀರ್ತನೆ 18:1-6, 25-27, 30-32, 48-50; 57:1-11) ಸೌಲನು ವರ್ಷಗಟ್ಟಲೆ ಅನ್ಯಾಯವಾಗಿ ವರ್ತಿಸುತ್ತ ಹೋದರೂ ದಾವೀದನು ಯೆಹೋವನಿಗೆ ನಿಷ್ಠಾವಂತನಾಗಿಯೇ ಉಳಿದನು. ತದ್ರೀತಿಯಲ್ಲಿ, ನಾವು ಸಹ ಯಾವುದೇ ಅನ್ಯಾಯಗಳನ್ನು ಅನುಭವಿಸಿದರೂ ಮತ್ತು ಇತರರು ನಮಗೆ ಏನು ಮಾಡಿದರೂ ಯೆಹೋವನಿಗೆ ಹಾಗೂ ಆತನ ಸಂಘಟನೆಗೆ ನಿಷ್ಠರಾಗಿಯೇ ಉಳಿಯಬೇಕು. ಅದೇ ಸಮಯದಲ್ಲಿ ಯೆಹೋವನು ಈ ಸ್ಥಿತಿಯನ್ನು ಚೆನ್ನಾಗಿ ಬಲ್ಲನು ಎಂಬ ಆಶ್ವಾಸನೆ ನಮಗಿರಸಾಧ್ಯವಿದೆ.—ಕೀರ್ತನೆ 86:2.
8. ಯೆಹೋವನಿಗೆ ತೋರಿಸಬೇಕಾದ ತಮ್ಮ ನಿಷ್ಠೆಯು ಪರೀಕ್ಷೆಗೊಳಗಾದಾಗ ಮೊಸಾಂಬೀಕ್ನ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿಕ್ರಿಯೆ ತೋರಿಸಿದರು?
8 ಮೊಸಾಂಬೀಕ್ ದೇಶದ ಕ್ರೈಸ್ತರು, ಪರೀಕ್ಷೆಯ ಸಮಯದಲ್ಲಿ ಯೆಹೋವನಿಗೆ ನಿಷ್ಠರಾಗಿ ಉಳಿದವರ ಆಧುನಿಕ ದಿನದ ಮಾದರಿಯಾಗಿದ್ದಾರೆ. ಅವರ ಹಳ್ಳಿಗಳು 1984ರಲ್ಲಿ, ಪ್ರತಿರೋಧ ಚಳುವಳಿಯ ಸಶಸ್ತ್ರ ಪಡೆಗಳಿಂದ ಪದೇಪದೇ ದಾಳಿಗೊಳಗಾದವು. ಆ ಪಡೆಗಳು ದರೋಡೆ ಮಾಡಿ, ಮನೆಗಳನ್ನು ಸುಟ್ಟು, ಜನರನ್ನು ಕೊಲ್ಲುತ್ತಿದ್ದವು. ಈ ನಿಜ ಕ್ರೈಸ್ತರು ತಮ್ಮನ್ನು ಸಂರಕ್ಷಿಸಿಕೊಳ್ಳಲು ಏನೂ ಮಾಡಸಾಧ್ಯವಿರಲಿಲ್ಲ ಎಂಬಂತೆ ತೋರಿಬಂತು. ಆ ಪ್ರದೇಶದ ನಿವಾಸಿಗಳು ಸೈನ್ಯೀಕೃತ ಚಳುವಳಿಗೆ ಸೇರುವ ಇಲ್ಲವೆ ಬೇರೆ ವಿಧಗಳಲ್ಲಿ ಅದನ್ನು ಬೆಂಬಲಿಸುವ ನಿರ್ಬಂಧಕ್ಕೊಳಗಾದರು. ಆದರೆ ತಮ್ಮ ಕ್ರೈಸ್ತ ತಾಟಸ್ಥ್ಯಕ್ಕೆ ಇದು ಹೊಂದಿಕೆಯಾಗಿಲ್ಲ ಎಂದು ಯೆಹೋವನ ಸಾಕ್ಷಿಗಳು ತಿಳಿದಿದ್ದರು. ಅವರ ನಿರಾಕರಣೆ ಚಳುವಳಿಗಾರರನ್ನು ರೇಗಿಸಿತು. ಆ ಗಲಭೆಯ ಅವಧಿಯಲ್ಲಿ ಸುಮಾರು 30 ಮಂದಿ ಸಾಕ್ಷಿಗಳು ಕೊಲ್ಲಲ್ಪಟ್ಟರೂ, ಮರಣದ ಬೆದರಿಕೆಯು ಸಹ ದೇವಜನರ ನಿಷ್ಠೆಯನ್ನು ಮುರಿಯಲು ಸಾಧ್ಯವಾಗಲಿಲ್ಲ.a ದಾವೀದನಂತೆ ಅವರು ಅನ್ಯಾಯಗಳನ್ನು ಸಹಿಸಿಕೊಂಡು ಅಂತಿಮವಾಗಿ ಜಯಶಾಲಿಗಳಾದರು.
ಎಚ್ಚರಿಕೆಯ ಮರುಜ್ಞಾಪನ
9, 10. (ಎ) ಕೆಲವು ಶಾಸ್ತ್ರೀಯ ಮಾದರಿಗಳಿಂದ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು? (ಬಿ) ಅನನೀಯ ಮತ್ತು ಸಪ್ಫೈರಳ ಕೃತ್ಯಗಳಲ್ಲಿ ತಪ್ಪೇನಾಗಿತ್ತು?
9 ಶಾಸ್ತ್ರವಚನಗಳಲ್ಲಿ ತಿಳಿಸಲಾಗಿರುವ ಕೆಲವು ವ್ಯಕ್ತಿಗಳು, ನಾವು ಯಾವ ನಡತೆಯಿಂದ ದೂರವಿರಬೇಕೆಂಬ ವಿಷಯದಲ್ಲಿ ಎಚ್ಚರಿಕೆಯ ಮರುಜ್ಞಾಪನವನ್ನು ಒದಗಿಸುತ್ತಾರೆ. ಹೌದು, ತಪ್ಪುಮಾಡಿ ಪ್ರತಿಫಲವನ್ನು ಅನುಭವಿಸಿದ ಅನೇಕರ—ದೇವರ ಸೇವಕರದ್ದು ಸಹ—ವೃತ್ತಾಂತಗಳು ಬೈಬಲಿನಲ್ಲಿವೆ. (1 ಕೊರಿಂಥ 10:11) ಯೆರೂಸಲೇಮಿನಲ್ಲಿ ಒಂದನೆಯ ಶತಮಾನದ ಕ್ರೈಸ್ತ ಸಭೆಯ ಸದಸ್ಯರಾಗಿದ್ದ ಅನನೀಯ ಮತ್ತು ಸಪ್ಫೈರ ಎಂಬ ದಂಪತಿಗಳದ್ದು ಅಂತಹ ವೃತ್ತಾಂತಗಳಲ್ಲಿ ಒಂದಾಗಿದೆ.
10 ಸಾ.ಶ. 33ರ ಪಂಚಾಶತ್ತಮದ ಬಳಿಕ, ಅಪೊಸ್ತಲರ ಸಹವಾಸದಿಂದ ಪ್ರಯೋಜನ ಹೊಂದಬೇಕೆಂದು ಯೆರೂಸಲೇಮಿನಲ್ಲಿ ಉಳಿದುಕೊಂಡಿದ್ದ ಹೊಸ ವಿಶ್ವಾಸಿಗಳಿಗೆ ಭೌತಿಕ ಸಹಾಯವನ್ನು ಒದಗಿಸುವ ಅಗತ್ಯ ಎದ್ದುಬಂತು. ಸಹಾಯದ ಅಗತ್ಯವಿದ್ದ ಎಲ್ಲರನ್ನೂ ನೋಡಿಕೊಳ್ಳಲಿಕ್ಕಾಗಿ, ಸಭೆಯ ಕೆಲವು ಮಂದಿ ಸದಸ್ಯರು ತಮ್ಮ ಆಸ್ತಿಪಾಸ್ತಿಗಳನ್ನು ಮಾರಿದರು. (ಅ. ಕೃತ್ಯಗಳು 2:41-45) ಅನನೀಯ ಮತ್ತು ಸಪ್ಫೈರ ತಮ್ಮ ಹೊಲವನ್ನು ಮಾರಿ ಅದರಿಂದ ಬಂದ ಹಣದಿಂದ ಒಂದು ಭಾಗವನ್ನು ಮಾತ್ರ ಅಪೊಸ್ತಲರ ಬಳಿಗೆ ತಂದು, ತಮ್ಮ ಈ ಹಣ ತಾವು ಮಾರಿ ಪಡೆದುಕೊಂಡ ಪೂರ್ತಿ ಹಣವೆಂದು ಹೇಳಿಕೊಂಡರು. ಅನನೀಯ ಮತ್ತು ಸಪ್ಫೈರಳಿಗೆ ತಾವು ಬಯಸಿದಷ್ಟು ಹೆಚ್ಚು ಅಥವಾ ಕಡಿಮೆ ಹಣವನ್ನು ಕೊಡುವ ಹಕ್ಕಿತ್ತೆಂಬುದು ನಿಜ, ಆದರೆ ಅವರ ಉದ್ದೇಶವು ತಪ್ಪಾಗಿತ್ತು ಮತ್ತು ಅವರ ವರ್ತನೆಗಳು ಅಪ್ರಾಮಾಣಿಕವಾಗಿದ್ದವು. ಅವರು ಅಲ್ಲಿದ್ದವರ ಮೇಲೆ ತಮ್ಮ ವಿಷಯದಲ್ಲಿ ಒಳ್ಳೇ ಅಭಿಪ್ರಾಯವನ್ನು ಮೂಡಿಸಲು, ತಮ್ಮ ಸಾಮರ್ಥ್ಯಕ್ಕಿಂತಲೂ ಹೆಚ್ಚನ್ನು ಮಾಡುತ್ತಿದ್ದಾರೆಂಬಂತೆ ತೋರಿಸಿಕೊಳ್ಳಲು ಬಯಸಿದರು. ಆಗ ಪವಿತ್ರಾತ್ಮಪ್ರೇರಿತನಾದ ಅಪೊಸ್ತಲ ಪೇತ್ರನು ಅವರ ಅಪ್ರಾಮಾಣಿಕತೆ ಮತ್ತು ಕಾಪಟ್ಯದ ಸೋಗನ್ನು ಬಯಲುಮಾಡಿದನು ಮತ್ತು ಯೆಹೋವನು ಅವರನ್ನು ಸಾಯಿಸಿದನು.—ಅ. ಕೃತ್ಯಗಳು 5:1-10.
11, 12. (ಎ) ಪ್ರಾಮಾಣಿಕತೆಯ ಬಗ್ಗೆ ಕೆಲವು ಮರುಜ್ಞಾಪನಗಳಾವುವು? (ಬಿ) ಪ್ರಾಮಾಣಿಕರಾಗಿರುವುದರಿಂದ ಯಾವ ಪ್ರಯೋಜನಗಳು ದೊರೆಯುತ್ತವೆ?
11 ನಮ್ಮನ್ನು ಜನ ಒಳ್ಳೆಯವರೆಂದು ಭಾವಿಸಬೇಕೆಂದು ಯತ್ನಿಸುತ್ತಾ ನಾವು ಸತ್ಯವನ್ನು ವಕ್ರಮಾಡುವಂತೆ ಪ್ರೇರೇಪಿಸಲ್ಪಡುವಲ್ಲಿ, ಅನನೀಯ ಮತ್ತು ಸಪ್ಫೈರಳ ಕಥೆ ನಮಗೆ ಬಲವಾದ ಎಚ್ಚರಿಕೆಯನ್ನು ನೀಡಲಿ. ನಾವು ಜೊತೆಮಾನವರನ್ನು ವಂಚಿಸಲು ಶಕ್ತರಾಗಬಹುದು, ಆದರೆ ಯೆಹೋವನನ್ನು ವಂಚಿಸಲು ಸಾಧ್ಯವೇ ಇಲ್ಲ. (ಇಬ್ರಿಯ 4:13) ಶಾಸ್ತ್ರವಚನಗಳು ಅನೇಕ ಬಾರಿ ನಾವು ಪರಸ್ಪರ ಪ್ರಾಮಾಣಿಕರಾಗಿರುವಂತೆ ಬುದ್ಧಿ ಹೇಳುತ್ತವೆ, ಏಕೆಂದರೆ ಅನೀತಿಯೇ ಇರದ ಹೊಸ ಲೋಕದಲ್ಲಿ ಸುಳ್ಳುಗಾರರಿಗೆ ಸ್ಥಳವೇ ಇರದು. (ಜ್ಞಾನೋಕ್ತಿ 14:2; ಪ್ರಕಟನೆ 21:8; 22:15) ಇದಕ್ಕೆ ಕಾರಣ ಸ್ಪಷ್ಟ. ಏನೆಂದರೆ, ಸಕಲ ಅಸತ್ಯದ ಪ್ರವರ್ಧಕನು ಪಿಶಾಚನಾದ ಸೈತಾನನೇ.—ಯೋಹಾನ 8:44.
12 ನಾವು ಪ್ರಾಮಾಣಿಕತೆಯನ್ನು ನಮ್ಮ ಜೀವನ ರೀತಿಯಾಗಿಸುವಲ್ಲಿ ದೊರೆಯುವಂತಹ ಪ್ರಯೋಜನಗಳೊ ಅನೇಕಾನೇಕ. ಅವುಗಳಲ್ಲಿ, ಶುದ್ಧ ಮನಸ್ಸಾಕ್ಷಿ ಮತ್ತು ಇತರರ ಭರವಸೆಗೆ ಅರ್ಹರಾಗಿದ್ದೇವೆಂಬ ಸಂತೃಪ್ತಿ ನಮಗಿರುವುದು ಸೇರಿದೆ. ಅನೇಕ ಸಂದರ್ಭಗಳಲ್ಲಿ, ಕ್ರೈಸ್ತರು ಪ್ರಾಮಾಣಿಕರಾಗಿದ್ದ ಕಾರಣ ಒಂದೊ ಅವರಿಗೆ ಉದ್ಯೋಗ ದೊರೆತಿದೆ ಇಲ್ಲವೆ ಅವರಿದ್ದ ಕೆಲಸ ಕಾಯಂ ಆಗಿರುತ್ತದೆ. ಆದರೆ ನಾವು ಪ್ರಾಮಾಣಿಕರಾಗಿರುವುದರಿಂದ ಸಿಗುವ ಅತಿ ಪ್ರಧಾನ ಪ್ರಯೋಜನವು, ಸರ್ವಶಕ್ತನಾದ ದೇವರ ಮಿತ್ರತ್ವವನ್ನು ಪಡೆಯುವುದೇ ಆಗಿದೆ.—ಕೀರ್ತನೆ 15:1, 2.
ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದು
13. ಯೋಸೇಫನು ಯಾವ ಸನ್ನಿವೇಶದಲ್ಲಿ ಸಿಕ್ಕಿಬಿದ್ದನು, ಮತ್ತು ಅವನ ಪ್ರತಿಕ್ರಿಯೆ ಏನಾಗಿತ್ತು?
13 ಪೂರ್ವಜನಾದ ಯಾಕೋಬನ ಪುತ್ರ ಯೋಸೇಫನನ್ನು 17ರ ವಯಸ್ಸಿನಲ್ಲಿ ದಾಸತ್ವಕ್ಕೆ ಮಾರಲಾಯಿತು. ಅವನು ಕೊನೆಗೆ ಐಗುಪ್ತದ ಆಸ್ಥಾನಾಧಿಕಾರಿ ಪೋಟೀಫರನ ಮನೆಯಲ್ಲಿ ಕೆಲಸಕ್ಕಿರುವಂತಾಯಿತು. ಅಲ್ಲಿ ಅವನು ತನ್ನ ಯಜಮಾನನ ಹೆಂಡತಿಯ ಕಾಮುಕದೃಷ್ಟಿಗೆ ಬಲಿಯಾದನು. ಆಕೆ ಈ ಅತಿಸುಂದರ ಯುವಕನೊಂದಿಗೆ ಲೈಂಗಿಕ ಸಂಬಂಧವನ್ನು ಬಯಸುತ್ತ, “ನನ್ನ ಸಂಗಮಕ್ಕೆ ಬಾ” ಎಂದು ದಿನನಿತ್ಯವೂ ಉತ್ತೇಜಿಸುತ್ತಿದ್ದಳು. ಯೋಸೇಫನು ತನ್ನ ಕುಟುಂಬದಿಂದ ದೂರ, ಯಾರಿಗೂ ತನ್ನ ಪರಿಚಯವಿರದ್ದಿದ ದೇಶದಲ್ಲಿ ಇದ್ದನು. ಆದುದರಿಂದ ಬೇರೆ ಜನರ ಗಮನಕ್ಕೆ ಬಾರದ ರೀತಿಯಲ್ಲಿ ಅವನು ಸುಲಭವಾಗಿ ಈ ಸ್ತ್ರೀಯೊಂದಿಗೆ ಸಂಬಂಧವನ್ನಿಟ್ಟುಕೊಳ್ಳಬಹುದಿತ್ತು. ಆದರೂ, ಪೋಟೀಫರನ ಪತ್ನಿ ಅವನನ್ನು ಬಲವಂತದಿಂದ ಹಿಡಿದಾಗ ಯೋಸೇಫನು ಓಡಿಹೋದನು.—ಆದಿಕಾಂಡ 37:2, 18-28; 39:1-12.
14, 15. (ಎ) ಯೋಸೇಫನ ಕಥೆಯನ್ನು ಪರಿಗಣಿಸುವುದು ನಮಗೇಕೆ ಪ್ರಾಮುಖ್ಯವಾಗಿದೆ? (ಬಿ) ದೇವರ ಮರುಜ್ಞಾಪನಗಳಿಗೆ ಕಿವಿಗೊಟ್ಟದ್ದಕ್ಕಾಗಿ ಕ್ರೈಸ್ತ ಸ್ತ್ರೀಯೊಬ್ಬಳು ಏಕೆ ಆಭಾರಿಯಾಗಿದ್ದಾಳೆ?
14 ಯೋಸೇಫನು ದೇವಭಯವಿದ್ದ ಕುಟುಂಬವೊಂದರಲ್ಲಿ ಬೆಳೆಸಲ್ಪಟ್ಟಿದ್ದನು ಮತ್ತು ಗಂಡಹೆಂಡತಿಯಾಗಿರದವರ ಮಧ್ಯೆ ಲೈಂಗಿಕ ಸಂಬಂಧ ತಪ್ಪೆಂಬುದು ಅವನಿಗೆ ತಿಳಿದಿತ್ತು. “ನಾನು ಇಂಥಾ ಮಹಾದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಅವನು ಕೇಳಿದನು. ಏದೆನ್ನಲ್ಲಿ ಏಕಪತ್ನೀತ್ವದ ಬಗ್ಗೆ ದೇವರು ಮಾನವರಿಗಾಗಿ ಯಾವ ಮಟ್ಟವನ್ನಿಟ್ಟನೋ ಅದರ ಜ್ಞಾನದಿಂದ ಅವನು ಈ ತೀರ್ಮಾನಕ್ಕೆ ಬಂದನೆಂಬುದು ಸಂಭವನೀಯ. (ಆದಿಕಾಂಡ 2:24) ಯೋಸೇಫನು ಆ ಸಂದರ್ಭದಲ್ಲಿ ಪ್ರತಿವರ್ತಿಸಿದ ರೀತಿಯ ಕುರಿತು ಆಲೋಚಿಸುವ ಮೂಲಕ ದೇವಜನರು ಇಂದು ಪ್ರಯೋಜನ ಪಡೆಯಬಲ್ಲರು. ಕೆಲವು ಕಡೆಗಳಲ್ಲಿ, ಲೈಂಗಿಕ ಸಂಬಂಧದ ವಿಷಯದಲ್ಲಿರುವ ಮನೋಭಾವಗಳು ಎಷ್ಟು ಸಹಿಸಲ್ಪಡುತ್ತದೆಂದರೆ, ಅನೈತಿಕತೆಯಲ್ಲಿ ಭಾಗವಹಿಸಲು ನಿರಾಕರಿಸುವ ಯುವಜನರನ್ನು ಅವರ ಸಮಾನಸ್ಥರು ತುಚ್ಛವಾಗಿ ಕಾಣುತ್ತಾರೆ. ವಿವಾಹೇತರ ಸಂಬಂಧಗಳು ವಯಸ್ಕರಲ್ಲಿ ಸಾಮಾನ್ಯವಾಗಿದೆ. ಆದಕಾರಣ, ಯೋಸೇಫನ ಕಥೆ ನಮಗೊಂದು ಸಮಯೋಚಿತ ಮರುಜ್ಞಾಪನವಾಗಿದೆ. ಇಂದಿಗೂ ದೇವರ ಮಟ್ಟಕ್ಕನುಸಾರ ಹಾದರ ಮತ್ತು ವ್ಯಭಿಚಾರಗಳು ಪಾಪಗಳಾಗಿವೆ. (ಇಬ್ರಿಯ 13:4) ನಿಷಿದ್ಧ ಕಾಮದಲ್ಲಿ ಭಾಗವಹಿಸುವ ಒತ್ತಡಕ್ಕೆ ಬಲಿಬಿದ್ದವರಲ್ಲಿ ಅನೇಕರು, ಹಾಗೆ ಮಾಡದಿರುವುದಕ್ಕೆ ಸಕಾರಣವಿದೆಯೆಂದು ಒಪ್ಪಿಕೊಳ್ಳುತ್ತಾರೆ. ಇದರಿಂದ ಬರುವ ಅನಪೇಕ್ಷಿತ ಪರಿಣಾಮಗಳಲ್ಲಿ ಕೀಳರಿಮೆ, ದೋಷಿ ಮನಸ್ಸಾಕ್ಷಿ, ಅಸೂಯೆ, ಗರ್ಭಧಾರಣೆ ಮತ್ತು ರತಿರವಾನಿತ ರೋಗಗಳು ಸೇರಿವೆ. ಶಾಸ್ತ್ರವು ನಮಗೆ ನೆನಪು ಹುಟ್ಟಿಸುವಂತೆ ಹಾದರಮಾಡುವವನು “ತನ್ನ ದೇಹಕ್ಕೆ ಹಾನಿಕರವಾದ ಪಾಪವನ್ನು ಮಾಡುತ್ತಾನೆ.”—1 ಕೊರಿಂಥ 5:9-12; 6:18; ಜ್ಞಾನೋಕ್ತಿ 6:23-29, 32.
15 ಜೆನಿb ಎಂಬ ಅವಿವಾಹಿತ ಯೆಹೋವನ ಸಾಕ್ಷಿಗೆ ದೇವರ ಮರುಜ್ಞಾಪನಗಳನ್ನು ಕೃತಜ್ಞತೆಯಿಂದ ಕಾಣಲು ಸಕಾರಣವಿದೆ. ಕೆಲಸದ ಸ್ಥಳದಲ್ಲಿ ಅತಿಸುಂದರನಾದ ಸಹೋದ್ಯೋಗಿಯೊಬ್ಬನು ಅವಳೊಂದಿಗೆ ಪ್ರಣಯಾತ್ಮಕ ರೀತಿಯಲ್ಲಿ ವರ್ತಿಸಿದನು. ಜೆನಿ ಅದಕ್ಕೆ ಪ್ರತಿಕ್ರಿಯಿಸದಿದ್ದಾಗ ಅವನು ತನ್ನ ಪ್ರಯತ್ನವನ್ನು ತೀವ್ರಗೊಳಿಸಿದನು. ಅವಳು ಒಪ್ಪಿಕೊಳ್ಳುವುದು: “ನಾನು ನೈತಿಕವಾಗಿ ಶುದ್ಧಳಾಗಿರಲು ಹೋರಾಡಬೇಕಾಯಿತು. ಏಕೆಂದರೆ ವಿರುದ್ಧ ಲಿಂಗದವರು ನಿಮಗೆ ಗಮನಕೊಡುತ್ತಿದ್ದಾರೆ ಎಂದು ಗೊತ್ತಾಗುವಾಗ ನಿಮಗೆ ಒಂದು ರೀತಿಯ ಖುಷಿಯಾಗುತ್ತದೆ.” ಆದರೂ, ಅವನು ಲೈಂಗಿಕ ಸಂಬಂಧವನ್ನಿಟ್ಟುಕೊಂಡಿದ್ದ ಇತರ ಸ್ತ್ರೀಯರ ಪಟ್ಟಿಗೆ ಕೇವಲ ತನ್ನನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆಂದು ಅವಳು ಗ್ರಹಿಸಿಕೊಂಡಳು. ಅದನ್ನು ಪ್ರತಿರೋಧಿಸಲು ಮಾಡಿದ ದೃಢನಿರ್ಧಾರ ಕ್ಷೀಣಿಸುತ್ತಿದೆ ಎಂದು ಅವಳಿಗನಿಸಿದಾಗ ಅವಳು ಯೆಹೋವನಿಗೆ ನಂಬಿಗಸ್ತಳಾಗಿ ಉಳಿಯಲು ಸಹಾಯಮಾಡುವಂತೆ ಆತನಿಗೆ ಮೊರೆಯಿಟ್ಟಳು. ಜೆನಿ ಬೈಬಲ್ ಮತ್ತು ಕ್ರೈಸ್ತ ಪ್ರಕಾಶನಗಳಲ್ಲಿ ಸಂಶೋಧನೆ ಮಾಡುತ್ತಾ ಕಲಿತುಕೊಂಡ ವಿಷಯಗಳು, ಅವಳು ಜಾಗ್ರತೆಯಿಂದಿರುವುದಕ್ಕಾಗಿ ಕೊಡಲ್ಪಟ್ಟ ಮರುಜ್ಞಾಪನಗಳಂತಿದ್ದವು ಎಂದು ಕಂಡುಕೊಂಡಳು. ಆ ಮರುಜ್ಞಾಪನಗಳಲ್ಲಿ ಒಂದು ಯೋಸೇಫ ಮತ್ತು ಪೋಟೀಫರನ ಪತ್ನಿಯದ್ದಾಗಿತ್ತು. ಅವಳು ನಿರ್ಣಾಯಕವಾಗಿ ಹೇಳುವುದು: “ಯೆಹೋವನನ್ನು ನಾನೆಷ್ಟು ಪ್ರೀತಿಸುತ್ತೇನೆಂದು ಎಲ್ಲಿಯವರೆಗೆ ನಾನು ಜ್ಞಾಪಿಸಿಕೊಳ್ಳುತ್ತೇನೋ ಅಲ್ಲಿಯವರೆಗೆ, ಈ ಮಹಾ ದುಷ್ಕೃತ್ಯವನ್ನು ನಡೆಸಿ ಆತನಿಗೆ ವಿರುದ್ಧವಾಗಿ ಪಾಪಮಾಡುವೆನೆಂದು ಭಯಪಡುವ ಅಗತ್ಯವಿಲ್ಲ.”
ದೇವರ ಮರುಜ್ಞಾಪನಗಳಿಗೆ ಓಗೊಡಿ!
16. ಬೈಬಲಿನಲ್ಲಿ ಹೇಳಲ್ಪಟ್ಟಿರುವ ವ್ಯಕ್ತಿಗಳ ಜೀವನಗಳನ್ನು ಪುನರ್ವಿಮರ್ಶಿಸಿ, ಧ್ಯಾನಿಸುವುದರಿಂದ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು?
16 ಯೆಹೋವನು ಕೆಲವು ವೃತ್ತಾಂತಗಳನ್ನು ಶಾಸ್ತ್ರದಲ್ಲಿ ನಮಗಾಗಿ ಏಕೆ ಉಳಿಸಿಟ್ಟಿದ್ದಾನೆಂದು ತಿಳಿಯಪ್ರಯತ್ನಿಸುವ ಮೂಲಕ ನಾವೆಲ್ಲರೂ ಆತನ ಮಟ್ಟಗಳಿಗಾಗಿ ನಮ್ಮ ಕೃತಜ್ಞತೆಯನ್ನು ಹೆಚ್ಚಿಸಬಲ್ಲೆವು. ಅವು ನಮಗೇನು ಕಲಿಸುತ್ತವೆ? ಬೈಬಲಿನಲ್ಲಿ ತಿಳಿಸಲಾಗಿರುವ ವ್ಯಕ್ತಿಗಳು ತೋರಿಸಿದ ಯಾವ ಗುಣಗಳನ್ನು ಅಥವಾ ಪ್ರವೃತ್ತಿಗಳನ್ನು ನಾವು ಒಂದೊ ಅನುಕರಿಸಬೇಕು ಇಲ್ಲವೆ ತ್ಯಜಿಸಬೇಕು? ದೇವರ ವಾಕ್ಯದ ಪುಟಗಳಲ್ಲಿ ನೂರಾರು ವ್ಯಕ್ತಿಗಳು ತೋರಿಬರುತ್ತಾರೆ. ದೈವಿಕ ಶಿಕ್ಷಣವನ್ನು ಪ್ರೀತಿಸುವ ಸರ್ವರು, ಯೆಹೋವನು ಜಾಗ್ರತೆಯಿಂದ ಉಳಿಸಿಟ್ಟಿರುವ ಮಾದರಿಗಳಿಂದ ಕಲಿಯಬಲ್ಲ ಪಾಠಗಳ ಸಮೇತ, ಜೀವದಾಯಕ ವಿವೇಕಕ್ಕಾಗಿ ಹಸಿವೆಯನ್ನು ಬೆಳೆಸಿಕೊಳ್ಳುವುದರಿಂದ ಪ್ರಯೋಜನ ಹೊಂದಬಲ್ಲರು. ಈ ಪತ್ರಿಕೆಯು ಅನೇಕಾವರ್ತಿ ಯಾರ ಕಥೆಗಳಲ್ಲಿ ನಾವು ಕಲಿಯಬಲ್ಲ ವಿಷಯಗಳಿವೆಯೊ ಅಂಥವರ ಕುರಿತು ಲೇಖನಗಳನ್ನು ಮುದ್ರಿಸಿವೆ. ಅವುಗಳನ್ನು ಪುನರ್ವಿಮರ್ಶಿಸಲು ನೀವೇಕೆ ಸಮಯವನ್ನು ತೆಗೆದುಕೊಳ್ಳಬಾರದು?
17. ಯೆಹೋವನ ಮರುಜ್ಞಾಪನಗಳ ಬಗ್ಗೆ ನಿಮಗೇನನಿಸುತ್ತದೆ ಮತ್ತು ಏಕೆ?
17 ಯೆಹೋವನು ತನ್ನ ಚಿತ್ತವನ್ನು ಮಾಡಪ್ರಯತ್ನಿಸುವವರಿಗೆ ಪ್ರೀತಿಭರಿತ ಕಾಳಜಿಯನ್ನು ತೋರಿಸುವುದಕ್ಕಾಗಿ ನಾವೆಷ್ಟು ಆಭಾರಿಗಳಾಗಿರಬಲ್ಲೆವು! ಬೈಬಲಿನಲ್ಲಿ ಹೇಳಲ್ಪಟ್ಟ ಸ್ತ್ರೀಪುರುಷರು ಹೇಗೆ ಪರಿಪೂರ್ಣರಾಗಿರಲಿಲ್ಲವೊ ಹಾಗೆಯೇ ನಾವೂ ಪರಿಪೂರ್ಣರಲ್ಲ. ಆದರೂ, ಅವರ ಕ್ರಿಯೆಗಳ ಲಿಖಿತ ದಾಖಲೆ ನಮಗೆ ಅತಿ ಬೆಲೆಬಾಳುವ ಸಂಪತ್ತಾಗಿದೆ. ಯೆಹೋವನ ಮರುಜ್ಞಾಪನಗಳಿಗೆ ಓಗೊಡುತ್ತಿರುವ ಮೂಲಕ ನಾವು ಗಂಭೀರ ತಪ್ಪುಗಳನ್ನು ಮಾಡುವುದರಿಂದ ದೂರವಿರಬಲ್ಲೆವು ಮತ್ತು ನೀತಿಮಾರ್ಗದಲ್ಲಿ ನಡೆದವರ ಉತ್ತಮ ಮಾದರಿಗಳನ್ನು ಅನುಕರಿಸಬಲ್ಲೆವು. ಹಾಗೆ ಮಾಡುವಲ್ಲಿ, ನಾವು ಕೀರ್ತನೆಗಾರನಂತೆ ಹೀಗೆ ಹಾಡಬಲ್ಲೆವು: ‘ಯೆಹೋವನ ಮರುಜ್ಞಾಪನಗಳನ್ನು ಕೈಕೊಂಡು ಸಂಪೂರ್ಣಮನಸ್ಸಿನಿಂದ ಆತನನ್ನು ಹುಡುಕುವವರು ಸಂತೋಷಿತರು. ನಿನ್ನ ಮರುಜ್ಞಾಪನಗಳನ್ನು ಮನಃಪೂರ್ವಕವಾಗಿ ಅನುಸರಿಸಿದ್ದೇನೆ; ಅವು ನನಗೆ ಬಹುಪ್ರಿಯವಾಗಿವೆ.’—ಕೀರ್ತನೆ 119:2, 167, NW. (w06 6/15)
[ಪಾದಟಿಪ್ಪಣಿಗಳು]
a ಇಸವಿ 1996ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್)ದ 160-2ನೇ ಪುಟಗಳನ್ನು ನೋಡಿ.
b ಹೆಸರನ್ನು ಬದಲಾಯಿಸಲಾಗಿದೆ.
ನಿಮ್ಮ ಉತ್ತರವೇನು?
• ಸೌಲನ ಕಡೆಗೆ ದಾವೀದನು ತೋರಿಸಿದ ಮನೋಭಾವದಿಂದ ನಾವೇನು ಕಲಿಯಬಲ್ಲೆವು?
• ಅನನೀಯ ಮತ್ತು ಸಪ್ಫೈರಳ ವೃತ್ತಾಂತ ನಮಗೇನನ್ನು ಕಲಿಸುತ್ತದೆ?
• ಯೋಸೇಫನ ಜೀವನಚರಿತ್ರೆ ಇಂದು ವಿಶೇಷ ಆಸಕ್ತಿಯದ್ದಾಗಿದೆ ಏಕೆ?
[ಪುಟ 18ರಲ್ಲಿರುವ ಚಿತ್ರ]
ಸೌಲನು ಕೊಲ್ಲಲ್ಪಡುವಂತೆ ದಾವೀದನು ಬಿಡದೆ ಇದ್ದದ್ದೇಕೆ?
[ಪುಟ 19ರಲ್ಲಿರುವ ಚಿತ್ರ]
ಅನನೀಯ ಮತ್ತು ಸಪ್ಫೈರಳ ವೃತ್ತಾಂತದಿಂದ ನಾವೇನು ಕಲಿಯುತ್ತೇವೆ?
[ಪುಟ 20ರಲ್ಲಿರುವ ಚಿತ್ರ]
ಯೋಸೇಫನು ಅನೈತಿಕ ಪ್ರಲೋಭನೆಗಳನ್ನು ತ್ಯಜಿಸುವಂತೆ ಮಾಡಿದ್ದು ಯಾವುದು?