ಆ್ಯಗೊರ ಪುರಾತನ ಅಥೇನೆ ಪಟ್ಟಣದ ಕೇಂದ್ರ
ಅಥೇನೆ ಪಟ್ಟಣದ ಬುದ್ಧಿವಂತ ಸಮುದಾಯದಲ್ಲಿ ಕೋಲಾಹಲವೆದ್ದಿತ್ತು! ಆ ಗ್ರೀಕ್ ಪಟ್ಟಣದ ಆ್ಯಗೊರದಲ್ಲಿ, ಅಥವಾ ಮಾರುಕಟ್ಟೆಯಲ್ಲಿ ಹೊಸ ಕಲ್ಪನೆಗಳು ಯಾವಾಗಲೂ ಪ್ರಕಟಿಸಲ್ಪಡುತ್ತಿದ್ದವು. ಆದರೆ, ಈ ಸಲ ಅದು ತೀರ ಭಿನ್ನವಾಗಿತ್ತು. ಒಬ್ಬಾನೊಬ್ಬ ಯೆಹೂದ್ಯನು ಆಗತಾನೇ ಪಟ್ಟಣಕ್ಕೆ ಆಗಮಿಸಿದ್ದು, “ಅನ್ಯದೇಶದ ದೈವಗಳನ್ನು ಪ್ರಸಿದ್ಧಿಪಡಿಸುವವನಾಗಿ” ತೋರುತ್ತಿದ್ದನು. ಅಲ್ಲಿ “ಕಂಡುಬಂದವರ ಸಂಗಡ” ಅವನು ಗಮನಾರ್ಹವಾದ ಹೇಳಿಕೆಗಳನ್ನು ನುಡಿಯುತ್ತಿದ್ದನು. “ಈ ಮಾತಾಳಿ ಏನು ಹೇಳಬೇಕೆಂದಿದ್ದಾನೆ?” ಎಂದು, ಗರ್ವಿಗಳಾದ ಎಪಿಕೂರಿಯರು ಹಾಗೂ ಗಂಭೀರ ಮುಖದ ಸ್ತೋಯಿಕರು ಕೇಳಿದರು. ಹೌದು, ಯಾವುದೇ ವಿಷಯದ ಬಗ್ಗೆ ಬಹಿರಂಗವಾದ ಚರ್ಚೆಗಳನ್ನು ನಡೆಸಲು ಅಥೇನೆ ಪಟ್ಟಣದ ಆ್ಯಗೊರವು ಸೂಕ್ತವಾದ ಸ್ಥಳವಾಗಿತ್ತು. ಆದರೆ ಅಪರಿಚಿತ ದೇವರುಗಳನ್ನು ಪರಿಚಯಿಸುವುದು—ಅಯ್ಯೋ ಅದು ವೈಪರೀತ್ಯವೇ ಸರಿ!—ಅ. ಕೃತ್ಯಗಳು 17:17, 18.
ಅಥೇನೆಯ ಆ್ಯಗೊರದಲ್ಲಿ ಪ್ರಪ್ರಥಮ ಬಾರಿಗೆ ಅಪೊಸ್ತಲ ಪೌಲನು ಸಾರಲು ಆರಂಭಿಸಿದಾಗ, ಅಥೇನೆ ಪಟ್ಟಣದವರ ಸಂದೇಹಾಸ್ಪದ ಪ್ರತಿಕ್ರಿಯೆಯು ಅದಾಗಿತ್ತು. ಅವನು ಯೇಸು ಕ್ರಿಸ್ತನ ಕುರಿತು ಮತ್ತು ಪುನರುತ್ಥಾನದ ಕುರಿತು ಮಾತಾಡುತ್ತಿದ್ದನು. ಆದರೂ, ವಿಶಾಲ ಮನೋಭಾವದ ಸಂಸ್ಕೃತಿ ಇರುವವರಂತೆ ತೋರಿದ ಅಥೇನೆ ಪಟ್ಟಣದ ಜನರಿಗೆ, ಆ್ಯಗೊರದಲ್ಲಿ ಅಂತಹ ಹೊಸ ಕಲ್ಪನೆಗಳನ್ನು ಪರಿಚಯಿಸುವುದರಲ್ಲಿ ಅಷ್ಟು ಅಸಾಮಾನ್ಯವಾದ ವಿಚಾರವು ಯಾವುದಾಗಿತ್ತು?
ಅಥೇನೆ ಪಟ್ಟಣದಲ್ಲಿ ಸಾರ್ವಜನಿಕ ಚೌಕವು ನಿರ್ಮಾಣವಾಗುತ್ತದೆ
ಸ್ವತಃ ಆ್ಯಗೊರವು ಮತ್ತು ಅಥೇನೆ ಪಟ್ಟಣದ ಜನರ ಧಾರ್ಮಿಕ ಹಾಗೂ ಸಾರ್ವಜನಿಕ ಜೀವಿತಗಳಲ್ಲಿ ಅದು ವಹಿಸಿದ ಪ್ರಮುಖ ಪಾತ್ರವು ತಾನೇ ವಾಸ್ತವದಲ್ಲಿ ಅಪೂರ್ವವಾದ ಸಂಗತಿಯಾಗಿತ್ತು. ಅಥೇನೆಯ ಆ್ಯಗೊರವು, ಆ್ಯಕ್ರೊಪೊಲಿಸ್ನ ವಾಯವ್ಯ ಭಾಗದಲ್ಲಿ ಸುಮಾರು 25 ಎಕ್ರೆಗಳಷ್ಟಿರುವ, ನಿಧಾನವಾಗಿ ಇಳಿಜಾರಾಗಿರುವ ಪ್ರದೇಶವಾಗಿದೆ. ಸಾ.ಶ.ಪೂ. ಆರನೆಯ ಶತಮಾನದ ಆರಂಭದಲ್ಲಿ, ಅಥೇನೆ ಪಟ್ಟಣದ ರಾಜನೀತಿಜ್ಞ ಹಾಗೂ ನಿಯಮರಚಕನಾಗಿದ್ದ ಸೋಲನ್ನ ಜೀವಮಾನಕಾಲದಲ್ಲಿ, ಈ ಚಿಕ್ಕ ಜಮೀನು ಆ ಪಟ್ಟಣದ ಸಾರ್ವಜನಿಕ ಚೌಕದ ನಿವೇಶನವಾಗಿ ನೇಮಿಸಲ್ಪಟ್ಟಿತ್ತಂತೆ. ಅಥೇನೆಯಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಯೊಂದಿಗೆ, ಪೌರ ಜೀವಿತದ ಮೇಲೆ ಅಧಿಕಾಧಿಕ ಒತ್ತು ನೀಡಲ್ಪಟ್ಟ ಕಾರಣ, ಮುಂದಿನ ಶತಮಾನದ ಆರಂಭದ ವರ್ಷಗಳಲ್ಲಿ ನಿರ್ಮಾಣ ಕಾರ್ಯವು ತ್ವರಿತಗತಿಯಲ್ಲಿ ನಡೆಯುವಂತೆ ಮಾಡಿತು. ಇದು ಆ್ಯಗೊರಕ್ಕೆ ಹೊಸ ಚೇತನವನ್ನು ಹಾಗೂ ನಿರ್ವಹಿಸಲು ಹೆಚ್ಚು ಅರ್ಥಗರ್ಭಿತವಾದ ಒಂದು ಪಾತ್ರವನ್ನು ಕೊಟ್ಟಿತು.
ಆ್ಯಗೊರ ಎಂಬ ಗ್ರೀಕ್ ಶಬ್ದವು, “ಒಟ್ಟುಗೂಡು, ಸಭೆಸೇರು” ಎಂಬರ್ಥವನ್ನು ಕೊಡುವ ಒಂದು ಕ್ರಿಯಾಪದದಲ್ಲಿ ತನ್ನ ಮೂಲವನ್ನು ಹೊಂದಿದೆ. ಇದು ಆ ಪಟ್ಟಣದ ಮೂಲ ಕೂಟದ ಸ್ಥಳದೋಪಾದಿ ಉಪಯೋಗಿಸಲ್ಪಡುವ ಆ್ಯಗೊರದ ಉಪಯೋಗಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಆ್ಯಗೊರವು, ಸಾಮಾಜಿಕ ಹಾಗೂ ಸಾರ್ವಜನಿಕ ಜೀವಿತದ ಕೇಂದ್ರವಾಗಿ ಪರಿಣಮಿಸಿತು. ಅದು ಪೌರ ಆಡಳಿತ ಹಾಗೂ ನ್ಯಾಯಾಧಿಪತಿಗಳ ಸ್ಥಾನವಾಗಿತ್ತು, ಸಂತೆ ಹಾಗೂ ವ್ಯಾಪಾರದ ಪ್ರಮುಖ ಸ್ಥಳವಾಗಿತ್ತು, ಗ್ರೀಕ್ ನಾಟಕವನ್ನು ಚಿತ್ರಿಸುವ ನಾಟಕೀಯ ನಿರೂಪಣೆಗಳ ರಂಗಮಂದಿರವಾಗಿತ್ತು, ಕ್ರೀಡಾ ಪ್ರದರ್ಶನಗಳನ್ನು ನಡೆಸುವ ಒಂದು ಸ್ಥಳವಾಗಿತ್ತು, ಮತ್ತು ಬುದ್ಧಿವಂತರ ಚರ್ಚೆಗಾಗಿ ಒಂದು ಅಚ್ಚುಮೆಚ್ಚಿನ ಕೂಟದ ಸ್ಥಳವಾಗಿತ್ತು.
ಅಥೇನೆ ಪಟ್ಟಣದಲ್ಲಿರುವ ಆ್ಯಗೊರದ ದೇವಾಲಯಗಳು, ಕಂಬಗಳ ಸಾಲುಗಳು, ಪ್ರತಿಮೆಗಳು, ಸ್ಮಾರಕಗಳು, ಮತ್ತು ಸಾರ್ವಜನಿಕ ಕಟ್ಟಡಗಳ ಅವಶೇಷಗಳ ಪ್ರವಾಸವನ್ನು ಕೈಕೊಳ್ಳಲು ನೀವು ಬಯಸುತ್ತೀರೊ? ಆ್ಯಗೊರದ ಹಿನ್ನೆಲೆಯನ್ನು ಪರೀಕ್ಷಿಸುವ ಪ್ರಯತ್ನದಲ್ಲಿ, ಆಧುನಿಕ ದಿನದ ಪಟ್ಟಣದ ಗಲಾಟೆಯನ್ನೂ ಗದ್ದಲವನ್ನೂ ಹಿಂದೆ ಹಾಕಿ, ಮೌನವಾದ ಅಮೃತಶಿಲೆಯ ಅವಶೇಷಗಳು, ಕೆತ್ತನೆಯ ಕಲ್ಲುಗಳು, ಮತ್ತು ಕಳೆಸಸ್ಯಗಳು ಹಾಗೂ ಕಾಡು ಮೂಲಿಕೆಗಳು ದಟ್ಟವಾಗಿ ಬೆಳೆದಿರುವ, ಹರುಕು-ಮುರುಕು ದ್ವಾರಗಳ ನಡುವಿನ ಮರಳಿನ ಹಾದಿಗಳ ಮೂಲಕ ನಾವು ಪ್ರಯಾಣ ಬೆಳೆಸೋಣ.
ದೇವಾಲಯಗಳು, ಗುಡಿಗಳು, ಮತ್ತು ರಕ್ಷಕ ದೇವದೇವತೆಗಳು
ಅನೇಕಾನೇಕ ದೇವದೇವತೆಗಳಿಗೆ ಮೀಸಲಾಗಿಡಲ್ಪಟ್ಟ ದೇವಾಲಯಗಳು, ಗುಡಿಗಳು, ಮತ್ತು ಮಂದಿರಗಳ ಅಸ್ತಿತ್ವದಿಂದ ಸಂದರ್ಶಕರು ಪ್ರಭಾವಿತರಾಗುತ್ತಾರೆ. ಈ ಎಲ್ಲ ವೈಶಿಷ್ಟ್ಯಗಳ ಕಾರಣದಿಂದ ಆ್ಯಗೊರವು ಒಂದು ಪ್ರಮುಖ ಆರಾಧನಾ ಕೇಂದ್ರವಾಗಿತ್ತು. ಆ್ಯಕ್ರೊಪೊಲಿಸ್ನ ಅನಂತರ ಇದು ಎರಡನೆಯ ಸ್ಥಾನದಲ್ಲಿತ್ತು. ಪ್ರಾಚೀನ ಅಥೇನೆಯ ಸುವರ್ಣ ಯುಗದ ಸಮಯದಲ್ಲಿ, ಧರ್ಮವು ಸಾರ್ವಜನಿಕ ಜೀವಿತದ ಪ್ರತಿಯೊಂದು ಅಂಶದಲ್ಲೂ ವ್ಯಾಪಿಸಿತ್ತು. ಇದರ ಅರ್ಥವೇನೆಂದರೆ, ಸರಕಾರಿ ಇಲಾಖೆಗಳು ಹಾಗೂ ಆಡಳಿತ ಮಂಡಲಿಗಳ “ರಕ್ಷಕ ದೇವದೇವತೆ”ಗಳೋಪಾದಿ ನಿಯಮಿಸಲ್ಪಟ್ಟ ಅನೇಕಾನೇಕ ದೇವರುಗಳಿಗೆ, ಆ್ಯಗೊರದಲ್ಲಿ ದೇವಾಲಯಗಳನ್ನು ಕಟ್ಟಲು ಸ್ಥಳವು ಕೊಡಲ್ಪಟ್ಟಿತ್ತು.
ಅಂತಹ ಕಟ್ಟಡಗಳಲ್ಲಿ, ಹಿಫೆಸ್ಟಸ್ನ ದೇವಾಲಯವು ಪ್ರಧಾನವಾದದ್ದಾಗಿತ್ತು. ದೇವತೆಯಾದ ಅಥೀನಳ ಹೆಸರು ಹಿಫೆಸ್ಟಸ್ನೊಂದಿಗೆ ಸೇರಿಕೊಂಡಿತ್ತು. ಈ ಎರಡೂ ದೇವದೇವತೆಗಳು ಇಲ್ಲಿ ಕಲೆ ಹಾಗೂ ಕರಕುಶಲತೆಯ ರಕ್ಷಕ ದೇವರುಗಳಾಗಿ ಆರಾಧಿಸಲ್ಪಟ್ಟರು. ಪ್ರಾಕ್ತನ ಶಾಸ್ತ್ರೀಯ ಶೋಧವು, ಈ ದೇವಾಲಯದ ಸುತ್ತಲಿನ ಲೋಹದ ಕೆಲಸ ಮತ್ತು ಮಣ್ಣಿನ ಪಾತ್ರೆಗಳನ್ನು, ಬೆಂಕಿಯ ಉಪಯೋಗಕ್ಕಾಗಿ ಕರೆಕೊಡುವ, ಕಲೆಯ ಗ್ರೀಕ್ ದೇವನಾದ ಹಿಫೆಸ್ಟಸ್ನೊಂದಿಗೆ ಸಂಬಂಧಿಸುತ್ತದೆ. ಸುವ್ಯವಸ್ಥಿತವಾಗಿ ಸಂರಕ್ಷಿಸಲ್ಪಟ್ಟಿದ್ದ ಈ ದೇವಾಲಯವು, ಬಹುಶಃ ಸಾ.ಶ. ಏಳನೆಯ ಶತಮಾನದಲ್ಲಿ, ಸಂತ ಜಾರ್ಜ್ನ ಗ್ರೀಕ್ ಆರ್ಥೊಡಾಕ್ಸ್ ಚರ್ಚಾಗಿ ಮಾರ್ಪಡಿಸಲ್ಪಟ್ಟಿತು. ಆದರೆ ಇಂದು ಅದು ಹಾಗೆ ಉಪಯೋಗಿಸಲ್ಪಡುತ್ತಿಲ್ಲ.
ಖಂಡಿತವಾಗಿಯೂ ಆ್ಯಗೊರಕ್ಕೆ ತನ್ನದೇ ಆದ ರಕ್ಷಕ ದೇವತೆಯ ಅಗತ್ಯವಿತ್ತು. ಈ ದೇವತೆಯು ಸ್ಯೂಸ್ ಆ್ಯಗೊರೆಆಸ್ ಆಗಿದ್ದು, ಅವನು ವಾಗ್ಮಿತೆಯ ಪ್ರೇರಕನೆಂದು ನೆನಸಲಾಗಿತ್ತು. ಬೆಲೆಬಾಳುವಂತಹ ಪಂಚಕೋನಗಳುಳ್ಳ ಅಮೃತಶಿಲೆಯಲ್ಲಿ ಕೆತ್ತಲ್ಪಟ್ಟ ಒಂದು ಅಲಂಕಾರಿಕ ಪೀಠವು ಈ ದೇವತೆಗೋಸ್ಕರ ಅರ್ಪಿಸಲ್ಪಟ್ಟಿತ್ತು. (ಅ. ಕೃತ್ಯಗಳು 14:11, 12ನ್ನು ಹೋಲಿಸಿರಿ.) ಸಮೀಪದಲ್ಲಿದ್ದ ದೇವತೆಗಳ ಮಾತೆಯ ಪೀಠದ ಎರಡೂ ಪಕ್ಕಗಳಲ್ಲಿ, ಪ್ರಖ್ಯಾತ ವೀರರ ಸ್ಮಾರಕಗಳು ಪ್ರೇಕ್ಷಣೀಯ ರೀತಿಯಲ್ಲಿ ಜೋಡಿಸಲ್ಪಟ್ಟಿದ್ದವು.
ಇನ್ನೂ ಸ್ವಲ್ಪ ಮುಂದೆ ಹೋದರೆ, ಒಂದು ಚಿಕ್ಕ ಅಯೋನಿಯ ದೇವಾಲಯವನ್ನು ನಾವು ಕಂಡುಕೊಳ್ಳುತ್ತೇವೆ. ಭೂಗೋಳ ಶಾಸ್ತ್ರಜ್ಞನಾದ ಪಾಸೇನಿಅಸನು ಇದನ್ನು ತಂದೆಯಾದ ಅಪೊಲೊನ ದೇವಾಲಯವೆಂದು ಗುರುತಿಸಿದನು. ಏಕೆ? ಏಕೆಂದರೆ ಪುರಾತನ ಗ್ರೀಕ್ ಪುರಾಣಕಥೆಗೆ ಅನುಸಾರವಾಗಿ, ಅವನು ಅಯಾನ್ನ ತಂದೆಯಾಗಿದ್ದನು. ಅಂದರೆ ಅವನು ಅಯಾನಿಯನ್ ಮತದ ಸ್ಥಾಪಕನಾಗಿದ್ದು, ಅಥೇನೆಯವರು ಅದರ ಒಂದು ಭಾಗವಾಗಿದ್ದರು.a ಈ ಸಾಮರ್ಥ್ಯದಲ್ಲಿ, ಆಡಳಿತ ಸಂಸ್ಥೆಯ—ವಿಶೇಷವಾಗಿ ಆ ಪಟ್ಟಣದಲ್ಲಿ ಅಸ್ತಿತ್ವದಲ್ಲಿದ್ದ ವಿವಿಧ ಸಹೋದರತ್ವದೊಂದಿಗೆ ಸಂಬಂಧಿಸಿದ—ರಕ್ಷಕ ದೇವದೇವತೆಗಳಲ್ಲಿ ಅಪೊಲೊ ಒಬ್ಬನಾಗಿದ್ದನು.
ಉತ್ತರ ದಿಕ್ಕಿಗೆ ಸರಿಯಾಗಿ, ನಾವು ಒಂದು ಚಿಕ್ಕ ದೇವಾಲಯದ ಸುಣ್ಣದ ಕಲ್ಲಿನ ಅವಶೇಷಗಳನ್ನು ಕಾಣುತ್ತೇವೆ. ಇದು ಸಾ.ಶ.ಪೂ. ನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ಕಟ್ಟಲ್ಪಟ್ಟಿತ್ತು. ಇಲ್ಲಿ, ಪೂರ್ವಿಕರ ಧಾರ್ಮಿಕ ಸಹೋದರತ್ವಗಳ ಪ್ರಮುಖ ದೇವದೇವತೆಗಳಾದ ಸ್ಯೂಸ್ ಹಾಗೂ ಅಥೀನ ಫ್ಯಾಟ್ರೀಆಸ್ರನ್ನು ಆರಾಧಿಸಲಾಗುತ್ತಿತ್ತು. ಈ ಸಹೋದರತ್ವಗಳಲ್ಲಿನ ಸದಸ್ಯತನವು, ಬಹುಮಟ್ಟಿಗೆ ಅಥೇನೆ ಪಟ್ಟಣದ ಪೌರತ್ವಕ್ಕೆ ಪೂರ್ವಾಪೇಕ್ಷಿತವಾಗಿತ್ತು. ಬೀದಿಯ ಆಚೆ ಬದಿಯಲ್ಲೇ, ಹನ್ನೆರಡು ದೇವರುಗಳ ಪೀಠದ ಅವಶೇಷಗಳನ್ನು ನಾವು ಕಂಡುಕೊಳ್ಳುತ್ತೇವೆ.
ಸ್ಯೂಸ್ ಎಲ್ಯೂಥಿರಿಯಸ್ನ ಸಮೀಪದಲ್ಲಿರುವ ಸ್ಟೋಅದಲ್ಲಿ, ಗ್ರೀಕ್ನ ಪ್ರಮುಖ ದೇವನಿಗೆ ಪುನಃ ಘನತೆಯು ಕೊಡಲ್ಪಟ್ಟಿತ್ತು; ಈ ಬಾರಿ ಬಿಡುಗಡೆ ಮತ್ತು ವಿಮೋಚನೆಯ ಒಬ್ಬ ದೇವನೋಪಾದಿ. ಈ ಕಂಬಸಾಲು, ಅಥವಾ ಸ್ಟೋಅವು, ಒಂದು ಜನಪ್ರಿಯವಾದ ವಿಹಾರಪಥವೂ ಕೂಟದ ಸ್ಥಳವೂ ಆಗಿತ್ತು. ಪ್ರಸಿದ್ಧ ತತ್ವಜ್ಞಾನಿಯಾದ ಸೊಕ್ರೆಟಸನು, ಎಲ್ಲಿ ತಾವು ಕುಳಿತುಕೊಂಡು ಹರಟೆಹೊಡೆಯಲು ಅಥವಾ ಉದ್ದಕ್ಕೂ ಅಡ್ಡಾಡಲು ಸಾಧ್ಯವಿತ್ತೋ ಆ ಸ್ಟೋಅದಲ್ಲಿ ತನ್ನ ಸ್ನೇಹಿತರನ್ನು ಭೇಟಿಯಾಗುತ್ತಿದ್ದನು ಎಂದು ಹೇಳಲಾಗುತ್ತದೆ. ಅಥೇನೆ ಪಟ್ಟಣವನ್ನು ಕಾಪಾಡುವ ಸಲುವಾಗಿ ಕಾದಾಡುತ್ತಾ ಮೃತಪಟ್ಟಿರುವ ಯೋಧರ ಗುರಾಣಿಗಳಂತಹ, ಈ ಸ್ಟೋಅವನ್ನು ಅಲಂಕರಿಸಲಿಕ್ಕಾಗಿ ಮಾಡಲ್ಪಟ್ಟಿರುವ ಅನೇಕ ಪ್ರತಿಷ್ಠಾಪನೆಗಳು ಹಾಗೂ ಅರ್ಪಣೆಗಳು, ಈ ಪಟ್ಟಣವನ್ನು ಅದರ ಶತ್ರುಗಳಿಂದ ವಿಮೋಚಿಸುವುದರೊಂದಿಗೆ ಅಥವಾ ಅದರ ಸ್ವಾತಂತ್ರ್ಯವನ್ನು ಸಂರಕ್ಷಿಸುವುದರೊಂದಿಗೆ ನೇರವಾದ ಸಂಬಂಧವನ್ನು ಹೊಂದಿದ್ದವು.
ಪಾನಾಥೀನಿಯನ್ ಮಾರ್ಗ
ಆ್ಯಗೊರವನ್ನು ಕರ್ಣೀಯವಾಗಿ ಒಂದು ಅಗಲವಾದ, ಜಲ್ಲಿಕಲ್ಲಿನ ರಸ್ತೆಯು ಹಾದುಹೋಗುತ್ತದೆ. ಇದನ್ನು ಪಾನಾಥೀನಿಯನ್ ಮಾರ್ಗ ಎಂದು ಕರೆಯಲಾಗುತ್ತದೆ. ಅದರ ಹೆಸರು ಹಾಗೂ ವಿಶೇಷ ವೈಶಿಷ್ಟ್ಯವು, ಪಾನಾಥೀನಿಯ ಎಂಬ ಅಥೇನೆಯ ರಾಷ್ಟ್ರೀಯ ಹಬ್ಬದಿಂದ ಬಂದದ್ದಾಗಿದೆ. ಈ ಹಬ್ಬದ ಸಮಯದಲ್ಲಿ, ಅಥೀನ ದೇವತೆಯ ಮುಖಪರದೆ (ವೇಲ್)ಯನ್ನು, ಪ್ರೊಸೆಷನ್ ಹೌಸ್ (ಪಟ್ಟಣದ ದ್ವಾರದ ಪಕ್ಕ)ನಿಂದ ಆ್ಯಕ್ರೊಪೊಲಿಸ್ನ ವರೆಗೆ, ಈ ರಸ್ತೆಯ ಉದ್ದಕ್ಕೂ ಕೊಂಡೊಯ್ಯಲಾಗುತ್ತಿತ್ತು. ಒಂದು ಪಾರ್ಥೆನಾನ್ ಅಲಂಕರಣಪಟ್ಟಿಯು, ಈ ಹಬ್ಬದ ಮೆರವಣಿಗೆಯ ಆಡಂಬರ ಹಾಗೂ ವೈಭವಗಳನ್ನು ಚಿತ್ರಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ—ಅಶ್ವಸೈನ್ಯ, ಓಡುತ್ತಿರುವ ರಥಗಳು, ಯಜ್ಞಾರ್ಪಣೆಯ ದನಗಳು ಮತ್ತು ಕುರಿಗಳು, ಆ ಯಜ್ಞದಲ್ಲಿ ಉಪಯೋಗಿಸಲ್ಪಡಲಿದ್ದ ಸಲಕರಣೆಗಳನ್ನು ಕೊಂಡೊಯ್ಯುತ್ತಿರುವ ಯುವಪ್ರಾಯದ ಪುರುಷರು ಹಾಗೂ ಹುಡುಗಿಯರು. ಅಥೇನೆ ಪಟ್ಟಣದ ಪ್ರಜೆಗಳು ಹಾಗೂ ಅವರ ಅತಿಥಿಗಳು ಈ ಮೆರವಣಿಗೆಯನ್ನು ನೋಡುತ್ತಿದ್ದರು. ಇವರ ಅನುಕೂಲಕ್ಕಾಗಿಯೇ ವಾಸ್ತುಶಿಲ್ಪಿಗಳು, ಆ್ಯಗೊರವನ್ನು ವಿನ್ಯಾಸಿಸುವಾಗ ಅನೇಕ ಒದಗಿಸುವಿಕೆಗಳನ್ನು ಮಾಡಿದ್ದರು. ಉದಾಹರಣೆಗಾಗಿ, ಯಾವ ಮಾರ್ಗದಲ್ಲಿ ಮೆರವಣಿಗೆಯು ಹೋಗುತ್ತದೋ ಆ ಮಾರ್ಗದಲ್ಲಿ, ಅಂತಸ್ತುಗಳಿರುವ ಕಂಬಸಾಲುಗಳು ಹಾಗೂ ಮೆಟ್ಟಲುಗಳು ಕೌಶಲಪೂರ್ಣವಾಗಿ ಸ್ಥಾಪಿಸಲ್ಪಟ್ಟಿದ್ದವು. ಈ ಕಂಬಸಾಲುಗಳ ಮುಖಭಾಗದಲ್ಲಿ ಕೆತ್ತಲ್ಪಟ್ಟಿದ್ದ ಮೆಟ್ಟಲುಗಳ ಅಸಂಖ್ಯಾತ ಸಂಖ್ಯೆಯು, ಅನೇಕ ಪ್ರೇಕ್ಷಕರು ಅಲ್ಲಿಂದ ನೋಡುವಂತೆ ಸ್ಥಳಾವಕಾಶವನ್ನು ಒದಗಿಸಸಾಧ್ಯವಿತ್ತು.
‘ಎಲ್ಲೆಲ್ಲಿಯೂ ವಿಗ್ರಹಗಳು’
ಅಷ್ಟೊಂದು ದೇವಾಲಯಗಳು, ಪ್ರತಿಮೆಗಳು, ಮತ್ತು ಸ್ಮಾರಕಗಳು ಒಟ್ಟಿಗೆ ರಾಶಿಗೂಡಿದ್ದರಿಂದ, “ಆ ಪಟ್ಟಣದಲ್ಲಿ ಎಲ್ಲಿಲ್ಲಿಯೂ ವಿಗ್ರಹಗಳೇ ಇರುವದನ್ನು ನೋಡಿ” ಅಪೊಸ್ತಲ ಪೌಲನ “ಮನಸ್ಸು ಅವನೊಳಗೆ ಕುದಿಯಿತು” ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. (ಅ. ಕೃತ್ಯಗಳು 17:16) ಪೌಲನು ಆ್ಯಗೊರವನ್ನು ಪ್ರವೇಶಿಸಿದಾಗ ಏನನ್ನು ಗಮನಿಸಿದನೋ ಅದರಿಂದ ಅವನಿಗೆ ಆಘಾತವಾಗಿದ್ದಿರಬೇಕು. ದೇವ ಹರ್ಮಿಸ್ನ ಶಿಶ್ನ ಪ್ರತಿಮೆಗಳು ಎಷ್ಟು ಅಸಂಖ್ಯಾತವಾಗಿದ್ದವೆಂದರೆ, ಅವುಗಳನ್ನು ಇಡಲಿಕ್ಕಾಗಿ ಹರ್ಮಿಸ್ನ ಸ್ಟೋಅ ಎಂದು ಪ್ರಸಿದ್ಧವಾದ ಇಡೀ ಮುಖಮಂಟಪವೇ ಅಗತ್ಯವಾಗಿತ್ತು. ಹರ್ಮಿಸ್ನ ಬಣ್ಣಬಳಿಯಲ್ಪಟ್ಟ ಇತರ ಮೂರ್ತಿಗಳ ಮೇಲಿರುವ ವಸ್ತ್ರಗಳ ಮೇಲೆ ಸ್ವಾಸ್ತಿಕಗಳು—ಫಲೋತ್ಪಾದನೆ ಹಾಗೂ ಜೀವದ ಸಂಕೇತಗಳು—ಇವೆ. ಅಲ್ಲಿ ಲೈಂಗಿಕ ಪ್ರೀತಿಯ ದೇವತೆಯಾದ ವೀನಸ್ ಜೆನೆಟ್ರಿಕ್ಸ್ನ ಒಂದು ಪ್ರತಿಮೆಯಿದೆ, ಹಾಗೂ ಇದರೊಟ್ಟಿಗೆ ಶಿಶ್ನಸಂಬಂಧಿತವಾದ ಅನೇಕ ಶಿಲುಬೆಗಳನ್ನು ಒಳಗೊಂಡಿರುವ ಡಯೊನೈಸಸ್ನ ಒಂದು ಪ್ರತಿಮೆಯೂ ಇದೆ. ಆ್ಯಗೊರದ “ಪಾವಿತ್ರ್ಯ”ವನ್ನು “ಪವಿತ್ರ” ಜಲದ ಬೋಗುಣಿಯಿದ್ದ ಒಂದು ಎಲ್ಲೆಕಲ್ಲು ಸೂಚಿಸಿತು. ಇದು ಅಲ್ಲಿ ಪ್ರವೇಶಿಸುವವರೆಲ್ಲರ ಮತಾಚರಣೆಗೆ ಸಂಬಂಧವಾದ ಶುದ್ಧೀಕರಣಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು.
ಅಂತಹ ಅತಿ ಧಾರ್ಮಿಕ ವಾತಾವರಣದ ನೋಟದಲ್ಲಿ, ಪೌಲನ ಸ್ಥಾನವು ಏಕೆ ಅತ್ಯಂತ ಅಪಾಯಕರವಾಗಿತ್ತು ಎಂಬುದನ್ನು ನಾವು ಸುಲಭವಾಗಿಯೇ ಅರ್ಥಮಾಡಿಕೊಳ್ಳಸಾಧ್ಯವಿದೆ. ಅವರು ಅವನನ್ನು “ಅನ್ಯದೇಶದ ದೈವಗಳನ್ನು ಪ್ರಸಿದ್ಧಿಪಡಿಸುವವ” ಎಂದು ಸಂದೇಹಿಸಿದರು, ಮತ್ತು ಆ ಸಮಯದ ನಿಯಮವು, ‘ಯಾವ ವ್ಯಕ್ತಿಯೂ ಯಾವುದೇ ಪ್ರತ್ಯೇಕ ದೇವರುಗಳನ್ನು, ಅಥವಾ ಹೊಸ ದೇವರುಗಳನ್ನು ಇಟ್ಟುಕೊಳ್ಳಬಾರದು; ಅಲ್ಲದೆ ಅವುಗಳು ಸಾರ್ವಜನಿಕವಾಗಿ ಅನುಮತಿಸಲ್ಪಡದೆ ಇದ್ದಲ್ಲಿ, ಅವನು ಯಾವುದೇ ಅಪರಿಚಿತ ದೇವರುಗಳನ್ನು ಖಾಸಗಿಯಾಗಿ ಆರಾಧಿಸಬಾರದು’ ಎಂಬ ನಿರ್ಬಂಧವನ್ನು ಹಾಕಿತ್ತು. ಆದುದರಿಂದ, ಪ್ರಶ್ನಿಸಲ್ಪಡಲಿಕ್ಕಾಗಿ ಅಪೊಸ್ತಲನನ್ನು ಅರಿಯೊಪಾಗಕ್ಕೆ ಕರೆದುಕೊಂಡು ಹೋದುದರಲ್ಲಿ ಆಶ್ಚರ್ಯವೇನೂ ಇಲ್ಲ.—ಅ. ಕೃತ್ಯಗಳು 17:18, 19.
ಆಡಳಿತದ ಕೇಂದ್ರ
ಥಾಲಾಸ್ ಎಂದು ಕರೆಯಲ್ಪಟ್ಟ ಉರುಟಾದ ಒಂದು ಕಟ್ಟಡದಲ್ಲಿ, ಅಥೇನೆ ಸರಕಾರದ ಮುಖ್ಯಕಾರ್ಯಾಲಯವಿತ್ತು. ಜವಾಬ್ದಾರಿಯುತ ಅಧಿಕಾರಿಗಳು ಯಾವಾಗಲೂ ಲಭ್ಯವಿರುವಂತೆ, ರಾತ್ರಿಯ ಸಮಯದಲ್ಲಿ ಪಟ್ಟಣದ ಅನೇಕ ಮಂದಿ ಅಧ್ಯಕ್ಷರು ಈ ಕಟ್ಟಡದಲ್ಲಿ ಮಲಗುತ್ತಿದ್ದರು. ಪ್ರಮಾಣಭೂತ ತ್ರಾಸುಗಳು ಹಾಗೂ ಮಾಪನಗಳು ಈ ಥಾಲಾಸ್ನಲ್ಲಿ ಇಡಲ್ಪಟ್ಟಿದ್ದವು. ಆಡಳಿತಕ್ಕೆ ಸಂಬಂಧಪಟ್ಟ ವಿವಿಧ ಇಲಾಖೆಗಳ ಸೌಕರ್ಯಗಳು ಸಮೀಪದಲ್ಲೇ ಇದ್ದವು. ಥಾಲಾಸ್ನ ವಾಯವ್ಯ ದಿಕ್ಕಿನಲ್ಲಿರುವ ಪರ್ವತವನ್ನು ಕೊರೆದು, ಕಟ್ಟಿದ ಪ್ರದೇಶದ ಮೇಲೆ ಕೌನ್ಸಿಲ್ ಹೌಸ್ ಅನ್ನು ಸ್ಥಾಪಿಸಲಾಗಿತ್ತು. ಅಲ್ಲಿ, ಆ ಕೌನ್ಸಿಲ್ನ 500 ಮಂದಿ ಸದಸ್ಯರು ಕೂಟಗಳನ್ನು ನಡೆಸುತ್ತಿದ್ದು, ಮಂಡಲಿಯ ಕೆಲಸವನ್ನು ಮಾಡಿ, ಸಭೆಗಾಗಿ ಶಾಸನವನ್ನು ರಚಿಸಿದರು.
ಪ್ರಮುಖವಾದ ಇನ್ನೊಂದು ಪೌರ ಕಟ್ಟಡವು, ರಾಯಲ್ ಸ್ಟೋಅ ಆಗಿತ್ತು. ಅಲ್ಲಿ ಅಥೇನೆಯ ರಾಯಲ್ ಆರ್ಕನ್ನ—ಆ ಪಟ್ಟಣದ ಮೂರು ಪ್ರಮುಖ ಮ್ಯಾಜಿಸ್ಟ್ರೇಟರುಗಳಲ್ಲಿ ಒಬ್ಬರು—ಪೀಠವಿತ್ತು. ಧಾರ್ಮಿಕ ಹಾಗೂ ಶಾಸನಸಂಬಂಧವಾದ—ಎರಡೂ—ವಿಷಯಗಳಿಗೆ ಸಂಬಂಧಿಸಿದ ಅನೇಕ ಆಡಳಿತ ಜವಾಬ್ದಾರಿಗಳನ್ನು ಅವರು ಅಲ್ಲಿಂದಲೇ ನಿರ್ವಹಿಸಿದರು. ಸೊಕ್ರೆಟಸನ ಮೇಲೆ ಅಧಾರ್ಮಿಕತೆಯ ಅಪವಾದವು ಹೊರಿಸಲ್ಪಟ್ಟಾಗ, ಅವನು ಬಂದು ಮೊಕದ್ದಮೆಯನ್ನು ಎದುರಿಸಬೇಕಾದದ್ದು ಇಲ್ಲಿಯೇ ಎಂಬುದು ಸಂಭವನೀಯ. ಅದರ ಎದುರಿಗಿರುವ ಕಟ್ಟಡದ ಗೋಡೆಗಳ ಮೇಲೆ, ಅಥೇನೆ ಪಟ್ಟಣದ ಆದ್ಯ ನಿಯಮಗಳು ಕೆತ್ತಲ್ಪಟ್ಟಿದ್ದವು. ಅದೇ ಕಟ್ಟಡದ ಮುಂದೆ ಇಡಲ್ಪಟ್ಟಿದ್ದ ಒಂದು ಕಲ್ಲಿನ ಮೇಲೆ, ಮುಖ್ಯ ದಂಡನಾಯಕರು, ಅಥವಾ ಪ್ರಮುಖ ಮ್ಯಾಜಿಸ್ಟ್ರೇಟರು, ತಮ್ಮ ಅಧಿಕೃತ ಪ್ರಮಾಣವನ್ನು ಸ್ವೀಕರಿಸಲಿಕ್ಕಾಗಿ ಪ್ರತಿ ವರ್ಷ ನಿಂತರು.
ಆ್ಯಟಲಸ್ನ ಸ್ಟೋಅ
ಆ್ಯಗೊರದಲ್ಲಿ ಅತಿ ಹೆಚ್ಚು ಸಂರಕ್ಷಿಸಲ್ಪಟ್ಟ ಕಟ್ಟಡವು, ಆ್ಯಟಲಸ್ನ ಸ್ಟೋಅ ಕಟ್ಟಡವಾಗಿದೆ. ಮೆಡಿಟರೇನಿಯನ್ ಲೋಕದಲ್ಲಿ ರಾಜ ಕುಟುಂಬಗಳ ಇನ್ನಿತರ ಅನೇಕ ವಂಶಜರು ಮಾಡಿದ್ದಂತೆಯೇ, ಯೌವನಸ್ಥನಾಗಿದ್ದಾಗ, ಪೆರ್ಗಮಮ್ (ಸಾ.ಶ.ಪೂ. ಎರಡನೆಯ ಶತಮಾನ)ನ ಅರಸನಾದ ಆ್ಯಟಲಸ್ನು, ಅಥೇನೆ ಪಟ್ಟಣದ ಶಾಲೆಗಳಲ್ಲಿ ವಿದ್ಯಾಭ್ಯಾಸಮಾಡಿದ್ದನು. ತನ್ನ ಸಿಂಹಾಸನವನ್ನು ಏರಿದ ಬಳಿಕ, ತಾನು ವಿದ್ಯೆಯನ್ನು ಕಲಿತ ಪಟ್ಟಣಕ್ಕೆ ಅವನು ಈ ಶೋಭಾಯಮಾನವಾದ ಕೊಡುಗೆ—ಆ್ಯಟಲಸ್ನ ಸ್ಟೋಅ—ಯನ್ನು ನೀಡಿದನು.
ಆ್ಯಟಲಸ್ನ ಸ್ಟೋಅದ ಮುಖ್ಯ ಕೆಲಸವು, ಅನೌಪಚಾರಿಕ ಸಹವಾಸ ಮತ್ತು ವಿಚಾರ ವಿನಿಮಯಕ್ಕಾಗಿ ಆಶ್ರಯವನ್ನೂ ಸೊಗಸಾದ ಸಾಮಾಜಿಕ ಸಂದರ್ಭಗಳನ್ನು ಒದಗಿಸುವುದೇ ಆಗಿತ್ತು. ಅದರ ನೆಲಗಳು ಹಾಗೂ ಮಾಳಿಗೆಗಳು, ಅತ್ಯುತ್ತಮವಾದ ಸ್ಥಳಗಳಿಂದ ಮೆರವಣಿಗೆಗಳನ್ನು ಪ್ರೇಕ್ಷಿಸುವಂತೆ ಸಾಧ್ಯಗೊಳಿಸಿದವು. ಅದೇ ಸಮಯದಲ್ಲಿ ಅದು ವಿಹಾರಪಥವಾಗಿದ್ದರ ಜನಪ್ರಿಯತೆಯು, ಒಂದು ಶಾಪಿಂಗ್ ಸೆಂಟರ್ನೋಪಾದಿ ಅದಕ್ಕೆ ಯಶಸ್ಸನ್ನೂ ತಂದುಕೊಟ್ಟಿದ್ದಿರಬೇಕು. ಆ ಅಂಗಡಿಗಳನ್ನು ಬಹುಶಃ ಸರಕಾರವು ವ್ಯಾಪಾರಿಗಳಿಗೆ ಬಾಡಿಗೆಗೆ ಕೊಡುತ್ತಿತ್ತು. ಹೀಗೆ ಈ ಕಟ್ಟಡವು ಆದಾಯದ ಒಂದು ಮೂಲವಾಗಿ ಕಾರ್ಯನಡಿಸಿತು.
ಪುನಃ ತನ್ನ ಆರಂಭದ ಸ್ಥಿತಿಗೆ ತರಲ್ಪಟ್ಟಿರುವ ಆ್ಯಟಲಸ್ನ ಸ್ಟೋಅವು, ರೇಖಾಗಣಿತದ ವಿನ್ಯಾಸಕ್ಕೆ ಅತ್ಯುತ್ತಮವಾದ ಉದಾಹರಣೆಯನ್ನು ನೀಡುತ್ತದೆ. ಅದರ ಸಮಗ್ರ ಅನುಪಾತ, ಆಧಾರಸ್ತಂಭಗಳ ಕೆಳಗಿನ ಹಾಗೂ ಮೇಲಿನ ಅಳತೆಯ ನಡುವೆ ಇರುವ ಹಿತಕರವಾದ ಭಿನ್ನತೆಗಳು, ಬೆಳಕು ನೆರಳುಗಳ ಅನ್ಯೋನ್ಯ ಪ್ರಭಾವ, ಮತ್ತು ಅದರ ನಿರ್ಮಾಣ ಸಾಮಗ್ರಿಗಳ ಅತ್ಯುತ್ಕೃಷ್ಟತೆ ಹಾಗೂ ರಮ್ಯತೆಗಳು, ಇದನ್ನು ಅಪೂರ್ವವಾದುದಾಗಿ ಮಾಡುತ್ತವೆ. ಯಾವ ವಸ್ತುವೂ ಇನ್ನೊಂದರಂತಿಲ್ಲ, ವಿಶೇಷವಾಗಿ ಮೂರು ವಿಭಿನ್ನ ರೀತಿಯ ಸ್ತಂಭಾಗ್ರ (ಸ್ತಂಭದ ಮೇಲ್ಭಾಗ)ಗಳು—ಡಾರಿಕ್, ಅಯಾನಿಯನ್, ಮತ್ತು ಈಜಿಪ್ಶಿಯನ್—ಉಪಯೋಗಿಸಲ್ಪಟ್ಟ ರೀತಿಯು ಗಮನಾರ್ಹವಾದದ್ದಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳ ಒಂದು ಸ್ಥಳ
ಅಥೇನೆ ಪಟ್ಟಣದಲ್ಲಿ ಅನೇಕ ಸಾಂಸ್ಕೃತಿಕ ಸಮಾರಂಭಗಳಿಗೆ ಒಂದು ರಂಗಮಂಟಪದೋಪಾದಿ ಕಾರ್ಯನಡಿಸಿದ ಒಂದು ಕಟ್ಟಡವು, ಕಾನ್ಸರ್ಟ್ ಆಗಿತ್ತು. ಇದು, ರೋಮನ್ ಚಕ್ರವರ್ತಿಯಾದ ಅಗಸ್ಟಸ್ನ ಅಳಿಯನಾದ ವಿಪ್ಸಾನ್ಯುಸ್ ಅಗ್ರಿಪನಿಂದ ಕೊಡಲ್ಪಟ್ಟ ಒಂದು ಕೊಡುಗೆಯಾಗಿತ್ತು. ಅದರ ಮುಂಭಾಗವು, ಬೇರೆ ಬೇರೆ ಬಣ್ಣದ ಅಮೃತಶಿಲೆಗಳಿಂದ ಹೊದಿಸಲ್ಪಟ್ಟಿತ್ತು. ಸುಮಾರು 1,000 ಮಂದಿಗೆ ಆಸನವನ್ನು ಒದಗಿಸುವ ಆ ಸಭಾಂಗಣದಲ್ಲಿ, ಹೆಚ್ಚುಕಡಿಮೆ 25 ಮೀಟರುಗಳ ಕಮಾನು ಇತ್ತು. ಮತ್ತು ಆರಂಭದಲ್ಲಿ ಒಳಗೆ ಯಾವ ಆಧಾರವ್ಯವಸ್ಥೆಯೂ ಇಲ್ಲದಿದ್ದ ಛಾವಣಿಯಿತ್ತು. ಪುರಾತನ ಲೋಕದಲ್ಲಿ ಅತ್ಯಂತ ಪ್ರಸಿದ್ಧವಾದ ಸಾಹಸಮಯ ಛಾವಣಿ ನಿರ್ಮಾಣದಲ್ಲಿ ಇದು ಒಂದಾಗಿತ್ತು! ಆದರೂ, ಪ್ರಾಯಶಃ ಅಲ್ಲಿ ಸಾದರಪಡಿಸಲ್ಪಡುತ್ತಿದ್ದ ಅಧಿಕಾಂಶ ಮನೋರಂಜನೆಯು, ನಿಜ ಕ್ರೈಸ್ತರಿಗೆ ಪ್ರಶ್ನಾಸ್ಪದವಾಗಿದ್ದಿರಬಹುದು. ಏಕೆಂದರೆ ಕ್ರೈಸ್ತರಿಗೆ ಅತ್ಯುಚ್ಚ ನೈತಿಕ ಮಟ್ಟಗಳಿದ್ದವು.—ಎಫೆಸ 5:3-5.
ಪುರಾತನ ಸಮಯದ ಅನ್ವೇಷಣಶೀಲ ವ್ಯಕ್ತಿಗಳು, ಪಾಂಟೇನಾಸ್ನ ಗ್ರಂಥಾಲಯವನ್ನು ಸಂದರ್ಶಿಸಿದರು ಎಂಬುದು ಹೆಚ್ಚು ಸಂಭವನೀಯ. ಅದರ ಗೋಡೆಗಳಲ್ಲಿ ತುಂಬ ಸಣ್ಣ ಅಲಮಾರುಗಳಿದ್ದು, ಅಲ್ಲಿ ಪಪೈರಸ್ ಹಾಗೂ ಚರ್ಮಕಾಗದದ ಹಸ್ತಲಿಖಿತ ಸುರುಳಿಗಳು ಸಂಗ್ರಹಿಸಿಡಲ್ಪಟ್ಟಿದ್ದವು. ಗ್ರಂಥಾಲಯದ ಪ್ರಮುಖ ಕೊಠಡಿಯು ಪಶ್ಚಿಮದ ಕಡೆಗಿದ್ದು, ಅದರ ಕಂಬಸಾಲುಗಳ ಮೂಲಕ ಒಬ್ಬನು ಸ್ತಂಭಗಳುಳ್ಳ ಹೊರಾಂಗಣವನ್ನು ನೋಡಸಾಧ್ಯವಿತ್ತು—ಅಡ್ಡಾಡಲು, ಓದಲು, ಅಥವಾ ಧ್ಯಾನಮಾಡಲು ಇದು ಹಿತಕರವಾದ ಒಂದು ಸ್ಥಳವಾಗಿತ್ತು. ಗ್ರಂಥಾಲಯದ ನಿಯಮಗಳಲ್ಲಿ ಎರಡನ್ನು ಸೂಚಿಸುವ ಒಂದು ಕೆತ್ತನೆಯನ್ನು ಕಂಡುಕೊಳ್ಳಲಾಗಿದೆ. ಅವು ಯಾವುವೆಂದರೆ: “ಯಾವ ಪುಸ್ತಕವನ್ನೂ ತೆಗೆದುಕೊಂಡುಹೋಗಬಾರದು,” ಮತ್ತು “[ಗ್ರಂಥಾಲಯವು] ಒಂದು ಗಂಟೆಯಿಂದ ಆರು ಗಂಟೆಯ ವರೆಗೆ ತೆರೆದಿರುತ್ತದೆ.”
ಇಂದಿನ ಆ್ಯಗೊರ
ಇತ್ತೀಚಿನ ವರ್ಷಗಳಲ್ಲಿ, ಅಮೆರಿಕನ್ ಸ್ಕೂಲ್ ಆಫ್ ಕ್ಲಾಸಿಕಲ್ ಸ್ಟಡೀಸ್ನಿಂದ ಈ ಆ್ಯಗೊರವು ಬಹುಮಟ್ಟಿಗೆ ಸಂಪೂರ್ಣವಾಗಿ ಅಗೆದುತೆಗೆಯಲ್ಪಟ್ಟಿದೆ. ಉನ್ನತ ಪ್ರದೇಶದಲ್ಲಿರುವ ಆ್ಯಕ್ರೊಪೊಲಿಸ್ನ ನೆರಳಿನ ಕೆಳಗೆ ಪ್ರಶಾಂತವಾಗಿ ನೆಲೆಸಿರುವ ಆ್ಯಗೊರವು, ಪುರಾತನ ಅಥೇನೆ ಪಟ್ಟಣದ ಇತಿಹಾಸದ ಕಡೆಗೆ ಒಂದು ಸಂಕ್ಷಿಪ್ತ ನೋಟವನ್ನು ಹರಿಸಲು ಬಯಸುವ ಪ್ರವಾಸಿಗನಿಗೆ ಒಂದು ಅಚ್ಚುಮೆಚ್ಚಿನ ಸ್ಥಳವಾಗಿ ಪರಿಣಮಿಸಿದೆ.
ಸಮೀಪದಲ್ಲಿರುವ ಮಾನಾಸ್ಟೀರಾಕೀ ಬಯಲು-ಮಾರುಕಟ್ಟೆಯು—ಆ್ಯಗೊರ ಮತ್ತು ಆ್ಯಕ್ರೊಪೊಲಿಸ್ನಿಂದ ಕೆಲವೇ ಹೆಜ್ಜೆ ಮುಂದೆ ಇದೆ—ಇನ್ನೊಂದು ಆಕರ್ಷಕ ಲೋಕಕ್ಕೆ ಒಂದು ಮೆಟ್ಟಲಾಗಿದೆ. ಇದು ಸಂದರ್ಶಕರಿಗೆ, ಗ್ರೀಕ್ ದಂತಕಥೆ ಹಾಗೂ ಮಧ್ಯಪೂರ್ವದ ಪ್ರಾಚ್ಯ ಮಾರುಕಟ್ಟೆಯ ಚಟುವಟಿಕೆ ಮತ್ತು ಚವಕಾಸಿ ಬೆಲೆಗಳ ಒಂದು ಆಶ್ಚರ್ಯಕರವಾದ, ಆದರೂ ಆನಂದಮಯವಾದ ನೋಟವನ್ನು ಒದಗಿಸುತ್ತದೆ. ಇದಲ್ಲದೆ, 1,900 ವರ್ಷಗಳಿಗಿಂತಲೂ ಹಿಂದೆ ಅಪೊಸ್ತಲ ಪೌಲನು ಏನು ಮಾಡಿದನೋ ಅದನ್ನೇ—‘ಕಂಡುಬಂದವರ ಸಂಗಡ’ ರಾಜ್ಯದ ಸುವಾರ್ತೆಯನ್ನು ಸಾರ್ವಜನಿಕವಾಗಿ ಸಾರುವುದು—ಯೆಹೋವನ ಸಾಕ್ಷಿಗಳು ಅಲ್ಲಿ ಆನಂದಭರಿತರಾಗಿ ಮಾಡುತ್ತಿರುವುದನ್ನು ಭೇಟಿಗಾರರು ಖಂಡಿತವಾಗಿಯೂ ನೋಡುವರು.
[ಪಾದಟಿಪ್ಪಣಿ]
a ಅಯಾನಿಯನ್ ಎಂಬ ಹೆಸರು, ನೋಹನ ಮೊಮ್ಮಗನೂ ಯೆಫೆತನ ಮಗನೂ ಆದ ಯಾವಾನ್ನಿಂದ ಬಂದದ್ದಾಗಿದೆ.—ಆದಿಕಾಂಡ 10:1, 2, 4, 5.
[ಪುಟ 28 ರಲ್ಲಿರುವ ಚೌಕ]
ಅಥೇನೆಯಲ್ಲಿ ವಾಣಿಜ್ಯ ವ್ಯವಹಾರ
ಆ್ಯಗೊರವು ಕೇವಲ ಅಥೇನೆ ಪಟ್ಟಣದ ಬುದ್ಧಿವಂತರ ಹಾಗೂ ಪೌರಯೋಗ್ಯವಾದ ಕೇಂದ್ರವಾಗಿರಲಿಲ್ಲ; ಅದು ಆ ಪಟ್ಟಣದ ಪ್ರಮುಖ ವ್ಯಾಪಾರ ಚೌಕವೂ ಆಗಿತ್ತು. ಅಥೇನೆ ಪಟ್ಟಣವು, ತನ್ನ ಪರಿವರ್ತನೀಯ ಕರೆನ್ಸಿಯ ಬೆಲೆ ಹಾಗೂ ಎಲ್ಲ ವ್ಯಾಪಾರ ವಿನಿಮಯಗಳು ಪ್ರಾಮಾಣಿಕವೂ ನ್ಯಾಯೋಚಿತವೂ ಆಗಿರುವಂತೆ ನೋಡಿಕೊಳ್ಳುವ ಅಧಿಕಾರವನ್ನು ಪಡೆದುಕೊಂಡಿದ್ದ ತನ್ನ ಅಧಿಪತಿಗಳ ನಿಷ್ಠೆಗೆ ಸುಪ್ರಸಿದ್ಧವಾದ ಒಂದು ವಾಣಿಜ್ಯ ಕೇಂದ್ರವಾಗಿ ಪರಿಣಮಿಸಿತು.
ಅಥೇನೆ ಪಟ್ಟಣವು, ದ್ರಾಕ್ಷಾರಸ, ಆಲೀವ್ ಎಣ್ಣೆ, ಜೇನುತುಪ್ಪ, ಅಮೃತಶಿಲೆಗಳು, ಹಾಗೂ ಕುಂಭಕಲೆಗಳು ಮತ್ತು ಸಂಸ್ಕರಿಸಿದ ಲೋಹಗಳಂತಹ ಕೈಗಾರಿಕಾ ಉತ್ಪನ್ನಗಳನ್ನು ರಫ್ತುಮಾಡಿತು. ಅದಕ್ಕೆ ವಿನಿಮಯವಾಗಿ, ಅದು ಮುಖ್ಯವಾಗಿ ಗೋಧಿಯನ್ನು ಆಮದುಮಾಡಿಕೊಂಡಿತು. ಆ್ಯಟಿಕ (ಅಥೇನೆ ಪಟ್ಟಣದ ಸುತ್ತಣ ಪ್ರಾಂತ)ವು, ತನ್ನ ನಿವಾಸಿಗಳಿಗೆ ಒದಗಿಸಲಿಕ್ಕಾಗಿ ಸಾಕಷ್ಟು ಆಹಾರವನ್ನು ಉತ್ಪಾದಿಸದ ಕಾರಣ, ವಾಣಿಜ್ಯ ವ್ಯಾಪಾರದ ಮಟ್ಟಗಳು ಕಟ್ಟುನಿಟ್ಟಾಗಿದ್ದವು. ಪಿರೇಯಸ್ (ಅಥೇನೆ ಪಟ್ಟಣದ ಬಂದರು)ನಲ್ಲಿರುವ ಮಾರುಕಟ್ಟೆಯಲ್ಲಿ, ಯಾವಾಗಲೂ ಆ ಪಟ್ಟಣಕ್ಕೆ ಹಾಗೂ ಸೈನ್ಯಕ್ಕೆ ಒದಗಿಸಲು ಬೇಕಾದಷ್ಟು ತಾಜಾ ಆಹಾರವು ಇರಲೇಬೇಕಿತ್ತು. ಮತ್ತು ಅಗತ್ಯವಿರುವ ಸಮಯಗಳಲ್ಲಿ ಅತ್ಯಧಿಕ ಬೆಲೆಗಳಲ್ಲಿ ಮಾರಾಟಮಾಡುವ ಸಲುವಾಗಿ ವ್ಯಾಪಾರಿಗಳು ವ್ಯಾಪಾರ ಸರಬರಾಯಿಗಳನ್ನು ಸಂಗ್ರಹಿಸುವುದು ನಿಷೇಧಿಸಲ್ಪಟ್ಟಿತ್ತು.