ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ನವೆಂಬರ್‌ ಪು. 8-12
  • ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ನಿಮಗೋಸ್ಕರ ಕೆಲವು ಆಶ್ರಯನಗರಗಳನ್ನು ಗೊತ್ತುಮಾಡಿಕೊಳ್ಳಿರಿ”
  • ಹಿರಿಯರಿಗೆ “ತನ್ನ ಸಂಗತಿಯನ್ನು” ತಿಳಿಯಪಡಿಸಬೇಕು
  • ಅವನು ‘ಇಂಥ ಒಂದು ಪಟ್ಟಣಕ್ಕೆ ಓಡಿಹೋಗಬೇಕು’
  • “ಅವು ನಿಮಗೆ ಆಶ್ರಯಸ್ಥಾನಗಳಾಗುವವು”
  • ಆಶ್ರಯನಗರಗಳು—ದೇವರ ದಯೆಯುಳ್ಳ ಮುನ್ನೇರ್ಪಾಡು
    ಕಾವಲಿನಬುರುಜು—1995
  • “ಆಶ್ರಯನಗರ”ದಲ್ಲಿ ಉಳಿದುಕೊಂಡು ಜೀವಿಸಿರಿ!
    ಕಾವಲಿನಬುರುಜು—1995
  • ಯೆಹೋವನ ನ್ಯಾಯ ಮತ್ತು ಕರುಣೆಯನ್ನು ಅನುಕರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • “ಯೆಹೋವನ ನಾಮವನ್ನು ಆಶ್ರಯಿಸಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ನವೆಂಬರ್‌ ಪು. 8-12
ಆಕಸ್ಮಿಕವಾಗಿ ಒಬ್ಬನನ್ನು ಕೊಂದವನು ಆಶ್ರಯನಗರವೊಂದಕ್ಕೆ ಬಂದಿದ್ದಾನೆ

ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದೀರಾ?

“ಯೆಹೋವನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ; ಆತನ ಆಶ್ರಿತರಲ್ಲಿ ಒಬ್ಬರಾದರೂ ಅಪರಾಧಿಯೆಂದು ಎಣಿಸಲ್ಪಡುವದಿಲ್ಲ.”—ಕೀರ್ತ. 34:22.

ಗೀತೆಗಳು: 49, 65

ಆಶ್ರಯನಗರಗಳ ಏರ್ಪಾಡಿನಿಂದ . . .

  • ಗಂಭೀರ ಪಾಪ ಮಾಡಿದ ವ್ಯಕ್ತಿಗೆ ಹಿರಿಯರು ಹೇಗೆ ಸಹಾಯ ಮಾಡಬೇಕೆಂದು ಕಲಿಯುತ್ತೇವೆ?

  • ದೇವರ ಕರುಣೆ ಸಿಗಬೇಕಾದರೆ ನಾವೇನು ಮಾಡಬೇಕೆಂದು ಕಲಿಯುತ್ತೇವೆ?

  • ಯೆಹೋವನು ನಿಮ್ಮನ್ನು ಸಂಪೂರ್ಣವಾಗಿ ಕ್ಷಮಿಸುತ್ತಾನೆಂದು ಹೇಗೆ ಗೊತ್ತಾಗುತ್ತದೆ?

1. ಬಾಧ್ಯತೆಯಾಗಿ ಪಡೆದಿರುವ ಪಾಪದ ಕಾರಣ ದೇವರ ಅನೇಕ ನಂಬಿಗಸ್ತ ಸೇವಕರನ್ನು ಯಾವ ಭಾವನೆಗಳು ಕಾಡುತ್ತವೆ?

“ನಾನು ಎಂಥ ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯನು!” ಎಂದು ಅಪೊಸ್ತಲ ಪೌಲ ಬರೆದನು. (ರೋಮ. 7:24) ಪೌಲನಿಗಾದಂತೆ ಇಂದು ದೇವರ ನಂಬಿಗಸ್ತ ಸೇವಕರಲ್ಲಿ ಅನೇಕರಿಗೆ ನಿರುತ್ಸಾಹ, ಬೇಸರ ಕಾಡುತ್ತದೆ. ಯೆಹೋವನನ್ನು ಮೆಚ್ಚಿಸಬೇಕೆಂಬ ಮನಸ್ಸಿದ್ದರೂ ಬಾಧ್ಯತೆಯಾಗಿ ಪಡೆದಿರುವ ಪಾಪ, ಅಪರಿಪೂರ್ಣತೆಯಿಂದಾಗಿ ನಾವು ತಪ್ಪಿಬೀಳುವಾಗ ದುಃಖವಾಗುತ್ತದೆ. ಇನ್ನೂ ಕೆಲವು ಕ್ರೈಸ್ತರು ಗಂಭೀರ ಪಾಪ ಮಾಡಿರುವುದರಿಂದ ಯೆಹೋವನು ತಮ್ಮನ್ನು ಯಾವತ್ತೂ ಕ್ಷಮಿಸಲ್ಲ ಎಂದೂ ನಿರುತ್ಸಾಹಗೊಳ್ಳುತ್ತಾರೆ.

2. (ಎ) ದೇವರ ಸೇವಕರು ಅಪರಾಧಿಭಾವದಿಂದ ಕೊರಗಬೇಕಾಗಿಲ್ಲ ಎಂದು ಕೀರ್ತನೆ 34:22​ರಿಂದ ಹೇಗೆ ಗೊತ್ತಾಗುತ್ತದೆ? (ಬಿ) ಈ ಲೇಖನದಲ್ಲಿ ಏನು ಕಲಿಯಲಿದ್ದೇವೆ? (“ಪಾಠಗಳಿವೆಯಾ? ಸೂಚಕರೂಪಗಳಿವೆಯಾ?” ಎಂಬ ಚೌಕ ನೋಡಿ.)

2 ನಾವು ಯೆಹೋವನಲ್ಲಿ ಆಶ್ರಯ ಪಡೆದುಕೊಂಡರೆ ಅಪರಾಧಿಭಾವದಿಂದ ಕೊರಗುವ ಅಗತ್ಯವಿಲ್ಲ ಎಂದು ಬೈಬಲ್‌ ನಮಗೆ ಆಶ್ವಾಸನೆ ನೀಡುತ್ತದೆ. (ಕೀರ್ತನೆ 34:22 ಓದಿ.) ಯೆಹೋವನಲ್ಲಿ ಆಶ್ರಯ ಪಡೆದುಕೊಳ್ಳುವುದರ ಅರ್ಥವೇನು? ಆತನು ಕರುಣೆ ತೋರಿಸಿ ನಮ್ಮನ್ನು ಕ್ಷಮಿಸಬೇಕಾದರೆ ನಾವೇನು ಮಾಡಬೇಕು? ಈ ಪ್ರಶ್ನೆಗಳಿಗೆ ಉತ್ತರ, ಪ್ರಾಚೀನ ಇಸ್ರಾಯೇಲಿನಲ್ಲಿದ್ದ ಆಶ್ರಯನಗರಗಳ ಏರ್ಪಾಡಿನ ಬಗ್ಗೆ ಕಲಿತರೆ ಸಿಗುತ್ತದೆ. ಈ ಏರ್ಪಾಡು ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿತ್ತು. ಕ್ರಿ.ಶ. 33​ರ ಪಂಚಾಶತ್ತಮದಂದು ಈ ಧರ್ಮಶಾಸ್ತ್ರದ ಒಡಂಬಡಿಕೆಯ ಬದಲಿಗೆ ಬೇರೆ ಒಡಂಬಡಿಕೆ ಜಾರಿಗೆ ಬಂತು. ಆದರೆ ಈ ಧರ್ಮಶಾಸ್ತ್ರವನ್ನು ಕೊಟ್ಟದ್ದು ಯೆಹೋವನು. ಆದ್ದರಿಂದ ಆತನಿಗೆ ಪಾಪದ ಬಗ್ಗೆ, ಪಾಪಿಗಳ ಬಗ್ಗೆ, ಪಶ್ಚಾತ್ತಾಪಪಟ್ಟವರ ಬಗ್ಗೆ ಯಾವ ದೃಷ್ಟಿಕೋನವಿದೆ ಎಂದು ನಮಗೆ ಆಶ್ರಯನಗರಗಳ ಏರ್ಪಾಡಿನಿಂದ ಗೊತ್ತಾಗುತ್ತದೆ. ಮೊದಲು, ಇಸ್ರಾಯೇಲಿನಲ್ಲಿ ಈ ಆಶ್ರಯನಗರಗಳು ಯಾಕೆ ಇದ್ದವು ಮತ್ತು ಈ ಏರ್ಪಾಡು ಹೇಗಿತ್ತು ಎಂದು ನೋಡೋಣ.

“ನಿಮಗೋಸ್ಕರ ಕೆಲವು ಆಶ್ರಯನಗರಗಳನ್ನು ಗೊತ್ತುಮಾಡಿಕೊಳ್ಳಿರಿ”

3. ಕೊಲೆಗಾರರಿಗೆ ಇಸ್ರಾಯೇಲ್ಯರು ಏನು ಮಾಡಬೇಕಿತ್ತು?

3 ಇಸ್ರಾಯೇಲಿನಲ್ಲಿ ಯಾರಾದರೂ ಕೊಲೆಯಾದರೆ ಅದನ್ನು ಯೆಹೋವನು ತುಂಬ ಗಂಭೀರವಾಗಿ ಪರಿಗಣಿಸುತ್ತಿದ್ದನು. “ಮುಯ್ಯಿತೀರಿಸುವ ಹಂಗುಳ್ಳ ಸಮೀಪಬಂಧು” ಅಂದರೆ ಕೊಲೆಯಾದವನ ಅತಿ ಹತ್ತಿರದ ಸಂಬಂಧಿ ಕೊಲೆಮಾಡಿದವನನ್ನು ಹತಿಸಬೇಕಿತ್ತು. (ಅರ. 35:19; ಧರ್ಮೋ. 19:6) ಒಬ್ಬ ಅಮಾಯಕನ ಪ್ರಾಣ ತೆಗೆದದ್ದಕ್ಕಾಗಿ ಕೊಲೆಗಾರನಿಗೆ ಸಿಗುವ ಶಿಕ್ಷೆ ಮರಣಶಿಕ್ಷೆ ಆಗಿತ್ತು. ಯಾರನ್ನಾದರೂ ಕೊಲೆ ಮಾಡಿ “ನೀವು ವಾಸಿಸುವ ದೇಶವನ್ನು ಅಪವಿತ್ರಮಾಡಬಾರದು” ಎಂದು ಯೆಹೋವನು ಆಜ್ಞೆ ಕೊಟ್ಟಿದ್ದನು. ಕೊಲೆಗಾರನನ್ನು ಕೂಡಲೇ ಹತಿಸದಿದ್ದರೆ ವಾಗ್ದತ್ತ ದೇಶ ಅಪವಿತ್ರವಾಗುತ್ತಿತ್ತು.—ಅರ. 35:33, 34.

4. ಆಕಸ್ಮಿಕವಾಗಿ ಒಬ್ಬನ ಜೀವ ತೆಗೆದ ಒಬ್ಬ ಇಸ್ರಾಯೇಲ್ಯನು ಏನು ಮಾಡಬೇಕಿತ್ತು?

4 ಆದರೆ ಇಸ್ರಾಯೇಲ್ಯನೊಬ್ಬನಿಂದಾಗಿ ಆಕಸ್ಮಿಕವಾಗಿ ಒಬ್ಬನ ಜೀವ ಹೋದರೆ ಆಗೇನು? ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲವಾದರೂ ಒಬ್ಬ ಅಮಾಯಕನ ಜೀವ ತೆಗೆದಿದ್ದಾನೆಂಬ ಕಾರಣಕ್ಕೆ ಅವನು ದೋಷಿ ಆಗುತ್ತಿದ್ದನು. (ಆದಿ. 9:5) ಆದರೆ ಇಂಥವನಿಗೆ ಕರುಣೆ ತೋರಿಸಬೇಕೆಂದು ಯೆಹೋವನು ಹೇಳಿದನು. ಕೈತಪ್ಪಿ ಕೊಂದವನು ಮುಯ್ಯಿತೀರಿಸುವ ಹಂಗುಳ್ಳ ಸಮೀಪಬಂಧುವಿನಿಂದ ತಪ್ಪಿಸಿಕೊಂಡು ಆರು ಆಶ್ರಯನಗರಗಳಲ್ಲಿ ಒಂದಕ್ಕೆ ಓಡಿಹೋಗಬೇಕಿತ್ತು. ಆ ನಗರ ಪ್ರವೇಶಿಸಿದ ನಂತರ ಅವನಿಗೆ ಅಲ್ಲಿ ಸಂರಕ್ಷಣೆ ಸಿಗುತ್ತಿತ್ತು. ಮಹಾಯಾಜಕ ತೀರಿಹೋಗುವ ತನಕ ಅವನು ಅಲ್ಲೇ ಇರಬೇಕಾಗಿತ್ತು.—ಅರ. 35:15, 28.

5. ಯೆಹೋವನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಆಶ್ರಯನಗರಗಳ ಏರ್ಪಾಡು ಸಹಾಯ ಮಾಡುತ್ತದೆಂದು ಯಾಕೆ ಹೇಳಬಹುದು?

5 ಆಶ್ರಯನಗರಗಳ ಏರ್ಪಾಡನ್ನು ಮನುಷ್ಯರು ಮಾಡಲಿಲ್ಲ, ಯೆಹೋವನು ಮಾಡಿದನು. “ನಿಮಗೋಸ್ಕರ ಕೆಲವು ಆಶ್ರಯನಗರಗಳನ್ನು ಗೊತ್ತುಮಾಡಿಕೊಳ್ಳಿರಿ” ಎಂದು ಯೆಹೋಶುವನು ಇಸ್ರಾಯೇಲ್ಯರಿಗೆ ಹೇಳುವಂತೆ ಯೆಹೋವನು ಆಜ್ಞೆ ಕೊಟ್ಟನು. (ಯೆಹೋ. 20:1, 2, 7, 8) ಹೀಗೆ ಈ ನಗರಗಳನ್ನು ಪ್ರತ್ಯೇಕವಾಗಿ ಇರಿಸಬೇಕೆಂದು ಯೆಹೋವನೇ ನಿರ್ಣಯಿಸಿದ್ದರಿಂದ ನಾವು ಈ ಏರ್ಪಾಡಿನಿಂದ ಆತನ ಬಗ್ಗೆ ತುಂಬ ವಿಷಯಗಳನ್ನು ಕಲಿಯಬಹುದು. ಉದಾಹರಣೆಗೆ, ಆತನ ಕರುಣೆಯ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ಇಂದು ನಾವು ಆತನಲ್ಲಿ ಆಶ್ರಯ ಪಡೆದುಕೊಳ್ಳುವುದರ ಬಗ್ಗೆಯೂ ಕಲಿಸುತ್ತದೆ.

ಹಿರಿಯರಿಗೆ “ತನ್ನ ಸಂಗತಿಯನ್ನು” ತಿಳಿಯಪಡಿಸಬೇಕು

6, 7. (ಎ) ಆಕಸ್ಮಿಕವಾಗಿ ಒಬ್ಬನನ್ನು ಕೊಂದವನ ವಿಚಾರಣೆ ನಡೆಸುವುದರಲ್ಲಿ ಹಿರಿಯರಿಗಿದ್ದ ಪಾತ್ರವನ್ನು ವಿವರಿಸಿ. (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಆಶ್ರಯನಗರಕ್ಕೆ ಓಡಿಹೋದವನು ಹಿರಿಯರ ಹತ್ತಿರ ಮಾತಾಡುವುದು ಯಾಕೆ ವಿವೇಕಯುತವಾಗಿತ್ತು?

6 ಆಕಸ್ಮಿಕವಾಗಿ ಒಬ್ಬನನ್ನು ಕೊಂದ ಇಸ್ರಾಯೇಲ್ಯನು ಆಶ್ರಯನಗರವೊಂದಕ್ಕೆ ಓಡಿಹೋಗಿ ಅಲ್ಲಿನ ಹಿರಿಯರಿಗೆ ಊರಬಾಗಲಲ್ಲೇ ‘ತನ್ನ ಸಂಗತಿಯನ್ನು ತಿಳಿಯಪಡಿಸಬೇಕಿತ್ತು.’ ನಂತರ ಆ ಹಿರಿಯರು ಅವನನ್ನು ಊರೊಳಗೆ ಸೇರಿಸಿಕೊಳ್ಳಬೇಕಿತ್ತು. (ಯೆಹೋ. 20:4) ಸ್ವಲ್ಪ ಸಮಯದ ನಂತರ ಈ ಹಿರಿಯರು ಅವನನ್ನು, ಹತ್ಯೆ ಎಲ್ಲಿ ನಡೆದಿತ್ತೊ ಆ ಊರಿನ ಹಿರಿಯರ ಬಳಿ ನ್ಯಾಯವಿಚಾರಣೆಗಾಗಿ ಕಳುಹಿಸಬೇಕಿತ್ತು. (ಅರಣ್ಯಕಾಂಡ 35:24, 25 ಓದಿ.) ಆ ಊರಿನ ಹಿರಿಯರು ಇದು ನಿಜವಾಗಲೂ ಆಕಸ್ಮಿಕವಾಗಿ ನಡೆದ ಘಟನೆ ಎಂದು ತೀರ್ಮಾನಿಸಿದ ನಂತರ ಅವನನ್ನು ಆಶ್ರಯನಗರಕ್ಕೆ ಹಿಂದೆ ಕಳುಹಿಸಬೇಕಿತ್ತು.

7 ಅವನು ಯಾಕೆ ಹಿರಿಯರ ಹತ್ತಿರ ಮಾತಾಡಲೇಬೇಕಿತ್ತು? ಇಸ್ರಾಯೇಲಿನ ಇಡೀ ಸಭೆಯನ್ನು ಶುದ್ಧವಾಗಿಡುವ ಜವಾಬ್ದಾರಿ ಹಿರಿಯರಿಗಿತ್ತು. ಮಾತ್ರವಲ್ಲ, ಆಕಸ್ಮಿಕವಾಗಿ ಒಬ್ಬನನ್ನು ಕೊಂದವನು ಯೆಹೋವನ ಕರುಣೆಯನ್ನು ಪಡೆದುಕೊಳ್ಳುವಂತೆ ಹಿರಿಯರು ಸಹಾಯ ಮಾಡಲು ಆಗುತ್ತಿತ್ತು. ಒಬ್ಬ ಬೈಬಲ್‌ ವಿದ್ವಾಂಸ ಹೇಳುವಂತೆ, ಆ ವ್ಯಕ್ತಿ ಹಿರಿಯರ ಹತ್ತಿರ ಹೋಗದಿದ್ದರೆ ತನ್ನ ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು. ಆಗ ಅವನ ಸಾವಿಗೆ ಅವನೇ ಹೊಣೆಗಾರನಾಗುತ್ತಿದ್ದನು, ಯಾಕೆಂದರೆ ಅವನು ದೇವರು ಹೇಳಿದಂತೆ ಮಾಡಿರಲಿಲ್ಲ ಎಂದೂ ಆ ವಿದ್ವಾಂಸ ಹೇಳಿದನು. ಅವನು ಜೀವ ಉಳಿಸಿಕೊಳ್ಳಬೇಕಾದರೆ ಹಿರಿಯರ ಸಹಾಯ ಪಡೆದುಕೊಳ್ಳಲೇಬೇಕಿತ್ತು. ಅವನು ಆಶ್ರಯನಗರಕ್ಕೆ ಓಡಿಹೋಗದಿದ್ದರೆ ಹತನಾದವನ ಹತ್ತಿರದ ಸಂಬಂಧಿಗೆ ಇವನನ್ನು ಕೊಲ್ಲುವ ಹಕ್ಕಿತ್ತು.

8, 9. ಗಂಭೀರ ಪಾಪ ಮಾಡಿದ ಕ್ರೈಸ್ತನೊಬ್ಬನು ಹಿರಿಯರ ಹತ್ತಿರ ಯಾಕೆ ಮಾತಾಡಬೇಕು?

8 ಇಂದು ಗಂಭೀರ ಪಾಪ ಮಾಡಿದ ಕ್ರೈಸ್ತನೊಬ್ಬನು ಹಿರಿಯರ ಹತ್ತಿರ ಮಾತಾಡಬೇಕು. ಅವನು ಪುನಃ ಯೆಹೋವನೊಂದಿಗೆ ಒಳ್ಳೇ ಸಂಬಂಧ ಬೆಸೆಯಲು ಅವರು ಸಹಾಯ ಮಾಡುತ್ತಾರೆ. ಹಿರಿಯರ ಹತ್ತಿರ ಮಾತಾಡುವುದು ಅಷ್ಟು ಪ್ರಾಮುಖ್ಯವೇಕೆ? ಒಂದನೇದಾಗಿ, ಗಂಭೀರ ಪಾಪಗಳ ಬಗ್ಗೆ ವಿಚಾರಣೆ ಮಾಡಲು ಹಿರಿಯರನ್ನು ಯೆಹೋವನೇ ಏರ್ಪಡಿಸಿದ್ದಾನೆ. (ಯಾಕೋ. 5:14-16) ಎರಡನೇದಾಗಿ, ಪಶ್ಚಾತ್ತಾಪಪಟ್ಟ ಪಾಪಿಗಳು ದೇವರ ಅಂಗೀಕಾರವನ್ನು ಪುನಃ ಪಡೆದುಕೊಳ್ಳಲು ಮತ್ತು ಅದೇ ಪಾಪವನ್ನು ಪುನಃ ಮಾಡದಿರಲು ಹಿರಿಯರು ಸಹಾಯ ಮಾಡುತ್ತಾರೆ. (ಗಲಾ. 6:1; ಇಬ್ರಿ. 12:11) ಮೂರನೇದಾಗಿ, ಪಶ್ಚಾತ್ತಾಪಪಟ್ಟ ಪಾಪಿಗಳಿಗೆ ಆಶ್ವಾಸನೆ ನೀಡುವ ಮತ್ತು ದುಃಖ, ಅಪರಾಧಿಭಾವದಿಂದ ಹೊರಬರಲು ಸಹಾಯ ಮಾಡುವ ಜವಾಬ್ದಾರಿ ಮತ್ತು ತರಬೇತಿ ಹಿರಿಯರಿಗೆ ಕೊಡಲಾಗಿದೆ. ಇಂಥ ಹಿರಿಯರನ್ನು ಯೆಹೋವನು “ಅತಿವೃಷ್ಟಿಯಲ್ಲಿ ಆವರಣ” ಅಥವಾ ಆಶ್ರಯ ಎಂದು ಕರೆದಿದ್ದಾನೆ. (ಯೆಶಾ. 32:1, 2) ಹಿರಿಯರ ಸಹಾಯ ಪಡೆಯುವ ಈ ಏರ್ಪಾಡಿನ ಮೂಲಕ ದೇವರು ನಮಗೆ ಕರುಣೆ ತೋರಿಸುತ್ತಿದ್ದಾನೆ.

9 ದೇವರ ಅನೇಕ ಸೇವಕರು ಹಿರಿಯರ ಹತ್ತಿರ ಮಾತಾಡಿ ಸಹಾಯ ಪಡೆದದ್ದರಿಂದ ಅವರಿಗೆ ನೆಮ್ಮದಿ ಸಿಕ್ಕಿದೆ. ಉದಾಹರಣೆಗೆ, ಡ್ಯಾನಿಯೆಲ್‌ ಎಂಬ ಸಹೋದರ ಗಂಭೀರವಾದ ಪಾಪ ಮಾಡಿದರು. ಆದರೆ ಎಷ್ಟೋ ತಿಂಗಳಾದರೂ ಅವರು ಹಿರಿಯರ ಹತ್ತಿರ ಅದರ ಬಗ್ಗೆ ಮಾತಾಡಿರಲಿಲ್ಲ. ಅವರು ಹೇಳುವುದು: “ಇಷ್ಟೊಂದು ಸಮಯ ದಾಟಿದ್ದರಿಂದ ಹಿರಿಯರು ನನಗೆ ಯಾವ ಸಹಾಯವನ್ನೂ ಮಾಡಲು ಆಗಲ್ಲ ಎಂದು ನೆನಸಿದೆ.” ಆದರೂ ಅವರ ಪಾಪವನ್ನು ಯಾರಾದರೂ ಕಂಡುಹಿಡಿದುಬಿಡುತ್ತಾರೆ ಎಂಬ ಭಯ ಅವರಿಗಿತ್ತು. ಅಷ್ಟೇ ಅಲ್ಲ, ಅವರು ಯೆಹೋವನ ಕ್ಷಮೆ ಕೇಳಿಯೇ ಪ್ರಾರ್ಥನೆ ಶುರುಮಾಡುತ್ತಿದ್ದರು. ಹೀಗೆಯೇ ಮಾಡಬೇಕು ಎಂದು ಅವರು ನೆನಸುತ್ತಿದ್ದರು. ಕೊನೆಗೊಂದು ದಿನ ಹಿರಿಯರ ಹತ್ತಿರ ಹೋಗಿ ಸಹಾಯ ಕೇಳಿದರು. ಅದರ ಬಗ್ಗೆ ಡ್ಯಾನಿಯೆಲ್‌ ಈಗ ಹೇಳುವುದು: “ಅವರ ಹತ್ತಿರ ಮಾತಾಡಲು ನನಗೆ ತುಂಬ ಭಯ ಇತ್ತು ನಿಜ. ಆದರೆ ಅವರ ಹತ್ತಿರ ಮಾತಾಡಿದ ಮೇಲೆ ನನ್ನ ಹೆಗಲ ಮೇಲಿದ್ದ ದೊಡ್ಡ ಭಾರವನ್ನು ಇಳಿಸಿದ ಹಾಗೆ ಅನಿಸಿತು.” ಡ್ಯಾನಿಯೆಲ್‌ ಯೆಹೋವನೊಂದಿಗೆ ಪುನಃ ಮುಕ್ತವಾಗಿ ಮಾತಾಡಲು ಸಾಧ್ಯವಾಗಿದೆ. ಈಗ ಶುದ್ಧ ಮನಸ್ಸಾಕ್ಷಿ ಇದೆ. ಇತ್ತೀಚೆಗೆ ಸಹಾಯಕ ಸೇವಕರಾಗಿಯೂ ನೇಮಕ ಪಡೆದರು.

ಅವನು ‘ಇಂಥ ಒಂದು ಪಟ್ಟಣಕ್ಕೆ ಓಡಿಹೋಗಬೇಕು’

10. ಆಕಸ್ಮಿಕವಾಗಿ ಒಬ್ಬರನ್ನು ಕೊಂದುಬಿಟ್ಟ ವ್ಯಕ್ತಿಗೆ ಕ್ಷಮೆ ಸಿಗಬೇಕಾದರೆ ಅವನು ಏನು ಮಾಡಬೇಕಿತ್ತು?

10 ಆಕಸ್ಮಿಕವಾಗಿ ಒಬ್ಬರನ್ನು ಕೊಂದುಬಿಟ್ಟ ವ್ಯಕ್ತಿಗೆ ಕ್ಷಮೆ ಸಿಗಬೇಕಾದರೆ ಅವನು ಹತ್ತಿರವಿದ್ದ ಆಶ್ರಯನಗರಕ್ಕೆ ಕೂಡಲೇ ಓಡಿಹೋಗಬೇಕಿತ್ತು. (ಯೆಹೋಶುವ 20:4 ಓದಿ.) ಅವನ ಜೀವ ಉಳಿಯಬೇಕಾದರೆ ಆ ನಗರವನ್ನು ಪ್ರವೇಶಿಸಿ, ಮಹಾಯಾಜಕ ತೀರಿಹೋಗುವ ತನಕ ಅಲ್ಲೇ ಇರಬೇಕಾಗಿತ್ತು. ಇದರಿಂದಾಗಿ ಅವನು ಕೆಲವು ವಿಷಯಗಳನ್ನು ತ್ಯಾಗ ಮಾಡಬೇಕಿತ್ತು. ತನ್ನ ಕೆಲಸವನ್ನು, ಸ್ವಂತ ಮನೆಯನ್ನು ಬಿಟ್ಟು ಇಲ್ಲಿ ಬದುಕಬೇಕಾಗಿತ್ತು. ಆ ನಗರ ಬಿಟ್ಟು ಬೇರೆಲ್ಲೂ ಓಡಾಡುವಂತಿರಲಿಲ್ಲ.a (ಅರ. 35:25) ಆದರೆ ಇದರಿಂದ ಅವನಿಗೆ ಪ್ರಯೋಜನವಿತ್ತು. ಆ ನಗರವನ್ನು ಬಿಟ್ಟು ಬೇರೆ ಕಡೆ ಹೋದರೆ, ತಾನು ಒಬ್ಬನನ್ನು ಕೊಂದಿರುವುದಕ್ಕೆ ಪಶ್ಚಾತ್ತಾಪವೇ ಇಲ್ಲ ಎಂದು ತೋರಿಸಿಕೊಟ್ಟಂತೆ ಆಗುತ್ತಿತ್ತು. ಅಷ್ಟೇ ಅಲ್ಲ, ತನ್ನ ಜೀವವನ್ನೇ ಅಪಾಯಕ್ಕೊಡ್ಡುತ್ತಿದ್ದನು.

11. ಪಶ್ಚಾತ್ತಾಪಪಟ್ಟ ಕ್ರೈಸ್ತನೊಬ್ಬ ದೇವರ ಕರುಣೆಗಾಗಿ ಹೇಗೆ ಕೃತಜ್ಞತೆ ತೋರಿಸಬಹುದು?

11 ಇಂದು, ಪಾಪಮಾಡಿ ಪಶ್ಚಾತ್ತಾಪಪಟ್ಟಿರುವ ವ್ಯಕ್ತಿಗೆ ದೇವರ ಕ್ಷಮೆ ಸಿಗಬೇಕಾದರೆ ಅವನು ಮಾಡುತ್ತಿದ್ದ ಪಾಪವನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು. ಇದರಲ್ಲಿ, ಮುಂದೆ ಗಂಭೀರ ಪಾಪಗಳಿಗೆ ನಡೆಸುವಂಥ ಯಾವುದೇ ವಿಷಯದಿಂದಲೂ ದೂರ ಇರುವುದು ಸೇರಿದೆ. ಕೊರಿಂಥ ಸಭೆಯಲ್ಲಿ ತಪ್ಪುಮಾಡಿ ಪಶ್ಚಾತ್ತಾಪಪಟ್ಟ ಕ್ರೈಸ್ತರು ಏನು ಮಾಡಿದರು ಎಂದು ಪೌಲ ಹೀಗೆ ವಿವರಿಸುತ್ತಾನೆ: “ನೀವು ದೈವಿಕ ರೀತಿಯಲ್ಲಿ ದುಃಖಪಟ್ಟದ್ದು ನಿಮ್ಮಲ್ಲಿ ಎಂಥ ಶ್ರದ್ಧೆಯನ್ನು ಉಂಟುಮಾಡಿದೆ ಎಂಬುದನ್ನು ನೋಡಿರಿ! ಹೌದು, ಅದು ನಿಮ್ಮಲ್ಲಿ ಶುದ್ಧೀಕರಣವನ್ನೂ ರೋಷವನ್ನೂ ಭಯವನ್ನೂ ಹಂಬಲವನ್ನೂ ಹುರುಪನ್ನೂ ತಪ್ಪನ್ನು ಸರಿಪಡಿಸಿಕೊಳ್ಳುವ ಅಪೇಕ್ಷೆಯನ್ನೂ ಉಂಟುಮಾಡಿದೆ.” (2 ಕೊರಿಂ. 7:10, 11) ಪಾಪ ಮಾಡುವುದನ್ನು ಬಿಟ್ಟುಬಿಡಲು ನಮ್ಮಿಂದಾದ ಎಲ್ಲವನ್ನೂ ಮಾಡುವುದಾದರೆ, ಪಾಪ ಮಾಡಿದ್ದೇವೆಂಬ ಅರಿವು ನಮಗಿದೆ ಮತ್ತು ‘ಯೆಹೋವನ ಕರುಣೆ ಹೇಗೂ ಸಿಗುತ್ತದಲ್ಲಾ’ ಎಂಬ ಮನೋಭಾವ ನಮಗಿಲ್ಲ ಎಂದು ಯೆಹೋವನಿಗೆ ತೋರಿಸಿಕೊಡುತ್ತೇವೆ.

12. ಯೆಹೋವನ ಕರುಣೆಯನ್ನು ಪಡೆದುಕೊಳ್ಳುತ್ತಾ ಇರಲು ಕ್ರೈಸ್ತನೊಬ್ಬನು ಯಾವ ವಿಷಯಗಳನ್ನು ಬಿಡಬೇಕಾಗಬಹುದು?

12 ಯೆಹೋವನ ಕರುಣೆಯನ್ನು ಪಡೆದುಕೊಳ್ಳುತ್ತಾ ಇರಲು ಕ್ರೈಸ್ತನೊಬ್ಬನು ಯಾವ ವಿಷಯಗಳನ್ನು ಬಿಡಬೇಕಾಗಬಹುದು? ಗಂಭೀರ ಪಾಪ ಮಾಡುವಂತೆ ಅವನನ್ನು ಪ್ರಚೋದಿಸುವಂಥ ವಿಷಯಗಳನ್ನು ಬಿಟ್ಟುಬಿಡಲು ಸಿದ್ಧನಿರಬೇಕು. ಅವು ಅವನಿಗೆ ಇಷ್ಟವಾದ ವಿಷಯಗಳಾಗಿದ್ದರೂ ಸರಿ ಅದನ್ನು ಬಿಟ್ಟುಬಿಡಬೇಕು. (ಮತ್ತಾ. 18:8, 9) ಉದಾಹರಣೆಗೆ, ಯೆಹೋವನಿಗೆ ಇಷ್ಟವಾಗದಂಥ ವಿಷಯಗಳನ್ನು ಮಾಡುವಂತೆ ನಿಮ್ಮ ಸ್ನೇಹಿತರು ಪ್ರೇರೇಪಿಸಿದರೆ ಅವರ ಸಹವಾಸವನ್ನು ಬಿಟ್ಟುಬಿಡುತ್ತೀರಾ? ಮದ್ಯ ಕುಡಿಯಲು ಕೂತುಕೊಂಡರೆ ನಿಲ್ಲಿಸಲಿಕ್ಕೆ ಆಗದ ಸಮಸ್ಯೆ ನಿಮಗಿರುವಲ್ಲಿ, ಮಿತಿಮೀರಿ ಕುಡಿಯುವಂತೆ ನಿಮ್ಮನ್ನು ಪ್ರಚೋದಿಸುವಂಥ ಸನ್ನಿವೇಶಗಳಿಂದ ದೂರ ಇರುತ್ತೀರಾ? ಅನೈತಿಕ ಆಸೆಗಳನ್ನು ಹಿಡಿತದಲ್ಲಿಡಲು ಕಷ್ಟವಾದರೆ, ಕೆಟ್ಟ ಯೋಚನೆಗಳನ್ನು ಹುಟ್ಟಿಸುವಂಥ ಚಲನಚಿತ್ರ, ವೆಬ್‌ಸೈಟ್‌ ಅಥವಾ ಇನ್ನಿತರ ವಿಷಯಗಳಿಂದ ದೂರ ಇರುತ್ತೀರಾ? ನೆನಪಿಡಿ, ಯೆಹೋವನ ನಿಯಮಗಳಿಗೆ ವಿಧೇಯತೆ ತೋರಿಸಲು ನಾವೇನೇ ತ್ಯಾಗ ಮಾಡಿದರೂ ಅದು ವ್ಯರ್ಥವಲ್ಲ. ಯೆಹೋವನು ನಮ್ಮನ್ನು ತೊರೆದುಬಿಟ್ಟಿದ್ದಾನೆ ಎಂದು ಕಾಡುವ ಭಾವನೆಗಿಂತ ಕೆಟ್ಟದಾದ ಭಾವನೆ ಬೇರೊಂದಿಲ್ಲ. ಇನ್ನೊಂದು ಕಡೆ, ಯೆಹೋವನ “ಶಾಶ್ವತಕೃಪೆ” ನಮ್ಮ ಮೇಲಿದೆ ಎಂಬ ಭಾವನೆಗಿಂತ ಉತ್ತಮವಾದ ಭಾವನೆ ಬೇರೊಂದಿಲ್ಲ.—ಯೆಶಾ. 54:7, 8.

“ಅವು ನಿಮಗೆ ಆಶ್ರಯಸ್ಥಾನಗಳಾಗುವವು”

13. ಆಕಸ್ಮಿಕವಾಗಿ ಒಬ್ಬನನ್ನು ಕೊಂದುಬಿಟ್ಟವನಿಗೆ ಆಶ್ರಯನಗರದೊಳಗೆ ಸಂರಕ್ಷಣೆ, ಭದ್ರತೆ, ಸಂತೋಷ ಇರಲು ಕಾರಣವೇನೆಂದು ವಿವರಿಸಿ.

13 ಆಕಸ್ಮಿಕವಾಗಿ ಒಬ್ಬನನ್ನು ಕೊಂದುಬಿಟ್ಟವನು ಆಶ್ರಯನಗರದ ಒಳಗೆ ಹೋದ ಮೇಲೆ ಸುರಕ್ಷಿತವಾಗಿರುತ್ತಾನೆ. ಆ ನಗರಗಳ ಬಗ್ಗೆ ಯೆಹೋವನು ಹೇಳಿದ್ದು: “ಅವು ನಿಮಗೆ ಆಶ್ರಯಸ್ಥಾನಗಳಾಗುವವು.” (ಯೆಹೋ. 20:2, 3) ಆಕಸ್ಮಿಕವಾಗಿ ನಡೆದ ಆ ಹತ್ಯೆಗಾಗಿ ಪುನಃ ನ್ಯಾಯವಿಚಾರಣೆ ನಡೆಸಬೇಕೆಂದು ಯೆಹೋವನು ಅವಶ್ಯಪಡಿಸಲಿಲ್ಲ. ಮುಯ್ಯಿತೀರಿಸುವ ಹಂಗುಳ್ಳ ಸಮೀಪಬಂಧು ಆ ವ್ಯಕ್ತಿಯನ್ನು ಕೊಲ್ಲಲಿಕ್ಕಾಗಿ ಆ ನಗರವನ್ನು ಪ್ರವೇಶಿಸುವ ಅನುಮತಿಯೂ ಇರಲಿಲ್ಲ. ಹಾಗಾಗಿ ಆಕಸ್ಮಿಕವಾಗಿ ಒಬ್ಬನನ್ನು ಕೊಂದುಬಿಟ್ಟವನು ಆಶ್ರಯನಗರದೊಳಗೆ ಇದ್ದರೆ ಅವನು ಯೆಹೋವನ ಸಂರಕ್ಷಣೆಯಲ್ಲಿದ್ದಾನೆ ಎಂದರ್ಥ. ಆಶ್ರಯನಗರ ಅವನಿಗೆ ಜೈಲು ಆಗಿರಲಿಲ್ಲ. ಯಾಕೆಂದರೆ ಅವನು ಅಲ್ಲಿ ಕೆಲಸ ಮಾಡಬಹುದಿತ್ತು, ಬೇರೆಯವರಿಗೆ ಸಹಾಯ ಮಾಡಬಹುದಿತ್ತು ಮತ್ತು ಯೆಹೋವನನ್ನು ಶಾಂತಿ-ಸಮಾಧಾನದಿಂದ ಆರಾಧಿಸಬಹುದಿತ್ತು. ಅಲ್ಲಿ ಅವನು ಸಂತೋಷ-ಸಂತೃಪ್ತಿಯಿಂದ ಜೀವನ ನಡೆಸಬಹುದಿತ್ತು!

ಒಬ್ಬ ಸಹೋದರಿ ಪ್ರಾರ್ಥಿಸುತ್ತಾಳೆ, ದೃಢಭರವಸೆಯಿಂದ ಮುಂದೆ ನೋಡುತ್ತಾಳೆ, ನಂತರ ಇನ್ನೊಬ್ಬ ಸಹೋದರಿಯೊಂದಿಗೆ ಸೇರಿ ಕ್ಷೇತ್ರ ಸೇವೆ ಮಾಡುತ್ತಾಳೆ

ಯೆಹೋವನು ನಿಮ್ಮನ್ನು ಕ್ಷಮಿಸುತ್ತಾನೆಂದು ಭರವಸೆಯಿಡಿ (ಪ್ಯಾರ 14-16 ನೋಡಿ)

14. ಪಶ್ಚಾತ್ತಾಪಪಟ್ಟ ಕ್ರೈಸ್ತನು ಯಾವ ವಿಷಯದ ಬಗ್ಗೆ ಭರವಸೆಯಿಂದಿರಬಹುದು?

14 ದೇವಜನರಲ್ಲಿ ಕೆಲವರು ಗಂಭೀರ ಪಾಪಮಾಡಿ ಪಶ್ಚಾತ್ತಾಪಪಟ್ಟ ಮೇಲೆಯೂ ಕೊರಗುತ್ತಾ ಇರುತ್ತಾರೆ. ಅವರು ಮಾಡಿದ ತಪ್ಪನ್ನು ಯೆಹೋವನು ಯಾವತ್ತೂ ಮರೆಯಲ್ಲ ಎಂಬ ಭಾವನೆಯೂ ಇರುತ್ತದೆ. ನಿಮಗೆ ಹೀಗನಿಸುವುದಾದರೆ, ಯೆಹೋವನು ನಮ್ಮ ತಪ್ಪುಗಳನ್ನು ಸಂಪೂರ್ಣವಾಗಿ ಕ್ಷಮಿಸುತ್ತಾನೆ ಎನ್ನುವುದನ್ನು ದಯವಿಟ್ಟು ಮನಸ್ಸಿನಲ್ಲಿಡಿ. ಯೆಹೋವನು ಕ್ಷಮಿಸಿದ ಮೇಲೆ ನೀವು ಮಾಡಿದ ತಪ್ಪಿಗಾಗಿ ಕೊರಗುತ್ತಾ ಇರಬೇಕಾಗಿಲ್ಲ. ಈ ಮೊದಲೇ ತಿಳಿಸಿದ ಡ್ಯಾನಿಯೆಲ್‌ಗೆ ಹೀಗೇ ಆಯಿತು. ಹಿರಿಯರು ಅವರನ್ನು ತಿದ್ದಿ, ಶುದ್ಧ ಮನಸ್ಸಾಕ್ಷಿ ಪಡೆದುಕೊಳ್ಳಲು ಸಹಾಯ ಮಾಡಿದ ಮೇಲೆ ಡ್ಯಾನಿಯೆಲ್‌ಗೆ ತುಂಬ ನೆಮ್ಮದಿ ಅನಿಸಿತು. ಅವರು ಹೇಳುವುದು: “ಇನ್ನು ಮುಂದೆ ನಾನು ಕೊರಗುವ ಅಗತ್ಯವಿರಲಿಲ್ಲ. ಒಮ್ಮೆ ಆ ಪಾಪವನ್ನು ಅಳಿಸಿಹಾಕಲಾಗಿದೆಯೆಂದರೆ ಅದರರ್ಥ ಅದು ಪೂರ್ತಿ ಅಳಿದುಹೋಗಿದೆ. ಯೆಹೋವನು ಹೇಳಿದಂತೆ ನಿಮ್ಮ ಮೇಲಿರುವ ಹೊರೆಯನ್ನು ತೆಗೆದು ದೂರ ಎಸೆದುಬಿಡುತ್ತಾನೆ. ಅದು ಯಾವತ್ತೂ ನಿಮಗೆ ಕಾಣಿಸುವುದಿಲ್ಲ.” ಆಕಸ್ಮಿಕವಾಗಿ ಒಬ್ಬರನ್ನು ಕೊಂದ ವ್ಯಕ್ತಿ ಆಶ್ರಯನಗರವನ್ನು ಸೇರಿದ ಮೇಲೆ ಮುಯ್ಯಿತೀರಿಸುವ ಹಂಗುಳ್ಳ ಸಮೀಪಬಂಧು ತನ್ನನ್ನು ಕೊಲ್ಲುತ್ತಾನೆ ಎಂದು ಭಯಪಡಬೇಕಾಗಿರಲಿಲ್ಲ. ಅದೇ ರೀತಿ ಯೆಹೋವನು ನಮ್ಮ ಪಾಪವನ್ನು ಕ್ಷಮಿಸಿದ ಮೇಲೆ ಅದನ್ನು ಪುನಃ ಕೆದಕುವನು ಅಥವಾ ಅದಕ್ಕಾಗಿ ನಮ್ಮನ್ನು ಶಿಕ್ಷಿಸುವನು ಎಂದು ನಾವು ಭಯಪಡಬೇಕಾಗಿಲ್ಲ.—ಕೀರ್ತನೆ 103:8-12 ಓದಿ.

15, 16. ನಾವು ಏಕೆ ಯೆಹೋವನ ಕರುಣೆಯಲ್ಲಿ ಭರವಸೆ ಇಡಬಹುದು?

15 ನಮಗೆ ಯೆಹೋವನ ಕರುಣೆಯಲ್ಲಿ ಭರವಸೆ ಇಡಲು ಇಸ್ರಾಯೇಲ್ಯರಿಗೆ ಇದ್ದಂಥ ಕಾರಣಗಳಿಗಿಂತ ಹೆಚ್ಚಿನ ಕಾರಣಗಳಿವೆ. ಪೌಲನು ಯೆಹೋವನಿಗೆ ಪರಿಪೂರ್ಣವಾದ ವಿಧೇಯತೆ ತೋರಿಸಲು ಆಗದಿದ್ದ ಕಾರಣ ತಾನು “ದುರವಸ್ಥೆಯಲ್ಲಿ” ಇದ್ದೇನೆಂದು ಹೇಳಿದನು. ಅದರ ನಂತರ ಅವನು ಹೇಳಿದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.” (ರೋಮ. 7:25, ಸತ್ಯವೇದ ಭಾಷಾಂತರ) ಅವನ ಮಾತಿನ ಅರ್ಥವೇನಾಗಿತ್ತು? ಅವನು ತನ್ನ ಪಾಪಪೂರ್ಣ ಆಸೆಗಳ ವಿರುದ್ಧ ಹೋರಾಡುತ್ತಿದ್ದನು ಮತ್ತು ಹಿಂದೆ ಮಾಡಿದ ಪಾಪಕ್ಕಾಗಿ ಪಶ್ಚಾತ್ತಾಪಪಟ್ಟಿದ್ದನು. ಆದ್ದರಿಂದ ಯೇಸುವಿನ ವಿಮೋಚನಾ ಯಜ್ಞದ ಆಧಾರದ ಮೇಲೆ ಯೆಹೋವನು ತನ್ನನ್ನು ಕ್ಷಮಿಸಿದ್ದಾನೆಂದು ಅವನು ನಂಬಿದನು. ಯೇಸು ವಿಮೋಚನಾ ಮೌಲ್ಯವನ್ನು ಕೊಟ್ಟದ್ದರಿಂದ ನಮಗೆ ಶುದ್ಧ ಮನಸ್ಸಾಕ್ಷಿ ಇದೆ, ಮನಸ್ಸಿಗೆ ನೆಮ್ಮದಿ ಇದೆ. (ಇಬ್ರಿ. 4:15, 16) ಯೇಸು ನಮ್ಮ ಮಹಾ ಯಾಜಕನಾಗಿ “ತನ್ನ ಮೂಲಕ ದೇವರ ಸಮೀಪಕ್ಕೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೂ ಶಕ್ತನಾಗಿದ್ದಾನೆ; ಏಕೆಂದರೆ ಅವರಿಗೋಸ್ಕರ ಬೇಡಿಕೊಳ್ಳಲು ಅವನು ಯಾವಾಗಲೂ ಜೀವದಿಂದ ಇರುತ್ತಾನೆ.” (ಇಬ್ರಿ. 7:24, 25) ಹಿಂದೆ, ಇಸ್ರಾಯೇಲ್ಯರ ಪಾಪಗಳನ್ನು ಯೆಹೋವನು ಕ್ಷಮಿಸುವನೆಂದು ಭರವಸೆಯಿಡಲು ಅವರಿಗೆ ಮಹಾಯಾಜಕ ಸಹಾಯ ಮಾಡಿದನು. ಇಂದು ಯೇಸು ನಮ್ಮ ಮಹಾ ಯಾಜಕನಾಗಿರುವುದರಿಂದ ‘ನಮಗೆ ಕರುಣೆ ಮತ್ತು ಅಪಾತ್ರ ದಯೆಯಿಂದ ಸಮಯೋಚಿತವಾದ ಸಹಾಯ’ ಸಿಗುವುದೆಂಬ ನಿಶ್ಚಯ ಇರಲು ಹೆಚ್ಚಿನ ಕಾರಣಗಳಿವೆ.—ಇಬ್ರಿ. 4:15, 16.

16 ಯೆಹೋವನಲ್ಲಿ ಆಶ್ರಯ ಸಿಗಬೇಕಾದರೆ ಯೇಸುವಿನ ಯಜ್ಞದಲ್ಲಿ ನಮಗೆ ನಂಬಿಕೆ ಇರಬೇಕು. ವಿಮೋಚನಾ ಮೌಲ್ಯದಿಂದ ಎಲ್ಲರಿಗೂ ಪ್ರಯೋಜನ ಸಿಗುತ್ತದೆ ಎಂದು ಮಾತ್ರ ನೆನಸದೆ ವೈಯಕ್ತಿಕವಾಗಿ ನಿಮಗೆ ಅದರಿಂದ ಪ್ರಯೋಜನ ಇದೆಯೆಂದು ನಂಬಿ. (ಗಲಾ. 2:20, 21) ವಿಮೋಚನಾ ಮೌಲ್ಯದ ಆಧಾರದ ಮೇಲೆ ಯೆಹೋವನು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ ಎಂದೂ ನಂಬಿಕೆ ಇಡಿ. ಸದಾಕಾಲ ಜೀವಿಸುವ ನಿರೀಕ್ಷೆಯನ್ನು ವಿಮೋಚನಾ ಮೌಲ್ಯ ನಿಮಗೆ ಕೊಡುತ್ತದೆ ಎಂದು ಭರವಸೆ ಇಡಿ. ಯೇಸುವಿನ ಯಜ್ಞ ಯೆಹೋವನು ನಿಮಗೆ ಕೊಟ್ಟಿರುವ ಒಂದು ಉಡುಗೊರೆ ಆಗಿದೆ!

17. ನೀವು ಯೆಹೋವನಲ್ಲಿ ಆಶ್ರಯ ಪಡೆಯಲು ಯಾಕೆ ಬಯಸುತ್ತೀರಿ?

17 ಆಶ್ರಯನಗರದ ಏರ್ಪಾಡು ನಮಗೆ ಯೆಹೋವನ ಕರುಣೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೀವ ಪವಿತ್ರವಾಗಿದೆ ಎಂದು ಕಲಿಸುತ್ತದೆ. ಅಷ್ಟೇ ಅಲ್ಲ, ಹಿರಿಯರು ನಮಗೆ ಹೇಗೆ ಸಹಾಯ ಮಾಡುತ್ತಾರೆ, ನಿಜವಾಗಿ ಪಶ್ಚಾತ್ತಾಪಪಡುವುದರ ಅರ್ಥ ಏನು, ಯೆಹೋವನು ಸಂಪೂರ್ಣವಾಗಿ ನಮ್ಮನ್ನು ಕ್ಷಮಿಸುತ್ತಾನೆ ಎಂದು ಯಾಕೆ ಪೂರ್ಣ ಭರವಸೆಯಿಂದ ಇರಬಹುದು ಎಂದು ತೋರಿಸಿಕೊಡುತ್ತದೆ. ನೀವು ಯೆಹೋವನಲ್ಲಿ ಆಶ್ರಯ ಪಡೆದುಕೊಂಡಿದ್ದೀರಾ? ಇದಕ್ಕಿಂತ ಹೆಚ್ಚಿನ ಸಂರಕ್ಷಣೆ ಬೇರೆಲ್ಲೂ ಸಿಗಲ್ಲ! (ಕೀರ್ತ. 91:1, 2) ಮುಂದಿನ ಲೇಖನದಲ್ಲಿ, ನ್ಯಾಯ ಮತ್ತು ಕರುಣೆ ತೋರಿಸುವುದರಲ್ಲಿ ಅತ್ಯುತ್ತಮ ಮಾದರಿ ಇಟ್ಟಿರುವ ಯೆಹೋವನನ್ನು ಅನುಕರಿಸಲು ಆಶ್ರಯನಗರಗಳ ಈ ಏರ್ಪಾಡು ನಮಗೆ ಹೇಗೆ ಸಹಾಯ ಮಾಡುತ್ತದೆ ಎಂದು ನೋಡಲಿದ್ದೇವೆ.

a ಆಕಸ್ಮಿಕವಾಗಿ ಒಬ್ಬರನ್ನು ಕೊಂದುಬಿಟ್ಟ ವ್ಯಕ್ತಿಯ ಕುಟುಂಬ ಅವನಿರುವ ಆಶ್ರಯನಗರಕ್ಕೆ ಬಂದು ಅವನ ಜೊತೆ ವಾಸಿಸುತ್ತಿದ್ದಿರಬೇಕು ಎನ್ನುತ್ತಾರೆ ಯೆಹೂದಿ ವಿದ್ವಾಂಸರು.

ಪಾಠಗಳಿವೆಯಾ? ಸೂಚಕರೂಪಗಳಿವೆಯಾ?

ಸೆಪ್ಟೆಂಬರ್‌ 1, 1895​ರ ಕಾವಲಿನ ಬುರುಜು (ಇಂಗ್ಲಿಷ್‌) ಆಶ್ರಯನಗರಗಳಿಗೆ ಸಾಂಕೇತಿಕ ಅರ್ಥವಿದೆ ಎಂದು ವಿವರಿಸಿತ್ತು. ಆಶ್ರಯನಗರಗಳು “ಒಬ್ಬ ಪಾಪಿಗೆ ಕ್ರಿಸ್ತನಲ್ಲಿ ಸಿಗುವ ಆಶ್ರಯವನ್ನು” ಪ್ರತಿನಿಧಿಸುತ್ತವೆ ಎಂದು ಆ ಸಂಚಿಕೆ ಹೇಳಿತ್ತು. ಒಬ್ಬ ವ್ಯಕ್ತಿ ಯೇಸುವಿನಲ್ಲಿ ನಂಬಿಕೆ ಇಟ್ಟರೆ ಅವನಿಗೆ ಸಂರಕ್ಷಣೆ ಸಿಗುತ್ತದೆ ಎಂದೂ ಹೇಳಿತ್ತು. ನೂರು ವರ್ಷಗಳ ನಂತರ ಕಾವಲಿನಬುರುಜು ಪತ್ರಿಕೆ ಹೇಳಿದ್ದು: “ಇಂದಿನ ಆಶ್ರಯನಗರವು, ರಕ್ತದ ಪಾವಿತ್ರ್ಯದ ಕುರಿತಾದ ದೇವರ ಆಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಮ್ಮನ್ನು ಮರಣದಿಂದ ರಕ್ಷಿಸಲಿಕ್ಕಾಗಿರುವ ದೇವರ ಮುನ್ನೇರ್ಪಾಡಾಗಿದೆ.”

ಆದರೆ ಮಾರ್ಚ್‌ 15, 2015​ರ ಕಾವಲಿನಬುರುಜುವಿನಲ್ಲಿ, ಸೂಚಕ ಮತ್ತು ಸೂಚಕರೂಪಗಳ ಅಂದರೆ ಬೈಬಲ್‌ ವೃತ್ತಾಂತಗಳಿಗಿರುವ ಸಾಂಕೇತಿಕ ಅರ್ಥಗಳ ಬಗ್ಗೆ ಇತ್ತೀಚೆಗೆ ನಮ್ಮ ಪ್ರಕಾಶನಗಳಲ್ಲಿ ಯಾಕೆ ಹೆಚ್ಚಾಗಿ ಕೊಡಲಾಗುವುದಿಲ್ಲ ಎಂದು ವಿವರಿಸಲಾಗಿತ್ತು. ಅದು ಹೇಳಿದ್ದೇನೆಂದರೆ: “ಒಂದು ಘಟನೆ, ವಸ್ತು ಅಥವಾ ವ್ಯಕ್ತಿ ಭವಿಷ್ಯದಲ್ಲಿ ಬರಲಿರುವ ಯಾವುದೊ ದೊಡ್ಡ ವಿಷಯವೊಂದನ್ನು ಪ್ರತಿನಿಧಿಸುತ್ತದೆ ಎಂದು ಬೈಬಲ್‌ ಕಲಿಸುವುದಾದರೆ ಮಾತ್ರ ಆ ವಿವರಣೆಯನ್ನು ಒಪ್ಪಬೇಕು. ಶಾಸ್ತ್ರಾಧಾರವೇ ಇಲ್ಲದಿರುವಾಗ ನಾವು ಯಾವುದೇ ಬೈಬಲ್‌ ವೃತ್ತಾಂತಗಳಿಗೆ ಸಾಂಕೇತಿಕ ಅರ್ಥ ಕೊಡಬಾರದು.” ಆಶ್ರಯನಗರಗಳು ಭವಿಷ್ಯತ್ತಿನಲ್ಲಿ ನೆರವೇರುವ ಯಾವುದೋ ವಿಷಯವನ್ನು ಪ್ರತಿನಿಧಿಸುತ್ತವೆ ಎಂದು ಬೈಬಲ್‌ ಹೇಳುವುದಿಲ್ಲ. ಹಾಗಾಗಿ ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ಈ ನಗರಗಳ ಏರ್ಪಾಡಿನಿಂದ ಕ್ರೈಸ್ತರು ಕಲಿಯುವ ಪಾಠಗಳಿಗೆ ಗಮನ ಕೊಡಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ