-
ಯೆಹೋವನನ್ನು ನಿಮ್ಮ ಭರವಸವನ್ನಾಗಿ ಮಾಡಿಕೊಳ್ಳಿರಿಕಾವಲಿನಬುರುಜು—2003 | ಸೆಪ್ಟೆಂಬರ್ 1
-
-
ಯೆಹೋವನು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?
10, 11. (ಎ) ರೋಮಾಪುರ 8:19-22ಕ್ಕನುಸಾರ, ‘ಜಗತ್ತಿಗೆಲ್ಲಾ’ ಏನು ಸಂಭವಿಸಿತು? (ಬಿ) ಜಗತ್ತನ್ನು ವ್ಯರ್ಥತ್ವಕ್ಕೆ ಒಳಪಡಿಸಿದ್ದು ಯಾರು ಎಂಬುದನ್ನು ನಾವು ಹೇಗೆ ನಿರ್ಧರಿಸಬಲ್ಲೆವು?
10 ಅಪೊಸ್ತಲ ಪೌಲನು ರೋಮಾಪುರದವರಿಗೆ ಬರೆದ ಪತ್ರದ ಒಂದು ಭಾಗವು ಈ ಪ್ರಾಮುಖ್ಯ ವಿಚಾರದ ಮೇಲೆ ಬೆಳಕು ಬೀರುತ್ತದೆ. ಪೌಲನು ಬರೆದುದು: “ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಜಗತ್ತು ಬಹು ಲವಲವಿಕೆಯಿಂದ ಎದುರು ನೋಡುತ್ತಿರುವದು. ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ. ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆಂದು ನಾವು ಬಲ್ಲೆವು.”—ರೋಮಾಪುರ 8:19-22.
11 ಈ ವಚನಗಳ ತಿರುಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ನಾವು ಪ್ರಥಮವಾಗಿ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ. ಉದಾಹರಣೆಗೆ, ಜಗತ್ತು ವ್ಯರ್ಥತ್ವಕ್ಕೆ ಒಳಗಾದದ್ದು ಹೇಗೆ? ಕೆಲವರು ಇದಕ್ಕೆ ಕಾರಣನು ಸೈತಾನನೆನ್ನುವಾಗ, ಇತರರು ಆದಾಮನಿಗೆ ಸೂಚಿಸುತ್ತಾರೆ. ಆದರೆ ಇದನ್ನು ಈ ಇಬ್ಬರಿಂದಲೂ ಮಾಡಲು ಸಾಧ್ಯವಿದ್ದಿರಲಿಕ್ಕಿಲ್ಲ. ಯಾಕೆ ಸಾಧ್ಯವಿಲ್ಲ? ಏಕೆಂದರೆ ಜಗತ್ತನ್ನು ವ್ಯರ್ಥತ್ವಕ್ಕೆ ಒಳಪಡಿಸುವವನು “ಅದಕ್ಕೊಂದು ನಿರೀಕ್ಷೆ”ಯನ್ನಿಟ್ಟು ಹಾಗೆ ಮಾಡುತ್ತಾನೆ. ಹೌದು, ನಂಬಿಗಸ್ತ ವ್ಯಕ್ತಿಗಳು ಕಾಲಕ್ರಮೇಣ “ನಾಶದ ವಶದಿಂದ ಬಿಡುಗಡೆ”ಯಾಗುವರು ಎಂಬ ನಿರೀಕ್ಷೆಯನ್ನು ಆತನು ಕೊಡುತ್ತಾನೆ. ಆದಾಮನಿಗಾಗಲಿ ಸೈತಾನನಿಗಾಗಲಿ ಈ ನಿರೀಕ್ಷೆಯನ್ನು ಕೊಡಲು ಸಾಧ್ಯವಿರುವುದಿಲ್ಲ. ಕೇವಲ ಯೆಹೋವನಿಂದ ಮಾತ್ರ ಸಾಧ್ಯ. ಹಾಗಾದರೆ, ಆತನೇ ಜಗತ್ತನ್ನು ವ್ಯರ್ಥತ್ವಕ್ಕೆ ಒಳಪಡಿಸಿದನೆಂಬುದು ಸ್ಪಷ್ಟ.
12. “ಜಗತ್ತೆಲ್ಲಾ” ಎಂಬ ಅಭಿವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಯಾವ ಗಲಿಬಿಲಿಯು ಉಂಟಾಗಿದೆ, ಮತ್ತು ಈ ಪ್ರಶ್ನೆಯು ಹೇಗೆ ಉತ್ತರಿಸಲ್ಪಡಬಹುದು?
12 ಆದರೆ ಈ ಶಾಸ್ತ್ರಭಾಗದಲ್ಲಿ ಸೂಚಿಸಲ್ಪಟ್ಟಿರುವ “ಜಗತ್ತೆಲ್ಲಾ” ಏನನ್ನು ಸೂಚಿಸುತ್ತದೆ? ಇದು ಪ್ರಾಣಿಗಳನ್ನು ಮತ್ತು ವೃಕ್ಷಗಳನ್ನು ಒಳಗೊಂಡ ಇಡೀ ನೈಸರ್ಗಿಕ ಲೋಕಕ್ಕೆ ಸೂಚಿಸುತ್ತದೆಂದು ಕೆಲವರು ಹೇಳುತ್ತಾರೆ. ಆದರೆ ಮೃಗಗಳು ಮತ್ತು ವೃಕ್ಷಗಳು “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಪಾಲುಹೊಂದುವ ನಿರೀಕ್ಷೆಯುಳ್ಳವುಗಳಾಗಿವೆಯೋ? ಇಲ್ಲ. (2 ಪೇತ್ರ 2:12) ಹೀಗೆ “ಜಗತ್ತೆಲ್ಲಾ” ಎಂಬುದು ಮಾನವಕುಲಕ್ಕೆ ಮಾತ್ರ ಅನ್ವಯಿಸಬಲ್ಲದು. ಈ ಜಗತ್ತೇ, ಏದೆನಿನಲ್ಲಿ ನಡೆದ ದಂಗೆಯ ಕಾರಣ ಪಾಪ ಮರಣಗಳ ಹಿಡಿತದಲ್ಲಿ ಸಿಕ್ಕಿ ನರಳಾಡುತ್ತಿದೆ ಮತ್ತು ಒಂದು ನಿರೀಕ್ಷೆಯ ತೀವ್ರ ಅಗತ್ಯತೆಯಲ್ಲಿದೆ.—ರೋಮಾಪುರ 5:12.
13. ಏದೆನಿನಲ್ಲಾದ ದಂಗೆಯು ಮಾನವಕುಲಕ್ಕೆ ಏನು ಮಾಡಿತು?
13 ಆ ದಂಗೆಯು ಮಾನವಕುಲಕ್ಕೆ ನಿಜವಾಗಿಯೂ ಏನನ್ನು ತಂದಿತು? ಪೌಲನು ಅದರ ಪರಿಣಾಮಗಳನ್ನು ಒಂದೇ ಶಬ್ದದಲ್ಲಿ ವರ್ಣಿಸುತ್ತಾನೆ: ವ್ಯರ್ಥತ್ವ.a ಒಂದು ಕೃತಿಗನುಸಾರ, ಈ ಶಬ್ದವು “ಯೋಜಿಸಲ್ಪಟ್ಟಿದ್ದ ವಿನ್ಯಾಸದ ಪ್ರಕಾರ ಕ್ರಿಯೆಗೈಯದ ಒಂದು ವಸ್ತುವಿನ ವ್ಯರ್ಥತೆಯನ್ನು” ವರ್ಣಿಸುತ್ತದೆ. ಮಾನವರು ಸದಾಕಾಲ ಜೀವಿಸಲು ಮತ್ತು ಒಂದು ಪರದೈಸ್ ಭೂಮಿಯ ಆರೈಕೆಮಾಡುವುದರಲ್ಲಿ ಒಂದು ಪರಿಪೂರ್ಣವಾದ ಐಕ್ಯ ಕುಟುಂಬವಾಗಿ ಒಟ್ಟಿಗೆ ಕೆಲಸಮಾಡಲು ವಿನ್ಯಾಸಿಸಲ್ಪಟ್ಟರು. ಆದರೆ ಅವರು ಅಲ್ಪಾವಧಿಯ, ವೇದನಾಮಯ, ಮತ್ತು ಅನೇಕಾವರ್ತಿ ನಿರೀಕ್ಷಾಹೀನ ಜೀವನವನ್ನು ನಡೆಸುತ್ತಾರೆ. ಯೋಬನು ತಿಳಿಸಿದಂತೆ, “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ” ಇದ್ದಾನೆ. (ಯೋಬ 14:1) ನಿಶ್ಚಯವಾಗಿಯೂ ವ್ಯರ್ಥತ್ವವೇ!
14, 15. (ಎ) ಮಾನವಕುಲದ ಮೇಲೆ ಯೆಹೋವನು ವಿಧಿಸಿದ ದಂಡನೆಯಲ್ಲಿ ನ್ಯಾಯದ ಯಾವ ರುಜುವಾತನ್ನು ನಾವು ಕಂಡುಕೊಳ್ಳುತ್ತೇವೆ? (ಬಿ) ಜಗತ್ತು ವ್ಯರ್ಥತ್ವಕ್ಕೆ ಒಳಪಡಿಸಲ್ಪಟ್ಟದ್ದು ಅದರ “ಸ್ವೇಚ್ಛೆಯಿಂದಲ್ಲ” ಎಂಬುದನ್ನು ಪೌಲನು ಏಕೆ ಹೇಳುತ್ತಾನೆ?
14 ಈಗ ನಾವು ಮುಖ್ಯ ಪ್ರಶ್ನೆಗೆ ಬರುತ್ತೇವೆ: “ಸರ್ವಲೋಕಕ್ಕೆ ನ್ಯಾಯತೀರಿಸುವವನು” ಮಾನವಕುಲವನ್ನು ಈ ಯಾತನಾಮಯ, ಆಶಾಭಂಗಗೊಳಿಸುವ ಪರಿಸ್ಥಿತಿಗೆ ಯಾಕೆ ಒಳಪಡಿಸಿದನು? (ಆದಿಕಾಂಡ 18:25) ಆತನು ಹೀಗೆ ಮಾಡುವುದು ನ್ಯಾಯವಾಗಿತ್ತೋ? ನಮ್ಮ ಮೊದಲ ಹೆತ್ತವರು ಏನು ಮಾಡಿದರೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿ. ದೇವರ ವಿರುದ್ಧವಾಗಿ ದಂಗೆಯೇಳುವ ಮೂಲಕ, ಯೆಹೋವನ ಪರಮಾಧಿಕಾರಕ್ಕೆ ಒಂದು ವ್ಯಾಪಕವಾದ ಸವಾಲನ್ನೊಡ್ಡಿದ ಸೈತಾನನ ಪಕ್ಷವನ್ನು ಅವರು ವಹಿಸಿದರು. ಯೆಹೋವನಿಲ್ಲದೆಯೇ ಒಬ್ಬ ದಂಗೆಕೋರ ಆತ್ಮಜೀವಿಯ ಮಾರ್ಗದರ್ಶನದ ಕೆಳಗೆ ತನ್ನನ್ನೇ ನಡೆಸಿಕೊಳ್ಳುತ್ತಾ ಮಾನವನು ಸುಖವಾಗಿರಬಲ್ಲನು ಎಂಬ ಪ್ರತಿಪಾದನೆಯನ್ನು ಅವರು ತಮ್ಮ ಕೃತ್ಯಗಳ ಮೂಲಕ ಸಮರ್ಥಿಸಿದರು. ಆ ದಂಗೆಕೋರರಿಗೆ ಶಿಕ್ಷೆಯನ್ನು ವಿಧಿಸುವ ಮೂಲಕ ಯೆಹೋವನು ಕಾರ್ಯತಃ ಆ ದಂಗೆಕೋರರು ಏನನ್ನು ಪಡೆದುಕೊಳ್ಳಲು ಇಷ್ಟಪಟ್ಟರೋ ಅದನ್ನೇ ಕೊಟ್ಟನು. ಸೈತಾನನ ಪ್ರಭಾವದ ಕೆಳಗೆ ಮಾನವನು ತನ್ನನ್ನೇ ನಡಿಸಿಕೊಳ್ಳುವ ಅನುಮತಿಯನ್ನು ಆತನು ಕೊಟ್ಟನು. ಈ ಪರಿಸ್ಥಿತಿಗಳ ಕೆಳಗೆ, ಮಾನವಕುಲಕ್ಕೆ ಒಂದು ನಿರೀಕ್ಷೆಯನ್ನು ಕೊಡುತ್ತಾ ಅದನ್ನು ವ್ಯರ್ಥತ್ವಕ್ಕೆ ಒಳಪಡಿಸುವುದಕ್ಕಿಂತ ನ್ಯಾಯೋಚಿತವಾದ ತೀರ್ಮಾನವು ಯಾವುದಿದ್ದೀತು?
15 ವಾಸ್ತವದಲ್ಲಿ, ಇದು ಸಂಭವಿಸಿದ್ದು ಜಗತ್ತಿನ “ಸ್ವೇಚ್ಛೆಯಿಂದಲ್ಲ.” ಏಕೆಂದರೆ ನಾವು ಯಾವುದೇ ಆಯ್ಕೆಯಿಲ್ಲದವರಾಗಿ ಪಾಪ ಮರಣಗಳ ದಾಸತ್ವದಲ್ಲಿ ಜನಿಸುತ್ತೇವೆ. ಆದರೆ ಯೆಹೋವನು ಕರುಣೆಯಿಂದ ಆದಾಮಹವ್ವರು ತಮ್ಮ ಜೀವಿತದ ಉಳಿದ ವರ್ಷಗಳನ್ನು ಜೀವಿಸುವಂತೆ ಮತ್ತು ಸಂತಾನವನ್ನು ಉತ್ಪತ್ತಿಸುವಂತೆ ಅನುಮತಿಸಿದನು. ಅವರ ವಂಶಸ್ಥರಾಗಿರುವ ನಾವು ಪಾಪ ಮತ್ತು ಮರಣಗಳ ವ್ಯರ್ಥತ್ವಕ್ಕೆ ಒಳಪಡಿಸಲ್ಪಟ್ಟಿರುವುದಾದರೂ, ಆದಾಮಹವ್ವರು ಯಾವುದನ್ನು ಮಾಡಲು ತಪ್ಪಿಹೋದರೋ ಅದನ್ನು ಮಾಡುವ ಅವಕಾಶ ನಮ್ಮ ಮುಂದೆ ಇದೆ. ನಾವು ಯೆಹೋವನಿಗೆ ಕಿವಿಗೊಡಬಲ್ಲೆವು ಮತ್ತು ಆತನ ಪರಮಾಧಿಕಾರವು ನೀತಿಯುಳ್ಳದ್ದೂ ಪರಿಪೂರ್ಣವಾದದ್ದೂ ಆಗಿದೆ, ಆದರೆ ಯೆಹೋವನಿಂದ ವಿಮುಕ್ತವಾದ ಮಾನವಾಳಿಕೆಯು ನೋವು, ನಿರಾಶೆ, ಮತ್ತು ವ್ಯರ್ಥತ್ವವನ್ನು ಬಿಟ್ಟರೆ ಬೇರೆ ಯಾವುದನ್ನೂ ಕೊಡದು ಎಂಬುದನ್ನು ಕಲಿಯಬಲ್ಲೆವು. (ಯೆರೆಮೀಯ 10:23; ಪ್ರಕಟನೆ 4:11) ಮತ್ತು ಸೈತಾನನ ಪ್ರಭಾವವು ಕೇವಲ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಸತ್ಯವೆಂದು ಮಾನವ ಇತಿಹಾಸವು ರುಜುಪಡಿಸುತ್ತದೆ.—ಪ್ರಸಂಗಿ 8:9.
16. (ಎ) ನಾವು ಇಂದು ಲೋಕದಲ್ಲಿ ನೋಡುತ್ತಿರುವ ಕಷ್ಟಾನುಭವಕ್ಕೆ ಯೆಹೋವನು ಕಾರಣನಲ್ಲ ಎಂಬುದರ ವಿಷಯದಲ್ಲಿ ನಾವು ಏಕೆ ನಿಶ್ಚಿತರಾಗಿರಸಾಧ್ಯವಿದೆ? (ಬಿ) ನಂಬಿಗಸ್ತ ಜನರಿಗೆ ಯಾವ ನಿರೀಕ್ಷೆಯನ್ನು ಯೆಹೋವನು ಪ್ರೀತಿಯಿಂದ ಏರ್ಪಡಿಸಿದ್ದಾನೆ?
16 ಮಾನವಕುಲವನ್ನು ವ್ಯರ್ಥತ್ವಕ್ಕೆ ಒಳಪಡಿಸಲು ಯೆಹೋವನಿಗೆ ನ್ಯಾಯವಾದ ಕಾರಣಗಳಿದ್ದವು ಎಂಬುದು ಸ್ಪಷ್ಟ. ಆದರೆ ಇದು, ಇಂದು ನಮ್ಮೆಲ್ಲರನ್ನೂ ಬಾಧಿಸುತ್ತಿರುವ ವ್ಯರ್ಥತ್ವ ಮತ್ತು ಕಷ್ಟಾನುಭವಕ್ಕೆ ಯೆಹೋವನೇ ಕಾರಣನು ಎಂಬುದನ್ನು ಅರ್ಥೈಸುತ್ತದೋ? ಒಬ್ಬ ಅಪರಾಧಿಯ ಮೇಲೆ ನ್ಯಾಯವಾದ ತೀರ್ಪನ್ನು ವಿಧಿಸುವಂಥ ಒಬ್ಬ ನ್ಯಾಯಾಧೀಶನ ಕುರಿತು ಯೋಚಿಸಿರಿ. ತನ್ನ ಶಿಕ್ಷೆಯ ಅವಧಿಯಲ್ಲಿ ಖೈದಿಯು ಬಹಳ ಕಷ್ಟವನ್ನು ಅನುಭವಿಸಬಹುದು, ಆದರೆ ತನ್ನ ಕಷ್ಟಾನುಭವಕ್ಕೆ ನ್ಯಾಯಾಧೀಶನೇ ಕಾರಣನು ಎಂದು ಅವನು ಹೇಳುವುದು ನ್ಯಾಯೋಚಿತವಾಗಿರುವುದೋ? ಖಂಡಿತವಾಗಿಯೂ ಇಲ್ಲ! ಮಾತ್ರವಲ್ಲದೆ, ಯೆಹೋವನು ಎಂದಿಗೂ ದುಷ್ಟತ್ವಕ್ಕೆ ಮೂಲನಾಗಿರುವುದಿಲ್ಲ. “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ,” ಎಂದು ಯಾಕೋಬ 1:13 ಹೇಳುತ್ತದೆ. ಯೆಹೋವನು ಈ ದಂಡನೆಯನ್ನು ವಿಧಿಸುವಾಗ ‘ಒಂದು ನಿರೀಕ್ಷೆಯನ್ನು’ ಆಧಾರವಾಗಿಟ್ಟುಕೊಂಡು ಹಾಗೆ ಮಾಡಿದನು ಎಂಬುದನ್ನೂ ಮರೆಯದಿರೋಣ. ಆದಾಮಹವ್ವರ ನಂಬಿಗಸ್ತ ವಂಶಸ್ಥರು ವ್ಯರ್ಥತ್ವದ ಅಂತ್ಯವನ್ನು ಕಾಣುವಂತೆಯೂ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಆನಂದಿಸುವಂತೆಯೂ ಆತನು ಪ್ರೀತಿಯಿಂದ ಏರ್ಪಾಡುಗಳನ್ನು ಮಾಡಿದ್ದಾನೆ. ಯುಗಯುಗಾಂತರಗಳಿಗೂ ಇಡೀ ಜಗತ್ತು ಪುನಃ ಒಮ್ಮೆ ವ್ಯರ್ಥತ್ವವೆಂಬ ಯಾತನಾಮಯ ಸ್ಥಿತಿಗಿಳಿಯಬಹುದು ಎಂದು ನಂಬಿಗಸ್ತ ಮಾನವರು ಚಿಂತಿಸಬೇಕಾಗಿರುವುದಿಲ್ಲ. ಈ ಸನ್ನಿವೇಶದ ಯೆಹೋವನ ನ್ಯಾಯವಾದ ನಿರ್ವಹಣೆಯು, ಎಲ್ಲಾ ಕಾಲಕ್ಕೂ ಆತನ ಪರಮಾಧಿಕಾರದ ನ್ಯಾಯೋಚಿತತೆಯನ್ನು ಸ್ಥಾಪಿಸಿರುವುದು.—ಯೆಶಾಯ 25:8.
-