ಅವರು ಯೆಹೋವನ ಚಿತ್ತವನ್ನು ಮಾಡಿದರು
ಬುದ್ಧಿವಂತ ಸ್ತ್ರೀಯೊಬ್ಬಳು ಅನಾಹುತವನ್ನು ವಿಮುಖಗೊಳಿಸುತ್ತಾಳೆ
ಕೆಲಸಕ್ಕೆ ಬಾರದ ವ್ಯಕ್ತಿಯೊಬ್ಬನನ್ನು ವಿವಾಹವಾಗಿರುವ ವಿವೇಕವುಳ್ಳ ಸ್ತ್ರೀ—ಇದು ಅಬೀಗೈಲ್ ಮತ್ತು ನಾಬಾಲರ ಪರಿಸ್ಥಿತಿಯಾಗಿತ್ತು. ಅಬೀಗೈಲ್ “ಬಹುಬುದ್ಧಿವಂತೆಯೂ ಸುಂದರಿಯೂ ಆಗಿದ್ದಳು.” ತದ್ವಿರುದ್ಧವಾಗಿ, ನಾಬಾಲನು “ನಿಷ್ಠುರನೂ ದುಷ್ಕರ್ಮಿಯೂ ಆಗಿದ್ದನು.” (1 ಸಮುವೇಲ 25:3) ಈ ಅನುಚಿತ ಜೋಡಿಯನ್ನೊಳಗೊಂಡಿದ್ದು, ಅನಾವರಣಗೊಂಡ ಘಟನೆಗಳು, ಅವರ ಹೆಸರುಗಳನ್ನು ಬೈಬಲ್ ಇತಿಹಾಸದಲ್ಲಿ ಅಳಿಸಲಾಗದ ವಿಧದಲ್ಲಿ ಅಚ್ಚೊತ್ತಿದವು. ಅದು ಹೇಗಾಯಿತೆಂದು ನಾವು ನೋಡೋಣ.
ಉಪೇಕ್ಷಿಸಲ್ಪಟ್ಟ ಒಂದು ಮಹೋಪಕಾರ
ಅದು ಸಾ.ಶ.ಪೂ. 11ನೆಯ ಶತಮಾನವಾಗಿತ್ತು. ದಾವೀದನು ಇಸ್ರಾಯೇಲಿನ ಭಾವಿ ಅರಸನಾಗಿ ಅಭಿಷೇಕಿಸಲ್ಪಟ್ಟಿದ್ದನಾದರೂ, ಆಳುವುದನ್ನು ಬಿಟ್ಟು ಅವನು ಪಲಾಯನ ಮಾಡುತ್ತಿದ್ದನು. ಆಳುತ್ತಿರುವ ಅರಸನಾದ ಸೌಲನು, ಅವನನ್ನು ಕೊಲ್ಲುವ ದೃಢನಿರ್ಧಾರ ಮಾಡಿದ್ದನು. ಪರಿಣಾಮಸ್ವರೂಪವಾಗಿ, ದಾವೀದನು ಒಬ್ಬ ದೇಶಭ್ರಷ್ಟನಂತೆ ಜೀವಿಸುವ ನಿರ್ಬಂಧಕ್ಕೊಳಗಾಗಿದ್ದನು. ಅವನು ಮತ್ತು ಸುಮಾರು 600 ಸಂಗಡಿಗರು ಕಟ್ಟಕಡೆಗೆ, ಯೆಹೂದದ ದಕ್ಷಿಣಕ್ಕೆ ಮತ್ತು ಸೀನಾಯಿಯ ಅರಣ್ಯದ ಕಡೆಗೆ, ಪಾರಾನ್ ಅರಣ್ಯದಲ್ಲಿ ಆಶ್ರಯವನ್ನು ಕಂಡುಕೊಂಡರು.—1 ಸಮುವೇಲ 23:13; 25:1.
ಅಲ್ಲಿದ್ದಾಗ, ನಾಬಾಲ ಎಂಬ ಹೆಸರಿನ ಮನುಷ್ಯನಿಂದ ಕೆಲಸಕ್ಕಿಟ್ಟುಕೊಂಡಿದ್ದ ಕುರುಬರನ್ನು ಅವರು ಸಂಧಿಸಿದರು. ಕಾಲೇಬನ ಈ ಶ್ರೀಮಂತ ವಂಶಸ್ಥನಲ್ಲಿ 3,000 ಕುರಿಗಳು ಮತ್ತು 1,000 ಆಡುಗಳಿದ್ದವು, ಮತ್ತು ಅವನು ಕರ್ಮೆಲಿನಲ್ಲಿ—ಹೆಬ್ರೋನ್ನ ದಕ್ಷಿಣದಲ್ಲಿ ಮತ್ತು ಬಹುಶಃ ಪಾರಾನ್ನಿಂದ 40 ಕಿಲೊಮೀಟರುಗಳಷ್ಟು ದೂರದಲ್ಲಿ ಮಾತ್ರ ಇದ್ದ ಒಂದು ನಗರದಲ್ಲಿ—ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸಿದನು.a ದಾವೀದನು ಮತ್ತು ಅವನ ಸಂಗಡಿಗರು, ನಾಬಾಲನ ಕುರುಬರಿಗೆ, ಅರಣ್ಯದಾದ್ಯಂತ ಅಲೆದಾಡುತ್ತಿದ್ದ ಕಳ್ಳರ ವಿರುದ್ಧ ತಮ್ಮ ಹಿಂಡುಗಳನ್ನು ರಕ್ಷಿಸಲು ಸಹಾಯ ಮಾಡಿದರು.—1 ಸಮುವೇಲ 25:14-16.
ಈ ನಡುವೆ, ಕರ್ಮೆಲಿನಲ್ಲಿ ಕುರಿಗಳ ಉಣ್ಣೆಕತ್ತರಿಸುವಿಕೆಯು ತೊಡಗಿತ್ತು. ಇದು, ರೈತನಿಗೆ ಕೊಯ್ಲಿನ ಸಮಯವು ಹೇಗೋ, ಹಾಗೆಯೇ ಒಂದು ಉತ್ಸವದ ಸಂದರ್ಭವಾಗಿತ್ತು. ಅದು ಬಹುಧಾರಾಳವಾಗಿ ಕೊಡುವ ಸಮಯವೂ ಆಗಿತ್ತು. ಆ ಸಮಯದಲ್ಲಿ, ಕುರಿಗಳ ಒಡೆಯರು ತಮಗಾಗಿ ಕೆಲಸಮಾಡಿದ್ದವರಿಗೆ ಪ್ರತಿಫಲ ನೀಡುತ್ತಿದ್ದರು. ಆದುದರಿಂದ ದಾವೀದನು, ನಾಬಾಲನ ಹಿಂಡುಗಳ ಪರವಾಗಿ ತಾವು ಮಾಡಿದ್ದ ಸೇವೆಗೆ ಪ್ರತಿಫಲವಾಗಿ, ಅವನಲ್ಲಿ ಆಹಾರವನ್ನು ಕೇಳುವಂತೆ ಕರ್ಮೆಲ್ ನಗರಕ್ಕೆ ಹತ್ತು ಪುರುಷರನ್ನು ಕಳುಹಿಸಿದಾಗ, ಉದ್ಧಟನಾಗಿರಲಿಲ್ಲ.—1 ಸಮುವೇಲ 25:4-9.
ನಾಬಾಲನ ಪ್ರತಿಕ್ರಿಯೆಯು ಉದಾರತೆಯನ್ನು ಪ್ರದರ್ಶಿಸಲೇ ಇಲ್ಲ. “ದಾವೀದನಾರು” ಎಂದು ಅವನು ವ್ಯಂಗ್ಯವಾಗಿ ಕೇಳಿದನು. ಅನಂತರ, ದಾವೀದನು ಮತ್ತು ಅವನ ಸಂಗಡಿಗರು ಓಡಿಹೋದ ಸೇವಕರಿಗಿಂತ ಹೆಚ್ಚಾಗಿರಲಿಲ್ಲವೆಂದು ಸೂಚಿಸುತ್ತಾ, ಅವನು ಕೇಳಿದ್ದು: “ಉಣ್ಣೆಕತ್ತರಿಸುವವರಿಗೋಸ್ಕರ ನಾನು ಸಿದ್ಧಮಾಡಿಸಿದ ಮಾಂಸವನ್ನೂ ಆಹಾರಪಾನಗಳನ್ನೂ ಎತ್ತಿ ಎಲ್ಲಿಂದಲೋ ಬಂದವರಿಗೆ ಕೊಟ್ಟುಬಿಡಬೇಕೋ”? ದಾವೀದನು ಇದರ ಬಗ್ಗೆ ಕೇಳಿದಾಗ, ತನ್ನ ಸಂಗಡಿಗರಿಗೆ ಹೇಳಿದ್ದು: “ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಳ್ಳಿರಿ.” ಸುಮಾರು 400 ಪುರುಷರು ಹೋರಾಟಕ್ಕಾಗಿ ತಮ್ಮನ್ನು ಸಿದ್ಧಪಡಿಸಿಕೊಂಡರು.—1 ಸಮುವೇಲ 25:10-13.
ಅಬೀಗೈಲಳ ವಿವೇಚನೆ
ನಾಬಾಲನ ನಿಂದಾತ್ಮಕ ಮಾತುಗಳು, ಅವನ ಹೆಂಡತಿಯಾದ ಅಬೀಗೈಲಳ ಗಮನಕ್ಕೆ ಬಂದವು. ಅವಳು ಮಧ್ಯಸ್ಥಿಕೆ ವಹಿಸಿ, ನಾಬಾಲನಿಗಾಗಿ ಶಾಂತಿ ಕರ್ತಳಾಗಿ ಕಾರ್ಯನಡೆಸಬೇಕಾದದ್ದು ಬಹುಶಃ ಇದು ಪ್ರಥಮ ಬಾರಿಯಾಗಿರಲಿಲ್ಲ. ವಿಷಯವು ಏನೇ ಆಗಿರಲಿ, ಅಬೀಗೈಲಳು ತತ್ಕ್ಷಣ ಕಾರ್ಯವೆಸಗಿದಳು. ನಾಬಾಲನಿಗೆ ಹೇಳದೆ, ಅವಳು ಆಹಾರದ ಸರಬರಾಯಿಗಳನ್ನು—ಐದು ಕುರಿಗಳನ್ನೊಳಗೊಂಡು, ಯಥೇಷ್ಟವಾದ ಆಹಾರವನ್ನು—ಒಟ್ಟುಸೇರಿಸಿ, ಅರಣ್ಯದಲ್ಲಿ ದಾವೀದನನ್ನು ಭೇಟಿಯಾಗಲು ಹೊರಟಳು.—1 ಸಮುವೇಲ 25:18-20.
ಅಬೀಗೈಲಳು ದಾವೀದನನ್ನು ಕಂಡ ಕೂಡಲೇ, ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು. “ಸ್ವಾಮಿಯು ಮೂರ್ಖನಾದ ಆ ನಾಬಾಲನನ್ನು ಲಕ್ಷಿಸದಿರಲಿ,” ಎಂದು ಅವಳು ದಾವೀದನಲ್ಲಿ ಬೇಡಿಕೊಂಡಳು. “ನಿನ್ನ ದಾಸಿಯು ತಂದ ಈ ಕಾಣಿಕೆಯು ಸ್ವಾಮಿಯ ಸೇವಕರಿಗೆ ಸಲ್ಲಲಿ.” ಆಕೆ ಕೂಡಿಸಿ ಹೇಳಿದ್ದು: “ಇದು [ನಾಬಾಲನ ಸಂಬಂಧದಲ್ಲಿನ ಸನ್ನಿವೇಶವು] ನಿನ್ನನ್ನು ಸ್ಥೈರ್ಯಗೆಡಿಸುವ ಕಾರಣವಾಗದಿರಲಿ ಇಲ್ಲವೆ ನನ್ನ ಕರ್ತನ ಹೃದಯಕ್ಕೆ ಮುಗ್ಗರಿಸುವ ತಡೆಯನ್ನುಂಟುಮಾಡದಿರಲಿ” (NW). “ಸ್ಥೈರ್ಯಗೆಡಿಸು” ಎಂಬುದಾಗಿ ಇಲ್ಲಿ ಭಾಷಾಂತರಿಸಲ್ಪಟ್ಟ ಹೀಬ್ರು ಪದವು, ಮನಸ್ಸಾಕ್ಷಿಯ ಅಸಮಾಧಾನಗಳನ್ನು ಸೂಚಿಸುತ್ತದೆ. ಆದುದರಿಂದ, ತಾನು ತದನಂತರ ವಿಷಾದಪಡಲಿದ್ದ, ಅವಸರದ ಕ್ರಿಯೆಯನ್ನು ಗೈಯುವುದರ ವಿರುದ್ಧ ಅಬೀಗೈಲಳು ದಾವೀದನನ್ನು ಎಚ್ಚರಿಸಿದಳು.—1 ಸಮುವೇಲ 25:23-31.
ದಾವೀದನು ಅಬೀಗೈಲಳ ಮಾತಿಗೆ ಕಿವಿಗೊಟ್ಟನು. “ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸ್ತೋತ್ರಾರ್ಹವೇ ಸರಿ” ಎಂದು ಅವನು ಅವಳಿಗೆ ಹೇಳಿದನು. “ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದಿದ್ದರೆ ನಿಜವಾಗಿ ನಾಳೆ ಬೆಳಗಾಗುವಷ್ಟರಲ್ಲಿ ನಾಬಾಲನವರಲ್ಲಿ ಒಬ್ಬ ಗಂಡಸಾದರೂb ಉಳಿಯುತ್ತಿದ್ದಿಲ್ಲ.”—1 ಸಮುವೇಲ 25:32-34.
ನಮಗಾಗಿರುವ ಪಾಠಗಳು
ಈ ಬೈಬಲ್ ವೃತ್ತಾಂತವು ತೋರಿಸುವುದೇನೆಂದರೆ, ಅಗತ್ಯವಿದ್ದಲ್ಲಿ ದಿವ್ಯಭಕ್ತಿಯ ಸ್ತ್ರೀಯೊಬ್ಬಳು ಸೂಕ್ತವಾದ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವುದಾದರೆ, ಅದು ಖಂಡಿತವಾಗಿಯೂ ತಪ್ಪಾಗಿರುವುದಿಲ್ಲ. ಅಬೀಗೈಲಳು ತನ್ನ ಗಂಡನಾದ ನಾಬಾಲನ ಇಚ್ಛೆಗಳಿಗೆ ವಿರುದ್ಧವಾಗಿ ನಡೆದುಕೊಂಡಳಾದರೂ, ಬೈಬಲು ಇದಕ್ಕಾಗಿ ಅವಳನ್ನು ಖಂಡಿಸುವುದಿಲ್ಲ. ತದ್ವಿರುದ್ಧವಾಗಿ, ಅದು ಅವಳನ್ನು ವಿವೇಚನೆ ಹಾಗೂ ವಿವೇಕವುಳ್ಳ ಸ್ತ್ರೀಯಾಗಿ ಪ್ರಶಂಸಿಸುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ, ಅಬೀಗೈಲಳು ಅನೇಕ ಜೀವಗಳನ್ನು ಉಳಿಸಿದಳು.
ಸಾಮಾನ್ಯವಾಗಿ ಹೆಂಡತಿಯೊಬ್ಬಳು ದೈವಿಕ ಅಧೀನತೆಯ ಮನೋವೃತ್ತಿಯನ್ನು ಪ್ರದರ್ಶಿಸಬೇಕಾಗಿದ್ದರೂ, ಯೋಗ್ಯವಾದ ಮೂಲತತ್ವಗಳು ಗಂಡಾಂತರದಲ್ಲಿ ಸಿಕ್ಕಿಕೊಂಡಿರುವಾಗ, ಅವಳು ತನ್ನ ಗಂಡನೊಂದಿಗೆ ಯೋಗ್ಯವಾಗಿ ಅಸಮ್ಮತಿಸಬಹುದು. ನಿಶ್ಚಯವಾಗಿಯೂ, ಅವಳು ‘ಸಾತ್ವಿಕವಾದ ಶಾಂತಮನಸ್ಸನ್ನು’ ಕಾಪಾಡಿಕೊಳ್ಳಲು ಪ್ರಯಾಸಪಡಬೇಕು ಮತ್ತು ಕೇವಲ ಸೇಡು, ಹೆಮ್ಮೆ, ಇಲ್ಲವೆ ದಂಗೆಕೋರತನದಿಂದಾಗಿ ಸ್ವತಂತ್ರವಾಗಿ ವರ್ತಿಸಬಾರದು. (1 ಪೇತ್ರ 3:4) ಆದಾಗಲೂ, ಅತ್ಯಂತ ಅವಿವೇಕದ ಇಲ್ಲವೆ ಬೈಬಲ್ ಮೂಲತತ್ವಗಳನ್ನು ಉಲ್ಲಂಘಿಸುತ್ತದೆಂದು ತನಗೆ ಗೊತ್ತಿರುವ ಯಾವುದೇ ಕೆಲಸವನ್ನು ಮಾಡುವಂತೆ, ಒಬ್ಬ ದಿವ್ಯಭಕ್ತಿಯ ಹೆಂಡತಿಗೆ ಒತ್ತಾಯಿಸಲ್ಪಡುವ ಅನಿಸಿಕೆಯಾಗಬಾರದು. ನಿಜವಾಗಿಯೂ, ಬೈಬಲು ಸ್ತ್ರೀಯರನ್ನು ಕೇವಲ ಗುಲಾಮರನ್ನಾಗಿ ಚಿತ್ರಿಸುತ್ತದೆಂದು ಪಟ್ಟುಹಿಡಿಯುವವರ ವಿರುದ್ಧ, ಅಬೀಗೈಲಳ ವೃತ್ತಾಂತವು ಒಂದು ಬಲವಾದ ವಾದವನ್ನು ನೀಡುತ್ತದೆ.
ಈ ವೃತ್ತಾಂತವು ನಮಗೆ ಆತ್ಮನಿಯಂತ್ರಣದ ಬಗ್ಗೆಯೂ ಕಲಿಸುತ್ತದೆ. ಕೆಲವೊಮ್ಮೆ ದಾವೀದನು ಈ ಗುಣವನ್ನು ಬಹಳವಾಗಿ ಪ್ರದರ್ಶಿಸಿದನು. ಉದಾಹರಣೆಗೆ, ಬದ್ಧವೈರಿಯಾಗಿದ್ದ ರಾಜ ಸೌಲನನ್ನು ಕೊಲ್ಲುವ ಅವಕಾಶ ದಾವೀದನಿಗೆ ಸಾಕಷ್ಟಿದ್ದರೂ ಮತ್ತು ಸೌಲನ ಮರಣವು ಅವನಿಗೆ ಶಾಂತಿಯನ್ನು ತರಲಿದ್ದರೂ, ದಾವೀದನು ಹಾಗೆ ಮಾಡಲು ನಿರಾಕರಿಸಿದನು. (1 ಸಮುವೇಲ 24:2-7) ತದ್ವಿರುದ್ಧವಾಗಿ, ನಾಬಾಲನು ದಾವೀದನನ್ನು ಅವಮಾನಕರವಾಗಿ ಧಿಕ್ಕರಿಸಿದಾಗ, ಅವನು ಅನಿರೀಕ್ಷಿತವಾಗಿ ಸಿಟ್ಟಿಗೆದ್ದು, ಪ್ರತೀಕಾರದ ಪ್ರತಿಜ್ಞೆಮಾಡಿದನು. ಇದು, “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡ”ದಿರಲು ಪ್ರಯಾಸಪಡುವ ಕ್ರೈಸ್ತರಿಗೆ ಸ್ಪಷ್ಟವಾದ ಎಚ್ಚರಿಕೆಯಾಗಿದೆ. ಎಲ್ಲ ಸಂದರ್ಭಗಳಲ್ಲಿ, ಅವರು ಪೌಲನ ಬುದ್ಧಿವಾದವನ್ನು ಅನುಸರಿಸಬೇಕು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ.”—ರೋಮಾಪುರ 12:17-19.
[ಅಧ್ಯಯನ ಪ್ರಶ್ನೆಗಳು]
a ಪಾರಾನ್ನ ಅರಣ್ಯವು ಬೇರ್ಷೆಬದಷ್ಟು ಉತ್ತರಕ್ಕೆ ವಿಸ್ತರಿಸುತ್ತದೆಂದು ತಿಳಿದುಕೊಳ್ಳಲಾಗುತ್ತದೆ. ಭೂಮಿಯ ಈ ಭಾಗದಲ್ಲಿ ಗಣನೀಯವಾದ ಹುಲ್ಲುಗಾವಲಿನ ನೆಲವು ಸೇರಿತ್ತು.
b ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಇಲ್ಲಿ, “ಗೋಡೆಯ ಮೇಲೆ ಮೂತ್ರ ಮಾಡುವ ಒಬ್ಬನಾದರೂ” ಎಂಬ ವಾಕ್ಸರಣಿಯನ್ನು ಉಪಯೋಗಿಸುತ್ತದೆ. ಅದು ಪುರುಷರಿಗಾಗಿ ಉಪಯೋಗಿಸಲ್ಪಡುವ ಒಂದು ಹೀಬ್ರು ನುಡಿಗಟ್ಟಾಗಿದ್ದು, ಅವಹೇಳನದ ಒಂದು ಅಭಿವ್ಯಕ್ತಿಯೆಂಬುದು ಸ್ಪಷ್ಟ.—1 ಅರಸುಗಳು 14:10ನ್ನು ಹೋಲಿಸಿರಿ.
[ಪುಟ 15 ರಲ್ಲಿರುವ ಚಿತ್ರ]
ಅಬೀಗೈಲಳು ದಾವೀದನಿಗೆ ಕೊಡುಗೆಗಳನ್ನು ತರುತ್ತಾಳೆ