ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 6/1 ಪು. 16-20
  • ಮೇಲಧಿಕಾರಿಗಳ ಪಾತ್ರವು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇಲಧಿಕಾರಿಗಳ ಪಾತ್ರವು
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಜ ಕ್ರೈಸ್ತರು ‘ಅಧಿಕಾರವನ್ನು ವಿರೋಧಿಸುವುದಿಲ್ಲ’
  • ನಿಯಮಕ್ಕೆ ವಿಧೇಯರಾಗುವುದು
  • ಭಯದ ಒಬ್ಬ ವ್ಯಕ್ತಿ
  • “ಅವನು ದೇವರ ಸೇವಕನು”
  • ನಂಬಿಕೆಯ ಅಗತ್ಯ
  • ರಾಜ್ಯವು ಸಹಾಯ ಮಾಡದೆ ಇರುವಾಗ
  • ಅಧಿಕಾರದ ಕುರಿತ ಕ್ರೈಸ್ತ ನೋಟ
    ಕಾವಲಿನಬುರುಜು—1994
  • ಮೇಲಧಿಕಾರಿಗಳ ವಿಷಯದಲ್ಲಿ ಕ್ರೈಸ್ತನ ನೋಟ
    ಕಾವಲಿನಬುರುಜು—1991
  • ನೀವು ಯಾರ ಅಧಿಕಾರವನ್ನು ಒಪ್ಪಿಕೊಳ್ಳಬೇಕು?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಅಧಿಕಾರಕ್ಕೆ ಗೌರವ—ಏಕೆ ಪ್ರಾಮುಖ್ಯ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಕಾವಲಿನಬುರುಜು—1991
w91 6/1 ಪು. 16-20

ಮೇಲಧಿಕಾರಿಗಳ ಪಾತ್ರವು

“ಅವನು ನಿನ್ನ ಹಿತಕ್ಕಾಗಿ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು.”—ರೋಮಾಪುರ 13:4.

1, 2. ಕ್ರೈಸ್ತ ಪ್ರಪಂಚದ ಅನೇಕರು ಹೇಗೆ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಒಳಗೂಡುತ್ತಾರೆ?

ಎರಡು ವರ್ಷಗಳ ಹಿಂದೆ ಲಂಡನಿನಲ್ಲಿ ಬಿಶಪರುಗಳ ಒಂದು ಒಕ್ಕೂಟವು ನ್ಯೂ ಯೋರ್ಕ್‌ ಪೋಸ್ಟ್‌ನಲ್ಲಿ ಒಂದು ರೋಷದ ಸಂಪಾದಕೀಯವನ್ನು ಉದ್ರೇಕಿಸಿತ್ತು. ಆ ಒಕ್ಕೂಟವು ಲ್ಯಾಂಬೆತ್‌ ಸಂಮೇಳನವಾಗಿತ್ತು, ಆಂಗ್ಲಿಕನ್‌ ಧರ್ಮಪಂಗಡದ 500ಕ್ಕಿಂತಲೂ ಹೆಚ್ಚು ಬಿಶಪರುಗಳು ಅಲ್ಲಿ ಹಾಜರಿದ್ದರು. “ಬೇರೆಲ್ಲಾ ವಿಧಾನಗಳು ಬರಿದಾದ ಮೇಲೆ, ಶಸ್ತ್ರಹೋರಾಟದ ವಿಧಾನವೊಂದೇ ನ್ಯಾಯಸಮ್ಮತ ಮಾರ್ಗವಾಗಿ ಆರಿಸಿಕೊಳ್ಳುವ” ಜನರನ್ನು ಅರ್ಥೈಸಿಕೊಳ್ಳುವ ವ್ಯಕ್ತ ಪಡಿಸುವಿಕೆಯು ಆ ಸಂಮೇಳನದಿಂದ ಮಂಜೂರಾದ ಠರಾವಿನಿಂದ, ಈ ಕೋಪವು ಉದ್ರೇಕಿಸಲ್ಪಡುವಂತಾಯಿತು.

2 ಇದು, ಸಾಕ್ಷತ್‌ ಭಯವಾದಕ್ಕೆ ಅನುಮೋದನೆ ಎಂಬದಾಗಿ ಪೋಸ್ಟ್‌ ಹೇಳಿತು. ಆದರೂ, ಬಿಶಪರುಗಳು ಕೇವಲ ಒಂದು ಬೆಳೆಯುತ್ತಾ ಇರುವ ಪ್ರವೃತ್ತಿಯನ್ನು ಹಿಂಬಾಲಿಸಿದವರಾಗಿದ್ದರು. ಅವರ ಮನೋಭಾವವು, ಆಫ್ರಿಕಾವನ್ನು ಮುಕ್ತಗೊಳಿಸಲು ಗೆರಿಲ್ಲಾ ಹೋರಾಟವೇ ಒಂದು ತೀವ್ರವಾದ, ಖಂಡಿತವಾದ ಮತ್ತು ಸುರಕ್ಷಿತ ಮಾರ್ಗವೆಂದು ಶಿಫಾರಸು ಮಾಡಿದ ಘಾನದ ಕಥೋಲಿಕ ಪಾದ್ರಿಗಿಂತ, ಅಥವಾ “ಮುಕ್ತತೆಯ ಯುದ್ಧವನ್ನು ಪ್ರಾಣಾಂತದ ವರೆಗೂ” ಮುಂದುವರಿಸುವ ಶಪಥ ತೊಟ್ಟ ಆಫ್ರಿಕನ್‌ ಮೆಥಡಿಸ್ಟ್‌ ಬಿಶಪನಿಗಿಂತ, ಅಥವಾ ಏಸ್ಯಾ ಮತ್ತು ದಕ್ಷಿಣ ಅಮೆರಿಕಗಳ ನ್ಯಾಯಬದ್ಧ ಸರಕಾರಗಳ ವಿರುದ್ಧ ದಂಗೆಖೋರರೊಂದಿಗೆ ಹೋರಾಡಿದ ಆ ಬಹಳಷ್ಟು ಮಿಶನೆರಿಗಳಿಗಿಂತ ಏನೂ ಬೇರೆಯಲ್ಲ.

ನಿಜ ಕ್ರೈಸ್ತರು ‘ಅಧಿಕಾರವನ್ನು ವಿರೋಧಿಸುವುದಿಲ್ಲ’

3, 4. (ಎ) ಕ್ರಾಂತಿಯನ್ನು ಪ್ರವರ್ಧಿಸುವ ಕ್ರೈಸ್ತರೆನಿಸಿಕೊಳ್ಳುವವರಿಂದ ಯಾವ ಸೂತ್ರಗಳು ಉಲ್ಲಂಘಿಸಲ್ಪಟ್ಟಿವೆ? (ಬಿ) ಒಬ್ಬ ವ್ಯಕ್ತಿಯು ಯೆಹೋವನ ಸಾಕ್ಷಿಗಳ ಕುರಿತು ಏನನ್ನು ಕಂಡುಕೊಂಡನು?

3 ಒಂದನೇ ಶತಮಾನದಲ್ಲಿ, ಯೇಸು ತನ್ನ ಹಿಂಬಾಲಕರ ಕುರಿತಾಗಿ ಅಂದದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ.” (ಯೋಹಾನ 17:14) ಕ್ರಾಂತಿಯನ್ನು ಪ್ರವರ್ಧಿಸುವ ಕ್ರೈಸ್ತನೆನಿಸುವ ಯಾವನಾದರೂ, ಪೂರಾ ರೀತಿಯಲ್ಲಿ ಲೋಕದವನೇ ಆಗಿರುತ್ತಾನೆ. ಅವನು ಯೇಸುವಿನ ಹಿಂಬಾಲಕನಲ್ಲ; ಇಲ್ಲವೇ, ಅವನು “ಮೇಲಧಿಕಾರಿಗಳಿಗೆ ಅಧೀನನೂ ಅಲ್ಲ.” (ರೋಮಾಪುರ 13:1) ಅಂಥವನು ಅಪೊಸ್ತಲ ಪೌಲನು ಹೇಳುವ ಮಾತುಗಳಿಗೆ ಕಿವಿಗೊಡುವುದು ಹಿತಕರವು: “ಆದುದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ಏರ್ಪಾಡಿಗೆ ವಿರುದ್ಧವಾದ ಸ್ಥಾನವನ್ನು ತೆಗೆದು ಕೊಂಡಿರುತ್ತಾನೆ; ಅದಕ್ಕೆ ವಿರುದ್ಧವಾದ ಸ್ಥಾನ ತೆಗೆದು ಕೊಂಡಿರುವವರು ತಾವಾಗಿಯೇ ನ್ಯಾಯತೀರ್ಪು ಪಡೆಯುವರು.”—ರೋಮಾಪುರ 13:2, NW.

4 ಕ್ರೈಸ್ತ ಪ್ರಪಂಚದ ಅನೇಕರೊಂದಿಗೆ ಪ್ರತಿಹೋಲಿಕೆಯಲ್ಲಿ ಯೆಹೋವನ ಸಾಕ್ಷಿಗಳಿಗಾದರೋ ಶಸ್ತ್ರಾಸ್ತ್ರ ಪಾತಕದೊಂದಿಗೆ ಯಾವ ವ್ಯವಹಾರವೂ ಇಲ್ಲ. ಯೂರೋಪಿನ ಒಬ್ಬ ಮನುಷ್ಯನು ಇದನ್ನು ಕಂಡುಕೊಂಡನು. ಅವನು ಬರೆಯುವುದು: “ಧರ್ಮ ಮತ್ತು ರಾಜಕೀಯವು ಏನನ್ನು ಉತ್ಪಾದಿಸಿದೆಯೋ ಅದನ್ನು ಕಂಡಾಗ, ವ್ಯವಸ್ಥಾಪಿತ ಸಾಮಾಜಿಕ ಕ್ರಮವನ್ನು ದೊಬ್ಬಿಬಿಡಲು ನಾನು ಪಣತೊಟ್ಟೆನು. ಭಯವಾದಿಗಳ ಒಂದು ಗುಂಪನ್ನು ಸೇರಿ ಎಲ್ಲಾ ತರದ ಶಸ್ತ್ರಗಳನ್ನು ಉಪಯೋಗಿಸುವುದರಲ್ಲಿ ತರಬೇತಿ ಪಡೆದೆನು. ಅನೇಕ ದರೋಡೆಗಳಲ್ಲಿ ಭಾಗವಹಿಸಿದೆನು. ನನ್ನ ಜೀವವು ಸದಾ ಅಪಾಯದಲ್ಲಿತ್ತು. ಆದರೆ ಸಮಯ ದಾಟಿದಷ್ಟಕ್ಕೆ, ನಾವೊಂದು ಸೋಲುವ ಯುದ್ಧವನ್ನು ಹೋರಾಡುತ್ತಿರುವಂತೆ ಕಂಡಿತು. ನಾನು ಜೀವಿತದಲ್ಲಿ ಪೂರಾ ನಿರಾಶೆಗೊಂಡವನಾಗಿ ಎದೆಗುಂದಿ ಹೋದೆ, ಕುಗ್ಗಿಹೋದೆ. ಆಗ ಒಬ್ಬ ಸಾಕ್ಷಿಯು ನಮ್ಮ ಮನೇ ಬಾಗಲಿಗೆ ಬಂದಳು. ದೇವರ ರಾಜ್ಯದ ಕುರಿತಾಗಿ ನನಗೆ ಹೇಳಿದಳು. ಇದು ಸುಮ್ಮಗೆ ನನ್ನ ಸಮಯವನ್ನು ವ್ಯರ್ಥಮಾಡುತ್ತಿದೆ ಎಂದರಿತು, ನನ್ನ ಪತ್ನಿ ಅವಳಿಗೆ ಕಿವಿಗೊಡುವಂತೆ ಸೂಚಿಸಿದೆ. ಅವಳು ಕಿವಿಗೊಟ್ಟಳು, ಮತ್ತು ಒಂದು ಮನೆ ಬೈಬಲಭ್ಯಾಸ ಆರಂಭವಾಯಿತು. ಕೊನೆಗೆ ನಾನೂ ಅಭ್ಯಾಸಕ್ಕೆ ಕೂಡ್ರಲು ಒಪ್ಪಿದೆನು. ಕೆಟ್ಟತನಕ್ಕೆ ಮಾನವ ಕುಲವನ್ನು ಪ್ರಚೋದಿಸುವ ಪ್ರೇರಕ ಶಕ್ತಿಯು ಯಾರೆಂದು ತಿಳುಕೊಂಡಾಗ ನನಗಾದ ಉಪಶಮನವನ್ನು ಮಾತಿನಲ್ಲಿ ವ್ಯಕ್ತಪಡಿಸಲಶಕ್ಯ. ಆ ವಿಸ್ಮಯಕರ ರಾಜ್ಯ ನಿರೀಕ್ಷೆಯು ನನಗೆ ಬಲವರ್ಧಕ ನಿರೀಕ್ಷೆಯನ್ನು ಮತ್ತು ಒಂದು ಜೀವಿತೋದ್ದೇಶವನ್ನು ಕೊಟ್ಟಿದೆ.”

5. ಮೇಲಧಿಕಾರಿಗಳಿಗೆ ಕ್ರೈಸ್ತರು ಶಾಂತತೆಯಿಂದ ಆಧೀನರಾಗುತ್ತಾರೆ ಏಕೆ, ಮತ್ತು ಎಷ್ಟರ ತನಕ ಅವರಿದನ್ನು ಮಾಡುವರು?

5 ಕ್ರೈಸ್ತರು ದೇವರ ಮತ್ತು ಕ್ರಿಸ್ತನ ರಾಯಭಾರಿಗಳು ಅಥವಾ ನಿಯೋಗಿಗಳು ಆಗಿರುತ್ತಾರೆ. (ಯೆಶಾಯ 61: 1, 2; 2 ಕೊರಿಂಥ 5: 20; ಎಫೆಸ 6:19, 20) ಹಾಗಿರಲಾಗಿ, ಲೋಕದ ಹೋರಾಟಗಳಲ್ಲಿ ಅವರು ತಟಸ್ಥರಾಗಿ ಉಳಿಯುತ್ತಾರೆ. ಕೆಲವು ರಾಜಕೀಯ ವ್ಯವಸ್ಥೆಗಳು ಬೇರೆಯವುಗಳಿಗಿಂತ ಆರ್ಥಿಕವಾಗಿ ಹೆಚ್ಚು ಅನುಕೂಲವಾಗಿದ್ದರೂ, ಮತ್ತು ಬೇರೆಯವುಗಳಿಗಿಂತ ಕೆಲವು ರಾಜ್ಯಗಳು ಹೆಚ್ಚು ಸ್ವಾತಂತ್ರ್ಯ ಕೊಡುವುದಾದರೂ, ಒಂದು ವ್ಯವಸ್ಥಾಪನೆ ಇನ್ನೊಂದಕ್ಕಿಂತ ಮೇಲೆಂದು ಕ್ರೈಸ್ತರು ಹೊಗಳಲಾರರು. ಎಲ್ಲಾ ವ್ಯವಸ್ಥಾಪನೆಗಳು ಅಸಂಪೂರ್ಣವೆಂದು ಅವರಿಗೆ ಗೊತ್ತದೆ. ದೇವರ ರಾಜ್ಯವು ಅಧಿಕಾರವನ್ನು ವಹಿಸುವ ತನಕ ಅವು ಅಸ್ತಿತ್ವದಲ್ಲಿರುತ್ತಾ ಮುಂದರಿಯುವದು “ದೇವರ ಏರ್ಪಾಡಾಗಿದೆ.” (ದಾನಿಯೇಲ 2:44) ಆದ ಕಾರಣ ಕ್ರೈಸ್ತರು, ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಇತರರಿಗೆ ನಿರಂತರವಾದ ಹಿತವನ್ನು ಪ್ರವರ್ಧಿಸುತ್ತಾ ಇರುವಾಗ, ಮೇಲಧಿಕಾರಿಗಳಿಗೆ ಶಾಂತತೆಯಿಂದ ಅಧೀನರಾಗಿಯೇ ಉಳಿಯುತ್ತಾರೆ.—ಮತ್ತಾಯ 24:14; 1 ಪೇತ್ರ 3:11, 12.

ನಿಯಮಕ್ಕೆ ವಿಧೇಯರಾಗುವುದು

6. “ಲೋಕವಿಡೀ ಕೆಡುಕನ ವಶದಲ್ಲಿ ಬಿದ್ದಿರುವು”ದಾದರೂ ಮಾನವರ ಅನೇಕ ನಿಯಮಗಳು ಒಳ್ಳೆಯದ್ದಾಗಿರುವುದೇಕೆ?

6 ರಾಷ್ಟ್ರೀಯ ಸರಕಾರಗಳು ನಿಯಮ ವಿಧಿಗಳನ್ನು ನೇಮಿಸುತ್ತವೆ ಮತ್ತು ಇವುಗಳಲ್ಲಿ ಹೆಚ್ಚಿನ ನಿಯಮಗಳು ಹಿತಕರವಾದವುಗಳೇ. ಇದು ನಮ್ಮನ್ನು, “ಲೋಕವೆಲ್ಲವೂ ಕೆಡುಕನ ವಶದಲ್ಲಿ ಬಿದದ್ದೆ” ಎಂಬ ನಿಜತ್ವದ ನೋಟದಲ್ಲಿ ಆಶ್ಚರ್ಯ ಪಡಿಸಬೇಕೋ? (1 ಯೋಹಾನ 5:19) ಇಲ್ಲ. ಯೆಹೋವನು ನಮ್ಮ ಮೂಲಪಿತನಾದ ಆದಾಮನಿಗೆ ಒಂದು ಮನಸ್ಸಾಕ್ಷಿಯನ್ನು ಕೊಟ್ಟನು, ಮತ್ತು ಸರಿ ಮತ್ತು ತಪ್ಪಿನ ಈ ಆಂತರಿಕ ಮನವರಿಕೆಯು ಅನೇಕ ರೀತಿಯಲ್ಲಿ ಮಾನವ ನಿಯಮಗಳಲ್ಲಿ ಪ್ರತಿಬಿಂಬಿಸಲ್ಪಡುತ್ತದೆ. (ರೋಮಾಪುರ 2:13-16) ಪುರಾತನ ಬಬಿಲೋನ್ಯ ನ್ಯಾಯವಿಧಾಯಕ ಹಮ್ಮೂರಾಬಿ, ತನ್ನ ನೇಮವಿಧಿಗಳಿಗೆ ಈ ಮುನ್ನುಡಿಯನ್ನು ಕೊಟ್ಟನು: “ಆ ಸಮಯದಲ್ಲಿ [ಅವರು] ಹಮ್ಮೂರಾಬಿಯಾದ ನನ್ನನ್ನು, ಜನರ ಹಿತಚಿಂತನೆಯನ್ನು ಪ್ರವರ್ಧಿಸುವವನು, ದೇವಭಕ್ತನೂ ದೇವರಿಗೆ ಭಯಪಡುವವನೂ ಆದ ರಾಜಕುವರನು, ದೇಶದಲ್ಲಿ ನ್ಯಾಯವನ್ನು ಸ್ಥಾಪಿಸುವವನು, ಬಲವಂತರು ಬಲಹೀನರ ಮೇಲೆ ದಬ್ಬಾಳಿಕೆ ನಡಿಸದಂತೆ ದುಷ್ಟರನ್ನೂ ಕೆಟ್ಟತನವನ್ನೂ ನಾಶಮಾಡುವವನಾಗಿ ಹೆಸರಿಸಿದರು.”

7. ಯಾರಾದರೂ ನಿಯಮವನ್ನು ಮೀರಿದರೆ ಅವರನ್ನು ಶಿಕ್ಷಿಸುವ ಹಕ್ಕು ಯಾರಿಗಿದೆ ಮತ್ತು ಏಕೆ?

7 ತಮ್ಮ ನೇಮವಿಧಿಗಳು ಇದೇ ರೀತಿಯಲ್ಲಿ ಪ್ರಜೆಗಳ ಹಿತಚಿಂತನೆಯನ್ನು ಪ್ರವರ್ಧಿಸುವುದು ಮತ್ತು ಸಮಾಜದಲ್ಲಿ ಸುವ್ಯವಸ್ಥೆಯನ್ನಿಡುವುದೇ ಆಗಿದೆ ಎಂದು ಹೆಚ್ಚಿನ ಸರಕಾರಗಳು ಹೇಳುತ್ತವೆ. ಆದ್ದರಿಂದ, ಕೊಲೆ, ಕಳವು ಮುಂತಾದ ಸಮಾಜ ಕಂಟಕ ಕೃತ್ಯಗಳಿಗೆ ಅವರು ಶಿಕ್ಷೆ ವಿಧಿಸುತ್ತಾರೆ, ವೇಗ ಸೀಮಿತ ಮತ್ತು ಪಾರ್ಕಿಂಗ್‌ ನಿಯಮಗಳೇ ಮುಂತಾದ ವಿಧಿಗಳನ್ನು ಜಾರಿಗೆ ತರುತ್ತಾರೆ. ಅವರ ನಿಯಮಗಳನ್ನು ಬೇಕುಬೇಕೆಂದು ಮುರಿಯುವ ಯಾವನಾದರೂ ಅಧಿಕಾರವನ್ನು ಎದುರಿಸುವವನಾಗುತ್ತಾನೆ ಮತ್ತು “ಎದುರಿಸುವವರು ತೀರ್ಪಿಗೊಳಗಾಗುವರು.” ಯಾರಿಂದ ತೀರ್ಪಿಗೊಳಗಾಗುವರು? ದೇವರಿಂದಲೇ ತೀರ್ಪಿಸಲ್ಪಡುವ ಅಗತ್ಯವಿಲ್ಲ. ಇಲ್ಲಿ ತೀರ್ಪು ಎಂದು ಭಾಷಾಂತರಿಸಲ್ಪಟ್ಟ ಗ್ರೀಕ್‌ ಶಬ್ದ, ಯೆಹೋವನ ತೀರ್ಪುಗಳಾಗಿರುವ ಬದಲಾಗಿ ಪೌರನೀತಿಗೆ ಸಂಬಂಧಿಸಿದ ಕ್ರಮವಿಧಾನಗಳಿಗೆ ನಿರ್ದೇಶಿಸಬಲ್ಲದು. (1 ಕೊರಿಂಥ 6:7 ಹೋಲಿಸಿ.) ಅನ್ಯಾಯದ ಕೃತ್ಯಗಳನ್ನು ನಡಿಸುವ ಯಾವನಿಗಾದರೂ ಶಿಕ್ಷೆ ವಿಧಿಸುವ ಹಕ್ಕು ಮೇಲಧಿಕಾರಿಗಿದೆ.

8. ಸದಸ್ಯನೊಬ್ಬನು ಘೋರ ಪಾತಕವನ್ನು ಮಾಡಿದರೆ ಸಭೆಯು ಹೇಗೆ ಪ್ರತಿಕ್ರಿಯೆ ತೋರಿಸುತ್ತದೆ?

8 ಮಾನವ ಅಧಿಕಾರಿಗಳನ್ನು ವಿರೋಧಿಸದೆ ಇರುವ ಸತ್ಕೀರ್ತಿಯು ಯೆಹೋವನ ಸಾಕ್ಷಿಗಳಿಗಿದೆ. ಸಭೆಯಲ್ಲಿನ ವ್ಯಕ್ತಿಯೊಬ್ಬನು ನಿಯಮ ಮೀರಿದರೆ, ಶಾಸನಬದ್ಧ ಶಿಕ್ಷೆಯನ್ನು ತಪ್ಪಿಸಲು ಸಭೆಯು ಅವನಿಗೆ ಸಹಾಯ ಮಾಡಲಾರದು. ಯಾವನಾದರೂ ಕಳ್ಳತನ, ಕೊಲೆ, ಮಾನಭಂಗ, ತೆರಿಗೆಗಳಲ್ಲಿ ಮೋಸ, ಹಟಸಂಭೋಗ, ವಂಚನೆ, ಮೋಸ, ನ್ಯಾಯವಿರುದ್ಧ ಮಾದಕದ್ರವ್ಯ ಸೇವನೆ ಅಥವಾ ಬೇರೆ ಯಾವುದೇ ವಿಧದಲ್ಲಿ ನ್ಯಾಯಬದ್ಧ ಅಧಿಕಾರವನ್ನು ಉಲ್ಲಂಘಿಸುವವನಾದರೆ ಅವನು, ಸಭೆಯಿಂದ ಉಗ್ರ ಶಿಸ್ತಿಗೆ ಗುರಿಯಾಗುವನು—ಮತ್ತು ಐಹಿಕ ಅಧಿಕಾರದಿಂದ ಶಿಕ್ಷಿಸಲ್ಪಡುವಾಗ ತಾನು ಹಿಂಸೆಗೆ ಗುರಿಯಾಗಿದ್ದೇನೆಂದು ಅವನು ಭಾವಿಸಬಾರದು.—1 ಕೊರಿಂಥ 5:12, 13; 1 ಪೇತ್ರ 2:13-17, 20.

ಭಯದ ಒಬ್ಬ ವ್ಯಕ್ತಿ

9. ಅನ್ಯಾಯಸ್ಥರಿಂದ ಬೆದರಿಕೆಗೆ ಒಳಗಾಗುವಾಗ ಕ್ರೈಸ್ತರು ಯೋಗ್ಯವಾಗಿ ಯಾವ ಸಹಾಯವನ್ನು ಸ್ವೀಕರಿಸಬಹುದು?

9 ಪೌಲನು ಮೇಲಧಿಕಾರಿಗಳ ಕುರಿತು ತನ್ನ ಚರ್ಚೆಯನ್ನು ಮುಂದರಿಸುತ್ತಾ, ಅನ್ನುವುದು: “ಆಳುವವರು ಕೆಟ್ಟ ಕೆಲಸ ಮಾಡುವವನಿಗೆ ಭಯದ ಒಬ್ಬ ವ್ಯಕ್ತಿಯಾಗಿರುವವರೇ ಹೊರತು ಒಳ್ಳೇ ಕೆಲಸ ಮಾಡುವವನಿಗೆ ಭಯವೇನೂ ಇಲ್ಲ. ನೀನು ಅಧಿಕಾರಿಗೆ ಭಯಪಡದೆ ಇರಬೇಕೆಂದು ಅಪೇಕ್ಷಿಸುತ್ತಿಯೋ? ಒಳ್ಳೇದನ್ನು ಮಾಡು. ಆಗ ಆ ಅಧಿಕಾರಿಯಿಂದಲೇ ನಿನಗೆ ಹೊಗಳಿಕೆಯಾಗುವದು.” (ರೋಮಾಪುರ 13:3, NW) ‘ಕೆಟ್ಟದ್ದನ್ನು,’ ಪಾತಕಗಳನ್ನು ಮಾಡುವ ದುಷ್ಕರ್ಮಿಗಳು ಅಧಿಕಾರಿಯ ಶಿಕ್ಷೆಗೆ ಭಯಪಡಬೇಕೇ ಹೊರತು ನಿಷ್ಠಾವಂತರಾದ ಕ್ರೈಸ್ತರಲ್ಲ. ಅಂಥ ಅನ್ಯಾಯಸ್ಥರಿಂದ ಬೆದರಿಕೆಗೆ ಒಳಗಾಗುವಾಗ ಯೆಹೋವನ ಸಾಕ್ಷಿಗಳು ಯೋಗ್ಯವಾಗಿಯೇ ಅಧಿಕಾರಿಗಳಿಂದ ಪೊಲೀಸ್‌ ಅಥವಾ ಮಿಲಿಟರಿ ಕಾವಲನ್ನು ಸ್ವೀಕರಿಸಬಹುದು.—ಅಪೊಸ್ತಲರ ಕೃತ್ಯಗಳು 23:12-22.

10. ಯೆಹೋವನ ಸಾಕ್ಷಿಗಳು ಅಧಿಕಾರಿಗಳಿಂದ ಹೇಗೆ ‘ಹೊಗಳಿಕೆ’ಯನ್ನು ಪಡೆದಿದ್ದಾರೆ?

10 ಮೇಲಧಿಕಾರಿಗಳ ನಿಯಮವನ್ನು ಪಾಲಿಸುವ ಕ್ರೈಸ್ತನಿಗೆ ಪೌಲನು ಅನ್ನುವುದು: “ನಿನಗೆ ಹೊಗಳಿಕೆ ಉಂಟಾಗುವುದು.” ಇದಕ್ಕೆ ದೃಷ್ಟಾಂತವಾಗಿ, ಬ್ರೆಜಿಲ್‌ನಲ್ಲಾದ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನದ ಅನಂತರ ಅವರು ಪಡೆದ ಕೆಲವು ಪತ್ರಗಳನ್ನು ಗಮನಿಸಿರಿ: ಮ್ಯುನಿಸಿಪಲ್‌ ಕ್ರೀಡಾ ವಿಭಾಗದ ಚಾನ್ಸೆಲರಿಂದ: “ನಿಮ್ಮ ಶಾಂತಿಯುಕ್ತ ನಡವಳಿಕೆಯು ವಿಶೇಷ ಹೊಗಳಿಕೆಗೆ ಪಾತ್ರವಾಗಿದೆ. ಇಂದಿನ ಕ್ಲೇಶಮಯ ಲೋಕದಲ್ಲಿ ದೇವರನ್ನು ನಂಬುವ ಮತ್ತು ಆರಾಧಿಸುವ ಇಷ್ಟು ಮಂದಿ ಇನ್ನೂ ಇದ್ದಾರೆ ಎಂದು ತಿಳಿಯುವುದು ಬಹಳ ಸಾಂತ್ವನಕಾರಿ.” ಒಂದು ಮ್ಯುನಿಸಿಪಲ್‌ ಸ್ಟೇಡಿಯಮಿನ ಡೈರೆಕ್ಟರರಿಂದ: “ಬಹಳ ಹೆಚ್ಚು ಸಂಖ್ಯೆಯಲ್ಲಿ ಜನರು ಹಾಜರಿದ್ದಾಗ್ಯೂ ಸಮಾರಂಭದ ಮೇಲೆ ಕುಂದನ್ನು ತರುವ ಯಾವ ಘಟನೆಯೂ ವರದಿಯಾಗದಿದ್ದದ್ದು ಸಂಘಟನೆಯ ನಿರ್ದೋಷತ್ವದ ಫಲವಾಗಿಯೇ.” ಪೌರ ಸಭಾಧ್ಯಕ್ಷನ ಆಫೀಸಿನಿಂದ: “ನಿಮ್ಮ ಕ್ರಮಬದ್ಧತೆ ಮತ್ತು ಆಶ್ಚರ್ಯಕರವಾದ, ಸ್ವ-ಸಂತೋಷದ ಶಿಸ್ತಿಗಾಗಿ ಅಭಿನಂದನೆ ಹೇಳಲು ನಾವೀ ಸಂದರ್ಭವನ್ನು ತಕ್ಕೊಳ್ಳುತ್ತೇವೆ. ನಿಮ್ಮ ಮುಂದಿನ ಸಮಾರಂಭಗಳಿಗೂ ಪೂರಾ ಯಶಸ್ಸನ್ನು ಕೋರುತ್ತೇವೆ.”

11. ಸುವಾರ್ತೆಯನ್ನು ಸಾರುವುದು ಯಾವ ರೀತಿಯಲ್ಲೂ ಕೆಟ್ಟ ಕ್ರಿಯೆಯಾಗಿರದೇಕೆ?

11 “ಒಳ್ಳೇ ಕೆಲಸ” ಎಂಬ ಶಬ್ದವು ಮೇಲಧಿಕಾರಿಗಳ ನಿಯಮಕ್ಕೆ ವಿಧೇಯತೆಯಲ್ಲಿ ಮಾಡಿದ ಕೆಲಸಗಳಿಗೆ ಸೂಚಿಸುತ್ತವೆ. ಅದಲ್ಲದೆ, ಮನುಷ್ಯನಿಂದಲ್ಲ, ದೇವರಿಂದ ಆಜ್ಞಾಪಿಸಲ್ಪಟ್ಟ ನಮ್ಮ ಸಾರುವ ಕಾರ್ಯವು ಒಂದು ಕೆಟ್ಟ ಕೃತ್ಯವಲ್ಲವೆಂಬದನ್ನು—ರಾಜಕೀಯ ಅಧಿಕಾರಿಗಳು ಮನಗಾಣಬೇಕಾದ ಒಂದು ವಿಷಯವಾಗಿದೆ. ಅದು, ಪ್ರತಿಕ್ರಿಯೆ ತೋರಿಸುವ ಜನರ ನೈತಿಕ ದರ್ಜೆಯನ್ನು ಮೇಲಕ್ಕೆತ್ತುವ ಒಂದು ಸಾರ್ವಜನಿಕ ಸೇವೆಯಾಗಿದೆ. ಆದ್ದರಿಂದ, ಮೇಲಧಿಕಾರಿಗಳು ಇತರರಿಗೆ ಸಾರುವ ನಮ್ಮ ಹಕ್ಕನ್ನು ರಕ್ಷಿಸುವರು ಎಂಬ ನಿರೀಕ್ಷೆ ನಮಗಿದೆ. ಸುವಾರ್ತೆ ಸಾರುವಿಕೆಯನ್ನು ನ್ಯಾಯಬದ್ಧವಾಗಿ ಸ್ಥಾಪಿಸಲಿಕ್ಕಾಗಿ ಪೌಲನು ಅಧಿಪತಿಗಳಿಗೆ ಮನವಿಯನ್ನು ಮಾಡಿದ್ದನು. (ಅಪೊಸ್ತಲರ ಕೃತ್ಯಗಳು 16:35-40; 25:8-12; ಫಿಲಿಪ್ಪಿ 1:7) ಇತ್ತೀಚೆಗೆ, ಯೆಹೋವನ ಸಾಕ್ಷಿಗಳು ಇದೇ ರೀತಿಯಲ್ಲಿ ಪೂರ್ವ ಜರ್ಮನಿ, ಹಂಗೇರಿ, ಪೋಲೆಂಡ್‌ ರೊಮಾನಿಯ, ಬೆನಿನ್‌ ಮತ್ತು ಮಯಾನ್ಮರ್‌ (ಬರ್ಮಾ)ದಲ್ಲಿ ತಮ್ಮ ಸಾರುವಿಕೆಗೆ ನ್ಯಾಯಬದ್ಧ ಅಂಗೀಕಾರವನ್ನು ಕೇಳಿಕೊಂಡರು ಮತ್ತು ಪಡೆದರು.

“ಅವನು ದೇವರ ಸೇವಕನು”

12-14. ಮೇಲಧಿಕಾರಿಗಳು ದೇವರ ಸೇವಕರಾಗಿ ಹೇಗೆ ಕಾರ್ಯ ನಡಿಸಿದ್ದಾರೆ (ಎ) ಬೈಬಲಿನ ಕಾಲದಲ್ಲಿ? (ಬಿ) ಆಧುನಿಕ ಕಾಲದಲ್ಲಿ?

12 ಐಹಿಕ ಅಧಿಕಾರದ ಕುರಿತು ಮಾತಾಡುತ್ತಾ, ಪೌಲನು ಮುಂದರಿಸಿದ್ದು: “ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ. ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು. ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ.”— ರೋಮಾಪುರ 13:4.

13 ರಾಷ್ಟ್ರೀಯ ಅಧಿಕಾರಿಗಳು ಕೆಲವೊಮ್ಮೆ ನಿರ್ದಿಷ್ಟ ರೀತಿಗಳಲ್ಲಿ ದೇವರ ಸೇವಕರಾಗಿ ಕಾರ್ಯ ನಡಿಸಿದ್ದಾರೆ. ಯೆಹೂದ್ಯರನ್ನು ಬಬಿಲೋನಿನಿಂದ ಹಿಂತಿರುಗಿ ಬರಲು ಮತ್ತು ದೇವರ ಆಲಯವನ್ನು ಕಟ್ಟಲು ಆಜ್ಞಾಪಿಸಿದ್ದಾಗ, ಕೋರೇಷನು ಹಾಗೆ ಮಾಡಿದ್ದನು. (ಎಜ್ರ 1:1-4; ಯೆಶಾಯ 44:28) ಆ ಆಲಯವನ್ನು ಪುನಃ ಕಟಲ್ಟಿಕ್ಕಾಗಿ ಎಜ್ರನೊಂದಿಗೆ ಕಾಣಿಕೆಗಳನ್ನು ಕಳುಹಿಸಿದ ಮತ್ತು ಅನಂತರ ನೆಹೆಮೀಯನನ್ನು ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟಲು ನೇಮಿಸಿದಾಗ, ಅರ್ತಷಸ್ತನು ದೇವರ ಸೇವಕನಾಗಿ ಕಾರ್ಯ ನಡಿಸಿದ್ದನು. (ಎಜ್ರ 7:11-26; 8:25-30; ನೆಹೆಮೀಯ 2:1-8) ಪೌಲನನ್ನು ಯೆರೂಸಲೇಮಿನ ದೊಂಬಿಯಿಂದ ಬಿಡಿಸಿದಾಗ, ಹಡಗು ಒಡೆತದ ಸಮಯದಲ್ಲಿ ಅವನನ್ನು ರಕ್ಷಿಸಿದಾಗ ಮತ್ತು ರೋಮಿನಲ್ಲಿ ಅವನಿಗಾಗಿ ಸ್ವಂತ ಮನೆಯನ್ನು ಏರ್ಪಡಿಸಿದಾಗ ರೋಮೀಯ ಮೇಲಧಿಕಾರವೂ ಇದೇ ರೀತಿಯಲ್ಲಿ ಕಾರ್ಯ ನಡಿಸಿತ್ತು.—ಅಪೊಸ್ತಲರ ಕೃತ್ಯಗಳು 21:31, 32; 28:7-10, 30, 31.

14 ತದ್ರೀತಿಯಲ್ಲಿ ಆಧುನಿಕ ಕಾಲದಲ್ಲೂ ಐಹಿಕ ಅಧಿಕಾರಿಗಳು ದೇವರ ಸೇವಕರಾಗಿ ಕೆಲಸ ಮಾಡಿರುತ್ತಾರೆ. ಉದಾಹರಣೆಗೆ 1959ರಲ್ಲಿ, ಕೆನಡಾದ ಉಚ್ಛ ನ್ಯಾಯಾಲಯವು, ದೇಶದ್ರೋಹ ಮತ್ತು ನಿಂದನೀಯ ಮಾನನಷ್ಟ ಲೇಖನವನ್ನು ಪ್ರಕಟಿಸಿದ ಆರೋಪ ಹೊರಿಸಲ್ಪಟ್ಟ ಕ್ವಿಬೆಕ್‌ನ ಯೆಹೋವನ ಸಾಕ್ಷಿಯೊಬ್ಬನನ್ನು ಅಪರಾಧಿಯಲ್ಲವೆಂದು ವಿಧಿಸಿತ್ತು—ಹೀಗೆ ಆಗ ಕ್ವಿಬೆಕ್‌ನ ಪ್ರಧಾನ ಮಂತ್ರಿಯಾಗಿದ್ದ ಮಾರಿಸ್‌ ಡ್ಯೂಪೆಸ್ಲಿಸ್‌ನ ದುರಾಗ್ರಹಕ್ಕೆ ಎದುರೇಟು ನೀಡಲ್ಪಟ್ಟಿತು.

15. ಯಾವ ಸಾಮಾನ್ಯ ವಿಧಾನದಲ್ಲಿ ಅಧಿಕಾರಿಗಳು ದೇವರ ಸೇವಕರಾಗಿ ಕಾರ್ಯನಡಿಸುತ್ತಾರೆ ಮತ್ತು ಇದು ಅವರಿಗೆ ಯಾವ ಹಕ್ಕನ್ನು ಕೊಡುತ್ತದೆ?

15 ಅದಲ್ಲದೆ ಒಂದು ಸಾಮಾನ್ಯ ರೀತಿಯಲ್ಲಿ ರಾಷ್ಟ್ರೀಯ ಸರಕಾರಗಳು ಸಾರ್ವಜನಿಕ ಕ್ರಮಬದ್ಧತೆಯನ್ನು ಕಾಪಾಡುವ ಮೂಲಕ, ದೇವರ ರಾಜ್ಯವು ಆ ಜವಾಬ್ದಾರಿಕೆಯನ್ನು ಹೊರುವ ತನಕ ದೇವರ ಸೇವಕರಾಗಿ ಕಾರ್ಯ ನಡಿಸುತ್ತವೆ. ಪೌಲನಿಗನುಸಾರ, ಇದರ ಪೂರೈಕೆಗಾಗಿಯೇ ಅಧಿಕಾರಿ “ಕತ್ತಿಯನ್ನು ಹಿಡಿ”ದಿದ್ದಾನೆ; ಇದು ದಂಡನೆಯನ್ನು ವಿಧಿಸಲು ಅದಕ್ಕಿರುವ ಹಕ್ಕನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಇದರಲ್ಲಿ ಸೆರೆಮನೆವಾಸ ಅಥವಾ ಜುಲ್ಮಾನೆಯು ಒಳಗೂಡಿರುತ್ತದೆ. ಕೆಲವು ದೇಶಗಳಲ್ಲಿ ಅದರಲ್ಲಿ ಮರಣ ಶಿಕ್ಷೆಯೂ ಕೂಡಿರಬಹುದು.a ಇನ್ನೊಂದು ಕಡೆ, ಅನೇಕ ದೇಶಗಳು ಮರಣ ಶಿಕ್ಷೆಯನ್ನು ಕೊಡದಂತೆ ಆರಿಸಿಕೊಂಡಿವೆ, ಮತ್ತು ಇದು ಸಹಾ ಅವರ ಹಕ್ಕಾಗಿದೆ.

16. (ಎ) ಅಧಿಕಾರಿಯು ದೇವರ ಸೇವಕನಾಗಿರಲಾಗಿ, ದೇವಜನರಲ್ಲಿ ಕೆಲವರು ಏನನ್ನು ಮಾಡುವುದು ಯೋಗ್ಯವೆಂದು ಪರಿಗಣಿಸಿದ್ದಾರೆ? (ಬಿ) ಯಾವ ರೀತಿಯ ಉದ್ಯೋಗವನ್ನು ಕ್ರೈಸ್ತನು ಸ್ವೀಕರಿಸಲಾರನು ಮತ್ತು ಯಾಕೆ?

16 ಮೇಲಧಿಕಾರಿಗಳು ದೇವರ ಸೇವಕರಾಗಿರುವ ನಿಜತ್ವದಿಂದಲೇ ದಾನಿಯೇಲ, ಮೂವರು ಇಬ್ರಿಯರು, ನೆಹೆಮೀಯ ಮತ್ತು ಮೊರ್ದೆಕೈ ಮುಂತಾದವರು ಬಬಿಲೋನ್ಯ ಮತ್ತು ಪರ್ಸಿಯನ್‌ ಸರಕಾರಗಳಲ್ಲಿ ಜವಾಬ್ದಾರಿಕೆಯ ಸ್ಥಾನಗಳನ್ನು ಸ್ವೀಕರಿಸ ಶಕ್ತರಾದರೆಂದು ವಿವರಿಸುತ್ತದೆ. ಅವರು ಹೀಗೆ ದೇವ ಜನರ ಹಿತಕ್ಕಾಗಿ ರಾಜ್ಯದ ಅಧಿಕಾರಕ್ಕೆ ಅಪ್ಪೀಲು ಮಾಡಶಕ್ತರಾದರು. (ನೆಹೆಮೀಯ 1:11; ಎಸ್ತೇರಳು 10:3; ದಾನಿಯೇಲ 2:48, 49; 6:1, 2) ಕೆಲವು ಕ್ರೈಸ್ತರು ಸಹಾ ಇಂದು ಸರಕಾರದ ವಿಭಾಗಗಳಲ್ಲಿ ಕೆಲಸ ಮಾಡುತ್ತಾರೆ. ಆದರೆ ಲೋಕದಿಂದ ಅವರು ಪ್ರತ್ಯೇಕವಾಗಿರುವುದರಿಂದ, ರಾಜಕೀಯ ಪಕ್ಷಗಳನ್ನು ಸೇರುವುದಿಲ್ಲ, ರಾಜಕೀಯ ಸ್ಥಾನಗಳನ್ನು ಹುಡುಕುವುದಿಲ್ಲ ಇಲ್ಲವೇ ರಾಜಕೀಯ ಸಂಸ್ಥಾಪನೆಗಳಲ್ಲಿ ಧೋರಣೆಗಳನ್ನು ಮಾಡುವ ಸ್ಥಾನಗಳನ್ನು ಸ್ವೀಕರಿಸುವುದೂ ಇಲ್ಲ.

ನಂಬಿಕೆಯ ಅಗತ್ಯ

17. ಯಾವ ಪರಿಸ್ಥಿತಿಗಳು ಕೆಲವು ಕ್ರೈಸ್ತೇತರರನ್ನು ಅಧಿಕಾರವನ್ನು ಎದುರಿಸುವಂತೆ ಉದ್ರೇಕಿಸಬಹುದು?

17 ಆದರೆ, ಅಧಿಕಾರಿಯು ಭ್ರಷ್ಟಾಚಾರವನ್ನು ಸಹಿಸುತ್ತಾನಾದರೆ ಅಥವಾ ದಬ್ಬಾಳಿಕೆಯನ್ನೂ ಮಾಡುತ್ತಾನಾದರೆ ಆಗೇನು? ಕ್ರೈಸ್ತನು ಅವನನ್ನು ಅಧಿಕಾರದಿಂದ ತೆಗೆದು, ಉತ್ತಮನೆಂದು ತೋರುವ ಇನ್ನೊಬ್ಬನನ್ನು ಇಡಲು ಪ್ರಯತ್ನಿಸಬೇಕೋ? ಒಳ್ಳೇದು, ಸರಕಾರೀ ಅನ್ಯಾಯಗಳು ಮತ್ತು ಭ್ರಷ್ಟಾಚಾರಗಳು ಏನೂ ಹೊಸತಲ್ಲ. ಒಂದನೇ ಶತಮಾನದಲ್ಲಿ ರೋಮನ್‌ ಸಾಮ್ರಾಜ್ಯವು ಗುಲಾಮಗಿರಿಯೇ ಮುಂತಾದ ಅನ್ಯಾಯಗಳಿಗೆ ಒಪ್ಪಿಗೆ ನೀಡಿತ್ತು. ಭ್ರಷ್ಟ ಅಧಿಕಾರಿಗಳನ್ನೂ ಅದು ಸಹಿಸಿಕೊಂಡಿತ್ತು. ಮೋಸಮಾಡುತ್ತಿದ್ದ ಸುಂಕದಧಿಕಾರಿಗಳು, ಅನ್ಯಾಯಗಾರನಾಗಿದ್ದ ಒಬ್ಬ ನ್ಯಾಯಾಧಿಪತಿ, ಲಂಚ ತಿನ್ನಲು ಅಪೇಕ್ಷೆಪಟ್ಟ ಒಬ್ಬ ದೇಶಾಧಿಕಾರಿಯ ಕುರಿತೂ ಬೈಬಲು ತಿಳಿಸುತ್ತದೆ.—ಲೂಕ 3:12, 13; 18:2-5; ಅಪೊಸ್ತಲರ ಕೃತ್ಯಗಳು 24:26, 27.

18, 19. (ಎ) ಸರಕಾರಿ ಅಧಿಕಾರಿಗಳಿಂದ ದುರುಪಯೋಗ ಅಥವಾ ಭ್ರಷ್ಟಾಚಾರವು ಕಂಡುಬಂದರೆ ಕ್ರೈಸ್ತರು ಹೇಗೆ ಪ್ರತಿಕ್ರಿಯೆ ತೋರಿಸುತ್ತಾರೆ? (ಬಿ) ಕ್ರೈಸ್ತರು ಜನರ ಜೀವಿತಗಳನ್ನು ಸುಧಾರಣೆ ಮಾಡಿದ್ದಾರೆಂದು ಒಬ್ಬ ಇತಿಹಾಸಗಾರನು ಮತ್ತು ಕೆಳಗಿನ ಚೌಕಟ್ಟು ಹೇಗೆ ತೋರಿಸುತ್ತದೆ?

18 ಅಂಥ ದುರಾಚಾರಗಳನ್ನು ಆಗಿನ ಕಾಲದಲ್ಲಿ ನಿಲ್ಲಿಸಿ ಬಿಡಲು ಕ್ರೈಸ್ತರು ಪ್ರಯತ್ನಿಸಬಹುದಿತ್ತು, ಆದರೆ ಹಾಗೆ ಮಾಡಲಿಲ್ಲ. ಉದಾಹರಣೆಗೆ ಪೌಲನು, ಗುಲಾಮಗಿರಿಯನ್ನು ನಿಲ್ಲಿಸಿಬಿಡಲು ಸಾರಲಿಲ್ಲ, ಕ್ರೈಸ್ತ ಯಜಮಾನರು ತಮ್ಮ ಕೈಕೆಳಗಿನ ಗುಲಾಮರನ್ನು ಬಿಟ್ಟುಬಿಡುವಂತೆಯೂ ಹೇಳಲಿಲ್ಲ. ಬದಲಾಗಿ ಒಬ್ಬರೊಂದಿಗೊಬ್ಬರು ವ್ಯವಹಾರ ಮಾಡುವಾಗ ಕ್ರೈಸ್ತ ಕನಿಕರವನ್ನು ತೋರಿಸುವಂತೆ ಅವನು ಸೂಚನೆ ಕೊಟ್ಟನು. (1 ಕೊರಿಂಥ 7:20-24; ಎಫೆಸ 6:1-9; ಫಿಲೆಮೋನ 10-16; 1 ಪೇತ್ರ 2:18ನ್ನೂ ನೋಡಿ.) ಇದೇ ರೀತಿ ಕ್ರೈಸ್ತರು, ಕ್ರಾಂತಿಕಾರಕ ಚಟುವಟಿಕೆಗಳಲ್ಲೂ ಭಾಗಿಗಳಾಗಲಿಲ್ಲ. ಅವರು “ಸಮಾಧಾನದ ಸುಸಮಾಚಾರವನ್ನು” ಸಾರುವುದರಲ್ಲಿ ತೀರಾ ಕಾರ್ಯಮಗ್ನರಿದ್ದರು. (ಅಪೊಸ್ತಲರ ಕೃತ್ಯಗಳು 10:36) ಸಾ.ಶ. 66ರಲ್ಲಿ ಒಂದು ರೋಮನ್‌ ಸೇನೆಯು ಯೆರೂಸಲೇಮನ್ನು ಮುತ್ತಿಗೆ ಹಾಕಿತು ಮತ್ತು ಅನಂತರ ಮುತ್ತಿಗೆಯನ್ನು ಹಿಂತೆಗೆಯಿತು. ಆಗ ದಂಗೆಖೋರ ನಗರರಕ್ಷಕರೊಡನೆ ಉಳಿಯುವ ಬದಲಿಗೆ, ಆ ಇಬ್ರಿಯ ಕ್ರೈಸ್ತರು ಯೇಸುವಿನ ಮಾರ್ಗದರ್ಶನೆಗೆ ವಿಧೇಯತೆಯಲ್ಲಿ, ‘ಬೆಟ್ಟಗಳಿಗೆ ಓಡಿಹೋದರು.’—ಲೂಕ 21:20, 21

19 ಆದಿ ಕ್ರೈಸ್ತರು ವಿಷಯಗಳೊಂದಿಗೆ ಅವು ಇದ್ದಂತಹ ರೀತಿಯಲ್ಲಿಯೇ ಜೀವಿಸಿದರು ಮತ್ತು ಬೈಬಲ್‌ ತತ್ವಗಳನ್ನು ಜನರು ಹಿಂಬಾಲಿಸುವಂತೆ ಸಹಾಯ ಮಾಡುವ ಮೂಲಕ ಜನರ ಜೀವಿತಗಳನ್ನು ಸುಧಾರಿಸಲು ಪ್ರಯತ್ನಿಸಿದರು. ಇತಿಹಾಸಕಾರ ಜೋನ್‌ ಲಾರ್ಡ್‌, ಓಲ್ಡ್‌ ರೋಮನ್‌ ವರ್ಲ್ಡ್‌ ಎಂಬ ತನ್ನ ಪುಸ್ತಕದಲ್ಲಿ ಬರೆದದ್ದು: “ಕ್ರೈಸ್ತತ್ವದ ನಿಜ ವಿಜಯಗಳು ಯಾರು ತನ್ನ ಬೋಧನೆಗಳನ್ನು ಅವಲಂಬಿಸುತ್ತಾರೋ ಅವರನ್ನು ಸತ್ಪುರುಷರಾಗಿ ಮಾಡುವುದೇ ಹೊರತು, ಜನಪ್ರಿಯ ಸಂಘಸಂಸ್ಥೆಗಳನ್ನು ಅಥವಾ ಸರಕಾರಗಳನ್ನು ಅಥವಾ ನಿಯಮಗಳನ್ನು ಬಾಹ್ಯ ರೀತಿಯಲ್ಲಿ ಬದಲಾಯಿಸುವುದಲ್ಲ.” ಕ್ರೈಸ್ತರು ಇಂದು ಯಾವುದೇ ರೀತಿಯಲ್ಲಿ ಬೇರೆಯಾಗಿ ವರ್ತಿಸಬೇಕೇ?

ರಾಜ್ಯವು ಸಹಾಯ ಮಾಡದೆ ಇರುವಾಗ

20, 21. (ಎ)ಒಬ್ಬ ಐಹಿಕ ಅಧಿಕಾರವು ದೇವರ ಸೇವಕನೋಪಾದಿ ಜನಹಿತಕ್ಕಾಗಿ ಕಾರ್ಯನಡಿಸಲು ಹೇಗೆ ತಪ್ಪಿತು? (ಬಿ) ರಾಜ್ಯದ ಸಹಭಾಗದೊಂದಿಗೆ ಹಿಂಸಿಸಲ್ಪಡುವಾಗ ಯೆಹೋವನ ಸಾಕ್ಷಿಗಳು ಹೇಗೆ ಪ್ರತಿಕ್ರಿಯೆ ತೋರಿಸಬೇಕು?

20 ಸಪ್ಟಂಬರ 1972ರಲ್ಲಿ, ಮಧ್ಯ ಆಫ್ರಿಕಾದ ಒಂದು ದೇಶದಲ್ಲಿ ಯೆಹೋವನ ಸಾಕ್ಷಿಗಳ ವಿರುದ್ಧ ಉಗ್ರಹಿಂಸೆಯು ಬಂತು. ಸಾವಿರಾರು ಮಂದಿಯ ಸೊತ್ತುಗಳನ್ನೆಲ್ಲಾ ಅಪಹರಿಸಲಾಯಿತು ಮತ್ತು ಅವರ ಮೇಲೆ ಹೊಡೆತ, ಚಿತ್ರಹಿಂಸೆ ಮತ್ತು ಮರಣ ಮುಂತಾದ ಕ್ರೌರ್ಯಗಳನ್ನು ನಡಿಸಲಾಯಿತು. ಸಾಕ್ಷಿಗಳನ್ನು ಕಾಪಾಡಲು ಮೇಲಧಿಕಾರವು ತನ್ನ ಕರ್ತವ್ಯವನ್ನು ಪೂರೈಸಿತೋ? ಇಲ್ಲ! ಬದಲಾಗಿ, ಅದು ಹಿಂಸಾಚಾರವನ್ನು ಪ್ರೋತ್ಸಾಹಿಸಿತಾದರ್ದಿಂದ ಈ ನಿರುಪದ್ರವಿ ಕ್ರೈಸ್ತರು ಸುರಕ್ಷೆಗಾಗಿ ನೆರೆಹೊರೆಯ ದೇಶಗಳಿಗೆ ಪಲಾಯನಗೈಯುವಂತೆ ಬಲಾತ್ಕರಿಸಲ್ಪಟ್ಟರು.

21 ಅಂಥಹ ಪೀಡಕರ ವಿರುದ್ಧವಾಗಿ ಯೆಹೋವನ ಸಾಕ್ಷಿಗಳು ಕೋಪದಿಂದ ಎದುರುಬೀಳಬೇಡವೇ? ಇಲ್ಲ. ಕ್ರೈಸ್ತರು ತಾಳ್ಮೆಯಿಂದ ಅಂಥ ಅಪಮಾನಗಳನ್ನು ತಾಳಿಕೊಳ್ಳಬೇಕು. ಯೇಸುವಿನ ಅನುಕರಣೆಯಲ್ಲಿ ದೀನತೆಯಿಂದ ಕ್ರಿಯೆಗೈಯಬೇಕು: “ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.” (1 ಪೇತ್ರ 2:23) ಯೇಸುವು ಗೆತ್ಸೇಮನೆ ತೋಟದಲ್ಲಿ ದಸ್ತಗಿರಿಯಾದಾಗ, ಕತ್ತಿಯನ್ನು ಹಿಡಿದು ತನ್ನ ರಕ್ಷಣೆಗಾಗಿ ಬಂದ ಶಿಷ್ಯನೊಬ್ಬನನ್ನು ಗದರಿಸಿದ್ದನೆಂಬದು ಅವರಿಗೆ ನೆನಪದೆ. ತದನಂತರ, ಪೊಂತ್ಯ ಪಿಲಾತನಿಗೆ ಅವನಂದದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ, ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಯಲ್ಲಿ ಬೀಳದಂತೆ ನನ್ನ ಪರಿವಾರದವರು ಕಾದಾಡುತ್ತಿದ್ದರು. ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ.”—ಯೋಹಾನ 18:36; ಮತ್ತಾಯ 26:52; ಲೂಕ 22:50, 51.

22. ಉಗ್ರಹಿಂಸೆಗೆ ಗುರಿಯಾದಾಗ ಆಫ್ರಿಕದ ಕೆಲವು ಸಾಕ್ಷಿಗಳು ಯಾವ ಉತ್ತಮ ಮಾದರಿಯನ್ನು ಇಟ್ಟರು?

22 ಯೇಸುವಿನ ಮಾದರಿಯನ್ನು ಮನಸ್ಸಿನಲ್ಲಿಟ್ಟವರಾಗಿ ಆ ಆಫ್ರಿಕನ್‌ ಸಾಕ್ಷಿಗಳಿಗೆ ಪೌಲನ ಈ ಸಲಹೆಯನ್ನು ಪಾಲಿಸುವ ಧೈರ್ಯವಿತ್ತು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ. ಸಾಧ್ಯವಾದರೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವುದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆಂಬದಾಗಿ ಬರೆದದೆ.” (ರೋಮಾಪುರ 12:17-19; ಇದಕ್ಕೆ ಇಬ್ರಿಯ 10:32-34 ಹೋಲಿಸಿ.) ನಮ್ಮ ಆಫ್ರಿಕನ್‌ ಸಹೋದರರು ಇಂದಿರುವ ನಮಗೆಲ್ಲರಿಗೆ ಎಂಥಹ ಹುರಿದುಂಬಿಸುವ ಮಾದರಿಯಾಗಿದ್ದಾರೆ! ಅಧಿಕಾರಿಗಳು ಮಾನಯೋಗ್ಯವಾಗಿ ಕ್ರಿಯೆಗೈಯಲು ನಿರಾಕರಿಸುವಾಗಲೂ ಕೂಡಾ, ನಿಜ ಕ್ರೈಸ್ತರು ಬೈಬಲ್‌ ತತ್ವಗಳನ್ನು ತ್ಯಜಿಸುವುದಿಲ್ಲ.

23. ಚರ್ಚಿಸಲು ಯಾವ ಪ್ರಶ್ನೆಗಳು ಉಳಿದಿವೆ?

23 ಮೇಲಧಿಕಾರಿಗಳಾದರೋ ಕ್ರೈಸ್ತರಿಂದ ಏನನ್ನು ಅಪೇಕ್ಷಿಸ ಸಾಧ್ಯವಿದೆ? ಅವರು ನ್ಯಾಯಸಮ್ಮತವಾಗಿ ಮಾಡಬಲ್ಲ ನಿರ್ಬಂಧದ ಕೇಳಿಕೆಗಳಿಗೆ ಏನಾದರೂ ಸೀಮಿತಗಳಿವೆಯೋ? ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು. (w90 11/1)

[ಅಧ್ಯಯನ ಪ್ರಶ್ನೆಗಳು]

a  ಪ್ರಾಚೀನ ಇಸ್ರಾಯೇಲಿನಲ್ಲಿ ಕೊಡಲ್ಪಟ್ಟ ದೈವಿಕ ನೇಮವಿಧಿಗಳಲ್ಲಿ ಘೋರ ಪಾತಕಗಳಿಗೆ ಮರಣಶಿಕ್ಷೆಯೂ ಸೇರಿತ್ತು.—ವಿಮೋಚನಕಾಂಡ 31:14; ಯಾಜಕಕಾಂಡ 18:29; 20:2-6; ಅರಣ್ಯಕಾಂಡ 35:30.

ನೀವು ವಿವರಿಸಬಲ್ಲಿರೋ?

◻ ಯಾವ ಕೆಲವು ವಿಧಗಳಲ್ಲಿ ಒಬ್ಬನು ಮೇಲಧಿಕಾರಿಗಳಿಗೆ ‘ವಿರುದ್ಧವಾದ ಸ್ಥಾನವನ್ನು ತೆಗೆದು ಕೊಳ್ಳುವವ’ನಾಗಬಹುದು?

◻ ಸರಕಾರದ ಅಧಿಕಾರದ ಸಂಬಂಧದಲ್ಲಿ “ದೇವರ ಏರ್ಪಾಡು” ಏನು?

◻ ಅಧಿಕಾರಿಗಳು “ಭಯದ ಒಬ್ಬ ವ್ಯಕ್ತಿ”ಯಾಗಿರುವದು ಯಾವ ರೀತಿಯಲ್ಲಿ?

◻ ಮಾನವ ಸರಕಾರಗಳು “ದೇವರ ಸೇವಕ”ರಾಗಿ ಕಾರ್ಯ ನಡಿಸುವುದು ಹೇಗೆ?

[ಪುಟ 19 ರಲ್ಲಿರುವ ಚೌಕ]

ಪೊಲೀಸ್‌ ಮುಖ್ಯಸ್ಥನಿಂದ ಒಂದು ಪತ್ರ

“ಪಬ್ಲಿಕ್‌ ಸರ್ವಿಸ್‌ ಫಾರ್‌ ದ ಸ್ಟೇಟ್‌ ಆಫ್‌ ಮಿನಸ್‌ ಗರೈಸ್‌” ಮುದ್ರಿಕೆ ಒತ್ತಿದ್ದ ಒಂದು ಪತ್ರವು ಬ್ರೆಜಿಲ್‌ ಶಾಖಾ ಆಫೀಸಿಗೆ ಬಂತು. ಅದು ಬಂದದ್ದು ಕನ್‌ಕ್ವಿಸ್ಟಾ ನಗರದ ಪೊಲೀಸ್‌ ಮುಖ್ಯಾಧಿಕಾರಿಯಿಂದ. ಏನಾದರೂ ತಪ್ಪಾಗಿತ್ತೋ? ಪತ್ರವೇ ತಿಳಿಸಲಿ. ಅದು ತಿಳಿಸಿದ್ದು:

“ಮಹಾಶಯರೇ:

“ಈ ಪತ್ರದ ಮೂಲಕ ನನ್ನ ಪರಿಚಯವನ್ನು ಮಾಡಿಸುವುದಕ್ಕೆ ಸಂತೋಷಿಸುತ್ತೇನೆ. ನಾನು ಮಿನಾಸ್‌ ಗೆರೈಸ್‌ನ ಕನ್‌ಕ್ವಿಸ್ಟಾ ಶಹರದಲ್ಲಿ ಸುಮಾರು ಮೂರು ವರ್ಷಗಳಿಂದ ಪೊಲೀಸ್‌ ಮುಖ್ಯಸ್ಥನಾಗಿದ್ದೇನೆ. ಮನಸ್ಸಾಕ್ಷಿಪೂರ್ವಕ ಕೆಲಸ ಮಾಡಲು ಯಾವಾಗಲೂ ನನ್ನ ಪ್ರಯತ್ನವದೆ. ಆದರೆ ಜೈಲಿನಲ್ಲಿ ಶಾಂತಿಯನ್ನು ಇಡಲು ನನಗೆ ಸಮಸ್ಯೆಗಳು ಇರುತ್ತಿದ್ದವು. ಒಳವಾಸಿಗಳಿಗೆ ನಿರ್ದಿಷ್ಟ ಕೆಲಸಗಳಲ್ಲಿ ತರಬೇತು ಕೊಡಲ್ಪಟ್ಟರೂ, ಅವರು ಅವಿಶ್ರಾಂತರಾಗಿರುತ್ತಿದ್ದರು.

“ಕೆಲವು ತಿಂಗಳ ಹಿಂದೆ ಸೆನೋರ್‌ ಒ—ರವರು ನಮ್ಮ ಶಹರಕ್ಕೆ ಬಂದರು ಮತ್ತು ತನ್ನನ್ನು ಒಬ್ಬ ಯೆಹೋವನ ಸಾಕ್ಷಿಯಾಗಿ ಪರಿಚಯ ಮಾಡಿಸಿದರು. ಸೆರೆವಾಸಿಗಳಲ್ಲಿ ಕೆಲವರಿಗೆ ಬೈಬಲನ್ನು ಸಾರ ತೊಡಗಿದರು. ಅವರಿಗೆ ಓದು ಬರಹವನ್ನು ಕಲಿಸಿದರು, ಮೂಲಭೂತ ನೈರ್ಮಲ್ಯ ಸೂತ್ರವನ್ನು ಮತ್ತು ಸಾಮಾಜಿಕ ಕಸುಬುಗಳನ್ನು ಹೇಳಿಕೊಟ್ಟರು, ಪವಿತ್ರ ಬೈಬಲಿನ ಕುರಿತೂ ಅವರಿಗೆ ತಿಳಿಸಿದರು. ಈ ಸುವಾರ್ತಿಕರು ಕೆಲಸ ಮಾಡಿದ ರೀತಿಯು ಅವರ ಸಮರ್ಪಣೆ, ಪ್ರೀತಿ ಮತ್ತು ಸ್ವ-ತ್ಯಾಗವನ್ನು ತೋರಿಸಿತು. ಒಳವಾಸಿಗಳ ನಡಾವಳಿಯು ಬೇಗನೇ ಒಳ್ಳೇದಕ್ಕೆ ಗಮನಾರ್ಹವಾಗಿ ಬದಲಾದದ್ದು, ಪ್ರೇಕ್ಷಕರ ಅಚ್ಚರಿ ಮತ್ತು ಆದರಕ್ಕೆ ಪಾತ್ರವಾಯಿತು.

ನಮ್ಮ ಜೈಲಿನಲ್ಲಿ ಏನು ಸಂಭವಿಸಿತೋ ಅದರ ನೋಟದಲ್ಲಿ, ಈ ಆದರಪಾತ್ರ ಸುವಾರ್ತಿಕರಿಂದ ನಮ್ಮ ಸಮಾಜದಲ್ಲಿ ನಡಿಸಲ್ಪಟ್ಟ ಸತ್ಕಾರ್ಯಕ್ಕಾಗಿ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರೇಕ್ಟ್‌ ಸೊಸೈಟಿಗೆ ನಮ್ಮ ಗಣ್ಯತೆಯನ್ನು ಅಧಿಕೃತವಾಗಿ ತಿಳಿಸಲು ನಾನು ಬಯಸುತ್ತೇನೆ.”

ಸರಕಾರಿ ಅಧಿಕಾರದ ಕುರಿತಾಗಿ ಅಪೊಸ್ತಲ ಪೌಲನು ಅಂದದ್ದು: “ಒಳ್ಳೇದನ್ನು ಮಾಡಿದರೆ ನಿಮಗೆ ಅವನಿಂದ ಹೊಗಳಿಕೆ ಉಂಟಾಗುವುದು.” (ರೋಮಾಪುರ 13:3) ಮೇಲಿನ ಸಂಗತಿಯಲ್ಲಿ ಇದು ಖಂಡಿತವಾಗಿಯೂ ಸತ್ಯ. ಶಿಕ್ಷೆವಿಧಾಯಕ ವ್ಯವಸ್ಥೆಯ ವರ್ಷಗಳಿಂದ ಮಾಡಲಾಗದ ಒಂದು ಸಂಗತಿಯನ್ನು ಸುವಾರ್ತೆಯು ಕೆಲವೇ ತಿಂಗಳುಗಳಲ್ಲಿ ಪೂರೈಸಿದ್ದು, ದೇವರ ವಾಕ್ಯಕ್ಕಿರುವ ಮಾರ್ಪಡಿಸುವ ಶಕ್ತಿಯ ಎಂತಹ ಸಾಕ್ಷ್ಯವು!—ಕೀರ್ತನೆ 19:7-9.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ