ರೋಮಾಪುರದವರಿಗೆ ಅತ್ಯುತ್ತಮ ವಾರ್ತಾಪ್ರಾಪ್ತಿ
ಪಾಪಪೂರ್ಣ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗುವುದೂ ಮತ್ತು ಹೀಗೆ ನಿತ್ಯಜೀವವನ್ನು ಪಡೆಯುವಂತಾಗುವುದೂ ಹೇಗೆ? ಈ ಪ್ರಶ್ನೆಯು ನಮ್ಮ ಸಾಮಾನ್ಯ ಶಕದ ಮೊದಲ ಶತಮಾನದಲ್ಲಿ ತೀಕ್ಷ್ಣ ವಾದವಿವಾದಗಳನ್ನು ಎಬ್ಬಿಸಿತ್ತು. ನಿಮಗದರ ಉತ್ತರವು ಗೊತ್ತೋ? ನಿಮಗದು ಗೊತ್ತಿರಲಿ, ಇಲ್ಲದಿರಲಿ, ಆ ಸಮಸ್ಯೆಯ ಕುರಿತು ಅಪೋಸ್ತಲ ಪೌಲನ ನೈಪುಣ್ಯಯುಕ್ತ ಚರ್ಚೆಯನ್ನು ಬೈಬಲಿನ ರೋಮಾಪುರ ಪುಸ್ತಕದಲ್ಲಿ ನೀವು ಓದುವ ಹಂಗಿನವರಾದ್ದೀರಿ. ಹಾಗೆ ಮಾಡುವದರಿಂದ ನಂಬಿಕೆ, ಕ್ರಿಯೆ, ನೀತಿ ಮತ್ತು ಜೀವದ ನಡುವೆ ಇರುವ ಪ್ರಾಮುಖ್ಯ ಸಂಬಂಧವನ್ನು ತಿಳಿಯಲು ನಿಮಗೆ ಸಹಾಯವಾಗುವದು.
ಪೌಲನು ಮತ್ತು ರೋಮಾಪುರದವರು
ರೋಮಾಪುರ ಪುಸ್ತಕವು ರೋಮಾಪುರದ ಕ್ರೈಸ್ತರಿಗೆ ಸಾ.ಶ. 56 ರ ಸುಮಾರಿಗೆ ಪೌಲನು ಬರೆದ ಪತ್ರಿಕೆಯಾಗಿದೆ. ಅವನು ಆ ಪತ್ರವನ್ನು ಬರೆದದ್ದೇಕೆ? ಸಾ.ಶ. 56ರಲ್ಲಿ ಪೌಲನಿನ್ನೂ ರೋಮನ್ನು ಸಂದರ್ಶಿಸದಿದ್ದರೂ, ಅಲ್ಲಿದ್ದ ಅನೇಕ ಕ್ರೈಸ್ತರ ಕುರಿತು ಅವನಿಗೆ ತಿಳಿದಿತ್ತು ಯಾಕಂದರೆ ಅವನು ಪತ್ರದಲ್ಲಿ ಹಲವಾರು ಮಂದಿಯನ್ನು ಹೆಸರುಹೇಳಿ ಸೂಚಿಸಿರುವನು. ಅದಲ್ಲದೆ, ಅಲ್ಲಿದ್ದ ತನ್ನ ಕ್ರೈಸ್ತ ಸಹೋದರರಿಗೆ ಉತ್ತೇಜನವನ್ನು ಕೊಡುವದಕ್ಕಾಗಿ ಪೌಲನು ರೋಮಿಗೆ ಹೋಗಲು ಅತಿಯಾಗಿ ಬಯಸಿದ್ದನು. ಮತ್ತು ರೋಮಿನ ಮಾರ್ಗವಾಗಿ ಸ್ಪೆಯ್ನ್ ದೇಶಕ್ಕೆ ತನ್ನ ಮಿಶನೆರಿ ಸಂಚಾರವನ್ನು ಮುಂದರಿಸಲೂ ಪೌಲನು ಯೋಜಿಸಿದ್ದನೆಂತ ತೋರುತ್ತದೆ.—ರೋಮಾಪುರ 1:11, 12; 15:22, 24.
ಆದರೂ, ಈ ಪತ್ರಿಕೆಯನ್ನು ಬರೆಯುವುದರಲ್ಲಿ ಪೌಲನಿಗಿದ್ದ ಮುಖ್ಯ ಉದ್ದೇಶವು ಈ ಮಹತ್ವದ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ: ಜೀವಕ್ಕೆ ನಡಿಸುವ ನೀತಿಯನ್ನು ಜನರು ಗಳಿಸುವಂತಾಗುವುದು ಹೇಗೆ? ಉತ್ತರವು ಅತ್ಯುತ್ತಮ ವಾರ್ತೆಯಾಗಿ ಪರಿಣಮಿಸಿದೆ. ನಂಬಿಕೆಯ ಆಧಾರದಲ್ಲಿ ನೀತಿಯು ನಿರ್ಣಯಿಸಲ್ಪಡುತ್ತದೆ. ಪೌಲನು ಈ ವಿಷಯವನ್ನು ತನ್ನ ಪತ್ರದ ಮುಖ್ಯಾಂಶವಾಗಿಟ್ಟು ಬರೆದದ್ದು: “ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೊಳ್ಳುವವನಲ್ಲ. ಆ ಸುವಾರ್ತೆಯು ದೇವರ ಬಲಸ್ವರೂಪವಾಗಿದ್ದು ಮೊದಲು ಯೆಹೂದ್ಯರಿಗೆ ಆಮೇಲೆ ಗ್ರೀಕರಿಗೆ ಅಂತೂ ನಂಬುವವರೆಲರ್ಲಿಗೆ ರಕ್ಷಣೆ ಉಂಟುಮಾಡುವಂತಾದ್ದಾಗಿದೆ. ಹೇಗಂದರೆ ದೇವರಿಂದ ದೊರಕುವ ನೀತಿಯು ಅದರಲ್ಲಿ ತೋರಿಬರುತ್ತದೆ. ನೀತಿವಂತನು ನಂಬಿಕೆಯಿಂದಲೇ ಬದುಕುವನೆಂಬ ಶಾಸ್ತ್ರೋಕ್ತಿಯ ಪ್ರಕಾರ ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ವೃದ್ಧಿಪಡಿಸುವಂಥಾದ್ದಾಗಿದೆ.”—ರೋಮಾಪುರ 1:16, 17.
ನಂಬಿಕೆ ಮತ್ತು ನಿಯಮಶಾಸ್ತ್ರ
ಒಂದನೇ ಶತಮಾನದಲ್ಲಿ, ನಂಬಿಕೆಯಿಂದ ಮಾತ್ರವೇ ನೀತಿಯು ದೊರಕುತ್ತದೆಂಬದನ್ನು ಎಲ್ಲರೂ ಒಪ್ಪಿರಲಿಲ್ಲ. ಅದಕ್ಕೆ ಇನ್ನೂ ಹೆಚ್ಚಿನದ್ದು ಬೇಕೆಂದು ಕೆಲವು ಜನರು ಪಟ್ಟುಹಿಡಿದಿದ್ದರು. ಯೆಹೋವನು ಮೋಶೆಯ ನಿಯಮಶಾಸ್ತ್ರವನ್ನು ಒದಗಿಸಿರಲಿಲ್ಲವೇ? ಪ್ರೇರಿತ ಒದಗಿಸುವಿಕೆಗೆ ಆಧೀನನಾಗದ ಯಾವನಾದರೂ ನೀತಿಯನ್ನು ಗಳಿಸುವುದಾದರೂ ಹೇಗೆ? (ಗಲಾತ್ಯ 4:9-11, 21; 5:2 ನೋಡಿ) ಸಾ.ಶ. 49ನೇ ವರ್ಷದಲ್ಲಿ, ಯೆರೂಸಲೇಮಿನ ಆಡಳಿತಾ ಮಂಡಲಿಯು ನೇಮನಿಷ್ಟೆಗೆ ಅಧೀನರಾಗುವ ವಿಷಯವಾದ ಪ್ರಶ್ನೆಯನ್ನು ಚರ್ಚಿಸಿತ್ತು, ಮತ್ತು ಸುವಾರ್ತೆಯನ್ನು ಸ್ವೀಕರಿಸಿದ ಅನ್ಯರಿಗೆ ಸುನ್ನತಿ ಮಾಡಿಕೊಳ್ಳುವ ಹಾಗೂ ಯೆಹೂದಿ ನೇಮನಿಷ್ಟೆಗಳಿಗೆ ಅಧೀನರಾಗುವ ಅಗತ್ಯವಿಲ್ಲವೆಂದು ತೀರ್ಮಾನಿಸಿತ್ತು.—ಅಪೋಸ್ತಲಕೃತ್ಯ 15:1, 2, 28, 29.
ಸುಮಾರು ಏಳು ವರ್ಷಗಳ ಅನಂತರ, ಪೌಲನು ರೋಮಾಪುರದವರಿಗೆ ಬರೆದ ತನ್ನ ಪತ್ರಿಕೆಯಲ್ಲಿ ಈ ಸ್ಥಿತ್ಯಂತರ ತೀರ್ಮಾನವನ್ನು ಬೆಂಬಲಿಸಿದನು. ನಿಶ್ಚಯವಾಗಿ ಅವನು ಅದಕ್ಕೂ ಹೆಚ್ಚನ್ನು ಬರೆದನು. ಅನ್ಯರಾದ ಕ್ರೈಸ್ತರಿಗೆ ನಿಯಮಶಾಸ್ತ್ರವು ಅನಾವಶ್ಯಕವೆಂದು ಅವನು ಹೇಳಿದ್ದಲ್ಲದೆ, ಅದಕ್ಕೆ ವಿಧೇಯತೆಯಲ್ಲಿ ಆತುಕೊಂಡ ಯೆಹೂದ್ಯರು ಸಹ ಜೀವಕ್ಕಾಗಿ ನೀತಿವಂತರೆಂದು ಎಣಿಸಲ್ಪಡಲಾರರೆಂದೂ ನುಡಿದನು.
ನಂಬಿಕೆಯ ಮೂಲಕ ನೀತಿ
ನೀವು ರೋಮಾಪುರ ಪುಸ್ತಕವನ್ನು ಓದುವಾಗ, ಪೌಲನು ಎಷ್ಟು ಜಾಗ್ರತೆಯಿಂದ ತನ್ನ ವಾದವನ್ನು ನಿರ್ಮಿಸಿದ್ದಾನೆಂಬದನ್ನು ಕಾಣುವಿರಿ. ತನ್ನ ಹೇಳಿಕೆಗಳಿಗೆ ಹಿಬ್ರೂ ಶಾಸ್ತ್ರದ ಅನೇಕ ಉದ್ದರಣೆಗಳನ್ನು ಆಧಾರವಾಗಿ ಕೊಟ್ಟಿರುತ್ತಾನೆ. ಅವನ ಪ್ರೇರಿತ ಬೋಧನೆಯನ್ನು ಸ್ವೀಕರಿಸಲು ಕಷ್ಟವಾಗಿರಬಹುದಾದ ಯೆಹೂದ್ಯರಿಗೆ ಮಾತಾಡುವಾಗ, ಅವನು ಒಲವನ್ನೂ ಚಿಂತೆಯನ್ನೂ ವ್ಯಕ್ತಪಡಿಸುತ್ತಾನೆ. (ರೋಮಾಪುರ 3:1, 2; 9:1-3) ಆದಾಗ್ಯೂ, ಅವನು ತನ್ನ ವಾದವನ್ನು ಗಮನಾರ್ಹ ಸ್ಪಷ್ಟತೆ ಮತ್ತು ನಿರ್ವಿವಾದೀಯ ಸಮಂಜಸತ್ವದಿಂದ ನೀಡಿರುತ್ತಾನೆ.
ರೋಮಾಪುರ 1-4 ಅಧ್ಯಾಯಗಳಲ್ಲಿ, ಎಲ್ಲರೂ ಪಾಪಕ್ಕೆ ದೋಷಿಗಳು ಎಂಬ ಸತ್ಯವನ್ನು ಪೌಲನು ಮುಂತರುತ್ತಾನೆ. ಆದ್ದರಿಂದ, ಮಾನವರು ನೀತಿವಂತರಾಗಿ ಎಣಿಸಲ್ಪಡುವ ಒಂದೇ ಮಾರ್ಗ ನಂಬಿಕೆಯ ಆಧಾರದಿಂದಲೇ. ಮೋಶೆಯ ನಿಯಮವನ್ನು ಪಾಲಿಸಿದ ಮೂಲಕ ನೀತಿವಂತರಾಗಿ ಎಣಿಸಲ್ಪಡಲು ಯೆಹೂದ್ಯರು ಪ್ರಯತ್ನಿದ್ದರು ನಿಜ. ಆದರೆ ಅವರು ಅಸಫಲರಾದರು. ಆದ್ದರಿಂದ, ಪೌಲನು ಧೈರ್ಯದಿಂದ ಹೇಳಿದ್ದು: “ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಬಿದ್ದವರು.” ಈ ಅಪ್ರಿಯವಾದ ಸತ್ಯವನ್ನು ಅವನು ಹಲವಾರು ಶಾಸ್ತ್ರೀಯ ಉದ್ದರಣೆಗಳಿಂದ ರುಜುಪಡಿಸಿದ್ದಾನೆ.—ರೋಮಾಪುರ 3:9.
“ಯಾವನಾದರೂ ನೇಮನಿಷ್ಟೆಗಳಿಂದ ನೀತಿವಂತನಾಗಿ ನಿರ್ಣಯಿಸಲ್ಪಡುವದಿಲ್ಲ” ಎಂದಾದರೆ, ಇರುವ ನಿರೀಕ್ಷೆಯಾದರೂ ಏನು? ದೇವರು ಮನುಷ್ಯರನ್ನು ಯೇಸುವಿನ ವಿಮೋಚನಾ ಯಜ್ನದ ಆಧಾರದಲ್ಲಿ ಉಚಿತಾರ್ಥವರವಾಗಿ ನೀತಿವಂತರೆಂದು ನಿರ್ಣಯಿಸುವನು. (ರೋಮಾಪುರ 3:20,24) ಇದನ್ನು ದೊರಕಿಸಿಕೊಳ್ಳುವರೇ, ಅವರು ಆ ವಿಮೋಚನಾ ಯಜ್ನದಲ್ಲಿ ನಂಬಿಕೆಯನ್ನಿಡಲೇಬೇಕು. ನಂಬಿಕೆಯಿಂದಲೇ ಮಾನವರು ನೀತಿವಂತರಾಗಿ ನಿರ್ಣಯಿಸಲ್ಪಡುವರೆಂಬದು ಒಂದು ವಿಚಿತ್ರ ಸಂಗತಿಯೋ? ಅಲ್ಲವೇ ಅಲ್ಲ. ಅಬ್ರಹಾಮನು ನಂಬಿಕೆಯ ಕಾರಣದಿಂದಲೇ ನೀತಿವಂತನಾಗಿ ನಿರ್ಣಯಿಸಲ್ಪಟ್ಟನು; ಆಗ ಧರ್ಮಶಾಸ್ತ್ರದ ನೇಮಗಳ ಸ್ಥಾಪನೆ ಸಹಾ ಆಗಿರಲಿಲ್ಲ.—ರೋಮಾಪುರ 4:3.
ನಂಬಿಕೆಯ ಮಹತ್ವವನ್ನು ಸ್ಥಾಪಿಸಿದ ನಂತರ, 5ನೇ ಅಧ್ಯಾಯದಲ್ಲಿ ಪೌಲನು ಕ್ರೈಸ್ತ ನಂಬಿಕೆಯ ಆಧಾರವನ್ನು ಚರ್ಚಿಸುತ್ತಾನೆ. ಅದು ಯೇಸುವೇ; ಆತನ ನೀತಿಯ ಮಾರ್ಗವು ಯಾರು ಆತನಲ್ಲಿ ನಂಬಿಕೆ ಇಡುತ್ತಾರೋ ಅವರಿಗಾಗಿ ಆದಾಮನ ಪಾಪದ ದುಷ್ಪರಿಣಾಮಗಳನ್ನು ತೆಗೆದುಹಾಕಬಲ್ಲದು. ಹೀಗೆ, ಮೋಶೆಯ ನಿಯಮಶಾಸ್ತ್ರಕ್ಕೆ ವಿಧೇಯರಾಗುವುದರಿಂದಲ್ಲ, “ಒಂದೇ ಸತ್ಕಾರ್ಯದಿಂದಾಗಿ, ಎಲ್ಲಾ ಮನುಷ್ಯರಿಗೆ ನೀತಿವಂತರೆಂಬ ನಿರ್ಣಯವು ಉಂಟಾಗಿ ಜೀವವನ್ನು ಫಲಿಸುತ್ತದೆ.”—ರೋಮಾಪುರ 5:18.
ಆಕ್ಷೇಪಗಳನ್ನು ಉತ್ತರಿಸುವುದು
ಕ್ರೈಸ್ತರು ಧರ್ಮಶಾಸ್ತ್ರದ ಕೆಳಗಿಲವ್ಲಾದರೆ ಅವರನ್ನು ಪಾಪಮಾಡುತ್ತಾ ಮುಂದರಿಯುವುದರಿಂದ ತಡೆಯಲು ಏನಿದೆ, ದೇವರ ಕೃಪೆಯಿಂದಾಗಿ ಅವರು ಹೇಗೂ ನೀತವಂತರೆಂದು ನಿರ್ಣಯಿಸಲ್ಪಡುವರಲ್ಲವೇ? ಪೌಲನು ಈ ಆಕ್ಷೇಪವನ್ನು ರೋಮಾಪುರ 6ನೇ ಅಧ್ಯಾಯದಲ್ಲಿ ಉತ್ತರಿಸುತ್ತಾನೆ. ಕ್ರೈಸ್ತರು ತಮ್ಮ ಪೂರ್ವದ ಪಾಪದ ಕೃತ್ಯಗಳಿಗೆ ಸತ್ತವರಾಗಿದ್ದಾರೆ. ಯೇಸುವಿನಲ್ಲಿ ಅವರ ಹೊಸ ಜೀವನವು ತಮ್ಮ ಮಾಂಸಿಕ ನಿರ್ಬಲತೆಗಳ ವಿರುದ್ಧ ಹೋರಾಡುವಂತೆ ಅವರನ್ನು ಬದ್ಧರನ್ನಾಗಿ ಮಾಡುತ್ತದೆ. “ಸಾಯತಕ್ಕ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ.”—ರೋಮಾಪುರ 6:12.
ಆದರೆ ಕಡಿಮೆಪಕ್ಷ ಯೆಹೂದ್ಯರಾದರೂ ಇನ್ನೂ ಮೋಶೆಯ ಧರ್ಮಶಾಸ್ತ್ರಕ್ಕೆ ಅಂಟಿಕೊಳ್ಳಬೇಡವೇ? ಹಾಗೆ ಮಾಡಬಾರದೆಂದು ಪೌಲನು 7ನೆಯ ಅಧ್ಯಾಯದಲ್ಲಿ ಜಾಗರೂಕತೆಯಿಂದ ವಿವರಿಸುತ್ತಾನೆ. ಹೇಗೆ ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರುವಳೋ ಮತ್ತು ಗಂಡನು ಸತ್ತರೆ ಗಂಡನ ಹಂಗು ಆಕೆಗೆ ತಪ್ಪುತ್ತದೋ, ಹಾಗೆಯೇ ಯೇಸುವಿನ ಮರಣವು ನಂಬುವ ಯೆಹೂದ್ಯರನ್ನು ಧರ್ಮಶಾಸ್ತ್ರಾಧೀನತೆಯಿಂದ ಮುಕ್ತಗೊಳಿಸಿತು. “ನೀವು ಸಹಾ ಕ್ರಿಸ್ತನ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತಿರಿ.”—ರೋಮಾಪುರ 7:4.
ಹಾಗಾದರೆ, ಧರ್ಮಶಾಸ್ತ್ರದಲ್ಲಿ ಏನೋ ತಪ್ಪಿತ್ತು ಎಂದಿದರ ಅರ್ಥವೂ? ಅಲ್ಲ. ಧರ್ಮಶಾಸ್ತ್ರವು ಲೋಪವಿಲ್ಲದ್ದು. ಸಮಸ್ಯೆಯೇನಂದರೆ ಅಸಂಪೂರ್ಣ ಮಾನವರು ಅದನ್ನು ಪಾಲಿಸಲು ಅಶಕ್ತರಾದರು. “ಧರ್ಮಶಾಸ್ತ್ರವು ಪಾರಮಾರ್ಥಿವೆಂದು ನಾವು ಬಲ್ಲೆವು” ಎಂದು ಪೌಲನು ಬರೆದನು, “ಆದರೆ ನಾನು ದೇಹಧರ್ಮಕ್ಕೆ ಒಳಗಾದವನೂ ಪಾಪದ ಸ್ವಾಧೀನದಲ್ಲಿರುವುದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ.” ಅಸಂಪೂರ್ಣ ಮನುಷ್ಯನು ದೇವರ ಪರಿಪೂರ್ಣ ನಿಯಮವನ್ನು ಪಾಲಿಸಲಾರದೆ ಹೋದನು, ಹೀಗೆ ಅಪರಾಧಿಯಾಗಿ ನಿರ್ಣಯಿಸಲ್ಪಟ್ಟನು. ಹೀಗಿರಲಾಗಿ, “ಕ್ರಿಸ್ತನಲ್ಲಿರುವವರಿಗೆ ಅಪರಾಧ ನಿರ್ಣಯವು ಇಲ್ಲದೇ ಇರುವುದು” ಅದೆಷ್ಟು ಆಶ್ಚರ್ಯಕರ! ಅಭಿಷಿಕ್ತ ಕ್ರೈಸ್ತರು ಪವಿತ್ರಾತ್ಮದಿಂದ ಆದುಕೊಳ್ಳಲ್ಪಟ್ಟು ಆತನ ಪುತ್ರರಾಗಿ ಮಾಡಲ್ಪಟ್ಟರು. ತಮ್ಮ ಮಾಂಸಿಕ ಅಪೂರ್ಣತೆಗಳೊಂದಿಗೆ ಹೋರಾಡಲು ಯೆಹೋವನಾತ್ಮವು ಅವರಿಗೆ ಸಹಾಯ ಮಾಡುತ್ತದೆ. “ದೇವರು ಆದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ಅವರನ್ನು ನೀತಿವಂತರೆಂದು ನಿರ್ಣಯಿಸಿದನು.” (ರೋಮಾಪುರ 7:14; 8:1, 33) ದೇವರ ಪ್ರೀತಿಯಿಂದ ಅವರನ್ನು ಯಾವುದೂ ಅಗಲಿಸಲಾರದು.
ನೀತಿತ್ವ ಮತ್ತು ಮಾಂಸಿಕ ಯೆಹೂದ್ಯರು
ನಿಯಮಶಾಸ್ತ್ರವು ಇನ್ನುಮುಂದೆ ಅವಶ್ಯವಿಲ್ಲವಾದರೆ, ಇಸ್ರಾಯೇಲ್ ಜನಾಂಗವನ್ನು ಇದು ಎಲಿರ್ಲಿಸುವುದು? ಮತ್ತು ಇಸ್ರಾಯೇಲಿನ ಪುನ:ಸ್ಥಾಪನೆಯನ್ನು ವಾಗ್ದಾನಿಸುವ ಆ ಎಲ್ಲಾ ಶಾಸ್ತ್ರ ವಚನಗಳ ಕುರಿತಾಗಿ ಏನು? ಈ ಪ್ರಶ್ನೆಗಳು ರೋಮಾಪುರ 9-11ನೇ ಅಧ್ಯಾಯಗಳಲ್ಲಿ ಚರ್ಚಿಸಲ್ಪಟ್ಟಿವೆ. ಇಸ್ರೇಲ್ಯರಲ್ಲಿ ಅಲ್ಪ ಸಂಖ್ಯಾತರು ಮಾತ್ರ ರಕ್ಷಣೆ ಹೊಂದುವರೆಂದೂ ಮತ್ತು ದೇವರು ಅನ್ಯ ಜನರನ್ನು ಲಕ್ಷಕ್ಕೆ ತರುವನೆಂದೂ ಹಿಬ್ರೂ ಶಾಸ್ತ್ರವಚನಗಳು ಮುಂತಿಳಿಸಿವೆ. ಇದಕ್ಕೆ ಹೊಂದಿಕೆಯಲ್ಲಿ, ಇಸ್ರೇಲಿನ ರಕ್ಷಣೆಯ ಕುರಿತಾದ ಪ್ರವಾದನೆಗಳು ಮಾಂಸಿಕ ಇಸ್ರೇಲ್ಯರಲ್ಲಿ ಅಲ್ಲ, ಕ್ರೈಸ್ತ ಸಭೆಯಲ್ಲಿ ನೆರವೇರಿಕೆ ಪಡೆದದೆ; ಇದರಲ್ಲಿ ನಂಬಿದ ಮಾಂಸಿಕ ಯೆಹೂದ್ಯರು ಕೇಂದ್ರಭಾಗವಾಗಿದ್ದು, ಯೋಗ್ಯ ಹೃದಯದ ಅನ್ಯರೂ ತುಂಬಿಸಲ್ಪಟ್ಟರು.—ರೋಮಾಪುರ 10:19-21; 11:1, 5, 17-24.
ನೀತಿಯ ತತ್ವಗಳು
ರೋಮಾಪುರ 12-15 ಅಧ್ಯಾಯಗಳಲ್ಲಿ, ಅಭಿಷಿಕ್ತ ಕ್ರೈಸ್ತರು ತಮ್ಮ ನೀತಿನಿರ್ಣಯದೊಂದಿಗೆ ಹೊಂದಿಕೆಯಲ್ಲಿ ಹೇಗೆ ಜೀವಿಸಬಲ್ಲರು ಎಂಬ ಕೆಲವು ವ್ಯಾವಹಾರ್ಯ ವಿಧಾನಗಳನ್ನು ವಿವರಿಸುತ್ತಾನೆ. ಉದಾಹರಣೆಗೆ, ಅವನನ್ನುವದು: “ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವ ಯಜ್ನವಾಗಿ ಅರ್ಪಿಸಿರಿ. ಇದೇ ನಿಮ್ಮ ವಿವೇಕ ಪೂರ್ವಕವಾದ ಆರಾಧನೆಯು. ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕ ಭಾವದವರಾಗಿರ್ರಿ.” (ರೋಮಾಪುರ 12:1, 2) ನಾವು ಒಳ್ಳೇತನದಲ್ಲಿರುವ ಶಕ್ತಿಯಲ್ಲಿ ಭರವಸವಿಟ್ಟವರಾಗಿ, ಕೆಟ್ಟತನವನ್ನು ಕೆಟ್ಟತನದಿಂದ ಹೋರಾಡಬಾರದು. “ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು” ಎಂದು ಬರೆಯತ್ತಾನೆ ಅಪೋಸ್ತಲನು.—ರೋಮಾಪುರ 12:21.
ರೋಮ್ ಪೌಲನ ದಿನಗಳಲ್ಲಿ ರಾಜಕೀಯ ಆಡಳಿತದ ಕೇಂದ್ರವಾಗಿತ್ತು. ಆದ್ದರಿಂದ ಪೌಲನು ಕ್ರೈಸ್ತರಿಗೆ ಸುಜ್ನ ಸೂಚನೆಯಿತ್ತದ್ದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬನಿಗೂ ಅಧಿಕಾರವಿರುವದಿಲ್ಲ.” (ರೋಮಾಪುರ 13:1) ಕ್ರೈಸ್ತರು ಒಬ್ಬರೊಂದಿಗೊಬ್ಬರು ಮಾಡುವ ವ್ಯವಹಾರಗಳು ಸಹಾ ನೀತಿಗೆ ಹೊಂದಿಕೆಯಲ್ಲಿ ಜೀವಿಸುವ ಒಂದು ಭಾಗವು. ಪೌಲನನ್ನುವುದು: “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಖುಣವೇ ಹೊರತು ಬೇರೆ ಯಾವ ಸಾಲವೂ ನಿಮಗಿರಬಾರದು. ಮತ್ತೊಬ್ಬರನ್ನು ಪ್ರೀತಿಸುವವನುಧರ್ಮಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ.”—ರೋಮಾಪುರ 13:8.
ಅದಲ್ಲದೆ, ಕ್ರೈಸ್ತರು ಒಬ್ಬರು ಇನ್ನೊಬ್ಬರ ಮಸ್ಸಾಕಿಯ್ಷ ವಿಷಯದಲ್ಲಿ ಚಿಂತಿತರಾಗಿರಬೇಕೇ ವಿನಾ ತೀರ್ಪುಮಾಡುವವರಾಗಬಾರದು. ಪೌಲನು ಪ್ರೋತ್ಸಾಹಿಸಿದ್ದು: “ಆದ್ದರಿಂದ ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳೋಣ.” (ರೋಮಾಪುರ14:19) ಕ್ರೈಸ್ತಜೀವಿತದ ಪ್ರತಿಯೊಂದು ಮುಖದಲ್ಲಿ ಅನ್ವಯಿಸಲು ಎಂತಹ ಉತ್ತಮ ಸೂಚನೆ! ಅನಂತರ 16ನೇ ಅಧ್ಯಾಯದಲ್ಲಿ ಪೌಲನು ವೈಯಕ್ತಿಕ ವಂದನೆಗಳೊಂದಿಗೆ ಮತ್ತು ಪ್ರೋತ್ಸಾಹನೆ ಮತ್ತು ಸೂಚನೆಯ ಕೊನೆಯ ಮಾತುಗಳೊಂದಿಗೆ ಮುಕ್ತಾಯಗೊಳಿಸುತ್ತಾನೆ.
ಅಭಿಷಿಕ್ತರಿಗೆ ಮತ್ತು ಬೇರೆ ಕುರಿಗಳಿಗೆ
ರೋಮಾಪುರ ಪತ್ರಿಕೆಯಲ್ಲಿ ಚರ್ಚಿಸಿದ ವಿಷಯಗಳು ಒಂದನೇ ಶತಕದಲ್ಲಿ ಮಹತ್ವವುಳ್ಳದಾಗಿದ್ದವು ಮತ್ತು ಇಂದು ಸಹಾ ಪ್ರಾಮುಖ್ಯ ಗಮನಕ್ಕೆ ಅರ್ಹವಾಗಿವೆ. ನೀತಿ ಮತ್ತು ಅನಂತ ಜೀವನವು ಯೆಹೋವನ ಸೇವಕರೆಲ್ಲರಿಗೆ ನಿರ್ಭಂದಕ ಅಭಿರುಚಿಯ ವಿಷಯಗಳು. ರೋಮಾಪುರದವರಿಗೆ ಬರೆದ ಪತ್ರವು ಅಭಿಷಿಕ್ತ ಕ್ರೈಸ್ತ ಸಭೆಗೆ ಬರೆಯಲ್ಪಟ್ಟಿತು ನಿಜ. ಇಂದು ಯೆಹೋವನ ಸಾಕ್ಷಿಗಳಲ್ಲಿ ಅಧಿಕ ಸಂಖ್ಯಾತರು ಭೂ ನಿರೀಕ್ಷೆಯಿರುವ “ಮಹಾ ಸಮೂಹ” ದವರು. (ಪ್ರಕಟನೆ 7:9) ಆದರೂ, ಈ ಪತ್ರಿಕೆಯಲ್ಲಿ ಇವರಿಗೂ ಪ್ರಾಮುಖ್ಯವಾದ ಸಂದೇಶವಿದೆ. ಅದು ಯಾವುದು?
ಕ್ರೈಸ್ತರು ನಂಬಿಕೆಯ ಮೂಲಕವಾಗಿ ನೀತಿವಂತರೆಂದು ನಿರ್ಣಯಿಸಲ್ಪಡುವರೆಂದು ರೋಮಾಪುರ ಪುಸ್ತಕವು ರುಜುಪಡಿಸುತ್ತದೆ. ಅಭಿಷಿಕ್ತರಿಗಾದರೋ ಇದು ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಜತೆರಾಜರಾಗಿ ಪರಿಣಮಿಸುವ ನೋಟದಲ್ಲಿದೆ. ಆದರೂ, ಮಹಾ ಸಮೂಹದ ಸದಸ್ಯರು ಸಹಾ ನೀತಿವಂತರಾಗಿ ನಿರ್ಣಯಿಸಲ್ಪಡುತ್ತಾರೆ, ಆದರೆ, ಮೂಲಪಿತೃವಾದ ಅಬ್ರಹಾಮನಂತೆ ‘ದೇವರ ಸ್ನೇಹಿತ’ ರೋಪಾದಿ. (ಯಾಕೋಬ 2:21-23) ಅವರ ನೀತಿಯು ಮಹಾ ಸಂಕಟವನ್ನು ಪಾರಾಗುವ ನೋಟದಲ್ಲಿದೆ ಮತ್ತು ಯೇಸುವಿನ ರಕ್ತದ ಮೇಲೆ ಆಧರಿಸಿರುತ್ತದೆ; ಅಭಿಷಿಕ್ತರ ವಿಷಯದಲ್ಲಿ ಇರುವಂತೆಯೇ. (ಕೀರ್ತನೆ 37:11; ಯೋಹಾನ 10:16; ಪ್ರಕಟನೆ 7:9, 14) ಆದಕಾರಣ, ರೋಮಾಪುರ ಪತ್ರಿಕೆಯಲ್ಲಿ ಪೌಲನ ವಿವೇಚನೆಯು ಬೇರೆ ಕುರಿಗಳಿಗೆ ಹಾಗೂ ಅಭಿಷಿಕ್ತರಿಗೆ ಮಹಾ ಚಿಂತನೆಯ ವಿಷಯವಾಗಿರುತ್ತದೆ. ನಾವು ನೀತಿವಂತರಾಗಿ ನಿರ್ಣಯಿಸಲ್ಪಟ್ಟವರಾಗಿ ಹೊಂದಿಕೆಯಲ್ಲಿ ಜೀವಿಸುವುದರ ಕುರಿತು ಪುಸ್ತಕವು ನೀಡಿರುವ ಉತ್ತಮ ಸೂಚನೆಯು ಕ್ರೈಸ್ತರೆಲ್ಲರಿಗೆ ಪ್ರಾಮುಖ್ಯವು.
ಡಾಕ್ಟರುಗಳಾದ ನ್ಯೂಟನ್ ಮಾರ್ಶಲ್ ಹಾಲ್ ಮತ್ತು ಐರ್ವಿಂಗ್ ಫ್ರಾನ್ಸಿಸ್ ವುಡ್ರಿಂದ ಪ್ರಕಟಿತವಾದ ದಿ ಬುಕ್ ಆಫ್ ಲೈಫ್ ಪುಸ್ತಕ ಹೇಳುವುದು: “ತರ್ಕ ಮತ್ತು ಬೋಧನೆಯ ವಿಭಾಗದಲ್ಲಾದರೋ (ರೋಮಾಪುರ ಪತ್ರಿಕೆಯು) ಪೌಲನ ಪ್ರೇರಿತ ಶಿಕ್ಷಣದ ಶಿಕರನ್ನು ಮುಟ್ಟಿರುತ್ತದೆ. ಅದು ವಿನಯಶೀಲತೆ, ಸಮಯೋಚಿತ ನಯವುಳ್ಳದಾದರೂ ಅಧಿಕಾರಯುಕ್ತವಾಗಿದೆ. . . . ಈ ಪತ್ರಿಕೆಯ ಅಧ್ಯಯನವು ತನ್ನದೇ ಆದ ಸಮೃದ್ಧ ಹಾಗೂ ಹೇರಳವಾದ ಪ್ರತಿಫಲವೀಯುವದು.” ನೀವು ಸಹಾ ಈ ಪುಸ್ತಕವನ್ನು ಓದಿ, ಅದರಲ್ಲಿರುವ “ನಂಬುವವರೆಲರ್ಲಿಗೆ ರಕ್ಷಣೆ ಉಂಟುಮಾಡುವ ಸುವಾರ್ತೆಯಲ್ಲಿ” ಯಾಕೆ ಉಲ್ಲಾಸಿಸಬಾರದು?—ರೋಮಾಪುರ 1:16. (w90 8/1)
[ಪುಟ 26 ರಲ್ಲಿರುವ ಚೌಕ/ಚಿತ್ರಗಳು]
“ದೇವರಿಂದ ಹೊರತು ಒಬ್ಬರಿಗೂ (ಐಹಿಕ) ಅಧಿಕಾರವಿರುವದಿಲ್ಲ.” ಪ್ರತಿಯೊಬ್ಬ ವೈಯಕ್ತಿಕ ಅಧಿಪತಿಯನ್ನು ದೇವರು ಅವನವನ ಸ್ಥಾನದಲ್ಲಿಡುತ್ತಾನೆಂದು ಇದರ ಅರ್ಥವಲ್ಲ. ಬದಲಿಗೆ, ಐಹಿಕ ಅಧಿಪತಿಗಳು ದೇವರ ಅನುಮತಿಯಿಂದ ಮಾತ್ರವೇ ಅಸ್ತಿತ್ವದಲ್ಲಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಮಾನವ ಅಧಿಪತಿಗಳು ದೇವರಿಂದ ಮುನ್ದರ್ಶಿಸಲ್ಪಟ್ಟರು ಯಾ ಮುಂತಿಳಿಸಲ್ಪಟ್ಟರು ಮತ್ತು ಈ ರೀತಿ, ಅವರು “ದೇವರಿಂದ ನೇಮಿಸಲ್ಪಟ್ಟವರು” ಆಗಿದ್ದರು.—ರೋಮಾಪುರ 13:1.
[ಕೃಪೆ]
Museo della Civiltà Romana, Roma
[ಪುಟ 27 ರಲ್ಲಿರುವ ಚೌಕ/ಚಿತ್ರಗಳು]
“ಕರ್ತನಾದ ಯೇಸುಕ್ರಿಸ್ತನನ್ನು ಧರಿಸಿಕೊಳ್ಳಿರಿ” ಎಂದು ಕ್ರೈಸ್ತರಿಗೆ ಹೇಳಲಾಗಿದೆ. ಇದರ ಅರ್ಥವು ಅವರು ಯೇಸುವಿನ ಹೆಜ್ಜೇಜಾಡನ್ನು ನಿಕಟವಾಗಿ ಅನುಸರಿಸಬೇಕು, ತಮ್ಮ ಜೀವಿತದಲ್ಲಿ ಮಾಂಸಿಕ ಇಚ್ಛೆಗಳ ಬದಲಿಗೆ ಆತ್ಮಿಕ ಇಚ್ಛೆಗಳನ್ನು ಪ್ರಥಮವಾಗಿರಿಸುವ ಮೂಲಕ ಆತನನ್ನು ಅನುಕರಿಸಬೇಕು, ಮತ್ತು ಹೀಗೆ, “ದೇಹದ ಆಶೆಗಳನ್ನು ಪೂರೈಸುವುದಕ್ಕೆ ಚಿಂತಿಸದೆ” ಇರಬೇಕು.—ರೋಮಾಪುರ13:14.
[ಪುಟ 27 ರಲ್ಲಿರುವ ಚೌಕ/ಚಿತ್ರಗಳು]
“ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ” ಎಂದು ಪೌಲನು ರೋಮಾಪುರದವರಿಗೆ ಹೇಳಿದನು. ಆದರೂ, ಇಲ್ಲಿ ಅವನು ಒಂದು ಹೊಸ ಕ್ರೈಸ್ತ ಪದ್ಧತಿಯನ್ನು ಅಥವಾ ಧಾರ್ಮಿಕ ವಿಧಿಯನ್ನು ಸ್ಥಾಪಿಸಿರಲಿಲ್ಲ. ಪೌಲನ ದಿನಗಳಲ್ಲಿ, ವಂದನೆ, ಮಮತೆ ಅಥವಾ ಗೌರವದ ಒಂದು ಚಿಹ್ನೆಯಾಗಿ ಹಣೆಗೆ, ತುಟಿಗಳಿಗೆ ಅಥವಾ ಕೈಗೆ ಮುದ್ದಿಡುವುದು ಸಾಮಾನ್ಯವಾಗಿತ್ತು. ಆದಕಾರಣ, ತನ್ನ ಕಾಲದಲ್ಲಿ ಸಾಮಾನ್ಯವಾಗಿದ್ದ ಒಂದು ಪದ್ಧತಿಯನ್ನು ಮಾತ್ರ ಪೌಲನು ಇಲ್ಲಿ ಸೂಚಿಸಿರುತ್ತಾನೆ.—ರೋಮಾಪುರ 16:16.