ಕ್ರಿಸ್ಮಸ್—ಇದು ಯೇಸುವನ್ನು ಸ್ವಾಗತಿಸುವ ರೀತಿಯೊ?
ದೀರ್ಘಕಾಲದಿಂದ ಮುನ್ನೋಡಿದ್ದ ರಕ್ಷಕನಾದ ಮೆಸ್ಸೀಯನ ಜನನವು ಹರ್ಷೋಲ್ಲಾಸದ ಸಮಯವಾಗಿತ್ತು, ನಿಶ್ಚಯ. ಬೆತ್ಲೆಹೇಮಿನ ಸೀಮೆಯಲ್ಲಿದ್ದ ಕುರುಬರಿಗೆ ದೇವ ದೂತನು ಪ್ರಕಟಿಸಿದ್ದು: “ಹೆದರ ಬೇಡಿರಿ, ಕೇಳಿರಿ; ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭ ಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ ಈ ಹೊತ್ತು ನಿಮಗೋಸ್ಕರ . . . ಒಬ್ಬ ರಕ್ಷಕನು ಹುಟ್ಟಿದ್ದಾನೆ. ಆತನು ಕರ್ತನಾಗಿರುವ ಕ್ರಿಸ್ತನೇ.” ಅವನ ಸಂಗಡ ದೇವದೂತರ ಒಂದು ದೊಡ್ಡ ಗುಂಪು ಕಾಣಿಸಿಕೊಂಡು ದೇವರನ್ನು ಸ್ತುತಿಸುತ್ತಾ ಅಂದದ್ದು: “ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ [ಸುಚಿತ್ತವುಳ್ಳ, NW] ಮನುಷ್ಯರೊಳಗೆ ಸಮಾಧಾನ.” (ಲೂಕ 2:10-14) ಆ ಕಾಲದಲ್ಲಿ ಕ್ರಿಸ್ತನು ಭೂಮಿಗೆ ಬಂದದ್ದಕ್ಕಾಗಿ ಹರ್ಷವನ್ನು ವ್ಯಕ್ತಪಡಿಸಿದ್ದ ಆ ದೇವದೂತರನ್ನು ಕ್ರೈಸ್ತರು ಅನುಕರಿಸಬೇಕು ಎಂದು ಕೆಲವರು ತೀರ್ಮಾನಿಸಬಹುದು.
ದೇವದೂತರು ಸ್ತುತಿಗಾನವನ್ನು ಹಾಡುತ್ತಾ ಹರ್ಷಿಸಿದ ವಿಷಯದಲ್ಲಿ ಇದು ಬೈಬಲಿನ ಮೊದಲನೆಯ ದಾಖಲೆಯಲ್ಲ. ಭೂಮಿಗೆ ಅಸ್ತಿವಾರವನ್ನು ಹಾಕಿದಾಗ, “ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹ ದ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದ ಘೋಷ ಮಾಡುತ್ತಾ” ಇದ್ದರು. (ಯೋಬ 38:4-7) ಈ ಘಟನೆಯ ಸರಿಯಾದ ತಾರೀಕು ಬೈಬಲಿನಲ್ಲಿ ದಾಖಲೆಯಾಗಿರುವುದಿಲ್ಲ. (ಆದಿಕಾಂಡ 1:1, 14-18) ಆ ಸಂದರ್ಭವು ಅದೆಷ್ಟೆ ಸಂತಸದ ಸಂದರ್ಭವಾಗಿದ್ದಿರಲಿ, ದೇವದೂತರು ಆಗ ಅನಂದಘೋಷ ಮಾಡಿದ್ದರೆಂಬ ಕಾರಣದಿಂದ, ಭೂಮಿಯ ನಿರ್ಮಾಣದ ಆರಂಭವನ್ನು ವಾರ್ಷಿಕವಾಗಿ ಆಚರಿಸಬೇಕೆಂದಾಗಲಿ, ಒಂದುವೇಳೆ ಒಂದು ವಿಧರ್ಮಿ ಹಬ್ಬವನ್ನು ಆ ಸಂದರ್ಭದ ಸ್ಮಾರಕವಾಗಿ ಆಚರಿಸಲು ಅಂಗೀಕರಿಸಬೇಕೆಂದಾಗಲಿ ಕ್ರೈಸ್ತರು ವಾದಿಸಿರುವುದಿಲ್ಲ.
ಆದರೂ ಕ್ರಿಸ್ಮಸ್ನ್ನು ಆಚರಿಸುವವರಾದರೊ ಯೇಸು ಕ್ರಿಸ್ತನ ಜನನಕ್ಕೆ ಅದನ್ನೆ ಮಾಡುತ್ತಿದ್ದಾರೆ. “ಕ್ರಿಸ್ಮಸ್” ಶೀರ್ಷಿಕೆಯ ಕೆಳಗೆ ಯಾವುದೇ ಭರವಸಯೋಗ್ಯ ವಿಶ್ವಕೋಶವನ್ನು ನಾವು ನೋಡುವುದಾದರೆ, ಯೇಸುವಿನ ಜನನದ ತಾರೀಕೇ ತಿಳಿದಿಲ್ಲವೆಂಬ ದೃಢೀಕರಣವು ನಮಗೆ ದೊರಕುತ್ತದೆ. ಆ ತಾರೀಕಿನ ಸಂಬಂಧದಲ್ಲಿ ಬೈಬಲ್ ಮೌನವಹಿಸಿದೆ.
“ತುತೂರಿಯು ಗೊತ್ತಿಲ್ಲದ ಶಬ್ದವನ್ನು ಕೊಟ್ಟರೆ”
ಪ್ರಾಚೀನ ಕೊರಿಂಥ ಸಭೆಯ ಅಕ್ರಮವನ್ನು ಸರಿಪಡಿಸುವಲ್ಲಿ, “ದೇವರು ಸಮಾಧಾನಕ್ಕೆ (ಕ್ರಮಕ್ಕೆ, NW) ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ,” ಎಂದು ಬರೆದನು ಅಪೊಸ್ತಲ ಪೌಲನು. ಅದೇ ಸಂಬಂಧದಲ್ಲಿ ಅವನು ಕೇಳಿದ್ದು: “ತುತೂರಿಯು ಗೊತ್ತಿಲ್ಲದ ಶಬ್ದವನ್ನು ಕೊಟ್ಟರೆ ಯಾರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವರು?” (1 ಕೊರಿಂಥ 14:8, 33) ಕ್ರಮದ ದೇವರಾದ ಆತನು ತನ್ನ ಮಗನ ಜನನವನ್ನು ಕ್ರೈಸ್ತರು ಆಚರಿಸಬೇಕೆಂದು ಅಪೇಕ್ಷಿಸಿದದ್ದಾದರೆ, ಅಪೂರ್ಣರಾದ ಮನುಷ್ಯರು ಸ್ವೇಚ್ಛಾಚಾರದಿಂದ ಒಂದು ತಾರೀಕನ್ನು ವಿಧರ್ಮಿ ಹಬ್ಬಗಳ ಮೂಲದಿಂದ ಆರಿಸುವಂತೆ ಮತ್ತು ಭಕ್ತಿಹೀನ ಪದ್ಧತಿಗಳನ್ನು ಸ್ವೀಕರಿಸುವಂತೆ ಬಿಟ್ಟಾನೆ?
ಯೆಹೋವನು ತನ್ನ ಜನರೊಂದಿಗೆ ಆ ರೀತಿಯಲ್ಲಿ ವ್ಯವಹರಿಸುವದಿಲ್ಲವೆಂದು ಕೆಲವು ಬೈಬಲ್ ಉದಾಹರಣೆಗಳನ್ನು ಪರೀಕ್ಷಿಸುವಲ್ಲಿ ನಮಗೆ ಸ್ಪಷ್ಟವಾಗಿಗುತ್ತದೆ. ಮೋಶೆಯ ಧರ್ಮ ಶಾಸ್ತ್ರದ ಕೆಳಗೆ ಕೆಲವು ವಾರ್ಷಿಕ ಆಚರಣೆಗಳನ್ನು ನಡಿಸಲು ಇಸ್ರಾಯೇಲ್ಯರು ಕೇಳಲ್ಪಟ್ಟಾಗ, ದೇವರು ವಿಶಿಷ್ಟ ತಾರೀಕುಗಳನ್ನು ನೇಮಿಸಿದನು ಮತ್ತು ಆ ಉತ್ಸವಗಳನ್ನು ಹೇಗೆ ಆಚರಿಸಬೇಕೆಂದೂ ತಿಳಿಸಿದನು. (ವಿಮೋಚನಕಾಂಡ 23:14-17; ಯಾಜಕಕಾಂಡ 23:34-43) ಯೇಸು ಕ್ರಿಸ್ತನು, ತನ್ನ ಜನನ ದಿನವನ್ನು ಆಚರಿಸಬೇಕೆಂದು ಎಂದೂ ಆಜ್ಞಾಪಿಸದಿದ್ದರೂ, ಒಂದು ವಿಶಿಷ್ಟ ತಾರೀಕನ್ನು ಆಚರಿಸುವಂತೆ ಮಾತ್ರ ಅಪ್ಪಣೆಕೊಟ್ಟಿದ್ದನು. ಸಾ.ಶ. 33ರ ನೈಸಾನ್ 14ರಂದು “ತಾನು ಹಿಡಿದುಕೊಡಲ್ಪಟ್ಟ ರಾತ್ರಿಯಲ್ಲಿ,” ಯೇಸು ಹುಳಿಯಿಲ್ಲದ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಉಪಯೋಗಿಸುತ್ತಾ, ಕರ್ತನ ರಾತ್ರಿ ಭೋಜನವನ್ನು ಪ್ರತಿಷ್ಠಾಪಿಸಿದನು. ಆತನು ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (1 ಕೊರಿಂಥ 11:23, 24) ಕರ್ತನ ಆ ಸಂಜಾ ಭೋಜನವನ್ನು ಯಾವಾಗ ಮತ್ತು ಹೇಗೆ ಆಚರಿಸಬೇಕೆಂಬ ತುತೂರಿ ದ್ವನಿಯು ಸ್ಪಷ್ಟವೂ ತಪ್ಪುತಿಳಿಯಲು ಅವಕಾಶವೆ ಇಲ್ಲದ್ದೂ ಆಗಿದೆ. ಹಾಗಾದರೆ ಕ್ರಿಸ್ಮಸ್ನ ಕುರಿತೇನು? ಬೈಬಲಲ್ಲಿ ಎಲ್ಲಿಯೂ ಕ್ರಿಸ್ತನ ಜನನವನ್ನು ಆಚರಿಸಬೇಕೆಂಬ ಯಾವ ಆಜ್ಞೆಯನ್ನೂ ನಾವು ಕಾಣುವುದಿಲ್ಲ, ಅದನ್ನು ಯಾವಾಗ ಮತ್ತು ಹೇಗೆ ಆಚರಿಸಬೇಕೆಂದೂ ಅದು ತಿಳಿಸುವುದಿಲ್ಲ.
‘ಜನರನ್ನು ಜಯಿಸಲಿಕ್ಕಾಗಿ’
“ಓ, ಕ್ರಿಸ್ಮಸ್ ವಿಧರ್ಮಿ ಮೂಲದಿಂದ ಬಂದಿದೆ ಎಂದು ನನಗೆ ನಿಶ್ಚಯ ಗೊತ್ತಿದೆ” ಎಂದನು ಟೋಕಿಯೊ ಜೈಆನ್ (ಚೀಯೋನ್) ಚರ್ಚಿನ ವೈದಿಕನು, “ಆದರೆ ಎಷ್ಟರ ತನಕ ಸಾಮಾನ್ಯ ಜನರು ದಶಂಬರ 25ರ ಕ್ರೈಸ್ತತ್ವದಲ್ಲಿ ಆಸಕ್ತರೊ ಮತ್ತು ಸನ್ಮಾನ್ಯ ಯೇಸುವಿನ ಬೋಧನೆಗಳ ಕುರಿತು ಕಲಿಯುತ್ತಾರೊ ಆ ತನಕ ಕ್ರಿಸ್ಮಸ್ಗೆ ಕ್ರೈಸ್ತತ್ವದಲ್ಲಿ ಸ್ಥಳವಿದೆ.” ಅನೇಕರು ಅವನ ಈ ವಿವೇಚನೆಯನ್ನು ಒಪ್ಪುತ್ತಾರೆ. ಆದರೆ ಅಂಥ ಒಂದು ರಾಜಿಸಂಧಾನ ಯೋಗ್ಯವೆಂದು ನೀವು ನಂಬುತ್ತೀರೊ?
ನಂಬುವವರನ್ನು ಪಡೆಯುವುದಕ್ಕಾಗಿ ಪೌಲನು ಸಹಾ ರಾಜಿ ಮಾಡಿಕೊಂಡನೆಂದು ಕೆಲವರು ವಾದಿಸುತ್ತಾರೆ. ‘ನಾನು ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನನ್ನನ್ನು ಎಲ್ಲರಿಗೆ ದಾಸನನ್ನಾಗಿ ಮಾಡಿಕೊಂಡೆನು,” ಎಂದು ಬರೆದನವನು. “ಅನ್ಯರೊಂದಿಗೆ ಕೆಲಸಮಾಡುತ್ತಿರುವಾಗ ನಾನು ಅನ್ಯನಂತೆ ಜೀವಿಸುತ್ತೇನೆ, ಅನ್ಯರನ್ನು ಸಂಪಾದಿಸುವುದಕ್ಕಾಗಿ ಅವರಿಗೆ ನಿಯಮವಿಲ್ಲದಂತಾದೆನು. . . . ನಾನು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಅದರ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದೇ ಮಾಡುತ್ತೇನೆ.” (1 ಕೊರಿಂಥ 9:19-23, ಟುಡೇಸ್ ಇಂಗ್ಲಿಷ್ ವರ್ಷನ್) ಅನ್ಯರನ್ನು ಕ್ರೈಸ್ತತ್ವಕ್ಕೆ ಆಕರ್ಷಿಸುವುದಕ್ಕಾಗಿ ಒಂದು ವಿಧರ್ಮಿ ಹಬ್ಬವನ್ನು ಸ್ವೀಕರಿಸುವುದನ್ನು ಈ ಮಾತುಗಳು ಸಮರ್ಥಿಸುತ್ತವೊ?
ಪೌಲನ ಮಾತುಗಳ ಪೂರ್ವಾಪರ ಸಂದರ್ಭವನ್ನು ಜಾಗ್ರತೆಯಿಂದ ಗಮನಿಸಿರಿ. 21ನೆಯ ವಚನದಲ್ಲಿ ಅವನಂದದ್ದು: “ಇದರ ಅರ್ಥವು ನಾನು ದೇವರ ನಿಯಮವಿಲ್ಲದವನೆಂದಲ್ಲ; ನಾನು ನಿಜವಾಗಿಯೂ ಕ್ರಿಸ್ತನ ನಿಯಮಕ್ಕೆ ಒಳಗಾದವನೇ.” (TEV) ಹೀಗೆ ಕ್ರಿಸ್ತನ ನಿಯಮಗಳನ್ನು ಮೀರುವ ವಿಷಯಗಳಲ್ಲಿ ಅವನು ರಾಜಿಮಾಡಿಕೊಳ್ಳಲಿಲ್ಲ, ಆದರೆ ಸ್ಥಳೀಕ ಪದ್ಧತಿಗಳನ್ನು ಮತ್ತು ಹವ್ಯಾಸಗಳನ್ನು ಎಷ್ಟರ ಮಟ್ಟಿಗೆ ಅವು ಕ್ರೈಸ್ತ ನಿಯಮಗಳಿಗೆ ವಿರುದ್ಧವಾಗಿರಲಿಲ್ಲವೊ ಅ ತನಕ ಗೌರವಿಸಿದ ಮೂಲಕ ಆತನು ‘ಅನ್ಯನಂತೆ ಜೀವಿಸಿದನು.’a
ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಕೆಳಗಿನ ಬೈಬಲ್ ಆಜ್ಞೆಯ ಬೆಳಕಿನಲ್ಲಿ ವೀಕ್ಷಿಸುವಾಗ, ವಿಧರ್ಮಿ ಹಬ್ಬಗಳನ್ನು ಕ್ರಿಸ್ಮಸ್ ಹೆಸರಿನ ಕೆಳಗೆ “ಕ್ರೈಸ್ತತ್ವ”ದೊಳಗೆ ತರುವುದು ಹೇಗೆ ತೋರುವುದೆಂಬದನ್ನು ಯೋಚಿಸಿರಿ: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? . . . ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆಯೇನು? . . . ಆದದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ. ನಾನು ನಿಮ್ಮನ್ನು ಸೇರಿಸಿಕೊಳ್ಳುವೆನು.” (2 ಕೊರಿಂಥ 6:14-17) ಯಾವ ನೆವನಗಳೆ ನೀಡಲ್ಪಡಲಿ, ವಿಧರ್ಮಿ ಹಬ್ಬಗಳೊಂದಿಗೆ ಕ್ರೈಸ್ತತ್ವವನ್ನು ಮಲಿನಗೊಳಿಸುವುದು, ರಕ್ಷಕನಾದ ಯೇಸುವನ್ನು ಸ್ವಾಗತಿಸುವ ರೀತಿಯಲ್ಲ. ಯೇಸು ಮನುಷ್ಯನಾಗಿ ಬಂದ ಒಂದನೆಯ ಶತಮಾನದಲ್ಲಿ ಅದು ಅಯೋಗ್ಯವಾಗಿ ಕಾಣುತ್ತಿತ್ತು, ಮತ್ತು ಇಂದು ಸಹಾ ಮತ್ತು ಮುಂದಕ್ಕೂ, ವಿಶೇಷವಾಗಿ ಕ್ರಿಸ್ತನು ದೇವರ ತೀರ್ಪುಗಳನ್ನು ನಿರ್ವಹಿಸಲು ರಾಜನಾಗಿ ಬರುವಾಗಲೂ, ಅಷ್ಟೆ ಅಯುಕ್ತವಾಗಿರುತ್ತದೆ. (ಪ್ರಕಟನೆ 19:11-16) ವಾಸ್ತವದಲ್ಲಿ, ಯಾರು ವಿಧರ್ಮಿ ಹಬ್ಬಗಳನ್ನು ಒಂದು “ಕ್ರೈಸ್ತ” ವೇಷದ ಮರೆಯಲ್ಲಿ ಆಚರಿಸಲು ಬಯಸುತ್ತಾರೊ ಅವರು ಯೇಸು ಕ್ರಿಸ್ತನನ್ನೆ ಅಲ್ಲಗಳೆಯುವವರಾಗಬಹುದು.
“ಅವಿತ ಕ್ರೈಸ್ತರು” ಪುನಃಸ್ಥಾಪಿಸಲ್ಪಡದೆ ಇದ್ದದ್ದು
ಷೋಗುನ್ ಪ್ರಭುತ್ವದ ಸಮಯದಲ್ಲಿ ಜಾಪಾನಿನಲ್ಲಿ ಕ್ಯಾಥ್ಲಿಕರಿಗೆ ಏನು ಸಂಭವಿಸಿತ್ತೆಂಬದರಿಂದ ಒಂದು ಪಾಠವನ್ನು ಕಲಿಯಿರಿ. 1614ರಲ್ಲಿ ಕ್ಯಾಥ್ಲಿಕ್ ಧರ್ಮದ ದಮನವು ಆರಂಭಿಸಿದಾಗ, ಸುಮಾರು 3,00,000 ಜಾಪಾನಿಸ್ ಕ್ಯಾಥ್ಲಿಕರಿಗೆ ಮೂರು ಆಯ್ಕೆಗಳಿದ್ದವು: ಹುತಾತ್ಮರಾಗುವುದು, ನಂಬಿಕೆಯನ್ನು ತ್ಯಜಿಸುವುದು ಅಥವಾ ಭೂಗತಕ್ಕೆ ಇಳಿಯುವುದು. ಭೂಗತಕ್ಕೆ ಇಳಿದವರನ್ನು ಅವಿತುಕೊಂಡ ಕ್ರೈಸ್ತರು ಎಂದು ಕರೆಯಲಾಗಿತ್ತು. ತಮ್ಮ ನಂಬಿಕೆಯನ್ನು ವೇಷಾಂತರ ಮಾಡಲು, ಅವರು ಹಲವಾರು ಬೌದ್ಧ ಮತ್ತು ಶಿಂಟೊ ಪದ್ಧತಿಗಳನ್ನು ಅನುಸರಿಸಿದರು. ತಮ್ಮ ಸಾರ್ವಜನಿಕ ಪೂಜಾ ವಿಧಾನದಲ್ಲಿ ಅವರು ಮರಿಯ ಕ್ಯಾನನ್ನ್ನು ಎಂಬವಳನ್ನು ಬಳಸಿದರು, ಆದರೆ ಮಗುವನ್ನು ಹಿಡಿದಿದ್ದ ತಾಯಿಯ ರೂಪದಲ್ಲಿದ್ದ ಆಕೆ ಬೌದ್ಧ ಬೋಧಿಸತಳ್ವಾಗಿ ವೇಷಮರಿಸಲ್ಪಟ್ಟ ಮರಿಯಳೇ ಆಗಿದ್ದಳು. ಅವರ ಹಬ್ಬಗಳು ಬೌದ್ಧಮತ, ಕ್ಯಾಥ್ಲಿಕ್ ಧರ್ಮ ಮತ್ತು ಶಿಂಟೊ ಧರ್ಮ ಪದ್ಧತಿಗಳ ಬೆರಕೆಯಾಗಿತ್ತು. ಆದರೂ, ಬೌದ್ಧ ಶವಸಂಸ್ಕಾರಗಳನ್ನು ಹಾಜರಾಗಲು ಬಲಾತ್ಕರಿಸಲ್ಪಟ್ಟಾಗ, ಅವರು ಕ್ರೈಸ್ತ ಪ್ರಾರ್ಥನೆಗಳನ್ನು ಪಠಿಸಿದರು ಮತ್ತು ಬೌದ್ಧ ಸೇವೆಯನ್ನು ರದ್ದುಮಾಡುವ ಒಂದು ಸಂಸ್ಕಾರವಾದ ಮಾಡೊಶಿಯನ್ನು ನಡಿಸಿದರು. ಆ ಕ್ರೈಸ್ತರ ಪಾಡು ಏನಾಯಿತು?
“ಅಧಿಕ ಸಂಖ್ಯಾತ ಕಿರಿಶ್ಟಾನ್ [ಕ್ರೈಸ್ತರು] ರ ವಿಷಯದಲ್ಲಾದರೊ,” ದ ಹಿಡ್ಡನ್ ಕ್ರಿಶ್ಚನ್ಸ್ ಪುಸ್ತಕವು ವಿವರಿಸುವುದು, “ಒಂದು ಧಾರ್ಮಿಕ ಹತ್ತುಗೆಯು ಅವರಲ್ಲಿ ಬೆಳೆಯಿತು ಮತ್ತು ಶಿಂಟೊ ಮತ್ತು ಬೌದ್ಧ ದೇವರುಗಳ ಭಕ್ತಿಯನ್ನು ತ್ಯಜಿಸಲು ಅವರಿಗೆ ಕಷ್ಟಕರವನ್ನಾಗಿ ಮಾಡಿತು. ನಿಷೇಧವು ತೆಗೆಯಲ್ಪಟ್ಟಾಗ ಮತ್ತು ಕ್ಯಾಥ್ಲಿಕ್ ಮಿಶನೆರಿಗಳು ಜಾಪಾನಿಗೆ ಹಿಂತಿರುಗಿದಾಗ, “ಅವಿತ ಕ್ರೈಸ್ತರಲ್ಲಿ” ಅಧಿಕ ಸಂಖ್ಯಾತರು ತಮ್ಮಲ್ಲಿ ಬೆಸುಗೆಗೊಂಡಿದ್ದ ಧರ್ಮಕ್ಕೇ ಅಂಟಿಕೊಂಡರು.
ಆದರೂ, ರೋಮನ್ ಕ್ಯಾಥ್ಲಿಕ್ ಧರ್ಮಕ್ಕೆ ಪುನಃಸ್ಥಾಪಿಸಲ್ಪಡಲು ನಿರಾಕರಿಸಿದ ಆ “ಅವಿತ ಕ್ರೈಸ್ತರನ್ನು” ಕ್ಯಾಥ್ಲಿಕ್ ಚರ್ಚು ನ್ಯಾಯವಾಗಿ ಠೀಕೆ ಮಾಡಸಾಧ್ಯವಿದೆಯೆ? ಕ್ಯಾಥ್ಲಿಕ್ ಚರ್ಚು ಕೂಡ ಅದೇ ರೀತಿ ಅನೇಕ ವಿಧರ್ಮಿ ಬೋಧನೆಗಳನ್ನು ಮತ್ತು ಹಬ್ಬಗಳನ್ನು, ಕ್ರಿಸ್ಮಸ್ನ್ನು ಸಹಾ, ಸ್ವೀಕರಿಸಿದೆಯಲ್ಲಾ. ಕ್ಯಾಥ್ಲಿಕರು ಮತ್ತು ಪ್ರಾಟೆಸ್ಟಂಟರು, ತಾವು ಕ್ರೈಸ್ತರೆಂದು ಹೇಳಿಕೊಂಡರೂ ಅನ್ಯಜನರ ಹಬ್ಬಗಳಿಂದ ತಮ್ಮ “ಕ್ರೈಸ್ತತ್ವ”ವನ್ನು ವಿಧರ್ಮೀಕರಿಸಿದ್ದಾದರೆ, ಅವರು ಸಹಾ ಯೇಸು ಕ್ರಿಸ್ತನನ್ನು ತಿರಸ್ಕರಿಸಿದವರಾಗ ಸಾಧ್ಯವಿಲ್ಲವೆ?
ನಿಜ ಕ್ರೈಸ್ತತ್ವಕ್ಕೆ ಪುನಃಸ್ಥಾಪಿಸಲ್ಪಟ್ಟದ್ದು
ಸೆಟ್ಸ್ಯೂಕೊ, 36 ವರ್ಷಗಳಿಂದ ಒಬ್ಬ ದೇವಭೀರು ಕಥೋಲಿಕ ಮಹಿಳೆ, ಕಟ್ಟಕಡೆಗೆ ಆ ಗ್ರಹಿಕೆಗೆ ಬಂದಳು. IIನೆಯ ಮಹಾಯುದ್ಧದ ನಂತರ, ಒಂದು ಕ್ಯಾಥ್ಲಿಕ್ ಚರ್ಚಿನೊಂದಿಗೆ ಸಹವಸಿಸಿದ ಮೂಲಕ ಆಕೆ ತನ್ನ ಆತ್ಮಿಕ ಶೂನ್ಯತೆಯನ್ನು ತುಂಬಿಸಲು ಪ್ರಯತ್ನಿಸಿದಳು. ಕ್ರಿಸ್ಮಸ್ ಮಾಸ್ (ಪೂಜೆ) ಗೆ ಆಕೆ ಹಾಜರಾದಾಗ ಮತ್ತು ತನ್ನ ಚರ್ಚಿನ ಹೊರಗೂ ಒಳಗೂ ಶೋಭಾಯಮಾನವಾದ ಕ್ರಿಸ್ಮಸ್ ಮರಗಳನ್ನು ಕಂಡಾಗ, ‘ಇದೆಷ್ಟು ಸಂತೃಪ್ತಿಕರ!’ ಎಂದು ನೆನಸಿದಳಾಕೆ. “ಸಮೀಪದ ಇತರ ಚರ್ಚುಗಳಿಗಿಂತ ಸುಂದರ ಶೃಂಗಾರಗಳಲ್ಲಿ ನಮ್ಮ ಚರ್ಚು ಅತಿಶಯಿಸಿದ್ದು ನನ್ನನ್ನು ಅಭಿಮಾನದಿಂದ ತುಂಬಿಸಿತು,” ಎಂದಳವಳು. ಸೆಟ್ಯ್ಸೂಕೊ ತುಸುಕಾಲ ಸಂಡೇ ಸ್ಕೂಲ್ನಲ್ಲೂ ಕಲಿಸುತ್ತಿದ್ದಳಾದರೂ, ಕ್ಯಾಥ್ಲಿಕ್ ಬೋಧನೆಗಳ ಯಾವ ತಿಳುವಳಿಕೆಯೂ ಆಕೆಗೆ ಇರಲಿಲ್ಲ. ಹೀಗೆ ಆಕೆ ಚರ್ಚು ಕಾರ್ಯಗಳಲ್ಲಿ ಅಧಿಕ ಒಳಗೂಡಲು ಬಯಸಿದಾಗ, ತನ್ನ ಪಾದ್ರಿಯೊಂದಿಗೆ ಕೆಲವು ಪ್ರಶ್ನೆಗಳನ್ನು ಕೇಳಿದಳು. ಅವಳ ಪ್ರಶ್ನೆಗಳನ್ನು ಉತ್ತರಿಸುವ ಬದಲಿಗೆ, ಪಾದ್ರಿಯು ಆಕೆಯನ್ನು ತೃಣೀಕರಿಸಿದನು. ಆಕೆ ನಿರಾಶೆಗೊಂಡವಳಾಗಿ ಬೈಬಲನ್ನು ತಾನೇ ಅಧ್ಯಯನ ಮಾಡ ತೊಡಗಿದಳು. ಎರಡು ವಾರಗಳ ನಂತರ, ಯೆಹೋವನ ಸಾಕ್ಷಿಗಳು ಅವಳನ್ನು ಸಂದರ್ಶಿಸಿದರು ಮತ್ತು ಆಕೆ ಒಂದು ಮನೆ ಬೈಬಲಭ್ಯಾಸವನ್ನು ಸ್ವೀಕರಿಸಿದಳು.
ಅವಳು ವಿವರಿಸುವುದು: “ನನ್ನ ಹಿಂದಿನ ನಂಬಿಕೆಗಳನ್ನು ತಪ್ಪೆಂದು ಸಿದ್ಧಮಾಡಿಕೊಟ್ಟ ಬೈಬಲ್ ಸತ್ಯವನ್ನು ಎದುರಿಸುವುದು ವೇದನಾಮಯವಾಗಿತ್ತು. ನನಗೆ ಎಲೊಪೀಶಿಯಾ ನ್ಯೂರೋಟಿಕ, ಮನಕೆಡಿಸಿಕೊಳ್ಳುವುದರಿಂದ ಉಂಟಾಗುವ ಕೂದಲುದುರುವ ರೋಗವೂ ತಗಲಿತು. ಆದರೂ ಸತ್ಯದ ಬೆಳಕು ನನ್ನ ಹೃದಯದೊಳಗೆ ಬೆಳಗಿತು. ಯೇಸುವಿನ ಜನನವು, ಒಂದು ಕಡು ಚಳಿ ಮತ್ತು ಮಳೆಯ ದಶಂಬರದಲ್ಲಿ, ಹೊರಗೆ ಹೊಲದಲ್ಲಿ ಕುರುಬರು ತಮ್ಮ ಕುರಿಗಳನ್ನು ರಾತ್ರಿಯಲ್ಲಿ ಮೇಯಿಸಲಾಗದ ಒಂದು ಸಮಯದಲ್ಲಿ ಆಗ ಶಕ್ಯವಿಲ್ಲವೆಂದು ಕಲಿಯುವುದುನನಗೆ ಧಕ್ಕೆಯನ್ನು ಕೊಟ್ಟಿತು. (ಲೂಕ 2:8-12) ಅದು ಯೇಸು ಕ್ರಿಸ್ತನ ಹುಟ್ಟುಹಬ್ಬದ ನನ್ನ ಕಲ್ಪನಾಚಿತ್ರವನ್ನು ನುಚ್ಚುನೂರುಗೊಳಿಸಿತು, ಯಾಕಂದರೆ ಕುರುಬರ ಮತ್ತು ಕುರಿಗಳ ದೃಶ್ಯಗಳನ್ನು ಅಲಂಕರಿಸಲು ನಾವು ಹತ್ತಿಯನ್ನು ಹಿಮವಾಗಿ ಉಪಯೋಗಿಸಿದೆವ್ದು.”
ಬೈಬಲ್ ನಿಜವಾಗಿ ಏನನ್ನು ಕಲಿಸುತ್ತದೆ ಎಂಬದನ್ನು ಅವಳೇ ಖಾತ್ರಿಪಡಿಸಿಕೊಂಡ ಮೇಲೆ, ಸೆಟ್ಯ್ಸೂಕೊ ಕ್ರಿಸ್ಮಸ್ ಆಚರಿಸುವುದನ್ನು ನಿಲ್ಲಿಸಲು ನಿಶ್ಚಯಿಸಿದಳು. ಅವಳಲ್ಲಿ ಈಗ ವರ್ಷಕೊಮ್ಮೆಯ “ಕ್ರಿಸ್ಮಸ್ ಆತ್ಮ”ವಿಲ್ಲ ಬದಲಿಗೆ ಸಂತೋಷದ ಕ್ರಿಸ್ತೀಯ ಕೊಡುಗೆಯ ಆತ್ಮವನ್ನು ಅವಳು ದಿನನಿತ್ಯವೂ ಪ್ರದರ್ಶಿಸುತ್ತಿದ್ದಾಳೆ.
ನೀವು ಕ್ರಿಸ್ತನಲ್ಲಿ ಪ್ರಾಮಾಣಿಕವಾಗಿ ನಂಬಿಕೆ ಇಡುವುದಾದರೆ, ಅನ್ಯಜನರು ಕ್ರಿಸ್ಮಸ್ನ್ನು ಭ್ರಷ್ಟಗೊಳಿಸುವಾಗ ಸಿಟ್ಟಾಗಬೇಡಿರಿ. ಅದು ಮೂಲತಃ ಹೇಗಿತ್ತೊ—ಆ ವಿಧರ್ಮಿ ಹಬ್ಬವನ್ನೆ ಅವರು ಪುನಃ ಪುನಃ ಆಚರಿಸುತ್ತಿದ್ದಾರೆ. ಸ್ವರ್ಗೀಯ ರಾಜನಾಗಿ ಅದೃಶ್ಯವಾಗಿ ಪುನರಾಗಮಿಸಿದ ಯೇಸು ಕ್ರಿಸ್ತನನ್ನು ಸ್ವಾಗತಿಸಲು ಕ್ರಿಸ್ಮಸ್ ಯಾರನ್ನೂ ನಡಿಸುವುದಿಲ್ಲ. (ಮತ್ತಾಯ, ಅಧ್ಯಾಯ 24 ಮತ್ತು 25; ಮಾರ್ಕ, ಅಧ್ಯಾಯ 13; ಲೂಕ, ಅಧ್ಯಾಯ 21) ಬದಲಿಗೆ, ನಿಜ ಕ್ರೈಸ್ತರು ವರ್ಷವಿಡಿ ಕ್ರಿಸ್ತನಂಥಾ ಆತ್ಮವನ್ನು ತೋರಿಸುತ್ತಾರೆ, ಮತ್ತು ಯೇಸು ಯಾವುದರ ಅರಸನಾಗಿ ಪರಿಣಮಿಸಿದ್ದಾನೊ, ಆ ರಾಜ್ಯದ ಸುವಾರ್ತೆಯನ್ನು ಅವರು ಸಾರುತ್ತಿದ್ದಾರೆ. ಯೇಸು ಕ್ರಿಸ್ತನನ್ನು ನಮ್ಮ ರಕ್ಷಕನಾಗಿ ಮತ್ತು ರಾಜ್ಯದ ರಾಜನಾಗಿ ಹಾಗೆ ಸ್ವಾಗತಿಸಬೇಕೆಂದೆ ದೇವರು ನಮ್ಮಿಂದ ಅಪೇಕ್ಷಿಸುತ್ತಾನೆ.—ಕೀರ್ತನೆ 2:6-12. (w91 12/15)
[ಅಧ್ಯಯನ ಪ್ರಶ್ನೆಗಳು]
a ಸುನ್ನತಿಯ ಪ್ರಶ್ನೆಯ ವಿಷಯದಲ್ಲಿ ಪೌಲನು ಪ್ರತಿಕ್ರಿಯಿಸಿದ ಎರಡು ವಿಧಾನಗಳನ್ನು ಹೋಲಿಸಿರಿ. “ಸುನ್ನತಿ ಇದ್ದರೂ ಪ್ರಯೋಜನವಿಲ್ಲ” ಎಂದವನಿಗೆ ತಿಳಿದಿದ್ದರೂ, ತನ್ನ ತಾಯಿಯ ಕಡೆಯಲ್ಲಿ ಯೆಹೂದ್ಯನಾಗಿದ್ದ ಸಂಚಾರ ಸಂಗಡಿಗ ತಿಮೊಥಿಗೆ ಸುನ್ನತಿಯನ್ನು ಮಾಡಿಸಿದನು. (1 ಕೊರಿಂಥ 7:19; ಅಪೊಸ್ತಲರ ಕೃತ್ಯಗಳು 16:3) ತೀತನ ವಿಷಯದಲ್ಲಾದರೊ, ಅಪೊಸ್ತಲನು ಅವನಿಗೆ ಸುನ್ನತಿ ಮಾಡಿಸುವುದರಿಂದ ದೂರವಿದ್ದದ್ದು ಯೆಹೂದಿ ಮತೀಯರೊಂದಿಗಿನ ಹೋರಾಟದ ಒಂದು ತತ್ವ ದೃಷ್ಟಿಯಿಂದಲೆ. (ಗಲಾತ್ಯ 2:3) ತೀತನು ಗ್ರೀಕನಾಗಿದ್ದನು ಮತ್ತು, ಆದುದರಿಂದ ತಿಮೊಥಿಗೆ ಅಸದೃಶವಾಗಿ, ಸುನ್ನತಿ ಮಾಡುವ ನ್ಯಾಯಸಮ್ಮತ ಕಾರಣ ಅವನಿಗಿರಲಿಲ್ಲ. ಅನ್ಯನಾಗಿದ್ದ ಅವನು, ಸುನ್ನತಿ ಮಾಡಿಕೊಳ್ಳಲಿಕ್ಕಿದ್ದರೆ, ‘ಕ್ರಿಸ್ತನಿಂದ ಅವನಿಗೇನೂ ಪ್ರಯೋಜನವಿರುತ್ತಿರಲಿಲ್ಲ.’—ಗಲಾತ್ಯ 5:2-4.
[ಪುಟ 7 ರಲ್ಲಿರುವ ಚಿತ್ರ]
ನಿಜ ಕ್ರೈಸ್ತರು ಯೇಸುವನ್ನು ವರ್ಷವಿಡಿ ಗೌರವಿಸುತ್ತಾರೆ