ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇರಿ
“ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು.”—ಕೀರ್ತನೆ 37:24.
1, 2. ಯೆಹೋವನ ಮಾರ್ಗದಲ್ಲಿ ನಡೆಯುವುದರಲ್ಲಿ ರಾಜ ದಾವೀದನಿಗೆ ಏನು ಒಳಗೊಂಡಿತು, ಮತ್ತು ಇಂದು ಅದು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತದೆ?
“ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.” (ಕೀರ್ತನೆ 143:8) ರಾಜ ದಾವೀದನ ಈ ಮಾತುಗಳನ್ನು ಇಂದು ಕ್ರೈಸ್ತರು ಹೃತ್ಪೂರ್ವಕವಾಗಿ ಪುನರುಚ್ಚರಿಸುತ್ತಾರೆ. ಅವರು ಯೆಹೋವನನ್ನು ಮೆಚ್ಚಿಸಲು ಮತ್ತು ಆತನ ಮಾರ್ಗದಲ್ಲಿ ನಡೆಯಲು ಪ್ರಾಮಾಣಿಕವಾಗಿ ಬಯಸುತ್ತಾರೆ. ಇದು ಏನನ್ನು ಒಳಗೊಳ್ಳುತ್ತದೆ? ದಾವೀದನಿಗೆ ಇದು ದೇವರ ನಿಯಮದ ಅನುಸರಣೆಯನ್ನು ಅರ್ಥೈಸಿತು. ಇದು ಬೇರೆ ರಾಷ್ಟ್ರಗಳೊಂದಿಗಿರುವ ಸಂಬಂಧಗಳಿಗಿಂತಲೂ ಯೆಹೋವನಲ್ಲಿ ಭರವಸೆಯಿಡುವುದನ್ನು ಒಳಗೊಂಡಿತು. ಮತ್ತು ನೆರೆಹೊರೆಯ ಜನಾಂಗಗಳ ದೇವರುಗಳನ್ನಲ್ಲ ಯೆಹೋವನನ್ನೇ ನಿಷ್ಠೆಯಿಂದ ಸೇವಿಸುವುದನ್ನು ಅದು ಅರ್ಥೈಸಿತು. ಕ್ರೈಸ್ತರಿಗಾದರೋ, ಯೆಹೋವನ ಮಾರ್ಗದಲ್ಲಿ ನಡೆಯುವುದು ಇನ್ನೂ ಹೆಚ್ಚಿನದ್ದನ್ನು ಒಳಗೊಳ್ಳುತ್ತದೆ.
2 ಒಂದು ವಿಷಯವೇನೆಂದರೆ, ಇಂದು ಯೆಹೋವನ ಮಾರ್ಗದಲ್ಲಿ ನಡೆಯುವುದು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುವುದನ್ನು ಮತ್ತು ಅವನನ್ನು “ಮಾರ್ಗವೂ ಸತ್ಯವೂ ಜೀವವೂ” ಎಂಬಂತೆ ಅಂಗೀಕರಿಸುವುದನ್ನು ಅರ್ಥೈಸುತ್ತದೆ. (ಯೋಹಾನ 3:16; 14:6; ಇಬ್ರಿಯ 5:9) ಇದು “ಕ್ರಿಸ್ತನ ನಿಯಮ”ದ ಅನುಸರಿಸುವಿಕೆಯನ್ನೂ ಅರ್ಥೈಸುತ್ತದೆ. ಇದರಲ್ಲಿ ಒಬ್ಬರಿಗೊಬ್ಬರು, ವಿಶೇಷವಾಗಿ ಯೇಸುವಿನ ಅಭಿಷಿಕ್ತ ಸಹೋದರರಿಗೆ ಪ್ರೀತಿಯನ್ನು ತೋರಿಸುವುದು ಒಳಗೂಡಿದೆ. (ಗಲಾತ್ಯ 6:2; ಮತ್ತಾಯ 25:34-40) ಯೆಹೋವನ ಮಾರ್ಗದಲ್ಲಿ ನಡೆಯುವವರು ಆತನ ತತ್ವಗಳನ್ನು ಮತ್ತು ಆಜ್ಞೆಗಳನ್ನು ಪ್ರೀತಿಸುತ್ತಾರೆ. (ಕೀರ್ತನೆ 119:97; ಜ್ಞಾನೋಕ್ತಿ 4:5, 6) ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸಲು ತಮಗಿರುವ ಸುಯೋಗವನ್ನು ಅವರು ಅತ್ಯಮೂಲ್ಯವೆಂದೆಣಿಸುತ್ತಾರೆ. (ಕೊಲೊಸ್ಸೆ 4:17; 2 ತಿಮೊಥೆಯ 4:5) ಪ್ರಾರ್ಥನೆಯು ಅವರ ಜೀವಿತದ ಒಂದು ಕ್ರಮಬದ್ಧವಾದ ಭಾಗವಾಗಿದೆ. (ರೋಮಾಪುರ 12:12) ಮತ್ತು ‘ತಾವು ನಡಕೊಳ್ಳುವ ರೀತಿಯು ಜ್ಞಾನವಿಲ್ಲದವರಂತಿರದೆ ಜ್ಞಾನವಂತರ ಹಾಗಿರುವಂತೆ ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೆ.’ (ಎಫೆಸ 5:15) ಅವರು ತಾತ್ಕಾಲಿಕ ಭೌತಿಕ ಲಾಭಗಳಿಗಾಗಿ ಇಲ್ಲವೆ ನಿಷಿದ್ಧ ಶಾರೀರಿಕ ಸುಖಭೋಗಗಳಿಗಾಗಿ ಆತ್ಮಿಕ ಸಂಪತ್ತುಗಳನ್ನು ಖಂಡಿತವಾಗಿಯೂ ತೊರೆದುಬಿಡುವುದಿಲ್ಲ. (ಮತ್ತಾಯ 6:19, 20; 1 ಯೋಹಾನ 2:15-17) ಅಲ್ಲದೆ, ಯೆಹೋವನಿಗೆ ನಿಷ್ಠೆ ಮತ್ತು ಆತನಲ್ಲಿ ಭರವಸೆ ಅತ್ಯಾವಶ್ಯಕವಾಗಿದೆ. (2 ಕೊರಿಂಥ 1:9; 10:5; ಎಫೆಸ 4:24) ಏಕೆ? ಏಕೆಂದರೆ ನಮ್ಮ ಸನ್ನಿವೇಶವು ಪುರಾತನ ಇಸ್ರಾಯೇಲಿನ ಸನ್ನಿವೇಶದಂತೆಯೇ ಇದೆ.
ಭರವಸೆ ಹಾಗೂ ನಿಷ್ಠೆಗಾಗಿರುವ ಅಗತ್ಯ
3. ಯೆಹೋವನ ಮಾರ್ಗದಲ್ಲಿ ನಾವು ಉಳಿಯುವಂತೆ ನಿಷ್ಠೆ, ನಂಬಿಕೆ, ಮತ್ತು ಭರವಸೆ ಏಕೆ ಸಹಾಯ ಮಾಡುವವು?
3 ಇಸ್ರಾಯೇಲ್ ಜನಾಂಗವು ದ್ವೇಷತುಂಬಿದ ನೆರೆಯವರಿಂದ ಸುತ್ತುವರಿಯಲ್ಪಟ್ಟ ಚಿಕ್ಕ ದೇಶವಾಗಿತ್ತು. ಆ ನೆರೆಯವರು, ಮೂರ್ತಿಗಳ ಆರಾಧನೆಯ ಭಾಗವಾಗಿದ್ದ ಕಾಮುಕ ಸಂಸ್ಕಾರಗಳಲ್ಲಿ ಒಳಗೂಡಿದ್ದರು. (1 ಪೂರ್ವಕಾಲವೃತ್ತಾಂತ 16:26) ಇಸ್ರಾಯೇಲ್ ಜನಾಂಗದವರು ಮಾತ್ರ ಏಕೈಕ ಸತ್ಯ ಹಾಗೂ ಅದೃಶ್ಯ ದೇವರಾದ ಯೆಹೋವನನ್ನು ಸೇವಿಸಿದರು, ಮತ್ತು ಅವರು ಉನ್ನತ ನೈತಿಕ ಮಟ್ಟಗಳನ್ನು ಕಾಪಾಡಿಕೊಳ್ಳುವಂತೆ ಆತನು ಕಟ್ಟುನಿಟ್ಟಾಗಿ ಅಗತ್ಯಪಡಿಸಿದನು. (ಧರ್ಮೋಪದೇಶಕಾಂಡ 6:4) ತದ್ರೀತಿಯಲ್ಲಿ ಇಂದು, ಕೆಲವೇ ಲಕ್ಷ ಜನರು ಯೆಹೋವನನ್ನು ಆರಾಧಿಸುತ್ತಾರೆ. ಮತ್ತು ತಮಗೆ ಹೋಲಿಸುವಾಗ ಯಾರ ಮಟ್ಟಗಳು ಹಾಗೂ ಧಾರ್ಮಿಕ ಹೊರನೋಟವು ತೀರ ಭಿನ್ನವಾಗಿದೆಯೊ ಅಂತಹ 600 ಕೋಟಿ ಜನರಿರುವ ಲೋಕದಲ್ಲಿ ಇವರು ಜೀವಿಸುತ್ತಾರೆ. ನಾವು ಆ ಕೆಲವೇ ಲಕ್ಷ ಜನರಲ್ಲಿ ಒಬ್ಬರಾಗಿರುವುದಾದರೆ, ತಪ್ಪಾದ ವಿಧದಲ್ಲಿ ಪ್ರಭಾವಿತರಾಗುವುದರ ವಿರುದ್ಧ ಎಚ್ಚರದಿಂದಿರಬೇಕು. ಹೇಗೆ? ಯೆಹೋವ ದೇವರಿಗೆ ನಿಷ್ಠೆ, ಆತನಲ್ಲಿ ನಂಬಿಕೆ, ಮತ್ತು ಆತನು ತನ್ನೆಲ್ಲ ವಾಗ್ದಾನಗಳನ್ನು ನೆರವೇರಿಸುವನೆಂಬ ದೃಢಭರವಸೆಯು ಇದಕ್ಕೆ ಸಹಾಯಕರ. (ಇಬ್ರಿಯ 11:6) ಲೋಕವು ಯಾವ ವಿಷಯಗಳಲ್ಲಿ ಭರವಸೆಯಿಡುತ್ತದೊ ಅವುಗಳಿಂದ ಇದು ನಮ್ಮನ್ನು ದೂರವಿರಿಸುವುದು.—ಜ್ಞಾನೋಕ್ತಿ 20:22; 1 ತಿಮೊಥೆಯ 6:17.
4. ಅನ್ಯಜನರು ‘ಮಾನಸಿಕ ಅಂಧಕಾರದಲ್ಲಿ’ ಇರುವುದು ಏಕೆ?
4 ಕ್ರೈಸ್ತರು ಲೋಕದಿಂದ ಅದೆಷ್ಟು ಭಿನ್ನರಾಗಿರಬೇಕೆಂಬುದನ್ನು ಅಪೊಸ್ತಲ ಪೌಲನು ಹೀಗೆ ಬರೆಯುತ್ತಾ ತೋರಿಸಿದನು: “ಆದದರಿಂದ ಅನ್ಯಜನರು ನಡೆದುಕೊಳ್ಳುವ ಪ್ರಕಾರ ನೀವು ಇನ್ನು ಮೇಲೆ ನಡೆದುಕೊಳ್ಳಬಾರದೆಂದು ಕರ್ತನಲ್ಲಿರುವವನಾಗಿ ನಿಮಗೆ ಖಂಡಿತವಾಗಿ ಹೇಳುತ್ತೇನೆ. ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ; ಅವರ ಮನಸ್ಸು ಮೊಬ್ಬಾಗಿ ಹೋಗಿದೆ, ಅವರು ತಮ್ಮ ಹೃದಯದ ಕಾಠಿಣ್ಯದ ನಿಮಿತ್ತದಿಂದಲೂ ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ.” (ಎಫೆಸ 4:17, 18) “ನಿಜವಾದ ಬೆಳಕು” ಯೇಸುವೇ ಆಗಿದ್ದಾನೆ. (ಯೋಹಾನ 1:9) ಅವನನ್ನು ತಿರಸ್ಕರಿಸುವ ಇಲ್ಲವೆ ಅವನಲ್ಲಿ ನಂಬಿಕೆಯಿದೆ ಎಂದು ಪ್ರತಿಪಾದಿಸಿದರೂ “ಕ್ರಿಸ್ತನ ನಿಯಮ”ಕ್ಕೆ ಅವಿಧೇಯರಾಗುವವರು ‘ಮಾನಸಿಕ ಅಂಧಕಾರದಲ್ಲಿ’ ಇದ್ದಾರೆ. ಯೆಹೋವನ ಮಾರ್ಗದಲ್ಲಿ ನಡೆಯುವ ಬದಲು ಅವರು “ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ.” ಲೌಕಿಕ ವಿಧದಲ್ಲಿ ತಾವು ಬಹಳ ಜ್ಞಾನವಂತರೆಂದು ಅವರು ಭಾವಿಸಿಕೊಂಡರೂ, ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಕುರಿತಾದ ಜೀವಕ್ಕೆ ನಡೆಸುವ ಏಕೈಕ ಜ್ಞಾನದ ವಿಷಯದಲ್ಲಿ ಅವರು “ಅಜ್ಞಾನ”ವುಳ್ಳವರಾಗಿದ್ದಾರೆ.—ಯೋಹಾನ 17:3; 1 ಕೊರಿಂಥ 3:19.
5. ಸತ್ಯದ ಬೆಳಕು ಲೋಕದಲ್ಲಿ ಪ್ರಕಾಶಿಸುತ್ತಿರುವುದಾದರೂ, ಅನೇಕ ಹೃದಯಗಳು ಏಕೆ ಪ್ರತಿಕ್ರಿಯಿಸುವುದಿಲ್ಲ?
5 ಹಾಗಿದ್ದರೂ, ಸತ್ಯದ ಬೆಳಕು ಲೋಕದಲ್ಲಿ ಪ್ರಕಾಶಿಸುತ್ತಿದೆ! (ಕೀರ್ತಮೆ 43:3; ಫಿಲಿಪ್ಪಿ 2:15) “ಜ್ಞಾನ [“ವಿವೇಕ,” NW]ವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ.” (ಜ್ಞಾನೋಕ್ತಿ 1:20) ಕಳೆದ ವರ್ಷ, ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಬಗ್ಗೆ ತಮ್ಮ ನೆರೆಯವರಿಗೆ ತಿಳಿಸುತ್ತಾ ಯೆಹೋವನ ಸಾಕ್ಷಿಗಳು ನೂರು ಕೋಟಿಗಿಂತಲೂ ಹೆಚ್ಚಿನ ತಾಸುಗಳನ್ನು ವ್ಯಯಿಸಿದರು. ಲಕ್ಷಾಂತರ ಜನರು ಇದಕ್ಕೆ ಪ್ರತಿಕ್ರಿಯಿಸಿದರು. ಇನ್ನೂ ಅನೇಕರು ಪ್ರತಿಕ್ರಿಯಿಸಲು ವಿಫಲರಾದರೆಂಬುದಕ್ಕೆ ನಾವು ಆಶ್ಚರ್ಯಪಡಬೇಕೊ? ಇಲ್ಲ. ಪೌಲನು ‘ಅವರ ಹೃದಯದ ಕಾಠಿಣ್ಯದ’ ಬಗ್ಗೆ ಮಾತಾಡಿದನು. ಸ್ವಾರ್ಥಪರತೆ ಇಲ್ಲವೆ ಹಣದಾಸೆಯ ಕಾರಣ ಕೆಲವರ ಹೃದಯಗಳು ಪ್ರತಿಕ್ರಿಯಿಸುವುದಿಲ್ಲ. ಇತರರು ಇಂದು ಬಹು ವ್ಯಾಪಕವಾಗಿರುವ ಸುಳ್ಳು ಧರ್ಮ ಇಲ್ಲವೆ ಐಹಿಕ ಮನೋಭಾವದಿಂದ ಪ್ರಭಾವಿತರಾಗಿದ್ದಾರೆ. ಜೀವಿತದಲ್ಲಿ ತಾವು ಅನುಭವಿಸಿದ ಕಷ್ಟತೊಂದರೆಗಳ ಕಾರಣ ಅನೇಕರು ದೇವರಿಂದ ವಿಮುಖರಾಗಿದ್ದಾರೆ. ಇತರರು ಯೆಹೋವನ ಉನ್ನತ ನೈತಿಕ ಮಟ್ಟಗಳಿಗನುಸಾರ ನಡೆಯಲು ನಿರಾಕರಿಸುತ್ತಾರೆ. (ಯೋಹಾನ 3:20) ಯೆಹೋವನ ಮಾರ್ಗದಲ್ಲಿ ನಡೆಯುವ ಒಬ್ಬ ವ್ಯಕ್ತಿಯ ಹೃದಯವು ಇಂತಹ ವಿಷಯಗಳಲ್ಲಿ ಕಠಿಣವಾಗಬಲ್ಲದೊ?
6, 7. ಇಸ್ರಾಯೇಲ್ಯರು ಯೆಹೋವ ದೇವರ ಆರಾಧಕರಾಗಿದ್ದರೂ, ಯಾವ ಸಂದರ್ಭಗಳಲ್ಲಿ ಬಿದ್ದುಹೋದರು, ಮತ್ತು ಏಕೆ?
6 ಪೌಲನು ತೋರಿಸಿದಂತೆ, ಇದು ಪುರಾತನ ಇಸ್ರಾಯೇಲಿಗೂ ಸಂಭವಿಸಿತು. ಅವನು ಬರೆದುದು: “ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು; ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು, ಕುಣಿದಾಡುವದಕ್ಕೆ ಎದ್ದರು ಎಂದು ಬರೆದದೆಯಲ್ಲಾ; ನೀವು ವಿಗ್ರಹಾರಾಧಕರಾಗಬೇಡಿರಿ. ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವಮಾಡದೆ ಇರೋಣ.”—1 ಕೊರಿಂಥ 10:6-8.
7 ಪೌಲನು ಪ್ರಥಮವಾಗಿ, ಸೀನಾಯಿ ಬೆಟ್ಟದ ತಳದಲ್ಲಿ ಇಸ್ರಾಯೇಲ್ ಜನಾಂಗವು ಬಂಗಾರದ ಬಸವನನ್ನು ಆರಾಧಿಸಿದ ಸಂದರ್ಭಕ್ಕೆ ಸೂಚಿಸುತ್ತಾನೆ. (ವಿಮೋಚನಕಾಂಡ 32:5, 6) ಇದು, ಅವರು ಕೆಲವೇ ವಾರಗಳ ಹಿಂದೆ ವಿಧೇಯರಾಗಲು ಒಪ್ಪಿಕೊಂಡಿದ್ದ ಒಂದು ದೈವಿಕ ಆಜ್ಞೆಯ ನೇರ ಉಲ್ಲಂಘನೆಯಾಗಿತ್ತು. (ವಿಮೋಚನಕಾಂಡ 20:4-6; 24:3) ನಂತರ, ಇಸ್ರಾಯೇಲ್ಯರು ಮೋವಾಬ್ ಸ್ತ್ರೀಯರೊಡನೆ ಬಾಳನಿಗೆ ತಲೆಬಾಗಿದ ಸಂದರ್ಭಕ್ಕೆ ಪೌಲನು ಸೂಚಿಸುತ್ತಾನೆ. (ಅರಣ್ಯಕಾಂಡ 25:1-9) ಬಸವನ ಆರಾಧನೆಯಲ್ಲಿ ಮಿತಿಮೀರಿದ ಸ್ವೇಚ್ಛಾವರ್ತನೆಯು, ಅಂದರೆ ‘ಮಜಾಮಾಡುವಿಕೆ’ಯು ಒಂದು ವಿಶಿಷ್ಟ ಭಾಗವಾಗಿತ್ತು.a ಬಾಳನ ಆರಾಧನೆಯು ನಾಚಿಕೆಗೇಡಿನ ಲೈಂಗಿಕ ಅನೈತಿಕತೆಯಿಂದ ಒಳಗೂಡಿತ್ತು. (ಪ್ರಕಟನೆ 2:14) ಇಸ್ರಾಯೇಲ್ಯರು ಈ ಪಾಪಗಳನ್ನು ಮಾಡಿದ್ದೇಕೆ? ಏಕೆಂದರೆ ತಮ್ಮ ಹೃದಯಗಳು ‘ಕೆಟ್ಟ ವಿಷಯಗಳನ್ನು’ ಅಂದರೆ ಮೂರ್ತಿಪೂಜೆ ಇಲ್ಲವೆ ಅದರೊಂದಿಗೆ ಜೊತೆಗೂಡಿದ ಕಾಮುಕ ಆಚರಣೆಗಳನ್ನು ‘ಆಶಿಸುವಂತೆ’ ಅವರು ಅನುಮತಿಸಿದ್ದರಿಂದಲೇ.
8. ಇಸ್ರಾಯೇಲಿನ ಅನುಭವಗಳಿಂದ ನಾವು ಏನನ್ನು ಕಲಿಯಸಾಧ್ಯವಿದೆ?
8 ಈ ಘಟನೆಗಳಿಂದ ನಾವು ಪಾಠವನ್ನು ಕಲಿತುಕೊಳ್ಳಬೇಕೆಂದು ಪೌಲನು ಸೂಚಿಸಿದನು. ಯಾವುದನ್ನು ಕಲಿತುಕೊಳ್ಳಬೇಕು? ಕ್ರೈಸ್ತನೊಬ್ಬನು ಬಂಗಾರದ ಬಸವನಿಗೆ ಇಲ್ಲವೆ ಒಂದು ಪುರಾತನ ಮೋವಾಬ್ಯ ದೇವತೆಗೆ ತಲೆಬಾಗುವುದು ಯೋಚಿಸಲಸಾಧ್ಯವಾದ ವಿಷಯವೇ ಸರಿ. ಆದರೆ ಅನೈತಿಕತೆ ಇಲ್ಲವೆ ಅನಿರ್ಬಂಧಿತ ಸ್ವೇಚ್ಛಾಚಾರದ ಕುರಿತೇನು? ಇವು ಇಂದು ತೀರ ಸಾಮಾನ್ಯವಾಗಿವೆ, ಮತ್ತು ಅವುಗಳ ಬಯಕೆಯು ನಮ್ಮ ಹೃದಯಗಳಲ್ಲಿ ಬೆಳೆಯುವಂತೆ ನಾವು ಬಿಡುವುದಾದರೆ, ಅವು ನಮ್ಮನ್ನು ಯೆಹೋವನಿಂದ ವಿಮುಖಗೊಳಿಸುವವು. ಅದರ ಪರಿಣಾಮವು ಮೂರ್ತಿಪೂಜೆಯಂತೆಯೇ ಇರುವುದು. ಅದೇನೆಂದರೆ, ದೇವರಿಂದ ವಿಮುಖರಾಗುವುದೇ. (ಹೋಲಿಸಿ ಕೊಲೊಸ್ಸೆ 3:5; ಫಿಲಿಪ್ಪಿ 3:19.) ಹೀಗೆ, “ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ” ಎಂದು ತನ್ನ ಜೊತೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸುತ್ತಾ, ಪೌಲನು ಆ ಘಟನೆಗಳ ಕುರಿತಾದ ತನ್ನ ಚರ್ಚೆಯನ್ನು ಕೊನೆಗೊಳಿಸುತ್ತಾನೆ.—1 ಕೊರಿಂಥ 10:14.
ದೇವರ ಮಾರ್ಗದಲ್ಲಿ ನಡೆಯುತ್ತಾ ಇರಲು ಸಹಾಯ
9. (ಎ) ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇರಲು ನಮಗೆ ಯಾವ ಸಹಾಯವು ದೊರೆಯುತ್ತದೆ? (ಬಿ) ‘ನಮ್ಮ ಹಿಂದೆ ಆಡುವ ಮಾತನ್ನು’ ನಾವು ಕೇಳಿಸಿಕೊಳ್ಳುವ ಒಂದು ವಿಧಾನವು ಯಾವುದು?
9 ನಾವು ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇರಲು ನಿಶ್ಚಯಿಸಿಕೊಂಡಿರುವುದಾದರೆ, ನಮಗೆ ಸಹಾಯವು ಖಂಡಿತವಾಗಿಯೂ ಲಭ್ಯವಿರುವುದು. ಯೆಶಾಯನು ಪ್ರವಾದಿಸಿದ್ದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ‘ನಮ್ಮ ಹಿಂದೆ ಆಡುವ ಮಾತನ್ನು ನಮ್ಮ ಕಿವಿಗಳು’ ಕೇಳಿಸಿಕೊಳ್ಳುವುದು ಹೇಗೆ? ಇಂದು ಯಾರೊಬ್ಬರೂ ಒಂದು ಅಕ್ಷರಾರ್ಥ ಧ್ವನಿಯನ್ನು ಕೇಳುವುದಿಲ್ಲ ಇಲ್ಲವೆ ದೇವರಿಂದ ವೈಯಕ್ತಿಕ ಸಂದೇಶಗಳನ್ನು ಪಡೆದುಕೊಳ್ಳುವುದಿಲ್ಲ. ಕೇಳಲ್ಪಡುವ ಆ “ಮಾತು” ನಮಗೆಲ್ಲರಿಗೂ ಒಂದೇ ರೀತಿಯಲ್ಲಿ ಸಿಗುತ್ತದೆ. ಪ್ರಪ್ರಥಮವಾಗಿ ಅದು ಪ್ರೇರಿತ ಶಾಸ್ತ್ರಗಳಾದ ಬೈಬಲಿನ ಮೂಲಕ ಬರುತ್ತದೆ. ಅದರಲ್ಲಿ ದೇವರ ವಿಚಾರಗಳು ಮತ್ತು ಮಾನವರೊಂದಿಗಿನ ಆತನ ವ್ಯವಹಾರಗಳ ದಾಖಲೆಯಿದೆ. ನಾವು ಅನುದಿನವೂ “ದೇವರಿಂದಾಗುವ ಜೀವಕ್ಕೆ ಅನ್ಯ”ವಾಗಿರುವ ಮೂಲಗಳ ಅಪಪ್ರಚಾರಕ್ಕೆ ಒಡ್ಡಲ್ಪಡುವುದರಿಂದ, ಉತ್ತಮವಾದ ಆತ್ಮಿಕ ಆರೋಗ್ಯಕ್ಕಾಗಿ ನಾವು ಕ್ರಮವಾಗಿ ಬೈಬಲನ್ನು ಓದಿ ಮನನ ಮಾಡತಕ್ಕದ್ದು. ಇದು “ವ್ಯರ್ಥವಾದ ಕೆಲಸ”ಗಳಿಂದ ದೂರವಿರುವಂತೆ ಮತ್ತು “ಸಕಲಸತ್ಕಾರ್ಯಕ್ಕೆ ಸನ್ನದ್ಧ”ರಾಗುವಂತೆ ಸಹಾಯ ಮಾಡುವುದು. (ಅ. ಕೃತ್ಯಗಳು 14:14, 15; 2 ತಿಮೊಥೆಯ 3:16, 17) ಇದು ನಮ್ಮನ್ನು ಬಲಗೊಳಿಸಿ, ಭದ್ರಪಡಿಸಿ, ಮತ್ತು ‘ನಮ್ಮ ಮಾರ್ಗದಲ್ಲೆಲ್ಲಾ ಸಫಲರಾಗು’ವಂತೆ ಸಹಾಯಮಾಡುವುದು. (ಯೆಹೋಶುವ 1:7, 8) ಆದಕಾರಣ, ಯೆಹೋವನ ವಾಕ್ಯವು ಪ್ರೇರಿಸುವುದು: “ಮಕ್ಕಳಿರಾ, ಈಗ ನನ್ನ ಕಡೆಗೆ ಕಿವಿಕೊಡಿರಿ, ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೇ ಸರಿ. ಉಪದೇಶವನ್ನು ಕೇಳಿರಿ, ಅದನ್ನು ಬಿಡದೆ ಜ್ಞಾನವಂತರಾಗಿರಿ.”—ಜ್ಞಾನೋಕ್ತಿ 8:32, 33.
10. ‘ನಮ್ಮ ಹಿಂದೆ ಆಡುವ ಮಾತನ್ನು’ ನಾವು ಕೇಳಿಸಿಕೊಳ್ಳುವ ಎರಡನೆಯ ವಿಧಾನವು ಯಾವುದು?
10 ‘ನಮ್ಮ ಹಿಂದೆ ಆಡುವ ಮಾತು,’ “ಹೊತ್ತುಹೊತ್ತಿಗೆ ಆಹಾರ”ವನ್ನು ಒದಗಿಸುವ ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನ’ ಮೂಲಕವೂ ಬರುತ್ತದೆ. (ಮತ್ತಾಯ 24:45-47) ಈ ಆಹಾರವು ಮುದ್ರಿತ ಬೈಬಲ್ ಆಧಾರಿತ ಪ್ರಕಾಶನಗಳ ಮೂಲಕ ಒದಗಿಸಲ್ಪಡುತ್ತದೆ, ಮತ್ತು ಇತ್ತೀಚಿನ ವರ್ಷಗಳಲ್ಲಿ ಈ ಆಹಾರದ ಸರಬರಾಯಿಯು ಹೇರಳವಾಗಿದೆ. ಉದಾಹರಣೆಗೆ, ಕಾವಲಿನಬುರುಜು ಪತ್ರಿಕೆಯ ಮೂಲಕ, ಪ್ರವಾದನೆಯ ವಿಷಯದಲ್ಲಿ ನಮ್ಮ ತಿಳಿವಳಿಕೆಯು ಶುದ್ಧೀಕರಿಸಲ್ಪಟ್ಟಿದೆ. ಈ ಪತ್ರಿಕೆಯಲ್ಲಿ, ಹೆಚ್ಚುತ್ತಿರುವ ಉದಾಸೀನತೆಯ ಎದುರಿನಲ್ಲೂ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಬಿಡದೆ ಮುಂದುವರಿಯುವಂತೆ ನಾವು ಉತ್ತೇಜಿಸಲ್ಪಟ್ಟಿದ್ದೇವೆ, ಅಪಾಯಗಳಿಂದ ದೂರವಿರುವಂತೆ ನಮಗೆ ಸಹಾಯವು ದೊರಕಿದೆ, ಮತ್ತು ಉತ್ತಮವಾದ ಕ್ರೈಸ್ತ ಗುಣಗಳನ್ನು ವಿಕಸಿಸಿಕೊಳ್ಳುವಂತೆ ನಾವು ಪ್ರಚೋದಿಸಲ್ಪಟ್ಟಿದ್ದೇವೆ. ಸರಿಯಾದ ಹೊತ್ತಿಗೆ ಬರುವ ಇಂತಹ ಆಹಾರವನ್ನು ನಾವು ಎಷ್ಟೊಂದು ಅಮೂಲ್ಯವೆಂದೆಣಿಸುತ್ತೇವೆ!
11. ‘ನಮ್ಮ ಹಿಂದೆ ಆಡುವ ಮಾತನ್ನು’ ನಾವು ಕೇಳಿಸಿಕೊಳ್ಳುವ ಮೂರನೆಯ ವಿಧಾನವನ್ನು ವಿವರಿಸಿರಿ.
11 ನಂಬಿಗಸ್ತನೂ ವಿವೇಕಿಯೂ ಆದ ಆಳು, ಕ್ರಮವಾದ ಕೂಟಗಳ ಮೂಲಕವೂ ಆಹಾರವನ್ನು ಒದಗಿಸುತ್ತದೆ. ಇದರಲ್ಲಿ ಸಭಾ ಕೂಟಗಳು, ಸರ್ಕಿಟ್ ಸಮ್ಮೇಳನಗಳು, ಮತ್ತು ದೊಡ್ಡದಾದ ವಾರ್ಷಿಕ ಅಧಿವೇಶನಗಳು ಸೇರಿರುತ್ತವೆ. ಇಂತಹ ಕೂಟಗಳನ್ನು ಒಬ್ಬ ನಂಬಿಗಸ್ತ ಕ್ರೈಸ್ತನು ಗಣ್ಯಮಾಡದೆ ಇರಸಾಧ್ಯವೊ? ಯೆಹೋವನ ಮಾರ್ಗದಲ್ಲಿ ನಡೆಯತ್ತಾ ಇರುವಂತೆ ನಮಗೆ ಬೆಂಬಲವನ್ನು ನೀಡುವುದರಲ್ಲಿ ಇವು ಅತ್ಯಾವಶ್ಯಕ ಸಹಾಯಕಗಳಾಗಿವೆ. ತಮ್ಮ ನಂಬಿಕೆಯಲ್ಲಿ ಪಾಲಿಗರಾಗದ ಜನರ ಸಹವಾಸದಲ್ಲಿ ಸಾಕಷ್ಟು ಸಮಯವನ್ನು ಅನೇಕರು ಕೆಲಸದ ಸ್ಥಳದಲ್ಲಿ ಇಲ್ಲವೆ ಶಾಲೆಯಲ್ಲಿ ಕಳೆಯಬೇಕಾಗಿರುವ ಕಾರಣ, ಕ್ರಮವಾದ ಕ್ರೈಸ್ತ ಸಹವಾಸವು ನಿಜವಾಗಿಯೂ ಜೀವರಕ್ಷಕವಾಗಿದೆ. ‘ಪ್ರೀತಿ ಹಾಗೂ ಸತ್ಕಾರ್ಯಗಳಿಗೆ ಒಬ್ಬರನ್ನೊಬ್ಬರು ಪ್ರೇರಿಸುವ’ ಸದವಕಾಶವನ್ನು ಕೂಟಗಳು ನೀಡುತ್ತವೆ. (ಇಬ್ರಿಯ 10:24) ನಾವು ನಮ್ಮ ಸಹೋದರರನ್ನು ಪ್ರೀತಿಸುತ್ತೇವೆ, ಮತ್ತು ಅವರೊಂದಿಗೆ ಸಹವಸಿಸುವುದನ್ನೂ ಇಷ್ಟಪಡುತ್ತೇವೆ.—ಕೀರ್ತನೆ 133:1.
12. ಯಾವ ನಿರ್ಧಾರವನ್ನು ಯೆಹೋವನ ಸಾಕ್ಷಿಗಳು ಮಾಡಿದ್ದಾರೆ, ಮತ್ತು ಇತ್ತೀಚೆಗೆ ಅವರು ಅದನ್ನು ಹೇಗೆ ವ್ಯಕ್ತಪಡಿಸಿದರು?
12 ಇಂದು ಇಂತಹ ಆತ್ಮಿಕ ಆಹಾರದಿಂದ ಬಲಗೊಳಿಸಲ್ಪಟ್ಟ ಸುಮಾರು 60 ಲಕ್ಷ ಜನರು, ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇದ್ದಾರೆ ಮತ್ತು ಅದನ್ನು ಹೇಗೆ ಮಾಡುವುದೆಂದು ಕಲಿತುಕೊಳ್ಳಲು ಇತರ ಲಕ್ಷಾಂತರ ಜನರು ಬೈಬಲನ್ನು ಅಭ್ಯಸಿಸುತ್ತಿದ್ದಾರೆ. ಭೂಮಿಯ ಕೋಟ್ಯಾನುಕೋಟಿ ಜನಸಂಖ್ಯೆಯೊಂದಿಗೆ ಹೋಲಿಸುವಾಗ ಅವರ ಸಂಖ್ಯೆ ತುಂಬ ಕಡಿಮೆಯಾಗಿರುವುದರಿಂದ ಅವರು ನಿರುತ್ತೇಜಿತರೂ ಇಲ್ಲವೆ ಬಲಹೀನರೂ ಆಗಿದ್ದಾರೊ? ಖಂಡಿತವಾಗಿಯೂ ಇಲ್ಲ! ಅವರು ನಿಷ್ಠೆಯಿಂದ ಯೆಹೋವನ ಚಿತ್ತವನ್ನು ಮಾಡುತ್ತಾ, ‘ತಮ್ಮ ಹಿಂದೆ ಆಡುವ ಮಾತಿಗೆ’ ಕಿವಿಗೊಡುತ್ತಾ ಇರಲು ನಿಶ್ಚಿಯಿಸಿದ್ದಾರೆ. ಈ ನಿರ್ಧಾರದ ಬಹಿರಂಗ ಪ್ರಕಟನೆಯಾಗಿ, 1998/99ರ “ದೇವರ ಜೀವನ ಮಾರ್ಗ” ಎಂಬ ಜಿಲ್ಲಾ ಹಾಗೂ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಪ್ರತಿನಿಧಿಗಳು ತಮ್ಮ ಹೃತ್ಪೂರ್ವಕ ನಿಲುವನ್ನು ವ್ಯಕ್ತಪಡಿಸುವ ಠರಾವನ್ನು ಅಂಗೀಕರಿಸಿದರು. ಆ ಠರಾವಿನಲ್ಲಿದ್ದ ವಿಷಯವು ಈ ಕೆಳಗಿನಂತಿದೆ.
ಠರಾವು
13, 14. ಲೋಕ ಸನ್ನಿವೇಶದ ಯಾವ ವಾಸ್ತವಿಕ ನೋಟವು ಯೆಹೋವನ ಸಾಕ್ಷಿಗಳಿಗಿದೆ?
13 “‘ದೇವರ ಜೀವನ ಮಾರ್ಗ’ ಜಿಲ್ಲಾ ಅಧಿವೇಶನಕ್ಕಾಗಿ ಕೂಡಿಬಂದಿರುವ ಯೆಹೋವನ ಸಾಕ್ಷಿಗಳಾದ ನಾವು, ದೇವರ ಜೀವನ ಮಾರ್ಗವು ಅತ್ಯುತ್ತಮ ಮಾರ್ಗವಾಗಿದೆ ಎಂದು ಹೃತ್ಪೂರ್ವಕವಾಗಿ ಸಮ್ಮತಿಸುತ್ತೇವೆ. ಆದರೂ, ಇಂದು ಮಾನವಕುಲದ ಅಧಿಕಾಂಶ ಜನರ ಅಭಿಪ್ರಾಯವು ಬೇರೆ ರೀತಿಯದ್ದಾಗಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಅತ್ಯುತ್ತಮ ಜೀವಿತ ಮಾರ್ಗವು ಯಾವುದಾಗಿದೆ ಎಂಬ ವಿಷಯದಲ್ಲಿ ಮಾನವ ಸಮಾಜವು ಅನೇಕಾನೇಕ ಕಲ್ಪನೆಗಳನ್ನು, ತತ್ವಜ್ಞಾನಗಳನ್ನು ಮತ್ತು ಧಾರ್ಮಿಕ ವಿಚಾರಗಳನ್ನು ಪ್ರಯೋಗಿಸಿ ನೋಡಿದೆ. ಮಾನವ ಇತಿಹಾಸ ಮತ್ತು ಇಂದಿನ ಲೋಕ ಪರಿಸ್ಥಿತಿಯ ಒಂದು ಪ್ರಾಮಾಣಿಕ ವೀಕ್ಷಣೆಯು, ಯೆರೆಮೀಯ 10:23ರಲ್ಲಿ ದಾಖಲೆಯಾದ ದೈವಿಕ ಘೋಷಣೆಯ ಸತ್ಯತೆಯನ್ನು ತೋರಿಸುತ್ತದೆ. ಅದೇನಂದರೆ, ‘ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು. ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.’
14 “ಆ ಮಾತುಗಳ ಸತ್ಯತೆಯನ್ನು ದೃಢಪಡಿಸುವ ಹೆಚ್ಚಿನ ಪುರಾವೆಯನ್ನು ನಾವು ದಿನನಿತ್ಯವೂ ಕಾಣುತ್ತೇವೆ. ಮಾನವ ಸಮಾಜದ ಹೆಚ್ಚಿನ ಭಾಗವಾದರೊ, ದೇವರ ಜೀವನ ಮಾರ್ಗವನ್ನು ಕಡೆಗಣಿಸುತ್ತದೆ. ತಮ್ಮ ಸ್ವಂತ ದೃಷ್ಟಿಯಲ್ಲಿ ಯಾವುದು ಸರಿಯೆಂದು ತೋರುತ್ತದೋ, ಅದನ್ನು ಜನರು ಬೆನ್ನಟ್ಟುತ್ತಾರೆ. ಫಲಿತಾಂಶಗಳಾದರೊ ದುಃಖಕರವಾಗಿವೆ—ಕುಟುಂಬ ಜೀವನದ ಒಡೆತ, ಮಕ್ಕಳನ್ನು ಮಾರ್ಗದರ್ಶನವಿಲ್ಲದೆ ಬಿಟ್ಟುಬಿಡುವುದು, ಶೂನ್ಯಭಾವ ಮತ್ತು ಹತಾಶೆಯಲ್ಲಿ ಅಂತ್ಯಗೊಳ್ಳುವ ಪೂರ್ತಿ ಪ್ರಾಪಂಚಿಕ ಬೆನ್ನಟ್ಟುವಿಕೆ, ಅಸಂಖ್ಯಾತ ಜನರನ್ನು ಬಲಿ ತೆಗೆದುಕೊಳ್ಳುವ ಅರ್ಥರಹಿತ ಪಾತಕ ಮತ್ತು ಹಿಂಸಾಚಾರ, ಮಾನವ ಜೀವಗಳನ್ನು ಭಯಂಕರವಾಗಿ ನಷ್ಟಗೊಳಿಸುವ ಕುಲಸಂಬಂಧವಾದ ಕಲಹಗಳು ಮತ್ತು ಯುದ್ಧಗಳು, ರತಿರವಾನಿತ ರೋಗಗಳ ವ್ಯಾಧಿಯನ್ನು ಉದ್ರೇಕಿಸುವ ಅತಿರೇಕ ಅನೈತಿಕತೆ. ಸಂತೋಷ, ಶಾಂತಿ, ಮತ್ತು ಭದ್ರತೆಯ ಬೆನ್ನಟ್ಟುವಿಕೆಯನ್ನು ತಡೆಗಟ್ಟುವ ಜಟಿಲವಾದ ಸಮಸ್ಯೆಗಳ ಸಮೂಹದಲ್ಲಿ ಇವು ಕೇವಲ ಕೆಲವಾಗಿವೆ.
15, 16. ದೇವರ ಜೀವನ ಮಾರ್ಗದ ಸಂಬಂಧದಲ್ಲಿ, ಯಾವ ನಿರ್ಧಾರವು ಠರಾವಿನಲ್ಲಿ ವ್ಯಕ್ತಗೊಳಿಸಲ್ಪಟ್ಟಿತು?
15 “ಮಾನವಕುಲದ ವಿಷಾದಕರ ಅವಸ್ಥೆ ಮತ್ತು ಅರ್ಮಗೆದೋನ್ ಎಂದು ಕರೆಯಲ್ಪಡುವ ‘ಸರ್ವಶಕ್ತ ದೇವರ ಮಹಾದಿನದ ಯುದ್ಧ’ದ (ಪ್ರಕಟನೆ 16:14, 16) ಸಾಮೀಪ್ಯದ ನೋಟದಲ್ಲಿ, ಯೆಹೋವನ ಸಾಕ್ಷಿಗಳಾದ ನಾವು ಈ ನಿರ್ಧಾರವನ್ನು ಮಾಡಿದ್ದೇವೆ. ಅದೇನೆಂದರೆ:
16 “ಒಂದು: ಯಾವುದೇ ಷರತ್ತಿಲ್ಲದೆ ಯೆಹೋವ ದೇವರಿಗೆ ನಮ್ಮನ್ನು ವೈಯಕ್ತಿಕವಾಗಿ ಸಮರ್ಪಿಸಿಕೊಂಡಿರುವ ನಾವು, ನಮ್ಮನ್ನು ಆತನ ಸೊತ್ತಾಗಿ ವೀಕ್ಷಿಸುತ್ತೇವೆ, ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನ ಮೂಲಕ ಯೆಹೋವನ ಪ್ರಾಯಶ್ಚಿತ್ತದ ಒದಗಿಸುವಿಕೆಯಲ್ಲಿ ನಿಶ್ಚಲವಾದ ನಂಬಿಕೆಯನ್ನು ನಾವು ಕಾಪಾಡಿಕೊಳ್ಳುವೆವು. ಆತನ ಸಾಕ್ಷಿಗಳಾಗಿ ಸೇವೆಮಾಡುತ್ತಾ ಮತ್ತು ಯೇಸು ಕ್ರಿಸ್ತನ ಆಳಿಕೆಯ ಮೂಲಕ ವ್ಯಕ್ತಪಡಿಸಲ್ಪಟ್ಟ ಆತನ ಪರಮಾಧಿಕಾರಕ್ಕೆ ಅಧೀನರಾಗುತ್ತಾ, ದೇವರ ಜೀವನ ಮಾರ್ಗದಲ್ಲಿ ನಡೆಯಲು ನಾವು ದೃಢನಿಶ್ಚಯವನ್ನು ಮಾಡಿದ್ದೇವೆ.
17, 18. ನೈತಿಕ ಮಟ್ಟಗಳು ಮತ್ತು ಕ್ರೈಸ್ತ ಸಹೋದರತ್ವದ ವಿಷಯದಲ್ಲಿ ಯಾವ ಸ್ಥಾನವನ್ನು ಯೆಹೋವನ ಸಾಕ್ಷಿಗಳು ಸದಾ ಕಾಪಾಡಿಕೊಳ್ಳುವರು?
17 “ಎರಡು: ಬೈಬಲಿನ ಉಚ್ಚ ನೈತಿಕ ಮತ್ತು ಆತ್ಮಿಕ ಮಟ್ಟಗಳಿಗೆ ಅಂಟಿಕೊಳ್ಳುವುದನ್ನು ನಾವು ಮುಂದುವರಿಸುತ್ತಾ ಇರುವೆವು. ಅನ್ಯಜನರು ನಡೆಯುವಂತೆ ನಿಷ್ಪ್ರಯೋಜಕವಾದ ಬುದ್ಧಿಯಿಂದ ನಡೆಯುವುದನ್ನು ತೊರೆಯಲು ನಾವು ದೃಢ ನಿರ್ಧಾರವನ್ನು ಮಾಡಿದ್ದೇವೆ. (ಎಫೆಸ 4:17-19) ಯೆಹೋವನ ಮುಂದೆ ಶುದ್ಧರಾಗಿಯೂ, ಈ ಪ್ರಪಂಚದ ದೋಷವು ಹತ್ತದಂತೆಯೂ ಉಳಿಯುವುದೇ ನಮ್ಮ ನಿರ್ಣಯವಾಗಿದೆ.—ಯಾಕೋಬ 1:27.
18 “ಮೂರು: ಲೋಕವ್ಯಾಪಕ ಕ್ರೈಸ್ತ ಸಹೋದರತ್ವದೋಪಾದಿ ನಾವು ನಮ್ಮ ಶಾಸ್ತ್ರೀಯ ಸ್ಥಾನಕ್ಕೆ ದೃಢವಾಗಿ ಅಂಟಿಕೊಂಡಿರುವೆವು. ಜಾತೀಯ, ರಾಷ್ಟ್ರೀಯ, ಮತ್ತು ಕುಲವರ್ಣೀಯ ದ್ವೇಷ ಮತ್ತು ಪಕ್ಷಬೇಧಗಳ ಪಾಶದಲ್ಲಿ ನಮ್ಮನ್ನು ಸಿಕ್ಕಿಸಿಕೊಳ್ಳದೆ, ಜನಾಂಗಗಳ ನಡುವೆ ನಮ್ಮ ಕ್ರೈಸ್ತ ತಾಟಸ್ಥ್ಯವನ್ನು ನಾವು ಕಾಪಾಡಿಕೊಳ್ಳುವೆವು.
19, 20. ಕ್ರೈಸ್ತ ಹೆತ್ತವರು ಏನು ಮಾಡುವರು? (ಬಿ) ಎಲ್ಲ ಸತ್ಯ ಕ್ರೈಸ್ತರು ತಮ್ಮನ್ನು ಕ್ರಿಸ್ತನ ಶಿಷ್ಯರಾಗಿ ಗುರುತಿಸಿಕೊಳ್ಳುವುದನ್ನು ಹೇಗೆ ಮುಂದುವರಿಸುವರು?
19 “ನಾಲ್ಕು: ನಮ್ಮಲ್ಲಿ ಹೆತ್ತವರಾಗಿರುವವರು, ನಮ್ಮ ಮಕ್ಕಳಲ್ಲಿ ದೇವರ ಮಾರ್ಗವನ್ನು ನಾಟಿಸುವೆವು. ಕ್ರೈಸ್ತ ಜೀವಿತದಲ್ಲಿ ಒಂದು ಮಾದರಿಯನ್ನು ನಾವು ಇಡುವೆವು. ಅದರಲ್ಲಿ ಕ್ರಮದ ಬೈಬಲ್ ಅಧ್ಯಯನ, ಕುಟುಂಬ ಅಭ್ಯಾಸ, ಮತ್ತು ಕ್ರೈಸ್ತ ಸಭೆಯಲ್ಲಿ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಪೂರ್ಣಮನಸ್ಸಿನಿಂದ ಭಾಗವಹಿಸುವುದು ಸೇರಿದೆ.
20 “ಐದು: ನಮ್ಮ ನಿರ್ಮಾಣಕರ್ತನಿಂದ ಉದಾಹರಿಸಲ್ಪಡುವ ದೈವಿಕ ಗುಣಗಳನ್ನು ಬೆಳೆಸಿಕೊಳ್ಳಲು ನಾವೆಲ್ಲರೂ ಪರಿಶ್ರಮಿಸುವೆವು, ಮತ್ತು ಯೇಸು ಮಾಡಿದಂತೆ, ಆತನ ವ್ಯಕ್ತಿತ್ವವನ್ನು ಹಾಗೂ ಆತನ ಮಾರ್ಗಗಳನ್ನು ಅನುಕರಿಸಲು ಪ್ರಯಾಸಪಡುವೆವು. (ಎಫೆಸ 5:1) ನಮ್ಮೆಲ್ಲ ಕಾರ್ಯಾಚರಣೆಗಳು ಪ್ರೀತಿಯಿಂದಲೇ ನಡೆಯುವಂತೆ ಮಾಡಲು ನಾವು ನಿರ್ಧರಿಸಿದ್ದೇವೆ, ಈ ಮೂಲಕ ನಾವು ನಮ್ಮನ್ನು ಕ್ರಿಸ್ತನ ಶಿಷ್ಯರಾಗಿ ಗುರುತಿಸಿಕೊಳ್ಳುತ್ತೇವೆ.—ಯೋಹಾನ 13:35.
21-23. ಯೆಹೋವನ ಸಾಕ್ಷಿಗಳು ಯಾವ ವಿಷಯವನ್ನು ಮಾಡುತ್ತಾ ಮುಂದುವರಿಯುವರು, ಮತ್ತು ಯಾವುದರ ಬಗ್ಗೆ ಅವರಿಗೆ ನಿಶ್ಚಿತಾಭಿಪ್ರಾಯವಿದೆ?
21 “ಆರು: ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದನ್ನು, ಶಿಷ್ಯರನ್ನಾಗಿ ಮಾಡುವುದನ್ನು, ನಾವು ಬಿಡದೆ ಮುಂದುವರಿಸುವೆವು, ಮತ್ತು ನಾವು ಅವರಿಗೆ ದೇವರ ಜೀವನ ಮಾರ್ಗವನ್ನು ಬೋಧಿಸುತ್ತಾ, ಸಭಾ ಕೂಟಗಳಲ್ಲಿ ಅಧಿಕ ತರಬೇತಿಯನ್ನು ಪಡೆಯುವಂತೆ ಅವರಿಗೆ ಉತ್ತೇಜನವನ್ನು ಕೊಡುವೆವು.—ಮತ್ತಾಯ 24:14; 28:19, 20; ಇಬ್ರಿಯ 10:24, 25.
22 “ಏಳು: ವ್ಯಕ್ತಿಗತವಾಗಿ ಮತ್ತು ಒಂದು ಧಾರ್ಮಿಕ ಸಂಸ್ಥೆಯೋಪಾದಿ, ನಾವು ದೇವರ ಚಿತ್ತವನ್ನು ನಮ್ಮ ಜೀವಿತಗಳಲ್ಲಿ ಪ್ರಥಮವಾಗಿಡುವುದನ್ನು ಮುಂದುವರಿಸುತ್ತಾ ಹೋಗುವೆವು. ಆತನ ವಾಕ್ಯವಾದ ಬೈಬಲನ್ನು ನಮ್ಮ ಮಾರ್ಗದರ್ಶಿಯಾಗಿ ಬಳಸುತ್ತಾ, ನಾವು ಬಲಕ್ಕಾಗಲಿ ಎಡಕ್ಕಾಗಲಿ ಅಡ್ಡತಿರುಗೆವು. ಹೀಗೆ ಲೋಕದ ಮಾರ್ಗಗಳಿಗಿಂತ ದೇವರ ಮಾರ್ಗವು ಎಷ್ಟೋ ಉತ್ಕೃಷ್ಟವೆಂಬುದನ್ನು ದೃಢೀಕರಿಸಿ ತೋರಿಸುವೆವು. ದೃಢತೆಯಿಂದಲೂ ನಿಷ್ಠೆಯಿಂದಲೂ, ಈಗಲೂ ಸದಾಕಾಲವೂ ದೇವರ ಜೀವನ ಮಾರ್ಗವನ್ನು ಬೆನ್ನಟ್ಟುವುದೇ ನಮ್ಮ ದೃಢಸಂಕಲ್ಪವಾಗಿದೆ!
23 “ನಾವೀ ನಿರ್ಧಾರವನ್ನು ಮಾಡುವುದು ಯಾಕೆಂದರೆ, ಯಾರು ದೇವರ ಚಿತ್ತವನ್ನು ಮಾಡುವರೋ ಅವರು ಸದಾಕಾಲ ಜೀವಿಸುವರು ಎಂಬ ಯೆಹೋವನ ಪ್ರೀತಿಪರ ವಾಗ್ದಾನದಲ್ಲಿ ನಾವು ಪೂರ್ಣ ಭರವಸೆಯನ್ನು ಇಟ್ಟಿದ್ದೇವೆ. ನಾವು ಈ ಠರಾವನ್ನು ಏಕೆ ಮುಂದಿಡುತ್ತಿದ್ದೇವೆಂದರೆ, ಶಾಸ್ತ್ರೀಯ ಮೂಲತತ್ವಗಳು, ಬುದ್ಧಿವಾದಗಳು ಮತ್ತು ಸೂಚನೆಗಳು ಇಂದಿನ ಜೀವಿತವನ್ನು ಅತ್ಯುತ್ತಮ ಜೀವಿತವನ್ನಾಗಿ ಮಾಡುತ್ತವೆ ಮತ್ತು ವಾಸ್ತವ ಜೀವವನ್ನು ನಾವು ದೃಢವಾಗಿ ಹಿಡಿದುಕೊಳ್ಳಲಾಗುವಂತೆ ಒಂದು ಉತ್ತಮ ಬುನಾದಿಯನ್ನು ಹಾಕುತ್ತವೆ ಎಂಬುದನ್ನು ನಾವು ಮನಗಂಡಿದ್ದೇವೆ. (1 ತಿಮೊಥೆಯ 6:19; 2 ತಿಮೊಥೆಯ 4:7ಬಿ, 8) ಎಲ್ಲಕ್ಕಿಂತಲೂ ಹೆಚ್ಚಾಗಿ, ನಾವು ಈ ನಿರ್ಧಾರವನ್ನು ಮಾಡುವುದು, ನಾವು ಯೆಹೋವನನ್ನು ನಮ್ಮ ಪೂರ್ಣ ಹೃದಯ, ಪ್ರಾಣ, ಬುದ್ಧಿ, ಮತ್ತು ಶಕ್ತಿಯಿಂದ ಪ್ರೀತಿಸುವುದರಿಂದಲೇ!
24, 25. ಪ್ರಸ್ತಾಪಿಸಲ್ಪಟ್ಟ ಠರಾವಿಗೆ ಯಾವ ಪ್ರತಿಕ್ರಿಯೆಯು ಸಿಕ್ಕಿತು, ಮತ್ತು ಯೆಹೋವನ ಮಾರ್ಗದಲ್ಲಿ ನಡೆಯುವವರ ನಿರ್ಧಾರವು ಏನಾಗಿದೆ?
24 “ಈ ಜಿಲ್ಲಾ ಅಧಿವೇಶನದಲ್ಲಿ ಉಪಸ್ಥಿತರಿರುವ ಎಲ್ಲರು, ಯಾರು ಈ ಠರಾವಿನ ಸ್ವೀಕಾರಕ್ಕೆ ಸಮ್ಮತಿಸುತ್ತೀರೋ ದಯವಿಟ್ಟು ಹೌದು ಎಂದು ಹೇಳಿರಿ!”
25 ಅಲ್ಲಿ ಹಾಜರಿದ್ದವರೆಲ್ಲರೂ “ಹೌದು” ಎಂದು ಗಟ್ಟಿಯಾಗಿ ಹೇಳಿದಾಗ, ಲೋಕದ ಸುತ್ತಲೂ ಇದ್ದ ನೂರಾರು ಸಭಾಂಗಣಗಳು ಮತ್ತು ಕ್ರೀಡಾಂಗಣಗಳು ಪ್ರತಿಧ್ವನಿಸಿದವು! ತಾವು ಯೆಹೋವನ ಮಾರ್ಗದಲ್ಲಿ ಸದಾ ನಡೆಯುವೆವು ಎಂಬ ವಿಷಯದಲ್ಲಿ ಯೆಹೋವನ ಸಾಕ್ಷಿಗಳಿಗೆ ಯಾವ ಸಂದೇಹವೂ ಇಲ್ಲ. ಅವರಿಗೆ ಯೆಹೋವನಲ್ಲಿ ಪೂರ್ಣ ಭರವಸೆಯಿದೆ ಮತ್ತು ತನ್ನ ವಾಗ್ದಾನಗಳನ್ನು ಆತನು ನೆರವೇರಿಸುವನೆಂಬ ನಂಬಿಕೆಯಿದೆ. ಏನೇ ಆಗಲಿ ಅವರು ಆತನಿಗೆ ನಿಷ್ಠಾವಂತರಾಗಿ ಉಳಿಯುತ್ತಾರೆ. ಮತ್ತು ಆತನ ಚಿತ್ತವನ್ನು ಮಾಡಲು ಅವರು ನಿಶ್ಚಯಿಸಿದ್ದಾರೆ.
‘ದೇವರು ನಮ್ಮ ಕಡೆ ಇದ್ದಾನೆ’
26. ಯೆಹೋವನ ಮಾರ್ಗದಲ್ಲಿ ನಡೆಯುವವರು ಯಾವ ಸಂತೋಷಕರ ಪರಿಸ್ಥಿತಿಯನ್ನು ಅನುಭವಿಸುತ್ತಾರೆ?
26 ಯೆಹೋವನ ಸಾಕ್ಷಿಗಳು ಕೀರ್ತನೆಗಾರನ ಪ್ರೋತ್ಸಾಹನೆಯನ್ನು ಜ್ಞಾಪಿಸಿಕೊಳ್ಳುತ್ತಾರೆ: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು.” (ಕೀರ್ತನೆ 37:34) ಅವರು ಪೌಲನ ಉತ್ತೇಜನದಾಯಕ ಮಾತುಗಳನ್ನು ಮರೆಯುವುದಿಲ್ಲ: “ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು? ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?” (ರೋಮಾಪುರ 8:31, 32) ಹೌದು, ನಾವು ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇದ್ದರೆ, ಆತನು “ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ” ಒದಗಿಸುವನು. (1 ತಿಮೊಥೆಯ 6:17) ನಮ್ಮ ಪ್ರಿಯ ಸಹೋದರ ಸಹೋದರಿಯರ ಜೊತೆಗೆ ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇರುವುದಕ್ಕಿಂತಲೂ ಉತ್ತಮವಾದ ಸ್ಥಳವೊಂದು ಇರಸಾಧ್ಯವೊ? ನಮ್ಮ ಪಕ್ಷದಲ್ಲಿ ಯೆಹೋವನಿರುವಾಗ, ನಾವು ಅಲ್ಲಿಯೇ ಇದ್ದು ಕೊನೆಯ ವರೆಗೂ ತಾಳಿಕೊಳ್ಳಲು ನಿಶ್ಚಯಿಸಿಕೊಳ್ಳೋಣ. ಆತನು ತನ್ನ ಕ್ಲುಪ್ತ ಕಾಲದಲ್ಲಿ ಎಲ್ಲ ವಾಗ್ದಾನಗಳನ್ನು ನೆರವೇರಿಸುವುದನ್ನು ನಾವು ನೋಡುವೆವು ಎಂಬ ಪೂರ್ಣ ಭರವಸೆ ನಮಗಿರಲಿ.—ತೀತ 1:2.
ನಿಮಗೆ ಜ್ಞಾಪಕವಿದೆಯೆ?
◻ ಯೆಹೋವನ ಮಾರ್ಗದಲ್ಲಿ ನಡೆಯಲು ಒಬ್ಬ ಕ್ರೈಸ್ತನಿಗೆ ಯಾವುದರ ಅಗತ್ಯವಿದೆ?
◻ ನಾವು ಯೆಹೋವನಲ್ಲಿ ಭರವಸೆಯನ್ನು ಬೆಳೆಸಿಕೊಳ್ಳುವುದರ ಮತ್ತು ಆತನಿಗೆ ನಿಷ್ಠಾವಂತರಾಗಿರುವುದರ ಅಗತ್ಯ ಏಕೆ ಇದೆ?
◻ ಯೆಹೋವನ ಮಾರ್ಗದಲ್ಲಿ ನಡೆದಂತೆ ನಮಗೆ ಯಾವ ಸಹಾಯವು ಲಭ್ಯವಾಗುತ್ತದೆ?
◻ “ದೇವರ ಜೀವನ ಮಾರ್ಗ” ಅಧಿವೇಶನಗಳಲ್ಲಿ ಅಂಗೀಕರಿಸಲ್ಪಟ್ಟ ಠರಾವಿನ ಕೆಲವೊಂದು ಮುಖ್ಯಾಂಶಗಳನ್ನು ತಿಳಿಸಿರಿ.
[ಅಧ್ಯಯನ ಪ್ರಶ್ನೆಗಳು]
a “ಮಜಾಮಾಡು” ಎಂಬುದಾಗಿ ಇಲ್ಲಿ ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವನ್ನು ಸೂಚಿಸುತ್ತಾ, ಅದು ವಿಧರ್ಮಿ ಉತ್ಸವಗಳಲ್ಲಿ ನಡೆದ ನೃತ್ಯಗಳನ್ನು ಅರ್ಥೈಸುತ್ತದೆಂದು ಒಬ್ಬ ವ್ಯಾಖ್ಯಾನಕಾರನು ಹೇಳುತ್ತಾನೆ. ಅವನು ಕೂಡಿಸಿ ಹೇಳುವುದು: “ಈಗಾಗಲೇ ಗೊತ್ತಿರುವಂತೆ, ಈ ನೃತ್ಯಗಳಲ್ಲಿ ಹೆಚ್ಚಿನವು ಅತ್ಯಂತ ಕಾಮುಕ ಉದ್ರೇಕಗಳನ್ನು ಪ್ರಚೋದಿಸುವ ಉದ್ದೇಶವನ್ನು ಪಡೆದಿದ್ದವು.”
[ಪುಟ 29 ರಲ್ಲಿರುವ ಚಿತ್ರ]
“ದೇವರ ಜೀವನ ಮಾರ್ಗ” ಎಂಬ ಜಿಲ್ಲಾ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ, ಒಂದು ಪ್ರಮುಖ ಠರಾವು ಅಂಗೀಕರಿಸಲ್ಪಟ್ಟಿತು