ಪಾಠ 40
ದೇವರ ಮುಂದೆ ಶುದ್ಧರಾಗಿರೋದು ಅಂದರೇನು?
ತಾಯಿ ಪುಟ್ಟ ಮಗನನ್ನ ಸ್ಕೂಲಿಗೆ ಹೋಗೋಕೆ ರೆಡಿ ಮಾಡುತ್ತಿರುವ ಸನ್ನಿವೇಶವನ್ನ ಚಿತ್ರಿಸಿಕೊಳ್ಳಿ. ತಾಯಿ ಅವನಿಗೆ ಸ್ನಾನ ಮಾಡಿಸಿ, ನೀಟಾದ ಬಟ್ಟೆಯನ್ನ ಹಾಕುತ್ತಾಳೆ. ಇದ್ರಿಂದ ಮಗನ ಆರೋಗ್ಯ ಚೆನ್ನಾಗಿರುತ್ತೆ. ಅಷ್ಟೇ ಅಲ್ಲ ಹುಡುಗ ನೀಟಾಗಿರೋದನ್ನ ನೋಡಿದವರು, ‘ಅವನ ಅಪ್ಪಅಮ್ಮ ಅವನನ್ನ ಎಷ್ಟು ಚೆನ್ನಾಗಿ ರೆಡಿ ಮಾಡಿ ಕಳಿಸಿದ್ದಾರಲ್ಲಾ’ ಅಂತ ಮಾತಾಡಿಕೊಳ್ಳುತ್ತಾರೆ. ಅದೇ ತರ ಯೆಹೋವ ದೇವರು ಕೂಡ ತನ್ನ ಮಕ್ಕಳು ನೈತಿಕವಾಗಿ (ನಡೆ, ನುಡಿ, ಯೋಚನೆ) ಮತ್ತು ಶಾರೀರಿಕವಾಗಿ ಶುದ್ಧರಾಗಿರಬೇಕು ಅಂತ ಬಯಸುತ್ತಾನೆ. ಇದ್ರಿಂದ ನಮಗೆ ಒಳ್ಳೇದಾಗುತ್ತೆ ಮತ್ತು ನಮ್ಮ ತಂದೆಯಾದ ಯೆಹೋವನಿಗೂ ಗೌರವ ತರುತ್ತೆ.
1. ಯಾವೆಲ್ಲಾ ರೀತಿಯಲ್ಲಿ ನಾವು ಶುದ್ಧರಾಗಿರಬಹುದು?
‘ನೀವು ಪವಿತ್ರರಾಗಿ ಇರಬೇಕು’ ಅಂತ ಯೆಹೋವನು ಹೇಳಿದ್ದಾನೆ. (1 ಪೇತ್ರ 1:16) ಪವಿತ್ರರಾಗಿ ಇರಬೇಕಂದ್ರೆ ನಾವು ಶಾರೀರಿಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿರಬೇಕು. ಪ್ರತಿದಿನ ಸ್ನಾನ ಮಾಡುವ ಮೂಲಕ, ಬಟ್ಟೆ, ವಾಹನಗಳನ್ನ ನೀಟಾಗಿಡುವ ಮೂಲಕ ನಾವು ಶುದ್ಧರಾಗಿರಬಹುದು. ನಮ್ಮ ರಾಜ್ಯ ಸಭಾಗೃಹವನ್ನ ಶುದ್ಧವಾಗಿ ಇಡಲು ನಾವು ಕೈಜೋಡಿಸಬಹುದು. ಹೀಗೆ ನಾವು ಶುದ್ಧರಾಗಿರುವಾಗ ಯೆಹೋವ ದೇವರಿಗೆ ಗೌರವ, ಘನತೆ ತರುತ್ತೇವೆ.—2 ಕೊರಿಂಥ 6:3, 4.
2. ನಾವು ಶುದ್ಧರಾಗಿ ಇರಬೇಕಂದ್ರೆ ಯಾವೆಲ್ಲಾ ಅಭ್ಯಾಸಗಳಿಂದ ದೂರ ಇರಬೇಕು?
‘ನಮ್ಮ ದೇಹ ಮತ್ತು ಹೃದಯದಿಂದ ಎಲ್ಲ ಕೊಳೆ ತೆಗೆದು ನಮ್ಮನ್ನ ಶುದ್ಧ ಮಾಡಿಕೊಳ್ಳಬೇಕು’ ಅಂತ ಬೈಬಲ್ ಹೇಳುತ್ತೆ. (2 ಕೊರಿಂಥ 7:1) ನಮ್ಮ ದೇಹ ಮತ್ತು ಮನಸ್ಸನ್ನ ಅಶುದ್ಧ ಮಾಡುವ ಎಲ್ಲಾ ವಿಷಯಗಳಿಂದ ನಾವು ದೂರ ಇರಬೇಕು. ನಮ್ಮ ಯೋಚನೆಗಳು ಸಹ ದೇವರಿಗೆ ಇಷ್ಟವಾಗಬೇಕು. ಹಾಗಾಗಿ ನಾವು ಕೆಟ್ಟ ಯೋಚನೆಗಳಿಂದ ದೂರ ಇರೋಕೆ ಆದಷ್ಟು ಪ್ರಯತ್ನ ಮಾಡಬೇಕು. (ಕೀರ್ತನೆ 104:34) ಅದರ ಜೊತೆಗೆ ನಮ್ಮ ಬಾಯಲ್ಲಿ ಕೆಟ್ಟ ಮಾತು ಬರದೇ ಇರೋ ತರನೂ ನೋಡಿಕೊಳ್ಳಬೇಕು.—ಕೊಲೊಸ್ಸೆ 3:8 ಓದಿ.
ನಮ್ಮನ್ನು ಶಾರೀರಿಕವಾಗಿ ಮತ್ತು ನೈತಿಕವಾಗಿ ಹಾನಿಮಾಡುವ ಇನ್ನು ಯಾವ ವಿಷಯಗಳಿವೆ? ಕೆಲವು ವಸ್ತುಗಳು ನಮ್ಮ ಶರೀರಕ್ಕೆ ಹಾನಿ ಮಾಡುತ್ತವೆ. ಹಾಗಾಗಿ ನಾವು ತಂಬಾಕು, ಅಡಿಕೆ, ಅಮಲೌಷಧಗಳನ್ನ (ಡ್ರಗ್ಸ್) ಸೇವಿಸೋದಿಲ್ಲ ಅಥವಾ ಔಷಧಗಳನ್ನ ತಪ್ಪಾಗಿ ಬಳಸೋದಿಲ್ಲ. ನಾವು ಇಂಥ ಕೆಟ್ಟ ಅಭ್ಯಾಸಗಳಿಂದ ದೂರವಿರುವಾಗ ನಮ್ಮ ಆರೋಗ್ಯ ಚೆನ್ನಾಗಿರುತ್ತೆ. ನಮ್ಮ ಜೀವವನ್ನ ಅಮೂಲ್ಯವಾಗಿ ನೋಡ್ತೇವೆ ಅಂತ ತೋರಿಸಿಕೊಡುತ್ತೇವೆ. ನಾವು ನೈತಿಕವಾಗಿ ಕೂಡ ಶುದ್ಧರಾಗಿರೋಕೆ ನಮ್ಮಿಂದ ಆದ ಪ್ರಯತ್ನವನ್ನ ಮಾಡುತ್ತೇವೆ. ಹಾಗಾಗಿ ನಾವು ಹಸ್ತಮೈಥುನದಂಥa ಮತ್ತು ಅಶ್ಲೀಲ ವಿಷಯಗಳನ್ನb ನೋಡುವಂಥ ಕೆಟ್ಟ ಅಭ್ಯಾಸಗಳಿಂದ ದೂರ ಇರುತ್ತೇವೆ. (ಕೀರ್ತನೆ 119:37; ಎಫೆಸ 5:5) ಇಂಥ ಅಭ್ಯಾಸಗಳನ್ನ ಬಿಟ್ಟುಬಿಡೋಕೆ ಕಷ್ಟ ಆಗುತ್ತೆ ಅನ್ನೋದು ನಿಜಾನೇ. ಆದರೆ ಒಂದು ವಿಷಯ ನೆನಪಿಡಿ, ಅದರಿಂದ ಹೊರ ಬರೋಕೆ ಯೆಹೋವ ದೇವರು ನಿಮಗೆ ಖಂಡಿತ ಸಹಾಯ ಮಾಡ್ತಾನೆ!—ಯೆಶಾಯ 41:13 ಓದಿ.
ಹೆಚ್ಚನ್ನ ತಿಳಿಯೋಣ
ನಾವು ಶಾರೀರಿಕವಾಗಿ ಶುದ್ಧರಾಗಿರುವ ಮೂಲಕ ಯೆಹೋವ ದೇವರಿಗೆ ಘನತೆ ತರೋದು ಹೇಗೆ ಅಂತ ತಿಳಿಯಿರಿ ಮತ್ತು ನಾವು ಅಶುದ್ಧವಾದ ಅಭ್ಯಾಸಗಳಿಂದ ದೂರ ಇರೋದು ಹೇಗೆಂದು ಕಲಿಯಿರಿ.
3. ನಾವು ಶುದ್ಧರಾಗಿ ಇದ್ದರೆ ಯೆಹೋವ ದೇವರಿಗೆ ಗೌರವ ತರುತ್ತೇವೆ
ಯೆಹೋವ ದೇವರು ಹಿಂದಿನ ಕಾಲದ ಇಸ್ರಾಯೇಲ್ಯರಿಗೆ ಶುದ್ಧತೆ ಬಗ್ಗೆ ತುಂಬ ಆಜ್ಞೆಗಳನ್ನ ಕೊಟ್ಟಿದ್ದನು. ದೇವರಿಗೆ ಶುದ್ಧತೆ ಬಗ್ಗೆ ಯಾವ ನೋಟ ಇದೆ ಅಂತ ಈ ಆಜ್ಞೆಗಳಿಂದ ಗೊತ್ತಾಗುತ್ತೆ. ವಿಮೋಚನಕಾಂಡ 19:10 ಮತ್ತು 30:17-19 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಶುದ್ಧತೆಯ ಬಗ್ಗೆ ಯೆಹೋವ ದೇವರಿಗೆ ಹೇಗನಿಸುತ್ತೆ?
ಶುದ್ಧರಾಗಿ ಇರೋಕೆ ನಮಗೆ ಸಹಾಯ ಮಾಡುವ ಕೆಲವು ಒಳ್ಳೇ ಅಭ್ಯಾಸಗಳು ಯಾವುವು?
ಶುದ್ಧರಾಗಿ ಇರೋಕೆ ಸಮಯ ಮತ್ತು ಶ್ರಮ ಬೇಕು. ಆದರೆ ನಾವು ಬಡವರಾಗಿರಲಿ ಶ್ರೀಮಂತರಾಗಿರಲಿ ಅಥವಾ ಎಲ್ಲೇ ಜೀವಿಸುತ್ತಿರಲಿ ನಾವೆಲ್ಲರೂ ಶುದ್ಧರಾಗಿ ಇರೋಕೆ ಸಾಧ್ಯ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ಸಿಹಿಸುದ್ದಿಯನ್ನ ಸಾರೋಕೆ ಹೋಗುವಾಗ ನಮ್ಮಲ್ಲಿರುವ ಎಲ್ಲಾ ವಸ್ತುಗಳು ಶುದ್ಧವಾಗಿರಬೇಕು ಯಾಕೆ?
4. ಕೆಟ್ಟ ಅಭ್ಯಾಸಗಳನ್ನ ಬಿಟ್ಟುಬಿಡಿ
ಕೆಟ್ಟ ಅಭ್ಯಾಸಗಳು ಯಾವುದೇ ಆಗಿರಲಿ ಅದರಿಂದ ಹೊರಬರೋಕೆ ಯೆಹೋವನು ಸಹಾಯ ಮಾಡ್ತಾನೆ
ನೀವು ಸಿಗರೇಟ್ ಸೇದುತ್ತಿದ್ದರೆ ಅಥವಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಹೊರ ಬರೋದು ಎಷ್ಟು ಕಷ್ಟ ಅಂತ ನಿಮಗೆ ಚೆನ್ನಾಗಿ ಗೊತ್ತಿರುತ್ತೆ. ಅದನ್ನ ಬಿಡೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ? ಈ ಕೆಟ್ಟ ಅಭ್ಯಾಸಗಳಿಂದ ಯಾವೆಲ್ಲಾ ಅಪಾಯಗಳಿವೆ ಅನ್ನೋದನ್ನ ತಿಳಿದುಕೊಳ್ಳಿ. ಮತ್ತಾಯ 22:37-39 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ: ಸಿಗರೇಟ್ ಸೇದೋದ್ರಿಂದ ಅಥವಾ ಡ್ರಗ್ಸ್ ತಗೊಳ್ಳೋದ್ರಿಂದ . . .
ಒಬ್ಬ ವ್ಯಕ್ತಿಗೆ ಯೆಹೋವ ದೇವರ ಜೊತೆ ಇರೋ ಸಂಬಂಧ ಏನಾಗುತ್ತೆ?
ಅವನ ಕುಟುಂಬ ಮತ್ತು ಅವನ ಸುತ್ತಮುತ್ತ ಇರುವವರ ಮೇಲೆ ಯಾವ ಪರಿಣಾಮ ಬೀರುತ್ತೆ?
ಕೆಟ್ಟ ಅಭ್ಯಾಸಗಳನ್ನ ಬಿಟ್ಟುಬಿಡೋಕೆ ಪ್ಲಾನ್ ಮಾಡಿಕೊಳ್ಳಿ.c ವಿಡಿಯೋ ನೋಡಿ.
ಫಿಲಿಪ್ಪಿ 4:13 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ತಪ್ಪದೆ ಪ್ರಾರ್ಥನೆ ಮಾಡೋದು, ಬೈಬಲ್ ಕಲಿಯೋದು ಮತ್ತು ಕೂಟಗಳಿಗೆ ಹೋಗೋದು ಕೆಟ್ಟ ಅಭ್ಯಾಸಗಳನ್ನ ಬಿಡಲು ಒಬ್ಬ ವ್ಯಕ್ತಿಗೆ ಹೇಗೆ ಸಹಾಯ ಮಾಡುತ್ತೆ?
5. ಕೆಟ್ಟ ಯೋಚನೆ ಮತ್ತು ಅಭ್ಯಾಸಗಳ ವಿರುದ್ಧ ಹೋರಾಡಿ
ಕೊಲೊಸ್ಸೆ 3:5 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಅಶ್ಲೀಲ ವಿಷಯಗಳು (ಪೊರ್ನೋಗ್ರಫಿ), ಸೆಕ್ಸ್ಟಿಂಗ್d ಮತ್ತು ಹಸ್ತಮೈಥುನ ಯೆಹೋವ ದೇವರಿಗೆ ಇಷ್ಟ ಆಗಲ್ಲ ಅಂತ ನಮಗೆ ಹೇಗೆ ಗೊತ್ತು?
ನಾವು ನೈತಿಕವಾಗಿ ಶುದ್ಧವಾಗಿರಬೇಕು ಅಂತ ಯೆಹೋವನು ಬಯಸ್ತಾನೆ. ಆತನು ನಮ್ಮಿಂದ ಆಗದೇ ಇರೋದನ್ನ ಕೇಳುತ್ತಿದ್ದಾನಾ? ನೀವೇನು ಹೇಳ್ತೀರಾ?
ಕೆಟ್ಟ ಯೋಚನೆಗಳ ವಿರುದ್ಧ ಹೋರಾಡೋಕೆ ಏನು ಮಾಡಬೇಕು ಅಂತ ತಿಳಿದುಕೊಳ್ಳಿ. ವಿಡಿಯೋ ನೋಡಿ.
ನೈತಿಕವಾಗಿ ಶುದ್ಧರಾಗಿರೋಕೆ ನಮ್ಮಿಂದ ಆದ ಎಲ್ಲ ಪ್ರಯತ್ನವನ್ನ ಮಾಡಬೇಕು ಅಂತ ಅರ್ಥಮಾಡಿಸೋಕೆ ಯೇಸು ಕ್ರಿಸ್ತನು ಒಂದು ಉದಾಹರಣೆ ಕೊಟ್ಟನು. ಮತ್ತಾಯ 5:29, 30 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೇಸುವಿನ ಮಾತಿನ ಅರ್ಥ ನಾವು ನಮ್ಮ ಶರೀರಕ್ಕೆ ಹಾನಿ ಮಾಡಿಕೊಳ್ಳಬೇಕು ಅಂತ ಆಗಿರಲಿಲ್ಲ. ಬದಲಿಗೆ ನಾವು ಅನೈತಿಕ ವಿಷಯಗಳಿಂದ ದೂರ ಇರಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕು ಅನ್ನೋದಾಗಿತ್ತು. ಕೆಟ್ಟ ಯೋಚನೆಗಳು ಬರಬಾರದು ಅಂದರೆ ನಾವು ಏನು ಮಾಡಬೇಕು?e
ಕೆಟ್ಟ ಯೋಚನೆಯಿಂದ ಹೊರಬರೋಕೆ ನೀವು ಮಾಡುವ ಎಲ್ಲಾ ಪ್ರಯತ್ನವನ್ನ ಯೆಹೋವ ದೇವರು ನೋಡುತ್ತಾನೆ ಮತ್ತು ಮೆಚ್ಚುತ್ತಾನೆ. ಕೀರ್ತನೆ 103:13, 14 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಕೆಟ್ಟ ಅಭ್ಯಾಸವನ್ನ ಬಿಟ್ಟುಬಿಡೋಕೆ ನೀವು ಹೋರಾಡುತ್ತಿದ್ರೆ, ಆ ಹೋರಾಟವನ್ನ ಮುಂದುವರಿಸೋಕೆ ಈ ವಚನ ಹೇಗೆ ಸಹಾಯ ಮಾಡುತ್ತೆ?
ಎಡವಿ ಬಿದ್ದರೂ ಪ್ರಯತ್ನ ಬಿಡಬೇಡಿ!
ಒಂದು ಕೆಟ್ಟ ಚಟವನ್ನ ಬಿಟ್ಟಿದ್ದರೂ ಮತ್ತೆ ಕೆಲವೊಮ್ಮೆ ಅದನ್ನೇ ಮಾಡಿಬಿಡಬಹುದು. ಆಗ ‘ಆ ಚಟ ಬಿಡಕ್ಕೆ ನನ್ನಿಂದ ಆಗಲ್ಲ’ ಅಂತ ನಿಮಗೆ ಅನಿಸಬಹುದು. ಆದರೆ ಯೋಚಿಸಿ: ಒಬ್ಬ ಓಟಗಾರ ಓಡುತ್ತಿರುವಾಗ ಕೆಲವೊಮ್ಮೆ ಬಿದ್ದು ಬಿಡುತ್ತಾನೆ. ಹಾಗಂತ ಸೋತುಹೋದ ಅಂತಲ್ಲ. ಆರಂಭದಿಂದ ಮತ್ತೆ ಓಡಬೇಕಂತನೂ ಅಲ್ಲ. ಅದೇ ತರ ಕೆಟ್ಟ ಚಟಗಳ ವಿರುದ್ಧ ಹೋರಾಡ್ತಾ ಇರುವಾಗ ಕೆಲವೊಮ್ಮೆ ಮತ್ತೆ ಅದೇ ತಪ್ಪನ್ನ ಮಾಡಿಬಿಡಬಹುದು. ಹಾಗಂತ ನಿಮ್ಮ ಹೋರಾಟದಲ್ಲಿ ಸೋತಿದ್ದೀರ ಅಂತಲ್ಲ, ಇಲ್ಲಿವರೆಗಿನ ನಿಮ್ಮ ಪ್ರಯತ್ನವೆಲ್ಲಾ ವ್ಯರ್ಥವಾಯಿತು ಅಂತನೂ ಅಲ್ಲ. ಗೆಲುವಿನ ದಾರಿಯಲ್ಲಿ ಓಡುತ್ತಿರುವಾಗ ಕೆಲವೊಮ್ಮೆ ಎಡವಿ ಬೀಳೋದು ಸಹಜ. ಆದರೆ ಪ್ರಯತ್ನ ಬಿಡಬೇಡಿ, ಯೆಹೋವನ ಸಹಾಯದಿಂದ ಆ ಚಟವನ್ನ ಬಿಡಲು ಖಂಡಿತ ಸಾಧ್ಯ!
ಕೆಲವರು ಹೀಗಂತಾರೆ: “ನಂಗೆ ಇದು ಚಟ ಆಗಿಬಿಟ್ಟಿದೆ, ಇದನ್ನ ಬಿಡಕ್ಕಾಗಲ್ಲ.”
ಕೆಟ್ಟ ಚಟವನ್ನ ಬಿಡೋಕೆ ಯೆಹೋವ ದೇವರು ಸಹಾಯ ಮಾಡ್ತಾನೆ ಅಂತ ತಿಳಿಸೋಕೆ ನೀವು ಬೈಬಲಿನ ಯಾವ ವಚನ ತೋರಿಸ್ತೀರಾ?
ನಾವೇನು ಕಲಿತ್ವಿ
ನಮ್ಮ ದೇಹ, ಮನಸ್ಸು ಮತ್ತು ನಡತೆಯನ್ನ ಶುದ್ಧವಾಗಿ ಇಟ್ಟುಕೊಳ್ಳುವ ಮೂಲಕ ನಾವು ಯೆಹೋವ ದೇವರನ್ನ ಖುಷಿಪಡಿಸಬಹುದು.
ನೆನಪಿದೆಯಾ
ಶುದ್ಧರಾಗಿರೋದು ಯಾಕೆ ಪ್ರಾಮುಖ್ಯ?
ನಾವು ಹೇಗೆ ಶುದ್ಧರಾಗಿ ಇರಬಹುದು?
ನಮ್ಮ ಯೋಚನೆ ಮತ್ತು ನಡತೆಯನ್ನ ಶುದ್ಧವಾಗಿ ಇಟ್ಟುಕೊಳ್ಳೋಕೆ ನಾವೇನು ಮಾಡಬೇಕು?
ಇದನ್ನೂ ನೋಡಿ
ನಾವು ಬಡವರಾದ್ರೂ ಶ್ರೀಮಂತರಾದ್ರೂ ಶುದ್ಧರಾಗಿರೋಕೆ ಏನೆಲ್ಲಾ ಮಾಡಬಹುದು?
ಧೂಮಪಾನವನ್ನ ಬಿಟ್ಟುಬಿಡೋಕೆ ನೀವು ಏನೆಲ್ಲಾ ಮಾಡಬೇಕು ಅಂತ ತಿಳಿದುಕೊಳ್ಳಿ.
“ನಾನು ಧೂಮಪಾನವನ್ನ ಹೇಗೆ ಬಿಡಲಿ?” (ಎಚ್ಚರ! ಅಕ್ಟೋಬರ್-ಡಿಸೆಂಬರ್ 2010)
ಅಶ್ಲೀಲ ವಿಷಯಗಳಿಂದ ಆಗುವ ಅಪಾಯಗಳ ಬಗ್ಗೆ ತಿಳಿಯಿರಿ.
“ಅಶ್ಲೀಲ ಚಿತ್ರ ಅಥವಾ ವಿಡಿಯೋಗಳನ್ನ ನೋಡೋದ್ರಲ್ಲಿ ತಪ್ಪೇನಿದೆ?” (ಕಾವಲಿನಬುರುಜು ಲೇಖನ)
ಅಶ್ಲೀಲ ವಿಷಯಗಳನ್ನ ನೋಡುವ ಅಭ್ಯಾಸದಿಂದ ಒಬ್ಬ ವ್ಯಕ್ತಿ ಹೇಗೆ ಹೊರಬಂದನು ಅಂತ ನೋಡಿ.
a ಲೈಂಗಿಕ ತೃಪ್ತಿಗಾಗಿ ಒಬ್ಬ ವ್ಯಕ್ತಿ ತನ್ನ ಜನನಾಂಗವನ್ನ ಉಜ್ಜುವುದನ್ನ ಅಥವಾ ನೇವರಿಸುವುದನ್ನ ಹಸ್ತಮೈಥುನ ಅಂತ ಹೇಳುತ್ತಾರೆ.
b ಅಶ್ಲೀಲ ವಿಷಯಗಳಲ್ಲಿ, ಒಬ್ಬ ವ್ಯಕ್ತಿಯನ್ನ ಲೈಂಗಿಕವಾಗಿ ಉದ್ರೇಕಿಸುವ ವಿಡಿಯೋಗಳು, ಪುಸ್ತಕಗಳು, ಚಿತ್ರಗಳು ಮತ್ತು ಆಡಿಯೋಗಳು ಸೇರಿವೆ.
c ಇದನ್ನೂ ನೋಡಿ ಭಾಗದಲ್ಲಿರುವ “ನಾನು ಧೂಮಪಾನವನ್ನ ಹೇಗೆ ಬಿಡಲಿ?” ಅನ್ನೋ ಲೇಖನ ಓದಿ. ಕೆಟ್ಟ ಅಭ್ಯಾಸಗಳಿದ್ದರೆ ಅದರಿಂದ ಹೊರಬರಲು ಅದು ಸಹಾಯ ಮಾಡುತ್ತೆ.
d ಲೈಂಗಿಕ ಆಸೆಗಳನ್ನ ಬಡಿದೆಬ್ಬಿಸುವಂತೆ ಮಾಡುವ ಸಂದೇಶ, ಫೋಟೋ ಅಥವಾ ವಿಡಿಯೋವನ್ನ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ಕಳಿಸೋದನ್ನ ಸೆಕ್ಸ್ಟಿಂಗ್ ಅಂತಾರೆ.
e ಹಸ್ತಮೈಥುನದಿಂದ ಹೊರಬರಲಿಕ್ಕಾಗಿ “ಹಸ್ತಮೈಥುನದ ಚಟದಿಂದ ಹೊರಬರೋದು ಹೇಗೆ?” ಅನ್ನೋ jw.org ಲೇಖನ ನೋಡಿ.