ಸಾಂತ್ವನಕ್ಕಾಗಿ ಯೆಹೋವನ ಕಡೆಗೆ ನೋಡಿರಿ
“ಸಹಿಷ್ಣುತೆ ಮತ್ತು ಸಾಂತ್ವನವನ್ನು ಒದಗಿಸುವ ದೇವರು ನಿಮ್ಮ ಮಧ್ಯೆ ಕ್ರಿಸ್ತ ಯೇಸುವಿನಲ್ಲಿದ್ದ ಅದೇ ಮನೋಭಾವವು ಇರುವಂತೆ ದಯಪಾಲಿಸಲಿ.”—ರೋಮಾಪುರ 15:5, NW.
1. ಪ್ರತಿ ದಿನವು ಸಾಂತ್ವನಕ್ಕಾಗಿ ಹೆಚ್ಚಿನ ಆವಶ್ಯಕತೆಯನ್ನು ಏಕೆ ತರುತ್ತದೆ?
ದಾಟಿ ಹೋಗುತ್ತಿರುವ ಪ್ರತಿ ದಿನವು ಅದರೊಂದಿಗೆ ಸಾಂತ್ವನಕ್ಕಾಗಿ ವರ್ಧಿಸಿದ ಆವಶ್ಯಕತೆಯನ್ನು ತರುತ್ತದೆ. 1,900ಕ್ಕೂ ಹೆಚ್ಚು ವರುಷಗಳಿಗೆ ಪೂರ್ವದಲ್ಲಿ ಬೈಬಲ್ ಲೇಖಕನೊಬ್ಬನು ಗಮನಿಸಿದಂತೆ, “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.” (ರೋಮಾಪುರ 8:22) ನಮ್ಮ ದಿನಗಳಲ್ಲಿ ಆ “ನರಳು”ವಿಕೆ ಮತ್ತು “ವೇದನೆ” ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮಾನವಕುಲವು Iನೆಯ ಲೋಕ ಯುದ್ಧದಿಂದ ಹಿಡಿದು, ಯುದ್ಧಗಳು, ಪಾತಕ ಮತ್ತು ಅನೇಕ ವೇಳೆ ಭೂಮಿಯನ್ನು ಮನುಷ್ಯನು ದುರ್ನಿರ್ವಹಿಸಿರುವುದಕ್ಕೆ ಸಂಬಂಧಿಸಿರುವ ಪ್ರಾಕೃತಿಕ ವಿಪತ್ತುಗಳ ರೂಪದಲ್ಲಿ ಒಂದರ ಹಿಂದೆ ಇನ್ನೊಂದು ವಿಪತ್ತನ್ನು ಅನುಭವಿಸಿದೆ.—ಪ್ರಕಟನೆ 11:18.
2. (ಎ) ಮಾನವಕುಲದ ಪ್ರಸ್ತುತದ ದುರವಸ್ಥೆಗೆ ದೂಷಣಾರ್ಹನು ಯಾರು? (ಬಿ) ಸಾಂತ್ವನಕ್ಕಾಗಿ ನಮಗೆ ಯಾವ ನಿಜತ್ವವು ಆಧಾರವನ್ನು ಕೊಡುತ್ತದೆ?
2 ನಮ್ಮ ಕಾಲದಲ್ಲಿ ಇಷ್ಟೊಂದು ಬಾಧೆಗಳಿರುವುದು ಏಕೆ? 1914ರಲ್ಲಿ ರಾಜ್ಯದ ಜನನಾನಂತರ, ಸೈತಾನನನ್ನು ಸ್ವರ್ಗದಿಂದ ದೊಬ್ಬುವುದನ್ನು ವರ್ಣಿಸುತ್ತ ಬೈಬಲು ಉತ್ತರಕೊಡುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ.” (ಪ್ರಕಟನೆ 12:12) ಆ ಪ್ರವಾದನೆಯ ನೆರವೇರಿಕೆಯ ಸ್ಪಷ್ಟವಾದ ಸಾಕ್ಷ್ಯವು, ನಾವು ಇನ್ನೇನು ಸೈತಾನನ ದುಷ್ಟಾಳಿಕೆಯ ಅಂತ್ಯವನ್ನು ತಲುಪಿದ್ದೇವೆಂಬುದನ್ನು ಅರ್ಥೈಸುತ್ತದೆ. ಭೂಜೀವನವು ಬೇಗನೆ, ಸೈತಾನನು ನಮ್ಮ ಪ್ರಥಮ ಪಿತೃಗಳನ್ನು ದಂಗೆಗೆ ನಡೆಸುವ ಮೊದಲು ಅಸ್ತಿತ್ವದಲ್ಲಿದ್ದ ಆ ಶಾಂತಿಭರಿತ ಸ್ಥಿತಿಗೆ ಹಿಂದಿರುಗುವುದೆಂದು ತಿಳಿಯುವುದು ಎಷ್ಟು ಸಾಂತ್ವನದಾಯಕ!
3. ಮಾನವರಿಗೆ ಸಾಂತ್ವನದ ಅಗತ್ಯ ಯಾವಾಗ ಇರಲಿಲ್ಲ?
3 ಆದಿಯಲ್ಲಿ, ಮಾನವನ ಸೃಷ್ಟಿಕರ್ತನು ಪ್ರಥಮ ಮಾನವ ದಂಪತಿಗಳಿಗೆ ಬೀಡಾಗಿ ಒಂದು ಸುಂದರ ವನವನ್ನು ಒದಗಿಸಿದನು. ಅದು “ಆಮೋದ” ಅಥವಾ “ಆಹ್ಲಾದ” ಎಂಬರ್ಥವಿದ್ದ ಏದೆನ್ ಎಂದು ಕರೆಯಲ್ಪಟ್ಟ ಪ್ರದೇಶದಲ್ಲಿತ್ತು. (ಆದಿಕಾಂಡ 2:8, ಪಾದಟಿಪ್ಪಣಿ, NW) ಅದಲ್ಲದೆ, ಆದಾಮ, ಹವ್ವರು ಪರಿಪೂರ್ಣ ಆರೋಗ್ಯವನ್ನು ಅನುಭವಿಸಿ, ಎಂದಿಗೂ ಸಾಯದಿರುವ ನಿರೀಕ್ಷೆಯುಳ್ಳವರಾಗಿದ್ದರು. ಅವರಿಗೆ ತಮ್ಮ ಸಾಮರ್ಥ್ಯಗಳನ್ನು—ತೋಟಗಾರಿಕೆ, ಕಲೆ, ನಿರ್ಮಾಣ, ಸಂಗೀತ—ವಿಕಾಸಗೊಳಿಸಸಾಧ್ಯವಿದ್ದಂತಹ ಅನೇಕ ಕ್ಷೇತ್ರಗಳ ವಿಷಯವಾಗಿ ಯೋಚಿಸಿರಿ. ಭೂಮಿಯನ್ನು ವಶಮಾಡಿಕೊಂಡು ಅದನ್ನು ಪ್ರಮೋದವನವನ್ನಾಗಿ ಮಾಡಲು ಅವರಿಗಿದ್ದ ಆಜ್ಞೆಯನ್ನು ಅವರು ನೆರವೇರಿಸುವಾಗ, ಅವರು ಅಭ್ಯಾಸಿಸಸಾಧ್ಯವಿದ್ದ ಸೃಷ್ಟಿಯ ಸಕಲ ಕಾರ್ಯಗಳ ಕುರಿತೂ ಯೋಚಿಸಿರಿ. (ಆದಿಕಾಂಡ 1:28) ಆದಾಮ, ಹವ್ವರ ಜೀವನಗಳು ನರಳಾಟ ಮತ್ತು ವೇದನೆಯಿಂದಲ್ಲ, ಆಮೋದ ಮತ್ತು ಆಹ್ಲಾದದಿಂದ ತುಂಬಿರುತ್ತಿದ್ದವೆಂಬುದು ನಿಶ್ಚಯ. ಅವರಿಗೆ ಸಾಂತ್ವನದ ಆವಶ್ಯಕತೆಯು ಇರುತ್ತಿದ್ದಿಲ್ಲವೆಂಬುದು ಸ್ಪಷ್ಟ.
4, 5. (ಎ) ಆದಾಮ, ಹವ್ವರು ವಿಧೇಯತೆಯ ಪರೀಕ್ಷೆಯಲ್ಲಿ ಏಕೆ ಅನುತ್ತೀರ್ಣರಾದರು? (ಬಿ) ಮಾನವಕುಲವು ಸಾಂತ್ವನದ ಅಗತ್ಯವುಳ್ಳದ್ದಾದದ್ದು ಹೇಗೆ?
4 ಆದರೂ ಆದಾಮ, ಹವ್ವರಿಗೆ, ತಮ್ಮ ದಯಾಪರನಾದ ಸ್ವರ್ಗೀಯ ಪಿತನ ಕಡೆಗೆ ಆಳವಾದ ಪ್ರೀತಿ ಮತ್ತು ಗಣ್ಯತೆಯನ್ನು ಬೆಳೆಸಿಕೊಳ್ಳುವ ಆವಶ್ಯಕತೆಯು ನಿಶ್ಚಯವಾಗಿಯೂ ಇತ್ತು. ಅಂತಹ ಪ್ರೀತಿಯು, ಅವರು ಎಲ್ಲ ಸನ್ನಿವೇಶಗಳಲ್ಲಿ ದೇವರಿಗೆ ವಿಧೇಯರಾಗುವಂತೆ ಅವರನ್ನು ಪ್ರಚೋದಿಸುತ್ತಿತ್ತು. (ಹೋಲಿಸಿ ಯೋಹಾನ 14:31.) ದುಃಖಕರವಾಗಿ, ನಮ್ಮ ಆದಿ ಹೆತ್ತವರಲ್ಲಿ ಇಬ್ಬರೂ ಹಕ್ಕುಳ್ಳ ಪರಮಾಧಿಕಾರಿಯಾದ ಯೆಹೋವನಿಗೆ ವಿಧೇಯರಾಗಲು ತಪ್ಪಿಹೋದರು. ಬದಲಿಗೆ, ಅವರು ತಮ್ಮನ್ನು ಪತಿತ ದೇವದೂತ, ಪಿಶಾಚನಾದ ಸೈತಾನನ ದುಷ್ಟ ಆಳಿಕೆಯ ಕೆಳಗೆ ಬರುವಂತೆ ಅನುಮತಿಸಿದರು. ಹವ್ವಳು ಪಾಪ ಮಾಡಿ, ನಿಷಿದ್ಧ ಫಲವನ್ನು ತಿನ್ನುವಂತೆ ಪ್ರೇರೇಪಿಸಿದವನು ಸೈತಾನನು. ಬಳಿಕ ಆದಾಮನು, “ತಿಂದ ದಿನ ಸತ್ತೇ ಹೋಗುವಿ” ಎಂದು ದೇವರು ಸ್ಪಷ್ಟವಾಗಿ ಎಚ್ಚರಿಸಿದ್ದ ಮರದ ಹಣ್ಣನ್ನು ತಾನೂ ತಿಂದಾಗ ಪಾಪಮಾಡಿದನು.—ಆದಿಕಾಂಡ 2:17.
5 ಈ ರೀತಿಯಲ್ಲಿ, ಆ ಪಾಪಪೂರ್ಣ ದಂಪತಿಗಳು ಸಾಯತೊಡಗಿದರು. ಮರಣದಂಡನೆಯನ್ನು ವಿಧಿಸುವಾಗ ದೇವರು ಆದಾಮನಿಗೆ, “ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂಮಿಯ ಹುಟ್ಟುವಳಿಯನ್ನು ತಿನ್ನಬೇಕು. ಆ ಭೂಮಿಯಲ್ಲಿ ಮುಳ್ಳುಗಿಡಗಳೂ ಕಳೆಗಳೂ ಬಹಳವಾಗಿ ಹುಟ್ಟುವವು. ಹೊಲದ ಬೆಳೆಯನ್ನು ಅನುಭವಿಸುವಿ,” ಎಂದೂ ಹೇಳಿದನು. (ಆದಿಕಾಂಡ 3:17, 18) ಹೀಗೆ ಆದಾಮ, ಹವ್ವರು ಆ ವ್ಯವಸಾಯ ಮಾಡಿರದ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಮಾಡುವ ಪ್ರತೀಕ್ಷೆಯನ್ನು ಕಳೆದುಕೊಂಡರು. ಏದೆನ್ನಿಂದ ಹೊರಹಾಕಲ್ಪಟ್ಟ ಅವರು, ಶಪಿಸಲ್ಪಟ್ಟಿದ್ದ ಭೂಮಿಯಿಂದ ಆಹಾರವನ್ನು ಶ್ರಮಪಟ್ಟು ಪಡೆದುಕೊಳ್ಳಲು ತಮ್ಮ ಶಕ್ತಿಗಳನ್ನು ಕೇಂದ್ರೀಕರಿಸಬೇಕಾಗಿತ್ತು. ಅವರ ವಂಶಜರು, ಈ ಪಾಪಪೂರ್ಣ, ಸಾಯುವ ಸ್ಥಿತಿಯನ್ನು ಬಾಧ್ಯತೆಯಾಗಿ ಪಡೆದುದರಿಂದ, ಸಾಂತ್ವನದ ಮಹಾ ಆವಶ್ಯಕತೆಯುಳ್ಳವರಾದರು.—ರೋಮಾಪುರ 5:12.
ಸಾಂತ್ವನದಾಯಕವಾದೊಂದು ವಾಗ್ದಾನ ನೆರವೇರುತ್ತದೆ
6. (ಎ) ಮಾನವಕುಲವು ಪಾಪದೊಳಕ್ಕೆ ಬಿದ್ದ ಮೇಲೆ, ಸಾಂತ್ವನದಾಯಕವಾದ ಯಾವ ವಾಗ್ದಾನವನ್ನು ದೇವರು ಮಾಡಿದನು? (ಬಿ) ಲೆಮೆಕನು ಸಾಂತ್ವನದ ಕುರಿತ ಯಾವ ಪ್ರವಾದನೆಯನ್ನು ನುಡಿದನು?
6 ಮಾನವನ ದಂಗೆಯ ಈ ಪ್ರೇರೇಪಕನಿಗೆ ದಂಡನೆ ಕೊಡುವಾಗ, ಯೆಹೋವನು “ಸಾಂತ್ವನವನ್ನು ಒದಗಿಸುವ ದೇವರು” ಆಗಿ ಪರಿಣಮಿಸಿದನು. (ರೋಮಾಪುರ 15:5) ಯಾರು ಅಂತಿಮವಾಗಿ ಆದಾಮನ ವಂಶಜರನ್ನು ಆದಾಮನ ದಂಗೆಯ ವಿಪತ್ಕಾರಕ ಪರಿಣಾಮದಿಂದ ವಿಮೋಚಿಸುವನೊ, ಅಂತಹ ಒಂದು “ಸಂತಾನ”ವನ್ನು ಕಳುಹಿಸುವೆನೆಂದು ವಾಗ್ದಾನಿಸಿದ ಮೂಲಕ ಆತನು ಹಾಗೆ ಮಾಡಿದನು. (ಆದಿಕಾಂಡ 3:15) ಸಕಾಲದಲ್ಲಿ, ದೇವರು ಈ ವಿಮೋಚನೆಯ ಮುನ್ಹೊಳಪುಗಳನ್ನು ಸಹ ಒದಗಿಸಿದನು. ಉದಾಹರಣೆಗೆ, ಮಗನಾದ ಸೇತನ ಮುಖಾಂತರ ಆದಾಮನ ದೂರ ವಂಶಜನಾದ ಲೆಮೆಕನನ್ನು, ಲೆಮೆಕನ ಮಗನು ಏನು ಮಾಡುವನೆಂದು ಪ್ರವಾದಿಸುವಂತೆ ಪ್ರೇರಿಸಿದನು: “ಯೆಹೋವನು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಶ್ರಮೆಯಲ್ಲಿಯೂ ಈ ಮಗನು ನಮ್ಮನ್ನು ಉಪಶಮನಗೊಳಿಸುವನು.” (ಆದಿಕಾಂಡ 5:29) ಈ ವಾಗ್ದಾನಕ್ಕೆ ಹೊಂದಿಕೆಯಲ್ಲಿ, ಆ ಹುಡುಗನಿಗೆ ನೋಹ ಎಂದು ಹೆಸರಿಡಲಾಯಿತು. ಇದಕ್ಕೆ “ವಿಶ್ರಾಂತಿ” ಅಥವಾ “ಸಂತೈಸುವಿಕೆ” ಎಂಬ ಅರ್ಥವಿದೆಯೆಂದು ತಿಳಿಯಲಾಗುತ್ತದೆ.
7, 8. (ಎ) ಮನುಷ್ಯನನ್ನು ಸೃಷ್ಟಿಸಿದುದಕ್ಕೆ ವಿಷಾದಿಸುವಂತೆ ಯೆಹೋವನನ್ನು ಯಾವ ಸನ್ನಿವೇಶವು ನಡೆಸಿತು, ಮತ್ತು ಅದಕ್ಕೆ ಪ್ರತಿಯಾಗಿ ಏನು ಮಾಡುವಂತೆ ಯೆಹೋವನು ಉದ್ದೇಶಿಸಿದನು? (ಬಿ) ನೋಹನು ತನ್ನ ಹೆಸರಿನ ಅರ್ಥಾನುಸಾರ ಜೀವಿಸಿದ್ದು ಹೇಗೆ?
7 ಈ ಮಧ್ಯೆ, ಸೈತಾನನು ಕೆಲವು ಸ್ವರ್ಗೀಯ ದೇವದೂತರ ಮಧ್ಯೆ ಹಿಂಬಾಲಕರನ್ನು ಗಳಿಸುತ್ತಿದ್ದನು. ಇವರು ಮಾನವರಾಗಿ ದೇಹತಾಳಿ, ಆದಾಮನ ಆಕರ್ಷಕರಾದ ಸ್ತ್ರೀವಂಶಸ್ಥರನ್ನು ಹೆಂಡತಿಯರನ್ನಾಗಿ ಮಾಡಿಕೊಂಡರು. ಇಂತಹ ಅಪ್ರಾಕೃತಿಕ ಸಂಯೋಗಗಳು ಮಾನವ ಸಮಾಜವನ್ನು ಇನ್ನಷ್ಟು ಭ್ರಷ್ಟಗೊಳಿಸಿ, ಭೂಮಿಯನ್ನು ಹಿಂಸಾಚಾರದಿಂದ ತುಂಬಿಸಿದ ನೆಫೀಲಿಯರು, “ಕೆಡವುವವರು” ಎಂಬ ನಾಸ್ತಿಕ ವಂಶವನ್ನು ಉತ್ಪತ್ತಿಮಾಡಿದವು. (ಆದಿಕಾಂಡ 6:1, 2, 4, 11; ಯೂದ 6) “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ . . . ಯೆಹೋವನು ನೋಡಿ ತಾನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.”—ಆದಿಕಾಂಡ 6:5, 6.
8 ಆ ದುಷ್ಟ ಲೋಕವನ್ನು ಒಂದು ಭೌಗೋಳಿಕ ಜಲಪ್ರಳಯದ ಮೂಲಕ ನಾಶಮಾಡುವರೆ ಯೆಹೋವನು ಉದ್ದೇಶಿಸಿದನು, ಆದರೆ ಮೊದಲಾಗಿ ಜೀವವನ್ನು ಉಳಿಸಲಿಕ್ಕಾಗಿ ನೋಹನು ತೇಲುಪೆಟ್ಟಿಗೆಯೊಂದನ್ನು ಕಟ್ಟುವಂತೆ ಏರ್ಪಡಿಸಿದನು. ಹೀಗೆ, ಮಾನವಕುಲ ಮತ್ತು ಮೃಗಜಾತಿಗಳು ರಕ್ಷಿಸಲ್ಪಟ್ಟವು. ನೋಹನೂ ಅವನ ಕುಟುಂಬವೂ ಜಲಪ್ರಳಯಾನಂತರ ಆ ತೇಲುಪೆಟ್ಟಿಗೆಯಿಂದ ಶುದ್ಧೀಕರಿಸಲ್ಪಟ್ಟ ಭೂಮಿಗೆ ಇಳಿದಾಗ ಅವರಿಗೆ ಎಷ್ಟೊಂದು ಉಪಶಮನವಾಗಿದ್ದಿರಬೇಕು! ವ್ಯವಸಾಯ ಕಾರ್ಯವನ್ನು ಬಹಳ ಸುಲಭವಾಗಿ ಮಾಡುತ್ತಾ, ಭೂಮಿಯ ಮೇಲಿದ್ದ ಶಾಪವು ಎತ್ತಲ್ಪಟ್ಟಿತ್ತೆಂದು ಕಂಡುಹಿಡಿಯುವುದು ಎಷ್ಟು ಸಾಂತ್ವನದಾಯಕ! ಲೆಮೆಕನ ಪ್ರವಾದನೆ ಸತ್ಯವಾಗಿ ಪರಿಣಮಿಸಿದ್ದು ನಿಶ್ಚಯ, ಮತ್ತು ನೋಹನು ತನ್ನ ಹೆಸರಿನ ಅರ್ಥಕ್ಕನುಸಾರವಾಗಿ ಜೀವಿಸಿದನು. (ಆದಿಕಾಂಡ 8:21) ಯೆಹೋವನ ನಂಬಿಗಸ್ತ ಸೇವಕನೋಪಾದಿ, ನೋಹನು ಮಾನವಕುಲಕ್ಕೆ ತುಸು “ಸಾಂತ್ವನ”ವನ್ನು ತರುವ ಸಾಧನವಾಗಿದ್ದನು. ಆದರೂ, ಸೈತಾನನ ಮತ್ತು ಅವನ ದೆವ್ವದೂತರ ದುಷ್ಟ ಪ್ರಭಾವವು ಜಲಪ್ರಳಯದಲ್ಲಿ ಅಂತ್ಯಗೊಳ್ಳಲಿಲ್ಲ, ಮತ್ತು ಮಾನವಕುಲವು, ಪಾಪ, ಅಸ್ವಸ್ಥತೆ ಮತ್ತು ಮರಣದ ಹೊರೆಯ ಕೆಳಗೆ ನರಳಾಡುತ್ತ ಮುಂದುವರಿಯುತ್ತಿದೆ.
ನೋಹನಿಗಿಂತ ಹೆಚ್ಚಿನವನು
9. ಪಶ್ಚಾತ್ತಾಪಪಡುವ ಮಾನವರಿಗೆ ಯೇಸು ಕ್ರಿಸ್ತನು ಸಹಾಯಕನೂ ಸಾಂತ್ವನಕಾರನೂ ಆಗಿ ಪರಿಣಮಿಸಿರುವುದು ಹೇಗೆ?
9 ಕಟ್ಟಕಡೆಗೆ, ಸುಮಾರು 4,000 ವರುಷಗಳ ಮಾನವ ಇತಿಹಾಸದ ಅಂತ್ಯದಲ್ಲಿ, ವಾಗ್ದತ್ತ ಸಂತಾನವಾದವನು ಆಗಮಿಸಿದನು. ಮಾನವಕುಲದ ಕಡೆಗೆ ಮಹಾ ಪ್ರೀತಿಯಿಂದ ಪ್ರಚೋದಿತನಾಗಿ, ಯೆಹೋವ ದೇವರು ತನ್ನ ಏಕಜಾತ ಪುತ್ರನನ್ನು, ಅವನು ಪಾಪಪೂರ್ಣ ಮಾನವಕುಲಕ್ಕಾಗಿ ಪ್ರಾಯಶ್ಚಿತ್ತವಾಗಿ ಸಾಯುವಂತೆ ಭೂಮಿಗೆ ಕಳುಹಿಸಿದನು. (ಯೋಹಾನ 3:16) ಯೇಸು ಕ್ರಿಸ್ತನು ತನ್ನ ಯಜ್ಞಾರ್ಪಿತ ಮರಣದಲ್ಲಿ ನಂಬಿಕೆಯನ್ನಿಡುವ ಪಶ್ಚಾತ್ತಾಪಪಟ್ಟ ಪಾಪಿಗಳಿಗೆ ಮಹಾ ಉಪಶಮನವನ್ನು ತರುತ್ತಾನೆ. ತಮ್ಮ ಜೀವಗಳನ್ನು ಯೆಹೋವನಿಗೆ ಸಮರ್ಪಿಸಿಕೊಂಡು ಆತನ ಪುತ್ರನ ದೀಕ್ಷಾಸ್ನಾತ ಶಿಷ್ಯರಾಗುವವರೆಲ್ಲರೂ ಬಾಳಿಕೆ ಬರುವ ಚೈತನ್ಯ ಮತ್ತು ಸಾಂತ್ವನವನ್ನು ಅನುಭವಿಸುತ್ತಾರೆ. (ಮತ್ತಾಯ 11:28-30; 16:24) ಅವರ ಅಪರಿಪೂರ್ಣತೆಯ ಹೊರತೂ, ಶುದ್ಧ ಮನಸ್ಸಾಕ್ಷಿಯಿಂದ ದೇವರನ್ನು ಸೇವಿಸುವುದರಲ್ಲಿ ಅವರು ಅಗಾಧವಾದ ಸಂತೋಷವನ್ನು ಕಂಡುಕೊಳ್ಳುತ್ತಾರೆ. ತಾವು ಯೇಸುವಿನಲ್ಲಿ ನಂಬಿಕೆಯನ್ನಿಡುತ್ತ ಹೋಗುವಲ್ಲಿ, ತಾವು ನಿತ್ಯಜೀವದಿಂದ ಬಹುಮಾನಿಸಲ್ಪಡುವೆವೆಂದು ತಿಳಿಯುವುದು ಅವರಿಗೆ ಅದೆಷ್ಟು ಸಾಂತ್ವನದಾಯಕ! (ಯೋಹಾನ 3:36; ಇಬ್ರಿಯ 5:9) ಅವರು ಬಲಹೀನತೆಯ ಕಾರಣವಾಗಿ ಗುರುತರವಾದ ಪಾಪವೊಂದನ್ನು ಮಾಡುವಲ್ಲಿ, ಅವರಿಗೆ ಪುನರುತ್ಥಿತ ಕರ್ತನಾದ ಯೇಸು ಕ್ರಿಸ್ತನಲ್ಲಿ, ಒಬ್ಬ ಸಹಾಯಕನು ಅಥವಾ ಸಾಂತ್ವನಕಾರನಿದ್ದಾನೆ. (1 ಯೋಹಾನ 2:1, 2) ಅಂತಹ ಪಾಪವನ್ನು ನಿವೇದಿಸಿಕೊಳ್ಳುವ ಮೂಲಕ ಮತ್ತು ಪಾಪವನ್ನು ಆಚರಿಸುವವರಾಗುವುದರಿಂದ ದೂರವಿರಲು ಶಾಸ್ತ್ರೀಯ ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೂಲಕ ಅವರಿಗೆ, ‘ದೇವರು ಪಾಪಗಳನ್ನು ಕ್ಷಮಿಸಿಬಿಡಲು ನಂಬಿಗಸ್ತನೂ ನೀತಿವಂತನೂ ಆಗಿದ್ದಾನೆ’ ಎಂಬ ಅರಿವಿನಿಂದ ಉಪಶಮನ ದೊರೆಯುತ್ತದೆ.—1 ಯೋಹಾನ 1:9; 3:6; ಜ್ಞಾನೋಕ್ತಿ 28:13.
10. ಭೂಮಿಯಲ್ಲಿದ್ದಾಗ ಯೇಸು ಮಾಡಿದ ಅದ್ಭುತಗಳಿಂದ ನಾವೇನನ್ನು ಕಲಿಯುತ್ತೇವೆ?
10 ಭೂಮಿಯಲ್ಲಿದ್ದಾಗ ಯೇಸುವು ದೆವ್ವ ಹಿಡಿದವರನ್ನು ಬಿಡಿಸಿ, ಪ್ರತಿಯೊಂದು ವಿಧದ ಅಸ್ವಸ್ಥತೆಯನ್ನು ವಾಸಿಮಾಡಿ, ಮೃತರಾದ ಪ್ರಿಯರನ್ನು ಪುನರ್ಜೀವಗೊಳಿಸಿಯೂ ಚೈತನ್ಯವನ್ನು ತಂದನು. ನಿಜ, ಅಂತಹ ಅದ್ಭುತಗಳು ತಾತ್ಕಾಲಿಕ ಪ್ರಯೋಜನಗಳನ್ನು ಮಾತ್ರ ತಂದವು, ಏಕೆಂದರೆ ಹಾಗೆ ಆಶೀರ್ವದಿಸಲ್ಪಟ್ಟವರು ತದನಂತರ ವೃದ್ಧರಾಗಿ ಸತ್ತರು. ಆದರೂ, ಆ ಮೂಲಕ ತಾನು ಸಕಲ ಮಾನವಕುಲದ ಮೇಲೆ ಸುರಿಸಲಿರುವ ಖಾಯಂ ಭಾವೀ ಆಶೀರ್ವಾದಗಳನ್ನು ಯೇಸು ಸೂಚಿಸಿದನು. ಈಗ ಬಲಿಷ್ಠ ಸ್ವರ್ಗೀಯ ರಾಜನಾಗಿರುವ ಅವನು, ಬೇಗನೆ ಬರಿಯ ದೆವ್ವಗಳನ್ನು ಹೊರಹಾಕುವುದಕ್ಕಿಂತ ಹೆಚ್ಚಿನದ್ದನ್ನು ಮಾಡುವನು. ಅವನು ಅವರನ್ನು ಅವರ ನಾಯಕನಾದ ಸೈತಾನನೊಂದಿಗೆ ಕಾರ್ಯಾಭಾವದ ಸ್ಥಿತಿಯೊಂದಕ್ಕೆ ದೊಬ್ಬುವನು. ಆಗ ಕ್ರಿಸ್ತನ ಮಹಿಮಾಭರಿತ ಸಹಸ್ರ ವರ್ಷಗಳ ಆಳಿಕೆಯು ಆರಂಭವಾಗುವುದು.—ಲೂಕ 8:30, 31; ಪ್ರಕಟನೆ 20:1, 2, 6.
11. ಯೇಸು ತನ್ನನ್ನು ‘ಸಬ್ಬತ್ ದಿನಕ್ಕೆ ಒಡೆಯ’ನು ಎಂದು ಕರೆದುಕೊಂಡದ್ದೇಕೆ?
11 ತಾನು ‘ಸಬ್ಬತ್ ದಿನಕ್ಕೆ ಒಡೆಯ’ನಾಗಿದ್ದೆನೆಂದು ಯೇಸು ಹೇಳಿದನು, ಮತ್ತು ಅವನ ವಾಸಿಮಾಡುವಿಕೆಗಳಲ್ಲಿ ಹೆಚ್ಚಿನವು, ಸಬ್ಬತ್ ದಿನದಲ್ಲಿ ಮಾಡಲ್ಪಟ್ಟವು. (ಮತ್ತಾಯ 12:8-13; ಲೂಕ 13:14-17; ಯೋಹಾನ 5:15, 16; 9:14) ಇದೇಕೆ? ಸಬ್ಬತ್ತು ದೇವರು ಇಸ್ರಾಯೇಲಿಗೆ ಕೊಟ್ಟ ಧರ್ಮಶಾಸ್ತ್ರದ ಭಾಗವಾಗಿತ್ತು ಮತ್ತು ಹೀಗೆ, “ಬರಬೇಕಾಗಿದ್ದ ಮೇಲುಗಳ ಛಾಯೆ”ಯಾಗಿ ವರ್ತಿಸಿತು. (ಇಬ್ರಿಯ 10:1) ವಾರದ ಕೆಲಸದ ಆರು ದಿನಗಳು, ಸೈತಾನನ ದಬ್ಬಾಳಿಕೆಯ ಆಳಿಕೆಗೆ ಮಾನವನ ಕಳೆದ 6,000 ವರ್ಷಗಳ ದಾಸ್ವತವನ್ನು ಮನಸ್ಸಿಗೆ ತರುತ್ತವೆ. ವಾರಾಂತ್ಯದ ಸಬ್ಬತ್ ದಿನವು, ಮಹಾ ನೋಹನಾದ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ಮಾನವಕುಲವು ಅನುಭವಿಸುವ ಸಾಂತ್ವನದಾಯಕ ವಿಶ್ರಾಂತಿಯನ್ನು ಮನಸ್ಸಿಗೆ ತರುತ್ತದೆ.—ಹೋಲಿಸಿ 2 ಪೇತ್ರ 3:8.
12. ನಾವು ಯಾವ ಸಾಂತ್ವನದಾಯಕ ಅನುಭವಗಳನ್ನು ಮುನ್ನೋಡಬಲ್ಲೆವು?
12 ಅಂತಿಮವಾಗಿ ಸೈತಾನನ ದುಷ್ಪ್ರಭಾವದಿಂದ ತಾವು ಪೂರ್ತಿ ವಿಮುಕ್ತರೆಂದು ಕಂಡುಕೊಳ್ಳುವಾಗ, ಕ್ರಿಸ್ತನಾಳಿಕೆಯ ಭೂಪ್ರಜೆಗಳು ಅದೆಂತಹ ಉಪಶಮನವನ್ನು ಅನುಭವಿಸುವರು! ಅವರು ತಮ್ಮ ಶಾರೀರಿಕ, ಭಾವಾತ್ಮಕ ಮತ್ತು ಮಾನಸಿಕ ಕಾಯಿಲೆಗಳ ವಾಸಿಯಾಗುವಿಕೆಯನ್ನು ಅನುಭವಿಸುವಾಗ, ಇನ್ನೂ ಹೆಚ್ಚಿನ ಸಾಂತ್ವನವು ಬರುವುದು. (ಯೆಶಾಯ 65:17) ಬಳಿಕ, ಅವರು ಪ್ರಿಯರನ್ನು ಮೃತರೊಳಗಿಂದ ಹಿಂದೆ ಸ್ವಾಗತಿಸಲಾರಂಭಿಸುವಾಗ ಅವರ ಆನಂದಪರವಶತೆಯನ್ನು ಭಾವಿಸಿರಿ! ಈ ವಿಧಗಳಲ್ಲಿ ದೇವರು, “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕಟನೆ 21:4) ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು ಪ್ರಗತಿಪರವಾಗಿ ಅನ್ವಯಿಸಲ್ಪಡುವಾಗ, ದೇವರ ರಾಜ್ಯದ ವಿಧೇಯ ಪ್ರಜೆಗಳು ಪರಿಪೂರ್ಣತೆಗೆ ಬೆಳೆದು, ಆದಾಮನ ಪಾಪದ ಎಲ್ಲ ದುಷ್ಪರಿಣಾಮಗಳಿಂದ ಸಂಪೂರ್ಣವಾಗಿ ಮುಕ್ತರಾಗುವರು. (ಪ್ರಕಟನೆ 22:1-5) ಬಳಿಕ ಸೈತಾನನನ್ನು “ಸ್ವಲ್ಪ ಕಾಲ”ಕ್ಕಾಗಿ ಬಿಡುಗಡೆ ಮಾಡಲಾಗುವುದು. (ಪ್ರಕಟನೆ 20:3, 7) ಯೆಹೋವನ ಹಕ್ಕುಳ್ಳ ಪರಮಾಧಿಕಾರವನ್ನು ನಂಬಿಗಸ್ತಿಕೆಯಿಂದ ಸಮರ್ಥಿಸುವ ಎಲ್ಲಾ ಮನುಷ್ಯರಿಗೆ ನಿತ್ಯಜೀವದ ಬಹುಮಾನವನ್ನು ಕೊಡಲಾಗುವುದು. ಪೂರ್ತಿಯಾಗಿ “ನಾಶದ ವಶದಿಂದ ಬಿಡುಗಡೆ”ಯಾಗಿರುವ ಅವರ್ಣನೀಯವಾದ ಆನಂದ ಮತ್ತು ಉಪಶಮನವನ್ನು ಊಹಿಸಿಕೊಳ್ಳಿರಿ! ಹೀಗೆ ವಿಧೇಯ ಮಾನವಕುಲವು “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ”ಯಲ್ಲಿ ಆನಂದಿಸುವುದು.—ರೋಮಾಪುರ 8:21.
13. ಎಲ್ಲ ಸತ್ಯ ಕ್ರೈಸ್ತರಿಗೆ ದೇವರು ಒದಗಿಸುವ ಸಾಂತ್ವನವು ಏಕೆ ಅಗತ್ಯ?
13 ಈ ಮಧ್ಯೆ, ಸೈತಾನನ ದುಷ್ಟ ವ್ಯವಸ್ಥೆಯ ಮಧ್ಯೆ ಜೀವಿಸುತ್ತಿರುವ ಸಕಲರಿಗೆ ಸಾಮಾನ್ಯವಾಗಿರುವ ನರಳಾಟ ಮತ್ತು ವೇದನೆಗೆ ನಾವು ಅಧೀನರಾಗಿರುತ್ತ ಮುಂದುವರಿಯುತ್ತೇವೆ. ಶಾರೀರಿಕ ಕಾಯಿಲೆ ಮತ್ತು ಭಾವಾತ್ಮಕ ರೋಗಗಳು ಎಲ್ಲ ತೆರದ ಜನರನ್ನು—ನಂಬಿಗಸ್ತ ಕ್ರೈಸ್ತರನ್ನು ಸಹ—ಬಾಧಿಸುತ್ತವೆ. (ಫಿಲಿಪ್ಪಿ 2:25-27; 1 ಥೆಸಲೊನೀಕ 5:14) ಇದಕ್ಕೆ ಕೂಡಿಸಿ, ನಾವು ಕ್ರೈಸ್ತರೋಪಾದಿ, ‘ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರು’ ಆಗುವುದಕ್ಕಾಗಿ ಅನೇಕ ವೇಳೆ ಸೈತಾನನು ನಮ್ಮ ಮೇಲೆ ಹೇರುವ ನ್ಯಾಯವಲ್ಲದ ಅಪಹಾಸ್ಯ ಮತ್ತು ಹಿಂಸೆಯನ್ನು ನಾವು ಅನುಭವಿಸುತ್ತೇವೆ. (ಅ. ಕೃತ್ಯಗಳು 5:29) ಹೀಗೆ, ನಾವು ದೇವರ ಚಿತ್ತವನ್ನು ಮಾಡುವುದರಲ್ಲಿ ಸೈತಾನನ ಲೋಕದ ತೀರ ಕೊನೆಯ ತನಕ ಸಹಿಸಿಕೊಳ್ಳಬೇಕಾದರೆ, ದೇವರು ಒದಗಿಸುವ ಸಾಂತ್ವನ, ಸಹಾಯ ಮತ್ತು ಬಲವು ನಮಗೆ ಅಗತ್ಯ.
ಸಾಂತ್ವನವನ್ನು ಕಂಡುಕೊಳ್ಳುವ ಸ್ಥಳ
14. (ಎ) ತನ್ನ ಮರಣದ ಮುಂಚಿನ ರಾತ್ರಿ ಯೇಸು ಯಾವ ವಾಗ್ದಾನವನ್ನು ಮಾಡಿದನು? (ಬಿ) ದೇವರ ಪವಿತ್ರಾತ್ಮದ ಸಾಂತ್ವನದಿಂದ ನಾವು ಪೂರ್ತಿ ಪ್ರಯೋಜನವನ್ನು ಪಡೆಯಬೇಕಾದರೆ ಏನು ಅಗತ್ಯ?
14 ತಾನು ಮರಣಹೊಂದುವುದಕ್ಕೆ ಮೊದಲಿನ ರಾತ್ರಿ, ಯೇಸು ತನ್ನ ನಂಬಿಗಸ್ತ ಅಪೊಸ್ತಲರಿಗೆ, ತಾನು ಅವರನ್ನು ಬೇಗನೆ ಬಿಟ್ಟುಹೋಗಿ ತಂದೆಯ ಬಳಿಗೆ ಹಿಂದಿರುಗುವೆನೆಂದು ಸ್ಪಷ್ಟಪಡಿಸಿದನು. ಇದು ಅವರನ್ನು ಕಳವಳ ಮತ್ತು ದುಃಖಗೊಳಿಸಿತು. (ಯೋಹಾನ 13:33, 36; 14:27-31) ಮುಂದುವರಿಯುವ ಸಾಂತ್ವನಕ್ಕಾಗಿ ಅವರಿಗಿದ್ದ ಅಗತ್ಯವನ್ನು ಗುರುತಿಸುತ್ತ, ಯೇಸು ವಚನವಿತ್ತದ್ದು: “ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು [“ಸಾಂತ್ವನಕಾರ” NW, ಪಾದಟಿಪ್ಪಣಿ] ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.” (ಯೋಹಾನ 14:16) ಯೇಸು ಇಲ್ಲಿ, ತನ್ನ ಪುನರುತ್ಥಾನವಾಗಿ 50 ದಿನಗಳ ಬಳಿಕ ತನ್ನ ಶಿಷ್ಯರ ಮೇಲೆ ಸುರಿಸಲ್ಪಟ್ಟ ಪವಿತ್ರಾತ್ಮವನ್ನು ಸೂಚಿಸಿದನು.a ಬೇರೆ ವಿಷಯಗಳ ಮಧ್ಯೆ, ದೇವರ ಆತ್ಮವು ಅವರ ಪರೀಕ್ಷೆಗಳಲ್ಲಿ ಅವರನ್ನು ಸಾಂತ್ವನಗೊಳಿಸಿ, ದೇವರ ಚಿತ್ತವನ್ನು ಮಾಡುತ್ತ ಮುಂದುವರಿಯುವಂತೆ ಅವರನ್ನು ಬಲಪಡಿಸಿತು. (ಅ. ಕೃತ್ಯಗಳು 4:31) ಆದರೂ, ಅಂತಹ ಸಹಾಯವು ಸ್ವಯಂಚಾಲಿತವೆಂದು ವೀಕ್ಷಿಸಲ್ಪಡಬಾರದು. ಅದರಿಂದ ಪೂರ್ಣ ಪ್ರಯೋಜನ ಪಡೆಯಬೇಕಾದರೆ, ಪ್ರತಿಯೊಬ್ಬ ಕ್ರೈಸ್ತನು, ದೇವರು ತನ್ನ ಪವಿತ್ರಾತ್ಮದ ಮೂಲಕ ಒದಗಿಸುವ ಸಾಂತ್ವನದಾಯಕ ಸಹಾಯಕ್ಕಾಗಿ ಪ್ರಾರ್ಥಿಸುತ್ತ ಮುಂದುವರಿಯಬೇಕು.—ಲೂಕ 11:13.
15. ಯೆಹೋವನು ನಮಗೆ ಸಾಂತ್ವನವನ್ನು ಒದಗಿಸುವ ಕೆಲವು ವಿಧಗಳಾವುವು?
15 ದೇವರು ಸಾಂತ್ವನವನ್ನು ಒದಗಿಸುವ ಇನ್ನೊಂದು ವಿಧವು, ತನ್ನ ವಾಕ್ಯವಾದ ಬೈಬಲಿನ ಮುಖಾಂತರವೇ. ಪೌಲನು ಬರೆದುದು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ಕ್ರಮವಾಗಿ ಅಭ್ಯಾಸಿಸಿ, ಬೈಬಲು ಮತ್ತು ಬೈಬಲ್-ಆಧಾರಿತ ಪ್ರಕಾಶನಗಳಲ್ಲಿ ಬರೆಯಲ್ಪಟ್ಟ ವಿಷಯಗಳ ಕುರಿತು ಮನನ ಮಾಡುವುದರ ಅಗತ್ಯವನ್ನು ಇದು ನಮಗೆ ತೋರಿಸುತ್ತದೆ. ಎಲ್ಲಿ ದೇವರ ವಾಕ್ಯದಿಂದ ಸಾಂತ್ವನದಾಯಕ ಯೋಚನೆಗಳು ಹಂಚಿಕೊಳ್ಳಲ್ಪಡುತ್ತವೋ, ಅಂತಹ ಕ್ರೈಸ್ತ ಕೂಟಗಳಲ್ಲಿನ ಕ್ರಮದ ಉಪಸ್ಥಿತಿಯೂ ನಮಗೆ ಅಗತ್ಯ. ಇಂತಹ ನೆರವಿಗಳ ಪ್ರಮುಖ ಉದ್ದೇಶಗಳಲ್ಲಿ ಒಂದು, ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವುದೇ.—ಇಬ್ರಿಯ 10:25.
16. ದೇವರ ಸಾಂತ್ವನದಾಯಕ ಒದಗಿಸುವಿಕೆಗಳು ನಾವೇನು ಮಾಡುವಂತೆ ಪ್ರಚೋದಿಸಬೇಕು?
16 ರೋಮಾಪುರದವರಿಗೆ ಬರೆದ ಪೌಲನ ಪತ್ರಿಕೆಯು, ದೇವರ ಸಾಂತ್ವನದಾಯಕ ಒದಗಿಸುವಿಕೆಗಳನ್ನು ಉಪಯೋಗಿಸುವುದರಿಂದ ಬರುವ ಉತ್ತಮ ಫಲಿತಾಂಶಗಳನ್ನು ತೋರಿಸುತ್ತ ಮುಂದುವರಿಯುತ್ತದೆ. “ಸ್ಥಿರಚಿತ್ತವನ್ನೂ ಆದರಣೆಯನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ನಿಮಗೆ ದಯಪಾಲಿಸಲಿ. ಹೀಗೆ ನೀವು ಏಕಮನಸ್ಸಿನಿಂದ ಒಮ್ಮುಖವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಕೊಂಡಾಡುವಿರಿ,” ಎಂದು ಪೌಲನು ಬರೆದನು. (ರೋಮಾಪುರ 15:5, 6) ಹೌದು, ದೇವರ ಸಾಂತ್ವನದಾಯಕ ಒದಗಿಸುವಿಕೆಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ, ನಾವು ಹೆಚ್ಚಾಗಿ ನಮ್ಮ ಧೈರ್ಯವಂತ ನಾಯಕನಾದ ಯೇಸು ಕ್ರಿಸ್ತನಂತಾಗುವೆವು. ಇದು ಸಾಕ್ಷಿ ಕೆಲಸದಲ್ಲಿ, ನಮ್ಮ ಕೂಟಗಳಲ್ಲಿ, ಜೊತೆ ವಿಶ್ವಾಸಿಗಳೊಂದಿಗೆ ನಾವು ಮಾಡುವ ಖಾಸಗಿ ಸಂಭಾಷಣೆಯಲ್ಲಿ ಮತ್ತು ನಮ್ಮ ಪ್ರಾರ್ಥನೆಗಳಲ್ಲಿ, ದೇವರನ್ನು ಮಹಿಮೆಪಡಿಸಲು ನಮ್ಮ ಬಾಯಿಗಳನ್ನು ಉಪಯೋಗಿಸುತ್ತ ಮುಂದುವರಿಯುವಂತೆ ನಮ್ಮನ್ನು ಪ್ರಚೋದಿಸುವುದು.
ಕಠಿನ ಪರೀಕ್ಷೆಯ ಸಮಯಗಳಲ್ಲಿ
17. ಯೆಹೋವನು ತನ್ನ ಮಗನನ್ನು ಹೇಗೆ ಸಾಂತ್ವನಗೊಳಿಸಿದನು, ಮತ್ತು ಪರಿಣಾಮವೇನು?
17 ತನ್ನ ಸಂಕಟಕರವಾದ ಮರಣಕ್ಕೆ ಮುಂಚಿನ ರಾತ್ರಿ ಯೇಸು, “ಮನಗುಂದಿದವನು” ಮತ್ತು “ದುಃಖಕ್ಕೆ” ಒಳಗಾದವನು ಆದನು. (ಮತ್ತಾಯ 26:37, 38) ಆದಕಾರಣ ಅವನು ತನ್ನ ಶಿಷ್ಯರಿಂದ ತುಸು ದೂರ ಹೋಗಿ, ಸಹಾಯಕ್ಕಾಗಿ ತನ್ನ ತಂದೆಗೆ ಪ್ರಾರ್ಥಿಸಿದನು. ಅವನು “ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು.” (ಇಬ್ರಿಯ 5:7) “ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸಿದನು” ಎಂದು ಬೈಬಲು ವರದಿಸುತ್ತದೆ. (ಲೂಕ 22:43) ತನ್ನ ವಿರೋಧಿಗಳನ್ನು ಎದುರಿಸುವರೆ ಯೇಸುವಿನ ಮುಂದುವರಿದ ಧೈರ್ಯ ಹಾಗೂ ಪೌರುಷದ ಮಾರ್ಗವು, ದೇವರು ತನ್ನ ಮಗನಿಗೆ ಸಾಂತ್ವನವನ್ನು ಕೊಟ್ಟ ವಿಧವು ಅತ್ಯಂತ ಕಾರ್ಯಸಾಧಕವೆಂಬುದಕ್ಕೆ ಸಾಕ್ಷ್ಯವಾಗಿದೆ.—ಯೋಹಾನ 18:3-8; 33-38.
18. (ಎ) ಅಪೊಸ್ತಲ ಪೌಲನ ಜೀವನದಲ್ಲಿ ಯಾವ ಅವಧಿಯು ವಿಶೇಷವಾಗಿ ಕಷ್ಟಕರವಾಗಿತ್ತು? (ಬಿ) ನಾವು ಕಷ್ಟಪಟ್ಟು ಕೆಲಸಮಾಡುವ, ಕನಿಕರವುಳ್ಳ ಹಿರಿಯರಿಗೆ ಹೇಗೆ ಸಾಂತ್ವನದಾಯಕರಾಗಿರಬಲ್ಲೆವು?
18 ಅಪೊಸ್ತಲ ಪೌಲನೂ ಕಠಿನ ಪರೀಕ್ಷೆಯ ಅವಧಿಗಳನ್ನು ಅನುಭವಿಸಿದನು. ಉದಾಹರಣೆಗೆ, ಎಫೆಸದ ಅವನ ಶುಶ್ರೂಷೆಯು, “ಕಣ್ಣೀರಿನಿಂದ . . . ಯೆಹೂದ್ಯರ ಒಳಸಂಚುಗಳಿಂದ ಸಂಭವಿಸಿದ ಕಷ್ಟ”ಗಳಿಂದ ಗುರುತಿಸಲ್ಪಟ್ಟಿತು. (ಅ. ಕೃತ್ಯಗಳು 20:17-20) ಕೊನೆಗೆ, ಅರ್ತೆಮೀದೇವಿಯ ಬೆಂಬಲಿಗರು ಅವನ ಸಾರುವ ಚಟುವಟಿಕೆಯ ಸಂಬಂಧದಲ್ಲಿ ನಗರದಲ್ಲಿ ದೊಂಬಿಯನ್ನೆಬ್ಬಿಸಿದ ಬಳಿಕ ಪೌಲನು ಎಫೆಸವನ್ನು ಬಿಟ್ಟುಹೋದನು. (ಅ. ಕೃತ್ಯಗಳು 19:23-29; 20:1) ಪೌಲನು ಉತ್ತರ ದಿಕ್ಕಿನ ತ್ರೋವ ನಗರಕ್ಕೆ ಮುಂದುವರಿದಾಗ ಇನ್ನೊಂದು ವಿಷಯವು ಅವನನ್ನು ತೀರ ಚಿಂತಿತನನ್ನಾಗಿ ಮಾಡಿತು. ಎಫೆಸದ ದೊಂಬಿಗೆ ತುಸು ಮೊದಲು, ಅವನಿಗೆ ಕ್ಷೋಭೆಯನ್ನುಂಟುಮಾಡಿದ ವರದಿಯೊಂದು ದೊರಕಿತ್ತು. ಕೊರಿಂಥದ ಇತ್ತೀಚೆಗಿನ ಸಭೆಯು ವಿಭಾಗಗಳಿಂದ ಬಾಧಿತವಾಗಿತ್ತು, ಮತ್ತು ಅದು ಹಾದರವನ್ನು ಸಹಿಸಿಕೊಳ್ಳುತ್ತಿತ್ತು. ಆದಕಾರಣ, ಆ ಸ್ಥಿತಿಗತಿಯನ್ನು ತಿದ್ದುವ ನಿರೀಕ್ಷೆಯಿಂದ ಪೌಲನು ಎಫೆಸದಿಂದ ಬಲವಾದ ಗದರಿಕೆಯ ಒಂದು ಪತ್ರವನ್ನು ಬರೆದಿದ್ದನು. ಹಾಗೆ ಮಾಡುವುದು ಅವನಿಗೆ ಸುಲಭವಾದ ಸಂಗತಿಯಾಗಿರಲಿಲ್ಲ. “ನಾನು ಬಹಳ ಕಣ್ಣೀರು ಬಿಡುತ್ತಾ ಹೃದಯದ ಬಹುಸಂಕಟದಿಂದಲೂ ವ್ಯಾಕುಲದಿಂದಲೂ ನಿಮಗೆ ಬರೆದೆನು,” ಎಂದು ಅವನು ಆ ಬಳಿಕ ಎರಡನೆಯ ಪತ್ರವೊಂದರಲ್ಲಿ ತಿಳಿಯಪಡಿಸಿದನು. (2 ಕೊರಿಂಥ 2:4) ಪೌಲನಂತೆ, ಸಹಾನುಭೂತಿಯುಳ್ಳ ಹಿರಿಯರು, ತಿದ್ದುವಂತಹ ಸಲಹೆ ಮತ್ತು ಗದರಿಕೆಯನ್ನು ಕೊಡುವುದು ಸುಲಭವೆಂದು ತಿಳಿಯುವುದಿಲ್ಲ. ಆಂಶಿಕವಾಗಿ ಇದು, ಅವರು ತಮ್ಮ ಸ್ವಂತ ಬಲಹೀನತೆಗಳ ಕುರಿತು ತೀರ ಅರಿವುಳ್ಳವರಾಗಿರುವುದರಿಂದಲೇ. (ಗಲಾತ್ಯ 6:1) ಆದುದರಿಂದ ನಾವು, ನಮ್ಮಲ್ಲಿ ನಾಯಕತ್ವ ವಹಿಸುವವರ ಪ್ರೀತಿಯ, ಬೈಬಲಾಧಾರಿತ ಸಲಹೆಗೆ ಸಿದ್ಧಮನಸ್ಸಿನಿಂದ ಓಗೊಡುವ ಮೂಲಕ ಅವರಿಗೆ ಸಾಂತ್ವನವನ್ನು ತರುವಂತಾಗಲಿ.—ಇಬ್ರಿಯ 13:17.
19. ಪೌಲನು ತ್ರೋವದಿಂದ ಮಕೆದೋನ್ಯಕ್ಕೆ ಹೋದದ್ದು ಏಕೆ, ಮತ್ತು ಕಟ್ಟಕಡೆಗೆ ಅವನು ಉಪಶಮನವನ್ನು ಹೇಗೆ ಪಡೆದುಕೊಂಡನು?
19 ಎಫೆಸದಲ್ಲಿದ್ದಾಗ, ಪೌಲನು ಕೊರಿಂಥದಲ್ಲಿದ್ದ ಸಹೋದರರಿಗೆ ಬರೆದುದು ಮಾತ್ರವಲ್ಲ, ಅವನು ಅವರಿಗೆ ನೆರವು ನೀಡಲು ತೀತನನ್ನು ಸಹ ಕಳುಹಿಸಿ, ಆ ಪತ್ರಕ್ಕೆ ಅವರ ಪ್ರತಿವರ್ತನೆಯನ್ನು ತನಗೆ ಹಿಂದೆ ವರದಿಸುವಂತೆ ನೇಮಿಸಿದನು. ತೀತನನ್ನು ತಾನು ತ್ರೋವದಲ್ಲಿ ಸಂಧಿಸುವೆನೆಂದು ಪೌಲನು ನಿರೀಕ್ಷಿಸಿದನು. ಅಲ್ಲಿ ಶಿಷ್ಯರನ್ನು ಮಾಡುವ ಉತ್ತಮ ಅವಕಾಶದಿಂದ ಪೌಲನು ಆಶೀರ್ವದಿಸಲ್ಪಟ್ಟನು. ಆದರೆ ತೀತನು ಇನ್ನೂ ಆಗಮಿಸಿರದಿದ್ದುದರಿಂದ ಪೌಲನ ಕಳವಳವನ್ನು ಇದು ಶಮನಮಾಡುವುದರಲ್ಲಿ ವಿಫಲಗೊಂಡಿತು. (2 ಕೊರಿಂಥ 2:12, 13) ಆದಕಾರಣ ಅವನು ಮಕೆದೋನ್ಯಕ್ಕೆ, ತೀತನನ್ನು ಅಲ್ಲಿ ಸಂಧಿಸುವ ನಿರೀಕ್ಷೆಯಿಂದ ಹೋದನು. ಪೌಲನ ಕಳವಳದ ಸ್ಥಿತಿಯು ಅವನ ಶುಶ್ರೂಷೆಗೆ ತೀಕ್ಷ್ಣವಿರೋಧದ ಕಾರಣ ತೀವ್ರಗೊಂಡಿತು. “ನಾವು ಮಕೆದೋನ್ಯಕ್ಕೆ ಬಂದಾಗ ನಮ್ಮ ಮನಸ್ಸಿಗೆ ಏನೂ ಉಪಶಮನವಾಗಲಿಲ್ಲ. ಎಲ್ಲಾ ವಿಷಯಗಳಲ್ಲಿಯೂ ನಮಗೆ ಸಂಕಟವಿತ್ತು; ಹೊರಗೆ ಕಲಹ, ಒಳಗೆ ಭಯ. ಆದರೆ ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದನು,” ಎಂದು ಅವನು ವಿವರಿಸುತ್ತಾನೆ. (2 ಕೊರಿಂಥ 7:5, 6) ತೀತನು ಕಟ್ಟಕಡೆಗೆ ಬಂದು, ಪೌಲನ ಪತ್ರಕ್ಕೆ ಕೊರಿಂಥದವರ ಸಕಾರಾತ್ಮಕವಾದ ಪ್ರತಿವರ್ತನೆಯ ಕುರಿತು ಹೇಳಿದಾಗ ಎಂತಹ ಉಪಶಮನ!
20. (ಎ) ಪೌಲನ ವಿಷಯದಲ್ಲಿ ಮಾಡಿದಂತೆ, ಯೆಹೋವನು ಸಾಂತ್ವನವನ್ನು ಒದಗಿಸುವ ಇನ್ನೊಂದು ಪ್ರಮುಖ ರೀತಿಯು ಯಾವುದು? (ಬಿ) ಮುಂದಿನ ಲೇಖನದಲ್ಲಿ ಏನು ಪರಿಗಣಿಸಲ್ಪಡುವುದು?
20 ಪೌಲನ ಅನುಭವವು, ಯಾರಲ್ಲಿ ಅನೇಕರು “ದೀನಾವಸ್ಥೆಯಲ್ಲಿ” ಅಥವಾ “ಖಿನ್ನರಾಗಿ” (ಫಿಲಿಪ್ಸ್) ಇರುವಂತೆ ಮಾಡುವ ಪರೀಕ್ಷೆಗಳನ್ನು ಎದುರಿಸುತ್ತಾರೊ ಅಂತಹ ದೇವರ ಸೇವಕರಿಗೆ ಇಂದು ಸಾಂತ್ವನದಾಯಕವಾಗಿದೆ. ಹೌದು, ‘ಸಂತೈಸುವ ದೇವರಿಗೆ’ ನಮ್ಮ ವೈಯಕ್ತಿಕ ಆವಶ್ಯಕತೆಗಳು ಗೊತ್ತಿವೆ, ಮತ್ತು ಪೌಲನು ಕೊರಿಂಥದವರ ಪಶ್ಚಾತ್ತಾಪ ಮನೋಭಾವದ ಕುರಿತ ತೀತನ ವರದಿಯಿಂದ ಸಾಂತ್ವನ ಪಡೆದಂತೆ, ನಾವೂ ಒಬ್ಬರಿಗೊಬ್ಬರು ಸಾಂತ್ವನ ತರುವವರಾಗುವಂತೆ ಆತನು ನಮ್ಮನ್ನು ಉಪಯೋಗಿಸಬಲ್ಲನು. (2 ಕೊರಿಂಥ 7:11-13) ನಮ್ಮ ಮುಂದಿನ ಲೇಖನದಲ್ಲಿ, ನಾವು ಕೊರಿಂಥದವರಿಗೆ ಪೌಲನ ಹೃದಯೋಲ್ಲಾಸದ ಪ್ರತಿವರ್ತನೆಯನ್ನು ಮತ್ತು ನಾವು ಇಂದು ದೇವರ ಸಾಂತ್ವನದಲ್ಲಿ ಕಾರ್ಯಸಾಧಕರಾದ ಪಾಲಿಗರಾಗುವಂತೆ ಅದು ನಮಗೆ ಹೇಗೆ ಸಹಾಯಮಾಡಬಲ್ಲದೆಂಬುದನ್ನು ಪರಿಗಣಿಸುವೆವು.
[ಪಾದಟಿಪ್ಪಣಿ]
a ಒಂದನೆಯ ಶತಮಾನದ ಕ್ರೈಸ್ತರ ಮೇಲೆ ದೇವರ ಆತ್ಮದ ಮುಖ್ಯ ಕಾರ್ಯ ನಡೆಸುವಿಕೆಗಳಲ್ಲಿ ಒಂದು, ದೇವರ ಆತ್ಮಿಕ ದತ್ತುಪುತ್ರರಾಗಿ ಮತ್ತು ಯೇಸುವಿನ ಸೋದರರಾಗಿ ಅವರನ್ನು ಅಭಿಷೇಕಿಸುವುದು ಆಗಿತ್ತು. (2 ಕೊರಿಂಥ 1:21, 22) ಇದು ಕ್ರಿಸ್ತನ 1,44,000 ಮಂದಿ ಶಿಷ್ಯರಿಗೆ ಮಾತ್ರ ಕಾದಿರಿಸಲ್ಪಟ್ಟಿದೆ. (ಪ್ರಕಟನೆ 14:1, 3) ಇಂದು ಕ್ರೈಸ್ತರಲ್ಲಿ ಅಧಿಕಾಂಶ ಮಂದಿಗೆ ದಯಾಪೂರ್ಣವಾಗಿ ಭೂಪ್ರಮೋದವನದ ಮೇಲೆ ನಿತ್ಯಜೀವದ ನಿರೀಕ್ಷೆಯು ದಯಪಾಲಿಸಲ್ಪಟ್ಟಿದೆ. ಅಭಿಷಿಕ್ತರಲ್ಲದಿದ್ದರೂ, ಅವರೂ ದೇವರ ಪವಿತ್ರಾತ್ಮದ ಸಹಾಯವನ್ನೂ ಸಾಂತ್ವನವನ್ನೂ ಪಡೆಯುತ್ತಾರೆ.
ನೀವು ಉತ್ತರಿಸಬಲ್ಲಿರೊ?
◻ ಮಾನವಕುಲವು ಸಾಂತ್ವನದ ಆವಶ್ಯಕತೆಯುಳ್ಳದ್ದಾದದ್ದು ಹೇಗೆ?
◻ ಯೇಸುವು ನೋಹನಿಗಿಂತ ಹೆಚ್ಚಿನವನಾಗಿ ಪರಿಣಮಿಸಿದ್ದು ಹೇಗೆ?
◻ ಯೇಸುವು ತನ್ನನ್ನು ‘ಸಬ್ಬತ್ ದಿನಕ್ಕೆ ಒಡೆಯ’ನು ಎಂದು ಕರೆದುಕೊಂಡದ್ದೇಕೆ?
◻ ದೇವರು ಇಂದು ಸಾಂತ್ವನವನ್ನು ಹೇಗೆ ಒದಗಿಸುತ್ತಾನೆ?
[ಪುಟ 10ರಲ್ಲಿರುವಚಿತ್ರ/ಚಿತ್ರಗಳು]
ಕೊರಿಂಥದವರ ಕುರಿತಾದ ತೀತನ ವರದಿಯಿಂದ ಪೌಲನು ಭಾರಿ ಸಾಂತ್ವನವನ್ನು ಅನುಭವಿಸಿದನು
ಮಕೆದೋನ್ಯ
ಫಿಲಿಪ್ಪಿ
ಗ್ರೀಸ್
ಕೊರಿಂಥ
ವಿಷಿಯ
ತ್ರೋವ
ಎಫೆಸ