“ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ”
ಯೆಹೋವನು ಉದಾರತೆಯ ಆದರ್ಶರೂಪವಾಗಿದ್ದಾನೆ. ಆತನು ‘ಎಲ್ಲಾ ಒಳ್ಳೇ ದಾನಗಳ, ಕುಂದಿಲ್ಲದ ಎಲ್ಲಾ ವರಗಳ’ ದಾತನಾಗಿದ್ದಾನೆಂದು ಬೈಬಲ್ ಹೇಳುತ್ತದೆ. (ಯಾಕೋಬ 1:17) ಉದಾಹರಣೆಗಾಗಿ, ದೇವರ ಸೃಷ್ಟಿಯನ್ನು ಪರಿಗಣಿಸಿರಿ. ಆತನು, ಸಪ್ಪೆಯಾದುದಲ್ಲ ಬದಲಿಗೆ ರುಚಿಕರವಾದ ಆಹಾರವನ್ನು, ಮಂಕಾದುದಲ್ಲ ಬದಲಿಗೆ ವರ್ಣರಂಜಿತವಾದ ಹೂವುಗಳನ್ನು, ಕಳಾಹೀನವಲ್ಲ ಬದಲಿಗೆ ನಯನಮನೋಹರವಾದ ಸೂರ್ಯಾಸ್ತಮಾನಗಳನ್ನು ಸೃಷ್ಟಿಸಿದನು. ಹೌದು, ಯೆಹೋವನ ಸೃಷ್ಟಿಯ ಪ್ರತಿಯೊಂದೂ ಅಂಶವು ಆತನ ಪ್ರೀತಿ ಮತ್ತು ಉದಾರತೆಯ ರುಜುವಾತನ್ನು ಕೊಡುತ್ತದೆ. (ಕೀರ್ತನೆ 19:1, 2; 139:14) ಅಷ್ಟುಮಾತ್ರವಲ್ಲದೆ, ಯೆಹೋವನು ಒಬ್ಬ ಹರ್ಷಭರಿತ ದಾತನಾಗಿದ್ದಾನೆ. ಆತನು ತನ್ನ ಸೇವಕರಿಗಾಗಿ ಒಳಿತನ್ನು ಮಾಡುವುದರಲ್ಲಿ ಸಂತೋಷಿಸುತ್ತಾನೆ.—ಕೀರ್ತನೆ 84:11; 149:4.
ಇಸ್ರಾಯೇಲ್ಯರು ಒಬ್ಬರೊಂದಿಗೊಬ್ಬರು ವ್ಯವಹರಿಸುವಾಗ ದೇವರ ಉದಾರತೆಯನ್ನು ಪ್ರತಿಬಿಂಬಿಸುವಂತೆ ಆಜ್ಞಾಪಿಸಲ್ಪಟ್ಟಿದ್ದರು. ಮೋಶೆಯು ಅವರಿಗೆ ಹೇಳಿದ್ದು: “ನೀವು ಆ ಬಡ ಸಹೋದರನಿಗೆ ಮನಸ್ಸನ್ನು ಕಠಿಣಮಾಡಿಕೊಂಡು ಅವನಿಗೆ ಸಹಾಯಮಾಡದೆ ಇರಬಾರದು. . . . ನೀವು ಕೊಡುವಾಗ ಬೇಸರಗೊಳ್ಳದೆ ಉದಾರವಾದ ಮನಸ್ಸಿನಿಂದಲೇ ಕೊಡಬೇಕು.” (ಧರ್ಮೋಪದೇಶಕಾಂಡ 15:7, 10) ಹೃದಯದಾಳದಿಂದ ಕೊಡಬೇಕಾಗಿದ್ದ ಕಾರಣ, ಇಸ್ರಾಯೇಲ್ಯರು ದಾನಧರ್ಮಗಳನ್ನು ಮಾಡುವುದರಲ್ಲಿ ಹರ್ಷಿಸಬೇಕಾಗಿತ್ತು.
ಕ್ರೈಸ್ತರಿಗೆ ತದ್ರೀತಿಯ ಬುದ್ಧಿವಾದವನ್ನು ಕೊಡಲಾಯಿತು. ‘ಕೊಡುವುದರಲ್ಲೇ ಹೆಚ್ಚು ಸಂತೋಷ’ ಎಂದು ಯೇಸು ಹೇಳಿದನು. (ಅ. ಕೃತ್ಯಗಳು 20:35, ಪರಿಶುದ್ಧ ಬೈಬಲ್) ಹರ್ಷಭರಿತರಾಗಿ ಕೊಡುವುದರಲ್ಲಿ ಯೇಸುವಿನ ಶಿಷ್ಯರು ಆದರ್ಶಪ್ರಾಯರಾಗಿದ್ದರು. ಉದಾಹರಣೆಗಾಗಿ, ಯೆರೂಸಲೇಮಿನಲ್ಲಿ ವಿಶ್ವಾಸಿಗಳಾದವರು, “ತಾವು ಹೊಂದಿದ ವಸ್ತುಗಳನ್ನು ಮಾರಿ, ಬಂದ ಹಣವನ್ನೆಲ್ಲಾ ಕೊರತೆಯಲ್ಲಿದ್ದವರಿಗೆ ಹಂಚಿಕೊಡುತ್ತಿದ್ದರು” ಎಂದು ಬೈಬಲ್ ವರದಿಸುತ್ತದೆ.—ಅ. ಕೃತ್ಯಗಳು 2:44, 45, ಪರಿಶುದ್ಧ ಬೈಬಲ್.
ಆದರೆ ಉದಾರವಾಗಿ ಕೊಡುತ್ತಿದ್ದ ಈ ಯೆಹೂದ್ಯರೇ ಅನಂತರ ಬಡತನಕ್ಕೆ ಒಳಗಾದರು. ಅವರು ಈ ಸ್ಥಿತಿಗೆ ಬರಲು ಕಾರಣವೇನೆಂದು ಬೈಬಲ್ ಸ್ಪಷ್ಟವಾಗಿ ತಿಳಿಯಪಡಿಸುವುದಿಲ್ಲ. ಅ. ಕೃತ್ಯಗಳು 11:28, 29ರಲ್ಲಿ ಸೂಚಿಸಲ್ಪಟ್ಟಿರುವ ಕ್ಷಾಮವು, ಕಾರಣವಾಗಿದ್ದಿರಬಹುದೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಏನೇ ಆಗಲಿ, ಆ ಯೂದಾಯದ ಕ್ರೈಸ್ತರು ತುಂಬ ಕಷ್ಟದಲ್ಲಿದ್ದರು, ಮತ್ತು ಅವರ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಪೌಲನು ಬಯಸಿದನು. ಅವನದನ್ನು ಹೇಗೆ ಮಾಡಿದನು?
ಕೊರತೆಯಲ್ಲಿದ್ದವರಿಗಾಗಿ ಹಣ ಸಂಗ್ರಹ
ಮಕೆದೋನ್ಯದಷ್ಟು ದೂರದಲ್ಲಿದ್ದ ಸಭೆಗಳ ಸಹಾಯವನ್ನು ಪೌಲನು ಕೋರಿದನು, ಮತ್ತು ಯೂದಾಯದಲ್ಲಿ ಬಡತನದಿಂದ ನರಳುತ್ತಿದ್ದ ಕ್ರೈಸ್ತರಿಗಾಗಿ ಹಣ ಸಂಗ್ರಹವನ್ನು ಮಾಡಲಿಕ್ಕಾಗಿ ಅವನು ಏರ್ಪಾಡನ್ನು ಮಾಡಿದನು. ಕೊರಿಂಥದವರಿಗೆ ಪೌಲನು ಬರೆದುದು: “ಗಲಾತ್ಯದ ಸಭೆಗಳಿಗೆ ನಾನು ಹೇಳಿಕೊಟ್ಟ ಕ್ರಮದಂತೆ [“ಆಜ್ಞೆಗಳನ್ನು ಕೊಟ್ಟಂತೆ,” NW] ನೀವೂ ಮಾಡಿರಿ. . . . ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದ ಸಂಪಾದನೆಯ ಮೇರೆಗೆ ವಾರವಾರದ ಮೊದಲನೆಯ ದಿನದಲ್ಲಿ ಗಂಟುಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು.”a—1 ಕೊರಿಂಥ 16:1, 2.
ಈ ಹಣವನ್ನು, ಯೆರೂಸಲೇಮಿನಲ್ಲಿದ್ದ ಸಹೋದರರಿಗೆ ಆದಷ್ಟು ಬೇಗನೆ ಕಳುಹಿಸಲು ಪೌಲನು ಉದ್ದೇಶಿಸಿದನು. ಆದರೆ ಕೊರಿಂಥದವರು ಪೌಲನ ಸೂಚನೆಗಳಿಗೆ ಪ್ರತಿಕ್ರಿಯೆ ತೋರಿಸುವುದರಲ್ಲಿ ನಿಧಾನಿಗಳಾಗಿದ್ದರು. ಯಾಕೆ? ಯೆಹೂದದ ತಮ್ಮ ಸಹೋದರರ ಸ್ಥಿತಿಗತಿಯ ಕುರಿತು ಅವರು ಅಸಡ್ಡೆಯನ್ನು ತೋರಿಸುತ್ತಿದ್ದರೊ? ಇಲ್ಲ, ಯಾಕಂದರೆ ಕೊರಿಂಥದವರು, ‘ನಂಬಿಕೆ ವಾಕ್ಚಾತುರ್ಯ ಜ್ಞಾನ ಸಕಲವಿಧವಾದ ಆಸಕ್ತಿ ಸಮೃದ್ಧರಾಗಿದ್ದರು’ ಎಂದು ಪೌಲನಿಗೆ ತಿಳಿದಿತ್ತು. (2 ಕೊರಿಂಥ 8:7) ಪೌಲನು ಅವರಿಗೆ ಬರೆದಂತಹ ಮೊದಲನೆಯ ಪತ್ರದಲ್ಲಿದ್ದ ಇತರ ಅತ್ಯಾವಶ್ಯಕ ವಿಷಯಗಳಿಗೆ ಲಕ್ಷ್ಯಕೊಡುವುದರಲ್ಲಿ ಅವರು ತೀರ ಕಾರ್ಯಮಗ್ನರಾಗಿದ್ದಿರಬಹುದು. ಆದರೆ ಯೆರೂಸಲೇಮಿನಲ್ಲಿದ್ದ ಸಹೋದರರ ಪರಿಸ್ಥಿತಿಯು ತುರ್ತಿನದ್ದಾಗಿತ್ತು. ಆದುದರಿಂದ ಪೌಲನು ಕೊರಿಂಥದವರಿಗೆ ಬರೆದ ಎರಡನೆಯ ಪತ್ರದಲ್ಲಿ ಈ ವಿಷಯವನ್ನು ತಿಳಿಸಿದನು.
ಉದಾರತೆಯನ್ನು ತೋರಿಸಲು ವಿನಂತಿಗಳು
ಪ್ರಥಮವಾಗಿ, ಪೌಲನು ಕೊರಿಂಥದವರಿಗೆ ಮಕೆದೋನ್ಯದವರ ಕುರಿತಾಗಿ ತಿಳಿಸಿದನು. ಪರಿಹಾರ ಕಾರ್ಯಕ್ಕಾಗಿ ಅವರು ತೋರಿಸಿದಂತಹ ಪ್ರತಿಕ್ರಿಯೆಯು, ಆದರ್ಶಮಯವಾದದ್ದಾಗಿತ್ತು. ಪೌಲನು ಬರೆದುದು: “ಆ ಸಭೆಗಳವರು ಬಹಳ ಹಿಂಸೆ ತಾಳುವವರಾದರೂ ಮತ್ತು ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.” ಮಕೆದೋನ್ಯದವರಿಗೆ, ಸಹಾಯ ಕೊಡುವಂತೆ ಹೇಳುತ್ತಾ ಇರುವ ಅಗತ್ಯವಿರಲಿಲ್ಲ. ಇದಕ್ಕೆ ವಿರುದ್ಧವಾಗಿ, ಅವರು “ದೇವಜನರಿಗೆ ಸಹಾಯಮಾಡುವ ಕೆಲಸದಲ್ಲಿ ತಾವು ಪಾಲುಗಾರರಾಗುವಂತೆ ಅಪ್ಪಣೆಯಾಗಬೇಕೆಂದು ನಮ್ಮನ್ನು ಬಹಳವಾಗಿ ಬೇಡಿಕೊಂಡರು” ಎಂದು ಪೌಲನು ಹೇಳಿದನು. ಮಕೆದೋನ್ಯದವರು ಸ್ವತಃ “ವಿಪರೀತ ಬಡತನ”ದಲ್ಲಿದ್ದರು. ಇದನ್ನು ಪರಿಗಣಿಸುವಾಗ, ಅವರ ಹರ್ಷಭರಿತವಾದ ಉದಾರತೆಯು ಇನ್ನೂ ಹೆಚ್ಚು ಗಮನಾರ್ಹವಾಗುತ್ತದೆ.—2 ಕೊರಿಂಥ 8:2-4.
ಮಕೆದೋನ್ಯದವರನ್ನು ಪ್ರಶಂಸಿಸುವ ಮೂಲಕ, ಪೌಲನು ಕೊರಿಂಥದವರಲ್ಲಿ ಒಂದು ಸ್ಪರ್ಧಾತ್ಮಕ ಮನೋಭಾವವನ್ನು ಕೆರಳಿಸುತ್ತಿದ್ದನೊ? ಇಲ್ಲ, ಯಾಕಂದರೆ ಈ ರೀತಿಯಲ್ಲಿ ಪ್ರಚೋದಿಸುವುದು ಸರಿಯಾದುದಲ್ಲ ಎಂಬುದು ಅವನಿಗೆ ತಿಳಿದಿತ್ತು. (ಗಲಾತ್ಯ 6:4) ಇನ್ನೂ ಹೆಚ್ಚಾಗಿ, ಕೊರಿಂಥದವರು ಉದಾರವಾಗಿ ಕೊಡುವಂತೆ ಮಾಡಲು ಅವರನ್ನು ಲಜ್ಜಾಸ್ಪದರನ್ನಾಗಿ ಮಾಡುವ ಅಗತ್ಯವಿರಲಿಲ್ಲ ಎಂದು ಅವನಿಗೆ ತಿಳಿದಿತ್ತು. ಅದಕ್ಕೆ ಬದಲಾಗಿ ಕೊರಿಂಥದವರು ಯೆಹೂದದ ತಮ್ಮ ಸಹೋದರರನ್ನು ಪ್ರೀತಿಸಿದರು ಮತ್ತು ಪರಿಹಾರ ಕಾರ್ಯಕ್ಕಾಗಿ ಹಣಸಹಾಯ ನೀಡಲು ಅಪೇಕ್ಷಿಸಿದ್ದರೆಂಬ ಭರವಸೆ ಅವನಿಗಿತ್ತು. ‘ಈ ಕಾರ್ಯವನ್ನು ಒಂದು ವರುಷದ ಹಿಂದೆ ನಡಿಸುವದಕ್ಕೆ ತೊಡಗುವದರಲ್ಲಿಯೂ ನಡಿಸಬೇಕೆಂದು ಮನಸ್ಸು ಮಾಡುವದರಲ್ಲಿಯೂ ನೀವು ಅವರಿಗಿಂತ ಮೊದಲಿನವರಾಗಿದ್ದೀರಿ,’ ಎಂದು ಅವನು ಅವರಿಗೆ ಹೇಳಿದನು. (2 ಕೊರಿಂಥ 8:10) ಹೌದು, ಪರಿಹಾರ ಕಾರ್ಯದ ಕೆಲವೊಂದು ರೀತಿಗಳಲ್ಲಿ, ಸ್ವತಃ ಕೊರಿಂಥದವರೇ ಆದರ್ಶಪ್ರಾಯರಾಗಿದ್ದರು. “ನಿಮ್ಮ ಮನಸ್ಸು ಸಿದ್ಧವಾಗಿದೆ ಎಂಬದು ನನಗೆ ಗೊತ್ತುಂಟು. . . . ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ” ಎಂದು ಪೌಲನು ಅವರಿಗೆ ಹೇಳಿದನು. ಅವನು ಕೂಡಿಸಿದ್ದು: “ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು.” (2 ಕೊರಿಂಥ 9:2, ಓರೆಅಕ್ಷರಗಳು ನಮ್ಮವು.) ಈಗಲಾದರೊ, ಕೊರಿಂಥದವರು ಪುನಃ ತಮ್ಮ ಆಸಕ್ತಿಯನ್ನು ಮತ್ತು ಸಿದ್ಧಮನಸ್ಸನ್ನು ಕ್ರಿಯೆಯಲ್ಲಿ ತೋರಿಸುವ ಅಗತ್ಯವಿತ್ತು.
ಆದುದರಿಂದ ಪೌಲನು ಅವರಿಗೆ ಹೇಳಿದ್ದು: “ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಎಷ್ಟನ್ನು ನಿರ್ಧರಿಸಿಕೊಂಡಿದ್ದಾನೊ ಅಷ್ಟನ್ನೆ ಕೊಡಬೇಕು. ಯಾವನೂ ದುಃಖದಿಂದ ಕೊಡಬಾರದು. ಅಲ್ಲದೆ ಯಾವನೂ ಒತ್ತಾಯದ ದೆಸೆಯಿಂದ ಕೊಡಬಾರದು. ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.” (2 ಕೊರಿಂಥ 9:7, ಪರಿಶುದ್ಧ ಬೈಬಲ್) ಕೊರಿಂಥದವರ ಮೇಲೆ ಒತ್ತಡ ಹೇರುವುದು ಪೌಲನ ಉದ್ದೇಶವಾಗಿರಲಿಲ್ಲ. ಯಾಕಂದರೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವಾಗ, ಅವನು ಸಂತೋಷದಿಂದ ಕೊಡಸಾಧ್ಯವಿಲ್ಲ. ಪ್ರತಿಯೊಬ್ಬನೂ ಕೊಡಲು, ಈಗಾಗಲೇ ನಿರ್ಧರಿಸಿಕೊಂಡಿದ್ದರಿಂದ, ಯೋಗ್ಯವಾದ ಪ್ರೇರಕ ಶಕ್ತಿಯು ಅವರಲ್ಲಿ ಈಗಾಗಲೇ ಇತ್ತೆಂದು ಪೌಲನು ಭಾವಿಸಿದನೆಂಬುದು ಸುವ್ಯಕ್ತ. ಇದಕ್ಕೆ ಕೂಡಿಸಿ, ಪೌಲನು ಅವರಿಗೆ ಹೇಳಿದ್ದು: “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.” (2 ಕೊರಿಂಥ 8:12) ಹೌದು, ಮನಸ್ಸಿರುವಲ್ಲಿ, ಅಂದರೆ ಒಬ್ಬ ವ್ಯಕ್ತಿಯು ಪ್ರೀತಿಯಿಂದ ಪ್ರಚೋದಿಸಲ್ಪಡುವಲ್ಲಿ, ಅವನು ಕೊಡುವ ಮೊತ್ತವು ಎಷ್ಟೇ ಚಿಕ್ಕದ್ದಾಗಿ ತೋರಲಿ ಅದು ದೇವರಿಗೆ ಸ್ವೀಕಾರಾರ್ಹವಾಗಿರುತ್ತದೆ.—ಲೂಕ 21:1-4ನ್ನು ಹೋಲಿಸಿರಿ.
ಇಂದು ಸಂತೋಷದಿಂದ ಕೊಡುವವರು
ಯೂದಾಯದ ಕ್ರೈಸ್ತರಿಗಾಗಿ ನಡೆಸಲ್ಪಟ್ಟ ಪರಿಹಾರ ಕಾರ್ಯವು, ಇಂದು ನಮ್ಮ ದಿನಕ್ಕಾಗಿ ಒಂದು ಅತ್ಯುತ್ಕೃಷ್ಟ ಮಾದರಿಯನ್ನು ಒದಗಿಸುತ್ತದೆ. ಆತ್ಮಿಕವಾಗಿ ಹಸಿದಿರುವ ಕೋಟಿಗಟ್ಟಲೆ ಜನರಿಗೆ ಪೌಷ್ಠಿಕತೆಯನ್ನು ಕೊಡುತ್ತಾ, ಯೆಹೋವನ ಸಾಕ್ಷಿಗಳು ಒಂದು ಲೋಕವ್ಯಾಪಕ ಸಾರುವ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. (ಯೆಶಾಯ 65:13, 14) ಯೇಸುವಿನ ಈ ಆಜ್ಞೆಗೆ ವಿಧೇಯತೆಯಲ್ಲಿ ಅವರು ಇದನ್ನು ಮಾಡುತ್ತಾರೆ: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.”—ಮತ್ತಾಯ 28:19, 20.
ಈ ಕೆಲಸವನ್ನು ಪೂರೈಸುವುದು ಸುಲಭವಲ್ಲ. ಲೋಕದಾದ್ಯಂತ ಇರುವ ಮಿಷನೆರಿ ಮನೆಗಳು ಮತ್ತು ನೂರಕ್ಕಿಂತಲೂ ಹೆಚ್ಚು ಬ್ರಾಂಚ್ ಕಟ್ಟಡಗಳನ್ನು ದುರಸ್ತಾಗಿಡುವುದನ್ನು ಇದು ಒಳಗೂಡಿಸುತ್ತದೆ. ಯೆಹೋವನ ಆರಾಧಕರಿಗೆ ಜೊತೆಗೂಡಿ ಪರಸ್ಪರರನ್ನು ಉತ್ತೇಜಿಸಲಿಕ್ಕಾಗಿ ಸೂಕ್ತವಾದ ಸ್ಥಳಗಳು ಇರುವಂತೆ, ರಾಜ್ಯ ಸಭಾಗೃಹಗಳು ಮತ್ತು ಎಸೆಂಬ್ಲಿ ಹಾಲ್ಗಳ ಕಟ್ಟುವಿಕೆಯು ಸಹ ಇದರಲ್ಲಿ ಸೇರಿರುತ್ತದೆ. (ಇಬ್ರಿಯ 10:24, 25) ಕೆಲವೊಮ್ಮೆ, ನೈಸರ್ಗಿಕ ವಿಪತ್ತಿನಿಂದ ಧ್ವಂಸಗೊಳಿಸಲ್ಪಟ್ಟಿರುವ ಕ್ಷೇತ್ರಗಳಲ್ಲಿ ಯೆಹೋವನ ಸಾಕ್ಷಿಗಳು ಪರಿಹಾರ ನೆರವನ್ನು ಸಹ ಒದಗಿಸುತ್ತಾರೆ.
ಮುದ್ರಣದ ಅಪರಿಮಿತ ವೆಚ್ಚದ ಕುರಿತಾಗಿಯೂ ಯೋಚಿಸಿರಿ. ಪ್ರತಿ ವಾರ, ಸರಾಸರಿ, ಕಾವಲಿನಬುರುಜು ಪತ್ರಿಕೆಯ 2,20,00,000ಕ್ಕಿಂತಲೂ ಹೆಚ್ಚು ಪ್ರತಿಗಳು ಅಥವಾ ಎಚ್ಚರ! ಪತ್ರಿಕೆಯ ಸುಮಾರು 2,00,00,000 ಪ್ರತಿಗಳು ಮುದ್ರಿಸಲ್ಪಡುತ್ತವೆ. ಆತ್ಮಿಕ ಆಹಾರದ ಈ ಕ್ರಮವಾದ ಸರಬರಾಯಿಗೆ ಕೂಡಿಸಿ, ಪ್ರತಿ ವರ್ಷ ಕೋಟಿಗಟ್ಟಲೆ ಪುಸ್ತಕಗಳು, ಬ್ರೋಷರುಗಳು, ಆಡಿಯೊಕ್ಯಾಸೆಟ್ಟುಗಳು ಮತ್ತು ವಿಡಿಯೊಕ್ಯಾಸೆಟ್ಟುಗಳು ಉತ್ಪಾದಿಸಲ್ಪಡುತ್ತವೆ.
ಈ ಎಲ್ಲ ಕೆಲಸಕ್ಕೆ ಹೇಗೆ ಬೆಂಬಲವು ಸಿಗುತ್ತದೆ? ಸ್ವಯಂಪ್ರೇರಿತ ದಾನಗಳ ಮೂಲಕವೇ. ಈ ದಾನಗಳನ್ನು ತೋರಿಕೆಗಾಗಿ, ಅಥವಾ ಸ್ವಾರ್ಥ ಉದ್ದೇಶದಿಂದಾಗಿ ಅಲ್ಲ ಬದಲಾಗಿ ಸತ್ಯಾರಾಧನೆಯನ್ನು ಮುಂದುವರಿಸಲಿಕ್ಕಾಗಿ ಮಾಡಲಾಗುತ್ತವೆ. ಆದುದರಿಂದ, ಈ ರೀತಿಯಲ್ಲಿ ಕೊಡುವವನಿಗೆ ದೇವರ ಆಶೀರ್ವಾದದ ಜೊತೆಗೆ ಸಂತೋಷವು ಸಿಗುತ್ತದೆ. (ಮಲಾಕಿಯ 3:10; ಮತ್ತಾಯ 6:1-4) ಯೆಹೋವನ ಸಾಕ್ಷಿಗಳ ಮಕ್ಕಳು ಕೂಡ ಉದಾರಭಾವದಿಂದ, ಸಂತೋಷದಿಂದ ಕೊಡುತ್ತಾರೆ. ಉದಾಹರಣೆಗಾಗಿ, ಅಮೆರಿಕದ ಒಂದು ಭಾಗದಲ್ಲಿ ಒಂದು ಚಂಡಮಾರುತದಿಂದಾಗಿ ಉಂಟಾದ ಧ್ವಂಸದ ಕುರಿತಾಗಿ ಕೇಳಿಸಿಕೊಂಡ ಬಳಿಕ, ನಾಲ್ಕು ವರ್ಷ ಪ್ರಾಯದ ಆ್ಯಲಿಸನಳು 2 ಡಾಲರುಗಳನ್ನು ಕಾಣಿಕೆಯಾಗಿ ಕೊಟ್ಟಳು. “ನನ್ನ ಬ್ಯಾಂಕ್ನಲ್ಲಿ ಇರುವುದು ಇಷ್ಟೇ ಹಣ. ಅಲ್ಲಿರುವ ಮಕ್ಕಳು ತಮ್ಮ ಎಲ್ಲ ಆಟಿಕೆಗಳನ್ನು, ಪುಸ್ತಕಗಳನ್ನು ಮತ್ತು ಗೊಂಬೆಗಳನ್ನು ಕಳೆದುಕೊಂಡಿದ್ದಾರೆಂಬುದು ನನಗೆ ಗೊತ್ತು. ನನ್ನ ವಯಸ್ಸಿನ ಒಬ್ಬ ಚಿಕ್ಕ ಹುಡುಗಿಗಾಗಿ ಒಂದು ಪುಸ್ತಕವನ್ನು ಖರೀದಿಸಲು ನೀವು ಈ ಹಣವನ್ನು ಉಪಯೋಗಿಸಬಹುದು” ಎಂದು ಅವಳು ಪತ್ರ ಬರೆದಳು. ನಮ್ಮ ಸಹೋದರರಲ್ಲಿ ಯಾರೂ ಆ ಬಿರುಗಾಳಿಯಿಂದಾಗಿ ಸಾಯದೇ ಇದ್ದುದ್ದಕ್ಕಾಗಿ ತನಗೆ ತುಂಬ ಸಂತೋಷವಾಗಿದೆಯೆಂದು, ಎಂಟು ವರ್ಷ ಪ್ರಾಯದ ಮ್ಯಾಕ್ಲಿನ್ ಬರೆದನು. ಅವನು ಕೂಡಿಸಿದ್ದು: “ನನ್ನ ಅಪ್ಪನೊಂದಿಗೆ, ವಾಹನಚಕ್ರದ ಮಧ್ಯ ಭಾಗದ ಕವಚಗಳನ್ನು ಮಾರುವ ಮೂಲಕ ನಾನು 17 ಡಾಲರುಗಳನ್ನು ಸಂಪಾದಿಸಿದೆ. ಈ ಹಣದಿಂದ ನಾನು ಏನನ್ನೋ ಖರೀದಿಸಬೇಕೆಂದಿದ್ದೆ, ಆದರೆ ಆಗ ನನಗೆ ಈ ಸಹೋದರರ ನೆನಪಾಯಿತು.”—ಮೇಲೆ ಕೊಡಲ್ಪಟ್ಟಿರುವ ರೇಖಾಚೌಕವನ್ನು ಸಹ ನೋಡಿರಿ.
ಆಬಾಲವೃದ್ಧರು ‘ತಮ್ಮ ಆದಾಯದಿಂದ ಯೆಹೋವನನ್ನು ಸನ್ಮಾನಿಸುವ’ ಮೂಲಕ ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡುವುದನ್ನು ನೋಡುವಾಗ ಯೆಹೋವನ ಹೃದಯವು ಹರ್ಷಿಸುತ್ತದೆ. (ಜ್ಞಾನೋಕ್ತಿ 3:9, 10) ನಿಶ್ಚಯವಾಗಿಯೂ ಯಾರೊಬ್ಬರೂ ಯೆಹೋವನನ್ನು ಸಂಪನ್ನಗೊಳಿಸಸಾಧ್ಯವಿಲ್ಲ, ಯಾಕೆಂದರೆ ಸಮಸ್ತವೂ ಆತನಿಗೆ ಸೇರಿದ್ದಾಗಿದೆ. (1 ಪೂರ್ವಕಾಲವೃತ್ತಾಂತ 29:14-17) ಆದರೆ ಆತನ ಕೆಲಸವನ್ನು ಬೆಂಬಲಿಸುವುದು, ಒಬ್ಬ ಆರಾಧಕನು ಯೆಹೋವನಿಗಾಗಿರುವ ತನ್ನ ಪ್ರೀತಿಯನ್ನು ತೋರಿಸಲಿಕ್ಕಾಗಿ ಒಂದು ಅವಕಾಶವನ್ನು ಕೊಡುತ್ತದೆ. ಯಾರ ಹೃದಯವು ಅವರನ್ನು ಆ ರೀತಿಯಲ್ಲಿ ಪ್ರಚೋದಿಸಿದೆಯೊ ಅಂತಹವರೆಲ್ಲರಿಗಾಗಿ ನಾವು ಆಭಾರಿಗಳಾಗಿದ್ದೇವೆ.
[ಪಾದಟಿಪ್ಪಣಿ]
a ಪೌಲನು ‘ಆಜ್ಞೆಗಳನ್ನು ಕೊಟ್ಟರೂ,’ ಅವನು ಇಚ್ಛಾನುಸಾರವಾದ, ಖಡಾಖಂಡಿತವಾದ ಬೇಡಿಕೆಗಳನ್ನು ಮುಂದಿಟ್ಟನೆಂಬುದನ್ನು ಇದು ಅರ್ಥೈಸುವುದಿಲ್ಲ. ಹಲವಾರು ಸಭೆಗಳಿಂದ ಮಾಡಲಾಗುತ್ತಿದ್ದ ಹಣ ಸಂಗ್ರಹವನ್ನು ಪೌಲನು ಕೇವಲ ನೋಡಿಕೊಳ್ಳುತ್ತಿದ್ದನು. ಇದಕ್ಕೆ ಕೂಡಿಸಿ, ಪೌಲನು ಹೇಳಿದ್ದೇನೆಂದರೆ ಪ್ರತಿಯೊಬ್ಬನೂ ‘ತನ್ನ ಮನೆಯಲ್ಲಿ ತನಗೆ ಬಂದ ಸಂಪಾದನೆಯ ಮೇರೆಗೆ’ ಕೊಡಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರತಿಯೊಂದು ಕಾಣಿಕೆಯನ್ನು ಖಾಸಗಿಯಾಗಿ ಮತ್ತು ಸ್ವಯಂಪ್ರೇರಿತರಾಗಿ ನೀಡಬೇಕಾಗಿತ್ತು. ಯಾರನ್ನೂ ಬಲವಂತಪಡಿಸಲಾಗಲಿಲ್ಲ.
[ಪುಟ 26,27ರಲ್ಲಿರುವಚೌ]
ಲೋಕವ್ಯಾಪಕವಾದ ಕೆಲಸಕ್ಕಾಗಿ ಕೆಲವರು ಕಾಣಿಕೆಗಳನ್ನು ಕೊಡುವ ವಿಧಗಳು
ಅನೇಕರು, “ಸೊಸೈಟಿಯ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು—ಮತ್ತಾಯ 24:14” ಎಂಬುದಾಗಿ ಗುರುತುಮಾಡಲ್ಪಟ್ಟ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್ ಮಾಡುತ್ತಾರೆ. ಪ್ರತಿ ತಿಂಗಳು ಸಭೆಗಳು ಈ ಹಣವನ್ನು ಸ್ಥಳಿಕ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ.
ಸ್ವಯಂಪ್ರೇರಿತ ಹಣದ ದಾನಗಳನ್ನು ನೇರವಾಗಿ, ಟ್ರೆಷರರ್ಸ್ ಆಫೀಸ್, Praharidurg Prakashan Society, Plot A/35, Near Industrial Estate, Nangargaon, Lonavla, 410 401, ಇಲ್ಲಿಗೆ ಕಳುಹಿಸಬಹುದು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ಕಾಣಿಕೆಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜೊತೆಗೂಡಿರಬೇಕು.
ಯೋಜಿತ ಕೊಡುಗೆ
ನೇರವಾದ ಹಣದ ಕೊಡುಗೆಗಳು ಮತ್ತು ಹಣದ ಷರತ್ತು ದಾನಗಳಿಗೆ ಕೂಡಿಸಿ, ಲೋಕವ್ಯಾಪಕವಾದ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಕೊಡುವಿಕೆಯ ಇತರ ವಿಧಾನಗಳಿವೆ. ಇವು ಕೆಳಗಿನವುಗಳನ್ನು ಒಳಗೂಡುತ್ತವೆ:
ವಿಮೆ: ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಯನ್ನು ಒಂದು ಜೀವ ವಿಮಾ ಪಾಲಿಸಿ ಅಥವಾ ನಿವೃತ್ತಿ/ಪೆನ್ಷನ್ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.
ಬ್ಯಾಂಕ್ ಖಾತೆಗಳು: ಬ್ಯಾಂಕ್ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳಿಕ ಬ್ಯಾಂಕ್ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಗೆ ಟ್ರಸ್ಟಿನಲ್ಲಿಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣಹೊಂದುವಲ್ಲಿ ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು.
ಸ್ಟಾಕ್ಗಳು ಮತ್ತು ಬಾಂಡ್ಗಳು: ಸ್ಟಾಕ್ಗಳು ಮತ್ತು ಬಾಂಡ್ಗಳನ್ನು ಒಂದು ನೇರವಾದ ಕೊಡುಗೆಯಾಗಿ, ಇಲ್ಲವೇ ಆದಾಯವು ದಾನಿಗೆ ಸಲ್ಲುತ್ತಾ ಇರುವಂತಹ ಒಂದು ಏರ್ಪಾಡಿನ ಕೆಳಗೆ ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಗೆ ದಾನಮಾಡಬಹುದು.
ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ, ಇಲ್ಲವೇ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಗೆ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರ ಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸಬೇಕು.
ಉಯಿಲುಗಳು ಮತ್ತು ಟ್ರಸ್ಟ್ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾಪತ್ರದ ಮೂಲಕ, ಪ್ರಹರಿದುರ್ಗ್ ಪ್ರಕಾಶನ್ ಸೊಸೈಟಿಗೆ ಬಿಟ್ಟುಹೋಗಬಹುದು. ಅಥವಾ ಸೊಸೈಟಿಯನ್ನು ಒಂದು ಟ್ರಸ್ಟ್ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು.
“ಯೋಜಿತ ಕೊಡುವಿಕೆ” ಎಂಬ ಪದಗಳು ಸೂಚಿಸುವಂತೆ, ಈ ವಿಧಗಳ ದಾನಗಳು, ದಾನಿಯು ಸ್ವಲ್ಪ ಯೋಜನೆಯನ್ನು ಮಾಡುವುದನ್ನು ಅವಶ್ಯಪಡಿಸುತ್ತದೆ.
[ಪುಟ 39 ರಲ್ಲಿರುವ ಚೌಕ]
ಮಕ್ಕಳು ಕೂಡ ಹರ್ಷಭರಿತ ದಾತರಾಗಿದ್ದಾರೆ!
ನಮಗೆ ಹೆಚ್ಚೆಚ್ಚು ಪುಸ್ತಕಗಳನ್ನು ತಯಾರುಮಾಡುವಂತೆ ನಾನು ನಿಮಗೆ ಇದನ್ನು ಕೊಡಲು ಬಯಸುತ್ತೇನೆ. ನನ್ನ ಅಪ್ಪನಿಗೆ ಸಹಾಯಮಾಡಿದ್ದರಿಂದ ನನಗೆ ಸಿಕ್ಕಿದ ಹಣವನ್ನು ನಾನು ಕೂಡಿಸಿಟ್ಟಿದ್ದೆ. ನೀವು ಮಾಡುವಂತಹ ಎಲ್ಲ ಕೆಲಸಕ್ಕಾಗಿ ನಿಮಗೆ ತುಂಬ ಉಪಕಾರ.—ಪಮೇಲಾ, ಏಳು ವರ್ಷ.
ಹೆಚ್ಚು ರಾಜ್ಯ ಸಭಾಗೃಹಗಳನ್ನು ಕಟ್ಟಲಿಕ್ಕಾಗಿ ಸಹಾಯಮಾಡಲು ನಾನು ನಿಮಗೆ 6.85 ಡಾಲರುಗಳನ್ನು ಕಳುಹಿಸುತ್ತಿದ್ದೇನೆ. ಈ ಬೇಸಗೆಕಾಲದಲ್ಲಿ ನಾನು ಲೈಮ್ ಜ್ಯೂಸನ್ನು ಮಾರುವ ಮೂಲಕ ಈ ಹಣವನ್ನು ಸಂಪಾದಿಸಿದೆ.—ಸೆಲೇನಾ, ಆರು ವರ್ಷ.
ನಾನು ಒಂದು ಕೋಳಿಯನ್ನು ಸಾಕುತ್ತಿದ್ದೆ ಮತ್ತು ಅದರಿಂದ ನನಗೆ ಒಂದು ಹುಂಜ ಮತ್ತು ಇನ್ನೊಂದು ಕೋಳಿ ಸಿಕ್ಕಿತು. ನಾನು ಆ ಎರಡನೆಯ ಕೋಳಿಯನ್ನು ಯೆಹೋವನಿಗೆ ಮೀಸಲಾಗಿಟ್ಟೆ. ಅದು ಕೊನೆಯಲ್ಲಿ ಮೂರು ಕೋಳಿಮರಿಗಳನ್ನು ಕೊಟ್ಟಿತು, ಮತ್ತು ಅವುಗಳನ್ನು ನಾನು ಮಾರಿಬಿಟ್ಟೆ. ಆ ಹಣವನ್ನು ನಾನು ಯೆಹೋವನ ಕೆಲಸಕ್ಕಾಗಿ ಕಳುಹಿಸುತ್ತಾ ಇದ್ದೇನೆ.—ತೈಯರೀ, ಎಂಟು ವರ್ಷ.
ನನ್ನ ಬಳಿ ಇಷ್ಟೇ ಹಣ ಇದೆ! ದಯವಿಟ್ಟು ಇದನ್ನು ಜಾಗರೂಕತೆಯಿಂದ ಉಪಯೋಗಿಸಿರಿ. ಅದನ್ನು ಉಳಿತಾಯಮಾಡುವುದು ತುಂಬ ಕಷ್ಟಕರವಾಗಿತ್ತು. 21 ಡಾಲರುಗಳನ್ನು ಕಳುಹಿಸುತ್ತಾ ಇದ್ದೇನೆ.—ಸಾರ, ಹತ್ತು ವರ್ಷ.
ಒಂದು ಶಾಲಾ ನೇಮಕದಲ್ಲಿ ನನಗೆ ಪ್ರಥಮ ಬಹುಮಾನ ಸಿಕ್ಕಿದ್ದರಿಂದ, ನಾನು ಪ್ರಾಂತೀಯ ಸ್ಪರ್ಧೆಗೆ ಹೋಗಬೇಕಾಯಿತು. ಅಲ್ಲಿಯೂ ನನಗೆ ಪ್ರಥಮ ಬಹುಮಾನ ಸಿಕ್ಕಿತು ಮತ್ತು ಜಿಲ್ಲಾ ಫೈನಲ್ಸ್ಗಳಲ್ಲಿ ದ್ವಿತೀಯ ಬಹುಮಾನ ಸಿಕ್ಕಿತು. ಈ ಎಲ್ಲ ಬಹುಮಾನಗಳಲ್ಲಿ ನನಗೆ ಹಣ ಸಿಕ್ಕಿತು. ಆ ಹಣದಲ್ಲಿ ಸ್ವಲ್ಪವನ್ನು ನಾನು ಸೊಸೈಟಿಯೊಂದಿಗೆ ಹಂಚಿಕೊಳ್ಳಲು ಬಯಸಿದೆ. ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ನಾನು ಪಡೆದಂತಹ ತರಬೇತಿಯಿಂದಾಗಿ ನಾನು ಈ ಬಹುಮಾನಗಳನ್ನು ಪಡೆಯಲು ಶಕ್ತಳಾದೆ ಎಂದು ನನಗನಿಸುತ್ತದೆ. ತೀರ್ಪುಗಾರರ ಮುಂದೆ ನನ್ನ ವರದಿಯನ್ನು ನಾನು ನಿರಾತಂಕದಿಂದ ಒಪ್ಪಿಸಲು ಶಕ್ತಳಾದೆ.—ಅಂಬರ್, ಆರನೆಯ ತರಗತಿ.
ಯೆಹೋವನಿಗಾಗಿ ನಾನು ಇದನ್ನು ನಿಮಗೆ ಕೊಡಲು ಬಯಸುತ್ತೇನೆ. ಅದರೊಂದಿಗೆ ಏನು ಮಾಡಬೇಕೆಂದು ಆತನನ್ನು ಕೇಳಿರಿ. ಆತನಿಗೆ ಎಲ್ಲವೂ ಗೊತ್ತಿದೆ.—ಕ್ಯಾರೆನ್, ಆರು ವರ್ಷ.
[ಪುಟ 36 ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ಸ್ವಯಂಪ್ರೇರಿತ ದಾನಗಳಿಂದ ಬೆಂಬಲಿಸಲ್ಪಟ್ಟಿವೆ