ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 9/1 ಪು. 13-18
  • ಯೆಹೋವನಲ್ಲಿ ಹರ್ಷಿಸಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಲ್ಲಿ ಹರ್ಷಿಸಿರಿ!
  • ಕಾವಲಿನಬುರುಜು—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹರ್ಷಿಸಿರಿ—ಯಾಕೆ ಮತ್ತು ಹೇಗೆ?
  • ಹರ್ಷಿಸಲಿಕ್ಕಾಗಿ ಅಗಣಿತ ಕಾರಣಗಳು
  • ಸಾರುವಿಕೆ—ಒಂದು ಹೊರೆಯೊ ಅಥವಾ ಒಂದು ಆನಂದವೊ?
  • ಜೊತೆಗೂಡಿ ಹರ್ಷಿಸೋಣ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ರಾಜ್ಯ ನಿರೀಕ್ಷೆಯಲ್ಲಿಉಲ್ಲಾಸವಾಗಿರ್ರಿ!
    ಕಾವಲಿನಬುರುಜು—1992
  • ಹೃದಯದ ಆನಂದದಿಂದ ಯೆಹೋವನನ್ನು ಸೇವಿಸಿರಿ
    ಕಾವಲಿನಬುರುಜು—1995
  • ಯೆಹೋವನ ಆನಂದವು ನಮ್ಮ ಆಶ್ರಯದುರ್ಗವಾಗಿದೆ
    ಕಾವಲಿನಬುರುಜು—1995
ಇನ್ನಷ್ಟು
ಕಾವಲಿನಬುರುಜು—1994
w94 9/1 ಪು. 13-18

ಯೆಹೋವನಲ್ಲಿ ಹರ್ಷಿಸಿರಿ!

“ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ; ಹರ್ಷಿಸಿರಿ ಎಂದು ತಿರಿಗಿ ಹೇಳುತ್ತೇನೆ!”—ಫಿಲಿಪ್ಪಿ 4:4, NW.

1. ಕ್ರೈಸ್ತರು ಯಾವಾಗಲೂ ಹರ್ಷಿಸಬೇಕು ಎಂಬುದಾಗಿ ಪೌಲನು ಹೇಳಿದಾಗ ಅವನು ಏನನ್ನು ಅರ್ಥೈಸಿದನು ಎಂಬುದರ ಕುರಿತು ನಾವು ಏಕೆ ಕುತೂಹಲಗೊಳ್ಳಬಹುದು?

ಈಗಿನ ಕಾಲದಲ್ಲಿ, ಹರ್ಷಿಸಲಿಕ್ಕಾಗಿರುವ ಕಾರಣಗಳು ಕೊಂಚವಾಗಿಯೂ ಅತಿ ವಿರಳವಾಗಿಯೂ ತೋರಬಹುದು. ಮಣ್ಣಿನ ಮನುಷ್ಯರು, ಯಥಾರ್ಥ ಕ್ರೈಸ್ತರು ಸಹ, ದುಃಖವನ್ನುಂಟುಮಾಡುವ ಸನ್ನಿವೇಶಗಳನ್ನು—ನಿರುದ್ಯೋಗ, ಅನಾರೋಗ್ಯ, ಪ್ರಿಯರ ಮರಣ, ವ್ಯಕ್ತಿತ್ವದ ಸಮಸ್ಯೆಗಳು, ಅಥವಾ ಅವಿಶ್ವಾಸಿ ಕುಟುಂಬ ಸದಸ್ಯರಿಂದ ಯಾ ಹಿಂದಿನ ಸ್ನೇಹಿತರಿಂದ ವಿರೋಧ—ಎದುರಿಸುತ್ತಾರೆ. ಆದುದರಿಂದ “ಯಾವಾಗಲೂ . . . ಹರ್ಷಿಸಿರಿ” ಎಂಬ ಪೌಲನ ಬುದ್ಧಿವಾದವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ನಾವೆಲ್ಲರೂ ಹೋರಾಡಬೇಕಾದ ಅಹಿತಕರವಾದ ಹಾಗೂ ಕಷ್ಟಕರವಾದ ಪರಿಸ್ಥಿತಿಗಳ ನೋಟದಲ್ಲಿ, ಇದು ಸಾಧ್ಯವೊ? ಈ ಮಾತುಗಳ ಪೂರ್ವಾಪರ ಸಂದರ್ಭಗಳ ಒಂದು ಚರ್ಚೆಯು ವಿಷಯವನ್ನು ಸೃಷ್ಟಗೊಳಿಸಲು ಸಹಾಯ ಮಾಡುವುದು.

ಹರ್ಷಿಸಿರಿ—ಯಾಕೆ ಮತ್ತು ಹೇಗೆ?

2, 3. ಯೇಸು ಮತ್ತು ಪ್ರಾಚೀನ ಇಸ್ರಾಯೇಲ್ಯರ ವಿದ್ಯಮಾನಗಳಲ್ಲಿ ದೃಷ್ಟಾಂತಿಸಲಾದಂತೆ, ಆನಂದದ ಮಹತ್ವವೇನಾಗಿದೆ?

2 “ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ; ಹರ್ಷಿಸಿರಿ ಎಂದು ತಿರಿಗಿ ಹೇಳುತ್ತೇನೆ!” ಇದು ಸುಮಾರು 24 ಶತಮಾನಗಳ ಹಿಂದೆ ಇಸ್ರಾಯೇಲ್ಯರಿಗೆ ನಿರ್ದೇಶಿಸಲಾದ ಮಾತುಗಳನ್ನು ನಮಗೆ ಜ್ಞಾಪಿಸಬಹುದು: “ಯೆಹೋವನ ಆನಂದವೇ ನಿಮ್ಮ ಆಶ್ರಯವಾಗಿದೆ,” ಅಥವಾ ಮೊಫೆಟ್‌ ಭಾಷಾಂತರದ ಅನುಸಾರ: “ಅನಂತನಲ್ಲಿ ಹರ್ಷಿಸುವುದು ನಿಮ್ಮ ಬಲವಾಗಿದೆ.” (ನೆಹೆಮೀಯ 8:10) ಆನಂದವು ಬಲವನ್ನು ಒದಗಿಸುತ್ತದೆ ಮತ್ತು ಸಾಂತ್ವನ ಹಾಗೂ ರಕ್ಷಣೆಗಾಗಿ ಒಬ್ಬನು ಹೋಗಿ ಸೇರಬಲ್ಲ ಆಶ್ರಯದಂತಿದೆ. ತಾಳಿಕೊಳ್ಳುವಂತೆ ಪರಿಪೂರ್ಣ ಮನುಷ್ಯನಾದ ಯೇಸುವಿಗೆ ಸಹ ಸಹಾಯಮಾಡುವುದರಲ್ಲಿ ಆನಂದವು ಸಾಧಕವಾಗಿತ್ತು. “ಅವನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿಯ 12:2) ಕಷ್ಟಗಳ ಎದುರಿನಲ್ಲಿ ಹರ್ಷಿಸಲು ಶಕ್ತರಾಗಿರುವುದು ರಕ್ಷಣೆಗಾಗಿ ಪ್ರಾಮುಖ್ಯವಾಗಿದೆ ಎಂಬುದು ಸ್ಪಷ್ಟ.

3 ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ, ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಲಾಗಿತ್ತು: “ಆತನು ನಿಮಗೂ ನಿಮ್ಮ ಮನೆಯವರಿಗೂ ಉಂಟುಮಾಡಿದ ಎಲ್ಲಾ ಸುಖಸಂತೋಷಗಳಿಗಾಗಿ ನೀವೂ ಲೇವಿಯರೂ ನಿಮ್ಮ ಮಧ್ಯದಲ್ಲಿರುವ ಪರದೇಶಿಗಳೂ ಸಂಭ್ರಮದಿಂದಿರಬೇಕು.” ಯೆಹೋವನನ್ನು ಹರ್ಷದಿಂದ ಸೇವಿಸಲು ತಪ್ಪುವುದರ ಪರಿಣಾಮಗಳು ವಿಪರೀತವಾಗಿರಲಿದ್ದವು. “ನಿಮಗೆ ಸರ್ವಸಮೃದ್ಧಯುಂಟಾದ ಕಾಲದಲ್ಲಿಯೂ ನೀವು ನಿಮ್ಮ ದೇವರಾದ ಯೆಹೋವನನ್ನು ಹರ್ಷಾನಂದಗಳುಳ್ಳವರಾಗಿ ಸೇವಿಸದೆ ಹೋದದರಿಂದ ಈ ಎಲ್ಲಾ ಅಶುಭಗಳು ನಿಮಗೆ ಪ್ರಾಪ್ತವಾಗಿ ನಿಮ್ಮನ್ನು ಹಿಂದಟ್ಟಿ ಹಿಡಿದು ಕಡೆಗೆ ನಾಶಮಾಡುವವು.”—ಧರ್ಮೋಪದೇಶಕಾಂಡ 26:11; 28:45-47, NW.

4. ನಾವು ಹರ್ಷಿಸಲು ಏಕೆ ತಪ್ಪಬಹುದು?

4 ಆದುದರಿಂದ, ಇಂದಿನ ಅಭಿಷಿಕ್ತ ಉಳಿಕೆಯವರು ಮತ್ತು ಅವರ “ಬೇರೆ ಕುರಿ” ಸಂಗಾತಿಗಳು ಹರ್ಷಿಸುವಂಥದ್ದು ಅತ್ಯಗತ್ಯವಾಗಿದೆ! (ಯೋಹಾನ 10:16) “ತಿರಿಗಿ ಹೇಳುತ್ತೇನೆ” ಎಂದು ತನ್ನ ಸಲಹೆಯನ್ನು ಪುನರಾವೃತ್ತಿಸುವ ಮೂಲಕ ಪೌಲನು, ಯೆಹೋವನು ನಮಗಾಗಿ ಮಾಡಿರುವ ಎಲ್ಲಾ ಒಳಿತಿಗಾಗಿ ಹರ್ಷಿಸುವುದರ ಮಹತ್ವವನ್ನು ಒತ್ತಿಹೇಳಿದನು. ನಾವು ಹಾಗೆ ಮಾಡುತ್ತೇವೊ? ಅಥವಾ ಹರ್ಷಿಸಲಿಕ್ಕಾಗಿರುವ ನಮ್ಮ ಅನೇಕ ಕಾರಣಗಳನ್ನು ಕೆಲವೊಮ್ಮೆ ಮರೆಯುವಷ್ಟರ ತನಕ ನಾವು ಜೀವಿತದ ಪ್ರತಿದಿನದ ದಿನಚರಿಯಲ್ಲಿ ಒಳಗೊಳ್ಳುತ್ತೇವೊ? ರಾಜ್ಯ ಮತ್ತು ಅದರ ಆಶೀರ್ವಾದಗಳ ನಮ್ಮ ನೋಟವನ್ನು ಅಡಮ್ಡಾಡುವಷ್ಟು ಎತ್ತರವಾಗಿ ಸಮಸ್ಯೆಗಳು ರಾಶಿಗೂಡುತ್ತವೊ? ಇತರ ವಿಷಯಗಳು—ದೇವರ ನಿಯಮಗಳಿಗೆ ಅವಿಧೇಯರಾಗುವುದು, ದೈವಿಕ ತತ್ವಗಳನ್ನು ಕಡೆಗಣಿಸುವುದು, ಯಾ ಕ್ರೈಸ್ತ ಕರ್ತವ್ಯಗಳನ್ನು ಅಲಕ್ಷಿಸುವುದು—ನಮ್ಮ ಆನಂದದಿಂದ ನಮ್ಮನ್ನು ವಂಚಿತರನ್ನಾಗಿ ಮಾಡುವಂತೆ ನಾವು ಅನುಮತಿಸುತ್ತೇವೊ?

5. ಒಬ್ಬ ವಿವೇಚನೆರಹಿತ ವ್ಯಕ್ತಿಯು ಹರ್ಷಿಸುವುದನ್ನು ಏಕೆ ಕಷ್ಟಕರವಾಗಿ ಕಾಣುತ್ತಾನೆ?

5 “ನಿಮ್ಮ ವಿವೇಚನಾ ಶಕ್ತಿಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ.” (ಫಿಲಿಪ್ಪಿ 4:5, NW) ವಿವೇಚನೆರಹಿತ ವ್ಯಕ್ತಿಯೊಬ್ಬನಲ್ಲಿ ಸಮತೂಕದ ಅಭಾವವಿರುತ್ತದೆ. ತನ್ನ ದೇಹವನ್ನು ಅನುಚಿತವಾದ ಒತ್ತಡ ಯಾ ಚಿಂತೆಗೆ ಅನಾವಶ್ಯವಾಗಿ ಒಳಪಡಿಸುತ್ತಾ, ತನ್ನ ಆರೋಗ್ಯಕ್ಕಾಗಿ ಸರಿಯಾಗಿ ಕಾಳಜಿವಹಿಸಲು ಅವನು ತಪ್ಪಬಹುದು. ಬಹುಶಃ ಅವನು ತನ್ನ ಮಿತಿಗಳನ್ನು ಸ್ವೀಕರಿಸಲು ಮತ್ತು ಅದಕ್ಕನುಸಾರವಾಗಿ ಜೀವಿಸಲು ಕಲಿತಿಲ್ಲ. ಅವನು ತನ್ನ ಗುರಿಗಳನ್ನು ಬಹಳ ಉನ್ನತವಾಗಿ ಸ್ಥಾಪಿಸಿ, ಆಮೇಲೆ ಅವುಗಳನ್ನು ಯಾವ ಬೆಲೆಯನ್ನು ತೆತ್ತಾದರೂ ತಲಪಲು ಪ್ರಯತ್ನಿಸಬಹುದು. ಅಥವಾ ನಿಧಾನಿಸಲು ಯಾ ಕಡಿಮೆ ಶ್ರಮಶೀಲನಾಗಲು ತನ್ನ ಮಿತಿಗಳನ್ನು ಒಂದು ನೆವದಂತೆ ಅವನು ಉಪಯೋಗಿಸಬಹುದು. ಸಮತೂಕದ ಕೊರತೆಯಿಂದ ಮತ್ತು ವಿವೇಚನೆರಹಿತನಾಗಿರುವ ಕಾರಣ, ಹರ್ಷಿಸುವುದನ್ನು ಅವನು ಕಷ್ಟಕರವಾಗಿ ಕಾಣುವನು.

6. (ಎ) ಜೊತೆ ಕ್ರೈಸ್ತರು ನಮ್ಮಲ್ಲಿ ಏನನ್ನು ನೋಡಬೇಕು, ಮತ್ತು ವಿಷಯವು ಹೀಗೆ ಯಾವಾಗ ಮಾತ್ರ ಇರುವುದು? (ಬಿ) ಎರಡನೆಯ ಕೊರಿಂಥ 1:24 ಮತ್ತು ರೋಮಾಪುರ 14:4 ರಲ್ಲಿರುವ ಪೌಲನ ಮಾತುಗಳು ನಮ್ಮನ್ನು ವಿವೇಚನೆಯುಳ್ಳವರಾಗಿರುವಂತೆ ಹೇಗೆ ಸಹಾಯಿಸುತ್ತವೆ?

6 ವಿರೋಧಿಗಳು ನಮ್ಮನ್ನು ಮತಭ್ರಾಂತರಂತೆ ವೀಕ್ಷಿಸಿದರೂ, ಜೊತೆಕ್ರೈಸ್ತರು ನಮ್ಮ ವಿವೇಚನಾ ಶಕ್ತಿಯನ್ನು ನೋಡಶಕ್ತರಾಗಿರಬೇಕು. ನಾವು ಸಮತೂಕವುಳ್ಳವರಾಗಿದ್ದು, ಸ್ವತಃ ನಮ್ಮಿಂದ ಯಾ ಇತರರಿಂದ ಪರಿಪೂರ್ಣತೆಯನ್ನು ಅಪೇಕ್ಷಿಸದಿದ್ದರೆ, ಅವರು ನಮ್ಮನ್ನು ವಿವೇಚನಾ ಶಕ್ತಿಯ ಮಾದರಿಗಳಂತೆ ನೋಡುವರು. ಎಲ್ಲಕ್ಕಿಂತ ಹೆಚ್ಚಾಗಿ, ದೇವರ ವಾಕ್ಯವು ಕೇಳಿಕೊಳ್ಳುವುದಕ್ಕಿಂತ ಮಿತಿಮೀರಿ ಹೋಗುವ ಹೊರೆಗಳನ್ನು ಇತರರ ಮೇಲೆ ಹೇರುವುದರಿಂದ ನಾವು ತಡೆಯಬೇಕು. ಅಪೊಸ್ತಲ ಪೌಲನು ಹೇಳಿದ್ದು: “ನಾವು ನಂಬಿಕೆಯ ವಿಷಯದಲ್ಲಿ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ.” (2 ಕೊರಿಂಥ 1:24) ಹಿಂದಿನ ಫರಿಸಾಯನೋಪಾದಿ, ಅಧಿಕಾರದಲ್ಲಿರುವವರ ಮೂಲಕ ಸ್ಥಾಪಿಸಲ್ಪಡುವ ಮತ್ತು ಹೇರಲ್ಪಡುವ ಅನಮ್ಯ ನಿಯಮಗಳು ಆನಂದವನ್ನು ಅದುಮುತ್ತವೆ ಎಂದು, ಆದರೆ ಜೊತೆಕೆಲಸಗಾರರ ಮೂಲಕ ನೀಡಲ್ಪಡುವ ಸಹಾಯಕಾರಿ ಸಲಹೆಗಳು ಅದನ್ನು ಹೆಚ್ಚಿಸುತ್ತದೆ ಎಂದು ಪೌಲನು ಚೆನ್ನಾಗಿ ಬಲ್ಲವನಾಗಿದ್ದನು. “ಕರ್ತನು ಹತ್ತಿರವಾಗಿದ್ದಾನೆ” ಎಂಬ ನಿಜತ್ವವು, ನಾವು ‘ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡಬಾರದೆಂದು, ಅವನು ನಿರ್ದೋಷಿಯಾಗಿ ನಿಂತರೂ ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು,’ ಎಂದು ವಿವೇಚನೆಯುಳ್ಳ ವ್ಯಕ್ತಿಗೆ ಜ್ಞಾಪಕಹುಟ್ಟಿಸಬೇಕು.—ರೋಮಾಪುರ 14:4.

7, 8. ತಮಗೆ ಸಮಸ್ಯೆಗಳು ಇರುವುದನ್ನು ಕ್ರೈಸ್ತರು ಯಾಕೆ ನಿರೀಕ್ಷಿಸಬೇಕು, ಆದರೂ ಹರ್ಷಿಸುತ್ತಾ ಇರುವುದು ಅವರಿಗೆ ಹೇಗೆ ಸಾಧ್ಯವಿದೆ?

7 “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ.” (ಫಿಲಿಪ್ಪಿ 4:6) ಪೌಲನು ಬರೆದಂತಹ “ನಿಭಾಯಿಸಲು ಕಠಿನವಾದ ಸಮಯಗಳನ್ನು” ನಾವು ಇಂದು ಅನುಭವಿಸುತ್ತಾ ಇದ್ದೇವೆ. (2 ತಿಮೊಥೆಯ 3:1-5, NW) ಆದುದರಿಂದ ಕ್ರೈಸ್ತರು ಸಮಸ್ಯೆಗಳಿಂದ ಎದುರಾಗುವುದನ್ನು ನಿರೀಕ್ಷಿಸಬೇಕು. ಒಬ್ಬ ನಿಷ್ಠಾವಂತ ಕ್ರೈಸ್ತನಿಗೆ ಆಗಾಗ ನಿರಾಶೆಯ ಯಾ ನಿರುತ್ಸಾಹದ ಸರದಿಗಳು ಇರಬಹುದಾದ ಸಾಧ್ಯತೆಯನ್ನು “ಯಾವಾಗಲೂ . . . ಹರ್ಷಿಸಿರಿ” ಎಂಬ ಪೌಲನ ಮಾತುಗಳು ತಳ್ಳಿಹಾಕುವುದಿಲ್ಲ. ಪೌಲನ ಸ್ವಂತ ವಿಷಯದಲ್ಲಿ ಅವನು ವಾಸ್ತವಿಕವಾಗಿ ಒಪ್ಪಿಕೊಂಡದ್ದು: “ಸರ್ವ ವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟಪಡುವವರಲ್ಲ; ನಾವು ದಿಕ್ಕುಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ; ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ.” (2 ಕೊರಿಂಥ 4:8, 9) ಹಾಗಿದ್ದರೂ, ಒಬ್ಬ ಕ್ರೈಸ್ತನ ಆನಂದವು, ಚಿಂತೆ ಮತ್ತು ದುಃಖದ ತಾತ್ಕಾಲಿಕ ಅವಧಿಗಳನ್ನು ತಗ್ಗಿಸುತ್ತದೆ ಮತ್ತು ಕಟ್ಟಕಡೆಗೆ ರದ್ದುಪಡಿಸುತ್ತದೆ. ಹರ್ಷಿಸಲಿಕ್ಕಾಗಿರುವ ಅನೇಕ ಕಾರಣಗಳನ್ನು ಎಂದಿಗೂ ಮರೆತುಬಿಡದೆ, ಮುನ್ನಡೆಯುತ್ತಾ ಇರಲು ಬೇಕಾದ ಬಲವನ್ನು ಅದು ನೀಡುತ್ತದೆ.

8 ಸಮಸ್ಯೆಗಳು ಏಳುವಾಗ, ಅವುಗಳ ಸ್ವರೂಪ ಏನೇ ಆಗಿರಲಿ, ಆನಂದಭರಿತ ಕ್ರೈಸ್ತನು ಪ್ರಾರ್ಥನೆಯ ಮೂಲಕ ಯೆಹೋವನ ಸಹಾಯಕ್ಕಾಗಿ ವಿನೀತನಾಗಿ ಬೇಡುತ್ತಾನೆ. ವಿಪರೀತ ಚಿಂತೆಗೆ ಅವನು ತನ್ನನ್ನು ಬಿಟ್ಟುಕೊಡುವುದಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಸ್ವತಃ ಅವನೇ ಯುಕ್ತವಾಗಿ ಮಾಡಬಲ್ಲದನ್ನು ಮಾಡಿಯಾದ ತರುವಾಯ, ಈ ಆಮಂತ್ರಣದೊಂದಿಗೆ ಹೊಂದಾಣಿಕೆಯಲ್ಲಿ ಫಲಿತಾಂಶವನ್ನು ಅವನು ಯೆಹೋವನ ಕೈಗಳಲ್ಲಿ ಬಿಡುತ್ತಾನೆ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.” ಈ ನಡುವೆ, ಕ್ರೈಸ್ತನು ಯೆಹೋವನಿಗೆ ಆತನ ಎಲ್ಲ ಒಳ್ಳೆಯತನಕ್ಕಾಗಿ ಉಪಕಾರ ಸಲ್ಲಿಸಲು ಮುಂದುವರಿಯುತ್ತಾನೆ.—ಕೀರ್ತನೆ 55:22; ಮತ್ತಾಯ 6:25-34 ಸಹ ನೋಡಿರಿ.

9. ಸತ್ಯದ ಜ್ಞಾನವು ಮನಃಶಾಂತಿಯನ್ನು ಹೇಗೆ ನೀಡುತ್ತದೆ, ಮತ್ತು ಒಬ್ಬ ಕ್ರೈಸ್ತನ ಮೇಲೆ ಇದು ಯಾವ ಒಳ್ಳೆಯ ಪರಿಣಾಮವನ್ನು ಹೊಂದಿದೆ?

9 “ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:7) ಬೈಬಲ್‌ ಸತ್ಯದ ಜ್ಞಾನವು ಕ್ರೈಸ್ತನ ಮನಸ್ಸನ್ನು ಸುಳ್ಳಿನಿಂದ ಬಿಡುಗಡೆಗೊಳಿಸುತ್ತದೆ ಮತ್ತು ಆರೋಗ್ಯಕರ ಯೋಚನಾ ನಮೂನೆಗಳನ್ನು ವಿಕಸಿಸಲು ಅವನಿಗೆ ಸಹಾಯಮಾಡುತ್ತದೆ. (2 ತಿಮೊಥೆಯ 1:13) ಹೀಗೆ ಅವನು ಇತರರೊಂದಿಗೆ ಶಾಂತಿಭರಿತ ಸಂಬಂಧಗಳನ್ನು ಅಪಾಯಕ್ಕೆ ಸಿಕ್ಕಿಸಬಹುದಾದ ತಪ್ಪಾದ ಯಾ ಬುದ್ಧಿಹೀನ ವರ್ತನೆಯನ್ನು ತೊರೆಯುವಂತೆ ಸಹಾಯಿಸಲ್ಪಡುತ್ತಾನೆ. ಅನ್ಯಾಯ ಮತ್ತು ದುಷ್ಟತನದಿಂದ ಆಶಾಭಂಗಗೊಳ್ಳುವ ಬದಲಿಗೆ, ರಾಜ್ಯದ ಮುಖಾಂತರ ಮಾನವಜಾತಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಯೆಹೋವನಲ್ಲಿ ಅವನು ಭರವಸೆಯನ್ನು ಇಡುತ್ತಾನೆ. ಇಂತಹ ಮನಃಶಾಂತಿಯು ಅವನ ಹೃದಯವನ್ನು ರಕ್ಷಿಸುತ್ತದೆ, ಅವನ ಉದ್ದೇಶಗಳನ್ನು ಶುದ್ಧವಾಗಿಡುತ್ತದೆ, ಮತ್ತು ಅವನ ಆಲೋಚನೆಯನ್ನು ನೀತಿಯ ಮಾರ್ಗದಲ್ಲಿ ಮಾರ್ಗದರ್ಶಿಸುತ್ತದೆ. ಶುದ್ಧವಾದ ಉದ್ದೇಶಗಳು ಮತ್ತು ಸರಿಯಾದ ಆಲೋಚನೆಯು, ಸರದಿಯಾಗಿ, ಒಂದು ಅವ್ಯವಸ್ಥಿತ ಲೋಕದ ಮೂಲಕ ತರಲ್ಪಡುವ ಸಮಸ್ಯೆಗಳ ಮತ್ತು ಒತ್ತಡಗಳ ಹೊರತೂ ಹರ್ಷಿಸಲಿಕ್ಕಾಗಿ ಅಸಂಖ್ಯಾತ ಕಾರಣಗಳನ್ನು ಒದಗಿಸುತ್ತದೆ.

10. ಯಾವುದರ ಕುರಿತು ಮಾತಾಡುವ ಯಾ ಯೋಚಿಸುವ ಮೂಲಕ ಮಾತ್ರ ನಿಜ ಆನಂದವು ಅನುಭವಿಸಲ್ಪಡಸಾಧ್ಯವಿದೆ?

10 “ಕೊನೆಯದಾಗಿ, ಸಹೋದರರೇ, ಯಾವಾವ ವಿಷಯಗಳು ಸತ್ಯವೋ, ಯಾವಾವ ವಿಷಯಗಳು ಗಂಭೀರ ಚಿಂತೆಯವುಗಳೋ, ಯಾವಾವ ವಿಷಯಗಳು ನೀತಿಬದ್ಧವೋ, ಯಾವಾವ ವಿಷಯಗಳು ಪರಿಶುದ್ಧವೋ, ಯಾವಾವ ವಿಷಯಗಳು ಪ್ರೀತಿಯೋಗ್ಯವೋ, ಯಾವಾವ ವಿಷಯಗಳು ಹಿತೋಕ್ತಿಪಾತ್ರವೋ; ಇರುವ ಯಾವುದೇ ಸದ್ಗುಣವನ್ನು ಮತ್ತು ಇರುವ ಯಾವುದೇ ಪ್ರಶಂಸಾರ್ಹವಾದ ವಿಷಯವನ್ನು—ಈ ವಿಷಯಗಳನ್ನು ಪರಿಗಣಿಸುತ್ತಾ ಹೋಗಿರಿ.” (ಫಿಲಿಪ್ಪಿ 4:8, NW) ಕೆಟ್ಟ ವಿಷಯಗಳ ಕುರಿತು ಮಾತಾಡುವುದರಲ್ಲಿ ಯಾ ಯೋಚಿಸುವುದರಲ್ಲಿ ಒಬ್ಬ ಕ್ರೈಸ್ತನು ಯಾವ ಸಂತೋಷವನ್ನೂ ಕಾಣುವುದಿಲ್ಲ. ಇದು ಲೋಕವು ಸರಬರಾಯಿ ಮಾಡುವ ಮನೋರಂಜನೆಯಲ್ಲಿ ಹೆಚ್ಚನ್ನು ತಾನಾಗಿಯೇ ತಳ್ಳಿಹಾಕುತ್ತದೆ. ತನ್ನ ಮನಸ್ಸು ಮತ್ತು ಹೃದಯವನ್ನು ಸುಳ್ಳು, ಹುಚ್ಚು ತಮಾಷೆ, ಮತ್ತು ಅನೀತಿಯುಳ್ಳ, ಅನೈತಿಕ, ಸದ್ಗುಣವಿಲ್ಲದ, ದ್ವೇಷದಿಂದ ತುಂಬಿರುವ, ಮತ್ತು ಅಸಹ್ಯಕರವಾದ ವಿಷಯಗಳಿಂದ ಅವನು ತುಂಬುವುದಾದರೆ, ಯಾರೊಬ್ಬನೂ ಕ್ರಿಸ್ತೀಯ ಆನಂದವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸ್ಪಷ್ಟವಾಗಿಗಿ ಹೇಳುವುದಾದರೆ, ತನ್ನ ಮನಸ್ಸು ಮತ್ತು ಹೃದಯವನ್ನು ಹೊಲಸಿನಿಂದ ತುಂಬುವ ಮೂಲಕ ಯಾರೂ ನಿಜ ಆನಂದವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಸೈತಾನನ ಭ್ರಷ್ಟ ಲೋಕದಲ್ಲಿ, ಕ್ರೈಸ್ತರಿಗೆ ಯೋಚಿಸಲು ಮತ್ತು ಚರ್ಚಿಸಲು ಎಷ್ಟೊಂದು ಒಳ್ಳೆಯ ವಿಷಯಗಳು ಇವೆ ಎಂಬುದನ್ನು ಅರಿಯುವುದು ಎಷ್ಟು ಭಕ್ತಿವೃದ್ಧಿಯನ್ನುಂಟುಮಾಡುವಂಥದ್ದಾಗಿದೆ!

ಹರ್ಷಿಸಲಿಕ್ಕಾಗಿ ಅಗಣಿತ ಕಾರಣಗಳು

11. (ಎ) ಯಾವ ವಿಷಯವನ್ನು ಎಂದಿಗೂ ಲಘುವಾಗಿ ಭಾವಿಸಬಾರದು, ಮತ್ತು ಏಕೆ? (ಬಿ) ಅಂತಾರಾಷ್ಟ್ರೀಯ ಅಧಿವೇಶನವೊಂದರ ಹಾಜರಿಯು ಒಬ್ಬ ಪ್ರತಿನಿಧಿ ಮತ್ತು ಅವನ ಹೆಂಡತಿಯ ಮೇಲೆ ಯಾವ ಪರಿಣಾಮವನ್ನು ಬೀರಿತ್ತು?

11 ಹರ್ಷಿಸಲಿಕ್ಕಾಗಿರುವ ಕಾರಣಗಳ ಕುರಿತು ಮಾತಾಡುವಾಗ, ನಾವು ನಮ್ಮ ಅಂತಾರಾಷ್ಟ್ರೀಯ ಸಹೋದರತ್ವವನ್ನು ಮರೆಯದಿರೋಣ. (1 ಪೇತ್ರ 2:17) ಲೌಕಿಕ ರಾಷ್ಟ್ರೀಯ ಮತ್ತು ಕುಲಸಂಬಂಧವಾದ ಗುಂಪುಗಳು ಒಬ್ಬರು ಇನ್ನೊಬ್ಬರಿಗಾಗಿ ತೀವ್ರವಾದ ದ್ವೇಷವನ್ನು ವ್ಯಕ್ತಪಡಿಸುವಾಗ, ದೇವರ ಜನರು ಪ್ರೀತಿಯಲ್ಲಿ ಒಟ್ಟಿಗೆ ಹತ್ತಿರಕ್ಕೆ ಸೆಳೆಯಲ್ಪಡುತ್ತಾರೆ. ಅವರ ಐಕ್ಯವು ವಿಶೇಷವಾಗಿ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಪ್ರತ್ಯಕ್ಷವಾಗಿದೆ. ಯುಕ್ರೇನ್‌ನ ಕೀಯೆವ್‌ನಲ್ಲಿ 1993 ರಲ್ಲಿ ನಡೆಸಲಾದ ಅಧಿವೇಶನದಲ್ಲಿ, ಅಮೆರಿಕದಿಂದ ಬಂದ ಒಬ್ಬ ಪ್ರತಿನಿಧಿಯು ಬರೆದದ್ದು: “ಆ ಆನಂದದಾಯಕ ಕಂಬನಿಯು, ಹೊಳೆಯುವ ಕಂಗಳು, ಕುಟುಂಬದಂತಹ ಅಪ್ಪುಗೆಗಳ ಸತತವಾದ ಹರಿವು, ಸ್ಟೇಡಿಯಂನ ಉದ್ದಕ್ಕೂ ವರ್ಣರಂಜಿತ ಕೊಡೆಗಳನ್ನು ಮತ್ತು ಕರವಸ್ತ್ರಗಳನ್ನು ಬೀಸುವ ಗುಂಪುಗಳ ಮೂಲಕ ಕಳುಹಿಸಲಾದ ಅಭಿವಂದನೆಗಳು, ಸ್ಪಷ್ಟವಾಗಿಗಿ ದೇವಪ್ರಭುತ್ವ ಐಕ್ಯದ ಕುರಿತು ಮಾತಾಡಿದವು. ಲೋಕವ್ಯಾಪಕ ಸಹೋದರತ್ವದಲ್ಲಿ ಯೆಹೋವನು ಏನನ್ನು ಅದ್ಭುತಕರವಾಗಿ ಸಾಧಿಸಿರುವನೊ ಅದಕ್ಕಾಗಿ ನಮ್ಮ ಹೃದಯಗಳು ಅಭಿಮಾನದಿಂದ ತುಂಬುತ್ತವೆ. ಇದು ನನ್ನ ಹೆಂಡತಿಯನ್ನು ಮತ್ತು ನನ್ನನ್ನು ಆಳವಾಗಿ ಸ್ಪರ್ಶಿಸಿದೆ ಮತ್ತು ನಮ್ಮ ನಂಬಿಕೆಗೆ ಹೊಸ ಅರ್ಥವನ್ನು ಕೂಡಿಸಿದೆ.”

12. ಯೆಶಾಯ 60:22 ಹೇಗೆ ನಮ್ಮ ಕಣ್ಣುಗಳ ಮುಂದೆಯೇ ನೆರವೇರುತ್ತಿದೆ?

12 ಇಂದು ಕ್ರೈಸ್ತರಿಗೆ ತಮ್ಮ ಕಣ್ಣುಗಳ ಮುಂದೆಯೇ ಬೈಬಲ್‌ ಪ್ರವಾದನೆಗಳು ನೆರವೇರುವುದನ್ನು ನೋಡುವುದು ನಂಬಿಕೆಯನ್ನು ಎಷ್ಟೊಂದು ಬಲಪಡಿಸುವಂಥದ್ದಾಗಿದೆ! ಉದಾಹರಣೆಗೆ, ಯೆಶಾಯ 60:22ರ ಮಾತುಗಳನ್ನು ಪರಿಗಣಿಸಿರಿ: “ಚಿಕ್ಕವನಿಂದ ಒಂದು ಕುಲ (ಸಾವಿರ, NW) ವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” ಇಸವಿ 1914 ರಲ್ಲಿ, ರಾಜ್ಯದ ಜನನದ ಸಮಯದಲ್ಲಿ, 5,100 ಮಂದಿ ಮಾತ್ರ—ಚಿಕ್ಕವನು—ಸಕ್ರಿಯವಾಗಿ ಸಾರುತ್ತಿದ್ದರು. ಆದರೆ ಕಳೆದ ಐದು ವರ್ಷಗಳಲ್ಲಿ, ಲೋಕವ್ಯಾಪಕ ಸಹೋದರತ್ವದ ಗಾತ್ರವು, ಪ್ರತಿ ವಾರ 5,628 ಹೊಸದಾಗಿ ದೀಕ್ಷಾಸ್ನಾನಪಡೆದುಕೊಂಡ ಸಾಕ್ಷಿಗಳ ಸರಾಸರಿ ಪ್ರಮಾಣದೊಂದಿಗೆ ಹೆಚ್ಚಾಗುತ್ತಿದೆ! ಇಸವಿ 1993 ರಲ್ಲಿ, 47,09,889 ಸಕ್ರಿಯ ಶುಶ್ರೂಷಕರ ಉಚ್ಚಾಂಕವನ್ನು ತಲಪಲಾಯಿತು. ಕೇವಲ ಊಹಿಸಿರಿ! ಇದರ ಅರ್ಥವು 1914ರ “ಚಿಕ್ಕವನು” ಅಕ್ಷರಶಃ “ಸಾವಿರ” ವಾಗುವುದಕ್ಕೆ ಹತ್ತಿರವಾಗಿದ್ದಾನೆ!

13. (ಎ) ಇಸವಿ 1914 ರಿಂದ ಏನು ಸಂಭವಿಸುತ್ತಾ ಇದೆ? (ಬಿ) ಎರಡನೆಯ ಕೊರಿಂಥ 9:7 ರಲ್ಲಿರುವ ಪೌಲನ ಮಾತುಗಳ ಮೂಲತತ್ವವನ್ನು ಯೆಹೋವನ ಸಾಕ್ಷಿಗಳು ಹೇಗೆ ಕೈಗೊಳ್ಳುತ್ತಾರೆ?

13 ಇಸವಿ 1914 ರಂದಿನಿಂದ ಮೆಸ್ಸೀಯನಾದ ರಾಜನು ತನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡಲು ಹೊರಟಿದ್ದಾನೆ. ಲೋಕವ್ಯಾಪಕ ಸಾರುವ ಕೆಲಸವನ್ನು ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ನಿರ್ಮಾಣ ಚಳವಳಿಯನ್ನು ಮುಂದುವರಿಸಲು ಸಮಯ, ಬಲ, ಮತ್ತು ಹಣವನ್ನು ನೀಡುವ ಸಿದ್ಧಮನಸ್ಸಿನ ಮಾನವ ಹಿಂಬಾಲಕರಿಂದ ಅವನ ಆಳಿಕೆಯು ಬೆಂಬಲಿಸಲ್ಪಟ್ಟಿದೆ. (ಕೀರ್ತನೆ 110:2, 3) ತಮ್ಮ ಕೂಟಗಳಲ್ಲಿ ಹಣವು ಅಪರೂಪವಾಗಿ ಉಲ್ಲೇಖಿಸಲ್ಪಡುವುದಾದರೂ, ಈ ಚಟುವಟಿಕೆಗಳನ್ನು ಪೂರ್ಣತೆಗೆ ತರಲು ಹಣಕಾಸಿನ ಕಾಣಿಕೆಗಳು ಮಾಡಲ್ಪಡುತ್ತಿವೆ ಎಂಬುದನ್ನು ನೋಡಲು ಯೆಹೋವನ ಸಾಕ್ಷಿಗಳು ಹರ್ಷಿಸುತ್ತಾರೆ.a (ಹೋಲಿಸಿ 1 ಪೂರ್ವಕಾಲವೃತ್ತಾಂತ 29:9.) ಕೊಡುವುದರ ಸಲುವಾಗಿ ನಿಜ ಕ್ರೈಸ್ತರನ್ನು ಉದ್ರೇಕಿಸಬೇಕಾಗಿಲ್ಲ; ಪ್ರತಿಯೊಬ್ಬನು “ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ . . . ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ... ಕೊಡ”ದೆ, ತಮ್ಮ ಪರಿಸ್ಥಿತಿಗಳು ಅನುಮತಿಸುವ ಮಟ್ಟಿಗೆ ತಮ್ಮ ರಾಜನನ್ನು ಬೆಂಬಲಿಸುವುದು ಒಂದು ಸುಯೋಗವಾಗಿದೆ ಎಂದು ಅವರು ಪರಿಗಣಿಸುತ್ತಾರೆ.—2 ಕೊರಿಂಥ 9:7.

14. ದೇವರ ಜನರಿಗೆ ಹರ್ಷಿಸಲಿಕ್ಕಾಗಿ ಯಾವ ಕಾರಣವನ್ನು ಕೊಡುತ್ತಾ, 1919 ರಿಂದ ಯಾವ ಪರಿಸ್ಥಿತಿಯು ದೇವರ ಜನರೊಳಗೆ ವ್ಯಕ್ತವಾಗಿದೆ?

14 ದೇವರ ಜನರೊಳಗೆ ಸತ್ಯ ಆರಾಧನೆಯ ಮುಂತಿಳಿಸಲಾದ ಪುನಃ ಸ್ಥಾಪನೆಯು, ಆತ್ಮಿಕ ಪ್ರಮೋದವನದ ಸೃಷ್ಟಿಯಲ್ಲಿ ಫಲಿಸಿದೆ. ಇಸವಿ 1919 ರಿಂದ ಅದು ಪ್ರಗತಿಪರವಾಗಿ ತನ್ನ ಮೇರೆಗಳನ್ನು ವಿಸ್ತರಿಸಿದೆ. (ಕೀರ್ತನೆ 14:7; ಯೆಶಾಯ 52:9, 10) ಫಲಿತಾಂಶ? ನಿಜ ಕ್ರೈಸ್ತರು “ಹರ್ಷಾನಂದಗಳನ್ನು” ಅನುಭವಿಸುತ್ತಾರೆ. (ಯೆಶಾಯ 51:11) ಲಬ್ಧವಾಗುವ ಒಳ್ಳೆಯ ಫಲವು, ದೇವರ ಪವಿತ್ರಾತ್ಮವು ಅಪರಿಪೂರ್ಣ ಮಾನವರ ಮೂಲಕ ಏನನ್ನು ಸಾಧಿಸಶಕ್ತವಿದೆಯೊ ಅದರ ಪ್ರಮಾಣವಾಗಿದೆ. ಎಲ್ಲ ಕೀರ್ತಿ ಮತ್ತು ಘನತೆ ಯೆಹೋವನಿಗೆ ಸಲ್ಲುತ್ತದೆ, ಆದರೆ ದೇವರ ಜೊತೆ ಕೆಲಸಗಾರರಾಗುವುದಕ್ಕಿಂತ ಹೆಚ್ಚಿನ ಯಾವ ಸುಯೋಗವು ಇರಬಲ್ಲದು? (1 ಕೊರಿಂಥ 3:9) ಅಗತ್ಯವಿದ್ದಲ್ಲಿ, ಸತ್ಯದ ಸಂದೇಶವನ್ನು ಕೂಗಿ ಹೇಳಲು ಕಲ್ಲುಗಳನ್ನು ಸಿದ್ಧಮಾಡುವಷ್ಟು ಶಕ್ತಿಶಾಲಿಯು ಯೆಹೋವನಾಗಿದ್ದಾನೆ. ಆದರೂ, ಈ ವಿಧಾನವನ್ನು ಆಶ್ರಯಿಸಲು ಆತನು ಆರಿಸಿಲ್ಲ ಬದಲಿಗೆ, ತನ್ನ ಚಿತ್ತವನ್ನು ನಿರ್ವಹಿಸಲು ಮಣ್ಣಿನಿಂದ ಮಾಡಲ್ಪಟ್ಟ ಸಿದ್ಧಮನಸ್ಸಿನ ಜೀವಿಗಳನ್ನು ಪ್ರಚೋದಿಸಲು ಆತನು ಆರಿಸಿದ್ದಾನೆ.—ಲೂಕ 19:40.

15. (ಎ) ಯಾವ ಆಧುನಿಕ ಘಟನೆಗಳನ್ನು ನಾವು ಆಸಕ್ತಿಯಿಂದ ಅನುಕರಿಸುತ್ತೇವೆ? (ಬಿ) ಯಾವ ಘಟನೆಯನ್ನು ನಾವು ಹರ್ಷದಿಂದ ಎದುರುನೋಡುತ್ತೇವೆ?

15 ಭಯಭಕ್ತಿಯಿಂದ ಕೂಡಿದವರಾಗಿ, ಯೆಹೋವನ ಸೇವಕರಿಂದು ಲೋಕ ಘಟನೆಗಳನ್ನು—ಅವು ಪ್ರಮುಖವಾದ ಬೈಬಲ್‌ ಪ್ರವಾದನೆಗಳಿಗೆ ಸಂಬಂಧಿಸಿದಂತೆ— ಗಮನಿಸುತ್ತಾರೆ. ಸ್ಥಿರವಾದ ಶಾಂತಿಯನ್ನು ಸಾಧಿಸುವ ಒಂದು ಪ್ರಯತ್ನದಲ್ಲಿ ರಾಷ್ಟ್ರಗಳು ಕಷ್ಟಪಟ್ಟು ಪ್ರಯತ್ನಿಸುತ್ತಿವೆ—ಆದರೆ ವ್ಯರ್ಥವಾಗಿ. ಲೋಕದ ತೊಂದರೆಯ ಕ್ಷೇತ್ರಗಳಲ್ಲಿ ಕಾರ್ಯನಡೆಸಲಿಕ್ಕಾಗಿ ಸಂಯುಕ್ತ ರಾಷ್ಟ್ರಗಳ ಸಂಘಕ್ಕೆ ಕರೆ ನೀಡುವಂತೆ ಘಟನೆಗಳು ರಾಷ್ಟ್ರಗಳನ್ನು ಒತ್ತಾಯಿಸುತ್ತಿವೆ. (ಪ್ರಕಟನೆ 13:15-17) ಈ ನಡುವೆ, ಎಂದಾದರೂ ಸಂಭವಿಸಬಹುದಾದ ಅತ್ಯಂತ ಆನಂದದಾಯಕ ಘಟನೆಗಳಲ್ಲಿ ಬಹಳ ಹತ್ತಿರವಾಗುತ್ತಿರುವ ಒಂದನ್ನು, ದೇವರ ಜನರು ಈಗಾಗಲೇ ಮಹಾ ನಿರೀಕ್ಷೆಯೊಂದಿಗೆ ಮುನ್ನೋಡುತ್ತಿದ್ದಾರೆ. “ಯಜ್ಞದ ಕುರಿಯಾದಾತನ ವಿವಾಹಕಾಲವು ಬಂತು; ಆತನಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ; ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ.”—ಪ್ರಕಟನೆ 19:7.

ಸಾರುವಿಕೆ—ಒಂದು ಹೊರೆಯೊ ಅಥವಾ ಒಂದು ಆನಂದವೊ?

16. ತಾನು ಕಲಿತಿರುವುದನ್ನು ಆಚರಿಸಲು ತಪ್ಪುವುದು ಒಬ್ಬ ಕ್ರೈಸ್ತನನ್ನು ತನ್ನ ಆನಂದದಿಂದ ಹೇಗೆ ವಂಚಿತಗೊಳಿಸಬಲ್ಲದೆಂದು ದೃಷ್ಟಾಂತಿಸಿರಿ.

16 “ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ, ಮತ್ತು ಯಾವದನ್ನು ನನ್ನಲ್ಲಿ ಕೇಳಿ ಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.” (ಫಿಲಿಪ್ಪಿ 4:9) ಕಲಿತಿರುವುದನ್ನು ಆಚರಿಸುವ ಮೂಲಕ, ಕ್ರೈಸ್ತರು ದೇವರ ಆಶೀರ್ವಾದವನ್ನು ಹೊಂದಲು ನಿರೀಕ್ಷಿಸಬಲ್ಲರು. ಅವರು ಕಲಿತಿರುವ ಅತ್ಯಂತ ಪ್ರಾಮುಖ್ಯವಾದ ವಿಷಯಗಳಲ್ಲಿ ಒಂದು, ಇತರರಿಗೆ ಸುವಾರ್ತೆಯನ್ನು ಸಾರುವುದರ ಆವಶ್ಯಕತೆಯೇ ಆಗಿದೆ. ಖಂಡಿತವಾಗಿಯೂ, ಯಾರ ಜೀವಿತಗಳು ಅದನ್ನು ಕೇಳುವುದರ ಮೇಲೆಯೇ ಅವಲಂಬಿಸಿದೆಯೋ ಅಂತಹ ಪ್ರಾಮಾಣಿಕ ಹೃದಯದ ವ್ಯಕ್ತಿಗಳಿಂದ ಮಾಹಿತಿಯನ್ನು ತಡೆದುಹಿಡಿಯುವುದಾದರೆ, ಯಾರು ತಾನೇ ಮನಃಶಾಂತಿಯನ್ನು ಅನುಭವಿಸಬಲ್ಲರು ಯಾ ಆನಂದಭರಿತರಾಗಿರುವರು?—ಯೆಹೆಜ್ಕೇಲ 3:17-21; 1 ಕೊರಿಂಥ 9:16; 1 ತಿಮೊಥೆಯ 4:16.

17. ನಮ್ಮ ಸಾರುವ ಚಟುವಟಿಕೆಯು ಯಾವಾಗಲೂ ಆನಂದದ ಒಂದು ಮೂಲವಾಗಿರಬೇಕು ಏಕೆ?

17 ಯೆಹೋವನ ಕುರಿತು ಕಲಿಯಲು ಸಿದ್ಧರಾಗಿರುವ ಕುರಿಗಳಂತಹ ವ್ಯಕ್ತಿಗಳನ್ನು ಕಂಡುಕೊಳ್ಳುವುದು ಎಂತಹ ಒಂದು ಆನಂದವಾಗಿದೆ! ನಿಶ್ಚಯವಾಗಿಯೂ, ಸರಿಯಾದ ಉದ್ದೇಶದೊಂದಿಗೆ ಸೇವೆಮಾಡುವವರು ರಾಜ್ಯ ಸೇವೆಯನ್ನು ಯಾವಾಗಲೂ ಆನಂದದ ಒಂದು ಮೂಲವಾಗಿ ಕಾಣುವರು. ಇದು ಯಾಕೆಂದರೆ, ಯೆಹೋವನ ಒಬ್ಬ ಸಾಕ್ಷಿಯಾಗಿರುವ ಮುಖ್ಯ ಕಾರಣವು, ಆತನ ಹೆಸರನ್ನು ಸ್ತುತಿಸುವುದು ಮತ್ತು ಸಾರ್ವಭೌಮ ಅರಸನಂತೆ ಆತನ ಸ್ಥಾನವನ್ನು ಎತ್ತಿಹಿಡಿಯುವುದೇ ಆಗಿದೆ. (1 ಪೂರ್ವಕಾಲವೃತ್ತಾಂತ 16:31) ಈ ನಿಜತ್ವವನ್ನು ಗುರುತಿಸುವ ವ್ಯಕ್ತಿಯು, ತಾನು ಕೊಂಡೊಯ್ಯುವ ಸುವಾರ್ತೆಯನ್ನು ಜನರು ಬುದ್ಧಿಹೀನವಾಗಿ ತಿರಸ್ಕರಿಸುವಾಗ ಕೂಡ ಹರ್ಷಿಸುವನು. ಅವಿಶ್ವಾಸಿಗಳಿಗೆ ಸಾರುವುದು ಒಂದು ದಿನ ಕೊನೆಗೊಳ್ಳುವುದೆಂದು ಅವನು ಬಲ್ಲನು; ಯೆಹೋವನ ಹೆಸರನ್ನು ಸ್ತುತಿಸುವುದು ಎಂದೆಂದಿಗೂ ಮುಂದುವರಿಯುವುದು.

18. ಯೆಹೋವನ ಚಿತ್ತವನ್ನು ಮಾಡುವಂತೆ ಯಾವ ವಿಷಯವು ಒಬ್ಬ ಕ್ರೈಸ್ತನನ್ನು ಪ್ರಚೋದಿಸುತ್ತದೆ?

18 ಸತ್ಯ ಧರ್ಮವು ಅದನ್ನು ಆಚರಿಸುವವರನ್ನು ಯೆಹೋವನಿಂದ ಕೇಳಿಕೊಳ್ಳಲ್ಪಡುವ ವಿಷಯಗಳನ್ನು ಮಾಡುವಂತೆ ಪ್ರಚೋದಿಸುತ್ತದೆ, ಅವರು ಮಾಡಬೇಕು ಎಂಬ ಕಾರಣದಿಂದಲ್ಲ, ಬದಲಿಗೆ ಅವರು ಮಾಡಬಯಸುವ ಕಾರಣದಿಂದ. (ಕೀರ್ತನೆ 40:8; ಯೋಹಾನ 4:34) ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೆಂದು ಅನೇಕ ಜನರು ಕಂಡುಕೊಳ್ಳುತ್ತಾರೆ. ಒಮ್ಮೆ ಒಬ್ಬಾಕೆ ಸ್ತ್ರೀಯು, ಆಕೆಯನ್ನು ಭೇಟಿಮಾಡುತ್ತಿರುವ ಸಾಕ್ಷಿಗೆ ಹೇಳಿದ್ದು: “ನೀನು ಪ್ರಶಂಸಾರ್ಹಳಾಗಿರುವೆ. ನೀನು ಮಾಡುತ್ತಿರುವಂತೆ ನನ್ನ ಧರ್ಮದ ಕುರಿತು ಮನೆಯಿಂದ ಮನೆಗೆ ಸಾರುತ್ತಾ ನಾನು ಖಂಡಿತವಾಗಿಯೂ ಎಂದಿಗೂ ಹೋಗುತ್ತಿರಲಿಲ್ಲ.” ಒಂದು ಮುಗುಳುನಗೆಯೊಂದಿಗೆ ಸಾಕ್ಷಿಯು ಉತ್ತರಿಸಿದ್ದು: “ನಿನಗೆ ಹೇಗನಿಸುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಾನು ಒಬ್ಬಾಕೆ ಯೆಹೋವನ ಸಾಕ್ಷಿ ಆಗುವ ಮೊದಲು, ಧರ್ಮದ ಕುರಿತು ಮಾತಾಡಲು ಇತರ ಜನರ ಬಳಿಗೆ ನಾನು ಹೋಗುವಂತೆ ನಿನಗೆ ಮಾಡಸಾಧ್ಯವಿರಲಿಲ್ಲ. ಆದರೆ ಈಗ ನಾನು ಹೋಗಬಯಸುತ್ತೇನೆ.” ಆ ಸ್ತ್ರೀಯು ಒಂದು ಗಳಿಗೆ ಯೋಚಿಸಿದಳು ಮತ್ತು ಅನಂತರ ಕೊನೆಗೊಳಿಸಿದಳು: “ಸ್ಪಷ್ಟವಾಗಿಗಿ ನನ್ನ ಧರ್ಮವು ನೀಡದೆ ಇರುವಂತಹ ಯಾವುದನ್ನೊ ನಿನ್ನ ಧರ್ಮಕ್ಕೆ ನೀಡಲಿಕ್ಕಿದೆ. ಬಹುಶಃ ನಾನು ತನಿಖೆಮಾಡಬೇಕು.”

19. ಹಿಂದೆಂದಿಗಿಂತಲೂ ಈಗ ಹರ್ಷಿಸುವ ಸಮಯವಾಗಿದೆ ಏಕೆ?

19 ನಮ್ಮ ರಾಜ್ಯ ಗೃಹಗಳಲ್ಲಿ ಎದ್ದುಕಾಣುವಂತೆ ಪ್ರದರ್ಶಿಸಲಾದ 1994ರ ವರ್ಷವಚನವು, ಕ್ರಮವಾಗಿ ನಮ್ಮನ್ನು ಜ್ಞಾಪಿಸುತ್ತದೆ: “ಪೂರ್ಣಮನಸ್ಸಿನಿಂದ (ಪೂರ್ಣಹೃದಯ, NW) ಯೆಹೋವನಲ್ಲಿ ಭರವಸವಿಡು.” (ಜ್ಞಾನೋಕ್ತಿ 3:5) ನಾವು ಆಶ್ರಯಪಡೆಯುವ ನಮ್ಮ ಭದ್ರ ನೆಲೆಯಾದ ಯೆಹೋವನಲ್ಲಿ ನಮ್ಮ ಭರವಸೆಯನ್ನು ಇಡಶಕ್ತರಾಗುವುದಕ್ಕಿಂತ ಹರ್ಷಿಸಲಿಕ್ಕಾಗಿ ಹೆಚ್ಚಿನ ಕಾರಣ ಇರಬಲ್ಲದೊ? ಕೀರ್ತನೆ 64:10 ವಿವರಿಸುವುದು: “ಸದ್ಭಕ್ತರು ಯೆಹೋವನಲ್ಲಿ ಆನಂದಪಟ್ಟು ಆತನನ್ನೇ ಆಶ್ರಯಿಸಿಕೊಳ್ಳುವರು.” ಇದು ಹೊಯ್ದಾಡುವ ಯಾ ಬಿಟ್ಟು ಬಿಡುವ ಸಮಯವಲ್ಲ. ದಾಟಿಹೋಗುವ ಪ್ರತಿಯೊಂದು ತಿಂಗಳು, ಹೇಬೇಲನ ದಿನಗಳಂದಿನಿಂದ ಯೆಹೋವನ ಸೇವಕರು ನೋಡಲು ಹಾತೊರೆದಿದ್ದ ವಾಸ್ತವಿಕತೆಗೆ ನಮ್ಮನ್ನು ಅಷ್ಟು ಸಮಯ ಹತ್ತಿರ ತರುತ್ತದೆ. ಹಿಂದೆಂದೂ ನಮಗೆ ಹರ್ಷಿಸಲು ಇಷ್ಟೊಂದು ಕಾರಣಗಳು ಇರಲಿಲ್ಲ ಎಂಬುದನ್ನು ಅರಿಯುತ್ತಾ, ನಮ್ಮ ಪೂರ್ಣ ಹೃದಯದಿಂದ ಯೆಹೋವನಲ್ಲಿ ಭರವಸೆಯಿಡುವ ಸಮಯವು ಇದಾಗಿದೆ!

[ಅಧ್ಯಯನ ಪ್ರಶ್ನೆಗಳು]

a  ಅಧಿವೇಶನಗಳಲ್ಲಿ ಮತ್ತು ತಿಂಗಳಿಗೊಮ್ಮೆ ಸಭೆಗಳಲ್ಲಿ, ಪಡೆದಂತಹ ಸ್ವಇಚ್ಛೆಯ ಕಾಣಿಕೆಗಳ ಮೊತ್ತವನ್ನು ಅಷ್ಟೇ ಅಲ್ಲದೆ ಆದ ವೆಚ್ಚವನ್ನು ಸೂಚಿಸುವ ಒಂದು ಸಂಕ್ಷಿಪ್ತ ಹೇಳಿಕೆಯನ್ನು ಓದಲಾಗುತ್ತದೆ. ಕೆಲವೊಮ್ಮೆ ಇಂತಹ ದಾನಗಳನ್ನು ಹೇಗೆ ಉಪಯೋಗಿಸಲಾಗುತ್ತಿದೆ ಎಂಬ ವಿಷಯವನ್ನು ಸೂಚಿಸುವ ಪತ್ರಗಳು ಕಳುಹಿಸಲ್ಪಡುತ್ತವೆ. ಹೀಗೆ ಪ್ರತಿಯೊಬ್ಬರು ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸದ ಆರ್ಥಿಕ ಸನ್ನಿವೇಶದ ಕುರಿತು ಜ್ಞಾಪಿಸಲ್ಪಡುತ್ತಾರೆ.

ನೀವು ಹೇಗೆ ಉತ್ತರಿಸುವಿರಿ?

▫ ಯಾಕೆ, ನೆಹೆಮೀಯ 8:10 ಕ್ಕನುಸಾರ, ನಾವು ಹರ್ಷಿಸಬೇಕು?

▫ ಹರ್ಷಿಸುವುದರ ಮಹತ್ವವನ್ನು ಧರ್ಮೋಪದೇಶಕಾಂಡ 26:11 ಮತ್ತು 28:45-47 ಹೇಗೆ ತೋರಿಸುತ್ತವೆ?

▫ ಯಾವಾಗಲೂ ಹರ್ಷಿಸುವಂತೆ ನಮಗೆ ಫಿಲಿಪ್ಪಿ 4:4-9 ಹೇಗೆ ಸಹಾಯ ಮಾಡಬಲ್ಲದು?

▫ ಹರ್ಷಿಸಲು ನಮಗೆ ಯಾವ ಕಾರಣವನ್ನು 1994ರ ವರ್ಷವಚನ ಕೊಡುತ್ತದೆ?

[ಪುಟ 16 ರಲ್ಲಿರುವ ಚಿತ್ರ]

ಒಂದು ಅಂತಾರಾಷ್ಟ್ರೀಯ ಸಹೋದರತ್ವದ ಭಾಗವಾಗಿರಲು ರಷ್ಯನ್‌ ಮತ್ತು ಜರ್ಮನ್‌ ಸಾಕ್ಷಿಗಳು ಹರ್ಷಿಸುತ್ತಾರೆ

[ಪುಟ 17 ರಲ್ಲಿರುವ ಚಿತ್ರ]

ಇತರರೊಂದಿಗೆ ಸತ್ಯವನ್ನು ಹಂಚಿಕೊಳ್ಳುವುದು ಹರ್ಷಿಸಲಿಕ್ಕಾಗಿರುವ ಒಂದು ಕಾರಣವಾಗಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ