ಭೂಪರಲೋಕಗಳಲ್ಲಿ ಇರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಟ್ಟುಗೂಡಿಸುವುದು
“ಪರಲೋಕದಲ್ಲಿರುವ ಮತ್ತು ಭೂಮಿಯಲ್ಲಿರುವ ಸಮಸ್ತ ವಿಷಯಗಳನ್ನು ಪುನಃ ಕ್ರಿಸ್ತನಲ್ಲಿ ಒಟ್ಟುಗೂಡಿಸುವುದು . . . ಆತನ ಸುಸಂತೋಷಕ್ಕನುಸಾರವೇ ಆಗಿದೆ.”—ಎಫೆಸ 1:9, 10, NW.
1. ಭೂಪರಲೋಕಗಳ ವಿಷಯದಲ್ಲಿ ಯೆಹೋವನ “ಸುಸಂತೋಷ” ಏನಾಗಿದೆ?
ವಿಶ್ವವ್ಯಾಪಿ ಶಾಂತಿ! ಇದು ‘ಶಾಂತಿದಾಯಕ ದೇವರಾಗಿರುವ’ ಯೆಹೋವನ ಮಹಿಮಾನ್ವಿತ ಉದ್ದೇಶವಾಗಿದೆ. (ಇಬ್ರಿಯ 13:20) ತನ್ನ ‘ಸುಸಂತೋಷವು’ “ಪರಲೋಕದಲ್ಲಿರುವ ಮತ್ತು ಭೂಮಿಯಲ್ಲಿರುವ ಸಮಸ್ತ ವಿಷಯಗಳನ್ನು ಪುನಃ ಕ್ರಿಸ್ತನಲ್ಲಿ ಒಟ್ಟುಗೂಡಿಸು”ವುದೇ ಆಗಿದೆ ಎಂದು ಬರೆಯುವಂತೆ ಆತನು ಅಪೊಸ್ತಲ ಪೌಲನನ್ನು ಪ್ರೇರೇಪಿಸಿದನು. (ಎಫೆಸ 1:9, 10, NW) ಈ ವಚನದಲ್ಲಿ ‘ಪುನಃ ಒಟ್ಟುಗೂಡಿಸುವುದು’ ಎಂದು ಭಾಷಾಂತರಿಸಲ್ಪಟ್ಟಿರುವ ಕ್ರಿಯಾಪದವು ನಿರ್ದಿಷ್ಟವಾಗಿ ಏನನ್ನು ಸೂಚಿಸುತ್ತದೆ? ಬೈಬಲ್ ವಿದ್ವಾಂಸರಾದ ಜೆ. ಬಿ. ಲೈಟ್ಫುಟ್ ಹೀಗೆ ತಿಳಿಸುತ್ತಾರೆ: “ಈ ಅಭಿವ್ಯಕ್ತಿಯು ಇಡೀ ವಿಶ್ವದ ಸಾಮರಸ್ಯವನ್ನು ಸೂಚಿಸುತ್ತದೆ; ವಿಶ್ವವು ಇನ್ನು ಮುಂದೆ ಪರಕೀಯವಾದ ಮತ್ತು ವಿಭಾಜಕ ಅಂಶಗಳನ್ನು ಹೊಂದಿರುವುದಿಲ್ಲ, ಬದಲಾಗಿ ಇದರ ಎಲ್ಲ ಅಂಶಗಳು ಕ್ರಿಸ್ತನ ಮೇಲೆ ಕೇಂದ್ರೀಕೃತವಾಗಿರುವವು ಮತ್ತು ಅವನಲ್ಲಿ ಐಕ್ಯವಾಗಿರುವವು. ಪಾಪ ಮತ್ತು ಮರಣ, ದುಃಖ ಹಾಗೂ ಕಷ್ಟಾನುಭವವು ಕೊನೆಗೊಳ್ಳುವುದು.”
‘ಪರಲೋಕದಲ್ಲಿರುವ ವಿಷಯಗಳು’
2. ಒಟ್ಟುಗೂಡಿಸಲ್ಪಡುವ ಅಗತ್ಯವಿರುವಂಥ ‘ಪರಲೋಕದಲ್ಲಿರುವ ವಿಷಯಗಳು’ ಯಾರಾಗಿದ್ದಾರೆ?
2 ನಿಜ ಕ್ರೈಸ್ತರ ಅದ್ಭುತಕರ ನಿರೀಕ್ಷೆಯನ್ನು ಸಂಕ್ಷಿಪ್ತವಾಗಿ ವರ್ಣಿಸುತ್ತಾ ಅಪೊಸ್ತಲ ಪೇತ್ರನು ಹೀಗೆ ಬರೆದನು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಇಲ್ಲಿ ವಾಗ್ದಾನಿಸಲ್ಪಟ್ಟಿರುವ ‘ನೂತನಾಕಾಶಮಂಡಲವು,’ ಹೊಸದಾಗಿ ಆಡಳಿತ ನಡಿಸುವ ಅಧಿಕಾರಕ್ಕೆ ಅಂದರೆ ಮೆಸ್ಸೀಯನ ರಾಜ್ಯಕ್ಕೆ ಸೂಚಿತವಾಗಿದೆ. ಎಫೆಸದವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ತಿಳಿಸಿದ ‘ಪರಲೋಕದಲ್ಲಿರುವ ವಿಷಯಗಳು’ “ಕ್ರಿಸ್ತನಲ್ಲಿ” ಒಟ್ಟುಗೂಡಿಸಲ್ಪಡಬೇಕಾಗಿವೆ. ಇವರು ಪರಲೋಕದಲ್ಲಿ ಕ್ರಿಸ್ತನೊಂದಿಗೆ ಆಳಲಿಕ್ಕಾಗಿ ಆಯ್ಕೆಮಾಡಲ್ಪಟ್ಟಿರುವ ಪರಿಮಿತ ಸಂಖ್ಯೆಯ ಮಾನವರಾಗಿದ್ದಾರೆ. (1 ಪೇತ್ರ 1:3, 4) ಈ 1,44,000 ಮಂದಿ ಅಭಿಷಿಕ್ತ ಕ್ರೈಸ್ತರು, ಕ್ರಿಸ್ತನ ಸ್ವರ್ಗೀಯ ರಾಜ್ಯದಲ್ಲಿ ಅವನೊಂದಿಗೆ ಜೊತೆ ಬಾಧ್ಯಸ್ಥರಾಗಿರಲಿಕ್ಕಾಗಿ “ಭೂಲೋಕದೊಳಗಿಂದ ಕೊಂಡುಕೊಳ್ಳ”ಲ್ಪಟ್ಟಿದ್ದಾರೆ, ಅಂದರೆ ‘ಮನುಷ್ಯರೊಳಗಿಂದ ಕೊಂಡುಕೊಳ್ಳಲ್ಪಟ್ಟಿದ್ದಾರೆ.’—ಪ್ರಕಟನೆ 5:9, 10; 14:3, 4; 2 ಕೊರಿಂಥ 1:21; ಎಫೆಸ 1:11; 3:6.
3. ಇನ್ನೂ ಭೂಮಿಯಲ್ಲಿರುವಾಗಲೇ ಅಭಿಷಿಕ್ತರು ‘ಪರಲೋಕದ ಸ್ಥಳಗಳಲ್ಲಿ ಕೂರಿಸಲ್ಪಟ್ಟಿದ್ದಾರೆ’ ಎಂದು ಹೇಗೆ ಹೇಳಸಾಧ್ಯವಿದೆ?
3 ಅಭಿಷಿಕ್ತ ಕ್ರೈಸ್ತರು ಯೆಹೋವನ ಆತ್ಮಿಕ ಪುತ್ರರಾಗಲಿಕ್ಕಾಗಿ ಪವಿತ್ರಾತ್ಮದಿಂದ ಹೊಸದಾಗಿ ಹುಟ್ಟುತ್ತಾರೆ. (ಯೋಹಾನ 1:12, 13; 3:5-7) ಯೆಹೋವನಿಂದ “ಪುತ್ರರಾಗಿ” ಸ್ವೀಕರಿಸಲ್ಪಟ್ಟಿರುವ ಅವರು ಯೇಸುವಿನ ಸಹೋದರರಾಗಿ ಪರಿಣಮಿಸುತ್ತಾರೆ. (ರೋಮಾಪುರ 8:15; ಎಫೆಸ 1:5) ಹೀಗಿರುವುದರಿಂದ, ಇನ್ನೂ ಭೂಮಿಯಲ್ಲಿರುವಾಗಲೇ ಅವರು ‘ಎಬ್ಬಿಸಲ್ಪಟ್ಟು ಕ್ರಿಸ್ತ ಯೇಸುವಿನಲ್ಲಿ ಅವನೊಡನೆಯೇ ಪರಲೋಕದ ಸ್ಥಳಗಳಲ್ಲಿ ಕೂರಿಸಲ್ಪಟ್ಟಿದ್ದಾರೆ’ ಎಂದು ಅವರ ಕುರಿತು ಹೇಳಲಾಗಿದೆ. (ಎಫೆಸ 1:3; 2:7, NIBV) ಅವರು ಈ ಉನ್ನತ ಆತ್ಮಿಕ ಸ್ಥಾನದಲ್ಲಿರಲು ಕಾರಣವೇನೆಂದರೆ, ಅವರು ‘ವಾಗ್ದಾನದ ಪವಿತ್ರಾತ್ಮದಿಂದ ಮುದ್ರೆಹೊಂದಿದ್ದಾರೆ’ ಮತ್ತು ಅದು ಪರಲೋಕದಲ್ಲಿ ಅವರಿಗಾಗಿ ಕಾದಿರಿಸಲ್ಪಟ್ಟಿರುವ “ಸ್ವಾಸ್ಥ್ಯದ ಮುಂಗಡ ಸಂಕೇತವಾಗಿದೆ” (NW). (ಎಫೆಸ 1:13, 14; ಕೊಲೊಸ್ಸೆ 1:5) ಹೀಗೆ, ಅವರು ‘ಪರಲೋಕದಲ್ಲಿರುವ ವಿಷಯಗಳಾಗಿದ್ದು,’ ಅವರ ಒಟ್ಟು ಸಂಖ್ಯೆಯು ಯೆಹೋವನಿಂದ ಮುಂಚಿತವಾಗಿಯೇ ನಿಗದಿಪಡಿಸಲ್ಪಟ್ಟಿದೆ ಮತ್ತು ಅವರನ್ನು ಒಟ್ಟುಗೂಡಿಸುವ ಅಗತ್ಯವಿದೆ.
ಒಟ್ಟುಗೂಡಿಸುವಿಕೆಯು ಆರಂಭವಾಗುತ್ತದೆ
4. ‘ಪರಲೋಕದಲ್ಲಿರುವ ವಿಷಯಗಳ’ ಒಟ್ಟುಗೂಡಿಸುವಿಕೆಯು ಯಾವಾಗ ಮತ್ತು ಹೇಗೆ ಆರಂಭಗೊಂಡಿತು?
4 ಯೆಹೋವನ “ಆಡಳಿತ”ಕ್ಕನುಸಾರ ಅಥವಾ ವಿಷಯಗಳನ್ನು ನಿರ್ವಹಿಸುವ ವಿಧಕ್ಕನುಸಾರ, ‘ಪರಲೋಕದಲ್ಲಿರುವ ವಿಷಯಗಳ’ ಒಟ್ಟುಗೂಡಿಸುವಿಕೆಯು “[ನೇಮಿತ] ಕಾಲವು ಪೂರ್ಣಗೊಂಡಾಗ” (NIBV) ಆರಂಭಗೊಳ್ಳಲಿಕ್ಕಿತ್ತು. (ಎಫೆಸ 1:9) ಸಾ.ಶ. 33ರ ಪಂಚಾಶತ್ತಮದಂದು ಆ ನಿಗದಿತ ಸಮಯವು ಆಗಮಿಸಿತು. ಅಂದು ಅಪೊಸ್ತಲರ ಮೇಲೆ ಮತ್ತು ಸ್ತ್ರೀಪುರುಷರಿಂದ ಕೂಡಿದ್ದ ಶಿಷ್ಯರ ಒಂದು ಗುಂಪಿನ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು. (ಅ. ಕೃತ್ಯಗಳು 1:13-15; 2:1-4) ಇದು, ಹೊಸ ಒಡಂಬಡಿಕೆಯು ಕಾರ್ಯರೂಪಕ್ಕೆ ತರಲ್ಪಟ್ಟಿದೆ ಎಂಬುದಕ್ಕೆ ಪುರಾವೆಯನ್ನು ನೀಡಿತು ಮತ್ತು ಈ ಕಾರಣದಿಂದ ಈ ಘಟನೆಯು ಕ್ರೈಸ್ತ ಸಭೆಯ ಮತ್ತು ಆತ್ಮಿಕ ಇಸ್ರಾಯೇಲ್ಯರ ಹೊಸ ಜನಾಂಗವಾಗಿರುವ ‘ದೇವರ ಇಸ್ರಾಯೇಲ್ನ’ ಆರಂಭವಾಗಿತ್ತು.—ಗಲಾತ್ಯ 6:16; ಇಬ್ರಿಯ 9:15; 12:23, 24.
5. ಮಾಂಸಿಕ ಇಸ್ರಾಯೇಲ್ಯರಿಗೆ ಬದಲಾಗಿ ಯೆಹೋವನು ಒಂದು ಹೊಸ ‘ಜನಾಂಗವನ್ನು’ ಏಕೆ ಅಸ್ತಿತ್ವಕ್ಕೆ ತಂದನು?
5 ಮಾಂಸಿಕ ಇಸ್ರಾಯೇಲ್ಯರೊಂದಿಗೆ ಮಾಡಿಕೊಳ್ಳಲ್ಪಟ್ಟಿದ್ದ ಧರ್ಮಶಾಸ್ತ್ರದ ಒಡಂಬಡಿಕೆಯು, ಪರಲೋಕದಲ್ಲಿ ಸದಾಕಾಲ ಸೇವೆಸಲ್ಲಿಸಲಿರುವಂಥ ‘ಯಾಜಕರಾಜ್ಯವನ್ನು ಮತ್ತು ಪರಿಶುದ್ಧ [ಜನಾಂಗವನ್ನು]’ ಉಂಟುಮಾಡಲಿಲ್ಲ. (ವಿಮೋಚನಕಾಂಡ 19:5, 6) ಯೇಸು ಯೆಹೂದಿ ಧಾರ್ಮಿಕ ಮುಖಂಡರಿಗೆ ಹೇಳಿದ್ದು: “ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ [ಜನಾಂಗಕ್ಕೆ] ಕೊಡಲಾಗುವದು.” (ಮತ್ತಾಯ 21:43) ಈ ಜನಾಂಗವು ಅಂದರೆ ಆತ್ಮಿಕ ಇಸ್ರಾಯೇಲ್, ಹೊಸ ಒಡಂಬಡಿಕೆಯೊಳಗೆ ತರಲ್ಪಟ್ಟಿರುವ ಅಭಿಷಿಕ್ತ ಕ್ರೈಸ್ತರಿಂದ ರಚಿತವಾಗಿದೆ. ಇವರಿಗೆ ಅಪೊಸ್ತಲ ಪೇತ್ರನು ಬರೆದುದು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ಮೊದಲು ನೀವು ಪ್ರಜೆಯಾಗಿರಲಿಲ್ಲ, ಈಗ ದೇವರ ಪ್ರಜೆಯಾಗಿದ್ದೀರಿ.” (1 ಪೇತ್ರ 2:9, 10) ಮಾಂಸಿಕ ಇಸ್ರಾಯೇಲ್ಯರು ಇನ್ನೆಂದೂ ಯೆಹೋವನ ಒಡಂಬಡಿಕೆಯ ಜನರಾಗಿರಲಿಲ್ಲ. (ಇಬ್ರಿಯ 8:7-13) ಯೇಸು ಮುಂತಿಳಿಸಿದ್ದಂತೆಯೇ, ಮೆಸ್ಸೀಯ ರಾಜ್ಯದ ಒಂದು ಭಾಗವಾಗುವ ಸುಯೋಗವು ಅವರಿಂದ ತೆಗೆಯಲ್ಪಟ್ಟು, ಆತ್ಮಿಕ ಇಸ್ರಾಯೇಲ್ನ 1,44,000 ಮಂದಿ ಸದಸ್ಯರಿಗೆ ಕೊಡಲ್ಪಟ್ಟಿತು.—ಪ್ರಕಟನೆ 7:4-8.
ರಾಜ್ಯದ ಒಡಂಬಡಿಕೆಯೊಳಗೆ ತರಲ್ಪಟ್ಟದ್ದು
6, 7. ತನ್ನ ಆತ್ಮಾಭಿಷಿಕ್ತ ಸಹೋದರರೊಂದಿಗೆ ಯೇಸು ಯಾವ ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡನು, ಮತ್ತು ಇದು ಅವರಿಗೆ ಯಾವ ಅರ್ಥದಲ್ಲಿದೆ?
6 ಯೇಸು ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸಿದ ರಾತ್ರಿಯಂದು ತನ್ನ ನಂಬಿಗಸ್ತ ಅಪೊಸ್ತಲರಿಗೆ ಅಂದದ್ದು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ [“ನನ್ನ ತಂದೆಯು ನನ್ನೊಂದಿಗೆ ಒಂದು ರಾಜ್ಯಕ್ಕಾಗಿ ಒಡಂಬಡಿಕೆಯನ್ನು ಮಾಡಿಕೊಂಡ ಪ್ರಕಾರ ನಾನೂ ನಿಮ್ಮೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ,” NW]; ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” (ಲೂಕ 22:28-30) ಯೇಸು ತನ್ನ 1,44,000 ಮಂದಿ ಆತ್ಮಾಭಿಷಿಕ್ತ ಸಹೋದರರೊಂದಿಗೆ ಮಾಡಿಕೊಂಡ ಒಂದು ವಿಶೇಷ ಒಡಂಬಡಿಕೆಯ ಕುರಿತು ಇಲ್ಲಿ ಸೂಚಿಸಿದನು. ಈ ಆತ್ಮಾಭಿಷಿಕ್ತರು ‘ಸಾಯುವ ತನಕ ನಂಬಿಗಸ್ತರಾಗಿ’ ಉಳಿಯಲಿದ್ದರು ಮತ್ತು ಸ್ವತಃ ತಮ್ಮನ್ನು ‘ಜಯಶಾಲಿಗಳಾಗಿ’ ರುಜುಪಡಿಸಿಕೊಳ್ಳಲಿದ್ದರು.—ಪ್ರಕಟನೆ 2:10; 3:21.
7 ಈ ಪರಿಮಿತ ಸಂಖ್ಯೆಯ ಸದಸ್ಯರು, ರಕ್ತಮಾಂಸಗಳಿಂದ ಕೂಡಿರುವ ಮಾನವರಾಗಿ ಭೂಮಿಯಲ್ಲಿ ಸದಾಕಾಲ ಜೀವಿಸುವ ಎಲ್ಲ ನಿರೀಕ್ಷೆಗಳನ್ನು ಬಿಟ್ಟುಕೊಡುತ್ತಾರೆ. ಅವರು ಮಾನವಕುಲಕ್ಕೆ ನ್ಯಾಯತೀರಿಸಲಿಕ್ಕಾಗಿ ಸಿಂಹಾಸನಗಳ ಮೇಲೆ ಕುಳಿತುಕೊಂಡು ಕ್ರಿಸ್ತನೊಂದಿಗೆ ಪರಲೋಕದಲ್ಲಿ ಆಳ್ವಿಕೆ ನಡಿಸುವರು. (ಪ್ರಕಟನೆ 20:4, 6) ಈ ಅಭಿಷಿಕ್ತರಿಗೆ ಮಾತ್ರ ಅನ್ವಯವಾಗುವಂಥ ಮತ್ತು “ಬೇರೆ ಕುರಿಗಳು” ಜ್ಞಾಪಕಾಚರಣೆಯ ಕುರುಹುಗಳನ್ನು ಏಕೆ ಸೇವಿಸುವುದಿಲ್ಲ ಎಂಬುದನ್ನು ತೋರಿಸುವಂಥ ಬೇರೆ ಶಾಸ್ತ್ರವಚನಗಳನ್ನು ನಾವೀಗ ಪರಿಶೀಲಿಸೋಣ.—ಯೋಹಾನ 10:16.
8. ರೊಟ್ಟಿಯನ್ನು ಸೇವಿಸುವ ಮೂಲಕ ಅಭಿಷಿಕ್ತರು ಏನನ್ನು ಸೂಚಿಸುತ್ತಾರೆ? (23ನೇ ಪುಟದಲ್ಲಿರುವ ಚೌಕವನ್ನು ನೋಡಿ.)
8 ಅಭಿಷಿಕ್ತರು ಕ್ರಿಸ್ತನಂತೆಯೇ ಕಷ್ಟಹಿಂಸೆಗಳನ್ನು ಅನುಭವಿಸುತ್ತಾರೆ ಮತ್ತು ಅವನು ಅನುಭವಿಸಿದಂಥ ರೀತಿಯ ಮರಣಕ್ಕೆ ಒಳಪಡಲು ಸಹ ಅವರು ಮನಃಪೂರ್ವಕವಾಗಿ ಸಿದ್ಧರಾಗಿದ್ದಾರೆ. ಈ ಅಭಿಷಿಕ್ತರ ಗುಂಪಿನಲ್ಲಿ ಒಬ್ಬನಾಗಿರುವ ಪೌಲನು, ‘[ಯೇಸುವನ್ನೂ] ಅವನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ ಅವನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳುಕೊಳ್ಳುವುದಕ್ಕೋಸ್ಕರ [ಅವನನ್ನು ಪಡೆಯ]’ಸಾಧ್ಯವಾಗುವಂತೆ ಯಾವುದೇ ತ್ಯಾಗವನ್ನು ಮಾಡಲು ತಾನು ಸಿದ್ಧನಾಗಿದ್ದೇನೆ ಎಂದು ತಿಳಿಸಿದನು. ಹೌದು, ಪೌಲನು ಅವನು ಅನುಭವಿಸಿದಂಥ ರೀತಿಯ ಮರಣಕ್ಕೆ ತನ್ನನ್ನು ಒಳಪಡಿಸಿಕೊಳ್ಳಲು ಸಿದ್ಧನಾಗಿದ್ದನು. (ಫಿಲಿಪ್ಪಿ 3:8, 10) ಅನೇಕ ಅಭಿಷಿಕ್ತ ಕ್ರೈಸ್ತರು “ಯೇಸು ಅನುಭವಿಸಿದ ಮರಣಕಾರಕ ದುರುಪಚಾರವನ್ನು” (NW) ತಮ್ಮ ಮಾಂಸಿಕ ದೇಹಗಳಲ್ಲಿ ತಾಳಿಕೊಂಡಿದ್ದಾರೆ.—2 ಕೊರಿಂಥ 4:10.
9. ಜ್ಞಾಪಕಾಚರಣೆಯ ರೊಟ್ಟಿಯಿಂದ ಯಾವ ದೇಹವು ಪ್ರತಿನಿಧಿಸಲ್ಪಡುತ್ತದೆ?
9 ಕರ್ತನ ಸಂಧ್ಯಾ ಭೋಜನವನ್ನು ಆರಂಭಿಸಿದಾಗ ಯೇಸು ಹೇಳಿದ್ದು: “ಇದು ನನ್ನ ದೇಹ.” (ಮಾರ್ಕ 14:22) ಅವನು ಸ್ವಲ್ಪದರಲ್ಲೇ ಹೊಡೆಯಲ್ಪಟ್ಟು ರಕ್ತಮಯವಾಗಲಿದ್ದ ತನ್ನ ಅಕ್ಷರಾರ್ಥ ದೇಹವನ್ನು ಸೂಚಿಸಿ ಮಾತಾಡಿದ್ದನು. ಹುಳಿಯಿಲ್ಲದ ರೊಟ್ಟಿಯು ಆ ದೇಹಕ್ಕೆ ಸೂಕ್ತವಾದ ಸಂಕೇತವಾಗಿತ್ತು. ಏಕೆ? ಏಕೆಂದರೆ ಬೈಬಲಿನಲ್ಲಿ ಹುಳಿಯು ಪಾಪ ಮತ್ತು ದುಷ್ಟತ್ವಕ್ಕೆ ಸೂಚಿತವಾಗಿರಸಾಧ್ಯವಿದೆ. (ಮತ್ತಾಯ 16:4, 11, 12; 1 ಕೊರಿಂಥ 5:6-8) ಯೇಸು ಪರಿಪೂರ್ಣನಾಗಿದ್ದನು ಮತ್ತು ಅವನ ಮಾನವ ದೇಹವು ಪಾಪರಹಿತವಾದದ್ದಾಗಿತ್ತು. ಅವನು ಆ ಪರಿಪೂರ್ಣ ದೇಹವನ್ನು ಪಾಪನಿವಾರಣ ಯಜ್ಞವಾಗಿ ಅರ್ಪಿಸಲಿಕ್ಕಿದ್ದನು. (ಇಬ್ರಿಯ 7:26; 1 ಯೋಹಾನ 2:2) ಅವನ ಆ ಯಜ್ಞವು ಎಲ್ಲ ನಂಬಿಗಸ್ತ ಕ್ರೈಸ್ತರಿಗೆ—ಅವರಿಗೆ ಪರಲೋಕದಲ್ಲಿ ಜೀವಿಸುವ ನಿರೀಕ್ಷೆಯಿರಲಿ ಅಥವಾ ಪರದೈಸ್ ಭೂಮಿಯಲ್ಲಿ ನಿತ್ಯಜೀವದ ನಿರೀಕ್ಷೆಯಿರಲಿ—ಪ್ರಯೋಜನದಾಯಕವಾಗಿರಲಿಕ್ಕಿತ್ತು.—ಯೋಹಾನ 6:51.
10. ಜ್ಞಾಪಕಾಚರಣೆಯಲ್ಲಿ ದ್ರಾಕ್ಷಾಮದ್ಯವನ್ನು ಸೇವಿಸುವವರು ಯಾವ ರೀತಿಯಲ್ಲಿ ‘ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗುತ್ತಾರೆ’?
10 ಜ್ಞಾಪಕಾಚರಣೆಯಲ್ಲಿ ಅಭಿಷಿಕ್ತ ಕ್ರೈಸ್ತರು ಸೇವಿಸಲಿಕ್ಕಿದ್ದ ದ್ರಾಕ್ಷಾಮದ್ಯದ ಕುರಿತು ಪೌಲನು ಬರೆದುದು: “ನಾವು ದೇವಸ್ತೋತ್ರಮಾಡಿ ಪಾತ್ರೆಯಲ್ಲಿ ಪಾನಮಾಡುವದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಸೂಚಿಸುತ್ತದಲ್ಲವೇ.” (1 ಕೊರಿಂಥ 10:16) ದ್ರಾಕ್ಷಾಮದ್ಯವನ್ನು ಸೇವಿಸುವವರು ಯಾವ ರೀತಿಯಲ್ಲಿ ‘ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗುತ್ತಾರೆ’? ವಿಮೋಚನಾ ಮೌಲ್ಯದ ಯಜ್ಞವನ್ನು ಒದಗಿಸುವುದರಲ್ಲಿ ಅವರು ಪಾಲುಗಾರರಾಗುವುದಿಲ್ಲ ಎಂಬುದಂತೂ ನಿಶ್ಚಯ, ಏಕೆಂದರೆ ಸ್ವತಃ ಅವರಿಗೇ ವಿಮೋಚನೆಯ ಆವಶ್ಯಕತೆ ಇದೆ. ಕ್ರಿಸ್ತನ ರಕ್ತದ ವಿಮೋಚನಾ ಶಕ್ತಿಯಲ್ಲಿ ಅವರು ನಂಬಿಕೆಯಿಡುವ ಮೂಲಕ ಅವರ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಪರಲೋಕದಲ್ಲಿನ ಜೀವನಕ್ಕಾಗಿ ಅವರು ನೀತಿವಂತರೆಂದು ನಿರ್ಣಯಿಸಲ್ಪಡುತ್ತಾರೆ. (ರೋಮಾಪುರ 5:8, 9; ತೀತ 3:4-7) ಕ್ರಿಸ್ತನು ಸುರಿಸಿದ ರಕ್ತದ ಮೂಲಕ ಅವನ 1,44,000 ಮಂದಿ ಜೊತೆ ಬಾಧ್ಯಸ್ಥರು, “ದೇವಜನರು” ಅಥವಾ ಪವಿತ್ರರು ಆಗಿರಲಿಕ್ಕಾಗಿ ‘ಪವಿತ್ರೀಕರಿಸಲ್ಪಡುತ್ತಾರೆ,’ ಪ್ರತ್ಯೇಕಿಸಲ್ಪಡುತ್ತಾರೆ, ಪಾಪದಿಂದ ಶುದ್ಧೀಕರಿಸಲ್ಪಡುತ್ತಾರೆ. (ಇಬ್ರಿಯ 10:29; ದಾನಿಯೇಲ 7:18, 27; ಎಫೆಸ 2:19) ಹೌದು, ತನ್ನ ಸುರಿಸಲ್ಪಟ್ಟ ರಕ್ತದ ಮೂಲಕ ಕ್ರಿಸ್ತನು ‘ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡನು; ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದನು; ಅವರು ಭೂಮಿಯ ಮೇಲೆ ಆಳುವರು.’—ಪ್ರಕಟನೆ 5:9, 10.
11. ಜ್ಞಾಪಕಾಚರಣೆಯ ದ್ರಾಕ್ಷಾಮದ್ಯವನ್ನು ಕುಡಿಯುವ ಮೂಲಕ ಅಭಿಷಿಕ್ತರು ಏನನ್ನು ಸೂಚಿಸುತ್ತಾರೆ?
11 ಯೇಸು ತನ್ನ ಮರಣದ ಜ್ಞಾಪಕಾಚರಣೆಯನ್ನು ಆರಂಭಿಸಿದಾಗ, ದ್ರಾಕ್ಷಾಮದ್ಯದ ಪಾತ್ರೆಯನ್ನು ತನ್ನ ನಂಬಿಗಸ್ತ ಅಪೊಸ್ತಲರಿಗೆ ಕೊಡುತ್ತಾ ಹೇಳಿದ್ದು: “ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.” (ಮತ್ತಾಯ 26:27, 28) ದೇವರು ಹಾಗೂ ಇಸ್ರಾಯೇಲ್ ಜನಾಂಗದ ಮಧ್ಯೆ ಇದ್ದ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಹೋರಿಗಳ ಮತ್ತು ಹೋತಗಳ ರಕ್ತವು ಸ್ಥಿರೀಕರಿಸಿತು; ಅದೇ ರೀತಿಯಲ್ಲಿ ಸಾ.ಶ. 33ರ ಪಂಚಾಶತ್ತಮದ ಆರಂಭದಿಂದ ಯೆಹೋವನು ಆತ್ಮಿಕ ಇಸ್ರಾಯೇಲ್ನೊಂದಿಗೆ ಮಾಡಿಕೊಳ್ಳಲಿದ್ದ ಹೊಸ ಒಡಂಬಡಿಕೆಯನ್ನು ಯೇಸುವಿನ ರಕ್ತವು ಸ್ಥಿರೀಕರಿಸಿತು. (ವಿಮೋಚನಕಾಂಡ 24:5-8; ಲೂಕ 22:20; ಇಬ್ರಿಯ 9:14, 15) ಅಭಿಷಿಕ್ತರು “ಒಡಂಬಡಿಕೆಯ ರಕ್ತ”ವನ್ನು ಸಂಕೇತಿಸುವಂಥ ದ್ರಾಕ್ಷಾಮದ್ಯವನ್ನು ಕುಡಿಯುವ ಮೂಲಕ, ತಾವು ಹೊಸ ಒಡಂಬಡಿಕೆಯೊಳಗೆ ತರಲ್ಪಟ್ಟಿದ್ದೇವೆ ಮತ್ತು ಅದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದೇವೆ ಎಂಬುದನ್ನು ಸೂಚಿಸುತ್ತಾರೆ.
12. ಅಭಿಷಿಕ್ತರು ಕ್ರಿಸ್ತನ ಮರಣದಲ್ಲಿ ದೀಕ್ಷಾಸ್ನಾನ ಪಡೆದುಕೊಳ್ಳುವುದು ಹೇಗೆ?
12 ಅಭಿಷಿಕ್ತರಿಗೆ ಇನ್ನೊಂದು ವಿಷಯವು ಸಹ ಮರುಜ್ಞಾಪಿಸಲ್ಪಡುತ್ತದೆ. ಯೇಸು ತನ್ನ ನಂಬಿಗಸ್ತ ಶಿಷ್ಯರಿಗೆ ಹೇಳಿದ್ದು: “ನಾನು ಕುಡಿಯುವ ಪಾತ್ರೆಯಿಂದ ನೀವು ಕುಡಿಯುವಿರಿ. ನಾನು ಹೊಂದುವ ದೀಕ್ಷಾಸ್ನಾನವನ್ನು ನೀವು ಹೊಂದುವಿರಿ.” (ಮಾರ್ಕ 10:38, 39, NIBV) ಸಮಯಾನಂತರ ಅಪೊಸ್ತಲ ಪೌಲನು, ಕ್ರೈಸ್ತರು “[ಕ್ರಿಸ್ತನ] ಮರಣದಲ್ಲಿ ದೀಕ್ಷಾಸ್ನಾನಪಡೆದು”ಕೊಳ್ಳುವುದರ ಕುರಿತು ಮಾತಾಡಿದನು. (ರೋಮಾಪುರ 6:3, NIBV) ಅಭಿಷಿಕ್ತರು ತ್ಯಾಗಮಯ ಜೀವನವನ್ನು ನಡೆಸುತ್ತಾರೆ. ಅವರ ಮರಣವು ಯಜ್ಞಾರ್ಪಿತ ಅಥವಾ ತ್ಯಾಗಮಯವಾದದ್ದಾಗಿದೆ, ಏಕೆಂದರೆ ಭೂಮಿಯಲ್ಲಿ ನಿತ್ಯಜೀವವನ್ನು ಆನಂದಿಸುವ ಯಾವುದೇ ನಿರೀಕ್ಷೆಯನ್ನು ಅವರು ತೊರೆಯುತ್ತಾರೆ. ಈ ಅಭಿಷಿಕ್ತ ಕ್ರೈಸ್ತರು ಕ್ರಿಸ್ತನ ಮರಣದಲ್ಲಿ ಪಡೆದುಕೊಳ್ಳುವ ದೀಕ್ಷಾಸ್ನಾನವು, ಅವರು ನಂಬಿಗಸ್ತರಾಗಿ ಮರಣಪಟ್ಟು ಪರಲೋಕದಲ್ಲಿ ಕ್ರಿಸ್ತನೊಂದಿಗೆ ‘[ಅರಸರಾಗಿ] ಆಳಲಿಕ್ಕಾಗಿ’ ಆತ್ಮಜೀವಿಗಳಾಗಿ ಪುನರುತ್ಥಾನಗೊಳಿಸಲ್ಪಡುವಾಗ ಪೂರ್ಣಗೊಳ್ಳುತ್ತದೆ.—2 ತಿಮೊಥೆಯ 2:10-12; ರೋಮಾಪುರ 6:5; 1 ಕೊರಿಂಥ 15:42-44, 50.
ಕುರುಹುಗಳನ್ನು ಸೇವಿಸುವುದು
13. ಭೂನಿರೀಕ್ಷೆಯುಳ್ಳವರು ಏಕೆ ಜ್ಞಾಪಕಾಚರಣೆಯ ಕುರುಹುಗಳನ್ನು ಸೇವಿಸುವುದಿಲ್ಲ, ಆದರೆ ಅವರು ಜ್ಞಾಪಕಾಚರಣೆಗೆ ಹಾಜರಾಗುತ್ತಾರೆ ಏಕೆ?
13 ಜ್ಞಾಪಕಾಚರಣೆಯ ಸಮಯದಲ್ಲಿ ದಾಟಿಸಲ್ಪಡುವ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸೇವಿಸುವುದರಲ್ಲಿ ಇದೆಲ್ಲ ಒಳಗೂಡಿರುವುದರಿಂದ, ಭೂನಿರೀಕ್ಷೆಯುಳ್ಳವರು ಇದರಲ್ಲಿ ಪಾಲ್ಗೊಳ್ಳುವುದು ಯೋಗ್ಯವಾದದ್ದಾಗಿರುವುದಿಲ್ಲ ಎಂಬುದು ಸುಸ್ಪಷ್ಟ. ತಾವು ಕ್ರಿಸ್ತನ ದೇಹದ ಅಭಿಷಿಕ್ತ ಸದಸ್ಯರಾಗಿಲ್ಲ, ಮತ್ತು ಯೇಸು ಕ್ರಿಸ್ತನ ಜೊತೆ ಆಳಲಿಕ್ಕಿರುವವರೊಂದಿಗೆ ಯೆಹೋವನು ಮಾಡಿಕೊಂಡಿರುವ ಹೊಸ ಒಡಂಬಡಿಕೆಯಲ್ಲಿ ತಾವು ಸೇರಿಲ್ಲ ಎಂಬುದು ಭೂನಿರೀಕ್ಷೆಯುಳ್ಳವರಿಗೆ ತಿಳಿದಿದೆ. ‘ಆ ಪಾತ್ರೆಯು’ ಹೊಸ ಒಡಂಬಡಿಕೆಯನ್ನು ಪ್ರತಿನಿಧಿಸುವುದರಿಂದ, ಹೊಸ ಒಡಂಬಡಿಕೆಯಲ್ಲಿ ಸೇರಿರುವವರು ಮಾತ್ರ ಆ ಕುರುಹುಗಳನ್ನು ಸೇವಿಸುತ್ತಾರೆ. ಕ್ರಿಸ್ತನ ರಾಜ್ಯದ ಕೆಳಗೆ ಭೂಮಿಯ ಮೇಲೆ ಮಾನವ ಪರಿಪೂರ್ಣತೆಯಲ್ಲಿ ನಿತ್ಯಜೀವವನ್ನು ಎದುರುನೋಡುತ್ತಿರುವವರು, ಯೇಸುವಿನ ಮರಣದಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವುದೂ ಇಲ್ಲ ಅಥವಾ ಪರಲೋಕದಲ್ಲಿ ಅವನೊಂದಿಗೆ ಆಳಲಿಕ್ಕಾಗಿ ಕರೆಯಲ್ಪಟ್ಟಿರುವುದೂ ಇಲ್ಲ. ಒಂದುವೇಳೆ ಅವರು ಕುರುಹುಗಳನ್ನು ಸೇವಿಸುವಲ್ಲಿ, ಅವರಿಗೆ ಯಾವುದು ಅನ್ವಯವಾಗುವುದಿಲ್ಲವೋ ಅದನ್ನು ಇದು ಸೂಚಿಸಸಾಧ್ಯವಿದೆ. ಆದುದರಿಂದ, ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯುಳ್ಳವರು ಗೌರವಪೂರ್ಣ ಪ್ರೇಕ್ಷಕರಾಗಿ ಜ್ಞಾಪಕಾಚರಣೆಗೆ ಹಾಜರಾಗುತ್ತಾರಾದರೂ, ಅವರು ಕುರುಹುಗಳನ್ನು ಸೇವಿಸುವುದಿಲ್ಲ. ಕ್ರಿಸ್ತನು ಸುರಿಸಿದ ರಕ್ತದ ಆಧಾರದ ಮೇಲೆ ತಮಗೆ ಕೊಡಲಾಗುವ ಕ್ಷಮಾಪಣೆಯನ್ನೂ ಸೇರಿಸಿ, ಯೆಹೋವನು ತನ್ನ ಪುತ್ರನ ಮೂಲಕ ಅವರಿಗಾಗಿ ಏನೆಲ್ಲ ಮಾಡಿದ್ದಾನೋ ಅದಕ್ಕಾಗಿ ಅವರು ಆಭಾರಿಗಳಾಗಿದ್ದಾರೆ.
14. ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸೇವಿಸುವ ಮೂಲಕ ಅಭಿಷಿಕ್ತರು ಹೇಗೆ ಆಧ್ಯಾತ್ಮಿಕವಾಗಿ ಬಲಗೊಳಿಸಲ್ಪಡುತ್ತಾರೆ?
14 ಪರಲೋಕದಲ್ಲಿ ಕ್ರಿಸ್ತನೊಂದಿಗೆ ಆಳಲಿಕ್ಕಾಗಿ ಕರೆಯಲ್ಪಟ್ಟಿರುವ ಚಿಕ್ಕ ಸಂಖ್ಯೆಯ ಕ್ರೈಸ್ತರ ಅಂತಿಮ ಮುದ್ರೆಯೊತ್ತುವಿಕೆಯು ಇನ್ನೇನು ಪೂರ್ಣಗೊಳ್ಳಲಿದೆ. ಭೂಮಿಯಲ್ಲಿ ತಮ್ಮ ತ್ಯಾಗಮಯ ಜೀವನವು ಕೊನೆಗೊಳ್ಳುವ ವರೆಗೆ ಅಭಿಷಿಕ್ತರು ಜ್ಞಾಪಕಾಚರಣೆಯ ಕುರುಹುಗಳನ್ನು ಸೇವಿಸುವ ಮೂಲಕ ಆಧ್ಯಾತ್ಮಿಕವಾಗಿ ಬಲಗೊಳಿಸಲ್ಪಡುತ್ತಾರೆ. ಕ್ರಿಸ್ತನ ದೇಹದ ಸದಸ್ಯರಾಗಿರುವ ಇತರ ಅಭಿಷಿಕ್ತ ಕ್ರೈಸ್ತರೊಂದಿಗೆ ಅವರು ಒಂದು ಐಕ್ಯ ಬಂಧವನ್ನು ಅನುಭವಿಸುತ್ತಾರೆ. ಅವರು ಸಾಂಕೇತಿಕವಾದ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸೇವಿಸುವುದು, ಮರಣದ ವರೆಗೂ ನಂಬಿಗಸ್ತರಾಗಿ ಉಳಿಯುವ ಅವರ ಜವಾಬ್ದಾರಿಯನ್ನು ಅವರಿಗೆ ನೆನಪು ಹುಟ್ಟಿಸುತ್ತದೆ.—2 ಪೇತ್ರ 1:10, 11.
‘ಭೂಮಿಯಲ್ಲಿರುವ ವಿಷಯಗಳನ್ನು’ ಒಟ್ಟುಗೂಡಿಸುವುದು
15. ಅಭಿಷಿಕ್ತ ಕ್ರೈಸ್ತರ ಪಕ್ಷಕ್ಕೆ ಯಾರನ್ನು ಒಟ್ಟುಗೂಡಿಸಲಾಗಿದೆ?
15 ಇಸವಿ 1930ಗಳ ಮಧ್ಯಭಾಗದಿಂದ, ‘ಚಿಕ್ಕ ಹಿಂಡಿನ’ ಭಾಗವಾಗಿಲ್ಲದಿರುವ ಮತ್ತು ಭೂಮಿಯಲ್ಲಿ ನಿತ್ಯಜೀವದ ನಿರೀಕ್ಷೆಯಿರುವ “ಬೇರೆ ಕುರಿಗಳ” ಅಧಿಕಗೊಳ್ಳುತ್ತಿರುವ ಸಂಖ್ಯೆಯ ಜನರು ಅಭಿಷಿಕ್ತರನ್ನು ಬೆಂಬಲಿಸಲಿಕ್ಕಾಗಿ ಅವರ ಪಕ್ಷವನ್ನು ಸೇರಿದ್ದಾರೆ. (ಯೋಹಾನ 10:16; ಲೂಕ 12:32; ಜೆಕರ್ಯ 8:23) ಅವರು ಕ್ರಿಸ್ತನ ಸಹೋದರರ ನಿಷ್ಠಾವಂತ ಸಂಗಡಿಗರಾಗಿ ಪರಿಣಮಿಸಿದ್ದಾರೆ ಮತ್ತು ಸರ್ವಲೋಕದಲ್ಲಿ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ “ರಾಜ್ಯದ ಈ ಸುವಾರ್ತೆ”ಯನ್ನು ಸಾರುವುದರಲ್ಲಿ ಅಮೂಲ್ಯವಾದ ಸಹಾಯವನ್ನು ನೀಡುತ್ತಿದ್ದಾರೆ. (ಮತ್ತಾಯ 24:14; 25:40) ಹೀಗೆ ಮಾಡುವ ಮೂಲಕ ಅವರು, ಕ್ರಿಸ್ತನು ಜನಾಂಗಗಳಿಗೆ ನ್ಯಾಯತೀರಿಸಲಿಕ್ಕಾಗಿ ಬರುವಾಗ ಅವನ ‘ಬಲಗಡೆಯಲ್ಲಿ’ ನಿಲ್ಲಿಸಲ್ಪಡುವಂಥ ‘ಕುರಿಗಳಾಗಿ’ ಅವನಿಂದ ತೀರ್ಪನ್ನು ಹೊಂದುವವರ ಸಾಲಿನಲ್ಲಿ ತಮ್ಮನ್ನು ಇರಿಸಿಕೊಂಡಿದ್ದಾರೆ. (ಮತ್ತಾಯ 25:33-36, 46) ಅವರು ಕ್ರಿಸ್ತನ ರಕ್ತದಲ್ಲಿ ನಂಬಿಕೆಯಿಡುವ ಮೂಲಕ, “ಮಹಾ ಹಿಂಸೆ” ಅಥವಾ ಮಹಾ ಸಂಕಟದಿಂದ ಪಾರಾಗಿ ಉಳಿಯುವಂಥ ‘ಮಹಾ ಸಮೂಹದ’ ಭಾಗವಾಗುವರು.—ಪ್ರಕಟನೆ 7:9-14.
16. ‘ಭೂಮಿಯಲ್ಲಿರುವ ವಿಷಯಗಳಲ್ಲಿ’ ಯಾರು ಒಳಗೂಡಿದ್ದಾರೆ, ಮತ್ತು ಇವರೆಲ್ಲರು ‘ದೇವರ ಮಕ್ಕಳಾಗುವ’ ಸದವಕಾಶವನ್ನು ಹೇಗೆ ಹೊಂದುವರು?
16 ಒಂದು ಲಕ್ಷದ ನಾಲ್ವತ್ತುನಾಲ್ಕು ಸಾವಿರ ಮಂದಿಯಲ್ಲಿ ಉಳಿಕೆಯವರ ಅಂತಿಮ ಮುದ್ರೆಯೊತ್ತಿಸುವಿಕೆಯ ಬಳಿಕ, ಭೂಮಿಯಲ್ಲಿರುವ ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯ ವಿರುದ್ಧ ನಾಶನದ ‘ಗಾಳಿಗಳು’ ಬಿಡುಗಡೆಮಾಡಲ್ಪಡುವವು. (ಪ್ರಕಟನೆ 7:1-4) ಕ್ರಿಸ್ತನ ಮತ್ತು ಅವನ ಜೊತೆ ರಾಜ-ಯಾಜಕರ ಸಾವಿರ ವರ್ಷದಾಳಿಕೆಯ ಸಮಯದಲ್ಲಿ, ಪುನರುತ್ಥಾನಗೊಳ್ಳುವ ಅಗಣಿತ ಸಂಖ್ಯೆಯ ಜನರು ಮಹಾ ಸಮೂಹವನ್ನು ಜೊತೆಗೂಡುವರು. (ಪ್ರಕಟನೆ 20:12, 13) ಮೆಸ್ಸೀಯ ರಾಜನಾಗಿರುವ ಕ್ರಿಸ್ತ ಯೇಸುವಿನ ಶಾಶ್ವತ ಭೂಪ್ರಜೆಗಳಾಗುವ ಸದವಕಾಶವು ಇವರಿಗೆ ಕೊಡಲ್ಪಡುವುದು. ಸಹಸ್ರ ವರ್ಷದಾಳಿಕೆಯ ಅಂತ್ಯದಲ್ಲಿ, ‘ಭೂಮಿಯ ಈ ಎಲ್ಲ ವಿಷಯಗಳು’ ಅಂತಿಮವಾಗಿ ಒಂದು ಪರೀಕ್ಷೆಗೆ ಗುರಿಪಡಿಸಲ್ಪಡುವರು. ಯಾರು ನಂಬಿಗಸ್ತರಾಗಿ ಕಂಡುಬರುತ್ತಾರೋ ಅವರನ್ನು ‘ದೇವರ ಭೂಮಕ್ಕಳಾಗಿ’ ಸ್ವೀಕರಿಸಲಾಗುವುದು.—ಎಫೆಸ 1:10; ರೋಮಾಪುರ 8:21; ಪ್ರಕಟನೆ 20:7, 8.
17. ಯೆಹೋವನ ಉದ್ದೇಶವು ಹೇಗೆ ಪೂರೈಸಲ್ಪಡುವುದು?
17 ಹೀಗೆ, ಅತ್ಯಧಿಕ ವಿವೇಕದಿಂದ ಕೂಡಿರುವ ತನ್ನ “ಆಡಳಿತ”ಕ್ಕನುಸಾರ ಅಥವಾ ವಿಷಯಗಳನ್ನು ನಿರ್ವಹಿಸುವ ವಿಧಕ್ಕನುಸಾರ, “ಪರಲೋಕದಲ್ಲಿರುವ ಮತ್ತು ಭೂಮಿಯಲ್ಲಿರುವ ಸಮಸ್ತ ವಿಷಯಗಳನ್ನು ಪುನಃ ಕ್ರಿಸ್ತನಲ್ಲಿ ಒಟ್ಟುಗೂಡಿಸುವ” ತನ್ನ ಉದ್ದೇಶವನ್ನು ಯೆಹೋವನು ಪೂರೈಸುವನು. ಮಹಾನ್ ಉದ್ದೇಶಕನಾಗಿರುವ ಯೆಹೋವನ ನೀತಿಯುತ ಪರಮಾಧಿಕಾರಕ್ಕೆ ಹರ್ಷಾನಂದದಿಂದ ತಮ್ಮನ್ನು ಅಧೀನಪಡಿಸಿಕೊಳ್ಳುತ್ತಾ, ಭೂಪರಲೋಕದಲ್ಲಿರುವ ಎಲ್ಲ ಬುದ್ಧಿವಂತ ಸೃಷ್ಟಿಜೀವಿಗಳು ವಿಶ್ವವ್ಯಾಪಿ ಶಾಂತಿಯಲ್ಲಿ ಒಟ್ಟುಗೂಡಿಸಲ್ಪಟ್ಟಿರುವರು.
18. ಅಭಿಷಿಕ್ತರು ಮತ್ತು ಅವರ ಸಂಗಡಿಗರು ಜ್ಞಾಪಕಾಚರಣೆಗೆ ಹಾಜರಾಗುವ ಮೂಲಕ ಹೇಗೆ ಪ್ರಯೋಜನವನ್ನು ಪಡೆಯುವರು?
18 ಇಸವಿ 2006, ಏಪ್ರಿಲ್ 12ರಂದು ಚಿಕ್ಕ ಸಂಖ್ಯೆಯ ಅಭಿಷಿಕ್ತ ಕ್ರೈಸ್ತರು ಮತ್ತು ಲಕ್ಷಾಂತರ ಮಂದಿಯಿಂದ ಕೂಡಿರುವ ಅವರ ಬೇರೆ ಕುರಿವರ್ಗದ ಸಂಗಡಿಗರು ಒಟ್ಟುಗೂಡುವುದು ಎಷ್ಟು ನಂಬಿಕೆಯನ್ನು ಬಲಪಡಿಸುವಂಥದ್ದಾಗಿರುವುದು! ‘ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡುತ್ತಾ ಇರಿ’ ಎಂದು ಯೇಸು ಆಜ್ಞಾಪಿಸಿದಂತೆಯೇ ಅವರು ಕ್ರಿಸ್ತನ ಮರಣದ ಜ್ಞಾಪಕಾಚರಣೆಯನ್ನು ಆಚರಿಸುವರು. (ಲೂಕ 22:19) ತನ್ನ ಪ್ರೀತಿಯ ಪುತ್ರನಾಗಿರುವ ಕ್ರಿಸ್ತ ಯೇಸುವಿನ ಮೂಲಕ ಯೆಹೋವನು ತಮಗಾಗಿ ಏನೆಲ್ಲ ಮಾಡಿದ್ದಾನೋ ಅದನ್ನು ಈ ಆಚರಣೆಗೆ ಹಾಜರಾಗುವವರೆಲ್ಲರು ಜ್ಞಾಪಿಸಿಕೊಳ್ಳತಕ್ಕದ್ದು.
ಪುನರ್ವಿಮರ್ಶೆ
• ಪರಲೋಕದಲ್ಲಿರುವ ಮತ್ತು ಭೂಮಿಯಲ್ಲಿರುವ ಸಮಸ್ತ ವಿಷಯಗಳಿಗಾಗಿ ಯೆಹೋವನ ಉದ್ದೇಶವೇನು?
• ‘ಪರಲೋಕದಲ್ಲಿರುವ ವಿಷಯಗಳು’ ಯಾರಾಗಿದ್ದಾರೆ, ಮತ್ತು ಅವರು ಹೇಗೆ ಒಟ್ಟುಗೂಡಿಸಲ್ಪಟ್ಟಿದ್ದಾರೆ?
• ‘ಭೂಮಿಯಲ್ಲಿರುವ ವಿಷಯಗಳು’ ಯಾರಾಗಿದ್ದಾರೆ, ಮತ್ತು ಇದರಲ್ಲಿ ಯಾವ ನಿರೀಕ್ಷೆಯು ಒಳಗೂಡಿದೆ?
[ಪುಟ 23ರಲ್ಲಿರುವ ಚೌಕ]
“ಕ್ರಿಸ್ತನ ದೇಹ”
ಕ್ರಿಸ್ತನ ಆತ್ಮಾಭಿಷಿಕ್ತ ಸಹೋದರರಿಗೆ ರೊಟ್ಟಿಯ ನಿರ್ದಿಷ್ಟ ಮಹತ್ವವನ್ನು ಚರ್ಚಿಸುತ್ತಾ, 1 ಕೊರಿಂಥ 10:16, 17ರಲ್ಲಿ ಪೌಲನು “ದೇಹ”ವನ್ನು ವಿಶೇಷ ಅರ್ಥದಲ್ಲಿ ಉಲ್ಲೇಖಿಸಿದನು. ಅವನಂದದ್ದು: “ನಾವು ರೊಟ್ಟಿಯನ್ನು ಮುರಿದು ತಿನ್ನುವದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಸೂಚಿಸುತ್ತದಲ್ಲವೇ. ರೊಟ್ಟಿಯು ಒಂದೇಯಾಗಿರುವದರಿಂದ ಅನೇಕರಾಗಿರುವ ನಾವು ಒಂದೇ ದೇಹದಂತಿದ್ದೇವೆ; ಯಾಕಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುತಕ್ಕೊಂಡು ತಿನ್ನುತ್ತೇವೆ.” ಅಭಿಷಿಕ್ತ ಕ್ರೈಸ್ತರು ಜ್ಞಾಪಕಾಚರಣೆಯ ರೊಟ್ಟಿಯನ್ನು ಸೇವಿಸುವಾಗ, ಅಭಿಷಿಕ್ತರ ಸಭೆಯೊಳಗಿರುವ ತಮ್ಮ ಐಕ್ಯವನ್ನು ಪ್ರಕಟಪಡಿಸುತ್ತಾರೆ; ಈ ಸಭೆಯು ಕ್ರಿಸ್ತನು ತಲೆಯಾಗಿರುವ ಒಂದು ದೇಹದಂತಿದೆ.—ಮತ್ತಾಯ 23:10; 1 ಕೊರಿಂಥ 12:12, 13, 18.
[ಪುಟ 23ರಲ್ಲಿರುವ ಚಿತ್ರಗಳು]
ಅಭಿಷಿಕ್ತರು ಮಾತ್ರ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ಸೇವಿಸುತ್ತಾರೆ ಏಕೆ?
[ಪುಟ 25ರಲ್ಲಿರುವ ಚಿತ್ರ]
ಯೆಹೋವನ ಆಡಳಿತದ ಮೂಲಕ, ಭೂಪರಲೋಕಗಳಲ್ಲಿರುವ ಎಲ್ಲ ಸೃಷ್ಟಿಜೀವಿಗಳು ಐಕ್ಯಗೊಳಿಸಲ್ಪಡುವರು