ನೋಯಿಸುವ ನುಡಿಗಳಿಂದ ಗುಣವಾಗಿಸುವ ನುಡಿಗಳಿಗೆ
“ಜೀವನಮರಣಗಳು ನಾಲಿಗೆಯ ವಶ.”—ಜ್ಞಾನೋಕ್ತಿ 18:21.
ಬೈಯುವಿಕೆ—ಇದು ಅವಮಾನಿಸುವ, ನಿಂದಾತ್ಮಕ ಮಾತನ್ನು ಉಪಯೋಗಿಸುವ ಒಂದು ಉದ್ದೇಶಪೂರ್ವಕ ರೂಢಿಯಾಗಿದ್ದು, ಬೈಬಲಿನಲ್ಲಿ ಸ್ಪಷ್ಟವಾಗಿ ಖಂಡಿಸಲ್ಪಟ್ಟಿದೆ. ಮೋಶೆಯ ಧರ್ಮಶಾಸ್ತ್ರದ ಕೆಳಗೆ, ತನ್ನ ಹೆತ್ತವರಿಗೆ ಬೈಯ್ದಿರುವ ಒಬ್ಬ ವ್ಯಕ್ತಿಯು ಮರಣದಂಡನೆಗೆ ಗುರಿಯಾಗಸಾಧ್ಯವಿತ್ತು. (ವಿಮೋಚನಕಾಂಡ 21:17) ಹೀಗೆ, ಯೆಹೋವ ದೇವರು ಈ ವಿಷಯವನ್ನು ಹಗುರವಾಗಿ ವೀಕ್ಷಿಸುವುದಿಲ್ಲ. ಒಬ್ಬನು ತಾನು ದೇವರನ್ನು ಸೇವಿಸುತ್ತೇನೆಂದು ಪ್ರತಿಪಾದಿಸುವಷ್ಟರ ತನಕ, ‘ಮುಚ್ಚಿದ ದ್ವಾರಗಳ ಹಿಂದೆ’ ಏನೇ ಸಂಭವಿಸಲಿ ಅದು ಹೆಚ್ಚು ಪ್ರಾಮುಖ್ಯವಾದ ವಿಷಯವಾಗಿರುವುದಿಲ್ಲ ಎಂಬ ಕಲ್ಪನೆಯನ್ನು, ಆತನ ವಾಕ್ಯವಾದ ಬೈಬಲು ಬೆಂಬಲಿಸುವುದಿಲ್ಲ. ಬೈಬಲು ಹೇಳುವುದು: “ಸದ್ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನವಾಗಿದೆ.” (ಯಾಕೋಬ 1:26; ಕೀರ್ತನೆ 15:1, 3) ಆದುದರಿಂದ ಒಬ್ಬ ಪುರುಷನು ತನ್ನ ಹೆಂಡತಿಯನ್ನು ಶಾಬ್ದಿಕವಾಗಿ ನಿಂದಿಸುವುದಾದರೆ, ಅವನ ಇತರ ಎಲ್ಲಾ ಕ್ರೈಸ್ತ ಕಾರ್ಯಗಳು ದೇವರ ದೃಷ್ಟಿಯಲ್ಲಿ ನಿಷ್ಪ್ರಯೋಜಕವಾಗಿ ನಿರೂಪಿಸಸಾಧ್ಯವಿದೆ.a—1 ಕೊರಿಂಥ 13:1-3.
ಇದಲ್ಲದೆ, ಬೈಯುವವನಾಗಿರುವ ಒಬ್ಬ ಕ್ರೈಸ್ತನು ಸಭೆಯಿಂದ ಹೊರಹಾಕಲ್ಪಡುವುದನ್ನು ಎದುರಿಸಸಾಧ್ಯವಿದೆ. ಅವನು ದೇವರ ರಾಜ್ಯದ ಆಶೀರ್ವಾದಗಳನ್ನು ಸಹ ಕಳೆದುಕೊಳ್ಳಸಾಧ್ಯವಿದೆ. (1 ಕೊರಿಂಥ 5:11; 6:9, 10) ಸ್ಪಷ್ಟವಾಗಿಯೇ, ತನ್ನ ಮಾತುಗಳಿಂದ ವೇದನೆಯನ್ನುಂಟುಮಾಡುವವನಾಗಿರುವ ಒಬ್ಬ ವ್ಯಕ್ತಿಯು, ಪ್ರಚಂಡವಾದ ಬದಲಾವಣೆಯನ್ನು ಮಾಡಿಕೊಳ್ಳುವ ಅಗತ್ಯವಿದೆ. ಆದರೆ ಇದನ್ನು ಹೇಗೆ ಸಾಧಿಸಸಾಧ್ಯವಿದೆ?
ಸಮಸ್ಯೆಯನ್ನು ಬೆಳಕಿಗೆ ತರುವುದು
ತನಗೆ ಒಂದು ಗಂಭೀರವಾದ ಸಮಸ್ಯೆಯಿದೆ ಎಂಬುದನ್ನು ಅವನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಹೊರತು, ಒಬ್ಬ ಅಪರಾಧಿಯು ಬದಲಾಗುವುದಿಲ್ಲ ಎಂಬುದು ಸುವ್ಯಕ್ತ. ಅಸಂತೋಷಕರವಾಗಿಯೇ ಒಬ್ಬ ಸಲಹೆಗಾರ್ತಿಯು ಗಮನಿಸಿದಂತೆ, ನಿಂದಾತ್ಮಕ ಮಾತುಗಳನ್ನು ಉಪಯೋಗಿಸುವ ಅನೇಕ ಪುರುಷರು, “ತಮ್ಮ ನಡವಳಿಕೆಯನ್ನು ಅಪಪ್ರಯೋಗವೆಂದು ಎಣಿಸುವುದೇ ಇಲ್ಲ. ಈ ಪುರುಷರಿಗೆ, ಅಂತಹ ಕ್ರಿಯೆಗಳು ಸಂಪೂರ್ಣವಾಗಿ ಸಾಮಾನ್ಯವಾಗಿವೆ ಮತ್ತು ಗಂಡಹೆಂಡತಿಯರು ಪರಸ್ಪರವಾಗಿ ಕಾರ್ಯನಡಿಸುವ ‘ಸಹಜ’ ರೀತಿಯಾಗಿವೆ.” ಹೀಗೆ, ಈ ಸನ್ನಿವೇಶವು ಮುಚ್ಚುಮರೆಯಿಲ್ಲದೆ ಅವರ ಗಮನಕ್ಕೆ ತರಲ್ಪಡುವ ವರೆಗೆ, ಅನೇಕರು ಬದಲಾವಣೆಯನ್ನು ಮಾಡುವ ಅಗತ್ಯವನ್ನು ಕಾಣುವುದಿಲ್ಲ.
ಅನೇಕವೇಳೆ, ಹೆಂಡತಿಯು ತನ್ನ ಸನ್ನಿವೇಶವನ್ನು ಪ್ರಾರ್ಥನಾಪೂರ್ವಕವಾಗಿ ತೂಗಿನೋಡಿದ ಬಳಿಕ, ತನ್ನ ಸ್ವಂತ ಹಿತಕ್ಕಾಗಿ ಹಾಗೂ ತನ್ನ ಮಕ್ಕಳ ಹಿತಕ್ಕಾಗಿ ಮತ್ತು ದೇವರೊಂದಿಗಿನ ತನ್ನ ಗಂಡನ ನಿಲುವಿನ ಕುರಿತಾದ ಚಿಂತೆಯಿಂದಾಗಿ, ಅವಳ ಅಭಿಪ್ರಾಯವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವಂತೆ ನಿರ್ಬಂಧಿಸಲ್ಪಡುವಳು. ನಿಜ, ಅಭಿಪ್ರಾಯವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವುದು ವಿಷಯಗಳನ್ನು ಹೆಚ್ಚು ಕೆಟ್ಟದ್ದಾಗಿ ಮಾಡಬಹುದಾದ ಹಾಗೂ ಅವಳ ಮಾತುಗಳು ನಿರಾಕರಣೆಗಳ ಸುರಿಮಳೆಯನ್ನು ಸಂಧಿಸಬಹುದಾದ ಸಂದರ್ಭವು ಯಾವಾಗಲೂ ಇರುತ್ತದೆ. ತಾನು ವಿಷಯವನ್ನು ಹೇಗೆ ಪ್ರಸ್ತಾಪಿಸುವೆನು ಎಂಬುದಕ್ಕೆ ಜಾಗರೂಕವಾದ ಮುಂದಾಲೋಚನೆಯನ್ನು ಕೊಡುವ ಮೂಲಕ, ಒಬ್ಬ ಹೆಂಡತಿಯು ಇದನ್ನು ಉಪಾಯದಿಂದ ತಪ್ಪಿಸಿಕೊಳ್ಳಸಾಧ್ಯವಿರಬಹುದು. “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ” ಎಂದು ಹೇಳುತ್ತದೆ ಬೈಬಲ್. (ಜ್ಞಾನೋಕ್ತಿ 25:11) ಸೌಮ್ಯವಾದ ಆದರೂ ಪ್ರಶಾಂತವಾದ ಕ್ಷಣದಲ್ಲಿನ ಮುಚ್ಚುಮರೆಯಿಲ್ಲದ ಸಮೀಪಿಸುವಿಕೆಯು, ಅವನ ಹೃದಯವನ್ನು ತಲಪಬಹುದು.—ಜ್ಞಾನೋಕ್ತಿ 15:1.
ದೂಷಣೆಗಳನ್ನು ಮಾಡುವುದಕ್ಕೆ ಬದಲಾಗಿ, ಕಟುವಾದ ಮಾತುಗಳು ತನ್ನನ್ನು ಹೇಗೆ ಬಾಧಿಸುತ್ತವೆ ಎಂಬ ದೃಷ್ಟಿಕೋನದಿಂದ, ಹೆಂಡತಿಯೊಬ್ಬಳು ತನ್ನನ್ನು ವ್ಯಕ್ತಪಡಿಸಿಕೊಳ್ಳಲು ಪ್ರಯತ್ನಿಸಬೇಕು. “ನಾನು” ಎಂಬ ಹೇಳಿಕೆಗಳು ಅನೇಕವೇಳೆ ಅತ್ಯುತ್ತಮವಾಗಿ ಕಾರ್ಯನಡಿಸುತ್ತವೆ. ಉದಾಹರಣೆಗಾಗಿ, ‘ಈ . . . ಕಾರಣದಿಂದ ನನಗೆ ವೇದನೆಯ ಅನಿಸಿಕೆಯಾಗುತ್ತದೆ’ ಅಥವಾ ‘ನೀವು ನನಗೆ ಹೀಗೆ . . . ಹೇಳುವಾಗ ನನಗೆ ಜರ್ಜರಿತ ಅನಿಸಿಕೆಯಾಗುತ್ತದೆ.’ ಅಂತಹ ಹೇಳಿಕೆಗಳು ಹೃದಯವನ್ನು ತಲಪುವುದು ಹೆಚ್ಚು ಸಂಭವನೀಯ, ಏಕೆಂದರೆ ಅವು ಆ ವ್ಯಕ್ತಿಯ ಮೇಲೆ ಆಕ್ರಮಣಮಾಡುವುದಕ್ಕಿಂತಲೂ ಸಮಸ್ಯೆಯ ಮೇಲೆ ಆಕ್ರಮಣಮಾಡುತ್ತವೆ.—ಆದಿಕಾಂಡ 27:46–28:1ನ್ನು ಹೋಲಿಸಿರಿ.
ಒಬ್ಬ ಹೆಂಡತಿಯ ದೃಢವಾದ, ಆದರೂ ಚತುರವಾದ ಅಡ್ಡೈಸುವಿಕೆಯು ಒಳ್ಳೆಯ ಫಲಿತಾಂಶಗಳನ್ನು ಪಡೆದುಕೊಳ್ಳಸಾಧ್ಯವಿದೆ. (ಕೀರ್ತನೆ 141:5ನ್ನು ಹೋಲಿಸಿರಿ.) ನಾವು ಸ್ಟೀವನ್ ಎಂದು ಕರೆಯುವ ಒಬ್ಬ ಮನುಷ್ಯನು, ಇದನ್ನು ಹಾಗಿರುವುದಾಗಿ ಕಂಡುಕೊಂಡನು. “ನನ್ನ ಹೆಂಡತಿಯು ನನ್ನಲ್ಲಿರುವ, ನಾನು ನೋಡಲಸಾಧ್ಯವಾದ ನಿಂದಾತ್ಮಕ ಪ್ರವೃತ್ತಿಯನ್ನು ಗ್ರಹಿಸಿದಳು, ಮತ್ತು ಅದರ ಕುರಿತು ನನಗೆ ಹೇಳುವ ಸ್ಥೈರ್ಯವನ್ನು ಹೊಂದಿದ್ದಳು” ಎಂದು ಅವನು ಹೇಳುತ್ತಾನೆ.
ಸಹಾಯವನ್ನು ಪಡೆದುಕೊಳ್ಳುವುದು
ಆದರೆ ಅವಳ ಗಂಡನು ಸಮಸ್ಯೆಯನ್ನು ಒಪ್ಪಿಕೊಳ್ಳಲು ನಿರಾಕರಿಸುವಲ್ಲಿ ಒಬ್ಬ ಹೆಂಡತಿಯು ಏನು ಮಾಡಬಲ್ಲಳು? ಈ ಹಂತದಲ್ಲಿ ಕೆಲವು ಹೆಂಡತಿಯರು ಹೊರಗಿನ ಸಹಾಯವನ್ನು ಪಡೆದುಕೊಳ್ಳುತ್ತಾರೆ. ಅಂತಹ ಸಂಕಟಕರ ಸಮಯಗಳಲ್ಲಿ, ಯೆಹೋವನ ಸಾಕ್ಷಿಗಳು ತಮ್ಮ ಸಭಾ ಹಿರಿಯರನ್ನು ಸಮೀಪಿಸಸಾಧ್ಯವಿದೆ. ದೇವರ ಆತ್ಮಿಕ ಮಂದೆಯನ್ನು ಪರಿಪಾಲಿಸುವಾಗ, ಈ ಪುರುಷರು ಪ್ರೀತಿಪೂರ್ಣರೂ ದಯಾಪೂರ್ಣರೂ ಆಗಿದ್ದು, ಅದೇ ಸಮಯದಲ್ಲಿ, ದೇವರ ವಾಕ್ಯದ ಸ್ವಸ್ಥಕರವಾದ ಬೋಧನೆಗೆ “ಪ್ರತಿಹೇಳುವವರನ್ನು ಆಕ್ಷೇಪಿಸು”ವವರೂ (NW) ಆಗಿರುವಂತೆ ಬೈಬಲು ಪ್ರಚೋದಿಸುತ್ತದೆ. (ತೀತ 1:9; 1 ಪೇತ್ರ 5:1-3) ವಿವಾಹಿತ ದಂಪತಿಗಳ ವೈಯಕ್ತಿಕ ವ್ಯವಹಾರಗಳಲ್ಲಿ ತಲೆಹಾಕುವುದು ಅವರ ಕರ್ತವ್ಯವಾಗಿಲ್ಲದಿರುವುದಾದರೂ, ಒಬ್ಬ ಸಂಗಾತಿಯು ಇನ್ನೊಬ್ಬ ಸಂಗಾತಿಯ ಕಟುವಾದ ಮಾತಿನಿಂದ ಬಾಧಿಸಲ್ಪಡುವಾಗ, ಯುಕ್ತವಾಗಿಯೇ ಹಿರಿಯರು ಚಿಂತೆಯುಳ್ಳವರಾಗಿರುತ್ತಾರೆ. (ಜ್ಞಾನೋಕ್ತಿ 21:13) ಬೈಬಲ್ ಮಟ್ಟಗಳಿಗೆ ನಿಕಟವಾಗಿ ಅಂಟಿಕೊಳ್ಳುತ್ತಾ, ಈ ಪುರುಷರು ನಿಂದಾತ್ಮಕ ಮಾತಿಗೆ ವಿನಾಯಿತಿ ನೀಡುವುದಿಲ್ಲ ಅಥವಾ ಕಡಿಮೆ ಅಂದಾಜುಮಾಡುವುದಿಲ್ಲ.b
ಗಂಡಹೆಂಡತಿಯರ ನಡುವಿನ ಸಂವಾದವನ್ನು ಸುಲಭಗೊಳಿಸಲು ಹಿರಿಯರು ಶಕ್ತರಾಗಿರಬಹುದು. ಉದಾಹರಣೆಗಾಗಿ, ಒಬ್ಬ ಜೊತೆ ಆರಾಧಕನಾದ ತನ್ನ ಗಂಡನಿಂದ ಅನೇಕ ವರ್ಷಗಳ ಶಾಬ್ದಿಕ ಹೊಡೆತವನ್ನು ಅನುಭವಿಸಿದೆನೆಂದು ಹೇಳಿಕೊಂಡ ಒಬ್ಬ ಸ್ತ್ರೀಯು, ಹಿರಿಯನೊಬ್ಬನನ್ನು ಸಮೀಪಿಸಿದಳು. ಆ ಹಿರಿಯನು ಅವರಿಬ್ಬರನ್ನೂ ಸಂಧಿಸುವ ಏರ್ಪಾಡುಮಾಡಿದನು. ಪ್ರತಿಯೊಬ್ಬ ಸಂಗಾತಿಯೂ ಮಾತಾಡಿದಂತೆ, ಅವನು ಇನ್ನೊಬ್ಬ ಸಂಗಾತಿಯನ್ನು ಮಧ್ಯೆಪ್ರವೇಶಿಸದೆ ಆ ಮಾತನ್ನು ಆಲಿಸುವಂತೆ ಕೇಳಿಕೊಂಡನು. ಅದು ಹೆಂಡತಿಯ ಸರದಿಯಾಗಿದ್ದಾಗ, ತನ್ನ ಗಂಡನ ಸಿಡಿದೇಳುವ ಕೋಪವನ್ನು ತಾನು ಇನ್ನುಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅವಳು ಹೇಳಿದಳು. ಅವನು ಮನೆಗೆ ಬಂದಾಗ, ಅವನು ಕೋಪದ ಮನೋವೃತ್ತಿಯಲ್ಲಿದ್ದಾನೋ ಇಲ್ಲವೋ ಎಂಬುದನ್ನು ಎಂದಿಗೂ ತಿಳಿದುಕೊಳ್ಳಲಾಗದೆ, ಅನೇಕ ವರ್ಷಗಳಿಂದ ತಾನು ಭಯಗೊಂಡಿದ್ದೆನೆಂದು ಅವಳು ವಿವರಿಸಿದಳು. ಅವನು ಸಿಡಿದೆದ್ದಾಗ, ಅವನು ಅವಳ ಕುಟುಂಬದ ಕುರಿತು, ಅವಳ ಮಿತ್ರರ ಕುರಿತು, ಹಾಗೂ ಸ್ವತಃ ಅವಳ ಕುರಿತು ಹೀನಾಯವಾದ ವಿಷಯಗಳನ್ನು ಹೇಳುತ್ತಿದ್ದನು.
ಅವಳ ಗಂಡನ ಮಾತುಗಳು ಅವಳಲ್ಲಿ ಯಾವ ಅನಿಸಿಕೆಯನ್ನು ಉಂಟುಮಾಡಿದವೆಂಬುದನ್ನು ವಿವರಿಸುವಂತೆ ಆ ಹಿರಿಯನು ಹೆಂಡತಿಯನ್ನು ಕೇಳಿಕೊಂಡನು. “ಯಾರೊಬ್ಬರೂ ಪ್ರೀತಿಸಸಾಧ್ಯವಿರದಷ್ಟು ಕೆಟ್ಟ ವ್ಯಕ್ತಿ ನಾನಾಗಿದ್ದೆ ಎಂಬಂತೆ ನನಗನಿಸಿತು” ಎಂಬುದಾಗಿ ಅವಳು ಪ್ರತ್ಯುತ್ತರಿಸಿದಳು. “‘ಅಮ್ಮ, ನನ್ನೊಂದಿಗೆ ಜೀವಿಸುವುದನ್ನು ಕಷ್ಟಕರವಾಗಿ ಮಾಡುವಂತಹ ವ್ಯಕ್ತಿ ನಾನಾಗಿದ್ದೆನೊ? ನಾನು ಪ್ರೀತಿಸಲು ಅನರ್ಹಳೊ?’ ಎಂದು ನಾನು ಕೆಲವೊಮ್ಮೆ ನನ್ನ ತಾಯಿಯ ಬಳಿ ಕೇಳುತ್ತಿದ್ದೆ.” ಅವನ ಮಾತುಗಳು ತನ್ನಲ್ಲಿ ಯಾವ ಅನಿಸಿಕೆಯನ್ನು ಉಂಟುಮಾಡಿದವೆಂಬುದನ್ನು ಅವಳು ವರ್ಣಿಸಿದಂತೆ, ಅವಳ ಗಂಡನು ಅಳಲಾರಂಭಿಸಿದನು. ಮೊದಲ ಬಾರಿಗೆ, ಅವನು ತನ್ನ ಮಾತುಗಳಿಂದ ತಾನು ತನ್ನ ಹೆಂಡತಿಗೆ ಎಷ್ಟು ಗಾಢವಾಗಿ ನೋವನ್ನುಂಟುಮಾಡುತ್ತಿದ್ದೆ ಎಂಬುದನ್ನು ಅವಲೋಕಿಸಸಾಧ್ಯವಾಯಿತು.
ನೀವು ಬದಲಾಗಸಾಧ್ಯವಿದೆ
ಪ್ರಥಮ ಶತಮಾನದಲ್ಲಿ ಕೆಲವು ಕ್ರೈಸ್ತರಿಗೆ ನಿಂದಾತ್ಮಕ ಮಾತಿನೊಂದಿಗಿನ ಸಮಸ್ಯೆಯು ಇತ್ತು. “ಕ್ರೋಧ ಕೋಪ ಮತ್ಸರ ದೂಷಣೆ [“ನಿಂದಾತ್ಮಕ ಮಾತು,” NW] . . . ದುರ್ಭಾಷೆ”ಯನ್ನು ವಿಸರ್ಜಿಸಿಬಿಡುವಂತೆ ಕ್ರೈಸ್ತ ಅಪೊಸ್ತಲ ಪೌಲನು ಅವರಿಗೆ ಬುದ್ಧಿಹೇಳಿದನು. (ಕೊಲೊಸ್ಸೆ 3:8) ಹಾಗಿದ್ದರೂ, ಕಟುವಾದ ಮಾತು ನಾಲಿಗೆಗಿಂತಲೂ ಹೆಚ್ಚಾಗಿ ಹೃದಯದ ಒಂದು ಸಮಸ್ಯೆಯಾಗಿದೆ. (ಲೂಕ 6:45) ಆದುದರಿಂದ ಪೌಲನು ಕೂಡಿಸಿದ್ದು: “ಹಳೆಯ ವ್ಯಕ್ತಿತ್ವವನ್ನು ಅದರ ಸ್ವಭಾವಗಳೊಂದಿಗೆ ತೆಗೆದುಹಾಕಿರಿ, ಮತ್ತು ಸ್ವತಃ ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ.” (ಕೊಲೊಸ್ಸೆ 3:9, 10, NW) ಆದುದರಿಂದ ಬದಲಾವಣೆಯು, ಬೇರೆ ರೀತಿಯಲ್ಲಿ ಮಾತಾಡುವುದನ್ನು ಮಾತ್ರವಲ್ಲ, ಬೇರೆ ರೀತಿಯಲ್ಲಿ ಭಾವಿಸುವುದನ್ನೂ ಒಳಗೂಡುತ್ತದೆ.
ನೋಯಿಸುವ ಮಾತನ್ನು ಉಪಯೋಗಿಸುವ ಒಬ್ಬ ಗಂಡನಿಗೆ, ತನ್ನ ನಡವಳಿಕೆಯನ್ನು ಯಾವುದು ಪ್ರಚೋದಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಸಹಾಯದ ಅಗತ್ಯವಿರಬಹುದು.c ಅವನು ಕೀರ್ತನೆಗಾರನ ಮನೋಭಾವವನ್ನು ಪಡೆದುಕೊಳ್ಳಲು ಬಯಸಸಾಧ್ಯವಿದೆ: “ದೇವಾ, ನನ್ನನ್ನು ಪರೀಕ್ಷಿಸಿ ನೋಡು, ಮತ್ತು ನನ್ನ ಹೃದಯವನ್ನು ತಿಳಿದುಕೋ. ನನ್ನನ್ನು ಪರೀಕ್ಷಿಸಿ ನೋಡು, ಮತ್ತು ನನ್ನ ಅಶಾಂತಿಯನ್ನುಂಟುಮಾಡುವ ಆಲೋಚನೆಗಳನ್ನು ತಿಳಿದುಕೊಂಡು, ನನ್ನಲ್ಲಿ ಯಾವುದಾದರೂ ಕಟುವಾದ ರೀತಿಯಿದೆಯೋ ಎಂಬುದನ್ನು ನೋಡು.” (ಕೀರ್ತನೆ 139:23, 24, NW) ಉದಾಹರಣೆಗಾಗಿ: ಅವನಿಗೆ ತನ್ನ ಸಂಗಾತಿಯ ಮೇಲೆ ದಬ್ಬಾಳಿಕೆನಡೆಸುವ, ಅಥವಾ ಅವಳನ್ನು ನಿಯಂತ್ರಿಸುವ ಅನಿಸಿಕೆ ಏಕೆ ಉಂಟಾಗುತ್ತದೆ? ಒಂದು ಶಾಬ್ದಿಕ ದಾಳಿಯನ್ನು ಯಾವುದು ಕೆರಳಿಸುತ್ತದೆ? ಅವನ ಆಕ್ರಮಣಗಳು ಹೆಚ್ಚು ಗಾಢವಾದ ಅಸಮಾಧಾನದ ಲಕ್ಷಣವಾಗಿವೆಯೊ? (ಜ್ಞಾನೋಕ್ತಿ 15:18) ಟೀಕಾತ್ಮಕವಾದ ಮಾತಿನಿಂದ ಗುರುತಿಸಲ್ಪಟ್ಟ ತನ್ನ ಪಾಲನೆಯಿಂದ ಫಲಿಸಿರಬಹುದಾದ, ನಿಷ್ಪ್ರಯೋಜಕ ಅನಿಸಿಕೆಗಳಿಂದ ಅವನು ಕಷ್ಟಾನುಭವಿಸುತ್ತಾನೊ? ಅಂತಹ ಪ್ರಶ್ನೆಗಳು, ತನ್ನ ನಡವಳಿಕೆಯ ಮೂಲಗಳನ್ನು ಬಯಲುಪಡಿಸಲು ಒಬ್ಬ ಮನುಷ್ಯನಿಗೆ ಸಹಾಯ ಮಾಡಬಲ್ಲವು.
ಆದರೂ, ವಿಶೇಷವಾಗಿ ಸ್ವತಃ ಶಾಬ್ದಿಕವಾಗಿ ಮರ್ಮಭೇದಕರಾಗಿದ್ದ ಹೆತ್ತವರಿಂದ ಅಥವಾ ದಬ್ಬಾಳಿಕೆನಡೆಸುವ ನಡವಳಿಕೆಯನ್ನು ಪ್ರವರ್ಧಿಸುವ ಒಂದು ಸಂಸ್ಕೃತಿಯಿಂದ ಬೋಧನೆಯು ಪಡೆದುಕೊಳ್ಳಲ್ಪಟ್ಟಿರುವಲ್ಲಿ, ನಿಂದಾತ್ಮಕ ಮಾತನ್ನು ನಿರ್ಮೂಲಮಾಡುವುದು ಕಷ್ಟಕರವಾದದ್ದಾಗಿದೆ. ಆದರೆ ಕಲಿತಿರುವ ಯಾವುದೇ ವಿಷಯವನ್ನು, ಸಮಯ ಹಾಗೂ ಪ್ರಯತ್ನದಿಂದ ತೊರೆದುಬಿಡಸಾಧ್ಯವಿದೆ. ಈ ವಿಷಯದಲ್ಲಿ ಬೈಬಲು ಅತ್ಯಂತ ದೊಡ್ಡ ಸಹಾಯಕವಾಗಿದೆ. ಇದು ಹೆಚ್ಚು ಬಲವತ್ತಾಗಿ ತಳವೂರಿರುವ ನಡವಳಿಕೆಯನ್ನೂ ಕೆಡವಿಬಿಡಲು ಒಬ್ಬನಿಗೆ ಸಹಾಯ ಮಾಡಬಲ್ಲದು. (2 ಕೊರಿಂಥ 10:4, 5ನ್ನು ಹೋಲಿಸಿರಿ.) ಹೇಗೆ?
ದೇವ-ನೇಮಿತ ಪಾತ್ರಗಳ ಕುರಿತಾದ ಯೋಗ್ಯ ನೋಟ
ಅನೇಕವೇಳೆ, ಶಾಬ್ದಿಕವಾಗಿ ನೋಯಿಸುವಂತಹವರಾಗಿರುವ ಪುರುಷರು, ಗಂಡಹೆಂಡತಿಯರಿಗಾಗಿರುವ ದೇವ-ನೇಮಿತ ಪಾತ್ರಗಳ ಕುರಿತು ಅಪಾರ್ಥವಾದ ನೋಟವುಳ್ಳವರಾಗಿದ್ದಾರೆ. ಉದಾಹರಣೆಗಾಗಿ, ಹೆಂಡತಿಯರು “ಗಂಡಂದಿರಿಗೆ ಅಧೀನರಾಗಿ”ರಬೇಕು ಮತ್ತು “ಗಂಡನು ಹೆಂಡತಿಗೆ ತಲೆಯಾಗಿದ್ದಾನೆ” ಎಂದು ಬೈಬಲ್ ಬರಹಗಾರನಾದ ಪೌಲನು ಹೇಳುತ್ತಾನೆ. (ಎಫೆಸ 5:22, 23) ತಲೆತನವು ತನಗೆ ಸಂಪೂರ್ಣ ನಿಯಂತ್ರಣದ ಅಧಿಕಾರವನ್ನು ಕೊಡುತ್ತದೆಂದು ಒಬ್ಬ ಗಂಡನು ಭಾವಿಸಬಹುದು. ಆದರೆ ಇದು ಹಾಗಿರುವುದಿಲ್ಲ. ಅವನ ಹೆಂಡತಿಯು ಅವನ ಅಧೀನತೆಯಲ್ಲಿರುವುದಾದರೂ, ಅವನ ದಾಸಿಯಲ್ಲ. ಅವಳು ಅವನ “ಸಹಾಯಕಳು” ಹಾಗೂ “ಪೂರಕಳು” ಆಗಿದ್ದಾಳೆ. (ಆದಿಕಾಂಡ 2:18, NW) ಹೀಗೆ, ಪೌಲನು ಕೂಡಿಸುವುದು: “ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ. . . . ಸಭೆಯೆಂಬ ಆ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಸಂರಕ್ಷಿಸುತ್ತಾನಲ್ಲಾ.”—ಎಫೆಸ 5:28-30.
ಕ್ರೈಸ್ತ ಸಭೆಯ ಹಿರಿಯನೋಪಾದಿ, ಟೀಕೆಯ ಮುಂದಿನ ತಲೆದೋರುವಿಕೆಯು ಯಾವಾಗ ಸಂಭವಿಸುವುದೆಂಬ ಭಯದಿಂದ ತನ್ನ ಶಿಷ್ಯರು ಚಿಂತೆಗೊಳ್ಳುವಂತೆ ಮಾಡುತ್ತಾ, ಯೇಸು ಎಂದೂ ಅವರನ್ನು ಬೈದುಕೆಡವಲಿಲ್ಲ. ಬದಲಾಗಿ, ಅವನು ಕೋಮಲನಾಗಿದ್ದನು, ಅದರ ಪರಿಣಾಮವಾಗಿ ಅವರ ಘನತೆಯನ್ನು ಸಂರಕ್ಷಿಸಿದನು. “ನಾನು ನಿಮಗೆ ವಿಶ್ರಾಂತಿಕೊಡುವೆನು” ಎಂಬುದಾಗಿ ಅವನು ಅವರಿಗೆ ವಾಗ್ದಾನಿಸಿದನು. ‘ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿದ್ದೇನೆ.’ (ಮತ್ತಾಯ 11:28, 29) ಯೇಸು ತನ್ನ ತಲೆತನವನ್ನು ಹೇಗೆ ವಿನಿಯೋಗಿಸಿಕೊಂಡನು ಎಂಬುದರ ಕುರಿತು ಪ್ರಾರ್ಥನಾಪೂರ್ವಕವಾದ ಮನನಮಾಡುವಿಕೆಯು, ತನ್ನ ತಲೆತನವನ್ನು ಹೆಚ್ಚು ಸಮತೂಕದ ಪ್ರಭೆಯಲ್ಲಿ ದೃಷ್ಟಿಸುವಂತೆ ಒಬ್ಬ ಗಂಡನಿಗೆ ಸಹಾಯ ಮಾಡಬಲ್ಲದು.
ಮಾನಸಿಕ ಉದ್ವೇಗಗಳು ಏಳುವಾಗ
ಬೈಬಲ್ ಮೂಲತತ್ವಗಳನ್ನು ತಿಳಿದುಕೊಂಡಿರುವುದು ಅಷ್ಟೇನೂ ಕಷ್ಟದ ವಿಷಯವಾಗಿರುವುದಿಲ್ಲ; ಒತ್ತಡದ ಕೆಳಗಿರುವಾಗ ಅವುಗಳನ್ನು ಅನ್ವಯಿಸಿಕೊಳ್ಳುವುದು ಹೆಚ್ಚು ಕಷ್ಟಕರವಾದ ಕೆಲಸವಾಗಿದೆ. ಮಾನಸಿಕ ಉದ್ವೇಗಗಳು ಏಳುವಾಗ, ಗಂಡನೊಬ್ಬನು ಕಟುವಾದ ಮಾತಿನ ರೀತಿಯೊಳಗೆ ಪುನಃ ಜಾರುವುದನ್ನು ಹೇಗೆ ತಡೆಯಬಲ್ಲನು?
ತಾನು ಕ್ಷೋಭೆಗೊಂಡಿರುವಾಗ ಶಾಬ್ದಿಕವಾಗಿ ಆಕ್ರಮಣಮಾಡುವವನಾಗಿರುವುದು, ಒಬ್ಬ ಗಂಡನಿಗೆ ಪುರುಷತ್ವದ ಸಂಕೇತವಾಗಿರುವುದಿಲ್ಲ. ಬೈಬಲು ಹೇಳುವುದು: “ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ; ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.” (ಜ್ಞಾನೋಕ್ತಿ 16:32) ಒಬ್ಬ ನೈಜ ಮನುಷ್ಯನು ತನ್ನ ಮನೋಭಾವವನ್ನು ನಿಯಂತ್ರಿಸಿಕೊಳ್ಳುತ್ತಾನೆ. ‘ನನ್ನ ಮಾತುಗಳು ನನ್ನ ಹೆಂಡತಿಯನ್ನು ಹೇಗೆ ಬಾಧಿಸುತ್ತವೆ? ನಾನು ಅವಳ ಸ್ಥಾನದಲ್ಲಿದ್ದಿದ್ದರೆ, ನನಗೆ ಹೇಗನಿಸುತ್ತಿತ್ತು?’ ಎಂಬುದನ್ನು ಪರಿಗಣಿಸುವ ಮೂಲಕ ಅವನು ಸಹಾನುಭೂತಿಯನ್ನು ತೋರಿಸುತ್ತಾನೆ.—ಮತ್ತಾಯ 7:12ನ್ನು ಹೋಲಿಸಿರಿ.
ಆದರೂ, ಕೆಲವು ಪರಿಸ್ಥಿತಿಗಳು ಕೋಪವನ್ನು ಕೆರಳಿಸಬಲ್ಲವೆಂಬುದನ್ನು ಬೈಬಲು ಒಪ್ಪಿಕೊಳ್ಳುತ್ತದೆ. ಅಂತಹ ಸನ್ನಿವೇಶಗಳ ಕುರಿತಾಗಿ ಕೀರ್ತನೆಗಾರನು ಬರೆದುದು: “ಭಯಪಡಿರಿ, ಪಾಪಮಾಡಬೇಡಿರಿ, ಮೌನವಾಗಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.” (ಕೀರ್ತನೆ 4:4) ಅದು ಈ ರೀತಿಯಲ್ಲಿಯೂ ಹೇಳಲ್ಪಟ್ಟಿದೆ: “ಕೋಪಿಷ್ಠರಾಗಿರುವುದರಲ್ಲಿ ಏನೂ ತಪ್ಪಿಲ್ಲ, ಆದರೆ ಅಣಕದಮಾತಾಡುವವರೂ, ಅಪಮಾನಮಾಡುವಂತಹವರೂ ಅಥವಾ ಹೀನಯಿಸುವವರೂ ಆಗಿರುವ ಮೂಲಕ ಶಾಬ್ದಿಕವಾಗಿ ಆಕ್ರಮಣಮಾಡುವುದು ತಪ್ಪಾಗಿದೆ.”
ತನ್ನ ಮಾತಿನ ಹತೋಟಿಯನ್ನು ತಾನು ಕಳೆದುಕೊಳ್ಳುತ್ತಿದ್ದೇನೆಂಬ ಅನಿಸಿಕೆ ಒಬ್ಬ ಗಂಡನಿಗಾಗುವುದಾದರೆ, ಅವನು ವಿರಾಮವನ್ನು ಪಡೆದುಕೊಳ್ಳಲು ಕಲಿಯಸಾಧ್ಯವಿದೆ. ಬಹುಶಃ ಕೋಣೆಯನ್ನು ಬಿಟ್ಟುಹೋಗುವುದು, ತಿರುಗಾಡಲು ಹೋಗುವುದು, ಅಥವಾ ಶಾಂತರಾಗಲಿಕ್ಕಾಗಿ ಒಂದು ಖಾಸಗಿ ಸ್ಥಳವನ್ನು ಕಂಡುಕೊಳ್ಳುವುದು ವಿವೇಕಯುತವಾದದ್ದಾಗಿರುವುದು. ಜ್ಞಾನೋಕ್ತಿ 17:14 (NW) ಹೇಳುವುದು: “ಜಗಳವು ಆರಂಭವಾಗುವುದಕ್ಕೆ ಮೊದಲೇ, ನೀವು ಅಲ್ಲಿಂದ ಹೊರಟುಹೋಗಿ.” ಮನಃಸ್ಥಿತಿಗಳು ಶಾಂತವಾಗಿರುವಾಗ, ಆ ಚರ್ಚೆಯನ್ನು ಪುನಃ ಆರಂಭಿಸಿರಿ.
ನಿಶ್ಚಯವಾಗಿಯೂ ಯಾರೊಬ್ಬರೂ ಪರಿಪೂರ್ಣರಲ್ಲ. ಕಟುವಾದ ಮಾತಿನೊಂದಿಗಿನ ಸಮಸ್ಯೆಯನ್ನು ಹೊಂದಿದ್ದ ಗಂಡನೊಬ್ಬನು ಪುನಃ ಹಿಂದಿನ ಸ್ಥಿತಿಗೆ ಮರಳಬಹುದು. ಇದು ಸಂಭವಿಸುವಾಗ, ಅವನು ತಪ್ಪೊಪ್ಪಿಕೊಳ್ಳಬೇಕು. “ನೂತನ ವ್ಯಕ್ತಿತ್ವ” (NW)ವನ್ನು ಧರಿಸಿಕೊಳ್ಳುವುದು, ಒಂದು ಸತತವಾದ ಪ್ರಕ್ರಿಯೆಯಾಗಿದೆಯಾದರೂ, ಅದು ಧಾರಾಳವಾದ ಪ್ರತಿಫಲಗಳನ್ನು ಕೊಯ್ಯುತ್ತದೆ.—ಕೊಲೊಸ್ಸೆ 3:10.
ಗುಣವಾಗಿಸುವ ಮಾತುಗಳು
ಹೌದು, “ಜೀವನಮರಣಗಳು ನಾಲಿಗೆಯ ವಶ.” (ಜ್ಞಾನೋಕ್ತಿ 18:21) ಕಟುವಾದ ಮಾತನ್ನು, ಒಂದು ವಿವಾಹದ ಆತ್ಮೋನ್ನತಿಮಾಡುವ ಹಾಗೂ ಅದನ್ನು ಬಲಪಡಿಸುವ ಮಾತುಗಳಿಂದ ಪುನರ್ಭರ್ತಿಮಾಡತಕ್ಕದ್ದು. ಒಂದು ಬೈಬಲ್ ಜ್ಞಾನೋಕ್ತಿಯು ಹೇಳುವುದು: “ಸವಿನುಡಿಯು ಜೇನುಕೊಡ; ಅದು ಆತ್ಮಕ್ಕೆ [“ಪ್ರಾಣಕ್ಕೆ,” NW] ಸಿರಿ, ಎಲುಬಿಗೆ ಕ್ಷೇಮ.”—ಜ್ಞಾನೋಕ್ತಿ 16:24.
ಕೆಲವು ವರ್ಷಗಳ ಹಿಂದೆ, ಬಲವಾದ ಕುಟುಂಬಗಳು ಪರಿಣಾಮಕರವಾಗಿ ಕಾರ್ಯನಡಿಸಲು ಯಾವ ಅಂಶಗಳು ಕಾರಣವಾದವು ಎಂಬುದನ್ನು ನಿರ್ಧರಿಸಲಿಕ್ಕಾಗಿ ಒಂದು ಅಧ್ಯಯನವು ನಡೆಸಲ್ಪಟ್ಟಿತು. “ಆ ಅಧ್ಯಯನವು ಕಂಡುಕೊಂಡದ್ದೇನಂದರೆ, ಈ ಕುಟುಂಬಗಳ ಸದಸ್ಯರು ಒಬ್ಬರನ್ನೊಬ್ಬರು ಇಷ್ಟಪಟ್ಟರು, ಮತ್ತು ತಾವು ಒಬ್ಬರನ್ನೊಬ್ಬರು ಇಷ್ಟಪಟ್ಟೆವೆಂಬುದನ್ನು ಪರಸ್ಪರವಾಗಿ ಹೇಳಿಕೊಳ್ಳುತ್ತಿದ್ದರು” ಎಂಬುದಾಗಿ ವಿವಾಹದ ವಿಶೇಷಜ್ಞರಾದ ಡೇವಿಡ್ ಆರ್. ಮಾಸ್ ವರದಿಸುತ್ತಾರೆ. “ಅವರು ಒಬ್ಬರು ಇನ್ನೊಬ್ಬರ ಕುರಿತಾಗಿ ಸಮ್ಮತಿಯನ್ನು ವ್ಯಕ್ತಪಡಿಸಿದರು, ಪರಸ್ಪರವಾಗಿ ವೈಯಕ್ತಿಕ ಪ್ರಯೋಜನದ ಅರ್ಥವನ್ನು ಕೊಟ್ಟರು, ಮತ್ತು ಯುಕ್ತವಾದ ಪ್ರತಿಯೊಂದು ಸಂದರ್ಭವನ್ನು ಮಾತಾಡಲಿಕ್ಕಾಗಿ ಹಾಗೂ ವಾತ್ಸಲ್ಯದಿಂದ ಕ್ರಿಯೆಗೈಯಲಿಕ್ಕಾಗಿ ಉಪಯೋಗಿಸಿಕೊಂಡರು. ಫಲಿತಾಂಶವಾಗಿ, ತೀರ ಸ್ವಾಭಾವಿಕವಾಗಿಯೇ, ಅವರು ಒಟ್ಟಿಗಿರುವ ಮೂಲಕ ಆನಂದಿಸಿದರು ಮತ್ತು ತಮ್ಮ ಸಂಬಂಧಗಳನ್ನು ಹೆಚ್ಚು ಸಂತೃಪ್ತಿದಾಯಕವಾಗಿ ಮಾಡಿದಂತಹ ವಿಧಾನಗಳಲ್ಲಿ ಪರಸ್ಪರ ಬಲಪಡಿಸಿಕೊಂಡರು.”
ದೇವಭಯವುಳ್ಳ ಯಾವ ಗಂಡನೇ ಆಗಲಿ, ತನ್ನ ಮಾತುಗಳಿಂದ ತನ್ನ ಹೆಂಡತಿಯನ್ನು ಉದ್ದೇಶಪೂರ್ವಕವಾಗಿ ನೋಯಿಸುವುದಾದರೆ, ತಾನು ತನ್ನ ಹೆಂಡತಿಯನ್ನು ಪ್ರೀತಿಸುತ್ತೇನೆಂದು ಸತ್ಯವಾಗಿ ಹೇಳಲಾರನು. (ಕೊಲೊಸ್ಸೆ 3:19) ನಿಶ್ಚಯವಾಗಿಯೂ, ತನ್ನ ಗಂಡನ ಮೇಲೆ ಶಾಬ್ದಿಕ ಹೊಡೆತವನ್ನುಂಟುಮಾಡುವ ಒಬ್ಬ ಸ್ತ್ರೀಯ ಕುರಿತಾಗಿಯೂ ಇದೇ ವಿಷಯವು ಸತ್ಯವಾಗಿರುವುದು. ವಾಸ್ತವವಾಗಿ, ಪೌಲನು ಎಫೆಸದವರಿಗೆ ಕೊಟ್ಟಂತಹ ಬುದ್ಧಿವಾದವನ್ನು ಅನುಸರಿಸುವುದು, ಇಬ್ಬರೂ ಸಂಗಾತಿಗಳ ಹಂಗಾಗಿದೆ: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.”—ಎಫೆಸ 4:29.
[ಅಧ್ಯಯನ ಪ್ರಶ್ನೆಗಳು]
a ನಾವು ಅಪರಾಧಿಯನ್ನು ಪುರುಷ ಸಂಬೋಧನೆಯಿಂದ ಸೂಚಿಸುವುದಾದರೂ, ಇಲ್ಲಿರುವ ಸೂತ್ರಗಳು ಸ್ತ್ರೀಯರಿಗೂ ಸಮಾನವಾಗಿ ಅನ್ವಯವಾಗುತ್ತವೆ.
b ಒಬ್ಬ ಹಿರಿಯನಾಗಿ ಅರ್ಹನಾಗಲು ಅಥವಾ ಹಿರಿಯನಾಗಿ ಸೇವೆ ಮಾಡುತ್ತಾ ಮುಂದುವರಿಯಲು, ಒಬ್ಬ ಮನುಷ್ಯನು ಪೀಡಕನಾಗಿರಬಾರದು. ಅವನು ಜನರ ಮೇಲೆ ಶಾರೀರಿಕವಾಗಿ ಗಾಢವಾದ ಪರಿಣಾಮವನ್ನುಂಟುಮಾಡುವವನಾಗಲಿ ಮನಸ್ಸನ್ನು ನೋಯಿಸುವಂತಹ ಹೇಳಿಕೆಗಳಿಂದ ಅವರನ್ನು ಬೆದರಿಸುವವನಾಗಲಿ ಆಗಿರಸಾಧ್ಯವಿಲ್ಲ. ಹಿರಿಯರು ಹಾಗೂ ಶುಶ್ರೂಷಾ ಸೇವಕರು ತಮ್ಮ ಸ್ವಂತ ಮನೆವಾರ್ತೆಗಳ ಮೇಲೆ, ಒಂದು ಅತ್ಯುತ್ತಮವಾದ ರೀತಿಯಲ್ಲಿ ಮೇಲ್ವಿಚಾರಣೆ ನಡೆಸುವವರಾಗಿರಬೇಕು. ಅವನು ತನ್ನ ಮನೆಯ ಹೊರಗೆ ತನ್ನನ್ನು ಬಹಳ ದಯಾಪರನಾಗಿ ತೋರ್ಪಡಿಸಿಕೊಳ್ಳಬಹುದಾದರೂ, ತನ್ನ ಮನೆಯಲ್ಲಿ ಅವನು ದಬ್ಬಾಳಿಕೆನಡೆಸುವವನಾಗಿರುವಲ್ಲಿ, ಆ ಮನುಷ್ಯನು ಅರ್ಹನಾಗುವುದಿಲ್ಲ.—1 ತಿಮೊಥೆಯ 3:2-4, 12.
c ಕ್ರೈಸ್ತನೊಬ್ಬನು ನಿಂದಾತ್ಮಕ ನಡವಳಿಕೆಗಾಗಿ ಚಿಕಿತ್ಸೆಯನ್ನು ಬೆನ್ನಟ್ಟುವುದು, ಒಂದು ವೈಯಕ್ತಿಕ ನಿರ್ಣಯವಾಗಿದೆ. ಆದರೂ, ತಾನು ಪಡೆದುಕೊಳ್ಳುವ ಯಾವುದೇ ಚಿಕಿತ್ಸೆಯು, ಬೈಬಲ್ ಮೂಲತತ್ವಗಳೊಂದಿಗೆ ಸಂಘರ್ಷಿಸುವುದಿಲ್ಲ ಎಂಬುದನ್ನು ಅವನು ಖಚಿತಪಡಿಸಿಕೊಳ್ಳತಕ್ಕದ್ದು.
[ಪುಟ 0 ರಲ್ಲಿರುವ ಚಿತ್ರ]
ಕ್ರೈಸ್ತ ಹಿರಿಯನೊಬ್ಬನು, ಒಬ್ಬ ದಂಪತಿಗಳು ಸಂವಾದಮಾಡುವಂತೆ ಸಹಾಯ ಮಾಡಲು ಶಕ್ತನಾಗಿರಬಹುದು
[ಪುಟ 21 ರಲ್ಲಿರುವ ಚಿತ್ರ]
ಗಂಡಹೆಂಡತಿಯರು ಪರಸ್ಪರ ಅರ್ಥಮಾಡಿಕೊಳ್ಳಲಿಕ್ಕಾಗಿ ನಿಜವಾದ ಪ್ರಯತ್ನವನ್ನು ಮಾಡಬೇಕು