ಗಂಡಂದಿರೇ, ಕ್ರಿಸ್ತನ ತಲೆತನವನ್ನು ಒಪ್ಪಿಕೊಳ್ಳಿರಿ
“ಪ್ರತಿ ಪುರುಷನಿಗೂ ಕ್ರಿಸ್ತನು ತಲೆ.”—1 ಕೊರಿಂಥ 11:3.
ಒಬ್ಬ ಗಂಡನ ಯಶಸ್ಸನ್ನು ನೀವು ಹೇಗೆ ಅಳೆಯುವಿರಿ? ಅವನ ಮಾನಸಿಕ ಅಥವಾ ದೈಹಿಕ ಬಲದಿಂದಲೊ? ಹಣ ಸಂಪಾದಿಸುವ ಅವನ ಸಾಮರ್ಥ್ಯದಿಂದಲೊ? ಇಲ್ಲವೆ, ಮುಖ್ಯವಾಗಿ ಅವನು ತನ್ನ ಹೆಂಡತಿ ಮಕ್ಕಳನ್ನು ಪ್ರೀತಿಸಿ ದಯಾಭಾವದಿಂದ ನೋಡಿಕೊಳ್ಳುವ ವಿಧದಿಂದಲೊ? ಈ ಕೊನೆಯ ವಿಧದಲ್ಲಿ ಅನೇಕ ಗಂಡಂದಿರು ವಿಫಲರಾಗುತ್ತಾರೆ. ಕಾರಣವೇನೆಂದರೆ ಅವರು ಲೋಕದ ಮನೋಭಾವ ಮತ್ತು ಮಾನವ ಮಟ್ಟಗಳಿಂದ ಪ್ರಭಾವಿತರಾಗಿದ್ದಾರೆ. ಇದೇಕೆ? ಏಕೆಂದರೆ ಅವರು ಮದುವೆಯ ಮೂಲಕರ್ತನ ಮಾರ್ಗದರ್ಶನವನ್ನು ಅಂಗೀಕರಿಸಿ ಅನ್ವಯಿಸದೆ ಇರುವುದರಿಂದಲೇ. “ಮನುಷ್ಯನಿಂದ ತೆಗೆದಿದ್ದ ಎಲುಬನ್ನು ಸ್ತ್ರೀಯಾಗ ಮಾಡಿ ಆಕೆಯನ್ನು ಅವನ ಬಳಿಗೆ” ಕರೆತಂದವನು ಆತನೇ.—ಆದಿಕಾಂಡ 2:21-24.
2 ಮದುವೆಯ ದೈವಿಕ ಮೂಲದ ಕುರಿತ ಆ ಬೈಬಲ್ ವೃತ್ತಾಂತವನ್ನು ಯೇಸು ತನ್ನ ಟೀಕಾಕಾರರಿಗೆ ಹೀಗೆ ಹೇಳುತ್ತ ದೃಢೀಕರಿಸಿದನು: “ಮನುಷ್ಯರನ್ನು ನಿರ್ಮಾಣ ಮಾಡಿದವನು ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ ಅವರ ವಿಷಯದಲ್ಲಿ—ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು ಎಂದು ಹೇಳಿದನೆಂಬದಾಗಿ ನೀವು ಓದಲಿಲ್ಲವೋ? ಹೀಗಿರುವಲ್ಲಿ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು [ಮದುವೆಯಲ್ಲಿ] ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” (ಮತ್ತಾಯ 19:4-6) ಹೀಗಿರುವುದರಿಂದ ಯಶಸ್ವೀ ವಿವಾಹದ ನಿಜ ಕೀಲಿಕೈ ಯಾವುದೆಂದರೆ ವಿವಾಹವು ದೈವಿಕ ಮೂಲದ್ದಾಗಿದೆ ಎಂದು ಅಂಗೀಕರಿಸಿ ದೇವರ ವಾಕ್ಯವಾದ ಬೈಬಲಿನ ಸಲಹೆಯನ್ನು ಪಾಲಿಸುವುದೇ.
ಗಂಡನ ಯಶಸ್ಸಿಗೆ ಕೀಲಿಕೈ
3 ಗಂಡನ ಯಶಸ್ಸಿಗೆ ಒಂದು ಸಹಾಯವು ಯೇಸು ಹೇಳಿದ್ದನ್ನು ಅಧ್ಯಯನಮಾಡಿ ಅವನು ಮಾಡಿದ್ದನ್ನು ಅನುಸರಿಸುವುದೇ. ಮದುವೆಯ ವಿಷಯದಲ್ಲಿ ಯೇಸುವಿಗಿರುವ ಪರಿಜ್ಞಾನವು ಅಗಾಧ. ಏಕೆಂದರೆ ಪ್ರಥಮ ಮಾನವಜೋಡಿಯ ನಿರ್ಮಾಣ ಹಾಗೂ ಅವರ ಮದುವೆಯ ಸಮಯದಲ್ಲಿ ಅವನಿದ್ದನು. ಯೆಹೋವನು ಅವನಿಗೆ, “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ” ಎಂದು ಹೇಳಿದನು. (ಆದಿಕಾಂಡ 1:26) ಹೌದು, ದೇವರು ಸಮಸ್ತಕ್ಕೂ ಮುಂಚಿತವಾಗಿ ನಿರ್ಮಿಸಿದ ಮತ್ತು ‘ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡ’ ಯೇಸುವಿನೊಂದಿಗೆ ಮಾತಾಡುತ್ತಿದ್ದನು. (ಜ್ಞಾನೋಕ್ತಿ 8:22-30) ಅವನು ‘ಸೃಷ್ಟಿಗೆಲ್ಲಾ ಜೇಷ್ಠಪುತ್ರನು’ ಆಗಿದ್ದಾನೆ. ‘ದೇವರ ಸೃಷ್ಟಿಗೆ ಮೂಲನು’ ಅಂದರೆ ಭೌತಿಕ ವಿಶ್ವದ ಸೃಷ್ಟಿಗೂ ಮೊದಲು ಅವನು ಇದ್ದವನು.—ಕೊಲೊಸ್ಸೆ 1:15; ಪ್ರಕಟನೆ 3:14.
4 “ದೇವರು ನೇಮಿಸಿದ ಕುರಿ” ಎಂದು ಕರೆಯಲಾಗಿರುವ ಯೇಸು ಸಾಂಕೇತಿಕವಾಗಿ ಒಬ್ಬ ಗಂಡನಾಗಿ ಚಿತ್ರಿಸಲ್ಪಟ್ಟಿದ್ದಾನೆ. ಒಬ್ಬ ದೇವದೂತನು ಒಮ್ಮೆ ಹೇಳಿದ್ದು: “ಬಾ, ಯಜ್ಞದ ಕುರಿಯಾದಾತನಿಗೆ ಹೆಂಡತಿಯಾಗತಕ್ಕ ಮದಲಗಿತ್ತಿಯನ್ನು ನಿನಗೆ ತೋರಿಸುವೆನು.” (ಯೋಹಾನ 1:29; ಪ್ರಕಟನೆ 21:9) ಹಾಗಾದರೆ ಆ ಮದಲಗಿತ್ತಿ ಅಥವಾ ಅವನ ಹೆಂಡತಿ ಯಾರು? ‘ಆ ಕುರಿಯಾದಾತನ ಹೆಂಡತಿ’ ಕ್ರಿಸ್ತನ ನಂಬಿಗಸ್ತ ಆತ್ಮಾಭಿಷಿಕ್ತ ಹಿಂಬಾಲಕರಾಗಿದ್ದಾರೆ. ಸ್ವರ್ಗೀಯ ಆಳ್ವಿಕೆಯಲ್ಲಿ ಅವನೊಂದಿಗೆ ಪಾಲಿಗರಾಗುವವರು ಅವರೇ. (ಪ್ರಕಟನೆ 14:1, 3) ಆದುದರಿಂದ, ಯೇಸು ಭೂಮಿಯ ಮೇಲಿದ್ದಾಗ ಅವರನ್ನು ಉಪಚರಿಸಿದ ವಿಧವು ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ನೋಡಿಕೊಳ್ಳಬೇಕೆಂಬುದಕ್ಕೆ ಒಂದು ಆದರ್ಶವಾಗಿದೆ.
5 ಯೇಸುವನ್ನು ಬೈಬಲಿನಲ್ಲಿ ಅವನ ಎಲ್ಲ ಹಿಂಬಾಲಕರಿಗೆ ಉತ್ತಮ ಮಾದರಿಯಾಗಿ ತೋರಿಸಲಾಗಿದೆ ನಿಜ. ನಾವು ಓದುವುದು: “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಆದರೂ ಅವನು ವಿಶೇಷವಾಗಿ ಪುರುಷರಿಗೆ ಆದರ್ಶವಾಗಿದ್ದಾನೆ. ಬೈಬಲ್ ಹೇಳುವುದು: “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಕ್ರಿಸ್ತನು ಪುರುಷನಿಗೆ ತಲೆಯಾಗಿರುವುದರಿಂದ ಗಂಡಂದಿರು ಅವನ ಮಾದರಿಯನ್ನು ಅನುಸರಿಸಬೇಕು. ಹೀಗೆ, ಕುಟುಂಬವು ಯಶಸ್ಸನ್ನು ಮತ್ತು ಸಂತೋಷವನ್ನು ಪಡೆದುಕೊಳ್ಳಬೇಕಾದರೆ ತಲೆತನದ ಮೂಲತತ್ತ್ವವನ್ನು ಅನ್ವಯಿಸಿಕೊಳ್ಳಲೇಬೇಕು. ಆದುದರಿಂದ, ಯೇಸು ತನ್ನ ಸಾಂಕೇತಿಕ ಹೆಂಡತಿಯಾದ ಅಭಿಷಿಕ್ತ ಹಿಂಬಾಲಕರೊಂದಿಗೆ ವ್ಯವಹರಿಸಿದ ರೀತಿಯಲ್ಲೇ ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು.
ವೈವಾಹಿಕ ಸಮಸ್ಯೆಗಳನ್ನು ಎದುರಿಸುವ ವಿಧ
6 ಇಂದಿನ ಕ್ಲೇಶಭರಿತ ಲೋಕದಲ್ಲಿ ವಿಶೇಷವಾಗಿ ಗಂಡಂದಿರು ಯೇಸುವಿನ ಮಾದರಿಯನ್ನು ಅನುಸರಿಸುವುದು ಅಗತ್ಯ. ಅವರು ಯೇಸುವಿನಂತೆಯೇ ತಾಳ್ಮೆ, ಪ್ರೀತಿ ಮತ್ತು ನೀತಿತತ್ತ್ವಗಳನ್ನು ಎತ್ತಿ ಹಿಡಿಯುವುದರಲ್ಲಿ ಸ್ಥಿರತೆಯನ್ನು ತೋರಿಸಬೇಕು. (2 ತಿಮೊಥೆಯ 3:1-5) ಯೇಸು ಇಟ್ಟ ಆದರ್ಶ ಮಾದರಿಯ ಕುರಿತು ನಾವು ಬೈಬಲಿನಲ್ಲಿ ಓದುವುದು: “ಅದೇ ರೀತಿಯಾಗಿ ಪುರುಷರೇ, . . . ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ.” (1 ಪೇತ್ರ 3:7) ಹೌದು, ಗಂಡಂದಿರು ವೈವಾಹಿಕ ಸಮಸ್ಯೆಗಳನ್ನು ಯೇಸುವಿನಂತೆಯೇ ವಿವೇಕದಿಂದ ಎದುರಿಸಬೇಕು. ಬೇರೆ ಯಾವ ಮಾನವರಿಗಿಂತಲೂ ಯೇಸು ಹೆಚ್ಚು ದೊಡ್ಡದಾದ ಪರೀಕ್ಷೆಗಳನ್ನು ಎದುರಿಸಿದನು. ಆದರೆ ಅವುಗಳಿಗೆ ಸೈತಾನನೂ ಅವನ ದೆವ್ವಗಳೂ ಮತ್ತು ಈ ದುಷ್ಟ ಲೋಕವೂ ಜವಾಬ್ದಾರರೆಂಬ ತಿಳಿವು ಅವನಿಗಿತ್ತು. (ಯೋಹಾನ 14:30; ಎಫೆಸ 6:12) ಸಮಸ್ಯೆಗಳು ಎದ್ದುಬಂದಾಗ ಯೇಸು ಎಂದಿಗೂ ಆಶ್ಚರ್ಯಗೊಳ್ಳಲಿಲ್ಲ. ಅಂತೆಯೇ “ಶರೀರಸಂಬಂಧವಾಗಿ ಕಷ್ಟ” ಅನುಭವಿಸುವಾಗ ದಂಪತಿಗಳು ಸಹ ಆಶ್ಚರ್ಯಪಡಬಾರದು. ಯಾಕೆಂದರೆ ಮದುವೆಯಾಗುವವರು ಇಂತಹ ಕಷ್ಟಗಳನ್ನು ನಿರೀಕ್ಷಿಸಬಹುದೆಂದು ಬೈಬಲ್ ಎಚ್ಚರಿಸುತ್ತದೆ.—1 ಕೊರಿಂಥ 7:28.
7 ಹೆಂಡತಿಯು “ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು . . . ವಿವೇಕದಿಂದ” ಒಗತನಮಾಡಿ ಅವಳಿಗೆ ‘ಮಾನವನ್ನು ಸಲ್ಲಿಸುವಂತೆ’ ಬೈಬಲ್ ಗಂಡಂದಿರಿಗೆ ತಿಳಿಸುತ್ತದೆ. (1 ಪೇತ್ರ 3:7) ಸಾಮಾನ್ಯವಾಗಿ ಪುರುಷರು ಹೆಂಡತಿಯರ ಮೇಲೆ ಕಟು ಅಧಿಕಾರ ನಡೆಸುವರೆಂದು ಬೈಬಲ್ ಹೇಳುತ್ತದೆ. (ಆದಿಕಾಂಡ 3:16) ಆದರೆ ದೇವರ ಮನ್ನಣೆಯನ್ನು ಪಡೆಯುವ ಗಂಡನು ಹಾಗೆ ಮಾಡದೆ ಆಕೆಗೆ ಮಾನವನ್ನು ಸಲ್ಲಿಸುವನು ಅಂದರೆ ಗೌರವಿಸುವನು. ಅವನು ಆಕೆಯನ್ನು ಬೆಲೆಬಾಳುವ ಸ್ವತ್ತಾಗಿ ಕಾಣುವನೇ ಹೊರತು ತನ್ನ ದೈಹಿಕ ಬಲವನ್ನು ತೋರಿಸಿ ಅವಳನ್ನು ನೋಯಿಸನು. ಅವನು ಆಕೆಯ ಭಾವನೆಗಳಿಗೆ ಸ್ಪಂದಿಸಿ ಸದಾ ಗೌರವ ಮತ್ತು ಘನತೆಯಿಂದ ನೋಡಿಕೊಳ್ಳುವನು.
8 ಗಂಡಂದಿರು ತಮ್ಮ ಹೆಂಡತಿಯರಿಗೆ ಯೋಗ್ಯ ಗೌರವವನ್ನು ಏಕೆ ತೋರಿಸಬೇಕು? ಬೈಬಲ್ ಉತ್ತರಿಸುವುದು: “ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.” (1 ಪೇತ್ರ 3:7) ಯೆಹೋವನನ್ನು ಆರಾಧಿಸುವ ಒಬ್ಬ ಪುರುಷನು ಆತನನ್ನು ಆರಾಧಿಸುವ ಸ್ತ್ರೀಗಿಂತ ಯಾವುದೇ ವಿಧದಲ್ಲೂ ಶ್ರೇಷ್ಠನಲ್ಲ ಎಂಬುದನ್ನು ಗಂಡಂದಿರು ತಿಳಿದಿರಬೇಕು. ದೇವರ ಮೆಚ್ಚಿಕೆಗೆ ಪಾತ್ರರಾದ ಸ್ತ್ರೀಯರು ಪುರುಷರೊಂದಿಗೆ ನಿತ್ಯಜೀವದ ಅದೇ ಪ್ರತಿಫಲದಲ್ಲಿ ಪಾಲಿಗರಾಗುವರು. ಅನೇಕ ಸ್ತ್ರೀಯರು ಸ್ವರ್ಗದ ಜೀವಿತವನ್ನೂ ಪಡೆಯುವರು. ‘ಗಂಡು ಹೆಣ್ಣು ಎಂಬ ಭೇದ’ ಅಲ್ಲಿಲ್ಲ. (ಗಲಾತ್ಯ 3:28) ದೇವರಿಗೆ ಒಬ್ಬನನ್ನು ಅಮೂಲ್ಯವಾಗಿ ಮಾಡುವುದು ಆ ವ್ಯಕ್ತಿಯ ನಂಬಿಗಸ್ತಿಕೆಯೇ ಆಗಿದೆಯೆಂದು ಗಂಡಂದಿರು ನೆನಪಿನಲ್ಲಿಡಬೇಕು. ಗಂಡಾಗಲಿ ಹೆಣ್ಣಾಗಲಿ ಪತಿಯಾಗಲಿ ಪತ್ನಿಯಾಗಲಿ ಅಥವಾ ಮಗುವೇ ಆಗಿರಲಿ ದೇವರ ದೃಷ್ಟಿಯಲ್ಲಿ ಅದು ಮುಖ್ಯವಲ್ಲ. ಅವರ ನಂಬಿಗಸ್ತಿಕೆಯೇ ಮುಖ್ಯ.—1 ಕೊರಿಂಥ 4:2.
9 ಗಂಡನು ಹೆಂಡತಿಯನ್ನು ಗೌರವದಿಂದ ನೋಡಿಕೊಳ್ಳುವುದು ಎಷ್ಟು ಆವಶ್ಯ ಎಂಬುದನ್ನು 1 ಪೇತ್ರ 3:7ರ ಕಡೆಯ ಮಾತುಗಳಲ್ಲಿ ಅಪೋಸ್ತಲ ಪೇತ್ರನು ಒತ್ತಿಹೇಳುತ್ತಾನೆ. ಅವೇನಂದರೆ, “ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.” ಇಂಥ ಅಡ್ಡಿ ಎಷ್ಟು ಅಪಾಯಕರವಾಗಿರಬಲ್ಲದು! ಹೌದು, ಒಬ್ಬ ಗಂಡನು ತನ್ನ ಹೆಂಡತಿಗೆ ಮಾನವನ್ನು ಸಲ್ಲಿಸದಿದ್ದಲ್ಲಿ ಅದು ಅವನ ಪ್ರಾರ್ಥನೆಗೆ ಅಡ್ಡಿಯಾಗಬಲ್ಲದು. ಗತಕಾಲಗಳಲ್ಲಿ ದುರ್ಲಕ್ಷ್ಯಭಾವದ ದೇವರ ಸೇವಕರಿಗೂ ಹಾಗಾಯಿತು. (ಪ್ರಲಾಪಗಳು 3:43, 44) ಆದುದರಿಂದ, ವಿವಾಹಿತರು ಮತ್ತು ವಿವಾಹವಾಗಲು ಇಚ್ಛಿಸುವ ಕ್ರೈಸ್ತ ಪುರುಷರು ಯೇಸು ಸ್ತ್ರೀಯರನ್ನು ಘನತೆಯಿಂದ ನೋಡಿಕೊಂಡ ರೀತಿಯನ್ನು ವಿವೇಚನೆಯಿಂದ ಅಧ್ಯಯನಮಾಡುವರು. ತನ್ನೊಂದಿಗೆ ಶುಶ್ರೂಷೆ ಮಾಡುತ್ತಿದ್ದ ಗುಂಪಿಗೆ ಯೇಸು ಸ್ತ್ರೀಯರನ್ನು ಸ್ವಾಗತಿಸಿದನು. ಅವನು ಅವರನ್ನು ದಯೆಯಿಂದ ನೋಡಿಕೊಂಡನು, ಗೌರವವನ್ನು ತೋರಿಸಿದನು. ಒಂದು ಸಂದರ್ಭದಲ್ಲಿ ಯೇಸು ಚಕಿತಗೊಳಿಸುವ ಸತ್ಯವೊಂದನ್ನು ಪ್ರಥಮವಾಗಿ ಸ್ತ್ರೀಯರಿಗೆ ತಿಳಿಸಿ, ಅನಂತರ ಅದನ್ನು ಪುರುಷರಿಗೆ ತಿಳಿಸುವಂತೆ ಹೇಳಿದ್ದೂ ಉಂಟು!—ಮತ್ತಾಯ 28:1, 8-10; ಲೂಕ 8:1-3.
ವಿಶೇಷವಾಗಿ ಗಂಡಂದಿರಿಗೆ ಮಾದರಿ
10 ಈ ಮೊದಲೇ ಗಮನಿಸಿರುವಂತೆ, ಗಂಡನಿಗೆ ತನ್ನ ಹೆಂಡತಿಯೊಂದಿಗಿರುವ ಸಂಬಂಧವನ್ನು ಕ್ರಿಸ್ತನಿಗೆ ತನ್ನ “ಮದಲಗಿತ್ತಿ”ಯೊಂದಿಗೆ ಅಂದರೆ ಅವನ ಅಭಿಷಿಕ್ತ ಹಿಂಬಾಲಕರ ಸಭೆಯೊಂದಿಗಿರುವ ಸಂಬಂಧಕ್ಕೆ ಬೈಬಲ್ ಹೋಲಿಸುತ್ತದೆ. ಅದು ಹೇಳುವುದು: “ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.” (ಎಫೆಸ 5:23) ಈ ಮಾತುಗಳು, ಕ್ರಿಸ್ತನು ತನ್ನ ಹಿಂಬಾಲಕರಿಗೆ ಹೇಗೆ ತಲೆಯಾಗಿದ್ದನು ಅಥವಾ ಹೇಗೆ ನಾಯಕತ್ವ ವಹಿಸಿದನೆಂದು ಪರೀಕ್ಷಿಸಿನೋಡುವಂತೆ ಗಂಡಂದಿರನ್ನು ಪ್ರೋತ್ಸಾಹಿಸಬೇಕು. ಈ ಪರಿಶೀಲನೆಯನ್ನು ಮಾಡುವ ಮೂಲಕವೇ ಗಂಡಂದಿರು ಯೇಸುವಿನ ಮಾದರಿಯನ್ನು ಸರಿಯಾಗಿ ಅನುಸರಿಸಶಕ್ತರು. ಯೇಸು ತನ್ನ ಸಭೆಗೆ ಕೊಟ್ಟಂತೆ ತಮ್ಮ ಹೆಂಡತಿಯರಿಗೆ ನಿರ್ದೇಶನ, ಪ್ರೀತಿ ಮತ್ತು ಪರಾಮರಿಕೆಯನ್ನೂ ಕೊಡಲು ಶಕ್ತರಾಗುವರು.
11 ಬೈಬಲ್ ಕ್ರೈಸ್ತರನ್ನು ಪ್ರೋತ್ಸಾಹಿಸುವುದು: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು [ಅದಕ್ಕಾಗಿ] . . . ತನ್ನನ್ನು ಒಪ್ಪಿಸಿಕೊಟ್ಟನು.” (ಎಫೆಸ 5:25, 26) ಎಫೆಸದವರಿಗೆ ಬರೆದ 4ನೇ ಅಧ್ಯಾಯದಲ್ಲಿ “ಸಭೆ”ಯನ್ನು “ಕ್ರಿಸ್ತನ ದೇಹ”ವೆಂದು ಕರೆಯಲಾಗಿದೆ. ಈ ಸಾಂಕೇತಿಕ ದೇಹದಲ್ಲಿ ಸ್ತ್ರೀಪುರುಷರಾದ ಅನೇಕ ಸದಸ್ಯರಿದ್ದು, ಎಲ್ಲರೂ ಆ ದೇಹವು ಫಲಕಾರಿಯಾಗಿ ಕಾರ್ಯನಡಿಸುವಂತೆ ಸಹಾಯಮಾಡುತ್ತಾರೆ. ಆದರೆ ಯೇಸು “ಸಭೆಯೆಂಬ ದೇಹಕ್ಕೆ . . . ಶಿರಸ್ಸು.”—ಎಫೆಸ 4:12, 13; ಕೊಲೊಸ್ಸೆ 1:18; 1 ಕೊರಿಂಥ 12:12, 13, 27.
12 ಯೇಸು ತನ್ನ ಸಾಂಕೇತಿಕ ದೇಹವಾದ “ಸಭೆಗೆ” ಪ್ರೀತಿಯನ್ನು ತೋರಿಸಿದನು. ವಿಶೇಷವಾಗಿ ಅದರ ಸದಸ್ಯರಾಗಲಿರುವ ಶಿಷ್ಯರ ಅಭಿರುಚಿಗಳನ್ನು ಪರಿಗಣನೆಯಿಂದ ನೋಡಿಕೊಂಡನು. ಉದಾಹರಣೆಗೆ, ತನ್ನ ಶಿಷ್ಯರು ದಣಿದಿದ್ದಾಗ ಅವನಂದದ್ದು: “ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ.” (ಮಾರ್ಕ 6:31) ಯೇಸುವಿನ ವಧೆಗೆ ಕೆಲವೇ ತಾಸು ಮುಂಚಿನ ಅವನ ಚಟುವಟಿಕೆಯನ್ನು ವರ್ಣಿಸುತ್ತ ಅವನ ಅಪೊಸ್ತಲರಲ್ಲಿ ಒಬ್ಬನು ಹೇಳಿದ್ದು: “ಯೇಸು . . ಲೋಕದಲ್ಲಿರುವ ತನ್ನವರನ್ನು [ಅಂದರೆ ತನ್ನ ಸಾಂಕೇತಿಕ ದೇಹದ ಸದಸ್ಯರನ್ನು] ಪ್ರೀತಿಸಿ ಪರಿಪೂರ್ಣವಾಗಿ [“ಕೊನೆಯ ತನಕ,” NW] ಅವರನ್ನು ಪ್ರೀತಿಸುತ್ತಾ ಬಂದನು.” (ಯೋಹಾನ 13:1) ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ನೋಡಿಕೊಳ್ಳಬೇಕೆಂಬುದಕ್ಕೆ ಯೇಸು ಎಂಥ ಉತ್ತಮ ಮಾದರಿಯನ್ನಿಟ್ಟನು!
13 ಯೇಸು ಗಂಡಂದಿರಿಗೆ ಇಟ್ಟ ಮಾದರಿಯನ್ನು ಉಪಯೋಗಿಸುತ್ತ ಅಪೊಸ್ತಲ ಪೌಲನು ಅವರಿಗೆ ಸಲಹೆ ನೀಡಿದ್ದು: “ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.” ಪೌಲನು ಕೂಡಿಸಿದ್ದು: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು.”—ಎಫೆಸ 5:28, 29, 33.
14 ಪೌಲನ ಮಾತುಗಳ ಬಗ್ಗೆ ತುಸು ಯೋಚಿಸಿ ನೋಡಿ. ಸ್ವಸ್ಥ ಬುದ್ಧಿಯುಳ್ಳ ಪುರುಷನು ಬೇಕುಬೇಕೆಂದು ತನ್ನ ಶರೀರಕ್ಕೆ ಹಾನಿ ಮಾಡಿಕೊಳ್ಳುತ್ತಾನೆಯೆ? ಒಬ್ಬನು ಎಡವಿ ತನ್ನ ಕಾಲ್ಬೆರಳನ್ನು ಜಜ್ಜುವುದಾದರೆ ತನ್ನನ್ನು ಎಡವಿಸಿದ ಕಾರಣ ಅದಕ್ಕೆ ಹೊಡೆಯುತ್ತಾನೆಯೆ? ನಿಶ್ಚಯವಾಗಿಯೂ ಇಲ್ಲ! ಒಬ್ಬ ಗಂಡನು ತನ್ನ ಮಿತ್ರರ ಮಧ್ಯೆ ತನಗೆ ಅವಮಾನ ಮಾಡಿಕೊಳ್ಳುತ್ತಾನೆಯೆ ಇಲ್ಲವೆ ತನ್ನ ಸ್ವಂತ ದೋಷಗಳ ಬಗ್ಗೆ ಹರಟೆ ಹೊಡೆಯುತ್ತಾನೆಯೆ? ಖಂಡಿತ ಇಲ್ಲ! ಹಾಗಾದರೆ ಅವನು ತನ್ನ ಹೆಂಡತಿ ತಪ್ಪೊಂದನ್ನು ಮಾಡಿದಾಗ ಬೈಗುಳ ಪ್ರಹಾರವನ್ನು ಅಥವಾ ಹೊಡೆತಗಳನ್ನು ಕೊಡಬೇಕೇಕೆ? ಗಂಡಂದಿರು ಕೇವಲ ತಮ್ಮ ಸ್ವಂತ ಅಭಿರುಚಿಗಳನ್ನೇ ಅಲ್ಲ, ತಮ್ಮ ಹೆಂಡತಿಯರದ್ದನ್ನೂ ಪರ್ಯಾಲೋಚಿಸಬೇಕು.—1 ಕೊರಿಂಥ 10:24; 13:5.
15 ಯೇಸು ತನ್ನ ಮರಣಕ್ಕೆ ಮುಂಚಿನ ರಾತ್ರಿ ತನ್ನ ಶಿಷ್ಯರು ಮಾನವ ಬಲಹೀನತೆಯನ್ನು ತೋರಿಸಿದಾಗ ಹೇಗೆ ಚಿಂತೆ ವ್ಯಕ್ತಪಡಿಸಿದನು ಎಂದು ನೋಡಿರಿ. ಗೆತ್ಸೇಮನೆ ತೋಟದಲ್ಲಿ ಯೇಸು ಅವರಿಗೆ ಪ್ರಾರ್ಥನೆ ಮಾಡುವಂತೆ ಪದೇ ಪದೇ ಹೇಳಿದರೂ ಅವರು ಮೂರು ಬಾರಿ ನಿದ್ರೆ ಹೋದರು. ತಕ್ಷಣ ಸಿಪಾಯಿಗಳು ಅವರನ್ನು ಸುತ್ತುವರಿದರು. ಆಗ ಯೇಸು ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ” ಎಂದು ಕೇಳಿದನು. ಅವರು “ನಜರೇತಿನ ಯೇಸುವನ್ನು” ಎಂದು ಹೇಳಲು ಅವನು “ನಾನೇ ಅವನು” ಎಂದು ಉತ್ತರ ಕೊಟ್ಟನು. ತನ್ನ ಸಾವಿನ ‘ಗಳಿಗೆ ಬಂತೆಂದು’ ತಿಳಿದ ಅವನು “ನೀವು ನನ್ನನ್ನೇ ಹುಡುಕುವವರಾದರೆ ಇವರು ಹೋಗಬಿಡಿರಿ” ಎಂದು ಹೇಳಿದನು. ತನ್ನ ಸಾಂಕೇತಿಕ ಮದಲಗಿತ್ತಿಯ ಭಾಗವಾಗಿದ್ದ ತನ್ನ ಶಿಷ್ಯರ ಕ್ಷೇಮವನ್ನು ನೋಡಿಕೊಳ್ಳುವುದನ್ನು ಯೇಸು ಎಂದಿಗೂ ಮರೆಯಲಿಲ್ಲ. ಅವರ ಪಲಾಯನಕ್ಕೆ ಅವನು ದಾರಿ ಮಾಡಿಕೊಟ್ಟನು. ಯೇಸು ತನ್ನ ಶಿಷ್ಯರನ್ನು ನೋಡಿಕೊಂಡ ರೀತಿಯನ್ನು ಅಧ್ಯಯನಮಾಡುವ ಮೂಲಕ ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ನೋಡಿಕೊಳ್ಳಬೇಕೆಂಬ ವಿಷಯದಲ್ಲಿ ಅನೇಕ ಮೂಲತತ್ತ್ವಗಳನ್ನು ಕಂಡುಕೊಳ್ಳುವರು.—ಯೋಹಾನ 18:1-9; ಮಾರ್ಕ 14:34-37, 41, 42.
ಯೇಸುವಿನ ಪ್ರೀತಿ ಭಾವಾತಿರೇಕದ್ದಲ್ಲ
16 “ಮಾರ್ಥಳಲ್ಲಿಯೂ ಆಕೆಯ ತಂಗಿಯಲ್ಲಿಯೂ ಲಾಜರನಲ್ಲಿಯೂ ಯೇಸುವಿಗೆ ಪ್ರೀತಿ ಇತ್ತು” ಎನ್ನುತ್ತದೆ ಬೈಬಲ್. ಯೇಸು ಅವರ ಮನೆಯಲ್ಲಿ ಅನೇಕವೇಳೆ ಅತಿಥಿಯಾಗಿದ್ದನು. (ಯೋಹಾನ 11:5) ಆದರೂ, ಮಾರ್ಥಳಿಗೆ ಸಲಹೆಯನ್ನು ಕೊಡಲು ಯೇಸು ಹಿಂಜರಿಯಲಿಲ್ಲ. ಒಮ್ಮೆ ಮಾರ್ಥಳು ಯೇಸುವಿನ ಆಧ್ಯಾತ್ಮಿಕ ಸಲಹೆಯನ್ನು ಕೇಳುವ ಬದಲಾಗಿ ಊಟ ತಯಾರಿಸಲು ಅನುಚಿತ ಗಮನವನ್ನು ಕೊಟ್ಟಾಗ ಯೇಸು ಸಲಹೆಯಿತ್ತದ್ದು: “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. ಕೆಲವು ಮಾತ್ರ ಬೇಕಾದದ್ದು, ಅಥವಾ ಒಂದೇ.” (ಲೂಕ 10:41, 42) ಮಾರ್ಥಳ ಮೇಲೆ ಯೇಸುವಿಗಿದ್ದ ಮಮತೆಯು ಅವನ ಸಲಹೆಯನ್ನು ಸ್ವೀಕರಿಸಲು ಅವಳಿಗೆ ಸುಲಭವಾಗಿಸಿತು. ತದ್ರೀತಿಯೇ, ಗಂಡಂದಿರು ಮನಮುಟ್ಟುವ ಮಾತುಗಳನ್ನು ಉಪಯೋಗಿಸುತ್ತಾ ತಮ್ಮ ಹೆಂಡತಿಯರನ್ನು ದಯೆ ಮತ್ತು ಪ್ರೀತಿಯಿಂದ ಉಪಚರಿಸಬೇಕು. ಆದರೂ, ತಿದ್ದುಪಡಿ ಅಗತ್ಯವಿರುವಾಗ ಯೇಸುವಿನಂತೆ ಮುಚ್ಚುಮರೆಯಿಲ್ಲದೆ ಮಾತಾಡುವುದು ಉಚಿತ.
17 ಇನ್ನೊಂದು ಸಂದರ್ಭವನ್ನು ಪರಿಗಣಿಸಿರಿ. ಯೇಸು ತನ್ನ ಅಪೊಸ್ತಲರಿಗೆ ತಾನು ಯೆರೂಸಲೇಮಿಗೆ ಹೋಗಬೇಕೆಂಬುದನ್ನು ತಿಳಿಸುತ್ತಾ, “ಅಲ್ಲಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಕಷ್ಟಗಳನ್ನನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕೆಂದು” ವಿವರಿಸಿದನು. ಆಗ ಪೇತ್ರನು ಯೇಸುವನ್ನು ಬದಿಗೆ ಕರೆದೊಯ್ದು ಆಕ್ಷೇಪಿಸುತ್ತ “ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು” ಎಂದು ಹೇಳಿದನು. ಇಲ್ಲಿ ಪೇತ್ರನ ವೀಕ್ಷಣವು ಭಾವಾತಿರೇಕದ ಕಾರಣ ಮೊಬ್ಬಾಗಿತ್ತೆಂಬುದು ಸ್ಪಷ್ಟ. ಅವನಿಗೆ ತಿದ್ದುಪಾಟು ಅಗತ್ಯವಿತ್ತು. ಆದಕಾರಣ ಯೇಸು ಅವನಿಗೆ ಹೇಳಿದ್ದು: “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ.”—ಮತ್ತಾಯ 16:21-23.
18 ಯೇಸು ಆಗ ತಾನೇ ದೇವರ ಚಿತ್ತವನ್ನು ಅಂದರೆ ತಾನು ಅನೇಕ ಕಷ್ಟಗಳನ್ನು ಅನುಭವಿಸಿ ಸಾಯುವೆನೆಂಬುದನ್ನು ತಿಳಿಯಪಡಿಸಿದ್ದನು. (ಕೀರ್ತನೆ 16:10; ಯೆಶಾಯ 53:12) ಆದುದರಿಂದ ಪೇತ್ರನು ಯೇಸುವನ್ನು ಗದರಿಸಲಾರಂಭಿಸಿದ್ದು ತಪ್ಪಾಗಿತ್ತು. ಹೌದು, ನಮಗೆ ಕೆಲವು ಬಾರಿ ಬೇಕಾಗುವಂತೆಯೇ ಪೇತ್ರನಿಗೂ ತಿದ್ದುಪಡಿ ಅಗತ್ಯವಿತ್ತು. ಕುಟುಂಬದ ತಲೆಯಾಗಿರುವ ಗಂಡನಿಗೆ ತನ್ನ ಹೆಂಡತಿ ಮತ್ತು ಕುಟುಂಬ ಸದಸ್ಯರನ್ನು ತಿದ್ದುವ ಅಧಿಕಾರವೂ ಜವಾಬ್ದಾರಿಯೂ ಇದೆ. ಇದನ್ನು ದೃಢತೆಯಿಂದ ಮಾಡಬೇಕಾಗಬಹುದಾದರೂ ದಯೆ ಮತ್ತು ಪ್ರೀತಿಯಿಂದ ಮಾಡಬೇಕು. ಆದಕಾರಣ, ವಿಷಯಗಳನ್ನು ಯೋಗ್ಯವಾಗಿ ವೀಕ್ಷಿಸಲು ಪೇತ್ರನಿಗೆ ಯೇಸು ಸಹಾಯ ಮಾಡಿದಂತೆಯೇ ಗಂಡಂದಿರು ಕೆಲವು ಬಾರಿ ತಮ್ಮ ಹೆಂಡತಿಯರನ್ನೂ ತಿದ್ದಬೇಕಾಗಬಹುದು. ಉದಾಹರಣೆಗೆ, ತನ್ನ ಹೆಂಡತಿಯ ಉಡುಪು, ತೊಡುವ ಆಭರಣ ಇಲ್ಲವೆ ಮೇಕಪ್ ಬೈಬಲ್ ತಿಳಿಸುವ ಮಿತಿಯನ್ನು ಮೀರಿಹೋಗುವಲ್ಲಿ ಗಂಡನು ದಯೆಯಿಂದ ಆಕೆಯನ್ನು ತಿದ್ದುವ ಅಗತ್ಯವಿರಬಹುದು.—1 ಪೇತ್ರ 3:3-5.
ಗಂಡಂದಿರು ತಾಳ್ಮೆಯಿಂದಿರುವುದು ಪ್ರಯೋಜನಕರ
19 ಗಮನದ ಆವಶ್ಯವಿರುವ ತಪ್ಪೊಂದು ಇರುವಲ್ಲಿ ಅದನ್ನು ತಿದ್ದುವ ತಮ್ಮ ಯಥಾರ್ಥ ಪ್ರಯತ್ನಗಳು ಒಡನೆ ಯಶಸ್ವಿಗೊಳ್ಳುವವೆಂದು ಗಂಡಂದಿರು ನಿರೀಕ್ಷಿಸಬಾರದು. ತನ್ನ ಅಪೊಸ್ತಲರ ಮನೋಭಾವಗಳನ್ನು ತಿದ್ದಲು ಯೇಸು ಪದೇ ಪದೇ ಪ್ರಯತ್ನವನ್ನು ಮಾಡಬೇಕಾಯಿತು. ಉದಾಹರಣೆಗೆ, ಅವರ ಮಧ್ಯೆ ಎದ್ದ ಒಂದು ಪ್ರತಿಸ್ಪರ್ಧೆ ಯೇಸುವಿನ ಶುಶ್ರೂಷೆಯ ಅಂತ್ಯದಲ್ಲಿ ಪುನಃ ತೋರಿಬಂತು. ತಮ್ಮಲ್ಲಿ ಯಾವನು ಹೆಚ್ಚಿನವನೆಂದು ಅವರು ವಾದಿಸಿದರು. (ಮಾರ್ಕ 9:33-37; 10:35-45) ಇದಾಗಿ ಸ್ವಲ್ಪದರಲ್ಲಿ ಯೇಸು ತನ್ನ ಕೊನೆಯ ಪಸ್ಕವನ್ನು ಅವರೊಂದಿಗೆ ಆಚರಿಸಲು ಏರ್ಪಡಿಸಿದನು. ಆ ಸಂದರ್ಭದಲ್ಲಿ, ಇತರರ ಧೂಳು ತುಂಬಿದ ಪಾದಗಳನ್ನು ತೊಳೆಯುವ ಕೆಳಮಟ್ಟದ ಕೆಲಸವನ್ನು ಮಾಡಲು ಅವರಲ್ಲಿ ಒಬ್ಬನಾದರೂ ಮುಂದೆ ಬರಲಿಲ್ಲ. ಆದರೆ ಯೇಸು ಅವರೆಲ್ಲರ ಪಾದಗಳನ್ನು ತೊಳೆದನು. ಅನಂತರ ಹೇಳಿದ್ದು: “ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.”—ಯೋಹಾನ 13:2-15.
20 ಯೇಸುವಿನಂತೆ ದೀನ ಮನೋಭಾವವನ್ನು ತೋರಿಸುವ ಗಂಡಂದಿರಿಗೆ ತಮ್ಮ ಹೆಂಡತಿಯರ ಸಹಕಾರ ಮತ್ತು ಬೆಂಬಲ ದೊರೆಯುವುದು ಸಂಭಾವ್ಯ. ಆದರೆ ಇದಕ್ಕೆ ತಾಳ್ಮೆ ಬೇಕೇ ಬೇಕು. ಏಕೆಂದರೆ ಅದೇ ಪಸ್ಕದ ರಾತ್ರಿಯಲ್ಲಿ ಅಪೊಸ್ತಲರು ಪುನಃ ತಮ್ಮಲ್ಲಿ ಯಾವನು ಹೆಚ್ಚಿನವನೆಂದು ವಾದಿಸತೊಡಗಿದರು. (ಲೂಕ 22:24) ಮನೋಭಾವ ಮತ್ತು ನಡತೆಗಳಲ್ಲಿ ಬದಲಾವಣೆಗಳನ್ನು ಮಾಡಲು ಅನೇಕವೇಳೆ ಸಮಯ ಹಿಡಿಯುತ್ತದೆ, ಅಲ್ಲದೆ ಪ್ರಗತಿ ನಿಧಾನ. ಆದರೆ ಅಪೊಸ್ತಲರಲ್ಲಿ ಆದಂತೆ ಉತ್ತಮ ಪರಿಣಾಮ ದೊರೆತಾಗ ಅದೆಷ್ಟು ಪ್ರತಿಫಲದಾಯಕ!
21 ಇಂದು ವಿವಾಹಗಳು ಹಿಂದೆಂದಿಗಿಂತಲೂ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿವೆ. ಅನೇಕರು ವಿವಾಹ ಪ್ರತಿಜ್ಞೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದುದರಿಂದ, ಗಂಡಂದಿರೇ ವಿವಾಹದ ಮೂಲದ ಕುರಿತು ಯೋಚಿಸಿರಿ. ವಿವಾಹವು ದೈವಿಕ ಮೂಲದ್ದಾಗಿದೆ, ನಮ್ಮ ಪ್ರಿಯ ದೇವರಾದ ಯೆಹೋವನು ಯೋಜಿಸಿ ಸ್ಥಾಪಿಸಿದ್ದಾಗಿದೆ ಎಂಬುದನ್ನು ನೆನಪಿನಲ್ಲಿಡಿರಿ. ಆತನು ತನ್ನ ಪುತ್ರನಾದ ಯೇಸುವನ್ನು ನಮ್ಮ ವಿಮೋಚಕನೂ ರಕ್ಷಕನೂ ಆಗಿ ಮಾತ್ರವಲ್ಲ, ಗಂಡಂದಿರು ಅನುಸರಿಸಬೇಕಾದ ಮಾದರಿಯೂ ಆಗಿರುವಂತೆ ಒದಗಿಸಿದನು.—ಮತ್ತಾಯ 20:28; ಯೋಹಾನ 3:29; 1 ಪೇತ್ರ 2:21. (w07 2/15)
ನೀವು ಹೇಗೆ ಉತ್ತರಿಸುವಿರಿ?
• ವಿವಾಹದ ಮೂಲವನ್ನು ನಾವು ಒಪ್ಪಿಕೊಳ್ಳುವುದು ಪ್ರಾಮುಖ್ಯವೇಕೆ?
• ತಮ್ಮ ಹೆಂಡತಿಯರನ್ನು ಪ್ರೀತಿಸಲು ಗಂಡಂದಿರಿಗೆ ಹೇಗೆ ಪ್ರೋತ್ಸಾಹನೆ ನೀಡಲಾಗಿದೆ?
• ಗಂಡನು ಹೇಗೆ ಕ್ರಿಸ್ತಸದೃಶ ತಲೆತನವನ್ನು ತೋರಿಸಬೇಕೆಂಬುದನ್ನು ಯೇಸು ತನ್ನ ಶಿಷ್ಯರನ್ನು ನೋಡಿಕೊಂಡ ಯಾವ ಮಾದರಿಗಳು ಚಿತ್ರಿಸುತ್ತವೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಒಬ್ಬ ಗಂಡನ ಯಶಸ್ಸನ್ನು ಹೇಗೆ ಅಳೆಯಬಹುದು? (ಬಿ) ವಿವಾಹವು ದೈವಿಕ ಮೂಲದ್ದಾಗಿದೆಯೆಂದು ಒಪ್ಪಿಕೊಳ್ಳುವುದು ಮಹತ್ವದ್ದೇಕೆ?
3, 4. (ಎ) ಮದುವೆಯ ವಿಷಯದಲ್ಲಿ ಯೇಸುವಿಗೆ ಅಗಾಧ ಪರಿಜ್ಞಾನ ಸಿಕ್ಕಿದ್ದು ಹೇಗೆ? (ಬಿ) ಯೇಸುವಿನ ಸಾಂಕೇತಿಕ ಹೆಂಡತಿ ಯಾರು ಮತ್ತು ಗಂಡಂದಿರು ತಮ್ಮ ಹೆಂಡತಿಯರನ್ನು ಹೇಗೆ ನೋಡಿಕೊಳ್ಳಬೇಕು?
5. ಯೇಸು ಯಾರಿಗೆ ಮಾದರಿಯಾಗಿದ್ದಾನೆ?
6. ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ಹೇಗೆ ಒಗತನಮಾಡಬೇಕು?
7, 8. (ಎ) ಹೆಂಡತಿಯರೊಂದಿಗೆ ವಿವೇಕದಿಂದ ಒಗತನಮಾಡುವುದರಲ್ಲಿ ಏನು ಒಳಗೊಂಡಿದೆ? (ಬಿ) ಹೆಂಡತಿಯರು ಗೌರವಕ್ಕೆ ಅರ್ಹರೇಕೆ?
9. (ಎ) ಪೇತ್ರನಿಗನುಸಾರ ಗಂಡಂದಿರು ತಮ್ಮ ಹೆಂಡತಿಯರಿಗೆ ಯಾವ ಕಾರಣಕ್ಕಾಗಿ ಗೌರವ ತೋರಿಸಬೇಕು? (ಬಿ) ಯೇಸು ಸ್ತ್ರೀಯರಿಗೆ ಹೇಗೆ ಗೌರವ ತೋರಿಸಿದನು?
10, 11. (ಎ) ಗಂಡಂದಿರು ವಿಶೇಷವಾಗಿ ಯೇಸುವಿನ ಮಾದರಿಯನ್ನು ಅಧ್ಯಯನಮಾಡುವುದು ಏಕೆ ಅಗತ್ಯ? (ಬಿ) ಗಂಡಂದಿರು ತಮ್ಮ ಹೆಂಡತಿಯರಿಗೆ ಹೇಗೆ ಪ್ರೀತಿಯನ್ನು ತೋರಿಸಬೇಕು?
12. ಯೇಸು ತನ್ನ ಸಾಂಕೇತಿಕ ದೇಹಕ್ಕೆ ಹೇಗೆ ಪ್ರೀತಿಯನ್ನು ತೋರಿಸಿದನು?
13. ತಮ್ಮ ಹೆಂಡತಿಯರನ್ನು ಹೇಗೆ ಪ್ರೀತಿಸಬೇಕೆಂದು ಗಂಡಂದಿರಿಗೆ ಸಲಹೆ ನೀಡಲಾಗಿದೆ?
14. ಒಬ್ಬ ಗಂಡನು ತನ್ನ ಅಪರಿಪೂರ್ಣ ದೇಹವನ್ನು ಹೇಗೆ ನೋಡಿಕೊಳ್ಳುತ್ತಾನೆ ಮತ್ತು ಅವನು ತನ್ನ ಹೆಂಡತಿಯನ್ನು ನೋಡಿಕೊಳ್ಳುವ ವಿಷಯದಲ್ಲಿ ಇದು ಏನನ್ನು ಸೂಚಿಸುತ್ತದೆ?
15. (ಎ) ತನ್ನ ಶಿಷ್ಯರು ಮಾನವ ಬಲಹೀನತೆಯನ್ನು ತೋರಿಸಿದಾಗ ಯೇಸು ಏನು ಮಾಡಿದನು? (ಬಿ) ಅವನ ಮಾದರಿಯಿಂದ ಯಾವ ಪಾಠವನ್ನು ಕಲಿಯಬಹುದು?
16. ಮಾರ್ಥಳ ಬಗ್ಗೆ ಯೇಸುವಿಗೆ ಯಾವ ಅನಿಸಿಕೆ ಇತ್ತು, ಆದರೂ ಅವನು ಆಕೆಯನ್ನು ಹೇಗೆ ತಿದ್ದಿದನು?
17, 18. (ಎ) ಪೇತ್ರನು ಯೇಸುವನ್ನು ಹೇಗೆ ಗದರಿಸಿದನು ಮತ್ತು ಪೇತ್ರನಿಗೆ ತಿದ್ದುಪಡಿ ಏಕೆ ಬೇಕಾಗಿತ್ತು? (ಬಿ) ಗಂಡನಿಗೆ ಯಾವ ಜವಾಬ್ದಾರಿ ಇದೆ?
19, 20. (ಎ) ಯೇಸುವಿನ ಅಪೊಸ್ತಲರ ಮಧ್ಯೆ ಯಾವ ಸಮಸ್ಯೆ ತಲೆದೋರಿತು ಮತ್ತು ಯೇಸು ಅದನ್ನು ಹೇಗೆ ನಿವಾರಿಸಿದನು? (ಬಿ) ಯೇಸುವಿನ ಪ್ರಯತ್ನಗಳು ಎಷ್ಟು ಸಫಲಗೊಂಡವು?
21. ಇಂದಿನ ಸಮಸ್ಯೆಗಳ ಎದುರಿನಲ್ಲಿ ಗಂಡಂದಿರು ಯಾವುದನ್ನು ನೆನಪಿನಲ್ಲಿಡುವಂತೆಯೂ ಏನನ್ನು ಮಾಡುವಂತೆಯೂ ಪ್ರೋತ್ಸಾಹಿಸಲ್ಪಡುತ್ತಾರೆ?
[ಪುಟ 10ರಲ್ಲಿರುವ ಚಿತ್ರ]
ಯೇಸು ಸ್ತ್ರೀಯರನ್ನು ಹೇಗೆ ನೋಡಿಕೊಂಡನೆಂಬ ಮಾದರಿಗಳನ್ನು ಗಂಡಂದಿರು ಏಕೆ ಅಧ್ಯಯನಮಾಡಬೇಕು?
[ಪುಟ 12ರಲ್ಲಿರುವ ಚಿತ್ರ]
ಗಂಡಂದಿರು ತಮ್ಮ ಹೆಂಡತಿಯರಿಗೆ ದಯಾಪರ, ಮನಮುಟ್ಟುವ ಮಾತುಗಳಿಂದ ಸಲಹೆಕೊಡಬೇಕು