ಕ್ರಿಸ್ತ ಶಕದಲ್ಲಿ ದೇವಪ್ರಭುತ್ವಾತ್ಮಕ ಆಡಳಿತ
“ಕ್ರಿಸ್ತನಲ್ಲಿ ಪುನಃ ಸಕಲ ವಸ್ತುಗಳನ್ನು, ಸ್ವರ್ಗದಲ್ಲಿರುವ ವಸ್ತುಗಳನ್ನೂ ಭೂಮಿಯ ಮೇಲಿರುವ ವಸ್ತುಗಳನ್ನೂ ಒಟ್ಟುಗೂಡಿಸಲು ತನ್ನಲ್ಲಿಯೇ ಉದ್ದೇಶಿಸಿದ್ದು . . . ಆತನ ಸುಇಷ್ಟಾನುಸಾರವಾಗಿದೆ.” —ಎಫೆಸ 1:9, 10, NW.
1, 2. (ಎ) ಸಾ.ಶ. 33ರಿಂದ ತೊಡಗಿ, “ಸ್ವರ್ಗದಲ್ಲಿರುವ ವಸ್ತುಗಳ” ಒಟ್ಟುಗೂಡಿಸುವಿಕೆಯು ಹೇಗೆ ಮುಂದೆ ಸಾಗಿತು? (ಬಿ) ಅಭಿಷಿಕ್ತ ಕ್ರೈಸ್ತರು 1914ರಿಂದ ಮೋಶೆ ಮತ್ತು ಎಲೀಯರ ಮನೋಭಾವವನ್ನು ಹೇಗೆ ಪ್ರದರ್ಶಿಸಿದ್ದಾರೆ?
“ಸ್ವರ್ಗದಲ್ಲಿರುವ ವಸ್ತುಗಳ” ಈ ಒಟ್ಟುಗೂಡಿಸುವಿಕೆಯು ಸಾ.ಶ. 33ರಲ್ಲಿ, “ದೇವರ ಇಸ್ರಾಯೇಲ್ಯರು” ಹುಟ್ಟಿದಾಗ ಆರಂಭಗೊಂಡಿತು. (ಗಲಾತ್ಯ 6:16; ಯೆಶಾಯ 43:10; 1 ಪೇತ್ರ 2:9, 10) ಸಾ.ಶ. ಒಂದನೆಯ ಶತಮಾನದ ಬಳಿಕ, ಯೇಸು “ಗೋದಿ”ಯೆಂದು ಕರೆದ ಶುದ್ಧ ಕ್ರೈಸ್ತರನ್ನು ಸೈತಾನನು ಬಿತ್ತಿದ ಧರ್ಮಭ್ರಷ್ಟ “ಕಳೆಗಳು” ಹಬ್ಬಿ ಅಡಗಿಸಿದಾಗ, ಈ ಒಟ್ಟುಗೂಡಿಸುವಿಕೆ ನಿಧಾನಗೊಂಡಿತು. ಆದರೆ “ಯುಗದ ಸಮಾಪ್ತಿ” ಸಮೀಪಿಸಿದಾಗ, ದೇವರ ಸತ್ಯ ಇಸ್ರಾಯೇಲ್ಯರು ಮಾನವ ನೋಟದೊಳಕ್ಕೆ ಹಿಂದಕ್ಕೆ ಬಂದು, 1919ರಲ್ಲಿ ಯೇಸುವಿನ ಸಕಲ ಆಸ್ತಿಯ ಮೇಲೆ ನೇಮಿಸಲ್ಪಟ್ಟರು.a—ಮತ್ತಾಯ 13:24-30, 36-43; 24:45-47; ದಾನಿಯೇಲ 12:4.
2 ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಅಭಿಷಿಕ್ತ ಕ್ರೈಸ್ತರು ಮೋಶೆ ಮತ್ತು ಎಲೀಯರು ಮಾಡಿದಂತೆ, ಮಹತ್ಕಾರ್ಯಗಳನ್ನು ಮಾಡಿದರು.b (ಪ್ರಕಟನೆ 11:5, 6) 1919ರಿಂದ ಅವರು ವಿರೋಧ ಮಾಡುತ್ತಿರುವ ಲೋಕದಲ್ಲಿ, ಎಲೀಯನ ಧೈರ್ಯದಿಂದ ಸುವಾರ್ತೆಯನ್ನು ಸಾರಿದ್ದಾರೆ. (ಮತ್ತಾಯ 24:9-14) ಮತ್ತು 1922ರಿಂದ, ಅವರು ಮಾನವಕುಲದ ಮೇಲೆ, ಮೋಶೆಯು ಪುರಾತನ ಐಗುಪ್ತದ ಮೇಲೆ ದೇವರ ವ್ಯಾಧಿಗಳನ್ನು ತಂದಂತೆಯೇ, ಯೆಹೋವನ ತೀರ್ಪನ್ನು ಘೋಷಿಸಿದ್ದಾರೆ. (ಪ್ರಕಟನೆ 15:1; 16:2-17) ಈ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರು ಇಂದು, ಯೆಹೋವನ ಸಾಕ್ಷಿಗಳ ನೂತನ ಲೋಕ ಸಮಾಜದ ಕೇಂದ್ರ ಭಾಗವಾಗಿದ್ದಾರೆ.
ಆಡಳಿತ ಮಂಡಳಿ ಕ್ರಿಯೆಯಲ್ಲಿ
3. ಆದಿ ಕ್ರೈಸ್ತ ಸಭೆಯು ಸುವ್ಯವಸ್ಥಿತವಾಗಿತ್ತೆಂದು ಯಾವ ಘಟನೆಗಳು ತೋರಿಸುತ್ತವೆ?
3 ಯೇಸುವಿನ ಅಭಿಷಿಕ್ತ ಹಿಂಬಾಲಕರು ಆರಂಭದಿಂದಲೇ ಸಂಘಟಿತರಾಗಿದ್ದರು. ಶಿಷ್ಯರ ಸಂಖ್ಯೆ ವೃದ್ಧಿಯಾದಂತೆ, ಸ್ಥಳಿಕ ಸಭೆಗಳು ಸ್ಥಾಪಿಸಲ್ಪಟ್ಟು ಹಿರಿಯರು ನೇಮಿಸಲ್ಪಟ್ಟರು. (ತೀತ 1:5) ಸಾ.ಶ. 33ರ ಬಳಿಕ, ಆ 12 ಮಂದಿ ಅಪೊಸ್ತಲರು ಒಂದು ಅಧಿಕೃತ ಕೇಂದ್ರೀಯ ಆಡಳಿತ ಮಂಡಳಿಯಾಗಿ ಕಾರ್ಯನಡೆಸಿದರು. ಹಾಗೆ, ಅವರು ಸಾಕ್ಷಿ ಕೆಲಸದಲ್ಲಿ ನಿರ್ಭೀತ ನೇತೃತ್ವವನ್ನು ವಹಿಸಿದರು. (ಅ. ಕೃತ್ಯಗಳು 4:33, 35, 37; 5:18, 29) ಅವರು ನಿರ್ಗತಿಕರಿಗೆ ಆಹಾರ ವಿತರಣೆಯನ್ನು ವ್ಯವಸ್ಥಾಪಿಸಿ, ಸಮಾರ್ಯದಲ್ಲಿ ಆಸಕ್ತಿಯಿದೆಯೆಂಬ ವರದಿಯ ಜಾಗ್ರತೆ ವಹಿಸಲು ಪೇತ್ರ ಮತ್ತು ಯೋಹಾನರನ್ನು ಅಲ್ಲಿಗೆ ಕಳುಹಿಸಿದರು. (ಅ. ಕೃತ್ಯಗಳು 6:1-6; 8:6-8, 14-17) ಬಾರ್ನಬನು ಪೌಲನನ್ನು, ಈ ಮಾಜಿ ಹಿಂಸಕನು ಈಗ ಯೇಸುವಿನ ಹಿಂಬಾಲಕನೆಂಬುದನ್ನು ದೃಢೀಕರಿಸಲಿಕ್ಕಾಗಿ ಅವರ ಬಳಿ ಕರೆದುಕೊಂಡು ಹೋದನು. (ಅ. ಕೃತ್ಯಗಳು 9:27; ಗಲಾತ್ಯ 1:18, 19) ಮತ್ತು ಪೇತ್ರನು ಕೊರ್ನೇಲ್ಯ ಮತ್ತು ಅವನ ಮನೆವಾರ್ತೆಗೆ ಸಾರಿದ ಬಳಿಕ, ಅವನು ಯೆರೂಸಲೇಮಿಗೆ ಹಿಂದೆ ಬಂದು, ಅಪೊಸ್ತಲರಿಗೂ ಯೆಹೂದದ ಇತರ ಸಹೋದರರಿಗೂ, ಈ ಸಂದರ್ಭದಲ್ಲಿ ಪವಿತ್ರಾತ್ಮವು ದೇವರ ಚಿತ್ತವನ್ನು ಹೇಗೆ ಸೂಚಿಸಿತ್ತೆಂಬುದನ್ನು ವಿವರಿಸಿದನು.—ಅ. ಕೃತ್ಯಗಳು 11:1-18.
4. ಪೇತ್ರನನ್ನು ಕೊಲ್ಲಲು ಯಾವ ಪ್ರಯತ್ನ ನಡೆಯಿತು, ಆದರೆ ಅವನ ಜೀವ ಹೇಗೆ ರಕ್ಷಿಸಲ್ಪಟ್ಟಿತು?
4 ಬಳಿಕ ಆಡಳಿತ ಮಂಡಳಿಯ ಮೇಲೆ ಭಯಂಕರ ದಾಳಿಯಾಯಿತು. ಪೇತ್ರನು ಬಂಧಿಸಲ್ಪಟ್ಟನು ಮತ್ತು ಅವನ ಜೀವವು ದೇವದೂತ ಹಸ್ತಕ್ಷೇಪದಿಂದ ಮಾತ್ರ ಬಚಾವಾಯಿತು. (ಅ. ಕೃತ್ಯಗಳು 12:3-11) ಈಗ ಪ್ರಥಮ ಬಾರಿ, ಹನ್ನೆರಡು ಮಂದಿ ಅಪೊಸ್ತಲರಲ್ಲಿ ಇದ್ದಿಲ್ಲದ ಒಬ್ಬನು ಯೆರೂಸಲೇಮಿನಲ್ಲಿ ಪ್ರಮುಖ ಸ್ಥಾನದಲ್ಲಿ ಕಂಡುಬಂದನು. ಪೇತ್ರನು ಸೆರೆಮುಕ್ತನಾದಾಗ, ಯೋಹಾನ ಮಾರ್ಕನ ತಾಯಿಯ ಮನೆಯಲ್ಲಿ ಕೂಡಿಬಂದಿದ್ದ ಒಂದು ಗುಂಪಿಗೆ ಹೇಳಿದ್ದು: “ಈ ಸಂಗತಿಗಳನ್ನು ಯಾಕೋಬನಿಗೂ [ಯೇಸುವಿನ ಮಲತಮ್ಮ] ಸಹೋದರರೆಲ್ಲರಿಗೂ ತಿಳಿಸಿರಿ.”—ಅ. ಕೃತ್ಯಗಳು 12:17.
5. ಯಾಕೋಬನ ಹುತಾತ್ಮತೆಯ ಬಳಿಕ ಆಡಳಿತ ಮಂಡಳಿಯ ರಚನೆಯು ಹೇಗೆ ಬದಲಾಯಿತು?
5 ಈ ಹಿಂದೆ, ದ್ರೋಹ ಬಗೆದ ಅಪೊಸ್ತಲನಾದ ಇಸ್ಕರಿಯೋತ ಯೂದನು ಆತ್ಮಹತ್ಯೆ ಮಾಡಿಕೊಂಡ ಬಳಿಕ, ಅಪೊಸ್ತಲನಾಗಿದ್ದ ಅವನ “ಉದ್ಯೋಗವು” [“ಮೇಲ್ವಿಚಾರಣಾ ಸ್ಥಾನವನ್ನು,” NW] ಯೇಸುವಿನ ಶುಶ್ರೂಷಾ ಸಮಯದಲ್ಲಿ ಅವನೊಂದಿಗಿದ್ದ ಮತ್ತು ಅವನ ಮರಣ ಮತ್ತು ಪುನರುತ್ಥಾನವನ್ನು ನೋಡಿರುವ ಒಬ್ಬನಿಗೆ ಕೊಡುವ ಆವಶ್ಯಕತೆಯನ್ನು ವಿವೇಚಿಸಲಾಯಿತು. ಆದರೂ, ಯೋಹಾನನ ಸಹೋದರನಾದ ಯಾಕೋಬನು ವಧಿಸಲ್ಪಟ್ಟಾಗ, ಹನ್ನೆರಡು ಮಂದಿಯಲ್ಲಿ ಒಬ್ಬನಾಗಿ ಅವನ ಸ್ಥಾನವನ್ನು ಯಾರೂ ಭರ್ತಿಮಾಡಲಿಲ್ಲ. (ಅ. ಕೃತ್ಯಗಳು 1:20-26; 12:1, 2) ಬದಲಿಗೆ, ಆಡಳಿತ ಮಂಡಳಿಯನ್ನು ಸೂಚಿಸಿದ ಮುಂದಿನ ಶಾಸ್ತ್ರೀಯ ವಚನವು, ಅದನ್ನು ವಿಕಸಿಸಲಾಗಿತ್ತು ಎಂದು ತೋರಿಸುತ್ತದೆ. ಯೇಸುವನ್ನು ಹಿಂಬಾಲಿಸಿದ ಅನ್ಯರು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಬೇಕೊ ಎಂಬ ವಿಷಯದಲ್ಲಿ ವಿವಾದವೆದ್ದಾಗ, ಈ ಸಂಗತಿಯನ್ನು ನಿರ್ಣಯಕ್ಕಾಗಿ, “ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಸಭೆಯ ಹಿರಿಯರ” ಮುಂದೆ ಮಂಡಿಸಲಾಯಿತು. (ಅ. ಕೃತ್ಯಗಳು 15:2, 6, 20, 22, 23; 16:4) ಹಾಗಾದರೆ ಈಗ ಆಡಳಿತ ಮಂಡಳಿಯಲ್ಲಿ “ಹಿರಿಯರು” ಏಕಿದ್ದರು? ಏಕೆಂದು ಬೈಬಲು ಹೇಳುವುದಿಲ್ಲವಾದರೂ, ಅದರಲ್ಲಿ ಪ್ರಯೋಜನವಿತ್ತೆಂಬುದು ವ್ಯಕ್ತ. ಯಾಕೋಬನ ಮರಣ ಮತ್ತು ಪೇತ್ರನ ಸೆರೆವಾಸವು, ಒಂದು ದಿನ ಅಪೊಸ್ತಲರು ಬಂಧಿಸಲ್ಪಡಬಹುದು ಅಥವಾ ಕೊಲ್ಲಲ್ಪಡಬಹುದು ಎಂಬುದನ್ನು ತೋರಿಸಿತ್ತು. ಇಂತಹ ಅನಿಶ್ಚಿತ ಸಂದರ್ಭದಲ್ಲಿ, ಆಡಳಿತ ಮಂಡಳಿಯ ಕಾರ್ಯವಿಧಾನಗಳಲ್ಲಿ ಅನುಭವಿಗಳಾದ ಇತರ ಅರ್ಹರಾದ ಹಿರಿಯರ ಉಪಸ್ಥಿತಿಯು, ಕ್ರಮಬದ್ಧವಾದ ಮೇಲ್ವಿಚಾರಣೆ ಮುಂದುವರಿಯುವುದನ್ನು ಖಾತರಿಮಾಡಿಕೊಳ್ಳುವುದು.
6. ಅದರ ಆದಿ ಸದಸ್ಯರು ಯೆರೂಸಲೇಮಿನಲ್ಲಿ ಇಲ್ಲದೆ ಹೋಗಿದ್ದರೂ, ಆಡಳಿತ ಮಂಡಳಿಯು ಆ ನಗರದಲ್ಲಿ ಹೇಗೆ ಕೆಲಸ ನಡೆಸುತ್ತ ಮುಂದುವರಿಯಿತು?
6 ಸಾ.ಶ. 56ರ ಸುಮಾರಿಗೆ ಪೌಲನು ಯೆರೂಸಲೇಮಿಗೆ ಬಂದು ಯಾಕೋಬನಿಗೆ ವರದಿಮಾಡಿದಾಗ, “ಸಭಾಹಿರಿಯರೆಲ್ಲರು ಸಹ ಬಂದರು” ಎಂದು ಬೈಬಲ್ ಹೇಳುತ್ತದೆ. (ಅ. ಕೃತ್ಯಗಳು 21:18) ಈ ಕೂಟದಲ್ಲಿ ಅಪೊಸ್ತಲರ ವಿಷಯ ಹೇಳಿಕೆಯೇ ಇಲ್ಲವೇಕೆ? ಕಾರಣವನ್ನು ಪುನಃ ಬೈಬಲು ತಿಳಿಸುವುದಿಲ್ಲ. ಆದರೆ ಇತಿಹಾಸಕಾರ ಯೂಸೀಬೀಯಸ್ ತರುವಾಯ ವರದಿಮಾಡಿದ್ದೇನೆಂದರೆ, ಸಾ.ಶ. 66ಕ್ಕೆ ಕೊಂಚ ಮುಂಚಿತವಾಗಿ, “ಉಳಿದ ಅಪೊಸ್ತಲರು, ಕೊಲೆಯ ಪಿತೂರಿಗಳ ಸತತವಾದ ಅಪಾಯಕ್ಕೊಳಗಾಗಿ, ಯೆಹೂದದ ಹೊರಗಡೆ ಓಡಿಸಲ್ಪಟ್ಟಿದ್ದರು. ಆದರೆ ತಮ್ಮ ಸಂದೇಶವನ್ನು ಕಲಿಸುವರೆ, ಅವರು ಕ್ರಿಸ್ತನ ಶಕ್ತಿಯಿಂದ ಪ್ರತಿಯೊಂದು ದೇಶಕ್ಕೂ ಪಯಣಿಸಿದರು.” (ಯೂಸೀಬೀಯಸ್, ಪುಸ್ತಕ III, V, v. 2) ನಿಜ, ಯೂಸೀಬೀಯಸನ ಮಾತುಗಳು ಪ್ರೇರಿತ ದಾಖಲೆಯ ಭಾಗವಾಗಿರುವುದಿಲ್ಲವಾದರೂ, ಅವು ಆ ದಾಖಲೆ ಹೇಳುವ ವಿಷಯಕ್ಕೆ ಖಂಡಿತವಾಗಿ ಹೊಂದಿಕೆಯಾಗಿವೆ. ದೃಷ್ಟಾಂತಕ್ಕೆ, ಸಾ.ಶ. 62ರೊಳಗೆ ಪೇತ್ರನು ಬಾಬೆಲಿನಲ್ಲಿ—ಯೆರೂಸಲೇಮಿನಿಂದ ಬಹಳ ದೂರದಲ್ಲಿದ್ದನು. (1 ಪೇತ್ರ 5:13) ಆದರೂ, ಸಾ.ಶ. 56ರಲ್ಲಿ, ಮತ್ತು ಪ್ರಾಯಶಃ ಸಾ.ಶ. 66ರ ತನಕವೂ ಒಂದು ಆಡಳಿತ ಮಂಡಳಿಯು ಯೆರೂಸಲೇಮಿನಲ್ಲಿ ಕ್ರಿಯಾಶೀಲವಾಗಿತ್ತೆಂಬುದು ಸ್ಪಷ್ಟ.
ಆಧುನಿಕ ಕಾಲಗಳಲ್ಲಿ ಆಡಳಿತ
7. ಒಂದನೆಯ ಶತಮಾನದ ಆಡಳಿತ ಮಂಡಳಿಗೆ ಹೋಲಿಸುವಾಗ, ಇಂದಿನ ಆಡಳಿತ ಮಂಡಳಿಯ ರಚನೆಯಲ್ಲಿ ಯಾವ ಗಮನಾರ್ಹ ವ್ಯತ್ಯಾಸವಿದೆ?
7 ಸಾ.ಶ. 33ರಿಂದ ಹಿಡಿದು ಯೆರೂಸಲೇಮಿನ ಮೇಲೆ ಬಂದ ಸಂಕಟದ ವರೆಗೆ, ಆಡಳಿತ ಮಂಡಳಿಯು ಯೆಹೂದಿ ಕ್ರೈಸ್ತರನ್ನೊಳಗೊಂಡಿತ್ತೆಂಬುದು ವ್ಯಕ್ತ. ಸಾ.ಶ. 56ರ ತನ್ನ ಭೇಟಿಯಲ್ಲಿ ಪೌಲನಿಗೆ, ಯೆರೂಸಲೇಮಿನಲ್ಲಿದ್ದ ಅನೇಕ ಯೆಹೂದಿ ಕ್ರೈಸ್ತರು, “ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆ” ಇಟ್ಟಿದ್ದರೂ, ಇನ್ನೂ “[ಮೋಶೆಯ] ಧರ್ಮಶಾಸ್ತ್ರದಲ್ಲಿ ಅಭಿಮಾನಿಗಳು” ಆಗಿದ್ದರೆಂದು ತಿಳಿದುಬಂತು.c (ಯಾಕೋಬ 2:1; ಅ. ಕೃತ್ಯಗಳು 21:20-25) ಇಂತಹ ಯೆಹೂದ್ಯರಿಗೆ, ಆಡಳಿತ ಮಂಡಳಿಯಲ್ಲಿ ಒಬ್ಬ ಅನ್ಯನಿರುವುದನ್ನು ಊಹಿಸುವುದು ಸಹ ಕಷ್ಟವಾಗಿದ್ದಿರಬಹುದು. ಆದರೆ ಆಧುನಿಕ ಕಾಲಗಳಲ್ಲಿಯೊ, ಈ ಮಂಡಳಿಯ ರಚನೆಯಲ್ಲಿ ಇನ್ನೊಂದು ಬದಲಾವಣೆಯಾಗಿದೆ. ಇಂದು ಇದು ಪೂರ್ತಿಯಾಗಿ ಅಭಿಷಿಕ್ತ ಅನ್ಯ ಕ್ರೈಸ್ತರನ್ನು ಒಳಗೊಂಡಿದೆ ಮತ್ತು ಯೆಹೋವನು ಅವರ ಮೇಲ್ವಿಚಾರಣೆಯನ್ನು ಮಹತ್ತಾಗಿ ಆಶೀರ್ವದಿಸಿದ್ದಾನೆ.—ಎಫೆಸ 2:11-15.
8, 9. ಆಧುನಿಕ ದಿನಗಳಲ್ಲಿ ಆಡಳಿತ ಮಂಡಳಿಯಲ್ಲಿ ಯಾವ ವಿಕಸನಗಳು ಸಂಭವಿಸಿವೆ?
8 ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯ, 1884ರಲ್ಲಿ ಸಂಘಟಿತವಾದಂದಿನಿಂದ 1972ರ ವರೆಗೆ, ಆಡಳಿತ ಮಂಡಳಿಯು ಸೊಸೈಟಿಯ ಡೈರೆಕ್ಟರರ ಸಮಿತಿಯೊಂದಿಗೆ ಒತ್ತಾಗಿ ಕೂಡಿಕೊಂಡಿದ್ದರೂ, ಸೊಸೈಟಿಯ ಅಧ್ಯಕ್ಷರು ಯೆಹೋವನ ಸಂಸ್ಥೆಯಲ್ಲಿ ಮಹಾ ಅಧಿಕಾರವನ್ನು ನಿರ್ವಹಿಸಿದರು. ಆ ವರ್ಷಗಳಲ್ಲಿ ಅನುಭವಿಸಿದ ಆಶೀರ್ವಾದಗಳು, ಆ ಏರ್ಪಾಡನ್ನು ಯೆಹೋವನು ಅಂಗೀಕರಿಸಿದನೆಂಬುದನ್ನು ರುಜುಪಡಿಸುತ್ತವೆ. ಆ ಆಡಳಿತ ಮಂಡಳಿಯನ್ನು 1972 ಮತ್ತು 1975ರ ಮಧ್ಯೆ 18 ಸದಸ್ಯರುಗಳಿಗೆ ವಿಸ್ತರಿಸಲಾಯಿತು. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ಕೆಲವು ಡೈರೆಕ್ಟರರೂ ಇರುವ ಈ ವಿಸ್ತೃತ ಮಂಡಳಿಗೆ ಹೆಚ್ಚಿನ ಅಧಿಕಾರವು ಕೊಡಲ್ಪಟ್ಟಾಗ ಸಂಗತಿಗಳು ಒಂದನೆಯ ಶತಮಾನದ ಏರ್ಪಾಡಿಗೆ ಹೆಚ್ಚು ಹತ್ತಿರವಾದವು.
9 ಇಸವಿ 1975ರಿಂದ ಈ 18 ಮಂದಿಯಲ್ಲಿ ಹಲವಾರು ಜನರು ತಮ್ಮ ಭೂಯಾತ್ರೆಯನ್ನು ತೀರಿಸಿದ್ದಾರೆ. ಅವರು ಲೋಕವನ್ನು ಜಯಿಸಿ, ‘ಯೇಸುವಿನೊಂದಿಗೆ ಸ್ವರ್ಗಾಸನದಲ್ಲಿ ಕುಳಿತು’ಕೊಂಡಿದ್ದಾರೆ. (ಪ್ರಕಟನೆ 3:21) ಈ ಮತ್ತು ಇತರ ಕಾರಣಗಳಿಗಾಗಿ, ಆಡಳಿತ ಮಂಡಳಿಯಲ್ಲಿ ಈಗ, 1994ರಲ್ಲಿ ಕೂಡಿಸಿದ ಒಬ್ಬರನ್ನು ಸೇರಿಸಿ, ಹತ್ತು ಮಂದಿ ಸದಸ್ಯರಿದ್ದಾರೆ. ಹೆಚ್ಚಿನವರು ತುಂಬ ವೃದ್ಧರಾಗಿದ್ದಾರೆ. ಆದರೆ, ಈ ಅಭಿಷಿಕ್ತ ಸಹೋದರರಿಗೆ, ಅವರು ತಮ್ಮ ಭಾರಿ ಕರ್ತವ್ಯಗಳನ್ನು ನೆರವೇರಿಸುವಾಗ, ಉತ್ತಮವಾದ ಬೆಂಬಲವು ಕೊಡಲ್ಪಡುತ್ತದೆ. ಆ ಬೆಂಬಲವನ್ನು ಎಲ್ಲಿ ಕಂಡುಕೊಳ್ಳಲಾಗುತ್ತದೆ? ದೇವಜನರ ಮಧ್ಯೆ ಆಗಿರುವ ಆಧುನಿಕ ವಿಕಸನಗಳ ಕಡೆಗೆ ಒಂದು ನಸುನೋಟವು, ಆ ಪ್ರಶ್ನೆಯನ್ನು ಉತ್ತರಿಸುತ್ತದೆ.
ದೇವರ ಇಸ್ರಾಯೇಲ್ಯರಿಗೆ ಬೆಂಬಲ
10. ಈ ಕಡೆಯ ದಿವಸಗಳಲ್ಲಿ ಯೆಹೋವನ ಸೇವೆಯಲ್ಲಿ ಅಭಿಷಿಕ್ತರನ್ನು ಯಾರು ಕೂಡಿಕೊಂಡಿದ್ದಾರೆ, ಮತ್ತು ಇದು ಹೇಗೆ ಪ್ರವಾದಿಸಲ್ಪಟ್ಟಿತು?
10 ಹಿಂದೆ 1884ರಲ್ಲಿ, ದೇವರ ಇಸ್ರಾಯೇಲ್ಯರೊಂದಿಗೆ ಕೂಡಿಕೊಂಡಿದ್ದ ಬಹುಮಟ್ಟಿಗೆ ಎಲ್ಲರೂ ಅಭಿಷಿಕ್ತ ಕ್ರೈಸ್ತರಾಗಿದ್ದರು. ಆದರೆ ಕ್ರಮೇಣ, ಇನ್ನೊಂದು ಗುಂಪು ಕಂಡುಬರತೊಡಗಿತು ಮತ್ತು 1935ರಲ್ಲಿ ಈ ಗುಂಪನ್ನು ಪ್ರಕಟನೆ 7ನೆಯ ಅಧ್ಯಾಯದ “ಮಹಾ ಸಮೂಹ”ವಾಗಿ ಗುರುತಿಸಲಾಯಿತು. ಭೂನಿರೀಕ್ಷೆಯುಳ್ಳವರಾದ ಇವರು, ಯೆಹೋವನು ಕ್ರಿಸ್ತನಲ್ಲಿ ಒಟ್ಟುಗೂಡಿಸಲು ಉದ್ದೇಶಿಸಿರುವ, “ಭೂಮಿಯ ಮೇಲಿರುವ ವಸ್ತುಗಳನ್ನು” ಪ್ರತಿನಿಧೀಕರಿಸುತ್ತಾರೆ. (ಎಫೆಸ 1:10) ಕುರೀಹಟ್ಟಿಗಳ ಕುರಿತ ಯೇಸುವಿನ ಸಾಮ್ಯದಲ್ಲಿನ “ಬೇರೆ ಕುರಿ”ಗಳನ್ನು ಇವರು ಪ್ರತಿನಿಧೀಕರಿಸುತ್ತಾರೆ. (ಯೋಹಾನ 10:16) ಬೇರೆ ಕುರಿಗಳು, 1935ರಿಂದ ಹಿಡಿದು, ಹಿಂಡಾಗಿ ಯೆಹೋವನ ಸಂಸ್ಥೆಯೊಳಗೆ ಬಂದಿದ್ದಾರೆ. ಇವರು “ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆಯೂ ಹಾರಿ” ಬಂದಿದ್ದಾರೆ. (ಯೆಶಾಯ 60:8) ಮಹಾ ಸಮೂಹದಲ್ಲಿ ವರ್ಧನೆ ಮತ್ತು ಅಭಿಷಿಕ್ತ ವರ್ಗದಲ್ಲಿ ಅನೇಕರು ತಮ್ಮ ಭೂಯಾತ್ರೆಯನ್ನು ತೀರಿಸುವಾಗ ಅವನತಿಯ ಕಾರಣ, ಅರ್ಹತೆ ಪಡೆದಿರುವ ಬೇರೆ ಕುರಿಗಳು ಕ್ರೈಸ್ತ ಚಟುವಟಿಕೆಗಳಲ್ಲಿ ಹೆಚ್ಚೆಚ್ಚಿನ ಪಾತ್ರವನ್ನು ವಹಿಸುವಂತಾಗಿದೆ. ಯಾವ ವಿಧಗಳಲ್ಲಿ?
11. ಆದಿಯಲ್ಲಿ ಅಭಿಷಿಕ್ತ ಕ್ರೈಸ್ತರಿಗೆ ಸೀಮಿತವಾಗಿದ್ದ ಯಾವ ಸುಯೋಗಗಳು ಬೇರೆ ಕುರಿಗಳಿಗೆ ಕೊಡಲ್ಪಟ್ಟಿವೆ?
11 ಯೆಹೋವನ ಉತ್ಕೃಷ್ಟತೆಗಳನ್ನು ಹೊರಗಡೆ ಪ್ರಕಟಿಸುವುದು, ಸದಾ ದೇವರ “ಪವಿತ್ರ ಜನಾಂಗ”ದ ವಿಶೇಷ ಹಂಗಾಗಿದೆ. ಪೌಲನು ಅದನ್ನು ದೇವಾಲಯದ ಯಜ್ಞದೋಪಾದಿ ಮಾತಾಡಿದನು, ಮತ್ತು “ರಾಜವಂಶಸ್ಥರಾದ ಯಾಜಕ”ರಾಗುವವರಿಗೆ ಯೇಸುವು ಸಾರುವ ಮತ್ತು ಕಲಿಸುವ ಆದೇಶವನ್ನು ಕೊಟ್ಟನು. (ವಿಮೋಚನಕಾಂಡ 19:5, 6; 1 ಪೇತ್ರ 2:4, 9; ಮತ್ತಾಯ 24:14; 28:19, 20; ಇಬ್ರಿಯ 13:15, 16) ಆದರೂ, ಆಗಸ್ಟ್ 1, 1932ರ ದ ವಾಚ್ಟವರ್ ಸಂಚಿಕೆಯು, ಯೋನಾದಾಬನಿಂದ ಮುನ್ಸೂಚಿಸಲ್ಪಟ್ಟವರು ಈ ಚಟುವಟಿಕೆಯಲ್ಲಿ ಭಾಗವಹಿಸುವಂತೆ ನಿರ್ದಿಷ್ಟವಾಗಿ ಪ್ರೋತ್ಸಾಹಿಸಿತು. ಅಂತಹ ಬೇರೆ ಕುರಿಗಳು ಆಗಲೇ ಹಾಗೆ ಮಾಡುತ್ತಿದ್ದರೆಂಬುದು ನಿಶ್ಚಯ. ಇಂದು, ಸಾರುವುದರಲ್ಲಿ ಹೆಚ್ಚುಕಡಮೆ ಎಲ್ಲ ಕೆಲಸವು, “ಆತನ ಆಲಯದಲ್ಲಿ ಹಗಲಿರುಳು [ದೇವರ] [“ಪವಿತ್ರ,” NW] ಸೇವೆಯನ್ನು” ಮಾಡುವುದರ ತಮ್ಮ ಪ್ರಮುಖ ಭಾಗವಾಗಿ ಬೇರೆ ಕುರಿಗಳಿಂದ ಮಾಡಲ್ಪಡುತ್ತದೆ. (ಪ್ರಕಟನೆ 7:15) ಅದೇ ರೀತಿ, ಯೆಹೋವನ ಜನರ ಆಧುನಿಕ ಇತಿಹಾಸದ ಆದಿ ಭಾಗದಲ್ಲಿ ಸಭಾ ಹಿರಿಯರು, ಅಭಿಷಿಕ್ತ ಕ್ರೈಸ್ತರು, ಯೇಸು ಕ್ರಿಸ್ತನ ಬಲಗೈಯಲ್ಲಿದ್ದ “ನಕ್ಷತ್ರಗಳು” ಆಗಿದ್ದರು. (ಪ್ರಕಟನೆ 1:16, 20) ಆದರೆ ಮೇ 1, 1937ರ ದ ವಾಚ್ಟವರ್ನ ಸಂಚಿಕೆಯು, ಅರ್ಹತೆಯುಳ್ಳ ಬೇರೆ ಕುರಿಗಳು ಕಂಪನಿ ಸೇವಕರು (ಅಧ್ಯಕ್ಷ ಮೇಲ್ವಿಚಾರಕರು) ಆಗಸಾಧ್ಯವಿದೆಯೆಂದು ಪ್ರಕಟಿಸಿತು. ಅಭಿಷಿಕ್ತ ಪುರುಷರು ಇರುವುದಾದರೂ, ಅಭಿಷಿಕ್ತ ಪುರುಷರು ಈ ಸ್ಥಾನವನ್ನು ವಹಿಸಿಕೊಳ್ಳಲು ಶಕ್ತರಾಗಿರದಿದ್ದರೆ, ಬೇರೆ ಕುರಿಗಳನ್ನು ಉಪಯೋಗಿಸಸಾಧ್ಯವಿತ್ತು. ಇಂದು, ಸಭಾ ಹಿರಿಯರಲ್ಲಿ ಹೆಚ್ಚುಕಡಮೆ ಎಲ್ಲರೂ ಬೇರೆ ಕುರಿ ವರ್ಗದವರಾಗಿದ್ದಾರೆ.
12. ಅರ್ಹತೆಯಿರುವ ಬೇರೆ ಕುರಿಗಳು ಭಾರಿ ಸಂಘಟನಾ ಜವಾಬ್ದಾರಿಗಳನ್ನು ಪಡೆಯುವುದಕ್ಕೆ ಯಾವ ಶಾಸ್ತ್ರೀಯ ಪೂರ್ವನಿದರ್ಶನಗಳಿವೆ?
12 ಇಂತಹ ಭಾರಿ ಜವಾಬ್ದಾರಿಗಳನ್ನು ಬೇರೆ ಕುರಿಗಳಿಗೆ ಕೊಡುವುದು ತಪ್ಪೊ? ಇಲ್ಲ, ಅದೊಂದು ಐತಿಹಾಸಿಕ ಪೂರ್ವನಿದರ್ಶನವನ್ನು ಅನುಸರಿಸುತ್ತದೆ. ಪುರಾತನ ಇಸ್ರಾಯೇಲಿನಲ್ಲಿ ಕೆಲವು ವಿದೇಶಿ ಮತ ಪರಿವರ್ತಿತರು (ಅನ್ಯ ನಿವಾಸಿಗಳು) ಉಚ್ಚ ಸ್ಥಾನಗಳಲ್ಲಿದ್ದರು. (2 ಸಮುವೇಲ 23:37, 39; ಯೆರೆಮೀಯ 38:7-9) ಬಾಬೆಲಿನಲ್ಲಿ ದೇಶಭ್ರಷ್ಟತೆಯ ಬಳಿಕ, ಅರ್ಹರಾದ ನೆತಿನಿಯರಿಗೆ (ಇಸ್ರಾಯೇಲ್ಯೇತರ ದೇವಾಲಯದಾಸರು) ಈ ಮೊದಲು ಲೇವ್ಯರಿಗೆ ಮಾತ್ರ ಸೇರಿದ್ದ ದೇವಾಲಯ ಸೇವೆಯ ಸುಯೋಗಗಳು ಕೊಡಲ್ಪಟ್ಟವು. (ಎಜ್ರ 8:15-20; ನೆಹೆಮೀಯ 7:60) ಇದಕ್ಕೆ ಕೂಡಿಸಿ, ರೂಪಾಂತರದಲ್ಲಿ ಯೇಸುವಿನೊಂದಿಗೆ ಕಂಡುಬಂದ ಮೋಶೆಯು, ಮಿದ್ಯಾನ್ಯ ಇತ್ರೋವನು ಕೊಟ್ಟ ಉತ್ತಮ ಸಲಹೆಯನ್ನು ಅಂಗೀಕರಿಸಿದನು. ತರುವಾಯ, ಅವನು ಇತ್ರೋವನ ಮಗನಾದ ಹೋಬಾಬನು ಅವರನ್ನು ಅರಣ್ಯದಲ್ಲಿ ಮಾರ್ಗದರ್ಶಿಸುವಂತೆ ಕೇಳಿಕೊಂಡನು.—ವಿಮೋಚನಕಾಂಡ 18:5, 17-24; ಅರಣ್ಯಕಾಂಡ 10:29.
13. ಅರ್ಹತೆಯಿರುವ ಬೇರೆ ಕುರಿಗಳಿಗೆ ದೈನ್ಯದಿಂದ ಜವಾಬ್ದಾರಿಗಳನ್ನು ಕೊಡುವುದರಲ್ಲಿ, ಅಭಿಷಿಕ್ತರು ಯಾರ ಉತ್ತಮ ಆದರ್ಶವನ್ನು ಅನುಕರಿಸುತ್ತಿದ್ದಾರೆ?
13 ಅರಣ್ಯದಲ್ಲಿ ಕಳೆದ 40 ವರುಷಗಳ ಅಂತ್ಯದಲ್ಲಿ, ತಾನು ವಾಗ್ದತ್ತ ದೇಶಕ್ಕೆ ಹೋಗುವುದಿಲ್ಲವೆಂಬುದನ್ನು ತಿಳಿದಿದ್ದ ಮೋಶೆಯು, ಯೆಹೋವನು ಒಬ್ಬ ಉತ್ತರಾಧಿಕಾರಿಯನ್ನು ಒದಗಿಸುವಂತೆ ಪ್ರಾರ್ಥಿಸಿದನು. (ಅರಣ್ಯಕಾಂಡ 27:15-17) ಯೆಹೋಶುವನನ್ನು ಎಲ್ಲ ಜನರ ಮುಂದೆ ನೇಮಿಸುವಂತೆ ಯೆಹೋವನು ಹೇಳಲಾಗಿ ಮೋಶೆಯು, ಇನ್ನೂ ದೈಹಿಕ ಬಲವುಳ್ಳವನಾಗಿದ್ದರೂ ಮತ್ತು ಇಸ್ರಾಯೇಲ್ಯರಿಗೆ ಸೇವೆ ಮಾಡುವುದನ್ನು ಆ ಕೂಡಲೇ ನಿಲ್ಲಿಸಲಿಲ್ಲವಾದರೂ, ಹಾಗೆಯೇ ಮಾಡಿದನು. (ಧರ್ಮೋಪದೇಶಕಾಂಡ 3:28; 34:5-7, 9) ತದ್ರೀತಿಯ ದೀನಭಾವದಿಂದ, ಅಭಿಷಿಕ್ತರು ಈಗಾಗಲೇ, ಬೇರೆ ಕುರಿಗಳಲ್ಲಿ ಅರ್ಹತೆಯುಳ್ಳವರಿಗೆ ಹೆಚ್ಚಿನ ಸುಯೋಗಗಳನ್ನು ಕೊಡುತ್ತಿದ್ದಾರೆ.
14. ಬೇರೆ ಕುರಿಗಳ ಹೆಚ್ಚುತ್ತಿರುವ ಸಂಘಟನಾ ಪಾತ್ರವನ್ನು ಯಾವ ಪ್ರವಾದನೆಗಳು ತೋರಿಸುತ್ತವೆ?
14 ಬೇರೆ ಕುರಿಗಳ ವರ್ಧಿಸುತ್ತಿರುವ ಸಂಘಟನಾ ಪಾತ್ರವು ಪ್ರವಾದನಾ ವಿಷಯವೂ ಆಗಿದೆ. ಇಸ್ರಾಯೇಲ್ಯೇತರ ಫಿಲಿಷ್ಟಿಯನು “ಯೆಹೂದದಲ್ಲಿ ಕುಲಪಾಲಕನಂತೆ [“ಯೆಹೂದದಲ್ಲಿ ಷೇಕನಂತೆ,” NW]” ಇರುವನೆಂದು ಜೆಕರ್ಯನು ಮುಂತಿಳಿಸಿದನು. (ಜೆಕರ್ಯ 9:6, 7) ಷೇಕರು ಕುಲಮುಖಂಡರಾಗಿದ್ದರು. ಹಾಗಾದರೆ, ಜೆಕರ್ಯನು ಹೇಳುತ್ತಿದ್ದುದೇನೆಂದರೆ, ಇಸ್ರಾಯೇಲಿನ ಹಿಂದಿನ ವೈರಿಯೊಬ್ಬನು ಸತ್ಯಾರಾಧನೆಯನ್ನು ಅಂಗೀಕರಿಸಿ, ವಾಗ್ದತ್ತ ದೇಶದಲ್ಲಿ ಕುಲಮುಖಂಡನಂತೆ ಆಗುವನು. ಅಲ್ಲದೆ, ದೇವರ ಇಸ್ರಾಯೇಲ್ಯರನ್ನು ಸಂಬೋಧಿಸುವಾಗ ಯೆಹೋವನು ಹೇಳಿದ್ದು: “ಆಗ ವಿದೇಶೀಯರು [“ಅಪರಿಚಿತರು,” NW] ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು [“ವಿದೇಶೀಯರು,” NW] ನಿಮಗೆ ಉಳುವವರೂ ತೋಟಗಾರರೂ ಆಗುವರು. ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು.” (ಯೆಶಾಯ 61:5, 6) ಆ “ಅಪರಿಚಿತರು” ಮತ್ತು “ವಿದೇಶೀಯರು” ಬೇರೆ ಕುರಿಗಳಾಗಿದ್ದಾರೆ. ವೃದ್ಧರಾಗುತ್ತ ಹೋಗುತ್ತಿರುವ ಅಭಿಷಿಕ್ತ ಉಳಿಕೆಯವರು ತಮ್ಮ ಭೂಯಾತ್ರೆಯನ್ನು ತೀರಿಸಿ, ಯೆಹೋವನ ರಾಜವೈಭವದ ಸಿಂಹಾಸನದ ಸುತ್ತಲೂ “ದೇವರ ಸೇವಕರು” ಆಗಿ, ಪೂರ್ಣಾರ್ಥದಲ್ಲಿ “ಯೆಹೋವ”ನ ಸ್ವರ್ಗೀಯ “ಯಾಜಕರು” ಆಗಿ ಸೇವೆಮಾಡಲು ಹೋಗುವಾಗ, ಇವರಿಗೆ ಹೆಚ್ಚೆಚ್ಚು ಕೆಲಸವನ್ನು ವಹಿಸಿಕೊಳ್ಳುವಂತೆ ಜವಾಬ್ದಾರಿಗಳು ಕೊಡಲ್ಪಟ್ಟಿವೆ.—1 ಕೊರಿಂಥ 15:50-57; ಪ್ರಕಟನೆ 4:4, 9-11; 5:9, 10.
“ಮುಂದಿನ ತಲೆಯವರು”
15. ಈ ಅಂತ್ಯಕಾಲದಲ್ಲಿ ಕ್ರೈಸ್ತರ ಯಾವ ಗುಂಪು “ಮುದುಕ”ತನವನ್ನು ಮುಟ್ಟಿದೆ, ಮತ್ತು ಯಾವ ಗುಂಪು “ಮುಂದಿನ ತಲೆ”ಯವರನ್ನು ಪ್ರತಿನಿಧೀಕರಿಸುತ್ತದೆ?
15 ಬೇರೆ ಕುರಿಗಳನ್ನು ವರ್ಧಿಸಿದ ಜವಾಬ್ದಾರಿಗಳಿಗಾಗಿ ತರಬೇತುಗೊಳಿಸಲು ಅಭಿಷಿಕ್ತ ಉಳಿಕೆಯವರು ಅತ್ಯಾಸಕ್ತಿಯುಳ್ಳವರಾಗಿದ್ದಾರೆ. ಕೀರ್ತನೆ 71:18 ಹೇಳುವುದು: “ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.” ಈ ವಚನದ ಮೇಲೆ ವ್ಯಾಖ್ಯಾನಿಸುತ್ತ, ಡಿಸೆಂಬರ್ 15, 1948ರ ವಾಚ್ಟವರ್, ಅಭಿಷಿಕ್ತ ಕ್ರೈಸ್ತರ ಸಭೆಯು ಖಂಡಿತವಾಗಿಯೂ ವೃದ್ಧಾಪ್ಯವನ್ನು ತಲಪಿದೆ ಎಂದು ಹೇಳಿತು. ಅಭಿಷಿಕ್ತರು ಸಂತೋಷದಿಂದ, “ಬೈಬಲ್ ಪ್ರವಾದನೆಯ ಬೆಳಕಿನಲ್ಲಿ ಮುನ್ನೋಡಿ ಒಂದು ಹೊಸ ಸಂತತಿಯನ್ನು ಕಾಣುತ್ತಾರೆ,” ಎಂದೂ ಅದು ಮುಂದುವರಿಸಿ ಹೇಳಿತು. ಇದು ಪ್ರತ್ಯೇಕವಾಗಿ ಯಾರನ್ನು ಸೂಚಿಸುತ್ತದೆ? ದ ವಾಚ್ಟವರ್ ಹೇಳಿದ್ದು: “ಯೇಸು ಅವರನ್ನು, ‘ಬೇರೆ ಕುರಿಗಳು’ ಎಂದು ಕರೆದನು.” “ಮುಂದಿನ ತಲೆಯವರು” ಎಂಬುದು ಸ್ವರ್ಗೀಯ ರಾಜ್ಯದ ಆಧಿಪತ್ಯದಲ್ಲಿರುವ ನೂತನ ಭೂಆಡಳಿತದ ಕೆಳಗೆ ಜೀವಿಸುವ ಮಾನವರನ್ನು ಸೂಚಿಸುತ್ತದೆ.
16. “ಮುಂದಿನ ತಲೆಯವರು” ಯಾವ ಆಶೀರ್ವಾದಗಳಿಗಾಗಿ ಆತುರದಿಂದ ಮುನ್ನೋಡುತ್ತಾರೆ?
16 ಸಕಲ ಅಭಿಷಿಕ್ತ ಕ್ರೈಸ್ತರು, “ಮುಂದಿನ ತಲೆಯವರು” ಆಗಿರುವ ತಮ್ಮ ಸಹೋದರರನ್ನು ಬಿಟ್ಟು, ಯೇಸು ಕ್ರಿಸ್ತನೊಂದಿಗೆ ಮಹಿಮೆಗೇರಿಸಲ್ಪಡಲು ಯಾವಾಗ ಹೋಗುವರೆಂಬುದನ್ನು ಬೈಬಲು ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ಈ ಅಭಿಷಿಕ್ತರು, ಆ ಸಮಯವು ಸಮೀಪಿಸುತ್ತ ಇದೆ ಎಂಬುದರಲ್ಲಿ ಭರವಸೆಯಿಂದಿದ್ದಾರೆ. “ಅಂತ್ಯಕಾಲ”ದ ವಿಷಯದಲ್ಲಿ ಯೇಸುವಿನ ಮಹಾ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಿದ್ದ ಸಂಭವಗಳು 1914ರಿಂದ ನೆರವೇರುತ್ತಿವೆ ಮತ್ತು ಇದು, ಈ ಲೋಕದ ನಾಶನವು ಹತ್ತಿರವಿದೆಯೆಂಬುದನ್ನು ತೋರಿಸುತ್ತದೆ. (ದಾನಿಯೇಲ 12:4; ಮತ್ತಾಯ 24:3-14; ಮಾರ್ಕ 13:4-20; ಲೂಕ 21:7-24) ಬೇಗನೆ, ಯೆಹೋವನು ಒಂದು ನೂತನ ಲೋಕವನ್ನು ಒಳತರುವನು. ಇದರಲ್ಲಿ “ಮುಂದಿನ ತಲೆಯವರು” ‘ಲೋಕಾದಿಯಿಂದ ಅವರಿಗಾಗಿ ಸಿದ್ಧಮಾಡಿದ ರಾಜ್ಯ [ಭೂಕ್ಷೇತ್ರ]ವನ್ನು ಸ್ವಾಸ್ತ್ಯವಾಗಿ ಪಡೆಯುವರು.’ (ಮತ್ತಾಯ 25:34) ಅವರು ಪ್ರಮೋದವನದ ಪುನಸ್ಸ್ಥಾಪನೆಯನ್ನು ಮತ್ತು ಹೇಡೀಸ್ನಿಂದ ಕೋಟಿಗಟ್ಟಲೆ ಜನರು ಮೃತರಿಂದ ಎಬ್ಬಿಸಲ್ಪಡುವುದನ್ನು ನಿರೀಕ್ಷಿಸಲು ರೋಮಾಂಚಗೊಂಡಿದ್ದಾರೆ. (ಪ್ರಕಟನೆ 20:13) ಈ ಪುನರುತ್ಥಾನ ಹೊಂದಿದವರನ್ನು ಪುನಃ ಸ್ವಾಗತಿಸಲು ಅಭಿಷಿಕ್ತರು ಅಲ್ಲಿರುವರೊ? ಹಿಂದೆ 1925ರಲ್ಲಿ, ಮೇ 1ರ ವಾಚ್ ಟವರ್ ಹೇಳಿದ್ದು: “ದೇವರು ಹೀಗೆ ಮಾಡುವನು ಅಥವಾ ಮಾಡನೆಂದು ನಾವು ಸ್ವೇಚ್ಫಾನುಸಾರವಾಗಿ ಹೇಳಬಾರದು. . . . [ಆದರೆ] ಚರ್ಚಿನ ಸದಸ್ಯರು [ಅಭಿಷಿಕ್ತ ಕ್ರೈಸ್ತರು] ಪುರಾತನ ಅರ್ಹವ್ಯಕ್ತಿಗಳ [ಕ್ರಿಸ್ತಪೂರ್ವದ ನಂಬಿಗಸ್ತ ಸಾಕ್ಷಿಗಳು] ಪುನರುತ್ಥಾನಕ್ಕೆ ಮೊದಲು ಮಹಿಮೆಗೊಳಿಸಲ್ಪಡುವರೆಂಬ ತೀರ್ಮಾನಕ್ಕೆ ನಾವು ನಡಿಸಲ್ಪಡುತ್ತೇವೆ.” ಅದೇ ರೀತಿ, ಪುನರುತ್ಥಿತರನ್ನು ಸ್ವಾಗತಿಸಲು ಅಭಿಷಿಕ್ತರಲ್ಲಿ ಕೆಲವರು ಆಗ ಇರುವರೊ ಎಂಬುದನ್ನು ಚರ್ಚಿಸುವಾಗ, ಮೇ 1, 1990ರ ಕಾವಲಿನಬುರುಜು, “ಇದರ ಅವಶ್ಯವಿಲ್ಲ” ಎಂದು ಹೇಳಿತು.d
17. ಅಭಿಷಿಕ್ತರು ಗುಂಪಾಗಿ, ಸಿಂಹಾಸನವೇರಿರುವ ಅರಸನಾದ ಯೇಸು ಕ್ರಿಸ್ತನೊಂದಿಗೆ ಯಾವ ಅದ್ಭುತಕರವಾದ ಸುಯೋಗಗಳಲ್ಲಿ ಭಾಗಿಗಳಾಗುವರು?
17 ಪ್ರತಿಯೊಬ್ಬ ಅಭಿಷಿಕ್ತ ಕ್ರೈಸ್ತನ ವಿಷಯದಲ್ಲಿ ಏನಾಗುವುದೆಂದು ನಮಗೆ ತಿಳಿಯದೆಂಬುದು ನಿಜ. ಆದರೆ ರೂಪಾಂತರ ದರ್ಶನದಲ್ಲಿ ಯೇಸುವಿನೊಂದಿಗೆ ಮೋಶೆ ಮತ್ತು ಎಲೀಯರ ಉಪಸ್ಥಿತಿಯು, ಯೇಸು ಮಹಿಮೆಯಲ್ಲಿ “ಒಬ್ಬೊಬ್ಬನಿಗೆ ಅವನವನ ನಡತೆಗೆ ತಕ್ಕ ಪ್ರತಿಫಲವನ್ನು” ಕೊಡಲು ಬಂದು ತನ್ನ ತೀರ್ಪನ್ನು ವಿಧಿಸಿ ನಿರ್ವಹಿಸುವಾಗ, ಪುನರುತ್ಥಾನಹೊಂದಿದ ಅಭಿಷಿಕ್ತ ಕ್ರೈಸ್ತರು ಅವನೊಂದಿಗೆ ಇರುವುದು ಸಂಭಾವ್ಯವೆಂದು ಸೂಚಿಸುತ್ತದೆ. ಅಲ್ಲದೆ, ‘ಜಯಶಾಲಿಗಳು’ ತನ್ನೊಂದಿಗೆ ಅರ್ಮಗೆದೋನಿನಲ್ಲಿ ‘ಕಬ್ಬಿಣದ ಕೋಲಿನಿಂದ ಜನಾಂಗಗಳನ್ನು ಆಳುವರು’ ಎಂಬ ಯೇಸುವಿನ ವಾಗ್ದಾನವು ನಮ್ಮ ನೆನಪಿಗೆ ಬರುತ್ತದೆ. ಯೇಸು ಮಹಿಮೆಯಲ್ಲಿ ಬರುವಾಗ, ಅವರು ಅವನೊಂದಿಗೆ ಕುಳಿತು, “ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸು”ವರು. ಯೇಸುವಿನೊಂದಿಗೆ ಅವರು, ‘ಸೈತಾನನನ್ನು ತಮ್ಮ ಕಾಲುಗಳ ಕೆಳಗೆ ಹಾಕಿ ತುಳಿಯುವರು.’—ಮತ್ತಾಯ 16:27–17:9; 19:28; ಪ್ರಕಟನೆ 2:26, 27; 16:14, 16; ರೋಮಾಪುರ 16:20; ಆದಿಕಾಂಡ 3:15; ಕೀರ್ತನೆ 2:9; 2 ಥೆಸಲೊನೀಕ 1:9, 10.
18. (ಎ) ‘ಸ್ವರ್ಗದ ವಸ್ತುಗಳನ್ನು ಕ್ರಿಸ್ತನಲ್ಲಿ ಒಟ್ಟುಗೂಡಿಸುವ’ ವಿಷಯದಲ್ಲಿ ಪರಿಸ್ಥಿತಿಯೇನಾಗಿರುತ್ತದೆ? (ಬಿ) ‘ಭೂಮಿಯ ಮೇಲಿರುವ ವಸ್ತುಗಳನ್ನು ಕ್ರಿಸ್ತನಲ್ಲಿ ಒಟ್ಟುಗೂಡಿಸುವ ವಿಷಯ’ ನಾವೇನು ಹೇಳಬಲ್ಲೆವು?
18 ವಿಷಯಗಳನ್ನು ತಾನು ನಿರ್ವಹಿಸುವುದಕ್ಕೆ ಹೊಂದಿಕೊಂಡು, ಯೆಹೋವನು, “ಕ್ರಿಸ್ತನಲ್ಲಿ ಪುನಃ ಸಕಲ ವಸ್ತುಗಳನ್ನು . . . ಒಟ್ಟುಗೂಡಿಸಲು” ಪ್ರಗತಿಪರವಾಗಿ ಸಾಗುತ್ತಿದ್ದಾನೆ. “ಸ್ವರ್ಗದಲ್ಲಿರುವ ವಸ್ತುಗಳ” ವಿಷಯವಾಗಿಯೊ, ಆತನ ಉದ್ದೇಶವು ಮುಕ್ತಾಯವನ್ನು ಸಮೀಪಿಸುತ್ತದೆ. ಯೇಸುವನ್ನು ಪೂರ್ತಿ 1,44,000 ಮಂದಿಯೊಂದಿಗೆ ಸ್ವರ್ಗದಲ್ಲಿ “ಯಜ್ಞದ ಕುರಿಯಾದಾತನ ವಿವಾಹಕಾಲ”ಕ್ಕಾಗಿ ಐಕ್ಯಗೊಳಿಸುವ ಸಂಭವವು ಹತ್ತಿರವಿದೆ. ಆದಕಾರಣ, ಬೇರೆ ಕುರಿಗಳ ಗುಂಪಿನ ದೀರ್ಘಸಮಯದ, ಪಕ್ವತೆಯುಳ್ಳ ಸಹೋದರರಲ್ಲಿ ಹೆಚ್ಚೆಚ್ಚು ಮಂದಿಗೆ, ಅವರ ಅಭಿಷಿಕ್ತ ಸಹೋದರರಿಗೆ ಅವರು ಬೆಂಬಲ ಕೊಡುವಂತೆ ಹೆಚ್ಚು ಭಾರವಾದ ಜವಾಬ್ದಾರಿಗಳನ್ನು ಕೊಡಲಾಗಿದೆ. ನಾವು ಎಂತಹ ಉತ್ತೇಜಕ ಕಾಲಗಳಲ್ಲಿ ಜೀವಿಸುತ್ತೇವೆ! ಯೆಹೋವನ ಉದ್ದೇಶವು ಅದರ ನೆರವೇರಿಕೆಗೆ ಸಾಗುತ್ತಿರುವುದನ್ನು ನೋಡುವುದು ಎಷ್ಟು ರೋಮಾಂಚಕ! (ಎಫೆಸ 1:9, 10; 3:10-12; ಪ್ರಕಟನೆ 14:1; 19:7, 9) ಮತ್ತು ಎರಡು ಗುಂಪುಗಳೂ ಕೂಡಿ ರಾಜನಾದ ಯೇಸು ಕ್ರಿಸ್ತನ ಅಧೀನತೆಯಲ್ಲಿ “ಒಬ್ಬನೇ ಕುರುಬ”ನ ಕೆಳಗೆ “ಒಂದೇ ಹಿಂಡು” ಆಗಿ ಮತ್ತು ಮಹಾ ವಿಶ್ವ ಪರಮಾಧಿಕಾರಿಯಾದ ಯೆಹೋವ ದೇವರ ಮಹಿಮೆಗಾಗಿ ಸೇವೆಮಾಡುವಾಗ ತಮ್ಮ ಅಭಿಷಿಕ್ತ ಸಹೋದರರಿಗೆ ಬೆಂಬಲ ನೀಡುವುದಕ್ಕೆ ಈ ಬೇರೆ ಕುರಿಗಳು ಎಷ್ಟು ಹರ್ಷಿಸುತ್ತಾರೆ!—ಯೋಹಾನ 10:16; ಫಿಲಿಪ್ಪಿ 2:9-11.
[ಅಧ್ಯಯನ ಪ್ರಶ್ನೆಗಳು]
b ಉದಾಹರಣೆಗೆ, 1914ರಿಂದಾರಂಭವಾಗಿ, “ದ ಫೋಟೋ ಡ್ರಾಮ ಆಫ್ ಕ್ರಿಯೇಶನ್” ಎಂಬ ನಾಲ್ಕು ಭಾಗಗಳ ಚಿತ್ರ ಮತ್ತು ಧ್ವನಿಮುದ್ರಣ ಪ್ರದರ್ಶನವನ್ನು, ಪಾಶ್ಚಾತ್ಯ ಜಗತ್ತಿನಲ್ಲೆಲ್ಲ, ತುಂಬಿದ ಸಭಾಂಗಣಗಳಲ್ಲಿ ಸಭಿಕರಿಗೆ ತೋರಿಸಲಾಯಿತು.
c ಹಲವು ಯೆಹೂದಿ ಕ್ರೈಸ್ತರು ಧರ್ಮಶಾಸ್ತ್ರಾಭಿಮಾನಿಗಳಾಗಿ ಏಕೆ ಇದ್ದರೆಂಬುದಕ್ಕೆ ಶಕ್ಯವಾದ ಕಾರಣಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ, ಶಾಸ್ತ್ರಗಳ ಮೇಲಿನ ಒಳನೋಟ (ಇಂಗ್ಲಿಷ್), ಸಂಪುಟ 2, ಪುಟಗಳು 1163-4 ನೋಡಿ.
ವಿವರಿಸಬಲ್ಲಿರೊ?
◻ ದೇವರ ಸಂಸ್ಥೆಯು ಒಂದನೆಯ ಶತಮಾನದಲ್ಲಿ ಹೇಗೆ ಮುಂದೆ ಸಾಗಿತು?
◻ ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸದಲ್ಲಿ ಆಡಳಿತ ಮಂಡಳಿಯು ಹೇಗೆ ವಿಕಾಸಗೊಂಡಿದೆ?
◻ ಯೆಹೋವನ ಸಂಸ್ಥೆಯಲ್ಲಿ ಬೇರೆ ಕುರಿಗಳಿಗೆ ಅಧಿಕಾರ ಕೊಡುವುದನ್ನು ಯಾವ ಶಾಸ್ತ್ರವಚನಗಳು ಪ್ರಮಾಣೀಕರಿಸುತ್ತವೆ?
◻ “ಸ್ವರ್ಗದಲ್ಲಿರುವ ವಸ್ತುಗಳು” ಮತ್ತು “ಭೂಮಿಯ ಮೇಲಿರುವ ವಸ್ತುಗಳು” ಕ್ರಿಸ್ತನಲ್ಲಿ ಹೇಗೆ ಒಟ್ಟುಗೂಡಿಸಲ್ಪಟ್ಟಿವೆ?
[ಪುಟ 16 ರಲ್ಲಿರುವ ಚಿತ್ರ]
ಅದರ ಆದಿ ಸದಸ್ಯರು ಯೆರೂಸಲೇಮಿನಲ್ಲಿ ಇಲ್ಲದಿದ್ದಾಗಲೂ, ಒಂದು ಆಡಳಿತ ಮಂಡಳಿ ಅಲ್ಲಿ ಕಾರ್ಯನಡೆಸುತ್ತಿತ್ತು
[ಪುಟ 18 ರಲ್ಲಿರುವ ಚಿತ್ರ]
ಪಕ್ವತೆಯ ಅಭಿಷಿಕ್ತ ಕ್ರೈಸ್ತರು ಯೆಹೋವನ ಜನರಿಗೊಂದು ಆಶೀರ್ವಾದವಾಗಿದ್ದಾರೆ
ಸಿ. ಟಿ. ರಸಲ್ 1884-1916
ಜೆ. ಎಫ್. ರದರ್ಫರ್ಡ್ 1916-42
ಎನ್. ಏಚ್. ನಾರ್ 1942-77
ಎಫ್. ಡಬ್ಲ್ಯೂ. ಫ್ರ್ಯಾನ್ಸ್ 1977-92
ಎಮ್. ಜಿ. ಹೆನ್ಶೆಲ್ 1992-