ನಾವು ಮೊರೆಯಿಡುವಾಗ ಯೆಹೋವನು ಕಿವಿಗೊಡುತ್ತಾನೆ
“ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ.” —ಕೀರ್ತ. 34:15.
1, 2. (ಎ) ಇಂದು ಅನೇಕರಿಗೆ ತಮ್ಮ ಕಷ್ಟಗಳ ಕುರಿತು ಹೇಗನಿಸುತ್ತದೆ? (ಬಿ) ಇದು ನಮಗೆ ಆಶ್ಚರ್ಯದ ವಿಷಯವಲ್ಲವೇಕೆ?
ನೀವು ಕಷ್ಟಸಂಕಟಗಳಿಂದ ಬಳಲುತ್ತಿದ್ದೀರೋ? ಹೌದಾದರೆ, ಹಾಗೆ ಬಳಲುತ್ತಿರುವುದು ನೀವೊಬ್ಬರೇ ಅಲ್ಲ. ಈ ದುಷ್ಟ ವಿಷಯಗಳ ವ್ಯವಸ್ಥೆಯಲ್ಲಿ ಜೀವಿಸುತ್ತಿರುವ ಲಕ್ಷಾಂತರ ಜನರು ತಮ್ಮ ದಿನನಿತ್ಯದ ಒತ್ತಡಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದಾರೆ. ಕೆಲವರಿಗಂತೂ ಇದು ಸಹಿಸಲಸಾಧ್ಯವೆಂದೇ ತೋರುತ್ತದೆ. ಕೀರ್ತನೆಗಾರ ದಾವೀದನ ಅನಿಸಿಕೆಯೇ ಅವರಿಗೂ ಇದೆ. ಅವನು ಬರೆದದ್ದು: “ನನಗೆ ಜೋಮುಹಿಡಿದಂತಿದೆ; ಬಹಳ ಮನಗುಂದಿದವನಾದೆನು. ಹೃದಯದ ಸಂಕಟದ ದೆಸೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ. ನನ್ನ ಗುಂಡಿಗೆ ಬಡುಕೊಳ್ಳುತ್ತದೆ; ನನ್ನ ಚೈತನ್ಯವು ಕುಗ್ಗಿಹೋಯಿತು; ನನ್ನ ಕಣ್ಣುಗಳೂ ಮೊಬ್ಬಾಗಿಹೋದವು.”—ಕೀರ್ತ. 38:8, 10.
2 ಕ್ರೆಸ್ತರಾದ ನಮಗೆ ಜೀವನದಲ್ಲಿ ಕಷ್ಟಗಳು ಬಂದೆರಗುವಾಗ ಆಶ್ಚರ್ಯವಾಗುವುದಿಲ್ಲ. ಏಕೆಂದರೆ “ಪ್ರಸವವೇದನೆ,” ಮುಂತಿಳಿಸಲ್ಪಟ್ಟ ಯೇಸುವಿನ ಸಾನ್ನಿಧ್ಯದ ಸೂಚನೆಯ ಭಾಗವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. (ಮಾರ್ಕ 13:8; ಮತ್ತಾ. 24:3) ಇಲ್ಲಿ, “ಪ್ರಸವವೇದನೆ” ಎಂದು ಭಾಷಾಂತರಗೊಂಡಿರುವ ಗ್ರೀಕ್ ಪದವು ಸಾಮಾನ್ಯವಾಗಿ ಘೋರ ಸಂಕಟ ಅಥವಾ ಕಡುಕಷ್ಟವನ್ನು ಸೂಚಿಸಬಹುದು. ಈ ‘ಕಠಿನಕಾಲಗಳಲ್ಲಿ’ ಜನರು ಅನುಭವಿಸುತ್ತಿರುವ ವ್ಯಥೆಗಳ ತೀವ್ರತೆಯನ್ನು ಇದು ಎಷ್ಟೊಂದು ನಿಷ್ಕೃಷ್ಟವಾಗಿ ವರ್ಣಿಸುತ್ತದೆ!—2 ತಿಮೊ. 3:1.
ನಮ್ಮ ಕಷ್ಟಗಳು ಯೆಹೋವನಿಗೆ ಅರ್ಥವಾಗುತ್ತವೆ
3. ದೇವಜನರಿಗೆ ಯಾವ ವಿಷಯ ಚೆನ್ನಾಗಿ ಗೊತ್ತಿದೆ?
3 ಇಂಥ ಕಷ್ಟಗಳಿಂದ ತಾವು ಸಹ ವಿಮುಕ್ತರಾಗಿಲ್ಲವೆಂಬುದು ಯೆಹೋವನ ಜನರಿಗೆ ಚೆನ್ನಾಗಿ ಗೊತ್ತು. ಅವರ ವಿಷಯದಲ್ಲಿ ಕಷ್ಟವು ಇನ್ನಷ್ಟು ಅಧಿಕವಾಗಿ ಯಾತನಾಮಯವಾಗಬಹುದು. ಏಕೆಂದರೆ, ಸಾಮಾನ್ಯ ಜನರು ಅನುಭವಿಸುವುದಕ್ಕೆ ಕೂಡಿಸಿ, ನಮ್ಮ ನಂಬಿಕೆಯನ್ನು ಚೂರುಚೂರು ಮಾಡಲು ಪಣತೊಟ್ಟಿರುವ ‘ವಿರೋಧಿಯಾದ ಸೈತಾನನನ್ನು’ ಸಹ ದೇವಜನರಾದ ನಾವು ಎದುರಿಸುತ್ತೇವೆ. (1 ಪೇತ್ರ 5:8) ಹೀಗಿರುವಾಗ, ದಾವೀದನಂತೆ ನಮಗೂ ಈ ರೀತಿ ಅನಿಸಬಹುದು: “ನಿಂದೆಯಿಂದ ಖಿನ್ನನಾಗಿ ಕುಂದಿಹೋಗಿದ್ದೇನೆ. ಕರುಣಾಳುಗಳನ್ನು ನಿರೀಕ್ಷಿಸಿದೆ; ದೊರೆಯಲಿಲ್ಲ. ಸಂತೈಸುವವರನ್ನು ಹಾರೈಸಿದೆ; ಸಿಕ್ಕಲಿಲ್ಲ”!—ಕೀರ್ತ. 69:20.
4. ಕಷ್ಟಗಳ ಸಮಯದಲ್ಲಿ ನಮಗೆ ಯಾವುದು ಸಾಂತ್ವನ ತರುತ್ತದೆ?
4 ದಾವೀದನು ತನಗೆ ಯಾವುದೇ ನಿರೀಕ್ಷೆಯಿಲ್ಲ ಎಂದು ಅರ್ಥೈಸಿದನೋ? ಇಲ್ಲ. ಆ ಕೀರ್ತನೆಯಲ್ಲಿರುವ ದಾವೀದನ ಮುಂದಿನ ಮಾತುಗಳನ್ನು ಗಮನಿಸಿ: “ಯೆಹೋವನು ಬಡವರ ಮೊರೆಗೆ ಲಕ್ಷ್ಯಕೊಡುವನು; ಸೆರೆಯಲ್ಲಿರುವ ತನ್ನವರನ್ನು ತಿರಸ್ಕರಿಸುವದಿಲ್ಲ.” (ಕೀರ್ತ. 69:33) ವಿಶಾಲಾರ್ಥದಲ್ಲಿ, ಕೆಲವೊಮ್ಮೆ ಕಷ್ಟಸಂಕಟಗಳ ಸೆರೆಯಲ್ಲಿ ಬಂದಿಗಳಾಗಿರುವಂತೆ ನಮಗನಿಸಬಹುದು. ನಮ್ಮ ಪರಿಸ್ಥಿತಿಯನ್ನು ನಿಜವಾಗಿ ಯಾರೂ ಅರ್ಥಮಾಡಿಕೊಳ್ಳಲಾರರು ಎಂದು ನಮಗೆ ತೋರಬಹುದು. ಪ್ರಾಯಶಃ ಒಬ್ಬರೂ ಅರ್ಥಮಾಡಿಕೊಳ್ಳಲಿಕ್ಕಿಲ್ಲ. ಆದರೆ, ಯೆಹೋವನು ನಮ್ಮ ಕಷ್ಟಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾನೆ ಎಂದು ತಿಳಿದುಕೊಳ್ಳುವುದು ದಾವೀದನಂತೆ ನಮಗೂ ಸಾಂತ್ವನ ತರಬಲ್ಲದು.—ಕೀರ್ತ. 34:15.
5. ಯಾವುದರಲ್ಲಿ ಸೊಲೊಮೋನನಿಗೆ ಭರವಸೆಯಿತ್ತು?
5 ಈ ವಿಷಯವನ್ನು ದಾವೀದನ ಮಗ ಸೊಲೊಮೋನನು ಯೆರೂಸಲೇಮಿನ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ವ್ಯಕ್ತಪಡಿಸಿದನು. (2 ಪೂರ್ವಕಾಲವೃತ್ತಾಂತ. 6:29-31 ಓದಿ.) “[ತಾನು] ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ” ಯೆಹೋವನಿಗೆ ಮೊರೆಯಿಡುವ ಪ್ರತಿಯೊಬ್ಬ ಪ್ರಾಮಾಣಿಕ ವ್ಯಕ್ತಿಯ ಪ್ರಾರ್ಥನೆಯನ್ನು ಲಾಲಿಸಬೇಕೆಂದು ಸೊಲೊಮೋನನು ಬೇಡಿಕೊಂಡನು. ಕಷ್ಟಗಳಿಂದ ಬಳಲುತ್ತಿರುವ ಈ ಜನರ ಪ್ರಾರ್ಥನೆಗಳಿಗೆ ದೇವರು ಹೇಗೆ ಪ್ರತಿಕ್ರಿಯಿಸುತ್ತಾನೆ? ಅವರ ಪ್ರಾರ್ಥನೆಗಳನ್ನು ದೇವರು ಬರಿ ಕೇಳಿಸಿಕೊಳ್ಳುವುದು ಮಾತ್ರವಲ್ಲ ಅವರಿಗೆ ನೆರವನ್ನೂ ನೀಡುತ್ತಾನೆ ಎಂಬ ಭರವಸೆಯನ್ನು ಸೊಲೊಮೋನನು ವ್ಯಕ್ತಪಡಿಸಿದನು. ಯಾಕೆ? ಯಾಕೆಂದರೆ, “ಮನುಷ್ಯರ ಹೃದಯಗಳನ್ನು ಬಲ್ಲಂಥ” ದೇವರು ಆತನಾಗಿದ್ದಾನೆ.
6. ನಮ್ಮ ಚಿಂತೆಯನ್ನು ನಾವು ಹೇಗೆ ನಿಭಾಯಿಸಬಲ್ಲೆವು, ಮತ್ತು ಏಕೆ?
6 ಅದರಂತೆಯೇ ನಾವು, “ಅನುಭವಿಸುತ್ತಿರುವ ಉಪದ್ರವ ದುಃಖಗಳ ನಿಮಿತ್ತವಾಗಿ” ಅಥವಾ ನಮ್ಮ ಸ್ವಂತ ಕಷ್ಟಗಳ ವಿಷಯವಾಗಿ ಯೆಹೋವನಿಗೆ ಪ್ರಾರ್ಥಿಸಸಾಧ್ಯವಿದೆ. ಆತನು ನಮ್ಮ ಕಷ್ಟಸಂಕಟಗಳನ್ನು ಅರ್ಥಮಾಡಿಕೊಳ್ಳುತ್ತಾನೆ ಮತ್ತು ನಮ್ಮ ಬಗ್ಗೆ ಆತನಿಗೆ ಕಾಳಜಿಯಿದೆ ಎಂದು ತಿಳಿದು ನಾವು ಸಾಂತ್ವನ ಪಡೆದುಕೊಳ್ಳಬೇಕು. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎಂದು ಅಪೊಸ್ತಲ ಪೇತ್ರನು ಹೇಳಿದಾಗ ಇದನ್ನು ಸಾಬೀತುಪಡಿಸಿದನು. (1 ಪೇತ್ರ 5:7) ನಮಗೆ ಸಂಭವಿಸುವ ಸಂಗತಿಗಳ ಕುರಿತು ಯೆಹೋವನು ಖಂಡಿತವಾಗಿಯೂ ಚಿಂತಿಸುತ್ತಾನೆ. ಯೆಹೋವನ ಪ್ರೀತಿಯ ಪರಾಮರಿಕೆಯನ್ನು ಯೇಸು ಒತ್ತಿ ಹೇಳುತ್ತಾ ಅಂದದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.”—ಮತ್ತಾ. 10:29-31.
ಯೆಹೋವನ ಸಹಾಯದ ಮೇಲೆ ಆತುಕೊಳ್ಳಿ
7. ಯಾರ ಬೆಂಬಲದ ಖಾತ್ರಿ ನಮಗಿರಬಲ್ಲದು?
7 ಕಷ್ಟತೊಂದರೆಗಳಿಂದ ನಾವು ನರಳುತ್ತಿರುವಾಗ ಯೆಹೋವನು ಖಂಡಿತವಾಗಿಯೂ ನಮಗೆ ನೆರವು ನೀಡಲು ಸಿದ್ಧನೂ ಶಕ್ತನೂ ಆಗಿದ್ದಾನೆ ಎಂದು ಭರವಸೆಯಿಂದ ಇರಸಾಧ್ಯವಿದೆ. “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು.” (ಕೀರ್ತ. 34:15-18; 46:1) ದೇವರು ಹೇಗೆ ಆ ಸಹಾಯವನ್ನು ನೀಡುತ್ತಾನೆ? 1 ಕೊರಿಂಥ 10:13 ಏನು ಹೇಳುತ್ತದೆಂದು ಗಮನಿಸಿ: “ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” ಕಷ್ಟಗಳು ನಮ್ಮಿಂದ ನೀಗುವಂತೆ ಯೆಹೋವನು ಸನ್ನಿವೇಶಗಳನ್ನು ಬದಲಾಯಿಸಬಹುದು. ಇಲ್ಲವೆ, ಅದನ್ನು ತಾಳಿಕೊಳ್ಳಲು ಬೇಕಾದ ಬಲವನ್ನು ನಮಗೆ ಒದಗಿಸಬಹುದು. ಹೇಗೆಯೇ ಇರಲಿ, ಯೆಹೋವನು ನಮಗೆ ಖಂಡಿತ ನೆರವಾಗುವನು.
8. ದೇವರ ಸಹಾಯವನ್ನು ನಾವು ಹೇಗೆ ಪಡಕೊಳ್ಳಬಲ್ಲೆವು?
8 ಆ ಸಹಾಯವನ್ನು ನಾವು ಹೇಗೆ ಪಡಕೊಳ್ಳಬಲ್ಲೆವು? ನಾವು ಏನು ಮಾಡಬೇಕೆಂದು ತಿಳಿಸುವ ಸಲಹೆಯನ್ನು ಗಮನಿಸಿ: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ.” ಇದರ ಅರ್ಥ, ಸಾಂಕೇತಿಕವಾಗಿ ನಮ್ಮ ಚಿಂತೆ ಕಳವಳಗಳ ಹೊಣೆಯನ್ನು ನಾವು ಯೆಹೋವನಿಗೆ ವಹಿಸಿಕೊಡಬೇಕು ಎಂದಾಗಿದೆ. ನಾವು ಚಿಂತಿಸುವುದನ್ನು ಬಿಟ್ಟುಬಿಡಲು ಪ್ರಯತ್ನಿಸಿ ನಮ್ಮ ಅಗತ್ಯಗಳನ್ನು ಆತನು ನೋಡಿಕೊಳ್ಳುತ್ತಾನೆಂದು ಭರವಸೆಯಿಟ್ಟು ತಾಳ್ಮೆಯಿಂದ ಕಾಯಬೇಕು. (ಮತ್ತಾ. 6:25-32) ಅಂಥ ಭರವಸೆಗೆ, ನಮ್ಮ ಸ್ವಂತ ಬುದ್ಧಿ ಮತ್ತು ಬಲದ ಮೇಲೆ ಆತುಕೊಳ್ಳದೆ ದೀನಭಾವದಿಂದಿರುವುದು ಆವಶ್ಯಕ. “ದೇವರ ತ್ರಾಣವುಳ್ಳ ಹಸ್ತದ ಕೆಳಗೆ” ನಮ್ಮನ್ನು ತಗ್ಗಿಸಿಕೊಳ್ಳುವಾಗ ನಮ್ಮ ದೀನ ಸ್ಥಾನವನ್ನು ನಾವು ಒಪ್ಪಿಕೊಳ್ಳುತ್ತೇವೆ. (1 ಪೇತ್ರ 5:6 ಓದಿ.) ಇದು, ದೇವರು ಏನೇ ಅನುಮತಿಸಲಿ ಅದನ್ನು ನಿಭಾಯಿಸಲು ನಮಗೆ ಸಹಾಯಮಾಡುತ್ತದೆ. ನಮ್ಮ ಕಷ್ಟಗಳು ತಕ್ಷಣವೇ ಪರಿಹಾರವಾಗಲಿ ಎಂದು ನಾವು ಆಶಿಸಬಹುದು. ಆದರೂ, ನಮ್ಮ ಪರವಾಗಿ ಯಾವಾಗ ಮತ್ತು ಹೇಗೆ ಕಾರ್ಯನಿರ್ವಹಿಸಬೇಕೆಂದು ಯೆಹೋವನಿಗೆ ಖಚಿತವಾಗಿ ಗೊತ್ತು ಎಂಬುದರಲ್ಲಿ ನಮಗೆ ದೃಢ ನಂಬಿಕೆಯಿದೆ.—ಕೀರ್ತ. 54:6; ಯೆಶಾ. 41:10.
9. ಯಾವ ರೀತಿಯ ಚಿಂತಾಭಾರವನ್ನು ದಾವೀದನು ಯೆಹೋವನ ಮೇಲೆ ಹಾಕಬೇಕಿತ್ತು?
9 ಕೀರ್ತನೆ 55:22 ರಲ್ಲಿರುವ ದಾವೀದನ ಮಾತುಗಳನ್ನು ನೆನಪು ಮಾಡಿಕೊಳ್ಳಿ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” ಈ ಮಾತುಗಳನ್ನು ಬರೆದ ಸಮಯದಲ್ಲಿ ದಾವೀದನು ತುಂಬಾ ಸಂಕಟದಲ್ಲಿದ್ದನು. (ಕೀರ್ತ. 55:4) ಅವನ ಪುತ್ರ ಅಬ್ಷಾಲೋಮನು ಅರಸುತನವನ್ನು ಅಪಹರಿಸಲು ಪಿತೂರಿ ನಡೆಸಿದಾಗ ಅವನು ಈ ಕೀರ್ತನೆಯನ್ನು ಬರೆದನೆಂದು ತೋರುತ್ತದೆ. ಆ ಒಳಸಂಚಿನಲ್ಲಿ, ದಾವೀದನ ವಿಶ್ವಾಸಪಾತ್ರನಾದ ಸಲಹೆಗಾರ ಅಹೀತೋಫೆಲನೂ ಸೇರಿಕೊಂಡನು. ಆಗ ದಾವೀದನು ಪ್ರಾಣರಕ್ಷಣೆಗಾಗಿ ಯೆರೂಸಲೇಮನ್ನು ಬಿಟ್ಟು ಓಡಿಹೋಗಬೇಕಾಯಿತು. (2 ಸಮು. 15:12-14) ಅಂಥ ಭೀಕರ ಸನ್ನಿವೇಶಗಳಲ್ಲಿ ಸಹ ದಾವೀದನು ಎದೆಗುಂದಲಿಲ್ಲ. ಆಗಲೂ ಯೆಹೋವನಲ್ಲಿ ಭರವಸೆಯಿಟ್ಟನು.
10. ಕಷ್ಟಗಳು ಬಂದಾಗ ನಾವೇನು ಮಾಡಬೇಕು?
10 ದಾವೀದನಂತೆ ನಾವು ಕೂಡ ನಮಗಿರುವ ಯಾವುದೇ ಕಷ್ಟಗಳ ಕುರಿತು ಯೆಹೋವನಿಗೆ ಪ್ರಾರ್ಥಿಸುವುದು ಬಲು ಪ್ರಾಮುಖ್ಯವಾಗಿದೆ. ಈ ವಿಷಯದಲ್ಲಿ ನಾವೇನು ಮಾಡಬೇಕೆಂದು ಅಪೊಸ್ತಲ ಪೌಲನು ತಿಳಿಸಿರುವುದನ್ನು ನಾವೀಗ ಪರಿಗಣಿಸೋಣ. (ಫಿಲಿಪ್ಪಿ 4:6, 7 ಓದಿ.) ಆ ರೀತಿ ಕಟ್ಟಕ್ಕರೆಯಿಂದ ನಾವು ಪ್ರಾರ್ಥಿಸುವಾಗ ಯಾವ ಉತ್ತರ ಸಿಗುವುದು? “ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು [ನಮ್ಮ] ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”
11. “ದೇವಶಾಂತಿಯು” ನಮ್ಮ ಹೃದಯ ಮತ್ತು ಯೋಚನೆಗಳನ್ನು ಹೇಗೆ ಕಾಯುತ್ತದೆ?
11 ಪ್ರಾರ್ಥನೆ ಮಾಡುವುದರಿಂದ ನಿಮ್ಮ ಪರಿಸ್ಥಿತಿಯು ಬದಲಾಗುವುದೋ? ಬದಲಾಗಬಹುದು. ಹಾಗಿದ್ದರೂ, ಯೆಹೋವನು ಯಾವಾಗಲೂ ನಾವು ಬಯಸುವ ರೀತಿಯಲ್ಲಿ ಉತ್ತರಿಸುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಏನೇ ಆದರೂ ಪ್ರಾರ್ಥನೆಯು ನಮ್ಮ ಮಾನಸಿಕ ಸ್ಥಿತಿಯನ್ನು ಸಮತೂಕದಲ್ಲಿಡಲು ನೆರವಾಗುತ್ತದೆ. ಹೀಗೆ, ಕಷ್ಟಗಳು ನಮ್ಮ ಚಿತ್ತಸ್ಥೈರ್ಯವನ್ನು ಕುಂದಿಸುವುದಿಲ್ಲ. ವೇದನೆ ತುಂಬಿದ ಭಾರವಾದ ಭಾವನೆಗಳಡಿಯಲ್ಲಿ ಹುದುಗಿಹೋಗುವಾಗ “ದೇವಶಾಂತಿಯು” ನಮಗೆ ಪ್ರಶಾಂತತೆಯನ್ನು ಒದಗಿಸುತ್ತದೆ. ಶತ್ರುದಾಳಿಯಿಂದ ನಗರವನ್ನು ರಕ್ಷಿಸಲಿಕ್ಕಾಗಿ ಕಾವಲಿರುವ ರಕ್ಷಣಾಪಡೆಯಂತೆ, “ದೇವಶಾಂತಿಯು” ನಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕಾಯುವುದು. ಇದು ನಮ್ಮಲ್ಲಿರುವ ಸಂದೇಹ, ಭಯ ಮತ್ತು ಕೆಟ್ಟ ಆಲೋಚನೆಗಳನ್ನು ಸಹ ಹೊಡೆದೋಡಿಸುತ್ತದೆ ಹಾಗೂ ಮುಂದಾಲೋಚನೆಯಿಲ್ಲದೆ ದುಡುಕುವುದನ್ನೂ ಅವಿವೇಕದಿಂದ ವರ್ತಿಸುವುದನ್ನೂ ತಡೆಯುತ್ತದೆ.—ಕೀರ್ತ. 145:18.
12. ಒಬ್ಬನು ಮನಶ್ಶಾಂತಿಯನ್ನು ಹೇಗೆ ಪಡಕೊಳ್ಳಸಾಧ್ಯವಿದೆ ಎಂಬುದನ್ನು ದೃಷ್ಟಾಂತಿಸಿ.
12 ನಾವು ಕಷ್ಟಗಳಡಿಯಲ್ಲಿ ಸಿಲುಕಿಕೊಂಡಿರುವಾಗ ಹೇಗೆ ಮನಶ್ಶಾಂತಿಯನ್ನು ಪಡಕೊಳ್ಳಸಾಧ್ಯವಿದೆ? ಸ್ವಲ್ಪಮಟ್ಟಿಗೆ ನಮ್ಮ ಪರಿಸ್ಥಿತಿಯನ್ನು ಹೋಲುವ ಒಂದು ಉದಾಹರಣೆಯನ್ನು ತೆಗೆದುಕೊಳ್ಳಿ. ನೌಕರನೊಬ್ಬನಿಗೆ ತಾನು ಕೆಲಸಮಾಡುವಲ್ಲಿನ ಮ್ಯಾನೆಜರ್ ಯಾವಾಗಲೂ ಕಷ್ಟಕೊಡುತ್ತಿರಬಹುದು. ಆದರೆ ಆ ನೌಕರನಿಗೆ ತನ್ನ ಧಣಿಯ ಬಳಿ ತನ್ನ ಕಷ್ಟಗಳನ್ನು ಹೇಳಿಕೊಳ್ಳುವ ಅವಕಾಶ ಸಿಕ್ಕುತ್ತದೆ. ಆ ಧಣಿಯಾದರೋ ದಯಾಪರನೂ ನ್ಯಾಯವಾಗಿ ನಡೆದುಕೊಳ್ಳುವವನೂ ಆಗಿದ್ದಾನೆ. ನೌಕರನ ಪರಿಸ್ಥಿತಿ ತನಗೆ ಅರ್ಥವಾಗಿದೆ ಎಂಬ ಆಶ್ವಾಸನೆ ನೀಡುತ್ತಾ, ಆ ಮ್ಯಾನೆಜರನನ್ನು ಶೀಘ್ರದಲ್ಲಿ ಅವನ ಕೆಲಸದಿಂದ ವಜಾ ಮಾಡುವುದಾಗಿ ಧಣಿಯು ತಿಳಿಸುತ್ತಾನೆ. ಇದನ್ನು ಕೇಳಿದಾಗ ಆ ನೌಕರನಿಗೆ ಹೇಗನಿಸಬಹುದು? ಧಣಿಯ ಆಶ್ವಾಸನೆಯ ಮಾತುಗಳಿಂದ ಮತ್ತು ಸದ್ಯದಲ್ಲಿ ಏನಾಗಲಿದೆ ಎಂದು ತಿಳಿದಿರುವುದರಿಂದ ಅವನು ಆ ಕೆಲಸ ಮಾಡುವುದನ್ನು ಮುಂದುವರಿಸುತ್ತಾನೆ. ಅಷ್ಟರವರೆಗೆ ಸ್ವಲ್ಪ ಹೆಚ್ಚು ಕಷ್ಟ ಬಂದರೂ ಅವನದನ್ನು ಸಹಿಸಿಕೊಂಡು ಹೋಗುತ್ತಾನೆ. ತದ್ರೀತಿಯಲ್ಲಿ, ಯೆಹೋವನು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂಬುದು ನಮಗೆ ತಿಳಿದಿದೆ. ಅಲ್ಲದೆ, ಬಲು ಬೇಗನೆ “ಇಹಲೋಕಾಧಿಪತಿಯು ಹೊರಗೆ ನೂಕಲ್ಪಡುವನು” ಎಂಬ ಆಶ್ವಾಸನೆಯನ್ನು ಕೊಡುತ್ತಾನೆ. (ಯೋಹಾ. 12:31) ಅದೆಂಥ ಸಾಂತ್ವನ!
13. ನಮ್ಮ ಪ್ರಾರ್ಥನೆಗೆ ಕೂಡಿಸಿ ನಾವು ಇನ್ನೇನು ಮಾಡತಕ್ಕದ್ದು?
13 ಹಾಗಾದರೆ, ಕೇವಲ ನಮ್ಮ ತೊಂದರೆಗಳ ಕುರಿತು ಯೆಹೋವನಿಗೆ ಪ್ರಾರ್ಥಿಸಿದರೆ ಸಾಕೋ? ಸಾಲದು. ಅದಕ್ಕಿಂತಲೂ ಹೆಚ್ಚನ್ನು ಮಾಡಬೇಕು. ನಮ್ಮ ಪ್ರಾರ್ಥನೆಗೆ ಅನುಗುಣವಾಗಿ ನಾವು ನಡೆದುಕೊಳ್ಳಬೇಕು. ಅರಸ ಸೌಲನು ದಾವೀದನನ್ನು ಕೊಲ್ಲಲಿಕ್ಕಾಗಿ ಅವನ ಮನೆಗೆ ಜನರನ್ನು ಕಳುಹಿಸಿದಾಗ, ದಾವೀದನು ಪ್ರಾರ್ಥಿಸಿದ್ದು: “ನನ್ನ ದೇವರೇ, ಶತ್ರುಗಳ ಕೈಯಿಂದ ನನ್ನನ್ನು ಬಿಡಿಸು; ನನಗೆ ವಿರೋಧವಾಗಿ ಎದ್ದಿರುವವರಿಗೆ ನನ್ನನ್ನು ತಪ್ಪಿಸಿ ಭದ್ರಸ್ಥಳದಲ್ಲಿರಿಸು. ಕೆಡುಕರಿಂದ ಬಿಡಿಸು; ಕೊಲೆಪಾತಕರಿಂದ ನನ್ನನ್ನು ರಕ್ಷಿಸು.” (ಕೀರ್ತ. 59:1, 2) ದಾವೀದನು ಪ್ರಾರ್ಥಿಸಿದ್ದಲ್ಲದೆ, ತನ್ನ ಹೆಂಡತಿಯ ಮಾತನ್ನು ಕೇಳಿ ಅಲ್ಲಿಂದ ತಪ್ಪಿಸಿಕೊಳ್ಳಲು ಕ್ರಿಯೆಗೈದನು. (1 ಸಮು. 19:11, 12) ಅದೇ ರೀತಿ, ನಮಗಿರುವ ಕಷ್ಟದ ಪರಿಸ್ಥಿತಿಗಳನ್ನು ತಾಳಿಕೊಳ್ಳುವುದಕ್ಕಾಗಿ ಹಾಗೂ ಅದನ್ನು ಸುಧಾರಿಸುವುದಕ್ಕಾಗಿ ವ್ಯಾವಹಾರಿಕ ಜ್ಞಾನ ಕೊಡುವಂತೆ ನಾವು ಪ್ರಾರ್ಥಿಸಸಾಧ್ಯವಿದೆ.—ಯಾಕೋ. 1:5.
ತಾಳಿಕೊಳ್ಳಲು ಬಲ ಪಡೆಯುವ ವಿಧ
14. ಕಷ್ಟಸಂಕಟಗಳ ಸಮಯದಲ್ಲಿ ತಾಳಿಕೊಳ್ಳಲು ನಮಗೆ ಯಾವುದು ಸಹಾಯಮಾಡುತ್ತದೆ?
14 ನಮ್ಮ ಕಷ್ಟಸಂಕಟಗಳು ಬೇಗನೆ ಪರಿಹಾರವಾಗದಿರಬಹುದು. ಕೆಲವೊಮ್ಮೆ ಅವು ಸ್ವಲ್ಪಸಮಯದವರೆಗೆ ಹಾಗೇ ಮುಂದುವರಿಯಲೂಬಹುದು. ಅಂಥ ಸಮಯಗಳಲ್ಲಿ ತಾಳಿಕೊಳ್ಳಲು ಯಾವುದು ನಮಗೆ ಸಹಾಯಮಾಡುವುದು? ಮೊದಲನೆಯದಾಗಿ, ಸಮಸ್ಯೆಗಳಿರುವಾಗಲೂ ನಾವು ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುವಾಗ ಆತನ ಮೇಲೆ ನಮಗಿರುವ ಪ್ರೀತಿಯನ್ನು ನಾವು ತೋರಿಸಿಕೊಡುತ್ತೇವೆ ಎಂಬುದನ್ನು ನೆನಪಿನಲ್ಲಿಡಿರಿ. (ಅ. ಕೃ. 14:22) ಯೋಬನ ವಿಷಯದಲ್ಲಿ ಸೈತಾನನು ನೀಡಿದ ದೂರನ್ನು ಮನಸ್ಸಿನಲ್ಲಿಡಿರಿ: “ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ? ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” (ಯೋಬ 1:9-11) ಆದರೆ, ಯೋಬನು ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ ಆ ದೂರು ಶುದ್ಧ ಸುಳ್ಳೆಂದು ರುಜುಪಡಿಸಿದನು. ಕಡುಸಂಕಟಮಯ ಪರಿಸ್ಥಿತಿಗಳನ್ನು ತಾಳಿಕೊಳ್ಳುವ ಮೂಲಕ ಸೈತಾನನೊಬ್ಬ ಸುಳ್ಳುಗಾರನೆಂದು ತೋರಿಸಿಕೊಡುವ ಅವಕಾಶ ನಮಗೆ ಸಹ ಇದೆ. ಮಾತ್ರವಲ್ಲ, ನಮ್ಮ ತಾಳ್ಮೆಯು ನಮ್ಮ ನಿರೀಕ್ಷೆ ಹಾಗೂ ಯೆಹೋವನಲ್ಲಿನ ಭರವಸೆಯನ್ನು ಬಲಪಡಿಸುತ್ತದೆ.—ಯಾಕೋ. 1:4.
15. ಯಾವ ಉದಾಹರಣೆಗಳು ನಮ್ಮನ್ನು ಬಲಪಡಿಸುತ್ತವೆ?
15 ಎರಡನೆಯದಾಗಿ, “ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆ” ಎಂಬುದನ್ನು ಮನಸ್ಸಿನಲ್ಲಿಡಿರಿ. (1 ಪೇತ್ರ 5:9) ಹೌದು, “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ.” (1 ಕೊರಿಂ. 10:13) ಆದುದರಿಂದ, ನಿಮ್ಮ ಸ್ವಂತ ಸಮಸ್ಯೆಗಳ ಕುರಿತೇ ಚಿಂತಿಸುವ ಬದಲು, ಇತರರ ಉದಾಹರಣೆಗಳ ಕುರಿತು ಧ್ಯಾನಿಸುವ ಮೂಲಕ ಬಲ ಮತ್ತು ಧೈರ್ಯವನ್ನು ಪಡೆದುಕೊಳ್ಳಸಾಧ್ಯವಿದೆ. (1 ಥೆಸ. 1:5-7; ಇಬ್ರಿ. 12:1) ನಿಮಗೆ ಗೊತ್ತಿರುವವರು ತಮ್ಮ ವೇದನಾಮಯ ಕಷ್ಟಗಳನ್ನು ಹೇಗೆ ನಂಬಿಗಸ್ತಿಕೆಯಿಂದ ತಾಳಿಕೊಂಡರು ಎಂಬುದರ ಕುರಿತು ಆಲೋಚಿಸಲು ಸಮಯ ತೆಗೆದುಕೊಳ್ಳಿರಿ. ನಿಮ್ಮಂಥ ಸನ್ನಿವೇಶಗಳನ್ನೇ ಎದುರಿಸಿದವರ ಜೀವನ ಕಥೆಗಳಿಗಾಗಿ ನೀವು ಪ್ರಕಾಶನಗಳಲ್ಲಿ ಹುಡುಕಿದ್ದೀರೋ? ಅದು ನಿಮ್ಮಲ್ಲಿ ಭಾರಿ ಬಲವನ್ನು ತುಂಬಬಲ್ಲದು.
16. ನಾನಾ ವಿಧವಾದ ಸಂಕಟಗಳನ್ನು ಎದುರಿಸುವಾಗ ದೇವರು ನಮ್ಮನ್ನು ಹೇಗೆ ಬಲಪಡಿಸುತ್ತಾನೆ?
16 ಮೂರನೆಯದಾಗಿ, ಯೆಹೋವನು “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ” ಎಂಬುದು ನಿಮ್ಮ ನೆನಪಿನಲ್ಲಿರಲಿ. (2 ಕೊರಿಂ. 1:3, 4) ಇದು, ಕೇವಲ ನಮ್ಮ ಈಗಿನ ಸಂಕಟಗಳಲ್ಲಿ ಮಾತ್ರವಲ್ಲ, ನಮ್ಮ “ಎಲ್ಲಾ ಸಂಕಟಗಳಲ್ಲಿ” ಸಹ ದೇವರು ನಮಗೆ ಪ್ರೋತ್ಸಾಹ ನೀಡಿ ಬಲಪಡಿಸಲಿಕ್ಕಾಗಿ ನಮ್ಮ ಬಳಿಯಲ್ಲೇ ನಿಂತುಕೊಂಡಿದ್ದಾನೋ ಎಂಬಂತಿದೆ. ಇದರಿಂದ, “ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ.” ಈ ಮಾತುಗಳ ಸತ್ಯಸ್ಥಿತಿಯನ್ನು ಪೌಲನು ಸ್ವತಃ ಅನುಭವಿಸಿದ್ದನು.—2 ಕೊರಿಂ. 4:8, 9; 11:23-27.
17. ನಮ್ಮ ಜೀವನದ ಕಷ್ಟಗಳನ್ನು ನಿಭಾಯಿಸಲು ಬೈಬಲ್ ಹೇಗೆ ಸಹಾಯಮಾಡುತ್ತದೆ?
17 ನಾಲ್ಕನೆಯದಾಗಿ, ದೇವರ ವಾಕ್ಯವಾದ ಬೈಬಲ್ ನಮಗಿದೆ. ಅದು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.” (2 ತಿಮೊ. 3:16, 17) ದೇವರ ವಾಕ್ಯವು ನಮ್ಮನ್ನು ಕೇವಲ ‘ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧರಾಗಿರುವಂತೆ’ ಮಾಡುವುದಲ್ಲದೆ, ಅದು ಜೀವನದ ಕಷ್ಟಗಳನ್ನು ನಿಭಾಯಿಸಲಿಕ್ಕೂ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. “ಸನ್ನದ್ಧ” ಎಂದು ಭಾಷಾಂತರವಾಗಿರುವ ಮೂಲ ಭಾಷೆಯ ಪದವನ್ನು ಪುರಾತನ ಸಮಯಗಳಲ್ಲಿ ಸಮುದ್ರಯಾನಕ್ಕೆ ಬೇಕಾದ ಸಕಲವನ್ನು ಹೊಂದಿರುವ ಒಂದು ದೋಣಿಯ ಅಥವಾ ನಿರೀಕ್ಷಿಸಲಾದ ಎಲ್ಲಾ ಕೆಲಸವನ್ನೂ ಮಾಡಶಕ್ತವಾಗಿರುವ ಒಂದು ಯಂತ್ರದ ಸಂಬಂಧದಲ್ಲಿ ಉಪಯೋಗಿಸಿದ್ದಿರಸಾಧ್ಯವಿದೆ. ತದ್ರೀತಿಯಲ್ಲಿ, ನಾವು ಏನೇ ಎದುರಿಸಬೇಕಾದರೂ ಅದನ್ನು ನಿಭಾಯಿಸಲು ಬೇಕಾದ ಸಕಲವನ್ನೂ ಯೆಹೋವನು ತನ್ನ ವಾಕ್ಯದ ಮೂಲಕ ಒದಗಿಸುತ್ತಾನೆ. ಹಾಗಾಗಿ, “ದೇವರು ಒಂದು ಕಷ್ಟವನ್ನು ಅನುಮತಿಸಿರುವುದಾದರೆ, ಆತನ ಸಹಾಯದಿಂದ ನಾನದನ್ನು ಸಹಿಸಿಕೊಳ್ಳಬಲ್ಲೆ” ಎಂದು ನಾವು ಹೇಳಬಲ್ಲೆವು.
ನಮ್ಮ ಎಲ್ಲಾ ಕಷ್ಟಗಳಿಂದ ಬಿಡುಗಡೆ
18. ನಂಬಿಗಸ್ತಿಕೆಯಿಂದ ತಾಳಿಕೊಳ್ಳಲು ಹೆಚ್ಚಿನ ಸಹಾಯಕ್ಕಾಗಿ ಯಾವುದರ ಮೇಲೆ ಗಮನ ಕೇಂದ್ರೀಕರಿಸಬೇಕು?
18 ಐದನೆಯದಾಗಿ, ಯೆಹೋವನು ಬಲು ಬೇಗನೆ ಮಾನವಕುಲವನ್ನು ಎಲ್ಲ ರೀತಿಯ ಕಷ್ಟಸಂಕಟಗಳಿಂದ ವಿಮುಕ್ತಿಗೊಳಿಸುವನು ಎಂಬ ಅದ್ಭುತಕರವಾದ ಸತ್ಯಸಂಗತಿಯ ಮೇಲೆ ಸದಾ ಗಮನ ಕೇಂದ್ರೀಕರಿಸಿರಿ. (ಕೀರ್ತ. 34:19; 37:9-11; 2 ಪೇತ್ರ 2:9) ಇದು ನೆರವೇರುವಾಗ, ದೇವರು ನಮಗೆ ತರುವ ಬಿಡುಗಡೆಯಲ್ಲಿ ಕೇವಲ ಸದ್ಯದ ಕಷ್ಟಸಂಕಟಗಳಿಂದ ವಿಮುಕ್ತಿ ಮಾತ್ರವಲ್ಲ ಸ್ವರ್ಗದಲ್ಲಿ ಅಥವಾ ಭೂಪರದೈಸಿನಲ್ಲಿ ನಿತ್ಯಜೀವವನ್ನು ಪಡೆಯುವ ಸದವಕಾಶವೂ ಇರುತ್ತದೆ.
19. ನಂಬಿಗಸ್ತಿಕೆಯಿಂದ ತಾಳಿಕೊಳ್ಳಲು ಹೇಗೆ ಸಾಧ್ಯ?
19 ಅಲ್ಲಿಯವರೆಗೆ, ಈ ದುಷ್ಟ ಲೋಕದ ಕಷ್ಟಮಯ ಪರಿಸ್ಥಿತಿಗಳನ್ನು ನಾವು ತಾಳಿಕೊಳ್ಳೋಣ. ಇವೆಲ್ಲ ಇಲ್ಲದ ಸಮಯಕ್ಕಾಗಿ ನಾವೆಷ್ಟು ಹಂಬಲಿಸುತ್ತೇವೆ! (ಕೀರ್ತ. 55:6-8) ನಾವು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವುದು ಸೈತಾನನನ್ನು ಒಬ್ಬ ಸುಳ್ಳುಗಾರನೆಂದು ರುಜುಪಡಿಸುತ್ತದೆ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಪ್ರಾರ್ಥನೆ ಮತ್ತು ಕ್ರೈಸ್ತ ಸಹೋದರತ್ವದಿಂದ ಬಲವನ್ನು ಹೊಂದೋಣ. ನಮ್ಮಂತೆ ನಮ್ಮ ಸಹೋದರರು ಸಹ ತೊಂದರೆಗಳನ್ನು ಎದುರಿಸುತ್ತಿದ್ದಾರೆಂದು ಮನಸ್ಸಿನಲ್ಲಿಡೋಣ. ದೇವರ ವಾಕ್ಯದ ಸದುಪಯೋಗದಿಂದ ಸದಾ ಪ್ರವೀಣರಾಗಿ ಪೂರ್ಣ ಸನ್ನದ್ಧರಾಗಿರೋಣ. ‘ಸಕಲವಿಧವಾಗಿ ಸಂತೈಸುವ ದೇವರ’ ಪ್ರೀತಿಭರಿತ ಕಾಳಜಿಯ ಮೇಲಿರುವ ನಿಮ್ಮ ನಂಬಿಕೆಯು ಕ್ಷೀಣವಾಗಲು ಬಿಡಬೇಡಿ. “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ” ಎಂಬುದನ್ನು ಎಂದಿಗೂ ಮರೆಯಬೇಡಿ.—ಕೀರ್ತ. 34:15.
ಉತ್ತರಿಸಬಲ್ಲಿರೋ?
• ದಾವೀದನಿಗೆ ತನ್ನ ಕಷ್ಟಗಳ ಕುರಿತು ಹೇಗನಿಸಿತು?
• ಅರಸ ಸೊಲೊಮೋನನು ಯಾವ ಭರವಸೆಯನ್ನು ವ್ಯಕ್ತಪಡಿಸಿದನು?
• ಯೆಹೋವನು ಅನುಮತಿಸುವ ಕಷ್ಟಗಳನ್ನು ನಿಭಾಯಿಸಲು ನಮಗೆ ಯಾವುದು ಸಹಾಯಮಾಡುತ್ತದೆ?
[ಪುಟ 13ರಲ್ಲಿರುವ ಚಿತ್ರ]
ಕಷ್ಟಸಂಕಟದಲ್ಲಿರುವ ತನ್ನ ಜನರ ಪರವಾಗಿ ಯೆಹೋವನು ಕ್ರಿಯೆಗೈಯುತ್ತಾನೆಂಬ ಭರವಸೆ ಸೊಲೊಮೋನನಿಗಿತ್ತು
[ಪುಟ 15ರಲ್ಲಿರುವ ಚಿತ್ರ]
ದಾವೀದನು ಪ್ರಾರ್ಥನೆಯ ಮೂಲಕ ತನ್ನ ಚಿಂತಾಭಾರವನ್ನೆಲ್ಲಾ ಯೆಹೋವನ ಮೇಲೆ ಹಾಕಿದ್ದಲ್ಲದೆ ಅದಕ್ಕನುಸಾರ ಕ್ರಿಯೆಗೈದನು