ಪ್ರೀತಿಯ ಪರಿಪೂರ್ಣ ಬಂಧದಲ್ಲಿ ಐಕ್ಯರಾಗಿರುವುದು
“ಪ್ರೀತಿಯಲ್ಲಿ . . . ಹೊಂದಿಕೆಯಿಂದ ಜೋಡಿಸಲ್ಪಟ್ಟವರಾಗಿ ಇರಿ.”—ಕೊಲೊಸ್ಸೆ 2:2, NW.
1, 2. ಯಾವ ವಿಭಾಜಕ ಪ್ರಭಾವದ ಅನುಭವ ವಿಶೇಷವಾಗಿ ಇಂದು ಆಗುತ್ತಿದೆ?
ಆಲಿಸಿರಿ! ಸ್ವರ್ಗದ ಎಲ್ಲೆಡೆಯೂ ಪ್ರತಿಧ್ವನಿಸುವ ಒಂದು ಮಹಾ ಧ್ವನಿಯು ಹೀಗೆ ಹೇಳುತ್ತದೆ: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಪ್ರಕಟನೆ 12:12) ಪ್ರತಿಯೊಂದು ವರ್ಷದ ದಾಟುವಿಕೆಯೊಂದಿಗೆ ಆ ಸಂದೇಶವು ಭೂಮಿಯ ನಿವಾಸಿಗಳಿಗೆ ಹೆಚ್ಚೆಚ್ಚು ಅನಿಷ್ಟಕರವಾಗುತ್ತದೆ.
2 ಯೆಹೋವನ ಮಹಾ ವಿರೋಧಿಯು ಬಹಳ ಸಮಯದಿಂದ ಪ್ರತಿಭಟಕ (ಸೈತಾನನು) ನೆಂದು ಮತ್ತು ಆಪಾದಕ (ಪಿಶಾಚ) ನೆಂದು ಗುರುತಿಸಲ್ಪಟ್ಟಿದ್ದಾನೆ. ಆದರೆ ಈ ವಂಚಕನು ಈಗ ಇನ್ನೊಂದು ದುಷ್ಟ ಪಾತ್ರವನ್ನು ನಿರ್ವಹಿಸಿದ್ದಾನೆ—ಅವನೊಬ್ಬ ಕೋಪದ ದೇವನಾಗಿದ್ದಾನೆ! ಏಕೆ? ಏಕೆಂದರೆ 1914 ರಲ್ಲಿ ಪರಲೋಕದಲ್ಲಿ ಪ್ರಾರಂಭವಾದ ಯುದ್ಧದಲ್ಲಿ, ಮೀಕಾಯೇಲ ಮತ್ತು ಅವನ ದೂತರಿಂದ ಅವನು ಸ್ವರ್ಗದಿಂದ ದಬ್ಬಲ್ಪಟ್ಟನು. (ಪ್ರಕಟನೆ 12:7-9) ದೇವರನ್ನು ಆರಾಧಿಸುವುದರಿಂದ ಎಲ್ಲ ಮನುಷ್ಯರನ್ನು ತಾನು ತಿರುಗಿಸಬಲ್ಲೆನೆಂಬ ತನ್ನ ಸವಾಲನ್ನು ರುಜುಪಡಿಸಲು ತನಗೆ ಕೊಂಚ ಸಮಯ ಮಾತ್ರ ಇದೆಯೆಂದು ಪಿಶಾಚನಿಗೆ ಗೊತ್ತಿದೆ. (ಯೋಬ 1:11; 2:4, 5) ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಇರದೆ, ಅವನೂ ಅವನ ದೆವ್ವಗಳೂ ಮಾನವಜಾತಿಯ ಕ್ಷುಬ್ಧ ಸಮೂಹಗಳ ಮೇಲೆ ತಮ್ಮ ಕ್ರೋಧವನ್ನು ತೀರಿಸಿಕೊಳ್ಳುವ ಕೋಪಗೊಂಡ ಜೇನುಹುಳುಗಳ ಒಂದು ಹಿಂಡಿನಂತಿದ್ದಾರೆ.—ಯೆಶಾಯ 57:20.
3. ಸೈತಾನನ ಕೆಳದೊಬ್ಬುವಿಕೆಯಿಂದ ನಮ್ಮ ಸಮಯದಲ್ಲಿ ಏನು ಪರಿಣಮಿಸಿದೆ?
3 ಮಾನವ ಕಣ್ಣುಗಳಿಗೆ ಗೋಚರವಾಗದ ಈ ಘಟನೆಗಳು, ಮಾನವಜಾತಿಯ ನಡುವೆ ಒಂದು ಸಾಮಾನ್ಯ ನೈತಿಕ ಕುಸಿತವು ಈಗ ಏಕೆ ಇದೆ ಎಂಬುದನ್ನು ವಿವರಿಸುತ್ತವೆ. ಹೊಂದಿಕೆಯಲ್ಲಿ ಜೀವಿಸಲು ಸಾಧ್ಯವೇ ಆಗದ ರಾಷ್ಟ್ರಗಳ ಒಡೆದುಹೋಗುವಿಕೆಯನ್ನು ಒಂದುಗೂಡಿಸಲಿಕ್ಕಾಗಿರುವ ಮನುಷ್ಯರ ಮಿತಿಮೀರಿದ ಪ್ರಯತ್ನಗಳನ್ನು ಸಹ ಅವು ವಿವರಿಸುತ್ತವೆ. ಜಾತಿಗಳು ಮತ್ತು ಕುಲ ಸಂಬಂಧವಾದ ಗುಂಪುಗಳು ಮನೆಯಿಲ್ಲದ ಮತ್ತು ಸ್ಥಾನಾಂತರಗೊಂಡ ಲಕ್ಷಾಂತರ ಜನರನ್ನು ಉತ್ಪಾದಿಸುತ್ತಾ, ಒಬ್ಬರನ್ನೊಬ್ಬರು ಪಾಪಕರವಾಗಿ ಆಕ್ರಮಿಸುತ್ತವೆ. ನಿಯಮರಾಹಿತ್ಯವು ಅಭೂತಪೂರ್ವ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಆಶ್ಚರ್ಯಕರವೇನೂ ಅಲ್ಲ! ಯೇಸು ಮುಂತಿಳಿಸಿದಂತೆ, ‘ಮಾನವಜಾತಿಯ ಬಹು ಜನರ ಪ್ರೀತಿಯು ತಣ್ಣಗಾಗುತ್ತಿದೆ.’ ನೀವು ನೋಡಿದ ಎಲ್ಲೆಡೆಯೂ ಅಸಾಮರಸ್ಯ ಮತ್ತು ಪ್ರೀತಿಯಿಲ್ಲದಿರುವಿಕೆಯು ಇಂದಿನ ಕ್ಷುಬ್ಧ ಮಾನವಜಾತಿಯನ್ನು ಗುರುತಿಸುತ್ತದೆ.—ಮತ್ತಾಯ 24:12.
4. ದೇವರ ಜನರು ವಿಶೇಷವಾದ ಅಪಾಯದಲ್ಲಿದ್ದಾರೆ ಏಕೆ?
4 ಲೋಕ ಪರಿಸ್ಥಿತಿಯ ನೋಟದಲ್ಲಿ, ತನ್ನ ಹಿಂಬಾಲಕರಿಗಾಗಿ ಯೇಸುವಿನ ಪ್ರಾರ್ಥನೆಯು ಇನ್ನೂ ಆಳವಾದ ಮಹತ್ವವನ್ನು ವಹಿಸಿಕೊಳ್ಳುತ್ತದೆ: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” (ಯೋಹಾನ 17:15, 16) ಇಂದು, “ಕೆಡುಕನು” ವಿಶೇಷವಾಗಿ ತನ್ನ ಕೋಪವನ್ನು “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು” ಹೇಳುವವರ ಮೇಲೆ ತೀರಿಸುತ್ತಾನೆ. (ಪ್ರಕಟನೆ 12:17) ಯೆಹೋವನು ಜಾಗರೂಕವಾದ ಹಾಗೂ ಪ್ರೀತಿಪರ ಕಾಳಜಿಯನ್ನು ಒದಗಿಸದಿದ್ದರೆ, ಆತನ ನಂಬಿಗಸ್ತ ಸಾಕ್ಷಿಗಳು ನಿರ್ಮೂಲ ಮಾಡಲ್ಪಡುತ್ತಿದ್ದರು. ನಮ್ಮ ಆತ್ಮಿಕ ಸಂರಕ್ಷಣೆ ಹಾಗೂ ಕ್ಷೇಮಕ್ಕಾಗಿ ದೇವರು ಮಾಡುವ ಎಲ್ಲ ಒದಗಿಸುವಿಕೆಗಳ ಲಾಭವನ್ನು ತೆಗೆದುಕೊಳ್ಳುವುದರ ಮೇಲೆ ನಮ್ಮ ಜೀವಿತಗಳು ಅವಲಂಬಿಸಿವೆ. ಅಪೊಸ್ತಲನು ಕೊಲೊಸ್ಸೆ 1:29 ರಲ್ಲಿ ಪ್ರೇರೇಪಿಸಿದಂತೆ, ಕ್ರಿಸ್ತನ ಮುಖಾಂತರ ಆತನ ಶಕ್ತಿಯ ಕಾರ್ಯಾಚರಣೆಗನುಸಾರ ನಮ್ಮನ್ನು ಶ್ರಮಿಸಿಕೊಳ್ಳುವುದನ್ನು ಅದು ಒಳಗೊಳ್ಳುತ್ತದೆ.
5, 6. ಕೊಲೊಸ್ಸೆಯ ಕ್ರೈಸ್ತರ ಕುರಿತು ಅಪೊಸ್ತಲ ಪೌಲನಿಗೆ ಹೇಗನಿಸಿತು, ಮತ್ತು 1995 ಕ್ಕಾಗಿರುವ ಮುಖ್ಯ ವಚನವು ಸೂಕ್ತವಾಗಿದೆ ಏಕೆ?
5 ಪೌಲನು ಬಹುಶಃ ಅವರನ್ನು ಎದುರೆದುರಿಗೆ ಎಂದೂ ನೋಡಿರದಿದ್ದರೂ, ಕೊಲೊಸ್ಸೆಯಲ್ಲಿದ್ದ ತನ್ನ ಸಹೋದರರನ್ನು ಅವನು ಪ್ರೀತಿಸಿದನು. ಅವನು ಅವರಿಗೆ ಹೇಳಿದ್ದು: “ನಿಮಗಾಗಿ ನನ್ನ ಚಿಂತೆಯು ಎಷ್ಟು ಆಳವಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ.” (ಕೊಲೊಸ್ಸೆ 2:1, ದ ನ್ಯೂ ಟೆಸ್ಟಮೆಂಟ್ ಇನ್ ಮಾರ್ಡನ್ ಇಂಗ್ಲಿಷ್, ಜೆ. ಬಿ. ಫಿಲಿಪ್ಸ್ ಅವರಿಂದ) ಯೇಸುವಿನ ಹಿಂಬಾಲಕರು ಲೋಕದ ಭಾಗವಾಗಿರದ ಕಾರಣ, “ಕೆಡುಕನು” ಸಹೋದರರ ಮಧ್ಯದಲ್ಲಿ ಲೋಕದ ಆತ್ಮವನ್ನು ಬಿತ್ತುವ ಮೂಲಕ ಅವರ ಐಕ್ಯವನ್ನು ಮುರಿಯಲು ಪ್ರಯತ್ನಿಸುತ್ತಾ ಇರುವನು. ಕೊಲೊಸ್ಸೆಯಿಂದ ಎಪಫ್ರನು ತಂದ ಸಮಾಚಾರವು, ಸ್ವಲ್ಪ ಮಟ್ಟಿಗೆ ಇದು ಸಂಭವಿಸುತ್ತಾ ಇತ್ತೆಂಬುದನ್ನು ಸೂಚಿಸಿತು.
6 ತನ್ನ ಕ್ರೈಸ್ತ ಸಹೋದರರಿಗಾಗಿದ್ದ ಪೌಲನ ಪ್ರಧಾನ ಚಿಂತೆಗಳಲ್ಲಿ ಒಂದನ್ನು, ಈ ಮಾತುಗಳಲ್ಲಿ ಸಾರಾಂಶಿಸಲ್ಪಡಸಾಧ್ಯವಿತ್ತು: “ಪ್ರೀತಿಯಲ್ಲಿ . . . ಹೊಂದಿಕೆಯಿಂದ ಜೋಡಿಸಲ್ಪಟ್ಟವರಾಗಿ ಇರಿ.” ಇಂದು, ಅನೈಕಮತ್ಯ ಮತ್ತು ಪ್ರೀತಿಯ ಇಲ್ಲದಿರುವಿಕೆಯಿಂದ ತುಂಬಿರುವ ಒಂದು ಲೋಕದಲ್ಲಿ ಅವನ ಮಾತುಗಳಿಗೆ ವಿಶೇಷವಾದ ಅರ್ಥವಿದೆ. ಪೌಲನ ಬುದ್ಧಿವಾದವನ್ನು ನಾವು ಶ್ರದ್ಧಾಪೂರ್ವಕವಾಗಿ ಅನುಸರಿಸುವುದಾದರೆ, ನಾವು ಯೆಹೋವನ ಪರಾಮರಿಕೆಯನ್ನು ಅನುಭವಿಸುವೆವು. ಲೋಕದ ಒತ್ತಡಗಳನ್ನು ಪ್ರತಿರೋಧಿಸಲು ನಮಗೆ ಸಹಾಯಮಾಡುತ್ತಾ, ನಮ್ಮ ಜೀವಿತದಲ್ಲಿ ಆತನ ಆತ್ಮದ ಶಕ್ತಿಯನ್ನು ಸಹ ನಾವು ಅನುಭವಿಸುವೆವು. ಈ ಸಲಹೆಯು ಎಷ್ಟು ವಿವೇಕವುಳ್ಳದ್ದಾಗಿದೆ! ಹೀಗೆ, ಕೊಲೊಸ್ಸೆ 2:2, 1995 ಕ್ಕಾಗಿ ನಮ್ಮ ಮುಖ್ಯ ವಚನವಾಗಿರುವುದು.
7. ಸತ್ಯ ಕ್ರೈಸ್ತರೊಳಗೆ ಯಾವ ರೀತಿಯ ಹೊಂದಿಕೆ ಕಂಡುಕೊಳ್ಳಲ್ಪಡಬೇಕು?
7 ಕೊರಿಂಥದವರಿಗೆ ಬರೆದ ಮುಂಚಿನ ಪತ್ರದಲ್ಲಿ, ಮಾನವ ದೇಹವನ್ನು ಅಪೊಸ್ತಲನು ಒಂದು ದೃಷ್ಟಾಂತದೋಪಾದಿ ಬಳಸಿದನು. ಅಭಿಷಿಕ್ತ ಕ್ರೈಸ್ತರ ಸಭೆಯಲ್ಲಿ “ಭೇದವೇನೂ” ಇರಬಾರದೆಂದು ಆದರೆ “ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸ” ಬೇಕೆಂದು ಅವನು ಬರೆದನು. (1 ಕೊರಿಂಥ 12:12, 24, 25) ಎಂತಹ ಅದ್ಭುತವಾದ ದೃಷ್ಟಾಂತ! ನಮ್ಮ ಅವಯವಗಳು ಪರಸ್ಪರ ಅವಲಂಬಿತವಾಗಿದ್ದು, ಪ್ರತಿಯೊಂದು ನಮ್ಮ ದೇಹದ ಉಳಿದ ಭಾಗಕ್ಕೆ ಜೊತೆಗೂಡಿಸಲ್ಪಟ್ಟಿದೆ. ಇದೇ ತತ್ವವು ಅಭಿಷಿಕ್ತ ಕ್ರೈಸ್ತರು ಮತ್ತು ಭೂಪ್ರಮೋದವನದಲ್ಲಿ ಜೀವಿಸಲು ನಿರೀಕ್ಷಿಸುವ ಲಕ್ಷಾಂತರ ಜನರಿಂದ ರೂಪುಗೊಂಡ ಸಹೋದರರ ನಮ್ಮ ಲೋಕವ್ಯಾಪಕ ಬಳಗಕ್ಕೂ ಅನ್ವಯಿಸುತ್ತದೆ. ಸ್ವತಂತ್ರವಾಗಿ ಜೀವಿಸಲು ಜೊತೆ ಕ್ರೈಸ್ತರ ದೇಹದಿಂದ ನಮ್ಮನ್ನು ನಾವು ಪ್ರತ್ಯೇಕಿಸಿಕೊಳ್ಳಬಾರದು! ಕ್ರಿಸ್ತ ಯೇಸುವಿನ ಮುಖಾಂತರ ಕಾರ್ಯನಡಿಸುತ್ತಾ, ನಮ್ಮ ಸಹೋದರರೊಂದಿಗಿನ ನಮ್ಮ ಸಹವಾಸದ ಮೂಲಕ ದೇವರ ಆತ್ಮವು ನಮ್ಮ ಕಡೆಗೆ ದೊಡ್ಡ ಪ್ರಮಾಣದಲ್ಲಿ ಹರಿಯುತ್ತದೆ.
ಜ್ಞಾನ ಸಂಬಂಧಿತ ಹೊಂದಿಕೆ
8, 9. (ಎ) ಸಭೆಯಲ್ಲಿ ಹೊಂದಿಕೆಗೆ ನಾವು ನೆರವಾಗುವುದಕ್ಕೆ ಏನು ಅತ್ಯಾವಶ್ಯಕ? (ಬಿ) ಕ್ರಿಸ್ತನ ಕುರಿತಾದ ಜ್ಞಾನವನ್ನು ನೀವು ಹೇಗೆ ಪಡೆದಿದ್ದೀರಿ?
8 ಪೌಲನ ಮುಖ್ಯ ಅಂಶಗಳಲ್ಲಿ ಒಂದು ಏನಾಗಿತ್ತೆಂದರೆ, ಕ್ರೈಸ್ತ ಹೊಂದಿಕೆ ಜ್ಞಾನಕ್ಕೆ—ವಿಶೇಷವಾಗಿ ಕ್ರಿಸ್ತನ ಕುರಿತಾದ ಜ್ಞಾನಕ್ಕೆ—ಸಂಬಂಧಿತವಾಗಿದೆ. ಕ್ರೈಸ್ತರು “ತಿಳಿವಳಿಕೆಯ ಪೂರ್ಣ ಭರವಸೆಯ ಸಕಲ ಐಶ್ವರ್ಯಗಳ ವೀಕ್ಷಣದಲ್ಲಿ, ದೇವರ ಪವಿತ್ರ ರಹಸ್ಯದ, ಎಂದರೆ, ಕ್ರಿಸ್ತನ ನಿಷ್ಕೃಷ್ಟ ಜ್ಞಾನದ ವೀಕ್ಷಣದಲ್ಲಿ, ಪ್ರೀತಿಯಲ್ಲಿ ಹೊಂದಿಕೆಯಿಂದ ಜೋಡಿಸಲ್ಪಟ್ಟವರಾಗಿ ಇರಿ” ಎಂದು ಪೌಲನು ಬರೆದನು. (ಕೊಲೊಸ್ಸೆ 2:2, NW) ದೇವರ ವಾಕ್ಯವನ್ನು ಅಭ್ಯಸಿಸಲು ತೊಡಗಿದ ಸಮಯದಿಂದ ನಾವು—ನಿಜತ್ವಗಳನ್ನು—ಜ್ಞಾನವನ್ನು ಸಂಪಾದಿಸಿದ್ದೇವೆ. ಈ ನಿಜತ್ವಗಳಲ್ಲಿ ಹೆಚ್ಚಿನವು ದೇವರ ಉದ್ದೇಶದಲ್ಲಿ ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ತಿಳಿವಳಿಕೆಯನ್ನು ಪಡೆಯುವುದರ ಒಂದು ಭಾಗವಾಗಿ, ನಾವು ಯೇಸುವಿನ ನಿರ್ಧಾರಕ ಪಾತ್ರವನ್ನು ಅರಿಯುತ್ತೇವೆ. “ವಿವೇಕದ ಮತ್ತು ಜ್ಞಾನದ ಎಲ್ಲ ನಿಕ್ಷೇಪಗಳು ಅವನಲ್ಲಿ ಜೋಪಾನವಾಗಿ ಅಡಕವಾಗಿವೆ.”—ಕೊಲೊಸ್ಸೆ 2:3, NW.
9 ಯೇಸುವಿನ ಕುರಿತು ಮತ್ತು ದೇವರ ಉದ್ದೇಶದಲ್ಲಿ ಅವನ ಪಾತ್ರದ ಕುರಿತು ನಿಮಗೆ ಹಾಗೆ ಅನಿಸುತ್ತದೊ? ಯೇಸುವನ್ನು ಸ್ವೀಕರಿಸಿದ್ದೇವೆ ಮತ್ತು ರಕ್ಷಿಸಲ್ಪಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಾ, ಕ್ರೈಸ್ತಪ್ರಪಂಚದಲ್ಲಿರುವ ಅನೇಕರು ಯೇಸುವಿನ ಕುರಿತು ಮನಃಪೂರ್ವಕವಾಗಿ ಮಾತಾಡುತ್ತಾರೆ. ಆದರೆ ನಿಜವಾಗಿಯೂ ಅವರು ಅವನನ್ನು ಅರಿತಿದ್ದಾರೊ? ಇಲ್ಲ, ಯಾಕೆಂದರೆ ಅನೇಕರು ಅಶಾಸ್ತ್ರೀಯವಾಗಿರುವ ತ್ರಯೈಕ್ಯ ತತ್ವವನ್ನು ನಂಬುತ್ತಾರೆ. ಈ ಸಂಬಂಧದಲ್ಲಿರುವ ಸತ್ಯವನ್ನು ನೀವು ತಿಳಿಯುವುದು ಮಾತ್ರವಲ್ಲ, ಯೇಸು ಹೇಳಿಮಾಡಿದ ಸಂಗತಿಗಳ ವಿಸ್ತಾರ ಜ್ಞಾನವೂ ನಿಮಗಿರುವುದು ಸಂಭಾವ್ಯ. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಬಳಸುತ್ತಾ, ಬೋಧಪ್ರದವಾದ ಅಧ್ಯಯನದಿಂದ ಜ್ಞಾನವನ್ನು ಸಂಪಾದಿಸುವುದರಲ್ಲಿ ಲಕ್ಷಾಂತರ ಜನರು ಸಹಾಯಿಸಲ್ಪಟ್ಟಿದ್ದಾರೆ. ಆದರೂ ಯೇಸು ಮತ್ತು ಅವನ ಮಾರ್ಗಗಳ ಕುರಿತಾದ ನಮ್ಮ ಜ್ಞಾನವನ್ನು ಆಳಗೊಳಿಸುತ್ತಾ ಇರುವ ಅಗತ್ಯ ನಮಗಿದೆ.
10. ರಹಸ್ಯವಾದ ಜ್ಞಾನವು ನಮಗೆ ಯಾವ ವಿಧದಲ್ಲಿ ಲಭ್ಯವಿದೆ?
10 “ವಿವೇಕದ ಮತ್ತು ಜ್ಞಾನದ ಎಲ್ಲ ನಿಕ್ಷೇಪಗಳು” ಯೇಸುವಿನಲ್ಲಿ “ಜೋಪಾನವಾಗಿ ಅಡಕವಾಗಿವೆ” ಎಂಬ ಹೇಳಿಕೆಯು, ಅಂತಹ ಜ್ಞಾನವು ನಮ್ಮ ಗ್ರಹಿಕೆಯನ್ನು ಮೀರಿದೆ ಎಂಬುದನ್ನು ಅರ್ಥೈಸುವುದಿಲ್ಲ. ಬದಲಿಗೆ, ಅದೊಂದು ತೆರೆದ ಗಣಿಯಂತಿದೆ. ಅಗೆತವನ್ನು ಎಲ್ಲಿ ಆರಂಭಿಸಬೇಕೆಂದು ಕುತೂಹಲಿಗಳಾಗಿರುತ್ತಾ, ವಿಶಾಲವಾದ ಪ್ರದೇಶದ ಸುತ್ತಲೂ ಹುಡುಕುವ ಅಗತ್ಯ ನಮಗಿರುವುದಿಲ್ಲ. ಯೇಸು ಕ್ರಿಸ್ತನ ಕುರಿತು ಬೈಬಲ್ ಪ್ರಕಟಿಸುವ ವಿಷಯದೊಂದಿಗೆ ನಿಜವಾದ ಜ್ಞಾನವು ಆರಂಭಗೊಳ್ಳುತ್ತದೆ ಎಂದು ನಮಗೆ ಈಗಾಗಲೇ ಗೊತ್ತಿದೆ. ಯೆಹೋವನ ಉದ್ದೇಶವನ್ನು ಸಾಧಿಸುವುದರಲ್ಲಿ ಯೇಸುವಿನ ಪಾತ್ರವನ್ನು ನಾವು ಸಂಪೂರ್ಣವಾಗಿ ಗಣ್ಯಮಾಡಿದಂತೆ, ನಿಜವಾದ ವಿವೇಕ ಮತ್ತು ನಿಷ್ಕೃಷ್ಟವಾದ ಜ್ಞಾನದ ನಿಕ್ಷೇಪಗಳನ್ನು ನಾವು ಪಡೆಯುತ್ತೇವೆ. ಆದುದರಿಂದ ನಾವು ಮಾಡಬೇಕಾದ ವಿಷಯವು ಏನೆಂದರೆ, ನಾವು ಈಗಾಗಲೇ ಅಗೆದಿರುವ ಈ ಮೂಲದಿಂದ ಲಭ್ಯವಿರುವ ಅಧಿಕ ರತ್ನಗಳನ್ನು ಯಾ ಅಮೂಲ್ಯ ವಿಷಯಗಳನ್ನು ಮೇಲೆ ತೆಗೆಯುತ್ತಾ, ಇನ್ನೂ ಹೆಚ್ಚು ಆಳವಾಗಿ ಅಗೆಯಬೇಕು.—ಜ್ಞಾನೋಕ್ತಿ 2:1-5.
11. ಯೇಸುವಿನ ಕುರಿತು ಮನನಮಾಡುವುದರಿಂದ ನಮ್ಮ ಜ್ಞಾನ ಮತ್ತು ವಿವೇಕವನ್ನು ನಾವು ಹೇಗೆ ಹೆಚ್ಚಿಸಬಹುದು? (ಶಿಷ್ಯರ ಪಾದಗಳನ್ನು ಯೇಸು ತೊಳೆಯುವ ವಿಷಯದೊಂದಿಗೆ ದೃಷ್ಟಾಂತಿಸಿರಿ, ಅಥವಾ ಬೇರೆ ಉದಾಹರಣೆಗಳನ್ನು ಉಪಯೋಗಿಸಿರಿ.)
11 ಉದಾಹರಣೆಗೆ, ತನ್ನ ಅಪೊಸ್ತಲರ ಪಾದವನ್ನು ಯೇಸು ತೊಳೆದನೆಂದು ನಮಗೆ ಗೊತ್ತಿರಬಹುದು. (ಯೋಹಾನ 13:1-20) ಆದರೆ ನಾವು ಅವನು ಕಲಿಸುತ್ತಿದ್ದ ಪಾಠದ ಮೇಲೆ ಮತ್ತು ಅವನು ಪ್ರದರ್ಶಿಸಿದ ಮನೋಭಾವದ ಮೇಲೆ ಮನನಮಾಡಿದ್ದೇವೊ? ಹಾಗೆ ಮಾಡುವುದರಿಂದ, ನಮಗೆ ವಿವೇಕದ ಒಂದು ನಿಕ್ಷೇಪವು ದೊರೆಯಬಹುದು; ಇದು ಒಂದು ದೀರ್ಘ ಸಮಯದಿಂದ ಯಾರ ವ್ಯಕ್ತಿತ್ವವು ನಮ್ಮನ್ನು ರೇಗಿಸಿದೆಯೊ, ಆ ಸಹೋದರ ಯಾ ಸಹೋದರಿಯೊಂದಿಗೆ ನಾವು ನಡೆದುಕೊಳ್ಳುವ ರೀತಿಯನ್ನು ಮಾರ್ಪಡಿಸುವಂತೆ ನಮ್ಮನ್ನು ಶಕ್ತರಾಗಿಸುತ್ತದೆ, ಹೌದು ನಮ್ಮನ್ನು ಒತ್ತಾಯಪಡಿಸುತ್ತದೆ. ಅಥವಾ ನಮಗೆ ಅಷ್ಟೊಂದು ಇಷ್ಟವಾಗದ ಒಂದು ನೇಮಕವು ಕೊಡಲ್ಪಟ್ಟಾಗ, ಯೋಹಾನ 13:14, 15ರ ಪೂರ್ಣ ಮಹತ್ವವನ್ನು ನಾವು ಅರ್ಥಮಾಡಿಕೊಂಡ ಬಳಿಕ ನಾವು ಬೇರೆಯಾಗಿ ಪ್ರತಿಕ್ರಿಯಿಸಬಹುದು. ಜ್ಞಾನ ಮತ್ತು ವಿವೇಕವು ನಮ್ಮನ್ನು ಪ್ರಭಾವಿಸುವುದು ಹೀಗೆಯೇ. ಕ್ರಿಸ್ತನ ಹೆಚ್ಚಾದ ಜ್ಞಾನಕ್ಕನುಸಾರ ನಾವು ಕ್ರಿಸ್ತನ ಮಾದರಿಯನ್ನು ಪೂರ್ಣವಾಗಿ ಅನುಕರಿಸಿದಂತೆ, ಇತರರ ಮೇಲೆ ಅದು ಯಾವ ಪರಿಣಾಮವನ್ನು ಬೀರಬಲ್ಲದು? ಪ್ರಾಯಶಃ ಮಂದೆಯು ‘ಪ್ರೀತಿಯಲ್ಲಿ ಅಧಿಕ ಹೊಂದಿಕೆಯಿಂದ ಒಂದುಗೂಡಿಸಲ್ಪಡುವುದು.’a
ಅಪಕರ್ಷಣೆ ಹೊಂದಿಕೆಯನ್ನು ಹಾಳುಮಾಡಬಲ್ಲದು
12. ಯಾವ ಜ್ಞಾನದ ಕುರಿತು ನಾವು ಎಚ್ಚರಿಕೆಯಿಂದಿರಬೇಕು?
12 ‘ಪ್ರೀತಿಯಲ್ಲಿ ಹೊಂದಿಕೆಯಿಂದ ಒಂದುಗೂಡುವುದನ್ನು’ ನಿಷ್ಕೃಷ್ಟ ಜ್ಞಾನವು ಸುಲಭಮಾಡುವುದಾದರೆ, “‘ಜ್ಞಾನ’ ವೆಂದು ಅಸತ್ಯವಾಗಿ ಕರೆಯಲ್ಪಡುವ” ವಿಷಯದಿಂದ ಏನು ಫಲಿಸುತ್ತದೆ? ಕೇವಲ ವಿರುದ್ಧವಾದದ್ದೇ—ವಾಗ್ವಾದ, ಅಸಾಂಗತ್ಯ, ಮತ್ತು ನಂಬಿಕೆಯಿಂದ ದಿಕ್ಚ್ಯುತಿ. ಪೌಲನು ತಿಮೊಥೆಯನನ್ನು ಎಚ್ಚರಿಸಿದಂತೆ, ಇಂತಹ ಸುಳ್ಳು ಜ್ಞಾನದ ವಿರುದ್ಧ ನಾವು ಎಚ್ಚರವಾಗಿರಬೇಕು. (1 ತಿಮೊಥೆಯ 6:20, 21) “ಯಾರಾದರೂ ರಂಜನೆಯಾದ ಮಾತುಗಳಿಂದ ನಿಮ್ಮನ್ನು ಮೋಸಗೊಳಿಸಿಯಾರೆಂಬ ಭಯ ನನಗಿರುವದರಿಂದ ಇದನ್ನು ಹೇಳಿದ್ದೇನೆ. ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ,” ಎಂದು ಸಹ ಪೌಲನು ಬರೆದನು.—ಕೊಲೊಸ್ಸೆ 2:4, 8.
13, 14. (ಎ) ಜ್ಞಾನದ ಸಂಬಂಧದಲ್ಲಿ ಕೊಲೊಸ್ಸೆಯ ಸಹೋದರರು ಗಂಡಾಂತರದಲಿದ್ದರು ಏಕೆ? (ಬಿ) ತದ್ರೀತಿಯ ಗಂಡಾಂತರದಲ್ಲಿ ತಾವಿಲ್ಲವೆಂದು ಇಂದು ಕೆಲವರಿಗೆ ಅನಿಸಬಹುದೇಕೆ?
13 ಕೊಲೊಸ್ಸೆಯ ಕ್ರೈಸ್ತರು ಯಾವುದು ನಿಜವಾಗಿಯೂ ಜ್ಞಾನವೆಂದು ಅಸತ್ಯವಾಗಿ ಕರೆಯಲ್ಪಡುತ್ತಿತ್ತೊ, ಅದರ ವಂಚಕ ಪ್ರಭಾವದಿಂದ ಸುತ್ತುವರಿಯಲ್ಪಟ್ಟಿದ್ದರು. ಕೊಲೊಸ್ಸೆಯ ಸುತ್ತಮುತ್ತಲು ಇದ್ದ ಅನೇಕ ಜನರು ಗ್ರೀಕ್ ತತ್ವಜ್ಞಾನಗಳನ್ನು ಬಹಳ ಗೌರವದಿಂದ ಕಂಡರು. ಯೆಹೂದ್ಯ ಸಂಪ್ರದಾಯಿಗಳು ಕೂಡ ಇದ್ದರು; ಇವರು ಮೋಶೆಯ ನಿಯಮವನ್ನು, ಅದರ ಉತ್ಸವ ದಿನಗಳನ್ನು ಮತ್ತು ಆಹಾರದ ಆವಶ್ಯಕತೆಗಳನ್ನು ಕ್ರೈಸ್ತರು ಆಚರಿಸಬೇಕೆಂದು ಬಯಸಿದರು. (ಕೊಲೊಸ್ಸೆ 2:11, 16, 17) ತನ್ನ ಸಹೋದರರು ಸತ್ಯ ಜ್ಞಾನವನ್ನು ಪಡೆದುಕೊಳ್ಳುವುದನ್ನು ಪೌಲನು ವಿರೋಧಿಸಲಿಲ್ಲ, ಆದರೆ ಜೀವಿತ ಹಾಗೂ ಕ್ರಿಯೆಗಳ ಮೇಲೆ ಕೇವಲ ಒಂದು ಮಾನವ ಹೊರನೋಟವನ್ನು ತಾಳುವಂತೆ ಅವರನ್ನು ಮನಗಾಣಿಸಲಿಕ್ಕಾಗಿ ಒಲಿಸುವ ವಾದಗಳನ್ನು ಉಪಯೋಗಿಸುತ್ತಾ, ಯಾರೂ ಅವರನ್ನು ಬಲಿಗಳೋಪಾದಿ ಕೊಂಡೊಯ್ಯದಂತೆ ಅವರು ಜಾಗರೂಕರಾಗಿರಬೇಕಿತ್ತು. ಸಭೆಯಲ್ಲಿರುವ ಕೆಲವರು ತಮ್ಮ ಆಲೋಚನೆಯನ್ನು ಮತ್ತು ನಿರ್ಣಯಗಳನ್ನು ಜೀವಿತದ ಇಂತಹ ಅಶಾಸ್ತ್ರೀಯ ಕಲ್ಪನೆಗಳಿಂದ ಮತ್ತು ಮನೋಭಾವಗಳಿಂದ ಮಾರ್ಗದರ್ಶಿಸಲ್ಪಡುವಂತೆ ಬಿಡುವುದಾದರೆ, ಸಭೆಯ ಸದಸ್ಯರ ನಡುವೆ ಇರುವ ಹೊಂದಿಕೆ ಮತ್ತು ಪ್ರೀತಿಯ ವಿರುದ್ಧ ಅದು ಕಾರ್ಯಮಾಡುವುದೆಂದು ನೀವು ಅರ್ಥಮಾಡಿಕೊಳ್ಳಬಲ್ಲಿರಿ.
14 ‘ಹೌದು, ಕೊಲೊಸ್ಸೆಯವರು ಎದುರಿಸಿದ ಅಪಾಯವನ್ನು ನಾನು ಮನಗಾಣಬಲ್ಲೆ, ಆದರೆ ಆತ್ಮದ ಅಮರತ್ವ ಯಾ ಒಬ್ಬ ತ್ರಯೈಕ್ಯ ದೇವರಂತಹ ಗ್ರೀಕ್ ಪರಿಕಲ್ಪನೆಗಳಿಂದ ಪ್ರಭಾವಿಸಲ್ಪಡುವ ಗಂಡಾಂತರದಲ್ಲಿ ನಾನಿಲ್ಲವೆಂದು; ಅಥವಾ ನಾನು ತಪ್ಪಿಸಿಕೊಂಡು ಬಂದಿರುವ ಸುಳ್ಳು ಧರ್ಮದ ವಿಧರ್ಮಿ ರಜಾದಿನಗಳಿಂದ ಆಕರ್ಷಿಸಲ್ಪಡುವ ಯಾವ ಅಪಾಯವನ್ನೂ ನಾನು ಕಾಣುವುದಿಲ್ಲವೆಂದು’ ನೀವು ನೆನಸಬಹುದು. ಅದು ಒಳ್ಳೆಯದು. ಯೇಸುವಿನ ಮುಖಾಂತರ ಪ್ರಕಟಿಸಲ್ಪಟ್ಟ ಮತ್ತು ಶಾಸ್ತ್ರಗಳಲ್ಲಿ ಲಭ್ಯವಾಗಿರುವ ಆ ಮೂಲಭೂತ ಸತ್ಯದ ಶ್ರೇಷ್ಠತೆಯ ಕುರಿತು ದೃಢವಾಗಿ ಮನಗಾಣಿಸಲ್ಪಟ್ಟಿರುವುದು ಒಳ್ಳೆಯದು. ಹಾಗಿದ್ದರೂ, ಇಂದು ಬಳಕೆಯಲ್ಲಿರುವ ಇತರ ತತ್ವಜ್ಞಾನಗಳಿಂದ ಯಾ ಮಾನವ ದೃಷ್ಟಿಕೋನಗಳಿಂದ ನಾವು ಗಂಡಾಂತರದಲ್ಲಿರಬಹುದೊ?
15, 16. ಜೀವಿತದ ಎಂತಹ ದೃಷ್ಟಿಕೋನವು ಒಬ್ಬ ಕ್ರೈಸ್ತನ ಆಲೋಚನೆಯನ್ನು ಪ್ರಭಾವಿಸಬಲ್ಲದು?
15 ಇಂತಹ ಒಂದು ಮನೋಭಾವವು ಬಹಳ ಸಮಯದಿಂದ ಅಸ್ತಿತ್ವದಲ್ಲಿದೆ: “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ಮರಣಹೊಂದಿ ಆಗಿದೆ, ಆದರೂ ಇನ್ನೂ ಎಲ್ಲವೂ ಮೊದಲಿದ್ದಂತೆಯೇ ಮುಂದುವರಿಯುತ್ತಿದೆ.” (2 ಪೇತ್ರ 3:4, ದ ನ್ಯೂ ಇಂಗ್ಲಿಷ್ ಬೈಬಲ್) ಆ ಭಾವನೆಯನ್ನು ಬೇರೆ ಮಾತುಗಳಲ್ಲಿ ವ್ಯಕ್ತಪಡಿಸಬಹುದು, ಆದರೆ ದೃಷ್ಟಿಕೋನವು ಒಂದೇ ಆಗಿರುತ್ತದೆ. ದೃಷ್ಟಾಂತಕ್ಕೆ, ಯಾರಾದರೊಬ್ಬರು ಹೀಗೆ ವಿವೇಚಿಸಬಹುದು, ‘ದಶಕಗಳ ಹಿಂದೆ ನಾನು ಪ್ರಥಮವಾಗಿ ಸತ್ಯವನ್ನು ಕಲಿತಾಗ, ಅಂತ್ಯವು “ಅತಿ ಸಮೀಪವಾಗಿತ್ತು.” ಆದರೆ ಅದು ಇನ್ನೂ ಬಂದಿರುವುದಿಲ್ಲ, ಮತ್ತು ಯಾರಿಗೆ ಗೊತ್ತು ಅದು ಯಾವಾಗ ಬರುವುದೆಂದು?’ ಅಂತ್ಯವು ಯಾವಾಗ ಬರುವುದೆಂದು ಯಾವ ಮನುಷ್ಯನಿಗೂ ಗೊತ್ತಿರುವುದಿಲ್ಲವೆಂಬುದು ನಿಜ. ಆದರೂ, ನಮ್ಮಲ್ಲಿರಬೇಕೆಂದು ಯೇಸು ಪ್ರೇರೇಪಿಸಿದ ದೃಷ್ಟಿಕೋನವನ್ನು ಗಮನಿಸಿರಿ: “ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ.”—ಮಾರ್ಕ 13:32, 33.
16 ಅಂತ್ಯವು ಯಾವಾಗ ಬರುವುದೆಂಬ ತಿಳಿವಳಿಕೆ ಇಲ್ಲದೆ, ಪೂರ್ಣವಾದ ಹಾಗೂ “ಸಾಮಾನ್ಯ” ವೆಂದು ಕರೆಯಲ್ಪಡುವ ಜೀವಿತಕ್ಕಾಗಿ ನಾವು ಯೋಜಿಸಬೇಕೆಂಬ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಎಷ್ಟು ಅಪಾಯಕಾರಿಯಾಗಿರಬಲ್ಲದು! ಈ ರೀತಿಯ ತರ್ಕದಲ್ಲಿ ಅಂತಹ ಪ್ರಸ್ತಾಪವು ಪ್ರತಿಬಿಂಬಿಸಲ್ಪಡುತ್ತದೆ, ‘ನಾನು (ಯಾ ನನ್ನ ಮಕ್ಕಳು) ಬಹಳ ಒಳ್ಳೆಯ ಆದಾಯವನ್ನು ತರುವ ಮತ್ತು ನೆಮ್ಮದಿಯ ಜೀವಿತವನ್ನು ಅನುಭವಿಸುವಂತೆ ನನ್ನನ್ನು ಶಕ್ತಗೊಳಿಸುವ ಗೌರವಾರ್ಹವಾದ ಕೆಲಸವನ್ನು ಪಡೆಯುವಂತೆ ಅನುಮತಿಸುವ ಹೆಜ್ಜೆಗಳನ್ನು ನಾನು ತೆಗೆದುಕೊಳ್ಳಬಹುದು. ನಿಶ್ಚಯವಾಗಿ ನಾನು ಕ್ರೈಸ್ತ ಕೂಟಗಳಿಗೆ ಹಾಜರಾಗುವೆನು ಮತ್ತು ಸಾರುವ ಕಾರ್ಯದಲ್ಲಿ ಕೊಂಚ ಭಾಗವಹಿಸುವೆನು, ಆದರೆ ಶ್ರಮವಹಿಸಲು ಯಾ ದೊಡ್ಡ ತ್ಯಾಗಗಳನ್ನು ಮಾಡಲು ನನಗೆ ಯಾವ ಕಾರಣವೂ ಇರುವುದಿಲ್ಲ.’—ಮತ್ತಾಯ 24:38-42.
17, 18. ನಮ್ಮಲ್ಲಿ ಯಾವ ದೃಷ್ಟಿಕೋನವು ಇರಬೇಕೆಂದು ಯೇಸು ಮತ್ತು ಅಪೊಸ್ತಲರು ಪ್ರೇರೇಪಿಸಿದರು?
17 ಹಾಗಿದ್ದರೂ, ನಾವು ಶ್ರಮವಹಿಸುತ್ತಾ ಮತ್ತು ತ್ಯಾಗಗಳನ್ನು ಮಾಡಲು ಸಿದ್ಧರಾಗಿರುತ್ತಾ, ಸುವಾರ್ತೆಯನ್ನು ಸಾರುವುದರ ಕುರಿತು ಜರೂರಿಯ ಪ್ರಜ್ಞೆಯೊಂದಿಗೆ ಜೀವಿಸಬೇಕೆಂದು ಯೇಸು ಮತ್ತು ಅವನ ಅಪೊಸ್ತಲರು ಶಿಫಾರಸ್ಸು ಮಾಡಿದರೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಪೌಲನು ಬರೆದದ್ದು: “ಸಹೋದರರೇ, ನಾನು ಹೇಳುವದೇನಂದರೆ—ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ, . . . ಕೊಂಡುಕೊಳ್ಳುವವರು ಕೊಂಡದ್ದು ತಮ್ಮದೇ ಎಂದು ಹೇಳದವರಂತೆಯೂ, ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು; ಯಾಕಂದರೆ ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ.”—1 ಕೊರಿಂಥ 7:29-31; ಲೂಕ 13:23, 24; ಫಿಲಿಪ್ಪಿ 3:13-15; ಕೊಲೊಸ್ಸೆ 1:29; 1 ತಿಮೊಥೆಯ 4:10; 2 ತಿಮೊಥೆಯ 2:4; ಪ್ರಕಟನೆ 22:20.
18 ನೆಮ್ಮದಿಯ ಒಂದು ಜೀವಿತವನ್ನು ನಮ್ಮ ಗುರಿಯನ್ನಾಗಿ ನಾವು ಮಾಡಬೇಕೆಂಬುದನ್ನು ಸೂಚಿಸುವುದಕ್ಕೆ ಪ್ರತಿಯಾಗಿ, ಪೌಲನು ಪ್ರೇರಣೆಯ ಮೂಲಕ ಬರೆದದ್ದು: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು; . . . ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು; ಮತ್ತು ನೀನು ಅನೇಕಸಾಕ್ಷಿಗಳ ಮುಂದೆ ಒಳ್ಳೇ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ.”—1 ತಿಮೊಥೆಯ 6:7-12.
19. ಯೇಸು ಉತ್ತೇಜಿಸಿದಂತಹ ಜೀವಿತದ ದೃಷ್ಟಿಕೋನವನ್ನು ಸಭೆಯಲ್ಲಿರುವವರು ಸ್ವೀಕರಿಸುವಾಗ ಸಭೆಯೊಂದು ಹೇಗೆ ಪ್ರಭಾವಿಸಲ್ಪಡುತ್ತದೆ?
19 ಸಭೆಯೊಂದು ‘ಉತ್ತಮವಾದ ಸಾರ್ವಜನಿಕ ಘೋಷಣೆಯನ್ನು ನೀಡಲು’ ತೀವ್ರವಾಗಿ ಶ್ರಮಿಸುವ ಹುರುಪುಳ್ಳ ಕ್ರೈಸ್ತರಿಂದ ರೂಪುಗೊಂಡಿರುವಾಗ, ಹೊಂದಿಕೆ ಸ್ವಾಭಾವಿಕವಾಗಿದೆ. ‘ಬಹಳಷ್ಟು ವರ್ಷಗಳಿಗಾಗಿ ಅನೇಕ ಒಳ್ಳೆಯ ವಿಷಯಗಳನ್ನು ನೀವು ಕೂಡಿಸಿಟ್ಟಿದ್ದೀರಿ; ಹಾಯಾಗಿರ್ರಿ, ಊಟಮಾಡಿರಿ, ಕುಡಿಯಿರಿ, ಸುಖಾನುಭವಿಸಿರಿ’ ಎಂಬ ಈ ಮನೋಭಾವಕ್ಕೆ ಅವರು ಒಳಗಾಗುವುದಿಲ್ಲ. (ಲೂಕ 12:19) ಬದಲಿಗೆ, ಎಂದಿಗೂ ಪುನರಾವರ್ತಿಸಲ್ಪಡದ ಈ ಕೆಲಸದಲ್ಲಿ ಸಾಧ್ಯವಾದಷ್ಟು ಪೂರ್ಣವಾದ ಪಾಲನ್ನು ಹೊಂದಿರಲಿಕ್ಕಾಗಿ ತ್ಯಾಗಗಳನ್ನು ಮಾಡಲು ಸಿದ್ಧರಾಗಿರುತ್ತಾ, ಅವರು ಒಂದೇ ಪ್ರಯತ್ನದಲ್ಲಿ ಐಕ್ಯರಾಗಿದ್ದಾರೆ.—ಹೋಲಿಸಿ ಫಿಲಿಪ್ಪಿ 1:27, 28.
ಒಲಿಸುವ ವಾದಗಳ ಕುರಿತು ಎಚ್ಚರಿಕೆಯುಳ್ಳವರಾಗಿರಬೇಕು
20. ಕ್ರೈಸ್ತರು ತಪ್ಪುದಾರಿಗೆ ಎಳೆಯಲ್ಪಡಬಹುದಾದ ಇನ್ನೊಂದು ಕ್ಷೇತ್ರವು ಯಾವುದು?
20 ಕ್ರೈಸ್ತರು ‘ಒಲಿಸುವ ವಾದಗಳಿಂದ ವಂಚಿಸಲ್ಪಡ’ ಬಹುದಾದ ಇತರ ಮಾರ್ಗಗಳು ಯಾ ‘ಪ್ರೀತಿಯಲ್ಲಿ ಹೊಂದಿಕೆಯಿಂದ ಜೋಡಿಸಲ್ಪಡು’ ವುದರೊಂದಿಗೆ ಅಡಬ್ಡರುವ ಬರಿದಾದ ವಂಚನೆಗಳು ಇವೆ ಎಂಬುದು ನಿಶ್ಚಯ. ಜರ್ಮನಿಯಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸ್ ಬರೆದದ್ದು: “ಒಂದು ವಿಷಯವು ಒಂದು ವಾಗ್ವಾದಕ್ಕೆ ನಡೆಸಿತು. ಒಬ್ಬ ಸಹೋದರನ ಮೂಲಕ ಉಪಯೋಗಿಸಲಾದ ಚಿಕಿತ್ಸೆಯ ವಿಧಾನಗಳ ವಿಷಯದಲ್ಲಿ ಪ್ರಚಾರಕರು ಮತ್ತು ಹಿರಿಯರು ಸಹ ಪಕ್ಷಗಳನ್ನು ವಹಿಸಿಕೊಂಡರು.” ಅವರು ಕೂಡಿಸಿದ್ದು: “ವಿಧಾನಗಳ ವ್ಯಾಪಕವಾದ ವಿವಿಧತೆಯಿಂದಾಗಿ ಮತ್ತು ರೋಗಿಗಳ ದೊಡ್ಡ ಸಂಖ್ಯೆಯಿಂದಾಗಿ, ಇದೊಂದು ವಿವಾದಾತ್ಮಕ ವಿಷಯವಾಗಿದೆ ಮತ್ತು ಚಿಕಿತ್ಸಕ ವಿಧಾನಗಳಿಗೆ ಪ್ರೇತವ್ಯವಹಾರದ ಗುಣಗಳಿರುವುದಾದರೆ, ಅವು ಅಪಾಯಕಾರಿಯಾಗಿರಬಲ್ಲವು.”—ಎಫೆಸ 6:12.
21. ಇಂದು ಸರಿಯಾದ ಕ್ರೇಂದ್ರಬಿಂದುವನ್ನು ಒಬ್ಬ ಕ್ರೈಸ್ತನು ಹೇಗೆ ಕಳೆದುಕೊಳ್ಳಬಹುದು?
21 ದೇವರನ್ನು ಆರಾಧಿಸುವುದು ಸಾಧ್ಯವಾಗುವಂತೆ, ಕ್ರೈಸ್ತರು ಸಜೀವವಾಗಿಯೂ ಆರೋಗ್ಯವಂತರಾಗಿಯೂ ಇರಲು ಬಯಸುತ್ತಾರೆ. ಆದರೂ, ಈ ವ್ಯವಸ್ಥೆಯಲ್ಲಿ ಅಪರಿಪೂರ್ಣತೆಯಿಂದ ಫಲಿಸುವ ವೃದ್ಧಾಪ್ಯ ಮತ್ತು ಅಸ್ವಸ್ಥತೆಗೆ ನಾವು ಒಳಪಟ್ಟಿದ್ದೇವೆ. ಆರೋಗ್ಯ ವಿವಾದಾಂಶಗಳನ್ನು ಎತ್ತಿತೋರಿಸುವ ಬದಲು, ನಮಗಾಗಿ ಮತ್ತು ಇತರರಿಗಾಗಿರುವ ನಿಜವಾದ ಪರಿಹಾರದ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. (1 ತಿಮೊಥೆಯ 4:16) ಕೊಲೊಸ್ಸೆಯವರಿಗೆ ಪೌಲನು ಬರೆದ ಸಲಹೆಯ ಕೇಂದ್ರಬಿಂದು ಕ್ರಿಸ್ತನಾಗಿದ್ದಂತೆಯೇ, ಆ ಪರಿಹಾರದ ಕೇಂದ್ರಬಿಂದು ಸಹ ಅವನೇ ಆಗಿದ್ದಾನೆ. ಆದರೆ ಕ್ರಿಸ್ತನಿಂದ ನಮ್ಮ ಗಮನವನ್ನು ತಿರುಗಿಸುವ “ಒಲಿಸುವ ವಾದ” ಗಳೊಂದಿಗೆ, ಬಹುಶಃ ನಮ್ಮ ಗಮನವನ್ನು ರೋಗ ನಿದಾನದ ವಿಧಾನಗಳ ಕಡೆಗೆ, ಚಿಕಿತ್ಸಾಕ್ರಮಗಳ ಕಡೆಗೆ, ಯಾ ಆಹಾರ ಪಥ್ಯಗಳ ಕಡೆಗೆ ಸೆಳೆಯುತ್ತಾ, ಕೆಲವರು ಬರುವರೆಂದು ಪೌಲನು ಸೂಚಿಸಿದನೆಂಬುದನ್ನು ನೆನಪಿನಲ್ಲಿಡಿ.—ಕೊಲೊಸ್ಸೆ 2:2-4.
22. ರೋಗ ನಿದಾನ ಮತ್ತು ಚಿಕಿತ್ಸಾಕ್ರಮಗಳ ವಿಧಾನಗಳ ಕುರಿತಿರುವ ಹಲವಾರು ವಾದಗಳ ಕುರಿತು ನಮಗೆ ಯಾವ ಸಮತೂಕದ ಮನೋಭಾವನೆ ಇರಬೇಕು?
22 ಎಲ್ಲ ರೀತಿಯ ಚಿಕಿತ್ಸಾಕ್ರಮಗಳ ಮತ್ತು ರೋಗ ನಿದಾನ ಸಾಧನಗಳ ಕುರಿತು ಜಾಹೀರಾತುಗಳಿಂದ ಮತ್ತು ಸಾಕ್ಷ್ಯಗಳಿಂದ ಭೂಮಂಡಲದ ಸುತ್ತಲಿರುವ ಜನರು ಆಕ್ರಮಿಸಲ್ಪಟ್ಟಿದ್ದಾರೆ. ಅವುಗಳಲ್ಲಿ ಕೆಲವು ವ್ಯಾಪಕವಾಗಿ ಬಳಸಲ್ಪಡುತ್ತವೆ ಮತ್ತು ಗುರುತಿಸಲ್ಪಡುತ್ತವೆ; ಇತರ ಸಾಧನಗಳು ವ್ಯಾಪಕವಾಗಿ ಖಂಡಿಸಲ್ಪಡುತ್ತವೆ ಇಲ್ಲವೆ ಶಂಕೆಗೆ ಒಳಪಡಿಸಲ್ಪಡುತ್ತವೆ.b ತನ್ನ ಆರೋಗ್ಯದ ಕುರಿತು ತಾನು ಏನು ಮಾಡುವೆನೆಂದು ನಿರ್ಧರಿಸುವುದು ಪ್ರತಿಯೊಬ್ಬ ವ್ಯಕ್ತಿಯ ಹೊಣೆಯಾಗಿದೆ. ಆದರೆ ಕೊಲೊಸ್ಸೆ 2:4, 8 ರಲ್ಲಿ ಕಂಡುಕೊಳ್ಳಲ್ಪಡುವ ಪೌಲನ ಸಲಹೆಯನ್ನು ಸ್ವೀಕರಿಸುವವರಿಗೆ “ಒಲಿಸುವ ವಾದ” ಗಳಿಂದ ವಂಚಿಸಲ್ಪಡುವುದರ ವಿರುದ್ಧ ಯಾ ರಾಜ್ಯ ನಿರೀಕ್ಷೆಯ ಕೊರತೆಯಿರುವುದರಿಂದ ಪರಿಹಾರಕ್ಕಾಗಿ ಹತಾಶರಾಗಿರುವ ಅನೇಕರನ್ನು ಹಾದಿತಪ್ಪಿಸುವ “ಬರಿದಾದ ವಂಚನೆ” ಗಳಿಂದ ರಕ್ಷಣೆಯಿದೆ. ನಿರ್ದಿಷ್ಟವಾದೊಂದು ಚಿಕಿತ್ಸಾಕ್ರಮವು ತನಗೆ ಒಳ್ಳೆಯದಾಗಿ ತೋರುತ್ತದೆಂದು ಒಬ್ಬ ಕ್ರೈಸ್ತನು ಮನಗಂಡರೂ, ಇದನ್ನು ಅವನು ಕ್ರೈಸ್ತ ಸಹೋದರತ್ವದಲ್ಲಿ ಪ್ರವರ್ತಿಸಬಾರದು, ಯಾಕೆಂದರೆ ಅದು ವ್ಯಾಪಕವಾದ ಚರ್ಚೆಯ ಮತ್ತು ವಾಗ್ವಾದದ ವಿಷಯವಾಗಬಲ್ಲದು. ಹೀಗೆ ಅವನು ಸಭೆಯಲ್ಲಿ ಹೊಂದಿಕೆಯು ಮಹತ್ವವನ್ನು ಬಹಳವಾಗಿ ಗೌರವಿಸುತ್ತಾನೆಂದು ತೋರಿಸಬಲ್ಲನು.
23. ಆನಂದಿಸಲು ವಿಶೇಷವಾಗಿ ನಮಗೆ ಕಾರಣವಿದೆ ಏಕೆ?
23 ನಿಜವಾದ ಆನಂದಕ್ಕೆ ಕ್ರೈಸ್ತ ಹೊಂದಿಕೆ ಒಂದು ಆಧಾರವಾಗಿದೆ ಎಂಬುದನ್ನು ಅಪೊಸ್ತಲ ಪೌಲನು ಒತ್ತಿಹೇಳಿದನು. ಅವನ ದಿನದಲ್ಲಿದ್ದ ಸಭೆಗಳ ಸಂಖ್ಯೆಯು ಖಂಡಿತವಾಗಿ ಇಂದಿನ ದಿನಕ್ಕಿಂತ ಕಡಿಮೆಯಾಗಿತ್ತು. ಆದರೂ ಅವನು ಕೊಲೊಸ್ಸೆಯವರಿಗೆ ಹೀಗೆ ಬರೆಯಸಾಧ್ಯವಿತ್ತು: “ನಾನು ಶರೀರದಿಂದ ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆತ್ಮದಿಂದ ನಿಮ್ಮೊಂದಿಗಿದ್ದು ನೀವು ಕ್ರಮವಾಗಿ ನಡೆಯುವದನ್ನೂ ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಂತಿರುವದನ್ನೂ ನೋಡಿ ಸಂತೋಷಪಡುತ್ತೇನೆ.” (ಕೊಲೊಸ್ಸೆ 2:5; ಕೊಲೊಸ್ಸೆ 3:14 ಸಹ ನೋಡಿ.) ಹರ್ಷಿಸಲಿಕ್ಕಾಗಿರುವ ನಮ್ಮ ಕಾರಣವು ಎಷ್ಟು ಹೆಚ್ಚು ಮಹತ್ತರವಾಗಿದೆ! ಭೂವ್ಯಾಪಕವಾಗಿ ದೇವರ ಜನರ ಸಾಮಾನ್ಯ ಸನ್ನಿವೇಶವನ್ನು ಪ್ರತಿಬಿಂಬಿಸುವ ಹೊಂದಿಕೆ, ಒಳ್ಳೆಯ ಕ್ರಮ, ಮತ್ತು ವಿಶ್ವಾಸದ ದೃಢತೆಯ ನಿಜವಾದ ಪ್ರಮಾಣವನ್ನು ನಾವು ನಮ್ಮ ಸ್ವಂತ ಸಭೆಯಲ್ಲಿಯೇ ಕಾಣಬಹುದು. ಆದುದರಿಂದ ಪ್ರಸ್ತುತ ವ್ಯವಸ್ಥೆಯಲ್ಲಿ ಉಳಿದಿರುವ ಸ್ವಲ್ಪ ಸಮಯದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರು “ಪ್ರೀತಿಯಲ್ಲಿ ಹೊಂದಿಕೆಯಿಂದ ಜೋಡಿಸಲ್ಪಟ್ಟವರಾಗಿ” ರಲು ನಿಶ್ಚಯಿಸಿಕೊಳ್ಳೋಣ.
[ಅಧ್ಯಯನ ಪ್ರಶ್ನೆಗಳು]
a ಸಾಧ್ಯತೆಗಳು ಬಹುಮಟ್ಟಿಗೆ ಕೊನೆಯಿಲ್ಲದವುಗಳಾಗಿರುವುದಾದರೂ, ಮುಂದಿನ ದೃಷ್ಟಾಂತಗಳಿಂದ, ನಿಮ್ಮ ಸಭೆಯಲ್ಲಿ ಹೊಂದಿಕೆಗೆ ನೆರವಾಗಬಲ್ಲಂತಹ ಯಾವ ವಿಷಯವನ್ನು ನೀವು ವೈಯಕ್ತಿಕವಾಗಿ ಯೇಸುವಿನಿಂದ ಕಲಿಯಬಲ್ಲಿರೆಂದು ನೋಡಿರಿ: ಮತ್ತಾಯ 12:1-8; ಲೂಕ 2:51, 52; 9:51-55; 10:20; ಇಬ್ರಿಯ 10:5-9.
b 1982, ಜೂನ್ 15ರ ವಾಚ್ಟವರ್, ಪುಟಗಳು 22-9ನ್ನು ನೋಡಿರಿ.
ನೀವು ಗಮನಿಸಿದಿರೊ?
▫ ಯೆಹೋವನ ಸಾಕ್ಷಿಗಳಿಗೆ 1995 ಕ್ಕಾಗಿರುವ ವರ್ಷವಚನ ಯಾವುದು?
▫ ಕೊಲೊಸ್ಸೆಯ ಕ್ರೈಸ್ತರು ಪ್ರೀತಿಯಲ್ಲಿ ಹೊಂದಿಕೆಯಿಂದ ಜೋಡಿಸಲ್ಪಟರಾಗಿರುವ ಅಗತ್ಯವಿತ್ತೇಕೆ, ಮತ್ತು ಇಂದು ನಾವು ಒಂದುಗೂಡಿರಬೇಕು ಏಕೆ?
▫ ಜೀವಿತದ ಯಾವ ವಂಚಕ ದೃಷ್ಟಿಕೋನದ ವಿರುದ್ಧ ಇಂದು ಕ್ರೈಸ್ತರು ವಿಶೇಷವಾಗಿ ಎಚ್ಚರದಿಂದಿರಬೇಕು?
▫ ಆರೋಗ್ಯ ಮತ್ತು ರೋಗ ನಿದಾನದ ಸಾಧನೆಗಳ ಕುರಿತಿರುವ ಒಲಿಸುವ ವಾದಗಳಿಂದ ತಪ್ಪುದಾರಿಗೆ ಎಳೆಯಲ್ಪಡುವುದರ ವಿರುದ್ಧ ಕ್ರೈಸ್ತರು ಏಕೆ ಜಾಗರೂಕರಾಗಿರಬೇಕು?
[ಪುಟ 17 ರಲ್ಲಿರುವ ಚಿತ್ರಗಳು]
ಭವಿಷ್ಯತ್ತಿಗಾಗಿರುವ ನಿಮ್ಮ ಯೋಜನೆಗಳು ಯೇಸುವಿನ ಸಾನ್ನಿಧ್ಯದ ಸುತ್ತಲೂ ಕೇಂದ್ರೀಕೃತವಾಗಿವೆಯೊ?