ಅಧ್ಯಾಯ ಮೂರು
ಚಿರಸ್ಥಾಯಿಯಾದ ವಿವಾಹಕ್ಕೆ ಎರಡು ಕೀಲಿ ಕೈಗಳು
1, 2. (ಎ) ವಿವಾಹವು ಎಷ್ಟು ದೀರ್ಘಕಾಲ ಚಿರಸ್ಥಾಯಿಯಾಗಿರುವಂತೆ ರಚಿಸಲ್ಪಟ್ಟಿತು? (ಬಿ) ಇದು ಹೇಗೆ ಸಾಧ್ಯವಿದೆ?
ದೇವರು ಪ್ರಥಮ ಪುರುಷನನ್ನೂ ಸ್ತ್ರೀಯನ್ನೂ ವಿವಾಹದಲ್ಲಿ ಒಂದುಗೂಡಿಸಿದಾಗ, ಆ ಸಾಂಗತ್ಯವು ಕೇವಲ ತಾತ್ಕಾಲಿಕವಾಗಿರುವುದೆಂಬ ಯಾವ ಸೂಚನೆಯೂ ಇರಲಿಲ್ಲ. ಆದಾಮಹವ್ವರು, ಜೀವಮಾನ ಪರ್ಯಂತರವಾಗಿ ಒಟ್ಟಿಗಿರಬೇಕಾಗಿತ್ತು. (ಆದಿಕಾಂಡ 2:24) ಒಂದು ಗೌರವಾರ್ಹ ವಿವಾಹಕ್ಕಿರುವ ದೇವರ ಮಟ್ಟವು ಒಂದು ಗಂಡು ಮತ್ತು ಒಂದು ಹೆಣ್ಣಿನ ಒಂದಾಗುವಿಕೆಯೇ. ಒಬ್ಬ ಅಥವಾ ಇಬ್ಬರು ಸಂಗಾತಿಗಳಿಂದ ಗಂಭೀರವಾದ ಲೈಂಗಿಕ ದುರಾಚಾರವು ಮಾತ್ರ ಪುನರ್ವಿವಾಹಕ್ಕೆ ಸಾಧ್ಯತೆಯಿರುವ ವಿವಾಹ ವಿಚ್ಛೇದಕ್ಕೆ ಶಾಸ್ತ್ರೀಯ ಆಧಾರಗಳನ್ನು ಒದಗಿಸುತ್ತದೆ.—ಮತ್ತಾಯ 5:32.
2 ಇಬ್ಬರು ವ್ಯಕ್ತಿಗಳಿಗೆ ಅನಿಶ್ಚಿತ ದೀರ್ಘಕಾಲದ ವರೆಗೆ ಸಂತೋಷದಿಂದ ಕೂಡಿ ಜೀವಿಸುವ ಸಾಧ್ಯತೆ ಇದೆಯೆ? ಹೌದು, ಮತ್ತು ಬೈಬಲು, ಇದು ಸಾಧ್ಯವಾಗುವಂತೆ ಮಾಡಲು ಸಹಾಯಕವಾಗಿ ಎರಡು ಮಹತ್ವದ ಅಂಶಗಳನ್ನು ಅಥವಾ ಕೀಲಿ ಕೈಗಳನ್ನು ಗುರುತಿಸುತ್ತದೆ. ಗಂಡ ಮತ್ತು ಹೆಂಡತಿ ಇಬ್ಬರೂ ಇವನ್ನು ಉಪಯೋಗಕ್ಕೆ ಹಾಕುವಲ್ಲಿ, ಅವರು ಸಂತೋಷ ಮತ್ತು ಅನೇಕ ಆಶೀರ್ವಾದಗಳ ದ್ವಾರದ ಬೀಗವನ್ನು ಬಿಚ್ಚುವರು. ಈ ಕೀಲಿ ಕೈಗಳಾವುವು?
ಒಂದನೆಯ ಕೀಲಿ ಕೈ
ಪರಸ್ಪರ ಪ್ರೀತಿ ಮತ್ತು ಗೌರವವು ವಿವಾಹದಲ್ಲಿ ಯಶಸ್ಸಿಗೆ ನಡೆಸುತ್ತದೆ
3. ವಿವಾಹಿತ ಸಂಗಾತಿಗಳಿಂದ ಯಾವ ಮೂರು ತೆರದ ಪ್ರೀತಿಯು ಬೆಳೆಸಲ್ಪಡಬೇಕು?
3 ಪ್ರೀತಿಯೇ ಒಂದನೆಯ ಕೀಲಿ ಕೈ. ರಸಕರವಾಗಿ, ಬೈಬಲಿನಲ್ಲಿ ವಿಭಿನ್ನ ರೀತಿಗಳ ಪ್ರೀತಿಯನ್ನು ಗುರುತಿಸಲಾಗುತ್ತದೆ. ಆತ್ಮೀಯ ಸ್ನೇಹಿತರ ಮಧ್ಯೆ ಇರುವ ರೀತಿಯ ಪ್ರೀತಿ, ಒಬ್ಬನ ಕಡೆಗಿರುವ ಹೃದಯೋಲ್ಲಾಸದ, ವೈಯಕ್ತಿಕ ಮಮತೆಯು ಒಂದಾಗಿದೆ. (ಯೋಹಾನ 11:3) ಕುಟುಂಬ ಸದಸ್ಯರ ಮಧ್ಯೆ ಬೆಳೆಯುವ ಪ್ರೀತಿ ಇನ್ನೊಂದಾಗಿದೆ. (ರೋಮಾಪುರ 12:10) ಮೂರನೆಯದ್ದು, ಒಬ್ಬನಿಗೆ ವಿರುದ್ಧ ಲಿಂಗದ ವ್ಯಕ್ತಿಯ ಕಡೆಗೆ ಇರಬಲ್ಲ ಪ್ರಣಯ ಸಂಬಂಧವಾದ ಪ್ರೀತಿಯೇ. (ಜ್ಞಾನೋಕ್ತಿ 5:15-20) ಇವುಗಳೆಲ್ಲವನ್ನು ಗಂಡ ಮತ್ತು ಹೆಂಡತಿಯು ಬೆಳೆಸಿಕೊಳ್ಳಬೇಕು ನಿಶ್ಚಯ. ಆದರೆ, ಇವುಗಳಿಗಿಂತ ಹೆಚ್ಚು ಪ್ರಾಮುಖ್ಯವಾದ ನಾಲ್ಕನೆಯ ರೀತಿಯ ಪ್ರೀತಿಯೊಂದಿದೆ.
4. ನಾಲ್ಕನೆಯ ತೆರದ ಪ್ರೀತಿಯು ಯಾವುದು?
4 ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಮೂಲಭಾಷೆಯಲ್ಲಿ, ಈ ನಾಲ್ಕನೆಯ ರೀತಿಯ ಪ್ರೀತಿಗಿರುವ ಪದವು ಅಗಾಪೆಯಾಗಿದೆ. ಆ ಪದವು 1 ಯೋಹಾನ 4:8, (NW)ರಲ್ಲಿ ಉಪಯೋಗಿಸಲ್ಪಟ್ಟಿದೆ. ಅಲ್ಲಿ ನಮಗೆ ಹೇಳಲ್ಪಡುವುದು: “ದೇವರು ಪ್ರೀತಿಯಾಗಿದ್ದಾನೆ.” “ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ” ನಿಶ್ಚಯ. (1 ಯೋಹಾನ 4:19) ಒಬ್ಬ ಕ್ರೈಸ್ತನು ಇಂತಹ ಪ್ರೀತಿಯನ್ನು ಪ್ರಥಮವಾಗಿ ಯೆಹೋವ ದೇವರಿಗಾಗಿ ಮತ್ತು ಬಳಿಕ ತನ್ನ ಜೊತೆ ಮಾನವರಿಗಾಗಿ ವಿಕಸಿಸುತ್ತಾನೆ. (ಮಾರ್ಕ 12:29-31) ಆ ಅಗಾಪೆ ಪದವು ಎಫೆಸ 5:2ರಲ್ಲಿಯೂ ಉಪಯೋಗಿಸಲ್ಪಟ್ಟಿದೆ. ಅಲ್ಲಿ ಹೇಳುವುದು: “ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ . . . ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.” ಈ ರೀತಿಯ ಪ್ರೀತಿಯು ತನ್ನ ನಿಜ ಹಿಂಬಾಲಕರನ್ನು ಗುರುತಿಸುವುದೆಂದು ಯೇಸು ಹೇಳಿದನು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ [ಅಗಾಪೆ]ಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) 1 ಕೊರಿಂಥ 13:13ರಲ್ಲಿಯೂ ಅಗಾಪೆಯ ಉಪಯೋಗವನ್ನು ಗಮನಿಸಿರಿ: “ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿ [ಅಗಾಪೆ]ಯೇ.”
5, 6. (ಎ) ಪ್ರೀತಿಯು ನಂಬಿಕೆ ಮತ್ತು ನಿರೀಕ್ಷೆಗಿಂತ ಏಕೆ ಹೆಚ್ಚು ಮಹತ್ವದ್ದಾಗಿದೆ? (ಬಿ) ಪ್ರೀತಿಯು ಒಂದು ವಿವಾಹವನ್ನು ಚಿರಸ್ಥಾಯಿಯಾಗಿರಿಸಲು ಸಹಾಯ ಮಾಡುವುದೆಂಬುದಕ್ಕಿರುವ ಕೆಲವು ಕಾರಣಗಳಾವುವು?
5 ಈ ಅಗಾಪೆ ಪ್ರೀತಿಯನ್ನು ಯಾವುದು ನಂಬಿಕೆ ಮತ್ತು ನಿರೀಕ್ಷೆಗಿಂತ ಹೆಚ್ಚು ಮಹತ್ವವುಳ್ಳದ್ದಾಗಿ ಮಾಡುತ್ತದೆ? ಅದು ದೇವರ ವಾಕ್ಯದಲ್ಲಿ ಕಂಡುಕೊಳ್ಳಲ್ಪಡುವ ಮೂಲತತ್ವಗಳಿಂದ—ತಕ್ಕದಾದ ಮೂಲತತ್ವಗಳಿಂದ—ನಿಯಂತ್ರಿಸಲ್ಪಡುತ್ತದೆ. (ಕೀರ್ತನೆ 119:105) ದೇವರ ದೃಷ್ಟಿಕೋನದಲ್ಲಿ ಯಾವುದು ಸಮರ್ಪಕವೊ ಮತ್ತು ಒಳ್ಳೆಯದೊ ಅದನ್ನು ಇತರರಿಗೆ—ಗ್ರಾಹಕನು ಅದಕ್ಕೆ ಯೋಗ್ಯನಾಗಿ ಕಂಡುಬರಲಿ, ಇಲ್ಲದಿರಲಿ—ಮಾಡುವ ನಿಸ್ವಾರ್ಥ ಚಿಂತೆಯೇ ಅದಾಗಿದೆ. ಅಂತಹ ಪ್ರೀತಿಯು, “ಮತ್ತೊಬ್ಬನ ಮೇಲೆ ತಪ್ಪು ಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ,” ಎಂಬ ಬೈಬಲಿನ ಸಲಹೆಯನ್ನು ವಿವಾಹ ಸಹಭಾಗಿಗಳು ಅನುಸರಿಸುವಂತೆ ಶಕ್ತರನ್ನಾಗಿಸುತ್ತದೆ. (ಕೊಲೊಸ್ಸೆ 3:13) ಪ್ರೀತಿಪರ ವಿವಾಹಿತ ದಂಪತಿಗಳಲ್ಲಿ, “[ಪರಸ್ಪರವಾಗಿ] ಯಥಾರ್ಥವಾದ ಪ್ರೀತಿ [ಅಗಾಪೆ]” ಇರುತ್ತದೆ ಮತ್ತು ಅವರು ಅದನ್ನು ಬೆಳೆಸುತ್ತಾರೆ, ಏಕೆಂದರೆ “ಪ್ರೀತಿಯು ಬಹುಪಾಪಗಳನ್ನು ಮುಚ್ಚುತ್ತದೆ.” (1 ಪೇತ್ರ 4:8) ಪ್ರೀತಿಯು ತಪ್ಪುಗಳನ್ನು ಮುಚ್ಚುತ್ತದೆಂಬುದನ್ನು ಗಮನಿಸಿರಿ. ಅದು ಅವನ್ನು ನಿವಾರಿಸುವುದಿಲ್ಲ; ಏಕೆಂದರೆ ಯಾವ ಅಪರಿಪೂರ್ಣ ಮಾನವನೂ ದೋಷಮುಕ್ತನಾಗಿರಸಾಧ್ಯವಿಲ್ಲ.—ಕೀರ್ತನೆ 130:3, 4; ಯಾಕೋಬ 3:2.
6 ವಿವಾಹಿತ ದಂಪತಿಗಳು ದೇವರಿಗೆ ಮತ್ತು ಪರಸ್ಪರವಾಗಿ ಇಂತಹ ಪ್ರೀತಿಯನ್ನು ಬೆಳೆಸುವಾಗ, ಅವರ ವಿವಾಹವು ಚಿರಸ್ಥಾಯಿಯಾಗಿ ಸಂತೋಷದ್ದಾಗಿರುವುದು, ಏಕೆಂದರೆ “ಪ್ರೀತಿಯು ಎಂದಿಗೂ ಬಿದ್ದುಹೋಗುವುದಿಲ್ಲ.” (1 ಕೊರಿಂಥ 13:8) ಪ್ರೀತಿಯು “ಐಕ್ಯದ ಒಂದು ಪರಿಪೂರ್ಣ ಬಂಧವಾಗಿದೆ.” (ಕೊಲೊಸ್ಸೆ 3:14, NW) ನೀವು ವಿವಾಹಿತರಾಗಿರುವಲ್ಲಿ, ನೀವೂ ನಿಮ್ಮ ಸಂಗಾತಿಯೂ ಈ ರೀತಿಯ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ? ದೇವರ ವಾಕ್ಯವನ್ನು ಒಟ್ಟುಗೂಡಿ ಓದಿರಿ ಮತ್ತು ಅದರ ಕುರಿತು ಮಾತಾಡಿರಿ. ಯೇಸುವಿನ ಪ್ರೀತಿಯ ಮಾದರಿಯನ್ನು ಅಭ್ಯಸಿಸಿ, ಅವನನ್ನು ಅನುಕರಿಸಲು, ಅವನಂತೆ ಯೋಚಿಸಿ ವರ್ತಿಸಲು ಪ್ರಯತ್ನಿಸಿರಿ. ಕೂಡಿಕೆಯಾಗಿ, ಎಲ್ಲಿ ದೇವರ ವಾಕ್ಯವು ಕಲಿಸಲ್ಪಡುತ್ತದೆಯೊ ಆ ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಾಗಿರಿ. ಮತ್ತು ದೇವರ ಪವಿತ್ರಾತ್ಮದ ಒಂದು ಫಲವಾಗಿರುವ ಈ ಉನ್ನತ ರೀತಿಯ ಪ್ರೀತಿಯನ್ನು ವಿಕಸಿಸಿಕೊಳ್ಳಲು ದೇವರ ಸಹಾಯಕ್ಕಾಗಿ ಪ್ರಾರ್ಥಿಸಿರಿ.—ಜ್ಞಾನೋಕ್ತಿ 3:5, 6; ಯೋಹಾನ 17:3; ಗಲಾತ್ಯ 5:22; ಇಬ್ರಿಯ 10:24, 25.
ಎರಡನೆಯ ಕೀಲಿ ಕೈ
7. ಗೌರವವೆಂದರೇನು, ಮತ್ತು ವಿವಾಹದಲ್ಲಿ ಯಾರು ಗೌರವವನ್ನು ತೋರಿಸಬೇಕು?
7 ಇಬ್ಬರು ವಿವಾಹಿತರು ನಿಜವಾಗಿಯೂ ಒಬ್ಬರನ್ನೊಬ್ಬರು ಪ್ರೀತಿಸುವಲ್ಲಿ, ಅವರಲ್ಲಿ ಒಬ್ಬರ ಮೇಲೊಬ್ಬರಿಗೆ ಗೌರವವೂ ಇರುವುದು, ಮತ್ತು ಗೌರವವು ಒಂದು ಸಂತೋಷದ ವಿವಾಹಕ್ಕಿರುವ ಎರಡನೆಯ ಕೀಲಿ ಕೈಯಾಗಿದೆ. ಗೌರವವನ್ನು, “ಇತರರಿಗೆ ಪರಿಗಣನೆಯನ್ನು ಕೊಡುವುದು, ಅವರನ್ನು ಸನ್ಮಾನಿಸುವುದು,” ಎಂದು ನಿರೂಪಿಸಲಾಗುತ್ತದೆ. ದೇವರ ವಾಕ್ಯವು ಗಂಡಹೆಂಡತಿಯರನ್ನು ಒಳಗೊಂಡು ಸಕಲ ಕ್ರೈಸ್ತರಿಗೆ, “ಮಾನಮರ್ಯಾದೆಯನ್ನು ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ,” ಎಂದು ಸಲಹೆ ನೀಡುತ್ತದೆ. (ರೋಮಾಪುರ 12:10) ಅಪೊಸ್ತಲ ಪೇತ್ರನು ಬರೆದುದು: “ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ.” (1 ಪೇತ್ರ 3:7) ಹೆಂಡತಿಯು “ಗಂಡನೊಂದಿಗೆ ಗಾಢವಾದ ಗೌರವದಿಂದ ನಡೆದುಕೊಳ್ಳಬೇಕು” ಎಂದು ಸಲಹೆಯು ನೀಡಲ್ಪಟ್ಟಿದೆ. (ಎಫೆಸ 5:33, NW) ನೀವು ಒಬ್ಬ ವ್ಯಕ್ತಿಯನ್ನು ಸನ್ಮಾನಿಸಬಯಸುವಲ್ಲಿ, ನೀವು ಆ ವ್ಯಕ್ತಿಗೆ ದಯೆ ತೋರಿಸುತ್ತೀರಿ, ಅವನ ಘನತೆಯನ್ನು ಮತ್ತು ವ್ಯಕ್ತಪಡಿಸಿದ ಅಭಿಪ್ರಾಯಗಳ ಕುರಿತು ಗೌರವಭರಿತರಾಗಿ, ನಿಮ್ಮಿಂದ ಕೇಳಿಕೊಳ್ಳಲ್ಪಡುವ ಯಾವುದೇ ನ್ಯಾಯಸಮ್ಮತವಾದ ಕೇಳಿಕೆಯನ್ನು ಪೂರೈಸಲು ಸಿದ್ಧರಾಗಿರುತ್ತೀರಿ.
8-10. ಗೌರವವು ಒಂದು ವಿವಾಹ ಸಾಂಗತ್ಯವನ್ನು ಸ್ಥಿರವಾದದ್ದೂ ಸಂತೋಷಕರವೂ ಆದದ್ದಾಗಿ ಮಾಡಲು ಸಹಾಯ ಮಾಡುವ ಕೆಲವು ವಿಧಗಳಾವುವು?
8 ಸಂತೋಷದ ವಿವಾಹವನ್ನು ಅನುಭವಿಸಬಯಸುವವರು, “[ತಮ್ಮ] ಸ್ವಹಿತವನ್ನು ಮಾತ್ರ ನೋಡದೆ [ತಮ್ಮ ಸಂಗಾತಿಗಳ] ಪರಹಿತವನ್ನು ಸಹ” ನೋಡುವ ಮೂಲಕ ತಮ್ಮ ಸಂಗಾತಿಗಳಿಗೆ ಗೌರವವನ್ನು ತೋರಿಸುತ್ತಾರೆ. (ಫಿಲಿಪ್ಪಿ 2:4) ತಮಗೆ ಮಾತ್ರ ಒಳಿತಾಗಿರುವ ಯಾವುದನ್ನಾದರೂ ಅವರು ಪರಿಗಣಿಸುವುದಿಲ್ಲ—ಅದು ಸ್ವಾರ್ಥವಾಗಿರುವುದು. ಬದಲಿಗೆ, ಅವರು ತಮ್ಮ ಸಂಗಾತಿಗಳಿಗೆ ಸಹ ಯಾವುದು ಅತ್ಯುತ್ತಮವಾಗಿದೆಯೊ ಅದನ್ನು ಪರಿಗಣಿಸುತ್ತಾರೆ. ವಾಸ್ತವವಾಗಿ, ಅವರು ಅದಕ್ಕೆ ಆದ್ಯತೆಯನ್ನು ಕೊಡುತ್ತಾರೆ.
9 ವಿವಾಹ ಸಹಭಾಗಿಗಳು ತಮ್ಮ ದೃಷ್ಟಿಕೋನದಲ್ಲಿರುವ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವಂತೆ ಗೌರವವು ಸಹಾಯ ಮಾಡುವುದು. ಇಬ್ಬರು ವ್ಯಕ್ತಿಗಳು ಪ್ರತಿಯೊಂದು ವಿಷಯದಲ್ಲೂ ಏಕರೀತಿಯ ಅಭಿಪ್ರಾಯವುಳ್ಳವರಾಗಿರುವಂತೆ ನಿರೀಕ್ಷಿಸುವುದು ನ್ಯಾಯಸಮ್ಮತವಲ್ಲ. ಒಬ್ಬ ಗಂಡನಿಗೆ ಪ್ರಾಮುಖ್ಯವಾಗಿರುವ ಒಂದು ವಿಷಯವು ಒಬ್ಬ ಹೆಂಡತಿಗೆ ಅಷ್ಟೇ ಪ್ರಾಮುಖ್ಯವಾಗಿಲ್ಲದಿರಬಹುದು, ಮತ್ತು ಒಬ್ಬ ಹೆಂಡತಿಯು ಇಷ್ಟಪಡುವ ವಿಷಯವು ಗಂಡನು ಇಷ್ಟಪಡುವ ವಿಷಯವಾಗಿಲ್ಲದಿರಬಹುದು. ಆದರೆ ಎಷ್ಟರ ವರೆಗೆ ಅವು ಯೆಹೋವನ ನಿಯಮ ಮತ್ತು ಮೂಲತತ್ವಗಳ ಮೇರೆಗಳೊಳಗೆ ಇರುತ್ತವೆಯೊ ಅಷ್ಟರ ವರೆಗೆ, ಪ್ರತಿಯೊಬ್ಬರು ಇನ್ನೊಬ್ಬರ ಅಭಿಪ್ರಾಯಗಳನ್ನೂ ಆಯ್ಕೆಗಳನ್ನೂ ಗೌರವಿಸಬೇಕು. (1 ಪೇತ್ರ 2:16; ಹೋಲಿಸಿ ಫಿಲೆಮೋನ 14.) ಅಲ್ಲದೆ, ಬಹಿರಂಗವಾಗಿಯಾಗಲಿ ಖಾಸಗಿಯಾಗಿಯಾಗಲಿ, ಇನ್ನೊಬ್ಬನನ್ನು ಹೀನೈಸುವ ಹೇಳಿಕೆಗಳ ಅಥವಾ ಚೇಷ್ಟೆಗಳ ಗುರಿಯನ್ನಾಗಿ ಮಾಡದಿರುವ ಮೂಲಕ, ಒಬ್ಬರು ಇನ್ನೊಬ್ಬರ ಘನತೆಯನ್ನು ಗೌರವಿಸಬೇಕು.
10 ಹೌದು, ದೇವರ ಹಾಗೂ ಒಬ್ಬರಿಗೆ ಇನ್ನೊಬ್ಬರ ಮೇಲಿನ ಪ್ರೀತಿ ಮತ್ತು ಪರಸ್ಪರ ಗೌರವ—ಇವು ಒಂದು ಯಶಸ್ವೀ ವಿವಾಹಕ್ಕಿರುವ ಎರಡು ಮಹತ್ವದ ಕೀಲಿ ಕೈಗಳಾಗಿವೆ. ಇವನ್ನು ವಿವಾಹಿತ ಜೀವನದ ಹೆಚ್ಚು ಪ್ರಾಮುಖ್ಯವಾದ ಕೆಲವು ಕ್ಷೇತ್ರಗಳಲ್ಲಿ ಹೇಗೆ ಅನ್ವಯಿಸಸಾಧ್ಯವಿದೆ?
ಕ್ರಿಸ್ತಸದೃಶ ತಲೆತನ
11. ಶಾಸ್ತ್ರೀಯವಾಗಿ, ವಿವಾಹದಲ್ಲಿ ತಲೆಯು ಯಾರು?
11 ಯಾವುದು ಪುರುಷನನ್ನು ಕುಟುಂಬದ ಯಶಸ್ವೀ ತಲೆಯಾಗಿ ಮಾಡಲಿತ್ತೊ ಅಂತಹ ಗುಣಗಳಿಂದ ಅವನನ್ನು ಸೃಷ್ಟಿಸಲಾಯಿತೆಂದು ಬೈಬಲು ನಮಗೆ ಹೇಳುತ್ತದೆ. ಈ ಕಾರಣದಿಂದ, ತನ್ನ ಹೆಂಡತಿ ಮತ್ತು ಮಕ್ಕಳ ಆತ್ಮಿಕ ಹಾಗೂ ಶಾರೀರಿಕ ಸುಸ್ಥಿತಿಗಾಗಿ ಪುರುಷನು ಯೆಹೋವನ ಮುಂದೆ ಹೊಣೆಗಾರನಾಗಲಿದ್ದನು. ಅವನಿಗೆ ಯೆಹೋವನ ಚಿತ್ತವನ್ನು ಪ್ರತಿಬಿಂಬಿಸುವ ಸಮತೆಯ ನಿರ್ಣಯಗಳನ್ನು ಮಾಡಲಿಕ್ಕಿತ್ತು ಮತ್ತು ದಿವ್ಯ ನಡತೆಯ ಉತ್ತಮ ಮಾದರಿಯನ್ನಿಡಲಿಕ್ಕಿತ್ತು. “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.” (ಎಫೆಸ 5:22, 23) ಆದರೂ, ಗಂಡನಿಗೂ ಒಬ್ಬ ತಲೆಯಾಗಿ, ಅವನ ಮೇಲೆ ಅಧಿಕಾರವಿರುವ ಒಬ್ಬನು ಇದ್ದಾನೆಂದು ಬೈಬಲು ಹೇಳುತ್ತದೆ. ಅಪೊಸ್ತಲ ಪೌಲನು ಬರೆದುದು: “ಆದರೂ ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ಆ ವಿವೇಕಿಯಾದ ಗಂಡನು ತನ್ನ ಸ್ವಂತ ತಲೆಯಾದ ಕ್ರಿಸ್ತ ಯೇಸುವನ್ನು ಅನುಕರಿಸುವ ಮೂಲಕ ತಲೆತನವನ್ನು ನಿರ್ವಹಿಸುವ ವಿಧವನ್ನು ಕಲಿಯುತ್ತಾನೆ.
12. ಯೇಸುವು ಅಧೀನತೆ ತೋರಿಸುವ ಮತ್ತು ತಲೆತನವನ್ನು ನಿರ್ವಹಿಸುವ ಕುರಿತು ಯಾವ ಉತ್ತಮ ತೆರದ ಮಾದರಿಯನ್ನು ಇಟ್ಟನು?
12 ಯೇಸುವಿಗೂ ಯೆಹೋವನೆಂಬ ಒಬ್ಬ ತಲೆಯಿದ್ದಾನೆ ಮತ್ತು ಅವನು ಆತನಿಗೆ ಸಮಂಜಸವಾಗಿ ಅಧೀನನಾಗಿದ್ದಾನೆ. ಯೇಸು ಹೇಳಿದ್ದು: “ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸು”ತ್ತೇನೆ. (ಯೋಹಾನ 5:30) ಎಂತಹ ಉತ್ಕೃಷ್ಟವಾದೊಂದು ಮಾದರಿ! ಯೇಸುವು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ. (ಕೊಲೊಸ್ಸೆ 1:15) ಅವನು ಮೆಸ್ಸೀಯನಾದನು. ಅವನು ಅಭಿಷಿಕ್ತ ಕ್ರೈಸ್ತರ ಸಭೆಯ ತಲೆಯೂ ಸಕಲ ದೇವದೂತರ ಮೇಲೆ ದೇವರ ರಾಜ್ಯದ ನಿಯಮಿತ ಅರಸನೂ ಆಗಲಿದ್ದನು. (ಫಿಲಿಪ್ಪಿ 2:9-11; ಇಬ್ರಿಯ 1:4) ಇಂತಹ ಒಂದು ಘನತೆಯ ಸ್ಥಾನ ಮತ್ತು ಇಂತಹ ಉನ್ನತ ಪ್ರತೀಕ್ಷೆಗಳ ಹೊರತೂ, ಮನುಷ್ಯನಾದ ಯೇಸುವು ನಿರ್ದಯಿಯೂ ಮಣಿಯದವನೂ ಅಥವಾ ವಿಪರೀತ ಹಕ್ಕುಕೇಳಿಕೆಗಳನ್ನು ಮಾಡುವವನೂ ಆಗಿರಲಿಲ್ಲ. ಅವನು ತನ್ನ ಶಿಷ್ಯರಿಗೆ ಸತತವಾಗಿ, ಅವರು ಅವನಿಗೆ ವಿಧೇಯರಾಗಲೇಬೇಕೆಂದು ಜ್ಞಾಪಕ ಹುಟ್ಟಿಸುತ್ತಿದ್ದ ಕ್ರೂರ ಪ್ರಭುವಾಗಿರಲಿಲ್ಲ. ಯೇಸುವು, ವಿಶೇಷವಾಗಿ ಮನಗುಂದಿದವರ ಕಡೆಗೆ, ಪ್ರೀತಿಯುಳ್ಳವನೂ ಸಹಾನುಭೂತಿಯುಳ್ಳವನೂ ಆಗಿದ್ದನು. ಅವನು ಹೇಳಿದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮ [“ಪ್ರಾಣ,” NW]ಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:28-30) ಅವನ ಸಹವಾಸದಲ್ಲಿರುವುದು ಆನಂದಕಾರಕವಾಗಿತ್ತು.
13, 14. ಪ್ರೀತಿಸುವ ಒಬ್ಬ ಗಂಡನು ತನ್ನ ತಲೆತನವನ್ನು, ಯೇಸುವಿನ ಅನುಕರಣೆಯಲ್ಲಿ ಹೇಗೆ ನಿರ್ವಹಿಸುವನು?
13 ಒಂದು ಸಂತೋಷದ ಕುಟುಂಬ ಜೀವಿತವನ್ನು ಬಯಸುವ ಗಂಡನು ಯೇಸುವಿನ ಉತ್ತಮ ತೆರದ ಸ್ವಭಾವ ಲಕ್ಷಣಗಳನ್ನು ಪರಿಗಣಿಸುವುದು ಸಮರ್ಪಕವಾಗಿದೆ. ಒಬ್ಬ ಒಳ್ಳೆಯ ಗಂಡನು ನಿರ್ದಯನೂ ಸರ್ವಾಧಿಕಾರಿಯೂ ಆಗಿದ್ದು, ತನ್ನ ತಲೆತನವನ್ನು ತನ್ನ ಹೆಂಡತಿಯನ್ನು ಹೊಡೆಯಲು ಒಂದು ದೊಣ್ಣೆಯಂತೆ ತಪ್ಪಾಗಿ ಬಳಸುವುದಿಲ್ಲ. ಬದಲಾಗಿ, ಅವನು ಆಕೆಯನ್ನು ಪ್ರೀತಿಸಿ, ಮಾನಸಲ್ಲಿಸುತ್ತಾನೆ. ಯೇಸುವು “ದೀನ ಮನಸ್ಸುಳ್ಳವನು” ಆಗಿದ್ದರೆ, ಗಂಡನು ಹಾಗಿರಲು ಇನ್ನೂ ಹೆಚ್ಚಿನ ಕಾರಣಗಳಿವೆ, ಏಕೆಂದರೆ ಯೇಸುವಿಗೆ ಅಸದೃಶವಾಗಿ, ಅವನು ತಪ್ಪುಗಳನ್ನು ಮಾಡುತ್ತಾನೆ. ಅವನು ಹಾಗೆ ಮಾಡುವಾಗ ಅವನಿಗೆ ತನ್ನ ಹೆಂಡತಿಯ ಅರ್ಥೈಸುವಿಕೆಯು ಬೇಕು. ಆ ಕಾರಣದಿಂದ, ನಮ್ರನಾಗಿರುವ ಗಂಡನು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾನೆ—“ನಾನು ವಿಷಾದಿಸುತ್ತೇನೆ; ನೀನೇ ಸರಿ,” ಎಂಬ ಮಾತುಗಳನ್ನು ಹೇಳುವುದು ಕಷ್ಟವಾಗಬಹುದಾದರೂ ಕೂಡ. ಹೆಮ್ಮೆಯ ಮತ್ತು ಹಟಮಾರಿ ಗಂಡನಿಗಿಂತ ಅಭಿಮಾನ ಮಿತಿಯವನೂ ನಮ್ರನೂ ಆದ ಗಂಡನ ತಲೆತನವನ್ನು ಗೌರವಿಸುವುದನ್ನು ಒಬ್ಬ ಹೆಂಡತಿ ಹೆಚ್ಚು ಸುಲಭವಾಗಿ ಕಂಡುಕೊಳ್ಳುವಳು. ಪ್ರತಿಯಾಗಿ, ಗೌರವಶೀಲವುಳ್ಳ ಹೆಂಡತಿಯು ಸಹ ತಾನು ತಪ್ಪುಮಾಡುವಾಗ ಕ್ಷಮೆ ಯಾಚಿಸುತ್ತಾಳೆ.
14 ದೇವರು ಸ್ತ್ರೀಯನ್ನು, ಸಂತೋಷದ ವಿವಾಹಕ್ಕೆ ಸಹಾಯ ನೀಡಲು ಬಳಸಸಾಧ್ಯವಿರುವ ಉತ್ತಮ ತೆರದ ಗುಣಲಕ್ಷಣಗಳುಳ್ಳವಳಾಗಿ ಸೃಷ್ಟಿಸಿದನು. ವಿವೇಕಿಯಾದ ಗಂಡನು ಇದನ್ನು ಗುರುತಿಸಿ ಆಕೆಯನ್ನು ಅದುಮಿಡನು. ಅನೇಕ ಸ್ತ್ರೀಯರಿಗೆ, ಒಂದು ಕುಟುಂಬವನ್ನು ಪರಾಮರಿಸಲು ಮತ್ತು ಮಾನವ ಸಂಬಂಧಗಳನ್ನು ಪೋಷಿಸಲು ಅಗತ್ಯವಾಗಿರುವ ಸಹಾನುಭೂತಿ ಮತ್ತು ಸೂಕ್ಷ್ಮಸಂವೇದನೆಯು ಹೆಚ್ಚಿನ ಪ್ರಮಾಣದಲ್ಲಿರುವ ಪ್ರವೃತ್ತಿಯಿದೆ. ಸಾಮಾನ್ಯವಾಗಿ, ಸ್ತ್ರೀಯು ಮನೆಯನ್ನು ಜೀವಿಸಲು ಒಂದು ಆಹ್ಲಾದಕರವಾದ ಸ್ಥಳವಾಗಿ ಮಾಡುವುದರಲ್ಲಿ ತುಂಬ ಚತುರೆ. ಜ್ಞಾನೋಕ್ತಿ 31ನೆಯ ಅಧ್ಯಾಯದಲ್ಲಿ ವರ್ಣಿಸಲಾಗಿರುವ “ಸಮರ್ಥೆಯಾದ ಸತಿ” (NW)ಯಲ್ಲಿ ಅನೇಕ ಅದ್ಭುತಕರವಾದ ಗುಣಗಳೂ ಉತ್ಕೃಷ್ಟ ಸಾಮರ್ಥ್ಯಗಳೂ ಇದ್ದವು, ಮತ್ತು ಆಕೆಯ ಕುಟುಂಬವು ಅವುಗಳಿಂದ ಪೂರ್ಣ ಪ್ರಯೋಜನವನ್ನು ಪಡೆಯಿತು. ಏಕೆ? ಏಕೆಂದರೆ ಆಕೆಯ ಗಂಡನ ಹೃದಯವು ಆಕೆಯಲ್ಲಿ “ಭರವಸಪಡುವುದು.”—ಜ್ಞಾನೋಕ್ತಿ 31:10, 11.
15. ಒಬ್ಬ ಗಂಡನು ತನ್ನ ಹೆಂಡತಿಗಾಗಿ ಕ್ರಿಸ್ತಸದೃಶ ಪ್ರೀತಿ ಮತ್ತು ಗೌರವವನ್ನು ಹೇಗೆ ತೋರಿಸಬಲ್ಲನು?
15 ಕೆಲವು ಸಂಸ್ಕೃತಿಗಳಲ್ಲಿ ಗಂಡನ ಅಧಿಕಾರಕ್ಕೆ ವಿಪರೀತ ಪ್ರಾಶಸ್ತ್ಯಕೊಡಲಾಗುತ್ತದೆ, ಎಷ್ಟೆಂದರೆ ಅವನೊಂದಿಗೆ ಒಂದು ಪ್ರಶ್ನೆಯನ್ನು ಕೇಳುವುದು ಕೂಡ ಅಗೌರವವಾಗಿ ಪರಿಗಣಿಸಲ್ಪಡುತ್ತದೆ. ಅವನು ತನ್ನ ಹೆಂಡತಿಯನ್ನು ಅಧಿಕಾಂಶ ಒಬ್ಬ ದಾಸಿಯೋಪಾದಿ ಉಪಚರಿಸಬಹುದು. ತಲೆತನದ ಇಂತಹ ತಪ್ಪು ನಿರ್ವಹಣೆಯು ತನ್ನ ಹೆಂಡತಿಯೊಂದಿಗೆ ಮಾತ್ರವಲ್ಲ, ದೇವರೊಂದಿಗೂ ನ್ಯೂನ ಸಂಬಂಧವನ್ನು ಫಲಿಸುತ್ತದೆ. (1 ಯೋಹಾನ 4:20, 21ನ್ನು ಹೋಲಿಸಿರಿ.) ಇನ್ನೊಂದು ಪಕ್ಕದಲ್ಲಿ, ಕೆಲವು ಗಂಡಂದಿರು ಮುಂದಾಳುತ್ವವನ್ನು ತೆಗೆದುಕೊಳ್ಳುವುದನ್ನು ಅಸಡ್ಡೆಮಾಡಿ, ತಮ್ಮ ಹೆಂಡತಿಯರು ಮನೆವಾರ್ತೆಯ ಮೇಲೆ ದೊರೆತನ ಮಾಡುವಂತೆ ಬಿಡುತ್ತಾರೆ. ಕ್ರಿಸ್ತನಿಗೆ ಸಮಂಜಸವಾಗಿ ಅಧೀನನಾಗಿರುವ ಗಂಡನು ತನ್ನ ಹೆಂಡತಿಯನ್ನು ಶೋಷಿಸುವುದೂ ಇಲ್ಲ, ಆಕೆಯ ಘನತೆಯನ್ನು ಕಸಿದುಕೊಳ್ಳುವುದೂ ಇಲ್ಲ. ಬದಲಾಗಿ, ಅವನು ಯೇಸುವಿನ ಆತ್ಮತ್ಯಾಗಾತ್ಮಕ ಪ್ರೀತಿಯನ್ನು ಅನುಕರಿಸಿ, ಪೌಲನು ಸಲಹೆ ಕೊಟ್ಟಂತೆ ಮಾಡುತ್ತಾನೆ: “ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ, ನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತ ಮುಂದುವರಿಯಿರಿ.” (ಎಫೆಸ 5:25, NW) ಕ್ರಿಸ್ತ ಯೇಸು ತನ್ನ ಶಿಷ್ಯರನ್ನು ಎಷ್ಟು ಪ್ರೀತಿಸಿದನೆಂದರೆ, ಅವನು ಅವರಿಗಾಗಿ ಸತ್ತನು. ಒಬ್ಬ ಒಳ್ಳೆಯ ಗಂಡನು ಆ ಸ್ವಾರ್ಥರಹಿತ ಮನೋಭಾವವನ್ನು ಅನುಕರಿಸಲು ಪ್ರಯತ್ನಿಸುತ್ತಾ, ತನ್ನ ಹೆಂಡತಿಯಿಂದ ಹಕ್ಕುಕೇಳಿಕೆಯನ್ನು ಮಾಡುವ ಬದಲಿಗೆ ಅವಳ ಒಳಿತನ್ನು ಹುಡುಕುವನು. ಒಬ್ಬ ಗಂಡನು ಕ್ರಿಸ್ತನಿಗೆ ಅಧೀನನಾಗಿ, ಕ್ರಿಸ್ತಸದೃಶ ಪ್ರೀತಿ ಮತ್ತು ಗೌರವವನ್ನು ಪ್ರದರ್ಶಿಸುವಾಗ, ಅವನ ಹೆಂಡತಿಯು ಅವನಿಗೆ ತನ್ನನ್ನು ಅಧೀನಮಾಡಿಕೊಳ್ಳುವಂತೆ ಪ್ರಚೋದಿಸಲ್ಪಡುವಳು.—ಎಫೆಸ 5:28, 29, 33.
ಹೆಂಡತಿಸದೃಶ ಅಧೀನತೆ
16. ತನ್ನ ಗಂಡನೊಂದಿಗಿನ ಸಂಬಂಧದಲ್ಲಿ ಹೆಂಡತಿಯು ಯಾವ ಗುಣಗಳನ್ನು ಪ್ರದರ್ಶಿಸಬೇಕು?
16 ಆದಾಮನ ಸೃಷ್ಟಿಯಾಗಿ ಸ್ವಲ್ಪದರಲ್ಲಿ, “ಯೆಹೋವದೇವರು—ಮನುಷ್ಯನು ಒಂಟಿಗನಾಗಿರುವದು ಒಳ್ಳೆಯದಲ್ಲ; ಅವನಿಗೆ ಸರಿಬೀಳುವ ಸಹಕಾರಿ [“ಪರಿಪೂರಕ,” NW]ಯನ್ನು ಉಂಟುಮಾಡುವೆನು ಅಂದನು.” (ಆದಿಕಾಂಡ 2:18) ದೇವರು ಹವ್ವಳನ್ನು ಸ್ಪರ್ಧಿಯಾಗಿಯಲ್ಲ, “ಪರಿಪೂರಕ”ಳಾಗಿ ಸೃಷ್ಟಿಸಿದನು. ವಿವಾಹವು ಸ್ಪರ್ಧಿಗಳಾದ ಇಬ್ಬರು ಕ್ಯಾಪ್ಟನರು ಇರುವ ಒಂದು ಹಡಗಿನಂತಿರಬಾರದಿತ್ತು. ಗಂಡನು ಪ್ರೀತಿಪೂರ್ಣವಾದ ತಲೆತನವನ್ನು ನಿರ್ವಹಿಸಬೇಕಾಗಿತ್ತು, ಮತ್ತು ಹೆಂಡತಿಯು ಪ್ರೀತಿ, ಗೌರವ ಮತ್ತು ಮನಃಪೂರ್ವಕವಾದ ಅಧೀನತೆಯನ್ನು ತೋರಿಸಬೇಕಾಗಿತ್ತು.
17, 18. ಒಬ್ಬ ಹೆಂಡತಿಯು ತನ್ನ ಗಂಡನಿಗೆ ನಿಜವಾದ ಸಹಾಯಕಿಯಾಗಿರಸಾಧ್ಯವಿರುವ ಕೆಲವು ವಿಧಗಳಾವುವು?
17 ಆದರೂ ಒಬ್ಬ ಒಳ್ಳೆಯ ಹೆಂಡತಿಯು ಕೇವಲ ಅಧೀನಳಾಗಿರುವುದಷ್ಟೇಯಲ್ಲ. ಆಕೆ ನಿಜವಾದ ಸಹಾಯಕಳು, ತನ್ನ ಗಂಡನು ಮಾಡುವ ನಿರ್ಣಯಗಳನ್ನು ಬೆಂಬಲಿಸುವವಳಾಗಿರಲು ಪ್ರಯತ್ನಿಸುತ್ತಾಳೆ. ಅವನ ನಿರ್ಣಯಗಳೊಂದಿಗೆ ಆಕೆ ಸಮ್ಮತಿಸುವಾಗ ಅದು ಆಕೆಗೆ ಸುಲಭವೆಂಬುದು ನಿಶ್ಚಯ. ಆದರೆ, ಆಕೆ ಸಮ್ಮತಿಸದಿರುವಾಗಲೂ, ಆಕೆಯ ಕ್ರಿಯಾಶೀಲ ಬೆಂಬಲವು ಅವನ ನಿರ್ಣಯವು ಹೆಚ್ಚು ಯಶಸ್ವಿಕರವಾದ ಫಲಿತಾಂಶವನ್ನು ತರಲು ಸಹಾಯ ಮಾಡಬಲ್ಲದು.
18 ತನ್ನ ಗಂಡನು ಇತರ ವಿಧಗಳಲ್ಲಿಯೂ ಉತ್ತಮ ತಲೆಯಾಗಿರುವಂತೆ ಒಬ್ಬ ಹೆಂಡತಿಯು ಸಹಾಯ ಮಾಡಬಲ್ಲಳು. ಮುಂದಾಳುತ್ವವನ್ನು ತೆಗೆದುಕೊಳ್ಳುವ ಅವನ ಪ್ರಯತ್ನಗಳಲ್ಲಿ, ಅವನನ್ನು ಟೀಕಿಸುವ ಬದಲು ಅಥವಾ ಅವನು ಆಕೆಯನ್ನು ಎಂದಿಗೂ ತೃಪ್ತಿಪಡಿಸನು ಎಂದು ಅವನಿಗನಿಸುವಂತೆ ಮಾಡುವ ಬದಲು, ಆಕೆ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲಳು. ತನ್ನ ಗಂಡನೊಂದಿಗೆ ಸಕಾರಾತ್ಮಕ ವಿಧದಲ್ಲಿ ವ್ಯವಹರಿಸುವಾಗ, “ಸಾತ್ವಿಕವಾದ ಶಾಂತಮನಸ್ಸು . . . ದೇವರ ದೃಷ್ಟಿ”—ತನ್ನ ಗಂಡನ ದೃಷ್ಟಿಯಲ್ಲಿ ಮಾತ್ರವಲ್ಲ—“ಬಹು ಬೆಲೆಯುಳ್ಳದ್ದು,” ಎಂದು ಆಕೆ ನೆನಪಿನಲ್ಲಿಡಬೇಕು. (1 ಪೇತ್ರ 3:3, 4; ಕೊಲೊಸ್ಸೆ 3:12) ಗಂಡನು ವಿಶ್ವಾಸಿಯಾಗಿಲ್ಲದಿರುವುದಾದರೆ ಆಗೇನು? ಅವನು ವಿಶ್ವಾಸಿಯಾಗಿರಲಿ, ಇಲ್ಲದಿರಲಿ, ಶಾಸ್ತ್ರಗಳು ಹೆಂಡತಿಯರನ್ನು, “ನಿಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನೀವು ಗಂಡಂದಿರನ್ನೂ ಮಕ್ಕಳನ್ನೂ ಪ್ರೀತಿಸುವವರೂ ದಮೆಯುಳ್ಳವರೂ ಪತಿವ್ರತೆಯರೂ ಮನೆಯಲ್ಲೇ ಕೆಲಸಮಾಡುವವರೂ ಸುಶೀಲೆಯರೂ ನಿಮ್ಮ ಗಂಡಂದಿರಿಗೆ ಅಧೀನರೂ ಆಗಿರ”ಲು ಪ್ರೋತ್ಸಾಹಿಸುತ್ತವೆ. (ತೀತ 2:4, 5) ಮನಸ್ಸಾಕ್ಷಿಯ ವಿಷಯಗಳು ಏಳುವಲ್ಲಿ, ಅದು “ಸಾತ್ವಿಕತ್ವದಿಂದಲೂ ಮನೋಭೀತಿ [“ಆಳವಾದ ಗೌರವ,” NW]ಯಿಂದಲೂ ನೀಡಲ್ಪಡುವಲ್ಲಿ, ಒಬ್ಬ ಅವಿಶ್ವಾಸಿ ಗಂಡನು ತನ್ನ ಹೆಂಡತಿಯ ಸ್ಥಾನವನ್ನು ಗೌರವಿಸುವುದು ಹೆಚ್ಚು ಸಂಭವನೀಯ. ಕೆಲವು ಅವಿಶ್ವಾಸಿ ಗಂಡಂದಿರು, “[ಹೆಂಡತಿಯರು] ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು . . . ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ [ಅವರ] ನಡತೆಯಿಂದಲೇ ಸನ್ಮಾರ್ಗಕ್ಕೆ” ಬಂದಿದ್ದಾರೆ.—1 ಪೇತ್ರ 3:1, 2, 15; 1 ಕೊರಿಂಥ 7:13-16.
19. ದೇವರ ನಿಯಮವನ್ನು ಉಲ್ಲಂಘಿಸುವಂತೆ ಗಂಡನು ತನ್ನ ಹೆಂಡತಿಯನ್ನು ಕೇಳಿಕೊಳ್ಳುವುದಾದರೆ ಆಗೇನು?
19 ದೇವರಿಂದ ನಿಷೇಧಿಸಲ್ಪಟ್ಟಿರುವ ಯಾವುದೋ ವಿಷಯವನ್ನು ಮಾಡುವಂತೆ ಒಬ್ಬ ಗಂಡನು ತನ್ನ ಹೆಂಡತಿಗೆ ಕೇಳಿಕೊಳ್ಳುವುದಾದರೆ ಆಗೇನು? ಹಾಗಾಗುವಲ್ಲಿ, ದೇವರು ತನ್ನ ಪ್ರಧಾನ ಪ್ರಭು ಎಂಬುದನ್ನು ಆಕೆ ಜ್ಞಾಪಿಸಿಕೊಳ್ಳತಕ್ಕದ್ದು. ದೇವರ ನಿಯಮವನ್ನು ಉಲ್ಲಂಘಿಸುವಂತೆ ಅಧಿಕಾರಿಗಳು ಕೇಳಿಕೊಂಡಾಗ ಅಪೊಸ್ತಲರು ಏನು ಮಾಡಿದರೊ ಅದನ್ನು ಆಕೆ ಒಂದು ಮಾದರಿಯಾಗಿ ತೆಗೆದುಕೊಳ್ಳುತ್ತಾಳೆ. ಅ. ಕೃತ್ಯಗಳು 5:29 ಹೇಳುವುದು: “ಪೇತ್ರನೂ ಉಳಿದ ಅಪೊಸ್ತಲರೂ—ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಬೇಕಲ್ಲಾ” ಎಂದು ಹೇಳಿದರು.
ಒಳ್ಳೆಯ ಸಂವಾದ
20. ಪ್ರೀತಿ ಮತ್ತು ಗೌರವವು ಅತ್ಯಗತ್ಯವಾಗಿರುವ ಒಂದು ಪ್ರಧಾನ ಕ್ಷೇತ್ರವು ಯಾವುದು?
20 ಪ್ರೀತಿ ಮತ್ತು ಗೌರವವು ವಿವಾಹದ ಇನ್ನೊಂದು ಕ್ಷೇತ್ರ—ಸಂವಾದ—ದಲ್ಲಿ ಅಗತ್ಯ. ಪ್ರೀತಿಸುವ ಗಂಡನು ತನ್ನ ಹೆಂಡತಿಯೊಂದಿಗೆ ಆಕೆಯ ಚಟುವಟಿಕೆಗಳು, ಆಕೆಯ ಸಮಸ್ಯೆಗಳು, ವಿವಿಧ ವಿಷಯಗಳ ಕುರಿತಾದ ಆಕೆಯ ಅಭಿಪ್ರಾಯಗಳ—ಬಗೆಗೆ ಸಂಭಾಷಿಸುವನು. ಆಕೆಗೆ ಇದರ ಅಗತ್ಯವಿದೆ. ತನ್ನ ಹೆಂಡತಿಯೊಂದಿಗೆ ಮಾತನಾಡಲು ಸಮಯವನ್ನು ತೆಗೆದುಕೊಂಡು, ಆಕೆ ಹೇಳುವುದಕ್ಕೆ ನಿಜವಾಗಿ ಕಿವಿಗೊಡುವ ಗಂಡನು ಆಕೆಗಾಗಿ ಪ್ರೀತಿ ಮತ್ತು ಗೌರವವನ್ನು ಪ್ರದರ್ಶಿಸುತ್ತಾನೆ. (ಯಾಕೋಬ 1:19) ತಮ್ಮ ಗಂಡಂದಿರು ತಮ್ಮೊಂದಿಗೆ ಸಂಭಾಷಿಸುವುದರಲ್ಲಿ ತೀರ ಕೊಂಚ ಸಮಯವನ್ನು ಕಳೆಯುತ್ತಾರೆಂದು ಕೆಲವು ಹೆಂಡತಿಯರು ಆಪಾದಿಸುತ್ತಾರೆ. ಅದು ವಿಷಾದಕರ. ಈ ಬಿಡುವಿಲ್ಲದ ಸಮಯಗಳಲ್ಲಿ, ಗಂಡಂದಿರು ಮನೆಯ ಹೊರಗೆ ದೀರ್ಘ ತಾಸುಗಳ ವರೆಗೆ ಕೆಲಸವನ್ನು ಮಾಡಬಹುದೆಂಬುದು ನಿಜ, ಮತ್ತು ಆರ್ಥಿಕ ಪರಿಸ್ಥಿತಿಗಳ ಫಲವಾಗಿ ಕೆಲವು ಹೆಂಡತಿಯರೂ ಉದ್ಯೋಗದಲ್ಲಿರಬಹುದು. ಆದರೆ ವಿವಾಹಿತ ದಂಪತಿಗಳು ಒಬ್ಬರು ಇನ್ನೊಬ್ಬರಿಗೆ ಸಮಯವನ್ನು ಮೀಸಲಾಗಿಡಬೇಕು. ಇಲ್ಲದಿರುವಲ್ಲಿ ಅವರು ಪರಸ್ಪರ ಸ್ವತಂತ್ರರಾಗಿ ಪರಿಣಮಿಸಬಹುದು. ಅವರು ವಿವಾಹದ ಏರ್ಪಾಡಿನ ಹೊರಗೆ ಸಹಾನುಭೂತಿಯ ಒಡನಾಟವನ್ನು ಹುಡುಕುವಂತೆ ನಿರ್ಬಂಧಕ್ಕೊಳಗಾಗಿದ್ದೇವೆಂದು ಭಾವಿಸುವಲ್ಲಿ, ಅದು ಗಂಭೀರವಾದ ಸಮಸ್ಯೆಗಳಿಗೆ ನಡೆಸಬಲ್ಲದು.
21. ಸಮಂಜಸವಾದ ಮಾತು ಒಂದು ವಿವಾಹವನ್ನು ಸಂತೋಷವಾಗಿಡಲು ಹೇಗೆ ಸಹಾಯ ಮಾಡುವುದು?
21 ಹೆಂಡತಿಯರೂ ಗಂಡಂದಿರೂ ಸಂವಾದ ಮಾಡುವ ವಿಧವು ಪ್ರಾಮುಖ್ಯ. “ಸವಿನುಡಿಯು . . . ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.” (ಜ್ಞಾನೋಕ್ತಿ 16:24) ಒಬ್ಬ ಸಂಗಾತಿಯು ವಿಶ್ವಾಸಿಯಾಗಿರಲಿ, ಇಲ್ಲದಿರಲಿ, “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ,” ಅಂದರೆ, ಉತ್ತಮ ರುಚಿಯದ್ದಾಗಿರಲಿ ಎಂಬ ಬೈಬಲ್ ಸಲಹೆಯು ಅನ್ವಯಿಸುತ್ತದೆ. (ಕೊಲೊಸ್ಸೆ 4:6) ಒಬ್ಬನು ಕಷ್ಟಕರವಾದ ದಿನವೊಂದನ್ನು ಕಳೆದಿರುವಾಗ, ಒಬ್ಬನ ಸಂಗಾತಿಯಿಂದ ದಯೆಯ, ಸಹಾನುಭೂತಿಯ ಕೆಲವು ಮಾತುಗಳು ತುಂಬ ಒಳಿತನ್ನು ಮಾಡಬಲ್ಲವು. “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” (ಜ್ಞಾನೋಕ್ತಿ 25:11) ಸ್ವರದ ನಾದ ಮತ್ತು ಪದಗಳ ಆಯ್ಕೆ ಅತಿ ಪ್ರಾಮುಖ್ಯ. ಉದಾಹರಣೆಗಾಗಿ, ಕೋಪಗೊಂಡ, ಹಕ್ಕುಕೇಳಿಕೆಯ ಧ್ವನಿಯಲ್ಲಿ ಒಬ್ಬರು ಇನ್ನೊಬ್ಬರಿಗೆ, “ಬಾಗಿಲು ಮುಚ್ಚು!” ಎಂದು ಹೇಳಬಹುದು. ಆದರೆ, “ದಯವಿಟ್ಟು ಬಾಗಿಲು ಮುಚ್ಚುವಿಯಾ?” ಎಂದು ಶಾಂತವಾದ, ಅರ್ಥೈಸುವ ಸ್ವರದಲ್ಲಿ ಹೇಳಿರುವ ಮಾತುಗಳು ಅವೆಷ್ಟು ಹೆಚ್ಚು “ರಸವತ್ತಾಗಿ” ಇರುತ್ತವೆ.
22. ಒಳ್ಳೆಯ ಸಂವಾದವನ್ನು ಕಾಪಾಡಿಕೊಳ್ಳಲು ದಂಪತಿಗಳಿಗೆ ಯಾವ ಮನೋಭಾವಗಳು ಅಗತ್ಯ?
22 ನಯವಾಗಿ ನುಡಿಯಲ್ಪಟ್ಟ ಮಾತುಗಳು, ವಿನಯಶೀಲ ಮುಖಭಾವಗಳು ಮತ್ತು ಹಾವಭಾವಗಳು, ದಯೆ, ಅರ್ಥಮಾಡಿಕೊಳ್ಳುವಿಕೆ ಮತ್ತು ಸೌಮ್ಯತೆಯಿರುವಲ್ಲಿ, ಒಳ್ಳೆಯ ಸಂವಾದವು ಏಳಿಗೆ ಹೊಂದುತ್ತದೆ. ಒಳ್ಳೆಯ ಸಂವಾದವನ್ನು ಕಾಪಾಡಿಕೊಳ್ಳಲು ಕಠಿನವಾಗಿ ಶ್ರಮಿಸುವುದರಿಂದಾಗಿ, ಗಂಡಹೆಂಡತಿಯರಿಬ್ಬರೂ ತಮ್ಮ ಅಗತ್ಯಗಳನ್ನು ತಿಳಿಯಪಡಿಸುವುದರಲ್ಲಿ ತಡೆಯಿಲ್ಲದವರಾಗಿರುವರು, ಮತ್ತು ನಿರಾಶೆ ಅಥವಾ ಒತ್ತಡದ ಸಮಯಗಳಲ್ಲಿ ಅವರು ಪರಸ್ಪರವಾಗಿ ದುಃಖಶಮನ ಮತ್ತು ಸಹಾಯದ ಉಗಮಗಳಾಗಿರಬಲ್ಲರು. “ಮನಗುಂದಿದವರನ್ನು ಧೈರ್ಯಪಡಿಸಿರಿ” ಎಂದು ದೇವರ ವಾಕ್ಯವು ಪ್ರೋತ್ಸಾಹಿಸುತ್ತದೆ. (1 ಥೆಸಲೊನೀಕ 5:14) ಗಂಡನು ಮನಗುಂದಿರುವ ಮತ್ತು ಹೆಂಡತಿಯೂ ಮನಗುಂದಿರುವ ಸಮಯಗಳಿರುವುವು. ಅವರು ಪರಸ್ಪರವಾಗಿ ಆತ್ಮೋನ್ನತಿ ಮಾಡಿಕೊಳ್ಳುತ್ತ ತಮ್ಮನ್ನು “ಧೈರ್ಯಪಡಿಸಿ”ಕೊಳ್ಳಬಲ್ಲರು.—ರೋಮಾಪುರ 15:2.
23, 24. ಭಿನ್ನಾಭಿಪ್ರಾಯಗಳಿರುವಾಗ ಪ್ರೀತಿ ಮತ್ತು ಗೌರವಗಳು ಹೇಗೆ ಸಹಾಯ ಮಾಡುವುವು? ಒಂದು ಉದಾಹರಣೆಯನ್ನು ಕೊಡಿರಿ.
23 ಪ್ರೀತಿ ಮತ್ತು ಗೌರವವನ್ನು ತೋರಿಸುತ್ತಿರುವ ವಿವಾಹ ಸಹಭಾಗಿಗಳು, ಪ್ರತಿಯೊಂದು ಭಿನ್ನಾಭಿಪ್ರಾಯವನ್ನು ಒಂದು ಪಂಥಾಹ್ವಾನವೆಂಬಂತೆ ಕಾಣರು. ಅವರು ಒಬ್ಬರು ಇನ್ನೊಬ್ಬರೊಡನೆ “ಕಟುವಾಗಿ ಕೋಪಿಸಿ”ಕೊಳ್ಳದವರಾಗಿರಲು ಕಠಿನವಾಗಿ ಕೆಲಸಮಾಡುವರು. (ಕೊಲೊಸ್ಸೆ 3:19, NW) “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು,” ಎಂಬುದನ್ನು ಇಬ್ಬರೂ ಜ್ಞಾಪಿಸಿಕೊಳ್ಳಬೇಕು. (ಜ್ಞಾನೋಕ್ತಿ 15:1) ತನ್ನ ಹೃತ್ಪೂರ್ವಕ ಅನಿಸಿಕೆಗಳನ್ನು ತೋಡಿಕೊಳ್ಳುವ ಒಬ್ಬ ಸಂಗಾತಿಯನ್ನು ಕೀಳ್ಮಾಡದಿರಲು ಅಥವಾ ಖಂಡಿಸದಿರಲು ಜಾಗ್ರತೆವಹಿಸಿರಿ. ಬದಲಾಗಿ, ಅಂತಹ ಅಭಿವ್ಯಕ್ತಿಗಳನ್ನು ಇತರರ ದೃಷ್ಟಿಕೋನದೊಳಗೆ ಅಂತರ್‌ದೃಷ್ಟಿಯನ್ನು ಪಡೆಯುವ ಒಂದು ಸಂದರ್ಭವನ್ನಾಗಿ ನೋಡಿರಿ. ಒಟ್ಟುಗೂಡಿ, ಭಿನ್ನತೆಗಳನ್ನು ಸರಿಪಡಿಸಲು ಮತ್ತು ಒಂದು ಸಾಮರಸ್ಯವುಳ್ಳ ಸಮಾಪ್ತಿಗೆ ಬರಲು ಪ್ರಯತ್ನಿಸಿರಿ.
24 ಸಾರಳು ತನ್ನ ಗಂಡನಾದ ಅಬ್ರಹಾಮನಿಗೆ, ಒಂದು ನಿರ್ದಿಷ್ಟ ಸಮಸ್ಯೆಗೆ ಪರಿಹಾರವನ್ನು ಶಿಫಾರಸ್ಸು ಮಾಡಿದ ಮತ್ತು ಅದು ಅವನ ಅನಿಸಿಕೆಗಳಿಗೆ ಸರಿಹೊಂದದಿದ್ದ ಸಂದರ್ಭವನ್ನು ಜ್ಞಾಪಿಸಿಕೊಳ್ಳಿರಿ. ಆದರೂ ದೇವರು ಅಬ್ರಹಾಮನಿಗೆ, “ಸಾರಳು ಹೇಳಿದಂತೆಯೇ ಮಾಡು” ಎಂದನು. (ಆದಿಕಾಂಡ 21:9-12) ಅಬ್ರಹಾಮನು ಮಾಡಿದನು ಮತ್ತು ಆಶೀರ್ವದಿತನಾದನು. ತತ್ಸಮಾನವಾಗಿ, ಒಬ್ಬ ಹೆಂಡತಿಯು ತನ್ನ ಗಂಡನ ಮನಸ್ಸಿನಲ್ಲಿರುವುದಕ್ಕಿಂತ ಭಿನ್ನವಾದುದನ್ನು ಸೂಚಿಸುವುದಾದರೆ, ಕಡಿಮೆಪಕ್ಷ ಅವನು ಕಿವಿಗೊಡಬೇಕು. ಅದೇ ಸಮಯದಲ್ಲಿ, ಒಬ್ಬ ಹೆಂಡತಿಯು ಸಂಭಾಷಣೆಯಲ್ಲಿ ಮೇಲುಗೈ ಹೊಂದಿರದೆ ತನ್ನ ಗಂಡನು ಹೇಳಲಿಕ್ಕಿರುವ ವಿಷಯಕ್ಕೆ ಕಿವಿಗೊಡಬೇಕು. (ಜ್ಞಾನೋಕ್ತಿ 25:24) ಗಂಡನಾಗಲಿ ಹೆಂಡತಿಯಾಗಲಿ ಎಲ್ಲ ಸಮಯಗಳಲ್ಲಿ ಅವನ ಅಥವಾ ಅವಳ ಸ್ವಂತ ಮಾರ್ಗವೇ ಆಗಬೇಕೆಂದು ಪಟ್ಟುಹಿಡಿಯುವುದು ಪ್ರೀತಿಯಿಲ್ಲದ್ದೂ ಅಗೌರವವುಳ್ಳದ್ದೂ ಆಗಿದೆ.
25. ವಿವಾಹಿತ ಜೀವಿತದ ಆಪ್ತ ಸಂಬಂಧಗಳಲ್ಲಿ ಒಳ್ಳೆಯ ಸಂವಾದವು ಸಂತೋಷಕ್ಕೆ ಹೇಗೆ ಸಹಾಯ ಮಾಡುವುದು?
25 ಒಬ್ಬ ದಂಪತಿಗಳ ಲೈಂಗಿಕ ಸಂಬಂಧದಲ್ಲಿ ಸಹ ಒಳ್ಳೆಯ ಸಂವಾದವು ಪ್ರಾಮುಖ್ಯ. ಸ್ವಾರ್ಥ ಮತ್ತು ಆತ್ಮಸಂಯಮದ ಕೊರತೆಯು ವಿವಾಹದಲ್ಲಿನ ಈ ಅತಿ ಆಪ್ತ ಸಂಬಂಧವನ್ನು ಗುರುತರವಾಗಿ ಹಾನಿಗೊಳಿಸಬಲ್ಲದು. ತಾಳ್ಮೆಯೊಂದಿಗೆ, ಮುಚ್ಚುಮರೆಯಿಲ್ಲದ ಸಂವಾದವು ಅತ್ಯಾವಶ್ಯಕ. ಪ್ರತಿಯೊಬ್ಬರು ನಿಸ್ವಾರ್ಥಭಾವದಿಂದ ಬೇರೆಯವರ ಹಿತವನ್ನು ಹುಡುಕುವಲ್ಲಿ, ಲೈಂಗಿಕ ಸಂಭೋಗವು ಗಂಭೀರವಾದ ಒಂದು ಸಮಸ್ಯೆಯಾಗಿರುವುದು ವಿರಳ. ಇತರ ವಿಷಯಗಳಂತೆಯೇ ಇದರಲ್ಲಿಯೂ, “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.”—1 ಕೊರಿಂಥ 7:3-5; 10:24.
26. ಪ್ರತಿಯೊಂದು ವಿವಾಹದಲ್ಲಿ ಏಳುಬೀಳುಗಳು ಇರುವುದಾದರೂ, ದೇವರ ವಾಕ್ಯಕ್ಕೆ ಕಿವಿಗೊಡುವುದು ವಿವಾಹಿತ ದಂಪತಿಗಳು ಸಂತೋಷವನ್ನು ಕಂಡುಕೊಳ್ಳುವಂತೆ ಹೇಗೆ ಸಹಾಯ ಮಾಡುವುದು?
26 ದೇವರ ವಾಕ್ಯವು ಎಷ್ಟು ಉತ್ತಮ ತೆರದ ಸಲಹೆಯನ್ನು ನೀಡುತ್ತದೆ! ಪ್ರತಿಯೊಂದು ವಿವಾಹದಲ್ಲಿ ಅದರದ್ದೇ ಆದ ಏಳುಬೀಳುಗಳಿವೆಯೆಂಬುದು ನಿಜ. ಆದರೆ ಜೊತೆಗಾರರು, ಬೈಬಲಿನಲ್ಲಿ ತಿಳಿಸಿರುವಂತೆ, ಯೆಹೋವನ ಆಲೋಚನೆಗೆ ಅಧೀನರಾಗುವುದಾದರೆ ಮತ್ತು ತಮ್ಮ ಸಂಬಂಧವನ್ನು ತಾತ್ವಿಕ ಪ್ರೀತಿ ಮತ್ತು ಗೌರವದ ಮೇಲೆ ಆಧಾರಿಸುವುದಾದರೆ, ಅವರು ತಮ್ಮ ವಿವಾಹವು ಚಿರಸ್ಥಾಯಿಯೂ ಸಂತೋಷಕರವೂ ಆಗಿರುವುದೆಂಬ ಭರವಸೆಯಿಂದಿರಸಾಧ್ಯವಿದೆ. ಹೀಗೆ ಅವರು ಪರಸ್ಪರವಾಗಿ ಮಾತ್ರವಲ್ಲ, ವಿವಾಹದ ಮೂಲಕರ್ತನಾದ ಯೆಹೋವ ದೇವರನ್ನೂ ಗೌರವಿಸುವರು.