‘ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಫಕ್ಕನೆ ಒಯ್ಯಲ್ಪಡುವದು’—ಹೇಗೆ?
ಸದ್ಯದ ದುಷ್ಟ ವ್ಯವಸ್ಥೆಯ ಅಂತ್ಯದ ಹಿನ್ನೆಣಿಕೆಯು ಮಾರ್ಪಡಿಸಲಾಗದಂತೆ ಮುಂದರಿಯುತ್ತಿದೆ. ಪ್ರತಿ ತಾಸು, ಪ್ರತಿ ನಿಮಿಷ, ಪ್ರತಿ ಸೆಕೆಂಡುಗಳ ಕಳೆಯುವಿಕೆಯೊಂದಿಗೆ, ಬಹಳ ಹಿಂದೆ ಪ್ರವಾದಿಸಿದ ಗಮನಾರ್ಹ ಘಟನೆಗಳನ್ನು ನಾವು ಹತ್ತರಿಸುತ್ತೇವೆ. ಇವುಗಳಲ್ಲಿ ಒಂದು ಆನಂದ ಪರವಶತೆ ಆಗಿರುವುದೊ? ಆಗಿರುವುದಾದರೆ, ಅದು ಯಾವಾಗ ಮತ್ತು ಹೇಗೆ ಸಂಭವಿಸುವುದು?
“ಆನಂದ ಪರವಶತೆ” ಎಂಬ ಪದವು ಬೈಬಲ್ನಲ್ಲಿ ಕಂಡುಬರುವುದಿಲ್ಲ. ಆದರೆ ಅದರಲ್ಲಿ ನಂಬುವವರು 1 ಥೆಸಲೊನೀಕ 4:17 ರಲ್ಲಿರುವ ಅಪೊಸ್ತಲ ಪೌಲನ ಮಾತುಗಳನ್ನು ಅವರ ನಂಬಿಕೆಗೆ ಬುನಾದಿಯಾಗಿ ಆಧಾರ ಕೊಡುತ್ತಾರೆ. ಈ ಶಾಸ್ತ್ರವಚನವನ್ನು ಅದರ ಪೂರ್ವಾಪರ ಸನ್ನಿವೇಶಗಳಲ್ಲಿ ನಾವು ಪರಿಶೀಲಿಸೋಣ. ಪೌಲನು ಬರೆದದ್ದು:
“ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವದು ನಮ್ಮ ಮನಸ್ಸಿಗೆ ಒಪ್ಪುವದಿಲ್ಲ. ಯೇಸು ಸತ್ತು ಜೀವಿತನಾಗಿ ಎದನ್ದೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. ನಾವು ಕರ್ತನ ಮಾತಿನ ಆಧಾರದಿಂದ ನಿಮಗೆ ಹೇಳುವದೇನಂದರೆ ಕರ್ತನು ಪ್ರತ್ಯಕ್ಷನಾಗುವವರೆಗೂ ಜೀವದಿಂದುಳಿದಿರುವ ನಾವು ನಿದ್ರೆಹೋದವರಿಗಿಂತ ಮುಂದಾಗುವದೇ ಇಲ್ಲ. ಕರ್ತನು ತಾನೇ ಆಜಾಘ್ಞೋಷದೊಡನೆಯೂ ಪ್ರಧಾನದೂತನ ಶಬ್ದದೊಡನೆಯೂ ದೇವರ ತುತೂರಿಧ್ವನಿಯೊಡನೆಯೂ ಆಕಾಶದಿಂದ ಇಳಿದುಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು. ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.”—1 ಥೆಸಲೊನೀಕ 4:13-18.
ಸುಮಾರು ಸಾ.ಶ. 50 ರಲ್ಲಿ ಥೆಸಲೊನೀಕದಲ್ಲಿನ ಸಭೆಗೆ ಪೌಲನು ಆತನ ಮೊದಲನೆಯ ಪತ್ರವನ್ನು ಬರೆದಾಗ ಆ ಸಭೆಯು ಸಾಪೇಕ್ಷವಾಗಿ ಹೊಸದಾಗಿತ್ತು. ಅವರಲ್ಲಿನ ಕೆಲವರು ಮರಣದಲ್ಲಿ “ನಿದ್ರೆಹೋಗಿರುವ” ದರಿಂದಾಗಿ ಸಭೆಯ ಸದಸ್ಯರು ದುಃಖದಿಂದಿದ್ದರು. ಆದರೂ, ಪೌಲನು ಬರೆದ ಸಂಗತಿಗಳು, ಥೆಸಲೊನೀಕದವರನ್ನು ಪುನರುತ್ಥಾನದ ನಿರೀಕ್ಷೆಯಿಂದ ಸಾಂತ್ವನಪಡಿಸಿತು.
ಕ್ರಿಸ್ತನ “ಸಾನ್ನಿಧ್ಯ”
ಆಗ ಸತ್ತಿರುವ ನಂಬಿಗಸ್ತ ಕ್ರೈಸ್ತರು ಪುನರುತ್ಥಾನ ಪಡೆಯುವರು ಎಂಬುದನ್ನು ದೃಢಪಡಿಸುವಾಗ, ಪೌಲನು ಇನ್ನೂ ಹೇಳಿದ್ದು: “ಕರ್ತನು ಪ್ರತ್ಯಕ್ಷ (ಸಾನ್ನಿಧ್ಯ NW) ನಾಗುವವರೆಗೂ ಜೀವದಿಂದುಳಿದಿರುವ ನಾವು ನಿದ್ರೆಹೋದವರಿಗಿಂತ ಮುಂದಾಗುವದೇ ಇಲ್ಲ.” (ವಚನ 15) ಕರ್ತನ “ಸಾನ್ನಿಧ್ಯ”ಕ್ಕೆ ಅಪೊಸ್ತಲನ ಉಲ್ಲೇಖವು ನಿಜಕ್ಕೂ ಗಮನಾರ್ಹವಾಗಿರುತ್ತದೆ. ಇಲ್ಲಿ ಮೂಲ ಭಾಷೆಯ ವಚನವು ಅಕ್ಷರಶಃ “ಮಗ್ಗುಲಲ್ಲಿರುವುದು” ಎಂದರ್ಥ ಕೊಡುವ ಪ-ರೂ-ಸಿ’ಯಾನ್ ಎಂಬ ಗ್ರೀಕ್ ಪದವನ್ನು ಬಳಸುತ್ತದೆ.
ವಿದೇಶಿ ರಾಷ್ಟ್ರದ ಮುಖ್ಯಸ್ಥನು ಒಂದು ದೇಶಕ್ಕೆ ಭೇಟಿಯನ್ನೀಡುವಾಗ, ಆತನ ಸಾನ್ನಿಧ್ಯದ ದಿನಾಂಕಗಳನ್ನು ಅಲ್ಲಿ ಸಾಮಾನ್ಯವಾಗಿ ಪ್ರಕಟಿಸಲಾಗುತ್ತದೆ. ಕರ್ತನಾದ ಯೇಸು ಕ್ರಿಸ್ತನ ಸಾನ್ನಿಧ್ಯದ ವಿಷಯದಲ್ಲಿಯೂ ಇದು ಸತ್ಯವಾಗಿತ್ತು. ಯೇಸುವಿನ ಸಾನ್ನಿಧ್ಯವು ಸ್ವರ್ಗೀಯ ರಾಜ್ಯ ಅಧಿಕಾರದಲ್ಲಿ 1914 ರಲ್ಲಿ ಆರಂಭವಾಯಿತೆಂದು ಪ್ರಾಮಾಣಿಕ ಹೃದಯದ ವಿದ್ಯಾರ್ಥಿಗಳಿಗೆ ಸುಸಂಗತವಾಗಿ ಕಾವಲಿನಬುರುಜು ಸಾದರಪಡಿಸಿದೆ. ಆ ವರ್ಷದಿಂದೀಚಿನ ಘಟನೆಗಳು ಯೇಸುವಿನ ಅದೃಶ್ಯ ಸಾನ್ನಿಧ್ಯಕ್ಕೆ ಸಾಕ್ಷ್ಯವನ್ನೀಯುತ್ತವೆ. (ಮತ್ತಾಯ 24:3-14) ಹೀಗಿರುವುದರಿಂದ ಕರ್ತನ ಸಾನ್ನಿಧ್ಯದ ಸಮಯದಲ್ಲಿ ಜೀವಿಸುವ ಕೆಲವು ಕ್ರೈಸ್ತರು “ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ . . . ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡು” ವದು ಎಂದು ಹೇಳುವುದರ ಮೂಲಕ, ಆ ಉಳಿದವರು ಕ್ರಿಸ್ತನನ್ನು ಎದುರುಗೊಳ್ಳುವರು, ಭೂಮಿಯ ವಾಯುಮಂಡಲದಲ್ಲಿ ಅಲ್ಲ, ಆದರೆ ಎಲ್ಲಿ ಯೇಸುವು ದೇವರ ಬಲಗಡೆಯಲ್ಲಿ ಆಸೀನನಾಗಿರುತ್ತಾನೋ ಆ ಅದೃಶ್ಯ ಸ್ವರ್ಗದ ಕ್ಷೇತ್ರದಲ್ಲಿ ಎಂದು ಪೌಲನ ಅರ್ಥವಾಗಿತ್ತು. (ಇಬ್ರಿಯರಿಗೆ 1:1-3) ಆದರೆ ಅವರ್ಯಾರು?
“ದೇವರ ಇಸ್ರಾಯೇಲ್ಯರು”
ಶಾಸ್ತ್ರವಚನಗಳು ಮಾಂಸಿಕ ಇಸ್ರಾಯೇಲ್ಯರ ಕುರಿತು ಬಹಳಷ್ಟು ಹೇಳುತ್ತದೆ ಮತ್ತು “ದೇವರ” ಆತ್ಮಿಕ “ಇಸ್ರಾಯೇಲ್ಯರ” ಕುರಿತು ಕೂಡ ಮಾತಾಡುತ್ತದೆ. ಯೆಹೂದ್ಯ ಮತ್ತು ಅನ್ಯ ವಿಶ್ವಾಸಿಗಳು ದೇವರ ಪವಿತ್ರ ಆತ್ಮ, ಯಾ ಕಾರ್ಯಕಾರಿ ಶಕ್ತಿಯ ಮೂಲಕ ಅಭಿಷೇಕಿಸಲ್ಪಟ್ಟ ಈ ಗುಂಪಿನ ಪೂರ್ಣ ಸಂಖ್ಯೆಯಾಗಿ ಮಾಡಲ್ಪಡಲಿದ್ದರು. (ಗಲಾತ್ಯ 6:16; ರೋಮಾಪುರ 11:25, 26; 1 ಯೋಹಾನ 2:20, 27) ಸ್ವರ್ಗದ ಚೀಯೋನ್ ಪರ್ವತದ ಮೇಲೆ, ಕುರಿಯಾದ ಯೇಸು ಕ್ರಿಸ್ತನೊಂದಿಗೆ ಚಿತ್ರಿಸಲ್ಪಟ್ಟ ಎಲ್ಲಾ ಆತ್ಮಿಕ ಇಸ್ರಾಯೇಲಿನ ಮೊತ್ತ ಸಂಖ್ಯೆಯು 1,44,000 ವೆಂದು ಪ್ರಕಟನೆ ಪುಸ್ತಕವು ತೋರಿಸುತ್ತದೆ. ಅವರು ಕ್ರಿಸ್ತನೊಂದಿಗೆ, ಸ್ವರ್ಗದಲ್ಲಿ ರಾಜರು ಮತ್ತು ಯಾಜಕರು ಆಗುವರು. (ಪ್ರಕಟನೆ 7:1-8; 14:1-4; 20:6) ಥೆಸಲೊನೀಕದಲ್ಲಿ ಮತ್ತು ಬೇರೆ ಕಡೆಗಳಲ್ಲಿ ಸಭೆಗಳೊಂದಿಗೆ ಜತೆಗೂಡಿದ್ದ ವ್ಯಕ್ತಿಗಳು, ಅವರ ಹಿನ್ನೆಲೆಯು ಯಾವುದೇ ಜನಾಂಗ ಯಾ ಕುಲದ್ದಾಗಿರಲಿ, ಅವರೊಳಗೆ ಸೇರಿಸಲ್ಪಟ್ಟಿರುವರು.—ಅ. ಕೃತ್ಯಗಳು 10:34, 35.
ಆತ್ಮಿಕ ಇಸ್ರಾಯೇಲಿನ ಯಾರೇ ನಂಬಿಗಸ್ತ ಸದಸ್ಯರು ಸ್ವರ್ಗದ ಬಹುಮಾನವನ್ನು ಪಡಕೊಳ್ಳುವ ಮೊದಲು, ಅವರು ನಿಯತ ಅನುಭವದಲ್ಲಿ ಭಾಗಿಗಳಾಗಬೇಕು. ಸ್ವರ್ಗದ ಜೀವಿತಕ್ಕೆ ಪುನರುತ್ಥಾನದ ಪೂರ್ವ, ಯಾತನಾ ಕಂಬದ ಮೇಲೆ ಯೇಸುವಿನ ಮರಣದ ಹಾಗೆಯೇ, ಸ್ವರ್ಗದ ನಿರೀಕ್ಷೆಯೊಂದಿಗಿನ ಕ್ರೈಸ್ತರು ಅವರ ಬಹುಮಾನವನ್ನು ಪಡಕೊಳ್ಳುವ ಮುಂಚೆ ಸಾಯಲೇ ಬೇಕು. (1 ಕೊರಿಂಥ 15:35, 36) ಸಾ.ಶ. ಮೊದಲನೇ ಶತಮಾನದಲ್ಲಿ ಜೀವಿಸಿದ್ದ ಆತ್ಮಿಕ ಇಸ್ರಾಯೇಲಿನ ಸದಸ್ಯರ ಕುರಿತೂ, ಮತ್ತು ಇಂದು ಜೀವಂತವಿರುವ ಅಂಥ ವ್ಯಕ್ತಿಗಳ ಕುರಿತೂ ಅದು ಸತ್ಯವಾಗಿರುವುದು.
“ಕರ್ತನ ಪ್ರತ್ಯಕ್ಷತೆಯ” ಬಗ್ಗೆ ತಿಳಿಸಿಯಾದ ಮೇಲೆ, ಮರಣಹೊಂದಿದ ನಂಬಿಗಸ್ತ ಆತ್ಮಿಕ ಇಸ್ರಾಯೇಲ್ಯರು ಅವರ ಸ್ವರ್ಗದ ಬಹುಮಾನವನ್ನು ಪಡಕೊಳ್ಳುವ ಸಮಯಕ್ಕೆ ಪೌಲನು ಸೂಚಿಸಿದನು. ಆತನು ಬರೆದದ್ದು: “ಕರ್ತನು ತಾನೇ ಆಜಾಘ್ಞೋಷದೊಡನೆಯೂ ಪ್ರಧಾನದೂತನ ಶಬ್ದದೊಡನೆಯೂ ದೇವರ ತುತೂರಿಧ್ವನಿಯೊಡನೆಯೂ ಆಕಾಶದಿಂದ ಇಳಿದುಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು.” (ವಚನ 16) ಆದುದರಿಂದ, ರಾಜನಾಗಿ ಯೇಸುವಿನ ಸಾನ್ನಿಧ್ಯವು ಆರಂಭವಾದ ಮೇಲೆ, ಸಮಗ್ರತೆ ಕಾಪಾಡಿಕೊಂಡವರಾಗಿ ಈಗಾಗಲೆ ಸತ್ತಿರುವ ಆತ್ಮಿಕ ಇಸ್ರಾಯೇಲಿನವರೊಂದಿಗೆ ಆರಂಭಿಸಿ, ಸ್ವರ್ಗದ ಪುನರುತ್ಥಾನವು ಪ್ರಾರಂಭವಾಗುವುದನ್ನು ನಾವು ನಿರೀಕ್ಷಿಸುತ್ತೇವೆ. (1 ಕೊರಿಂಥ 15:23) ಈಗ ಅವರು ಸ್ವರ್ಗದಲ್ಲಿ ಯೇಸುವಿನ ಪಕ್ಕದಲ್ಲಿದ್ದು ಸೇವಿಸುತ್ತಿದ್ದಾರೆ. ಆದರೆ ಭೂಮಿಯ ಮೇಲೆ ಇನ್ನೂ ಜೀವಿಸುವ ತುಲನಾತ್ಮಕವಾಗಿ ಕೊಂಚವೇ ಇರುವ ಅಭಿಷಿಕ್ತರ ವಿಷಯದಲ್ಲೇನು? ಅವರು ಆನಂದಪರವಶತೆಯನ್ನು ಕಾಯುತ್ತಾರೊ?
“ಫಕ್ಕನೆ ಒಯ್ಯಲ್ಪಡುವದು”—ಹೇಗೆ?
ಮರಣಹೊಂದಿದ ಅಭಿಷಿಕ್ತ ಕ್ರೈಸ್ತರನ್ನು ಸೂಚಿಸಿಯಾದ ಅನಂತರ, ಪೌಲನು ಕೂಡಿಸಿದ್ದು: “ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.” (ವಚನ 17) ಕ್ರಿಸ್ತನ ಸಾನ್ನಿಧ್ಯದ ಸಮಯಾವಧಿಯಲ್ಲಿ ಜೀವಿಸುವವರು “ಜೀವದಿಂದುಳಿದಿರುವ” ವರಾಗಿರುತ್ತಾರೆ. ಅವರು ಕರ್ತನಾದ ಯೇಸುವನ್ನು ಎದುರುಗೊಳ್ಳಲು “ಫಕ್ಕನೆ ಒಯ್ಯಲ್ಪಡುವರು.” ಆರಂಭದ ನಂಬಿಗಸ್ತ ಕ್ರೈಸ್ತರ ವಿಷಯದಲ್ಲಿದ್ದಂತೆಯೆ, ಅವರಿಗೆ ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಐಕ್ಯರಾಗುವುದಕ್ಕೆ ಮಾನವರಂತೆ ಮರಣವು ಅಗತ್ಯವಾಗಿದೆ.—ರೋಮಾಪುರ 8:17, 35-39.
ಕೊರಿಂಥದಲ್ಲಿನ ಕ್ರೈಸ್ತರಿಗೆ ಬರೆಯುವಲ್ಲಿ, ಪೌಲನು ನಮೂದಿಸಿದ್ದು: “ಸಹೋದರರೇ, ನಾನು ಹೇಳುವದೇನಂದರೆ—ರಕ್ತ ಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು; ಲಯವಾಗುವ ವಸ್ತು ನಿರ್ಲಯಪದವಿಗೆ ಬಾಧ್ಯವಾಗುವದಿಲ್ಲ. ಕೇಳಿರಿ, ಇದು ವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ—ನಾವೆಲ್ಲರೂ ನಿದ್ರೆ ಹೋಗುವದಿಲ್ಲ; ಆದರೆ ಕಡೇ ತುತೂರಿಯ ಧ್ವನಿ ಆಗುವಾಗ ನಾವೆಲ್ಲರು ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ ಮಾರ್ಪಡುವೆವು.” (1 ಕೊರಿಂಥ 15:50-52) ಕ್ರಿಸ್ತನ ಸಾನ್ನಿಧ್ಯಾವಧಿಯಲ್ಲಿ ನಂಬಿಗಸ್ತರಾಗಿ ಮರಣಹೊಂದುವಲ್ಲಿ, ಆತ್ಮಿಕ ಇಸ್ರಾಯೇಲಿನ ಉಳಿಕೆಯವರಲ್ಲಿ ಪ್ರತಿಯೊಬ್ಬನೂ ತನ್ನ ಸ್ವರ್ಗೀಯ ಬಹುಮಾನವನ್ನು ತತ್ಕ್ಷಣ ಪಡಕೊಳ್ಳುವನು. “ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ,” ಆತನು ಆತ್ಮಿಕ ಜೀವಿಯಾಗಿ ಪುನರುತ್ಥಾನ ಹೊಂದುತ್ತಾನೆ ಮತ್ತು ಯೇಸುವನ್ನು ಎದುರುಗೊಳ್ಳಲು ಮತ್ತು ಸ್ವರ್ಗದ ರಾಜ್ಯದಲ್ಲಿ ಸಹರಾಜನಾಗಿ ಸೇವೆ ಸಲ್ಲಿಸಲು “ಫಕ್ಕನೆ ಒಯ್ಯಲ್ಪಡುವ” ನು. ಆದರೆ ಯೆಹೋವನನ್ನು ಆರಾಧಿಸುವ ಇತರರೆಲ್ಲರ ಕುರಿತಾಗಿ ಏನು? ಈ ದುಷ್ಟ ವ್ಯವಸ್ಥೆಯ ಅಂತ್ಯವು ಹತ್ತರಿಸುತ್ತಿರುವಾಗ, ಅವರು ಕೂಡ ಸ್ವರ್ಗಕ್ಕೆ ಒಯ್ಯಲ್ಪಡುವರೊ?
ಪಾರಾಗುವಿಕೆ—ಆದರೆ ಆನಂದಪರವಶತೆಯಿಂದಾಗಿ ಅಲ್ಲ
ಯೇಸುವಿನ ರಾಜವೈಭವದ ಸಾನ್ನಿಧ್ಯವು 1914 ರಲ್ಲಿ ಆರಂಭವಾಗಿರುವುದರಿಂದ, ಈ ಲೋಕದ “ಅಂತ್ಯ ಕಾಲ” ದೊಳಗೂ ಈಗ ನಾವು ಆಳವಾಗಿ ಹೋಗಿದ್ದೇವೆ. (ದಾನಿಯೇಲ 12:4) ಪೌಲನು ಎಚ್ಚರಿಸಿದ್ದು: “ಸಹೋದರರೇ, ಈ ಸಂಗತಿಗಳು ನಡೆಯಬೇಕಾದ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯುವದು ಅವಶ್ಯವಿಲ್ಲ. ರಾತ್ರಿಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.” (1 ಥೆಸಲೊನೀಕ 5:1-3) ಆದರೆ ಎಚ್ಚರಿಕೆಯುಳ್ಳ ಕ್ರೈಸ್ತರು ತಪ್ಪಿಸಿಕೊಳ್ಳುವರು. ಹೇಗೆ?
“ಸಮಾಧಾನ ಮತ್ತು ಭದ್ರತೆ!” (NW) ಎಂಬ ಕೂಗು, ಯೇಸು “ಮಹಾ ಸಂಕಟ” ವೆಂದು ಕರೆದ ಅವಧಿಯ ಪೂರ್ವಗಾಮಿಯಾಗಿರುತ್ತದೆ. ಭೂಮಿಯ ಪ್ರಮೋದವನವೊಂದರಲ್ಲಿ ನಿತ್ಯವಾಗಿ ಜೀವಿಸುವ ನಿರೀಕ್ಷೆಯುಳ್ಳ ನಂಬಿಗಸ್ತರ “ಒಂದು ಮಹಾ ಸಮೂಹ” ವನ್ನು ವಿವರಿಸುತ್ತಾ ಪ್ರಕಟನೆ ಪುಸ್ತಕವು ಹೇಳುವುದು: “ಇವರು ಆ ಮಹಾ ಹಿಂಸೆಯನ್ನು ಅನುಭವಿಸಿ ಬಂದವರು; ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.” (ಪ್ರಕಟನೆ 7:9, 14; ಲೂಕ 23:43) ಇಲ್ಲ, ಅವರ ಪ್ರತೀಕ್ಷೆಯು ಆನಂದಪರವಶತೆಯದ್ದಾಗಿರುವುದಿಲ್ಲ. ಯುಕ್ತವಾಗಿ, ಇದೇ ಭೂಮಿಯ ಮೇಲೆ ಪಾರಾಗುವಿಕೆಯ ನಿರೀಕ್ಷೆ ಅವರಿಗಿದೆ. ಅದಕ್ಕಾಗಿ ತಯಾರಿಸುವಲ್ಲಿ, ಅವರು ಆತ್ಮಿಕವಾಗಿ ಎಚ್ಚತ್ತಿರಲೇಬೇಕು. ನೀವಿದನ್ನು ಹೇಗೆ ಮಾಡಬಲ್ಲಿರಿ ಮತ್ತು ಈ ವ್ಯವಸ್ಥೆಯ ಅಂತ್ಯವನ್ನು ಪಾರಾಗಬಲ್ಲಿರಿ?
ನೀವು ‘ವಿಶ್ವಾಸಪ್ರೀತಿಗಳೆಂಬ ವಜ್ರಕವಚವನ್ನು ಮತ್ತು ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಂಡು ಸ್ವಸ್ಥಚಿತ್ತರಾಗಿರುವ’ ಅಗತ್ಯ ಇದೆ. (1 ಥೆಸಲೊನೀಕ 5:6-8) ದೇವರ ಪ್ರವಾದನಾ ವಾಕ್ಯವಾದ ಬೈಬಲಿಗೆ ಕಿವಿಗೊಡುವ ಸಮಯ ಇದೇ ಆಗಿರುತ್ತದೆ. ಈ ವ್ಯವಸ್ಥೆಯ ಅಂತ್ಯದ ವರೆಗೆ ಸಮಯವು ಕಳೆದು ಹೋದಷ್ಟಕ್ಕೆ, ಪೌಲನ ಸಲಹೆಗೆ ಲಕ್ಷ್ಯ ಕೊಡಿರಿ: “ಪ್ರವಾದನೆಗಳನ್ನು ಹೀನೈಸಬೇಡಿರಿ; ಆದರೆ ಎಲ್ಲವನ್ನು ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:20, 21) ಹೀಗೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಅವರ ರಾಜ್ಯ ಸಭಾಗೃಹಗಳಿಗೆ ಸ್ವಾಗತಿಸುತ್ತಾರೆ, ಅಲ್ಲಿ ಬೈಬಲ್ ಪ್ರವಾದನೆಗಳ ಅಧ್ಯಯನಗಳಲ್ಲಿ ಮತ್ತು ದೇವರ ಪ್ರೇರಿತ ವಾಕ್ಯದ ಇತರ ವೈಶಿಷ್ಟ್ಯಗಳಲ್ಲಿ ನೀವು ಅವರೊಂದಿಗೆ ಭಾಗವಹಿಸಬಲ್ಲಿರಿ.
ನಿಷ್ಕೃಷ್ಟ ಜ್ಞಾನದಲ್ಲಿ ಮತ್ತು ನಂಬಿಕೆಯಲ್ಲಿ ನೀವು ಬೆಳೆಯತ್ತಿರುವಾಗ, ವೈರಿಗಳನ್ನು ವಿಶ್ವದಿಂದ ತೆಗೆದುಹಾಕುವ ಮತ್ತು ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಪುನಃಸ್ಥಾಪಿಸುವ ಯೆಹೋವ ದೇವರ ಉದ್ದೇಶದ ಪೂರೈಸುವಿಕೆಯನ್ನು ನೀವು ವಿವೇಚಿಸುವಿರಿ. ನಂಬಿಕೆಯನ್ನು ಪ್ರದರ್ಶಿಸುವುದರ ಮೂಲಕ, ಭೂಮಿಯ ಮೇಲೆ ಜೀವಕ್ಕಾಗಿ ಪುನರುತ್ಥಾನವಾಗುವ ಲಕ್ಷಗಟ್ಟಲೆ ಜನರನ್ನು ಪುನಃ ಸ್ವಾಗತಿಸುವ ಸುಯೋಗವುಳ್ಳವರಾಗಿ, ಮಹಾ ಸಂಕಟವನ್ನು ಪಾರಾಗುವವರೊಳಗೆ ನೀವೂ ಇರಬಹುದು. ಮತ್ತು ಯೇಸು ಕ್ರಿಸ್ತ ಮತ್ತು ಸ್ವರ್ಗೀಯ ಕ್ಷೇತ್ರದಲ್ಲಿ ಜೀವಕ್ಕಾಗಿ ಪುನರುತಿತ್ಥರಾಗುವುದರ ಮೂಲಕ ‘ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಫಕ್ಕನೆ ಒಯ್ಯಲ್ಪಟ್ಟವರಾದ’ ಆತನ ಸಹರಾಜರುಗಳ ಕೈಯಲ್ಲಿ ದೇವರ ರಾಜ್ಯದ ಅಡಿಯಲ್ಲಿ ಜೀವಿಸಲು ಎಂಥ ಒಂದು ಆನಂದವು ಅದಾಗಿರುವುದು!
ಹಾಗಾದರೆ, ಸಾರ್ವತ್ರಿಕವಾಗಿ ವಿಧೇಯ ಮಾನವಕುಲಕ್ಕೆ, ನಿಜ ಶಾಸ್ತ್ರಾಧಾರಿತ ನಿರೀಕ್ಷೆಯು ಏನಾಗಿದೆ? ಆನಂದಪರವಶತೆಯು ಅದಾಗಿರುವುದಿಲ್ಲ. ಬದಲಾಗಿ, ದೇವರ ರಾಜ್ಯದ ಆಳಿಕೆಯ ಅಡಿಯಲ್ಲಿ ಭೂಮಿಯ ಮೇಲೆ ನಿತ್ಯ ಜೀವವು ಅದಾಗಿರುತ್ತದೆ.
[ಪುಟ 7 ರಲ್ಲಿರುವ ಚಿತ್ರ]
ಮಹಾ ಸಂಕಟವನ್ನು ಪಾರಾಗುವವರು ಪುನರುತ್ಥಾನ ಹೊಂದಿದವರನ್ನು ಯೇಸುವಿನ ಮತ್ತು ಸ್ವರ್ಗಕ್ಕೆ “ಒಯ್ಯಲ್ಪಟ್ಟ” ವರ ಆಳಿಕೆಯಡಿಯಲ್ಲಿ ಪ್ರಮೋದವನ ಭೂಮಿಯ ಮೇಲೆ ಜೀವನಕ್ಕಾಗಿ ಸ್ವಾಗತಿಸುವರು