ಸಂಕಷ್ಟಗಳ ಸಮಯದಲ್ಲಿ ಆನಂದವನ್ನು ಕಾಪಾಡಿಕೊಳ್ಳಿರಿ
“[ಯೆಹೋವನನ್ನು] ಮರೆಹೊಕ್ಕವರೆಲ್ಲರು ಸಂತೋಷಪಡುವರು; [ಆತನು] ಕಾಪಾಡುವವನೆಂದು ಅವರು ಯಾವಾಗಲೂ ಆನಂದಧ್ವನಿಮಾಡುವರು.”—ಕೀರ್ತ. 5:12.
1, 2. (ಎ) ಇಂದು ಹೆಚ್ಚು ಸಂಕಟವನ್ನು ಉಂಟುಮಾಡುವ ಕೆಲವು ವಿಷಯಗಳು ಯಾವುವು? (ಬಿ) ಎಲ್ಲರ ಮೇಲೆ ಬರುವ ಸಂಕಟಗಳನ್ನಲ್ಲದೆ ನಿಜ ಕ್ರೈಸ್ತರು ಬೇರೇನನ್ನು ತಾಳಿಕೊಳ್ಳಬೇಕು?
ಯೆಹೋವನ ಸಾಕ್ಷಿಗಳು ಸಂಕಷ್ಟಗಳಿಂದ ವಿಮುಕ್ತರಲ್ಲ. ವಿಪತ್ತುಗಳು ಮಾನವರೆಲ್ಲರಿಗೆ ಬರುವಂತೆ ಅವರ ಮೇಲೆಯೂ ಬರುತ್ತವೆ. ದೇವಜನರಲ್ಲಿ ಅನೇಕರು ಪಾತಕ, ಯುದ್ಧ ಮತ್ತು ಇತರ ಅನ್ಯಾಯಗಳಿಗೆ ಗುರಿಯಾಗಿದ್ದಾರೆ. ನೈಸರ್ಗಿಕ ವಿಪತ್ತುಗಳು, ಬಡತನ, ಅಸ್ವಸ್ಥತೆ ಮತ್ತು ಮರಣಗಳು ಬಹಳ ಸಂಕಟವನ್ನು ತರುತ್ತವೆ. ಅಪೊಸ್ತಲ ಪೌಲನು ಸರಿಯಾಗಿಯೇ ಬರೆದದ್ದು: “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ ಎಂಬುದು ನಮಗೆ ತಿಳಿದಿದೆ.” (ರೋಮ. 8:22) ನಾವು ನಮ್ಮ ಸ್ವಂತ ಅಪರಿಪೂರ್ಣತೆಯಿಂದಲೂ ಕಷ್ಟಕ್ಕೆ ಗುರಿಯಾಗಿದ್ದೇವೆ. ಪುರಾತನ ಕಾಲದ ಅರಸ ದಾವೀದನಂತೆ ನಾವು ಸಹ, “ನನ್ನ ಅಪರಾಧಗಳು ನನ್ನನ್ನು ಮುಣುಗಿಸಿಬಿಟ್ಟವೆ; ಅವು ಹೊರಲಾರದಷ್ಟು ಭಾರವಾದ ಹೊರೆಯಂತೆ ನನ್ನನ್ನು ಅದಿಮಿಬಿಟ್ಟವೆ” ಎಂದು ಹೇಳಬಹುದು.—ಕೀರ್ತ. 38:4.
2 ಮಾನವರೆಲ್ಲರಿಗೆ ಸಾಮಾನ್ಯವಾಗಿರುವ ಸಂಕಟಗಳನ್ನಲ್ಲದೆ ನಿಜ ಕ್ರೈಸ್ತರು ಸಾಂಕೇತಿಕ ಯಾತನಾ ಕಂಬವನ್ನೂ ಹೊರಬೇಕಾಗಿದೆ. (ಲೂಕ 14:27) ಹೌದು, ಯೇಸುವಿನಂತೆ ಅವನ ಶಿಷ್ಯರು ದ್ವೇಷ ಮತ್ತು ಹಿಂಸೆಗೆ ಗುರಿಯಾಗುತ್ತಾರೆ. (ಮತ್ತಾ. 10:22, 23; ಯೋಹಾ. 15:20; 16:2) ಆದುದರಿಂದ ಕ್ರಿಸ್ತನನ್ನು ಹಿಂಬಾಲಿಸುವುದು ಶಕ್ತಿಯುತ ಪ್ರಯಾಸ ಮತ್ತು ತಾಳ್ಮೆಯನ್ನು ಅವಶ್ಯಪಡಿಸುತ್ತದೆ. ಆಗ ನಾವು ಹೊಸ ಲೋಕದ ಆಶೀರ್ವಾದಕ್ಕಾಗಿ ಮುನ್ನೋಡಸಾಧ್ಯವಿದೆ.—ಮತ್ತಾ. 7:13, 14; ಲೂಕ 13:24.
3. ದೇವರನ್ನು ಮೆಚ್ಚಿಸಲು ಕಷ್ಟದ ಜೀವನವನ್ನು ಕ್ರೈಸ್ತರು ಅನುಭವಿಸುವ ಅಗತ್ಯವಿಲ್ಲ ಎಂಬುದು ನಮಗೆ ಹೇಗೆ ತಿಳಿದಿದೆ?
3 ಹೀಗಿರಲಾಗಿ ನಿಜ ಕ್ರೈಸ್ತರು ಆನಂದ, ಸಂತೋಷಗಳಿಲ್ಲದ ಜೀವನವನ್ನು ಬೆನ್ನಟ್ಟುತ್ತಾರೆಂದು ಇದರ ಅರ್ಥವೊ? ಅಂತ್ಯ ಬರುವ ತನಕ ನಮ್ಮ ಜೀವನವು ಕೇವಲ ದುಃಖ ವೇದನೆಗಳಿಂದ ತುಂಬಿರಬೇಕೊ? ಯೆಹೋವನ ವಾಗ್ದಾನಗಳ ನೆರವೇರಿಕೆಯನ್ನು ಕಾಯುತ್ತಿರುವಾಗ ನಾವು ಸಂತೋಷವಾಗಿರುವಂತೆ ಆತನು ಬಯಸುತ್ತಾನೆಂಬುದು ಸ್ಪಷ್ಟ. ಪದೇ ಪದೇ ದೇವರ ವಾಕ್ಯವು ನಿಜ ಆರಾಧಕರನ್ನು ಸಂತೋಷವುಳ್ಳ ಜನರೆಂಬುದಾಗಿ ವರ್ಣಿಸುತ್ತದೆ. (ಯೆಶಾಯ 65:13, 14 ಓದಿ.) ಕೀರ್ತನೆ 5:12 ಹೇಳುವುದು: “[ಯೆಹೋವನನ್ನು] ಮರೆಹೊಕ್ಕವರೆಲ್ಲರು ಸಂತೋಷಪಡುವರು; [ಆತನು] ಕಾಪಾಡುವವನೆಂದು ಅವರು ಯಾವಾಗಲೂ ಆನಂದಧ್ವನಿಮಾಡುವರು.” ಹೌದು, ಸಂಕಷ್ಟಗಳ ಮಧ್ಯೆಯೂ ಬಹಳಷ್ಟು ಆನಂದ, ಮನಶ್ಶಾಂತಿ ಮತ್ತು ಸಂತೃಪ್ತಿಯನ್ನು ಅನುಭವಿಸಲು ಸಾಧ್ಯವಿದೆ. ನಾವು ನಮ್ಮ ಸಂಕಷ್ಟಗಳನ್ನು ಎದುರಿಸುವಾಗಲೂ ಆನಂದದಿಂದಿರುವಂತೆ ಬೈಬಲ್ ನಮಗೆ ಹೇಗೆ ಸಹಾಯಮಾಡಬಲ್ಲದು ಎಂಬುದನ್ನು ನಾವೀಗ ಪರಾಮರ್ಶಿಸೋಣ.
ಯೆಹೋವನು ‘ಸಂತೋಷದ ದೇವರು’
4. ದೇವರ ಚಿತ್ತವು ತಿರಸ್ಕರಿಸಲ್ಪಡುವಾಗ ಆತನಿಗೆ ಹೇಗನಿಸುತ್ತದೆ?
4 ಉದಾಹರಣೆಗಾಗಿ ಯೆಹೋವನನ್ನು ಪರಿಗಣಿಸಿರಿ. ಆತನು ಸರ್ವಶಕ್ತ ದೇವರಾಗಿರುವುದರಿಂದ ಇಡೀ ವಿಶ್ವವೇ ಆತನ ಅಧಿಕಾರದ ಕೆಳಗಿದೆ. ಆತನಿಗೆ ಯಾವುದರ ಕೊರತೆಯೂ ಇಲ್ಲ, ಯಾರ ಅಗತ್ಯವೂ ಇಲ್ಲ. ಯೆಹೋವನಿಗೆ ಅಪರಿಮಿತ ಶಕ್ತಿಯಿದ್ದರೂ ತನ್ನ ಒಬ್ಬ ಆತ್ಮಪುತ್ರನು ದಂಗೆಯೆದ್ದು ಸೈತಾನನಾದಾಗ ಆತನು ಸ್ವಲ್ಪ ನಿರಾಶೆಯನ್ನು ಅನುಭವಿಸಿದ್ದಿರಬೇಕು. ತದನಂತರ ದೇವದೂತರಲ್ಲಿ ಬೇರೆ ಕೆಲವರು ಆ ದಂಗೆಯಲ್ಲಿ ಸೇರಿಕೊಂಡಾಗ ಅದು ದೇವರನ್ನು ಬಾಧಿಸಿದ್ದಿರಬೇಕು. ಆತನ ಭೌಮಿಕ ಸೃಷ್ಟಿಯ ಉತ್ಕೃಷ್ಟ ಕೃತಿಯಾದ ಆದಾಮಹವ್ವರು ಆತನನ್ನು ತಿರಸ್ಕರಿಸಿದಾಗಲಂತೂ ದೇವರಿಗೆ ತುಂಬ ನೋವಾಗಿರಬೇಕು. ಅಂದಿನಿಂದ ಅವರ ಸಂತತಿಯ ಕೋಟ್ಯಾನುಕೋಟಿ ಜನರು ಯೆಹೋವನ ಅಧಿಕಾರವನ್ನು ತಿರಸ್ಕರಿಸಿದ್ದಾರೆ.—ರೋಮ. 3:23.
5. ವಿಶೇಷವಾಗಿ ಯಾವುದು ಯಹೋವನ ಮನನೋಯಿಸಿದೆ?
5 ಸೈತಾನನ ದಂಗೆಯು ಈಗಲೂ ಹೆಚ್ಚುತ್ತಾ ಬರುತ್ತಿದೆ. ಸುಮಾರು 6,000 ವರ್ಷಗಳಿಂದಲೂ ಯೆಹೋವನು ವಿಗ್ರಹಾರಾಧನೆ, ಹಿಂಸಾಚಾರ, ಕೊಲೆಪಾತ ಮತ್ತು ವಿಕೃತ ಲೈಂಗಿಕತೆಯ ಕೃತ್ಯಗಳನ್ನು ಗಮನಿಸುತ್ತಾ ಬಂದಿದ್ದಾನೆ. (ಆದಿ. 6:5, 6, 11, 12) ಅಷ್ಟಲ್ಲದೆ ಆತನು ಹೇಯವಾದ ಸುಳ್ಳು ಮತ್ತು ದೇವದೂಷಣೆಗಳನ್ನು ಕೇಳಿಸಿಕೊಂಡಿದ್ದಾನೆ. ದೇವರ ಸತ್ಯಾರಾಧಕರು ಕೂಡ ಕೆಲವೊಮ್ಮೆ ಆತನ ಮನನೋಯಿಸಿದ್ದಾರೆ. ಅಂಥ ಒಂದು ಸನ್ನಿವೇಶವನ್ನು ಬೈಬಲ್ ಈ ಮಾತುಗಳಿಂದ ವಿವರಿಸುತ್ತದೆ: “ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾಗಿ ಅಲ್ಲಿ ಆತನನ್ನು ನೋಯಿಸಿದರು. ಆತನನ್ನು ಪದೇಪದೇ ಪರೀಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು.” (ಕೀರ್ತ. 78:40, 41) ತನ್ನ ಜನರು ತನ್ನನ್ನು ತಿರಸ್ಕರಿಸುವಾಗ ಯೆಹೋವನಿಗಾಗುವ ನೋವು ನಿಶ್ಚಯವಾಗಿಯೂ ದೊಡ್ಡದು. (ಯೆರೆ. 3:1-10) ಕೆಟ್ಟ ಸಂಗತಿಗಳು ನಡೆಯುತ್ತಾ ಇವೆ ಎಂಬುದು ಸ್ಪಷ್ಟ ಮತ್ತು ಯೆಹೋವನಿಗೆ ಅವು ಕಡು ಬೇಗುದಿಯನ್ನು ತರುತ್ತವೆ.—ಯೆಶಾಯ 63:9, 10 ಓದಿ.
6. ದೇವರು ಸಂಕಟಕರವಾದ ಸನ್ನಿವೇಶಗಳನ್ನು ಹೇಗೆ ಎದುರಿಸಿದ್ದಾನೆ?
6 ಆದಾಗ್ಯೂ ನೋವು ನಿರಾಶೆಗಳು ಯೆಹೋವನನ್ನು ಕಂಗೆಡಿಸುವುದಿಲ್ಲ. ತೊಡಕುಗಳು ಎದ್ದಾಗಲೆಲ್ಲಾ ಯೆಹೋವನು ಅದರಿಂದ ಉಂಟಾಗುವ ಕೆಟ್ಟ ಫಲಿತಾಂಶಗಳನ್ನು ತಗ್ಗಿಸಲು ಹೆಜ್ಜೆಗಳನ್ನು ಆ ಕೂಡಲೆ ತೆಗೆದುಕೊಂಡಿದ್ದಾನೆ. ಕೊನೆಯಲ್ಲಿ ತನ್ನ ಉದ್ದೇಶವು ನೆರವೇರುವುದಕ್ಕೋಸ್ಕರ ಆತನು ದೀರ್ಘಾವಧಿಯ ಕ್ರಮಗಳನ್ನೂ ತೆಗೆದುಕೊಂಡಿದ್ದಾನೆ. ಈ ಎಲ್ಲ ಸಕಾರಾತ್ಮಕ ಕ್ರಿಯೆಗಳ ನೋಟದಲ್ಲಿ ಯೆಹೋವನು ತನ್ನ ಪರಮಾಧಿಕಾರದ ನಿರ್ದೋಷೀಕರಣಕ್ಕಾಗಿ ಮತ್ತು ಅದರಿಂದ ತನ್ನ ನಿಷ್ಠಾವಂತ ಆರಾಧಕರಿಗೆ ಸಿಗುವ ಆಶೀರ್ವಾದಗಳಿಗಾಗಿ ಸಂತೋಷದಿಂದ ಎದುರುನೋಡುತ್ತಿದ್ದಾನೆ. (ಕೀರ್ತ. 104:31) ಹೌದು, ಆತನ ಮೇಲೆ ಹೊರಿಸಲ್ಪಟ್ಟ ನಿಂದೆಗಳ ಹೊರತಾಗಿಯೂ ಯೆಹೋವನು ‘ಸಂತೋಷದ ದೇವರಾಗಿ’ ಉಳಿದಿದ್ದಾನೆ.—1 ತಿಮೊ. 1:11; ಕೀರ್ತ. 16:11.
7, 8. ವಿಷಯಗಳು ಕೆಟ್ಟುಹೋಗುವಾಗ ಯೆಹೋವನನ್ನು ನಾವು ಹೇಗೆ ಅನುಕರಿಸಬಹುದು?
7 ಸಮಸ್ಯೆಗಳನ್ನು ಪರಿಹರಿಸುವ ನಮ್ಮ ಸಾಮರ್ಥ್ಯದ ಸಂಬಂಧದಲ್ಲಿ ನಾವು ನಮ್ಮನ್ನು ಯೆಹೋವನಿಗೆ ಸರಿಹೋಲಿಸಲಾರೆವು ಎಂಬುದು ನಿಜ. ಆದರೂ ನಾವು ಸಂಕಷ್ಟಗಳನ್ನು ಎದುರಿಸುವಾಗ ಯೆಹೋವನನ್ನು ಅನುಕರಿಸಬಲ್ಲೆವು. ವಿಷಯಗಳು ಕೆಟ್ಟುಹೋಗುವಾಗ ಸ್ವಲ್ಪ ನಿರಾಶೆ ಉಂಟಾಗುವುದು ಸ್ವಾಭಾವಿಕವೇ. ಆದರೆ ಅದೇ ಸ್ಥಿತಿಯಲ್ಲಿ ನಾವು ಉಳಿಯುವ ಅಗತ್ಯವಿಲ್ಲ. ನಾವು ಯೆಹೋವನ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವುದರಿಂದ ನಮಗೆ ಯೋಚನಾ ಸಾಮರ್ಥ್ಯ ಮತ್ತು ವ್ಯಾವಹಾರಿಕ ವಿವೇಕವಿದೆ. ಇವು ನಮ್ಮ ಸಮಸ್ಯೆಗಳನ್ನು ಪರಿಶೀಲಿಸುವಂತೆ ಮತ್ತು ಸಾಧ್ಯವಾದಾಗಲೆಲ್ಲಾ ಧನಾತ್ಮಕವಾಗಿ ಕ್ರಿಯೆಗೈಯುವಂತೆ ನಮಗೆ ನೆರವಾಗುತ್ತವೆ.
8 ಕೆಲವು ವಿಷಯಗಳು ನಮ್ಮ ಹತೋಟಿಗೆ ಮೀರಿವೆ ಎಂಬುದನ್ನು ಅಂಗೀಕರಿಸುವುದು ನಮ್ಮ ಜೀವನದ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಸಹಾಯಮಾಡಬಲ್ಲ ಒಂದು ಪ್ರಾಮುಖ್ಯ ಅಂಶ. ಅಂಥ ವಿಷಯಗಳ ಕುರಿತು ಅತಿಯಾಗಿ ದುಃಖಪಡುವುದು ಹೆಚ್ಚಿನ ಆಶಾಭಂಗಕ್ಕೆ ನಡಿಸಿ ಸತ್ಯಾರಾಧನೆಯಲ್ಲಿರುವ ಅನೇಕ ಸಂತೋಷಗಳನ್ನು ನಮ್ಮಿಂದ ಕಸಿದುಕೊಳ್ಳಬಹುದು. ಒಂದು ಸಮಸ್ಯೆಯನ್ನು ಪರಿಹರಿಸಲು ನ್ಯಾಯಸಮ್ಮತ ಪ್ರಯತ್ನಗಳನ್ನು ಮಾಡಿದ ಬಳಿಕ ಅದರ ಕುರಿತು ಹೆಚ್ಚು ಚಿಂತಿಸದೆ ಹೆಚ್ಚು ಫಲದಾಯಕ ಪ್ರಯತ್ನಗಳ ಮೇಲೆ ಕಣ್ಣಿಡುವುದು ಉತ್ತಮ. ಈ ವಿಷಯವನ್ನು ಮುಂದಿನ ಬೈಬಲ್ ವೃತ್ತಾಂತಗಳು ಚೆನ್ನಾಗಿ ತೋರಿಸುತ್ತವೆ.
ನ್ಯಾಯಸಮ್ಮತತೆ ಅತ್ಯಾವಶ್ಯಕ
9. ಹನ್ನಳು ನ್ಯಾಯಸಮ್ಮತತೆಯನ್ನು ತೋರಿಸಿದ್ದು ಹೇಗೆ?
9 ಹನ್ನಳ ಮಾದರಿಯನ್ನು ಪರಿಗಣಿಸಿ. ಅದು ಮುಂದೆ ಪ್ರವಾದಿಯಾದ ಸಮುವೇಲನನ್ನು ಅವಳು ಹೆರುವುದಕ್ಕೆ ಮುಂಚೆ ನಡೆದ ಒಂದು ವಿಷಯ. ತನಗೆ ಮಕ್ಕಳಾಗದೇ ಇರುವುದಕ್ಕಾಗಿ ಅವಳು ಮನಗುಂದಿದ್ದಳು. ತನ್ನ ಬಂಜೆತನಕ್ಕಾಗಿ ಅವಳು ಪರಿಹಾಸ್ಯಕ್ಕೂ ನಿಂದೆಗೂ ಗುರಿಯಾಗಿದ್ದಳು. ಕೆಲವೊಮ್ಮೆ ಹನ್ನಳು ಎಷ್ಟು ನಿರಾಶೆಗೊಂಡಿದ್ದಳೆಂದರೆ ಏನೂ ತಿನ್ನದೆ ಅಳುತ್ತಾ ಇರುತ್ತಿದ್ದಳು. (1 ಸಮು. 1:2-7) ಯೆಹೋವನ ದೇವದರ್ಶನ ಗುಡಾರಕ್ಕೆ ಅವಳ ಸಂದರ್ಶನವೊಂದರಲ್ಲಿ ಹನ್ನಳು ‘ಬಹುದುಃಖದಿಂದ ಕಣ್ಣೀರುಸುರಿಸುತ್ತಾ ಯೆಹೋವನಿಗೆ ಪ್ರಾರ್ಥಿಸಿದಳು.’ (1 ಸಮು. 1:10, 11) ಹನ್ನಳು ಯೆಹೋವನಿಗೆ ತನ್ನ ಭಾವನೆಗಳನ್ನು ತೋಡಿಕೊಂಡ ನಂತರ ಮಹಾ ಯಾಜಕ ಏಲಿಯು ಅವಳನ್ನು ಸಮೀಪಿಸಿ, “ಸಮಾಧಾನದಿಂದ ಹೋಗು; ಇಸ್ರಾಯೇಲ್ ದೇವರು ನಿನ್ನ ಪ್ರಾರ್ಥನೆಯನ್ನು ನೆರವೇರಿಸಲಿ” ಅಂದನು. (1 ಸಮು. 1:17) ಈ ಹಂತದಲ್ಲಿ ತನ್ನಿಂದಾದದ್ದೆಲ್ಲವನ್ನು ಮಾಡಿದ್ದೇನೆಂದು ಹನ್ನಳಿಗೆ ಮನವರಿಕೆಯಾದದ್ದು ಖಂಡಿತ. ಆಕೆಯ ಬಂಜೆತನ ಅವಳ ಹತೋಟಿಗೆ ಮೀರಿದ ವಿಷಯವಾಗಿತ್ತು. ಆದುದರಿಂದ ಹನ್ನಳು ನ್ಯಾಯಸಮ್ಮತತೆಯನ್ನು ತೋರಿಸಿದಳು. ಅನಂತರ ಅವಳು “ಹೊರಟುಹೋಗಿ ಊಟಮಾಡಿದಳು. ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ.”—1 ಸಮು. 1:18.
10. ತನ್ನಿಂದ ಪರಿಹರಿಸಲಾಗದ ಒಂದು ಸಮಸ್ಯೆ ಎದುರಾದಾಗ ಪೌಲನು ಯಾವ ವಾಸ್ತವಿಕ ದೃಷ್ಟಿಕೋನವನ್ನು ತೋರಿಸಿದನು?
10 ಸಂಕಟವನ್ನು ಎದುರಿಸಿದಾಗ ಅಪೊಸ್ತಲ ಪೌಲನು ಸಹ ತದ್ರೀತಿಯ ದೃಷ್ಟಿಕೋನವನ್ನು ತೋರಿಸಿದನು. ಕಡು ಬೇಗುದಿಯನ್ನು ತಂದ ಒಂದು ಅಸ್ವಸ್ಥತೆಯು ಅವನನ್ನು ಬಾಧಿಸಿತ್ತು. ಅವನು ಅದನ್ನು “ಶರೀರದಲ್ಲಿ ಒಂದು ಮುಳ್ಳು” ಎಂದು ಕರೆದನು. (2 ಕೊರಿಂ. 12:7) ಆ ಅಸ್ವಸ್ಥತೆ ಏನೇ ಆಗಿದ್ದರೂ ಅದನ್ನು ಹೋಗಲಾಡಿಸಲು ಪೌಲನು ತನ್ನಿಂದಾದದ್ದೆಲ್ಲವನ್ನು ಮಾಡಿದ್ದನು. ಅದನ್ನು ನೀಗಿಸಲು ಯೆಹೋವನಿಗೆ ಪ್ರಾರ್ಥಿಸಿದನು ಸಹ. ಈ ವಿಷಯದ ಕುರಿತು ಎಷ್ಟು ಸಲ ಪೌಲನು ಯೆಹೋವನಿಗೆ ಬಿನ್ನೈಸಿದನು? ಮೂರು ಸಲ. ಮೂರು ಸಲ ಪ್ರಾರ್ಥಿಸಿದ ನಂತರವೂ ದೇವರು ಪೌಲನಿಗೆ ‘ಶರೀರದಲ್ಲಿನ ಮುಳ್ಳು’ ಅದ್ಭುತಕರವಾಗಿ ತೆಗೆಯಲ್ಪಡಲಾರದು ಎಂದು ತಿಳಿಸಿದನು. ಪೌಲನು ಇದಕ್ಕೆ ಕಿವಿಗೊಟ್ಟು ಯೆಹೋವನನ್ನು ಪೂರ್ಣವಾಗಿ ಸೇವಿಸುವುದರಲ್ಲಿ ಏಕಾಗ್ರಚಿತ್ತನಾಗಿ ಮುಂದುವರಿದನು.—2 ಕೊರಿಂಥ 12:8-10 ಓದಿ.
11. ಸಂಕಟಗಳನ್ನು ನಿಭಾಯಿಸುವುದರಲ್ಲಿ ಪ್ರಾರ್ಥನೆ ಮತ್ತು ಯಾಚನೆಗಳು ಯಾವ ಪಾತ್ರ ವಹಿಸುತ್ತವೆ?
11 ಈ ಉದಾಹರಣೆಗಳ ಅರ್ಥ ಸಂಕಟಕರ ವಿಷಯಗಳ ಕುರಿತು ಯೆಹೋವನಿಗೆ ಪ್ರಾರ್ಥಿಸುವುದನ್ನು ನಾವು ನಿಲ್ಲಿಸಬೇಕು ಎಂದಲ್ಲ. (ಕೀರ್ತ. 86:7) ಬದಲಾಗಿ ದೇವರ ವಾಕ್ಯವು ನಮ್ಮನ್ನು ವಿನಂತಿಸುವುದು: “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ.” ಇಂಥ ಯಾಚನೆ ಮತ್ತು ಬಿನ್ನಹಗಳಿಗೆ ಯೆಹೋವನು ಹೇಗೆ ಪ್ರತಿಕ್ರಿಯಿಸುವನು? ಬೈಬಲ್ ಹೇಳುವುದು: “ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.” (ಫಿಲಿ. 4:6, 7) ಹೌದು, ಯೆಹೋವನು ನಮ್ಮ ಸಮಸ್ಯೆಯನ್ನು ನೀಗಿಸಲಿಕ್ಕಿಲ್ಲ. ಆದರೆ ನಮ್ಮ ಮಾನಸಿಕ ಶಕ್ತಿಗಳನ್ನು ಕಾಯುವ ಮೂಲಕ ಆತನು ನಮ್ಮ ಪ್ರಾರ್ಥನೆಗಳಿಗೆ ಪ್ರತಿಕ್ರಿಯಿಸಬಲ್ಲನು. ಆದ್ದರಿಂದ ಒಂದು ಸಮಸ್ಯೆಯ ಬಗ್ಗೆ ಪ್ರಾರ್ಥನೆ ಮಾಡಿದ ಮೇಲೆ ಚಿಂತೆಗಳಿಂದ ಮುಳುಗಿ ಹೋಗುವುದರಲ್ಲಿರುವ ಹಾನಿಯನ್ನು ನಾವು ಗ್ರಹಿಸಶಕ್ತರಾಗಿ ಆ ಮೇಲೆ ಚಿಂತೆಮಾಡದೇ ಇರಬಹುದು.
ದೇವರ ಚಿತ್ತವನ್ನು ಅನುಸರಿಸುವುದರಲ್ಲಿ ಸಂತೋಷಿಸಿರಿ
12. ದೀರ್ಘಕಾಲ ನಿರುತ್ಸಾಹಗೊಂಡವರಾಗಿ ಇರುವುದು ಏಕೆ ಅಪಾಯಕರವಾಗಬಲ್ಲದು?
12 ಜ್ಞಾನೋಕ್ತಿ 24:10 ಹೇಳುವುದು: “ಇಕ್ಕಟ್ಟಿನ ದಿನಗಳಲ್ಲಿ ನೀನು ಬಳಲಿ ಹೋದರೆ ನಿನ್ನ ಬಲವು ಇಕ್ಕಟ್ಟೇ.” ಇನ್ನೊಂದು ಜ್ಞಾನೋಕ್ತಿ ಹೇಳುವುದು: “ಹೃದಯವೇದನೆಯಿಂದ ಆತ್ಮವು ಕುಂದಿಹೋಗುತ್ತದೆ.” (ಜ್ಞಾನೋ. 15:3, NIBV) ಕೆಲವು ಕ್ರೈಸ್ತರು ಎಷ್ಟು ಮನಗುಂದಿ ಹೋಗಿದ್ದಾರೆಂದರೆ ತಮ್ಮ ವೈಯಕ್ತಿಕ ಬೈಬಲ್ ವಾಚನವನ್ನು ಹಾಗೂ ದೇವರ ವಾಕ್ಯದ ಮನನವನ್ನು ಸಹ ಅವರು ನಿಲ್ಲಿಸಿಬಿಟ್ಟಿದ್ದಾರೆ. ಅವರ ಪ್ರಾರ್ಥನೆಗಳು ಕಾಟಾಚಾರದ ಪ್ರಾರ್ಥನೆಗಳಾಗಿ ಪರಿಣಮಿಸಿವೆ ಮತ್ತು ಅವರು ಜೊತೆ ಆರಾಧಕರಿಂದ ತಮ್ಮನ್ನು ಬೇರ್ಪಡಿಸಿಕೊಳ್ಳಲೂಬಹುದು. ಹೀಗೆ ದೀರ್ಘಕಾಲ ಮನಗುಂದಿದ ಸ್ಥಿತಿಯಲ್ಲಿ ಉಳಿಯುವುದು ಅಪಾಯಕಾರಿಯಾಗಿರಬಲ್ಲದು.—ಜ್ಞಾನೋ. 18:1, 14.
13. ನಿರುತ್ಸಾಹವನ್ನು ತೊಲಗಿಸಿ ಸ್ವಲ್ಪ ಮಟ್ಟಿಗಿನ ಆನಂದವನ್ನು ಕೊಡಲು ಸಹಾಯಕರವಾದ ಕೆಲವು ಚಟುವಟಿಕೆಗಳು ಯಾವುವು?
13 ಆದುದರಿಂದ ಜೀವಿತದಲ್ಲಿ ನಾವು ಸಂತೋಷ ಮತ್ತು ಆನಂದವನ್ನು ಪಡೆಯಬಲ್ಲ ಅಂಶಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಕಾರಾತ್ಮಕ ದೃಷ್ಟಿಕೋನವು ಸಹಾಯಕಾರಿ. ದಾವೀದನು ಬರೆದದ್ದು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು.” (ಕೀರ್ತ. 40:8) ನಮ್ಮ ಜೀವಿತದಲ್ಲಿ ಸಂಕಷ್ಟಗಳು ಬರುವಾಗ ನಮ್ಮ ಆರಾಧನೆಯ ಸ್ವಸ್ಥಕರ ರೂಢಿಯನ್ನು ನಾವು ಬಿಟ್ಟುಬಿಡಲು ಬಯಸಬಾರದು. ವಾಸ್ತವದಲ್ಲಿ ಸಂತೋಷ ತರುವ ಕೆಲಸದಲ್ಲಿ ಭಾಗವಹಿಸುವುದೇ ದುಃಖಕ್ಕೆ ಸಿದ್ಧೌಷದ! ತನ್ನ ವಾಕ್ಯದ ವಾಚನದಲ್ಲಿ ಮತ್ತು ಕ್ರಮವಾಗಿ ಅದರೊಳಗೆ ಇಣಿಕಿ ನೋಡುವುದರಲ್ಲಿ ಸಂತೋಷವನ್ನು ಮತ್ತು ಆನಂದವನ್ನು ಪಡೆಯಬಹುದು ಎಂದು ಯೆಹೋವನು ನಮಗನ್ನುತ್ತಾನೆ. (ಕೀರ್ತ. 1:1, 2; ಯಾಕೋ. 1:25) ಪವಿತ್ರ ಶಾಸ್ತ್ರಗ್ರಂಥದಿಂದ ಮತ್ತು ಕ್ರೈಸ್ತ ಕೂಟಗಳಿಂದ ನಾವು ಪಡೆಯುವ “ಕನಿಕರದ ಮಾತುಗಳು” ನಮ್ಮನ್ನು ಚೈತನ್ಯಗೊಳಿಸಿ ನಮ್ಮ ಹೃದಯವನ್ನು ಉಲ್ಲಾಸದಿಂದ ಹಿಗ್ಗಿಸಬಲ್ಲವು.—ಜ್ಞಾನೋ. 12:25; 16:24.
14. ಯೆಹೋವನಿಂದ ಯಾವ ಆಶ್ವಾಸನೆಯು ನಮಗಿಂದು ಸಂತೋಷವನ್ನು ತರುತ್ತದೆ?
14 ನಾವು ಆನಂದದಿಂದಿರಲು ದೇವರು ಅನೇಕ ಕಾರಣಗಳನ್ನು ನೀಡುತ್ತಾನೆ. ಆತನ ರಕ್ಷಣಾ ವಾಗ್ದಾನವು ನಿಶ್ಚಯವಾಗಿಯೂ ಸಂತೋಷದ ಪ್ರಧಾನ ಮೂಲ. (ಕೀರ್ತ. 13:5) ನಮಗೀಗ ಏನೇ ಸಂಭವಿಸುತ್ತಿರಲಿ ತನ್ನನ್ನು ಪ್ರಾಮಾಣಿಕತೆಯಿಂದ ಹುಡುಕುವವರಿಗೆ ಕೊನೆಯಲ್ಲಿ ದೇವರು ಪ್ರತಿಫಲವನ್ನೀಯುವನು ಎಂದು ನಮಗೆ ತಿಳಿದಿದೆ. (ಪ್ರಸಂಗಿ 8:12 ಓದಿ.) ಪ್ರವಾದಿ ಹಬಕ್ಕೂಕನು ಅಂಥ ಭರವಸೆಯನ್ನು ಸುಂದರವಾಗಿ ಹೀಗೆ ವ್ಯಕ್ತಪಡಿಸಿದನು: “ಆಹಾ, ಅಂಜೂರವು ಚಿಗುರದಿದ್ದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರವನ್ನು ಕೊಡದೆಹೋದರೂ ಹಿಂಡು ಹಟ್ಟಿಯೊಳಗಿಂದ ನಾಶವಾದರೂ ಮಂದೆಯು ಕೊಟ್ಟಿಗೆಗಳೊಳಗೆ ಇಲ್ಲದಿದ್ದರೂ ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.”—ಹಬ. 3:17, 18.
“ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು [ಸಂತೋಷಿತರು]”
15, 16. ಭವಿಷ್ಯದ ಆಶೀರ್ವಾದಗಳಿಗಾಗಿ ಕಾಯುತ್ತಿರುವಾಗ ನಾವು ಸವಿಯಬಲ್ಲ ದೇವರ ಕೆಲವು ಉಡುಗೊರೆಗಳನ್ನು ಹೆಸರಿಸಿ.
15 ನಮಗೆ ಕಾದಿರಿಸಲ್ಪಟ್ಟ ಆಶ್ಚರ್ಯಕರ ಭವಿಷ್ಯತ್ತಿಗಾಗಿ ಕಾಯುತ್ತಿರುವಾಗ ಯೆಹೋವನು ನಮಗೆ ಕೊಡುವ ಒಳ್ಳೆಯ ವಿಷಯಗಳನ್ನು ನಾವು ಆನಂದಿಸುವಂತೆ ಆತನು ಬಯಸುತ್ತಾನೆ. ಬೈಬಲ್ ಅನ್ನುವುದು: “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ [ಒಳ್ಳೇದನ್ನು ಮಾಡುವದಕ್ಕಿಂತ] ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.” (ಪ್ರಸಂ. 3:12, 13) ‘ಒಳ್ಳೇದನ್ನು ಮಾಡುವದರಲ್ಲಿ’ ಇತರರಿಗೆ ಸತ್ಕಾರ್ಯಗಳನ್ನು ಮಾಡುವುದೂ ಒಳಗೂಡಿದೆ. ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿದೆಯೆಂದು ಯೇಸು ಹೇಳಿದನು. ನಮ್ಮ ಸಂಗಾತಿ, ಮಕ್ಕಳು, ಹೆತ್ತವರು ಮತ್ತು ಇತರ ಸಂಬಂಧಿಕರಿಗೆ ತೋರಿಸುವ ದಯಾಪರ ಕ್ರಿಯೆಗಳು ಆಳವಾದ ಸಂತೃಪ್ತಿಯನ್ನು ತರುವವು. (ಜ್ಞಾನೋ. 3:27) ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರಿಗೆ ನಾವು ಕೋಮಲತೆ, ಅತಿಥಿಸತ್ಕಾರ ಮತ್ತು ಕ್ಷಮಾಪಣೆ ತೋರಿಸುವುದು ಸಹ ಹೆಚ್ಚಿನ ಸಂತೋಷವನ್ನು ತರುತ್ತದೆ ಮತ್ತು ಅದು ಯೆಹೋವನನ್ನು ಸಂತೋಷಗೊಳಿಸುತ್ತದೆ. (ಗಲಾ. 6:10; ಕೊಲೊ. 3:12-14; 1 ಪೇತ್ರ 4:8, 9) ಮಾತ್ರವಲ್ಲದೆ ಸ್ವತ್ಯಾಗದ ಆತ್ಮದೊಂದಿಗೆ ನಮ್ಮ ಶುಶ್ರೂಷೆಯನ್ನು ನೆರವೇರಿಸುವುದು ನಿಜವಾಗಿಯೂ ಪ್ರತಿಫಲದಾಯಕ.
16 ಮೇಲೆ ಉಲ್ಲೇಖಿಸಿದ ಪ್ರಸಂಗಿಯ ಮಾತುಗಳು ಜೀವಿತದ ಅತಿ ಸರಳ ಸುಖಗಳಾದ ಅನ್ನಪಾನಗಳನ್ನು ತೆಗೆದುಕೊಳ್ಳುವುದರ ಕುರಿತು ಹೇಳುತ್ತವೆ. ಹೌದು, ಪರೀಕ್ಷೆಗಳನ್ನು ಎದುರಿಸುವಾಗಲೂ ಯೆಹೋವನಿಂದ ನಮಗೆ ದೊರೆತಿರುವ ಯಾವುದೇ ಭೌತಿಕ ಉಡುಗೊರೆಗಳಲ್ಲಿ ನಾವು ಆನಂದವನ್ನು ಕಂಡುಕೊಳ್ಳಬಹುದು. ಅದಲ್ಲದೆ ಸುಂದರವಾದ ಸೂರ್ಯಾಸ್ತಮಾನ, ವೈಭವಯುತ ಭೂದೃಶ್ಯ, ಪ್ರಾಣಿಮರಿಗಳ ತುಂಟಾಟಿಕೆ ಮತ್ತು ನಿಸರ್ಗದ ಇತರ ವಿಸ್ಮಯಗಳನ್ನು ಆನಂದಿಸಲು ಕಾಸಿನ ಖರ್ಚಿಲ್ಲ. ಆದರೂ ಅವು ನಮ್ಮನ್ನು ಭಯಚಕಿತಗೊಳಿಸಿ ನಮಗೆ ಆನಂದವನ್ನು ತರಬಲ್ಲವು. ನಾವು ಈ ವಿಷಯಗಳ ಕುರಿತು ಯೋಚಿಸುವಾಗ ಯೆಹೋವನ ಕಡೆಗೆ ನಮಗಿರುವ ಪ್ರೀತಿಯು ಹೆಚ್ಚುತ್ತದೆ. ಏಕೆಂದರೆ ಸಕಲ ಸುವಸ್ತುಗಳನ್ನು ಕೊಡುವವನು ಆತನೇ.
17. ಸಂಕಷ್ಟಗಳಿಂದ ನಮಗೆ ಪೂರ್ಣ ಪರಿಹಾರವನ್ನು ಯಾವುದು ತರುವುದು, ಮತ್ತು ಅಷ್ಟರ ತನಕ ನಮಗೆ ಯಾವುದು ಸಾಂತ್ವನ ಕೊಡುತ್ತದೆ?
17 ಕಟ್ಟಕಡೆಗೆ, ದೇವರಲ್ಲಿ ನಮಗಿರುವ ಪ್ರೀತಿ, ಆತನ ಆಜ್ಞೆಗಳಿಗೆ ವಿಧೇಯತೆ, ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆ ಇವೆಲ್ಲವು ಅಪರಿಪೂರ್ಣ ಜೀವಿತದ ಸಂಕಷ್ಟಗಳಿಂದ ನಮಗೆ ಪೂರ್ಣ ಪರಿಹಾರವನ್ನು ತರಲಿವೆ ಮತ್ತು ಬಾಳುವ ಸಂತೋಷಕ್ಕೆ ನಡೆಸಲಿವೆ. (1 ಯೋಹಾ. 5:3) ಈ ಮಧ್ಯೆ ನಮ್ಮನ್ನು ಬಾಧಿಸುವ ಸಕಲ ವಿಷಯಗಳನ್ನು ಯೆಹೋವನು ಬಲ್ಲನು ಎಂದು ತಿಳಿಯುವುದರಲ್ಲಿ ನಾವು ಸಾಂತ್ವನವನ್ನು ಪಡೆಯಬಲ್ಲೆವು. ದಾವೀದನು ಬರೆದದ್ದು: “ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವದನ್ನು ನೋಡಿ ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.” (ಕೀರ್ತ. 31:7) ನಮ್ಮ ಮೇಲಣ ಪ್ರೀತಿಯಿಂದ ಪ್ರೇರಿತನಾಗಿ ಯೆಹೋವನು ನಮ್ಮನ್ನು ಸಂಕಷ್ಟದಿಂದ ರಕ್ಷಿಸಿ ಕಾಯುವನು.—ಕೀರ್ತ. 34:19.
18. ದೇವಜನರಲ್ಲಿ ಆನಂದವು ಏಕೆ ಪ್ರಧಾನವಾಗಿರಬೇಕು?
18 ಹೀಗೆ ನಾವು ಆತನ ವಾಗ್ದಾನಗಳ ನೆರವೇರಿಕೆಗಾಗಿ ಕಾಯುತ್ತಿರುವಾಗ ಸಂತೋಷದ ದೇವರಾದ ಯೆಹೋವನನ್ನು ಅನುಕರಿಸುತ್ತಿರೋಣ. ನಕಾರಾತ್ಮಕ ಭಾವನೆಗಳಿಂದ ಆಧ್ಯಾತ್ಮಿಕವಾಗಿ ಕಂಗೆಟ್ಟುಹೋಗುವುದರಿಂದ ದೂರವಿರೋಣ. ಸಮಸ್ಯೆಗಳು ಏಳುವಾಗ ಯೋಚನಾ ಸಾಮರ್ಥ್ಯ ಮತ್ತು ವ್ಯಾವಹಾರಿಕ ವಿವೇಕವು ನಮ್ಮನ್ನು ಮಾರ್ಗದರ್ಶಿಸಲಿ. ನಮ್ಮ ಭಾವನೆಗಳನ್ನು ಹತೋಟಿಯಲ್ಲಿಡುವಂತೆ ಮತ್ತು ಸಂಕಷ್ಟಗಳ ಕೆಟ್ಟ ಫಲಿತಾಂಶಗಳನ್ನು ಕಡಿಮೆಮಾಡಲು ಸಾಧ್ಯವಾದ ಯಾವುದೇ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಯೆಹೋವನು ನಮಗೆ ಸಹಾಯಮಾಡುವನು. ಆದ್ದರಿಂದ ಆತನಿಂದ ಬರುವ ಶಾರೀರಿಕ ಮತ್ತು ಆಧ್ಯಾತ್ಮಿಕ ಸುವಸ್ತುಗಳಲ್ಲಿ ನಾವು ಉಲ್ಲಾಸಪಡುವಂತಾಗಲಿ. ದೇವರಿಗೆ ಹತ್ತಿರವಾಗಿ ಉಳಿಯುವ ಮೂಲಕ ನಾವು ಸಂತೋಷವನ್ನು ಪಡೆಯಲು ಶಕ್ತರಾಗುವೆವು. ಏಕೆಂದರೆ “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು [ಸಂತೋಷಿತರು].”—ಕೀರ್ತ. 144:15.
ನೀವೇನು ಕಲಿತಿರಿ?
• ಸಂಕಷ್ಟಗಳನ್ನು ನಿಭಾಯಿಸುವಾಗ ನಾವು ಯೆಹೋವನನ್ನು ಹೇಗೆ ಅನುಕರಿಸಬಲ್ಲೆವು?
• ನ್ಯಾಯಸಮ್ಮತತೆಯು ಸಂಕಷ್ಟಗಳನ್ನು ನಿಭಾಯಿಸಲು ಹೇಗೆ ಸಹಾಯಮಾಡಬಲ್ಲದು?
• ಸಂಕಷ್ಟಕರ ಸಮಯಗಳಲ್ಲಿ ದೇವರ ಚಿತ್ತವನ್ನು ಅನುಸರಿಸುವುದರಲ್ಲಿ ಹೇಗೆ ನಾವು ಉಲ್ಲಾಸಪಡಬಲ್ಲೆವು?
[ಪುಟ 16ರಲ್ಲಿರುವ ಚಿತ್ರಗಳು]
ನಡೆಯುತ್ತಿರುವ ಕೆಟ್ಟ ಸಂಗತಿಗಳಿಂದಾಗಿ ಯೆಹೋವನು ನೊಂದುಕೊಳ್ಳುತ್ತಾನೆ
[ಕೃಪೆ]
© G.M.B. Akash/Panos Pictures
[ಪುಟ 18ರಲ್ಲಿರುವ ಚಿತ್ರಗಳು]
ಆನಂದವನ್ನು ಕಾಪಾಡುವ ಸಾಧನವನ್ನು ಯೆಹೋವನು ನಮಗೆ ಕೊಟ್ಟಿರುತ್ತಾನೆ