ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w05 5/1 ಪು. 29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಅನುರೂಪ ಮಾಹಿತಿ
  • ನಂಬಿಕೆಯನ್ನೂ, ಒಳ್ಳೇ ಮನಸ್ಸಾಕ್ಷಿಯನ್ನೂ ಬಿಡದೆ ಹಿಡುಕೋ
    ಕಾವಲಿನಬುರುಜು—1991
  • ಅಪೊಸ್ತಲ ಪೌಲನು ಹೆಂಗಸರ ವಿರೋಧಿಯಾಗಿದ್ದನೊ?
    ಎಚ್ಚರ!—1994
  • ತಿಮೊಥೆಯ—“ನಂಬಿಕೆಯ ವಿಷಯದಲ್ಲಿ ನಿಜಕುಮಾರ”
    ಕಾವಲಿನಬುರುಜು—1999
  • ಥೆಸಲೊನೀಕದವರಿಗೆ ಮತ್ತು ತಿಮೊಥೆಯನಿಗೆ ಬರೆದ ಪತ್ರಗಳ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
w05 5/1 ಪು. 29

ವಾಚಕರಿಂದ ಪ್ರಶ್ನೆಗಳು

ಕ್ರೈಸ್ತ ಪತ್ನಿಯ ಕುರಿತು ಪೌಲನು, ‘ಅವಳು ಮಕ್ಕಳನ್ನು ಹೆರುವಾಗ ರಕ್ಷಿಸಲ್ಪಡುವಳು’ ಎಂದು ಏಕೆ ಬರೆದನು?​—⁠1 ತಿಮೊಥೆಯ 2:⁠15, ಪರಿಶುದ್ಧ ಬೈಬಲ್‌.a

ಈ ವಚನದ ಪೂರ್ವಾಪರವು, ಪೌಲನು ಹೇಳಿದ ಮಾತುಗಳ ಅರ್ಥವೇನೆಂದು ತಿಳಿಯಪಡಿಸುತ್ತದೆ? ಪವಿತ್ರಾತ್ಮದ ಮಾರ್ಗದರ್ಶನದಿಂದ ಅವನು, ಸಭೆಯಲ್ಲಿ ಕ್ರೈಸ್ತ ಸ್ತ್ರೀಯ ಪಾತ್ರದ ಕುರಿತು ಸಲಹೆಯನ್ನು ಕೊಡುತ್ತಿದ್ದನು. ಅವನು ಬರೆದುದು: “ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ. ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.” (1 ತಿಮೊಥೆಯ 2:9, 10) ಪೌಲನು ತನ್ನ ಕ್ರೈಸ್ತ ಸಹೋದರಿಯರಿಗೆ, ಮಾನಸ್ಥೆಯರಾಗಿರುವಂತೆ, ವೈಯಕ್ತಿಕ ಅಲಂಕಾರದ ಆಯ್ಕೆಯಲ್ಲಿ ಸಮತೂಕವುಳ್ಳವರಾಗಿರುವಂತೆ ಮತ್ತು ಸತ್ಕ್ರಿಯೆಗಳಿಂದ ‘ಅಲಂಕರಿಸಿಕೊಳ್ಳುವಂತೆ’ ಉತ್ತೇಜನ ನೀಡುತ್ತಿದ್ದನು.

ತದನಂತರ ಪೌಲನು ಸಭೆಯಲ್ಲಿನ ತಲೆತನದ ಏರ್ಪಾಡಿನ ಕುರಿತು ವಿವರಿಸಿದನು. ಅವನಂದದ್ದು: “ಉಪದೇಶಮಾಡುವದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡಿಸುವದಕ್ಕಾಗಲಿ ಸ್ತ್ರೀಯರಿಗೆ ನಾನು ಅಪ್ಪಣೆಕೊಡುವದಿಲ್ಲ; ಅವರು ಮೌನವಾಗಿರಬೇಕು.” (1 ತಿಮೊಥೆಯ 2:12; 1 ಕೊರಿಂಥ 11:3) ಈ ಏರ್ಪಾಡಿಗಾಗಿರುವ ಆಧಾರವನ್ನು ಅವನು, ಆದಾಮನು ಸೈತಾನನ ವಂಚನೆಗೆ ಒಳಬೀಳಲಿಲ್ಲವಾದರೂ ಹವ್ವಳು “ವಂಚನೆಗೆ ಒಳಬಿದ್ದು ಅಪರಾಧಿಯಾದಳು” ಎಂಬುದನ್ನು ತೋರಿಸುವ ಮೂಲಕ ವಿವರಿಸಿದನು. ಹವ್ವಳು ಮಾಡಿದಂಥ ಪಾಪದ ವಿರುದ್ಧ ಕ್ರೈಸ್ತ ಸ್ತ್ರೀಯೊಬ್ಬಳು ಹೇಗೆ ಸಂರಕ್ಷಿಸಲ್ಪಡಸಾಧ್ಯವಿದೆ? ಪೌಲನು ಉತ್ತರಿಸುವುದು: “ಆದರೆ ಸ್ತ್ರೀಯರು ನಂಬಿಕೆಯಲ್ಲಿ, ಪ್ರೀತಿಯಲ್ಲಿ, ಪರಿಶುದ್ಧತೆಯಲ್ಲಿ, ಮತ್ತು ಸರಿಯಾದ ನಡವಳಿಕೆಯಲ್ಲಿ ದೃಢವಾಗಿದ್ದರೆ ಮಕ್ಕಳನ್ನು ಹೆರುವಾಗ ರಕ್ಷಿಸಲ್ಪಡುವರು.” (1 ತಿಮೊಥೆಯ 2:14, 15, ಪರಿಶುದ್ಧ ಬೈಬಲ್‌) ಪೌಲನು ಹೇಳಿದ ಈ ಮಾತುಗಳ ಅರ್ಥವೇನಾಗಿತ್ತು?

ಒಬ್ಬ ಸ್ತ್ರೀಯ ರಕ್ಷಣೆಯು ಅವಳು ಮಕ್ಕಳನ್ನು ಹೆರುವುದರ ಮೇಲೆ ಅವಲಂಬಿಸಿದೆ ಎಂದು ಕೆಲವು ಭಾಷಾಂತರಕಾರರು ಸೂಚಿಸುವಂತೆ ತೋರುತ್ತದೆ. ಉದಾಹರಣೆಗೆ, ಕನ್ನಡ ಬೈಬಲ್‌ (BSI) ಹೀಗೆ ಹೇಳುತ್ತದೆ: “ಮಕ್ಕಳನ್ನು ಹೆರುವದರಲ್ಲಿ ರಕ್ಷಣೆಹೊಂದುವರು.” ಆದರೂ, ಪೌಲನ ಮಾತುಗಳ ಈ ಅರ್ಥವಿವರಣೆಯು ನಿಷ್ಕೃಷ್ಟವಾದುದಲ್ಲ. ಅನೇಕ ಶಾಸ್ತ್ರವಚನಗಳು ತೋರಿಸುವಂತೆ, ರಕ್ಷಣೆಪಡೆಯಲಿಕ್ಕಾಗಿ ಒಬ್ಬ ವ್ಯಕ್ತಿಯು ಯೆಹೋವನ ಬಗ್ಗೆ ತಿಳಿದುಕೊಳ್ಳಬೇಕು, ಯೇಸುವಿನಲ್ಲಿ ವಿಶ್ವಾಸವಿಡಬೇಕು ಮತ್ತು ನಂಬಿಕೆಯನ್ನು ರೂಢಿಸಿಕೊಳ್ಳಬೇಕು ಹಾಗೂ ಆ ನಂಬಿಕೆಯನ್ನು ಕ್ರಿಯೆಗಳಲ್ಲಿ ತೋರ್ಪಡಿಸಬೇಕು. (ಯೋಹಾನ 17:3; ಅ. ಕೃತ್ಯಗಳು 16:30, 31; ರೋಮಾಪುರ 10:10; ಯಾಕೋಬ 2:26) ಅಲ್ಲದೆ, ವಿಶ್ವಾಸಿಗಳಾಗಿರುವ ಸ್ತ್ರೀಯರು ಸುರಕ್ಷಿತವಾದ ರೀತಿಯಲ್ಲಿ ಮಕ್ಕಳನ್ನು ಹೆರುವರು ಎಂಬ ಆಶ್ವಾಸನೆಯು ಅವರಿಗೆ ಕೊಡಲ್ಪಟ್ಟಿದೆ ಎಂಬುದೂ ಪೌಲನ ಮಾತುಗಳ ಅರ್ಥವಾಗಿರಲಿಲ್ಲ. ವಿಶ್ವಾಸಿಗಳಾಗಿರಲಿ ಇಲ್ಲದಿರಲಿ ಅನೇಕ ಸ್ತ್ರೀಯರು ಸುರಕ್ಷಿತವಾದ ರೀತಿಯಲ್ಲಿ ಜನ್ಮ ನೀಡಿದ್ದಾರೆ. ಮತ್ತು ದುಃಖಕರವಾಗಿಯೇ, ವಿಶ್ವಾಸಿಗಳಾಗಿರಲಿ ಇಲ್ಲದಿರಲಿ, ಮತ್ತಿತರರು ಜನ್ಮ ನೀಡುವಾಗ ಸಾವನ್ನಪ್ಪಿದ್ದಾರೆ.​—⁠ಆದಿಕಾಂಡ 35:16-18.

ತದನಂತರ ಇದೇ ಪತ್ರದಲ್ಲಿ ಪೌಲನು ಸ್ತ್ರೀಯರ ವಿಷಯದಲ್ಲಿ ಕೊಟ್ಟ ಹೆಚ್ಚಿನ ಸಲಹೆಯು, ಅವನು ಹೇಳಿದ ಮಾತುಗಳ ಅರ್ಥವೇನಾಗಿತ್ತು ಎಂಬುದನ್ನು ಗ್ರಹಿಸಲು ಸಹಾಯಮಾಡುತ್ತದೆ. ‘ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಿದ್ದ, ಮತ್ತು ಮೈಗಳ್ಳರಾಗುವದಲ್ಲದೆ ಹರಟೆಮಾತಾಡುವವರೂ ಇತರರ ಕೆಲಸದಲ್ಲಿ ಕೈಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಿದ್ದ’ ಕೆಲವು ಯೌವನಸ್ಥ ವಿಧವೆಯರಿಗೆ ಅವನು ಎಚ್ಚರಿಕೆ ನೀಡುತ್ತಾನೆ. ಪೌಲನು ಅವರಿಗೆ ಯಾವ ಬುದ್ಧಿವಾದವನ್ನು ಹೇಳಿದನು? ಅವನು ಮುಂದುವರಿಸಿದ್ದು: “ಆದ್ದರಿಂದ ಯೌವನಸ್ಥ ವಿಧವೆಯರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಕೆಲಸ ಮಾಡಿ, ವಿರೋಧಿಯ ನಿಂದೆಗೆ ಆಸ್ಪದ ಕೊಡಬಾರದೆಂಬುದೇ ನನ್ನ ಅಪೇಕ್ಷೆ.” (NIBV)​—⁠1 ತಿಮೊಥೆಯ 5:13, 14.

ಕುಟುಂಬದ ಏರ್ಪಾಡಿನಲ್ಲಿ ಸ್ತ್ರೀಯರ ಪ್ರಯೋಜನಕರ ಪಾತ್ರವನ್ನು ಪೌಲನು ಎತ್ತಿಹೇಳುತ್ತಾನೆ. ‘ಮಕ್ಕಳನ್ನು ಹೆತ್ತು ಮನೆಯ ಕೆಲಸ ಮಾಡುವಂಥ’ ಚಟುವಟಿಕೆಗಳಲ್ಲಿ ತಲ್ಲೀನಳಾಗಿದ್ದು, ಒಬ್ಬ ಸ್ತ್ರೀಯು ‘ಮಾನಸ್ಥೆಯಾಗಿ ನಂಬಿಕೆಯಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ’ ಮುಂದುವರಿಯುತ್ತಿರುವಾಗ, ಭಕ್ತಿವೃದ್ಧಿಮಾಡದಿರುವಂಥ ನಡತೆಯ ಕಡೆಗೆ ಅವಳು ಆಕರ್ಷಿತಳಾಗುವುದಿಲ್ಲ. ಅವಳ ಆಧ್ಯಾತ್ಮಿಕತೆಯು ಕಾಪಾಡಲ್ಪಡುವುದು ಅಥವಾ ‘ರಕ್ಷಿಸಲ್ಪಡುವುದು.’ (1 ತಿಮೊಥೆಯ 2:15) ಇಂಥ ಮಾರ್ಗಕ್ರಮವನ್ನು ಅನುಸರಿಸುವುದು, ಸೈತಾನನ ಪಾಶಗಳಿಂದ ದೂರವಿರುವಂತೆ ಅನೇಕ ಯುವ ಸ್ತ್ರೀಯರಿಗೆ ಸಹಾಯಮಾಡುವುದು.

ಪೌಲನು ತಿಮೊಥೆಯನಿಗೆ ಹೇಳಿದ ಮಾತುಗಳು, ಪ್ರಯೋಜನಕರವಾದ ವಿಧದಲ್ಲಿ ನಮ್ಮ ಸಮಯವನ್ನು ವಿನಿಯೋಗಿಸುವಂತೆ ಸ್ತ್ರೀಪುರುಷರಾದ ನಮ್ಮೆಲ್ಲರಿಗೆ ನೆನಪು ಹುಟ್ಟಿಸುತ್ತದೆ. ದೇವರ ವಾಕ್ಯವು ಎಲ್ಲ ಕ್ರೈಸ್ತರಿಗೆ ಹೀಗೆ ಬುದ್ಧಿಹೇಳುತ್ತದೆ: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ.”​—⁠ಎಫೆಸ 5:⁠15.

[ಪಾದಟಿಪ್ಪಣಿ]

a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ