ಸಮರ್ಪಣೆ ಮತ್ತು ಆಯ್ಕೆಯ ಸ್ವಾತಂತ್ರ್ಯ
“ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ನಮಗೆ ಬಿಡುಗಡೆಮಾಡಿದನು.”—ಗಲಾತ್ಯ 5:1.
1. “ಸಮರ್ಪಣೆ,” “ಪ್ರತಿಷ್ಠಾಪನೆ,” ಇಲ್ಲವೆ “ಮೀಸಲು” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರೂ ಮತ್ತು ಗ್ರೀಕ್ ಪದಗಳು ಮುಖ್ಯವಾಗಿ ಯಾವುದಕ್ಕೆ ಅನ್ವಯಿಸುತ್ತವೆ?
ಪವಿತ್ರವಾದೊಂದು ಉದ್ದೇಶವನ್ನು ಪೂರೈಸಲು ಪ್ರತ್ಯೇಕಿಸಲ್ಪಟ್ಟಿರುವ ಇಲ್ಲವೆ ಮೀಸಲಾಗಿಡಲ್ಪಟ್ಟಿರುವ ವಿಚಾರವನ್ನು ತಿಳಿಯಪಡಿಸಲಿಕ್ಕಾಗಿ, ಬೈಬಲ್ ಬರಹಗಾರರು ಹಲವಾರು ಹೀಬ್ರೂ ಮತ್ತು ಗ್ರೀಕ್ ಪದಗಳನ್ನು ಉಪಯೋಗಿಸಿದರು. ಇಂಗ್ಲಿಷ್ ಬೈಬಲ್ಗಳಲ್ಲಿ ಈ ಪದಗಳು, “ಸಮರ್ಪಣೆ,” “ಪ್ರತಿಷ್ಠಾಪನೆ,” ಇಲ್ಲವೆ “ಮೀಸಲು” ಎಂಬ ಅರ್ಥವಿರುವ ಪದಗಳಿಂದ ಭಾಷಾಂತರಿಸಲ್ಪಟ್ಟಿವೆ. ಕೆಲವೊಮ್ಮೆ ಈ ಪದಗಳು ಕಟ್ಟಡಗಳ—ಸಾಮಾನ್ಯವಾಗಿ ಪ್ರಾಚೀನ ಯೆರೂಸಲೇಮಿನಲ್ಲಿದ್ದ ದೇವರ ಆಲಯ ಮತ್ತು ಅಲ್ಲಿ ನಡೆಸಲ್ಪಡುತ್ತಿದ್ದ ಆರಾಧನೆಯ—ಸಂಬಂಧದಲ್ಲಿ ಬಳಸಲ್ಪಟ್ಟಿವೆ. ಧಾರ್ಮಿಕವಲ್ಲದ ವಿಷಯಗಳನ್ನು ಸೂಚಿಸಲು ಈ ಪದಗಳು ಬಳಸಲ್ಪಟ್ಟಿರುವುದು ವಿರಳ.
‘ಇಸ್ರಾಯೇಲಿನ ದೇವರಿಗೆ’ ಸಮರ್ಪಣೆ
2. ಯೆಹೋವನನ್ನು ಸೂಕ್ತವಾಗಿಯೇ ‘ಇಸ್ರಾಯೇಲಿನ ದೇವರು’ ಎಂಬುದಾಗಿ ಏಕೆ ಕರೆಯಸಾಧ್ಯವಿತ್ತು?
2 ಸಾ.ಶ.ಪೂ. 1513ರಲ್ಲಿ, ದೇವರು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸಿದನು. ತರುವಾಯ ಸ್ವಲ್ಪ ಸಮಯದಲ್ಲೇ, ಆತನು ಅವರನ್ನು ತನ್ನ ವಿಶೇಷ ಜನರಾಗಿ ಮೀಸಲಾಗಿಟ್ಟು, ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಅವರಿಗೆ ಹೀಗೆ ಹೇಳಲಾಯಿತು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ [“ವಿಶೇಷ ಸ್ವತ್ತು,” NW]; ಸಮಸ್ತ ಭೂಮಿಯೂ ನನ್ನದಷ್ಟೆ.” (ವಿಮೋಚನಕಾಂಡ 19:5; ಕೀರ್ತನೆ 135:4) ಇಸ್ರಾಯೇಲ್ಯರನ್ನು ತನ್ನ ವಿಶೇಷ ಸ್ವತ್ತಾಗಿ ಮಾಡಿಕೊಂಡದ್ದರಿಂದ, ಯೆಹೋವನನ್ನು ಸೂಕ್ತವಾಗಿಯೇ ‘ಇಸ್ರಾಯೇಲಿನ ದೇವರು’ ಎಂಬುದಾಗಿ ಕರೆಯಸಾಧ್ಯವಿತ್ತು.—ಯೆಹೋಶುವ 24:23.
3. ಇಸ್ರಾಯೇಲನ್ನು ತನ್ನ ಜನಾಂಗವಾಗಿ ಆರಿಸಿಕೊಳ್ಳುವ ಮೂಲಕ ಯೆಹೋವನು ಪಕ್ಷಪಾತವನ್ನು ತೋರಿಸುತ್ತಿರಲಿಲ್ಲವೇಕೆ?
3 ಇಸ್ರಾಯೇಲ್ಯರನ್ನು ತನ್ನ ಸಮರ್ಪಿತ ಜನರನ್ನಾಗಿ ಮಾಡುವುದರಲ್ಲಿ ಯೆಹೋವನು ಪಕ್ಷಪಾತಿಯಾಗಿರಲಿಲ್ಲ, ಏಕೆಂದರೆ ಆತನು ಇಸ್ರಾಯೇಲ್ಯೇತರರ ಕುರಿತಾಗಿಯೂ ಪ್ರೀತಿಪರವಾಗಿ ಚಿಂತಿಸಿದನು. ಆತನು ತನ್ನ ಜನರಿಗೆ ಉಪದೇಶ ನೀಡಿದ್ದು: “ನಿಮ್ಮ ದೇಶದಲ್ಲಿ ಇಳುಕೊಂಡಿರುವ ಪರದೇಶದವರಿಗೆ ಅನ್ಯಾಯವೇನೂ ಮಾಡಬಾರದು. ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು.” (ಯಾಜಕಕಾಂಡ 19:33, 34) ಶತಮಾನಗಳ ತರುವಾಯ, ದೇವರ ದೃಷ್ಟಿಕೋನವು ಅಪೊಸ್ತಲ ಪೇತ್ರನ ಮೇಲೆ ಬಲವತ್ತಾಗಿ ಅಚ್ಚೊತ್ತಲ್ಪಟ್ಟಿತು. ಅವನು ಒಪ್ಪಿಕೊಂಡದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.”—ಅ. ಕೃತ್ಯಗಳು 10:35.
4. ದೇವರ ಮತ್ತು ಇಸ್ರಾಯೇಲಿನ ನಡುವಿನ ಸಂಬಂಧದ ಷರತ್ತುಗಳು ಏನಾಗಿದ್ದವು, ಮತ್ತು ಇಸ್ರಾಯೇಲ್ಯರು ಅವುಗಳಿಗನುಗುಣವಾಗಿ ಜೀವಿಸಿದರೊ?
4 ದೇವರ ಸಮರ್ಪಿತ ಜನರಾಗಿರುವುದು ಷರತ್ತಿಗೆ ಒಳಪಟ್ಟದ್ದಾಗಿತ್ತೆಂಬುದನ್ನೂ ಗಮನಿಸಿರಿ. ಅವರು ಕಟ್ಟುನಿಟ್ಟಾಗಿ ದೇವರ ಮಾತಿಗೆ ವಿಧೇಯರಾಗಿ, ಆತನ ಒಡಂಬಡಿಕೆಯನ್ನು ಕಾಪಾಡಿಕೊಳ್ಳುವುದಾದರೆ ಮಾತ್ರ, ಅವರು ಆತನ “ವಿಶೇಷ ಸ್ವತ್ತು” ಆಗಿರಲಿದ್ದರು. ದುಃಖಕರವಾಗಿ, ಇಸ್ರಾಯೇಲ್ಯರು ಈ ಆವಶ್ಯಕತೆಗಳನ್ನು ಪೂರೈಸಲು ತಪ್ಪಿಹೋದರು. ದೇವರಿಂದ ಕಳುಹಿಸಲ್ಪಟ್ಟ ಮೆಸ್ಸೀಯನನ್ನು ಸಾ.ಶ. ಒಂದನೆಯ ಶತಮಾನದಲ್ಲಿ ತಿರಸ್ಕರಿಸಿದ ಬಳಿಕ, ಅವರು ತಮ್ಮ ವಿಶೇಷ ಸ್ಥಾನವನ್ನು ಕಳೆದುಕೊಂಡರು. ಯೆಹೋವನು ಅಂದಿನಿಂದ ‘ಇಸ್ರಾಯೇಲಿನ ದೇವರು’ ಆಗಿರಲಿಲ್ಲ. ಮತ್ತು ಸ್ವಾಭಾವಿಕ ಇಸ್ರಾಯೇಲ್ಯರು ಅಂದಿನಿಂದ ದೇವರ ಸಮರ್ಪಿತ ಜನರಾಗಿರಲಿಲ್ಲ.—ಹೋಲಿಸಿ ಮತ್ತಾಯ 23:23.
‘ದೇವರ ಇಸ್ರಾಯೇಲಿನ’ ಸಮರ್ಪಣೆ
5, 6. (ಎ) ಮತ್ತಾಯ 21:42, 43ರಲ್ಲಿ ದಾಖಲಿಸಲ್ಪಟ್ಟ ತನ್ನ ಪ್ರವಾದನಾತ್ಮಕ ಮಾತುಗಳಿಂದ ಯೇಸು ಏನನ್ನು ಅರ್ಥೈಸಿದನು? (ಬಿ) ‘ದೇವರ ಇಸ್ರಾಯೇಲ್’ ಯಾವಾಗ ಮತ್ತು ಹೇಗೆ ಅಸ್ತಿತ್ವಕ್ಕೆ ಬಂದಿತು?
5 ಯೆಹೋವನು ಈಗ ಒಂದು ಸಮರ್ಪಿತ ಜನಾಂಗವಿಲ್ಲದವನಾಗಿರಬೇಕಿತ್ತು ಎಂಬುದನ್ನು ಇದು ಅರ್ಥೈಸಿತೊ? ಇಲ್ಲ. ಕೀರ್ತನೆಗಾರನನ್ನು ಉದ್ಧರಿಸುತ್ತಾ, ಯೇಸು ಕ್ರಿಸ್ತನು ಮುಂತಿಳಿಸಿದ್ದು: “ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತ [“ಯೆಹೋವ,” NW]ನಿಂದಲೇ ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬುವ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ? ಆದದರಿಂದ ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ [“ಜನಾಂಗಕ್ಕೆ,” NW] ಕೊಡಲಾಗುವದು.”—ಮತ್ತಾಯ 21:42, 43.
6 “ಅದರ ಫಲಗಳನ್ನು ಕೊಡುವ ಜನಾಂಗ”ವು ಕ್ರೈಸ್ತ ಸಭೆಯಾಗಿ ಪರಿಣಮಿಸಿತು. ಯೇಸು ಭೂಮಿಯ ಮೇಲೆ ತಾತ್ಕಾಲಿಕವಾಗಿ ತಂಗಿದಾಗ, ಅವನು ಅದರ ಪ್ರಥಮ ಭಾವೀ ಸದಸ್ಯರನ್ನು ಆರಿಸಿಕೊಂಡನು. ಆದರೆ ಸಾ.ಶ. 33ರ ಪಂಚಾಶತ್ತಮದಂದು, ಸುಮಾರು 120ರ ಸಂಖ್ಯೆಯಲ್ಲಿದ್ದ ಅದರ ಪ್ರಥಮ ಸದಸ್ಯರ ಮೇಲೆ ತನ್ನ ಪವಿತ್ರಾತ್ಮವನ್ನು ಸುರಿಸುವ ಮೂಲಕ ಕ್ರೈಸ್ತ ಸಭೆಯನ್ನು ಸ್ಥಾಪಿಸಿದವನು ಸ್ವತಃ ಯೆಹೋವ ದೇವರೇ. (ಅ. ಕೃತ್ಯಗಳು 1:15; 2:1-4) ಅಪೊಸ್ತಲ ಪೇತ್ರನು ತದನಂತರ ಬರೆದಂತೆ, ಹೊಸದಾಗಿ ರಚಿಸಲ್ಪಟ್ಟ ಈ ಸಭೆಯು ಆಗ, “ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ” ಆಯಿತು. ಯಾವ ಕಾರಣಕ್ಕಾಗಿ ಆದುಕೊಂಡವರು? ಅವರು “[ತಮ್ಮನ್ನು] ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರ”ಮಾಡುವ ಕಾರಣಕ್ಕಾಗಿಯೇ. (1 ಪೇತ್ರ 2:9) ದೇವರ ಆತ್ಮದಿಂದ ಅಭಿಷಿಕ್ತರಾಗಿದ್ದ ಕ್ರಿಸ್ತನ ಹಿಂಬಾಲಕರು, ಈಗ ಒಂದು ಸಮರ್ಪಿತ ಜನಾಂಗ, ‘ದೇವರ ಇಸ್ರಾಯೇಲ್’ ಆಗಿದ್ದರು.—ಗಲಾತ್ಯ 6:16.
7. ದೇವರ ಇಸ್ರಾಯೇಲಿನ ಸದಸ್ಯರು ಯಾವ ವಿಷಯದಲ್ಲಿ ಆನಂದಿಸಲಿದ್ದರು, ಮತ್ತು ಆ ಕಾರಣ ಅವರು ಏನನ್ನು ತ್ಯಜಿಸಬೇಕೆಂದು ಹೇಳಲ್ಪಟ್ಟರು?
7 ಪರಿಶುದ್ಧ ಜನಾಂಗದ ಸದಸ್ಯರು “ದೇವರ ಸ್ವಕೀಯ ಪ್ರಜೆ”ಯಾಗಿದ್ದರೂ, ಅವರು ಗುಲಾಮರಾಗಿರಬಾರದಿತ್ತು. ಇದಕ್ಕೆ ವಿರುದ್ಧವಾಗಿ, ಅವರು ಸಮರ್ಪಿತ ಸ್ವಾಭಾವಿಕ ಇಸ್ರಾಯೇಲ್ ಜನಾಂಗವು ಪಡೆದಿದ್ದ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸಲಿದ್ದರು. ಈ ಹೊಸ ಜನಾಂಗದ ಭಾವೀ ಸದಸ್ಯರಿಗೆ ಯೇಸು ವಾಗ್ದಾನಿಸಿದ್ದು: “ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾನ 8:32) ಕ್ರೈಸ್ತರು ಧರ್ಮಶಾಸ್ತ್ರದ ಒಡಂಬಡಿಕೆಯ ಆವಶ್ಯಕತೆಗಳಿಂದ ಮುಕ್ತಗೊಳಿಸಲ್ಪಟ್ಟಿದ್ದರೆಂದು ಅಪೊಸ್ತಲ ಪೌಲನು ಸೂಚಿಸಿದನು. ಈ ಸಂಬಂಧದಲ್ಲಿ ಅವನು ಗಲಾತ್ಯದಲ್ಲಿದ್ದ ಜೊತೆ ವಿಶ್ವಾಸಿಗಳಿಗೆ ಬುದ್ಧಿವಾದ ಹೇಳಿದ್ದು: “ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ನಮಗೆ ಬಿಡುಗಡೆಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.”—ಗಲಾತ್ಯ 5:1.
8. ಯಾವ ವಿಷಯದಲ್ಲಿ ಕ್ರೈಸ್ತ ಏರ್ಪಾಡು, ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗೆ ಜನರು ಅನುಭವಿಸಿದುದಕ್ಕಿಂತಲೂ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ?
8 ಗತಕಾಲದ ಸ್ವಾಭಾವಿಕ ಇಸ್ರಾಯೇಲಿನಂತಿರದೆ, ದೇವರ ಇಸ್ರಾಯೇಲ್ ಈ ದಿನದ ವರೆಗೂ ಅದರ ಸಮರ್ಪಣೆಯ ಆವಶ್ಯಕತೆಗಳಿಗೆ ಕಟ್ಟುನಿಟ್ಟಾಗಿ ವಿಧೇಯತೆ ತೋರಿಸಿದೆ. ಇದು ಆಶ್ಚರ್ಯಕರವಾಗಿರಬಾರದು ಏಕೆಂದರೆ ಅದರ ಸದಸ್ಯರು ವಿಧೇಯರಾಗಲು ಸ್ವಇಚ್ಛೆಯಿಂದ ಆರಿಸಿಕೊಂಡರು. ಸ್ವಾಭಾವಿಕ ಇಸ್ರಾಯೇಲಿನ ಸದಸ್ಯರು ಜನನದ ಕಾರಣ ಸಮರ್ಪಿತರಾಗಿರುವಾಗ, ದೇವರ ಇಸ್ರಾಯೇಲಿನ ಸದಸ್ಯರು ಆಯ್ಕೆಯ ಮೂಲಕ ಸಮರ್ಪಿತರಾಗುತ್ತಾರೆ. ಹೀಗೆ, ಆಯ್ಕೆಯ ಸ್ವಾತಂತ್ರ್ಯವನ್ನು ಅನುಮತಿಸದೆ ವ್ಯಕ್ತಿಗಳ ಮೇಲೆ ಸಮರ್ಪಣೆಯನ್ನು ಹೇರಿದ ಯೆಹೂದಿ ಧರ್ಮಶಾಸ್ತ್ರದ ಒಡಂಬಡಿಕೆಗೆ ಕ್ರೈಸ್ತ ಏರ್ಪಾಡು ತದ್ವಿರುದ್ಧವಾಗಿತ್ತು.
9, 10. (ಎ) ಸಮರ್ಪಣೆಯ ಸಂಬಂಧದಲ್ಲಿ ಬದಲಾವಣೆಯಿರುವುದೆಂದು ಯೆರೆಮೀಯನು ಹೇಗೆ ಸೂಚಿಸಿದನು? (ಬಿ) ಇಂದು ಎಲ್ಲ ಸಮರ್ಪಿತ ಕ್ರೈಸ್ತರು ದೇವರ ಇಸ್ರಾಯೇಲಿನ ಸದಸ್ಯರಾಗಿರುವುದಿಲ್ಲವೆಂದು ನೀವು ಏಕೆ ಹೇಳುವಿರಿ?
9 ಸಮರ್ಪಣೆಯ ಸಂಬಂಧದಲ್ಲಿ ಪ್ರವಾದಿಯಾದ ಯೆರೆಮೀಯನು ಒಂದು ಬದಲಾವಣೆಯನ್ನು ಮುಂತಿಳಿಸಿದನು. ಅವನು ಬರೆದುದು: “ಯೆಹೋವನು ಇಂತೆನ್ನುತ್ತಾನೆ—ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತದೇಶದೊಳಗಿಂದ ಕರತಂದಾಗ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ನಾನು ಅವರಿಗೆ ಪತಿಯಾಗಿದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿದರಷ್ಟೆ. ಯೆಹೋವನು ಇಂತೆನ್ನುತ್ತಾನೆ—ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು—ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.”—ಯೆರೆಮೀಯ 31:31-33.
10 ದೇವರ ನಿಯಮವು “ಅವರ ಅಂತರಂಗದಲ್ಲಿ,” “ಅವರ ಹೃದಯದೊಳಗೆ” ಎಂಬಂತೆ ಬರೆಯಲ್ಪಟ್ಟಿರುವುದರಿಂದ, ದೇವರ ಇಸ್ರಾಯೇಲಿನ ಸದಸ್ಯರು ತಮ್ಮ ಸಮರ್ಪಣೆಗೆ ಅನುಗುಣವಾಗಿ ಜೀವಿಸುವಂತೆ ಪ್ರೇರಿಸಲ್ಪಡುತ್ತಾರೆ. ಆಯ್ಕೆಯಿಂದಲ್ಲ ಜನನದಿಂದ ಸಮರ್ಪಿತರಾದ ಸ್ವಾಭಾವಿಕ ಇಸ್ರಾಯೇಲ್ಯರ ಪ್ರಚೋದನೆಗಿಂತಲೂ ಇವರ ಪ್ರಚೋದನೆಯು ಹೆಚ್ಚು ಬಲವಾಗಿರುತ್ತದೆ. ಇಂದು, ದೇವರ ಇಸ್ರಾಯೇಲಿನಿಂದ ಪ್ರದರ್ಶಿಸಲ್ಪಟ್ಟಿರುವಂತೆ, ದೇವರ ಚಿತ್ತವನ್ನು ಮಾಡಲಿಕ್ಕಾಗಿರುವ ಬಲವಾದ ಪ್ರಚೋದನೆಯು ಲೋಕದಾದ್ಯಂತ ಐವತ್ತು ಲಕ್ಷಕ್ಕಿಂತಲೂ ಹೆಚ್ಚಿನ ಜೊತೆ ಆರಾಧಕರಿಂದ ಪ್ರದರ್ಶಿಸಲ್ಪಡುತ್ತಿದೆ. ಅಂತೆಯೇ ಇವರು, ಯೆಹೋವ ದೇವರ ಚಿತ್ತವನ್ನು ಮಾಡಲು ತಮ್ಮ ಜೀವಿತಗಳನ್ನು ಆತನಿಗೆ ಸಮರ್ಪಿಸಿಕೊಂಡಿದ್ದಾರೆ. ದೇವರ ಇಸ್ರಾಯೇಲಿನಲ್ಲಿರುವವರಂತೆ ಈ ವ್ಯಕ್ತಿಗಳಿಗೆ ಸ್ವರ್ಗೀಯ ಜೀವಿತದ ನಿರೀಕ್ಷೆಯಿಲ್ಲದಿದ್ದರೂ, ದೇವರ ಸ್ವರ್ಗೀಯ ರಾಜ್ಯದ ಆಳಿಕೆಯ ಕೆಳಗೆ ಭೂಮಿಯ ಮೇಲೆ ಸದಾಕಾಲ ಜೀವಿಸುವ ಪ್ರತೀಕ್ಷೆಯಲ್ಲಿ ಅವರು ಆನಂದಿಸುತ್ತಾರೆ. “ಕತ್ತಲೆಯೊಳಗಿಂದ [ತಮ್ಮನ್ನು] ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರ”ಮಾಡುವ ತಮ್ಮ ನೇಮಕವನ್ನು ನೆರವೇರಿಸುವುದರಲ್ಲಿ ಉಳಿದಿರುವ ಆತ್ಮಿಕ ಇಸ್ರಾಯೇಲಿನ ಕೆಲವು ಸದಸ್ಯರಿಗೆ ಸಕ್ರಿಯವಾಗಿ ಬೆಂಬಲ ನೀಡುವ ಮೂಲಕ ಅವರು ಅದಕ್ಕೆ ಗಣ್ಯತೆಯನ್ನು ತೋರಿಸುತ್ತಾರೆ.
ದೇವದತ್ತ ಸ್ವಾತಂತ್ರ್ಯವನ್ನು ವಿವೇಕಯುತವಾಗಿ ಪ್ರಯೋಗಿಸುವುದು
11. ಯಾವ ಸಾಮರ್ಥ್ಯದೊಂದಿಗೆ ಮನುಷ್ಯನು ಸೃಷ್ಟಿಸಲ್ಪಟ್ಟನು, ಮತ್ತು ಅದು ಹೇಗೆ ಬಳಸಲ್ಪಡಬೇಕು?
11 ಸ್ವಾತಂತ್ರ್ಯವನ್ನು ಅಮೂಲ್ಯವೆಂದೆಣಿಸುವಂತೆ ದೇವರು ಮಾನವರನ್ನು ಸೃಷ್ಟಿಸಿದನು. ಆತನು ಅವರಿಗೆ ಇಚ್ಛಾಸ್ವಾತಂತ್ರ್ಯದ ಸಾಮರ್ಥ್ಯವನ್ನು ದಯಪಾಲಿಸಿದನು. ಪ್ರಥಮ ಮಾನವ ದಂಪತಿಗಳು ತಮಗಿದ್ದ ಆಯ್ಕೆಯ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡರು. ಆದರೆ, ತಮ್ಮನ್ನೂ ತಮ್ಮ ಸಂತತಿಯನ್ನೂ ವಿಪತ್ತಿಗೆ ನಡೆಸಿದಂತಹ ಒಂದು ಆಯ್ಕೆಯನ್ನು ಅವರು ವಿವೇಕಹೀನರಾಗಿಯೂ ಪ್ರೀತಿರಹಿತವಾಗಿಯೂ ಮಾಡಿದರು. ಆದರೂ, ತಮ್ಮ ಆಂತರಿಕ ಹೇತುಗಳು ಇಲ್ಲವೆ ಬಯಕೆಗಳಿಗೆ ವಿರುದ್ಧವಾದ ಒಂದು ಕ್ರಮವನ್ನು ತೆಗೆದುಕೊಳ್ಳುವಂತೆ ಯೆಹೋವನು ಬುದ್ಧಿವಂತ ಜೀವಿಗಳನ್ನು ಎಂದಿಗೂ ಒತ್ತಾಯಪಡಿಸುವುದಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ. ಮತ್ತು “ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿ”ಯಿರುವುದರಿಂದ, ಪ್ರೀತಿಯ ಮೇಲೆ ಆಧರಿಸಲ್ಪಟ್ಟ, ಉಲ್ಲಾಸಕರವಾಗಿ ಸ್ವಇಚ್ಛೆಯಿಂದ ಮಾಡಲ್ಪಟ್ಟ, ಆಯ್ಕೆಯ ಸ್ವಾತಂತ್ರ್ಯದ ಮೇಲೆ ಆಧರಿಸಿದ ಸಮರ್ಪಣೆಯು ಒಂದೇ ಆತನಿಗೆ ಸ್ವೀಕಾರಾರ್ಹವಾದುದು. (2 ಕೊರಿಂಥ 9:7) ಬೇರೆ ಯಾವುದೇ ರೀತಿಯ ಸಮರ್ಪಣೆಯು ಸ್ವೀಕಾರಾರ್ಹವಾಗಿರುವುದಿಲ್ಲ.
12, 13. ಮಗುವಿನ ಯೋಗ್ಯವಾದ ತರಬೇತಿಗೆ ತಿಮೊಥೆಯನು ಹೇಗೆ ಒಂದು ನಮೂನೆಯಾಗಿದ್ದಾನೆ, ಮತ್ತು ಅವನ ಮಾದರಿಯು ಅನೇಕ ಯುವ ಜನರನ್ನು ಯಾವುದಕ್ಕೆ ನಡೆಸಿದೆ?
12 ಈ ಆವಶ್ಯಕತೆಯನ್ನು ಪೂರ್ಣವಾಗಿ ಅಂಗೀಕರಿಸುತ್ತಾ, ದೇವರಿಗೆ ತನ್ನನ್ನೇ ಸಮರ್ಪಿಸಿಕೊಳ್ಳುವ ವಿಷಯವನ್ನು ಯೆಹೋವನ ಸಾಕ್ಷಿಗಳು ಸಮರ್ಥಿಸುತ್ತಾರೆ. ಆದರೆ ಇಂತಹ ಒಂದು ಸಮರ್ಪಣೆಯನ್ನು ಮಾಡುವಂತೆ ಅವರು ಯಾರನ್ನೂ—ತಮ್ಮ ಸ್ವಂತ ಮಕ್ಕಳನ್ನು ಸಹ—ಎಂದಿಗೂ ಒತ್ತಾಯಪಡಿಸುವುದಿಲ್ಲ. ಅನೇಕ ಚರ್ಚುಗಳು ಮಾಡುವುದಕ್ಕೆ ವ್ಯತಿರಿಕ್ತವಾಗಿ, ಸಾಕ್ಷಿಗಳು ತಮ್ಮ ಮಕ್ಕಳಿಗೆ ವೈಯಕ್ತಿಕ ಆಯ್ಕೆಯ ಪ್ರಯೋಜನವಿಲ್ಲದೆ, ಸಮರ್ಪಣೆಗೆ ಅವರನ್ನು ಒತ್ತಾಯಪಡಿಸಲು ಸಾಧ್ಯವಿದೆಯೊ ಎಂಬಂತೆ ಅವರು ಶಿಶುಗಳಾಗಿರುವಾಗ ದೀಕ್ಷಾಸ್ನಾನಮಾಡಿಸುವುದಿಲ್ಲ. ಅನುಸರಿಸಲ್ಪಡಬೇಕಾದ ಶಾಸ್ತ್ರೀಯ ನಮೂನೆಯು, ಯುವ ಪುರುಷ ತಿಮೊಥೆಯನಿಂದ ಅನುಸರಿಸಲ್ಪಟ್ಟ ನಮೂನೆಯಾಗಿದೆ. ಅವನು ವಯಸ್ಕನಾಗಿದ್ದಾಗ, ಅಪೊಸ್ತಲ ಪೌಲನು ಅವನಿಗೆ ಹೀಗೆ ಹೇಳಿದನು: “ನೀನಾದರೋ ಕಲಿತು ದೃಢವಾಗಿ ನಂಬಿದ [“ನಂಬುವಂತೆ ಮನವೊಲಿಸಲ್ಪಟ್ಟ,” NW] ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು. ಚಿಕ್ಕಂದಿನಿಂದಲೂ [“ಶೈಶವಾವಸ್ಥೆ,” NW] ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.”—2 ತಿಮೊಥೆಯ 3:14, 15.
13 ತಿಮೊಥೆಯನಿಗೆ ಪರಿಶುದ್ಧಗ್ರಂಥಗಳ ಪರಿಚಯವಿದ್ದದ್ದು ಗಮನಾರ್ಹವಾದ ವಿಷಯವಾಗಿದೆ ಏಕೆಂದರೆ ಅವನಿಗೆ ಅವುಗಳನ್ನು ಶೈಶವಾವಸ್ಥೆಯಿಂದ ಕಲಿಸಲಾಗಿತ್ತು. ಅವನು ತನ್ನ ತಾಯಿ ಮತ್ತು ಅಜ್ಜಿಯಿಂದ ಕ್ರೈಸ್ತ ಬೋಧನೆಗಳನ್ನು ನಂಬುವಂತೆ ಮನವೊಲಿಸಲ್ಪಟ್ಟಿದ್ದನು—ಒತ್ತಾಯಿಸಲ್ಪಟ್ಟಿರಲಿಲ್ಲ. (2 ತಿಮೊಥೆಯ 1:5) ಫಲಸ್ವರೂಪವಾಗಿ, ತಿಮೊಥೆಯನು ಕ್ರಿಸ್ತನ ಹಿಂಬಾಲಕನಾಗುವುದರ ಬುದ್ಧಿವಂತಿಕೆಯನ್ನು ಅರಿತು, ಕ್ರೈಸ್ತ ಸಮರ್ಪಣೆಯ ವೈಯಕ್ತಿಕ ಆಯ್ಕೆಯನ್ನು ಮಾಡಿದನು. ಆಧುನಿಕ ಸಮಯಗಳಲ್ಲಿ, ಯಾರ ಹೆತ್ತವರು ಯೆಹೋವನ ಸಾಕ್ಷಿಗಳಾಗಿದ್ದಾರೊ ಅಂತಹ ಹತ್ತಾರು ಸಾವಿರ ಯುವ ಪುರುಷರು ಮತ್ತು ಸ್ತ್ರೀಯರು ಈ ಮಾದರಿಯನ್ನು ಅನುಸರಿಸಿದ್ದಾರೆ. (ಕೀರ್ತನೆ 110:3) ಇತರರು ಈ ಮಾದರಿಯನ್ನು ಅನುಸರಿಸಿಲ್ಲ. ಇದು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ.
ಯಾರ ದಾಸರಾಗಿರಲು ಆಯ್ಕೆಮಾಡಿಕೊಳ್ಳುವುದು?
14. ಸಂಪೂರ್ಣ ಸ್ವಾತಂತ್ರ್ಯದ ಕುರಿತು ರೋಮಾಪುರ 6:16 ನಮಗೆ ಏನನ್ನು ಹೇಳುತ್ತದೆ?
14 ಯಾವ ಮನುಷ್ಯನೂ ಸಂಪೂರ್ಣವಾಗಿ ಸ್ವತಂತ್ರನಲ್ಲ. ಪ್ರತಿಯೊಬ್ಬನ ಸ್ವಾತಂತ್ರ್ಯವು ಗುರುತ್ವಾಕರ್ಷಣೆಯ ನಿಯಮದಂತಹ ಭೌತಿಕ ನಿಯಮಗಳಿಂದ ನಿರ್ಬಂಧಿಸಲ್ಪಟ್ಟಿದೆ, ಅವುಗಳನ್ನು ನಿರ್ಭೀತಿಯಿಂದ ಕಡೆಗಣಿಸಸಾಧ್ಯವಿಲ್ಲ. ಆತ್ಮಿಕ ಅರ್ಥದಲ್ಲೂ ಯಾರೊಬ್ಬರೂ ಸಂಪೂರ್ಣವಾಗಿ ಸ್ವತಂತ್ರರಲ್ಲ. ಪೌಲನು ವಿವೇಚಿಸಿದ್ದು: “ನೀವು ಯಾವನಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ಯಜಮಾನನಿಗೆ ದಾಸರಾಗಿಯೇ ಇರುವಿರೆಂಬದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ ಫಲ; ನಂಬಿಕೆಯೆಂಬ ವಿಧೇಯತ್ವಕ್ಕೆ ದಾಸರಾದರೆ ನೀತಿಯೇ ಫಲ.”—ರೋಮಾಪುರ 6:16.
15. (ಎ) ದಾಸರಾಗಿರುವುದರ ಕುರಿತು ಜನರಿಗೆ ಹೇಗನಿಸುತ್ತದೆ, ಆದರೆ ಹೆಚ್ಚಿನ ಜನರು ಅಂತ್ಯದಲ್ಲಿ ಮಾಡುವುದು ಏನನ್ನು? (ಬಿ) ಯಾವ ಸೂಕ್ತವಾದ ಪ್ರಶ್ನೆಗಳನ್ನು ನಾವು ಸ್ವತಃ ಕೇಳಿಕೊಳ್ಳಬೇಕು?
15 ಯಾರೊ ಒಬ್ಬರ ದಾಸರಾಗಿರುವ ವಿಚಾರವು, ಹೆಚ್ಚಿನ ಜನರಿಗೆ ಅಪ್ರಸನ್ನಕರವಾಗಿರುತ್ತದೆ. ಆದರೂ, ಇಂದಿನ ಲೋಕದಲ್ಲಿ ಕಾಣುವ ವಾಸ್ತವಿಕತೆಯೇನೆಂದರೆ, ಜನರು ಅನೇಕ ವೇಳೆ ತಮ್ಮನ್ನು ಅನೇಕ ನವಿರಾದ ವಿಧಗಳಲ್ಲಿ ಅಧೀನಪಡಿಸಿಕೊಳ್ಳಲು ಮತ್ತು ಪ್ರಭಾವಿಸಲ್ಪಡಲು ಬಿಟ್ಟುಕೊಡುವ ಮೂಲಕ, ತಾವು ಏನನ್ನು ಮಾಡಬೇಕೆಂದು ಇತರರು ಬಯಸುತ್ತಾರೊ ಅದನ್ನೇ ಅನೈಚ್ಛಿಕವಾಗಿ ಮಾಡುತ್ತಾರೆ. ದೃಷ್ಟಾಂತಕ್ಕೆ, ಜಾಹೀರಾತು ಉದ್ಯಮ ಮತ್ತು ಮನೋರಂಜನೆಯ ಜಗತ್ತು, ಜನರು ಅನುಸರಿಸುವಂತೆ ಮಟ್ಟಗಳನ್ನು ಸ್ಥಾಪಿಸುತ್ತಾ, ಅವರಲ್ಲಿ ಏಕಪ್ರಕಾರದ ವಿಚಾರ ಮತ್ತು ಕ್ರಿಯೆಯನ್ನು ಮೂಡಿಸಲು ಪ್ರಯತ್ನಿಸುತ್ತದೆ. ಜನರು ತಮ್ಮ ವಿಚಾರಗಳು ಹಾಗೂ ಧ್ಯೇಯಗಳನ್ನು ಬೆಂಬಲಿಸುವಂತೆ ರಾಜಕೀಯ ಹಾಗೂ ಧಾರ್ಮಿಕ ಸಂಸ್ಥೆಗಳು ಮಾಡುತ್ತವೆ—ಯಾವಾಗಲೂ ಮನಗಾಣಿಸುವ ವಾಗ್ವಾದಗಳ ಮೂಲಕವಲ್ಲ, ಬದಲಾಗಿ ಅನೇಕ ವೇಳೆ ಐಕಮತ್ಯ ಇಲ್ಲವೆ ನಿಷ್ಠೆಯ ಹೆಸರಿನಲ್ಲಿ ಮಾಡುತ್ತವೆ. ‘ನಾವು ಯಾರಿಗೆ ವಿಧೇಯರಾಗುತ್ತೇವೊ ಅವರ ದಾಸರಾಗಿದ್ದೇವೆ’ ಎಂಬುದಾಗಿ ಪೌಲನು ಗಮನಿಸಿದ ಕಾರಣ, ನಮ್ಮಲ್ಲಿ ಪ್ರತಿಯೊಬ್ಬರು ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಒಳ್ಳೆಯದು: ‘ನಾನು ಯಾರ ದಾಸನಾಗಿದ್ದೇನೆ? ನನ್ನ ನಿರ್ಣಯಗಳು ಮತ್ತು ಜೀವನ ರೀತಿಯ ಮೇಲೆ ಅತ್ಯಧಿಕ ಪ್ರಭಾವವನ್ನು ಬೀರುವವರು ಯಾರು? ಧಾರ್ಮಿಕ ವೈದಿಕರೊ, ರಾಜಕೀಯ ಧುರೀಣರೊ, ಹಣಕಾಸಿನ ಧಣಿಗಳೊ, ಇಲ್ಲವೆ ಮನೋರಂಜನಾ ತಾರೆಗಳೊ? ನಾನು ಯಾರಿಗೆ ವಿಧೇಯನಾಗುತ್ತೇನೆ—ದೇವರಿಗೊ ಮನುಷ್ಯರಿಗೊ?’
16. ಯಾವ ಅರ್ಥದಲ್ಲಿ ಕ್ರೈಸ್ತರು ದೇವರ ದಾಸರಾಗಿದ್ದಾರೆ, ಮತ್ತು ಅಂತಹ ದಾಸತ್ವದ ಯೋಗ್ಯ ನೋಟವೇನಾಗಿದೆ?
16 ದೇವರಿಗೆ ತೋರಿಸುವ ವಿಧೇಯತೆಯನ್ನು ಕ್ರೈಸ್ತರು, ವೈಯಕ್ತಿಕ ಸ್ವಾತಂತ್ರ್ಯದ ಅಯುಕ್ತವಾದ ಅತಿಕ್ರಮವೆಂದು ಭಾವಿಸುವುದಿಲ್ಲ. ತಮ್ಮ ವೈಯಕ್ತಿಕ ಬಯಕೆಗಳು ಹಾಗೂ ಆದ್ಯತೆಗಳನ್ನು ಅವರು ದೇವರ ಚಿತ್ತಕ್ಕನುಗುಣವಾಗಿ ಹೊಂದಿಸಿಕೊಳ್ಳುತ್ತಾ, ತಮ್ಮ ಆದರ್ಶ ವ್ಯಕ್ತಿಯಾದ ಯೇಸು ಕ್ರಿಸ್ತನ ಮಾದರಿಯಲ್ಲಿ ತಮ್ಮ ಸ್ವಾತಂತ್ರ್ಯವನ್ನು ಸ್ವಇಚ್ಛೆಯಿಂದ ಪ್ರಯೋಗಿಸುತ್ತಾರೆ. (ಯೋಹಾನ 5:30; 6:38) ಅವರು “ಕ್ರಿಸ್ತನ ಮನಸ್ಸ”ನ್ನು ವಿಕಸಿಸಿಕೊಂಡು, ಸಭೆಯ ಶಿರಸ್ಸೋಪಾದಿ ಅವನಿಗೆ ತಮ್ಮನ್ನು ಅಧೀನಪಡಿಸಿಕೊಳ್ಳುತ್ತಾರೆ. (1 ಕೊರಿಂಥ 2:14-16; ಕೊಲೊಸ್ಸೆ 1:15-18) ಇದು, ವಿವಾಹವಾಗಿ ತಾನು ಪ್ರೀತಿಸುವ ಪುರುಷನೊಂದಿಗೆ ಸ್ವಇಚ್ಛೆಯಿಂದ ಸಹಕರಿಸುವ ಸ್ತ್ರೀಯಂತಿದೆ. ವಾಸ್ತವದಲ್ಲಿ, ಅಭಿಷಿಕ್ತ ಕ್ರೈಸ್ತರ ಗುಂಪು, ವಿವಾಹದಲ್ಲಿ ಕ್ರಿಸ್ತನಿಗೆ ಮಾತುಕೊಡಲ್ಪಟ್ಟಿರುವ ಪವಿತ್ರ ಕನ್ಯೆಯಂತೆ ಸಂಬೋಧಿಸಲ್ಪಟ್ಟಿದೆ.—2 ಕೊರಿಂಥ 11:2; ಎಫೆಸ 5:23, 24; ಪ್ರಕಟನೆ 19:7, 8.
17. ಯೆಹೋವನ ಸಾಕ್ಷಿಗಳಲ್ಲಿ ಸಕಲರೂ ಏನಾಗಲು ಆರಿಸಿಕೊಂಡಿದ್ದಾರೆ?
17 ಯೆಹೋವನ ಸಾಕ್ಷಿಗಳಲ್ಲಿ ಪ್ರತಿಯೊಬ್ಬನು, ಅವನಿಗೆ ಸ್ವರ್ಗೀಯ ನಿರೀಕ್ಷೆಯೇ ಇರಲಿ ಭೂನಿರೀಕ್ಷೆಯೇ ಇರಲಿ, ದೇವರ ಚಿತ್ತವನ್ನು ಮಾಡಲು ಮತ್ತು ರಾಜನಂತೆ ಆತನಿಗೆ ವಿಧೇಯನಾಗಲು ಒಂದು ವೈಯಕ್ತಿಕ ಸಮರ್ಪಣೆಯನ್ನು ಮಾಡಿದ್ದಾನೆ. ಪ್ರತಿಯೊಬ್ಬ ಸಾಕ್ಷಿಗೆ ಸಮರ್ಪಣೆಯು, ಮನುಷ್ಯರ ದಾಸನಾಗಿ ಉಳಿಯುವುದಕ್ಕಿಂತ ದೇವರ ಸೇವಕನಾಗುವ ಒಂದು ವೈಯಕ್ತಿಕ ಆಯ್ಕೆಯಾಗಿದೆ. ಇದು ಅಪೊಸ್ತಲ ಪೌಲನ ಸಲಹೆಗೆ ಹೊಂದಾಣಿಕೆಯಲ್ಲಿದೆ: “ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು, ಮನುಷ್ಯರಿಗೆ ದಾಸರಾಗಬೇಡಿರಿ.”—1 ಕೊರಿಂಥ 7:23.
ಸ್ವತಃ ಪ್ರಯೋಜನಪಡೆದುಕೊಳ್ಳಲು ಕಲಿತುಕೊಳ್ಳುವುದು
18. ಒಬ್ಬ ಭಾವಿ ಸಾಕ್ಷಿಯು ದೀಕ್ಷಾಸ್ನಾನಕ್ಕೆ ಅರ್ಹನಾಗುವುದು ಯಾವಾಗ?
18 ವ್ಯಕ್ತಿಯೊಬ್ಬನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಲು ಅರ್ಹನಾಗುವ ಮುಂಚೆ, ಅವನು ಶಾಸ್ತ್ರೀಯ ಅರ್ಹತೆಗಳನ್ನು ಪೂರೈಸಬೇಕು. ಒಬ್ಬ ಭಾವಿ ಸಾಕ್ಷಿಯು ಕ್ರೈಸ್ತ ಸಮರ್ಪಣೆಯ ಸೂಚ್ಯಾರ್ಥಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುತ್ತಾನೊ ಇಲ್ಲವೊ ಎಂಬುದನ್ನು ನಿರ್ಧರಿಸುವುದರಲ್ಲಿ ಹಿರಿಯರು ಜಾಗರೂಕರಾಗಿರುತ್ತಾರೆ. ಅವನು ನಿಜವಾಗಿಯೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರಲು ಬಯಸುತ್ತಾನೊ? ಅದು ಏನನ್ನು ಅವಶ್ಯಪಡಿಸುತ್ತದೊ ಅದಕ್ಕನುಗುಣವಾಗಿ ಜೀವಿಸಲು ಅವನು ಇಚ್ಛೆಯುಳ್ಳವನಾಗಿದ್ದಾನೊ? ಇಲ್ಲವಾದರೆ, ಅವನು ದೀಕ್ಷಾಸ್ನಾನಕ್ಕೆ ಅರ್ಹನಾಗಿರುವುದಿಲ್ಲ.
19. ದೇವರ ಸಮರ್ಪಿತ ಸೇವಕನಾಗಲು ನಿರ್ಧರಿಸುವ ಒಬ್ಬನನ್ನು ಟೀಕಿಸಲು ಯಾವ ಕಾರಣವೂ ಇರುವುದಿಲ್ಲವೇಕೆ?
19 ಆದರೆ ವ್ಯಕ್ತಿಯೊಬ್ಬನು ಎಲ್ಲ ಆವಶ್ಯಕತೆಗಳನ್ನು ಪೂರೈಸುವುದಾದರೆ, ದೇವರಿಂದ ಮತ್ತು ಆತನ ಪ್ರೇರಿತ ವಾಕ್ಯದಿಂದ ಪ್ರಭಾವಿಸಲ್ಪಡುವಂತೆ ತನ್ನನ್ನು ಅನುಮತಿಸಿಕೊಳ್ಳುವ ಒಂದು ವೈಯಕ್ತಿಕ ನಿರ್ಣಯವನ್ನು ಸ್ವಇಚ್ಛೆಯಿಂದ ಮಾಡಿದುದಕ್ಕಾಗಿ ಅವನು ಏಕೆ ಟೀಕಿಸಲ್ಪಡಬೇಕು? ಮನುಷ್ಯರಿಗಿಂತ ದೇವರಿಂದ ಪ್ರಭಾವಿಸಲ್ಪಡುವಂತೆ ತನ್ನನ್ನು ಅನುಮತಿಸಿಕೊಳ್ಳುವುದು ಕಡಮೆ ಸ್ವೀಕಾರಯೋಗ್ಯವಾಗಿದೆಯೊ? ಅಥವಾ ಇದರಿಂದ ಕಡಿಮೆ ಪ್ರಯೋಜನವೇನಾದರೂ ಇದೆಯೊ? ಯೆಹೋವನ ಸಾಕ್ಷಿಗಳು ಹಾಗೆಂದು ನೆನಸುವುದಿಲ್ಲ. ಯೆಶಾಯನಿಂದ ಬರೆದಿಡಲ್ಪಟ್ಟ ದೇವರ ಮಾತುಗಳೊಂದಿಗೆ ಅವರು ಮನಪೂರ್ವಕವಾಗಿ ಸಮ್ಮತಿಸುತ್ತಾರೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17.
20. ಯಾವ ವಿಷಯಗಳಲ್ಲಿ ಜನರು ಬೈಬಲ್ ಸತ್ಯದ ಮೂಲಕ ಬಿಡುಗಡೆಗೊಳಿಸಲ್ಪಡುತ್ತಾರೆ?
20 ನರಕಾಗ್ನಿಯಲ್ಲಿ ಅನಂತ ಯಾತನೆಯಂತಹ ಸುಳ್ಳು ಧಾರ್ಮಿಕ ಸಿದ್ಧಾಂತಗಳನ್ನು ನಂಬುವುದರಿಂದ ಬೈಬಲ್ ಸತ್ಯವು ಜನರನ್ನು ಬಿಡುಗಡೆಗೊಳಿಸುತ್ತದೆ. (ಪ್ರಸಂಗಿ 9:5, 10) ಅದರ ಬದಲಿಗೆ, ಅದು ಅವರ ಹೃದಯಗಳಲ್ಲಿ, ಮೃತರಿಗಾಗಿರುವ—ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಸಾಧ್ಯಗೊಳಿಸಲ್ಪಟ್ಟ ಪುನರುತ್ಥಾನದ—ನಿಜ ನಿರೀಕ್ಷೆಗಾಗಿ ಕೃತಜ್ಞತೆಯನ್ನು ತುಂಬಿಸುತ್ತದೆ. (ಮತ್ತಾಯ 20:28; ಅ. ಕೃತ್ಯಗಳು 24:15; ರೋಮಾಪುರ 6:23) ಸತತವಾಗಿ ಸುಳ್ಳಾಗಿ ಪರಿಣಮಿಸುವ ರಾಜಕೀಯ ವಾಗ್ದಾನಗಳ ಮೇಲೆ ಆತುಕೊಳ್ಳುವುದರಿಂದ ಉಂಟಾಗುವ ಆಶಾಭಂಗಗಳಿಂದ ಬೈಬಲ್ ಸತ್ಯವು ಜನರನ್ನು ಬಿಡುಗಡೆಗೊಳಿಸುತ್ತದೆ. ಬದಲಿಗೆ ಯೆಹೋವನ ರಾಜ್ಯವು ಈಗಾಗಲೇ ಸ್ವರ್ಗದಲ್ಲಿ ಆಳುತ್ತದೆ ಮತ್ತು ಬೇಗನೆ ಇಡೀ ಭೂಮಿಯ ಮೇಲೆ ಆಳುವುದೆಂಬ ಅರಿವಿನಿಂದ ಉಂಟಾಗುವ ಆನಂದದಿಂದ ಅವರ ಹೃದಯಗಳು ತುಂಬಿತುಳುಕುವಂತೆ ಅದು ಮಾಡುತ್ತದೆ. ಪತಿತ ಶರೀರಕ್ಕೆ ಆಕರ್ಷಕವಾಗಿದ್ದರೂ ದೇವರನ್ನು ಅಗೌರವಿಸುವಂತಹ ಮತ್ತು ವಿಫಲಗೊಂಡ ಸಂಬಂಧಗಳು, ಅನಾರೋಗ್ಯ, ಹಾಗೂ ಅಕಾಲಿಕ ಮೃತ್ಯುವಿನ ರೂಪದಲ್ಲಿ ಭಾರಿ ದಂಡವನ್ನು ಹೊರಿಸುವ ಅಭ್ಯಾಸಗಳಿಂದಲೂ ಬೈಬಲ್ ಸತ್ಯವು ಜನರನ್ನು ಮುಕ್ತಗೊಳಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ದೇವರ ದಾಸನಾಗಿರುವುದು ಮನುಷ್ಯರ ದಾಸನಾಗಿರುವುದಕ್ಕಿಂತಲೂ ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ. ವಾಸ್ತವದಲ್ಲಿ, ದೇವರಿಗೆ ಮಾಡಲ್ಪಟ್ಟ ಸಮರ್ಪಣೆಯು “ಈಗಿನ ಕಾಲದಲ್ಲಿ . . . ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವ”ದ ಲಾಭಗಳನ್ನು ವಾಗ್ದಾನಿಸುತ್ತದೆ.—ಮಾರ್ಕ 10:29, 30.
21. ದೇವರಿಗೆ ಮಾಡುವ ಸಮರ್ಪಣೆಯನ್ನು ಯೆಹೋವನ ಸಾಕ್ಷಿಗಳು ಹೇಗೆ ವೀಕ್ಷಿಸುತ್ತಾರೆ, ಮತ್ತು ಅವರ ಬಯಕೆ ಏನಾಗಿದೆ?
21 ಯೆಹೋವನ ಸಾಕ್ಷಿಗಳು ಇಂದು, ಗತಕಾಲದ ಇಸ್ರಾಯೇಲ್ಯರಂತೆ ಜನನದಿಂದ ಸಮರ್ಪಿತರಾದ ಜನಾಂಗದ ಭಾಗವಾಗಲಿಲ್ಲ. ಸಾಕ್ಷಿಗಳು ಸಮರ್ಪಿತ ಕ್ರೈಸ್ತರುಳ್ಳ ಒಂದು ಸಭೆಯ ಭಾಗವಾಗಿದ್ದಾರೆ. ದೀಕ್ಷಾಸ್ನಾನ ಪಡೆದುಕೊಂಡಿರುವ ಪ್ರತಿಯೊಬ್ಬ ಸಾಕ್ಷಿಯು, ಸಮರ್ಪಣೆಯನ್ನು ಮಾಡುವುದರಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ವೈಯಕ್ತಿಕವಾಗಿ ಪ್ರಯೋಗಿಸುವ ಮೂಲಕ ದೀಕ್ಷಾಸ್ನಾನ ಪಡೆದುಕೊಂಡಿರುತ್ತಾನೆ. ನಿಶ್ಚಯವಾಗಿಯೂ, ಯೆಹೋವನ ಸಾಕ್ಷಿಗಳಿಗೆ, ಸಮರ್ಪಣೆಯು ದೇವರಿಗೆ ಸ್ವಇಚ್ಛೆಯಿಂದ ಮಾಡಲ್ಪಡುವ ಸೇವೆಯಿಂದ ಗುರುತಿಸಲ್ಪಡುವ ಒಂದು ಆದರದ ವೈಯಕ್ತಿಕ ಸಂಬಂಧದಲ್ಲಿ ಫಲಿಸುತ್ತದೆ. ಯಾವ ಸ್ವಾತಂತ್ರ್ಯಕ್ಕಾಗಿ ಯೇಸು ಕ್ರಿಸ್ತನು ಅವರನ್ನು ಬಿಡುಗಡೆಗೊಳಿಸಿದನೊ ಆ ಸ್ವಾತಂತ್ರ್ಯವನ್ನು ಸದಾ ಭದ್ರವಾಗಿಟ್ಟುಕೊಳ್ಳುತ್ತಾ, ಈ ಆನಂದಕರ ಸಂಬಂಧವನ್ನು ಕಾಪಾಡಿಕೊಳ್ಳಲು ಅವರು ಹೃತ್ಪೂರ್ವಕವಾಗಿ ಬಯಸುತ್ತಾರೆ.
ನೀವು ಹೇಗೆ ಉತ್ತರಿಸುವಿರಿ?
◻ ಇಸ್ರಾಯೇಲ್ ತನ್ನ “ವಿಶೇಷ ಸ್ವತ್ತು” ಆಗುವಂತೆ ಆರಿಸಿದುದರಲ್ಲಿ ದೇವರು ಪಕ್ಷಪಾತಿಯಾಗಿರಲಿಲ್ಲವೇಕೆ?
◻ ಕ್ರೈಸ್ತ ಸಮರ್ಪಣೆಯು ಸ್ವಾತಂತ್ರ್ಯದ ನಷ್ಟವನ್ನು ಒಳಗೊಳ್ಳುವುದಿಲ್ಲವೆಂದು ನೀವು ಏಕೆ ಹೇಳುವಿರಿ?
◻ ಯೆಹೋವ ದೇವರಿಗೆ ಮಾಡುವ ಸಮರ್ಪಣೆಯ ಪ್ರಯೋಜನಗಳೇನು?
◻ ಮನುಷ್ಯರ ದಾಸನಾಗಿರುವುದಕ್ಕಿಂತಲೂ ಯೆಹೋವನ ಸೇವಕನಾಗಿರುವುದು ಹೆಚ್ಚು ಉತ್ತಮವೇಕೆ?
[ಪುಟ 15 ರಲ್ಲಿರುವ ಚಿತ್ರ]
ಪ್ರಾಚೀನ ಇಸ್ರಾಯೇಲಿನಲ್ಲಿ, ದೇವರಿಗೆ ಸಮರ್ಪಣೆಯು ಜನನದ ಮೇಲೆ ಅವಲಂಬಿಸಿತ್ತು
[ಪುಟ 16 ರಲ್ಲಿರುವ ಚಿತ್ರ]
ಕ್ರೈಸ್ತ ಸಮರ್ಪಣೆಯು ಆಯ್ಕೆಯ ವಿಷಯವಾಗಿದೆ