ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಭರವಸೆಯಿಡಿರಿ
“ನಿನ್ನ ನಾಮಮಹಿಮೆಯನ್ನು ಬಲ್ಲವರು ನಿನ್ನಲ್ಲಿ ಭರವಸವಿಡುವರು.”—ಕೀರ್ತನೆ 9:10.
1. ನಮ್ಮ ಆಧುನಿಕ ದಿನದಲ್ಲಿಯೂ ನಾವು ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಏಕೆ ಭರವಸೆಯುಳ್ಳವರಾಗಿರಸಾಧ್ಯವಿದೆ?
ಈ ಆಧುನಿಕ ಲೋಕದಲ್ಲಿ, ದೇವರಲ್ಲಿ ಮತ್ತು ಆತನ ವಾಕ್ಯವಾದ ಬೈಬಲಿನಲ್ಲಿ ಭರವಸೆಯಿಡುವ ಆಮಂತ್ರಣವು, ಅಪ್ರಾಯೋಗಿಕವಾಗಿಯೂ ಅವಾಸ್ತವಿಕವಾಗಿಯೂ ತೋರಬಹುದು. ಆದರೂ, ದೀರ್ಘ ಕಾಲಾವಧಿಯಿಂದಲೂ ದೇವರ ವಿವೇಕವು ಸತ್ಯವಾಗಿಯೂ ಪ್ರಾಯೋಗಿಕವಾಗಿಯೂ ರುಜುವಾಗಿದೆ. ಪುರುಷ ಮತ್ತು ಸ್ತ್ರೀಯ ಸೃಷ್ಟಿಕರ್ತನು ವಿವಾಹದ ಮತ್ತು ಕುಟುಂಬದ ಮೂಲಪ್ರವರ್ತಕನಾಗಿದ್ದಾನೆ, ಮತ್ತು ಬೇರೆ ಯಾವುದೇ ವ್ಯಕ್ತಿಗಿಂತಲೂ ಹೆಚ್ಚು ಉತ್ತಮವಾಗಿ ಆತನಿಗೆ ನಮ್ಮ ಅಗತ್ಯಗಳ ಅರಿವಿದೆ. ಮೂಲಭೂತ ಮಾನವ ಅಗತ್ಯಗಳು ಹೇಗೆ ಬದಲಾಗಿಲ್ಲವೊ ಹಾಗೆಯೇ ಆ ಅಗತ್ಯಗಳನ್ನು ಪೂರೈಸುವ ಪ್ರಾಥಮಿಕ ವಿಧಗಳು ಬದಲಾಗದೆ ಉಳಿದಿವೆ. ಬೈಬಲಿನ ವಿವೇಕಯುತ ಸಲಹೆಯು ಶತಮಾನಗಳ ಹಿಂದೆ ಬರೆಯಲ್ಪಟ್ಟಿದ್ದರೂ, ಜೀವಿಸುವುದರಲ್ಲಿ ಯಶಸ್ಸನ್ನು ಪಡೆಯಲಿಕ್ಕಾಗಿ ಮತ್ತು ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ, ಅತ್ಯುತ್ತಮವಾದ ಮಾರ್ಗದರ್ಶನೆಯನ್ನು ಇನ್ನೂ ಒದಗಿಸುತ್ತದೆ. ನಾವು ಜೀವಿಸುವ ನಯನಾಜೂಕಾದ, ವೈಜ್ಞಾನಿಕ ಲೋಕದಲ್ಲೂ ಅದಕ್ಕೆ ಕಿವಿಗೊಡುವುದು, ಹೆಚ್ಚಿನ ಸಂತೋಷದಲ್ಲಿ ಫಲಿಸುತ್ತದೆ!
2. (ಎ) ದೇವರ ಆಜ್ಞೆಗಳಿಗೆ ವಿಧೇಯರಾಗುವುದು ಯೆಹೋವನ ಜನರ ಜೀವಿತಗಳಲ್ಲಿ ಯಾವ ಒಳ್ಳೆಯ ಫಲವನ್ನು ಉತ್ಪಾದಿಸಿದೆ? (ಬಿ) ಆತನಿಗೆ ಮತ್ತು ಆತನ ವಾಕ್ಯಕ್ಕೆ ವಿಧೇಯರಾಗಿರುವವರಿಗೆ ಇನ್ನೇನನ್ನು ಯೆಹೋವನು ವಾಗ್ದಾನಿಸುತ್ತಾನೆ?
2 ಯೆಹೋವನಲ್ಲಿ ಭರವಸೆಯಿಡುವುದು ಮತ್ತು ಬೈಬಲಿನ ತತ್ವಗಳನ್ನು ಅನ್ವಯಿಸಿಕೊಳ್ಳುವುದು, ಪ್ರತಿದಿನ ಪ್ರಾಯೋಗಿಕ ಪ್ರಯೋಜನಗಳನ್ನು ತರುತ್ತದೆ. ಇದರ ಪ್ರಮಾಣವು, ಲೋಕದ ಸುತ್ತಲೂ, ಬೈಬಲಿನ ಸಲಹೆಯನ್ನು ಅನ್ವಯಿಸಿಕೊಳ್ಳುವ ದೃಢನಿಶ್ಚಯ ಮತ್ತು ಧೈರ್ಯವನ್ನು ಪಡೆದಿದ್ದ ಲಕ್ಷಾಂತರ ಯೆಹೋವನ ಸಾಕ್ಷಿಗಳ ಜೀವಿತಗಳಲ್ಲಿ ಪ್ರದರ್ಶಿಸಲಾಗುತ್ತದೆ. ಅವರಿಗೆ, ಸೃಷ್ಟಿಕರ್ತನಲ್ಲಿ ಮತ್ತು ಆತನ ವಾಕ್ಯದಲ್ಲಿನ ಭರವಸೆಯು, ಸರಿಯಾಗಿ ಇರಿಸಲ್ಪಟ್ಟ ಭರವಸೆಯಾಗಿ ಪರಿಣಮಿಸಿದೆ. (ಕೀರ್ತನೆ 9:9, 10) ದೇವರ ಆಜ್ಞೆಗಳಿಗೆ ವಿಧೇಯರಾಗುವುದು, ಶುಚಿತ್ವ, ಪ್ರಾಮಾಣಿಕತೆ, ಉದ್ಯೋಗಶೀಲತೆ, ಇತರರ ಜೀವ ಮತ್ತು ಸ್ವತ್ತುಗಳಿಗಾಗಿ ಗೌರವ, ಮತ್ತು ಅನ್ನಪಾನಗಳಲ್ಲಿ ಮಿತಿಯ ವಿಷಯವಾಗಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಿದೆ. ಅದು ಕುಟುಂಬ ವೃತ್ತದೊಳಗೆ ಯೋಗ್ಯವಾದ ಪ್ರೀತಿ ಮತ್ತು ತರಬೇತಿಗೆ—ಅತಿಥಿ ಸತ್ಕಾರ ಮಾಡುವವರಾಗಿ, ತಾಳ್ಮೆಯುಳ್ಳವರಾಗಿ, ಕರುಣಾಮಯಿಗಳಾಗಿ ಮತ್ತು ಕ್ಷಮಿಸುವವರಾಗಿ ಇರುವುದು—ಅಷ್ಟೇ ಅಲ್ಲದೆ ಹಲವಾರು ಇತರ ವಿಷಯಗಳಿಗೆ ನಡೆಸಿದೆ. ಬಹು ಮಟ್ಟಿಗೆ ಅವರು ಕ್ರೋಧ, ದ್ವೇಷ, ಕೊಲೆ, ಅಸೂಯೆ, ಭಯ, ಮೈಗಳ್ಳತನ, ಅಹಂಕಾರ, ಸುಳ್ಳು ಹೇಳುವುದು, ನಿಂದೆ, ಸ್ವೇಚ್ಛಾಚಾರ ಮತ್ತು ಅನೈತಿಕತೆಯ ಕೆಟ್ಟ ಫಲವನ್ನು ದೂರವಿರಿಸಲು ಶಕ್ತರಾಗಿದ್ದಾರೆ. (ಕೀರ್ತನೆ 32:10) ಆದರೆ ತನ್ನ ನಿಯಮಗಳನ್ನು ಪಾಲಿಸುವವರಿಗೆ ಒಂದು ಒಳ್ಳೆಯ ಪರಿಣಾಮಕ್ಕಿಂತ ಹೆಚ್ಚನ್ನು ದೇವರು ವಾಗ್ದಾನಿಸುತ್ತಾನೆ. ಕ್ರೈಸ್ತ ಮಾರ್ಗವನ್ನು ಅನುಸರಿಸುವವರಿಗೆ “ಈಗಿನ ಕಾಲದಲ್ಲಿ . . . ತಾಯಿ ಮಕ್ಕಳು ಭೂಮಿ ಇವೆಲ್ಲವೂ ಹಿಂಸೆಗಳು ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.”—ಮಾರ್ಕ 10:29, 30.
ಲೌಕಿಕ ವಿವೇಕದಲ್ಲಿ ಭರವಸೆಯಿಡುವುದನ್ನು ತೊರೆಯಿರಿ
3. ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಭರವಸೆಯನ್ನಿಡಲು ಮುಂದುವರಿಯುವಾಗ, ಯಾವ ಸಮಸ್ಯೆಗಳನ್ನು ಕ್ರೈಸ್ತರು ಕೆಲವೊಮ್ಮೆ ಎದುರಿಸುತ್ತಾರೆ?
3 ಅಪರಿಪೂರ್ಣ ಮಾನವರಿಗಿರುವ ಒಂದು ಸಮಸ್ಯೆಯು ಏನೆಂದರೆ, ಅವರು ದೇವರು ಕೇಳಿಕೊಳ್ಳುವುದನ್ನು ನಿಕೃಷ್ಟ ಮಾಡುವ ಅಥವಾ ಮರೆತುಬಿಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ತಮ್ಮ ವಿವೇಕವು ಉತ್ಕೃಷ್ಟವಾದದ್ದೆಂದು ಅಥವಾ ಈ ಲೋಕದ ವಿದ್ಯಾವಂತ ವರ್ಗದಿಂದ ಬರುವ ವಿವೇಕವು ದೇವರ ವಿವೇಕಕ್ಕಿಂತ ಶ್ರೇಷ್ಠವಾದದ್ದೆಂದು, ಅದು ಹೆಚ್ಚು ಸದ್ಯೋಚಿತವಾದದ್ದೆಂದು ಸುಲಭವಾಗಿ ಭಾವಿಸತೊಡಗುತ್ತಾರೆ. ಈ ಲೋಕದ ಮಧ್ಯದಲ್ಲಿ ಅವರು ಜೀವಿಸುತ್ತಿರುವಂತೆಯೇ ದೇವರ ಸೇವಕರು ಸಹ ಈ ಮನೋಭಾವವನ್ನು ಬೆಳೆಸಿಕೊಳ್ಳಬಲ್ಲರು. ಹೀಗೆ, ಆತನ ಸಲಹೆಗೆ ಕಿವಿಗೊಡುವ ಪ್ರೀತಿಪರ ಆಮಂತ್ರಣವನ್ನು ನೀಡುವುದರೊಂದಿಗೆ, ನಮ್ಮ ಸ್ವರ್ಗೀಯ ತಂದೆಯು ಸೂಕ್ತವಾದ ಎಚ್ಚರಿಕೆಗಳನ್ನೂ ಸೇರಿಸುತ್ತಾನೆ: “ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು. ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು. ನೀನೇ ಬುದ್ಧಿವಂತನು ಎಂದೆಣಿಸದೆ ಯೆಹೋವನಿಗೆ ಭಯಪಟ್ಟು ಕೆಟ್ಟದ್ದನ್ನು ತೊರೆದುಬಿಡು.”—ಜ್ಞಾನೋಕ್ತಿ 3:1, 2, 5-7.
4. “ಇಹಲೋಕ ಜ್ಞಾನವು” ಎಷ್ಟು ವ್ಯಾಪಕವಾಗಿದೆ ಮತ್ತು ಅದು “ದೇವರ ಮುಂದೆ ಹುಚ್ಚುತನವಾಗಿದೆ” ಏಕೆ?
4 ಈ ಲೋಕದ ವಿವೇಕವು ಸಮೃದ್ಧವಾಗಿ ಮತ್ತು ಅನೇಕ ಮೂಲಗಳಿಂದ ಲಭ್ಯವಾಗಿರುತ್ತದೆ. ಕಲಿಕೆಯ ಅನೇಕ ಸಂಸ್ಥಾಪನೆಗಳಿವೆ, ಮತ್ತು “ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ.” (ಪ್ರಸಂಗಿ 12:12) ಈಗ ಕಂಪ್ಯೂಟರ್ ಲೋಕದ ಮಾಹಿತಿಯ ಸೂಪರ್ಹೈವೇ ಎಂದು ಕರೆಯಲ್ಪಡುವ ಸಂಗತಿಯು, ಬಹುಮಟ್ಟಿಗೆ ಯಾವುದೇ ವಿಷಯದ ಮೇಲೆ ಅಪರಿಮಿತ ದತ್ತಾಂಶವನ್ನು ಒದಗಿಸುವ ವಾಗ್ದಾನ ಮಾಡುತ್ತದೆ. ಆದರೆ ಈ ಎಲ್ಲ ಜ್ಞಾನವು ಲಭ್ಯವಾಗಿರುವಂತೆ ಮಾಡುವುದು, ಲೋಕವನ್ನು ಹೆಚ್ಚು ವಿವೇಕವುಳ್ಳದ್ದಾಗಿ ಅಥವಾ ತನ್ನ ಸಮಸ್ಯೆಗಳನ್ನು ಬಗೆಹರಿಸುವಂತಹದ್ದಾಗಿ ಮಾಡುವುದಿಲ್ಲ. ಬದಲಿಗೆ, ಲೋಕ ಪರಿಸ್ಥಿತಿಯು ಪ್ರತಿದಿನ ಹೆಚ್ಚು ಕೆಟ್ಟದಾಗುತ್ತದೆ. ಗ್ರಾಹ್ಯವಾಗಿಯೇ, “ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ,” ಎಂದು ಬೈಬಲ್ ನಮಗೆ ಹೇಳುತ್ತದೆ.—1 ಕೊರಿಂಥ 3:19, 20.
5. “ಇಹಲೋಕ ಜ್ಞಾನ”ದ ವಿಷಯವಾಗಿ ಯಾವ ಎಚ್ಚರಿಕೆಗಳನ್ನು ಬೈಬಲು ಕೊಡುತ್ತದೆ?
5 ಈ ಕಡೇ ದಿವಸಗಳ ಅಂತಿಮ ಭಾಗದಲ್ಲಿ, ಪ್ರಧಾನ ವಂಚಕ, ಪಿಶಾಚನಾದ ಸೈತಾನನು, ಬೈಬಲಿನ ಸತ್ಯತೆಯಲ್ಲಿನ ದೃಢವಿಶ್ವಾಸವನ್ನು ಕಡಿಮೆಗೊಳಿಸುವ ಒಂದು ಪ್ರಯತ್ನದಲ್ಲಿ, ಸುಳ್ಳುಗಳ ಹುಚ್ಚುಪ್ರವಾಹವೊಂದನ್ನು ಬಿಡುವನೆಂಬುದು ನಿರೀಕ್ಷಿಸತಕ್ಕ ವಿಷಯವೇ. ಬೈಬಲಿನ ಯಥಾರ್ಥತೆ ಮತ್ತು ವಿಶ್ವಾಸಾರ್ಹತೆಗೆ ಸವಾಲೊಡ್ಡುವ ಊಹಾತ್ಮಕ ಪುಸ್ತಕಗಳ ಸಮೃದ್ಧಿಯನ್ನು ಉನ್ನತ ವಿಮರ್ಶಕರು ಉತ್ಪಾದಿಸಿದ್ದಾರೆ. ಪೌಲನು ತನ್ನ ಜೊತೆ ಕ್ರೈಸ್ತನನ್ನು ಎಚ್ಚರಿಸಿದ್ದು: “ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆಮಾತುಗಳಿಗೂ ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವದನ್ನೇ ಕಾಪಾಡು. ಕೆಲವರು ಆ ಸುಳ್ಳಾದ ಜ್ಞಾನವನ್ನು ಅವಲಂಬಿಸಿ ಕ್ರಿಸ್ತನಂಬಿಕೆಯಿಂದ ಭ್ರಷ್ಟರಾದರು.” (1 ತಿಮೊಥೆಯ 6:20, 21) ಬೈಬಲ್ ಮತ್ತೂ ಎಚ್ಚರಿಸುವುದು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.”—ಕೊಲೊಸ್ಸೆ 2:8.
ಸಂದೇಹಪಡುವ ಪ್ರವೃತ್ತಿಯ ವಿರುದ್ಧ ಹೋರಾಡಿರಿ
6. ಸಂದೇಹಗಳು ಹೃದಯದಲ್ಲಿ ಬೇರೂರುವುದನ್ನು ತಡೆಯಲು, ಜಾಗರೂಕತೆಯು ಏಕೆ ಅಗತ್ಯವಾಗಿದೆ?
6 ಪಿಶಾಚನ ಮತ್ತೊಂದು ಕುಯುಕ್ತಿಯು, ಮನಸ್ಸಿನಲ್ಲಿ ಸಂದೇಹಗಳ ನೆಡುವಿಕೆಯಾಗಿದೆ. ನಂಬಿಕೆಯಲ್ಲಿ ಒಂದಿಷ್ಟು ಬಲಹೀನತೆಯನ್ನು ನೋಡಲು ಮತ್ತು ಅದನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳಲು ಅವನು ಸದಾ ಜಾಗರೂಕನಾಗಿದ್ದಾನೆ. ಸಂದೇಹಗಳನ್ನು ಅನುಭವಿಸುವ ಯಾವುದೇ ವ್ಯಕ್ತಿಯು, ಹವ್ವಳಿಗೆ, “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ” ಎಂದು ಹೇಳಿದವನೇ ಇಂತಹ ಸಂದೇಹಗಳ ಮರೆಯಲ್ಲಿರುವವನಾಗಿದ್ದಾನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಒಮ್ಮೆ ಆ ಪ್ರಲೋಭನಕಾರನು ಆಕೆಯ ಮನಸ್ಸಿನಲ್ಲಿ ಸಂದೇಹವನ್ನು ನೆಟ್ಟ ಮೇಲೆ, ಮುಂದಿನ ಹೆಜ್ಜೆಯು ಆಕೆಗೊಂದು ಸುಳ್ಳನ್ನು ಹೇಳುವುದಾಗಿತ್ತು, ಅದನ್ನು ಆಕೆ ನಂಬಿದಳು. (ಆದಿಕಾಂಡ 3:1, 4, 5) ಸಂದೇಹದ ಮೂಲಕ ಹವ್ವಳ ನಂಬಿಕೆಯು ನಾಶವಾದ ಹಾಗೆ ನಮ್ಮ ನಂಬಿಕೆಯು ನಾಶವಾಗುವುದನ್ನು ತೊರೆಯಲು, ನಾವು ಜಾಗರೂಕರಾಗಿರಬೇಕಾಗಿದೆ. ಯೆಹೋವನ, ಆತನ ವಾಕ್ಯದ, ಅಥವಾ ಆತನ ಸಂಸ್ಥೆಯ ಕುರಿತು ಸಂದೇಹದ ಛಾಯೆಯಾದರೂ ನಮ್ಮ ಹೃದಯದಲ್ಲಿ ಬಳಸಾಡತೊಡಗಿದ್ದರೆ, ನಿಮ್ಮ ನಂಬಿಕೆಯನ್ನು ನಾಶಮಾಡಸಾಧ್ಯವಿರುವ ಯಾವುದೇ ವಿಷಯವಾಗಿ ಅದು ಕೀವುಗಟ್ಟುವ ಮುಂಚೆ ಅದನ್ನು ನಿರ್ಮೂಲ ಮಾಡಲು ಕ್ಷಿಪ್ರ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ.—ಹೋಲಿಸಿ 1 ಕೊರಿಂಥ 10:12.
7. ಸಂದೇಹಗಳನ್ನು ತೊಡೆದುಹಾಕಲು ಏನನ್ನು ಮಾಡಸಾಧ್ಯವಿದೆ?
7 ಏನು ಮಾಡಸಾಧ್ಯವಿದೆ? ಪುನಃ ಉತ್ತರವು, ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಭರವಸೆಯಿಡುವುದಾಗಿದೆ. “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. ಸ್ವಲ್ಪವೂ ಸಂದೇಹಪಡದೆ ನಂಬಿಕೆಯಿಟ್ಟು ಕೇಳಿಕೊಳ್ಳಬೇಕು. ಸಂದೇಹಪಡುವವನೋ ಗಾಳಿಯಿಂದ ಬಡಿಯಲ್ಪಟ್ಟ ಸಮುದ್ರದ ತೆರೆಯಂತೆ ಅಲೆಯುತ್ತಿರುವನು.” (ಯಾಕೋಬ 1:5, 6; 2 ಪೇತ್ರ 3:17, 18) ಆದುದರಿಂದ ಯೆಹೋವನಿಗೆ ಶ್ರದ್ಧಾಪೂರ್ವಕವಾದ ಪ್ರಾರ್ಥನೆಯು ಪ್ರಥಮ ಹೆಜ್ಜೆಯಾಗಿದೆ. (ಕೀರ್ತನೆ 62:8) ಅನಂತರ, ಸಭೆಯಲ್ಲಿರುವ ಪ್ರೀತಿಯ ಮೇಲ್ವಿಚಾರಕರಿಂದ ಸಹಾಯವನ್ನು ಕೇಳಲು ಹಿಂಜರಿಯಬೇಡಿ. (ಅ. ಕೃತ್ಯಗಳು 20:28; ಯಾಕೋಬ 5:14, 15; ಯೂದ 22) ನಿಮ್ಮ ಸಂದೇಹಗಳ ಮೂಲವನ್ನು ಗುರುತಿಸಲು ಅವರು ನಿಮಗೆ ಸಹಾಯ ಮಾಡುವರು, ಅದು ಅಹಂಕಾರ ಅಥವಾ ಯಾವುದಾದರೂ ತಪ್ಪು ಆಲೋಚನೆಯ ಕಾರಣದಿಂದಿರಬಹುದು.
8. ಧರ್ಮಭ್ರಷ್ಟ ಆಲೋಚನೆಯು ಅನೇಕ ವೇಳೆ ಹೇಗೆ ಪ್ರಾರಂಭವಾಗುತ್ತದೆ, ಮತ್ತು ಪರಿಹಾರವೇನು?
8 ಧರ್ಮಭ್ರಷ್ಟ ವಿಚಾರಗಳ ಅಥವಾ ಲೌಕಿಕ ತತ್ವಜ್ಞಾನದ ಓದುವಿಕೆ ಅಥವಾ ಕಿವಿಗೊಡುವಿಕೆಯು ವಿಷಭರಿತ ಸಂದೇಹಗಳನ್ನು ಪರಿಚಯಿಸಿದೆಯೊ? ವಿವೇಕಯುತವಾಗಿ, ಬೈಬಲ್ ಸಲಹೆ ನೀಡುವುದು: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು. ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೆ ದೂರವಾಗಿರು; ಅವುಗಳಿಗೆ ಮನಸ್ಸು ಕೊಡುವವರು ಹೆಚ್ಚೆಚ್ಚಾಗಿ ಭಕ್ತಿಹೀನರಾಗುವರು. ಅವರ ಮಾತು ಕೊಳಕು ಹುಣ್ಣಿನಂತೆ ಹರಡಿಕೊಳ್ಳುವದು.” (2 ತಿಮೊಥೆಯ 2:15-17) ಧರ್ಮಭ್ರಷ್ಟತೆಯ ಬಲಿಗಳಾದ ಅನೇಕರು, ಯೆಹೋವನ ಸಂಸ್ಥೆಯಲ್ಲಿ ತಾವು ಉಪಚರಿಸಲ್ಪಡುತ್ತಿರುವ ವಿಷಯವಾಗಿ ಅವರಿಗೆ ಹೇಗೆ ಅನಿಸಿತೆಂಬುದರ ಕುರಿತು ಮೊದಲು ದೂರು ಹೇಳುವ ಮೂಲಕ ತಪ್ಪಾದ ದಿಕ್ಕಿನಲ್ಲಿ ಸಾಗತೊಡಗಿದರೆಂಬುದು ಆಸಕ್ತಿಯ ವಿಷಯವಾಗಿದೆ. (ಯೂದ 16) ನಂಬಿಕೆಗಳಲ್ಲಿ ತಪ್ಪನ್ನು ಕಂಡುಹಿಡಿಯುವುದು ನಂತರ ಬಂದಿತು. ಅಂಗಕ್ಷಯವನ್ನು ಕಡಿದು ಹಾಕಲು ಶಸ್ತ್ರಚಿಕಿತ್ಸಕನೊಬ್ಬನು ಕ್ಷಿಪ್ರವಾಗಿ ಕ್ರಿಯೆಗೈಯುವ ಹಾಗೆ, ದೂರು ಹೇಳುವ, ಕ್ರೈಸ್ತ ಸಭೆಯಲ್ಲಿ ವಿಷಯಗಳು ನಡೆಸಲ್ಪಡುವ ವಿಧದೊಂದಿಗೆ ಅತೃಪ್ತರಾಗಿರುವ ಯಾವುದೇ ಪ್ರವೃತ್ತಿಯನ್ನು ಮನಸ್ಸಿನಿಂದ ನಿರ್ಮೂಲ ಮಾಡಲು ಕ್ಷಿಪ್ರವಾಗಿ ಕ್ರಿಯೆಗೈಯಿರಿ. (ಕೊಲೊಸ್ಸೆ 3:13, 14) ಅಂತಹ ಸಂದೇಹಗಳನ್ನು ಪೋಷಿಸುವ ಯಾವುದೇ ವಿಷಯವನ್ನು ತೆಗೆದುಹಾಕಿ.—ಮಾರ್ಕ 9:43.
9. ನಂಬಿಕೆಯಲ್ಲಿ ಆರೋಗ್ಯವಂತರಾಗಿ ಉಳಿಯುವಂತೆ ಒಂದು ಒಳ್ಳೆಯ ದೇವಪ್ರಭುತ್ವ ನಿತ್ಯಕ್ರಮವು ನಮಗೆ ಹೇಗೆ ಸಹಾಯ ಮಾಡುವುದು?
9 ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ನಿಕಟವಾಗಿ ಅಂಟಿಕೊಳ್ಳಿರಿ. ನಿಷ್ಠೆಯಿಂದ ಪೇತ್ರನ ಅನುಕರಣೆ ಮಾಡಿರಿ, ಅವನು ದೃಢಸಂಕಲ್ಪದಿಂದ ಹೇಳಿದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು.” (ಯೋಹಾನ 6:52, 60, 66-68) ನಿಮ್ಮ ನಂಬಿಕೆಯನ್ನು ಬಲವಾಗಿಟ್ಟು, ಒಂದು ದೊಡ್ಡ ಗುರಾಣಿಯಂತೆ “ಕೆಡುಕನ ಅಗ್ನಿ ಬಾಣಗಳನ್ನೆಲ್ಲಾ ಆರಿಸುವದಕ್ಕೆ” ಶಕ್ತರಾಗುವಂತೆ, ಯೆಹೋವನ ವಾಕ್ಯದ ಅಧ್ಯಯನದ ಒಂದು ಒಳ್ಳೆಯ ಕಾರ್ಯತಖ್ತೆಯನ್ನಿಟ್ಟುಕೊಳ್ಳಿರಿ. (ಎಫೆಸ 6:16) ಇತರರೊಂದಿಗೆ ರಾಜ್ಯ ಸಂದೇಶವನ್ನು ಪ್ರೀತಿಪೂರ್ವಕವಾಗಿ ಹಂಚಿಕೊಳ್ಳುತ್ತಾ, ಕ್ರೈಸ್ತ ಶುಶ್ರೂಷೆಯಲ್ಲಿ ಸಕ್ರಿಯರಾಗಿರಿ. ಪ್ರತಿದಿನ ಯೆಹೋವನು ನಿಮ್ಮನ್ನು ಹೇಗೆ ಆಶೀರ್ವದಿಸಿದ್ದಾನೆಂಬುದರ ಕುರಿತು ಗಣನಾತ್ಮಕವಾಗಿ ಮನನ ಮಾಡಿರಿ. ಸತ್ಯದ ಜ್ಞಾನ ನಿಮಗಿದೆ ಎಂಬ ವಿಷಯಕ್ಕೆ ಕೃತಜ್ಞತೆಯುಳ್ಳವರಾಗಿರಿ. ಈ ಎಲ್ಲ ವಿಷಯಗಳನ್ನು ಒಂದು ಒಳ್ಳೆಯ ಕ್ರೈಸ್ತೋಚಿತ ನಿತ್ಯಕ್ರಮದಲ್ಲಿ ಮಾಡುವುದು, ಸಂತೋಷದಿಂದಿರಲು, ತಾಳಿಕೊಳ್ಳಲು ಮತ್ತು ಸಂದೇಹಗಳಿಂದ ವಿಮುಕ್ತರಾಗಿ ಉಳಿಯಲು ನಿಮಗೆ ಸಹಾಯ ಮಾಡುವುದು.—ಕೀರ್ತನೆ 40:4; ಫಿಲಿಪ್ಪಿ 3:15, 16; ಇಬ್ರಿಯ 6:10-12.
ವಿವಾಹದಲ್ಲಿ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವುದು
10. ಕ್ರೈಸ್ತ ವಿವಾಹದಲ್ಲಿ ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ನೋಡುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ ಏಕೆ?
10 ವಿವಾಹಿತ ದಂಪತಿಗಳೋಪಾದಿ ಪುರುಷ ಮತ್ತು ಸ್ತ್ರೀಯು ಒಟ್ಟಿಗೆ ಜೀವಿಸುವಂತೆ ಏರ್ಪಡಿಸುವುದರಲ್ಲಿ, ಯೆಹೋವನು ಭೂಮಿಯನ್ನು ತೊಂದರೆಯಿಲ್ಲದೆ ತುಂಬುವುದನ್ನು ಮಾತ್ರವಲ್ಲ ಅವರ ಸಂತೋಷವನ್ನೂ ಹೆಚ್ಚಿಸಲು ಉದ್ದೇಶಿಸಿದನು. ಆದರೆ, ಪಾಪ ಮತ್ತು ಅಪರಿಪೂರ್ಣತೆಯು ವಿವಾಹದ ಸಂಬಂಧದೊಳಗೆ ಗಂಭೀರ ಸಮಸ್ಯೆಗಳನ್ನು ತಂದಿವೆ. ಕ್ರೈಸ್ತರು ಇವುಗಳಿಂದ ವಿಮುಕ್ತರಾಗಿಲ್ಲ, ಏಕೆಂದರೆ ಅವರೂ ಅಪರಿಪೂರ್ಣರಾಗಿದ್ದಾರೆ ಮತ್ತು ಆಧುನಿಕ ದಿನದ ಜೀವನದ ಒತ್ತಡಗಳನ್ನು ಅನುಭವಿಸುತ್ತಾರೆ. ಆದರೂ, ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಅವರು ಭರವಸೆಯಿಡುವ ತನಕ, ಕ್ರೈಸ್ತರಿಗೆ ವಿವಾಹದಲ್ಲಿ ಮತ್ತು ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಒಳ್ಳೆಯ ಯಶಸ್ಸು ಇರಬಲ್ಲದು. ಕ್ರೈಸ್ತ ವಿವಾಹದಲ್ಲಿ ಲೌಕಿಕ ಆಚರಣೆಗಳಿಗೆ ಮತ್ತು ವರ್ತನೆಗೆ ಅವಕಾಶವಿರುವುದಿಲ್ಲ. ದೇವರ ವಾಕ್ಯವು ನಮಗೆ ಬುದ್ಧಿವಾದ ನೀಡುವುದು: “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.”—ಇಬ್ರಿಯ 13:4.
11. ದಾಂಪತ್ಯದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ, ಯಾವ ವಿಷಯವು ಸಂಗಾತಿಗಳಿಬ್ಬರಿಂದಲೂ ಗುರುತಿಸಲ್ಪಡಬೇಕು?
11 ಬೈಬಲಿನ ಸಲಹೆಗನುಸಾರ ನೆರವೇರಿಸಲ್ಪಡುವ ವಿವಾಹವು, ಪ್ರೀತಿ, ಬದ್ಧತೆ ಮತ್ತು ಭದ್ರತೆಯ ವಾತಾವರಣವನ್ನು ಪಡೆದಿರುತ್ತದೆ. ಗಂಡಹೆಂಡತಿಯರಿಬ್ಬರೂ ತಲೆತನದ ಮೂಲತತ್ವವನ್ನು ಅರ್ಥಮಾಡಿಕೊಂಡು, ಅದನ್ನು ಗೌರವಿಸುತ್ತಾರೆ. ತೊಂದರೆಗಳು ವಿಕಸಿಸುವಾಗ, ಅನೇಕ ವೇಳೆ ಅವು ಬೈಬಲಿನ ಸಲಹೆಯನ್ನು ಅನ್ವಯಿಸುವ ವಿಷಯದಲ್ಲಿ ಸ್ವಲ್ಪ ಕಡೆಗಣಿಕೆಯಿಂದಾಗಿರುತ್ತವೆ. ಬಳಸಾಡುತ್ತಿರುವ ಒಂದು ಸಮಸ್ಯೆಯನ್ನು ಬಗೆಹರಿಸುವುದರಲ್ಲಿ, ಸಂಗಾತಿಗಳಿಬ್ಬರೂ ಪ್ರಾಮಾಣಿಕವಾಗಿ ಸಮಸ್ಯೆಯು ನಿಜವಾಗಿ ಏನಾಗಿದೆ ಎಂಬುದರ ಮೇಲೆ ಕೇಂದ್ರೀಕರಿಸಿ, ಲಕ್ಷಣಗಳ ಬದಲಿಗೆ ಕಾರಣಗಳೊಂದಿಗೆ ವ್ಯವಹರಿಸುವುದು ಪ್ರಾಮುಖ್ಯವಾಗಿದೆ. ಇತ್ತೀಚಿನ ಚರ್ಚೆಗಳು ಕಡಿಮೆ ಅಥವಾ ಯಾವುದೇ ಒಪ್ಪಂದಕ್ಕೆ ನಡೆಸಿಲ್ಲವಾದರೆ, ಒಬ್ಬ ಪ್ರೀತಿಯ ಮೇಲ್ವಿಚಾರಕನಿಂದ ನಿಷ್ಪಕ್ಷಪಾತವಾದ ಸಹಾಯಕ್ಕಾಗಿ ದಂಪತಿಗಳು ಕೇಳಬಹುದು.
12. (ಎ) ವಿವಾಹದಲ್ಲಿನ ಯಾವ ಸಾಮಾನ್ಯ ಸಮಸ್ಯೆಗಳ ವಿಷಯವಾಗಿ ಬೈಬಲು ಸಲಹೆಯನ್ನು ಒದಗಿಸುತ್ತದೆ? (ಬಿ) ವಿಷಯಗಳನ್ನು ಯೆಹೋವನ ವಿಧದಲ್ಲಿ ಮಾಡುವ ಅಗತ್ಯವು ಸಂಗಾತಿಗಳಿಬ್ಬರ ವತಿಯಿಂದಲೂ ಏಕೆ ಕೇಳಿಕೊಳ್ಳಲ್ಪಡುತ್ತದೆ?
12 ಸಮಸ್ಯೆಯು ಸಂವಾದ, ಪ್ರತಿಯೊಬ್ಬರ ಅನಿಸಿಕೆಗಳಿಗಾಗಿ ಗೌರವ, ತಲೆತನಕ್ಕಾಗಿ ಗೌರವ, ಅಥವಾ ನಿರ್ಣಯಗಳು ಹೇಗೆ ಮಾಡಲ್ಪಡುತ್ತವೆ ಎಂಬುದನ್ನು ಒಳಗೊಳ್ಳುತ್ತದೊ? ಅದು ಮಕ್ಕಳ ಪೋಷಣೆ ಅಥವಾ ಲೈಂಗಿಕ ಅಗತ್ಯಗಳ ಸಂಬಂಧದಲ್ಲಿ ಸಮತೂಕವುಳ್ಳವರಾಗಿರುವ ವಿಷಯದೊಂದಿಗೆ ಸಂಬಂಧಿಸಿದೆಯೊ? ಅಥವಾ ಅದು ಕುಟುಂಬದ ಆಯವ್ಯಯ, ಮನೋರಂಜನೆ, ಸಾಹಚರ್ಯ, ಹೆಂಡತಿಯು ಉದ್ಯೋಗಸ್ಥಳಾಗಿರಬೇಕೊ ಇಲ್ಲವೊ ಅಥವಾ ನೀವು ಜೀವಿಸಬೇಕಾದ ಸ್ಥಳವಾಗಿದೆಯೊ? ಸಮಸ್ಯೆಯು ಏನೇ ಆಗಿರಲಿ, ನಿಯಮಗಳ ಮೂಲಕ ಪ್ರತ್ಯಕ್ಷವಾಗಿಯಾಗಲಿ ತತ್ವಗಳ ಮೂಲಕ ಪರೋಕ್ಷವಾಗಿಯಾಗಲಿ ಬೈಬಲು ಪ್ರಾಯೋಗಿಕ ಬುದ್ಧಿವಾದವನ್ನು ಕೊಡುತ್ತದೆ. (ಮತ್ತಾಯ 19:4, 5, 9; 1 ಕೊರಿಂಥ 7:1-40; ಎಫೆಸ 5:21-23, 28-33; 6:1-4; ಕೊಲೊಸ್ಸೆ 3:18-21; ತೀತ 2:4, 5; 1 ಪೇತ್ರ 3:1-7) ಸ್ವಾರ್ಥ ತಗಾದೆಗಳನ್ನು ಮಾಡುವುದರಿಂದ ಸಂಗಾತಿಗಳಿಬ್ಬರೂ ದೂರವಿರುವಾಗ ಮತ್ತು ತಮ್ಮ ವಿವಾಹದಲ್ಲಿ ಪ್ರೀತಿಯು ತನ್ನ ಪೂರ್ಣ ಅಭಿವ್ಯಕ್ತಿಯನ್ನು ಪಡೆಯುವಂತೆ ಬಿಡುವಾಗ, ಹೆಚ್ಚಿನ ಸಂತೋಷವು ಫಲಿಸುತ್ತದೆ. ಬೇಕಾದ ಬದಲಾವಣೆಗಳನ್ನು ಮಾಡಲು, ವಿಷಯಗಳನ್ನು ಯೆಹೋವನ ವಿಧದಲ್ಲಿ ಮಾಡಲು, ವಿವಾಹ ಸಂಗಾತಿಗಳಿಬ್ಬರ ವತಿಯಿಂದಲೂ ಅತಿಶಯಿಸುವ ಒಂದು ಬಯಕೆಯು ಇರಬೇಕಾಗಿದೆ. “[ದೇವರ] ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು; ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.”—ಜ್ಞಾನೋಕ್ತಿ 16:20.
ಯುವ ಜನರೇ—ದೇವರ ವಾಕ್ಯಕ್ಕೆ ಕಿವಿಗೊಡಿರಿ
13. ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಬಲವಾದ ನಂಬಿಕೆಯೊಂದಿಗೆ ಬೆಳೆಯುವುದು ಕ್ರೈಸ್ತ ಯುವ ಜನರಿಗೆ ಏಕೆ ಸುಲಭವಾಗಿರುವುದಿಲ್ಲ?
13 ದುಷ್ಟ ಲೋಕವು ಅವರ ಸುತ್ತಲೂ ಇರುವಾಗ ನಂಬಿಕೆಯಲ್ಲಿ ಪ್ರಬಲರಾಗಿ ಬೆಳೆಯುವುದು ಕ್ರೈಸ್ತ ಯುವ ಜನರಿಗೆ ಸುಲಭವಾದ ವಿಷಯವಾಗಿರುವುದಿಲ್ಲ. ಒಂದು ಕಾರಣವೇನೆಂದರೆ, “ಲೋಕವೆಲ್ಲವು ಕೆಡುಕನ,” ಪಿಶಾಚನಾದ ಸೈತಾನನ “ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಯುವ ಜನರು, ಕೆಟ್ಟದ್ದನ್ನು ಒಳ್ಳೆಯದಾಗಿ ತೋರುವಂತೆ ಮಾಡಬಲ್ಲ ಈ ದುಷ್ಟ ವೈರಿಯ ಆಕ್ರಮಣದ ಕೆಳಗಿದ್ದಾರೆ. ನಾನು ಮೊದಲೆಂಬ ಮನೋಭಾವಗಳು, ಸ್ವಾರ್ಥ ಹೆಬ್ಬಯಕೆಗಳು, ಅನೈತಿಕವೂ ಕ್ರೂರವೂ ಆಗಿರುವ ವಿಷಯಗಳಿಗಾಗಿ ಹಂಬಲಗಳು, ಮತ್ತು ಸುಖಭೋಗಗಳ ಅಸಾಧಾರಣ ಬೆನ್ನಟ್ಟುವಿಕೆ—ಇವೆಲ್ಲವು ಬೈಬಲಿನಲ್ಲಿ “ಅವಿಧೇಯತೆಯ ಪುತ್ರರಲ್ಲಿ ಈಗ ಕಾರ್ಯನಡೆಸುವ ಆತ್ಮ”ವೆಂದು ವರ್ಣಿಸಲ್ಪಟ್ಟಿರುವ ಆಲೋಚನೆಯ ಒಂದು ಸಾಮಾನ್ಯ, ಪ್ರಬಲ ನಮೂನೆಯಲ್ಲಿ ಒಟ್ಟಿಗೆ ಸೇರಿಬರುತ್ತವೆ. (ಎಫೆಸ 2:1-3, NW) ಸೈತಾನನು ಮೋಸದಿಂದ ಈ “ಆತ್ಮ”ವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ, ಲಭ್ಯವಿರುವ ಹೆಚ್ಚಿನ ಸಂಗೀತದಲ್ಲಿ, ಕ್ರೀಡೆಗಳಲ್ಲಿ, ಮತ್ತು ಮನೋರಂಜನೆಯ ಇತರ ರೂಪಗಳಲ್ಲಿ ಪ್ರವರ್ಧಿಸಿದ್ದಾನೆ. ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಭರವಸೆಯಿಡುತ್ತಾ ಬೆಳೆಯುವಂತೆ ತಮ್ಮ ಮಕ್ಕಳಿಗೆ ಸಹಾಯ ಮಾಡುವ ಮೂಲಕ, ಇಂತಹ ಪ್ರಭಾವಗಳನ್ನು ಸರಿದೂಗಿಸಲು ಹೆತ್ತವರು ಜಾಗರೂಕರಾಗಿರುವ ಅಗತ್ಯವಿದೆ.
14. ಯುವ ಜನರು ಹೇಗೆ “ಯೌವನದ ಇಚ್ಛೆಗಳಿಗೆ ದೂರವಾಗಿರ”ಬಲ್ಲರು?
14 ತನ್ನ ಯುವ ಸಹವಾಸಿ ತಿಮೊಥೆಯನಿಗೆ ಪೌಲನು ಪಿತಸದೃಶ ಬುದ್ಧಿವಾದವನ್ನು ನೀಡಿದನು: “ನೀನು ಯೌವನದ ಇಚ್ಛೆಗಳಿಗೆ ದೂರವಾಗಿರು; ನೀತಿ ವಿಶ್ವಾಸ ಪ್ರೀತಿ ಮತ್ತು ಸಮಾಧಾನವನ್ನು ಸಂಪಾದಿಸುವದಕ್ಕೆ ಶುದ್ಧಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳುವವರ ಸಂಗಡ ಪ್ರಯಾಸಪಡು.” (2 ತಿಮೊಥೆಯ 2:22) ಸಕಲ “ಯೌವನದ ಇಚ್ಛೆ”ಗಳು ಸ್ವತಃ ಕೆಟ್ಟವುಗಳಾಗಿಲ್ಲವಾದರೂ, ಯುವ ಜನರು ಅವುಗಳಿಂದ “ದೂರವಾಗಿರ”ಬೇಕು, ಅಂದರೆ ಈ ವಿಷಯಗಳು, ದೈವಿಕ ಬೆನ್ನಟ್ಟುವಿಕೆಗಳಿಗಾಗಿ ಬಿಟ್ಟರೆ ಕೊಂಚ ಸಮಯವನ್ನೇ ಬಿಡುತ್ತಾ, ಒಂದು ಮುನ್ನೊಲವಾಗಿರುವಂತೆ ಅವರು ಬಿಡಬಾರದು. ದೇಹವರ್ಧನೆ, ಕ್ರೀಡೆಗಳು, ಸಂಗೀತ, ಮನೋರಂಜನೆ, ಹವ್ಯಾಸಗಳು ಮತ್ತು ಸಂಚಾರ, ಅನಿವಾರ್ಯವಾಗಿ ತಪ್ಪಾಗಿರದಿದ್ದರೂ, ಅವು ಜೀವಿತದಲ್ಲಿನ ಪ್ರಮುಖ ವಿಷಯಗಳಾಗುವುದಾದರೆ ಒಂದು ಪಾಶವಾಗಸಾಧ್ಯವಿದೆ. ಉದ್ದೇಶರಹಿತ ಸಂಭಾಷಣೆಯಿಂದ, ಅಲೆದಾಟದಲ್ಲಿ ಕಾಲ ಕಳೆಯುವುದರಿಂದ, ಕಾಮದಲ್ಲಿ ಅಸಾಧಾರಣವಾದ ಆಸಕ್ತಿಯಿಂದ, ಕೆಲಸವಿಲ್ಲದೆ ಕುಳಿತುಕೊಂಡಿದ್ದು ಬೇಸರ ಪಟ್ಟುಕೊಳ್ಳುವುದರಿಂದ, ಮತ್ತು ನಿಮ್ಮ ಹೆತ್ತವರಿಂದ ಅರ್ಥಮಾಡಿಕೊಳ್ಳಲ್ಪಡದೆ ಇರುವುದರ ಕುರಿತು ದೂರು ಹೇಳುವುದರಿಂದ ಪೂರ್ಣವಾಗಿ ದೂರವಾಗಿರಿ.
15. ಯುವ ಜನರು ಇಬ್ಬಗೆಯ ಜೀವನವನ್ನು ನಡೆಸುವುದಕ್ಕೆ ನೆರವು ನೀಡಬಲ್ಲ ಯಾವ ವಿಷಯಗಳು ಮನೆಯ ಏಕಾಂತದಲ್ಲಿ ಸಂಭವಿಸಬಲ್ಲವು?
15 ಯುವ ಜನರಿಗಾಗಿ ಮನೆಯ ಏಕಾಂತದಲ್ಲಿಯೂ ಅಪಾಯವು ಅಡಗಿಕೊಂಡಿರಬಹುದು. ಅನೈತಿಕ ಅಥವಾ ಹಿಂಸಾತ್ಮಕ ಟಿವಿ ಪ್ರದರ್ಶನಗಳು ಮತ್ತು ವಿಡಿಯೊಗಳು ವೀಕ್ಷಿಸಲ್ಪಡುವಲ್ಲಿ, ಕೆಟ್ಟ ವಿಷಯಗಳನ್ನು ಮಾಡುವ ಬಯಕೆಯು ನೆಡಲ್ಪಡಸಾಧ್ಯವಿದೆ. (ಯಾಕೋಬ 1:14, 15) ಬೈಬಲು ಸಲಹೆ ನೀಡುವುದು: “ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ.” (ಕೀರ್ತನೆ 97:10; 115:11) ಯಾರಾದರೂ ಇಬ್ಬಗೆಯ ಜೀವಿತವನ್ನು ಜೀವಿಸಲು ಪ್ರಯತ್ನಿಸುತ್ತಿರುವುದಾದರೆ ಅದು ಯೆಹೋವನಿಗೆ ಗೊತ್ತಿದೆ. (ಜ್ಞಾನೋಕ್ತಿ 15:3) ಕ್ರೈಸ್ತ ಯುವ ಜನರೇ, ನಿಮ್ಮ ಕೋಣೆಯ ಸುತ್ತಲೂ ನೋಡಿರಿ. ಕ್ರೀಡೆಗಳ ಅಥವಾ ಸಂಗೀತ ಲೋಕದ ಅನೈತಿಕ ತಾರೆಗಳ ಭಾವಚಿತ್ರಗಳನ್ನು ನೀವು ಪ್ರದರ್ಶಿಸುತ್ತೀರೊ, ಇಲ್ಲವೆ ಒಳ್ಳೆಯ ಮರುಜ್ಞಾಪನಗಳಾಗಿರುವ ಹಿತಕರವಾದ ವಿಷಯಗಳನ್ನು ನೀವು ಪ್ರದರ್ಶಿಸುತ್ತೀರೊ? (ಕೀರ್ತನೆ 101:3) ನಿಮ್ಮ ಕಪಾಟಿನಲ್ಲಿ ಸಭ್ಯವಾಗಿರುವ ಉಡುಗೆ ನಿಮಗಿದೆಯೊ ಅಥವಾ ನಿಮ್ಮ ಉಡುಪುಗಳಲ್ಲಿ ಕೆಲವು ಈ ಲೋಕದ ವಿಪರೀತ ಉಡುಗೆಯ ಶೈಲಿಗಳನ್ನು ಪ್ರತಿಬಿಂಬಿಸುತ್ತವೊ? ಕೆಟ್ಟದಾಗಿರುವ ವಿಷಯಗಳ ರುಚಿ ನೋಡುವ ಪ್ರಲೋಭನೆಗೆ ನೀವು ವಶವಾಗುವುದಾದರೆ, ಪಿಶಾಚನು ನವಿರಾದ ವಿಧಗಳಲ್ಲಿ ನಿಮ್ಮನ್ನು ಬಲೆಯಲ್ಲಿ ಬೀಳಿಸಬಲ್ಲನು. ಬೈಬಲು ವಿವೇಕಯುತವಾಗಿ ಸಲಹೆ ನೀಡುವುದು: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8.
16. ಸಂಬಂಧ ಪಡುವ ಪ್ರತಿಯೊಬ್ಬರೂ ತನ್ನ ವಿಷಯವಾಗಿ ಅಭಿಮಾನ ಪಡುವಂತೆ ಒಬ್ಬ ಯುವ ವ್ಯಕ್ತಿಗೆ ಬೈಬಲಿನ ಸಲಹೆಯು ಹೇಗೆ ಸಹಾಯ ಮಾಡಬಲ್ಲದು?
16 ನಿಮ್ಮ ಸಾಹಚರ್ಯದ ಮೇಲೆ ಕಣ್ಣಿಟ್ಟಿರುವಂತೆ ಬೈಬಲು ನಿಮಗೆ ಹೇಳುತ್ತದೆ. (1 ಕೊರಿಂಥ 15:33) ನಿಮ್ಮ ಒಡನಾಡಿಗಳು ಯೆಹೋವನಿಗೆ ಭಯಪಡುವವರಾಗಿರಬೇಕು. ಸಮಾನಸ್ಕಂಧರ ಒತ್ತಡಕ್ಕೆ ವಶವಾಗದಿರಿ. (ಕೀರ್ತನೆ 56:11; ಜ್ಞಾನೋಕ್ತಿ 29:25) ದೇವರಿಗೆ ಭಯಪಡುವ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ. (ಜ್ಞಾನೋಕ್ತಿ 6:20-22; ಎಫೆಸ 6:1-3) ನಿರ್ದೇಶನ ಮತ್ತು ಪ್ರೋತ್ಸಾಹಕ್ಕಾಗಿ ಹಿರಿಯರ ಕಡೆಗೆ ನೋಡಿರಿ. (ಯೆಶಾಯ 32:1, 2) ನಿಮ್ಮ ಮನಸ್ಸು ಮತ್ತು ಕಣ್ಣುಗಳನ್ನು ಆತ್ಮಿಕ ಮೌಲ್ಯಗಳು ಮತ್ತು ಲಕ್ಷ್ಯಗಳ ಮೇಲಿಡಿರಿ. ಆತ್ಮಿಕ ಅಭಿವೃದ್ಧಿಯನ್ನು ಮಾಡುವ ಮತ್ತು ಸಭಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳಿಗಾಗಿ ಹುಡುಕಿರಿ. ನಿಮ್ಮ ಕೈಗಳಿಂದ ವಿಷಯಗಳನ್ನು ಮಾಡಲು ಕಲಿಯಿರಿ. ನಂಬಿಕೆಯಲ್ಲಿ ಪ್ರಬಲರೂ ಆರೋಗ್ಯವಂತರೂ ಆಗಿ ಬೆಳೆಯಿರಿ, ಆಗ ನೀವು ನಿಜವಾಗಿಯೂ ಯಾರೋ ಒಬ್ಬರು—ಯೆಹೋವನ ನೂತನ ಲೋಕದಲ್ಲಿ ಜೀವನಕ್ಕೆ ಅರ್ಹರಾದ ಯಾರೋ ಒಬ್ಬರಾಗಿದ್ದೀರೆಂದು ರುಜುಪಡಿಸುವಿರಿ! ನಮ್ಮ ಸ್ವರ್ಗೀಯ ತಂದೆಯು ನಿಮ್ಮ ವಿಷಯವಾಗಿ ಅಭಿಮಾನ ಪಡುವನು, ನಿಮ್ಮ ಭೌಮಿಕ ಹೆತ್ತವರು ನಿಮ್ಮಲ್ಲಿ ಹರ್ಷಿಸುವರು, ಮತ್ತು ನಿಮ್ಮ ಕ್ರೈಸ್ತ ಸಹೋದರಸಹೋದರಿಯರು ನಿಮ್ಮಿಂದ ಪ್ರೋತ್ಸಾಹಗೊಳ್ಳುವರು. ಪ್ರಾಮುಖ್ಯವಾಗಿರುವುದು ಇದೇ!—ಜ್ಞಾನೋಕ್ತಿ 4:1, 2, 7, 8.
17. ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಭರವಸೆಯಿಡುವವರಿಗೆ ಯಾವ ಪ್ರಯೋಜನಗಳು ಬರುತ್ತವೆ?
17 ಪದ್ಯಾತ್ಮಕ ವಾಕ್ಸರಣಿಯಲ್ಲಿ ಕೀರ್ತನೆಗಾರನು ಹೀಗೆ ಬರೆಯುವಂತೆ ಪ್ರೇರೇಪಿಸಲ್ಪಟ್ಟನು: “ಯೆಹೋವನು . . . ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು? ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.” (ಕೀರ್ತನೆ 84:11, 12) ಹೌದು, ಯೆಹೋವನಲ್ಲಿ ಮತ್ತು ಆತನ ವಾಕ್ಯವಾದ ಬೈಬಲಿನಲ್ಲಿ ಭರವಸೆಯಿಡುವ ಸಕಲರಿಗೆ ದೊರೆಯುವಂತಹದ್ದು—ನಿರುತ್ಸಾಹ ಮತ್ತು ಸೋಲಲ್ಲ, ಸಂತೋಷ ಮತ್ತು ಯಶಸ್ಸು.—2 ತಿಮೊಥೆಯ 3:14, 16, 17.
ನೀವು ಹೇಗೆ ಉತ್ತರಿಸುವಿರಿ?
◻ “ಇಹಲೋಕ ಜ್ಞಾನ”ದಲ್ಲಿ ಕ್ರೈಸ್ತರು ಏಕೆ ತಮ್ಮ ಭರವಸೆಯನ್ನಿಡಬಾರದು?
◻ ಒಬ್ಬನು ಸಂದೇಹಗಳನ್ನು ಅನುಭವಿಸುತ್ತಿರುವುದಾದರೆ, ಏನು ಮಾಡಬೇಕು?
◻ ವಿಷಯಗಳನ್ನು ಯೆಹೋವನ ವಿಧದಲ್ಲಿ ಮಾಡುವುದು, ವಿವಾಹದಲ್ಲಿ ಯಶಸ್ಸು ಮತ್ತು ಸಂತೋಷವನ್ನು ಹೇಗೆ ತರುತ್ತದೆ?
◻ ಯುವ ಜನರು “ಯೌವನದ ಇಚ್ಛೆಗಳಿಗೆ ದೂರವಾಗಿರು”ವಂತೆ ಬೈಬಲು ಹೇಗೆ ಸಹಾಯ ಮಾಡುತ್ತದೆ?
[ಪುಟ 23 ರಲ್ಲಿರುವ ಚಿತ್ರ]
“ಇಹಲೋಕ ಜ್ಞಾನ”ವನ್ನು ಮೂರ್ಖತನವೆಂದು ತಿರಸ್ಕರಿಸುವಾಗ, ಕ್ರೈಸ್ತರು ಯೆಹೋವನ ಮತ್ತು ಆತನ ವಾಕ್ಯದ ಕಡೆಗೆ ತಿರುಗುತ್ತಾರೆ
[ಪುಟ 25 ರಲ್ಲಿರುವ ಚಿತ್ರ]
ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ಭರವಸೆಯಿಡುವ ಕುಟುಂಬಗಳಿಗೆ ಒಳ್ಳೆಯ ಯಶಸ್ಸು ಮತ್ತು ಸಂತೋಷವಿರುತ್ತದೆ